ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಆಗಸ್ಟ್ 29, 2011

ಅಣ್ಣಾ ಹಜಾರೆ ಅಮೆರಿಕದ ಕೈಗೊಂಬೆಯೇ?


1. ನಿಮಗೊಂದು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಅಥವಾ ಯಾವುದೇ ಸರ್ಕಾರಿ ಪ್ರಮಾಣ ಪತ್ರಗಳ, ದಾಖಲೆಗಳ ಅಗತ್ಯ ಬಿದ್ದಾಗ ನೀವು ಅರ್ಜಿ ಹಾಕಿದ 15 ದಿನದೊಳಗೆ ಸಂಬಂಧಪಟ್ಟ ಅಧಿಕಾರಿ ಅದನ್ನು ನೀಡಬೇಕು. ಒಂದು ವೇಳೆ ಆತ ವಿಳಂಬ ಮಾಡಿದರೆ ಆತನ ಮೇಲಧಿಕಾರಿ ಹೊಣೆಗಾರನಾಗಬೇಕಾಗುತ್ತದೆ. ಆತನಿಗೂ ಇಂತಿಷ್ಟು ಕಾಲಾವಧಿಯನ್ನು ನಿಗದಿ ಮಾಡಲಾಗಿರುತ್ತದೆ. ಅಷ್ಟರೊಳಗಾಗಿ ಆತನೂ ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರವನ್ನು ಒದಗಿಸದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿಸಲು ಅವಕಾಶವಿರಬೇಕು. ಹಾಗಾಗಿ ಎಸಿ, ಡಿಸಿ, ಎಸ್ಪಿ, ಡಿಸಿಪಿ ಮುಂತಾದ ಮೇಲ್ದರ್ಜೆಯ ಅಧಿಕಾರಿಗಳಲ್ಲದೆ ತಳಮಟ್ಟದ ಅಧಿಕಾರಶಾಹಿ ವರ್ಗವನ್ನೂ ಜನಲೋಕಪಾಲದ ವ್ಯಾಪ್ತಿಗೆ ತರಬೇಕು.

2. ಪ್ರಸ್ತುತ ಒಬ್ಬ ಭ್ರಷ್ಟ ನ್ಯಾಯಾಧೀಶನ ವಿರುದ್ಧ ಪ್ರಥಮ ಮಾಹಿತಿ(ಎಫ್್ಐಆರ್) ದಾಖಲಿಸಬೇಕಾದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ಅನುಮತಿ ಪಡೆದುಕೊಳ್ಳಬೇಕು. ಸ್ವತಂತ್ರ ಭಾರತದ 65 ವರ್ಷಗಳ ಇತಿಹಾಸದಲ್ಲಿ ಹೀಗೆ ಎಫ್್ಐಆರ್ ದಾಖಲಿಸಲು ಅನುಮತಿ ನೀಡಿರುವುದು ಕೇವಲ 2 ಬಾರಿ! ಈ ಹಿನ್ನೆಲೆ ಹಾಗೂ ನ್ಯಾಯಾಂಗದ ಭ್ರಷ್ಟಾಚಾರ ತಾರಕಕ್ಕೇರಿರುವ ಸಂದರ್ಭದಲ್ಲಿ ನ್ಯಾಯಾಂಗವನ್ನೂ 7 ಸದಸ್ಯರ ಜನಲೋಕಪಾಲದ ವ್ಯಾಪ್ತಿಗೆ ತರಬೇಕು, ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ನೀಡಬೇಕು.

3. ಲೋಕಪಾಲಕ್ಕೆ ಅನುರೂಪವಾದ ಲೋಕಾಯುಕ್ತವನ್ನು ಪ್ರತಿರಾಜ್ಯದಲ್ಲೂ ಜಾರಿಗೆ ತರಬೇಕು, ಸಮಾನ ಅಧಿಕಾರವನ್ನೂ ಕೊಡಬೇಕು.

4. ಮಹಿಳಾ ಸಹಾಯವಾಣಿ, ಅಗ್ನಿಶಾಮಕ ದಳ, ಪೊಲೀಸ್ ಸೇವೆಗಳಂತೆ ಯಾರಾದರೂ ಲಂಚ ಕೇಳಿದರೆ ಕೂಡಲೇ ಜನಲೋಕಪಾಲ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯ ಬೇಡುವ ವ್ಯವಸ್ಥೆ ಸೃಷ್ಟಿಯಾಗಬೇಕು.

ಇಂತಹ ಕೆಲವು ನಿರ್ದಿಷ್ಟ ಬೇಡಿಕೆಗಳನ್ನಿಟ್ಟುಕೊಂಡು, ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡು ಕಳೆದ 10 ದಿನಗಳಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಒಂದು ಹೊತ್ತು ಊಟ ಬಿಟ್ಟರೂ ತಲೆನೋವು ಬರುತ್ತದೆ ಎಂದು ಬೆದರುವ ನಮ್ಮ ನಡುವೆ ಒಬ್ಬ ಅಣ್ಣಾ ಇದ್ದಾರೆ ಎಂಬುದೇ ಒಂದು ಸೌಭಾಗ್ಯ. ಎಪ್ಪತ್ಮೂರು ವರ್ಷದ ಅಣ್ಣಾ ಆಯಸ್ಸು ಇನ್ನು ಎಷ್ಟಿದೆಯೋ ಗೊತ್ತಿಲ್ಲ, ಆದರೆ ಅವರ ಬೇಡಿಕೆಯಂತೆ ಈ ಮೇಲಿನ ಅಂಶಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತಂದರೆ ಅದರಿಂದ ಲಾಭವಾಗುವುದು ಮಾತ್ರ ಮುಂದಿನ ತಲೆಮಾರಿಗೆ. ಇಂತಹ ಅಣ್ಣಾ ಹಜಾರೆಯವರ ಬಗ್ಗೆ ಕಾಂಗ್ರೆಸ್್ನ ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್, ಬಿ.ಕೆ. ಹರಿಪ್ರಸಾದ್ ಅವರಂತಹ ವ್ಯಕ್ತಿಗಳು ಹರಿಹಾಯ್ದರೆ, ಅವಹೇಳನಕಾರಿ ಮಾತುಗಳನ್ನಾಡಿದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಈ ಕಾಂಗ್ರೆಸ್ಸಿಗರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬುದು ಗೊತ್ತೇ ಇದೆ.

ಆದರೆ… ದೇವನೂರು ಮಹಾದೇವ, ಡಾ. ಮರುಳ ಸಿದ್ದಪ್ಪ, ಸಿ. ದ್ವಾರಕಾನಾಥ್, ಪ್ರೊ. ರವಿವರ್ಮ ಕುಮಾರ್, ಡಾ. ಕಮಲಾ ಹಂಪನಾ ಮುಂತಾದವರು ಕಾಂಗ್ರೆಸ್ ವಕ್ತಾರರಂತೆ ಅಸಂಬದ್ಧವಾಗಿ ಮಾತನಾಡಲು, ಆರೋಪ ಮಾಡಲು ಹೊರಟರೆ ಗತಿಯೇನು? ‘ಹಜಾರೆ ಒಬ್ಬ ಹಳ್ಳಿ ಮನುಷ್ಯ. ಅವರ ಮುಗ್ಧತೆಯನ್ನು ಕೆಲವು ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಅಮೆರಿಕದ ಫೋರ್ಡ್ ಫೌಂಡೇಶನ್ ಇಡೀ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಇದೆಲ್ಲಾ ಭ್ರಷ್ಟಾಚಾರವಲ್ಲವೆ’ ಎಂದು ಪ್ರಶ್ನಿಸಿದ್ದಾರೆ ಮರುಳಸಿದ್ದಪ್ಪ. ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಮೇಲಾಂಗವಾಗಿ ಈ ಮಸೂದೆಯೇನಾದರೂ ಜಾರಿಯಾದರೆ ಕಾರ್ಪೊರೇಟ್ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಕಡಿವಾಣ ಇಲ್ಲದಂತಾಗುತ್ತದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಇಕ್ಕಟ್ಟಿಗೆ ಸಿಲುಕಿ ಯಾರದೋ ಗುಲಾಮರಾಗಬೇಕಾಗುತ್ತದೆ’ ಎಂದು ಗುಡುಗಿದ್ದಾರೆ ದೇವನೂರು ಮಹಾದೇವ! ಇನ್ನು ಕಾನೂನಿನ ಪ್ರಖಾಂಡ ಪಂಡಿತರಾದ ರವಿವರ್ಮ ಕುಮಾರ್ ಅವರಂತೂ ‘ಬಹುಜನ ಲೋಕಪಾಲ ಮಸೂದೆ ಅಸ್ತಿತ್ವಕ್ಕೆ ಬರಬೇಕಿದೆ’ ಎಂದಿದ್ದಾರೆ. ಕಮಲಾ ಹಂಪನಾ ಅವರು, ‘ಹಜಾರೆ ಹುಟ್ಟೂರಾದ ರಾಲೆಗಾಂವ್ ಸಿದ್ಧಿಯಲ್ಲಿ ಕಳೆದ 25 ವರ್ಷಗಳಿಂದ ಪಂಚಾಯಿತಿ ಚುನಾವಣೆಗಳೇ ನಡೆದಿಲ್ಲ’ ಎಂದು ಯಾರಿಗೂ ಗೊತ್ತಿರದ ಸಂಗತಿಯನ್ನ ಹೊರಹಾಕಿದ್ದಾರೆ. ಮುಂದುವರಿದು, ರಾಜ್ ಠಾಕ್ರೆ, ಮೋದಿಯನ್ನು ಎಳೆದುತಂದು ಭಾಷಾಂಧ, ಧರ್ಮಾಂಧ ಎಂಬ ಪದಪ್ರಯೋಗಗಳನ್ನು ಮಾಡಿದ್ದಾರೆ.

ಇದು ಏನನ್ನು ಸೂಚಿಸುತ್ತದೆ?

ತಮ್ಮನ್ನು ಪ್ರಗತಿಪರರು ಎಂದು ಹೇಳಿಕೊಳ್ಳುವ ಇವರ ಬಾಯಲ್ಲಿ ಹೊರಡುವಂಥ ಮಾತುಗಳೇ ಇವು? ಅಣ್ಣಾ ಹಜಾರೆ ಮತ್ತು ಅವರ ಹಿಂದಿರುವ ನಾಗರಿಕ ಸಮಾಜದ ಉದ್ದೇಶವನ್ನು ಪ್ರಶ್ನಿಸುತ್ತಿರುವ ಇವರುಗಳ ಮಾತಿನ ಹಿಂದಿರುವ ಉದ್ದೇಶವಾದರೂ ಯಾವುದು? ಅಮೆರಿಕದ ಪೋರ್ಡ್ ಫೌಂಡೇಶನ್ ಯಾವ ರೀತಿಯ ಸಹಾಯ, ಬೆಂಬಲ ಕೊಡುತ್ತಿದೆ ಎಂಬುದಕ್ಕೆ ಮರುಳಸಿದ್ದಪ್ಪನವರ ಬಳಿ ಯಾವುದಾದರೂ ಆಧಾರಗಳಿವೆಯೇ? ಅರವತ್ತು, ಎಪ್ಪತ್ತು, ಎಂಭತ್ತರ ದಶಕದ ಮಾಮೂಲಿ ಕಮ್ಯುನಿಸ್ಟ್ ಕ್ಲೀಷೆಗಳನ್ನೇ, ಪೊಳ್ಳು ಆರೋಪಗಳನ್ನೇ ಈಗಲೂ ಮಾಡುತ್ತಿರುವ ಇವರು ಹೇಗೆ, ಯಾವ ದೃಷ್ಟಿಯಲ್ಲಿ ಪ್ರಗತಿಪರರು? ಅಣ್ಣಾ ಹಾಗೂ ಅವರ ತಂಡದವರ ಉದ್ದೇಶ ಶುದ್ಧಿಯಿಲ್ಲ ಎಂದೇ ಒಂದು ಕ್ಷಣ ಭಾವಿಸೋಣ. ಅವರ ಉಪವಾಸ, ಹೋರಾಟದಿಂದ ನಾಳೆ ಜನಲೋಕಪಾಲ ಮಸೂದೆ ಜಾರಿಯಾದರೆ ಯಾರಿಗೆ ಲಾಭವಾಗುತ್ತದೆ? ಜೀವನದ ಸಂಧ್ಯಾಕಾಲದಲ್ಲಿರುವ ಅಣ್ಣಾ, ಶಾಂತಿಭೂಷಣ್ ಹಾಗೂ 60ರ ಆಸುಪಾಸಿನಲ್ಲಿರುವ ಇತರ ಸದಸ್ಯರಿಗೆ ಮಾತ್ರವೇ? ಭಾರತದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದರೆ ಫೋರ್ಡ್ ಫೌಂಡೇಶನ್್ಗೆ ಯಾವ ಲಾಭವಾಗುತ್ತದೆ? ಇಂತಹ ವ್ಯವಸ್ಥೆ ಬಂದರೆ ಲಾಭವಾಗುವುದಾದರೂ ಯಾರಿಗೆ? ಲೋಕಪಾಲವೆಂಬುದು ಒಂದು ವರ್ಗ, ದರ್ಜೆಗೆ ಮಾತ್ರ ಅನ್ವಯವಾಗುವ, ಲಾಗೂ ಆಗುವ, ಲಾಭವಾಗುವ ಕಾಯಿದೆಯೇ? ನಾಳೆ ಬೆಳಗ್ಗೆ ನಿಮಗೊಂದು ದಾಖಲೆ, ಪ್ರಮಾಣ ಪತ್ರ ಸರಳ ಹಾಗೂ ತ್ವರಿತವಾಗಿ ಲಭ್ಯವಾಗುವಂತಾದರೆ ಅಣ್ಣಾಗೆ ಗಿಟ್ಟುವುದೇನು?

ಏಕಿಂಥಾ ಅಸಂಬದ್ಧ ಮಾತುಗಳನ್ನಾಡುತ್ತಾರೆ? ಅಪ್ರಬುದ್ಧ ವಾದ ಮಂಡಿಸುತ್ತಾರೆ?

ಜನಸಾಮಾನ್ಯರ ಹಿತಾಸಕ್ತಿಯನ್ನು ಇಟ್ಟುಕೊಂಡಿರುವ ಅಣ್ಣಾನ ಹೋರಾಟ ತಾರ್ಕಿಕ ಅಂತ್ಯದತ್ತ ಆಗಮಿಸಿದೆ. ಇಡೀ ದೇಶವಾಸಿಗಳಿಗೆ ಅನುಕೂಲವಾಗುವ ದಿನಗಳು ಹತ್ತಿರ ಬರುತ್ತಿವೆ. ಸರ್ಕಾರ ಮಣಿದು ಮಂಡಿಯೂರಿದೆ. ಜನ ಅಣ್ಣಾರ ಬೆನ್ನಿಗೆ ನಿಂತಿದ್ದಾರೆ. ಬದಲಾವಣೆ ಸನ್ನಿಹಿತವಾಗಿದೆ. ಆದರೆ ಈ ಪ್ರಗತಿಪರ ಮಹಾನುಭಾವರ ದಲಿತ, ಬಂಡಾಯ, ಪ್ರಗತಿಪರ ಚಳವಳಿಗಳು ಎಲ್ಲಿಗೆ ಬಂದವು ಅಥವಾ ಹೋದವು? ಯಾವ ತಾರ್ಕಿಕ ಅಂತ್ಯವನ್ನು ಕಂಡಿವೆ? ಹಿಂದೊಮ್ಮೆ ಸರ್ವೋದಯವೆಂಬ ಪಕ್ಷ ಕಟ್ಟಿಕೊಂಡಿದ್ದ ಇವರೆಲ್ಲ ಏನು ಮಾಡಿದರು? ಯಾವ ಬದಲಾವಣೆ ತಂದಿದ್ದಾರೆ? ಅವುಗಳಿಂದ ಯಾರ ಉದಯವಾಯಿತು? ಶೇ.3ರಷ್ಟು ಮಂದಿ ರೂಪಿಸಿದ ಕಾಯಿದೆಯನ್ನು ಶೇ.97ರಷ್ಟು ಮಂದಿ ಮೇಲೆ ಹೇರಲಾಗುತ್ತಿದೆ ಎನ್ನುವ ರವಿವರ್ಮ ಕುಮಾರ್ ಅವರ ಗಣಿತ ಜ್ಞಾನದ ಬಗ್ಗೆ ಏನಂತ ಹೇಳುವುದು? ಜಿ. ವೆಂಕಟಸುಬ್ಬಯ್ಯನವರಂತಹ ದೊಡ್ಡ ವ್ಯಕ್ತಿಗಿಂತ ಮೊದಲೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಗಿಟ್ಟಿಸಿಕೊಂಡ ಕಮಲಾ ಹಂಪನಾ ಅವರ ದಲಿತ ಪ್ರಜ್ಞೆ, ಮೂಡಬಿದ್ರೆಗೆ ಹೋದಾಗ ಜಾಗೃತಗೊಳ್ಳುವ ‘ಜೈನಪ್ರಜ್ಞೆ’ ನಮಗೆ ಗೊತ್ತಿಲ್ಲವೇನು? ಭ್ರಷ್ಟಾಚಾರವೆಂಬುದು ಯಾವುದೋ ಒಂದು ಜಾತಿ, ಧರ್ಮ, ಮತವನ್ನು ಮಾತ್ರ ಕಾಡುತ್ತಿರುವ ಪಿಡುಗೇನು? ರಾಜಧಾನಿ ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್್ಗೂ ಇವರಿಗೂ ಏನು ವ್ಯತ್ಯಾಸ? ಅದಿರಲಿ, ಕುಮಾರಸ್ವಾಮಿಯವರು ಉಪವಾಸ ಕುಳಿತಿದ್ದಾಗ, 24 ಗಂಟೆಯೊಳಗೆ ಉಸ್ಸಪ್ಪಾ ಎಂದಾಗ ನೀರು ಕುಡಿಸಲು ಹೋಗಿದ್ದವರು ಅಣ್ಣಾ 10 ದಿನಗಳಿಂದ ಉಪವಾಸವಿದ್ದರೂ ಕಾಣುತ್ತಿಲ್ಲವಲ್ಲಾ ಏಕೆ? ಕನಿಷ್ಠ ಅಣ್ಣಾ ಪರ ಒಂದು ಹೇಳಿಕೆಯನ್ನಾದರೂ ಕೊಡಬಹುದಿತ್ತಲ್ಲವೆ? ಭ್ರಷ್ಟಾಚಾರವೂ ಒಂದು ಪಿಡುಗು, ದೇಶದ್ರೋಹದ ಕೆಲಸವಲ್ಲವೆ? ಅದರ ವಿರುದ್ಧ ಟೊಂಕಕಟ್ಟಿ ನಿಂತಿರುವ ಅಣ್ಣಾರಿಗೆ ಒಂದು ಸಣ್ಣ ಬೆಂಬಲ ಸೂಚಿಸಿದ್ದರೆ ಏನನ್ನು ಕಳೆದುಕೊಳ್ಳುತ್ತಿದ್ದರು? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಮೌನವಾಗಿ ಸಹಿಸಿಕೊಳ್ಳುವ ಸಂಘಗಳಿಗೂ ಅಣ್ಣಾರನ್ನೇ ಸಂಶಯಿಸುವ ಇವರಿಗೂ ಯಾವ ವ್ಯತ್ಯಾಸವಿದೆ? ಅಲ್ಲಾ, ಒಂದು ಸಣ್ಣ ಕೋಮು ಸಂಘರ್ಷವಾದರೂ ದಿಢೀರನೆ ಪ್ರತಿಕಾಗೋಷ್ಠಿ ಕರೆದು ಬಲಪಂಥೀಯರನ್ನು ತೆಗಳುವ, ಭಗವದ್ಗೀತೆ ಬಗ್ಗೆ ಪ್ರತಿಕಾಗೋಷ್ಠಿ ಹಾಗೂ ಪ್ರತಿಭಟನೆ ಮಾಡಿದ್ದ, ಶಂಕರ್ ಬಿದರಿಯವರು ರಾತ್ರಿ ಹನ್ನೊಂದೂವರೆಗೆ ಪಬ್್ಗಳನ್ನು ಮುಚ್ಚಿಸಿದಾಗ ಬೀದಿಗಿಳಿದಿದ್ದ ಜ್ಞಾನಪೀಠ ನಂಬರ್-7 ಏಕೆ ಏನೂ ಮಾತನಾಡುತ್ತಿಲ್ಲವಲ್ಲಾ? ಅಷ್ಟು ದೊಡ್ಡ ಕಂಠವನ್ನಿಟ್ಟುಕೊಂಡು ಅಣ್ಣಾ ಪರವಾಗಿ ಸಣ್ಣ ಧ್ವನಿಯನ್ನೂ ಎತ್ತಲಾರದಂಥ ಸಂಕಟವೇನಿದೆ ಇವರಿಗೆ?

ಇನ್ನು ಪ್ರಜಾಪ್ರಭುತ್ವದ ಅಂಗಗಳು ಇಕ್ಕಟ್ಟಿಗೆ ಸಿಲುಕುತ್ತವೆ, ಸಂಸತ್ತೇ ಸುಪ್ರೀಂ ಎನ್ನುವುದಾದರೆ ಕಳೆದ 42 ವರ್ಷಗಳಿಂದ ಸಂಸತ್ತು ಹಾಗೂ ಆಳುವವರು ಏನು ಮಾಡುತ್ತಿದ್ದರು? ಒಂದು ವೇಳೆ ಕಳೆದ ಏಪ್ರಿಲ್್ನಲ್ಲಿ ಅಣ್ಣಾ ನಿರಶನಕ್ಕೆ ಕೂರದಿದ್ದರೆ ಇವತ್ತು ಲೋಕಪಾಲ ಮಸೂದೆ ಸಂಸತ್ತಿನ ಮುಂದಿರುತ್ತಿತ್ತೇ? ನಮ್ಮೆಲ್ಲರ ಒಳಿತಿಗಾಗಿ ಅನ್ನ ಬಿಟ್ಟು ಉಪವಾಸ ಕುಳಿರುವ ವ್ಯಕ್ತಿಯ ಉದ್ದೇಶವನ್ನೇ ಶಂಕಿಸುತ್ತಾರಲ್ಲಾ ಇವರನ್ನು ಏನೆಂದು ಕರೆಯಬೇಕು? ವಿಚಾರಗೋಷ್ಠಿಗಳಾಚೆಗೆ ಇವರ ಬುದ್ಧಿ ಬೆಳೆಯುವುದು ಯಾವಾಗ? ಅಣ್ಣಾರನ್ನು ಅಮೆರಿಕದ ಏಜೆಂಟ್ ಎಂದು ಕರೆದ ಕಾಂಗ್ರೆಸ್್ನ ರಶೀದ್ ಆಲ್ವಿಗೂ ಇವರ ಮಾತುಗಳಿಗೂ ಯಾವ ವ್ಯತ್ಯಾಸವಿದೆ?

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ