ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಏಪ್ರಿಲ್ 16, 2012

ತಾಯಿ, ಪತ್ನಿ, ಸ್ನೇಹಿತೆಯಾಗಿ ಹೆಣ್ಣು ಬೇಕು, ಮಗಳಾಗಿ ಏಕೆ ಬೇಡ?


ಕಾರ್ಯೇಷು ಮಂತ್ರಿ
ಕರಣೇಷು ದಾಸಿ
ಭುಕ್ತೌತು ಮಾತಾ
ಶಯನೇಷು ವೇಶ್ಯಾ
ಧರ್ಮೇಷು ಧರ್ಮಿ
ಕ್ಷಮಯಾ ಧರಿತ್ರಿ
ಷಟ್ಕರ್ಮ ಯುಕ್ತ
ಕುಲಂ ಉದ್ಧರಿತ್ರಿ!
ನಾವು ಹೆಣ್ಣನ್ನು ಕಾಣುವ ರೀತಿ ಹಾಗು ಹೆಣ್ಣು ನಮ್ಮ ಬದುಕು ಮತ್ತು ಸಮಾಜದಲ್ಲಿ ಎಂತಹ ಪಾತ್ರ ವಹಿಸುತ್ತಾಳೆ ಎಂಬುದನ್ನು ವೇದಗಳೇ ಸಾರಿವೆ. ಓಶೋ ರಜನೀಶರು ತಮ್ಮ “Rising in Love’ ಪುಸ್ತಕದಲ್ಲಿ ಒಂದು ಅದ್ಭುತ ನೀತಿಕಥೆಯನ್ನು ಹೇಳುತ್ತಾರೆ. ಅವನೊಬ್ಬನಿರುತ್ತಾನೆ. ಅವನಿಗೆ ಒಬ್ಬಾಕೆಯ ಮೇಲೆ ಪ್ರೇಮಾಂಕುರವಾಗಿರುತ್ತದೆ. ಒಂದು ದಿನ ಆಕೆಯ ಬಳಿ ಹೋಗಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅದಕ್ಕೆ  ಆಕೆ ಹೇಳುತ್ತಾಳೆ- ‘ನಾನು ನಿನ್ನನ್ನು ವರಿಸಲು ಸಿದ್ಧ, ಆದರೆ ನನ್ನದೊಂದು ಷರತ್ತಿದೆ!’ ಪ್ರೀತಿಯಲ್ಲಿ ಯಾವತ್ತೂ ಷರತ್ತುಗಳಿರುವುದಿಲ್ಲ ಎಂಬ ಸರಳ ಸತ್ಯವೂ ಈ ಮನುಷ್ಯನಿಗೆ ಅರ್ಥವಾಗದಷ್ಟು ಪ್ರೀತಿಯ ಹುಚ್ಚು ಹಿಡಿದಿರುತ್ತದೆ. ಪ್ರೀತಿಯ ಉನ್ಮಾದ ಎಷ್ಟಿರುತ್ತದೆಂದರೆ ಆತ ಏನನ್ನೂ ಮಾಡಲು ಸಿದ್ಧನಾಗಿರುತ್ತಾನೆ. ನನ್ನ ಷರತ್ತು ಬಹಳ ಕಷ್ಟಕರವಾದುದು ಎಂದು ಆಕೆ ಹೇಳಿದರೂ, ‘ನಿನ್ನನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇನೆ’ ಎನ್ನುತ್ತಾನೆ. ‘ಹಾಗಾದರೆ ನಿನ್ನ ತಾಯಿಯ ಹೃದಯವನ್ನು ತಟ್ಟೆಯ ಮೇಲಿಟ್ಟು ತಂದುಕೊಡು. ಆಗ ಮಾತ್ರ ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೀಯಾ ಎಂದು ನಂಬುತ್ತೇನೆ’ ಎನ್ನುತ್ತಾಳೆ!
ಆತ ಪ್ರೀತಿಯಲ್ಲಿ ಹುಚ್ಚನಾಗಿರುತ್ತಾನೆ.
ಅವಳ ಮಾತಿಗೆ ಮಣಿದು ಮನೆಗೆ ಹೋಗುತ್ತಾನೆ. ತಾಯಿಯನ್ನು ಕೊಂದು, ಹೃದಯವನ್ನು ಕಿತ್ತು ಪ್ಲೇಟಿನ ಮೇಲಿಟ್ಟುಕೊಂಡು ಆಕೆ ಬಳಿಗೆ ಧಾವಿಸುತ್ತಾನೆ. ಆ ಧಾವಂತದಲ್ಲಿ ಕಾಲು ಎಡವುತ್ತದೆ, ಪ್ಲೇಟು ಕೆಳಕ್ಕೆ ಬೀಳುತ್ತದೆ, ತಾಯಿಯ ಹೃದಯ ಚೂರು ಚೂರಾಗಿ ರಸ್ತೆಯ ಮೇಲೆ ಬೀಳುತ್ತದೆ. ಅಷ್ಟರಲ್ಲಿ ಮೆಲುದನಿಯೊಂದು ಕೇಳುತ್ತದೆ…
‘ಅಯ್ಯೋ ಮಗನೇ… ಬಿದ್ದುಬಿಟ್ಟೆಯಾ… ನೋವಾಯಿತೇ?’
‘ಮತ್ತೆ ಮನೆಗೆ ಹೋಗಿ ಹೊಸ ಪ್ಲೇಟು ತಂದು ಹೃದಯವನ್ನು ಜೋಡಿಸಿ ನಿನ್ನ ಪ್ರಿಯತಮೆಯ ಬಳಿಗೆ ಹೋಗು…’ ಎನ್ನುತ್ತದೆ. ಅದು ಕೆಲ ಕ್ಷಣಗಳ ಹಿಂದೆ ಯಾವ ತಾಯಿಯನ್ನು ಕೊಂದಿರುತ್ತಾನೋ ಅದೇ ತಾಯಿಯ ಕೂಗಾಗಿರುತ್ತದೆ. ತನ್ನನ್ನೇ ಕೊಂದರೂ ಕರುಳ ಕುಡಿಯ ಒಳಿತಿಗಾಗಿ ಮಿಡಿಯುವ ಮನ ಅಮ್ಮನದ್ದು.
ಹಾಗಿರುವಾಗ….
ಹೆತ್ತ ಕುಡಿಯನ್ನು ಗಂಡನೇ ಕತ್ತು ಹಿಸುಕಿ ಸಾಯಿಸಿದರೆ ಆ ತಾಯಿಯ ಮನಸ್ಸು ಎಷ್ಟು ನೋವನುಭವಿಸಿರಬಹುದು? ಅಪ್ಪನ ಕ್ರೌರ್ಯಕ್ಕೆ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ತಿಂಗಳ ಹಸುಳೆ ನೇಹಾ ಅಫ್ರೀನ್ ಬಾನು ಬುಧವಾರ ಬೆಳಗ್ಗೆ 10.15 ಗಂಟೆಗೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಮಡಿದಾಗ ಅಮ್ಮ ರೇಶ್ಮಾ ಬಾನು ರೋಧಿಸುತ್ತಿದ್ದರೆ ಟೀವಿ ವೀಕ್ಷಿಸುತ್ತಿದ್ದವರೂ ದುಃಖದ ಮಡುವಿಗೆ ಬಿದ್ದಂತಾಗಿತ್ತು, ಆಕೆಯ ಪಾಪಿ ಗಂಡ ಉಮರ್ ಫಾರೂಕ್್ನನ್ನು ಹೊಸಕಿ ಹಾಕಿಬಿಡಬೇಕೆನ್ನುವಷ್ಟು ಕೋಪ ನೆತ್ತಿಯನ್ನು ಆವರಿಸಿತ್ತು. ಮಲತಂದೆಯ ಕ್ರೌರ್ಯಕ್ಕೆ ತುತ್ತಾಗಿ 56 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಮರಣವನ್ನಪ್ಪಿದ ದಿಲ್ಲಿಯ 2 ವರ್ಷದ ಬಾಲೆ ಫಾಲಕ್್ಳ ಕರುಣಾಜನಕ ಕಥೆಯನ್ನು ಮರೆಯುವ ಮೊದಲೇ ಈ ಘಟನೆ ನಡೆದಿದೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ರೇಶ್ಮಾ ಬಾನು ಬಿಕ್ಕಳಿಸಿ ಅಳುತ್ತಿದ್ದರೆ ಮನಸು ಕಲ್ಲವಿಲಗೊಳ್ಳುತ್ತಿತ್ತು. ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದ ವೈದ್ಯರ ಮುಂದೆ ನಿಂತು ‘ನನ್ನ ಮಗುವನ್ನು ಕೊಡಿ, ತೋಳಿಂದ ಬಿಗಿದಪ್ಪಿಕೊಳ್ಳಬೇಕು’ ಎನ್ನುತ್ತಿದ್ದ ಆ ಹೃದಯವಿದ್ರಾವಕ ಚಿತ್ರಣ ಕಣ್ಣಿನಿಂದ ಮರೆಯಾಗುತ್ತಿಲ್ಲ.
ಅಲ್ಲಾ, ಹೆಣ್ಣಾಗಿ ಹುಟ್ಟುವುದೇ ತಪ್ಪಾ?
ತಾಯಿಯಾಗಿ ಹೆಣ್ಣು ಬೇಕು, ನಾವು ಬೆಳೆಯುತ್ತಿರುವಾಗ ಸದೋದರಿಯಾಗಿ ಬೇಕು, ಕಾಲೇಜು ಮೆಟ್ಟಿಲೇರಿದಾಗ ಸ್ನೇಹಿತೆಯಾಗಿಯೂ ಬೇಕು, ಸರಸ-ಸಲ್ಲ್ಲಾಪಕ್ಕೂ ಬೇಕು, ಮದುವೆಗಂತೂ ಹೆಣ್ಣು ಬೇಕೇ ಬೇಕು. ಆದರೆ ಈ ನಮ್ಮ ಗಂಡಸು ಜನ್ಮಕ್ಕೆ, ಆಕೆ ಮಗಳಾಗಿ ಏಕೆ ಬೇಡ?
ಹೆಣ್ಣಲ್ಲವೆ ನಮ್ಮನ್ನೆಲ್ಲ ಹಡೆದ ತಾಯಿ
ಹೆಣ್ಣಲ್ಲವೆ ನಮ್ಮನ್ನೆಲ್ಲ ಪೊರೆದವಳು
ಹೆಣ್ಣು ಹೆಣ್ಣೆಂದೇತಕೆ ಬೀಳುಗರೆಯುವಿರಿ
ಕಣ್ಣುಕಾಣದ ಗಾವಿಲರೇ
ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಬಂದ ಕುಂದೇನು?
ಈ ಜಾನಪದ ಗೀತೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದರೂ, ಜನಮನದಲ್ಲಿ ಹಾಸುಹೊಕ್ಕಾಗಿದ್ದರೂ ನಾವೇಕೆ ಗಂಡೇ ಬೇಕೆಂಬ ಧೋರಣೆ ಇಟ್ಟುಕೊಂಡಿದ್ದೇವೆ? ನಮ್ಮ ಸಮಾಜ ಸುಶಿಕ್ಷಿತಗೊಳ್ಳುತ್ತಾ ಹೋದಂತೆ ಎಷ್ಟೋ ಅನಿಷ್ಟ ಪದ್ಧತಿಗಳನ್ನು ಬಿಟ್ಟಿದೆ, ಆದರೆ ಗಂಡೇ ಬೇಕೆಂಬ ಅನಿಷ್ಟ ಮನಸ್ಥಿತಿಯನ್ನೇಕೆ ಹೊರಹಾಕಿಲ್ಲ? ಹೆಣ್ಣು ಮಗುವಿನ ಮೇಲೆ ಏಕಿಂಥ ತಾತ್ಸಾರ? ಗಂಡು ಮಗು ಜನಿಸಿದರೆ ಮಾತ್ರ ವೃದ್ಧಾಪ್ಯದಲ್ಲಿ ನಮ್ಮ ಜವಾಬ್ದಾರಿ ಹೊರುತ್ತಾನೆ ಎಂಬ ಕ್ಷುಲ್ಲಕ, ವಿವೇಕರಹಿತ ಮನಸ್ಥಿತಿಯನ್ನು ನಾವೇಕೆ ಇನ್ನೂ ಬಿಟ್ಟಿಲ್ಲ? ಇವತ್ತು ಹೆಣ್ಣು ಯಾವುದರಲ್ಲಿ ಕಡಿಮೆ ಇದ್ದಾಳೆ? ಗಂಡು ಮಗ ಜನಿಸಿದರೆ ಮಾತ್ರ ಜವಾಬ್ದಾರಿ ಹೊರುತ್ತಾನೆ ಎಂಬುದು ಎಷ್ಟು ಸರಿ? ದತ್ತು ತೆಗೆದುಕೊಳ್ಳುವವರು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಏಕೆ ಅಡಾಪ್ಟ್ ಮಾಡಿಕೊಳ್ಳುತ್ತಾರೆ ಅಂದುಕೊಂಡಿರಿ?
ಹೆಣ್ಣು ಹೆತ್ತರೆ ಜವಾಬ್ದಾರಿ ಜಾಸ್ತಿ ಎಂದು ಮೇಲ್ನೋಟಕ್ಕೆ ಕಂಡರೂ ಸೂಕ್ಷ್ಮವಾಗಿ ನೋಡಿದಾಗ, ಆಳವಾಗಿ ಗಮನಿಸಿದಾಗ ಹೆಚ್ಚಾಗಿ ಜವಾಬ್ದಾರಿ ಹೊರುವವಳೇ ಹೆಣ್ಣು. ಅಂತಃಕರಣವೆಂಬುದು ಬಹುವಾಗಿ ಇರುವುದೇ ಹೆಣ್ಣಿನಲ್ಲಿ. ಇವತ್ತು ಎಷ್ಟು ಹೆಣ್ಣು ಮಕ್ಕಳು ತಂದೆ-ತಾಯಿಯ ಜವಾಬ್ದಾರಿ ಹೊತ್ತಿಲ್ಲ ಹೇಳಿ? ಆಕೆ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ನಿರ್ವಹಿಸುವ ಪಾತ್ರದ ಬಗ್ಗೆ ನಮ್ಮ ಸಮಾಜ ಎಂದಾದರೂ ಯೋಚಿಸಿದೆಯೇ? ‘ಮಕ್ಕಳೆಂದರೆ ನಾವು ಸುಖಪಡುವುದಕ್ಕಾಗಿ ನೆಟ್ಟ ಸಸಿಗಳಲ್ಲ, ನಮ್ಮ ಸುಖದ ಫಲಗಳು’ ಎಂದಿದ್ದರು ಬೀಚಿ. ಇದು ಗಂಡಸರಾದ ನಮ್ಮೆಲ್ಲರ ನಿಜವಾದ ಮನಸ್ಥಿತಿ. ಆದರೆ ದಾಂಪತ್ಯದಲ್ಲಿ ಸುಖಕ್ಕಿಂತ ಸಂಕಷ್ಟ ಎದುರಿಸುವವಳು, ನಮ್ಮ ಸುಖದ ಫಲಗಳಾದ ಮಗುವಿನ ಜವಾಬ್ದಾರಿ ಹೊರುವವಳು ಹೆಣ್ಣು. ಮಲಗಿ ಏಳುವುದಕ್ಕೆ ಗಂಡಸಿನ ಜವಾಬ್ದಾರಿ ಮುಗಿದರೆ, ಹೆರುವುದರಿಂದ, ಸಾಕಿ ಸಲಹುವುದು, ಆ ಮಗುವನ್ನು ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯಾಗಿ ರೂಪಿಸುವವರೆಗೂ ಹೆಣ್ಣೇ ಕಾರಣ. ‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’ ಎನ್ನುತ್ತದೆ ನಮ್ಮ ಸರ್ಕಾರಿ ಸ್ಲೋಗನ್. ಪತ್ನಿಯಾಗಿಯೂ ಅವಳ ಪಾತ್ರ ಬಹುದೊಡ್ಡದು. ಯಾವುದೇ ಗಂಡಸು ಯಾವುದೇ ರಂಗದಲ್ಲಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ, ಸಾಧಕನಾಗಿ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದೂ ಪತ್ನಿಯೆಂಬ ಹೆಣ್ಣೇ. ಎಳೆಪ್ರಾಯದಲ್ಲೇ ಸಾಧನೆ ಮಾಡಿದರೂ ಅಮ್ಮ ಎಂಬ ಹೆಣ್ಣಿನ ಪಾತ್ರ ದೊಡ್ಡದಿರುತ್ತದೆ.
ಆಕೆಯಿಂದ ಇಷ್ಟೆಲ್ಲಾ ಬಯಸುವಾಗ ನಾವೇಕೆ ಹೆಣ್ಣು ಬೇಡವೆನ್ನುತ್ತೇವೆ?
ಏನಾದರೂ ಅಭದ್ರತೆ ಕಾಡುತ್ತದೆಯೇ? ಅದನ್ನೂ ಸೂಕ್ಷ್ಮವಾಗಿ ಯೋಚನೆ ಮಾಡಿದರೆ, ವೃದ್ಧಾಪ್ಯ ಬಂದಾಗಲೂ ನಮ್ಮನ್ನು ಮಗಳು ಅಥವಾ ತಾಯಿ ಸ್ಥಾನದಲ್ಲಿ ನಿಂತು ನೋಡುವವಳು ಸೊಸೆಯೆಂಬ ಹೆಣ್ಣೇ ಆಗಿರುತ್ತಾಳೆ. ಆದರೂ ಹೆಣ್ಣೆಂದರೆ ಅಸಡ್ಡೆಯೇಕೆ? ಹಳೆ ಕಾಲ ಬಿಡಿ, ಸಮಾಜ ಮುಂದುವರಿದಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಗಂಡಿಗೆ ಹೆಗಲು ಕೊಟ್ಟು ದುಡಿಯುವ ಮಟ್ಟಕ್ಕೆ ಬೆಳೆದಿದ್ದಾಳೆ. ಎಷ್ಟೋ ಹೆಣ್ಣು ಮಕ್ಕಳು ಮದುವೆಗೆ ಮುನ್ನ, ‘ನನ್ನ ತಂದೆ-ತಾಯಿಯನ್ನೂ ನಾನೇ ನೋಡಿಕೊಳ್ಳಬೇಕು. ಆದಕ್ಕೆ ನಿನ್ನ ಒಪ್ಪಿಗೆ ಇದ್ದರಷ್ಟೇ ಮುಂದಿನ ಮಾತು…’ ಎಂದು ಷರತ್ತು ಹಾಕುವ ಘಟನೆಗಳನ್ನು ಇಂದು ಕಾಣುತ್ತಿದ್ದೇವೆ. ಮಗನಿಗಿಂತ ಮಗಳೇ ಇಂದು ಅಪ್ಪ-ಅಮ್ಮನ ಬಗ್ಗೆ ಕಾಳಜಿ ತೋರುತ್ತಾಳೆ. ಆದರೂ ಹೆಣ್ಣೇಕೆ ಬೇಡವೆನ್ನುತ್ತೇವೆ? ಹೆಣ್ಣು ಬೇಡವೆಂದರೆ ತಾಯ್ತನವನ್ನೇ ಕೊಂದಂತಲ್ಲವೆ? ಹೆಣ್ಣು ಹುಟ್ಟುವ ಮೊದಲೇ ಭ್ರೂಣದಲ್ಲಿ ಚಿವುಟಿದರೆ ಒಳ್ಳೆಯ ಸಮಾಜ ಕಟ್ಟುವುದಕ್ಕಾದರೂ ಹೇಗೆ ಸಾಧ್ಯ?
ಶೀಘ್ರಮೇವ ಪುತ್ರ ಪ್ರಾಪ್ತಿರಸ್ತು!!
ಸಾಮಾನ್ಯವಾಗಿ ನವದಂಪತಿಗಳಿಗೆ ಆಶೀರ್ವದಿಸುವಾಗ ಹೀಗೆನ್ನುತ್ತಾರೆ. ನಮ್ಮ ಮನಸ್ಥಿತಿಯನ್ನು ಆಳುತ್ತಿರುವುದೂ ಕುಲೋದ್ಧಾರಕ ಗಂಡೆಂಬ ಇಂತಹ ಧೋರಣೆಯೇ. ಎಲ್ಲರೂ ಗಂಡು ಮಗುವೇ ಬೇಕೆಂದು ಹೊರಟರೆ ಆತ ಬೆಳೆದು ನಿಂತಾಗ ಆತನಿಗೊಂದು ಹೆಣ್ಣನ್ನು ಎಲ್ಲಿಂದ ತರುವುದು? ತನ್ನ ಮಗ ಮತ್ತೊಬ್ಬ ಹುಡುಗನ ಜತೆ ಸಂಸಾರ ಮಾಡಲು ಹೆಣ್ಣನ್ನು ಕೊಲ್ಲುವ ಕ್ರೂರಿ ಅಪ್ಪನ ಮನಸ್ಸು ಒಪ್ಪುತ್ತದೆಯೇ? ಎಲ್ಲ ಅತ್ತೆ-ಮಾವಂದಿರಿಗೂ ಮೊಮ್ಮಕ್ಕಳನ್ನು ನೋಡುವ ಆಸೆ ಇರುತ್ತದೆ. ಈ ಮೊಮ್ಮಕ್ಕಳೇನು ಮಗನ ಹೊಟ್ಟೆಯಲ್ಲಿ ಹುಟ್ಟುತ್ತವೆಯೇ? ಆಗ ಮಗನಿಗೊಂದು ಹೆಣ್ಣು ಬೇಕಲ್ಲವೆ? ವಂಶ ಬೆಳೆಸಲು ಒಬ್ಬ ಪುತ್ರ ಬೇಕು ಎಂದು ಪ್ರತಿ ಅಜ್ಜ-ಅಜ್ಜಿಯೂ ಬಯಸುತ್ತಾರೆ. ಹಾಗೆ ವಂಶ ಬೆಳೆಸಲು, ದೀಪ ಹಚ್ಚಲು ಮತ್ತೊಬ್ಬರ ಮನೆಯ ಹೆಣ್ಣೇ ಬೇಕಲ್ಲವೆ? ನಮ್ಮ ಮನೆ ವಂಶ ಬೆಳೆಸಲು ಮೊಮ್ಮಗ ಬೇಕು. ಆದರೆ ನಮ್ಮ ಮಗಳು ಇನ್ನೊಬ್ಬರ ಮನೆ ವಂಶವನ್ನೇಕೆ ಬೆಳೆಸಬಾರದು? ಒಂದು ಸಮಾಜ ಮುಂದುವರಿಯಬೇಕಾದರೆ ಒಂದು ಗಂಡಿಗೆ ಹೆಣ್ಣು ಬೇಕೆಂಬ ಅನುಪಾತವೇ ನಮ್ಮ ಮನಸ್ಥಿತಿಯಿಂದಾಗಿ ಏರುಪೇರಾಗಿದೆ.
ಒಳ್ಳೆಯ ಅಪ್ಪನಾಗಲು ಒಪ್ಪದವನು ಒಳ್ಳೆಯ ಪತಿಯಾಗಲು ಹೇಗೆ ಸಾಧ್ಯ?
ಇಂತಹ ಪರಿಸ್ಥಿತಿಯಿಂದಾಗಿಯೇ ಬಹಳಷ್ಟು ಮಹಿಳೆಯರು ತಾವು ಬಸುರಿಯಾದಾಗ ಗಂಡುಮಗುವೇ ಜನಿಸಲಿ ಎಂದು ಬಯಸುತ್ತಾರೆ. ಅದು ಗಂಡು ಮಗುವಿನ ಮೇಲಿನ ಮೋಹದಿಂದಲ್ಲ. ತಾನು ಅನುಭವಿಸಿದ ಕಷ್ಟ, ಕಾರ್ಪಣ್ಯವನ್ನು ಹೆಣ್ಣಾದರೆ ತನ್ನ ಮಗಳೂ ಅನುಭವಿಸಬೇಕಾಗುತ್ತದೆಂಬ ಭಯ ಆಕೆಯನ್ನು ಕಾಡುತ್ತಿರುತ್ತದೆ.
ಒಬ್ಬ ಕೋಪಿಷ್ಟನೆನಿಸಿಕೊಂಡವನು ಕನಿಕರ ತೋರಿದರೆ, ಅವನು ಒರಟನಿರಬಹುದು, ಆದರೆ ಆತನದ್ದು “ಹೆಂಗರುಳು” ಎನ್ನುತ್ತಾರೆ. ದೇವರು ತಾನು ಎಲ್ಲಾ ಕಡೆ ಇರುವುದಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿಸಿದ ಎಂಬ ಮಾತಿದೆ. ಸುಖಕ್ಕೆ ಮಾತ್ರವಲ್ಲ, ನಾವು ಸಾಂತ್ವನ ಬಯಸಿ ಹೋಗುವುದು ತಾಯಿ, ಹೆಂಡತಿ, ಸ್ನೇಹಿತೆ ರೂಪದಲ್ಲಿರುವ ಒಂದು ಹೆಣ್ಣಿನ ಬಳಿಗೇ ಹೊರತು ಮತ್ತೊಬ್ಬ ಪುರುಷನ ಸನಿಹಕ್ಕಲ್ಲ. ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನೂ ಒಮ್ಮೆ ನೋಡಿ… ಹೆಣ್ಣಿಗೆ ಎಂತಹ ಸ್ಥಾನ ಕೊಟ್ಟಿದ್ದೇವೆ? ಪ್ರಕೃತಿ ಹೆಣ್ಣು, ಭೂಮಿ ಹೆಣ್ಣು, ನದಿ ಹೆಣ್ಣು, ವಿದ್ಯೆಗೆ ಸರಸ್ವತಿ, ದುಡ್ಡಿಗೆ ಲಕ್ಷ್ಮಿ, ಕೆಚ್ಚಿಗೆ ದುರ್ಗೆ. ಎಲ್ಲರೂ ಹೆಣ್ಣೇ. ‘ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ’ ಎನ್ನುತ್ತದೆ ಈ ಭರತ ಖಂಡ. ಇಂತಹ ನಾಡಿನಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ, ನೇಹಾ ಆಫ್ರೀನ್ ಬಾನು, ಫಾಲಕ್್ಳಂಥ ಹಸುಳೆಗಳ ಹತ್ಯೆ ನಡೆಯುತ್ತದೆಂದರೆ ಇದಕ್ಕಿಂತ ವಿಪರ್ಯಾಸ ಏನಿದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ