ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಅಕ್ಟೋಬರ್ 17, 2011

ಹೊಣೆಗಾರಿಕೆ ಇಲ್ಲದೇ ಪ್ರಭಾವಿಯಾಗೋದು ಹೀಗೇನಾ?

Who matter?
ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ವಿಶ್ವವಿಖ್ಯಾತ”ಫೋರ್ಬ್ಸ್್’ ಮ್ಯಾಗಝಿನ್ ಪ್ರತಿವರ್ಷ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ, ಪ್ರಭಾವಗಳನ್ನು ಅಳೆದು ತೂಗುತ್ತದೆ. ಕೊನೆಗೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಒಂದರಿಂದ 10 ಸ್ಥಾನಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳೇ ಅಂದರೆ ಪ್ರಧಾನಿ, ರಾಷ್ಟ್ರಾಧ್ಯಕ್ಷ ಇಂತಹ ಸ್ಥಾನಗಳಲ್ಲಿರುವವರು ಆಕ್ರಮಿಸಿರುತ್ತಾರೆ. ಇಷ್ಟಕ್ಕೂ ಪ್ರಭಾವಿ, ಬಲಶಾಲಿ ಎನಿಸಿಕೊಳ್ಳಲು ಹಣವೊಂದೇ ಇದ್ದರೆ ಸಾಲದು. ಹಾಗಾಗಿ ಒಂದು ದೇಶದ ರಾಜಕೀಯ ಅಧಿಕಾರ, ಅರ್ಥವ್ಯವಸ್ಥೆ, ಸೇನೆ, ಅಧಿಕಾರಶಾಹಿ ವರ್ಗ ಮುಂತಾದುವುಗಳ ಮೇಲೆ ಹೊಂದಿರುವ ಹಿಡಿತ, ನಿಯಂತ್ರಣ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಮುಖ ಅಂಶಗಳಾಗುತ್ತವೆ. ಜಗತ್ತಿನ ಪ್ರಮುಖ ಆರ್ಥಿಕಶಕ್ತಿಗಳಲ್ಲಿ ಒಂದಾಗಿರುವ ಭಾರತದ ಪ್ರಭಾವಿ ವ್ಯಕ್ತಿಗಳಿಗೂ ಸಹಜವಾಗಿಯೇ ಇದರಲ್ಲಿ ಸ್ಥಾನ ದಕ್ಕಬೇಕು ಹಾಗೂ ದಕ್ಕುತ್ತಲೂ ಇದೆ. ಹಾಗಾದರೆ ಭಾರತದಲ್ಲಿಯೇ ಅತ್ಯಂತ ಪ್ರಭಾವಿ ವ್ಯಕ್ತಿ ಯಾರು? ಯಾರಾಗಬೇಕಿತ್ತು? ಪ್ರಧಾನಿಯಲ್ಲವೆ? ಆದರೆ ಪ್ರಧಾನಿ ಬದಲು ಸೋನಿಯಾ ಗಾಂಧಿಯವರು ಏಕೆ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ?
2011ರ ಸಾಲಿನ ಪಟ್ಟಿಯಲ್ಲಿ ಆಕೆ ವಿಶ್ವದ 9ನೇ ಅತ್ಯಂತ ಬಲಿಷ್ಠ ವ್ಯಕ್ತಿ ಎಂದು ಫೋರ್ಬ್ಸ್ ಹೇಳಿದೆ!
ಚೀನಾ ಅಧ್ಯಕ್ಷ ಹು ಜಿಂಟಾವೋ ಮೊದಲ, ಅಮೆರಿಕ ಅಧ್ಯಕ್ಷ ಒಬಾಮ ಎರಡನೇ, ಸೌದಿ ಅರೇಬಿಯಾದ ರಾಜ ಅಲ್ ಸೌದ್ 3ನೇ, ಮುಂದುವರಿದ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್್ಗಳ ಸಾಲಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬದಲು ಸೋನಿಯಾ ಗಾಂಧಿಯವರು ಕಾಣಿಸಿಕೊಳ್ಳುತ್ತಿರುವುದಾದರೂ ಏಕೆ ಹಾಗೂ ಹೇಗೆ? ಇಷ್ಟಕ್ಕೂ ಭಾರತವನ್ನು ಆಳುತ್ತಿರುವವರು ಯಾರು? ಮನಮೋಹನ್ ಸಿಂಗ್ ಅವರೋ, ಸೋನಿಯಾ ಗಾಂಧಿಯವರೋ? ಮನಮೋಹನ್ ಸಿಂಗ್ ಅವರಾಗಿದ್ದರೆ, ಅವರ ಮಾತೇ ಅಂತಿಮವಾಗಿದ್ದರೆ, ಸಂಪುಟ ಹಾಗೂ ಸರ್ಕಾರ ಅವರ ನಿಯಂತ್ರಣದಲ್ಲಿದ್ದರೆ ಸೋನಿಯಾ ಗಾಂಧಿಯವರು ಹೇಗೆ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಳ್ಳುತ್ತಿದ್ದರು? 1999ರಲ್ಲಿ ವಿಜಯ್ ಕುಮಾರ್ ಮಲ್ಹೋತ್ರಾ ಎದುರು ದೇಶದಲ್ಲಿಯೇ ಅತ್ಯಂತ ಸುಶಿಕ್ಷಿತ ಲೋಕಸಭಾ ಕ್ಷೇತ್ರವಾದ ದಕ್ಷಿಣ ದೆಹಲಿಯಲ್ಲಿ ಸೋತಿದ್ದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಅವರೆಂದೂ ನೇರ ಚುನಾವಣೆಯಲ್ಲಿ ಗೆದ್ದವರಲ್ಲ, ಗೆಲ್ಲುವ ಸಾಮರ್ಥ್ಯವೂ ಅವರಿಗಿಲ್ಲ. ಹಾಗಿರುವಾಗ ಪ್ರಧಾನಿಗೆ ಸಂಪುಟದ ಮೇಲೆ ಯಾವ ನಿಯಂತ್ರಣವಿರಲು ಸಾಧ್ಯ? ಇವುಗಳಿಂದ ಸ್ಪಷ್ಟವಾಗುವುದೇನೆಂದರೆ ಸೋನಿಯಾ ಗಾಂಧಿಯವರ ಕೈಯಲ್ಲಿ ಈ ದೇಶದ ಜುಟ್ಟು, ಚುಕ್ಕಾಣಿ ಇದೆ. ಅದರ ಬಗ್ಗೆ ಯಾರ ತಕರಾರೂ ಇಲ್ಲ ಬಿಡಿ.
ಆದರೆ ಒಂದು ಸರ್ಕಾರದ ಮೇಲೆ ನಿಯಂತ್ರಣ ಹೊಂದಿದವರಿಗೆ ಜವಾಬ್ದಾರಿಗಳೂ ಇರುವುದಿಲ್ಲವೆ?
2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿದ ಸೋನಿಯಾ ಗಾಂಧಿಯವರು”ರಾಷ್ಟ್ರೀಯ ಸಲಹಾ ಮಂಡಳಿ’(ಎನ್್ಎಸಿ) ರಚನೆ ಮಾಡಿಕೊಂಡು ಅದರ ಅಧ್ಯಕ್ಷೆಯಾದಾಗಲೇ ಜವಾಬ್ದಾರಿಯಿಲ್ಲದ ಅಧಿಕಾರ ಚಲಾಯಿಸುವ ಅವರ ಉದ್ದೇಶ ಜನರಿಗೆ ಮನವರಿಕೆಯಾಗಿತ್ತು. ಅಂದಮಾತ್ರಕ್ಕೆ ಅವರ ಬೇಜವಾಬ್ದಾರಿಯನ್ನು ದೇಶವಾಸಿಗಳು ಸಹಿಸಿಕೊಳ್ಳಬೇಕಾದ ಅಗತ್ಯವೇನಿದೆ? 2004ರಿಂದ 2011ರವರೆಗೂ ಅದೆಷ್ಟು ಹಗರಣಗಳು ಸಂಭವಿಸಿದವು? ಯಾವ ಹಗರಣದ ವಿಷಯವಾಗಿ ಸೋನಿಯಾ ಗಾಂಧಿಯವರು ಬಾಯ್ತೆರೆದಿದ್ದಾರೆ? ಯಾವ ಹಗರಣದ ಸಲುವಾಗಿ ವೈಯಕ್ತಿಕ ಜವಾಬ್ದಾರಿ ಹೊತ್ತಿದ್ದಾರೆ ಹೇಳಿ? 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದ ಇರಾಕ್್ಗೆ ಸಂಬಂಧಿಸಿದ “Oil-for-food” ಹಗರಣ ಸಂಭವಿಸಿತು. ಆಗಿನ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರನ್ನು ಮನೆಗೆ ಕಳುಹಿಸಿ ತಿಪ್ಪೆ ಸಾರಿಸಿದರು. 2009ರಲ್ಲಿ ಮರು ಆಯ್ಕೆಯಾದ ನಂತರವಂತೂ ಹಗರಣಗಳ ಸಾಲೇ ಸೃಷ್ಟಿಯಾಗಿದೆ. 2ಜಿ ಲೂಟಿ, ಕಾಮನ್ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಲಾವಾಸಾ ಹಗರಣ, ಕ್ಯಾಶ್ ಫಾರ್ ಓಟ್ ಇವುಗಳಿಗೆಲ್ಲ ಯಾರು ಹೊಣೆ? ಈ ಪ್ರಧಾನಿಗಂತೂ ಪತ್ರಿಕಾ ಸಂಪಾದಕರು, ಸುದ್ದಿ ಚಾನೆಲ್್ಗಳ ಮುಖ್ಯಸ್ಥರ ಪತ್ರಿಕಾಗೋಷ್ಠಿ ನಡೆಸಿ ಮೊಸಳೆ ಕಣ್ಣೀರು ಸುರಿಸುವುದಷ್ಟೇ ಗೊತ್ತು. ಅದಿರಲಿ, ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯ ಅನುಮೋದನೆ ಇಲ್ಲದೆ ಯಾವುದಾದರೂ ಪಾಲಿಸಿ ಡಿಸಿಷನ್್ಗಳನ್ನು ತೆಗೆದುಕೊಳ್ಳಲು, ಅನ್ಯ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವೆ?
ಅಮೆರಿಕದ ಜತೆಗಿನ ನಾಗರಿಕ ಅಣು ಸಹಕಾರ ಒಪ್ಪಂದವನ್ನು ತೆಗೆದುಕೊಳ್ಳಿ. ಅದಕ್ಕಾಗಿ ಸರ್ಕಾರವನ್ನೇ ಅಪಾಯಕ್ಕೆ ದೂಡಿಕೊಳ್ಳುವಂತಹ ಜರೂರತ್ತು ಏನಿತ್ತು? ಇಂತಹ ಅಪಾಯವನ್ನು ಮೈಗೆಳೆದುಕೊಳ್ಳುವ ಹಿಂದೆ ಲಾಭದ ಲೆಕ್ಕಾಚಾರವಿರಲಿಲ್ಲ ಎಂದು ಹೇಗೆತಾನೇ ನಂಬುವುದು? 1.76 ಸಾವಿರ ಕೋಟಿ ರೂ.ಗಳ 2ಜಿ ಹಗರಣವನ್ನೇ ಮುಚ್ಚಿಹಾಕಲು, ಕಪಿಲ್ ಸಿಬಲ್ ಅವರನ್ನು ಮುಂದೆ “Zero Loss” ಎಂದು ಲಜ್ಜೆ ಬಿಟ್ಟು ಪ್ರತಿಪಾದಿಸಲು ಮುಂದಾದ ಉದಾಹರಣೆ ಇರುವಾಗ ನಾಗರಿಕ ಅಣುಸಹಕಾರ ಒಪ್ಪಂದದಿಂದಲೂ ಭಾರೀ ಲಾಭವಾಗುವ ಕಾರಣವಿತ್ತು ಎಂಬ ಅನುಮಾನ ಮೂಡುವುದಿಲ್ಲವೆ? ಇಷ್ಟಕ್ಕೂ ಈ ಒಪ್ಪಂದಲ್ಲಿ ತೊಡಗಿರುವ ಹಣದ ಪ್ರಮಾಣವೆಷ್ಟು? ಭಾರತ ಒಟ್ಟು 10 ಹೊಸ ಅಣುಸ್ಥಾವರಗಳನ್ನು ನಿರ್ಮಾಣ ಮಾಡಬೇಕು. ಒಂದೊಂದರ ನಿರ್ಮಾಣಕ್ಕೂ 4 ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ಇವುಗಳಲ್ಲಿ ಸಿಂಹಪಾಲು ಅಮೆರಿಕದ ಕಂಪನಿಗಳ ಪಾಲಾಗಲಿದ್ದು ಕನಿಷ್ಠ 20 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ಅಲ್ಲಿನ ಕಂಪನಿಗಳಿಗೆ ದೊರೆಯುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಭಾರತದ ಒಟ್ಟಾರೆ ಅಗತ್ಯದ ಶೇ. 4ರಷ್ಟು ವಿದ್ಯುತ್ ಮಾತ್ರ ಅಣುಶಕ್ತಿಯಿಂದ ದೊರೆಯುತ್ತದೆ. ಹಾಗಿರುವಾಗ ಇಂತಹ ಒಪ್ಪಂದಕ್ಕಾಗಿ ಸರ್ಕಾರವನ್ನೇ ಒತ್ತೆಯಾಗಿಡಲು ಹೊರಟಿದ್ದೇಕೆ? ಅದರ ಬೆನ್ನಲ್ಲೇ ಸಂಸತ್ತಿನಲ್ಲಿ ನಡೆದಿದ್ದೇನು? ಓಟಿಗಾಗಿ ನೋಟು (ಕ್ಯಾಶ್ ಫಾರ್ ಓಟ್) ಹಗರಣ ಯಾರ ಸರ್ಕಾರ ಉಳಿಸಿಕೊಳ್ಳುವುದಕ್ಕೆ ನಡೆಯಿತು? ಹಣ ಕೊಟ್ಟ ದಲ್ಲಾಳಿ ಅಮರ್ ಸಿಂಗ್ ಇರಬಹುದು, ಹಣವನ್ನು ಪೂರೈಸಿದವರು ಯಾರು? ಹಾಗೆ ಅನೈತಿಕ ಮಾರ್ಗದಿಂದ ಸರ್ಕಾರ ಉಳಿಸಿಕೊಳ್ಳುವುದರ ಹಿಂದೆ ಇದ್ದ ಅಂತಿಮ ಫಲಾನುಭವಿಗಳು ಯಾರು? ಒಂದು ವೇಳೆ ಸೋನಿಯಾ ಗಾಂಧಿಯವರು ಬೇಡ ಎಂದಿದ್ದರೆ ಆ ಒಪ್ಪಂದ ಮಾಡಿಕೊಳ್ಳಲು ಮನಮೋಹನ್ ಸಿಂಗ್ ಮುಂದಾಗುತ್ತಿದ್ದರೆ? ಇನ್ನು ಕಳೆದ ಚಳಿಗಾಲದ ಅಧಿವೇಶನದ ವೇಳೆ 2ಜಿ ಲೂಟಿಗೆ ಸಂಬಂಧಿಸಿದರೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯ ಮಾಡಿದಾಗ ಸಂಸತ್ತಿನ ಕಲಾಪವನ್ನೇ ಬಲಿಕೊಟ್ಟು ಬೇಡಿಕೆಯನ್ನು ತಿರಸ್ಕರಿಸಲು ಕಾರಣವೇನಿತ್ತು?
ಇಲ್ಲಿ ಇನ್ನೊಂದು ವಿಚಾರವನ್ನು ಹೇಳಬೇಕು. ಅನುಮಾನಗಳಿಗೆ ಪುಷ್ಠಿಕೊಡುವಂತೆ ಅಮೆರಿಕದಲ್ಲಿರುವ ಎನ್್ಆರ್್ಐ ನಾರಾಯಣ್ ಕಟಾರಿಯಾ ಎಂಬವರು”ದಿ ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆಗೆ ಸೋನಿಯಾ ಅವರ ವಿರುದ್ಧ ಆರೋಪಗಳ ಸರಮಾಲೆ ಹೊತ್ತ ಜಾಹೀರಾತು ನೀಡಿದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷ 200 ದಶಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿತು. ಆದಾಗ್ಯೂ ಸೋನಿಯಾ ಗಾಂಧಿಯವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ನ್ಯೂಯಾರ್ಕ್ ಸುಪ್ರೀಂ ಕೋರ್ಟ್್ನ ನ್ಯಾಯಾಧೀಶರಾದ ಎಮಿಲಿ ಗುಡ್್ಮ್ಯಾನ್ ಮೊಕದ್ದಮೆಯನ್ನು ವಜಾ ಮಾಡಿದರು. ಏಕೆಂದರೆ ತನ್ನ ಮಾನನಷ್ಟವಾಗಿದೆ ಎಂದು ಪ್ರತಿಪಾದಿಸಿದ ವ್ಯಕ್ತಿಯೇ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕಾಗಲಿ, ಪಾಟಿ ಸವಾಲು ಎದುರಿಸುವುದಕ್ಕಾಗಲಿ ಮುಂದೆ ಬರಲಿಲ್ಲ! ಏಕಾಗಿ? ಒಂದು ವೇಳೆ, ಆಕೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರೆ ಯಾವ ರೀತಿ ತನ್ನ ಮಾನನಷ್ಟವಾಗಿದೆ ಎಂಬುದನ್ನು ವಿವರಿಸಬೇಕಾಗುತ್ತಿತ್ತು. ಆರೋಪಗಳು ನಿರಾಧಾರ ಎಂದು ಸಾಬೀತು ಮಾಡಬೇಕಾದ ಜವಾಬ್ದಾರಿ ಆಕೆಯದ್ದಾಗುತ್ತಿತ್ತು. ಈ ಘಟನೆ ಎಲ್ಲ ಅನುಮಾನಗಳಿಗೂ ಉತ್ತರ ರೂಪದಂತಿದೆ.
ಇಷ್ಟಾಗಿಯೂ ಎಲ್ಲರನ್ನೂ ಪ್ರಶ್ನಿಸುವ ಮಾಧ್ಯಮಗಳೂ ಇಂದು ಸೋನಿಯಾ ಗಾಂಧಿಯವರನ್ನಾಗಲಿ, ಅವರ ಪುತ್ರ ರಾಹುಲ್ ಗಾಂಧಿಯವರನ್ನಾಗಲಿ ಒಂದು ಕ್ಷಣಕ್ಕೂ ಪ್ರಶ್ನಿಸುವುದಿಲ್ಲ. ಅವರಿಂದ ಹೊಣೆಗಾರಿಕೆ ಕೇಳುವುದಿಲ್ಲ. ಇದು ನಿಜಕ್ಕೂ ಅಶ್ಚರ್ಯ ಹುಟ್ಟಿಸುತ್ತದೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸುವಾಗ”ಫೋರ್ಬ್ಸ್್’ ಪತ್ರಿಕೆ ಸೋನಿಯಾ ಗಾಂಧಿಯವರು ರಾಜಕೀಯ, ಅರ್ಥವ್ಯವಸ್ಥೆ ಜತೆಗೆ ಮಾಧ್ಯಮಗಳ ಮೇಲೆ ಹೊಂದಿರುವ ಹಿಡಿತವನ್ನೂ ಗಣನೆಗೆ ತೆಗೆದುಕೊಳ್ಳುವುದೊಳಿತು!! ಇವತ್ತೇನಾದರೂ ಯಾರಾದರೂ ಸೋನಿಯಾ ಗಾಂಧಿಯವರನ್ನು, ಐದಾರು ವರ್ಷಗಳಲ್ಲಿ ಬಹುಕೋಟಿ ಒಡೆಯನಾಗಿರುವ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಪ್ರಶ್ನಿಸುತ್ತಿದ್ದರೆ, ಮೈಚಳಿ ಹುಟ್ಟಿಸುತ್ತಿದ್ದರೆ ಅದು ಡಾ. ಸುಬ್ರಹ್ಮಣ್ಯಂ ಸ್ವಾಮಿ ಮಾತ್ರ.
ಇದೇನೇ ಇರಲಿ, ಏಕೆ ಇವತ್ತು ಸೋನಿಯಾ ಗಾಂಧಿಯವರನ್ನು ನೇರವಾಗಿ ಪ್ರಶ್ನಿಸಬೇಕಾಗಿದೆಯೆಂದರೆ ಅವರ ಒಂದೊಂದು ನಡೆಗಳೂ ಅನುಮಾನಾಸ್ಪದವಾಗಿ ಪರಿಣಮಿಸುತ್ತಿವೆ, ಒಂದೊಂದು ಹಗರಣಗಳು ಸಂಭವಿಸಿದಾಗಲೂ ಸಂಶಯಾಸ್ಪದ ಮೌನಕ್ಕೆ ಶರಣಾಗುತ್ತಾರೆ. ಹೀಗೇಕೆ? ಇದರಿಂದ, ಬಹಳ ಐಶಾರಾಮಿ ಜೀವನ ನಡೆಸುವ ಸೋನಿಯಾ ಗಾಂಧಿಯವರೂ ಹಗರಣಗಳ ಫಲಾನುಭವಿಯಾಗಿರಬಹುದೆಂಬ ಶಂಕೆ ಮೂಡುವುದಿಲ್ಲವೆ?
ಕೃಪೆ: ಪ್ರತಾಪ ಸಿಂಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ