ನನ್ನ ಬ್ಲಾಗ್ ಪಟ್ಟಿ

ಶನಿವಾರ, ಅಕ್ಟೋಬರ್ 22, 2011

ಇವರ ವರದಿಗಳು ಸರ್ಕಾರಕ್ಕೆ ಮಾತ್ರ ‘ವಿನೋದ’ ತರುತ್ತಿಲ್ಲ!

ನಮ್ಮ ಕೇಂದ್ರ ಸರ್ಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದಾರೆ, ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದಾರೆ, ಹಾಲಿ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಈಗ ಕಾಡಲು ಆರಂಭಿಸಿದೆ, ಒಂದು ವೇಳೆ ಚಿದಂಬರಂ ಅವರು ರಾಜಿನಾಮೆ ನೀಡಬೇಕಾಗಿ ಬಂದರೆ ಕುತ್ತು ಕೊನೆಗೆ ಬಂದು ನಿಲ್ಲುವುದು ತನ್ನ ಕುರ್ಚಿಯ ಬಳಿಯೇ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಯಭೀತಿಗೊಂಡಿದ್ದಾರೆ, ಅವರ ಪ್ರಾಮಾಣಿಕತೆ, ಕಾರ್ಯದಕ್ಷತೆ ಬಗ್ಗೆ ಜನರ ಮನದಲ್ಲೂ ಅನುಮಾನಗಳು ಮನೆಮಾಡಿವೆ, ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳು ತಿಹಾರ್ ಜೈಲು ಸೇರಿದ್ದಾರೆ, ಎ. ರಾಜ, ಕನಿಮೋಳಿ, ಕಲ್ಮಾಡಿ ಜೈಲೇ ಶಾಶ್ವತವಾಗಿ ಬಿಡುತ್ತದೇನೋ ಎಂಬ ಆತಂಕದಲ್ಲಿದ್ದಾರೆ, ಮಾಜಿ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಮ್ಮನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಮಾಡುವಂತಾಗಿ ಬಿಟ್ಟಿದೆ, ತಮ್ಮ ಇಲಾಖೆಯಲ್ಲಿ ನುಂಗಿರುವುದನ್ನು ಯಾವ ಕ್ಷಣಕ್ಕೂ ಹೊರಹಾಕಬಹುದು ಎಂದು ಅಧಿಕಾರಶಾಹಿಗಳು, ಮಂತ್ರಿಗಳು ನಡುಗಲು ಆರಂಭಿಸಿದ್ದಾರೆ. ಈ ಮಧ್ಯೆ 2011, ಜೂನ್ 29ರಂದು ತಮ್ಮ ನಿವಾಸದಲ್ಲಿ ಐದು ಪ್ರಮುಖ ಮಾಧ್ಯಮ ಸಂಸ್ಥೆಗಳ ಸಂಪಾದಕರ ಜತೆ ನಡೆಸಿದ ಸಂವಾದ/ಗೋಷ್ಠಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು, ‘ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಹದ್ದುಮೀರಿ ನಡೆಯುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಕಾರ್ಯವ್ಯಾಪ್ತಿ ದಾಟಿ ಸರ್ಕಾರದ ನೀತಿನಿರೂಪಣೆಗಳ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿಎಜಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಹಾಗಾದರೆ…
ರಾಷ್ಟ್ರದ ಪ್ರಧಾನಿ ಕೋಪತಾಪ ವ್ಯಕ್ತಪಡಿಸುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿರುವ, ಸರ್ಕಾರದ ಮೈಯಲ್ಲಿ ಬೆವರೂರುವಂತೆ ಮಾಡಿರುವ, ಭ್ರಷ್ಟರಿಗೆ ಇಷ್ಟೆಲ್ಲಾ ತ್ರಾಸ ಕೊಡುತ್ತಿರುವ ವ್ಯಕ್ತಿಯಾದರೂ ಯಾರು?
ವಿನೋದ್ ರಾಯ್!
2008, ಜನವರಿ 7ರಂದು ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿನೋದ್ ರಾಯ್ ಮಾಡಿದ್ದೇನು ಗೊತ್ತೆ?
1. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ(NHRM)ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದಿದ್ದೇವೆ ಎಂಬ ಕೇಂದ್ರ ಸರ್ಕಾರದ ಪ್ರತಿಪಾದನೆ ಎಂತಹ ಹಸಿ ಸುಳ್ಳು ಎಂಬ ವರದಿಯನ್ನು ಸಿಎಜಿ 2009ರಲ್ಲಿ ನೀಡಿತು. ವಾಸ್ತವದಲ್ಲಿ ದೇಶದ 71 ಪರ್ಸೆಂಟ್ ಜಿಲ್ಲೆಯಲ್ಲಿ ಈ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂಬ ಅಂಶವನ್ನು ಅದು ಹೊರಹಾಕಿತು!
2. ಕಾಮನ್ವೆಲ್ತ್ ಹಗರಣವನ್ನು ಬೆಳಕಿಗೆ ತಂದಿದ್ದೇ 2009ರ ಸಿಎಜಿ ವರದಿ! ಎಷ್ಟೊಂದು ಅವ್ಯವಹಾರಗಳು ನಡೆದಿವೆ ಹಾಗೂ ನಡೆಯುತ್ತಿವೆ ಎಂಬುದನ್ನು ರಾಷ್ಟ್ರದ ಮುಂದಿಟ್ಟ ಸಿಎಜಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಜೈಲು ಸೇರಲು ಭಾಷ್ಯ ಬರೆಯಿತು.
3. 2009ರಲ್ಲಿ ಅಡ್ಮಿರಲ್ ಗೋರ್ಶ್ಕೋವ್ (ರಷ್ಯಾದಿಂದ ಹಳೇ ಹಡಗು ಖರೀದಿ) ಹಗರಣ ಬಹಿರಂಗ.
4. 2009ರಲ್ಲಿ ಶಸ್ತ್ರಾಸ್ತ್ರ ಖರೀದಿ ಹಗರಣ ಹಾಗೂ ಸರ್ಕಾರದ ಬೊಕ್ಕಸಕ್ಕೆ 9 ಸಾವಿರ ಕೋಟಿ ರೂ. ನಷ್ಟವುಂಟುಮಾಡಿದ ಅವ್ಯವಹಾರ ಬೆಳಕಿಗೆ.
5. 2011ರಲ್ಲಿ ಇಸ್ರೇಲ್್ನಿಂದ ನಮ್ಮ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’(RAW)ಮಾಡಿದ ಚಾಲಕ ರಹಿತ ವಿಮಾನ ಖರೀದಿಯಲ್ಲಿ ಎಸಗಲಾದ 450 ಕೋಟಿ ಅವ್ಯವಹಾರ ಹೊರಕ್ಕೆ.
6. 2ಜಿ ಸ್ಪೆಕ್ಟ್ರಂ ಹಗರಣ! 2003ರಿಂದ 6 ವರ್ಷಗಳವರೆಗಿನ ದಾಖಲೆ, ಲೆಕ್ಕ ಪತ್ರಗಳನ್ನು ಪರಿಶೀಲಿಸಿ 2ಜಿ ಹಗರಣವನ್ನು ರಾಷ್ಟ್ರದ ಮುಂದೆ ಖುಲ್ಲಂಖುಲ್ಲಾ ಮಾಡಿದ್ದೇ ಸಿಎಜಿ. ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ವರದಿ ನೀಡಿದ ಪರಿಣಾಮವೇ ನಮ್ಮ ಮಂತ್ರಿಮಹೋದಯರಿಂದು ಜೈಲು ಸೇರಿದ್ದಾರೆ.
ಇದೇನು ಸಾಮಾನ್ಯ ಕೆಲಸವೇ? ಅಂತಹ ಅಣ್ಣಾ ಹಜಾರೆಯವರ ಚಾರಿತ್ರ್ಯ ವಧೆ ಮಾಡಲು ಮುಂದಾದ, ಭ್ರಷ್ಟರೆಂದು ಕರೆದ, ಬಾಬಾ ರಾಮ್್ದೇವ್ ಬೆಂಬಲಿಗರ ಮೇಲೆ ಲಾಟಿ ಪ್ರಹಾರ ಮಾಡಿ ಒಬ್ಬರ ಜೀವವನ್ನೇ ತೆಗೆದ ಕಾಂಗ್ರೆಸ್ ಪಕ್ಷ ವಿನೋದ್ ರಾಯ್ ಅವರನ್ನು ಸುಮ್ಮನೆ ಬಿಟ್ಟೀತೆ?
ಮೊದಲಿಗೆ 1.76 ಲಕ್ಷ ಕೋಟಿ ರೂ. ನಷ್ಟವೆಂಬುದು ತುಂಬಾ ಉತ್ಪ್ರೇಕ್ಷೆಯ ಅಂದಾಜು ಎಂದು ಕಾಂಗ್ರೆಸ್ ಟೀಕಿಸಿತು. ಆದರೆ ವಿನೋದ್ ರಾಯ್ ಜಗ್ಗಲಿಲ್ಲ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ಕಾಂಗ್ರೆಸ್ ರಚಿಸಿತಾದರೂ ತನ್ನದೇ ಸಂಸದ ಪಿ.ಸಿ. ಚಾಕೋ ಅವರನ್ನೇ ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಜೆಪಿಸಿ ವಿನೋದ್ ರಾಯ್ ಅವರನ್ನೇ ವಿಚಾರಣೆಗೆ ಬರುವಂತೆ ಸೂಚಿಸಿದೆ! ಹಾಗಂತ ವಿನೋದ್ ರಾಯ್ ಬಗ್ಗುವವರಲ್ಲ. ನಾನು ಯಾರ ಮುಂದೆ ಬೇಕಾದರೂ ದಾಖಲೆ ಸಮೇತ ಅಂಕಿ-ಅಂಶ ನೀಡುತ್ತೇನೆ ಎಂದಿದ್ದಾರೆ. ಮೊನ್ನೆ ಮಂಗಳವಾರ ಹೈದರಾಬಾದ್್ನ ಪೊಲೀಸ್ ಅಕಾಡೆಮಿಯಲ್ಲಿ ನಡೆದ 26ನೇ ಸರ್ದಾರ್ ವಲ್ಲಭಭಾಯಿ ಜ್ಞಾಪನಾ ಭಾಷಣ ಮಾಡಿದ ವಿನೋದ್ ರಾಯ್, ‘ಈ ಸರ್ಕಾರದ ಸಮಗ್ರತೆ ತಳಕ್ಕಿಳಿದಿದೆ, ಆಡಳಿತ ಪಾತಾಳ ಸೇರಿದೆ, ಸರ್ಕಾರಿ ಅಧಿಕಾರಿಗಳ ಅತ್ಮಸ್ಥೈರ್ಯ ಉಡುಗಿಹೋಗಿದೆ. ಹಾಗಾಗಿ ನಿರ್ಣಯ ಕೈಗೊಳ್ಳುವಿಕೆಯೇ ಬಲಿಪಶುವಾಗಿ ಬಿಟ್ಟಿದೆ’ ಎನ್ನುವ ಮೂಲಕ ಸರ್ಕಾರದ ಜತೆ ಸಂಘರ್ಷಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದ್ದಾರೆ.
ಅವರು ನಮಗೆ ಆಪ್ತವಾಗುತ್ತಿರುವುದೇ ಇಂತಹ ಎದೆಗಾರಿಕೆ ತೋರುತ್ತಿರುವುದರಿಂದ!
ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ, ಲೋಕಾಯುಕ್ತ, ಮುಂದೆ ಲೋಕಪಾಲ ಮುಂತಾದ ಬಲಿಷ್ಠ ಇನ್್ಸ್ಟಿಟ್ಯೂಷನ್್ಗಳ ರಚನೆ ಜತೆಗೆ ಚುನಾವಣಾ ಆಯೋಗ ಬಲಗೊಳಿಸಿದ ಟಿ.ಎನ್. ಶೇಷನ್, ಖ್ಯಾತ ಸಿವಿಸಿ (ಮುಖ್ಯ ಜಾರಿ ಆಯುಕ್ತ) ಎನ್. ವಿಠ್ಠಲ್ ಹಾಗೂ ಹಾಲಿ ಸಿಎಜಿ ವಿನೋದ್ ರಾಯ್ ಅವರಂಥ ಕ್ರುಸೇಡರ್್ಗಳೂ ಪ್ರಮುಖವಾಗುತ್ತಾರೆ. ನೀವೇ ಯೋಚನೆ ಮಾಡಿ, ಕಾಮನ್ವೆಲ್ತ್ ಹಾಗೂ 2ಜಿ ಬಗ್ಗೆ ಸಿಎಜಿ ಧೈರ್ಯಶಾಲಿ ವರದಿ ನೀಡದೇ ಹೋಗಿದ್ದರೆ ರಾಷ್ಟ್ರಾದ್ಯಂತ ಭ್ರಷ್ಟಾಚಾರ ವಿರೋಧಿ ಭಾವನೆ ವ್ಯಾಪಿಸಲು, ಅಣ್ಣಾ ಹಜಾರೆ ಜನರ ಧ್ವನಿಯಾಗಿ ಹೊರಹೊಮ್ಮಲು ಸಾಧ್ಯವಿತ್ತೇ? ಅವರ ಒಂದು ವರದಿ ಕಲ್ಮಾಡಿಯನ್ನೂ ಜೈಲಿಗೆ ದಬ್ಬಿತು, ಎ. ರಾಜ ಮಂತ್ರಿ ಪದವಿ ಕಳೆದುಕೊಳ್ಳುವ ಜತೆಗೆ ಕೃಷ್ಣನ ಜನ್ಮಸ್ಥಳವನ್ನು ಸೇರುವಂತೆ ಮಾಡಿತು. ಉದ್ಯಮ ಕ್ಷೇತ್ರದ ಮುಖ್ಯಸ್ಥರನ್ನೂ ಕಂಬಿ ಎಣಿಸುವಂತೆ ಮಾಡುವ ಮೂಲಕ ದುಡ್ಡಿದ್ದರೆ ಏನನ್ನೂ ಮಾಡಬಹುದು, ಮಾಡಿ ಜಯಿಸಬಹುದು ಎಂಬ ನಂಬುಗೆಯನ್ನು ಸುಳ್ಳಾಗಿಸಿತು.
ಅವರ ಬಗ್ಗೆ ಗೌರವ ಮೂಡುವುದೇ, ನಮ್ಮ ಮನಸ್ಸು ಅವರಿಗೊಂದು ಸಲಾಮು ಹಾಕುವುದೇ ಈ ಕಾರಣಕ್ಕೆ!
1972ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ವಿನೋದ್ ರಾಯ್ ವೃತ್ತಿಯಲ್ಲಿ, ಜವಾಬ್ದಾರಿಯಲ್ಲೂ ಕುಶಲಮತಿ ಎನಿಸಿಕೊಂಡವರು. ಅದು 2006. ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದರು. ಮುಂಬರುವ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದ್ದರು. ಅಚಾನಕ್ಕಾಗಿ ಪ್ಯಾರಾವೊಂದು ಕಂಡಿತು. ಅದರಲ್ಲಿ ‘ಇಂಡಿಯಾ ಇನ್್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ’ ಎಂಬ ಕಂಪನಿ ಆರಂಭ ಮಾಡುವ ವಾಗ್ದಾನವಿತ್ತು. ಅಣಕವೆಂದರೆ ಚಿದಂಬರಂ ಹಿಂದಿನ ಬಾರಿಯ ಬಜೆಟ್ ಮಂಡನೆ ವೇಳೆಯೇ ಅಂಥದ್ದೊಂದು ಕಂಪನಿ ಆರಂಭ ಮಾಡುವುದಾಗಿ ಭಾಷಣದಲ್ಲಿ ಹೇಳಿದ್ದರು! ಅದು ನೆನಪಾಗಿ ಕೋಪೋದ್ರಿಕ್ತರಾದ ಅವರು, ‘ನಿಮಗೆ ಒಂದು ಕಂಪನಿ ಆರಂಭಿಸಲು ಎಷ್ಟು ಕಾಲ ಬೇಕು?’ ಎಂದು ರೇಗಿದರು. ಮಾಮೂಲಿ ಕಾರಣ. ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಹಣಕಾಸು ಸೇವಾ ಇಲಾಖೆ ನಡುವಿನ ಅಲೆದಾಟದಲ್ಲಿ ಕಡತ ಕೊಳೆಯುತ್ತಿತ್ತು. ಆತಂಕಕ್ಕೊಳಗಾದ ಅಧಿಕಾರಿಗಳು ಬೆಚ್ಚಿ ನಿಂತಿದ್ದಾಗ, ಆ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ಹೇಳಿದರು-’ಈ ವಾರಾಂತ್ಯದೊಳಗೆ…’! ಹಾಗೆ ಹೇಳಿದ ಅವರು ಕಚೇರಿಗೆ ವಾಪಸ್ಸಾಗಿ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನು ಒಳಕರೆದು ಸಂಜೆಯೊಳಗೆ ಕಂಪನಿ ದಾಖಲಾಗಬೇಕು ಎಂದರು. ‘Next to impossible’ಎಂಬ ಉತ್ತರ ಬಂತು! ‘ನಿಮ್ಮ ಸಹೋದ್ಯೋಗಿಗಳು ಹೇಳುತ್ತಿದ್ದರು- ನೀವೊಬ್ಬ ಬಹಳ ಒಳ್ಳೆಯ, ದಕ್ಷ ಅಧಿಕಾರಿಯಂತೆ ನಮ್ಮ ಇಲಾಖೆಯ ಪ್ರತಿಷ್ಠೆ ಪಣಕ್ಕಿದೆ. ಈ ಕೆಲಸ ಆಗಲೇಬೇಕು’ ಎಂದು ತಲೆಸವರಿದರು ವಿನೋದ್ ರಾಯ್. ಇಡೀ ಆಡಳಿತಯಂತ್ರ ಕಾರ್ಯಕ್ಕಿಳಿಯಿತು, ವಿದ್ಯುತ್ ಕಡಿತದ ನಡುವೆ ಜನರೇಟರ್ ತಂದು ಹಗಲೂ ರಾತ್ರಿ ಕೆಲಸ ಮಾಡಿದರು. ಮರುದಿನ ಕಂಪನಿ ರಿಜಿಸ್ಟರ್ ಆಗಿ ಚಿದಂಬರಂ ಮೇಜಿನ ಮೇಲೆ ದಾಖಲೆ ಇತ್ತು!
ವಿನೋದ್್ರಾಯ್ ಹಣಕಾಸು ಕಾರ್ಯದರ್ಶಿಯಾಗಿದ್ದಾಗಲೂ ಅಷ್ಟೇ. ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸಾಧನೆ ಆಧಾರಿತ ಸವಲತ್ತು, ಉತ್ತೇಜನೆ ನೀಡಬೇಕೆಂಬ ಪ್ರಸ್ತಾಪವಿಟ್ಟಿದ್ದರು. ಅದಕ್ಕೆ ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದಾಗಲೂ ಬಿಡಿ ಬಿಡಿಯಾಗಿ ವಿವರಿಸಿ ಸಚಿವರ ಒಪ್ಪಿಗೆ ಪಡೆದರು. ಅವರೆಂದೂ ನ್ಯಾಯದ ಪರ. ಕುರ್ಚಿ ಬಿಸಿ ಮಾಡಿ ಸಂಬಳ ಗಿಟ್ಟಿಸಿಕೊಳ್ಳುವುದನ್ನು ಎಂದೂ ಸಹಿಸಿದವರಲ್ಲ. ಇವತ್ತು ಸಿಎಜಿಯಾಗಿ ನೀಡಿರುವ ವರದಿ ತಾವು ಯಾರ ಕೆಳಗೆ ಹಣಕಾಸು ಕಾಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರೋ ಅದೇ ಚಿದಂಬರಂ ಕುತ್ತಿಗೆಯನ್ನು ಸುತ್ತಿಕೊಂಡಿದೆ. ಇದು ವಿನೋದ್ ರಾಯ್ ಅವರಲ್ಲಿ ಇರುವುದು ವ್ಯಕ್ತಿನಿಷ್ಠೆಯಲ್ಲ, ವೃತ್ತಿನಿಷ್ಠೆ ಎಂಬುದನ್ನು ತೋರಿಸುತ್ತದೆ. ಇಂಥವರಿದ್ದರೆ ವ್ಯವಸ್ಥೆಯ ಬಗ್ಗೆಯೂ ಜನರಿಗೆ ಅಲ್ಪಸ್ವಲ್ಪ ವಿಶ್ವಾಸ ಉಳಿಯುತ್ತದೆ, ಹೆಚ್ಚಾಗುತ್ತದೆ.
May his tribe increase!
ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ