ನನ್ನ ಬ್ಲಾಗ್ ಪಟ್ಟಿ

ಬುಧವಾರ, ಸೆಪ್ಟೆಂಬರ್ 21, 2011

ಈ “ಗಾಲಿ’ ಉರುಳಿ ಬಂದಿದ್ದಾದರೂ ಎಲ್ಲಿಂದ?

ಒಬ್ಬ ಸಾಮಾನ್ಯ ಪೇದೆಯ ಮಗನಾದ ಗಾಲಿ ಜನಾರ್ದನ ರೆಡ್ಡಿ ಈ ಮಟ್ಟಕ್ಕೆ ಬೆಳೆದಿದ್ದಾರೂ ಹೇಗೆ? ಆತ ಪ್ರಾರಂಭಿಸಿದ್ದ ಎನೋಬಲ್ ಇಂಡಿಯಾ ಸೇವಿಂಗ್ಸ್ ಆÀಯಂಡ್ ಇನ್ವೆಸ್ಟ್ ಮೆಂಟ್ ಕಂಪನಿ ಲಿಮಿಟೆಡ್ ಎಂಬ ಚಿಟ್ ಕಂಪನಿ 1998ರಲ್ಲಿ ಕುಸಿದು ಬಿದ್ದಾಗ ಚಂದಾದಾರರಿಗೆ 200 ಕೋಟಿ ರೂ. ಕೊಡಬೇಕಾದ ಋಣಭಾರ ಹೊತ್ತಿದ್ದ ವ್ಯಕ್ತಿ 10 ವರ್ಷಗಳಲ್ಲಿ ಅಂದರೆ 2008ರಲ್ಲಿ ತಾನೂ ಮತ್ತು ತನ್ನ ಪತ್ನಿ 115 ಕೋಟಿ ಮೌಲ್ಯದ ಸ್ವತ್ತು ಹೊಂದಿದ್ದೇನೆ ಎಂದು ಘೋಷಿಸಿಕೊಳ್ಳುತ್ತಾನೆ, ಆತನ ವಹಿವಾಟು 3 ಸಾವಿರ ಕೋಟಿ ರೂ. ಮೀರುತ್ತದೆ, 4 ಹೆಲಿಕಾಪ್ಟರ್ ಗಳು, ಅಗಣಿತ ಐಷಾರಾಮಿ ಕಾರುಗಳು ಮನೆಯ ಅಂಗಳದಲ್ಲಿ ನಿಲ್ಲುತ್ತವೆ.  2009ರಲ್ಲಿ ರೆಡ್ಡಿ ಕುಟುಂಬ ನಡೆಸಿದ ವಿವಾಹವೊಂದರ ಖರ್ಚಿನ ಬಾಬ್ತು 20 ಕೋಟಿ ರೂ. ಎಂದು ಅಂದಾಜು ಮಾಡಲಾಗುತ್ತದೆ, ಹೊರಗೆ 40 ಡಿಗ್ರಿ ಸೆಲ್ಷಿಯಸ್ ತಾಪಮಾನವಿರುವಾಗ 500 ಏರ್ ಕಂಡೀಷನರ್ ಗಳು ಅತಿಥಿಗಳನ್ನು ತಂಪಾಗಿಸುತ್ತವೆ. ಇದಾಗಿ ಒಂದೇ ತಿಂಗಳಲ್ಲಿ ರೆಡ್ಡಿ ಸಹೋದರರು 42 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟ ವನ್ನು ಹೆಗಲ ಮೇಲೆ ಹೊತ್ತೊಯ್ದು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸುತ್ತಾರೆ. ಇಷ್ಟೇ ಅಲ್ಲ ಹಣಬಲದಿಂದ ರಾಜಕೀಯದಲ್ಲೂ ಪ್ರಭುತ್ವ ಸಾಧಿಸುತ್ತಾರೆ. ಈ ರೆಡ್ಡಿ ಸಹೋದರರಲ್ಲಿ 2ನೆಯವರಾದ ಜನಾರ್ದನ ರೆಡ್ಡಿ ಮೊದಲಿಗೆ ಕರ್ನಾಟಕ ವಿಧಾನ ಸಭೆ ಪ್ರವೇಶಿಸುತ್ತಾರೆ, ಹಿರಿಯಣ್ಣ ಕರುಣಾಕರ ರೆಡ್ಡಿ ಹಾಗೂ ಕಿರಿಯ ಸಹೋದರ ಸೋಮಶೇಖರ ರೆಡ್ಡಿ ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಕುಟುಂಬದ ಆಪ್ತ ಸ್ನೇಹಿತ ಬಿ.ಶ್ರೀರಾಮುಲು ಕೂಡ ಶಾಸಕರಾಗುತ್ತಾರೆ. ಇವರಲ್ಲಿ ಒಬ್ಬ ಕಂದಾಯ ಸಚಿವ, ಮತ್ತೊಬ್ಬ ಪ್ರವಾಸೋದ್ಯಮ ಸಚಿವ, ಮಗದೊಬ್ಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ, ಇನ್ನೊಬ್ಬ ಕರ್ನಾಟಕ ಹಾಲು ಮಾರಾಟಗಾರರ ಒಕ್ಕೂಟ(ಕೆಎಂಎಫ್)ದ ಅಧ್ಯಕ್ಷರಾಗುತ್ತಾರೆ. ಶ್ರೀರಾಮುಲು ಸೋದರಿ ಜೆ. ಶಾಂತಾ ಬಳ್ಳಾರಿಯಿಂದ ಸಂಸತ್ತಿಗೆ ಆಯ್ಕೆಯಾಗುತ್ತಾರೆ!

ಇಂಥದ್ದೊಂದು ಪವಾಡ ಸದೃಶ ಚಮತ್ಕಾರ ಸಂಭವಿಸಿದ್ದಾದರೂ ಹೇಗೆ? ಇಷ್ಟಕ್ಕೂ ಈ “ಗಾಲಿ’ ಉರುಳಿ ಬಂದಿದ್ದಾದರೂ ಎಲ್ಲಿಂದ?
ಪ್ರಸ್ತುತ ವಿವಾದದ ಕೇಂದ್ರವಾಗಿರುವ ಓಬುಳಾಪುರಂ ಮೈನಿಂಗ್ ಕಂಪನಿ (ಓಎಂಸಿ) 2001ರಲ್ಲಿ ಜಿ.ರಾಮಮೋಹನ ರೆಡ್ಡಿ ಎಂಬವರ ಹೆಸರಿನಲ್ಲಿ ನೋಂದಣಿಯಾಗಿತ್ತು. ಈತನಿಗೆ ತನ್ನ ತಂದೆಯ ಮರಣಾ ನಂತರ ಮೈನಿಂಗ್ ಪರವಾನಗಿ ಲಭ್ಯವಾಗಿತ್ತು. ಆ ಲೀಸಿಂಗ್ ಹಕ್ಕನ್ನು ಓಎಂಸಿಗೆ ವರ್ಗಾವಣೆ ಮಾಡಿಕೊಳ್ಳಲು 2002ರಲ್ಲಿ ಆಂಧ್ರ ಪ್ರದೇಶದ ವೈ.ಎಸ್.ರಾಜಶೇಖರ ರೆಡ್ಡಿ ಸರ್ಕಾರ ಅನುಮತಿಯನ್ನೂ ನೀಡಿತ್ತು. ಇದಾಗಿ 3 ತಿಂಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಓಎಂಸಿಯ ನಿರ್ದೇಶಕರಾಗಿ ಒಳಹೊಕ್ಕರು. 2004-05ರಲ್ಲಿ ಓಎಂಸಿ ಕಂಪನಿ ರಿಜಿಸ್ಟ್ರಾರ್ ಬಳಿ ಸಲ್ಲಿಸಿದ ವಾರ್ಷಿಕ ಆದಾಯ ವರದಿಯಲ್ಲಿ ಆಶ್ಚರ್ಯವೊಂದು ಕಾದಿತ್ತು. ನಿರ್ದೇಶಕರಾಗಿ ಒಳಬಂದ ಜನಾರ್ದನ ರೆಡ್ಡಿ ಕಂಪನಿಯ ಹೊಸ ಮಾಲೀಕರಾಗಿರುವುದು ಕಂಡು ಬಂದಿತು. ಹಾಗೆ ಗಣಿ ಲೋಕಕ್ಕೆ ಕಾಲಿಟ್ಟ ಗಾಲಿ, ಕಾಯ್ದೆಗಳನ್ನು ಒದ್ದು ಆಚೆ ಇರಿಸುವ ಪರಿಪಾಠವನ್ನು ಬರಬರುತ್ತಲೇ ಆರಂಭಿಸಿದರು. 1957ರ ಗಣಿಗಾರಿಕೆ ಹಾಗೂ ಅದಿರಿನ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಆತ ಅನಂತಪುರ ಮೈನಿಂಗ್ ಕಾರ್ಪೋರೇಷನ್, ವೈ.ಮಹಾಬಲೇಶ್ವರಪ್ಪ ಆ್ಯಂಡ್ ಸನ್ಸ್ ಇತ್ಯಾದಿ ಗಣಿ ಕಂಪನಿ ಸೇರಿದಂತೆ ಹಲವು ಲೈಸೆನ್ಸ್್ಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು, ಕಂಪನಿಗಳನ್ನ ಸ್ವಾಧೀನಪಡಿಸಿಕೊಂಡರು. 2003-04ನೇ ಸಾಲಿನ ಓಎಂಸಿಯ ವಹಿವಾಟು 35.52ಕೋಟಿ ರೂಪಾಯಿ. ಇನ್ನು ಲಾಭ ಅಂತ ಬಂದಿದ್ದು ಕೇವಲ 1.05ಕೋಟಿ ರೂಪಾಯಿ. ಆದರೆ ಮಾರ್ಚ್ 2009ರ ವೇಳೆಗೆ ಇದರ ವಹಿವಾಟು 3 ಸಾವಿರ ಕೋಟಿ ರೂ. ಹಾಗೂ ನಿವ್ವಳ ಲಾಭ 700 ಕೋಟಿ ರೂಪಾಯಿಗಳು. ಇಂಥದ್ದೊಂದು ಚಮತ್ಕಾರದ ಬೆಳವಣಿಗೆ ಭಾರತದ ಬೇರಾವ ಆರ್ಥಿಕ ವಲಯದಲ್ಲೂ ಆಗಿರಲಿಕ್ಕಿಲ್ಲ. 2001-02ರಲ್ಲಿ 10 ಲಕ್ಷ ಪ್ರಾರಂಭಿಕ ಬಂಡವಾಳ ತೊಡಗಿಸಿದ್ದ ಕಂಪನಿ ಇವತ್ತು ಕಾರ್ಪೋರೇಟ್ ವಲಯದ ದೈತ್ಯ ಗಣಿ ಕಂಪನಿಯಾಗಿ ಹೇಗೆ ಬೆಳೆಯಿತು?
ಇದು ಬೆವರು ಹರಿಸಿ ದುಡಿದ ದುಡಿಮೆಯಲ್ಲ, ಜನರ ಸಂಪನ್ಮೂಲವನ್ನು ರಾಜಕಾರಣಿಯೊಬ್ಬ ತನ್ನ ಸ್ವಾರ್ಥಕ್ಕೋಸ್ಕರ ಒತ್ತೆ ಇಟ್ಟ ಸಲುವಾಗಿ ಗಣಿ ಕಂಪನಿಯೊಂದು ಈ ಮಟ್ಟಕ್ಕೆ ಬೆಳೆಯಿತು. ಅದಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿಯವರೇ ಕಾರಣ. ಅವರ ಬೆಂಬಲವಿಲ್ಲದಿದ್ದರೆ ಈ ರೀತಿ ಅಕ್ರಮ ಗಣಿಗಾರಿಕೆ ಮಾಡಲು ಸಾಧ್ಯವೇ ಇರಲಿಲ್ಲ. ಅರಣ್ಯಭೂಮಿ ಹಾಗೂ ಇತರ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ರಾಜಾರೋಷವಾಗಿ ಬೆಂಬಲಿಸಿದ್ದೇ ವೈ.ಎಸ್.ಆರ್. 2007, ಜುಲೈ 24ರಂದು ವೈ.ಎಸ್.ಆರ್. ಅವರೇ ಆಂಧ್ರ ವಿಧಾನಸಭೆಗೆ ತಿಳಿಸಿದಂತೆ ಆ ವರ್ಷ ಓಎಂಸಿ 20 ಲಕ್ಷ ಟನ್ ಅದಿರನ್ನು ಗಣಿಗಾರಿಕೆ ನಡೆಸಿತ್ತು. ವಾಸ್ತವ ಕೆದಕಿದರೆ ಆ ಅವಧಿಯ ಆಸುಪಾಸಿನ ಒಂದೆರಡು ವರ್ಷಗಳಲ್ಲಿ ಓಎಂಸಿ ಒಂದು ಕೋಟಿ ಟನ್್ಗೂ ಹೆಚ್ಚು ಅದಿರನ್ನು ಬಗೆದು ತೆಗೆದು ಚೀನಾಕ್ಕೆ ಸಾಗಿಸಿತ್ತು. ಆ ಸಂದರ್ಭದಲ್ಲಿ ಪ್ರತಿಟನ್ ಅದಿರಿಗೆ ನಾಲ್ಕರಿಂದ ಏಳು ಸಾವಿರ ರೂ. ದೊರೆತಿದೆ. ಈ ಅಂಶಗಳನ್ನಿಟ್ಟುಕೊಂಡು ಲೆಕ್ಕಾಚಾರ ಹಾಕಿದರೆ ಗಾಲಿ ಕಿಸೆಗಿಳಿಸಿಕೊಂಡ ಮೊತ್ತ ಎಷ್ಟಾಗಿರಬಹುದೆಂದು ಯೋಚಿಸಿ?
ಅಂದಹಾಗೆ ಬಳ್ಳಾರಿ ರೆಡ್ಡಿಗೆ ವೈ.ಎಸ್.ರಾಜಶೇಖರ ರೆಡ್ಡಿ ಇಷ್ಟೆಲ್ಲ ಮಾಡಿದ್ದು ಬಿಟ್ಟಿಯಾಗಿಯೇ? ಗಾಲಿ ಸಹೋದರರ ಸಾಮ್ರಾಜ್ಯ ವೃದ್ಧಿಯ ಹಿಂದೆ ಹೆಜ್ಜೆ ಹೆಜ್ಜೆಗೂ ಇದ್ದದ್ದು ವೈ.ಎಸ್.ಆರ್. ಕೃಪಾಕಟಾಕ್ಷ. ಅದು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ರೆಡ್ಡಿಗಳು ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಸ್ಥಾಪಿಸಲು ಮುಂದಾದ ಬ್ರಾಹ್ಮಿಣಿ ಉಕ್ಕು ಸ್ಥಾವರ ನಿರ್ಮಾಣಕ್ಕೆ 10,760 ಎಕರೆ ಸರ್ಕಾರಿ ಭೂಮಿಯನ್ನು ವೈ.ಎಸ್.ಆರ್. ಬಿಕನಾಸಿ ಬೆಲೆಗೆ ರೆಡ್ಡಿಗಳಿಗೆ ದಾನ ಮಾಡಿದರು. ಜತೆಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು 3,500 ಎಕರೆ ಹೆಚ್ಚುವರಿ ಭೂಮಿಯನ್ನೂ ರೆಡ್ಡಿಗಳಿಗೆ ನೀಡಿದರು. ಹೀಗೆ ಗಾಲಿ ಸಹೋದರರಿಗೆ ಸರ್ಕಾರಿ ಭೂಮಿಯನ್ನು ಎತ್ತೆತ್ತಿಕೊಡಬೇಕಾದರೆ ವೈ.ಎಸ್.ಆರ್.ಗೆ ದೊರೆತಿದ್ದ ಪ್ರತಿಫಲವಾದರೂ ಏನು?
2008, ಸೆಪ್ಟೆಂಬರ್ 18 ರಂದು ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ವೈ.ಎಸ್.ಆರ್. ಪುತ್ರ ಜಗನ್ ಮೋಹನ್ ರೆಡ್ಡಿ ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ರೆಡ್ ಗೋಲ್ಡ್ ಎಂಟರ್ ಪ್ರೈಸಸ್ ನಡುವೆ ಏರ್ಪಟ್ಟ ಒಪ್ಪಂದ ಇದರ ಮೇಲೆ ಬೆಳಕು ಚೆಲ್ಲುತ್ತದೆ. ಅದರ ಪ್ರಕಾರ ಓಎಂಸಿ ತಾನು ಬಗೆದು ತೆಗೆವ ಒಟ್ಟು ಅದಿರಿನಲ್ಲಿ ಶೇ.50ರಷ್ಟನ್ನು ರೆಡ್್ಗೋಲ್ಡ್್ಗೆ ನೀಡಬೇಕು. ಜತೆಗೆ ಶೇ.5 ರಷ್ಟನ್ನು ಕನ್ಸಲ್ ಟೆನ್ಸಿ ರೂಪದಲ್ಲಿ ರೆಡ್  ಗೋಲ್ಡ್ ಗೆ ಕೊಡುವುದಾಗಿಯೂ ಓಎಂಸಿ ಒಪ್ಪಂದದಲ್ಲಿ ವಾಗ್ದಾನ ಮಾಡಿತ್ತು. ಅಂದರೆ ಎಲ್ಲೆಲ್ಲಿ ಅದಿರು ನಿಕ್ಷೇಪಗಳಿವೆ ಎಂಬುದನ್ನು ಗುರುತಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾನಾ ಇಲಾಖೆಗಳ ಅನುಮತಿ ಪಡೆದು ಮೈನಿಂಗ್ ಲೀಸನ್ನು ಗಳಿಸಿಕೊಟ್ಟಿದ್ದಕ್ಕೆ ಪ್ರತಿಯಾಗಿ ಓಎಂಸಿ ಇಂಥದ್ದೊಂದು ದೊಡ್ಡ ಪ್ರಮಾಣದ ಕಪ್ಪವನ್ನು ನೀಡುತ್ತಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ವೈ. ಎಸ್. ರಾಜಶೇಖರ ರೆಡ್ಡಿ ಕೈ ಹಾಕಿದ್ದು ಇಂತಹ ಅನೈತಿಕ ಹಾಗೂ ಅಕ್ರಮ ಕೆಲಸಕ್ಕೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ವೈ.ಎಸ್.ಆರ್. ಗೆಣೆತನ ರೆಡ್ಡಿಗಳ ಕಿಸೆಯಲ್ಲಿ ಕಾಂಚಾಣ ಝಣಝಣ ಎನ್ನುವಂತೆ ಮಾಡಿತು. ಅದರ ಮದ ಜನಾರ್ದನ ರೆಡ್ಡಿಯ ನೆತ್ತಿಗೇರಿತು. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳಲ್ಲಿ ಯಾವುದನ್ನೂ ದುಡ್ಡಿನಿಂದ ಕೊಂಡುಕೊಳ್ಳಬಲ್ಲೆ ಎಂಬ ಮದವೇ ಜರ್ನಾದನ ರೆಡ್ಡಿ ವರ್ತನೆಯನ್ನು ಹುಚ್ಚುಚ್ಚಾಗಿಸಿತು. ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪನವರು ಒಬ್ಬ ಕಾನ್ ಸ್ಟೆಬಲ್, ಒಬ್ಬ ಗುಮಾಸ್ತನಂತಹ ಸಾಮಾನ್ಯ ಹುದ್ದೆಯ ಉದ್ಯೋಗಿಯ ವರ್ಗಾವಣೆಯಿಂದಲೂ ಕಾಸು ಗಳಿಸಲು ಹೊರಟ ಕಾರಣ ಭೂಮಿಯನ್ನೇ ಬಗೆದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರೆಡ್ಡಿ ಸಹೋದರರನ್ನು ಹಣಿಯುವ ನೈತಿಕ ಹಕ್ಕು ಕಳೆದುಕೊಂಡರೆ, ಇನ್ನೊಂದೆಡೆ ಪ್ರತಿವರ್ಷವೂ ವರಮಹಾಲಕ್ಷ್ಮಿ ಪೂಜೆಗೆಂದು ಬಳ್ಳಾರಿಗೆ ಬರುತಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಲಜ್ಜೆಬಿಟ್ಟು ರೆಡ್ಡಿಗಳ ಸಮರ್ಥನೆಗೆ, ಶ್ಲಾಘನೆಗೆ ನಿಂತ ಕಾರಣ ಬಳ್ಳಾರಿ ಸಹೋದರರಿಗೆ ಭೀಮ ಬಲ ಬಂದಂತಾಯಿತು. ಈ ರೆಡ್ಡಿಗಳು ಯಾವ ಮಟ್ಟಕ್ಕೆ ಹೋದರೆಂದರೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ್ದ ನೆರೆಯ ಸಂತ್ರಸ್ತರ ಪುನರ್ವಸತಿಗೆ 500 ಕೋಟಿ ರೂ.ಗಳ ಖಾಸಗಿ ಯೋಜನೆಯೊಂದನ್ನು ಪ್ರಕಟಿಸುವ ಮೂಲಕ ಮುಖ್ಯಮಂತ್ರಿಗೇ ಸವಾಲೆಸೆದರು. ಅದಕ್ಕೆ ಪ್ರತಿಯಾಗಿ ಪ್ರತಿ ಅದಿರು ಲಾರಿಗಳ ಮೇಲೆ ಸಾವಿರ ರೂ. ಸೆಸ್(ಸುಂಕ) ಹಾಕಲು ಹೊರಟ ಮುಖ್ಯಮಂತ್ರಿ ನಿರ್ಧಾರದ ವಿರುದ್ಧ 2009 ಅಕ್ಟೋಬರ್ 25ರಂದು ಬಳ್ಳಾರಿಯಲ್ಲಿ ಗಣಿ ಮಾಲೀಕರ ಸಭೆ ಕರೆದ ರೆಡ್ಡಿಗಳು ಯಡಿಯೂರಪ್ಪನವರ ನಿರ್ಧಾರವನ್ನೇ ತಿರಸ್ಕಾರ ಮಾಡಿಬಿಟ್ಟರು. ಅಲ್ಲಿಗೆ ದಕ್ಷಿಣ ಭಾರತದಲ್ಲಿ ರಚನೆಯಾಗಿದ್ದ ಬಿಜೆಪಿಯ ಮೊದಲ ರಾಜ್ಯ ಸರ್ಕಾರ 18 ತಿಂಗಳಲ್ಲೇ ಕುಸಿದುಬೀಳುವ ಅಪಾಯಕ್ಕೆ ಸಿಲುಕಿತು. ಆಗ ಕರ್ನಾಟಕದ ಉಸ್ತುವಾರಿ ಹೊಂದಿದ್ದ ಅರುಣ್ ಜೇಟ್ಲಿಯವರು ರಾಜ್ಯಕ್ಕೆ ದೌಡಾಯಿಸಿದರೂ ರೆಡ್ಡಿಗಳು ಬಗ್ಗಲಿಲ್ಲ. ಇನ್ನೇನು ಸರ್ಕಾರ ಪತನವಾಯಿತು ಎಂಬಷ್ಟರಲ್ಲಿ ಮತ್ತೆ ಪ್ರತ್ಯಕ್ಷರಾದ ರೆಡ್ಡಿಗಳ ಅಮ್ಮ “ತಾಯಿ ಸುಷ್ಮಾಸ್ವರಾಜ್ ” ಮಧ್ಯಸ್ಥಿಕೆಯಿಂದ ಅಪಾಯ ದೂರವಾಯಿತು. ಈ ಘಟನೆ ನಡೆದಿದ್ದು 2009 ನವೆಂಬರ್ 9 ರಂದು. ಇದಾಗಿ 2 ದಿನಗಳಲ್ಲಿ ಅಂದರೆ 2009 ನವೆಂಬರ್ 11ರಂದು ಜನಾರ್ದನ ರೆಡ್ಡಿಯನ್ನು ರಾಜ್ಯದ ಎಲ್ಲಾ ಪ್ರಮುಖ ದಿನಪತ್ರಿಕೆಗಳು ಹಾಗೂ ಸುದ್ದಿ ಚಾನೆಲ್್ಗಳ ಕಚೇರಿಗೆ ಕರೆತಂದ ಬಳ್ಳಾರಿ ಮೂಲದ ಕುಖ್ಯಾತ ಅವಿವೇಕಿ ಪೀತ ಪತ್ರಕರ್ತನೊಬ್ಬ. ಟ್ಯಾಬ್ಲಾಯ್ಡ್ ಎಂಬ ತನ್ನ ಟಾಯ್ಲೆಟ್್ನಲ್ಲಿ ಪರಸ್ತ್ರೀಯರ ಚಾರಿತ್ರ್ಯ ವಧೆ ಮಾಡಿ, “ಒಳಗೆ ಚಿತ್ರಗಳಿವೆ ಎಚ್ಚರಿಕೆ’ ಎಂದೆಲ್ಲಾ ಒಕ್ಕಣೆ ಬರೆದು ಪರ ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸಿ ದುಡ್ಡು ಮಾಡಿ ಇಬ್ಬರು ಹೆಂಡತಿಯರು ಮತ್ತು ಮಕ್ಕಳನ್ನು ಸಾಕುತ್ತಿದ್ದ ಈ ಮಾಜಿ ಹಿಸ್ಟರಿ ಮೇಷ್ಟ್ರು/ಹಾಲಿ ಪತ್ರಕರ್ತ ಪ್ರಜಾಪ್ರಭುತ್ವದ ನಾಲ್ಕನೇ ಅಂಗದಲ್ಲಿ ರೆಡ್ಡಿಗಳ ವಕಾಲತ್ತಿಗೆ ನಿಂತ. ಹೀಗೆ ಬಳ್ಳಾರಿ ಕಳ್ಳರಲ್ಲಿ ಒಬ್ಬ ಗಣಿ ಲೂಟಿ ಮಾಡಿದರೆ, ಮತ್ತೊಬ್ಬ ಪತ್ರಿಕೋದ್ಯಮ ಕ್ಷೇತ್ರವನ್ನು’ಕೊಳೆಗೆರೆ’ಯನ್ನಾಗಿಸುವ ಕೆಲಸ ಮಾಡತೊಡಗಿದ. ರೆಡ್ಡಿಗಳ ಪರವಾದ ಪತ್ರಿಕಾ ಪ್ರಕಟಣೆಗಳೆಲ್ಲಾ ಪತ್ರಿಕಾಲಯಗಳಿಗೆ ರವಾನೆಯಾಗುತ್ತಿದ್ದುದು ಈತನ ಕಚೇರಿಯ ಫ್ಯಾಕ್ಸ್ ನಿಂದಲೇ.  2009 ಡಿಸೆಂಬರ್ 11ರಂದು ಆಂಧ್ರ ಹೈಕೋರ್ಟ್ ನ್ಯಾಯಮೂರ್ತಿ ಎಲ್. ನರಸಿಂಹ ರೆಡ್ಡಿಯವರು ಜನಾರ್ದನ ರೆಡ್ಡಿ ಪರವಾಗಿ ದಿಗ್ಭ್ರಮೆ ಹುಟ್ಟಿಸುವಂತಹ ತೀರ್ಪು ನೀಡಿದಾಗ ಆ ಜಡ್ಜ್ ಮೆಂಟ್ ಕಾಪಿ ಕನ್ನಡ ಪತ್ರಿಕಾಲಯಗಳಿಗೆ “ಹಾಯ್ ಹಾಯ್್’ ಎಂದು ಬಂದಿದ್ದು ಇವನ ಕದಿರೇನಹಳ್ಳಿ ಕ್ರಾಸ್ ನಿಂದಲೇ. ಜನಾರ್ದನ ರೆಡ್ಡಿಯ ಕೃಪೆಯಿಂದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡ ಈ “ವಿಚಾರ ನಪುಂಸಕ’ ಪತ್ರಕರ್ತ, ಕರುಣಾಕರ ರೆಡ್ಡಿಯ ಪರವಾಗಿ ಬಳ್ಳಾರಿಗೆ ಚುನಾವಣಾ ಪ್ರಚಾರಾಂದೋಲನಕ್ಕೆ ತೆರಳಿದ್ದಲ್ಲದೆ ತನ್ನ ಪತ್ರಿಕೆಯನ್ನು ರೆಡ್ಡಿಗಳ ಸಮರ್ಥನೆ ಹಾಗೂ ಹೊಗಳಿಕೆಗೆ ಮೀಸಲಿಟ್ಟುಬಿಟ್ಟ. ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ರೆಡ್ಡಿಗಳನ್ನು ಹೆಡೆಮುರಿ ಕಟ್ಟಲು ಹೊರಟಾಗ ತನ್ನ ನಾಲಾಯಕ್ಕು ಪತ್ರಿಕೆಯಲ್ಲಿ ಈ ನಾಡು ಕಂಡ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಹೆಗ್ಡೆಯವರನ್ನೂ ನಿಂದಿಸಲು ಆರಂಭಿಸಿದ. ಈತ ಯಾವ ಮಟ್ಟಕ್ಕೆ ಇಳಿದನೆಂದರೆ “ಅನಿಲ್ ಲಾಡ್ ಮತ್ತು 40 ಕಳ್ಳರು’ ಎಂಬ ಪುಸ್ತಕ ಬರೆದು ರೆಡ್ಡಿಗಳ ಘನಕಾರ್ಯವನ್ನು ಸಮರ್ಥಿಸಲು, ಸುಭಗರೆಂಬಂತೆ ಚಿತ್ರಿಸಲು ಪ್ರಯತ್ನಿಸಿದ. ಆ ಮೂಲಕ ಪದ್ಮನಾಭ ನಗರದಲ್ಲಿ ಅನಂತ ಆಸ್ತಿ ಮಾಡಿಕೊಂಡು ತಾನೊಬ್ಬ 80 ಕೋಟಿ ಸಾಮ್ರಾಜ್ಯ ಕಟ್ಟಿರುವ “ಯಶೋ’ಗುಣ ಉದ್ಯಮಿ ಎಂಬಂತೆ ಬೀಗುತ್ತಿದ್ದಾನೆ. ಇಂತಹ ಪೀತ ಪತ್ರಕರ್ತ, ತಾಯಿ ಸುಷ್ಮಾಸ್ವರಾಜ್ ಹಾಗೂ ರೆಡ್ಡಿಗಳಿಂದಾಗಿ ಈ ರಾಜ್ಯ ಇನ್ನೇನು “ಬೇಕಾರ್ “, “ಬೆಗ್ಗರ್ ” ಆಗುತ್ತದೆ ಎಂಬ ಭಯ ನಾಡಿನ ಜನರಲ್ಲಿ ಸೃಷ್ಟಿಯಾಯಿತು. ಇವರ ಅಕ್ರಮಕ್ಕೆ, ಆರ್ಭಟಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎಂಬ ಆತಂಕ ನಿರ್ಮಾಣವಾಯಿತು.
ಅಂದಮಾತ್ರಕ್ಕೆ ಸತ್ಯಕ್ಕೆ ಜಯವೇ ಇರಲಿಲ್ಲವೇ? ನ್ಯಾಯ-ನೀತಿ, ಧರ್ಮ-ದೈವ ಇವುಗಳಾವುವೂ ಇಲ್ಲ ಎಂದಾಗಿ ಬಿಟ್ಟಿತೇ?
ಅಂಥದ್ದೊಂದು ಅನುಮಾನ, ಆತಂಕ ಸೃಷ್ಟಿಯಾದ ವೇಳೆಯಲ್ಲೇ ದುರ್ಘಟನೆಯೊಂದು ಸಂಭವಿಸಿತು. 2009 ಸೆಪ್ಟೆಂಬರ್ 3ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅಕಾಲಿಕ ಮರಣವನ್ನಪ್ಪಿದರು. ಅಲ್ಲಿಗೆ ಜನಾರ್ದನ ರೆಡ್ಡಿಯ ಸಾಮ್ರಾಜ್ಯದ ಅವನತಿ ಆರಂಭವಾಯಿತೆನ್ನಬಹುದು. ಚಂದ್ರಬಾಬು ನಾಯ್ಡು ಹಾಗೂ ತೆಲುಗುದೇಶಂ ಪಕ್ಷ ಬಳ್ಳಾರಿ ರೆಡ್ಡಿಗಳ ಅಕ್ರಮ ಕಾರ್ಯಗಳ ಬಗ್ಗೆ ಎಷ್ಟೇ ಧ್ವನಿ ಎತ್ತಿದರೂ ವೈ.ಎಸ್.ಆರ್. ಸೊಪ್ಪು ಹಾಕುತ್ತಿರಲಿಲ್ಲ. ಯಾವಾಗ ವೈ.ಎಸ್.ಆರ್. ತೀರಿಕೊಂಡರೋ ಹಂಗಾಮಿ ಮುಖ್ಯಮಂತ್ರಿಯಾಗಿ ಕೆ. ರೋಸಯ್ಯ ಅಧಿಕಾರ ವಹಿಸಿಕೊಂಡರು. ತೆಲುಗುದೇಶಂ ಪಕ್ಷ ಮತ್ತೆ ಧ್ವನಿ ಎತ್ತಿತು. ಅಕ್ರಮ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು ಹಾಗೂ ಸಿಬಿಐ ತನಿಖೆಗೆ ಆದೇಶ ಮಾಡಬೇಕೆಂದು ಒತ್ತಾಯಿಸಿತು. ಅದೇ ಸಂದರ್ಭದಲ್ಲಿ ತಮ್ಮ ಮುಖ್ಯಮಂತ್ರಿ ಗಾದಿಗೆ ಕಂಟಕವಾಗಿ ಪರಿಣಮಿಸಿದ್ದ ವೈ.ಎಸ್.ಆರ್. ಪುತ್ರ ಜಗನ್ ಮೋಹನ್ ರೆಡ್ಡಿಗೆ ಪಾಠ ಕಲಿಸುವ ಸಲುವಾಗಿ ರೋಸಯ್ಯನವರು 2007 ನವೆಂಬರ್ 17ರಂದು ಕೇಂದ್ರ ಗೃಹ ಖಾತೆಗೆ ಪತ್ರ ಬರೆದು ಗಣಿ ನಿಷೇಧಕ್ಕೆ ಆಗ್ರಹ ಪಡಿಸಿದರು. ನವೆಂಬರ್ 30 ರಂದು ರೆಡ್ಡಿ ಸಹೋದರರ ಗಣಿಗಳೂ ಸೇರಿದಂತೆ ಒಟ್ಟು ಆರು ನಿಕ್ಷೇಪಗಳಲ್ಲಿ ಗಣಿಗಾರಿಕೆಯನ್ನು ನಿಷೇಧ ಮಾಡಿ ಆದೇಶವೂ ಹೊರಬಿತ್ತು. ಜತೆಗೆ ತನಿಖೆಯೂ ಆರಂಭವಾಯಿತು. ಅಂದು ತೆಲುಗುದೇಶಂ ಒತ್ತಡಕ್ಕೆ ಮಣಿದು ರೋಸಯ್ಯ ಮಾಡಿದ ಮನವಿಯ ನಂತರ ಆರಂಭವಾದ ಸಿಬಿಐ ತನಿಖೆಯ ಫಲವೇ ಮೊನ್ನೆ ಸೆಪ್ಟೆಂಬರ್ 5ರಂದು ನಡೆದಿರುವ ಜನಾರ್ದನ ರೆಡ್ಡಿ ಬಂಧನ!
ಹಾಗಂತ ಕಾಂಗ್ರೆಸ್ ಕೂಡ ಬೀಗುವ ಸ್ಥಿತಿಯಲ್ಲಿಲ್ಲ!
ಜನಾರ್ದನ ರೆಡ್ಡಿಯ ಪಾಪದಲ್ಲಿ ಕಾಂಗ್ರೆಸ್್ನ ಪಾಲೂ ಇದೆ. ಇಷ್ಟಕ್ಕೂ ಬಳ್ಳಾರಿ ರೆಡ್ಡಿ ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ನ ವೈ.ಎಸ್.ರಾಜಶೇಖರ ರೆಡ್ಡಿಯೇ ಕಾರಣ. ಇವತ್ತು ಜನಾರ್ದನ ರೆಡ್ಡಿಯ ಸಾಮ್ರಾಜ್ಯದ ಮೌಲ್ಯ 25 ಸಾವಿರ ಕೋಟಿಗೂ ಮೀರಿದ್ದರೆ ಸಾಕ್ಷಿ ಪತ್ರಿಕೆ, ಸಾಕ್ಷಿ ಚಾನೆಲ್, ಜಗತಿ ಪಬ್ಲಿಕೇಷನ್, ಆರ್ ಆರ್ ಎಂಟರ್ ಪ್ರೈಸಸ್ ಮುಂತಾದ ಸಾಮ್ರಾಜ್ಯ ಕಟ್ಟಿಕೊಂಡಿರುವ ರಾಜಶೇಖರ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಬೆಲೆ ದುಪ್ಪಟ್ಟು. ಇಂದು ಜಗನ್್ಮೋಹನ್ ರೆಡ್ಡಿ ಕಾಂಗ್ರೆಸ್ ನಿಂದ ಪ್ರತ್ಯೇಕಗೊಂಡಿದ್ದರೂ ಆತ ಇಂಥದ್ದೊಂದು ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು ಕಾಂಗ್ರೆಸ್್ನ “ಹಸ್ತ’ವನ್ನು ಬಳಸಿಕೊಂಡೇ. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ 1949ರಲ್ಲಿ ಡೈಮಂಡ್ ಮೈನಿಂಗ್ ಲೈಸೆನ್ಸ್್ನ ನವೀಕರಣಕ್ಕೆ ಪ್ರತಿಯಾಗಿ 25 ಸಾವಿರ ರೂ. ಲಂಚ ಪಡೆದುಕೊಂಡು ಸಿಕ್ಕಿಹಾಕಿಕೊಂಡು ಮೂರು ವರ್ಷ ಸಜೆ ಅನುಭವಿಸಿದ್ದ ರಾವ್ ಶಿವ್ ಬಹದ್ದೂರ್ ಸಿಂಗ್ ಕಾಂಗ್ರೆಸ್ ನೇತಾರರಾಗಿದ್ದರು! ಈ ದೇಶ ಕಂಡ ಮೊದಲ ಮೈನಿಂಗ್ ಹಗರಣ ಸೃಷ್ಟಿಸಿದ ಆತ ಅರ್ಜುನ್ ಸಿಂಗ್ ಅವರ ಅಪ್ಪ. ಇಂತಹ ಹಿನ್ನೆಲೆ ಹೊಂದಿರುವ ಹಾಗೂ ಕೇಂದ್ರದಲ್ಲಿ ಹಗರಣಗಳ ತಿಪ್ಪೆಯನ್ನೇ ಸೃಷ್ಟಿಸಿರುವ ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಖಂಡಿತಾ ಇಲ್ಲ. ಇದೆಲ್ಲ “ಖಾಲಿ ಖೋಪ್ಡಿ ಬಾಯಲ್ಲಿ ಬೊಂಬ್ಡಿ’ ನೇತಾರ ವಿ.ಎಸ್.ಉಗ್ರಪ್ಪನವರಂಥವರಿಗೆ ಅರ್ಥವಾಗೊಲ್ಲ ಬಿಡಿ!
ಇಲ್ಲಿ ಯಾರೂ ಸುಭಗರಿಲ್ಲ. ಅಣಕವೆಂದರೆ ದೇವಾಲಯ(ಮಂದಿರ) ರಾಜಕೀಯದಿಂದಲೇ ಮೇಲೆ ಬಂದ ಬಿಜೆಪಿಯೆಂಬ ಪಕ್ಷದ ನೇತಾರರಾದ ಜನಾರ್ದನ ರೆಡ್ಡಿ ಕರ್ನಾಟಕ-ಆಂಧ್ರದ ಗಡಿಯ ಎಲ್ಲೆಯಂತಿದ್ದ ಸುಗ್ಗುಲಮ್ಮ ದೇವಾಲಯವನ್ನು ನಾಶ ಮಾಡಿದಂಥ ವ್ಯಕ್ತಿ. ಅಂತಹ ವ್ಯಕ್ತಿ ನೀಡಿದ 40 ಲಕ್ಷ ಮೌಲ್ಯದ ಚಿನ್ನದ ಖಡ್ಗವನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಹಳ ಖುಷಿಯಿಂದ ಪಡೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಬಂಧನ ಆತನಿಗೆ ವೈಯಕ್ತಿಕ ಮುಖಭಂಗ ಮಾತ್ರವಲ್ಲ, ನಿತಿನ್ ಗಡ್ಕರಿ ಹಾಗೂ ಸುಷ್ಮಾ ಸ್ವರಾಜ್ ಗೆ ಮಾಡಿದ ಕಪಾಳಮೋಕ್ಷವೂ ಹೌದು. ಇದೇನೇ ಇರಲಿ, ಕರ್ನಾಟಕ ರಾಜಕಾರಣವನ್ನು ಲಾಲೂ ಯಾದವ್ ಕಾಲದ ಬಿಹಾರ ರಾಜಕಾರಣ ಹಾಗೂ ಮುಲಾಯಂ-ಮಾಯಾವತಿಯವರ ಉತ್ತರ ಪ್ರದೇಶದ ಮಟ್ಟಕ್ಕೆ ಇಳಿಸಿದ್ದ ಜನಾರ್ದನ ರೆಡ್ಡಿ ಬಂಧನ ಸ್ವಾಗತಾರ್ಹ, ಅಲ್ಲವೆ?!
ಕೃಪೆ: ಪ್ರತಾಪ ಸಿಂಹ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ