ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಮೇ 7, 2012

ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ ಎಂದವ ರಾಷ್ಟ್ರಪ್ರೇಮಿಯಾದಾನೇ?


ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ?
ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು ಸಮರ್ಥಿಸಿ ಬರೆದರು. ಈ ರೀತಿಯ ವಾದ-ಪ್ರತಿವಾದ ಕಳೆದೆರಡು ತಿಂಗಳಿನಿಂದ ನಡೆಯುತ್ತಲೇ ಬರುತ್ತಿದೆ.

ಇಷ್ಟಕ್ಕೂ ವಾಸ್ತವವೇನು?
ಸರ್ ಮೊಹಮದ್ ಇಕ್ಬಾಲ್ ನಿಜಕ್ಕೂ ಒಬ್ಬ ರಾಷ್ಟ್ರಪ್ರೇಮಿಯಾಗಿದ್ದರೇ? ಸಾರೆ ಜಹಾಂಸೆ ಅಚ್ಛಾ ಬರೆದ ಮಾತ್ರಕ್ಕೆ ಅವರನ್ನು ಒಬ್ಬ ದೇಶಪ್ರೇಮಿ ಎಂದು ನಂಬಿಬಿಡಬೇಕಾ? ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಇಕ್ಬಾಲ್ ನಡೆದುಕೊಂಡ ರೀತಿಯಾದರೂ ಹೇಗಿತ್ತು? ಭಾರತದ ವಿಭಜನೆಗೆ ಜಿನ್ನಾ, ಗಾಂಧಿ, ನೆಹರು ಅವರಷ್ಟೇ ಇಕ್ಬಾಲ್ ಕೂಡ ಕಾರಣರೇ?
ಹೌದು!
ಒಂದು ಕೈ ಮೇಲಾಗಿ ಹೇಳುವುದಾದರೆ ಆತನೇ ಕಾರಣಕರ್ತೃ! ಅಲಿಘಡ ಚಳವಳಿಯ ಮೂಲಕ ಆರಂಭವಾದ ಪ್ರತ್ಯೇಕತೆಯ ಮನೋಭಾವವನ್ನು ಇಕ್ಬಾಲ್ ಹೇಗೆ ಮುಂದುವರಿಸಿದರು ಎನ್ನುವುದನ್ನು Studies in Islamic Culture in the Indian Environment’ ಪುಸ್ತಕದಲ್ಲಿ ವಿವರಿಸಲಾಗಿದೆ-”ಸರ್ ಸಯ್ಯದ್ ಅಹಮದ್ ಖಾನ್ ಮತ್ತು ಮೊಹಮದ್ ಇಕ್ಬಾಲ್್ರ ಪ್ರತ್ಯಕ್ಷ ಮತ್ತು ಪರೋಕ್ಷ ಪಾತ್ರದಿಂದ ಮುಸಲ್ಮಾನರಲ್ಲಿ ಕೋಮುವಾರು ಪ್ರಜ್ಞೆ ಬೆಳೆಯಿತು. ಸರ್ ಸಯ್ಯದ್ ಅಹಮದ್ ಖಾನ್ ಭವಿಷ್ಯದ ಉನ್ನತಿಗೋಸ್ಕರ ಆಧುನಿಕ ಶಿಕ್ಷಣ ಪಡೆಯಿರಿ ಎಂದು ಮುಸಲ್ಮಾನರಲ್ಲಿರುವ ಉನ್ನತ ವರ್ಗದವರಿಗೆ ಆಗ್ರಹ ಮಾಡಿದರು. ಅವರು ಸ್ಥಾಪಿಸಿದ ಅಲಿಘಡ ಕಾಲೇಜು, ಪ್ರತ್ಯೇಕ ಹಾಗೂ ಸ್ವತಂತ್ರ ಸ್ಥಾನ ಹೊಂದಬೇಕೆಂಬ ಪ್ರಜ್ಞೆಯನ್ನು ಮುಸ್ಲಿಮರಲ್ಲಿ ಮೂಡಿಸಿತು. 1930ರಲ್ಲಿ ನಡೆದ ಅಲಹಾಬಾದಿನ ಮುಸ್ಲಿಂ ಲೀಗ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೊಹಮ್ಮದ್ ಇಕ್ಬಾಲ್, ಮುಸಲ್ಮಾನರು ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಒತ್ತಿಹೇಳಿದ್ದರಿಂದಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭಿನ್ನತೆಗಳು ಹೆಚ್ಚಿದವು. ನಂತರ ಮುಸ್ಲಿಂ ಲೀಗ್್ನ ನೇತಾರರಾದ ಮಹಮ್ಮದ್ ಅಲಿ ಜಿನ್ನಾ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರಸಾರ ಮಾಡತೊಡಗಿದರು ಮತ್ತು ಹಿಂದೂ, ಮುಸ್ಲಿಮರು ಎರಡು ಭಿನ್ನ ರಾಷ್ಟ್ರಗಳಾಗಿದ್ದು ಒಂದಾಗಿ ಬಾಳಲಾರರು ಎಂದು ತೀರ್ಮಾನಿಸಿದರು. ಅವರ ಹಲವು ಬೇಡಿಕೆಗಳನ್ನು 1930ರ ನಂತರ ಕಾಂಗ್ರೆಸ್ ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನವನ್ನು ಎದುರಿಸಿದ ಜಿನ್ನಾ ಅವರ ರಾಜಕಾರಣದಲ್ಲಿ ಈ ನಿಲುವು ಮಹತ್ವ ಪಡೆಯಿತು.”
ಇಕ್ಬಾಲರ ಜೀವನ ಕಾನೂನು-ರಾಜಕೀಯದ ನಡುವೆ ಹಂಚಿಹೋಗಿತ್ತು. ಅಂತಾರಾಷ್ಟ್ರೀಯ ರಾಜಕಾರಣವನ್ನು ಮುಸ್ಲಿಮರ ಹಿತದೃಷ್ಟಿಯಿಂದ ನೋಡುವ ದೃಷ್ಟಿಕೋನ ಇಕ್ಬಾಲ್್ಗಿತ್ತು. ಉದಾಹರಣೆಗೆ, ಮೊದಲ ವಿಶ್ವಯುದ್ಧದಲ್ಲಿ ಭಾರತ ಭಾಗವಹಿಸಬೇಕು ಎಂದು ಸಮರ್ಥಿಸಿದವರು ಅವರು. ಖಿಲಾಫತ್ ಚಳವಳಿಯೊಂದಿಗೆ ನಿಕಟ ಸಂಪರ್ಕವಿದ್ದ ಆತ ಆ ಚಳವಳಿಯ ಮುಂದಾಳಾದ ಮೌಲಾನಾ ಮಹಮದ್ ಅಲಿಗೆ ಹತ್ತಿರವಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್್ನ ಬದ್ಧವೈರಿಯಾಗಿದ್ದ ಈ ಕವಿ, ಕಾಂಗ್ರೆಸ್ಸನ್ನು ಎಂದೂ ಒಂದು ರಾಷ್ಟ್ರೀಯ ಪಕ್ಷವಾಗಿ ನೋಡಲೇ ಇಲ್ಲ. ಅವರ ಪಾಲಿಗೆ ಕಾಂಗ್ರೆಸ್ ಎಂದರೆ ಬಹುಸಂಖ್ಯಾತ ಹಿಂದೂಗಳ ಪಕ್ಷ.
ಇನ್ನೊಂದೆಡೆ 1920ರ ಸುಮಾರಿಗೆ ಮುಸ್ಲಿಂ ಲೀಗ್ ಕೂಡ ಆಂತರಿಕ ರಾಜಕೀಯದಿಂದ ಬಳಲತೊಡಗಿತ್ತು. ಲೀಗ್್ನೊಳಗೇ ಎರಡು ಬಣಗಳಿದ್ದವು. ಬ್ರಿಟಿಷ್ ಬೆಂಬಲಿಗ ಮಹಮ್ಮದ್ ಶಫಿ ಬಣ ಮತ್ತು ತಟಸ್ಥ ನಿಲುವಿನ ಜಿನ್ನಾ ಗುಂಪಿನ ನಡುವಿನ ಶೀತಲಸಮರ ಕಂಡು ಇಕ್ಬಾಲ್ ಕಂಗೆಟ್ಟಿದ್ದರು. ಕೇವಲ ಓದು, ಬರಹ, ಭಾಷಣದ ಮೂಲಕ ಮುಸ್ಲಿಂ ಅಸ್ತಿತ್ವವನ್ನು ಸಮರ್ಥಿಸುತ್ತಿದ್ದ ಇಕ್ಬಾಲ್, ನೇರವಾಗಿ ಚುನಾವಣೆಯಲ್ಲೂ ಸ್ಪರ್ಧಿಸಿದರು. ಪಂಜಾಬ್ ಲೆಜಿಸ್ಲೇಟಿವ್ ಅಸೆಂಬ್ಲಿ ಚುನಾವಣೆಗೆ 1926ರಲ್ಲಿ ಲಾಹೋರ್್ನಿಂದ ನಿಂತರು. ಅಲ್ಲದೆ 3,177 ವೋಟುಗಳ ಅಂತರದಲ್ಲಿ ವಿಜಯ ಸಾಧಿಸಿಬಿಟ್ಟರು. ಮುಸ್ಲಿಂ ಲೀಗನ್ನು ಒಗ್ಗೂಡಿಸುವುದು ಅವರ ಮುಂದಿನ ಹೊಣೆಯಾಯಿತು. ಮುಸ್ಲಿಂ ಲೀಗ್್ನ ಅಧ್ಯಕ್ಷರಾಗಿ ಇಕ್ಬಾಲ್ ಮಾಡಿದ ಭಾಷಣ ಪಾಕಿಸ್ತಾನ ನಿರ್ಮಾಣದ ಬೀಜ. ಅಲಹಾಬಾದ್್ನಲ್ಲಿ ಡಿಸೆಂಬರ್ 29, 1930ರಂದು ಅವರು ಮಾಡಿದ ಭಾಷಣ ಅತ್ಯಂತ ಮಹತ್ವದ್ದು-Nations are born in the hearts of poets, they prosper and die in the hands of politicians! ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ, ಅವು ರಾಜಕಾರಣಿಗಳ ಕೈಯಲ್ಲಿ ಬೆಳೆದು, ಸಾವನ್ನಪ್ಪುತ್ತವೆ ಎಂದರು ಇಕ್ಬಾಲ್! ಸ್ವತಂತ್ರ ಸಾರ್ವಭೌಮ ಮುಸ್ಲಿಂ ರಾಜ್ಯದ ಬೇಡಿಕೆಯನ್ನು ಜಿನ್ನಾರಿಗಿಂತ ಮೊದಲು ಎತ್ತಿದ್ದೇ ಇಕ್ಬಾಲ್. ಮುಸ್ಲಿಮರ ರಾಜಕಾರಣದ ದೃಷ್ಟಿಯಿಂದ ಖಿಲಾಫತ್ ನಂತರದ ಅತಿಮುಖ್ಯ ಘಟ್ಟ ಮುಸ್ಲಿಂ ಲೀಗ್್ನ ಬೆಳ್ಳಿಹಬ್ಬದ ಈ ಅಧಿವೇಶನ. “ನೈತಿಕ ಆದರ್ಶ ಮತ್ತು ಒಂದು ರೀತಿಯ ರಾಜನೀತಿಯಾಗಿರುವ ಇಸ್ಲಾಂ (ಅಂದರೆ ನನ್ನ ಪ್ರಕಾರ ಕಾನೂನು ವ್ಯವಸ್ಥೆಯ ಮೂಲಕ ನಿಯಂತ್ರಿಸಲ್ಪಡುವ ಸಾಮಾಜಿಕ ರಚನೆ ಹಾಗೂ ನಿರ್ದಿಷ್ಟ ನೈತಿಕ ಆದರ್ಶದಿಂದ ಉಜ್ವಲಗೊಂಡಿರುವುದು) ಭಾರತದ ಮುಸ್ಲಿಮರ ಜೀವನೇತಿಹಾಸ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಹರಿದು ಹಂಚಿಹೋಗಿರುವ ವ್ಯಕ್ತಿಗಳು ಮತ್ತು ಗುಂಪುಗಳನ್ನು ಕ್ರಮೇಣ ಒಗ್ಗೂಡಿಸಿ, ಅಂತಿಮವಾಗಿ ನಿರ್ದಿಷ್ಟ ವ್ಯಾಖ್ಯೆಗೊಳಪಡುವ ವ್ಯಕ್ತಿಗಳಾಗಿ ಅವರನ್ನು ಪರಿವರ್ತಿಸುವುದರ ಜೊತೆಗೆ ಅವರಿಗೆ ತಮ್ಮದೇ ಆದ ನೈತಿಕ ಪ್ರಜ್ಞೆ ಹೊಂದಲು ಬೇಕಾದ ಮೂಲಭೂತ ಭಾವನೆಗಳು ಮತ್ತು ನಿಷ್ಠೆಯನ್ನು ಅದು(ಇಸ್ಲಾಂ) ನೀಡಿದೆ. ಇಸ್ಲಾಂ ಇಡೀ ಜಗತ್ತಿನಲ್ಲೇ ಏನಾದರೂ ಜನ ನಿರ್ಮಾಪಕ ಶಕ್ತಿಯಾಗಿ ಉತ್ಕೃಷ್ಟವಾಗಿ ಕೆಲಸ ಮಾಡಿರುವುದಾದರೆ ಅದು ಭಾರತದಲ್ಲೇ ಎಂದು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳಬಹುದು. ಉಳಿದೆಡೆಯಂತೆ ಭಾರತದಲ್ಲೂ ಸಹ ಇಸ್ಲಾಂ ಒಂದು ಸಮಾಜದ ಸಂರಚನೆ ಹೊಂದಿರುವುದು ಇಸ್ಲಾಂ ನಿರ್ದಿಷ್ಟ ನೈತಿಕ ಆದರ್ಶದಿಂದ ಸ್ಫೂರ್ತಿ ಪಡೆದು ಕೆಲಸ ಮಾಡಿರುವುದರಿಂದ. ಮುಸ್ಲಿಂ ಸಮಾಜ, ಗಣನೀಯ ಏಕರೂಪದ ಮತ್ತು ಒಳಒಗ್ಗಟ್ಟಿನಿಂದ, ಅದರ ಸಂಸ್ಕೃತಿಯ ಕಾನೂನುಗಳು ಮತ್ತು ಸಂಸ್ಥೆಗಳ ಒತ್ತಡದ ಮೂಲಕ ಅದು ಈಗಿರುವ ಸ್ಥಿತಿ ತಲುಪಿದೆ ಎಂಬುದು ನನ್ನ ಮಾತಿನ ಅರ್ಥ” ಎಂದರು ಇಕ್ಬಾಲ್.
‘ಭಾರತದೊಳಗಿನ ಮುಸ್ಲಿಂ ಭಾರತ’ ಎಂಬ ಉಪಶೀರ್ಷಿಕೆಯಲ್ಲಿ ಇಕ್ಬಾಲ್ ಆಡಿದ ಮಾತುಗಳು ಪಾಕಿಸ್ತಾನ ಸೃಷ್ಟಿಯ ಮೂಲಸ್ವರೂಪವನ್ನು ಹಿಡಿದಿಟ್ಟಿವೆ-”ಭಾರತದಂಥ ದೇಶದಲ್ಲಿ ಸಾಮರಸ್ಯದ ಅಖಂಡತೆಯನ್ನು ತರುವಲ್ಲಿ ಅದರ ಉನ್ನತ ಆಯಾಮದಲ್ಲಿ, ಕೋಮುವಾದ ಅನಿವಾರ್ಯ. ಯುರೋಪಿನ ದೇಶಗಳ ರೀತಿಯಲ್ಲಿ ಭಾರತೀಯ ಸಮಾಜದ ಘಟಕಗಳು ಪ್ರಾದೇಶಿಕವಾಗಿಲ್ಲ. ಭಾರತವು ವಿವಿಧ ಜನಾಂಗ, ಹಲವು ಭಾಷೆಗಳನ್ನಾಡುವುದರ, ಅನೇಕ ಮತಧರ್ಮಗಳಿಗೆ ಸೇರಿರುವ ಮನುಷ್ಯರ ಗುಂಪುಗಳಿರುವ ಖಂಡ. ಸಾಮಾನ್ಯ ಜನಾಂಗ ಪ್ರಜ್ಞೆಯಿಂದ ಅವರ ನಡವಳಿಕೆ ನಿಯಂತ್ರಿತವಾಗುತ್ತಿಲ್ಲ. ಅಷ್ಟೇಕೆ ಹಿಂದೂಗಳು ಕೂಡ ಏಕರೂಪದ ಗುಂಪಲ್ಲ. ಕೋಮುವಾರು ಗುಂಪುಗಳನ್ನು ಗುರುತಿಸದೆ ಯುರೋಪಿನ ಪ್ರಜಾಪ್ರಭುತ್ವದ ತತ್ತ್ವವನ್ನು ಭಾರತಕ್ಕೆ ಅನ್ವಯಿಸುವುದು ಸಾಧ್ಯವಿಲ್ಲ. ಭಾರತದೊಳಗೇ ‘ಮುಸ್ಲಿಂ ಭಾರತ’ಕ್ಕಾಗಿ ಮುಸಲ್ಮಾನರು ಬೇಡುತ್ತಿರುವುದು ಅತ್ಯಂತ ಸರಿಯಾಗಿದೆ.’
ಮುಸಲ್ಮಾನರಿಗೆ ಪ್ರತ್ಯೇಕ ಅಸ್ತಿತ್ವ ಬೇಕೇಬೇಕು ಎಂಬ ವಾದ ಅವರಲ್ಲಿ ಎಷ್ಟು ಬಲವಾಗಿತ್ತೆಂದರೆ ಇದೇ ಭಾಷಣದಲ್ಲಿ ಅವರು ಹೇಳಿದರು-’“I would never advise the Muslims of India to agree to a system, whether of British or of Indian origin, which virtually negates the principle of true federation or fails to recognise them as a distinct political entity.”
ಅದೇ ಭಾಷಣದ ಕಟ್ಟಕಡೆಗೆ ಹೇಳಿದ್ದೇನು ಗೊತ್ತೇ?
“I would like to see the Punjab, North-West Frontier Province, Sindh and Bluchistan amalgamated into a single state. Self-government within the British Empire, or without the British Empire, the formation of a consolidated Northwest Indian Muslim state appears to me to be the final destiny of the Muslims, at least of Northwest India.”ಪಂಜಾಬ್ ಸರಹದ್ದು ಪ್ರಾಂತ್ಯ, ಸಿಂಧ್, ಬಲೂಚಿಸ್ತಾನಗಳನ್ನು ಒಗ್ಗೂಡಿಸಿಕೊಂಡು ಅದೊಂದು ಸಂಯುಕ್ತ ಪ್ರಾಂತ್ಯವಾಗಿ ರೂಪುಗೊಳ್ಳುವುದನ್ನು ನಾನು ಕಾಣಲಿಚ್ಛಿಸುತ್ತೇನೆ ಎಂದ ಸರ್ ಮೊಹಮದ್ ಇಕ್ಬಾಲ್ ಬಿತ್ತಿದ್ದು ಮತ್ತೇನನ್ನೂ ಅಲ್ಲ ಪ್ರತ್ಯೇಕ ರಾಷ್ಟ್ರದ ಬೀಜವನ್ನೇ! 1931ರಲ್ಲಿ ದೇಶ ಬಿಟ್ಟು ಬ್ರಿಟನ್್ನಲ್ಲಿ ನೆಲೆಸಲು ಹೋಗಿದ್ದ ಮಹಮದ್ ಅಲಿ ಜಿನ್ನಾಗೆ “ಮುಸ್ಲಿಂ ಪಾಕಿಸ್ತಾನ ರಚನೆ ಮಾಡಬೇಕಾದ ಅಗತ್ಯವಿದ್ದು ಆ ಕಾರ್ಯ ಸಾಧನೆಗಾಗಿ ನೀನು ಭಾರತಕ್ಕೆ ಹಿಂದಿರುಗು” ಎಂದು ಪತ್ರ ಬರೆದು ವಾಪಸ್ ಕರೆಸಿಕೊಂಡಿದ್ದೇ ಇಕ್ಬಾಲ್. ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ಜಿನ್ನಾ ತಾಯಿಯಾದರೆ ಇಕ್ಬಾಲರೇ ತಂದೆ. ಏನೇ ರಾಜಕೀಯ ಕುಸಿತ, ಹತಾಶೆ, ಭಿನ್ನಾಭಿಪ್ರಾಯಗಳಿದ್ದರೂ ಇಕ್ಬಾಲರು ಜಿನ್ನಾಗೆ ಪ್ರಚೋದನೆ ನೀಡದಿದ್ದರೆ ಪಾಕಿಸ್ತಾನದ ಭ್ರೂಣ ಸಿದ್ಧವಾಗುತ್ತಿರಲಿಲ್ಲ. ನಾನು ಮತ್ತು ಡಾ. ಜಿ.ಬಿ. ಹರೀಶ್ ಬರೆದಿರುವ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೇ?” ಪುಸ್ತಕದಲ್ಲಿ ಇಕ್ಬಾಲರು ಬರೆದಿರುವ ಪತ್ರಗಳನ್ನು ಪ್ರಕಟಿಸಲಾಗಿದೆ. ಇಕ್ಬಾಲ್ ಜಿನ್ನಾಗೆ ಬರೆದಿರುವ ಪ್ರತಿ ಪತ್ರದಲ್ಲೂ ಕಾಣುವುದು ಪ್ರತ್ಯೇಕ ರಾಷ್ಟ್ರದ ವಿಷಬೀಜವೇ.
ಇಕ್ಬಾಲ್ ಮತ್ತು ಜಿನ್ನಾರನ್ನು ಆಳವಾಗಿ ಅರಿಯಲು ‘ಸಾರೆ ಜಹಾಂಸೆ ಅಚ್ಛಾ’ ಗೀತೆಯ ಒಳಗುಟ್ಟನ್ನು ಸ್ವಲ್ಪ ಬಗೆಯಬೇಕು. ಉರ್ದುವಿನಲ್ಲಿ ಇಕ್ಬಾಲ್ ರಚಿಸಿದ ಈ ಕವಿತೆ ಮೊದಲು ಪ್ರಕಟವಾಗಿದ್ದು 1904ರ ಆಗಸ್ಟ್ 16ರಂದು ‘ಇತ್ತೆಹಾದ್್’ ಎಂಬ ವಾರಪತ್ರಿಕೆಯಲ್ಲಿ. ಇದನ್ನು ದೇಶಭಕ್ತಿಗೀತೆಯೆಂದು ಮುಂದೆ ಬಿಂಬಿಸಿದರೂ ಇಕ್ಬಾಲ್ ಬರೆದದ್ದು ಗಜಲ್ ಶೈಲಿಯಲ್ಲಿ, ಮಕ್ಕಳ ಕವಿತೆಯಾಗಿ. 1905ರಲ್ಲಿ ಸ್ವತಃ ಇಕ್ಬಾಲ್ ಇದನ್ನು ಲಾಹೋರಿನ ಸರ್ಕಾರಿ ಕಾಲೇಜಿನ ಸಭೆಯೊಂದರಲ್ಲಿ ವಾಚನ ಮಾಡಿದರು. ತಕ್ಷಣವೇ ಈ ಕವಿತೆ ಜನರ ಹೃದಯಕ್ಕೆ ಲಗ್ಗೆ ಇಟ್ಟಿತು. ತರಾನಾ-ಎ-ಹಿಂದ್ (ಭಾರತೀಯರ ಹಾಡು) ಎಂದೇ ಪ್ರಸಿದ್ಧವಾಗಿ ಹಾಡಿನ ರೂಪ ಪಡೆಯಿತು. ಈ ಹಾಡು ಬರೆದಾಗಿನ ಇಕ್ಬಾಲೇ ಬೇರೆ, 1930ರ ಮುಸ್ಲಿಂ ಲೀಗ್್ನ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟ ಇಕ್ಬಾಲೇ ಬೇರೆ. ಅದೇ ದೇಹ, ಆದರೆ ಮನಸ್ಸು ಮಾತ್ರ ಭಾರತದಿಂದ ದೂರ ಹೋಗಿಬಿಟ್ಟಿತ್ತು. 1904ರಲ್ಲಿ ಈ ಕವಿತೆ ಜನರ ಕಿವಿಗೆ ಬಿದ್ದಾಗ ಅದರ ವಿಶಾಲ ದೃಷ್ಟಿ ವಿಶೇಷವಾಗಿ ಹಲವರನ್ನು ಆಕರ್ಷಿಸಿತ್ತು.
ಮಜ್್ಹಬ್ ನಹೀಂ ಸಿಖಾತಾ ಆಪಸ್ ಮೇಂ ಬೈರ್ ರಖನಾ
ಹಿಂದೀ ಹೈ ಹಂ, ವತನ್ ಹೈ ಹಿಂದೂಸ್ತಾನ್ ಹಮಾರಾ
ನಮ್ಮ ನಮ್ಮಲ್ಲೇ ದ್ವೇಷ ತಂದುಕೊಳ್ಳುವುದನ್ನು ಮತಧರ್ಮ ಕಲಿಸುವುದಿಲ್ಲ, ನಾವು ಹಿಂದ್, ನಮ್ಮ ಭೂಮಿ ಹಿಂದೂಸ್ತಾನ.
ಆದರೆ ಇಕ್ಬಾಲರು 1910ರಲ್ಲಿ ಬರೆದ ‘ತರಾನಾ-ಇ-ಮಿಲ್ಲಿ’ ಕವನದ ಮೊದಲ ಚರಣದಲ್ಲಿ ಒಡಕಿನ ಅಪಸ್ವರ ಕೇಳಿಸಿತ್ತು.
ಚೀನ್-ಒ-ಅರಬ್ ಹಮಾರಾ, ಹಿಂದೂಸ್ತಾನ್ ಹಮಾರಾ
ಮುಸ್ಲಿಂ ಹೈ ಹಂ, ವತನ್ ಹೈ ಸಾರಾ ಜಹಾಂ ಹಮಾರಾ
ಅಂದರೆ ಮಧ್ಯ ಏಷ್ಯಾ ಮತ್ತು ಅರೇಬಿಯಾ ನನ್ನದು, ಹಿಂದೂಸ್ತಾನ ನಮ್ಮದು, ನಾವು ಮುಸ್ಲಿಮರು, ಇಡೀ ಜಗತ್ತೇ ನಮ್ಮ ಭೂಮಿ. ಈ ಎರಡನೆಯ ಕವಿತೆಯಲ್ಲಿ ಒಂದು ರೀತಿ ಇಡೀ ವಿಶ್ವವೇ ನಮ್ಮದು ಎಂಬ ವಿಶಾಲತೆ ಇದೆ ಎಂದು ಹೇಳೋಣವೇ? ಅಥವಾ ‘ನಾವು ಮುಸ್ಲಿಮರು ಇಡೀ ಜಗತ್ತು ನಮ್ಮದು’ ಎಂಬ ಸಾಲಿನಲ್ಲಿ ಪ್ರತ್ಯೇಕತೆ ಕಾಣುತ್ತದೆಯೋ? ಅಷ್ಟಕ್ಕೂ ‘ಸಾರಾ ಜಗಕೋ ಇಸ್ಲಾಂ ಬನಾಯೇಂಗೆ’ ಎಂಬ ಪ್ರಾಚೀನ ಇಸ್ಲಾಂನ ಘೋಷಣೆಗಿಂತ ಇದು ಯಾವ ರೀತಿ ಬೇರೆಯಾಗಿದೆ?!
ಭಾರತ ಭಕ್ತಿಯ ಪರಾಕಾಷ್ಠೆಯೆಂದು ಈಗಲೂ ‘ಸಾರೇ ಜಹಾಂಸೆ ಅಚ್ಛಾ’ ಹಾಡುವವರಿದ್ದಾರೆ. ಆದರೆ ಈ ಹಾಡು ಬರೆದಾತನೇ ಭಾರತ ವಿಭಜನೆಯ ಮೂಲ ಖಳನಾಯಕನೆಂದು ಅದೆಷ್ಟು ಜನರಿಗೆ ಗೊತ್ತು?

 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ