ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಅಕ್ಟೋಬರ್ 7, 2011

ಈ ವಿಷಯಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದಾರಾ?

ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ ಗಾಂಧೀಜಿಯವರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದಾರೆ? ಇಷ್ಟಕ್ಕೂ ಮಹಾತ್ಮ ಗಾಂಧೀಜಿಯವರು ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು? ಯಾವ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದರು? ಯಾವ ವಿಷಯಗಳನ್ನು, ಧೋರಣೆಗಳನ್ನು, ಮನಃಸ್ಥಿತಿಗಳನ್ನು ಗಾಂಧೀಜಿ ಕಟುವಾಗಿ ಟೀಕಿಸುತ್ತಿದ್ದರು?
ವಿಷಯ-1
‘Gandhiji was not awarded the Nobel peace prize because he refused to be converted’! ಹಾಗೆಂದು ಹೇಳಿದವರು ಯಾವ ಹಿಂದುತ್ವವಾದಿಯೂ ಅಲ್ಲ, ವಿಶ್ವವಿಖ್ಯಾತ ಲೇಖಕ, ಬರಹಗಾರ, ದಾರ್ಶನಿಕ ಸ್ಟೀಫನ್ ನ್ಯಾಪ್. ಅವರು ಹೇಳಿದಂತೆ ಕ್ರೈಸ್ತರಾಗಿ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೇ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಲಿಲ್ಲವೆ? ಅದು ನಿಜವೆಂದಾದರೆ ಗಾಂಧೀಜಿಗೂ ಕ್ರೈಸ್ತ ಮತಿಯರಿಗೂ ಯಾವುದಾದರೂ ವೈಷಮ್ಯ ಅಥವಾ ಅಭಿಪ್ರಾಯಭೇದಗಳಿದ್ದವೆ? ನ್ಯಾಪ್ ಮುಂದುವರಿದು ಎಚ್ಚರಿಸುತ್ತಾರೆ-’ಇಂದು ಕ್ರೈಸ್ತ ಮಿಷನರಿಗಳು ಭಾರತದಾದ್ಯಂತ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು ಆಮಿಷ, ಪ್ರಚೋದನೆ, ಮೋಸ, ಬೆದರಿಕೆಗಳ ಮೂಲಕ ಜನರನ್ನು ಮತಾಂತರ ಮಾಡುತ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಈ ರೀತಿಯ ಬೆದರಿಕೆ, ಕೊಲೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಾಂಧೀಜಿಯವರ ಸಂದೇಶ ಬಹಳ ಮುಖ್ಯವಾಗುತ್ತದೆ. ನಿರ್ಲಕ್ಷ್ಯ ತಳೆದರೆ ಈ”ಮಿಷನರಿ ಟೆರರಿಸಂ’ ಇಸ್ಲಾಮಿಕ್ ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ’. ಹಾಗಾದರೆ ಗಾಂಧೀಜಿಯವರು ಕ್ರೈಸ್ತ ಮಿಷನರಿಗಳ ಬಗ್ಗೆ, ಮತಾಂತರದ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು?
ಮೊದಲಿಗೆ ಇಸ್ಲಾಂ, ತದನಂತರ ಕ್ರಿಶ್ಚಿಯಾನಿಟಿ. ಭಾರತ ಹಲವು ಶತಮಾನಗಳಿಂದಲೂ ಈ ಎರಡು ಮತಗಳ ಆಕ್ರಮಣವನ್ನು ಎದುರಿಸುತ್ತಾ ಬಂದಿದೆ. ಇಂಥದ್ದೊಂದು ಅಪಾಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದವರಲ್ಲಿ ಇಬ್ಬರು ಪ್ರಮುಖರು. ಮೊದಲನೆಯವರು ಸ್ವಾಮಿ ವಿವೇಕಾನಂದ, ಎರಡನೆಯವರು ಮಹಾತ್ಮ ಗಾಂಧೀಜಿ! ‘Hindus need to be saved from spiritual darkness’ ಇದು ಕ್ರೈಸ್ತ ಮಿಷನರಿಗಳ ಘೋಷವಾಕ್ಯವಾಗಿದ್ದ ಕಾಲದಲ್ಲಿ ಹಿಂದುಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ, ಎತ್ತಿ ಹಿಡಿಯುವ ಕೆಲಸಕ್ಕೆ ಕೈಹಾಕಿದ ಸ್ವಾಮಿ ವಿವೇಕಾನಂದರು ಅಕಾಲಿಕ ಮರಣವನ್ನಪ್ಪಿದ ನಂತರ ನಮ್ಮ ಧರ್ಮದ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ”ಗ್ಲೋಬಲ್ ವಾಯ್ಸ್್’ ಆಗಿ ಹೊರಹೊಮ್ಮಿದವರು ಗಾಂಧೀಜಿ. ಕ್ರೈಸ್ತ ಮಿಷನರಿಗಳನ್ನು’Vendors of goods’ ಎಂದು ಟೀಕಿಸಿದರು.”ಈ ಮಿಷನರಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೆಂದರೆ ನಮ್ಮ ಕುಟುಂಬದ ಅವನತಿಯಾದಂತೆ. ನಮ್ಮ ಆಚಾರ, ವಿಚಾರ, ಊಟ, ಉಡುಪು, ನಡತೆ ಎಲ್ಲವನ್ನೂ ಹಾಳುಗೆಡವುತ್ತಾರೆ’ ಎಂದು ಗಾಂಧೀಜಿ ಎಚ್ಚರಿಸುತ್ತಾರೆ.
1. ನಾನೊಬ್ಬ ಸನಾತನಿ ಹಿಂದು ಎಂದೇಕೆ ಕರೆದುಕೊಳ್ಳುತ್ತೇನೆ?
2. ನಾನೇಕೆ ಮತಾಂತರಗೊಳ್ಳಲಿಲ್ಲ?
3. ಮತಾಂತರದಲ್ಲಿ ನನಗೇಕೆ ನಂಬಿಕೆಯಿಲ್ಲ?
4. ಮತಾಂತರವೆಂಬುದು ಶಾಂತಿಗೆ ಒಂದು ತೊಡಕು ಹೇಗೆ?
5. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹಾರುವ ಕ್ರಮವೇಕೆ ಸರಿಯಲ್ಲ?
6. ಅನ್ಯಧರ್ಮೀಯನೊಬ್ಬನನ್ನು ಹಿಂದುವಾಗಿ ಮತಾಂತರ ಮಾಡುವುದನ್ನೂ ನಾನೇಕೆ ಒಪ್ಪುವುದಿಲ್ಲ?
7. ಬಹುತೇಕ ಭಾರತೀಯ ಕ್ರೈಸ್ತರೇಕೆ ತಮ್ಮ ಮೂಲದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತ ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಂಧಾನುಕರಣೆಗೆ ಮುಂದಾಗಿದ್ದಾರೆ?
8. ಹಿಂದು ಧರ್ಮವನ್ನು ಬುಡಮೇಲು ಮಾಡುವ ಮಿಷನರಿಗಳ ಹುನ್ನಾರ, ಉದ್ದೇಶವೆಂಥದ್ದು?
9. ಒಬ್ಬ ಹಿಂದು ಹಿಂದುವಾಗಿ ಉಳಿದರೆ ಇವರಿಗೇನು ನೋವು?
10. ಈ ಮಿಷನರಿಗಳು ಧರ್ಮದ ವ್ಯಾಪಾರಿಗಳು ಹೇಗಾಗುತ್ತಾರೆ?
11. ನಮ್ಮ ಹರಿಜನರನ್ನು ಮತಾಂತರ ಮಾಡುವುದನ್ನು ಏಕೆ ನಾನು ವಿರೋಧಿಸುತ್ತೇನೆ?
12. ಮತಾಂತರವೆಂದರೆ ಅತ್ಮ ಶುದ್ಧೀಕರಣವೇ ಹೊರತು ಮತ ಬದಲಾವಣೆಯಲ್ಲ!
13. ಕ್ರಿಶ್ಚಿಯಾನಿಟಿ ಮತ್ತು ಅದರ ಸಾಮ್ರಾಜ್ಯಶಾಹಿ ಮನಸ್ಥಿತಿ
14. ಈ ಮಿಷನರಿಗಳು ಬಡವರನ್ನು, ಬಡತನವನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಾರೆ?
15. ಇಷ್ಟಕ್ಕೂ ನಾನೇಕೆ ನನ್ನ ಧರ್ಮವನ್ನು ಬದಲಾಯಿಸಲಿ?
1921ರಿಂದ 1937ರವರೆಗೂ ಇಂತಹ ಒಂದೊಂದು ಪ್ರಶ್ನೆಗಳನ್ನೆತ್ತಿಕೊಂಡು ತಮ್ಮ”ಯಂಗ್ ಇಂಡಿಯಾ’ ಮತ್ತು”ಹರಿಜನ’ ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿಯವರು ಮತಾಂತರವನ್ನು ಖಂಡಿಸಿ, ಮಿಷನರಿಗಳ ನೈಜ ಉದ್ದೇಶದ ಮೇಲೆ ಬೆಳಕು ಚೆಲ್ಲಿ ಸತತವಾಗಿ ಬರೆಯುತ್ತಾರೆ. ಇವತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಜೀಸಸ್್ನ ಯಾವ ತತ್ವವನ್ನು ಪಾಲಿಸುತ್ತಿವೆ ಎಂದು ಪ್ರಶ್ನಿಸುತ್ತಾರೆ, ಉದಾಹರಣೆ ಸಮೇತ ಅವುಗಳ ಇಬ್ಬಂದಿ ನಿಲುವನ್ನು ಖಂಡಿಸುತ್ತಾರೆ. 1937, ಜೂನ್ 3ರ”ಹರಿಜನ’ದಲ್ಲಿ,”ಜೀಸಸ್್ನೊಬ್ಬ ಮಾನವೀಯತೆಯ ಮಹಾನ್ ಭೋದಕ. ಆದರೆ ಅವನೊಬ್ಬನೇ ದೈವೀ ಪುತ್ರನೆಂಬುದನ್ನು ನಾನು ಒಪ್ಪುವುದಿಲ್ಲ. ನಾವೆಲ್ಲರೂ ದೇವರ ಮಕ್ಕಳೇ. ದೇವರು ಯಾರೋ ಒಬ್ಬನಿಗೆ ಮಾತ್ರ ಪಿತೃವಾಗಲು ಸಾಧ್ಯವಿಲ್ಲ’ ಎಂದು ಬರೆಯುತ್ತಾರೆ. ಬೈಬಲ್ಲನ್ನು ಚೆನ್ನಾಗಿ ಓದಿಕೊಂಡಿದ್ದ, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಮೆಚ್ಚಿಕೊಂಡಿದ್ದ, ಜೀಸಸ್್ನಿಂದ ಪ್ರೇರಿತರಾಗಿಯೇ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿ ಎನ್ನುತ್ತಿದ್ದ ಗಾಂಧೀಜಿ, ಮತಾಂತರವನ್ನು ಮಾತ್ರ ಸುತರಾಂ ಒಪ್ಪುತ್ತಿರಲಿಲ್ಲ. ಅದರ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ”ಒಂದು ವೇಳೆ ನನ್ನ ಬಳಿ ಅಧಿಕಾರವಿದ್ದರೆ, ಕಾನೂನು ತರುವ ಸಾಮರ್ಥ್ಯ ನನಗಿದ್ದಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ಮತಾಂತರದ ನಿಷೇಧ’ ಎಂದಿದ್ದರು ಬಾಪೂಜಿ.
ವಿಷಯ-2
‘ನನ್ನೊಬ್ಬ ಮುಸಲ್ಮಾನ ಸ್ನೇಹಿತ ಕೆಲ ಸಮಯದ ಹಿಂದೆ ಪುಸ್ತಕವೊಂದನ್ನು ಕಳುಹಿಸಿದ್ದ. ಒಂದು ತೊಟ್ಟು ಹಾಲನ್ನೂ ಬಿಡಲೊಪ್ಪದೆ ಹಸುವನ್ನು ಹೇಗೆ ಹಿಂಡುತ್ತೇವೆ, ಅವುಗಳನ್ನು ಹೇಗೆ ಹಸಿವಿನಿಂದ ನರಳಿಸುತ್ತೇವೆ, ಎತ್ತುಗಳನ್ನು ಹೇಗೆ ದುಡಿಸಿಕೊಳ್ಳುತ್ತೇವೆ, ಅತಿಭಾರ ಹಾಕಿ ಹೇಗೆ ದೌರ್ಜನ್ಯಕ್ಕೆ ಈಡುಮಾಡುತ್ತೇವೆ. ಒಂದು ವೇಳೆ ಅವುಗಳಿಗೆ ಮಾತು ಬಂದಿದ್ದರೆ ನಮ್ಮ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತಿದ್ದವು, ಜಗತ್ತು ದಿಗ್ಭ್ರಮೆಗೊಳ್ಳುತ್ತಿತ್ತು ಎಂಬುದನ್ನು ಅದರಲ್ಲಿ ವಿವರಿಸಲಾಗಿತ್ತು’.
ಅದನ್ನು 1921, ಅಕ್ಟೋಬರ್ 6ರ”ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆಯುತ್ತಾರೆ.”ನಾನು ಗೋವನ್ನು ಗೌರವಿಸುತ್ತೇನೆ, ಪ್ರೀತಿಯಿಂದ ಕಾಣುತ್ತೇನೆ. ಗೋವು ಕೃಷಿ ಆಧಾರಿತ ಈ ದೇಶದ ರಕ್ಷಕಿ. ನಮ್ಮ ಮುಸಲ್ಮಾನ ಸಹೋದರರೂ ಇದನ್ನು ಒಪ್ಪುತ್ತಾರೆ. ನಾನು ಗೋವನ್ನು ಗೌರವಿಸಿದಂತೆ ನನ್ನ ದೇಶವಾಸಿಗಳನ್ನೂ ಗೌರವಿಸುತ್ತೇನೆ. ಆತ ಹಿಂದು ಇರಬಹುದು, ಮುಸಲ್ಮಾನನಾಗಿರಬಹುದು. ಹಸುವಿನಷ್ಟೇ ಮನುಷ್ಯನೂ ಉಪಯೋಗಕಾರಿ. ಅಂದಮಾತ್ರಕ್ಕೆ ಹಸುವನ್ನು ರಕ್ಷಿಸುವುದಕ್ಕೋಸ್ಕರ ಮುಸಲ್ಮಾನನ ವಿರುದ್ಧ ನಾನು ಹೊರಡಬೇಕಾ, ಕೊಲ್ಲಬೇಕಾ? ಹಾಗೆ ಮಾಡಿದರೆ ನಾನು ಮುಸಲ್ಮಾನ ಹಾಗೂ ಗೋವು ಇಬ್ಬರ ಶತ್ರುತ್ವವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಗೋವನ್ನು ಸಂರಕ್ಷಿಸಲು ನನಗೆ ಕಾಣುವ ಏಕೈಕ ಮಾರ್ಗವೆಂದರೆ ನನ್ನ ಮುಸಲ್ಮಾನ ಸಹೋದರರಿಗೆ ಮನವರಿಕೆ ಮಾಡಿಕೊಡುವುದು’. ಹೀಗೆ ಗೋಸಂರಕ್ಷಣೆಯ ಬಗ್ಗೆ ಗಾಂಧೀಜಿ ಬಹುವಾಗಿ ವಿವರಿಸುತ್ತಾರೆ. ಗೋವು ಪೂಜನೀಯ ಎಂಬುದನ್ನು ಅವರ ಬರವಣಿಗೆಗಳಲ್ಲೆಲ್ಲ ಪ್ರತಿಪಾದಿಸುತ್ತಾರೆ.
ವಿಷಯ-3
ರಾಮರಾಜ್ಯ! ಭಾರತ ಸ್ವತಂತ್ರಗೊಂಡ ಕೂಡಲೇ ಅದನ್ನು ರಾಮರಾಜ್ಯವನ್ನಾಗಿ ಮಾಡುವುದಾಗಿ ಮೊದಲು ಹೇಳಿದವರೇ ಮಹಾತ್ಮ ಗಾಂಧೀಜಿ. ಅಂದರೆ ಸ್ವಾತಂತ್ರ್ಯ ನೀಡಿದ ನಂತರ ಯಾವ ರೀತಿಯ ವ್ಯವಸ್ಥೆ ರೂಪಿಸುತ್ತೀರಿ ಎಂಬ ಪ್ರಶ್ನೆಗೆ”ರಾಮನಂಥ ಅದರ್ಶ ರಾಜ್ಯ’ ಎಂದಿದ್ದರು ಮಹಾತ್ಮ. ಇನ್ನೂ ಬಿಡಿಸಿ ಹೇಳುವುದಾದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಡೆಸಿದ ಆದರ್ಶ, ನ್ಯಾಯ, ತ್ಯಾಗ ಮುಂತಾದ ಮೌಲ್ಯಗಳನ್ನು ಹೊಂದಿರುವ ರಾಜ್ಯ ನಿರ್ಮಾಣ. ಆ ಬಗ್ಗೆ 1947, ಫೆಬ್ರವರಿ 27ರಂದು ಬರೆಯುತ್ತಾ,”ಯಾರೂ ತಪ್ಪಾಗಿ ಭಾವಿಸಬಾರದು, ರಾಮರಾಜ್ಯವೆಂದರೆ ಹಿಂದುಗಳ ಆಡಳಿತವಲ್ಲ. ದೇವರ ಸಾಮ್ರಾಜ್ಯ. ರಾಮನೆಂಬುದು ಖುದಾ ಅಥವಾ ದೇವರ ಇನ್ನೊಂದು ಹೆಸರಷ್ಟೇ. ದೇವರ ಸಾಮ್ರಾಜ್ಯವೆಂದರೆ ದಗಾ, ವಂಚನೆ, ಅನ್ಯಾಯಗಳಿಲ್ಲದ, ಎಲ್ಲರನ್ನೂ ಸಮನಾಗಿ ಕಾಣುವ ಆಡಳಿತ’ ಎನ್ನುತ್ತಾರೆ.
ಈ ಮೇಲಿನ ಮೂರು ಅಂಶಗಳು ಏನನ್ನು ಸೂಚಿಸುತ್ತವೆ? ಹಾಗೂ ಈ ವಿಚಾರಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದನ್ನು ಕೇಳಿದ್ದೀರಾ? ಗಾಂಧೀಜಿ ಎಂದರೆ ಬರೀ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸಿದ ನೇತಾರ ಮಾತ್ರವಾ? ಅಥವಾ ಸ್ವಸ್ಥ ಸಮಾನ ಸಮಾಜ ನಿರ್ಮಾಣದ ಕನಸು ಕಂಡ, ಈ ದೇಶದ ನೆಲ, ಜಲ, ಜೀವಸಂಕುಲಗಳನ್ನು ಪ್ರೀತಿಸಿದ, ಸಂಸ್ಕೃತಿಯನ್ನು ಗೌರವಿಸಿದ, ಅದರ ಸಂರಕ್ಷಣೆ ಮಾಡಬೇಕೆಂದು ಪ್ರತಿಪಾದಿಸಿದ ವ್ಯಕ್ತಿಯೂ ಹೌದಲ್ಲವೆ? ಹಾಗಾದರೆ ಗಾಂಧೀಜಿ ಪ್ರತಿಪಾದಿಸಿದ ಗೋಸಂರಕ್ಷಣೆ, ಮತಾಂತರ ನಿಷೇಧ, ರಾಮರಾಜ್ಯ ನಿರ್ಮಾಣಗಳ ಬಗ್ಗೆ ಮಾತನಾಡಿದರೆ ಇವತ್ತು ಯಾವ ಪಟ್ಟ ಸಿಗುತ್ತದೆ? ಅವರು ಬಲವಾಗಿ ಪ್ರತಿಪಾದಿಸಿದ ವಿಚಾರಗಳ ಬಗ್ಗೆ ಈಗ ಧ್ವನಿಯೆತ್ತಿದರೆ ಯಾವ ಹಣೆಪಟ್ಟಿಯನ್ನು ಅಂಟಿಸುತ್ತಾರೆ? ಒಂದು ಹಂತದಲ್ಲಂತೂ ಗಾಂಧೀಜಿಯವರು ‘Muslims are bullies and Hindus cowards’ ಎಂದು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ನಾನೊಬ್ಬ ಗಾಂಧಿವಾದಿ ಎಂದು ಕರೆದುಕೊಳ್ಳುವ ಯಾವ ವ್ಯಕ್ತಿಯ ಬಾಯಲ್ಲಿ ಮತಾಂತರದ ಬಗ್ಗೆ ಗಾಂಧೀಜಿ ಯಾವ ಅಭಿಪ್ರಾಯ, ನಿಲುವು ಹೊಂದಿದ್ದರು ಎಂಬ ವಿಚಾರ ಹೊರಬರುತ್ತಿದೆ? ಈ ದೇಶದ ನೆಲ, ಜಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸಿ, ಮತಾಂತರವನ್ನು ಕಟುವಾಗಿ ಖಂಡಿಸಿದ ಗಾಂಧೀಜಿಯವರ ಮಾತುಗಳನ್ನು ಯಾವ ಗಾಂಧಿ ಟೋಪಿವಾಲಾ ಇಂದು ಉದಾಹರಿಸುತ್ತಾನೆ ಹೇಳಿ?

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ