ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಮೇ 15, 2012

ಹೇಮರೆಡ್ಡಿ ಮಲ್ಲಮ್ಮನ ಕಥೆಯು, ಸೃಷ್ಟಿಕರ್ತ ಕುಂವೀಯು!

ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ!
ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಹದಿನಾಲ್ಕು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಹದಿನೇಳು ಕಾದಂಬರಿಗಳನ್ನು ರಚಿಸಿದ್ದಾರೆ. ನೇತಾಜಿ ಸುಭಾಶ್್ಚಂದ್ರ ಬೋಸ್, ಚಾಪ್ಲಿನ್ ಜೀವನಕಥೆಯನ್ನೂ ಬರೆದಿದ್ದಾರೆ. ತೆಲುಗಿನ 150 ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯೇ ಅವುಗಳನ್ನು ಪ್ರಕಟ ಮಾಡಿದೆ.

ಅವರೊಬ್ಬ Prolific Writer ಎನ್ನಲು ಇಷ್ಟು ಸಾಕಲ್ಲವೇ?
ಬಹುಶಃ ಡಾ. ಎಸ್.ಎಲ್. ಭೈರಪ್ಪನವರನ್ನು ಬಿಟ್ಟರೆ ನಿರಂತರವಾಗಿ ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಹೊಸ ಕೃತಿಗಳನ್ನು ನೀಡುತ್ತಿರುವ, ಗಟ್ಟಿ ಸಾಹಿತ್ಯವನ್ನು ರಚನೆ ಮಾಡುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕುಂವೀ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 2010ರಲ್ಲಿ ‘ಗಾಂಧಿ ಕ್ಲಾಸು’ ಎಂಬ ಆತ್ಮಕಥನವನ್ನು ನೀಡಿದ್ದ ಅವರು 2012ರಲ್ಲಿ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಎಂಬ ಕಾದಂಬರಿಯನ್ನು ಬಿಡುಗಡೆಗೆ ಅಣಿಗೊಳಿಸಿದ್ದಾರೆ.
“ಕಥೆಗಾರ ತನಿಕೆಳ್ಳ ಪಾರ್ಥಸಾರಥಿ ಕಾದಂಬರಿ ಬರೆಯಬಹುದೆಂದು ತೆಲುಗಿನ ಸಾರಸ್ವತ ಪ್ರಪಂಚ ಕನಸುಮನಸಿನಲ್ಲೂ ಊಹಿಸಿರಲಿಲ್ಲ. ಆತ ತನ್ನ ಹೊಸ ಸೃಜನಶೀಲ ಸಾಹಸವನ್ನು ಯಾರೊಬ್ಬರ ಬಳಿ ಹೇಳಿಕೊಂಡಿರದಿದ್ದರೂ ಸುದ್ದಿಯಾಯಿತು. ಅವರಿವರು ಒತ್ತಟ್ಟಿಗಿರಲಿ ಅವರ ಆರಂಭಿಕ ಕಥೆಗಳನ್ನು ಮೆಚ್ಚಿ ವಿಮರ್ಶಿಸಿದ, ಅವುಗಳ ಪೈಕಿ ಕೆಲವನ್ನು ಇನ್ನಿತರ ಪ್ರಾದೇಶಿಕ ಭಾಷೆಗಳ ವಾಚಕರಿಗೆ ಪರಿಚಯಿಸಿದ ಪ್ರೊ. ಕಾಶಿಬೊಟ್ಲ ವೇಣುಗೋಪಾಲ್ ಅವರಂಥ ಬಹುಶ್ರುತ ವಿದ್ವಾಂಸರಿಗೂ ಅದನ್ನು ತೋರಿಸಿರಲಿಲ್ಲ, ಅದಕ್ಕೆ ತನ್ನ ಮೃದ್ವಂಗಿ ಜಾಯಮಾನ ಕಾರಣವಿದ್ದಿರಬಹುದು. ಆದರೆ ಅದನ್ನು ಎಷ್ಟು ದಿವಸ ಗುಟ್ಟಾಗಿರಿಸಲಾದೀತು! ಆ ದಿವಸ ಆತನಿಂದ ನನಗೆ ದೂರವಾಣಿ ಕರೆ ಬಂತು. ಉಭಯಕುಶಲೋಪರಿಯಾದ ಬಳಿಕ ಒಮ್ಮೆ ಕರ್ನೂಲಿಗೆ ಬಂದು ಹೋಗುವಿಯೇನು ಎಂದು ಕೇಳಿದ. ಯಾಕೆಂದು ಕೇಳಿದ್ದಕ್ಕೆ ಕಾದಂಬರಿ ಬರೆದಿರುವುದಾಗಿಯೂ, ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವ ಅದರ ಮೇಲೆ ಕಣ್ಣಾಡಿಸಿ ಪರಿಶೀಲಿಸಬೇಕೆಂದೂ ಕೇಳಿಕೊಂಡ. ವಿಷಯ ತಿಳಿದಿದ್ದರೂ ನಾನು ಹೌದೇನು ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ನನಗಿಂತ ಮೊದಲು ಕಾಶಿಬೊಟ್ಲ ಅವರಿಗೆ ತೋರಿಸಿದರೆ ಒಳ್ಳೆಯದೆಂದು ಹೇಳಿದೆ. ಅಂಥವರು ನೋಡುವ ಮೊದಲು ನಿನ್ನಂಥವರು ನೋಡುವುದು ಮುಖ್ಯವೆಂದು ಹೇಳಿದ. ಅದೇ ಮಾತನ್ನು ಬೇರೆಯವರು ಕೇಳಿದ್ದಲ್ಲಿ ನಾನು ಒಪ್ಪಿಕೊಳ್ಳುತ್ತಿರಲಿಲ್ಲವೇನೋ! ವೈಶಾಖದ ಬಿಸಿಲನ್ನು ಲೆಕ್ಕಿಸದೆ ಪತ್ತಿಕೊಂಡ ದೇವನಕೊಂಡಗಳನ್ನು ದಾಟಿ ಕರ್ನೂಲನ್ನು ಆ ದಿವಸ ಸೇರಿಕೊಂಡೆ. ಆದರೆ ಬರೆದಿರುವನೆಂಬ ವದಂತಿಗಳು, ಬರೆದಿರುವನೋ! ಅಥವಾ ಬರೆಯುವ ಪ್ರಯತ್ನದಲ್ಲಿರುವನೋ! ನನ್ನನ್ನಿಲ್ಲಿಗೆ ಬರಮಾಡಿಕೊಳ್ಳಲು ತಾನು ಸುಳ್ಳು ಹೇಳಿರಲೂಬಹುದೆಂದು ಭಾವಿಸಿ ಆತನ ಕಡೆ ದೃಷ್ಟಿ ಹಾಯಿಸಿದೆ. ನನ್ನ ಮನಸ್ಸಿನ ತೊಳಲಾಟವನ್ನು ಅವನು ಗ್ರಹಿಸಿದನೇನೋ! ಮೆಲ್ಲಗೆ ಎದ್ದು ಕಿಟಕಿ ಎದುರು ಇದ್ದ ಟೇಬಲ್ ತಲುಪಿದ, ಅದರ ಮೇಲಿದ್ದ ಕಡತವನ್ನು ಕೈಗೆತ್ತಿಕೊಂಡು ಬಡಿದು ಸದ್ದು ಮಾಡಿದ, ಧೂಳಿನ ಘಾಟು ಆವರಿಸಿತು. ಅದನ್ನು ನನ್ನ ಕಡೆ ಚಾಚಿ ಇದೇ ನೋಡು ಎಂದು ಹೇಳಿದ, ತೆಗೆದುಕೊಂಡೆ, ಅರಂಭದ ಪುಟದಲ್ಲಿ ಹೇಮರೆಡ್ಡಿ ಮಲ್ಲಮ್ಮನ ಕಥೆ ಎಂದು ಇರುವುದನ್ನು ನೋಡಿ ‘ಓಹೋ ಪೌರಾಣಿಕ’ ಎಂದು ಉದ್ಗರಿಸಿದೆ. ಅದಕ್ಕೆ ಪ್ರತಿಯಾಗಿ ನಕ್ಕು ‘ಇದು ಆ ಹೇಮರೆಡ್ಡಿಯ ಧರ್ಮಪತ್ನಿ ಶಿವಶರಣೆ ಮಲ್ಲಮ್ಮನವರ ಕಥೆ ಅಲ್ಲ. ಓದು ನಿನಗೇ ತಿಳಿಯುವುದು, ಹ್ಹಾ ಅಂದ ಹಾಗೆ ನಾನು ಆರೋಗ್ಯದಿಂದ ಇರುವುದಕ್ಕೆ ಇದೇ ಕಾರಣ’ ಎಂದು ಹೇಳುತ್ತ ಕುರ್ಚಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟನು. ನಾನು ನಿಧಾನವಾಗಿ ಓದಲಾರಂಭಿಸಿದೆನು.”
ಹೀಗೆ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಕಾದಂಬರಿಗೆ ಕುಂವೀ ‘ಪೀಠಿಕೆ’ ಹಾಕುತ್ತಾರೆ.
ಈ ಕಾದಂಬರಿಯಲ್ಲಿ ಮುಂದೆ ಕಾಣಬಹುದಾದ ಹೊಸತನ, ಹೊಸ ರೀತಿಯ ಕಾದಂಬರಿ ರಚನೆ ಪೀಠಿಕೆಯಲ್ಲೇ ಇದೆ ಎಂಬುದು ಅರ್ಥವಾಗುವುದು ಕಾದಂಬರಿಯನ್ನು ಓದಿ ಮುಗಿಸಿದ ನಂತರವಷ್ಟೇ. ಕುಂವೀ ಯಾವ ಕಥೆಗಾರ ತನಿಕೆಳ್ಳ ಪಾರ್ಥಸಾರಥಿಯ ಕಾದಂಬರಿಯನ್ನು ಓದಲು ಹೋಗುತ್ತಾರೋ ಆ ತನಿಕೆಳ್ಳ ಪಾರ್ಥಸಾರಥಿ ಕುಂವೀ ಅವರ ಸೃಷ್ಟಿಯಾಗಿರುತ್ತಾನೆ. ಈ ತನಿಕೆಳ್ಳ ಪಾರ್ಥಸಾರಥಿ ಒಬ್ಬ ಕಾಲ್ಪನಿಕ ಪಾತ್ರವಾಗಿದ್ದರೂ ಪೀಠಿಕೆಯಲ್ಲಿ ವಿಮರ್ಶಕನ ಪಾತ್ರವಹಿಸುವ ತೆಲುಗಿನ ಖ್ಯಾತ ಕಥೆಗಾರ ಪ್ರೊ. ಕಾಶಿಬೊಟ್ಲ ವೇಣುಗೋಪಾಲ್ ಅವರೇ ಆಗಿರುತ್ತಾನೆ. ಇದೇನೇ ಇರಲಿ, ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ನಲ್ಲಿ ಏಕಕಾಲಕ್ಕೆ ಹಲವಾರು ಕಥೆಗಳನ್ನು ಕುಂವೀ ಹೇಳುತ್ತಾರೆ. ಇದರಲ್ಲಿ ಹೆಬ್ಬಟಂ ಗೌಡ ಹಾಗೂ ಆತನ ಪುತ್ರ ಸೂರ್ಯಪ್ರತಾಪ್ ರೆಡ್ಡಿ ಪ್ರಮುಖ ಪಾತ್ರಧಾರಿಗಳು. ಶ್ರೀಮಂತ ಜಮೀನುದಾರನಾದ ಹೆಬ್ಬಟಂ ಗೌಡ ಗುಣದಲ್ಲಿ ಲಂಪಟ. ಮಗ ಸೂರ್ಯಪ್ರತಾಪ್ ರೆಡ್ಡಿ ಜೈಲಿನಿಂದ ವಾಪಸಾಗಿರುತ್ತಾನೆ. ಎಂ.ಎಲ್.ಎ. ಚುನಾವಣೆಗೆ ಸ್ಪರ್ಧಿಸಲು ಹವಣಿಸುತ್ತಿದ್ದ ಅಪ್ಪ ಮಗ ಇಬ್ಬರಿಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಹೋಗಿಬಿಡುತ್ತದೆ. ಹಾಗಾಗಿ ತಮ್ಮ ಇಮೇಜನ್ನೇ ಬದಲಾಯಿಸಿಕೊಳ್ಳಬೇಕೆಂಬ ತುಡಿತ ಇಬ್ಬರಲ್ಲೂ ಆರಂಭವಾಗಿರುತ್ತದೆ. ಅದಕ್ಕೆ ಸರಿಯಾಗಿ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಎಂಬ ನಾಟಕದ ಶತದಿನೋತ್ಸವ ಸಮಾರಂಭ ಸಮೀಪಿಸಿರುತ್ತದೆ. ಆ ಸಮಾರಂಭವನ್ನು ತಾನೇ ಆಯೋಜಿಸಲು ಹೆಬ್ಬಟಂ ಗೌಡ ಮುಂದಾಗುತ್ತಾನೆ. ಆ ಸಮಾರಂಭದ ಭಾಷಣವನ್ನು ಹೆಬ್ಬಟಂ ಗೌಡ ತನ್ನ ಮಗ ಸೂರ್ಯಪ್ರತಾಪ್ ರೆಡ್ಡಿಯ ಗುಣಗಾನಕ್ಕೆ ಹಾಗೂ ಸೂರ್ಯಪ್ರತಾಪ್ ರೆಡ್ಡಿ ಅಪ್ಪ ಹೆಬ್ಬಟಂ ಗೌಡನನ್ನು ಶ್ಲಾಘನೆ ಮಾಡುವುದಕ್ಕೆ ಬಳಸಿಕೊಳ್ಳಲು ಯೋಜಿಸುತ್ತಾರೆ. ಬಹಳ ಕುತೂಹಲಕಾರಿ ಸಂಗತಿಯೆಂದರೆ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ನಲ್ಲಿ ಬರುವ ಹೇಮರೆಡ್ಡಿ ಕೂಡ ಹೆಬ್ಬಟಂ ಗೌಡನಂತೆಯೇ ಲಂಪಟನಾಗಿರುತ್ತಾನೆ. ಹೇಮರೆಡ್ಡಿಯನ್ನು ಬದಲಾಯಿಸಲು, ಮನಪರಿವರ್ತಿಸಲು ಆತನ ಪತ್ನಿ ಮಲ್ಲಮ್ಮ ಪ್ರಯತ್ನಿಸುತ್ತಾಳೆ. ಇತ್ತ ಮುಪ್ಪಡರಿದಂತೆ ಹೆಬ್ಬಟಂ ಗೌಡ ಕೂಡ ಬದಲಾಗಿದ್ದ. ಆದರೆ ಅವನಿಗಿದ್ದ ಒಂದೇ ಆತಂಕವೆಂದರೆ ತನ್ನ ಮಗನ ವರ್ತನೆಯನ್ನು ಹೇಗೆ ಸರಿಪಡಿಸುವುದೆಂಬ ಚಿಂತೆ. ಆದರೂ ಹೆಬ್ಬಟಂ ಗೌಡ ತಾನು ಒಳ್ಳೆಯವನಾಗಲು ಪ್ರಯತ್ನಿಸುತ್ತಿರುವಾಗಲೇ ತನ್ನ ಕೆಟ್ಟತನದ ಪ್ರತಿರೂಪದಂತೆ, ಕೆಟ್ಟತನದ ಉತ್ತರಾಧಿಕಾರಿಯಂತೆ ಸೂರ್ಯಪ್ರತಾಪ್ ರೆಡ್ಡಿ ಹೊರಹೊಮ್ಮಲಾರಂಭಿಸುತ್ತಾನೆ. ಅದರಿಂದ ಸೃಷ್ಟಿಯಾಗುವ ತಳಮಳ, ಪಾಪಪ್ರಜ್ಞೆ ಮುಂತಾದವುಗಳನ್ನು ಕುಂವೀ ಬಹಳ ಚೆನ್ನಾಗಿ ಸನ್ನಿವೇಶ, ಸಂವಾದಗಳಿಗಿಳಿಸಿದ್ದಾರೆ.
ಕರ್ನಾಟಕ ಹಾಗೂ ಆಂಧ್ರದ ಗಡಿ ಭಾಗಗಳಾದ ಬಳ್ಳಾರಿ, ಕರ್ನೂಲ್, ಅನಂತಪುರ ಜಿಲ್ಲೆಗಳಲ್ಲಿ ಕುಂವೀ ಅವರ ಕಥೆಗಳು ಸಾಮಾನ್ಯವಾಗಿ ಭೂಮಿಕೆ ಪಡೆಯುತ್ತವೆ. ಬಳ್ಳಾರಿ, ಹೊಸಪೇಟೆ, ಅದರ ಆಚೆಗಿರುವ ಗೂಳ್ಯಂ, ಕರ್ನೂಲು ಭಾಗದ ಬದುಕುಗಳ ದಾರುಣ ಕಥೆಯನ್ನು ತುಂಬ ಪರಿಣಾಮಕಾರಿಯಾಗಿ ಬರೆಯುತ್ತಿರುವ ವ್ಯಕ್ತಿ ಕುಂ.ವೀ. ಗ್ರಾಮೀಣ ಬದುಕಿನ ಚಿತ್ರಣವನ್ನು ಶ್ರೀಕೃಷ್ಣ ಆಲನಹಳ್ಳಿ, ಬೆಸಗರಹಳ್ಳಿ ರಾಮಣ್ಣ ಅವರ ನಂತರ, ಅವರಷ್ಟೇ ಆಪ್ತವಾಗಿ ಕಟ್ಟಿ ಕೊಡುತ್ತಿರುವ ವ್ಯಕ್ತಿ ಕುಂ.ವೀ.
ಕುಂ.ವೀ. ಶಾಲಾ ಶಿಕ್ಷಕರು. ಈಗ ಹೆಡ್್ಮಾಸ್ಟರ್ ಆಗಿರುವವರು. ಬೋರ್ಡಿನ ಮೇಲೆ ಬರೆಯುತ್ತಾರಲ್ಲ; ಅದಕ್ಕಿಂತ ಹತ್ತುಪಟ್ಟು ವೇಗವಾಗಿ ಅವರು ಹಾಳೆಯ ಮೇಲೆ ಬರೆಯಬಲ್ಲರು. 600 ಪುಟಗಳ ಕಾದಂಬರಿ ಬರೆಯಲು ಅವರು ತೆಗೆದುಕೊಂಡಿದ್ದು ಒಂದೇ ವಾರದ ಅವಧಿ. ಈವರೆಗೆ ಬರೆದಿರುವ ಕಥೆ/ಕಾದಂಬರಿ ಹಾಗೂ ನಾಟಕಗಳ ಪೈಕಿ ಬಹುಶಃ ‘ಅರಮನೆ’ ಎಂಬ ಕಾದಂಬರಿಯನ್ನು ಬಿಟ್ಟರೆ, ಬೇರೆ ಯಾವುದನ್ನೂ ಕುಂವೀ ಎರಡನೇ ಬಾರಿ ತಿದ್ದಿ ಬರೆದಿಲ್ಲ. ಆ ಮಟ್ಟಿಗೆ ಅವರು ಬರೆದಿದ್ದೆಲ್ಲ ಬಂಗಾರ.
ಒಂದು ಕಾಲದಲ್ಲಿ ಕುಂ.ವೀ. ಪತ್ರಕರ್ತರಾಗಿದ್ದರು. ಆ ದಿನಗಳಲ್ಲಿ ಕರ್ನೂಲು, ಬಳ್ಳಾರಿ ಸೀಮೆಯಲ್ಲಿ ಸೊಳ್ಳೆ ಹೊಡೆದಷ್ಟೇ ಸುಲಭವಾಗಿ ನಡೆದುಹೋಗುವ ಕೊಲೆಯ ಬಗ್ಗೆ ವರದಿ ಕಳಿಸುತ್ತಿದ್ದರಂತೆ. ಎಷ್ಟೋ ಸಂದರ್ಭದಲ್ಲಿ ಒಂದು ಕೊಲೆಗೆ ಕಾರಣವೇ ಇರುತ್ತಿರಲಿಲ್ಲ. ಆದರೂ ಕೊಲೆ ಆಗಿಬಿಡುತ್ತಿತ್ತು. ಇವರು ಇದ್ದುದನ್ನು ಇದ್ದ ಹಾಗೇ ಬರೆದು ಕಳಿಸಿದರು. ಅದನ್ನು ಓದಿದ ಸಂಪಾದಕರು- ಮಹರಾಯ, ವರದಿ ಪ್ರಕಟವಾಗಲಿ ಎಂಬ ಆಸೆಗೆ ಸುಳ್ಳುಸುಳ್ಳೇ ಮರ್ಡರ್ ಸ್ಟೋರಿ ಕಳಿಸಬೇಡ. ಸರಿಯಾದ ಕಾರಣವೇ ಇಲ್ಲದೆ ಕೊಲೆಯಾಗುತ್ತದೆ ಅಂದರೆ ಏನರ್ಥ? ಸ್ವಲ್ಪ ಗಂಭೀರವಾಗಿ ಬರೆಯಲು ಕಲಿ ಎಂದರಂತೆ.
ಈಗ ಕಾಲ ಬದಲಾಗಿದೆ. ಜನರೂ ಬದಲಾಗಿದ್ದಾರೆ. ಎಲ್ಲರೂ ಹಳ್ಳಿಗಳನ್ನು ಮರೆತಿದ್ದಾರೆ. ನಗರಗಳಿಗೆ ಬಂದು ಮನೆ ಕಟ್ಟಿಕೊಂಡಿದ್ದಾರೆ. ಇಂಥ ಮಾತುಗಳಿಗೆ ಕುಂ.ವೀ. ಅಪವಾದ. ಆತ ತನ್ನ ಕಥೆ, ಕಾದಂಬರಿಯ ನಾಯಕ ಪಾತ್ರಗಳಷ್ಟೇ ಅಮಾಯಕ. ಮೂರು ತಿಂಗಳಿಗೆ ಒಂದು ಬಾರಿ ಯಾವುದೋ ಕಾರ್ಯಕ್ರಮದ ನಿಮಿತ್ತ ಒಂದೆರಡು ದಿನದ ಮಟ್ಟಿಗೆ ಬೆಂಗಳೂರಿಗೋ, ಮಂಗಳೂರು-ಮೈಸೂರಿಗೋ ಹೋಗಿ ಬಂದರೆ ಕುಂ.ವೀ. ಖುಷಿಯಾಗುತ್ತಾರೆ. ಹೋದ ಕಡೆಯಲ್ಲೆಲ್ಲ ಅದೇ ಬಳ್ಳಾರಿಯ ಜವಾರಿ ಭಾಷೆಯಲ್ಲಿ ಮಾತಾಡುತ್ತಾರೆ. ಯಾವುದೋ ನಾಟಕದ ಡೈಲಾಗ್ ನೆನಪಿಸಿಕೊಳ್ಳುತ್ತಾರೆ. ಜೋಕು ಹೇಳಿ ನಗಿಸುತ್ತಾರೆ.
ಕುಂ.ವೀ. ಇಷ್ಟವಾಗುವುದು ಅವರ ಅಮಾಯಕತೆಯ ಕಾರಣಕ್ಕೆ. ಸರಳತೆಯ ಕಾರಣಕ್ಕೆ. ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರೂ, ಅದನ್ನೆಂದೂ ಕುಂ.ವೀ. ಹೇಳಿಕೊಳ್ಳುವುದಿಲ್ಲ. ಯಾವುದೋ ಸ್ಥಾನಕ್ಕಾಗಿ ಹಾತೊರೆಯುವುದಿಲ್ಲ, ಲಾಬಿ ಮಾಡುವುದಿಲ್ಲ. ಹಿಂಬಾಲಕರ ಮೂಲಕ ಪರಾಕು ಹೇಳಿಸಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಕುಂ.ವೀ.ಗೆ ಹಿಂಬಾಲಕರೇ ಕಡಿಮೆ.
ಬೇರೆ ಯಾವ ಸಾಹಿತಿಗೂ ಸಿಗದಂಥ ವಸ್ತುಗಳು, ಕಥೆಗಳು ಕುಂ.ವೀ.ಗೆ ಹೇಗೆ ಸಿಗುತ್ತವೆ ಎಂಬುದು ಹಲವರ ಕುತೂಹಲದ ಪ್ರಶ್ನೆ. ಅದಕ್ಕೆ ಕುಂ.ವೀ. ಉತ್ತರಿಸಿರುವುದು ಹೀಗೆ: ‘ನನ್ನ ವಾರಿಗೆಯ ಎಲ್ಲರೂ ನಗರಗಳಲ್ಲಿ ಕಥೆಗಳನ್ನು ಹುಡುಕುತ್ತಾ ಕೂತರು. ಅವರು ಸಂಕಟದ ದನಿಗೆ ಕಿವಿಗೊಡಲಿಲ್ಲ. ಬದಲಿಗೆ, ರೊಮ್ಯಾಂಟಿಸಂ ಧ್ವನಿಗೆ ಕಾದು ಕುಳಿತರು. ನನ್ನೂರು ರಾಯಲ ಸೀಮೆಯ ಒಂದೊಂದು ಮನೆಯಲ್ಲೂ ರಕ್ತಚರಿತ್ರೆಗೆ ಆಗುವಂಥ ಕಥೆಗಳಿವೆ. ಅವನ್ನೆಲ್ಲ ಇಂಚಿಂಚಾಗಿ ಕಂಡವನು ನಾನು. ನಾನು ಕಂಡಿದ್ದನ್ನು ಅಷ್ಟೇ ನೇರವಾಗಿ ಬರೆದಿಡುತ್ತೇನೆ ಅಷ್ಟೆ. ಅನುಮಾನವೇ ಬೇಡ. ಗ್ರಾಮೀಣ ಭಾಗದ ಹಳ್ಳಿಗಳಿಗೆ ಹೋಗಿ ಬಂದರೆ ನನಗೆ ಸಿಕ್ಕಿರುವಂಥ ಕಥೆಗಳು ಹಲವರಿಗೆ ಸಿಗುತ್ತವೆ. ಆದರೆ, ಹೋಗಿಬರುವ ಅವಸರ ಯಾರಲ್ಲೂ ಕಾಣುತ್ತಿಲ್ಲ. ಹಾಗಾಗಿ ನಾನು ಗೆಲ್ಲುತ್ತಿದ್ದೇನೆ ಅನಿಸುತ್ತದೆ…’
ಅಂದಹಾಗೆ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಇಂದು (ಮೇ 12) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಕನ್ನಡ ಸಾಹಿತಿಗಳಲ್ಲಿ ಹೆಚ್ಚಿನವರು ಐವತ್ತು- ಅರವತ್ತು ವರ್ಷದೊಳಗೆ ಲೇಖನಿಗೆ ನಿವೃತ್ತಿ ನೀಡಿ ವೇದಿಕೆಯೇರಿ ಮೈಕ್ ಮುಂದೆ ನಿಂತು ನೀತಿಬೋಧೆ ಆರಂಭಿಸುತ್ತಾರೆ. ಆದರೆ 59ರ ವಯಸ್ಸಿನ ಕುಂವೀ ಮಾತ್ರ ರಾಜಕಾರಣದಿಂದ, ಪದವಿ ಪಟ್ಟಗಳ ಲಾಲಸೆಯಿಂದ ದೂರವಿದ್ದು ಕೊಟ್ಟೂರಿನಲ್ಲೇ ಕುಳಿತು ಕನ್ನಡ ಸಾಹಿತ್ಯ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಅದು ಹಾಗೆಯೇ ಮುಂದುವರಿಯಲಿ, ಅವರ ಕೃತಿಗಳ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಬರುವಂತಾಗಲಿ.
- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ