ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಜನವರಿ 3, 2012

ಚೀನಾದ ವಿರುದ್ಧ ಇವರ ಪೌರುಷ ಸತ್ತು ಬಿದ್ದಿದೆ ಏಕೆ?

ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?!
‘ನಮ್ಮ ಜಮ್ಮು-ಕಾಶ್ಮೀರವನ್ನು “ವಿವಾದಿತ ಪ್ರದೇಶ’ ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ “ಮಹಾ ಚೀನಾ’ ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ ಚೀನಾದ ಸಾರ್ವಭೌಮತೆಯನ್ನೂ ಪ್ರಶ್ನಿಸಬೇಕು. ಚೀನಾದ ವಿಷಯದಲ್ಲಿ ಬಾಗಿ ಶರಣಾಗುವ ಬದಲು ಭಾರತ ಇನ್ನಾದರೂ ಬೆನ್ನುಹುರಿ ತೋರಬೇಕು’.
ಹಾಗಂತ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಡಿಸೆಂಬರ್ 5ರಂದು ಕೇಂದ್ರ ಸರ್ಕಾರಕ್ಕೆ ಕರೆಕೊಟ್ಟಿದ್ದಾರೆ!
ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ 1998ರಲ್ಲೇ ಚೀನಾವೇ ನಮ್ಮ “Enemy No.1′ ಎನ್ನುವ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದರು. 1962ರ ಯುದ್ಧದ ನಂತರ ಯಾವ ಭಾರತೀಯನೂ ಚೀನಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಾಗಲಿ, ವಿಶ್ವಾಸವನ್ನಾಗಲಿ ಹೊಂದಿಲ್ಲ. ಇಷ್ಟಕ್ಕೂ ಚೀನಾದ ಬಗ್ಗೆ ಈ ಪರಿ ಸಂಶಯ, ಶಂಕೆ, ಅನುಮಾನ ಮನೆಮಾಡಲು ಕಾರಣವಾದ ಘಟನೆಗಳಾದರೂ ಯಾವುವು? ನಾವೇಕೆ ಚೀನಾವನ್ನು ನಂಬಿಕೂರುವ ಸ್ಥಿತಿಯಲ್ಲಿಲ್ಲ? ಉಮರ್ ಅಬ್ದುಲ್ಲಾ ಇಂಥದ್ದೊಂದು ಹೇಳಿಕೆ ನೀಡಲು ಕಾರಣವಾದರೂ ಏನು?
1. ಕಳೆದ 2 ವರ್ಷಗಳಿಂದ ಭಾರತ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಚೀನಾ ಇಂದಿಗೂ ನಮ್ಮ ಜಮ್ಮು-ಕಾಶ್ಮೀರದವರ ಪಾಸ್್ಪೋರ್ಟ್್ಗೆ ಶಿಕ್ಕಾ ಹಾಕುವ ಬದಲು ಪ್ರತ್ಯೇಕ ಹಾಳೆಯಲ್ಲಿ ವೀಸಾ (Stapled Visa) ನೀಡುತ್ತದೆ.
2. ಅರುಣಾಚಲ ಪ್ರದೇಶದವರಿಗಂತೂ ವೀಸಾವನ್ನೇ ಕೊಡುವುದಿಲ್ಲ. ಏಕೆಂದರೆ ಅರುಣಾಚಲ ಪ್ರದೇಶ ತನ್ನದು, ಅಲ್ಲಿನ ಜನ ಚೀನಾಕ್ಕೆ ಆಗಮಿಸಲು ವೀಸಾ ಅಗತ್ಯವಿಲ್ಲ ಎನ್ನುತ್ತಿದೆ.
3. 2007ರಲ್ಲಿ ಬೀಜಿಂಗ್್ಗೆ ಹೊರಟಿದ್ದ ನಮ್ಮ 100 ಐಎಎಸ್ ಅಧಿಕಾರಿಗಳ ಅಧ್ಯಯನ ಪ್ರವಾಸವನ್ನೇ ರದ್ದು ಮಾಡಬೇಕಾಯಿತು. ಏಕೆಂದರೆ ಅದರಲ್ಲಿದ್ದ ಒಬ್ಬ ವ್ಯಕ್ತಿ ಅರುಣಾಚಲ ಪ್ರದೇಶದವರಾಗಿದ್ದರು, ಅವರಿಗೆ ಚೀನಾ ವೀಸಾ ನೀಡಲಿಲ್ಲ. ಅದಕ್ಕೆ ಪ್ರತಿಭಟನೆ ರೂಪದಲ್ಲಿ ಭಾರತ ಪ್ರವಾಸವನ್ನೇ ರದ್ದು ಮಾಡಿತು. ಅರುಣಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿ ಗೇಗಾಂಗ್ ಅಪಾಂಗ್್ಗೂ ಚೀನಾ ವೀಸಾ ನಿರಾಕರಿಸಿತ್ತು.
4. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಏಷ್ಯನ್ ಡೆವೆಲಪ್್ಮೆಂಟ್ ಬ್ಯಾಂಕಿನಿಂದ ಬರಬೇಕಿದ್ದ ಸಹಾಯನಿಧಿಗೆ ಚೀನಾದ ಅಡ್ಡಗಾಲು.
5. 2010, ಅಗಸ್ಟ್್ನಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಅದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು!
ಇದು ನಿಮಗೆ ಚೀನಾದ ಉದ್ಧಟತನವೆನಿಸುವುದಿಲ್ಲವೆ? ಇಂತಹ ದಾರ್ಷ್ಟ್ಯಕ್ಕೆ ಕಾರಣವಾದರೂ ಏನು? ಅಥವಾ ಚೀನಾದ ನೈಜ ಉದ್ದೇಶವನ್ನು, ನೈಜ ಮುಖವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತ ವಿಫಲವಾಯಿತೇ? ಅಥವಾ ಅರ್ಥಮಾಡಿಕೊಂಡರೂ ನಮ್ಮ ಆಳುವ ನಾಯಕರಲ್ಲಿದ್ದ ಕ್ಷಾತ್ರ ಗುಣದ ಕೊರತೆಯೇ ಚೀನಾವೆಂಬ ಬಹುದೊಡ್ಡ ಅಪಾಯದ ಸೃಷ್ಟಿಗೆ ಕಾರಣವಾಯಿತೆ?
ಈ ಸಂಶಯ ಖಂಡಿತ ಕಾಡುತ್ತಿದೆ!
‘ಟಿಬೆಟ್ ಹಸ್ತವಿದ್ದಂತೆ. ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ North East Frontier Agency (ಅರುಣಾಚಲ ಪ್ರದೇಶ) ಅದರ 5 ಬೆರಳುಗಳಿದ್ದಂತೆ. ಅವುಗಳನ್ನು ಸ್ವತಂತ್ರಗೊಳಿಸಬೇಕು’ ಎಂದು ಚೀನಿ ನಾಯಕ ಮಾವೋ ಝೆಡಾಂಗ್ 6 ದಶಕಗಳ ಹಿಂದೆಯೇ ಸಾರ್ವಜನಿಕವಾಗಿ ಹೇಳಿದ್ದರು! ಅವರ ಧೂರ್ತ ಯೋಚನೆ ಹಾಗೂ ಯೋಜನೆ 1946ರಲ್ಲಿಯೇ ಬಹಿರಂಗವಾಗಿತ್ತು. 1950ರ ನಂತರವಂತೂ, “ತೈವಾನ್ ಟಿಬೆಟ್ ಹಾಗೂ ಹೈನನ್ ದ್ವೀಪಗಳನ್ನು ಮರುವಶಪಡಿಸಿಕೊಳ್ಳಲಾಗುವುದು’ ಎಂದು ಪದೇ ಪದೆ ಹೇಳಲಾರಂಭಿಸಿದ್ದರು. 1949ರಲ್ಲಿ ಕಮ್ಯೂನಿಸ್ಟರು ಚೀನಾದ ಚುಕ್ಕಾಣಿ ಹಿಡಿದ ನಂತರ ಹೊರಬಂದ ಚೀನಾದ ಭೂಪಟ ಕೊರಿಯಾ, ಮಂಗೋಲಿಯಾ, ಬರ್ಮಾ, ಮಲೇಷಿಯಾ, ಟಿಬೆಟ್, ನೇಪಾಳ, ಸಿಕ್ಕಿಂ, ಭೂತಾನ್್ಗಳನ್ನೂ ಒಳಗೊಂಡಿತ್ತು. ಇಷ್ಟಾಗಿಯೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು ಎಚ್ಚೆತ್ತುಕೊಳ್ಳಲೇ ಇಲ್ಲ. 1959ರಲ್ಲಿ ಚೀನಾ ಟಿಬೆಟ್ಟನ್ನು ಕಬಳಿಸಿದಾಗಲೂ ನೆಹರು ನಿದ್ರೆಯಿಂದೇಳಲೇ ಇಲ್ಲ. ಅದರ ಫಲವೇ 1962ರ ಯುದ್ಧ. ಅದರಲ್ಲಿ ನಮ್ಮ ಲಡಾಕ್್ನ 37 ಸಾವಿರ ಚದುರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿತು. ಒಂದು ಕಾಲದಲ್ಲಿ ಅರುಣಾಚಲ ಪ್ರದೇಶ ಕೂಡ ಟಿಬೆಟ್್ನ ಒಂದು ಭಾಗವಾಗಿತ್ತು. ಬ್ರಿಟಿಷರು ಮ್ಯಾಕ್್ಮಹೋನ್ ರೇಖೆ ಎಳೆದ ಮೇಲೆ ಅರುಣಾಚಲ ಪ್ರದೇಶ ಪ್ರತ್ಯೇಕಗೊಂಡು ಭಾರತಕ್ಕೆ ಸೇರಿತು. ಹಾಗಾಗಿ ಅದನ್ನೂ ಸ್ವತಂತ್ರಗೊಳಿಸಬೇಕು, ಅಂದರೆ ತನ್ನದಾಗಿಸಿಕೊಳ್ಳಬೇಕೆಂದು ಚೀನಾ ಹೊರಟಿದೆ. ಅದರ ಫಲವೇ ವೀಸಾ ನಿರಾಕರಣೆ! ಲಡಾಕ್ ಸಂಪೂರ್ಣವಾಗಿ ದೊರೆತಿಲ್ಲವೆಂಬ ಕಾರಣಕ್ಕೆ ನೀಡುತ್ತಿರುವುದೇ Stapled Visa! ನಮ್ಮಲ್ಲಿ “ಬೆರಳು ತೋರಿದರೆ ಹಸ್ತ ನುಂಗುತ್ತಾರೆ’ ಎಂಬ ಮಾತು ಜನಜನಿತವಾಗಿದೆ. ಆದರೆ ಹಸ್ತವನ್ನೇ ಮೊದಲು ನುಂಗಿರುವ ಚೀನಾ ಇನ್ನು ಬೆರಳುಗಳನ್ನು (ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ ಅರುಣಾಚಲ ಪ್ರದೇಶ) ಬಿಟ್ಟೀತೆ?
ಅದರ ಸೂಚನೆಗಳು ಈಗಾಗಲೇ ಸಿಕ್ಕಿವೆ!
ಕಳೆದ ಒಂದು ವರ್ಷದಲ್ಲಿ ಚೀನಾ ಸುಮಾರು 300ಕ್ಕೂ ಹೆಚ್ಚು ಭಾರಿ ಗಡಿ ನಿಯಮ ಉಲ್ಲಂಘನೆ ಮಾಡಿದೆ. ಮತಾಂಧ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಆಕ್ರಮಿತ ಕಾಶ್ಮೀರದ ಗಿಲ್ಗಿಟ್್ನಲ್ಲಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚೀನಾ ತನ್ನ 11 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ. ತುರ್ತು ಪರಿಸ್ಥಿತಿ ಎದುರಾದರೆ, ಅಂದರೆ ತುರ್ತಾಗಿ ಯುದ್ಧ ಮಾಡಬೇಕಾದ ಸಂದರ್ಭ ಬಂದರೆ ಕೇವಲ 21 ದಿನಗಳಲ್ಲಿ 5 ಲಕ್ಷ ಸೈನಿಕರನ್ನು ಭಾರತದ ಗಡಿಗೆ ತಂದು ನಿಲ್ಲಿಸುವ ತಾಕತ್ತು ಚೀನಾಕ್ಕಿದೆ ಎಂದು 2010 ಏಪ್ರಿಲ್್ನಲ್ಲಿ ನಮ್ಮ ಸೇನಾಪಡೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ! ಟಿಬೆಟ್ ಭಾರತ ಗಡಿಯುದ್ದಕ್ಕೂ ಚಾಚಿದಂತೆ 1142 ಕಿ. ಮೀ. ರೈಲು ಹಳಿ ಹಾಕಿರುವ ಚೀನಾ, ಅದನ್ನು ಕಠ್ಮಂಡು, ಮ್ಯಾನ್ಮಾರ್, ಭೂತಾನ್, ಪಾಕಿಸ್ತಾನ ಹಾಗೂ ಮಧ್ಯ ಏಷ್ಯಾಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಟಿಬೆಟ್್ನಲ್ಲಿ 8 ಹಾಗೂ ನೆರೆಯ ಕ್ಷಿನ್್ಜಿಯಾಂಗ್್ನಲ್ಲಿ 10 ವಾಯುನೆಲೆಗಳನ್ನು ಸ್ಥಾಪಿಸಿರುವ ಅದು, 2020ರೊಳಗೆ ಇನ್ನೂ 22 ಹೊಸ ವಾಯುನೆಲೆಗಳನ್ನು ನಿರ್ಮಾಣ ಮಾಡಲಿದೆ. ಇವೆಲ್ಲ ಏನನ್ನು ಸೂಚಿಸುತ್ತವೆ? ಇವ್ಯಾವುವೂ ನಾಗರಿಕರ ಉಪಯೋಗಕ್ಕಾಗಿ ಹಾಕುತ್ತಿರುವ ಹಳಿಗಳಲ್ಲ. ಯುದ್ಧ ಸಂದರ್ಭದಲ್ಲಿ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ತ್ವರಿತ ಹಾಗೂ ನಿರಂತರವಾಗಿ ಸಾಗಣೆ ಮಾಡುವ ಉದ್ದೇಶ ಹೊಂದಿವೆ. ಇವತ್ತು ಚೀನಿ ನೌಕಾಪಡೆ ಯೆಲ್ಲೋ ಸಮುದ್ರ, ಕೊರಿಯನ್ ಕೊಲ್ಲಿ, ಮಲೇಷಿಯಾ ಜಲಸಂಧಿ ನಂತರ ನಮ್ಮ ಹಿಂದೂಮಹಾಸಾಗರದ ಮೇಲೂ ನಿಯಂತ್ರಣ ಹೊಂದಲು ಮುಂದಾಗಿದೆ. ಅದರ ಭಾಗವಾಗಿಯೇ ಶ್ರೀಲಂಕಾದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ನಮ್ಮ ಭಾಷಾಂಧ ತಮಿಳರಿಗೆ ಹೆದರಿ ಭಾರತ ಕೈಕಟ್ಟಿ ಕುಳಿತ ಕಾರಣ ಎಲ್್ಟಿಟಿಇ ವಿರುದ್ಧದ ಕಾರ್ಯಾಚರಣೆಗೆ ಮದ್ದುಗುಂಡು ಪೂರೈಕೆ ಮಾಡಿದ ಚೀನಾ, ಶ್ರೀಲಂಕಾದ ಮೇಲೆ ನಿಯಂತ್ರಣ ಸಾಧಿಸುವುದಕ್ಕೂ ಪ್ರಯತ್ನಿಸುತ್ತಿದೆ. 2010ರಲ್ಲಿ ಶ್ರೀಲಂಕಾಕ್ಕೆ ಹರಿದು ಬಂದು ವಿದೇಶಿ ಬಂಡವಾಳದಲ್ಲಿ ಶೇ. 90 ಭಾಗ ಚೀನಾದ್ದಾಗಿದೆ. ಇವತ್ತು ಅಮೆರಿಕದ ಶೇ.40ರಷ್ಟು ಸೆಕ್ಯುರಿಟಿ ಬಾಂಡ್್ಗಳನ್ನು ಖರೀದಿ ಮಾಡಿಟ್ಟುಕೊಳ್ಳುವ ಮೂಲಕ ವಿಶ್ವದ ಹಿರಿಯಣ್ಣನನ್ನೇ ಆಟವಾಡಿಸುತ್ತಿರುವ ಚೀನಾ, ಶ್ರೀಲಂಕಾವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾಲ ದೂರವಿಲ್ಲ. ಇನ್ನು ಮ್ಯಾನ್ಮಾರ್(ಬರ್ಮಾ) ವಿಷಯಕ್ಕೆ ಬಂದರೂ ಈಗಾಗಲೇ ಅಲ್ಲಿನ ಬಂದರುಗಳ ಅಭಿವೃದ್ಧಿ, ರಸ್ತೆ ನಿರ್ಮಾಣದ ನೆಪದಲ್ಲಿ ಬೇರುಬಿಟ್ಟಿರುವ ಚೀನಾ, ಅಲ್ಲಿ ಯಥೇಚ್ಛವಾಗಿರುವ ನೈಸರ್ಗಿಕ ಅನಿಲದ ಎಲ್ಲ ಗುತ್ತಿಗೆಗಳನ್ನೂ ತನ್ನದಾಗಿಸಿಕೊಂಡಿದೆ. ಬಾಂಗ್ಲಾದಲ್ಲೂ ಬಂದರು ನವೀಕರಣದ ನೆಪದಲ್ಲಿ ಚೀನಾ ಕಾಲಿಟ್ಟಿದೆ. ಇತ್ತ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಈಗಾಗಲೇ ಚೀನಾದ ಗಾಳಕ್ಕೆ ಸಿಕ್ಕಿದೆ. ಸಾಮಾನ್ಯವಾಗಿ ನೇಪಾಳದಲ್ಲಿ ಯಾರೇ ಪ್ರಧಾನಿಯಾದರೂ ಅವರ ಮೊದಲ ಭೇಟಿ ಭಾರತವಾಗಿರುತ್ತದೆ. ಆದರೆ 2008ರಲ್ಲಿ ಮಾವೋವಾದಿ ನಾಯಕ ಪ್ರಚಂಡ ಪ್ರಧಾನಿಯಾದಾಗ ಅವರು ಮೊದಲು ಭೇಟಿ ಕೊಟ್ಟಿದ್ದು ಮಾತ್ರ ಚೀನಾಕ್ಕೆ!
ಇದರ ಸಂದೇಶವೇನು? ಇದಕ್ಕೆಲ್ಲ ಯಾರನ್ನು ದೂರಬೇಕು? ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?
1962ರಲ್ಲಿ ಅಕ್ಸಾಯ್್ಚಿನ್ ಭೂಭಾಗವನ್ನು ಚೀನಾ ವಶಪಡಿಸಿಕೊಂಡಾಗ ಪ್ರಧಾನಿ ನೆಹರು ಸಂಸತ್ತಿನಲ್ಲಿ ನೀಡಿದ ಸಮರ್ಥನೆ ಏನು ಗೊತ್ತೆ? “ಅಲ್ಲಿ ಒಂದು ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ. ಅದನ್ನು ಚೀನಾಕ್ಕೆ ಆಕ್ರಮಿಸಿದ್ದರಿಂದ ಭಾರತ ಕಳೆದುಕೊಂಡಿದ್ದೇನೂ ಇಲ್ಲ’! ಇದರಿಂದ ಕುಪಿತರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಂಸದ ಮಹಾವೀರ್ ತ್ಯಾಗಿಯವರು ತಮ್ಮ ಬೋಳುದಲೆಯನ್ನು ತೋರುತ್ತಾ, “ಇಲ್ಲೂ ಕೂಡ ಏನೂ ಬೆಳೆಯುವುದಿಲ್ಲ. ಹಾಗಂತ ಇದನ್ನೂ ತುಂಡು ಮಾಡಬೇಕೇ ಅಥವಾ ಅನ್ಯರಿಗೆ ಕೊಟ್ಟುಬಿಡಲಾದೀತೆ?’ ಎಂದು ನೆಹರು ಮೇಲೆ ಟೀಕಾಪ್ರಹಾರ ಮಾಡುತ್ತಾರೆ. ವಾಸ್ತವದಲ್ಲಿ ಟೋಪಿಯೊಳಗಿದ್ದ ನೆಹರು ಮಂಡೆ ಕೂಡ ಬೊಳುದಲೆಯೇ ಆಗಿತ್ತು, ಜೊತೆಗೆ ಅವರ ಬುದ್ಧಿಯೂ ಬೋಳಾಗಿತ್ತು! ಅದರ ದುಷ್ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನೆಹರು ಮಾಡಿದ ಮೂರ್ಖ ಕೆಲಸ ಇಷ್ಟಕ್ಕೇ ನಿಲ್ಲುವುದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಹಾಗೂ ರಿಪಬ್ಲಿಕ್ ಆಫ್ ಚೀನಾ ಈ 5 ರಾಷ್ಟ್ರಗಳು ಮಾತ್ರ ವಿಟೋ ಅಧಿಕಾರ ಹೊಂದಿವೆ. ಚೀನಾ ಹೊಂದಿರುವ ವಿಟೋ ಅಧಿಕಾರ 1949ರ ನಂತರ ತೈವಾನ್ ಬಳಿಯಿತ್ತು. ಅದನ್ನು ಅಮೆರಿಕ ಭಾರತಕ್ಕೆ ನೀಡುವ ಸೂಚನೆ ನೀಡಿದರೂ ಅಂತಿಮವಾಗಿ ಚೀನಾಕ್ಕೆ ಸಲ್ಲುವಂತೆ ಮಾಡಿದ್ದು ನಮ್ಮ ಮಹಾನ್ ನೆಹರು. ಇದನ್ನು ರಾಘವ ಬೆಹಲ್ ಬರೆದಿರುವ “ಸೂಪರ್ ಪವರ್್’ ಪುಸ್ತಕದಲ್ಲೂ ದಾಖಲಿಸಲಾಗಿದೆ,
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ನೆಹರು ಮೂರ್ಖತನವನ್ನು ಅದರಲ್ಲಿ ಒಪ್ಪಿಕೊಂಡಿದ್ದಾರೆ!
ದುರದೃಷ್ಟವಶಾತ್, ಅಂತಹ ನೆಹರು ಅವರ ಕುಟುಂಬವೇ ಹಿಂಬಾಗಿಲಿನಿಂದ ಇಂದು ದೇಶವನ್ನಾಳುತ್ತಿದೆ. ಇತ್ತ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವ ಭಾಗವನ್ನೊಳಗೊಂಡ ಜಮ್ಮು-ಕಾಶ್ಮೀರದ ಉಸ್ತುವಾರಿ ಹೊಂದಿರುವ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಅವರಿಗೆ ಚೀನಾ ವೀಸಾ ನಿರಾಕರಣೆ ಮಾಡಿದೆ, ದಲೈಲಾಮ ಸಭೆಯನ್ನು ರದ್ದುಪಡಿಸುವಂತೆ ಬಹಿರಂಗವಾಗಿ ಒತ್ತಡ ಹೇರುತ್ತಿದೆ, ಡಿಸೆಂಬರ್ 1ರಂದು ನಡೆದ ದಲೈಲಾಮ ಜತೆಗಿನ ಕಾರ್ಯಕ್ರಮಕ್ಕೆ ಹೋಗದಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್್ಗೆ ಸಲಹೆ ನೀಡುವಷ್ಟರ ಮಟ್ಟಿಗೆ ಚೀನಾ ದಾರ್ಷ್ಟ್ಯ ಪ್ರದರ್ಶಿಸುತ್ತಿದೆ. ಈ ಘಟನೆಯ ನಂತರವೇ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಗಂಡೆದೆ ತೋರುವಂತೆ ಕರೆ ನೀಡಿರುವುದು. ಇಷ್ಟಾಗಿಯೂ ಪ್ರಧಾನಿ ಮನಮೋಹನ್ ಸಿಂಗ್ ಅವರಾಗಲಿ, ಅವರಿಗೆ ಮೂಗುದಾರ ಹಾಕಿ ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಾಗಲಿ ಬಾಯಿಬಿಟ್ಟಿಲ್ಲ. ಈ ಕಾಂಗ್ರೆಸ್ಸಿಗರ ತಾಕತ್ತು ಪ್ರದರ್ಶನವಾಗುವುದೇನಿದ್ದರೂ ಅಣ್ಣಾ ಹಜಾರೆಯಂತಹ ವಯೋವೃದ್ಧರ ಮುಂದಷ್ಟೇ. ಛೇ!
- ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ