ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಅಕ್ಟೋಬರ್ 7, 2011

ಲೋಕಪಾಲ ವ್ಯಾಪ್ತಿಗೆ ನ್ಯಾಯಾಂಗ ಸೇರುವುದು ಬೇಡ!

ಪ್ರಸ್ತುತ ನನೆಗುದಿಗೆ ಬಿದ್ದಿರುವ ಜನ ಲೋಕಪಾಲ್ ಮಸೂದೆಯ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಜತೆ ಅರುಣಾ ರಾಯ್ ಹಾಗೂ ಡಾ. ಜಯಪ್ರಕಾಶ್ ನಾರಾಯಣ್ ಹೆಸರುಗಳೂ ಚಾಲ್ತಿಯಲ್ಲಿವೆ. ಇಂದಿರಾ ಗಾಂಧಿಯವರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ರೂಪಿಸಿದ ಮಹಾನ್ ನೇತಾರ ಜೆಪಿಯವರ ಹೆಸರನ್ನೇ ಹೊಂದಿರುವ ಈ ಜಯಪ್ರಕಾಶ್ ನಾರಾಯಣ್ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆಂಧ್ರದ ಗುಂಟೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದ ಡಾ. ಜಯಪ್ರಕಾಶ್ ನಾರಾಯಣ್ ಲೋಕಸೇವಾ ಆಯೋಗದತ್ತ ಆಕರ್ಷಿತರಾದರು. 1980ರ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲಿಗರಾಗಿ ಪಾಸಾಗಿ ಆಡಳಿತಶಾಹಿ ಸೇರಿ 16 ವರ್ಷ ಜನಸೇವೆ ಮಾಡಿದರು. ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣ ಮಾಡಬೇಕಾದ ತುರ್ತು ಅಗತ್ಯವಿದೆ ಎಂದೆನಿಸಿ ಸಿವಿಲ್ ಸರ್ವಿಸ್್ಗೆ ಶರಣು ಹೊಡೆದು 2006, ಅಕ್ಟೋಬರ್ 2ರಂದು ‘ಲೋಕಸತ್ತಾ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದರು. ಈ ಲೋಕಸತ್ತಾ ಚಳವಳಿ ಆಡಳಿತಾತ್ಮಕ ಹಾಗೂ ರಾಜಕೀಯ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ತನ್ನ ಹೋರಾಟ ನಡೆಸುತ್ತಿದೆ. ಸಂಸತ್ತಿನ ಮುಂದೆ ಲೋಕಪಾಲ ಮಸೂದೆಯನ್ನಿಟ್ಟ ಸಂದರ್ಭದಲ್ಲಿ ಡಾ. ಜಯಪ್ರಕಾಶ್ ನಾರಾಯಣ್ ನೀಡಿರುವ ವರದಿಯ ಅಂಶಗಳನ್ನೂ ಹೊಸ ಕಾಯಿದೆಯಲ್ಲಿ ಸೇರಿಸುವ ಬಗ್ಗೆ ನಾವು ಗಮನಹರಿಸುತ್ತೇವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಆ ಮಟ್ಟಿಗೆಡಾ. ಜಯಪ್ರಕಾಶ್ ನಾರಾಯಣ್ ಅವರ ಮಾತಿಗೆ ಮನ್ನಣೆ ಸಿಕ್ಕುತ್ತಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅವರನ್ನು ಮಾತಿಗೆ ಎಳೆದಾಗ ಹಲವಾರು ಗಮನಾರ್ಹ ಅಂಶಗಳು ತಿಳಿದುಬಂದವು … 1. ಒಂದು ದೇಶವನ್ನು ಹಾಳುಗೆಡವಬೇಕೆಂದರೆ ನ್ಯಾಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಬೇಕು, ಆ ದೇಶವನ್ನೇ ನಾಶಪಡಿಸಬೇಕೆಂದರೆ ಜನರನ್ನು ಭ್ರಷ್ಟಗೊಳಿಸಬೇಕು ಎಂದಿದ್ದ ಚಾಣಕ್ಯ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ರಾಜಕಾರಣಿಗಳನ್ನು ದೂರುವ ನಮ್ಮ ಸಮಾಜ, ಜನ ಸ್ವತಃ ಭ್ರಷ್ಟರಾಗಿದ್ದಾರೆ ಎಂದನಿಸುವುದಿಲ್ಲವೆ?
-ಖಂಡಿತ ಇಲ್ಲ. ಇದೊಂದು ತಪ್ಪು ತಿಳಿವಳಿಕೆ. ಇವತ್ತು ಜನ ಏಕೆ ಲಂಚ ಕೊಡುತ್ತಾರೆ? ಅವರೇನು ಯಾವುದೋ ಫೇವರ್ ಪಡೆದುಕೊಳ್ಳುವುದಕ್ಕೆ ಲಂಚ ಕೊಡುತ್ತಿಲ್ಲ. ಒಂದು ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಾಸ್ಪೋರ್ಟ್, ಸಾಮಾನ್ಯ ಭೂದಾಖಲೆಗಳು, ಸರ್ಟಿಫಿಕೆಟ್್ಗಳನ್ನು ಪಡೆದುಕೊಳ್ಳಬೇಕಾದರೂ ಲಂಚ ಕೊಡಬೇಕು. ಇವೇನು ಸರ್ಕಾರ ಜನರಿಗೆ ಮಾಡುವ ಉಪಕಾರವಲ್ಲ. ನ್ಯಾಯಯುತವಾಗಿ ನೀಡುವುದಕ್ಕೂ ಲಂಚ ಕೊಡಬೇಕು. ಹೀಗೆ ಜನ ಲಂಚ ಕೊಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ನಿಜ ಹೇಳಬೇಕೆಂದರೆ ಜನ ಭ್ರಷ್ಟಾಚಾರಕ್ಕೆ ಬಲಿಪಶುಗಳಾಗುತ್ತಿದ್ದಾರೆ. ನಮ್ಮ ಭಾರತೀಯರಷ್ಟು ಪ್ರಾಮಾಣಿಕರು ಜಗತ್ತಿನಲ್ಲಿಯೇ ಇಲ್ಲ. ಉದಾಹರಣೆಗೆ ಅಮೆರಿಕವನ್ನು ತೆಗೆದುಕೊಳ್ಳಿ. ಅಕಸ್ಮಾತ್ ನ್ಯೂಯಾರ್ಕ್್ನಲ್ಲಿ ಪವರ್ ಷಟ್್ಡೌನ್ ಆದರೆ ದರೋಡೆ ನಡೆದುಬಿಡುತ್ತದೆ, ಲೂಟಿ ಮಾಡಿ ಬಿಡುತ್ತಾರೆ, ನೂರಾರು ಅತ್ಯಾಚಾರಗಳು, ಕೊಲೆಗಳು ನಡೆದುಹೋಗುತ್ತವೆ! ಆದರೆ ನಮ್ಮ ಭಾರತದಲ್ಲಿ ಕರೆಂಟ್ ಹೋಗುವುದು ದೈನಂದಿನ, ಕೆಲ ಗಂಟೆಗಳಿಗೊಮ್ಮೆ ಸಂಭವಿಸುವ ಘಟನೆ. ಹಾಗಂತ ನಮ್ಮಲ್ಲಿ ಕರೆಂಟ್ ಹೋದಾಗಲೆಲ್ಲ ದರೋಡೆ, ರೇಪ್ ಸಂಭವಿಸುವುದಾಗಿದ್ದರೆ ಇವತ್ತು ಯಾರೂ, ಏನೂ ಉಳಿದಿರುತ್ತಿರಲಿಲ್ಲ. ಈ ಹಿಂದೊಮ್ಮೆ ಜಗತ್ತಿನಾದ್ಯಂತ ಒಂದು ಪ್ರಾಮಾಣಿಕತೆಯ ಪರೀಕ್ಷೆ ನಡೆದಿತ್ತು. ಅಂದರೆ ಪರ್ಸ್್ಗಳಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ತುಂಬಿ ಭಾರತದ ವಿವಿಧ ನಗರಗಳ ಬೀದಿಗಳಲ್ಲಿ ಬಿಸಾಡಲಾಗಿತ್ತು. ಕೆಲವೆಡೆ ಮೊಬೈಲ್ ಫೋನ್್ಗಳನ್ನು ಹಾಕಲಾಗಿತ್ತು. ಅದನ್ನು ಗಮನಿಸಿದ ಸಣ್ಣಪುಟ್ಟ ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಸಾಮಾನ್ಯ ಜನರು ಪರ್ಸ್್ನಲ್ಲಿದ್ದ ವಿಳಾಸಕ್ಕೆ ಹಿಂದಿರುಗಿಸಿದ್ದರು. ಹಾಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂದಿರುಗಿಸಿದವರಲ್ಲಿ ಭಾರತೀಯರೇ(85 ಪರ್ಸೆಂಟ್) ಹೆಚ್ಚಿದ್ದರು. ಹಾಗಾಗಿ ನಮ್ಮ ಸಮಾಜವೂ ಭ್ರಷ್ಟವಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬ್ರಿಟನ್ನಿನ ಮಾಜಿ ಪ್ರಧಾನಿಯೊಬ್ಬರು ಹೇಳಿದ್ದರು-’ಜನ ಒಳ್ಳೆಯ ಕೆಲಸ ಮಾಡುವುದಕ್ಕೆ ಸರ್ಕಾರ ಸಹಕಾರ ನೀಡಬೇಕು’. ಸರ್ಕಾರವೇ ಭ್ರಷ್ಟಾಚಾರಕ್ಕಿಳಿದರೆ ಜನ ಅಸಹಾಯಕರಾಗಬೇಕಾಗುತ್ತದೆ ಅಷ್ಟೇ.
2. ನೀವೊಬ್ಬ ಐಎಎಸ್ ಅಧಿಕಾರಿಯಾಗಿದ್ದವರು, ನಂತರ ಸರ್ಕಾರಿ ಸೇವೆ ಬಿಟ್ಟು ಎನ್್ಜಿಓ ಆರಂಭಿಸಿದಿರಿ, ಈಗ ರಾಜಕೀಯಕ್ಕೆ ಕಾಲಿಟ್ಟಿದ್ದೀರಿ. ನಿಮಗೆ ಆಡಳಿತಶಾಹಿ, ಸಾಮಾಜಿಕ ಸೇವೆ, ರಾಜಕೀಯ ಅನುಭವ ಮೂರೂ ಇವೆ. ಪ್ರಸ್ತುತ ನನೆಗುದಿಗೆ ಬಿದ್ದಿರುವ ಲೋಕಪಾಲ ಕಾಯಿದೆ ಜಾರಿಗೆ ಬಂದರೆ ಭ್ರಷ್ಟಾಚಾರವನ್ನು ತಡೆಯಬಹುದು ಎಂದನಿಸುತ್ತದೆಯೇ?
-ಹೌದು, ಒಂದು ಒಳ್ಳೆಯ ಕಾಯಿದೆಯ ಕೊರತೆಯೇ ಹಾಲಿ ಪರಿಸ್ಥಿತಿಗೆ ಕಾರಣ. ಲೋಕಪಾಲ ಬಂದರೆ ಭ್ರಷ್ಟರಲ್ಲಿ ಮೊದಲಿಗೆ ಭಯ ಮನೆಮಾಡುತ್ತದೆ, ಸಿಕ್ಕಿಬೀಳುವ ಹೆದರಿಕೆಯೇ ಪರಿಸ್ಥಿತಿಯನ್ನು ಎಷ್ಟೋಮಟ್ಟಿಗೆ ಸುಧಾರಿಸಿ ಬಿಡುತ್ತದೆ.
3. ಆದರೆ ಲೋಕಪಾಲವಿರಬಹುದು, ಲೋಕಾಯುಕ್ತರಿರಬಹುದು ಅವರನ್ನು ನೇಮಕ ಮಾಡುವವರು ರಾಜಕಾರಣಿಗಳೇ. ಹಾಗಿರುವಾಗ ಲೋಕಪಾಲದ ಮೇಲೆ ಯಾವ ಮಟ್ಟದವರೆಗೂ ವಿಶ್ವಾಸವಿಡಬಹುದು, ಲೋಕಪಾಲದ ಜತೆ ಚುನಾವಣಾ ಸುಧಾರಣೆಗಳೂ ಅಷ್ಟೇ ಅಗತ್ಯ ಎಂದನಿಸುವುದಿಲ್ಲವೆ?
-ನೋಡಿ… ಲೋಕಪಾಲರನ್ನು ಆಯ್ಕೆ ಮಾಡುವವರು ಪ್ರಧಾನಿ, ಮಂತ್ರಿಗಳು ಹಾಗೂ ಲೋಕಸಭಾಧ್ಯಕ್ಷರು. ಇದೇನು ಕೆಟ್ಟ ಆಯ್ಕೆ ಸಮಿತಿಯಿಲ್ಲ. ಇಂಥ 7 ಜನರಿಂದ ಕೂಡಿರುವ ಸಮಿತಿ 9 ಸದಸ್ಯರ ಲೋಕಪಾಲವನ್ನು ನೇಮಕಮಾಡುತ್ತದೆ. ಆದರಲ್ಲೂ ಪದಚ್ಯುತ ಕೇಂದ್ರ ವಿಚಕ್ಷಣ ಆಯುಕ್ತ(ಸಿವಿಸಿ) ಪಿ.ಜೆ. ಥಾಮಸ್ ಪ್ರಕರಣದ ನಂತರ ಸರ್ಕಾರ ಮನಸೋಯಿಚ್ಛೆ ವರ್ತಿಸಲು ಸಾಧ್ಯವಿಲ್ಲ. ಈ ಹಿಂದೆ ಬಹುಮತದ ಆಧಾರದ ಮೇಲೆ ಆಯ್ಕೆ ಮಾಡುತ್ತಿದ್ದರು. ಥಾಮಸ್ ಪ್ರಕರಣದಲ್ಲೂ ಪ್ರತಿಪಕ್ಷದ ನಾಯಕಿಯ ವಿರೋಧದ ನಡುವೆಯೂ ಸರ್ಕಾರ ತನಗಿಷ್ಟ ಬಂದಂತೆ ವರ್ತಿಸಿತ್ತು. ಆದರೆ ಥಾಮಸ್ ಆಯ್ಕೆಯನ್ನು ಅಸಿಂಧುಗೊಳಿಸುವಾಗ ಬಹುಮತವೊಂದೇ ಆಯ್ಕೆಗೆ ಮಾನದಂಡವಲ್ಲ ಎಂದು ಸುಪ್ರೀಂಕೋರ್ಟ್ ಸ್ಟಷ್ಟಪಡಿಸಿದೆ. ಹಾಗಿದ್ದಾಗ್ಯೂ ಚುನಾಚಣಾ ಸುಧಾರಣೆಗಳು ಬಹುಮುಖ್ಯ. ಇಲ್ಲಿ ಮೊದಲಿಗೆ ರಾಜಕೀಯ ಪಕ್ಷಗಳೇ ಸುಧಾರಣೆ, ಬದಲಾವಣೆಗೆ ಮೈಯೊಡ್ಡಿಕೊಳ್ಳಬೇಕು. ನಾನು, ನಿಮ್ಮಂಥವರು, ಅಂದರೆ ಒಬ್ಬ ಸಾಮಾನ್ಯ, ಪ್ರತಿಭಾವಂತ, ಜನಪರ ಕಾಳಜಿಯುಳ್ಳ, ಪ್ರಾಮಾಣಿಕ ವ್ಯಕ್ತಿಗಳನ್ನೂ ಪಕ್ಷದೊಳಕ್ಕೆ ಬಿಟ್ಟುಕೊಳ್ಳಬೇಕು, ಅವರೂ ತಮ್ಮ ಯೋಚನೆ, ವಿಚಾರ, ಚಿಂತನೆಗಳನ್ನು ಮುಂದಿಡಲು ಅವಕಾಶ ಮಾಡಿಕೊಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ನೀಡಬೇಕು. ಹೀಗೆ ಶುದ್ಧ, ಪ್ರಾಮಾಣಿಕ ಜನರುಗಳಿಂದ ಕೂಡಿದರೆ ತನ್ನಿಂದತಾನೇ ಸುಧಾರಣೆಯಾಗುತ್ತದೆ. ದುರದೃಷ್ಟವಶಾತ್, ಇವತ್ತು ಪಕ್ಷಗಳು ಕೆಲವು ವ್ಯಕ್ತಿ, ಕುಟುಂಬಗಳ ಖಾಸಗಿ ಅಸ್ತಿಯಾಗಿವೆ. ಅದು ಬದಲಾಗಬೇಕು.
4. ಇವತ್ತು ನ್ಯಾಯಾಧೀಶರೂ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿಲ್ಲ, ವೈ.ಕೆ. ಸಬರ್್ವಾಲ್, ಕೆ.ಜಿ. ಬಾಲಕೃಷ್ಟನ್, ಸೌಮಿತ್ರ ಸೇನ್, ದಿನಕರನ್ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್ ಮುಂತಾದವರ ಉದಾಹರಣೆ ಇದೆ. ಹಾಗಾಗಿ ನ್ಯಾಯಾಂಗವನ್ನೂ ಲೋಕಪಾಲದ ವ್ಯಾಪ್ತಿಗೆ ಏಕೆ ತರಬಾರದು?
-ನೋ, ತರಬಾರದು. ಅಂದಮಾತ್ರಕ್ಕೆ ನ್ಯಾಯಾಧೀಶರೆಲ್ಲ ಪ್ರಾಮಾಣಿಕರು, ಅವರು ಸಾರ್ವಜನಿಕ ಪರಾಮರ್ಶೆಗೆ ನಿಲುಕದವರು ಎಂದರ್ಥವಲ್ಲ. ನ್ಯಾಯಾಧೀಶರೂ ಸಾರ್ವಜನಿಕ ಸೇವಕರಾಗಿರುವುದರಿಂದ ಅವರ ಬದುಕು, ನಡತೆಯೂ ಪರಾಮರ್ಶೆಗೆ ಒಳಪಡಬೇಕು. ಹಾಗಂತ ಅವರನ್ನು ಯಾರು ಪರಾಮರ್ಶೆಗೆ ಒಳಪಡಿಸಬೇಕು? ಒಂದೇ ವ್ಯವಸ್ಥೆ (ಲೋಕಪಾಲ) ಎಲ್ಲ ಕ್ಷೇತ್ರಗಳನ್ನೂ ನಿಯಂತ್ರಿಸಲು ಅವಕಾಶವೀಯುವುದು ಅಪಾಯಕಾರಿ. ಒಂದು ವೇಳೆ, ಲೋಕಪಾಲವೇ ಭ್ರಷ್ಟಗೊಂಡರೆ ಏನು ಮಾಡುವುದು? ಇಷ್ಟಕ್ಕೂ ಲೋಕಪಾಲ, ಲೋಕಾಯುಕ್ತದಲ್ಲಿರುವವರೂ ನ್ಯಾಯಾಧೀಶರೇ ಆಗಿರುತ್ತಾರೆ. ಸಮಸ್ಯೆಗೆ ಒಂದೇ ವ್ಯವಸ್ಥೆ ಪರಿಹಾರವಾಗುವುದಿಲ್ಲ. ಸುಪ್ರೀಂ ಕೋರ್ಟ್ ಅತ್ಯಂತ ಪ್ರಬಲ ವ್ಯವಸ್ಥೆ. ಅದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದು ಹೇಳುವ ಅಧಿಕಾರವೂ ಇದೆ. ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಮೇಲಾಟ ದೇಶಕ್ಕೆ ಒಳ್ಳೆಯದಲ್ಲ. ಒಬ್ಬ ಲೋಕಾಯುಕ್ತ ಅಥವಾ ಲೋಕಪಾಲನನ್ನು ಕಿತ್ತೊಗೆಯುವ ಅಧಿಕಾರ ಯಾರಿಗಿದೆ? ನ್ಯಾಯಾಂಗಕ್ಕಲ್ಲವೆ? ಲೋಕಪಾಲ ಹಾಗೂ ನ್ಯಾಯಾಂಗದ ನಡುವೆಯೇ ತಿಕ್ಕಾಟ ಆರಂಭವಾಗಬಹುದು. ಭ್ರಷ್ಟ ನ್ಯಾಯಾಧೀಶರನ್ನು ಹೊರಹಾಕಬೇಕು ನಿಜ, ಆದರೆ ನ್ಯಾಯಾಂಗವನ್ನು ಲೋಕಪಾಲದ ವ್ಯಾಪ್ತಿಗೆ ತರಬಾರದು. ಕರ್ನಾಟಕದ ಹೆಮ್ಮೆಯ ಪುತ್ರ ನ್ಯಾ. ಸಂತೋಷ್ ಹೆಗ್ಡೆ, ಪರಮ ಪ್ರಾಮಾಣಿಕ ನ್ಯಾ. ವಿ.ಆರ್. ಕೃಷ್ಣ ಅಯ್ಯರ್ ಹಾಗೂ ಪ್ರಾಮಾಣಿಕ ಮತ್ತು ಧೈರ್ಯಶಾಲಿ ನ್ಯಾ. ಜೆ.ಎಸ್. ವರ್ಮಾ ಅವರಂಥ ಮಹಾನುಭಾವರು ರೂಪಿಸಿರುವ, ರೂಪುರೇಷೆ ಹಾಕಿಕೊಟ್ಟಿರುವ ರಾಷ್ಟ್ರೀಯ ನ್ಯಾಯಾಂಗ ಆಯೋಗ ನ್ಯಾಯಾಂಗದ ಮೇಲೆ ನಿಗಾ ಇಟ್ಟರೆ ಸಾಕು.
5. ಇಂಗ್ಲೆಂಡಿನಲ್ಲಿ ಶಾಸಕ/ಸಂಸದರನ್ನು “”Vanguards in protecting public exchequer” ಎನ್ನುತ್ತಾರೆ. ಭಾರತದಲ್ಲಿ ರಕ್ಷಣೆ ಬದಲು ಭಕ್ಷಣೆ ಮಾಡುತ್ತಿದ್ದಾರೆ. ನಿಮ್ಮ ಪ್ರಕಾರ ಯಾರು ಒಬ್ಬ ಆದರ್ಶಪ್ರಾಯ ಅಥವಾ ಮಾದರಿ ಶಾಸಕ/ಸಂಸದನೆನಿಸುತ್ತಾನೆ?
-ಶುದ್ಧ, ಕಟಿಬದ್ಧ, ಸಮರ್ಥ, ಸಮಗ್ರತೆಯುತ ವ್ಯಕ್ತಿ ಮಾತ್ರ ನಮ್ಮ ಚುನಾಯಿತ ಪ್ರತಿನಿಧಿಯಾಗಬೇಕು.

6. ಇಂದು ‘ಮೊದಲ ತಲೆಮಾರಿನ ರಾಜಕಾರಣಿ’ಗಳನ್ನು ಕಾಣುವುದೇ ಕಷ್ಟವಾಗಿದೆ. ಸಮೀಕ್ಷೆಗಳ ಪ್ರಕಾರ ಭಾರತದ ಶೇ. 35ರಷ್ಟು ಯುವ/ನವ ರಾಜಕಾರಣಿಗಳು ಕೌಟುಂಬಿಕ ಹಿನ್ನೆಲೆಯಿಂದ ಬಂದವರಾಗಿದ್ದರೆ. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರಾದರೂ ರಾಜಕಾರಣದಲ್ಲಿ ಇದ್ದವರೇ, ಇರುವವರೇ ಆಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗತಿಯೇನು?

-ಇವತ್ತು ಕಾಂಗ್ರೆಸ್್ನಲ್ಲಿ 30 ವರ್ಷದೊಳಗಿನ ರಾಜಕಾರಣಿಗಳನ್ನು ಗಣನೆಗೆ ತೆಗೆದುಕೊಂಡರೆ ನೂರಕ್ಕೆ ನೂರರಷ್ಟು ಫ್ಯಾಮಿಲಿ ಪಾಲಿಟಿಕ್ಸ್್ನಿಂದ ಬಂದವರು, 40 ವರ್ಷದೊಳಗಿನವರಲ್ಲಿ ಈ ಪ್ರಮಾಣ 85 ಪರ್ಸೆಂಟ್ ಇದೆ. ಒಟ್ಟಾರೆಯಾಗಿ 35-40 ಪರ್ಸೆಂಟ್ ಆಗಿದೆ. ಅದರಲ್ಲೂ ಯುವಕರಲ್ಲಿ ನೀವೊಬ್ಬ ಮಂತ್ರಿ, ಶಾಸಕ, ಸಂಸದ ಮುಂತಾದ ರಾಜಕಾರಣಿಯ ಮಗನಾಗಿಲ್ಲದಿದ್ದರೆ ನಿಮಗೆ ಟಿಕೆಟ್ಟೂ ಸಿಗುವುದಿಲ್ಲ, ರಾಜಕಾರಣಕ್ಕೂ ಕಾಲಿಡುವುದಕ್ಕಾಗುವುದಿಲ್ಲ. ಆ ಹಂತಕ್ಕೆ ತಲುಪಿದ್ದೇವೆ!
7. ರಾಹುಲ್ ಗಾಂಧಿ, ಪ್ರಿಯಾ ದತ್, ದುಶ್ಯಂತ್ ಸಿಂಗ್, ಸಚಿನ್ ಪೈಲಟ್, ಮಾನವೇಂದ್ರ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ಸುಖಬೀರ್ ಬಾದಲ್, ಉಮರ್ ಅಬ್ದುಲ್ಲಾ ಮುಂತಾದವರು ರಾಜಕಾರಣಕ್ಕೆ ಬಂದಿದ್ದು ತಪ್ಪೆಂದಲ್ಲ, ಆದರೆ ನ್ಯಾಯಬೆಲೆ ಅಂಗಡಿ ಮುಂದಾಗಲಿ, ರೇಷನ್ ಕಾರ್ಡ್, ಪಾಸ್್ಪೋರ್ಟ್ ಅಥವಾ ಇನ್ನಾವುದೇ ಕಾರಣಕ್ಕಾಗಲಿ ಇವರೆಂದೂ ಕ್ಯೂನಲ್ಲಿ ನಿಂತವರಲ್ಲ, ಲಂಚ ಕೊಡಬೇಕಾದ ಅನಿವಾರ್ಯತೆಗೆ ಬಿದ್ದವರಲ್ಲ. ಇಂಥವರಿಗೆ ಸಾಮಾನ್ಯ ಜನರ ನೋವು, ಅಳಲು ಹೇಗೆ ಅರ್ಥವಾದೀತು? ಆದರಲ್ಲೂ ಇವತ್ತಿನ ರಾಜಕಾರಣಿಗಳು, ಮಂತ್ರಿವರ್ಯರು ದೊಡ್ಡ ಕಾರ್ಪೊರೇಟ್ ಕಂಪನಿಗಳ ವಕ್ತಾರರಂತೆ ವರ್ತಿಸುತ್ತಿರುವುದನ್ನು ನೋಡಿದರೆ ಇವರಿಂದ ಜನಸಾಮಾನ್ಯನ ಹಿತರಕ್ಷಣೆಯನ್ನ ನಿರೀಕ್ಷಿಸಲು ಸಾಧ್ಯವೆ?
-ವಂಶಪಾರಂಪರ್ಯ ರಾಜಕಾರಣವೇ ರಾಂಗ್, ಅವರಿಗೆ ರಾಜಕೀಯ ರಂಗಕ್ಕಿಳಿಯುವ ಹಕ್ಕೇ ಇಲ್ಲ ಎಂದರೆ ತಪ್ಪಾಗುತ್ತದೆ. ಕೌಟುಂಬಿಕ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದರೂ ಜನರಿಗೆ ಸ್ಪಂದಿಸುತ್ತಿರುವವರೂ ಇದ್ದಾರೆ. ಆದರೂ ಯಾವುದೇ ಹಿನ್ನೆಲೆ ಹೊಂದಿಲ್ಲದ, ಪ್ರಾಮಾಣಿಕ, ಸುಶಿಕ್ಷಿತ ಹೊಸ ತಲೆಮಾರಿನ ಯುವಕರೂ ರಾಜಕಾರಣಕ್ಕೆ ಬರಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕೆಲವೇ ಕುಂಟುಂಬಗಳು ರಾಜಕಾರಣವನ್ನು ಆಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಹಾಗೂ ರಾಷ್ಟ್ರದ ಯುವಜನತೆ ವಂಶಾಡಳಿತ ಮಾಡುತ್ತಿರುವವರ ಹಿಂದೆ ಕೇವಲ ಬಾವುಟ ಹಿಡಿದು ಹೋಗುವವರಾಗಬೇಕಾಗುತ್ತದೆ.
8. ಪ್ರಜಾಪ್ರಭುತ್ವ ಹಾಗೂ ರಾಜಕಾರಣ ಯುವಜನತೆಗೆ ಆಕರ್ಷಕವಾಗುವಂತೆ ಹೇಗೆ ಮಾಡಬಹುದು?
-ಅರ್ಥವ್ಯವಸ್ಥೆ ಬೆಳೆದಂತೆ ಮಧ್ಯಮವರ್ಗ ದೊಡ್ಡದಾಗುತ್ತಿದೆ. ಅಂದರೆ ಯುವಜನತೆ ತಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗೇರುತ್ತಿದೆ. ಹಾಗಾಗಿ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ದೇಶ, ನೆಲ, ಜಲ ಎನ್ನವುದು ಮಧ್ಯಮವರ್ಗದ ಮೌಲ್ಯಗಳಾಗಿವೆ. ಈ ಮಧ್ಯಮ ವರ್ಗ ಯಾರ ಹೆದರಿಕೆಯೂ ಇಲ್ಲದೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ನ್ಯಾಯಕ್ಕಾಗಿ ಧ್ವನಿಯೆತ್ತುತ್ತದೆ. ಇಂಥ ಮಧ್ಯಮ ವರ್ಗದ ಗಾತ್ರ ದೊಡ್ಡದಾದಂತೆ ಪ್ರಜಾಪ್ರಭುತ್ವ ಕೂಡ ರಂಗೇರುತ್ತದೆ.

ಕೃಪೆ: ಪ್ರತಾಪ ಸಿಂಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ