ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಡಿಸೆಂಬರ್ 26, 2011

ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?

ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?
ಮೊನ್ನೆ ಡಿಸೆಂಬರ್ 19ರಂದು ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್್ಸಿ) ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, “ಭಾರತರತ್ನ ಕೊಡುವುದಾದರೆ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಮೊದಲು ಕೊಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್್ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್್ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತರತ್ನ ಕೊಡುವುದು ಬೇಡವೆಂದಲ್ಲ. ಹೋಮಿ ಭಾಭಾ ಕೂಡಾ ಅರ್ಹ ವ್ಯಕ್ತಿ” ಎಂದರು. ಇಷ್ಟಕ್ಕೂ ಈ ಹೋಮಿ ಭಾಭಾ ಯಾರೆಂದುಕೊಂಡಿರಿ? ಅವರ ಸಾಧನೆಯಾದರೂ ಏನು? ಸಿ.ಎನ್.ಆರ್. ರಾವ್ ಹೇಳಿದಂತೆ ಅವರು ನಿಜಕ್ಕೂ ಭಾರತರತ್ನಕ್ಕೆ ಅರ್ಹರಾ?
ನೀವೇಕೆ ಮದುವೆ ಆಗಲೇ ಇಲ್ಲ?
ಅಂತ ಕೇಳಿದರೆ I am married to creativity ಎನ್ನುತ್ತಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ವ್ಯಕ್ತಿಯ ಬಾಯಿಂದ ಬರುವ, ಬರಬೇಕಾದ ಮಾತುಗಳು ಅವಾಗಿರಲಿಲ್ಲ. ಅಪ್ಪ ಜಹಾಂಗೀರ್ ಹರ್ಮ್್ಜಿ ಭಾಭಾ ಬ್ರಿಟನ್್ನ ಆಕ್ಸ್್ಫರ್ಡ್್ನಲ್ಲಿ ಕಲಿತ ಖ್ಯಾತ ವಕೀಲ. ಅಜ್ಜ ಹರ್ಮುಸ್್ಜಿ ಭಾಭಾ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯಸ್ಥ. ಅಮ್ಮ ಮೆಹರ್್ಬಾಯಿ ಜಗದ್ವಿಖ್ಯಾತ ಟಾಟಾ ಕುಟುಂಬದ ಸಂಬಂಧಿ. ಜತೆಗೆ ಪಾರ್ಸಿಗಳು ಆ ಕಾಲಕ್ಕೆ ತೀರಾ ಗಿಜಡಡಿಜ್ಠಟ್ಝಿಡಜಜ ಆಗಿದ್ದರು. ಇಂತಹ ಹಿನ್ನೆಲೆಯೊಂದಿಗೆ 1909, ಅಕ್ಟೋಬರ್ 30ರಂದು ಜನಿಸಿದವರೇ ಹೋಮಿ ಜಹಾಂಗೀರ್ ಭಾಭಾ. ಬಾಲ್ಯಾವಸ್ಥೆಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಚಿಂತಿತರಾದ ಅಪ್ಪ-ಅಮ್ಮ ಬಹಳ ಜನ ಹೆಸರಾಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ಆದರೆ ಹೋಮಿ ಭಾಭಾಗೇಕೆ ನಿದ್ರೆ ಬರುತ್ತಿಲ್ಲ ಅಥವಾ ಹೋಮಿ ಭಾಭಾ ಏಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬುದು ಮಾತ್ರ ತಿಳಿಯಲಿಲ್ಲ. ಎಲ್ಲ ವಿಧದ ಪರೀಕ್ಷೆಗಳಿಗೂ ಒಳಪಡಿಸಿದ ವೈದ್ಯರು, ಈತ ಆರೋಗ್ಯದಿಂದಿದ್ದಾನೆ, ಭಯಪಡಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ಹೇಳಿ ಕಳುಹಿಸಿದರು. ನಿಜ ಸಂಗತಿಯೇನೆಂದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಢ ಚಿಂತನೆಯಲ್ಲಿ ತೊಡಗಿದ್ದುದು ನಿದ್ರಾಹೀನತೆಗೆ ಕಾರಣವಾಗಿತ್ತು. 1916ರಲ್ಲಿ ಬಾಂಬೆಯ ಹೆಸರಾಂತ ಕೆಥೆಡ್ರಲ್ ಸ್ಕೂಲ್ ಸೇರಿದ ಭಾಭಾ ವ್ಯಾಸಂಗ ಆರಂಭಿಸಿದರು. ಆನಂತರ 1922ರಲ್ಲಿ ಜಾನ್ ಕ್ಯಾನನ್ ಸ್ಕೂಲ್ ಸೇರಿದ ಅವರು, 15ನೇ ವಯಸ್ಸಿಗೆ ಎಲ್ಫಿನ್್ಸ್ಟನ್ ಕಾಲೇಜು ಮೆಟ್ಟಿಲೇರಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸುವ ಪ್ರತಿಭಾ ಪರೀಕ್ಷೆಯಲ್ಲಿ ಪಾಸಾದ ಭಾಭಾಗೆ ವಿದ್ಯಾರ್ಥಿ ವೇತನ ದೊರೆಯಲಾರಂಭಿಸಿತು. ವಿಜ್ಞಾನಿಯಾಗುವ ಕನಸು ಕಾಣಲಾರಂಭಿಸಿದರು. ಆದರೆ ಅಪ್ಪ ಹಾಗೂ ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಅವರ ಯೋಚನೆ ಇನ್ನೇನೋ ಆಗಿತ್ತು. ಮಗನನ್ನು ಎಂಜಿನಿಯರಿಂಗ್ ಓದಿಸಿ ಜೆಮ್್ಷೆಡ್್ಪುರದಲ್ಲಿರುವ ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಲಸಕ್ಕೆ ಸೇರಿಸುವ ತವಕ ಅವರದ್ದು. ಕುಪಿತರಾದ ಹೋಮಿ ಭಾಭಾ ಅಪ್ಪನಿಗೆ ಪತ್ರವೊಂದನ್ನು ಬರೆಯುತ್ತಾರೆ.
“ನಾನು ಬಹಳ ಗಂಭೀರವಾಗಿ ನಿಮಗೆ ಹೇಳುತ್ತಿದ್ದೇನೆ. ಈ ಉದ್ಯಮ ಅಥವಾ ಎಂಜಿನಿಯರಿಂಗ್ ನನಗೆ ಹಿಡಿಸುವ ವಿಚಾರವಲ್ಲ. ನನ್ನ ಮನಸ್ಥಿತಿಗೂ ಈ ವಿಚಾರಗಳಿಗೂ ಹೋಲಿಕೆಯೇ ಆಗುವುದಿಲ್ಲ. ಭೌತಶಾಸ್ತ್ರವೇ ನನ್ನ ಕ್ಷೇತ್ರ. ಈ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಲ್ಲೆ ಎಂದು ನನಗೆ ಗೊತ್ತು. ಪ್ರತಿಯೊಬ್ಬ ಮನುಷ್ಯನೂ ಆತ ಇಷ್ಟಪಡುವ ಕ್ಷೇತ್ರದಲ್ಲಿ ಮಾತ್ರ ಅಮೋಘ ಸಾಧನೆ ಮಾಡಲು ಸಾಧ್ಯ. ಆತ ಹುಟ್ಟಿದ್ದು ಆ ಕಾರಣಕ್ಕಾಗಿಯೇ ಹಾಗೂ ವಿಧಿ ಬರೆದಿರುವುದೂ ಅದನ್ನೇ. ಅವನು, ಇವನು, ಯಾವನೋ ಹೇಳಿದ್ದರ ಮೇಲೆ ನನ್ನ ಭವಿಷ್ಯ ಅವಲಂಬಿತವಾಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಪರಿಶ್ರಮದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಅದೂ ಅಲ್ಲದೆ ವಿಜ್ಞಾನಕ್ಕೆ ಒಲ್ಲದ ಜಾಗ ಭಾರತವೆಂದೇನೂ ಅಲ್ಲ. ಭೌತಶಾಸ್ತ್ರದ ಬಗ್ಗೆ ನನ್ನಲ್ಲಿ ಉತ್ಕಟ ತುಡಿತವಿದೆ. ನಾನು ಅದನ್ನೇ ಓದುತ್ತೇನೆ, ಅದೇ ನನ್ನ ಮಹತ್ವಾಕಾಂಕ್ಷೆ. ಒಂದು ದೊಡ್ಡ ಕಂಪನಿಯ ಯಶಸ್ವಿ ಮುಖ್ಯಸ್ಥನಾಗುವ ಯಾವ ಆಸೆಗಳೂ ನನ್ನಲ್ಲಿಲ್ಲ. ನೀನು ವಿಜ್ಞಾನಿಯಾಗಬೇಕೆಂದು ಬೀಥೋವನ್್ಗೆ, ನೀನು ಎಂಜಿನಿಯರ್ ಆಗು ಅದು ಬುದ್ಧಿವಂತರು ಮಾಡುವ ಕೆಲಸ ಎಂದು ಸಾಕ್ರೆಟಿಸ್್ಗೆ ಹೇಳಿದ್ದರೆ ಹೇಗೆ ಯಾವ ಉಪಯೋಗವೂ ಆಗುತ್ತಿರಲಿಲ್ಲವೋ, ಕೆಲವು ಬುದ್ಧಿವಂತರೂ ಹಾಗೆಯೇ ಇರುತ್ತಾರೆ, ಅವರನ್ನು ಹಾಗೆಯೇ ಬಿಡಿ ಎಂದು ನಿಮ್ಮನ್ನು ವಿನೀತನಾಗಿ ಕೇಳಿಕೊಳ್ಳುತ್ತೇನೆ, ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಿ”.
ಇಂತಹ ಪತ್ರವನ್ನು ಓದಿದ ಹರ್ಮ್್ಜಿಗೆ ಮಗನ ತುಡಿತ ಅರ್ಥವಾಯಿತು.ಹಾಗಂತ ಪಟ್ಟು ಸಡಿಸಲಿಲ್ಲ. ಒಂದು ವೇಳೆ ನೀನು ಮೆಕ್ಯಾನಿಕಲ್ ಎಂಜಿನಿಯರಿಂಗ್್ನಲ್ಲಿ ಪದವಿ ಪೂರ್ಣಗೊಳಿಸಿದರೆ ಥಿಯರಿಟಿಕಲ್ ಫಿಸಿಕ್ಸ್್ನಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವುದಾಗಿ ಪೂರ್ವ ಷರತ್ತು ಹಾಕಿದರು. ಅಪ್ಪನ ಆಸೆಯಂತೆ ಮೆಕ್ಯಾನಿಕಲ್ ಎಂಜಿನಿಯರಿಂಗ್್ಗೆ ಸೇರಿದ ಹೋಮಿ ಭಾಭಾ, 1930ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರೈಸಿದರು. ಆದರೆ ಭೌತಶಾಸ್ತ್ರದ ವ್ಯಾಮೋಹ ಹೊರಟು ಹೋಗಿರಲಿಲ್ಲ. ಅಪ್ಪ ಮಾತಿನಂತೆ ನಡೆದುಕೊಂಡರು, ಭಾಭಾಗೆ ತನಿಗಿಷ್ಟಬಂದ ವಿಷಯವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಮೊದಲಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೇ ಗಣಿತಶಾಸ್ತ್ರದ ಅಧ್ಯಯನವನ್ನು ಆರಂಭಿಸಿದರು. ರಾಸ್ ಬಾಲ್ ಪ್ರವಾಸಿ ವಿದ್ಯಾರ್ಥಿ ವೇತನ ದೊರೆಯಿತು. ಯುರೋಪ್ ಪ್ರವಾಸ ಮಾಡಿ, ವುಲ್ಫ್್ಗ್ಯಾಂಗ್ ಪೌಲಿ, ಎನ್ರಿಕೋ ಫೆರ್ಮಿ ಮುಂತಾದವರ ಜತೆ ಅಧ್ಯಯನ ನಡೆಸುವ ಅವಕಾಶ ಸಿಕ್ಕಿತು. ಮುಂದೆ ನೊಬೆಲ್ ಪುರಸ್ಕಾರ ಪಡೆದ ಪಾಲ್ ಆಡ್ರಿಯನ್ ಮಾರಿಸ್ ಡಿರಾಕ್ ಅವರ ಕೈಕೆಳಗೆ 1932ರಿಂದ 34ರವರೆಗೂ ಎರಡು ವರ್ಷ ಗಣಿತವನ್ನು ಅಧ್ಯಯನ ಮಾಡಿದ ಭಾಭಾ ಅಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಈ ಮಧ್ಯೆ, 1933ರಲ್ಲಿ ಪ್ರಕಟವಾದ ಭಾಭಾ ಅವರ ಮೊಟ್ಟಮೊದಲ ಸಂಶೋಧನಾ ಪ್ರಬಂಧಕ್ಕೆ ಐಸಾಕ್ ನ್ಯೂಟನ್ ಸ್ಟೂಡೆಂಟ್್ಷಿಪ್ ಸಿಕ್ಕಿತು. ಕೂಪನ್್ಹೇಗನ್್ನಲ್ಲಿ ನೀಲ್ ಬೋರ್ ಜೊತೆ ಸಂಶೋಧನೆ ಮಾಡುವ ಅವಕಾಶವೂ ಲಭ್ಯವಾಯಿತು. ಪ್ರಖ್ಯಾತ ಕ್ಯಾವೆಂಡಿಶ್ ಪ್ರಯೋಗಾಲಯ ಸೇರಿದ ಭಾಭಾ, ಅಣು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. 1937ರಲ್ಲಿ ಹೀತ್ಲರ್ ಜತೆ ಸೇರಿ ಮಂಡಿಸಿದ Cascade Theory of Electron ಮಹಾಪ್ರಬಂಧ, ಆಂತಿಮವಾಗಿ Bhabha-Heitler Cascade Theory ಎಂದೇ ಪ್ರಸಿದ್ಧಿ ಪಡೆಯಿತು. ಹೀಗೆ ರುದರ್್ಫೋರ್ಡ್, ಹೀತ್ಲರ್, ನೀಲ್ ಬೋರ್, ಡಿರಾಕ್ ಜೊತೆ ಕಳೆದ ಸಮಯ, ನಡೆಸಿದ ಸಂಶೋಧನೆ ಭಾಭಾ ಅವರ ಜೀವನ ಹಾಗೂ ಯೋಚನೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಮದುವೆಯ ಆಸೆಯನ್ನೇ ಬಿಟ್ಟು, ಸಂಶೋಧನೆಯನ್ನೇ ಕೈಹಿಡಿದರು!
ಮನುಕುಲ ಕಂಡ ಮಹಾಪಾಪಿ ಅಡಾಲ್ಫ್ ಹಿಟ್ಲರ್್ಗೂ ಕೆಲವೊಮ್ಮೆ ಥ್ಯಾಂಕ್ಸ್ ಹೇಳಬೇಕೆನಿಸಿಬಿಡುತ್ತದೆ, ಏಕೆ ಗೊತ್ತಾ?!
ಒಂದೆಡೆ ಬ್ರಿಟನ್್ನಲ್ಲಿ ಸಂಶೋಧನೆ ಮಾಡಿಕೊಂಡಿದ್ದ ಭಾಭಾ ಒಂದಿಷ್ಟು ದಿನಗಳಿಗಾಗಿ ರಜೆ ಕಳೆಯಲು 1939ರಲ್ಲಿ ಭಾರತಕ್ಕೆ ಬಂದಿದ್ದರು. ಇನ್ನೊಂದೆಡೆ ಭೌತಶಾಸ್ತ್ರದಲ್ಲಿಯೇ ಪದವಿ ಪೂರೈಸಿ, ಕ್ಲೌಡ್ ಚೇಂಬರ್ ಸಂಶೋಧಕ ಸಿ.ಟಿ.ಆರ್. ವಿಲ್ಸನ್ ಕೈಕೆಳಗೆ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿಯೇ ಸಂಶೋಧನೆ ನಡೆಸಲು ತಯಾರಿ ಮಾಡಿಕೊಂಡಿದ್ದ ಪ್ರಶಾಂತ್್ಚಂದ್ರ ಮಹಲನೋಬಿಸ್ ಕೂಡ ರಜೆ ಕಳೆಯಲು ಅದೇ ಸಮಯಕ್ಕೆ ಭಾರತಕ್ಕೆ ಆಗಮಿಸಿದ್ದರು. ಎರಡನೇ ಮಹಾಯುದ್ಧ ಆರಂಭವಾಯಿತು! ಬ್ರಿಟನ್್ನಲ್ಲಿದ್ದ ವಿಜ್ಞಾನಿಗಳೂ ಕೂಡ ಯುದ್ಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೇಂಬ್ರಿಡ್ಜ್್ನಲ್ಲಿ ಸಂಶೋಧನೆಯನ್ನು ಮುಂದುವರಿಸಬೇಕೆಂದುಕೊಂಡಿದ್ದ ಭಾಭಾ ತಮ್ಮ ಉದ್ದೇಶವನ್ನೇ ಕೈಬಿಡಬೇಕಾಗಿ ಬಂತು. ಅಂದು ಹಿಟ್ಲರ್ ಆರಂಭಿಸಿದ ಯುದ್ಧ ತಂದಿಟ್ಟ ಅನಿವಾರ್ಯತೆಯಿಂದಾಗಿ ಭಾಭಾ ಹಾಗೂ ಮಹಲನೋಬಿಸ್ ಭಾರತದಲ್ಲೇ ಉಳಿದುಕೊಳ್ಳುವ ನಿರ್ಧಾರ ಕೈಗೊಂಡರು. ಅದರಿಂದ ನಮ್ಮ ದೇಶದ ಭವಿಷ್ಯವೇ ಬದಲಾಗುವಂತಾಯಿತು. 1940ರಲ್ಲಿ ಹೋಮಿ ಭಾಭಾ ಅವರ ಸಲುವಾಗಿಯೇ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್್ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನ ಮಂದಿರ-ಐಐಎಸ್್ಸಿ)ನಲ್ಲಿ ಥಿಯೋರಿಟಿಕಲ್ ಸೈನ್ಸ್ ಎಂಬ ವಿಭಾಗ ತೆರೆದು, ರೀಡರ್ ಹುದ್ದೆಯನ್ನು ಸೃಷ್ಟಿಸಿಕೊಟ್ಟರು. ಆಗ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿದ್ದವರು ಮತ್ತಾರೂ ಅಲ್ಲ ಸಿ.ವಿ. ರಾಮನ್! ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹರೆನಿಸಿಕೊಂಡ ವಿಕ್ರಂ ಸಾರಾಭಾಯಿ ಕೂಡ ಅಲ್ಲೇ ಅಧ್ಯಯನ ನಡೆಸುತ್ತಿದ್ದರು. ಅತಿರಥಮಹಾರಥ ವಿಜ್ಞಾನಿಗಳ ಆಗಮನದಿಂದಾಗಿ ಐಐಎಸ್್ಸಿ ರಂಗೇರಿತು. ಭಾಭಾ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ(ವಿಶ್ವಕಿರಣ) ಸಂಶೋಧನೆ ಆರಂಭವಾಯಿತು. ಐಐಎಸ್್ಸಿಯಲ್ಲಿ ಕೆಲವು ವರ್ಷಗಳನ್ನು ಕಳೆದ ಭಾಭಾ, ಯುದ್ಧದ ನಂತರ ಇಂಗ್ಲೆಂಡ್್ಗೆ ತೆರಳುವ ಆಲೋಚನೆಯನ್ನೇ ಕೈಬಿಟ್ಟರು. ನಾವು, ನಮ್ಮ ದೇಶ ಎಂಬ ಭಾವನೆ ಅವರೊಳಗೆ ಆಳವಾಗಿ ಬೇರೂರಲು ಆರಂಭವಾಯಿತು. ತಾಯ್ನಾಡಿನ ಶ್ರೇಯೋಭಿವೃದ್ಧಿ ಮಾಡಬೇಕಾದ ಜವಾಬ್ದಾರಿಯ ಅರಿವಾಗತೊಡಗಿತು. ಭಾರತದ ಬಡತನ ಹಾಗೂ ಪ್ರಗತಿಗೆ ವಿಜ್ಞಾನವೇ ಮದ್ದು ಎನಿಸತೊಡಗಿತು.
1944, ಮಾರ್ಚ್ 12ರಂದು ಭಾಭಾ ಮತ್ತೆ ಪತ್ರ ಬರೆದರು. ಆದರೆ ಈ ಬಾರಿ ಅಪ್ಪನ ಬದಲು ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಟ್ರಸ್ಟ್್ಗೆ ಪತ್ರ ಬರೆದಿದ್ದರು. ಅಂದು ವೈಯಕ್ತಿಕ ಇಚ್ಛೆಯನ್ನು ಹೊತ್ತ ಪತ್ರ ಕಳುಹಿಸಿದ್ದ ಭಾಭಾ, ಈ ಬಾರಿ ಬರೆದ ಪತ್ರದಲ್ಲಿ ದೇಶದ ಉಜ್ವಲ ಭವಿಷ್ಯದ ಬಗೆಗಿನ ಕನಸುಗಳೇ ತುಂಬಿದ್ದವು- “ಈ ಕ್ಷಣದಲ್ಲಿ ಭೌತಶಾಸ್ತ್ರದ ಮೂಲ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವಂತಹ ಪ್ರಯೋಗಾಲಯಗಳೇ ನಮ್ಮ ದೇಶದಲ್ಲಿಲ್ಲ. ನಮ್ಮಲ್ಲಿ ಸಣ್ಣ ಪುಟ್ಟ ಸಂಶೋಧನೆಗಳು ನಡೆಯುತ್ತಿದ್ದರೂ ಅವು ದೇಶಾದ್ಯಂತ ಹಂಚಿಹೋಗಿವೆ. ಆದರೆ ಎಲ್ಲ ವಿಜ್ಞಾನಿಗಳನ್ನೂ ಒಂದೇ ಸೂರಿನಡಿ ತಂದು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇನ್ನು ಒಂದೆರಡು ದಶಕಗಳಲ್ಲಿ ಅಣುಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ವಿನಿಯೋಗಿಸುವಂತಹ ತಂತ್ರಜ್ಞಾನವನ್ನು ರೂಪಿಸುವಲ್ಲಿ ಜಗತ್ತಿನ ವಿಜ್ಞಾನಿಗಳು ಯಶಸ್ವಿಯಾಗಬಹುದು. ಒಂದು ವೇಳೆ, ನಾವು ಉನ್ನತ ಸಂಶೋಧನಾ ಸಂಸ್ಥೆಯೊಂದನ್ನು ತೆರೆದು, ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮುಂದೆ ಭಾರತ ಪರಿಣತರಿಗಾಗಿ ವಿದೇಶಗಳತ್ತ ಮುಖ ಮಾಡಬೇಕಾದ ಅಗತ್ಯ ಎದುರಾಗುವುದಿಲ್ಲ. ಇತರ ದೇಶಗಳಲ್ಲಿ ಕಂಡುಬರುತ್ತಿರುವ ವೈಜ್ಞಾನಿಕ ಅಭಿವೃದ್ಧಿಯ ಬಗ್ಗೆ ಅರಿವಿರುವ ಯಾರೂ ನಾನು ಪ್ರಸ್ತಾಪಿಸುತ್ತಿರುವ ಸಂಶೋಧನಾ ಸಂಸ್ಥೆಯ ಅಗತ್ಯ ಭಾರತಕ್ಕಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ”.
1942ರಲ್ಲಿ ಅಮೆರಿಕ ವಿಶ್ವದ ಮೊದಲ ಅಣುಪರೀಕ್ಷೆಯನ್ನು ನಡೆಸಿತ್ತು. ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣು ಬಾಂಬ್್ಗಳಿನ್ನೂ ಬಿದ್ದಿರಲಿಲ್ಲ. ಇತ್ತ ಭಾರತಕ್ಕಂತೂ ಸ್ವಾತಂತ್ರ್ಯವೇ ಬಂದಿರಲಿಲ್ಲ. ಅಂತಹ ಸಂದರ್ಭದಲ್ಲೂ ಭಾಭಾ ನಮ್ಮ ದೇಶದ ಭವಿಷ್ಯದ ವೈಜ್ಞಾನಿಕ ಪ್ರಗತಿ ಬಗ್ಗೆ ಯೋಚಿಸುತ್ತಿದ್ದರು. ಈ ದೇಶ ಕಟ್ಟಿದ ಟಾಟಾ ಕಂಪನಿ, ಭಾಭಾ ಅವರ ಆಸೆಗೆ ಕಲ್ಲು ಹಾಕಲಿಲ್ಲ. 1945ರಲ್ಲಿ ಬಾಂಬೆಯಲ್ಲಿ (ಟ್ರಾಂಬೆ) ಟಾಟಾ ಇನ್್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸ್ಥಾಪನೆಯಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಹೋಮಿ ಭಾಭಾ, ‘”Return to Trombay return to the motherland’ಎಂದು ಕರೆಕೊಟ್ಟರು. ತಾಯ್ನಾಡಿಗೆ ಮರಳಿ ಅಥವಾ ತಾಯ್ನಾಡಲ್ಲೇ ಉಳಿದುಕೊಂಡು, ಯುರೇನಿಯಂ ಸಂಸ್ಕರಣೆ ನಡೆಸುತ್ತಿರುವ ಇತರ ದೇಶಗಳಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ಸಮನಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂಬ ಅವರ ಕರೆಗೆ ಓಗೊಟ್ಟು ದೇಶ, ವಿದೇಶಗಳಿಂದೆಲ್ಲ ಯುವ ಭಾರತೀಯ ವಿಜ್ಞಾನಿಗಳು ಆಗಮಿಸಿದರು. ಪಿ.ಕೆ. ಅಯ್ಯಂಗಾರ್, ಬಿ.ವಿ. ಶ್ರೀಕಂಠನ್ ಮುಂತಾದ ಖ್ಯಾತ ವಿಜ್ಞಾನಿಗಳಿಗೆ ಭಾಭಾ ಕರೆಯೇ ಪ್ರೇರಣೆಯಾಗಿತ್ತು. ಭಾಭಾ ಸ್ವತಃ ವಿಜ್ಞಾನಿಗಳ ಯೋಗಕ್ಷೇವುದ ವ್ಯವಸ್ಥೆ ಮಾಡಿಸಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಇಲಾಖೆ(DSIR) ಸ್ಥಾಪನೆ ಮಾಡಬೇಕೆಂದು ಪ್ರಧಾನಿ ನೆಹರು ಮುಂದೆ ಪ್ರಸ್ತಾಪವನ್ನಿಟ್ಟರು, ಭಾರತೀಯ ಅಣುಶಕ್ತಿ ಕಾಯಿದೆಯನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು. ಎಲ್ಲವೂ ಅವರು ಹೇಳಿದಂತೆಯೇ ಆಯಿತು. 1947ರಲ್ಲಿ ಕಾಯಿದೆ ಬಂತು, 1948ರಲ್ಲಿ ಅಣುಶಕ್ತಿ ಆಯೋಗ ರಚನೆಯಾಯಿತು.
ಇವೇನು ಸಾಮಾನ್ಯ ಸಾಧನೆಗಳಲ್ಲ.
ಅವತ್ತು ಭಾರತ ವಿಶ್ವಸಂಸ್ಥೆಯಿಂದ ಗೋಧಿ ಪಡೆದು ಊಟ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಶೀಘ್ರ ಫಲಿತಾಂಶವನ್ನೇ ನೀಡದ ಅಣುವಿಜ್ಞಾನದಂತಹ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಭಾಭಾ ಅವರು ಸಂಸತ್ತಿನ ಮನವೊಲಿಸಿದ್ದು ಅದೆಂತಹ ಸಾಧನೆ ಇರಬಹುದೆಂಬುದನ್ನು ಊಹಿಸಿಕೊಳ್ಳಿ? ಅದರಲ್ಲೂ ಅನ್ನ, ಬಟ್ಟೆ, ವಸತಿ, ಶಿಕ್ಷಣವೇ ಪರಮ ಧ್ಯೇಯವೆಂದುಕೊಂಡಿದ್ದ ಸೋಷಿಯಲಿಸ್ಟ್ ಸರಕಾರದ ಮನವೊಲಿಸುವುದು ಸಾಮಾನ್ಯ ಮಾತೇ? ಎಲ್ಲರನ್ನೂ ಎಸ್ಸೆಸ್ಸೆಲ್ಸಿವರೆಗೂ ಓದಿಸಿ ಅಕ್ಷರಸ್ಥರನ್ನಾಗಿ ಮಾಡುತ್ತೇವೆ ಎಂದಂದುಕೊಂಡಿದ್ದರೆ ಭಾರತ ಲೇಬರ್ ಫ್ಯಾಕ್ಟರಿ ಆಗುತ್ತಿತ್ತು. ಆದರೆ ಭಾಭಾ ಅವರು, ತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಗತ್ಯವನ್ನು ಮನಗಂಡು, ಟಾಟಾ ಕಂಪನಿಯ ಸಹಾಯ ಪಡೆದು ಅವುಗಳನ್ನು ಸ್ಥಾಪನೆ ಮಾಡಿದರು, ಸರ್ಕಾರದ ಮನವೊಲಿಸುವ ಮೂಲಕ ಅಂತಹ ಹೆಚ್ಚಿನ ಸಂಸ್ಥೆಗಳು ಹೊರಹೊಮ್ಮಲು ಕಾರಣರಾದರು. ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ, 1974ರಲ್ಲಿ ನಡೆಸಿದ ಅಣುಪರೀಕ್ಷೆಯ ಹಿಂದಿರುವ ದೂರದೃಷ್ಟಿ, ಪರಿಶ್ರಮವೂ ಭಾಭಾ ಅವರದ್ದೇ. ಅವರೇ ನಮ್ಮ ದೇಶದ ಅಣುವಿಜ್ಞಾನದ ಪಿತಾಮಹ. ನಮ್ಮ ದೇಶವನ್ನು ಸುರಕ್ಷಿತವಾಗಿಟ್ಟಿರುವ ಅಣುಬಾಂಬ್ ಭಾಭಾ ಪರಿಶ್ರಮದ ಫಲಶ್ರುತಿ. 1955ರಲ್ಲಿ ಜಿನೀವಾದಲ್ಲಿ ನಡೆದ ಅಣುಶಕ್ತಿಯ ಶಾಂತಿಯುತ ಬಳಕೆ ಮೇಲಿನ ವಿಶ್ವಶೃಂಗದ ಅಧ್ಯಕ್ಷರಾಗಿದ್ದ ಹೋಮಿ ಭಾಭಾ, ಭಾರತದಲ್ಲೊಂದು ರಿಯಾಕ್ಟರ್ ನಿರ್ಮಿಸಿಕೊಡುವಂತೆ ಕೆನಡಾಕ್ಕೆ ಮನವಿ ಮಾಡಿಕೊಂಡಿದ್ದರು. ಸ್ಥಳದಲ್ಲಿಯೇ ಕೆನಡಾ ಒಪ್ಪಿಕೊಂಡ ಕಾರಣ, ಕೂಡಲೇ ನೆಹರು ಅವರಿಗೆ ಟೆಲಿಗ್ರಾಂ ಮಾಡಿದ ಭಾಭಾ ಮೂರೇ ದಿನಗಳಲ್ಲಿ ಪ್ರಧಾನಿಯವರ ಒಪ್ಪಿಗೆ ಪಡೆದುಕೊಂಡಿದ್ದರು. ಅವರ ಮಾತಿಗೆ ಅಂತಹ ಬೆಲೆಯಿತ್ತು. ಅದರ ಫಲವೇ ಭಾರತದ ಮೊಟ್ಟಮೊದಲ ಅಣುರಿಯಾಕ್ಟರ್ ‘ಅಪ್ಸರಾ’ ನಿರ್ಮಾಣ.
1974, ಮೇ 18ರಂದು ಮೊದಲ ಅಣು ಪರೀಕ್ಷೆ ನಡೆಸಿದ ಭಾರತ ಅಣ್ವಸ್ತ್ರ ಹೊಂದಿರುವ ಐದು ರಾಷ್ಟ್ರಗಳ ಪ್ರತಿಷ್ಠಿತ ಸಾಲಿಗೆ ಸೇರಿಕೊಂಡಿತು. ಆದರೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಮೋಘ ವೈಯಕ್ತಿಕ ಸಾಧನೆಯ ಅವಕಾಶವನ್ನು ಬದಿಗಿಟ್ಟು 1939ರಿಂದ 65ರವರೆಗೂ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸಿದ ಅಣುಶಕ್ತಿಯ ಜನಕ ಭಾಭಾ ಮಾತ್ರ ತಮ್ಮ ಕನಸು ಸಾಕಾರಗೊಳ್ಳುತ್ತಿರುವುದನ್ನು ನೋಡಲು ಇರಲಿಲ್ಲ. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭಾಭಾ 1966, ಜನವರಿ 24ರಂದು ಸ್ವಿಜರ್್ಲೆಂಡ್್ನ ಮೌಂಟ್ ಬ್ಲಾಂಕ್ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ತೀರಿಕೊಂಡಿದ್ದರು. You can give a new direction to everything in life, except death ಿ ಎನ್ನುತ್ತಿದ್ದ ಭಾಭಾ ಅವರನ್ನು ಐವತ್ತಾರು ವರ್ಷಕ್ಕೇ ಸಾವು ಕಿತ್ತುಕೊಂಡಿತು.
1954ರಲ್ಲಿ ಆರಂಭವಾದ ಭಾರತರತ್ನ ಪುರಸ್ಕಾರವನ್ನು ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಾರ್ವಜನಿಕ ಸೇವೆ ಈ ನಾಲ್ಕು ಕ್ಷೇತ್ರಗಳಲ್ಲಿನ ಸಾಧಕರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ನಿಯಮಕ್ಕೆ ಈಗ್ಗೆ ಕೆಲ ದಿನಗಳ ಹಿಂದಷ್ಟೇ ತಿದ್ದುಪಡಿ ತಂದಿರುವ ಸರ್ಕಾರ ಇತರ ಕ್ಷೇತ್ರಗಳ ಸಾಧಕರಿಗೂ, ಅದರಲ್ಲೂ ಸಚಿನ್ ತೆಂಡೂಲ್ಕರ್್ಗೆ ಭಾರತರತ್ನ ನೀಡಲು ತಯಾರಿ ನಡೆಸುತ್ತಿದೆ. ಖಂಡಿತ ಸಚಿನ್್ಗೆ ಆ ಅರ್ಹತೆ ಇದೆ. ಹಾಗಂತ ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಲು ಮೂಲಕಾರಣಕರ್ತರಾಗಿರುವ ಹೋಮಿ ಜಹಾಂಗೀರ್ ಭಾಭಾ ಅವರ ಕೊಡುಗೆಯನ್ನು ಮರೆಯಲು ಸಾಧ್ಯವೇ? ಅವರಿಗೆ ಭಾರತರತ್ನ ಕೊಡಲು ಈ ಸರ್ಕಾರವೇಕೆ ಮೀನ-ಮೇಷ ಎಣಿಸುತ್ತಿದೆ?

- ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ