ನನ್ನ ಬ್ಲಾಗ್ ಪಟ್ಟಿ

ಗುರುವಾರ, ಡಿಸೆಂಬರ್ 1, 2011

ವಿವಾದ ಸೃಷ್ಟಿಸುವುದೇ ಇವರುಗಳ ಜಾಯಮಾನವೇ? - ಪ್ರತಾಪ ಸಿಂಹ

ಇದೇನಿದು ಸ್ವಾಮಿ? ಇದೆಂಥಾ ಜಾಡ್ಯ?
ಅಲ್ಲಾ, ಪುರಸ್ಕಾರ ಬಂದ ಕೂಡಲೇ ಒಬ್ಬ ವ್ಯಕ್ತಿ ಆ್ಯಕ್ಟಿವಿಸ್ಟ್ ಅಥವಾ ಚಳವಳಿಕಾರನಾಗಿ ಪರಿವರ್ತನೆಯಾಗಬೇಕು ಎಂಬ ನಿಯಮವೇನಾದರೂ ಇದೆಯೇ? ಅಥವಾ ಪುರಸ್ಕಾರವೆಂಬುದು ತಮಗೆ ಸಂಬಂಧಪಡಲಿ, ಬಿಡಲಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಅರ್ಹತೆ ತಂದುಕೊಡುವ ಸ್ಥಾನಮಾನವೇ? ಅಥವಾ ಬಾಯಿಗೆ ಬಂದಂತೆ ಮಾತನಾಡುವ, ಅನ್ಯರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವ ಅಧಿಕಾರವೇ?
ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಎಂ.ಎಂ. ಕಲಬುರ್ಗಿಯವರನ್ನು ನೋಡಿದರೆ ಹಾಗನಿಸುತ್ತಿಲ್ಲವೇ?
“ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ನಂತರ ನೀಡಿದ ಸಂದರ್ಶನದಲ್ಲಿ ‘ಕರ್ನಾಟಕದಲ್ಲಿ ಧರ್ಮ ಬರುವುದಕ್ಕಿಂತ ಮೊದಲು ಜಾತಿ ಗಳಿದ್ದವು’ ಎಂದುಬಿಟ್ಟರು ಕಲಬುರ್ಗಿ! ಒಬ್ಬ ಒಳ್ಳೆಯ ಸಂಶೋಧಕರೆನಿಸಿಕೊಂಡವರು ಯಾವ ದೃಷ್ಟಿ, ಆಧಾರ, ಹಿನ್ನೆಲೆಯಿಟ್ಟುಕೊಂಡು ಕರ್ನಾಟಕದಲ್ಲಿ ಧರ್ಮ ಬರುವುದಕ್ಕಿಂತ ಮೊದಲು ಜಾತಿಗಳಿದ್ದವು ಎಂದು ಹೇಳಿಕೆ ಕೊಟ್ಟರು? ಇಂತಹ ಬಾಲಿಶ ಹೇಳಿಕೆಯನ್ನು ಕಂಡು ಕುಪಿತರಾದ ನಾಡಿನ ಬಹುದೊಡ್ಡ ವಿದ್ವಾಂಸರಾದ ಕೆ.ಎಸ್. ನಾರಾಯಣಾಚಾರ್ಯರು, “ಧರ್ಮ ಎಷ್ಟು ಸನಾತನವಾದುದು, ಧರ್ಮ ಅಂದರೇನು, ಧರ್ಮದ ಅರ್ಥ ಮತ್ತು ಪರಿಧಿಗಳಾವುವು, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ಧರ್ಮ, ಅಲ್ಲೂ ಪುರುಷ ಧರ್ಮ, ಸ್ತ್ರೀಧರ್ಮಗಳೆಂಬುದಿವೆ’ ಎಂದು ವಿವರಿಸಿ ಲೇಖನವನ್ನೇ ಬರೆದು ಕಲಬುರ್ಗಿಯವರಿಗೆ ಚೆನ್ನಾಗಿಯೇ ಬಿಸಿಮುಟ್ಟಿಸಿದರು, ಅವರ ಅಪ್ರಬುದ್ಧತೆಯನ್ನು ಎತ್ತಿತೋರಿದರು.
ಇಷ್ಟಾಗಿಯೂ ಕಲಬುರ್ಗಿಯವರು ಮಾತ್ರ ಬುದ್ಧಿಕಲಿತಂತಿಲ್ಲ!
ನವೆಂಬರ್ 11ರಿಂದ 13ರವರೆಗೂ ಮೂಡಬಿದ್ರೆಯಲ್ಲಿ ನಡೆದ “ಆಳ್ವಾಸ್ ನುಡಿಸಿರಿ’ಯಿಂದ ಆರಂಭಿಸಿ ನೃಪತುಂಗ ಪ್ರಶಸ್ತಿ ಪಡೆಯುವ ದಿನ ಸೇರಿದಂತೆ ಓತಪ್ರೋತವಾಗಿ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಈ ಹೇಳಿಕೆ ನೀಡುವ ಖಯಾಲಿ ಅವರಿಗೆ ಅಂಟಿಕೊಂಡಿದ್ದಾದರೂ ಏಕೆ? ಯಾವ ಉದ್ದೇಶಕ್ಕಾಗಿ? ಅದಿರಲಿ, ಅವರ ಹೇಳಿಕೆಗಳಲ್ಲಿ ಇರುವ ಹುರುಳಾದರೂ ಏನು?
1. ಕೃಷ್ಣದೇವರಾಯ ಒಬ್ಬ ಕನ್ನಡ ವಿರೋಧಿಯಾಗಿದ್ದ. ಆತನ ತಂದೆ ನರಸ ನಾಯಕ ಕರ್ನಾಟಕದವನೇ ಆದರೂ ತಾಯಿ ತೆಲುಗು ಮೂಲದವಳು. ಆತ ತೆಲುಗಿನವರಿಗೇ ತನ್ನ ಆಸ್ಥಾನದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿದ್ದ.
2. ಇತಿಹಾಸದಲ್ಲಿ ಮತ್ತು ಆಗಿನ ಸಾಹಿತ್ಯದಲ್ಲಿ ಶೈವ ಧರ್ಮದವರು ಇತರ ಧರ್ಮದವರನ್ನು ನಾಶಮಾಡುವ ಮೂಲಕ ತಮ್ಮ ಧರ್ಮ ಬೆಳೆಸಿದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಣ್ಣಿಗೇರಿ ಬುರುಡೆಗಳು ಶೈವ ಧರ್ಮದ ಪಡೆ ಮಾಡಿರುವ ಮಾರಣಹೋಮದ ಸಂಕೇತ.
3. ಉಪವಾಸ ಸತ್ಯಾಗ್ರಹ ಪ್ರಹಸನವಾಗಿದೆ, ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ರಾಮಸೇನೆ, ಬಜರಂಗದಳಗಳೆಂಬ ಕಾದಾಟ ಹುಟ್ಟುಹಾಕಿದೆ.
4. ಇಂದು ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯ ಹೆಚ್ಚಲು ಮೈಸೂರು ಅರಸರ ಮೂರ್ಖತನವೇ ಕಾರಣ. ಅವರ ಆಸ್ಥಾನದಲ್ಲಿ ಹೆಚ್ಚಿನ ದಿವಾನರು ತಮಿಳರೇ ಆಗಿದ್ದರು. ಇದೇ ತಮಿಳರ ಪ್ರಾಬಲ್ಯ ಹೆಚ್ಚಲು ಕಾರಣ!
5. ಶಾಲೆಗಳು ಮುಚ್ಚಲು ಸರ್ಕಾರ ಹಾಗೂ ಶಿಕ್ಷಕರೇ ಕಾರಣ. ಸ್ನಾತಕ, ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿ ಪಗಾರಕ್ಕಾಗಿ ಬರುವ ಶಿಕ್ಷಕರು ಹಾಗೂ ಪ್ರಮಾಣ ಪತ್ರಗಳಿಗಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಪಗಾರ ಹೆಚ್ಚಳದಿಂದ ಶಿಕ್ಷಕರು ಸೋಮಾರಿಗಳಾಗಿದ್ದಾರೆ, ವಿಫುಲ ಅನುದಾನದಿಂದ ಭ್ರಷ್ಟರಾಗುತ್ತಿದ್ದಾರೆ!
ಇವೆಂಥ ಮಾತುಗಳು ಸ್ವಾಮಿ?
ಒಬ್ಬ ಸಂಶೋಧಕರೆಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡ ಬಹುದಾ? ‘ಕೃಷ್ಣದೇವರಾಯ ಒಬ್ಬ ಕನ್ನಡ ವಿರೋಧಿಯಾಗಿದ್ದ. ಆತನ ತಂದೆ ನರಸ ನಾಯಕ ಕರ್ನಾಟಕದವನೇ ಆದರೂ ತಾಯಿ ತೆಲುಗು ಮೂಲದವಳು. ಆತ ತೆಲುಗಿನವರಿಗೇ ತನ್ನ ಆಸ್ಥಾನದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿದ್ದ’ ಎಂದು ಹೇಳಿಕೆ ಕೊಡುವ ಕಲಬುರ್ಗಿಯವರಿಗೆ ಕನ್ನಡಿಗರ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ್ದ ಟಿಪ್ಪುಸುಲ್ತಾನ ಏಕೆ ಕನ್ನಡ ವಿರೋಧಿಯಾಗಿ ಕಾಣಿಸುವುದಿಲ್ಲ? ‘ಅಮುಕ್ತ ಮೌಲ್ಯದ’ವನ್ನು ತೆಲುಗಿನಲ್ಲಿ ಬರೆದಿರುವುದು ಕೃಷ್ಣದೇವರಾಯನ ತೆಲುಗು ಪಕ್ಷಪಾತವನ್ನು ತೋರುತ್ತದೆ ಎನ್ನುವುದಾದರೆ ಪರ್ಷಿಯನ್ ಅನ್ನು ಆಡಳಿತ ಭಾಷೆಯಾಗಿ ಮಾಡಿದ್ದ ಟಿಪ್ಪುಸುಲ್ತಾನನೇನು ಕನ್ನಡಪ್ರೇಮಿಯಾಗಿದ್ದನೇ? ಈ ಕಲಬುರ್ಗಿಯವರ ದೊಡ್ಡ ದೌರ್ಬಲ್ಯವೆಂದರೆ ತಮ್ಮೊಳಗಿರುವ ಕಲ್ಪನೆ, ಊಹೆಗಳಿಗೆ ವಿಚಿತ್ರ ಚಿತ್ರಣಗಳನ್ನು ಕೊಡುತ್ತಾರೆ. ಅವರ ‘ಕನ್ನಡ ಅರಸರ, ಅಕನ್ನಡ ಪ್ರಜ್ಞೆ’ ಎಂಬ ಪುಸ್ತಕವನ್ನು ಓದಿದರೆ ಅವರ ನಿಜವಾದ ಧೋರಣೆ ಅರ್ಥವಾಗುತ್ತದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಎರಡನೇ ಹೆಂಡತಿ ತಮಿಳಿನವಳು, ಆಚಾರ್ಯತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರಿಂದಾಗಿ ಅವನು ತಮಿಳಿನತ್ತ ವಾಲಿದ, ಶ್ರವಣಬೆಳಗೊಳದ ಬಾಹುಬಲಿಯ ಪಾದದ ಕೆಳಗೆ ಮರಾಠಿ ಅಕ್ಷರಗಳಿದ್ದು ಅದು ಆ ರಾಜರ ಕನ್ನಡ ವಿರೋಧಿ ನಿಲುವನ್ನು ತೋರ್ಪಡಿಸುತ್ತದೆ ಎಂದೆಲ್ಲ ವಾದಸರಣಿಯನ್ನು ಮುಂದಿಡುತ್ತಾರೆ. ನೀವೇ ಹೇಳಿ, ಇಂದು ಕಾಣುವ ಭಾಷಾ ವೈಷಮ್ಯ, ಪ್ರಾದೇಶಿಕತೆಗಳು ಆ ಕಾಲದಲ್ಲಿದ್ದವೆ? ಇತಿಹಾಸದ ಯಾವ ಕಾಲಘಟ್ಟದಲ್ಲಿ ಅಂತಹ ವೈಷಮ್ಯಗಳು ಇದ್ದವು ಎಂಬುದಕ್ಕೆ ಆಧಾರ ಕೊಡಲಿ ನೋಡೋಣ? ಇದ್ದ ನಂಬಿಕೆಗಳನ್ನು ಒಡೆಯುವುದೇ ದೊಡ್ಡ ಸಂಶೋಧನೆಯೇ? ಅಥವಾ ಸಂಶೋಧಕರೆನಿಸಿಕೊಳ್ಳಬೇಕಾದರೆ ಜನರ ನಂಬಿಕೆಗಳನ್ನು ಒಡೆಯಲೇಬೇಕೆ?
ಕಲಬುರ್ಗಿಯವರ ಮತ್ತೊಂದು ಸಮಸ್ಯೆಯೆಂದರೆ ಪೂರ್ವಗ್ರಹಗಳನ್ನಿಟ್ಟುಕೊಂಡೇ ಮಾತನಾಡುತ್ತಾರೆ. ಇಲ್ಲವಾದರೆ ‘ಅಣ್ಣಿಗೇರಿ ಬುರುಡೆಗಳು ಶೈವ ಧರ್ಮದ ಪಡೆ ಮಾಡಿರುವ ಮಾರಣಹೋಮದ ಸಂಕೇತ’ವೆಂದು ಸತ್ಯಾಸತ್ಯತೆ ನಿರ್ಧಾರವಾಗುವ ಮೊದಲೇ ಹೇಳಿಕೆ ನೀಡುವ, ಜನರನ್ನು ದಾರಿತಪ್ಪಿಸುವ ಅಗತ್ಯವೇನಿತ್ತು? ‘ಕಾಶಿ’ ಎಂಬ ಪದವನ್ನು ಕೇಳಿದರೇ ಮೈಪರಚಿಕೊಳ್ಳುವ ಇವರಿಗೆ ಬ್ರಾಹ್ಮಣರ ಬಗ್ಗೆ ಅಪಥ್ಯವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ತಮ್ಮ ಒಡಲೊಳಗಿರುವ ಬ್ರಹ್ಮ, ಬ್ರಾಹ್ಮಣ ವಿರೋಧಿ ಧೋರಣೆಯನ್ನು ಎಲ್ಲ ಅನಿಷ್ಠ, ್ನಕಂಟಕ, ದುರಾಚಾರಗಳಿಗೂ ಕಾರಣವಾಗಿ ಕೊಡುವು ದೇಕೆ? ಇವತ್ತು ಕರ್ನಾಟಕದಲ್ಲಿ ಇರುವುದು ಲಿಂಗಾಯತರು ಮತ್ತು ಒಕ್ಕಲಿಗರ ಪ್ರಾಬಲ್ಯವಷ್ಟೇ. ಕೃಷಿಭೂಮಿಯಲ್ಲಿ ಹೆಚ್ಚಿನ ಭಾಗ ಇವೆರಡು ಸಮುದಾಯಗಳ ಕೈಯಲ್ಲೇ ಇದೆ. ದಲಿತರು ಅತಿ ಹೆಚ್ಚು ಶೋಷಣೆಗೊಳಗಾಗಿರುವುದು ಈ ಸಮುದಾಯಗಳಿಂದಲೇ ಹೊರತು ಬ್ರಾಹ್ಮಣರ ಜಾತಿವಾದದಿಂದಲ್ಲ.
ಶೈವರ ಮಾರಣಹೋಮದ ಬಗ್ಗೆ ಊಹೆ ಮಾಡಿಕೊಂಡು ಹಳೆಯದ್ದನ್ನು ಕೆದಕುವ ಇವರು ಲಿಂಗಾಯತರು, ಒಕ್ಕಲಿಗರಿಂದ ದಲಿತರ ಮೇಲಾದ ದೌರ್ಜನ್ಯದ ಬಗ್ಗೆ ಎಂದಾದರೂ ಗಟ್ಟಿಯಾಗಿ ಧ್ವನಿಯೆತ್ತಿದ್ದಾರಾ? ಅದಿರಲಿ, ಇವರೆಂದೂ ಜಾತಿ ವಾದ ಮಾಡಿಲ್ಲವೇ? ಕರ್ನಾಟಕ ‘ಯುನಿವರ್ಸಿಟಿ’ಗೆ ‘ಅಯ್ನೋರುಸಿಟಿ’ ಎಂಬ ಆರೋಪವಿದ್ದು, ಕಲಬುರ್ಗಿಯವರಂಥವರಿಂದಲೇ ಅಂಥದ್ದೊಂದು ಹಣೆಪಟ್ಟಿ ಬಂದಿರುವುದು ಸುಳ್ಳಾ? ಕಂಬಾರರ ಸಂಗ್ಯಾಬಾಳ್ಯಕ್ಕೆ ವಿರುದ್ಧವಾಗಿ ‘ಖರೆ ಖರೆ ಸಂಗ್ಯಾಬಾಳ್ಯ’ ಬರೆದಾಗ ಕಲಬುರ್ಗಿಯವರಲ್ಲಿ ಜಾಗೃತವಾಗಿದ್ದು ಜಾತಿಬುದ್ಧಿಯೇ ಅಲ್ಲವೆ? ಇನ್ನು ದಕ್ಷಿಣ ಕನ್ನಡದ ನೆಲದಲ್ಲಿ ನಿಂತು ‘ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ರಾಮಸೇನೆ, ಬಜರಂಗದಳಗಳೆಂಬ ಕಾದಾಟ ಹುಟ್ಟುಹಾಕಿದೆ’ ಎನ್ನುತ್ತಾರೆ. ಇವರಿಗೆ ಬರೀ ರಾಮಸೇನೆ, ಬಜರಂಗದಳಗಳೇ ಏಕೆ ಕಾಣುತ್ತಿವೆ? ದಕ್ಷಿಣ ಕನ್ನಡದಲ್ಲಿ ಮುಸಲ್ಮಾನರ ಕೆಎಫ್್ಡಿ, ಕ್ರೈಸ್ತರ ಸ್ಯಾಕ್ (ಸೋಷಿಯಲ್ ಆ್ಯಕ್ಷನ್ ಕಮಿಟಿ) ಎಂಬ ಹೆಸರಿನಲ್ಲಿ ‘ನೈತಿಕ ಪೊಲೀಸ’ನ ಕೆಲಸ ಮಾಡುತ್ತಿರುವ ಸಂಘಟನೆಗಳೂ ಇವೆ. ಕೆಎಫ್್ಡಿಯಂತೂ ಎಂಥ ಸಮಾಜವಿರೋಧಿ ಕೆಲಸದಲ್ಲಿ ತೊಡಗಿದೆ ಎಂಬುದು ಮೈಸೂರು ವಿದ್ಯಾರ್ಥಿಗಳ ಹತ್ಯಾಕಾಂಡದಿಂದ ಜಗಜ್ಜಾಹೀರಾಗಿದೆ. ಇಷ್ಟಾಗಿಯೂ ಕಲಬುರ್ಗಿಯವರ ‘ಸಂಶೋಧಕ’ ಕಣ್ಣಿಗೆ ಇವೇಕೆ ಬೀಳಲಿಲ್ಲ?
ಇಷ್ಟಾಗಿಯೂ ಇವರು ತಮ್ಮ ಜ್ಞಾನವನ್ನು, ಅಧ್ಯಯನವನ್ನು ವಿಷ ಬಿತ್ತಲು, ಜೊಳ್ಳು ಹರಡಲು ಬಳಸುತ್ತಿರುವುದೇಕೆ?
‘ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯ ಹೆಚ್ಚಲು ಮೈಸೂರು ಅರಸರ ಮೂರ್ಖತನವೇ ಕಾರಣ’ ಎಂದು ಬಡಬಡಾಯಿಸಿರುವ ಇವರ ಮಾತಿನಲ್ಲಿ ಹುರುಳೆಷ್ಟಿದೆ? ಕರ್ನಾಟಕದಲ್ಲಿ ಕನ್ನಡಿಗರು ಮಾತ್ರವೇ ಇರಬೇಕೆ? ಕರ್ನಾಟಕದ ಉದ್ಧಾರಕ್ಕೆ ಕೊಡುಗೆ ಕೊಟ್ಟವರು ಕನ್ನಡಿಗರು ಮಾತ್ರವೇ? ‘ನನ್ನನ್ನು ನೃಪತುಂಗ ಆವರಿಸಿಕೊಂಡಿದ್ದಾನೆ. ನನ್ನ ಮಗನಿಗೆ ಶ್ರೀವರ್ಷ ಎಂದೂ, ಮೊಮ್ಮಗನಿಗೆ ಅಮೋಘವರ್ಷ ಎಂದೂ ಹೆಸರಿಟ್ಟಿದ್ದೇನೆ, ನಾನು ಪಿಎಚ್್ಡಿಗಾಗಿ ಸಂಶೋಧನೆ ಮಾಡಿರುವುದೂ ನೃಪತುಂಗನನ್ನೇ’ ಎನ್ನುತ್ತಾರೆ. ಆದರೆ ಇವರನ್ನು ಯಾವ ವ್ಯಕ್ತಿ ಆವರಿಸಿದ್ದಾನೋ ಆ ನೃಪತುಂಗನೇ “ಕಾವೇರಿಯಿಂದಂ ಆ ಗೋದಾವರಿ ವರಂ’ ಎಂದು ್ನಕರ್ನಾಟಕದ ಉದ್ದಗಲವನ್ನು ವರ್ಣಿಸಿದ್ದಾನೆ. ನೃಪತುಂಗ ಹೇಳಿದ ಪ್ರಕಾರ ಗಡಿರೇಖೆ ರಚಿಸಿದರೆ ಈಗಿರುವ ಹಲವಾರು ಭಾಗಗಳು ನಮ್ಮ ರಾಜ್ಯಕ್ಕೆ ಸೇರುವುದಿಲ್ಲ!
ಒಂದು ಕಾಲದಲ್ಲಿ ನಮ್ಮ ರಾಜಧಾನಿ ಬೆಂಗಳೂರು ಕೂಡ ತಮಿಳು ವಂಶಾಡಳಿತಗಳಾದ ಚೋಳರು ಮತ್ತು ಪಲ್ಲವರ ಪ್ರಭಾವಲಯಕ್ಕೆ ಸೇರಿತ್ತು. ಹಾಗಂತ ಬೆಂಗಳೂರನ್ನು ತಮಿಳರು ತಮ್ಮದೆಂದು ಈಗ ಪ್ರತಿಪಾದಿ ಸಲು ಬಂದರೆ ಸುಮ್ಮನಿರುತ್ತೇವೆಯೇ? ಒಂದಂತೂ ನಿಜ, ಆ ಕಾಲದಲ್ಲಿ ನಿಮ್ಮಂತೆಭಾಷಾ ಸಂಕುಚಿತತೆ ಇರಲಿಲ್ಲ. ಒಂದು ರಾಜ್ಯ, ಮತ್ತೊಂದು ರಾಜ್ಯದ ಹತ್ತಿರದ ಭಾಗಗಳು ಸ್ವಾಭಾವಿಕವಾಗಿಯೇ ಬೆರೆತಿರುತ್ತಿದ್ದವು, ಭಾಷಾ ಭೇದವೂ ಇರಲಿಲ್ಲ. ಬ್ರಿಟಿಷರು ಬಂದ ಮೇಲಷ್ಟೇ ಈ ರೀತಿಯ ವಿಭಜನೆ ಆರಂಭವಾಯಿತು.
ಮೈಸೂರಿನ ಒಡೆಯರು ತಮಿಳಿನವರನ್ನೇ ಹೆಚ್ಚಾಗಿ ದಿವಾನರಾಗಿ ನೇಮಕ ಮಾಡಲು ಕಾರಣವೂ ಇತ್ತು. ಮದ್ರಾಸ್ ರಾಜ್ಯ ಬ್ರಿಟಿಷರ ನೇರ ಹಿಡಿತದಲ್ಲಿತ್ತು. ಒಡೆಯರೂ ಬ್ರಿಟಷರಿಗೆ ಅಧೀನರಾಗಿದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸುವ ಯೋಗ್ಯ ವ್ಯಕ್ತಿಗಳು ಹೆಚ್ಚಾಗಿ ಮದ್ರಾಸ್್ನಲ್ಲೇ ಇದ್ದಿದ್ದರಿಂದ ದಿವಾನರಾಗಿ ಅಲ್ಲಿಯವರನ್ನೇ ನೇಮಕ ಮಾಡುತ್ತಿದ್ದರು. ಅಂದಮಾತ್ರಕ್ಕೆ ಅವರು ಕನ್ನಡನಾಡಿನ ಅಭಿವೃದ್ಧಿಗಾಗಿ ಶ್ರಮಿಸಲಿಲ್ಲವೆ? ದಿವಾನ್ ರಂಗಾಚಾರ್ಲು, ಶಿಂಶಾದಲ್ಲಿ ವಿದ್ಯುತ್ ಜನರೇಟ್ ಮಾಡಿದ ದಿವಾನ್ ಶೇಷಾದ್ರಿ ಅಯ್ಯರ್ ಕನ್ನಡದ ಕೆಲಸ ಮಾಡಲಿಲ್ಲವೆ? ನಿಮ್ಮ ಸಾಹಿತ್ಯ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಜಿ.ಪಿ. ರಾಜರತ್ನಂ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ.ಪಿ. ಕೈಲಾಸಂ, ಪುತಿನ, ಡಿವಿಜಿ ಇವರೆಲ್ಲ ತಮಿಳರೇ ಅಲ್ಲವೆ? ಇವರು ಕನ್ನಡದ ಸೇವೆ ಮಾಡಲಿಲ್ಲವೆ? ಮಾಸ್ತಿ ಜ್ಞಾನಪೀಠ ತಂದುಕೊಡಲಿಲ್ಲವೆ? ತಮಿಳಿಗರಾದ ಆರ್. ನರಸಿಂಹಾಚಾರ್ಯರು ಕನ್ನಡದ ಶಾಸನಗಳು ಓದಿ ಕನ್ನಡದ ಕವಿಚರಿತ್ರೆಯನ್ನು ಬರೆದರು, ಕನ್ನಡ ಪ್ರಾಚೀನ ಕಾವ್ಯಗಳನ್ನು ಹಸ್ತಪ್ರತಿಯಿಂದ ಮುದ್ರಣಕ್ಕೆ ತಂದ ಮೊದಲ ವ್ಯಕ್ತಿ ಎಸ್.ಜಿ. ನರಸಿಂಹಾಚಾರ್ಯರೂ ತಮಿಳರೇ. ಕನ್ನಡದ ಮಹಾಪಂಡಿತರೆಂದು ಹೆಸರಾಗಿದ್ದ ಡಿ.ಎಲ್. ನರಸಿಂಹಾಚಾರ್ ಕೂಡ ತಮಿಳರೇ. ಗ್ರೀಕ್್ನಿಂದ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೆ.ವಿ. ರಾಘವಾಚಾರ್, ಎಲ್ಲ ಪ್ರಾಚೀನ ಕಾವ್ಯಗಳನ್ನು ಓದಿ ‘ಅಕಾರಾದಿ’ (ಇಂಡೆಕ್ಸ್) ಹಾಕಿಕೊಟ್ಟ ಎನ್. ಅನಂತರಂಗಾಚಾರ್ ತಮಿಳರೇ. ಹಾಗಿರುವಾಗ ನಿಮ್ಮಲ್ಲಿ ಮನೆಮಾಡಿರುವ ಸಂಕುಚಿತ ಮನಸ್ಥಿತಿಯನ್ನು ಏಕೆ ನಾಡಿನುದ್ದಕ್ಕೂ ಹರಡಲು ಪ್ರಯತ್ನಿಸುತ್ತಿದ್ದೀರಿ?
ಕನ್ನಡದವರು ಬಂಗಾಳ, ನೇಪಾಳ, ಗುಜರಾತ್್ಗೆ ಹೋಗಿ ಆಳಿದರು, ಇಂಥ ಸಾಧನೆ ಮಾಡಿದರು ಎಂದು ಹೆಮ್ಮೆಪಟ್ಟುಕೊಳ್ಳುತ್ತೇವೆ. ಕಾಸರಗೋಡು ಜಿಲ್ಲೆಯ ಶಾಸಕ ಚೆರ್ಕಳ ಅಬ್ದುಲ್ಲಾ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆಂದು ಬಾಯಿಚಪ್ಪರಿಸುತ್ತೇವೆ. ಆದರೆ ಬೇರೆಯವರು ಇಲ್ಲಿಗೆ ಬಂದರೆ ಹೊಟ್ಟೆ ಉರಿಮಾಡಿಕೊಳ್ಳುವ ದ್ವಂದ್ವವೇಕೆ? ಕರ್ನಾಟಕ ವಿಧಾನಸಭೆಯಲ್ಲಿ ಯಾರಾದರೂ ತಮಿಳು, ತೆಲುಗಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ ಅವರ ಗತಿಯೇನಾಗುತ್ತಿತ್ತು? ನೇಪಾಳದ ಪಶುಪತಿನಾಥನಿಗೆ ಕನ್ನಡದ ಅರ್ಚಕರಿದ್ದಾರೆ, ಉತ್ತರಭಾರತದ ಕೇದಾರರೇಶ್ವನ ಅರ್ಚಕರು ನಮ್ಮ ವೀರಶೈವರು. ಕನ್ನಡದ ರಾಜಮನೆತನಗಳಾದ ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟ, ಗಂಗ, ವಿಜಯನಗರದ ಅರಸರು ತಮಿಳುನಾಡು, ಗುಜರಾತ್, ಬಿಹಾರ, ರಾಜಸ್ಥಾನ ಸೇರಿದಂತೆ ಭಾರತದ ಹಲವು ಕಡೆಗಳನ್ನು ವ್ಯಾಪಿಸಿ ಆಳಿದರು. ಇದನ್ನೆಲ್ಲ ನೆನೆಸಿಕೊಂಡು ಹೆಮ್ಮೆಪಡುವ ನಾವು, ನಮ್ಮಲ್ಲಿಗೆ ಅನ್ಯರು ಬಂದರು ಎಂದೇಕೆ ಕೋಪಿಸಿಕೊಳ್ಳಬೇಕು? ಜಯಲಲಿತಾ, ರಜನೀಕಾಂತ್, ಅರ್ಜುನ್ ಸರ್ಜಾ, ಕೋಕಿಲಾ ಮೋಹನ್್ರನ್ನು ತಮಿಳು ಚಿತ್ರರಂಗ ಆದರಿಸಿಲ್ಲವೆ?
ಗುರುದತ್, ಐಶ್ವರ್ಯ ರೈ, ಸಂದೀಪ್ ಚೌಟಾ, ಸೌಂದರ್ಯ ಇವರನ್ನು ಅನ್ಯರು ಒಪ್ಪಿಕೊಳ್ಳಲಿಲ್ಲವೆ? ವಿಶ್ವೇಶ್ವರಯ್ಯ ತೆಲುಗು ಭಾಷಿಕರಲ್ಲವೆ? ಇದನ್ನು ಬಿಟ್ಟು ತಮಿಳರ ಬಗ್ಗೆ ಅತಾರ್ಕಿಕವಾಗಿ ದ್ವೇಷಕಾರುತ್ತೀರಲ್ಲಾ ಕಲಬುರ್ಗಿಯವರೇ, ಇದು ಸತ್ಯಕ್ಕೆ ಮಾಡುವ ಅಪಚಾರ, ಅತ್ಯಾಚಾರವಲ್ಲವೆ? ನಿಮ್ಮಂಥವರಿಂದಾಗಿಯೇ ಅಲ್ಲವೇ ಇವತ್ತು ಕನ್ನಡದ ಬಗ್ಗೆ ಮಾತನಾಡುವುದು ಉದಾರತೆ, ರಾಷ್ಟ್ರೀಯತೆ ಬಗ್ಗೆ ಮಾತನಾಡುವುದು ಸಂಕುಚಿತತೆಯಾಗಿ ಪರಿಣಮಿಸಿರುವುದು?
ಈ ಮಧ್ಯೆ ಶಿಕ್ಷಕರ ಬಗ್ಗೆಯೂ ಏಕೆ ಹಗುರವಾಗಿ ಮಾತನಾಡಿದ್ದೀರಿ? ‘ಸ್ನಾತಕ, ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿ ಪಗಾರಕ್ಕಾಗಿ ಬರುವ ಶಿಕ್ಷಕರು ಹಾಗೂ ಪ್ರಮಾಣಪತ್ರಗಳಿಗಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಪಗಾರ ಹೆಚ್ಚಳದಿಂದ ಶಿಕ್ಷಕರು ಸೋಮಾರಿಗಳಾಗಿದ್ದಾರೆ, ವಿಫುಲ ಅನುದಾನದಿಂದ ಭ್ರಷ್ಟರಾಗುತ್ತಿದ್ದಾರೆ’- ಇದೆಂಥ ಮಾತು ಸ್ವಾಮಿ? ಏಕೆ ಸಾರಾಸಗಟಾಗಿ ಇಡೀ ಶಿಕ್ಷಕವೃಂದವನ್ನೇ ದುಡ್ಡಿನ ಬಗ್ಗೆಯಷ್ಟೇ ಹಪಾಹಪಿ ಇಟ್ಟುಕೊಂಡಿರುವವರು ಎಂಬಂತೆ ದೂರುತ್ತಿದ್ದೀರಿ? ಸ್ನಾತಕ, ಸ್ನಾತಕೋತ್ತರ ಶಿಕ್ಷಕರ ಸಂಬಳ ನಿಮ್ಮ ಕಣ್ಣನ್ನು ಕುಕ್ಕುತ್ತಿರುವುದೇ ಆದರೇ ಶಾಲಾ ಶಿಕ್ಷಕರು ಕತ್ತೆಗಳಂತೆ ದುಡಿಯುತ್ತಿದ್ದಾರಲ್ಲಾ ಅವರಿಗೂ ಯೋಗ್ಯ ಸಂಬಳ ಕೊಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಬಹುದಿತ್ತಲ್ಲವೆ? ಅಸೂಯೆ, ಅಸಮಾಧಾನ ವ್ಯಕ್ತಪಡಿಸುವುದೇ ನಿಮ್ಮ ಉದ್ಯೋಗವೇ? ಸ್ನಾತಕ, ಸ್ನಾತಕೋತ್ತರ ಶಿಕ್ಷಕರ ಸಂಬಳ ಹೆಚ್ಚಾಗಿ ವರ್ಷ ಕಳೆದಿದೆಯಷ್ಟೇ. ಇಷ್ಟು ವರ್ಷ ಅವರು ದುಡಿದೇ ಇಲ್ಲವೆ? ಸಂಬಳ ಹೆಚ್ಚು ಮಾಡಿದ ಮಾತ್ರಕ್ಕೇ ಸೋಮಾರಿಗಳಾಗುತ್ತಾರೆಂದೇಕೆ ಭಾವಿಸಬೇಕು? ನಿಮ್ಮ ಪ್ರಕಾರ ಸ್ನಾತಕ, ಸ್ನಾತಕೋತ್ತರ ಶಿಕ್ಷಕರು ಜೀವಮಾನವಿಡೀ ಯೋಗ್ಯ ಪ್ರತಿಫಲವಿಲ್ಲದೆ ದುಡಿಯಬೇಕಿತ್ತೇ? ಕಲಬುರ್ಗಿಯವರೇ, ನೀವು ಜನರಿಗೆ ಹೆಚ್ಚಾಗಿ ಪರಿಚಿತವಾಗಿದ್ದು ಹಾಗೂ ಪರಿಚಿತರಾಗುತ್ತಿರುವುದು ಪತ್ರಿಕಾ ವರದಿ ಮತ್ತು ಹೇಳಿಕೆಗಳ ಮೂಲಕವೇ ಹೊರತು ಕೃತಿಗಳಿಂದಲ್ಲ. ನಿಮಗಿಂತ ಒಬ್ಬ ಶಿಕ್ಷಕನೇ ಶಾಲಾ ಮಕ್ಕಳನ್ನು ಹೆಚ್ಚು ಪ್ರಭಾವಿಸುತ್ತಾನೆ ನೆನಪಿಟ್ಟುಕೊಳ್ಳಿ.
ಅದಿರಲಿ, ವಿವಾದಗಳನ್ನು ಸೃಷ್ಟಿಸುವುದೇ ಇವರುಗಳ ಜಾಯಮಾನವೇ?
- ಕೃಪೆ: ಪ್ರತಾಪ ಸಿಂಹ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ