ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಡಿಸೆಂಬರ್ 26, 2011

ಅವರ ರಾಜಕೀಯ ಜೀವನ ಗಂಗಾ ಸಮಾನ! - ವಿಶ್ವೇಶ್ವರ ಭಟ್

ನಾನು ಬರೆದ ಮೊದಲ ಪುಸ್ತಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ. ಚೊಚ್ಚಲ ಕೃತಿಯಾದ್ದರಿಂದ ಅದರ ಶೀರ್ಷಿಕೆ ಕನ್ನಡ ವರ್ಣಮಾಲೆಯ ಮೊದಲ ಅಕ್ಷರ”ಅ’ ದಿಂದಲೇ ಆರಂಭವಾಗಲಿ ಎಂಬುದು ನನ್ನ ಆಸೆಯಾಗಿತ್ತು. ಬಹಳ ಯೋಚಿಸಿ ಪುಸ್ತಕಕ್ಕೆ”ಅಜಾತಶತ್ರು’ ಎಂದು ಹೆಸರಿಟ್ಟೆ. ಯಾರ ಕುರಿತು ಬರೆದಿದ್ದೆನೋ ಅವರ ಹೆಸರಿನ ಮೊದಲ ಅಕ್ಷರವೂ”ಅ’ ದಿಂದಲೇ ಆರಂಭವಾಗಿದ್ದು ಯೋಗಾಯೋಗ. ಶೀರ್ಷಿಕೆ ಬಗ್ಗೆ ಹಿರಿಯ ಪತ್ರಕರ್ತರೂ,”ಕನ್ನಡ ಪ್ರಭ’ದ ಅಂದಿನ ಸಂಪಾದಕರೂ ಆಗಿದ್ದ ವೈಯೆನ್ಕೆಯವರಿಗೆ ತಿಳಿಸಿದಾಗ,”ಪ್ರಸ್ತುತ ರಾಜಕಾರಣದಲ್ಲಿ”ಅಜಾತಶತ್ರು’ ಪದವನ್ನು ವಾಜಪೇಯಿಗೆ ಮಾತ್ರ ಬಳಸಬಹುದು ಹಾಗೂ ಉಳಿದ ಯಾರಿಗೇ ಆ ಪದ ಪ್ರಯೋಗಿಸಿದರೂ ನನ್ನ ತಕರಾರಿದೆ’ ಎಂದು ಹೇಳಿದ್ದರು.
ಪುಸ್ತಕ ಪ್ರಕಟವಾಗಿ ಬಹಳ ವರ್ಷಗಳಾದರೂ, ಅದನ್ನು ವಾಜಪೇಯಿ ಅವರಿಗೆ ಅರ್ಪಿಸಲು ಸಾಧ್ಯವಾಗಿರಲಿಲ್ಲ. ಅನಂತರ ವಾಜಪೇಯಿ ಮಾಧ್ಯಮ ಸಲಹೆಗಾರರಾಗಿದ್ದ ಸನ್ಮಿತ್ರರಾದ ಸುಧೀಂದ್ರ ಕುಲಕರ್ಣಿಯವರ ಸಹಕಾರದಿಂದ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಕೈಗಿತ್ತಾಗ,”524ಪುಟಗಳ ಪುಸ್ತಕ ಬರೆದಿದ್ದೀರಲ್ಲಾ ಇಷ್ಟೊಂದು ಬರೆಯಲು ಕನಿಷ್ಠ ಒಂದೆರಡು ವರ್ಷಗಳಾದರೂ ಹಿಡಿದಿರಬಹುದು. ನಿಮ್ಮ ಜೀವನದ ಆ ಅಮೂಲ್ಯ ಸಮಯವನ್ನು ಬೇರೊಂದು ಕೆಲಸಕ್ಕೆ ವಿನಿಯೋಗಿಸಿದ್ದರೆ ಸಮಾಜಕ್ಕಾದರೂ ಉಪಯೋಗವಾಗುತ್ತಿತ್ತೇನೋ? ಹಾಳು ಮಾಡಿಬಿಟ್ಟಿರಿ’ ಎಂದು ಜೋರಾಗಿ ನಕ್ಕರು.
ಪುಸ್ತಕವನೊಮ್ಮೆ ಆರಂಭದಿಂದ ಕೊನೆತನಕ ಸರ್ರನೆ ತಿರುವಿ ಹಾಕಿದರು.”ನನ್ನ ಬಗ್ಗೆ 524 ಪುಟ ಬರೆದಿದ್ದೀರಲ್ಲಾ, ನನಗೇ ನನ್ನ ಬಗ್ಗೆ ಇಷ್ಟೊಂದು ಗೊತ್ತಿಲ್ಲ’ ಎಂದು ಚಟಾಕಿ ಹಾರಿಸಿದರು.
“ಹಾಗೆಂದು ನಾನೇನೂ ಕೈಯಿಂದ ಸೇರಿಸಿಲ್ಲ’ ಎಂದೆ ವಿನೀತನಾಗಿ.

ಆಗ ವಾಜಪೇಯಿ ಹೇಳಿದರು-”ಯಾರದ್ದಾದರೂ ಬಗ್ಗೆ ಹೇಳಬಹುದಾದದ್ದು ಹೆಚ್ಚಿರುವುದಿಲ್ಲ. ಒಬ್ಬ ವ್ಯಕ್ತಿ ಅದೆಷ್ಟೇ ಸಾಧನೆ ಮಾಡಿದರೂ ಐನೂರು, ಸಾವಿರ ಪುಟಗಳಲ್ಲಿ ಬರೆಯುವಷ್ಟು ಸಾಧನೆ ಮಾಡಿರಲಂತೂ ಸಾಧ್ಯವಿಲ್ಲ. ಅದೇನೇ ಇರಲಿ, ನಿಮ್ಮ ಪರಿಶ್ರಮ, ಪ್ರೀತಿಗೆ ನಾನು ಋಣಿ. ಕನ್ನಡವನ್ನು ನಾನು ಓದಲಾರೆ. ನೀವೇನು ಬರೆದಿದ್ದೀರೋ ಎಂಬುದು ತಿಳಿಯದು. ನನಗೆ ಅರ್ಥವಾಗುವುದೇನಿದ್ದರೂ ಫೋಟೋಗಳು. ಫೋಟೋಗಳಲ್ಲಂತೂ ನಾನು ಸುಂದರವಾಗಿ ಕಾಣುತ್ತೇನೆ. ಹೀಗಾಗಿ ಪುಸ್ತಕವೂ ಸುಂದರವಾಗಿಯೇ ಇರಬಹುದೆಂದು ಭಾವಿಸುತ್ತೇನೆ’.
ಈಗ ನಗುವ ಸರದಿ ನನ್ನದಾಗಿತ್ತು. ಆ ನಗುವಿನ ಅಲೆಯಲ್ಲಿ ವಾಜಪೇಯಿ ಕೂಡ ಜತೆಯಾಗಿ ಜೀಕಿದ್ದರು. ವಾಜಪೇಯಿ ಸಂಪರ್ಕಕ್ಕೆ ಯಾರೇ ಬರಲಿ, ಅವರು ಹೋಗುವಾಗ ಅಪರಿಮಿತ ನಗು, ಸಂತೋಷ ಹಾಗೂ ಅಪಾರ ಗೌರವವನ್ನು ಮೊಗೆದುಕೊಂಡು ಹೋಗುತ್ತಿದ್ದುದು ದಿಟ.
ಅವರ ವ್ಯಕ್ತಿತ್ವವೇ ಹಾಗಿತ್ತು.
ಅವರೂ ಸಹ ಅದನ್ನು ಹಾಗೇ ರೂಢಿಸಿಕೊಂಡಿದ್ದರು. ವಾಜಪೇಯಿ ವ್ಯಕ್ತಿತ್ವ ಹೇಗಿತ್ತೆಂದರೆ ಸಾರ್ವಜನಿಕ ಬದುಕಿಗೆ ಹೇಳಿ ಮಾಡಿಸಿದಂತಿತ್ತು. ಪ್ರಾಯಶಃ ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ!
ವಾಜಪೇಯಿ ಒಬ್ಬ ಅಪರೂಪದ ಮುತ್ಸದ್ಧಿ, ನಾಯಕನಿಗೆ ಬೇಕಾದ ಎಲ್ಲಗುಣಗಳೂ ಅವರಲ್ಲಿ ಮೇಳೈಸಿದ್ದವು. ಅವರನ್ನು ಕಂಡು ಏನಾದರೂ ತಪ್ಪು ಹುಡುಕಲೇಬೇಕೆಂದು ಬಂದವರು, ಏನೂ ಸಿಗದೇ ಬರಿಗೈಲಿ ಹೋಗಬೇಕಾಗಿ ಬಂದಾಗ, ಹಾಗೆ ಹೋಗಬಾರದೆಂದು Right Man in a Wrong Party ಎಂದು ಉದ್ಗಾರ ತೆಗೆದು ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ವಾಜಪೇಯಿ ಶುಭ್ರ ಹಾಗೂ ಆಪ್ತ.
ಈ ಕಾರಣದಿಂದ ಬೇರೆ ಪಕ್ಷದವರೂ ಅವರನ್ನು ಇಷ್ಟಪಡುತ್ತಿದ್ದರು.”ವಾಜಪೇಯಿಯನ್ನು ಇಷ್ಟಪಡುವ ದೊಡ್ಡ ಸಮೂಹವೇ ಕಾಂಗ್ರೆಸ್ ಪಕ್ಷದಲ್ಲಿದೆ. ನನ್ನ ಪಾಲಿಗೆ ಅವರೇ ರಾಜಕೀಯ ಗುರು. ಅವರ ಅನೇಕ ಗುಣಗಳನ್ನು ನಾನು ಮೈಗೂಡಿಸಿಕೊಂಡಿದ್ದೇನೆ’ ಎಂದು ಸ್ವತಃ ಕಾಂಗ್ರೆಸ್್ನಾಯಕ ಹಾಗೂ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರೇ ಹೇಳಿದ್ದರು.
ಜವಾಹರ್್ಲಾಲ್ ನೆಹರು ಅವರು ಆಗಲೇ ವಾಜಪೇಯಿ ಅವರ ವಾಕ್ಚಾತುರ್ಯ ಹಾಗೂ ರಾಜಕೀಯ ಮುತ್ಸದ್ದಿತನವನ್ನು ಮೆಚ್ಚಿಕೊಂಡಿದ್ದರು. ವಾಜಪೇಯಿ ಲೋಕಸಭೆಗೆ ಆಯ್ಕೆಯಾಗುವುದನ್ನು ನೆಹರು ಇಷ್ಟಪಟ್ಟಿದ್ದರು. ಹೀಗಾಗಿ ವಾಜಪೇಯಿ ಸ್ಪರ್ಧಿಸಿದ್ಧ ಕ್ಷೇತ್ರಕ್ಕೆ ಚುನಾವಣೆ ಪ್ರಚಾರಕ್ಕೆ ಹೋಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದಾಗ, ನೆಹರು ಖಡಾಖಡಿ ಹೇಳಿದ್ದರು-’ಲೋಕಸಭೆಯಲ್ಲಿ ವಾಜಪೇಯಿ ಅವರಂಥ ಯುವ ಮುಖಂಡರ ಅಗತ್ಯವಿದೆ. ಅಲ್ಲದೇ ಅವರಿಗೇ ವಿದೇಶಾಂಗ ವ್ಯವಹಾರಗಳ ಬಗ್ಗೆ ಬಹಳ ಆಸಕ್ತಿ. ಅಂಥವರು ಸದನದಲ್ಲಿರಬೇಕು. ಆದ್ದರಿಂದ ನಾನು ಅವರು ಸ್ಪರ್ಧಿಸಿದ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಿಲ್ಲ’.
ವಾಜಪೇಯಿ ಅವರ ವ್ಯಕ್ತಿತ್ವವೇನೆಂಬುದಕ್ಕೆ ಇದೇ ಸಾಕ್ಷಿ. ನೆಹರು ಅವರ ಪಂಚಶೀಲ ಶತ್ವಗಳ ಬಗ್ಗೆ ವಾಜಪೇಯಿ ತುಸು ಟೀಕಾತ್ಮಕ ಮಾತಾಡಿದ್ದರು. ವಾಜಪೇಯಿ ಹೇಳಿದ ಮಾತುಗಳಲ್ಲಿ ಹುರುಳಿತ್ತು. ಅದು ನೆಹರು ಅವರಿಗೂ ಮನವರಿಕೆಯಾಗಿರಬೇಕು.
ಲೋಕಸಭೆಯ ಮೊಗಸಾಲೆಯಲ್ಲಿ ವಾಜಪೇಯಿ ಅವರನ್ನು ಕರೆಯಿಸಿ ನೆಹರು ಮಾತಾಡಿ, ತಮ್ಮ ಮೆಚ್ಚುಗೆ ಸೂಚಿಸಿದ್ದರು.”ಇದೇ ಮಾತನ್ನು ನೀವು ಸದನದಲ್ಲಿಯೇ ಹೇಳಿದ್ದರೆ, ಅಧಿಕೃತವಾಗಿ ದಾಖಲಾದರೂ ಆಗುತ್ತಿತ್ತು. ಅಲ್ಲದೇ ಉಳಿದ ಸದಸ್ಯರೂ ಕೇಳಿಸಿಕೊಂಡು ಖುಷಿಪಡುತ್ತಿದ್ದರು’ ಎಂದು ವಾಜಪೇಯಿ ಚಟಾಕಿ ಹಾರಿಸಿದ್ದರು.
ವಾಜಪೇಯಿ ತಮ್ಮ ರಾಜಕೀಯ ವಿರೋಧಿಗಳನ್ನೂ ಗೌರವಿಸಿದವರು. ಎಂಥಾ ಆವೇಶ, ಆಕ್ರೋಶದ ಸಂದರ್ಭದಲ್ಲೂ ಸಜ್ಜನಿಕೆಯ ಪರಿಧಿ ಮೀರಿ ನಡೆದವರಲ್ಲ. ಅದೇ ಸಜ್ಜನಿಕೆ, ಸೌಜನ್ಯದಿಂದಲೇ ಎಂಥವರನ್ನೂ ಮೋಡಿ ಮಾಡಿದವರು.

ಬಿಜೆಪಿಯ ಜ್ಯೇಷ್ಠ ನಾಯಕರಾಗಿ ರಾಷ್ಟ್ರ ರಾಜಕಾರಣಕ್ಕೆ ಒಂದು ವಿಶೇಷ ಮೆರಗು ಮೆರೆದು, ಮಹತ್ವ ಹೆಚ್ಚಿಸಿದ ಅಗ್ಗಳಿಕೆ ಅವರದು. ಬೆಂಗಳೂರಿನ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆ. ರಾಜೀವ್್ಗಾಂಧಿ ಹತ್ಯೆ ಬಳಿಕ ನಡೆದ ಚುನಾವಣೆ. ಬಿಜೆಪಿಯ ರಾಜಕೀಯ ನಾಯಕರೊಬ್ಬರು ರಾಜೀವ್ ಗಾಂಧಿ ವಿರುದ್ಧ ಜೋರಾಗಿ ಭಾಷಣ ಮಾಡುತ್ತಿದ್ದರು. ಕನ್ನಡದಲ್ಲಿನ ಮಾತುಗಳು ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಆ ನಾಯಕರ ಆವೇಶದ ಮಾತಿನ ಯಡವಟ್ಟುತನ ಅವರಿಗೆ ಅರ್ಥವಾಗಿರಬೇಕು. ಪಕ್ಕದಲ್ಲಿ ಕುಳಿತ ಮತ್ತೊಬ್ಬ ನಾಯಕರಿಂದ ಭಾಷಣ ಮಾಡುತ್ತಿದ್ದವರ ಮಾತಿನ ತಾತ್ಪರ್ಯವನ್ನು ವಾಜಪೇಯಿ ತಿಳಿದುಕೊಂಡರು. ಅನಂತರ ತಮ್ಮ ಮಾತಿನಲ್ಲಿ ರಾಜೀವ್ ಗಾಂಧಿಯವರ ವೈಯಕ್ತಿಕ ನಿಂದನೆಗೆ ವಿಷಾದ ವ್ಯಕ್ತಪಡಿಸಿದರು.
ವಾಜಪೇಯಿ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಅಂಶವೆಂದರೆ ಅಕಾಮಡೇಟಿವ್ ಗುಣ. ಎಲ್ಲರನ್ನು ಕೂಡಿಸಿಕೊಂಡು ಜತೆಯಲ್ಲಿ ಕರೆದುಕೊಂಡು ಹೋಗುವ ಸ್ವಭಾವ. ಜತೆಗೆ ತಮ್ಮ ನಿಲುವನ್ನು ಸಡಿಲಿಸದೇ ಬೇರೆಯವರೊಂದಿಗೆ ಅದನ್ನು ಹಿತವಾಗಿ ಬೆರೆಸಿ, ಸರ್ವಸಮ್ಮತ ಪಾಕ ತಯಾರಿಸುವ ಪ್ರಜಾಸತ್ತಾತ್ಮಕ ಗುಣ. ಈ ಕಾರಣದಿಂದ ವಾಜಪೇಯಿ ಅಭಿಪ್ರಾಯಭೇದಗಳ ನಡುವೆಯೂ ಸ್ವಂತಿಕೆ ಉಳಿಸಿಕೊಂಡರು. ಹಾಗೆಂದು ಎಲ್ಲೂ ಒರಟು ಹಿಡಿತದವರೆಂದು ಕರೆಯಿಸಿಕೊಳ್ಳಲಿಲ್ಲ. ತಮ್ಮ ಸ್ಥಾನ, ಹುದ್ದೆಗೆ ಒಂದಿನಿತು ಕುಂದುಂಟಾಗುವ ತಪ್ಪು ಹೆಜ್ಜೆ ಇಡಲಿಲ್ಲ. 28 ಅಕರಾಳ ವಿಕರಾಳ ಪಕ್ಷಗಳನ್ನಿಟ್ಟುಕೊಂಡು ಮಿಲಿ-ಜುಲಿ ಸರಕಾರದ ಅವಧಿ ಪೂರ್ಣಗೊಳಿಸಿದರು. ಎನ್್ಡಿಎ ಸರಕಾರಕ್ಕೆ ವಾಜಪೇಯಿ ಎಂಬ ಅಂಟೇ ಸಿಮೆಂಟು. ನೋಡಿ, ಅವರ ಅನುಪಸ್ಥಿತಿಯಲ್ಲಿ ಎನ್್ಡಿಎ ಎಂಬ ಮನೆಯಲ್ಲಿ ಎಷ್ಟೊಂದು ಒಡಕುಗಳು ಹುಟ್ಟಿದವು!
ವಾಜಪೇಯಿ ನೆಹರು, ಇಂದಿರಾ ಹಾಗೆ ಇಡೀ ದೇಶವನ್ನು ಆವರಿಸಿಕೊಂಡ ಜನನಾಯಕರು. ಇಡೀ ರಾಷ್ಟ್ರ ಅವರಿಗೆ ಅಂಗೈಯಷ್ಟೇ ಪರಿಚಿತ. ಆರೂವರೆ ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಹೋಗದ ಜಿಲ್ಲೆಗಳಿರಲಿಕ್ಕಿಲ್ಲ. ಕನಿಷ್ಠ ನೂರು ಸಲವಾದರೂ ಭಾರತ ಪರಿಭ್ರಮಣ ಮಾಡಿರಬಹುದು. ಮಾಡಿದ ಭಾಷಣಗಳಿಗಂತೂ ಲೆಕ್ಕವೇ ಇಲ್ಲ. ಒಂದೊಂದು ಭಾಷಣವೂ ಒಂದೊಂದು ಕವಿತೆ, ಹಾಸ್ಯೋತ್ಸವ, ಮಾತಿನ ಹಬ್ಬ ವಿಚಾರ-ವಿಡಂಬನೆಗಳ ಉತ್ಸವ. ಅವರ ಮಾತುಗಳನ್ನು ಕೇಳಲಷ್ಟೇ ಅಲ್ಲ. ನೋಡಲೂ ಬಲು ಚೆಂದ. ಅಡ್ವಾಣಿಯವರು ಹೇಳಿದಂತೆ ಅವರ ರಾಜಕೀಯ ಜೀವನ ಗಂಗಾಸಮಾನ!
ವಾಜಪೇಯಿ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಅವರು ಹಾಸಿಗೆ ಹಿಡಿದ ಎರಡೇ ವರ್ಷಗಳಲ್ಲಿ ಆ ಪಕ್ಷ ಹಿಂದಿನ ವೈಭವ ಕಳೆದುಕೊಂಡಿರುವುದೇ ಅದಕ್ಕೆ ನಿದರ್ಶನ. ವಾಜಪೇಯಿ ಸಕ್ರಿಯರಾಗಿ ಇದ್ದಿದ್ದರೆ ಹೀಗಿರುತ್ತಿತ್ತಾ? ಖಂಡಿತ ಇಲ್ಲವೇ ಇಲ್ಲ. ಆದರೆ ಅವರು ಬದುಕಿರುವಾಗಲೇ ಅವರು ಕಟ್ಟಿದ ಪಕ್ಷ ಅಶಕ್ತವಾಗಿರುವುದು ವಾಜಪೇಯಿ ಅವರ ಅನಿವಾರ್ಯತೆ ಹಾಗೂ ಅನುಪಸ್ಥಿತಿಯನ್ನು ಒಟ್ಟಿಗೇ ಸಾರಿ ಹೇಳುತ್ತವೆ.
ಅದೇನೇ ಇರಲಿ, ಭಾರತ ರಾಜಕಾರಣದ ಭೀಷ್ಮ ಪಿತಾಮಹ ಎಂಬತ್ತೆಂಟಕ್ಕೆಮತ್ತೊಂದು ಮಗ್ಗಲು ಬದಲಿಸಿದ್ದಾರೆ.

 - ಕೃಪೆ ವಿಶ್ವೇಶ್ವರ ಭಟ್ (ವಿ.ಭಟ್.ಇನ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ