ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಡಿಸೆಂಬರ್ 5, 2011

ಸಾಮಾನ್ಯರ ಬದುಕನ್ನು ಬಿಕರಿಗಿಡುವ ಮುನ್ನ... ಪ್ರತಾಪ ಸಿಂಹ

ಯಾವುದೇ ಕಂಪನಿಗಳು ಬಂದರೂ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಸಂಗ್ರಹಣೆ ಮಾಡಬೇಕು, ನಮ್ಮ ರೈತರಿಂದಲೇ ಪಡೆದುಕೊಳ್ಳಬೇಕು, ಹೊರಗಿನಿಂದ ಆಮದು ಮಾಡಿಕೊಳ್ಳಬಾರದು, ನಮ್ಮ ನಿಯಂತ್ರಣದಲ್ಲಿರಬೇಕು ಎಂಬ ಷರತ್ತುಗಳನ್ನು ಹಾಕಲು ಸರ್ಕಾರಕ್ಕೇನು ದಾಡಿ? ಹಾಗಾದಾಗ ಯಾರು ತಾನೇ ಎಫ್್ಡಿಐಗೆ ವಿರೋಧ ವ್ಯಕ್ತಪಡಿಸುತ್ತಾರೆ?
1. ವಾಲ್್ಮಾರ್ಟ್
2. ಕ್ಯಾರ್್ಫೋರ್
3. ಮೆಟ್ರೋ
4. ಟೆಸ್ಕೋ
5. ಲಿಡ್ಲ್ ಸ್ಟಿಫುಂಗ್ ಆ್ಯಂಡ್ ಕಂಪನಿ
6. ದಿ ಕ್ರೋಗರ್ ಕಂಪನಿ
7. ಕಾಸ್ಟ್್ಕೋ
8. ಅಲ್್ಡಿ(Albrecht Discout)
9. ಹೋಮ್ ಡಿಪೋ
10. ಟಾರ್ಗೆಟ್ ಕಾರ್ಪೋರೇಷನ್
ಅಮೆರಿಕ, ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್್ಗಳ ಈ ಕಂಪನಿಗಳು ಕಾಲಿಟ್ಟರೆ ಭಾರತದ ಗ್ರಾಹಕ ಉದ್ಧಾರವಾಗಿ ಬಿಡುತ್ತಾನೆ, ವಿದೇಶಿ ನೇರ ಬಂಡವಾಳ ಹೂಡಿಕೆ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತದೆ, ಮಿಲಿಯಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಉದ್ಯೋಗದ ಗುಣಮಟ್ಟದಲ್ಲೂ ಸುಧಾರಣೆಯಾಗುತ್ತದೆ, ಗ್ರಾಹಕರಿಗೆ ಅಗಾಧ ಅಯ್ಕೆಗಳು ಲಭ್ಯವಾಗುತ್ತವೆ, ಬೆಲೆಯಲ್ಲಿ ಕಡಿತವುಂಟಾಗುತ್ತದೆ, ಸಣ್ಣಪುಟ್ಟ ಉದ್ಯಮಿಗಳಿಗೂ ವ್ಯಾಪಾರ ಗುತ್ತಿಗೆಗಳು ದೊರೆಯುತ್ತವೆ, ಕಾರ್ಯಕ್ಷಮತೆಯಲ್ಲೂ ಸುಧಾರಣೆಯಾಗುತ್ತದೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ತೀವ್ರ ಪ್ರಗತಿಯುಂಟಾಗುತ್ತದೆ, ಚಿಲ್ಲರೆ ಬಿಕರಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಜಾರಿಯಾಗುತ್ತದೆ, ಸರಕು ಸಾಗಣೆ, ಶೈತ್ಯಾಗಾರ ಕ್ಷೇತ್ರದಲ್ಲಿ ಬದಲಾವಣೆ ಕಂಡುಬರುತ್ತದೆ.
ಕಳೆದ ವಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ. 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ(ಎಫ್್ಡಿಐ) ಕೇಂದ್ರ ಸಂಪುಟ ಅಸ್ತು ನೀಡಿದ ಮೇಲೆ ಈ ರೀತಿಯ ಮಾತುಗಳು ಕೇಳಿಬರುತ್ತಿವೆ. ಒಬ್ಬ ರೈತನಿಗೆ ತನ್ನ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಹಾಗೂ ದಲ್ಲಾಳಿಗಳ ತಲೆನೋವಿಲ್ಲದೆ ಸೂಕ್ತ ಬೆಲೆ ಸಿಗುವುದಾದರೆ ಏಕೆ ಬೇಡವೆನ್ನಬೇಕು? ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆಂದರೆ ಒಳ್ಳೆಯ ಬೆಳವಣಿಗೆಯೇ ಅಲ್ಲವೆ? ಅಮೆರಿಕದಲ್ಲಿವೆ, ಯುರೋಪ್್ನಾದ್ಯಂತ ಇವೆ, ಅಲ್ಲೇನು ರೈತರಿಲ್ಲವಾ? ಅವರೆಲ್ಲ ಹಾಳಾಗಿ ಹೋಗಿದ್ದಾರೇನು ಎಂಬ ವಾದವನ್ನೂ ಮುಂದಿಡಲಾಗುತ್ತಿದೆ. ಹಾಗಾದರೆ ಇದೆಲ್ಲಾ ನಿಜವಾ? ಇವರ ಮಾತುಗಳ ಮೇಲೆ ನಿಜಕ್ಕೂ ವಿಶ್ವಾಸವಿಡಬಹುದಾ? ಒಂದು ವೇಳೆ ವಾಲ್್ಮಾರ್ಟ್, ಟೆಸ್ಕೋ, ಕ್ಯಾರ್್ಫೋರ್್ನಂತಹ ಸೂಪರ್, ಹೈಪರ್ ಮಾರ್ಕೆಟ್್ಗಳು ಬಂದರೆ ರೈತರಿಗೆ ಯೋಗ್ಯ ಬೆಲೆ, ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕು ಸಿಗುತ್ತವಾ? ಈ ವಿಷಯ ಅಷ್ಟು ಸುಲಭಕ್ಕೆ ಅರ್ಥವಾಗುವಂಥದ್ದೆ? ಇವುಗಳು ಬರುವುದರಿಂದ ಯಾವ ಅಪಾಯಗಳೂ ಇಲ್ಲವೆ?
ಅದಿರಲಿ, ಚಂಪಾರಣ್ ಸತ್ಯಾಗ್ರಹದ ಬಗ್ಗೆ ಎಂದಾದರೂ ಕೇಳಿದ್ದೀರಾ?
ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ವಾಪಸ್ಸಾಗಿದ್ದು 1915ರಲ್ಲಿ. ಅದೇ ವರ್ಷ ಸಾಬರಮತಿಯಲ್ಲಿ ಸತ್ಯಾಗ್ರಹ ಆಶ್ರಮವನ್ನೂ ಸ್ಥಾಪಿಸಿದ್ದರು. ನಾವಿಂದು ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸುವ ಸಾಮ್ರಾಜ್ಯಶಾಹಿತ್ವವನ್ನು ಕಾಣುತ್ತಿದ್ದರೆ ಅಂದು ಭೂಮಿಯ ಮೇಲೆ ನಿಯಂತ್ರಣ ಸಾಧಿಸುವ ಸಾಮ್ರಾಜ್ಯಶಾಹಿತ್ವವಿತ್ತು. ಗಾಂಧೀಜಿಯವರ ಸತ್ಯಾಗ್ರಹದ ಮೊದಲ ಪ್ರಯೋಗ ಆರಂಭವಾಗುವ ಕಾಲ ಸನ್ನಿಹಿತವಾಯಿತು. ಇಷ್ಟಕ್ಕೂ ಇಂಡಿಗೋ’ವನ್ನಷ್ಟೇ ಬೆಳೆಯುವಂತೆ ಬಿಹಾರದ ಚಂಪಾರಣ್ ಜಿಲ್ಲೆಯ ಜನರ ಮೇಲೆ ಬ್ರಿಟಿಷರು ಒತ್ತಡ ಹೇರಿದ್ದರು. ಬಡತನ, ಹಸಿವಿನಿಂದ ನರಳುತ್ತಿದ್ದ ಜನರಿಗೆ ಬೇರೆ ದಾರಿಯೇ ಇರಲಿಲ್ಲ. ಇಷ್ಟಾಗಿಯೂ ಬೆಳೆದ ನಂತರ ಜನರಿಗೆ ಸಿಗುತ್ತಿದ್ದುದು ಪರಿಹಾರ ರೂಪದ ಪುಡಿಗಾಸು, ಜತೆಗೆ ಅದರ ಮೇಲೆ ತೆರಿಗೆಯನ್ನೂ ಹಾಕುತ್ತಿದ್ದರು. 1917ರಲ್ಲಿ ಗಾಂಧೀಜಿ ಆರಂಭಿಸಿದ ಚಂಪಾರಣ್ ಸತ್ಯಾಗ್ರಹ ಇಂತಹ ದೌರ್ಜನ್ಯದ ವಿರುದ್ಧದ ಹೋರಾಟವೇ ಆಗಿತ್ತು. ಇವತ್ತು ಕೇಳಿಬರುತ್ತಿರುವ ಟೆಸ್ಕೋ ಬ್ರಿಟನ್ನಿನದೇ, ವಾಲ್್ಮಾರ್ಟ್ ಅಮೆರಿಕದ್ದು, ಕ್ಯಾರ್್ಫೋರ್ ಫ್ರಾನ್ಸ್್ನದ್ದು. ಈ ದೇಶಗಳಾಗಲಿ, ಅಲ್ಲಿನ ಕಂಪನಿಗಳಾಗಲಿ ಮಗದೊಂದು ದೇಶ ಅಥವಾ ಜನರ ಬದುಕನ್ನು ಸುಧಾರಿಸಿದ ಒಂದು ಉದಾಹರಣೆ ಕೊಡಿ ನೋಡೋಣ? ಇಲ್ಲಿ ಮೂರು ಪ್ರಮುಖ ಅಪಾಯಗಳಿವೆ ಗೊತ್ತಾ?
1. ಬೆಳೆ ಬೆಳೆಯುವ ರೈತನ ಹಕ್ಕಿನ ಕಸಿತ!
2. ಮಾರ್ಕೆಟ್ ಮೊನೊಪಲಿ ಅಥವಾ ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧನೆ.
3. ಸಾಮಾನ್ಯ ಜನರ ಉದ್ಯಮಶೀಲತೆಯನ್ನು ಕೊಲ್ಲುವ ಅಪಾಯ.
ಈ ಎಫ್್ಡಿಐಗೂ, ಕಾಂಟ್ರ್ಯಾಕ್ಟ್ ಫಾರ್ಮಿಂಗ್್ಗೂ(ಗುತ್ತಿಗೆ ಕೃಷಿ) ನೇರ ಸಂಬಂಧವಿದೆ. ಏಕೆಂದರೆ ರೈತ ತನಗೆ ಬೇಕಾದ ಬೆಳೆ ಬೆಳೆದು ಟೆಸ್ಕೋ, ವಾಲ್್ಮಾರ್ಟ್್ಗೆ ಮಾರುವ ಬದಲು, ಅವರು ಹೇಳಿದ ಬೆಳೆಯನ್ನು ತನ್ನ ಹೊಲ-ಗದ್ದೆಯಲ್ಲಿ ಬಿತ್ತಬೇಕಾಗುತ್ತದೆ. ಅಲ್ಲಿಗೆ ಬೆಳೆ ಬೆಳೆಯುವ ರೈತನ ಹಕ್ಕನ್ನೇ ಕಸಿದುಕೊಳ್ಳುತ್ತಾರೆ. ದಲ್ಲಾಳಿಗಳ ಉಪಟಳ, ಬೆಲೆ ಕುಸಿತದ ಸಮಸ್ಯೆ ಇಲ್ಲಿರುವುದಿಲ್ಲಾ ಎನ್ನುತ್ತಾರಲ್ಲಾ ಇವರ ಮಾತನ್ನು ನಿಜಕ್ಕೂ ನಂಬಲು ಸಾಧ್ಯವೆ? ಎಲ್ಲವನ್ನೂ ತೆರೆಯಬೇಕು ಎನ್ನುವ ಉದಾರೀಕರಣದ ಪ್ರತಿಪಾದಕರ ಮಾತು ಕೇಳಿ ಈಗಾಗಲೇ ಶುಗರ್ ಇಂಡಸ್ಟ್ರಿಯನ್ನು ತೆರೆದಿದ್ದಾಗಿದೆ. ಆದರೆ ಆಗಿದ್ದೇನು? ಕಳೆದ ವರ್ಷ ಪ್ರತಿಟನ್ ಕಬ್ಬಿಗೆ 2 ಸಾವಿರ ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು. ಈ ವರ್ಷ ಅದು 1,400 ರೂ.ಗೆ ಕುಸಿದಿದೆ! ಏಕೆ ಎಂದು ಕೇಳಿದರೆ, ಈ ವರ್ಷ ಬ್ರೆಝಿಲ್್ನಲ್ಲಿ ಭಾರೀ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯಾಗಿದೆ, ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿದಿದೆ ಎಂಬ ಸಬೂಬು ಕೊಡುತ್ತಿದ್ದಾರೆ. ಜಾಸ್ತಿ ಮಾತನಾಡಿದರೆ ನಿಮ್ಮ ಪ್ರಾಡಕ್ಟೇ ಬೇಡ ಎನ್ನುತ್ತಾರೆ! ನಮ್ಮಲ್ಲೇ ಖರೀದಿ, ಉತ್ಪಾದನೆ ಮಾಡುವುದಕ್ಕಿಂತ ಪಾಕಿಸ್ತಾನದಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳುವುದೇ ಅಗ್ಗ ಎಂದ ಉದಾಹರಣೆ ಈಗಾಗಲೇ ಇಲ್ಲವೆ? ಸಕ್ಕರೆ ಉದ್ಯಮ ಉದಾರೀಕರಣಗೊಂಡಿದ್ದರಿಂದ ಯಾರಿಗೆ ಲಾಭವಾಗುತ್ತಿದೆ? ನಮ್ಮ ರೈತನಿಗೆ ಲಾಭವಾಗುತ್ತಿದ್ದರೆ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶದ ರೈತರ ಬವಣೆ ಈ ವೇಳೆಗೆ ಅಂತ್ಯಗೊಂಡಿರಬೇಕಿತ್ತಲ್ಲವೆ? ಅಗ್ಗದ ಬೆಲೆಯ ಮಾತನಾಡುತ್ತಾರಲ್ಲಾ ಹಾಗಾದರೆ ವಾಲ್್ಮಾರ್ಟ್ ಹೆಚ್ಚಾಗಿ ನೆಚ್ಚಿಕೊಂಡಿರುವ ಚೀನಾದಿಂದಲೇ ಆಹಾರ ಹಾಗೂ ಇನ್ನಿತರ ಸರಕುಗಳು ಹರಿದು ಬಂದರೆ ನಮ್ಮ ರೈತನ ಕಥೆಯೇನು? ಚೀನಿ ಸರಕುಗಳನ್ನು ಡಂಪ್ ಮಾಡದೇ ಇರುತ್ತಾರಾ? ಭಾರತಕ್ಕಿಂತ ಚೀನಾವೇ ಅಕ್ಕಿ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳನ್ನು ಹೆಚ್ಚು ಉತ್ಪಾದಿಸುತ್ತದೆ. ಅಲ್ಲಿಂದಲೇ ತರಿಸಿಕೊಂಡರೆ? ಇವತ್ತು ಪಿಡಿಎಸ್್ಗೆ(ಪಡಿತರ ಪೂರೈಕೆ) ಬೇಕಾದ ಸರಕುಗಳನ್ನೇ ಸ್ಥಳೀಯವಾಗಿ ಸಂಗ್ರಹಣೆ(ಪ್ರೊಕ್ಯೂರ್) ಮಾಡದೆ ಪಂಜಾಬ್್ನಿಂದ ಅಕ್ಕಿ ಎತ್ತಿ ಕರ್ನಾಟಕದಲ್ಲಿ ಹಂಚುವ ಲಾಬಿಯನ್ನು ನಾವು ನೋಡುತ್ತಿದ್ದೇವೆ, ಹಾಗಿರುವಾಗ ವಾಲ್್ಮಾರ್ಟ್, ಕ್ಯಾರ್್ಫೋರ್್ಗಳನ್ನು ಹೇಗೆ ನಂಬುವುದು? ಎಸ್.ಎಂ. ಕೃಷ್ಣ ಕಾಲದಲ್ಲಿ ರಾಗಿ ಕಾಂಟ್ರ್ಯಾಕ್ಟ್ ಫಾರ್ಮಿಂಗ್್ಗೆ ಒಪ್ಪಂದ ಮಾಡಿಕೊಂಡ ಮೊದಲ ವರ್ಷ ಒಳ್ಳೆ ಬೆಲೆ ಕೊಟ್ಟರು, ನಂತರ ಬೆಲೆ ಕುಸಿಯಿತು. ರೈತ ಮತ್ತು ಕಂಪನಿ ನಡುವೆ ಕಾಂಟ್ರ್ಯಾಕ್ಟ್ ಇರುವುದರಿಂದ ಸರ್ಕಾರ ಕೂಡ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಆಗ ಯಾರ ಬಳಿ ರೈತರು ತಮ್ಮ ಅಳಲು ತೋಡಿಕೊಳ್ಳಬೇಕು? ಮಾನ್ಯ ಸಚಿವರಾದ ಉಮೇಶ್ ಕತ್ತಿಯವರು ಬುಧವಾರವಷ್ಟೇ ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಅನ್ನು ಪುನರುಜ್ಜೀವಗೊಳಿಸುವ ಮಾತನಾಡಿದ್ದಾರೆ! ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ತಿಂಗಳಿಗೆ 25 ಕೆಜಿ ಅಕ್ಕಿ ಕೊಡುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರಲ್ಲಿ ಸೋಮಾರಿತನವನ್ನು ಹೆಚ್ಚಿಸಿರುವ, ಕೆಲಸಗಾರರಿಲ್ಲದೆ ಕೃಷಿ ಕೆಲಸ ಬಿಡುತ್ತಿರುವ ರೈತ… ಈ ಸಂದರ್ಭದಲ್ಲಿ ಎಫ್್ಡಿಐ, ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಬಂ ದರೆ ದೇವರೇ ಗತಿ ಎನಿಸುವು ದಿಲ್ಲವೆ? ಇಂದಲ್ಲ ನಾಳೆ ಸ್ಪರ್ಧೆಗೆ ನಿಮ್ಮನ್ನು ಒಡಿಕೊಳ್ಳಲೇ ಬೇಕು ಎನ್ನುವ ಇವರಿಗೆ ಬೇರೆ ಉದ್ದಿಮೆಗಳಿಗೂ ಕೃಷಿಗೂ ವ್ಯತ್ಯಾಸವಿದೆ ಎಂಬ ಕನಿಷ್ಠ ಅರಿವೂ ಇಲ್ಲವೆ? ಎಫ್್ಡಿಐ ಬದಲು ನಮ್ಮ ಎಪಿಎಂಸಿಯನ್ನೇ ಏಕೆ ಬಲಪಡಿಸ ಬಾರದು? ಅಗ್ರಿಕಲ್ಚರ್್ನ ಸಮಸ್ಯೆಯೇನೆಂದರೆ ಪ್ರೈಸಿಂಗ್. ಸರಿಯಾದ ಬೆಲೆ ನಿಗದಿ ಮಾಡಬೇಕೇ ಹೊರತು ಸೂಪರ್್ಮಾರ್ಟ್್ಗಳ ಮೂಲಕ ಪರಿಹಾರ ಹುಡುಕುವುದಲ್ಲ. ಎಫ್್ಡಿಐ ಬಂದ ಕೂಡಲೇ ಉದ್ಯೋಗ ಸೃಷ್ಟಿಯಾಗುತ್ತದೆ, ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕು ಲಭ್ಯವಾಗುತ್ತವೆ, ರೈತರಿಗೆ ನೇರಮಾರುಕಟ್ಟೆ ಲಭ್ಯವಾಗುತ್ತದೆ ಎಂಬುದಕ್ಕೆ ಯಾವ ಆಧಾರವಿದೆ? 2006ರಲ್ಲೇ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಭಾರತೀಯ ಬಹುರಾಷ್ಟ್ರೀಯ ಕಂಪನಿಗಳಿಗೆ ತೆರೆಯಲಾಗಿದೆ. ರಿಲಾಯನ್ಸ್, ಮೋರ್, ಬಿಗ್ ಬಝಾರ್್ಗಳು ಬಂದ ಮೇಲೆ ರೈತರಿಗಾಗಲಿ, ಗ್ರಾಹಕರಿಗಾಗಲಿ ಏನಾದರೂ ಗಮನಾರ್ಹ ಲಾಭವಾಗಿದೆಯೇ? ಬಹುತೇಕ ವಸ್ತುಗಳು ಒಂದೇ ಸ್ಥಳದಲ್ಲಿ ಸಿಗುತ್ತವೆ ಎನ್ನುವುದನ್ನು ಬಿಟ್ಟರೆ ಬೆಲೆಯಲ್ಲಿ ಯಾವ ಕಡಿತವಾಗಿದೆ? ಇನ್ನೊಂದೆಡೆ ವಾಲ್್ಮಾರ್ಟ್್ನಿಂದಾಗಿ ಅಮೆರಿಕದ ರೈತರೇನಾದರೂ ಉದ್ಧಾರವಾಗಿದ್ದಾರಾ? ಇಂದಿಗೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಬ್ಸಿಡಿ ಪಡೆಯುತ್ತಿರುವವರು ಅಮೆರಿಕ ಹಾಗೂ ಯುರೋಪಿನ ರೈತರು. 1995ರಿಂದ 2009ರವರೆಗೆ ಅಮೆರಿಕ ಸರ್ಕಾರ ತನ್ನ ರೈತರಿಗೆ 12.50 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಿ ಋಣಮುಕ್ತರನ್ನಾಗಿಸಿದೆ ಎಂಬ ಅಂಶವನ್ನು ಖ್ಯಾತ ಕೃಷಿತಜ್ಞ ದೇವಿಂದರ್ ಶರ್ಮಾ ಮುಂದಿಟ್ಟಿದ್ದಾರೆ. ಅಮೆರಿಕದ ರೈತರನ್ನೇ ಉದ್ಧಾರ ಮಾಡದ ವಾಲ್್ಮಾರ್ಟ್ ಭಾರತದ ನೇಗಿಲಯೋಗಿಯನ್ನು ಉದ್ಧಾರ ಮಾಡೀತೆ?
ಎರಡನೆಯದಾಗಿ, ಮಾರ್ಕೆಟ್ ಮೊನೋಪಲಿ ಅಥವಾ ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧನೆಯಾಗದೆ ಉಳಿದೀತೆ?
ವಾಲ್್ಮಾರ್ಟ್, ಕ್ಯಾರ್್ಫೋರ್, ಮೆಟ್ರೋ, ಟೆಸ್ಕೋದಂಥ ದೈತ್ಯ ಕಂಪನಿಗಳ ಜತೆ ಸ್ಪರ್ಧೆ ಮಾಡುವುದಕ್ಕಾದರೂ ಸಾಧ್ಯವಿದೆಯೇ? ಇವತ್ತು ಎಫ್್ಡಿಐ ಅನ್ನು ಸ್ವಾಗತಿಸುತ್ತಿರುವ ಬಿಗ್ ಬಝಾರ್್ನ ಕಿಶೋರ್ ಬಿಯಾನಿ 2005ರಲ್ಲಿ ಎಫ್್ಡಿಐಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿದೇಶಿ ಕಂಪನಿಗಳಿಗೆ ಎಂತಹ ಸಾಮರ್ಥ್ಯವಿದೆಯೆಂದರೆ ಬೆಲೆಯನ್ನು ಯದ್ವಾತದ್ವ ಇಳಿಸಿ, ಮೂರ್ನಾಲ್ಕು ವರ್ಷದವರೆಗೂ ಅದೇ ಅಗ್ಗದ ಬೆಲೆಯನ್ನು ಕಾದುಕೊಂಡು ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರಗಳೆರಡರ ಸ್ಪರ್ಧೆಯನ್ನು ಶಾಶ್ವತವಾಗಿ ಕೊಂದು ನಂತರ ತಮ್ಮ ಹೊಟ್ಟೆ ತುಂಬಿಸಿಕೊಳ್ಳಬಲ್ಲವು. ಇದರಿಂದ ನಗರಗಳ ಗ್ರಾಹಕರಿಗೆ ತಾತ್ಕಾಲಿಕ ಲಾಭ, ಅನುಕೂಲಗಳಾಗಬಹುದು. ಹಾಗಂತ ಕೋಟ್ಯಂತರ ಬಡ, ನಿರ್ಗತಿಕ ಭಾರತೀಯನ ಜೀವಮಾನದ ಕುರಿತು ನಮಗೆ ಯಾವ ಸಾಮಾಜಿಕ ಜವಾಬ್ದಾರಿಯೂ ಇಲ್ಲವೆ? ಕಿಸೆ ತುಂಬ ದುಡ್ಡಿದ್ದವನಷ್ಟೇ ಆಳುವಂಥ ಪರಿಸ್ಥಿತಿ ಸೃಷ್ಟಿಸುವುದು, Usurious Practiceಗೆ ದಾರಿ ಮಾಡಿಕೊಡುವುದು ಎಷ್ಟು ಸರಿ?
ಕೊನೆಯದಾಗಿ, ಇದು ನಮ್ಮ ಸಾಮಾನ್ಯ ಜನರ ಉದ್ಯಮಶೀಲತೆಯನ್ನು ಕೊಲ್ಲುವ ಸಾಧ್ಯತೆಯಿದೆ ಎಂದನಿಸುವುದಿಲ್ಲವೆ?
ಒಂದು ಕಿರಾಣಿ ಅಂಗಡಿ ಇರಬಹುದು, ಪಾನ್್ಶಾಪ್, ಬಟ್ಟೆ ಅಂಗಡಿ ಹಾಕಿ ದುಡಿಯುವಂಥ ಆಂಥ್ರಪ್ರೆನರ್್ಷಿಪ್ ನಮ್ಮ ಜನರಲ್ಲಿದೆ. ವಾಲ್್ಮಾರ್ಟ್, ಕ್ಯಾರ್್ಫೋರ್, ಮೆಟ್ರೋ, ಟೆಸ್ಕೋಗಳು ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತ. ಹೆಚ್ಚಿನವರು ಸಣ್ಣಪುಟ್ಟ ವ್ಯಾಪಾರಿಗಳು, ದಿನಸಿ ಅಂಗಡಿಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗದು. ಭಾರತ ಕೃಷಿ ಪ್ರಧಾನ ರಾಷ್ಟ್ರ, ಶೇ. 80ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಕಾಲ ಹೋಗುತ್ತಿದೆ. ಸಣ್ಣ-ಪುಟ್ಟ ಪಟ್ಟಣಗಳೇ ಇವತ್ತು ದೊಡ್ಡನಗರಗಳಾಗಿ ಮಾರ್ಪಾಡಾಗುತ್ತಿವೆ. ನಗರ ಬೆಳೆದಂತೆ ಎಷ್ಟೋ ಆಸುಪಾಸಿನ ಹಳ್ಳಿಗಳು ಮೆಟ್ರೊಪಾಲಿಟನ್ ನಗರಗಳ ಉದರದೊಳಗೆ ಸೇರಿಕೊಳ್ಳುತ್ತಿವೆ. ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ವಾಸಿಸುವ ಜನರ ಸಂಖ್ಯೆಯಲ್ಲಿನ ವ್ಯತ್ಯಾಸ ಈಗಾಗಲೇ ಸಾಕಷ್ಟು ಕಡಿಮೆಯಾಗಿದೆ. ಹಾಗಾಗಿ ಇವುಗಳ ಪ್ರತೀಕೂಲ ಪರಿಣಾಮದಿಂದ ಯಾವ ವ್ಯಾಪಾರಿಯೂ ಮುಕ್ತನಾಗುವುದಿಲ್ಲ. ಅವನ ಅನ್ನದ ಮಾರ್ಗವನ್ನು ಕಿತ್ತುಕೊಂಡಂತಾಗುವುದಿಲ್ಲವೆ? ಹಾಗೆ ಲಕ್ಷಾಂತರ ಜನರು ಬೀದಿಗೆ ಬಿದ್ದರೆ ಗತಿಯೇನು? ಸ್ಪರ್ಧೆಗೆ ತೆರೆದುಕೊಳ್ಳಲೇಬೇಕು, ಬದಲಾವಣೆಗೆ ಮೈಯೊಡ್ಡಲೇಬೇಕು ಎಂದು ಬೋಧಿಸುವ ಅಮೆರಿಕದಲ್ಲಿ ಒಂದು ವರ್ಷದವರೆಗೂ ನಿರುದ್ಯೋಗ ಭತ್ಯೆ ಕೊಡಲಾಗುತ್ತದೆ. ನಮ್ಮಲ್ಲಿ ಒಪ್ಪೊತ್ತಿನ ಊಟವೂ ಸಿಗುವುದಿಲ್ಲ. ಅಭಿವೃದ್ಧಿಗೂ, ಗ್ರೋಥ್್ಗೂ ಬಹಳ ವ್ಯತ್ಯಾಸವಿದೆ. ನಮಗೆ ದೇಶದ ಸಮಗ್ರ ಅಭಿವೃದ್ಧಿಯಾಗಬೇಕೆ ಹೊರತು, ಸಂಪತ್ತು ಕೆಲವೇ ಜನರಲ್ಲಿ ಕ್ರೋಡೀಕರಣವಾಗುವ ಗ್ರೋಥ್ ಅಲ್ಲ. ಇಷ್ಟಕ್ಕೂ ಉದಾರೀಕರಣದ ಪಾಠ ಹೇಳುವ ಅಮೆರಿಕದಲ್ಲಿ ಲೆಹಮನ್ ಬ್ರದರ್ಸ್ ಮನೆ’ಹಾಳು ಮಾಡಿದ್ದು ಗೊತ್ತಿಲ್ಲವೆ?
ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಮ್ಯುನಿಸ್ಟರ ಮಾತನ್ನೂ ಏಕೆ ಆಲಿಸಬಾರದು? ಯಾವುದೇ ಕಂಪನಿಗಳು ಬಂದರೂ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಸಂಗ್ರಹಣೆ ಮಾಡಬೇಕು, ನಮ್ಮ ರೈತರಿಂದಲೇ ಪಡೆದುಕೊಳ್ಳಬೇಕು, ಹೊರಗಿನಿಂದ ಆಮದು ಮಾಡಿಕೊಳ್ಳಬಾರದು, ನಮ್ಮ ನಿಯಂತ್ರಣದಲ್ಲಿರಬೇಕು ಎಂಬ ಷರತ್ತುಗಳನ್ನು ಹಾಕಲು ಸರ್ಕಾರಕ್ಕೇನು ದಾಡಿ? ಹಾಗಾದಾಗ ಯಾರು ತಾನೇ ಎಫ್್ಡಿಐಗೆ ವಿರೋಧ ವ್ಯಕ್ತಪಡಿಸುತ್ತಾರೆ?
 - ಕೃಪೆ: ಪ್ರತಾಪ ಸಿಂಹ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ