ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಸೆಪ್ಟೆಂಬರ್ 27, 2011

ಕಣ್ಣಿಲ್ಲದ ಅವರು ಸ್ಫೂರ್ತಿಯ ಸ್ವರ್ಗ ತೋರುತ್ತಾರೆ!

26-09-2010
ಸವಾಯಿ ಗಂಧರ್ವ ಸಭಾಗೃಹ
ದೇಶಪಾಂಡೆ ನಗರ, ಹುಬ್ಬಳ್ಳಿ
‘ಇಷ್ಟು ತಡವಾಗಿಯಾದರೂ ನೀವು ಶ್ರೀನಿವಾಸ ತೋಫಖಾನೆಯವರನ್ನು ಅಭಿನಂದಿಸಿ ಶಾಪಮುಕ್ತರಾದಿರಿ. ಇವರನ್ನು ಅಭಿನಂದಿಸುವುದನ್ನೇನಾದರೂ ಮರೆತಿದ್ದರೆ ಮುಂದಿನ ತಲೆಮಾರು ನಿಮಗೆ ಶಾಪಹಾಕುತಿತ್ತು. ಒಂದು ಊರು ಬೆಳೆಯುವುದು ಅಗಲವಾದ ರಸ್ತೆಗಳಿಂದಲ್ಲ, ದೊಡ್ಡ ದೊಡ್ಡ ಕಟ್ಟಡಗಳಿಂದಲೂ ಅಲ್ಲ. ತೋಫಖಾನೆಯಂಥವರಿದ್ದರೆ ಊರು ಬೆಳೆಯುತ್ತದೆ, ಪ್ರಸಿದ್ಧವಾಗುತ್ತದೆ. ಗದಗಕ್ಕೆ ಹೆಸರು ಬಂದಿದ್ದು ಕುಮಾರವ್ಯಾಸನ ನಾಡೆಂಬ ಕಾರಣಕ್ಕೆ, ಷರೀಫರಿಂದಾಗಿ ಹಾವೇರಿಯ ಶಿಶುವಿನಹಾಳ ಪ್ರಸಿದ್ಧವಾಯಿತು, ಹಾಗೆ ತೋಫಖಾನೆಯವರಂಥವರು ಜನ್ಮತಳೆದ ಕಾರಣ ನಮ್ಮ ನಾಡಿಗೆ ಹೆಸರು ಬಂದಿದೆ.’
ಅಂದು ಗದುಗಿನ ತೋಂಟದಾರ್ಯ ಮಹಾಸ್ವಾಮೀಜಿಯವರು ಹೀಗೆ ಹೇಳುತ್ತಿದ್ದರೆ ನೆರೆದ ಮಹಾಜನತೆ ನಿಬ್ಬೆರಗಾಗಿ ಆಲಿಸುತ್ತಿತ್ತು!
ನಿಮಗೆ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ಬಗ್ಗೆ ಹೇಳಬೇಕೆಂದರೆ ಬಹುಶಃ ಅವರಷ್ಟು ಪುಸ್ತಕಗಳನ್ನು ಓದಿರುವ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವಿರುವ ಮತ್ತೊಬ್ಬ ಸ್ವಾಮೀಜಿಯನ್ನು ಹುಡುಕಲು ತ್ರಾಸವಾದೀತು. ಅವರೊಬ್ಬ ನಿಷ್ಠುರವಾದಿ, Out Spoken ಬೀದರ್್ನಲ್ಲಿ ನಿಂತು ಹೈದರಾಬಾದ್ ಸುಲ್ತಾನರು ನಡೆಸಿದ ದೌರ್ಜನ್ಯದ ಬಗ್ಗೆ ಖಡಕ್ ಆಗಿ ಮಾತನಾಡುವ ಎದೆಗಾರಿಕೆಯನ್ನು ಅವರಲ್ಲಿ ಮಾತ್ರ ಕಾಣಲು ಸಾಧ್ಯ. ಅಂತಹ ತೋಂಟದಾರ್ಯ ಸ್ವಾಮೀಜಿಗಳು, ‘ನನ್ನ ಜೀವನದ ಪರಮ ಭಾಗ್ಯವೆಂದರೆ ಶ್ರೀನಿವಾಸ ತೋಫಖಾನೆಯವರಂಥವರು ಗುರುಗಳಾಗಿ ಸಿಕ್ಕಿದ್ದು….’ ಎಂದರು ಆ ದಿನ. ಅದನ್ನು ಆಗಾಗ್ಗೆ ಪುನರುಚ್ಚರಿಸುತ್ತಿರುತ್ತಾರೆ. ಹೌದು, ಶ್ರೀನಿವಾಸ ತೋಫಖಾನೆಯವರ ಬದುಕಿನ ಏರು-ಪೇರುಗಳು ಹಾಗೂ ಅವುಗಳಿಗೆ ಅವರು ಸ್ಪಂದಿಸಿದ ಬಗೆಯನ್ನು ನೋಡಿದಾಗ ಎಂತಹ ಅಸಾಧಾರಣ ವ್ಯಕ್ತಿತ್ವ ಅವರದ್ದು ಎನಿಸುತ್ತದೆ.
ಅವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದರು. ಸರಸ್ವತಿ ಪುತ್ರ ಎಸ್.ಎಲ್. ಭೈರಪ್ಪನವರು ತಮ್ಮ ಉಪನ್ಯಾಸಕ ವೃತ್ತಿಯನ್ನು ಇದೇ ಕಾಲೇಜಿನಲ್ಲಿ ಆರಂಭಿಸಿದಾಗ ತೋಫಖಾನೆಯವರ ಅದ್ಭುತ ಧ್ವನಿಗೆ ಮಾರುಹೋಗಿ ಸಮಯ ಸಿಕ್ಕಾಗಲೆಲ್ಲ ಕಿಟಕಿ ಬಳಿ ನಿಂತು ತೋಫಖಾನೆಯವರ ಪಾಠ ಕೇಳಿಸಿಕೊಳ್ಳುತ್ತಿದ್ದರು. ಭೈರಪ್ಪನವರು ಸ್ನಾತಕೋತ್ತರ ಪದವಿಯನ್ನು ಪೂರೈಸಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಹೊಸದು. ಇನ್ನೂ ಹುಡುಗ, ಚೆನ್ನಾಗಿ ಮಾತನಾಡುತ್ತಾನೆ ಎಂಬ ಹೆಸರು ಗಳಿಸಿದ್ದರು. ಹಾಗಾಗಿ ಭಾಷಣ ಮಾಡಲು ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಲಾಗಿತ್ತು. ಅಂದು ವೇದಿಕೆಯೇರಿದ ಭೈರಪ್ಪನವರು ಐತಿಹ್ಯವೊಂದನ್ನು ಹೇಳಿದರು. “ಶಂಕರಾಚಾರ್ಯರು ತಮ್ಮ ಶಿಷ್ಯರ ಜತೆ ದೇಶಪರ್ಯಟನೆ ಮಾಡುತ್ತಿದ್ದ ಸಂದರ್ಭವದು. ಎಲ್ಲರಿಗೂ ಬಹಳ ಹಸಿವಾಗಿತ್ತು. ಭಿಕ್ಷೆ ಎತ್ತಲು ಹತ್ತಿರದಲ್ಲಿ ಯಾವ ಮನೆಗಳೂ ಕಾಣಲಿಲ್ಲ. ಮಾರ್ಗಮಧ್ಯದಲ್ಲಿ ಪೂಜಾರಿಯೊಬ್ಬ ಮರದಿಂದ ಹೆಂಡವನ್ನು ಇಳಿಸುತ್ತಿದ್ದ. ಅವನ ಮುಂದೆ ನಿಂತ ಶಂಕರಾಚಾರ್ಯರು, ‘ಭವತೀ ಭಿಕ್ಷಾಮ್ ದೇಹಿ’ ಎನ್ನುತ್ತಾರೆ. ಸ್ವಾಮಿ ನನ್ನ ಬಳಿ ನಿಮಗೆ ಕೊಡುವಂಥದ್ದು ಏನೂ ಇಲ್ಲ ಎನ್ನುತ್ತಾನೆ ಆತ. ಆಗ, ಹೆಂಡವಿದೆಯಲ್ಲಾ ಅದನ್ನೇ ಕೊಡು ಎನ್ನುತ್ತಾರೆ ಶಂಕರಾಚಾರ್ಯರು. ಅಳುಕುತ್ತಲೇ ಆತ ಸುರಿಯುತ್ತಾನೆ, ಶಂಕರಾಚಾರ್ಯರು ಮೂರು ಬೊಗಸೆ ಹೆಂಡ ಕುಡಿಯುತ್ತಾರೆ. ಕೂಡಲೇ ಶಿಷ್ಯರೂ ಕೈಯೊಡ್ಡಲು ಬರುತ್ತಾರೆ. ನೀವು ಅದನ್ನು ಕುಡಿಯಬಾರದು ಎನ್ನುತ್ತಾರೆ ಗುರುಗಳು. ನೀವು ಮಾತ್ರ ಕುಡಿಯಬಹುದು, ನಾವೇಕೆ ಕುಡಿಯಬಾರದು ಎಂದು ಶಿಷ್ಯರು ಪ್ರಶ್ನಿಸಿದಾಗ ಅನಿವಾರ್ಯವಾಗಿ ಸಮ್ಮತಿಸುತ್ತಾರೆ. ಆದರೆ ಕುಡಿದು ಮುಂದೆ ಹೋದಂತೆ ಶಿಷ್ಯಂದಿರು ತೂರಾಡಲು ಆರಂಭಿಸಿದರೆ. ಶಂಕರಾಚಾರ್ಯರು ಮಾತ್ರ ಸಮಸ್ಥಿತಿಯಲ್ಲಿ ಸಾಗುತ್ತಿರುತ್ತಾರೆ. ಮರುದಿನವೂ ಅಂಥದ್ದೇ ಪರಿಸ್ಥಿತಿ ಎದುರಾಗುತ್ತದೆ ಮಧ್ಯಾಹ್ನದ ವೇಳೆ ಹಸಿವು ತಳಮಳ ಆರಂಭಿಸುತ್ತದೆ. ಮನೆಗಳಾವವೂ ಕಾಣುತ್ತಿಲ್ಲ. ಎದುರಿಗೊಂದು ಕುಲುಮೆ ಇದೆ. ಅದರ ಮುಂದೆ ನಿಂತ ಶಂಕರಾಚಾರ್ಯರು ‘ಭವತೀ ಭಿಕ್ಷಾಮ್ ದೇಹಿ’ ಎನ್ನುತ್ತಾರೆ. ಸ್ವಾಮಿ, ಕಬ್ಬಿಣದ ಲಾವಾರಸವನ್ನು ಬಿಟ್ಟರೆ ಕಮ್ಮಾರನಾದ ನನ್ನ ಬಳಿ ಏನಿದೆ ಎಂದು ಪ್ರಶ್ನಿಸುತ್ತಾನೆ. ಅದನ್ನೇ ಕೊಡು ಎನ್ನುತ್ತಾರೆ ಶಂಕರಾಚಾರ್ಯರು. ಒಮ್ಮೆಗೆ ಹೌಹಾರಿದ ಆತ ಒತ್ತಾಯಕ್ಕೆ ಮಣಿದು ಕಾದ ಕಬ್ಬಿಣದ ದ್ರವ್ಯವನ್ನು ಕೈಗೆ ಸುರಿಯುತ್ತಾನೆ, ಶಂಕರಾಚಾರ್ಯರು ಕುಡಿಯುತ್ತಾರೆ! ತದನಂತರ ಹಿಂದಿರುಗಿ ನೋಡಿದರೆ ಶಿಷ್ಯಂದಿರು ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ. ನಿನ್ನೆ ಹೆಂಡ ಕುಡಿದಿರಲ್ಲಾ ಇಂದು ಇದನ್ನೂ ಕುಡಿಯಿರಿ ಎಂದು ಶಂಕರಾಚಾರ್ಯರು ಹೇಳಿದಾಗ ಶಿಷ್ಯಂದಿರು ಅವಮಾನದಿಂದ ತಲೆ ತಗ್ಗಿಸುತ್ತಾರೆ”. ಈ ಐತಿಹ್ಯವನ್ನು ಕೇಳಿ ಸಭಿಕರು ಕರತಾಡನ ಮಾಡಿದರು, ಭೈರಪ್ಪನವರೂ ಉಬ್ಬಿದರು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಹಿರಿಯರೊಬ್ಬರು ಭೈರಪ್ಪನವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ನೀವು ಭವತೀ ಭಿಕ್ಷಾಮ್ ದೇಹಿ ಎಂದು ಭಾಷಣದಲ್ಲಿ ಹೇಳಿದಿರಿ. ಭವತೀ ಭಿಕ್ಷಾಮ್ ದೇಹಿ ಎನ್ನುವುದು ಮಹಿಳೆಯರಲ್ಲಿ ಭಿಕ್ಷೆ ಬೇಡುವಾಗ ಮಾತ್ರ. ಪುರುಷರಲ್ಲಿ ಬೇಡುವಾಗ ಭವಾನ್ ಭಿಕ್ಷಾಮ್ ದದಾತು ಎನ್ನಬೇಕು ಎಂದರು”. ಗಾಳಿಯಲ್ಲಿ ತೇಲುತ್ತಿದ್ದ ಭೈರಪ್ಪನವರಿಗೆ ದೊಪ್ಪನೆ ಕೆಳಗೆ ಹಾಕಿದಂತಾಯಿತು. ಆ ಘಟನೆಯನ್ನು ಸಹೋದ್ಯೋಗಿಯಾಗಿದ್ದ ಶ್ರೀನಿವಾಸ ತೋಫಖಾನೆಯವರ ಬಳಿ ಹೇಳಿಕೊಂಡು, ಸಂಸ್ಕೃತ ಕಲಿಯಲು ಯಾರನ್ನಾದರೂ ಗೊತ್ತುಮಾಡಿಕೊಡಿ ಎಂದು ಕೇಳಿಕೊಂಡರು. ಆಗ, ನಾನೇ ಹೇಳಿಕೊಡುತ್ತೇನೆ ಎಂದ ತೋಫಖಾನೆಯವರು ಸತತ ಒಂದೂವರೆ ವರ್ಷ ಬೈರಪ್ಪನವರಿಗೆ ಸಂಸ್ಕೃತ ಕಲಿಸುತ್ತಾರೆ. ಭೈರಪ್ಪನವರು ಇಂದಿಗೂ ತೋಫಖಾನೆಯವರನ್ನು ಕರೆಯುವುದೇ ‘ಗುರೂಜಿ’ ಅಂತ. ಅಷ್ಟೇ ಅಲ್ಲ, ತೋಫಖಾನೆಯವರು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರು.
ಕಡವ ಶಂಭು ಶರ್ಮರು ಗೊತ್ತಲ್ಲವೆ?
ಅವರೊಬ್ಬ ಬಹುದೊಡ್ಡ ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರದು ಶಿಕ್ಷಕ ವೃತ್ತಿ, ಭಾಷೆ, ಸಂಶೋಧನೆ, ಆಧ್ಯಾತ್ಮ ಮುಂತಾದ ಕ್ಷೇತ್ರಗಳಲ್ಲಿ ಒಂದು ವಿಶ್ವವಿದ್ಯಾಲಯಕ್ಕಿಂತಲೂ ದೊಡ್ಡ ಸಾಧನೆ ಮಾಡಿದವರು. ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ‘ಆಳ ನಿರಾಳ’ ಕಾದಂಬರಿಗೆ ಶಂಭು ಶರ್ಮರೇ ಸ್ಫೂರ್ತಿ. ಇಂತಹ ಶರ್ಮರು ಸೌಧೆ ವ್ಯಾಪಾರವನ್ನು ಮಾಡುತ್ತಿದ್ದರು. ಒಮ್ಮೆ ಸೌದೆ ಹೊತ್ತು ಹೋಗುತ್ತಿದ್ದಾಗ ಸಂಭವಿಸಿದ ದುರ್ಘಟನೆಯಲ್ಲಿ ದುರದೃಷ್ಟವಶಾತ್ ಅವರ ಕಾಲು ಲಾರಿ ಚಕ್ರದಡಿ ಸಿಲುಕಿಕೊಂಡಿತು. ಅಂತಹ ದಯನೀಯ ಸ್ಥಿತಿಯಲ್ಲೂ, ‘ಏನ್ ಮಾಡ್ತಿದಿರೋ, ನನ್ನ ಕಾಲನ್ನು ಕತ್ತರಿಸಿ ಆಚೆಗೆ ಎಳೆಯಿರಿ’ ಎಂದು ಸ್ವತಃ ಸೂಚನೆ ಕೊಟ್ಟಿದ್ದರು. ಒಂದು ಕಾಲನ್ನು ಪೂರ್ತಿ ಕಳೆದುಕೊಂಡ ಸಂದರ್ಭದಲ್ಲೂ ಸ್ಫೂರ್ತಿ ಕಳೆದುಕೊಳ್ಳದೆ ಬದುಕು ನಡೆಸಿದ ವ್ಯಕ್ತಿ ಅವರು. ಕಾರಂತರ ಪರಮಾಪ್ತರಾಗಿದ್ದ ಕಡವ ಶಂಭು ಶರ್ಮರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಸಂಸ್ಕೃತ ವಿದ್ವಾಂಸರಿಗೆ ಸನ್ಮಾನ ಮಾಡುತ್ತಾರೆ. 2011ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವ ವ್ಯಕ್ತಿ ಶ್ರೀನಿವಾಸ ತೋಫಖಾನೆ. ಶಂಭು ಶರ್ಮರು ಒಂದು ಕಾಲನ್ನು ಕಳೆದುಕೊಂಡರೂ ಕಡೆತನಕ ಅರ್ಥಪೂರ್ಣ ಬದುಕು ನಡೆಸಿದ ಚೇತನವಾಗಿದ್ದರೆ ಸುಮಾರು 30 ವರ್ಷಗಳ ಹಿಂದೆ ಕಣ್ಣು(ದೃಷ್ಟಿ) ಕಳೆದುಕೊಂಡರೂ ಜೀವಕಳೆಯೊಂದಿಗೆ ಬದುಕು ನಡೆಸುತ್ತಿರುವ ಪ್ರೇರಕ ಶಕ್ತಿ ತೋಫಖಾನೆಯವರು. ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ತೋಫಖಾನೆಯವರ ಕಣ್ಣುಗಳ ದೃಷ್ಟಿ ಕ್ರಮೇಣ ಕ್ಷೀಣಿಸುತ್ತಾ ಬಂದು ನಿವೃತ್ತಿಗೂ ಮೊದಲೇ ಸಂಪೂರ್ಣವಾಗಿ ಕುರುಡಾಗಿ ಬಿಟ್ಟವು. ಹಾಗೆ ಬದುಕಿಗೆ ಕಗ್ಗತ್ತಲು ಆವರಿಸಿದ ಸಂದರ್ಭದಲ್ಲೂ ತೋಫಖಾನೆಯವರು ಬದುಕುವ ಚೈತನ್ಯವನ್ನಾಗಲಿ, ಕಲಿಯುವ ಉತ್ಸಾಹವನ್ನಾಗಲಿ ಕಳೆದುಕೊಳ್ಳಲಿಲ್ಲ.
ಪಾ.ವೆಂ. ಅವರ ‘ಪದಾರ್ಥ ಚಿಂತಾಮಣಿ’ ಯಾರಿಗೆ ತಾನೇ ಗೊತ್ತಿಲ್ಲ?
ಕನ್ನಡ ಪತ್ರಿಕೋದ್ಯಮ ಇದುವರೆಗೂ ಕಂಡ ಅತ್ಯಂತ ಜನಪ್ರಿಯ ಅಂಕಣಗಳಲ್ಲಿ ಅದು ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ‘ಕಸ್ತೂರಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗುತಿತ್ತು. ಪಾ.ವೆಂ. ಅವರು ತೀರಿಕೊಂಡಾಗ ಅವರ ಮಟ್ಟಕ್ಕಲ್ಲದಿದ್ದರೂ ಅವರ ಅಂಕಣದ ಹತ್ತಿರ ಹತ್ತಿರ ಬರುವಂಥ ಲೇಖನಗಳನ್ನು ಯಾರು ಬರೆಯಬಹುದೆಂದು ‘ಕಸ್ತೂರಿ’ ಶೋಧನೆಗೆ ನಿಂತಾಗ ಕಂಡಿದ್ದು ಶ್ರೀನಿವಾಸ ತೋಫಖಾನೆ. ಕಳೆದ 17 ವರ್ಷಗಳಿಂದ ಕಸ್ತೂರಿಯಲ್ಲಿ ಪ್ರಕಟವಾಗುತ್ತಿರುವ ‘ಮಾತು ಮಾಣಿಕ್ಯ’ ಅಂಕಣವನ್ನು ಬರೆಯುತ್ತಿರುವವರು ತೋಫಖಾನೆ. ಅದನ್ನು ಡಿಕ್ಟೇಷನ್ ಕೊಡುವುದಿಲ್ಲ, ಸ್ವತಃ ಹಾಳೆಯ ಮೇಲೆ ದುಂಡಾಗಿ ಬರೆದು ಕಳುಹಿಸುತ್ತಾರೆ. ಅವರ ಕಣ್ಣುಗಳು ದೃಷ್ಟಿ ಕಳೆದುಕೊಂಡಿರಬಹುದು, ಬದುಕಿನ ದೃಷ್ಟಿಯನ್ನು ಮಾತ್ರ ಕಳೆದುಕೊಂಡಿಲ್ಲ. ‘ಅನ್ನ’, ‘ಗೀತ ರಾಮಾಯಣ’(ಮರಾಠಿ ಅನುವಾದ), ‘ಏಳು ಧನ್ಯಳೆ’, ‘ಗೀತ ಗೋವಿಂದ’(ರೂಪಾಂತರ), ‘ಗೀತ ಸುಮನ’, ‘ಬಿಂಬ ಪ್ರತಿಬಿಂಬ’, ‘ವಿಚಾರ ವಿನೋದಗಳು’ ಇವು ತೋಫಖಾನೆಯವರ ಮೂಸೆಯಿಂದ ಹೊರಬಂದಿವೆ.
ಒಂದು ಸಣ್ಣ ನೋವಾದರೂ ಅಮ್ಮಾ ಎಂದು ಚೀರುತ್ತೇವೆ, ಕೈಯ್ಯೋ, ಕಾಲೋ ಮುರಿದರಂತೂ ದೇವರೇ ಯಾಕಿಂಥ ಶಿಕ್ಷೆ ಕೊಟ್ಟೆ ಎಂದು ಬೊಬ್ಬಿರಿಯುತ್ತೇವೆ, ವೃತ್ತಿ, ವ್ಯವಹಾರದಲ್ಲಿ ಒಂದು ಸಣ್ಣ ಯಡವಟ್ಟಾದರೆ ಜಾತಕ ಎತ್ತಿಕೊಂಡು ಹೋಗಿ ಏನಾದರೂ ದೋಷಗಳಿವೆಯೇ ಎಂದು ಜ್ಯೋತಿಷಿಗಳನ್ನು ಕೇಳುತ್ತೇವೆ, ಸಣ್ಣಪುಟ್ಟ ಕಿರಿಕಿರಿ, ದೂಷಣೆಗಳಿಗೂ ಮಾನಸಿಕವಾಗಿ ಕುಗ್ಗಿಹೋಗಿ ಮನಃಶಾಸ್ತ್ರಜ್ಞರ ಮೊರೆಹೋಗುತ್ತೇವೆ. ಇಂತಹ ನಮ್ಮಗಳ ಮಧ್ಯೆ ದೃಷ್ಟಿ ಕಳೆದುಕೊಂಡ ಶ್ರೀನಿವಾಸ ತೋಫಖಾನೆಯವರೂ ಇದ್ದಾರೆ. ಈ ಜಗತ್ತನ್ನು ಇಡಿ ಇಡಿಯಾಗಿ, ಹಸಿಹಸಿಯಾಗಿ ಮತ್ತೆಂದೂ ನೋಡುವ ಭಾಗ್ಯ ಇಲ್ಲದಿದ್ದರೂ ನಮ್ಮೆಲ್ಲರಿಗಿಂತಲೂ ಚೆನ್ನಾಗಿ ಬದುಕನ್ನು ಅನುಭವಿಸುತ್ತಿರುವ ಅವರ ಬಗ್ಗೆ ಹೇಳಿದಷ್ಟೂ ಮುಗಿಯದು. ಇತ್ತೀಚೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್್ನಲ್ಲಿ ಶತವಾಧಾನಿ ಆರ್. ಗಣೇಶ್ ಅವರ ಅಷ್ಟವಾಧಾನ ನಡೆದಾಗ ಅಧ್ಯಕ್ಷತೆ ವಹಿಸಿದ್ದವರು ಮತ್ತಾರೂ ಅಲ್ಲ ತೋಫಖಾನೆ. ಅಧ್ಯಕ್ಷೀಯ ಭಾಷಣ ಮಾಡಲು ನಿಂತಾಗ ವೇದಿಕೆಯ ಮೇಲಿನ ಅತಿಥಿಗಳನ್ನು ಹೇಗೆ ಉಲ್ಲೇಖಿಸುತ್ತಾರೆಂದರೆ ನನ್ನ ಎಡಭಾಗಕ್ಕೆ ಕುಳಿತಿರುವವರು ಹುಬ್ಬಳ್ಳಿ ರಾಮಕೃಷ್ಣಾಶ್ರಮದ ರಘುವೀರಾನಂದ ಸ್ವಾಮಿಗಳು, ಬಲಕ್ಕಿರುವವರು ಶತಾವಧಾನಿ ಗಣೇಶರು, ಅವರ ಪಕ್ಕಕ್ಕಿರುವವರು…. ಹೀಗೆ ತಾವೇ ಪ್ರತ್ಯಕ್ಷವಾಗಿ ಕಂಡವರಂತೆ ಹೇಳುತ್ತಿದ್ದರೆ ಸಭಿಕರು ಅಶ್ಚರ್ಯಚಕಿತರಾಗಿ ಚಪ್ಪಾಳೆ ತಟ್ಟುತ್ತಿದ್ದರು. ಹುಬ್ಬಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ, ಕಮ್ಮಟ ಜರುಗಿದರೂ ತೋಫಖಾನೆಯವರು ಹಾಜರಾಗುತ್ತಾರೆ. ಮುಂದಿನ ಸಾಲಿನಲ್ಲಿ ಕುಳಿತು ಕೇಳಿ ಆನಂದಿಸುತ್ತಾರೆ. ಕೆಲವೊಮ್ಮೆ ಬಾಯ್ತುಂಬ ನಗುವುದೂ ಉಂಟು. ಇದು ಅವರ ಜೀವನೋತ್ಸಾಹ. ಅದಕ್ಕೆ ಯಾವ ‘ತೋಫಾ’ ಕೊಟ್ಟರೂ ಸಾಲದು. ಮನೆಯ ಅಸ್ತ್ರ ವಲೆಗೆ ಒಂದೇ ಅಳತೆಗೆ ಕಟ್ಟಿಗೆಯನ್ನು ತುಂಡು ಮಾಡಿ, ಬೆಂಕಿ ಹಚ್ಚಿ ನೀರು ಬಿಸಿ ಮಾಡುತ್ತಾರೆ. ವಾಕಿಂಗ್ ಹೋಗಲು ಹುಡುಗ ಬರಲಿಲ್ಲ ಎಂದರೆ ಯಾರ ಹಂಗೂ ಇಲ್ಲದೆ ಮನೆಯ ಸುತ್ತ 20 ಸುತ್ತು ಹಾಕಿಬಿಡುತ್ತಾರೆ. ಇಷ್ಟು ಹೆಜ್ಜೆ ಹಾಕಿದರೆ ಮೆಟ್ಟಿಲು ಬರುತ್ತದೆ, ಇಂತಿಷ್ಟು ಹೆಜ್ಜೆಗೆ ಮನೆಯ ಬಲ ಮೂಲೆ ಸಿಗುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲರು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ನೆರೆಯಲ್ಲೇ ಇರುವ ಪ್ರೊ. ಸಿ.ಸಿ. ದೀಕ್ಷಿತ್್ರ ಮನೆಗೆ ತೆರಳುತ್ತಾರೆ. ಒಂಭತ್ತರಿಂದ 10 ಪತ್ರಿಕೆಗಳ ಓದಿಗೆ ಮೀಸಲು. ಅದಾದ ಬಳಿಕ ಯಾರಿಗಾದರೂ ಕರೆ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ‘ಓ ಸುಬ್ಬಣ್ಣ ಇವತ್ತು ‘ಕನ್ನಡಪ್ರಭ’ದಲ್ಲಿ ಒಳ್ಳೆಯ ಲೇಖನ ಬಂದಿದೆ, ಪ್ರಜಾವಾಣಿಯಲ್ಲಿ ಒಳ್ಳೆಯ ಕಲರ್ ಫೋಟೋ ಹಾಕಿದ್ದಾರೆ ನೋಡಿದೆಯಾ?’ ಎಂದು ಕಣ್ಣಾರೆ ಕಂಡವರಿಗಿಂತ, ಸ್ವತಃ ಓದಿದವರಿಗಿಂತ ಚೆನ್ನಾಗಿ ಹೇಳುತ್ತಾರೆ. ಹೇಗೆ ಗೊತ್ತಾ? ಇವರ ಆಸಕ್ತಿಯನ್ನು ಕಂಡು ಬೆರಗಾದ ದೀಕ್ಷಿತರು ಪ್ರತಿನಿತ್ಯ ಒಂಭತ್ತು ಗಂಟೆಗೆ ಪಕ್ಕದಲ್ಲಿ ಕೂರಿಸಿಕೊಂಡು ಜೋರಾಗಿ ಪತ್ರಿಕೆಯನ್ನು ಓದುತ್ತಾರೆ, ತೋಫಖಾನೆಯವರು ಕುತೂಹಲದಿಂದ ಆಲಿಸಿಕೊಳ್ಳುತ್ತಾರೆ. ಬದುಕಿನಲ್ಲಿ ಅಪ್್ಡೇಟ್ ಆಗಿರುತ್ತಾರೆ, ಪಕ್ಕಾ ಇರುತ್ತಾರೆ, ಲವಲವಿಕೆಯಿಂದಿರುತ್ತಾರೆ. ಒಮ್ಮೆ ಮಾತಾಡಿ ಪರಿಚಯ ಮಾಡಿಕೊಂಡರೆ ಸಾಕು, ನೀವು ಎರಡು ಮೂರು ವರ್ಷ ಬಿಟ್ಟು ಭೇಟಿಯಾದರೂ ಧ್ವನಿಯಿಂದಲೇ ನಿಮ್ಮ ಪರಿಚಯ ಹಿಡಿದು ಏನ್ ಹಿರೇಮಠರೇ ಹೇಗಿದ್ದೀರಿ? ಎಂದು ನಿಮ್ಮನ್ನೇ ಅಶ್ಚರ್ಯಚಕಿತಗೊಳಿಸುತ್ತಾರೆ.
ಪುತಿನ, ರಂ.ಶ್ರೀ. ಮುಗಳಿ, ಹಾಮಾನಾ, ವಿಕೃ ಗೋಕಾಕ್, ಚೆನ್ನವೀರ ಕಣವಿಯವರಂಥವರು ಇವರ ಕಾವ್ಯ ಪ್ರತಿಭೆಗೆ ಬೆರಗಾಗಿದ್ದುಂಟು. ಉದ್ದಾಮ ಪಂಡಿತರಾದ ಕೆ.ಎಸ್. ನಾರಾಯಣಾಚಾರ್ಯರು ವಿಸ್ಮಯ ಪಟ್ಟಿದ್ದಾರೆ. ಭೈರಪ್ಪನವರು ಹುಬ್ಬಳ್ಳಿಗೆ ಹೋದರೆ ತೋಫಖಾನೆಯವರನ್ನು ಭೇಟಿಯಾಗದೆ ಹಿಂದಿರುಗುವುದಿಲ್ಲ. ಅವರ ಜೀವನೋತ್ಸಾಹ ಎಂಥದ್ದೆಂದರೆ ಕೈ ಹಿಡಿಯುವವರು ಇದ್ದರೆ ಹಿಮಾಲಯ ಹತ್ತುತ್ತೇನೆ ಎನ್ನುತ್ತಾರೆ. ಇವರ ಜತೆ ಕೆಲಕಾಲ ತಂಗಿದ್ದ ಹಾಗೂ ಜತೆಯಾಗಿ ಸಮೀಪದ ನೃಪತುಂಗ ಬೆಟ್ಟವೇರಿ(ಉಣಕಲ್ ಗುಡ್ಡ) ಬಂದು ಮೈಸೂರಿಗೆ ವಾಪಸ್ಸಾದ ನಂತರ, ‘ನಿಮ್ಮ ಕೈಹಿಡಿದು ನೃಪತುಂಗ ಬೆಟ್ಟ ಹತ್ತಿ ಇಳಿದರೆ ನಿಮ್ಮ ಉತ್ಸಾಹ, ನಿಮ್ಮ ಸ್ಫೂರ್ತಿ ನಿಮ್ಮ ಕೈಹಿಡಿದವರ ಮೈಯೊಳಗೆ ತುಂಬಿಕೊಳ್ಳುತ್ತದೆ’ ಎಂದು ಭೈರಪ್ಪ ಪತ್ರ ಬರೆದಿದ್ದರು. ಸರ್, ಕಣ್ಣು ಕಳೆದುಕೊಂಡ ಬಗ್ಗೆ ನಿಮಗೆ ವ್ಯಥೆಯಾಗುವುದಿಲ್ಲವೆ? ಎಂದು ಶತಾವಧಾನಿ ಗಣೇಶರು ಪ್ರಶ್ನಿಸಿದಾಗ, ‘ಖಂಡಿತ ಇಲ್ಲ, ಕಿವಿ, ಮೂಗು, ಸ್ಪರ್ಶ ಮುಂತಾದ ಇಂದ್ರಿಯಗಳಿಂದ ನಾನು ಜಗತ್ತನ್ನು ನೋಡುತ್ತೇನೆ ಎಂದಿದ್ದರು ತೋಫಖಾನೆ. ಅವರೊಬ್ಬ ಗುಣಗ್ರಾಹಿ. ಯಾವುದೇ ಕೊರಗೂ ಅವರಿಗಿಲ್ಲ. ಸಾಮಾನ್ಯವಾಗಿ ಹೀಗೆ ಕಣ್ಣು, ಕೈಕಾಲು ಕಳೆದುಕೊಂಡವರು ಅದನ್ನು ಕಹಿಯಾಗಿ ತೆಗೆದುಕೊಳ್ಳುತ್ತಾರೆ. ನನಗೆ ಯಾರು ಕನಿಕರಿಸಲಿಲ್ಲ ಎಂಬ ದೈನ್ಯ, ಇಲ್ಲಾ ಜಗತ್ತಿನ ಬಗ್ಗೆ ವೈರ ಇಟ್ಟುಕೊಳ್ಳುತ್ತಾರೆ. ಇವೆರಡೂ ಇಲ್ಲದಿರುವುದು ಅವರ ವಿಶೇಷ. ಬದುಕೇ ಮುಗಿಯಿತು ಎಂದುಕೊಳ್ಳುವವರು ತೋಫಖಾನೆಯವರನ್ನು ನೋಡಿ ಬದುಕುವುದನ್ನು ಕಲಿಯಬೇಕು. ನಾಡಿದ್ದು ಸೋಮವಾರ ಶ್ರೀನಿವಾಸ ತೋಫಖಾನೆಯವರ 86ನೇ ಜನ್ಮದಿನ.
ಸರ್, ನೀವು ಇನ್ನೂ ಹೆಚ್ಚಿನ ವಸಂತಗಳನ್ನು ಕಾಣುವಂತಾಗಲಿ. ನಿಮ್ಮ ಬದುಕಿನ ಮಾದರಿ ನಮ್ಮ ನಿರಾಶೆಗಳನ್ನು ನೀಗಿಸಿ ಉತ್ಸಾಹವನ್ನು ಹಸಿರಾಗಿಸುತ್ತಿರಲಿ.
ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ