ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಆಗಸ್ಟ್ 29, 2011

ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

ಅಣ್ಣಾ ಹಜಾರೆ ನಿಜಕ್ಕೂ ಭ್ರಷ್ಟ ವ್ಯಕ್ತಿಯೇ? ಅವರು ಸದಸ್ಯರಾಗಿರುವ ಹಿಂದ್ ಸಮಾಜ್ ಸ್ವಯಂ ಸೇವಾ ಸಂಸ್ಥೆ ನಿಜಕ್ಕೂ ನಿಧಿ ದುರ್ಬಳಕೆ ಮಾಡಿಕೊಂಡಿದೆಯೇ? 2003ರಲ್ಲಿ ನೀಡಲಾದ ನ್ಯಾಯಮೂರ್ತಿ ಸಾವಂತ್ ಸಮಿತಿ ವರದಿಯಲ್ಲಿ ಅಣ್ಣಾ ಹಜಾರೆ ಮೇಲೆ ದೋಷಾರೋಪಣೆ ಮಾಡಿರುವುದು ನಿಜವೇ? ಅಣ್ಣಾನನ್ನೇ ಕಟಕಟೆಗೆ ತಂದು ನಿಲ್ಲಿಸಲಾಗಿದೆಯೇ?

ಅಥವಾ

ಕಾಂಗ್ರೆಸ್ ನಡೆಸುತ್ತಿರುವ ಹುನ್ನಾರ ಇದಾಗಿದೆಯೇ? ಅಣ್ಣಾನ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆಯೇ? ಅಣ್ಣಾನ ಪ್ರತಿಭಟನೆ ಹಿಂದೆ ಅಮೆರಿಕವಿದೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಶೀದ್ ಆಳ್ವಿ ಮಾತು ಅಣ್ಣಾನ ಮೇಲೆ ಕಳಂಕ ತರುವ ಪ್ರಯತ್ನವಾಗಿದೆಯೇ? ತನ್ನ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಕಾಂಗ್ರೆಸ್ ಏಕಿಂಥ ನೀಚ ಪ್ರಚಾರಾಂದೋಲನ ಮಾಡುತ್ತದೆ? ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್, ಬಿ.ಕೆ. ಹರಿಪ್ರಸಾದ್ ಮುಂತಾದ ಕಾಂಗ್ರೆಸ್ ನೇತಾರ, ವಕ್ತಾರರು ಏಕಾಗಿ ದೋಷಾರೋಪ ಮಾಡುತ್ತಿದ್ದಾರೆ? ಇಂಥದ್ದೊಂದು ಚಾರಿತ್ರ್ಯವಧೆ ಮಾಡುವ ಕಾರ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪೂರ್ವಾನುಮತಿ ಇಲ್ಲದೆ ನಡೆಯಲು ಸಾಧ್ಯವಾದರೂ ಇದೆಯೇ?

ಅದು 1975, ಜೂನ್ 12.

ಅಂದು ಅಲಹಾಬಾದ್ ಹೈಕೋರ್ಟ್ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಬದಲು ರಾಷ್ಟ್ರದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ನೆಪವೊಡ್ಡಿದ ಇಂದಿರಾ ಗಾಂಧಿಯವರು ಜೂನ್ 25ರಂದು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಒಗ್ಗೂಡಿ ಮರಳಿ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿದವು. ತುರ್ತುಪರಿಸ್ಥಿತಿ ಹೇರಿದ ಬೆನ್ನಲ್ಲೇ ನಮ್ಮ ರಾಜಧಾನಿ ದಿಲ್ಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳ ಅಂತಾರಾಷ್ಟ್ರೀಯ ಶೃಂಗ ಏರ್ಪಾಡಾಯಿತು. ಆ ಸಂದರ್ಭದಲ್ಲಿ ಕೈಪಿಡಿಗಳನ್ನು ಹೊರತಂದು, ಸಂದಸರಿಗೆ ಹಂಚುವ ಮೂಲಕ ಇಂದಿರಾ ಗಾಂಧಿಯವರ ನಿಜರೂಪವನ್ನು ಬಯಲು ಮಾಡಲು ಮುಂದಾಯಿತು ಜನಸಂಘ (ಈಗ ಬಿಜೆಪಿ). ಒಂದರ ಮೇಲೆ ಒಂದರಂತೆ ಸುಳ್ಳಿನ ಕಂತೆಗಳನ್ನೇ ಸೃಷ್ಟಿಸುತ್ತಿದ್ದ ಇಂದಿರಾ ಗಾಂಧಿಯವರನ್ನುದ್ದೇಶಿಸಿ ಒಂದು ಪ್ರಶ್ನೆ ಮಾಲೆಯನ್ನೂ ಸಿದ್ಧಪಡಿಸಲಾಯಿತು. ಅದರ ಕರಡು ಪ್ರತಿಯನ್ನು ತೆಗೆದುಕೊಂಡು ಪಕ್ಷದ ವರಿಷ್ಠ ನೇತಾರ ಅಟಲ್ ಬಿಹಾರಿ ವಾಜಪೇಯಿಯವರ ಬಳಿಗೆ ಹೋಗಲಾಯಿತು. ಪ್ರತಿಯೊಂದು ಪ್ರಶ್ನೆಗಳ ಮೇಲೂ ಕಣ್ಣಾಡಿಸಿದ ವಾಜಪೇಯಿ ಯಾವುದೇ ತಿದ್ದುಪಡಿ ಮಾಡದೆ ಎಲ್ಲವಕ್ಕೂ ಸಮ್ಮತಿಯ ತಲೆಯಾಡಿಸಿದರು. ಇನ್ನೇನು ಕರಡು ಪ್ರತಿಯನ್ನು ಮರಳಿ ಕೊಡಬೇಕು, ಅಷ್ಟರಲ್ಲಿ ಪೆನ್ನು ಕೈಗೆತ್ತಿಕೊಂಡ ಅಟಲ್ ಪ್ರಶ್ನೆಮಾಲೆಯ ಶೀರ್ಷಿಕೆಯಾದ ‘ಇಂದಿರಾ ಜವಾಬ್ ದೋ’ಗೆ ಒಂದು ಸಣ್ಣ ತಿದ್ದುಪಡಿ ಮಾಡಿದರು. ಅದು ಏನೆಂದುಕೊಂಡಿರಿ?

‘ಇಂದಿರಾಜಿ ಜವಾಬ್ ದೀಜಿಯೇ’!

ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ನೂರೈವತ್ತು ವರ್ಷಗಳ ಕಾಲ ಹೋರಾಡಿ, ಲಕ್ಷಾಂತರ ಜನ ಪ್ರಾಣಕೊಟ್ಟು ಗಳಿಸಿದ್ದ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಾಕೆಯನ್ನು ಸಂಬೋಧಿಸುವಾಗಲೂ ಸಭ್ಯತೆ, ಗೌರವಾದರಗಳನ್ನು ಕೊಡಬೇಕು ಎಂಬ ಪಾಠ ವಾಜಪೇಯಿ ಅವರ ತಿದ್ದುಪಡಿಯಲ್ಲಿತ್ತು! ಅಂತಹ ವ್ಯಕ್ತಿಗೆ ಕಾಂಗ್ರೆಸ್ ಪ್ರತಿಯಾಗಿ ನೀಡಿದ್ದೇನು?

ಗದ್ದಾರ್, ದೇಶದ್ರೋಹಿ ಎಂಬ ಪಟ್ಟ!

1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಉಜ್ಜಯಿನಿಯಲ್ಲಿ ನಡೆದ ಪ್ರಚಾರಾಂದೋಲನವನ್ನುದ್ದೇಶಿಸಿ ಮಾತನಾಡುತ್ತಾ, ‘ಹಿಂದುಸ್ಥಾನ್ ಕೆ ಸಾಥ್ ಗದ್ದಾರಿ ಕೀ, ಜನತಾ ಕೇ ಸಾಥ್ ಗದ್ದಾರಿ ಕೀ…’ ಎಂದು ಸೋನಿಯಾ ಗಾಂಧಿಯವರು ಅಟಲ್ ವಿರುದ್ಧ ಕೀಳಾಗಿ ಮಾತನಾಡಿದರು! ಈ ನಡುವೆ 1942ರಲ್ಲಿ ಬಂಧನಕ್ಕೊಳಗಾಗಿದ್ದ ವೇಳೆ ಅಟಲ್ ಬ್ರಿಟಿಷರ ಕ್ಷಮೆಯಾಚಿಸಿದ್ದರು ಎಂಬ ಗಂಭೀರ ಆರೋಪವನ್ನೂ ಮಾಡಲಾಯಿತು! ಒಂದು ರಾಷ್ಟ್ರೀಯ ಪಕ್ಷದ, ಅದೂ 45 ವರ್ಷ ದೇಶವಾಳಿದ್ದ ಪಾರ್ಟಿಯ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರು ಆಡಬಹುದಾದ ಮಾತುಗಳೇ ಅವು? ಪಕ್ಷದ ನಾಯಕಿ, ವರಿಷ್ಠ ನೇತಾರೆಯ ಬಾಯಿಂದ ಇಂತಹ ಕೀಳು ಶಬ್ದಗಳು, ಕೊಳಕು ಆರೋಪಗಳು ಹೊರಡಬಹುದಾದರೆ ಅವರ ಪಕ್ಷದ ಇತರ ನಾಯಕರಿಂದ ಏನು ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯ? ಅವತ್ತು ಅಟಲ್ ಎಷ್ಟು ದಿಗ್ಭ್ರಾಂತರಾಗಿದ್ದರೆಂದರೆ, ‘ನನಗೆ ಸೋನಿಯಾ ಗಾಂಧಿಯವರಂತೆ ಮಾತನಾಡಲು ಬರುವುದಿಲ್ಲ, ಸೋನಿಯಾ ಮಟ್ಟಕ್ಕೆ ಇಳಿಯಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ಭಾಷೆ ಸಭ್ಯವಾಗಿರಬೇಕು’ ಎಂದು ಸುಮ್ಮನಾಗಿ ಬಿಟ್ಟರು. ಸೋನಿಯಾ ಗಾಂಧಿಯವರ ಅತ್ತೆಯ ಅಪ್ಪ ಚೀನಾದ ವಿರುದ್ಧ ಭಾರತ ಹೀನಾಯವಾಗಿ ಸೋತು, ಅವಮಾನಕ್ಕೊಳಗಾಗುವವಂತೆ ಮಾಡಿದ ಸಂದರ್ಭದಲ್ಲೂ ಯಾರೂ ನೆಹರು ಅವರನ್ನು ದೇಶದ್ರೋಹಿ ಎಂದಿರಲಿಲ್ಲ. ಆದರೆ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳನ್ನು ಮಟ್ಟಹಾಕಿದ ಅಟಲ್ ಬಿಹಾರಿ ವಾಜಪೇಯಿಯವರಂಥ ಮಹಾನ್ ನಾಯಕನನ್ನು ದೇಶದ್ರೋಹಿ ಎಂದು ಕರೆದರು ಈ ಸೋನಿಯಾ ಗಾಂಧಿ. ಹಾಗಿರುವಾಗ ಅಣ್ಣಾ ಹಜಾರೆಯವರನ್ನು ಅಮೆರಿಕದ ಏಜೆಂಟ್, ಭ್ರಷ್ಟಾಚಾರಿ ಎಂದು ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್, ರಶೀದ್ ಆಳ್ವಿ ಕರೆಯುವುದರಲ್ಲಿ ಯಾವ ಆಶ್ಚರ್ಯವಿದೆ? ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ ಸೋನಿಯಾ ಗಾಂಧಿಯವರ ಬಾಲಬಡುಕರಿಂದ ಇಂತಹ ಚಾರಿತ್ರ್ಯವಧೆ ಮಾಡುವ ಕಾರ್ಯವನ್ನಲ್ಲದೆ ಮತ್ತೀನ್ನೇನನ್ನು ನಿರೀಕ್ಷಿಸಲು ಸಾಧ್ಯ?

ಇಷ್ಟಕ್ಕೂ ಭ್ರಷ್ಟ ಎಂದು ಕರೆಯಲು ಅಣ್ಣಾ ಮಾಡಿದ ಕೆಲಸವಾದರೂ ಏನು?

1998-99ನೇ ಸಾಲಿನಲ್ಲಿ ಅಣ್ಣಾ ಹಜಾರೆಯವರ 60ನೇ ಜನ್ಮದಿನ ಆಚರಣೆಗಾಗಿ ಅಣ್ಣಾ ಸದಸ್ಯರಾಗಿರುವ ಹಿಂದ್ ಸಮಾಜ್ ಟ್ರಸ್ಟ್್ನಿಂದ 2 ಲಕ್ಷದ 20 ಸಾವಿರ ರೂ.ಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಇದರ ಬಗ್ಗೆ ಉಲ್ಲೇಖಿಸುತ್ತಾ ನ್ಯಾಯಮೂರ್ತಿ ಸಾವಂತ್ ಸಮಿತಿ, ‘ಹಣದ ಲೆಕ್ಕಾಚಾರ ಸಮರ್ಪಕವಾಗಿಲ್ಲ’ ಎಂದಿತು ತನ್ನ ವರದಿಯಲ್ಲಿ. ಅಂದಮಾತ್ರಕ್ಕೇ ಅಣ್ಣಾ ಭ್ರಷ್ಟ ವ್ಯಕ್ತಿಯಾಗಿ ಬಿಡುತ್ತಾರಾ? ಅಣ್ಣಾ ಬಗ್ಗೆ ವರದಿಯ ಯಾವ ಭಾಗದಲ್ಲಿ ವೈಯಕ್ತಿಕ ಆರೋಪ ಮಾಡಲಾಗಿದೆ ಹೇಳಲಿ? ಸ್ವಂತ ಮನೆಯಿಲ್ಲ, ಹೆಂಡತಿ ಮಕ್ಕಳಿಲ್ಲ, ಬಂಧುಬಳಗದಿಂದಲೂ ದೂರಾಗಿ ದೇವಸ್ಥಾನದ ಜಗುಲಿಯಲ್ಲಿ ಮಲಗುವ ವ್ಯಕ್ತಿಯನ್ನು ಯಾವ ಬಾಯಲ್ಲಿ ಭ್ರಷ್ಟ ಎನ್ನುತ್ತಾರೆ? ಏನಾಗಿದೆ ಈ ಕಾಂಗ್ರೆಸ್ಸಿಗರಿಗೆ? ಮೇಡಂ ಸೋನಿಯಾ ಗಾಂಧಿಯವರ ಅನುಮತಿಯಿಲ್ಲದೆ ಕಾಂಗ್ರೆಸ್ಸಿಗರು ಇಂತಹ ಕಳಂಕ ತರುವ ಕಾರ್ಯಕ್ಕೆ ಕೈಹಾಕಿಯಾರೆ?

ಇಷ್ಟಕ್ಕೂ ಸೋನಿಯಾ ಸಮ್ಮತಿ ಇಲ್ಲದೆ ಒಂದು ವಸ್ತುವನ್ನು ಕದಲಿಸಲು ಸಾಧ್ಯವಿದೆಯೇ?

ಯುಪಿಎ-1 ಸರ್ಕಾರವನ್ನು ತೆಗೆದುಕೊಳ್ಳಿ. ಹೈದರಾಬಾದ್, ಮುಂಬೈ(ರೈಲು ದಾಳಿ), ಬೆಂಗಳೂರು, ಅಹ್ಮದಾಬಾದ್, ಜೈಪುರ್ ಹೀಗೆ ಒಂದರ ಹಿಂದೆ ಒಂದರಂತೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು. ಗೃಹ ಸಚಿವ ಶಿವರಾಜ್ ಪಾಟೀಲರ ಕಾರ್ಯದಕ್ಷತೆ ಬಗ್ಗೆ ಅನುಮಾನ, ಅಸಮರ್ಥತೆ ಬಗ್ಗೆ ಭಾರೀ ಟೀಕೆಗಳು ಕೇಳಿಬಂದವು. ಹೀಗೆ ರಾಜೀನಾಮೆ ನೀಡಬೇಕೆಂಬ ಒತ್ತಡ ಸೃಷ್ಟಿಯಾದಾಗಲೂ ಶಿವರಾಜ್ ಪಾಟೀಲ್ ಕೊಟ್ಟ ಸಮಜಾಯಿಷಿ ಏನು ಗೊತ್ತೆ?- “I have the blessings of my leader’! ಯಾರು ಅವರ ನಾಯಕರಾಗಿದ್ದರು? ಸೋನಿಯಾ ಗಾಂಧಿಯವರಲ್ಲವೆ? 2008, ನವೆಂಬರ್ 26ರಂದು ಮುಂಬೈ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವವರೆಗೂ ಶಿವರಾಜ್ ಪಾಟೀಲ್ ಗೃಹಮಂತ್ರಿಯಾಗಿ ಮುಂದುವರಿದಿದ್ದು ಸೋನಿಯಾ ಗಾಂಧಿಯವರ ಆಶೀರ್ವಾದ ಹೊಂದಿದ್ದ ಕಾರಣಕ್ಕಲ್ಲವೆ? ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದ ಮತ್ತೊಬ್ಬ ಅಸಮರ್ಥ ವ್ಯಕ್ತಿ ವಿಲಾಸ್ ರಾವ್ ದೇಶ್್ಮುಖ್ ಇವತ್ತು ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದರೆ ಅದರ ಹಿಂದಿರುವುದೂ ಸೋನಿಯಾ ಕೃಪೆಯೇ. ಇನ್ನು ತೆಲಂಗಾಣ ವಿಚಾರಕ್ಕೆ ಬರೋಣ. 2004ರಿಂದಲೂ ತೆಲಂಗಾಣ ಭಾಗಕ್ಕೆ ಸೇರಿರುವ ಕಾಂಗ್ರೆಸ್ ಸಂಸದರು ಪ್ರತ್ಯೇಕ ರಾಜ್ಯ ರಚನೆಯಾಗಿಯೇ ತೀರುತ್ತದೆ ಎನ್ನುತ್ತಾ ಬಂದಿದ್ದಾರೆ. ಯಾವಾಗ ಎಂದು ಕೇಳಿದರೆ ಬರುವ ಉತ್ತರ- “Madam will decide, Madam will decide’!

ರಾಜಿನಾಮೆ ಕೊಡುವಾಗಲೂ ಸ್ಪೀಕರ್ ಬದಲು ಮೇಡಂಗೆ ಪತ್ರ ಕಳುಹಿಸುತ್ತಾರೆ. ಪ್ರತ್ಯೇಕ ತೆಲಂಗಾಣ ರಚನೆಗೆ ಒತ್ತಾಯಿಸಿ ಸಂಸತ್ ಮುಂದೆ ಧರಣಿ ಕೂತಾಗ ಹಿಡಿದುಕೊಂಡಿದ್ದ ಫಲಕದ ಮೇಲಿದ್ದಿದ್ದೂ- “Sonia Gandhi Zindabad, We want Telangana’!

ಇಂತಹ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ಸಮ್ಮತಿ ಇಲ್ಲದೆ ಅಣ್ಣಾ ವಿರುದ್ಧ ಕೀಳು ಆರೋಪ ಮಾಡಲು ಸಾಧ್ಯವಿದೆಯೇ?

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ