ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ನವೆಂಬರ್ 8, 2011

ಸೈಟು ಪ್ರಶ್ನಿಸುವವರ ಕಣ್ಣಿಗೆ ಸಂಘದ ಸಾಮಾಜಿಕ ಬದ್ಧತೆಯೇಕೆ ಕಾಣುವುದಿಲ್ಲ?

1. ಜನಸೇವಾ ವಿದ್ಯಾಕೇಂದ್ರ 10 ಎಕರೆ
2. ರಾಷ್ಟ್ರೋತ್ಥಾನ ಪರಿಷತ್ 906 ಚದುರ ಮೀಟರ್
3. ಸಂಸ್ಕಾರ ಭಾರತಿ 2000 ಚದರಡಿ
4. ಹಿಂದು ಜಾಗರಣ ವೇದಿಕೆ 2000 ಚದರಡಿ
5. ಮಹಿಳಾ ದಕ್ಷತಾ ಸಮಿತಿ 396 ಚದರ ಮೀಟರ್
6. ಅನಂತ ಶಿಶು ನಿವಾಸ 3585 ಚದರ ಮೀಟರ್
ಇಂಡಿಯಾ ಟುಡೆ ಸಮೂಹಕ್ಕೆ ಸೇರಿದ ‘ಮೇಯ್ಲ್ ಟುಡೆ’ ಎಂಬ ದೈನಿಕ ನವೆಂಬರ್ 1ರಂದು “How Sangh Parivar benefitted from Yeddyurappa’s land largesse’ ಎಂಬ ಶೀರ್ಷಿಕೆಯಡಿ ಮೇಲಿನ ಅಂಕಿ-ಅಂಶಗಳನ್ನೊಳಗೊಂಡ ವರದಿಯೊಂದನ್ನು ಪ್ರಕಟಿಸಿದೆ. ಎಂದಿನಂತೆ ತಥಾಕಥಿತ ವಿರೋಧಿಗಳು, ಟೀಕಾಕಾರರು ಸಂಘದ ಬಗ್ಗೆ ತಮ್ಮ ಮನಸ್ಸಿನೊಳಗಿರುವ ಕೊಳಕನ್ನು ಮತ್ತೆ ಹೊರಹಾಕುತ್ತಿದ್ದಾರೆ. ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ ಕಳೆದ 86 ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿರುವ, ಜನಸೇವೆ ಮಾಡುತ್ತಿರುವ, ರಾಷ್ಟ್ರಕಟ್ಟುವ ಕೆಲಸದಲ್ಲಿ ನಿರತವಾಗಿರುವ, ನಮ್ಮ ಮುಂದಿನ ತಲೆಮಾರಿಗೆ ಈ ದೇಶದ ಭವ್ಯಪರಂಪರೆಯನ್ನು ಪರಿಚಯಿಸುತ್ತಿರುವ, ಕ್ರಾಂತಿಕಾರಿಗಳ ತ್ಯಾಗ-ಬಲಿದಾನದ ನೆನಪು ಮಾಡಿಕೊಡುತ್ತಿರುವ ರಾಷ್ಟ್ರವಾದಿ ಸಂಘಟನೆಯೊಂದನ್ನು ಹೀಗೆ ವಿನಾಕಾರಣ ಕಟೆಕಟೆಗೆ ತಂದು ನಿಲ್ಲಿಸಲು, ಚಾರಿತ್ರ್ಯವಧೆ ಮಾಡಲು ಪ್ರಯತ್ನಿಸುತ್ತಾರಲ್ಲಾ ಇವರು ಹೊಟ್ಟೆಗೆ ತಿನ್ನುವುದಾದರೂ ಏನನ್ನು? ಅದೇನು “Mail Today’ಯೋ ಅಥವಾ “Malign Today’ಯೋ?
ಇಷ್ಟಕ್ಕೂ ಅದರ ವರದಿಯಲ್ಲಿ ಇರುವ ಹುರುಳಾದರೂ ಏನು?
ಬೆಂಗಳೂರು ಹೊರವಲಯದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ಕೇಂದ್ರಕ್ಕೆ 10 ಎಕರೆ ಭೂಮಿಯನ್ನು ನಿಜಕ್ಕೂ ಕೊಡಲಾಗಿದೆಯೇ? ಮೇಯ್ಲ್ ಟುಡೆ ಬರೆದಂತೆ ಅದು 15 ಕೋಟಿ ಮೌಲ್ಯದ್ದೇ? ಚನ್ನೇನಹಳ್ಳಿಯಲ್ಲಿ ಜನಸೇವಾ ವಿದ್ಯಾಕೇಂದ್ರವಿರುವುದು ನಿಜ. ಅಲ್ಲಿ 5ರಿಂದ 12ನೇ ತರಗತಿವರೆಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಅದೊಂದು ವಸತಿ ವಿದ್ಯಾಕೇಂದ್ರ. ಅವರಿಗೆ ಮೂಲ ಸೌಕರ್ಯಗಳಿದ್ದರೂ ಸೂಕ್ತ ಆಟದ ಮೈದಾನವಿರಲಿಲ್ಲ. ಮಕ್ಕಳಿಗೆ ಶಾರೀರಿಕ ಶಿಕ್ಷಣ ಕೂಡ ಬೌದ್ದಿಕ ಶಿಕ್ಷಣದಷ್ಟೇ ಅಗತ್ಯ ಎಂದು ಮನಗಂಡ ಸಂಘದ ಹಿರಿಯರು ಹಾಗೂ ಆಡಳಿತ ಮಂಡಳಿ ಧರ್ಮಸಿಂಗ್, ಕುಮಾರಸ್ವಾಮಿ ಆಡಳಿತಾವಧಿಯಲ್ಲೇ ಜಾಗಕ್ಕಾಗಿ ಮನವಿ ಮಾಡಿದ್ದರು. ವಿದ್ಯಾಕೇಂದ್ರದ ಪಕ್ಕದಲ್ಲೇ ಇರುವ 13 ಎಕರೆ ಗೋಮಾಳದಲ್ಲಿ ಒಂದು ಭಾಗ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪನವರ ಸರ್ಕಾರ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿಯ ಪರಾಮರ್ಶೆ ನಡೆಸಿ 6 ಎಕರೆ ನೀಡಲು ಮುಂದಾಯಿತು. ಆದರೆ ಕೆಲವು ರಾಜಕೀಯ ಪ್ರೇರಿತ ವಿರೋಧಗಳಿಂದಾಗಿ ಬೇಡಿಕೆ ವಿವಾದಕ್ಕೆ ತಿರುಗಿ ಈಗ ಹೈಕೋರ್ಟ್್ನಲ್ಲಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ಒಂದಿಂಚೂ ಭೂಮಿಯನ್ನು ಬಳಸುವಂತಿಲ್ಲ. ಹಾಗಿರುವಾಗ ಈ 10 ಎಕರೆ, 15 ಕೋಟಿ ಮಾರುಕಟ್ಟೆ ಬೆಲೆ, ಸಂಘಕ್ಕೆ ಕಳ್ಳೇಪುರಿ ಬೆಲೆಯಲ್ಲಿ ಮಾರಾಟ ಮಾಡಿದ ಪ್ರಶ್ನೆಗಳು ಎಲ್ಲಿಂದ ಬಂದವು? ಸಂಘವನ್ನು “Malign’ ಮಾಡುವುದೇ “Mail Today’ಯ ಉದ್ದೇಶವಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುವುದಿಲ್ಲವೆ? ಈ ರೀತಿ ಚಾರಿತ್ರ್ಯ ವಧೆ ಮಾಡುವ ಉದ್ದೇಶಕ್ಕಾಗಿ ವರದಿ, ಅಂಕಿ-ಅಂಶ ಸೃಷ್ಟಿಸುವುದು ಯಾವ ಮಟ್ಟದ ಪತ್ರಿಕೋದ್ಯಮ? ಒಂದು ವೇಳೆ ಸರ್ಕಾರ ಆರೋ, ಹತ್ತೋ ಎಕರೆ ಭೂಮಿಯನ್ನು ಜನಸೇವಾ ವಿದ್ಯಾಕೇಂದ್ರಕ್ಕೆ ಕೊಟ್ಟುಬಿಟ್ಟಿತ್ತು ಎಂದರೂ ಅದರಲ್ಲಿ ತಪ್ಪೇನಿದೆ? ಜನಸೇವಾ ವಿದ್ಯಾಕೇಂದ್ರ ಮಾಡುತ್ತಿರುವುದು, ಅದರಲ್ಲಿ ನಡೆಯುತ್ತಿರುವುದಾದರೂ ಏನು? 1972ರಲ್ಲಿ ಸ್ಥಾಪನೆಯಾದ ಜನಸೇವಾ ವಿದ್ಯಾಕೇಂದ್ರ ಒಂದು ವಿಶಿಷ್ಟ ಶೈಕ್ಷಣಿಕ ಸಂಸ್ಥೆ. ದುಡ್ಡಿದ್ದವರಿಗಷ್ಟೇ ಸೀಟು ಕೊಡುವ, ಶಾಲೆ-ಕಾಲೇಜುಗಳನ್ನೇ ಕಾಮಧೇನುವಿನಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲೂ ಜನಸೇವಾ ವಿದ್ಯಾಕೇಂದ್ರ ಯಾವುದೋ ಒಂದು ಭಾಗ, ಸ್ಥಳಕ್ಕೆ ಸೀಮಿತವಾಗದೆ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಗಳಿಗೂ ಆದ್ಯತೆ, ಪ್ರವೇಶಾತಿ ನೀಡಿ ಆ ವಿದ್ಯಾರ್ಥಿಗಳ ಮೂಲಕ ಆಯಾ ಊರಿನ ಸಂಪರ್ಕ ದೊರೆಯಬೇಕು, ಅಲ್ಲಿ ಜಾಗೃತಿ, ಜನಪರ ಕಾರ್ಯ ಆರಂಭ ಮಾಡಬೇಕು ಎಂಬ ಘನ ಉದ್ದೇಶದಿಂದ ಮುನ್ನಡೆಯುತ್ತಿದೆ. ಅತ್ಯುತ್ತಮ ಶಿಕ್ಷಣ ನೀಡುವ ಈ ಸಂಸ್ಥೆ ಡೊನೇಷನ್ ಪಡೆಯುವುದಿಲ್ಲ. ವರ್ಷಕ್ಕೆ 35 ಸಾವಿರ ರು. ಕಟ್ಟಿದರೆ ಶುಲ್ಕ, ಯೂನಿಫಾರ್ಮ್, ಊಟ-ತಿಂಡಿ, ಪಠ್ಯ ಎಲ್ಲವನ್ನೂ ನೀಡುತ್ತದೆ. ಅಲ್ಲದೆ ಪ್ರತಿ ವಿದ್ಯಾರ್ಥಿಯ ಖಾತೆಗೆ 5 ಸಾವಿರ ರು. ಜಮಾವಣೆ ಮಾಡಿ, ಆತನ ವೈಯಕ್ತಿಕ ಖರ್ಚಿಗೆ ಮೀಸಲಿಡುತ್ತದೆ. ಇಲ್ಲಿ ಜಾತಿ/ಧರ್ಮದ ತಾರತಮ್ಯವಿಲ್ಲ. ನಾರಾಯಣ ಹೃದಯಾಲಯದಲ್ಲಿ ಡಾಕ್ಟರ್ ಆಗಿರುವ ನೌಶಾದ್ ಅಹ್ಮದ್ ಕಲಿತಿದ್ದು ಇಲ್ಲೇ. ಅವರು ತಮ್ಮ ಬ್ಯಾಚಿನಲ್ಲಿ ಮೊದಲಿಗರಾಗಿ ಪಾಸಾಗಿದ್ದರು. ದ.ರಾ. ಬೇಂದ್ರೆ, ನಿಸಾರ್ ಅಹ್ಮದ್, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ಸಾಹಿತಿಗಳು ಇಲ್ಲಿಗೆ ಬಂದು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿ ಹೋಗಿದ್ದಾರೆ. ಐದನೇ ತರಗತಿಯಿಂದ 10ನೇ ತರಗತಿವರೆಗೂ 547 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಿಯುಸಿಯಲ್ಲಿ 147 ವಿದ್ಯಾರ್ಥಿಗಳಿದ್ದಾರೆ. ಅಲ್ಲದೇ ಚನ್ನೇನಹಳ್ಳಿಯ 80 ಜನರಿಗೂ ಕೆಲಸ ಕೊಟ್ಟಿದ್ದಾರೆ. ಇದುವರೆಗೂ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿಕೊಂಡು ಹೊರಬಂದಿದ್ದಾರೆ. ಅಷ್ಟು ಮಾತ್ರವಲ್ಲ, ಅಲ್ಲೊಂದು ವೇದ ವಿಜ್ಞಾನ ಗುರುಕುಲವೂ ಇದೆ. ವೇದ, ಉಪನಿಷತ್ ಮುಂತಾದ ಜ್ಞಾನವಾಗ್ಮಯಕ್ಕೆ ಸಂಬಂಧಿಸಿದ ವಿಚಾರಗಳನ್ನು 53 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರಿಗೆ 6 ವರ್ಷ ಸಂಪೂರ್ಣ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇಂಥದ್ದೊಂದು ಸಂಸ್ಥೆ ವಿದ್ಯಾರ್ಥಿಗಳ ಆಟಕ್ಕೆಂದು 6 ಎಕರೆ ಜಾಗ ಕೇಳಿದರೆ ತಪ್ಪೇನು?
ಮೇಯ್ಲ್ ಟುಡೆಗೆ ಉದ್ದೇಶ ಶುದ್ಧಿಯಿರಲಿಲ್ಲ ಎಂಬುದಕ್ಕೆ ಇನ್ನೂ ಉದಾಹರಣೆಗಳು ಬೇಕೆ?
ಅದು ಆರೋಪಿಸಿದಂತೆ ಹಿಂದು ಜಾಗರಣ ವೇದಿಕೆಯಾಗಲಿ, ಸಂಸ್ಕಾರ ಭಾರತಿಯಾಗಲಿ 2 ಸಾವಿರ ಚದರಡಿ ಬಿಡಿ, ಒಂದಿಂಚೂ ಜಾಗವನ್ನು ಪಡೆದಿಲ್ಲ! ಹಾಗೆ ಪಡೆದಿದ್ದರೆ ದಾಖಲೆ ಮುಂದಿಡಲಿ ನೋಡೋಣ? ಇನ್ನು ಮಹಿಳಾ ದಕ್ಷತಾ ಸಮಿತಿಗೂ ಆರೆಸ್ಸೆಸ್್ಗೂ ಯಾವ ಸಂಬಂಧವೂ ಇಲ್ಲ. ಅದ್ಯಾವುದೋ ಹೆಸರು ಕೇಳದ ಸಂಸ್ಥೆಯನ್ನು ಆರೆಸ್ಸೆಸ್ ಜತೆ ಥಳುಕು ಹಾಕಿದ್ದೇಕೆ? ಇಲ್ಲಿ ಕಸಿವಿಸಿಯಾಗುವಂಥ, ಮುಜುಗರವನ್ನುಂಟುಮಾಡುವಂಥ ಸಂಗತಿಗಳು ಏನಾದರೂ ಇದ್ದರೆ ಅದ್ಯಾರೋ ಮಾಲತಿ, ಮಜ್ದೂರ್ ಸಂಘದ ಉಪಾಧ್ಯಕ್ಷ ಡಿ.ಕೆ. ಸದಾಶಿವ, ಶ್ರೀಧರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಕೆ.ಆರ್. ರಾಮದಾಸ್, ಶಾಸಕಿ ಮಲ್ಲಿಕಾ ಭಂಡಾರಿ ವೈಯಕ್ತಿಕ ಪ್ರಭಾವ ಬಳಸಿ ಸ್ವಂತಕ್ಕಾಗಿ ಸೈಟು ಪಡೆದುಕೊಂಡಿರುವುದು. ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರೆ ಯಾರೂ ಬೇಡವೆನ್ನುವುದಿಲ್ಲ. ಆದರೆ ಅವರ ತಪ್ಪನ್ನು ಆರೆಸ್ಸೆಸ್ ಮೇಲೆ ಹೊರಿಸುವುದೇಕೆ? ಇತ್ತ ‘ಅನಂತ ಶಿಶು ನಿವಾಸ’ ಎಂದು ಮೇಯ್ಲ್ ಟುಡೆ ಉಲ್ಲೇಖಿಸಿರುವ ಸಂಸ್ಥೆಯ ನೈಜ ಹೆಸರು ಅನಾಥ ಶಿಶು ನಿವಾಸ. ಇದರಲ್ಲಿ ತೊಡಗಿಸಿಕೊಂಡಿರುವವರಲ್ಲಿ ಹೆಚ್ಚಿನವರು ಆರೆಸ್ಸೆಸ್ಸಿಗರಾಗಿದ್ದರೂ ಸಂಘಕ್ಕೆ ನೇರ ಸಂಪರ್ಕವಿಲ್ಲ. ಅದಕ್ಕೂ ಮಿಗಿಲಾಗಿ, ಅನಾಥ ಶಿಶು ನಿವಾಸ ಹೆಸರಿಗೆ ತಕ್ಕಂತೆ ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ, ಅಸ್ಪತ್ರೆಯಲ್ಲೇ ಬಿಟ್ಟು ಹೋಗುವ ಶಿಶುಗಳನ್ನು ತಂದು ಪೋಷಣೆ ಮಾಡುತ್ತಿದೆ, ಅವುಗಳನ್ನು ಮಕ್ಕಳಿಲ್ಲದವರಿಗೆ ದತ್ತು ನೀಡುವ ಮಹತ್ಕಾರ್ಯ ಮಾಡುತ್ತಿದೆ.
ಇಂತಹ ಸಂಸ್ಥೆಗಳಿಗೆ ಅತ್ಯಗತ್ಯವಾದ ನೆಲೆಗಾಗಿ ಒಂದಿಷ್ಟು ಜಾಗ ನೀಡಿದರೆ ಅದು ಹೇಗೆ ತಪ್ಪಾಗುತ್ತದೆ? ಅಲ್ಲಾ, ಸರ್ಕಾರದಿಂದ ಜಾಗ, ನಿವೇಶನ ಪಡೆದ ಮೊದಲ ಅಥವಾ ಏಕಮಾತ್ರ ಸಂಸ್ಥೆ ಸಂಘಪರಿವಾರವೇ? ಇದುವರೆಗೂ ಯಾರಿಗೂ ನಿವೇಶನವನ್ನೇ ಕೊಟ್ಟಿಲ್ಲವೆ? ಈ ದೇಶ, ರಾಜ್ಯದ ಯಾವ ಸಂಘ, ಸಂಸ್ಥೆಗಳೂ ಸರ್ಕಾರದಿಂದ ಮುಫತ್ತಾಗಿ ಜಾಗ ಪಡೆದೇ ಇಲ್ಲವೆ? ಯಡಿಯೂರಪ್ಪನವರ ಮೂರೂವರೆ ವರ್ಷಗಳ ಆಡಳಿತದಲ್ಲಿ ಮಾತ್ರ ಈ ರೀತಿ ನಿವೇಶನ ನೀಡಲಾಗಿದೆಯೇ? ಆರೆಸ್ಸೆಸ್್ಗೆ ಭೂಮಿ ಕೊಟ್ಟಿದ್ದು ಬಿಜೆಪಿ ಸರ್ಕಾರಗಳು ಮಾತ್ರವೇ? 1972ರಲ್ಲಿ ಪ್ರತಿಷ್ಠಿತ ಜಯನಗರದಲ್ಲಿ ಯೋಗ ಕೇಂದ್ರ ಹಾಗೂ ವ್ಯಾಯಾಮ ಶಾಲೆ ಆರಂಭಿಸಲು ಆರೆಸ್ಸೆಸ್್ಗೆ ಜಾಗ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರ. 2002ರಲ್ಲಿ ಅದರ ಲೀಸ್ ಅವಧಿ ಮುಗಿದಾಗ ಮತ್ತೆ 30 ವರ್ಷಕ್ಕೆ ಲೀಸ್ ನವೀಕರಣ ಮಾಡಿಕೊಟ್ಟಿದ್ದೂ ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರವೇ ಅಲ್ಲವೆ? ಅಷ್ಟೇ ಅಲ್ಲ, ಸಂಘದ ಸಾಮಾಜಿಕ ಕಾರ್ಯವನ್ನು ಗಮನಿಸಿ 2002ರಲ್ಲಿ ಕೃಷ್ಣ ಮತ್ತೆರಡು ನಿವೇಶನಗಳನ್ನು ನೀಡಿದ್ದಾರೆ. ವೈಟ್್ಫೀಲ್ಡ್್ನ ಕುಂದನಹಳ್ಳಿ, 27 ಸಾವಿರ ಚದರಡಿ ನೀಡಿದ್ದಾರೆ! ಸದಾಶಿವ ನಗರದಲ್ಲಿ ಯಡಿಯೂರಪ್ಪನವರು ಕೃಷ್ಣ ಯಾವ ಕಾರಣಕ್ಕೆ ಕೊಟ್ಟರೋ ಅದೇ ಕಾರಣಕ್ಕೆ ಜಾಗ ಕೊಟ್ಟರೆ ಏಕೆ ತಪ್ಪಾಗಿ ಬಿಡುತ್ತದೆ? ಸಾಮಾನ್ಯವಾಗಿ ದಾನಿಗಳು ಜಾಗ ಕೊಡುತ್ತಾರೆ, ಕೆಲವೊಮ್ಮೆ ಸರ್ಕಾರ ಕೊಡಬೇಕಾಗುತ್ತದೆ. ಯಡಿಯೂರಪ್ಪನವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರಬಹುದು, ಅದರೆ ಅವರು ಮಾಡಿದ್ದೆಲ್ಲಾ ತಪ್ಪು ಎನ್ನುವುದು ಎಷ್ಟು ಸರಿ? ಕಳೆದ ಬಜೆಟ್್ನಲ್ಲಿ ಯಡಿಯೂರಪ್ಪನವರು ಮಸೀದಿ ಅಭಿವೃದ್ದಿಗಾಗಿ 50 ಕೋಟಿ ರು. ಕೊಟಿದ್ದು ಅದನ್ನೇಕೆ ಕಾಮಾಲೆ ಕಣ್ಣಿನಿಂದ ಯಾರೂ ನೋಡುವುದಿಲ್ಲ?
ಅಲ್ಲಾ, ಸಂಘದವರೇನು ಸ್ವಂತಕ್ಕಾಗಿ ಸೈಟು ಕೇಳಿದ್ದರೆ?
ಇವತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರಿರಬಹುದು. ಆದರೆ ಭಾರತೀಯ ಜನತಾ ಪಕ್ಷ ಒಂದು ಸೀಟು ಗೆಲ್ಲುವುದಕ್ಕೂ ಮೊದಲಿನಿಂದಲೂ ಆರೆಸ್ಸೆಸ್ ಸಾಮಾಜಿಕ ಕಾರ್ಯ ನಡೆಸುತ್ತಾ ಬಂದಿದೆ. ಬೆಂಗಳೂರಿನ 350 ಸ್ಲಂಗಳಲ್ಲಿ ಆರೆಸ್ಸೆಸ್ ಸಂಜೆ ಶಾಲೆ ನಡೆಸುತ್ತಿದೆ, ಇನ್್ಫಾರ್ಮಲ್ ಎಜುಕೇಷನ್ ಕೊಡುತ್ತಿದೆ, ನತದೃಷ್ಟ ಮಕ್ಕಳನ್ನು ಅನಾಥಾಲಯಕ್ಕೆ ಕರೆತರುತ್ತದೆ. ಅದು ಬಸವನಗುಡಿಯಲ್ಲಿ ನಡೆಸುತ್ತಿರುವ ‘ಅಬಲಾಶ್ರಮ’ ಅನಾಥ, ನಿರ್ಗತಿಕ ಹೆಣ್ಣು ಮಕ್ಕಳಿಗೆ ಘನತೆಯ ಬದುಕು ಕಟ್ಟಿಕೊಡುತ್ತಿದೆ, ಉಚಿತವಾಗಿ ಸಾಕಿ ಸಲುಹುತ್ತಿದೆ. ಸಂಘದ ಇಂತಹ ಸ್ತುತ್ಯರ್ಹ ಕಾರ್ಯ, ಸೇವೆಗಳೇಕೆ ವರದಿ ಮಾಡುವಂಥ ವಿಷಯಗಳಾಗುವುದಿಲ್ಲ? ಸತ್ಯಕ್ಕೆ ದೂರವಾದ ವರದಿ ಸಿದ್ಧಪಡಿಸಿ ಜನರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಹುಟ್ಟುಹಾಕುವ ಪ್ರಯತ್ನದ ಹಿಂದಿರುವ ಇವರ ಉದ್ದೇಶವಾದರೂ ಏನು? ಸಂಘ ನಡೆಸುವ ರಾಷ್ಟ್ರೋತ್ಥಾನ ರಕ್ತ ನಿಧಿ ಜನಪರ ಕಾರ್ಯವಲ್ಲವೆ? ಅದರ ಪುಸ್ತಕ ಪ್ರಕಾಶನ ಸಾರಸ್ವತ ಲೋಕಕ್ಕೆ ದೊಡ್ಡ ಕೊಡುಗೆಯಲ್ಲವೆ? ಸೈಟು ಪ್ರಶ್ನಿಸುವವರ ಕಣ್ಣಿಗೆ ಸಂಘದ ಸಾಮಾಜಿಕ ಬದ್ಧತೆಯೇಕೆ ಕಾಣುವುದಿಲ್ಲ?
- ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ