ನನ್ನ ಬ್ಲಾಗ್ ಪಟ್ಟಿ

ಬುಧವಾರ, ಸೆಪ್ಟೆಂಬರ್ 21, 2011

ಸ್ಫೂರ್ತಿಯ ಅಣೆಕಟ್ಟು ಸರ್.ಎಂ.ವಿ

ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು. ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ. ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ. ಇವರ ಹೆಸರು ಹೇಳಿದಾಕ್ಷಣ, ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ? ಮಾಡುವ ಲಕ್ಷ್ಮಣವಾದರೂ ಇದೆಯೇ?
ಆದರೆ…
ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ, ಮಾಡಿದ್ದು ಎಂತಹ ಸಾಧನೆ ಅಲ್ಲವೆ?!
ಕನ್ನಂಬಾಡಿ ಕಟ್ಟೆ, ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ(ಈಗ ಎಚ್‌ಎಎಲ್), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿವಿ, ಶಿವನಸಮುದ್ರ, ಜೋಗದ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ), ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಹಿಂದೂ ಮಾಡರ್ನ್ ಹೋಟೆಲ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್, ಪೂನಾ ಡೆಕ್ಕನ್ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಗ್ವಾಲಿಯರ್‌ನ ಟೈಗರ್ ಡ್ಯಾಂ, ಪುಣೆಯ ಖಡಕ್‌ವಾಸ್ಲಾ ಜಲಾಶಯ ಹಾಗೂ ಕನ್ನಂಬಾಡಿಗೆ ವಿಶ್ವದಲ್ಲಿಯೇ ಮೊದಲ ಸ್ವಯಂಚಾಲಿತ ಗೇಟ್‌ಗಳ ಅಳವಡಿಕೆ, ಒರಿಸ್ಸಾದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ….
ಇವೆಲ್ಲವೂ ಅವರ ಕನಸಿನ ಕೂಸುಗಳೇ. ಅವರ ದೂರದೃಷ್ಟಿಯ ಫಲಗಳೇ. ಒಬ್ಬ ವ್ಯಕ್ತಿಯಿಂದ ಒಂದು ದೇಶಕ್ಕೆ ಇಷ್ಟೆಲ್ಲಾ ಲಾಭವಾದ ಮತ್ತೊಂದು ಉದಾಹರಣೆ ಜಗತ್ತಿನ ಯಾವ ಭಾಗದಲ್ಲಾದರೂ ಇದೆಯೆ? ಅಂತಹ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? 1915ರಲ್ಲೇ ಬ್ರಿಟನ್ ಸರಕಾರ ನೈಟ್ ಪದವಿ ಕೊಟ್ಟು ಗೌರವಿಸುತ್ತದೆಯೆಂದರೆ ವಿಶ್ವೇಶ್ವರಯ್ಯನವರ ವ್ಯಕ್ತಿತ್ವ, ಸಾಧನೆ ಎಂಥದ್ದಿರಬಹುದು? ಒಬ್ಬ ಒಳ್ಳೆಯ ವಿeನಿಯನ್ನು, ಎಂಜಿನಿಯರ್‌ನನ್ನು, ಸಾಫ್ಟ್‌ವೇರ್ ತಂತಜ್ಞನನ್ನು, ಆಡಳಿತಗಾರನನ್ನು ಖಂಡಿತ ಕಾಣಬಹುದು. ಆದರೆ ಇಷ್ಟೆಲ್ಲಾ ಗುಣಗಳೂ ಒಬ್ಬನೇ ವ್ಯಕ್ತಿಯಲ್ಲಿ ಅಡಗಿರುವುದು ಸಾಧ್ಯವೇ?
ಹೂವರ್ ಡ್ಯಾಮ್ ಇರುವುದು ಅಮೆರಿಕದಲ್ಲಿ.  ಅರಿಝೋನಾ ಮತ್ತು ನೆವಡಾ ರಾಜ್ಯಗಳ ಗಡಿಯಲ್ಲಿ ಬರುವ ಕೊಲರ್‍ಯಾಡೋ ನದಿಗೆ ಅಣೆಕಟ್ಟೆಯೊಂದನ್ನು ಕಟ್ಟಬೇಕೆಂಬ ಯೋಚನೆ ಯೇನೋ ಹೊಳೆದಿತ್ತು. ಆದರೆ ಅದು ಸಾಮಾನ್ಯ ಮಾತಾಗಿರಲಿಲ್ಲ. 1922ರಲ್ಲಿ ಈ ನದಿ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಆಯೋಗವೊಂದನ್ನು ರಚನೆ ಮಾಡಲಾಯಿತು. ಅದರಲ್ಲಿ ಹರ್ಬರ್ಟ್ ಹೂವರ್ ಸರಕಾರದ ಪ್ರತಿನಿಧಿಯಾಗಿ ನಿಯುಕ್ತಿಗೊಂಡರು. ಅಧ್ಯಕ್ಷ ವಾರೆನ್ ಹಾರ್ಡಿಂಗ್ ಸಂಪುಟದಲ್ಲಿ ವಾಣಿಜ್ಯ ಸಚಿವರೂ ಆಗಿದ್ದ ಹೂವರ್ ವೃತ್ತಿಯಲ್ಲಿ ಇಂಜಿನಿಯರ್. ಹಾಗಾಗಿ ಅಣೆಕಟ್ಟು ನಿರ್ಮಾಣದ ರೂಪುರೇಷೆ ತಯಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಣೆಕಟ್ಟು ನಿರ್ಮಾಣಕ್ಕೆ ಸಂಸತ್ತಿನ ಅನುಮೋದನೆ ದೊರೆತು ಕಾಮಗಾರಿ ಆರಂಭ ವಾಗುವ ವೇಳೆಗೆ ಹೂವರ್ ಅವರೇ ಅಧ್ಯಕ್ಷರಾದರು. 1931ರಲ್ಲಿ ಪ್ರಾರಂಭವಾದ ನಿರ್ಮಾಣ ಕಾರ್ಯ, 1936ರಲ್ಲಿ ಕೊನೆಗೊಂಡಿತು. ಆದರೆ 1932ರಲ್ಲಿ ನಡೆದ ಮರು ಚುನಾವಣೆಯಲ್ಲಿ ಸೋಲನುಭವಿಸಿದ ಹೂವರ್ ಅಣೆಕಟ್ಟು ನಿರ್ಮಾಣಗೊಳ್ಳುವ ಮೊದಲೇ ಅಧಿಕಾರ ಕಳೆದುಕೊಂಡಿದ್ದರು. ಆದರೇನಂತೆ ಆ ಕಾಲದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಅಣೆಕಟ್ಟು ಎಂಬ ಖ್ಯಾತಿ ಪಡೆದ 726.4 ಅಡಿ ಎತ್ತರದ ಈ ಡ್ಯಾಮ್‌ಗೆ ಹೂವರ್ ಅವರ ಹೆಸರನ್ನೇ ಇಡಲಾಯಿತು.ಅದೊಂದು ಬರೀ ಅಣೆಕಟ್ಟಲ್ಲ. ಅಮೆರಿಕದ ಐತಿಹಾಸಿಕ ಸ್ಥಳಗಳಲ್ಲಿ ಒಂದು, ಐತಿಹಾಸಿಕ ಮೈಲುಗಲ್ಲು ಎಂದು ಗುರುತಿಸಲಾಗಿದೆ.
ಆದರೆ ನಮ್ಮ ವಿಶ್ವೇಶ್ವರಯ್ಯನವರು 1911ರಲ್ಲೇ ಜಗತ್ತಿನ ಹುಬ್ಬೇರಿಸಿದ್ದರು!
ಆ ಕಾಲದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದಿದ್ದ ಕನ್ನಂಬಾಡಿ(ಕೆಆರ್‌ಎಸ್) ಕಟ್ಟೆಯನ್ನು ಕೇವಲ ನಾಲ್ಕು ವರ್ಷಗಳಲ್ಲೇ ಕಟ್ಟಿ ಮುಗಿಸಿದ್ದರು. ಇಂದಿಗೂ ಗಡುವಿಗಿಂತ ಮೊದಲೇ ಪೂರ್ಣಗೊಂಡ ಭಾರತದ ಏಕೈಕ ಅಣೆಕಟ್ಟೆಯೆಂದರೆ ಕನ್ನಂಬಾಡಿ ಕಟ್ಟೆ ಮಾತ್ರ. ಅಷ್ಟೇ ಅಲ್ಲ, ಕನ್ನಂಬಾಡಿ ಕಟ್ಟೆಗೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿದ ವಿಶ್ವೇಶ್ವರಯ್ಯ ನವರು ಜಗತ್ತಿನಲ್ಲಿಯೇ ಯಾರೂ ಮಾಡದ ಸಾಧನೆಯನ್ನೂ ಮಾಡಿದರು. ಇತ್ತ ಹೂವರ್ ಡ್ಯಾಮನ್ನು ಕಾಂಕ್ರೀಟಿನಿಂದ ಕಟ್ಟಿದರೆ ಕನ್ನಂಬಾಡಿ ಕಟ್ಟೆಯನ್ನು ಸುಣ್ಣ ಮತ್ತು ಬೆಲ್ಲದಿಂದ ಕಟ್ಟಿದರು. ಇಂದು ಕಾಂಕ್ರೀಟಿನಿಂದ ಕಟ್ಟಿದ ಅಣೆಕಟ್ಟುಗಳೇ ಸೋರುತ್ತವೆ. ಆದರೆ ಶತಮಾನ ಸಂಭ್ರಮದತ್ತ ಮುನ್ನುಗ್ಗುತ್ತಿರುವ ಕನ್ನಂಬಾಡಿ ಕಟ್ಟೆ ಇವತ್ತಿಗೂ ಭಾರತದಲ್ಲೇ ಅತ್ಯಂತ ಬಲಿಷ್ಠ ಅಣೆಕಟ್ಟು.
ಇಂತಹ ಅಣೆಕಟ್ಟನ್ನು ಕಟ್ಟಿದ ವಿಶ್ವೇಶ್ವರಯ್ಯನವರು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. 1883ರಲ್ಲಿ ಬಾಂಬೆ ವಿಶ್ವವಿದ್ಯಾಲಯದಲ್ಲಿ ರ್‍ಯಾಂಕ್‌ನೊಂದಿಗೆ ಎಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅವರು, ಮೊದಲಿಗೆ ಬಾಂಬೆ ಸರಕಾರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ)ಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಆಗ ಸಿಂಧ್ ಪ್ರಾಂತ್ಯವೂ ಬಾಂಬೆಯ ಆಡಳಿತಕ್ಕೊಳ ಪಟ್ಟಿತ್ತು. ಹಾಗಾಗಿ ಜಲವಿತರಣೆ ಕಾಮಗಾರಿಯೊಂದನ್ನು ಕೈಗೆತ್ತಿಕೊಂಡ ವಿಶ್ವೇಶ್ವರಯ್ಯನವರು ಸಿಂಧೂ ನದಿಯಿಂದ ಸುಕ್ಕೂರಿಗೆ ನೀರು ಹರಿಸುವ ಮೂಲಕ ತಮ್ಮ ಜಾಣ್ಮೆಯ ಪರಿಚಯ ಮಾಡಿಕೊಟ್ಟರು. ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ತೀವ್ರ ನೀರಿನ ತೊಂದರೆಯಿತ್ತು. ಹಾಗಾಗಿ ವಿಶ್ವೇಶ್ವರ್‍ಯನವರನ್ನು ಕೂಡಲೇ ಗುಜರಾತ್‌ನ ಸೂರತ್‌ಗೆ ವರ್ಗಾವಣೆ ಮಾಡಲಾಯಿತು. ಅಲ್ಲಿನ ನೀರು ಸರಬರಾಜು ಹಾಗೂ ಒಳಚರಂಡಿ ಸಮಸ್ಯೆಯನ್ನೂ ಯಶಸ್ವಿಯಾಗಿ ಪರಿಹರಿಸಿದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ 2001ರಲ್ಲಿ ತೀವ್ರ ಭೂಕಂಪಕ್ಕೆ ಗುರಿಯಾದ ಗುಜರಾತ್‌ನ ಕಛ್ ಮತ್ತು ಭುಜ್ ಜಿಲ್ಲೆಗಳು ಹೆಚ್ಚೂಕಡಿಮೆ ನಾಮಾವಶೇಷಗೊಂಡಂತಾದರೂ ಅಲ್ಲಿನ ನೀರು ಸರಬರಾಜು ವ್ಯವಸ್ಥೆ ಮಾತ್ರ ಹಾನಿಗೊಳಗಾಗಿರಲಿಲ್ಲ! ಏಕೆಂದರೆ ಅದನ್ನು ರೂಪಿಸಿದ್ದು ವಿಶ್ವೇಶ್ವರಯ್ಯನವರು!!
ಆ ಕಾಲದಲ್ಲಿ ಸಿಂಧ್ ಹೊರತುಪಡಿಸಿದರೆ ಬಾಂಬೆ ಪ್ರಾಂತ್ಯ ದಲ್ಲಿ ಅತಿ ಹೆಚ್ಚು ನೀರಾವರಿಯನ್ನು ಹೊಂದಿದ್ದ ಪ್ರದೇಶವೆಂದರೆ ಪೂನಾ. ಸೂರತ್‌ನಿಂದ ವಿಶ್ವೇಶ್ವರಯ್ಯನವರನ್ನು  ಪೂನಾಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿ ನೀರನ್ನು ಪೋಲು ಮಾಡದೆ ಬಳಸುವ ವ್ಯವಸಾಯ ಕ್ರಮವೊಂದನ್ನು ಸಿದ್ಧಪಡಿಸಿ ದರು. ಅದೇ ‘ಬ್ಲಾಕ್ ಸಿಸ್ಟಮ್’. 1903ರಲ್ಲಿ ಪೂನಾ ಬಳಿಯ ಖಡಕ್‌ವಾಸ್ಲಾ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸಿದ ಅವರು, ಅಂತಹ ಸಾಧನೆಗೈದ ವಿಶ್ವದ ಏಕೈಕ ವ್ಯಕ್ತಿ ಎನಿಸಿದರು.
ಹೈದರಾಬಾದ್, ವಿಶಾಖಪಟ್ಟಣಗಳನ್ನು ಪ್ರವಾಹದಿಂದ ರಕ್ಷಿಸುವುದಕ್ಕೂ ಯೋಜನೆ ಕೈಗೊಂಡರು. ಹೈದರಾಬಾದ್ ಸರಕಾರ 1909ರಲ್ಲಿ ವಿಶ್ವೇಶ್ವರಯ್ಯನವರನ್ನೇ ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡಿತು. ಇಂತಹ ವಿಶ್ವೇಶ್ವರಯ್ಯ ನವರು 1912ರಲ್ಲಿ ನಮ್ಮ ಮೈಸೂರು ರಾಜ್ಯದ ದಿವಾನರಾಗಿ ನೇಮಕಗೊಂಡಿದ್ದು ಇಡೀ ಕನ್ನಡನಾಡಿನ ಅದೃಷ್ಟವೆಂದರೆ ಖಂಡಿತ ತಪ್ಪಾಗದು. ಅವರ ಸಾಧನೆಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 1913ರಲ್ಲಿ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಅವರು, 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಮೂಲಕ eನ ಪಸರಿಸುವಂತಹ ಅಮೂಲ್ಯ ಕಾಯಕಕ್ಕೂ ಕೈಹಾಕಿದರು. ೧೯೧೭ರಲ್ಲಿ ಅವರು ಸ್ಥಾಪಿಸಿದ ‘ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು’ ದೇಶದಲ್ಲಿಯೇ ಮೊದಲು ಆರಂಭವಾದ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಇತ್ತ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರ್ ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದು ಮಾತ್ರವಲ್ಲ, ಕನ್ನಂಬಾಡಿ ಕಟ್ಟಿ ಅನ್ನವನ್ನೂ ಕೊಟ್ಟರು.
ಅಷ್ಟು ಮಾತವಲ್ಲ, ಇವತ್ತು ಐಟಿ ಅಂತ ನಾವು ಏನನ್ನು ಹೆಮ್ಮೆ ಪಡುತ್ತೇವೆ ಅದರ ಬೀಜ ಬಿತ್ತಿದವರೇ ವಿಶ್ವೇಶ್ವರಯ್ಯ! ಅವರಿಗೆ ನಮ್ಮಲ್ಲೇ ಕಾರು ತಯಾರಿಸಬೇಕೆಂಬ ಹೆಬ್ಬಯಕೆಯಿತ್ತು. ಅದಕ್ಕಾಗಿ ಐದು ತಿಂಗಳುಗಳ ಕಾಲ ಅಮೆರಿಕ ಮತ್ತು ಯುರೋಪನ್ನು ಸುತ್ತಿ ಬಂದರು. ಅವರ ಮಹತ್ವಾಕಾಂಕ್ಷಿ ಯೋಜನೆಗೆ ಮೈಸೂರು ಮಹಾರಾಜರು ಜಾಗವನ್ನೂ ಕೊಟ್ಟರು. ಆದರೆ ಭಾರತದ ಚುಕ್ಕಾಣಿ ಹಿಡಿದಿದ್ದ ಬ್ರಿಟಿಷರು ಬಿಡಲಿಲ್ಲ. ವಿಶ್ವೇಶ್ವರಯ್ಯನವರು ಧೃತಿಗೆಡಲಿಲ್ಲ. ಅದೇ ಜಾಗದಲ್ಲಿ ಏರ್‌ಕ್ರಾಫ್ಟ್ ರಿಪೇರಿ ಮಾಡುವುದಾಗಿ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಹಾಗಾಗಿ ಕಾನ್ಪುರಕ್ಕೆ ಬದಲು ಬೆಂಗಳೂರು ಏರ್‌ಕ್ರಾಫ್ಟ್ ಸೆಂಟರ್ ಆಯಿತು. ಟಾಟಾ ಇನ್‌ಸ್ಟಿಟ್ಯೂಟ್(ಐಐಎಸ್‌ಸಿ)ನ ಮನವೊಲಿಸಿದ ವಿಶ್ವೇಶ್ವರಯ್ಯನವರು ಏರೋನಾಟಿಕ್ಸ್ ಡಿಪಾರ್ಟ್‌ಮೆಂಟ್ ಪ್ರಾರಂಭಕ್ಕೆ ಕಾರಣರಾದರು. ಅದರಿಂದಾಗಿ ಬಾಹ್ಯಾಕಾಶ ಸಂಬಂಧಿತ ಸಂಶೋಧನೆ ಬೆಂಗಳೂರಿನಲ್ಲಿ ಪಾರಂಭವಾಯಿತು. ಏರ್‌ಫೋರ್ಸ್ ನೆಲೆಯೂ ಬಂತು. ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್(ಸಿಎಸ್‌ಐಆರ್), ನ್ಯಾಷನಲ್ ಏರೋನಾಟಿಕಲ್ಸ್ ಲಿಮಿಟೆಡ್(ಎನ್.ಎ.ಎಲ್) ಅನ್ನು ಸ್ಥಾಪನೆ ಮಾಡಿದರು. ಡಿಆರ್ ಡಿಓ ಕೂಡ ಏರೋನಾಟಿಕ್ಸ್‌ಗೆ ಸಂಬಂಧಿತ ಸಂಶೋಧನೆಗಳನ್ನು ಬೆಂಗಳೂರಿಗೆ ವರ್ಗಾಯಿಸಿತು. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ಗಳು ಅತಿ ಹೆಚ್ಚು ಬೇಕಾಗಿರುವುದೇ ಏರೋನಾಟಿಕ್ಸ್‌ಗೆ. ಅವೂ ಬಂದವು. ಉಪಗ್ರಹ ಬಳಕೆ ಆರಂಭವಾಯಿತು. ಸಂಪರ್ಕ ಜಾಲ ರೂಪುಗೊಂಡಿತು. ಅದು ಐಟಿ ಆಗಮನಕ್ಕೆ ದಾರಿ ಮಾಡಿಕೊಟ್ಟಿತು. Spin-off ಅಂದರೆ ಇದೇ. ಅಷ್ಟೇ ಅಲ್ಲ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರು ಇಂದು ಅನ್ನ ತಿನ್ನುತ್ತಿದ್ದರೆ, ಬೆಂಗಳೂರಿನ ಜನರು ನೀರು ಕುಡಿಯುತ್ತಿದ್ದರೆ ಅದರ ಹಿಂದೆ ವಿಶ್ವೇಶ್ವರಯ್ಯನವರ ಪರಿಶ್ರಮವಿದೆ, ದೂರದೃಷ್ಟಿಯಿದೆ. ಇವತ್ತು ವಿಶ್ವೇಶ್ವರಯ್ಯನವರ ಜನ್ಮದಿನ. ಅವರು ಈ ಭುವಿಗೆ ಬಂದು ಇಂದಿಗೆ 150 ವರ್ಷಗಳಾದವು. ಆ ಮಹಾನ್ ಚೇತನವನ್ನು ನೆನಪಿಸಿಕೊಳ್ಳದೆ ಇರಲಾದೀತೆ?
ಕೃಪೆ: ಪ್ರತಾಪ ಸಿಂಹ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ