ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ನವೆಂಬರ್ 22, 2011

ಆ ಅವಮಾನ ಸುಲಭಕ್ಕೆ ಅರ್ಥವಾಗದು!

ಮಹಾದೇವ ಗೋವಿಂದ ರಾನಡೆ!
ಒಮ್ಮೆ ಅವರು ರೈಲಿನಲ್ಲಿ ಹೊರಟಿದ್ದರು. ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಬೋಗಿಯಲ್ಲಿ ಆಸೀನನಾಗಿದ್ದ ಬಿಳಿತೊಗಲಿನ ಬ್ರಿಟಿಷ್ ಅಧಿಕಾರಿಗೆ ರಾನಡೆಯವರನ್ನು ಕಂಡು ಕಸಿವಿಸಿಯಾಯಿತು. ಭಾರತೀಯರನ್ನು ಗುಲಾಮರಂತೆ ಕಾಣುತ್ತಿದ್ದ, ನಡೆಸಿಕೊಳ್ಳುತ್ತಿದ್ದ ಕಾಲವದು. ಹಾಗಾಗಿಯೇ ಭಾರತೀಯನೊಬ್ಬ ತನ್ನಂತೆಯೇ ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ಕಂಡು ಆತನ ಕೋಪ ನೆತ್ತಿಗೇರಿತು. ‘ಏ ಗುಲಾಮ, ನಿನ್ನನ್ನು ಒಳಕ್ಕೆ ಬಿಟ್ಟವರ್ಯಾರು?’ ಎಂದು ಅಬ್ಬರಿಸಿದ. ಆದರೆ ರಾನಡೆಯವರು ಮರುಮಾತನಾಡಲಿಲ್ಲ. ಕೊನೆಗೂ ಇಳಿಯುವ ಸ್ಥಳ ಬಂತು. ಹೊರಗೆ ಜನಸಾಗರವೇ ನೆರೆದಿದೆ. ರೈಲಿನಿಂದ ಇಳಿಯುತ್ತಲೇ ಹಾರ ತುರಾಯಿ, ಬಾಜಾಭಜಂತ್ರಿ ಮೂಲಕ ರಾನಡೆಯವರನ್ನು ಸ್ವಾಗತ ಮಾಡಿದರು. ಇದನ್ನು ಕಂಡ ಬ್ರಿಟಿಷ್ ಅಧಿಕಾರಿಗೆ ಮುಜುಗರ ಉಂಟಾಯಿತು. ತಾನು ಅವಮಾನಿಸಿದಾತ ದೊಡ್ಡ ವ್ಯಕ್ತಿ ಎಂಬುದು ಅರಿವಾಯಿತು. ಕೂಡಲೇ ಕ್ಷಮೆ ಕೇಳಲು ಆಗಮಿಸಿದ.
ಅಷ್ಟರಲ್ಲಿ ಜನಸ್ತೋಮ ರಾನಡೆಯವರನ್ನು ಹೆಗಲಮೇಲೆ ಹೊತ್ತು ಕರೆದೊಯ್ಯಿತು. ಕ್ಷಮೆ ಕೇಳಲು ಆತನಿಂದಾಗಲಿಲ್ಲ. ಅದೇ ವೇಳೆಗೆ ನಿಲ್ದಾಣದಲ್ಲಿ ನಿಂತಿದ್ದ ಪರಿಚಿತ ವ್ಯಕ್ತಿಯೊಬ್ಬರು ಕಂಡುಬಂದರು. ಅವರು ಗೋಪಾಲಕೃಷ್ಣ ಗೋಖಲೆಯವರಾಗಿದ್ದರು. ಅವರ ಬಳಿಗೆ ಬಂದ ಬ್ರಿಟಿಷ್ ಅಧಿಕಾರಿ, ‘ನನಗೆ ತಿಳಿಯದೇ ಆ ವ್ಯಕ್ತಿಯನ್ನು ಅವಮಾನಿಸಿದೆ. ಅದಕ್ಕಾಗಿ ಕ್ಷಮೆ ಕೇಳಲು ಬರುವಷ್ಟರಲ್ಲಿ ಜನರು ದೂರ ಕರೆದೊಯ್ದರು. ನಿಮಗೇನಾದರೂ ಸಿಕ್ಕರೆ ನನ್ನ ಕ್ಷಮೆಯನ್ನು ಅವರಿಗೆ ತಿಳಿಸಿ’ ಎಂದ. ಆ ದಿನ ದೊಡ್ಡ ಸಮಾರಂಭ ನಡೆಯಿತು. ಖ್ಯಾತ ವಿದ್ವಾಂಸರು ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಎಂ.ಜಿ.ರಾನಡೆ ಜನಸಾಗರವನ್ನುದ್ದೇಶಿಸಿ ಮಾತನಾಡಿದರು. ಸಂಜೆ ಗೋಪಾಲಕೃಷ್ಣ ಗೋಖಲೆ ಹಾಗೂ ರಾನಡೆಯವರ ಭೇಟಿ ನಡೆಯಿತು. ಆಗ ಬ್ರಿಟಿಷ್ ಅಧಿಕಾರಿಯ ವಿಷಯ ಪ್ರಸ್ತಾಪಿಸಿದ ಗೋಖಲೆಯವರು ನಿಮಗೆ ಮಾಡಿದ ಅವಮಾನಕ್ಕಾಗಿ ಆತ ಕ್ಷಮೆಯಾಚಿಸಿದ್ದಾನೆ ಎಂಬ ಸಂದೇಶವನ್ನು ಮುಟ್ಟಿಸಿದರು.
ಆದರೆ…
ರಾನಡೆಯವರ ಮುಖದಲ್ಲಿ ಅವಮಾನಕ್ಕೊಳಗಾದ ಕೋಪಕ್ಕೆ ಬದಲು ಪಶ್ಚಾತ್ತಾಪದ ಚರ್ಯೆ ಇತ್ತು! ‘ಅವಮಾನ ಎಂದರೇನು? ಅವಮಾನ ಹೇಗಾಗುತ್ತದೆ? ಚಪ್ಪಲಿ ಎಲ್ಲಿ ಚುಚ್ಚುತ್ತದೆ? ಎಂಬುದು ನನಗೆ ಇವತ್ತು ಅರ್ಥವಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಏಕೆ ಕಟುವಾಗಿ ಮಾತನಾಡುತ್ತಾರೆ, ಅವರ ಮನದಾಳದ ವೇದನೆ ಏನು ಎಂಬುದು ನನಗೆ ಇಂದು ಅರಿವಾಯಿತು’ ಎನ್ನುತ್ತಾರೆ ಚಿತ್ಪಾವನಾ ಬ್ರಾಹ್ಮಣರಾದ ರಾನಡೆ!!
ದುರದೃಷ್ಟವಶಾತ್ ಇಂದಿಗೂ ಅತಿಹೆಚ್ಚು ಅಪಾರ್ಥಕ್ಕೊಳಗಾಗಿರುವ, ದೂಷಣೆಗೊಳಗಾಗುವ ವ್ಯಕ್ತಿ ಅಂಬೇಡ್ಕರ್. ಅವರ ಮನದಾಳದ ವೇದನೆಯನ್ನು, ಯಾವ ಉದ್ದೇಶಕ್ಕಾಗಿ, ಯಾವ ಬದಲಾವಣೆಯನ್ನು ತರುವುದಕ್ಕಾಗಿ ಅವರು ಪ್ರಯತ್ನಿಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳುವ ಬದಲು ಮೀಸಲಾತಿಯನ್ನು ಮುಂದಿಟ್ಟುಕೊಂಡು ನಿಂದಿಸುವವರೇ ಈ ಸಮಾಜದಲ್ಲಿ ತುಂಬಿತುಳುಕುತ್ತಿದ್ದಾರೆ.
ಒಂದು ಸಲ ಒಬ್ಬ ಬ್ರಾಹ್ಮಣ ಬಾಲಕನೊಬ್ಬ ಅಂಬೇಡ್ಕರ್ ಬಳಿ ಬಂದಿದ್ದ. ಹಾಗೆ ಬಂದಿದ್ದವನು ವ್ಯಂಗ್ಯವಾಗಿ ಅಂಬೇಡ್ಕರ್ ಅವರನ್ನು ಪ್ರಶ್ನಿಸಿದ “ಸಂಸತ್ತಿನಲ್ಲಿ ನಿಮ್ಮವರಿಗೆ ಕಾದಿರಿಸಲಾದ ಸ್ಥಾನಗಳನ್ನು ನೀಡಲಾಗಿದೆ. ಅದನ್ನೇಕೆ ನೀವು ಬಿಟ್ಟು ಬಿಡುತ್ತಿದ್ದೀರಿ?”. “ನೋಡು, ನೀನೂ ಮಹಾರ್(ಒಂದು ದಲಿತ ಸಮುದಾಯ) ಆಗು. ಆ ಮೂಲಕ ಸಂಸತ್ತಿನಲ್ಲಿನ, ವಿಧಾನಸಭೆಗಳಲ್ಲಿನ ಆ ಕಾದಿರಿಸಿದ ಸ್ಥಾನಗಳನ್ನು ತುಂಬಿಸಿಕೊ. ನೌಕರಿಗಳಲ್ಲೂ ನಿಯುಕ್ತಿಗೆ ಮೊದಲು ಮೇಲ್ಜಾತಿ ಹಾಗೂ ಹಿಂದುಳಿದವರಿಂದ ಬಂದಿರುವ ಅರ್ಜಿಗಳೆಷ್ಟು ಎಂದು ನೋಡಲಾಗುತ್ತದೆ; ನಂತರ ಸ್ಥಾನಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ಬ್ರಾಹ್ಮಣರು ಮಹಾರ್್ಗಳಾಗಿ ಈ ಕೆಲಸ ಮಾಡಿರಲ್ಲ” ಎಂದರು ಅಂಬೇಡ್ಕರ್.
ದಲಿತರಿಗೆ ಜಾತಿ ಎಂಬುದು ಎಂತಹ ಸಾಮಾಜಿಕ ಕಳಂಕವಾಗಿ ಪರಿಣಮಿಸಿದೆ ಎಂಬುದನ್ನು ಅವರು ಸಾಕಷ್ಟು ಸಲ ಪರಿಪರಿಯಾಗಿ ವಿವರಿಸಿದ್ದಾರೆ. ನಮಗೂ ಮಾನವ ಬದುಕು ಬೇಕು ಎಂಬುದನ್ನು ಅವರು ಈ ರೀತಿ ಹೇಳುತ್ತಾರೆ-”ವಾಸ್ತವಿಕವಾಗಿ ಮಾನವ ಪ್ರೀತಿಸುವುದು ಅವನ ಆತ್ಮಗೌರವವನ್ನು; ಏನೋ ಲಾಭವನ್ನಲ್ಲ. ಓರ್ವ ಸದ್ಗುಣಿ, ಆಚಾರವಂತ ಮಹಿಳೆಗೆ ವ್ಯಭಿಚಾರದಿಂದ ಲಾಭವಾಗುತ್ತದೆಂದು ಗೊತ್ತು. ಆದರೆ ಆಕೆ ಅದನ್ನು ಬಯಸುತ್ತಾಳೇನು? ನಮ್ಮ ಮುಂಬಯಿಯಲ್ಲಿ ಅಂತಹ ವ್ಯಭಿಚಾರಿ ಮಹಿಳೆಯರದೇ ಒಂದು ಬಸ್ತಿ ಇದೆ. ಅಲ್ಲಿನ ಮಹಿಳೆಯರು ಬೆಳಿಗ್ಗೆ 8.00 ಗಂಟೆಗೆ ಎದ್ದ ಮೇಲೆ ಅಲ್ಪಾಹಾರಕ್ಕಾಗಿ ಸಮೀಪದ ಹೊಟೇಲ್್ವಾಲನನ್ನು ಕೂಗಿ ಕರೆಯುತ್ತಾರೆ: ‘ಅರೇ ಸುಲೈಮಾನ್, ಕೀಮಾ ಕೀ ಪ್ಲೇಟ್ ವ ಪಾವರೊಟಿ, ಲಾವೋ’. ಸುಲೈಮಾನ್ ಅದನ್ನು ತರುತ್ತಾನೆ. ಜತೆಯಲ್ಲಿ ಚಹ, ಬ್ರೆಡ್, ಕೇಕ್ ಇತ್ಯಾದಿ ಸಹ ತರುತ್ತಾನೆ. ಆದರೆ ದಲಿತ ವರ್ಗದ ಮಹಿಳೆಯರ ಸ್ಥಿತಿ ಹೇಗಿದೆ ಗೊತ್ತೇನು? ಅವರಿಗೆ ಸಾದಾ ರೊಟ್ಟಿ ಚಟ್ನಿ ಸಹ ತಿನ್ನಲು ಸಿಗುವುದಿಲ್ಲ. ಅಷ್ಟಾದರೂ ಅವರು ಆತ್ಮಗೌರವ ಬಿಟ್ಟು ಬದುಕುವುದಿಲ್ಲ. ನಾವು ಸಹ ಸಂಘರ್ಷ ನಡೆಸುತ್ತಿರುವುದು ಆತ್ಮಗೌರವಕ್ಕಾಗಿಯೇ. ಮನುಷ್ಯರಾಗಿ ಬದುಕಲಿಕ್ಕೆ ಬೇಕಾಗುವಷ್ಟಾದರೂ ಸ್ಥಿತಿಗೆ ಅವರನ್ನು ಒಯ್ಯಲು ತಯಾರಿ ನಡೆಸುತ್ತಿದ್ದೇವೆ. ಅದಕ್ಕೆ ಅಗತ್ಯವಿರುವ ಕಷ್ಟ, ತ್ಯಾಗಕ್ಕೆ ನಾವು ಸಿದ್ಧರಿದ್ದೇವೆ”.
ಮುಂದುವರಿದು ಹೇಳುತ್ತಾರೆ-’ನಾನೊಮ್ಮೆ ಸಂಗಮನೇರಗೆ ಹೋಗಿದ್ದೆ. ಸಭೆಯ ನಂತರ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆಗ ‘ಕೇಸರಿ’ ಸಾಪ್ತಾಹಿಕದ ಬಾತ್ಮಿದಾರ ನನಗೊಂದು ಚೀಟಿ ಕಳುಹಿಸಿ ಪ್ರಶ್ನಿಸಿದ; “ಸತ್ತ ಪ್ರಾಣಿಗಳನ್ನು ಹೊತ್ತು ಕೊಂಡೊಯ್ಯುವ ಕೆಲಸ ಮಾಡಬೇಡಿರೆಂದು ನೀವು ನಿಮ್ಮವರಿಗೆ ತಿಳಿಸುತ್ತಿದ್ದೀರಿ. ಅವರ ಆರ್ಥಿಕ ಸ್ಥಿತಿ ತುಂಬ ದಯನೀಯವಾಗಿದೆ. ಅವರ ಮಹಿಳೆಯರ ಬಳಿ ಬೇಕಾದಷ್ಟು ಉಡುಪು ಸಹ ಇಲ್ಲ. ಅವರ ಬಳಿ ಕೃಷಿ ಜಮೀನಿಲ್ಲ. ತಿನ್ನಲು ಅನ್ನವಿಲ್ಲ. ಅಂತಹ ಕಷ್ಟದಲ್ಲಿದ್ದಾರೆ. ಅವರಿಗೆ ಪ್ರತಿವರ್ಷ ಚರ್ಮ, ಕೊಂಬು, ಮಾಂಸ ಇವುಗಳನ್ನು ಮಾರಿಯೇ ರು. 500ರಷ್ಟು ಸಂಪಾದನೆಯಾಗುತ್ತದೆ. ಈಗ ನೀವು ಅದೂ ಸಹ ಅವರಿಗೆ ಸಿಗದಂತೆ ಮಾಡಲು ಹೊರಟಿದ್ದೀರಿ. ಇದರಿಂದ ನಷ್ಟವಾಗುವುದು ನಿಮ್ಮವರಿಗೆ ತಾನೇ?”. ಆಗ ನಾನವನನ್ನು ಕೇಳಿದೆ: “ನಿಮಗೆ ಇದಕ್ಕೆ ಉತ್ತರಬೇಕು ತಾನೇ? ಇಲ್ಲೇ ಈಗಲೇ ಹೇಳಲೇ, ಅಥವಾ ಸಭೆಯಲ್ಲಿ ಉತ್ತರ ಕೊಟ್ಟರೆ ಆಗಬಹುದೇ? ಎಲ್ಲರ ಮುಂದೆ ಉತ್ತರ ನೀಡುವುದು ಉಚಿತವೆನಿಸುತ್ತದೆ ನನಗೆ. ನಿಮಗೆ ಬೇಕಾದುದು ಇಷ್ಟು ಮಾತ್ರವೇ, ಅಥವಾ ಇನ್ನು ಏನಾದರೂ ಇದೆಯೇ?”. ಆತ ‘ಇದೊಂದೇ ಪ್ರಶ್ನೆ ಅದಕ್ಕೆ ಮಾತ್ರ ಉತ್ತರ ಸಾಕು’ ಎಂದ. ನಾನು ಪುನಃ ಕೇಳಿದೆ: “ನಿಮ್ಮ ಪರಿವಾರದಲ್ಲಿ ಇರುವವರು ಎಷ್ಟು ಮಂದಿ?” ಅವನು “ನನಗೆ ಐದು ಮಕ್ಕಳು; ನನ್ನ ಸೋದರನಿಗೂ ಅಷ್ಟೇ ಇದ್ದಾರೆ” ಎಂದ. “ಸರಿ ಹಾಗಾದರೆ, ಸಾಕಷ್ಟು ದೊಡ್ಡ ಪರಿವಾರವೇ ನಿಮ್ಮದು. ನೀವು, ನಿಮ್ಮ ಸಂಬಂಧಿಕರು ಎಲ್ಲರೂ ಸೇರಿ ಊರಿನ ಎಲ್ಲ ಸತ್ತ ಪ್ರಾಣಿಗಳ ಹೆಣ ಎತ್ತಿ, ತಲಾ ಒಂದೊಂದು ಪ್ರಾಣಿಗೂ ರು. ಐನೂರು ಸಂಪಾದಿಸಿರಲ್ಲ. ನಾನೂ ನಿಮಗೆ ಪ್ರತ್ಯೇಕವಾಗಿ ರು. 500 ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ. ನನ್ನ ಜನರ ಗತಿ ಏನಾದೀತು ಇತ್ಯಾದಿ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಊಟ ಬಟ್ಟೆ ಲಭಿಸುವುದೇ, ಇಲ್ಲವೆ ನಾನು ನೋಡಿಕೊಳ್ಳುವೆ. ಇಷ್ಟೊಂದು ಲಾಭ ಬರುವಂತಹ ಕೆಲಸವನ್ನು ನೀವೇಕೆ ಮಾಡುವುದಿಲ್ಲ? ಅದನ್ನೇಕೆ ನೀವು ಬಿಟ್ಟಿದ್ದೀರಿ? ಸತ್ತ ಪ್ರಾಣಿಗಳನ್ನು ಹೊರುವ ಕಸುಬು ನೀನು ನಡೆಸುವುದಿಲ್ಲವೇಕೆ?” ಎಂದು ಕೇಳಿದೆ.
ದಲಿತರಿಗೆ ಶಿಕ್ಷಣ ಹಾಗೂ ಆತ್ಮಸ್ಥೈರ್ಯ ತುಂಬಬೇಕಾದ ಅಗತ್ಯದ ಬಗ್ಗೆ ಅಂಬೇಡ್ಕರ್ ವಿವರಿಸುವ ವಿಧಾನವೇ ವಿಶಿಷ್ಟವಾಗಿದೆ- “ಮಾನವನ ಶರೀರ, ಮನಸ್ಸು, ರೋಗಗ್ರಸ್ತವಾಗುವುದು ಹೇಗೆ? ರೋಗಗ್ರಸ್ತ ಶರೀರದಲ್ಲಿ ನೋವು, ರೋಗಗ್ರಸ್ತ ಮನದಲ್ಲಿ ನಿರುತ್ಸಾಹ ಇರುತ್ತದೆ. ಮನಸ್ಸು ನಿರುತ್ಸಾಹಿಯಾಗಿದ್ದಲ್ಲಿ ಏಳ್ಗೆಯಾಗುವುದಿಲ್ಲ. ಈ ನಿರುತ್ಸಾಹಿ ಉಂಟಾಗುವುದು ಹೇಗೆ? ಮೊದಲ ಕಾರಣವೆಂದರೆ ಮಾನವನಿಗೆ ತಾನಿರುವ ಸನ್ನಿವೇಶದಲ್ಲಿ ಉನ್ನತಿಗೇರಲು ಅವಕಾಶವೇ ಇಲ್ಲವಾದಲ್ಲಿ ಅಥವಾ ಏಳ್ಗೆ ಹೊಂದುವ ಆಸೆಯೇ ಕಮರಿ ಹೋಗಿದ್ದಲ್ಲಿ, ಅವನಲ್ಲಿ ಉತ್ಸಾಹವಿರುವುದಾದರೂ ಎಲ್ಲಿಂದ? ಮಾನಸಿಕವಾಗಿ ಅವನು ರೋಗಗ್ರಸ್ತನಾಗುತ್ತಾನೆ. ತನ್ನ ಕೆಲಸದ ಫಲ ಸಿಗುವುದಾದಲ್ಲಿ ಯಾರಲ್ಲಾದರೂ ಉತ್ಸಾಹವಿರುತ್ತದೆ. ಶಾಲೆಗೆ ಹೋಗುವ ಒಬ್ಬ ವಿದ್ಯಾರ್ಥಿಗೆ ಅವನ ಶಿಕ್ಷಕ, ನೀನ್ಯಾರು? ನೀನೋರ್ವ ಮಹಾರ್ ಅಲ್ಲವೇ? ಎಂದಲ್ಲಿ ಅವನು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವೇ? ಇವನಿಗೇಕೆ ಬೇಕು ಮೊದಲ ಶ್ರೇಣಿ? ನಿನಗೆ ಮೂರನೇ ಶ್ರೇಣಿಯೇ ಸಾಕು. ಪ್ರಥಮ ಶ್ರೇಣಿಯಲ್ಲಿ ಬರಬೇಕಾದವರು ಮೇಲ್ಜಾತಿಯವರ ಹುಡುಗರು. ಹೀಗೆ ವ್ಯವಸ್ಥೆಯಿರುವಲ್ಲಿ ಆ ಬಾಲಕನಿಗೆ ಉತ್ಸಾಹ ಸಿಗುವುದು ಹೇಗೆ ಸಾಧ್ಯ? ಅವನು ಏಳ್ಗೆ ಹೊಂದುವುದಾದರೂ ಹೇಗೆ? ಉತ್ಸಾಹದ ಮೂಲವಿರುವುದು ಮನದಲ್ಲಿ ಯಾರಿಗೆ ಪರಸ್ಥಿತಿ ಯಾವುದೇ ಆದರೂ ನಾನು ಹೋರಾಡಬಲ್ಲೇ ಎಂಬ ವಿಶ್ವಾಸವಿದೆಯೋ ಅಂತಹನು ಉತ್ಸಾಹಿಯಾಗಿರುತ್ತಾನೆ ಮತ್ತು ಏಳ್ಗೆಯನ್ನೂ ಹೊಂದಬಲ್ಲ.
ಹಿಂದು ಧರ್ಮದಲ್ಲಿ ಇಂತಹದೇ ವಿಲಕ್ಷಣವಾದ ವ್ಯವಸ್ಥೆ ಹೆಣೆದುಕೊಂಡಿದೆ. ಮಾನವನನ್ನು ನಿರುತ್ಸಾಹಿಗೊಳಿಸುವಂತಹ ಪರಿಸ್ಥಿತಿ ಸಾವಿರಾರು ವರ್ಷಗಳ ಕಾಲ ಮುಂದುವರಿದುಕೊಂಡು ಬಂದಲ್ಲಿ ಆಗ ಅತಿ ಹೆಚ್ಚೆಂದರೆ ಕಾರಕೂನರಾಗಷ್ಟೇ ಹೊಟ್ಟೆ ತುಂಬಿಕೊಳ್ಳುವುದರಲ್ಲಿ ತೃಪ್ತರಾಗುವ ಜನರು ಹುಟ್ಟಬಹುದು. ಅಂತಹ ಕಾರಕೂನರ ರಕ್ಷಣೆಗೆ ಇನ್ನೋರ್ವ ಅವರಿಗಿಂತ ದೊಡ್ಡ ಕಾರಕೂನ ಬೇಕಾಗುತ್ತಾನೆ. ಮಾನವನಿಗೆ ಉತ್ಸಾಹ ತುಂಬುವ ಏಕಮಾತ್ರ ಸಂಗತಿಯೆಂದರೆ ಅವನ ಮನಸ್ಸು. ನೀವು ಗಿರಣಿ ಮಾಲಿಕರನ್ನು ನೋಡಿರಬಹುದು. ಅವರು ಮ್ಯಾನೇಜರ್್ರನ್ನು ನಿಯುಕ್ತಿಸುತ್ತಾರೆ. ಈ ಮ್ಯಾನೇಜರ್ ಕಾರ್ಮಿಕರಿಂದ ಕೆಲಸ ಮಾಡಿಸುತ್ತಾರೆ. ಮಾಲೀಕರು ಒಂದಲ್ಲ ಒಂದು ವ್ಯಸನಕ್ಕೆ ತುತ್ತಾದವರಿರುತ್ತಾರೆ. ಅವರ ಮನಸ್ಸು ಸುಸಂಸ್ಕೃತವಾಗಿ ವಿಕಸಿಸಿರುವುದಿಲ್ಲ. ನನ್ನ ಮುಖದಲ್ಲಿ ಉತ್ಸಾಹ ನಿರ್ಮಿಸುವ ಸಲುವಾಗಿ ನಾನು ಕ್ರಿಯಾಶೀಲನಾದೆ ಆಗ ಅಷ್ಟೇ ನನಗೆ ಶಿಕ್ಷಣ ಆರಂಭಿಸಲು ಸಾಧ್ಯವಾಯಿತು. ನಾನು ಕೇವಲ ಲಂಗೋಟಿ ಧರಿಸಿ ಶಿಕ್ಷಣ ಆರಂಭಿಸಿದ್ದೆ. ಶಾಲೆಯಲ್ಲಿ ನನಗೆ ಕುಡಿಯಲು ನೀರು ಸಹ ಸಿಗುತ್ತಿರಲಿಲ್ಲ. ಮುಂಬಯಿಯಂತಹ ನಗರದಲ್ಲಿ ಮತ್ತು ಎಲ್ಫಿನ್್ಸ್ಟನ್ ಕಾಲೇಜಿನಲ್ಲೂ ಇದ್ದ ಪರಿಸ್ಥಿತಿ ಅಂತಹದ್ದು. ಅಂತಹ ಸ್ಥಿತಿಯಲ್ಲಿ ಕ್ಲಾರ್ಕ್ ಬಿಟ್ಟು ಇನ್ನೆಂತಹವನು ತಯಾರಾದಾನು?”.
ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ಅಗರ್ಕರ್ ಮುಂತಾದವರು ದಲಿತರ ವೇದನೆಯನ್ನು, ಅವರಿಗಾಗುತ್ತಿರುವ ಅವಮಾನವನ್ನು ಅರ್ಥಮಾಡಿಕೊಂಡು ಕೆಲಸ ಮಾಡಿದ್ದಿದೆ. ಆದರೆ ಸಾಮಾಜಿಕ ಪರಿವರ್ತನೆಯ ಯಾತ್ರೆಯಲ್ಲಿ ಅಂಬೇಡ್ಕರ್ ಏಕಮೇವಾದ್ವಿತೀಯರಾಗಿ ಕಾಣಬರುತ್ತಾರೆ. ಸಾಮಾಜಿಕ ಪರಿವರ್ತನೆಯಲ್ಲಿ ಅಂಬೇಡ್ಕರ್ ವಹಿಸಿದ ಪಾತ್ರವೆಂಥದ್ದು ಎಂಬುದರ ಮೇಲೆ ಬೆಳಕು ಚೆಲ್ಲುವ ‘ಸಾಮಾಜಿಕ ಕ್ರಾಂತಿ ಸೂರ್ಯ’ ಎಂಬ ಪುಸ್ತಕವೊಂದು ಬಿಡುಗಡೆಯಾಗಿದೆ. ದತ್ತೊಪಂತ ಠೇಂಗಡಿ ಮರಾಠಿಯಲ್ಲಿ ಬರೆದ ಪುಸ್ತಕವನ್ನು ಚಂದ್ರಶೇಖರ ಭಂಡಾರಿ ಕನ್ನಡಕ್ಕೆ ತಂದಿದ್ದಾರೆ. ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕ ಅನುಕೂಲ ಮಾಡಿಕೊಡುತ್ತದೆ. ಮರೆಯದೇ ಓದಿ.

- ಕೃಪೆ: ಪ್ರತಾಪ ಸಿಂಹ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ