ನನ್ನ ಬ್ಲಾಗ್ ಪಟ್ಟಿ

ಗುರುವಾರ, ಫೆಬ್ರವರಿ 2, 2012

ಅಂಥದ್ದೊಂದು ದುರ್ಘಟನೆಯೇ ಸಂಭವಿಸಲಿಲ್ಲವೆಂದಾದರೆ ಅವರು ಏನಾದರು?

1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ ದೇಶದ ಜನಮಾನಸ ತಯಾರಿಲ್ಲ. ಹಾಗಾಗಿಯೇ 1992ರಲ್ಲಿ ನರಸಿಂಹರಾವ್ ಸರ್ಕಾರ ಸುಭಾಶ್ಚಂದ್ರ ಬೋಸ್್ಗೆ ‘ಮರಣೋತ್ತರ’ವಾಗಿ ಭಾರತ ರತ್ನ ನೀಡಲು ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಅವರು ಮಡಿದಿದ್ದಾರೆ ಎಂಬುದೇ ಸಾಬೀತಾಗಿಲ್ಲದಿರುವಾಗ ಹೇಗೆ ‘ಮರಣೋತ್ತರ’ವಾಗಿ ಭಾರತ ರತ್ನ ನೀಡುತ್ತೀರಿ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಯಿತು. ಮಡಿದಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಕೊಡಿ ಎಂದು ಕೇಳಲಾಯಿತು. ಭಾರತ ರತ್ನ ಸಮಿತಿಗೆ ಸಾಕ್ಷ್ಯ ನೀಡಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಪುರಸ್ಕಾರವನ್ನು ಹಿಂತೆಗೆದುಕೊಳ್ಳಲಾಯಿತು. ಹಾಗಾದರೆ ನೇತಾಜಿ ಏನಾದರು?
ಈ ಪ್ರಶ್ನೆಯ ಬಗ್ಗೆ ಹಲವಾರು conspiracy theoryಗಳಿವೆ!
ಅವುಗಳಲ್ಲಿ ಒಂದು ಸೋವಿಯತ್ ರಷ್ಯಾದತ್ತ ಬೆರಳು ತೋರುತ್ತದೆ. ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಹಾಗೂ ರಾಜತಾಂತ್ರಿಕ ಅಧಿಕಾರಿ ವ್ಯಾಚೆಸ್ಲಾವ್ ಮೊಲಟೋವ್, ಬೋಸ್್ರನ್ನು ರಷ್ಯಾದ ಜೈಲಿನಲ್ಲೇ ಇಟ್ಟುಕೊಳ್ಳಬೇಕೇ ಬೇಡವೆ ಎಂಬ ಪ್ರಶ್ನೆಯ ಬಗ್ಗೆ 1946ರಲ್ಲಿ ಚರ್ಚೆ ನಡೆಸಿದ್ದರು ಎಂದು ಅನಧಿಕೃತ ವರದಿಗಳು ತಿಳಿಸಿದ್ದವು. ಅದಕ್ಕಿಂತಲೂ ದಿಗ್ಭ್ರಮೆ ಹುಟ್ಟಿಸುವ ವಿಚಾರವೆಂದರೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಡಾ.ಎಸ್. ರಾಧಾಕೃಷ್ಣನ್ ಅವರಿಗೆ ಬೋಸ್್ರನ್ನು ಭೇಟಿಯಾಗುವ ಅವಕಾಶವನ್ನೂ ಕಲ್ಪಿಸಲಾಗಿತ್ತಂತೆ! ಇದು ಆಳುವ ಕಾಂಗ್ರೆಸ್ ನಾಯಕತ್ವ ಹಾಗೂ ಅದರದ್ದೇ ಆದ ಸರ್ಕಾರಕ್ಕೆ ಬಹಳ ಚೆನ್ನಾಗಿ ಗೊತ್ತಿತ್ತು.
ಆದರೆ….
ಸುಭಾಶ್ಚಂದ್ರ ಬೋಸ್್ರೇನಾದರೂ ಭಾರತಕ್ಕೆ ಮರಳಿದರೆ ಜನ ಅವರಿಗೆ ಕೊಟ್ಟಿದ್ದ ಆರಾಧ್ಯ ಸ್ಥಾನದ ಬಲದಿಂದ ಅವರು ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ಸೇ ಅವರ ಹಿಂದಿರುಗುವಿಕೆಗೆ ಅಡ್ಡವಾಯಿತು. ಕಳೆದ ಆರೂವರೆ ದಶಕಗಳಲ್ಲಿ ್ನಕಾಂಗ್ರೆಸ್ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿದರೆ ಈ ಅನುಮಾನಕ್ಕೆ ಸಾಕಷ್ಟು ಪುಷ್ಟಿ, ಪುರಾವೆಗಳು ದೊರೆಯುತ್ತವೆ!! ಇಷ್ಟಕ್ಕೂ “1945, ಆಗಸ್ಟ್ 18ರಂದು ನೇತಾಜಿ ಮಡಿಯಲು ಅಂತಹ ದುರ್ಘಟನೆಯೇ ನಡೆದಿಲ್ಲ. ತೈವಾನ್ ಸರ್ಕಾರ ನೀಡಿರುವ 1945, ಆಗಸ್ಟ್ 14ರಿಂದ ಸೆಪ್ಟೆಂಬರ್ 20ರವರೆಗಿನ ವಿಮಾನಯಾನ ದಾಖಲೆಗಳಲ್ಲಿ ಯಾವೊಂದು ದುರ್ಘಟನೆ ನಡೆದಿರುವ ಮಾಹಿತಿಯಾಗಲಿ, ದಾಖಲೆಯಾಗಲಿ ಇಲ್ಲ! ಜಪಾನಿನ ಟೋಕಿಯೋ ಬಳಿಯ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಸುಭಾಶ್ಚಂದ್ರ ಬೋಸ್್ರದ್ದಲ್ಲ. ಅದು ತೈವಾನ್್ನ ಸೈನಿಕನೊಬ್ಬನದ್ದು ಎಂಬುದು ಹಲವಾರು ದಾಖಲೆಗಳಿಂದ ಸ್ಪಷ್ಟವಾಗುತ್ತದೆ” ಎಂದು ನ್ಯಾಯಮೂರ್ತಿ ಮನೋಜ್ ಕೆ. ಮೂತರ್ ಆಯೋಗ 2005ರಲ್ಲಿ ನೀಡಿದ ವರದಿಯನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿದ್ದೇಕೆ? ಈ ಹಿಂದೆ ಆಯೋಗಗಳ ರಚನೆಯ ನೆಪದಲ್ಲಿ ಕಾಂಗ್ರೆಸ್ ಮಾಡಿದ್ದೇನು?
1947ರಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾದ ಕೂಡಲೇ 1945, ಆಗಸ್ಟ್ 18ರಂದು ನಡೆದ ವಿಮಾನ ದುರಂತದಲ್ಲಿ ನೇತಾಜಿ ಮೃತರಾದರು ಎಂದು ಸ್ವತಃ ಘೋಷಣೆ ಮಾಡುವ ಮೂಲಕ ಅನುಮಾನಗಳಿಗೆ ಆಗಲೇ ರೆಕ್ಕೆ-ಪುಕ್ಕ ಬರಿಸಿದ್ದರು. ನೇತಾಜಿ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಹೆಚ್ಚಾಗಿದ್ದೂ ಅನಂತರವೇ. 1945 ಆಗಸ್ಟ್ 18 ರಂದು ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂದು 1945, ಆಗಸ್ಟ್ 21 ರಂದು ಟೋಕಿಯೋದಿಂದ ವರದಿಯೇನೋ ಆಯಿತು. ಆದರೆ ಟೋಕಿಯೋ ಹಾಗೂ ತೈಹೋಕುಗಳಿಂದ ಪ್ರಕಟವಾದ ಮಾಧ್ಯಮ ವರದಿಗಳು ವಿರೋಧಾಭಾಸದಿಂದ ಕೂಡಿದ್ದವು. ಅದು ನೇತಾಜಿ ಅಗಲಿಕೆ ಬಗ್ಗೆ ಅನುಮಾನ,ಗೊಂದಲಗಳ ಜತೆಗೆ ವಿವಾದಗಳೇಳಲು ಕಾರಣವಾಯಿತು. ಜತೆಗೆ, ನೇತಾಜಿ ಬಗ್ಗೆ ಗಾಂಧಿ-ನೆಹರುಗೆ ಇದ್ದ ಮತ್ಸರ ಜನರಿಗೆ ತಿಳಿದಿದ್ದ ಕಾರಣ ಯಾರೂ ನೆಹರು ಮಾತನ್ನು ಒಪ್ಪಲು ಸಿದ್ಧರಿರಲಿಲ್ಲ. ಅದರೆ ಫಲವೇ ಶಾ ನವಾಜ್ ಖಾನ್ ಆಯೋಗ. 1956ರಲ್ಲಿ ರಚನೆಯಾದ ಶಾ ನವಾಜ್ ಆಯೋಗ ನೇತಾಜಿ ಮಡಿದ ಸಂದರ್ಭಗಳ ಬಗ್ಗೆ ದೃಷ್ಟಿ ಹಾಯಿಸದೆ, ತೈವಾನ್್ಗೆ ಒಮ್ಮೆಯೂ ಭೇಟಿ ನೀಡದೆ ಕೇವಲ ಅವರಿವರ ಅಭಿಪ್ರಾಯ ಸಂಗ್ರಹಿಸಿ ‘ನೇತಾಜಿ ಅವರು ವಿಮಾನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ’ ಎಂದು ವರದಿ ಸಲ್ಲಿಸಿತು. ಆದರೆ ಆಯೋಗದ ನಾಲ್ವರು ಸದಸ್ಯರಲ್ಲಿ ಒಬ್ಬರಾಗಿದ್ದ ನೇತಾಜಿಯವರ ಹಿರಿಯ ಸಹೋದರ ಸುರೇಶ್ಚಂದ್ರ ಬೋಸ್, ‘ನೇತಾಜಿಯವರು ಸಾವನ್ನಪ್ಪಿದ್ದಾರೆ ಎನ್ನಲು ಅಂತಹ ವಿಮಾನ ದುರ್ಘಟನೆಯೇ ಸಂಭವಿಸಿಲ್ಲ’ ಎಂದು ಅಂದೇ ವರದಿಗೆ ವಿರೋಧ ವ್ಯಕ್ತಪಡಿಸಿದರು. ಜನರೂ ವರದಿಯನ್ನು ಒಪ್ಪದಾದರು. ಹೊಸದಾಗಿ ತನಿಖೆ ನಡೆಸಬೇಕೆಂಬ ಬೇಡಿಕೆ ಹೆಚ್ಚಾಯಿತು. ಪ್ರಧಾನಿ ಇಂದಿರಾ ಗಾಂಧಿಯವರು 1970ರಲ್ಲಿ ಪಂಜಾಬ್ ಹೈಕೋರ್ಟ್್ನ ನಿವೃತ್ತ ಮುಖ್ಯ ನ್ಯಾಯಮುರ್ತಿ ಜಿ.ಡಿ. ಖೋಸ್ಲಾ ನೇತೃತ್ವದ ಆಯೋಗವನ್ನು ರಚಿಸಿದರು. ಆದರೆ ಆಗ ತೈವಾನ್ ಜತೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಹೊಂದಿರದ ಕಾರಣ, ಅಧಿಕೃತವಾಗಿ ತೈವಾನ್ ಸರ್ಕಾರದ ಜತೆ ಚರ್ಚಿಸಲು ನಮ್ಮ ಸರ್ಕಾರ ಅನುಮತಿ ನೀಡದ ಕಾರಣ ಸತ್ಯಾಂಶವನ್ನು ನಿರೂಪಿಸಲು ಖೋಸ್ಲಾ ಅವರಿಗೂ ಸಾಧ್ಯವಾಗಲಿಲ್ಲ. “1947, ಆಗಸ್ಟ್ 18ರಂದು ತೈವಾನ್ ರಾಜಧಾನಿ ತೈಹೋಕು (ಈಗ ತೈಪೆ) ಬಳಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ದುರ್ಮರಣಕ್ಕೊಳಗಾದರು” ಎಂದು ಅವರೂ ವರದಿಯೊಪ್ಪಿಸಿದರು. ನಂತರ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ, ‘ವಿಮಾನ ದುರ್ಘಟನೆಯಲ್ಲಿ ನೇತಾಜಿ ಸಾವನ್ನಪ್ಪಿದರು’ ಎಂಬ ಖೋಸ್ಲಾ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.
ಇದಾಗಿ 21 ವರ್ಷಗಳ ನಂತರ, ಅಂದರೆ 1998ರಲ್ಲಿ ಹೊಸದಾಗಿ ತನಿಖೆ ನಡೆಸಬೇಕೆಂದು ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತು ಹಾಗೂ ಅಂತಹ ನಿರ್ದೇಶನಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳ ವಿಧಾನ ಸಭೆಯೂ ಸರ್ವಸಮ್ಮತ ನಿರ್ಣಯ ಅಂಗೀಕರಿಸಿತು. ಅದರ ಮೇರೆಗೆ 1999ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಲಾಲ್್ಕೃಷ್ಣ ಆಡ್ವಾಣಿಯವರು ಮುಖರ್ಜಿ ಆಯೋಗವನ್ನು ರಚಿಸಿದರು. ಆದರೆ 2004, ಮೇನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಚುಕ್ಕಾಣಿ ಹಿಡಿದು ಐದು ತಿಂಗಳಾಗುವಷ್ಟರಲ್ಲೇ 2004, ಅಕ್ಟೋಬರ್್ನಲ್ಲಿ ತನಿಖಾ ಆಯೋಗವನ್ನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂತು. ಆ ಮೂಲಕ ಸತ್ಯವನ್ನರಸುತ್ತಾ ರಷ್ಯಾಕ್ಕೆ ತೆರಳಲು ಸಿದ್ಧರಾಗಿದ್ದ ಮುಖರ್ಜಿಯವರನ್ನು ತಡೆಯಲು ಯತ್ನಿಸಿತು. ಆದಾಗ್ಯೂ, ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾದ ಸರ್ಕಾರ ತನಿಖೆಯನ್ನು ಪೂರೈಸಲು ಅವಕಾಶ ನೀಡಬೇಕಾಗಿ ಬಂತು. ಆದರೆ ನೇತಾಜಿ ಸಾವಿನ ಬಗ್ಗೆ ಬೆಳಕು ಚೆಲ್ಲುವಂತಹ ಮಾಹಿತಿಯನ್ನು ಹೊಂದಿದ್ದ ಎರಡು ಪ್ರಮುಖ ದಾಖಲೆಗಳನ್ನೇ ಸರ್ಕಾರ ನೀಡಲಿಲ್ಲ! ಅದರಲ್ಲೂ ‘ನೇತಾಜಿ ಕಣ್ಮರೆ’ ಎಂಬ ಬಹುಮುಖ್ಯ ದಾಖಲೆ 1972ರಲ್ಲೇ ಆಕಸ್ಮಿಕವಾಗಿ ನಾಶಗೊಂಡಿದೆ ಎಂದ ಸರಕಾರ ತನಿಖೆಗೆ ಅಸಹಕಾರ ನೀಡಲಾರಂಭಿಸಿತು. ಇಷ್ಟಾಗಿಯೂ ರಷ್ಯಾ, ತೈವಾನ್ ಮತ್ತು ಥಾಯ್್ಲ್ಯಾಂಡ್್ಗಳಿಗೆ ತೆರಳಿ ಮಾಹಿತಿ ಕಲೆಹಾಕಿದ ನ್ಯಾಯಮೂರ್ತಿ ಮುಖರ್ಜಿ, “ಸೈಗಾನ್್ನಿಂದ (ವಿಯೆಟ್ನಾಂ) ವಿಮಾನದ ಮೂಲಕ ತೆರಳಿದ ನೇತಾಜಿ, 1945, ಆಗಸ್ಟ್ 17 ರಂದು ಅಮೆರಿಕ ನೇತೃತ್ವದ ಪಡೆಗಳ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಆಗಸ್ಟ್ 23 ರಂದು ಪ್ರಸಾರವಾದ ‘ವಿಮಾನ ಅಪಘಾತ-ನೇತಾಜಿ ಶವಸಂಸ್ಕಾರ- ಚಿತಾಭಸ್ಮ’ದ ಸುದ್ದಿ ವಿರೋಧಿಗಳನ್ನು ದಾರಿ ತಪ್ಪಿಸುವ ಸಲುವಾಗಿ ಜಪಾನಿ ಸೇನೆ, ಇಬ್ಬರು ಸೇನಾ ವೈದ್ಯರು ಹಾಗೂ ನೇತಾಜಿ ಸಹಯೋಗಿ ಹಬೀಬುರ್ ರೆಹಮಾನ್ ಒಟ್ಟುಗೂಡಿ ಹೆಣದ ಕಥೆಯೇ ಹೊರತು ಮತ್ತೇನೂ ಅಲ್ಲ. 1945ರಲ್ಲಿ ನೇತಾಜಿ ಸಾವನ್ನಪ್ಪಲು ಅಂತಹ ವಿಮಾನ ದುರಂತವೇ ಸಂಭವಿಸಿಲ್ಲ. ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ನೇತಾಜಿಯವರದಲ್ಲ ಎಂಬ ಅಘಾತಕಾರಿ ವಿಷಯವನ್ನು ಮೊಟ್ಟಮೊದಲ ಬಾರಿಗೆ ಬಹಿರಂಗಪಡಿಸಿದರು!
ಆದರೆ ನೇತಾಜಿ ಸಾವಿನ ಬಗ್ಗೆ ವಿಭಿನ್ನ ಬೆಳಕು ಚೆಲ್ಲುವ ಇಂತಹ ವರದಿಯನ್ನೇ ಒಪ್ಪುವುದಿಲ್ಲ ಎಂದ ಕಾಂಗ್ರೆಸ್ ಸರ್ಕಾರ ಕಾರಣವನ್ನೇಕೆ ನೀಡುತ್ತಿಲ್ಲ?
ಮೂರು ಭಾಗಗಳನ್ನು ಹೊಂದಿರುವ ಮುಖರ್ಜಿ ಆಯೋಗದ ವರದಿಯಲ್ಲಿ ಹುರುಳಿಲ್ಲ ಎನ್ನಲು “1945 ಆಗಸ್ಟ್ 14ರ ಸೆಪ್ಟೆಂಬರ್ 20ರ ವರೆಗೂ ಯಾವುದೇ ವಿಮಾನ ದುರ್ಘಟನೆ ಸಂಭವಿಸಿಲ್ಲ” ಎಂದು ತೈವಾನ್ ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ. ಒಂದು ವೇಳೆ, ದುರ್ಘಟನೆ ಸಂಭವಿಸಿ ನೇತಾಜಿ ಮತ್ತು ಸೇನಾ ಜನರಲ್ ಸ್ಥಾನಮಾನ ಹೊಂದಿದ್ದ ಉನ್ನತ ಜಪಾನಿ ಅಧಿಕಾರಿ ಶಿದೀ ಸಾವನ್ನಪ್ಪಿದ್ದರೆ ‘ಸೆಂಟ್ರಲ್ ಡೈಲಿ ನ್ಯೂಸ್್’ ವರದಿಯನ್ನೇಕೆ ಮಾಡಲಿಲ್ಲ? ಇನ್ನು ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ನೇತಾಜಿಯವರದ್ದೇ ಎಂದು ಕೇಂದ್ರ ಸರ್ಕಾರಕ್ಕೆ ಖಚಿತವಾಗಿ ತಿಳಿದಿದ್ದರೆ, ಡಿ.ಎನ್.ಎ. ಟೆಸ್ಟ್ ಮಾಡಿಸುವ ಮೂಲಕ ತನಗೆ ಮಾತ್ರ ತಿಳಿದಿರುವ ‘ಸತ್ಯ’ ವನ್ನು ಸಾಬೀತುಪಡಿಸಬಹುದಲ್ಲವೆ? ಕನಿಷ್ಠ ಪಕ್ಷ, ವರದಿಯನ್ನು ಸ್ವೀಕರಿಸಿ ಹೆಚ್ಚಿನ ತನಿಖೆಗೆ ಆದೇಶ ನೀಡಬಹುದಲ್ಲವೆ? ಇಂತಹ ಅವಕಾಶಗಳಿದ್ದರೂ ಸರ್ಕಾರ ಹಿಂಜರಿಯುತ್ತಿರುವುದೇಕೆ? ‘ನೇತಾಜಿ ಕಣ್ಮರೆ’ಯಂತಹ ಬಹುಮುಖ್ಯ ದಾಖಲೆ ನಾಶವಾಗಲು ಹೇಗೆ ತಾನೇ ಸಾಧ್ಯವಾಯಿತು? ಆದಾಗಲೇ ಸಾರ್ವಜನಿಕಗೊಳಿಸಲಾಗಿದ್ದ ನೇತಾಜಿ ಬದುಕಿಗೆ ಸಂಬಂಧಪಟ್ಟ ‘ಅನಿರ್ಬಂಧಿತ ಮಾಹಿತಿ’ಗಳನ್ನು (ಡಿ-ಕ್ಲಾಸಿಫೈಡ್) ಮುಖರ್ಜಿ ಆಯೋಗ ರಷ್ಯಾಕ್ಕೆ ತೆರಳಿದ ಸಂದರ್ಭದಲ್ಲೇ ಅಲ್ಲಿನ ಸರಕಾರ ಪುನಃ ‘ನಿರ್ಬಂಧಿತ ಮಾಹಿತಿ’ಯನ್ನಾಗಿ (ರಿ-ಕ್ಲಾಸಿಫೈಡ್) ಪರಿವರ್ತಿಸಿದ್ದೇಕೆ? ತನ್ನ ಪ್ರಮುಖ ಅಧಿಕಾರಿಯೊಬ್ಬರನ್ನು ರಷ್ಯಾ ಏಕಾಏಕಿ ಟರ್ಕಿಗೆ ವರ್ಗಾವಣೆ ಮಾಡಿದ್ದೇಕೆ? ಮುಖರ್ಜಿ ಆಯೋಗದ ಮುಂದೆ ಆತ ಸಾಕ್ಷ್ಯ, ನುಡಿದರೆ ಸತ್ಯ ಬೆಳಕಿಗೆ ಬರುತ್ತದೆ ಎಂಬ ಭಯದಿಂದಲೇ? ಏಳು ವರ್ಷಗಳಷ್ಟು ಸುದೀರ್ಘ ಕಾಲ ತನಿಖೆ ನಡೆಸಿ, ಅದರಲ್ಲಿ 5 ವರ್ಷಗಳನ್ನು ಭಾರತ ಹಾಗೂ ವಿದೇಶಿ ಸಂಗ್ರಹಾಲಯಗಳಲ್ಲಿರುವ ಮಾಹಿತಿಯನ್ನು ಪರಾಮರ್ಶಿಸುವುದರಲ್ಲೇ ಕಳೆದು ರೂಪಿಸಿದ ವರದಿಯನ್ನು ಕಾರಣ ನೀಡದೆ ಸಾರಾಸಗಟಾಗಿ ತಿರಸ್ಕರಿಸಿದ್ದೇಕೆ? ಆಯೋಗದ ವರದಿಯಲ್ಲಿ ಸತ್ಯಾಂಶಗಳೇ ಇಲ್ಲವೆ? ಇಲ್ಲ ಎಂದಾದರೆ ಸರ್ಕಾರಕ್ಕೆ ತಿಳಿದಿರುವ ಸತ್ಯವನ್ನಾದರೂ ಬಹಿರಂಗಪಡಿಸಲಿ? ಸರ್ಕಾರ ಯಾಕಾಗಿ ವರದಿಯನ್ನು ತಿರಸ್ಕರಿಸುತ್ತಿದೆ? ಈ ರೀತಿ ವರ್ತಿಸುವುದರಿಂದ ಜನರ ಮನಸ್ಸಿನಲ್ಲಿ ಅನುಮಾನಗಳು ಮತ್ತೂ ಗಟ್ಟಿಗೊಳ್ಳುವುದಿಲ್ಲವೆ? ‘ನೇತಾಜಿ ಮಡಿದರು’ ಎಂದು ನೆಹರು ಹೇಳಿದ ಸುಳ್ಳನ್ನು ಇನ್ನೆಷ್ಟು ವರ್ಷಗಳ ಕಾಲ ನಾವು ನಂಬಬೇಕು?
- ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ