ನನ್ನ ಬ್ಲಾಗ್ ಪಟ್ಟಿ

ಶನಿವಾರ, ಮೇ 26, 2012

ಮಠ-ಮಾನ್ಯಗಳ ನಾಡಲ್ಲಿ ಅತಿಮಾನ್ಯ ಈ ಹಿರೇಮಠ!

ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ.
ಗೋವಿಂದ ರಾವ್ ಖೈರ್ನಾರ್!

ಅದು ದಾವೂದ್ ಇಬ್ರಾಹಿಂ ಭೂಗತ ಜಗತ್ತನ್ನು ಆಳುತ್ತಿದ್ದ ಕಾಲ. ಮೂನ್ನೂರಕ್ಕೂ ಅಧಿಕ ಜನರನ್ನು ಆಹುತಿ ತೆಗೆದುಕೊಂಡ 1993ರ ಮುಂಬೈ ಸರಣಿ ಸ್ಫೋಟದ ಮುಖ್ಯ ಪಿತೂರಿಯನ್ನು ಆತ ರೂಪಿಸಿದ್ದ ದಿನಗಳು. ಆತನ ಹೆಸರನ್ನು ಹೇಳಿದರೆ ಮೈನಡುಕವುಂಟಾಗುವಂಥ ಸಮಯವದು. ಹಾಗೆ ದಾವೂದ್ ಅಟ್ಟಹಾಸ ಅತಿರೇಕಕ್ಕೇರಿದ್ದ ಕಾಲದಲ್ಲಿ ಆತನ ತಾಕತ್ತಿಗೆ ಏಕಾಂಗಿಯಾಗಿ ಸವಾಲು ಎಸೆದ, ಆತನನ್ನು ನಿದ್ದೆಗೆಡಿಸಿದ ಯಾವನಾದರೂ ಗಂಡುಮಗನಿದ್ದರೆ ಆತನೇ ಖೈರ್ನಾರ್. ಬೃಹನ್ ಮುಂಬೈ ಕಾರ್ಪೋರೇಷನ್್ನ (ಇಂಈ) ಡೆಪ್ಯೂಟಿ ಕಮಿಷನರ್ ಆಗಿದ್ದ ಖೈರ್ನಾರ್ ಎಂತಹ ಕೆಲಸಕ್ಕೆ ಕೈಹಾಕಿದರೆಂದರೆ ದುಬೈನಲ್ಲಿದ್ದುಕೊಂಡು ಮುಂಬೈಯನ್ನಾಳುತ್ತಿದ್ದ ದಾವೂದನ ಸಾಮ್ರಾಜ್ಯವನ್ನೇ ನೆಲಸಮ ಮಾಡಲು ಹೊರಟರು. ಚಿನ್ನ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ದಾವೂದ್ ಇಬ್ರಾಹಿಂ, ಆ ದಂಧೆಯನ್ನು ಬಿಟ್ಟು ರಿಯಲ್ ಎಸ್ಟೇಟ್್ಗೆ ಕೈಹಾಕಿದ್ದ. ದಕ್ಷಿಣ ಮುಂಬೈನಲ್ಲಿ ಯಾವುದೇ ಹಳೆಯ ಕಟ್ಟಡ, ಮನೆಗಳಿರಲಿ, ವಿಸ್ತಾರವಾದ ನಿವೇಶನಗಳಿರಲಿ ಮಾಲೀಕರ ಹಣೆಗೆ ಪಿಸ್ತೂಲನ್ನಿಟ್ಟು ಬೆದರಿಸಿ ಮನಸ್ಸಿಗೆ ಬಂದ ಬೆಲೆಗೆ ಖರೀದಿ ಮಾಡುತ್ತಿದ್ದ. ಅವುಗಳ ಬೆಲೆ 10 ಸಾವಿರ ಕೋಟಿಯನ್ನು ಮೀರಿತು. ಮುಂಬೈನಲ್ಲೇ ಇದ್ದ ತನ್ನ ಸಹೋದರರು, ಭಟ್ಟಂಗಿಗಳು, ಡಿ ಕಂಪನಿಯ ಹಂತಕರ ಹೆಸರಿನಲ್ಲಿ ದಕ್ಷಿಣ ಮುಂಬೈವೊಂದರಲ್ಲೇ ದಾವೂದ್ ಮಾಡಿದ ಬೇನಾಮಿ ಆಸ್ತಿಗಳ ಸಂಖ್ಯೆ 1087.  ಆವುಗಳನ್ನೆಲ್ಲ ಖೈರ್ನಾರ್ ಪಟ್ಟಿ ಮಾಡಿದರು. 29 ಕಟ್ಟಡಗಳನ್ನು ನೆಲಸಮ ಮಾಡಿಯೂ ಬಿಟ್ಟರು. 'Demolition man’ ಎಂಬ ಹೆಸರು ಬಂದಿದ್ದೇ ಆಗ!

ಆದರೆ… ದಾವೂದನ ಹೆಸರು ಕೇಳಿದರೇ ಹೃದಯಾಘಾತಕ್ಕೊಳಗಾಗುವಂಥ ಕಾಲದಲ್ಲಿ ಗುಂಡಿಗೆ ತೋರಿದ್ದ ಖೈರ್ನಾರ್್ಗೆ ದೊರೆತ ಪ್ರತಿಫಲವೇನು ಗೊತ್ತೆ? ಮಹಾರಾಷ್ಟ್ರದ ಆಗಿನ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಎಂಬ ಹುಟ್ಟಾ ಭ್ರಷ್ಟ ಮನುಷ್ಯ ಖೈರ್ನಾರ್ ಅವರನ್ನೇ ಅಮಾನತ್ತು ಮಾಡಿದರು. ಅಧಿಕಾರದ ವ್ಯಾಪ್ತಿ ಮೀರಿದ್ದಾರೆಂದು ಶಿಕ್ಷಿಸಲು ಮುಂದಾದರು. ನ್ಯಾಯಾಂಗ ತನಿಖೆಗೆ ಆದೇಶ ನೀಡಿದರು. ಅಲ್ಲಿಂದ ಮುಂದೆ ಖೈರ್ನಾರ್ ಬದುಕು ನರಕಸದೃಶವಾಯಿತು. ಒಂದೆಡೆ ದಾವೂದನ ಕೋಪಕ್ಕೆ ತುತ್ತಾಗಿದ್ದರು, ಇನ್ನೊಂದೆಡೆ ಕಾಯಬೇಕಾದ ಸರ್ಕಾರವೇ ನಾಶಕ್ಕೆ ನಿಂತಿತ್ತು. ಯಾವ ಕ್ಷಣದಲ್ಲೂ ದಾವೂದ್ ಗುಂಪಿನ ಹಂತಕರ ಗುಂಡುಗಳು ಖೈರ್ನಾರ್ ಎದೆಯನ್ನು ಸೀಳಬಹುದು ಎಂಬ ಆತಂಕ ಸೃಷ್ಟಿಯಾಯಿತು. ಹದಿನೈದು ವರ್ಷಗಳಿಂದ ವಾಸವಾಗಿದ್ದ ಮನೆಯಿಂದಲೂ ಸರ್ಕಾರ ಅವರನ್ನು ಹೊರಹಾಕಿತು. 1974ರಲ್ಲಿ ಬೃಹನ್ ಮುಂಬೈ ಕಾರ್ಪೋರೇಷನ್ ಲೆಕ್ಕಿಗನಾಗಿ ಸೇರಿಕೊಂಡು ತನ್ನ ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಡೆಪ್ಯೂಟಿ ಕಮಿಷನರ್ ಹುದ್ದೆಗೇರಿದ್ದ, 1985ರಲ್ಲಿ ವಾರ್ಡ್ ಅಧಿಕಾರಿಯಾಗಿದ್ದಾಗ ಆಗಿನ ಮುಖ್ಯಮಂತ್ರಿ ವಸಂತ್ ದಾದಾ ಪಾಟೀಲ್ ಅವರ ಪುತ್ರ ಚಂದ್ರಕಾಂತ್ ನಡೆಸುತ್ತಿದ್ದ ‘ಖಡಿಜಠ ಐಟಿ’ ಹೊಟೇಲ್ ಅನ್ನು ಅಕ್ರಮ ಕಟ್ಟಡವೆಂಬ ಕಾರಣಕ್ಕೆ ನೆಲಸಮ ಮಾಡಿದ್ದ ಖೈರ್ನಾರ್ ಅವರನ್ನು ದಾವೂದನ ಅಪಾಯಕ್ಕೆ ದೂಡುವ ಮೂಲಕ ಶರದ್ ಪವಾರ್ ಸರ್ಕಾರ ಅಕ್ಷರಶಃ ಕೊಲ್ಲಲು ಮುಂದಾಯಿತು. 1995ರ ವಿಧಾನಸಭೆ ಚುನಾವಣೆಯಲ್ಲಿ ಖೈರ್ನಾರ್ ಅವರನ್ನು ನಡೆಸಿಕೊಂಡ ರೀತಿಯನ್ನೇ ಪ್ರಚಾರಾಂದೋಲನದ ಮುಖ್ಯ ವಿಷಯವಾಗಿಟ್ಟು ಕಣಕ್ಕಿಳಿಸಿದ ಬಿಜೆಪಿ-ಶಿವಸೇನೆ ಕಾಂಗ್ರೆಸ್ಸನ್ನು ಧೂಳಿಪಟ ಮಾಡಿದವು. ಆದರೇನಂತೆ ಖೈರ್ನಾರ್್ಗೆ ಸರಿಯಾದ ನ್ಯಾಯ ಸಿಗಲಿಲ್ಲ. 1997ರಲ್ಲಿ ಬಿಎಂಸಿ ವಿರುದ್ಧ ಕೇಸು ಗೆದ್ದರೂ ಖೈರ್ನಾರ್ ಅವರನ್ನು ಮತ್ತೆ ಡೆಪ್ಯೂಟಿ ಕಮಿಷನರ್ ಸ್ಥಾನಕ್ಕೆ ನೇಮಕ ಮಾಡಿದ್ದು ಮಾತ್ರ 2000ದಲ್ಲಿ! ಆ ವೇಳೆಗಾಗಲೇ ಖೈರ್ನಾರ್ ನಿವೃತ್ತಿಯ ಅಂಚಿಗೆ ಬಂದಿದ್ದರು. ಆದರೂ ಇಚ್ಛಾಶಕ್ಕಿ ಮಾತ್ರ ಕುಂದಿರಲಿಲ್ಲ. 2002ರವರೆಗೂ ಹುದ್ದೆಯಲ್ಲಿದ್ದ ಅವರು,Step In ಎಂಬ ಹೆಸರಿಗೆ ತಕ್ಕಂತೆ ಭೂ  ಮಾಫಿಯಾ ಹಾಗೂ ಭೂ ಒತ್ತುವರಿ ಮಾಡುವವರ ವಿರುದ್ಧ ಸಮರ ಸಾರಿದರು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಒತ್ತುವರಿಯಿಂದ ತೆರವುಗೊಳಿಸಿದರು.
he Lonely Fighter
ಇದು 1995ರಲ್ಲಿ ಅಮಾನತ್ತುಗೊಂಡಿದ್ದಾಗ ಖೈರ್ನಾರ್ ಮರಾಠಿಯಲ್ಲಿ ಬರೆದಿದ್ದ ತಮ್ಮ ಅತ್ಮಚರಿತ್ರೆಯ ಹೆಸರು. ಅವರು ಪ್ರಸಿದ್ಧರಾಗಿದ್ದೂ One-man demolition army ಎಂದೇ. ಒಂದು ವ್ಯವಸ್ಥೆ ಕುಸಿದಿರುವಾಗ, ಒಂದು ಸರ್ಕಾರವೇ ಮಾಫಿಯಾದ ಜತೆ ಕೈಜೋಡಿಸಿರುವಾಗಲೂ ಒಬ್ಬ ವ್ಯಕ್ತಿಯ ಇಚ್ಛಾಶಕ್ತಿ ಏನೆಲ್ಲ ಮಾಡಿಬಿಡಬಹುದು, ಸಮಾಜಕ್ಕೆ ಎಂತಹ ಮಾದರಿ ಹಾಕಿಕೊಡಬಹುದು ಎಂಬುದಕ್ಕೆ ಖೈರ್ನಾರ್ ಅವರೇ ಸಾಕ್ಷಿ. ಈ ಖೈರ್ನಾರ್ ಹೆಸರು ಮನೆಮಾತಾದ ಸಂದರ್ಭದಲ್ಲೇ ನಮ್ಮ ಕರ್ನಾಟಕದ ವ್ಯಕ್ತಿಯೊಬ್ಬರೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.
ಅವರೇ ಜಯಂತ್ ತಿನೈಕರ್!
ಬೆಳಗಾವಿ ಜಿಲ್ಲೆಯ ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ತಿನೈಕರ್ ಕ್ಯಾಂಟೀನ್ ನಡೆಸುತ್ತಾರೆ. ಅಬ್ದುಲ್ ಕರೀಂ ಲಾಲಾ ತೆಲಗಿ ಅಲ್ಲೇ ಫುಟ್ಪಾತ್ ಮೇಲೆ ಹಣ್ಣು ವ್ಯಾಪಾರ ಮಾಡುತ್ತಿದ್ದ. ಐವತ್ತು-ನೂರು ರೂಪಾಯಿ ಸಾಲ ಕೇಳಿಕೊಂಡು ತಿನೈಕರ್ ಬಳಿಗೇ ಬರುತ್ತಿದ್ದ. ಇಂತಹ ವ್ಯಕ್ತಿ ಇದ್ದಕ್ಕಿದ್ದಂತೆಯೇ ಮುಂಬೈಗೆ ಹೋದ, ಮೂರ್ನಾಲ್ಕು ವರ್ಷಗಳಲ್ಲೇ ಖಾನಾಪುರದಲ್ಲಿ 6 ಲಕ್ಷ ಬೆಲೆಯ ಆಸ್ತಿ ಖರೀದಿಗೆ ಮುಂದಾದ. ಅಷ್ಟೇ ಅಲ್ಲ, ಕಂಡ ಕಂಡ ಆಸ್ತಿ-ನಿವೇಶನಗಳನ್ನು ಖರೀದಿ ಮಾಡಲಾರಂಭಿಸಿದ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ತಿನೈಕರ್ ವಿಚಾರಿಸಿದಾಗ ತೆಲಗಿ ಮುಂಬೈನಲ್ಲಿ ನಕಲಿ ಛಾಪ ಕಾಗದ ಮಾರುತ್ತಿದ್ದಾನೆ ಎಂದು ಸ್ನೇಹಿತರೊಬ್ಬರು ಹೇಳಿದರು. ಆ ದೇಶದ್ರೋಹಿ ಕೆಲಸಕ್ಕೆ ತಡೆಹಾಕಬೇಕೆಂದು ತಿನೈಕರ್ ಕೂಡ ಬೆನ್ನುಬಿದ್ದರು. ಮುಂಬೈಗೆ ತೆರಳಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದರು. ಆದರೆ ಪ್ರಾರಂಭದಲ್ಲಿ ಅದಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಮತ್ತೆ ವಿಚಾರಿಸಿದಾಗ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. 1998ರಲ್ಲಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್್ಗೆ ದೂರಿ ಪತ್ರ ಬರೆದರು. ರಾಷ್ಟ್ರಪತಿ ಭವನದಿಂದ ಪ್ರತಿಕ್ರಿಯೆಯೂ ಬಂತು. ನಿಮ್ಮ ದೂರನ್ನು ರೈಲ್ವೆ ಇಲಾಖೆಗೆ ಕಳುಹಿಸಿದ್ದೇವೆ ಎಂದು ಅದರಲ್ಲಿ ತಿಳಿಸಲಾಗಿತ್ತು! ಅಲ್ಲಾ, ನಕಲಿ ಛಾಪಾ ಕಾಗದ ಹಗರಣಕ್ಕೂ ರೈಲ್ವೆ ಇಲಾಖೆಗೂ ಏನು ಸಂಬಂಧ? ಎಲ್ಲ ಹಂತಗಳಲ್ಲೂ ತಿನೈಕರ್್ಗೆ ಅಡಚಣೆ, ನಿರಾಸೆ ಎದುರಾದವು.
ಆದರೆ ತಿನೈಕರ್ ಬಯಲು ಮಾಡ ಹೊರಟಿದ್ದು ಇಡೀ ದೇಶವೇ ದಿಗ್ಭ್ರಮೆಗೀಡಾಗುವಂಥ ಹಗರಣವಾಗಿತ್ತು!
ಕೊನೆಗೂ 2000, ಆಗಸ್ಟ್ 19ರಂದು ಬೆಂಗಳೂರು ಪೊಲೀಸರು ಬದ್ರುದ್ದೀನ್ ಹಾಗೂ 13 ಜನರನ್ನು ಬಂಧಿಸಿದರು. 12 ಕೋಟಿ ಮೌಲ್ಯದ ನಕಲಿ ಸ್ಟ್ಯಾಂಪ್ ಪೇಪರ್ ಸಿಕ್ಕಿತು. ಆ ಘಟನೆ ತಿನೈಕರ್್ಗೆ ಮತ್ತಷ್ಟು ಅತ್ಮಬಲ ತಂದುಕೊಟ್ಟಿತು. ಇಡೀ ಹಗರಣದ ಮುಖ್ಯ ಪಿತೂರಿದಾರ ತೆಲಗಿಯನ್ನು ಪೊಲೀಸರಿಗೆ ಹಿಡಿದುಕೊಡಬೇಕೆಂಬ ಛಲವುಂಟಾಯಿತು. ಅದೇ ವೇಳೆಗೆ ಖಾನಾಪುರದಿಂದ ಅಜ್ಮೇರ್ ದರ್ಗಾಕ್ಕೆ ಯಾತ್ರೆಯೊಂದು ಹೊರಟಿತ್ತು. ಅದನ್ನು ಕರೀಂ ಲಾಲಾ ತೆಲಗಿಯೇ ಆಯೋಜಿಸಿದ್ದಾನೆ ಎಂದು ತಿಳಿಯಿತು. ಉಪಾಯವೊಂದನ್ನು ಮಾಡಿದ ತಿನೈಕರ್ ಆ ಯಾತ್ರೆಗೆ ತಮ್ಮ ವ್ಯಕ್ತಿಗಳನ್ನೂ ಕಳುಹಿಸಿಕೊಟ್ಟರು. ಅವರು ಅಜ್ಮೇರ್ ಯಾತ್ರೆಗೆ ತೆಲಗಿ ಕೂಡ ಬಂದಿದ್ದಾನೆಂಬ ವಿಷಯವನ್ನು ತಿಳಿಸಿದರು. ಜಯಂತ್ ತಿನೈಕರ್ ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದರು. 2001, ನವೆಂಬರ್ 7ರಂದು ಯಾತ್ರೆಯಲ್ಲಿದ್ದ ತೆಲಗಿಯನ್ನು ಬಂಧಿಸಲಾಯಿತು. ಸತ್ಯ ತೆರೆದುಕೊಳ್ಳುತ್ತಾ ಹೋಯಿತು. ಆತನ ಕಬಂಧ ಬಾಹುಗಳು 13 ರಾಜ್ಯಗಳಿಗೆ ಹರಡಿತ್ತು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳೇ ಅದರಲ್ಲಿ ಭಾಗಿಯಾಗಿದ್ದರು. ಆ ಜಾಲ 172 ಕಚೇರಿಗಳನ್ನು ಹೊಂದಿತ್ತು, 1000 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರು, 18 ನಗರಗಳಲ್ಲಿ 123 ಬ್ಯಾಂಕ್ ಖಾತೆ ಹೊಂದಿದ್ದವು. ಒಂದು ತಿಂಗಳ ವಹಿವಾಟು 172 ಕೋಟಿಯಾಗಿತ್ತು. ಒಟ್ಟು 320 ಶತಕೋಟಿ ಬೊಕ್ಕಸಕ್ಕೆ ನಷ್ಟವಾಗಿತ್ತು. ಅಂದು ಜೀವವನ್ನೇ ಅಪಾಯಕ್ಕೆ ಒಡ್ಡಿ ಇಂತಹ ಹಗರಣವನ್ನು ಬಯಲಿಗೆಳೆದಿದ್ದಕ್ಕಾಗಿ ತಿನೈಕರ್್ಗೆ ಸರ್ಕಾರ ಕೊಟ್ಟ ಬಳುವಳಿ ಏನು ಅಂದುಕೊಂಡಿರಿ?
2 ಸಾವಿರ ಚೆಕ್!
ಅದನ್ನು ಅಷ್ಟೇ ಗೌರವದಿಂದ ವಾಪಸ್ ಕಳುಹಿಸಿದ ತಿನೈಕರ್, ತಾವು ಮಾಡಿದ ಕಾರ್ಯದಲ್ಲೇ ತೃಪ್ತಿಪಟ್ಟುಕೊಂಡು, ಸಮಾಜ-ಸರ್ಕಾರಕ್ಕೆ ಸೇವೆ ಮಾಡಿದ ಧನ್ಯತೆಯಲ್ಲಿ ಇಂದು ಬದುಕು ನಡೆಸುತ್ತಿದ್ದಾರೆ.
ಇವರಿಬ್ಬರನ್ನು ಇಲ್ಲಿ ನೆನಪಿಸಿಕೊಳ್ಳಲು, ಇವರಿಬ್ಬರ ಕಥೆ ಹೇಳಲು ಮುಖ್ಯಕಾರಣ ಇವರಷ್ಟೇ ಗುಂಡಿಗೆ, ಇಚ್ಛಾಶಕ್ತಿ ಹೊಂದಿರುವ, ಒಂದು ಕೈ ಮೇಲು ಎನ್ನಬಹುದಾದ ನಮ್ಮ ಸಂಗಯ್ಯ ರಾಚಯ್ಯ ಹಿರೇಮಠ್!
ಬಹುಶಃ ಎಸ್.ಆರ್. ಹಿರೇಮಠ್ ಎಂದರೇ ಬಹುಬೇಗ ಅರ್ಥವಾಗಬಹುದು. ಇವತ್ತು ಜನಾರ್ದನ ರೆಡ್ಡಿ ಜೈಲು ಸೇರಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸಗಳ ಮೇಲೆ ಸಿಬಿಐ ದಾಳಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದರೆ ಅದರ ಬಹುಪಾಲು ಹೆಗ್ಗಳಿಕೆ ಸಲ್ಲಬೇಕಾಗಿರುವುದು ಹಿರೇಮಠ್ ಅವರಿಗೆ. ಒಂದು ಲೋಕಾಯುಕ್ತ ಸಂಸ್ಥೆಗೆ, ಆಳುವ ಸರ್ಕಾರಕ್ಕೆ ಆಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಇಂದು ರೆಡ್ಡಿ ಸಾಮ್ರಾಜ್ಯ ಪತನದ ಹಂತಕ್ಕೆ ಬಂದಿದ್ದರೆ ಅದಕ್ಕೆ ಪ್ರಮುಖ ಕಾರಣವೇ ಹಿರೇಮಠ್. ಮೂರ್ನಾಲ್ಕು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡಿ. ಗಣಿ ಲೂಟಿ, ಗಣಿ ಹಗರಣದ ಬಗ್ಗೆ ರಾಜಕೀಯ ಪಕ್ಷಗಳಿಂದ ಆರೋಪ-ಪ್ರತ್ಯಾರೋಪ, ಪತ್ರಿಕೆಗಳಲ್ಲಿ ಸಣ್ಣಪುಟ್ಟ ವರದಿಗಳಷ್ಟೇ ಕಾಣಸಿಗುತ್ತಿದ್ದವು. ಒಂದು ಗಟ್ಟಿ ಧ್ವನಿ ಯಾರಿಂದಲೂ ಕೇಳಿಬರುತ್ತಿರಲಿಲ್ಲ. ಗಣಿ ಧೂಳು ಬಿಜೆಪಿಗಿಂತಲೂ ಮೊದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಮೆತ್ತಿಕೊಂಡಿತ್ತು. ಈ ಪಕ್ಷಗಳಿಗೆ ಗಣಿ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇರಲಿಲ್ಲ. ಇತ್ತ ಜನಾರ್ದನ ರೆಡ್ಡಿಯ ಲೂಟಿಯನ್ನು ಖಂಡಿಸಿ ಬರೆಯುವ ಒಬ್ಬನೇ ಒಬ್ಬ ಪತ್ರಕರ್ತನೂ ಇರಲಿಲ್ಲ. ಅದರಲ್ಲೂ ಬಳ್ಳಾರಿ ಮೂಲದ ಟ್ಯಾಬ್ಲಾಯ್ಡ್ ಪತ್ರಕರ್ತನೊಬ್ಬನಂತೂ ಹಾಯ್ ಹಾಯ್ ಎಂದು ರೆಡ್ಡಿಗಳ ಏಜೆಂಟ್ ಆಗಿಬಿಟ್ಟಿದ್ದ. ಇಂತಹ ಪರಿಸ್ಥಿತಿ ರೆಡ್ಡಿಗೆ ಕಾನೂನು ಹೋರಾಟದ ಮೂಲಕ ಪಾಠ ಕಲಿಸಲು ಹೊರಟವರು ಹಿರೇಮಠ್. 2009ರಲ್ಲಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ಸುಪ್ರೀಂ ಕೋರ್ಟ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಕಿಐಔ) ಸಲ್ಲಿಸಿದರು. ಅದು 1274 ಪುಟಗಳಷ್ಟು ದಾಖಲೆ, ಪುರಾವೆಗಳನ್ನು ಹೊಂದಿತ್ತು. ಹೀಗೆ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಮುಂದಾದರೂ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳೇ ಮೈನಿಂಗ್ ಮಾಫಿಯಾ ಜತೆ ಕೈಜೋಡಿಸಿದ್ದರಿಂದ ಹಿರೇಮಠರ ಪ್ರಯತ್ನಕ್ಕೆ ಮೊದಮೊದಲಿಗೆ ಯಾವ ಫಲವೂ ದೊರೆಯಲಿಲ್ಲ. ಕೊನೆಗೆ ಕಿಐಔ ಬಗ್ಗೆ ಕ್ರಮಕ್ಕೆ ಮುಂದಾದ ಸುಪ್ರೀಂಕೋರ್ಟ್ ‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಈಊಈ)ಯನ್ನು ರಚಿಸಿ ವಸ್ತುಸ್ಥಿತಿಯ ಪರಾಮರ್ಶೆ ಹಾಗೂ ಸಾಕ್ಷ್ಯಗಳ ಸಂಗ್ರಹಣೆಗೆ ಆದೇಶ ನೀಡಿತು. ಆದರೇನಂತೆ ಭ್ರಷ್ಟರ ಸಾಲಿಗೆ ಸೇರಿರುವ ಕೆ.ಜಿ. ಬಾಲಕೃಷ್ಣನ್ ಸುಪ್ರೀಂ ಕೋರ್ಟ್್ನ ಮುಖ್ಯನ್ಯಾಯಾಧೀಶರಾಗಿರುವವರೆಗೂ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಹಿರೇಮಠರಿಗೆ ತಿಳಿಯಿತು. ಬಾಲಕೃಷ್ಣನ್ ನಿವೃತ್ತರಾಗುವವರೆಗೂ ಕಾದು, ಕಪಾಡಿಯಾ ಅವರು ಮುಖ್ಯ ನ್ಯಾಯಮೂರ್ತಿಗಳಾದ ಕೂಡಲೇ ಪ್ರಕರಣವನ್ನು ಸುಪ್ರೀಂ ಕೋರ್ಟ್್ನ ಹಸಿರು ಪೀಠದೆದುರು ತಂದರು. ರೆಡ್ಡಿಗೆ ನೀಡಿರುವ ಮೈನಿಂಗ್ ಪರವಾನಗಿಯನ್ನು ರದ್ದುಮಾಡಬೇಕೆಂದು ಕೋರಿ 499 ಪುಟಗಳ ಕಾರಣಸಹಿತ ಮನವಿಯನ್ನು ಇಟ್ಟರು. ಕರ್ನಾಟಕ-ಆಂಧ್ರ ಗಡಿ ಕುರುಹು ನಾಶ, ಸುಗ್ಗುಲಮ್ಮ ದೇವಾಲಯದ ನಾಶಗಳನ್ನು ಪುರಾವೆ ಸಮೇತ ತೋರಿಸಿದರು. ಕೇಂದ್ರ ಉನ್ನತಾಧಿಕಾರ ಸಮಿತಿ ಕೂಡ ಹಿರೇಮಠರು ಕೊಟ್ಟ ಸಾಕ್ಷ್ಯಗಳಿಗೆ ತಲೆದೂಗಿ ಪರವಾನಗಿ ರದ್ದಿಗೆ ಶಿಫಾರಸು ಮಾಡಿತು. ಜನಾರ್ದನ ರೆಡ್ಡಿಯ ಗ್ರಹಚಾರ ಕೆಡಲು ಆರಂಭವಾಗಿದ್ದೇ ಅಲ್ಲಿಂದ. ಲೈಸನ್ಸ್ ರದ್ದಾಯಿತು, ಸಿಬಿಐ ಬೆನ್ನು ಬಿತ್ತು, ರೆಡ್ಡಿ ಚಂಚಲಗುಡ ಜೈಲು ಸೇರಿದರು.
ಹಾಗಂತ ಹಿರೇಮಠರು ಯಡಿಯೂರಪ್ಪನವರನ್ನೂ ಬಿಡಲಿಲ್ಲ. ಲೋಕಾಯುಕ್ತ ನ್ಯಾಯಾಲಯದ ಎದುರು ದಾಖಲಿಸಲಾಗಿದ್ದ ಎಫ್್ಐಆರ್್ಗಳನ್ನು ರಾಜ್ಯ ಹೈಕೋರ್ಟ್್ನಲ್ಲಿ ಬರ್ಖಾಸ್ತುಗೊಳಿಸುವಲ್ಲಿ ಯಡ್ಡಿ ಯಶಸ್ವಿಯಾದರೂ ಹಿರೇಮಠರು ಆ ವೇಳೆಗಾಗಲೇ ಚುನಾವಣಾ ಆಯೋಗ, ಕೇಂದ್ರ ಉನ್ನತಾಧಿಕಾರ ಸಮಿತಿ ಹಾಗೂ ಸುಪ್ರೀಂ ಕೋರ್ಟ್್ನ ಕದ ತಟ್ಟಿದ್ದರು. ಇವತ್ತು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬಿಐ ದಾಳಿಗೆ ಗುರಿಯಾದ ಮೊದಲ ಮುಖ್ಯಮಂತ್ರಿಯೆಂಬ ಅಪಖ್ಯಾತಿಗೆ ಯಡ್ಡಿ ಗುರಿಯಾಗಿದ್ದರೆ, ಅವರು ಮತ್ತೆ ಜೈಲು ಸೇರಿದರೆ ಅದರ ಹಿಂದೆ ಹಿರೇಮಠರ ಶ್ರಮ, ಸತತ ಪ್ರಯತ್ನವಿದೆ. ಇರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ಇಟ್ಟುಕೊಂಡು ಬದಲಾವಣೆಯನ್ನು ತರಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡುತ್ತಿದ್ದಾರೆ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸುತ್ತಿದ್ದಾರೆ.
ಈ ಹಿರೇಮಠರು ಸಾಮಾನ್ಯ ವ್ಯಕ್ತಿ ಅಂದುಕೊಳ್ಳಬೇಡಿ.
1944ರಲ್ಲಿ ಧಾರವಾಡದ ಬೆಳವಂಕಿಯಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಉನ್ನತ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ತೆರಳಿ 1969ರಲ್ಲಿ ಎಂಎಸ್ ಪೂರೈಸಿದರು. ಅದು ಸಾಲದೆಂಬಂತೆ ಅಮೆರಿಕದಲ್ಲೇ ಎಂಬಿಎ ಮಾಡಿದರು. ಸುಮಾರು 10 ವರ್ಷಗಳ ಕಾಲ ಅಮೆರಿಕದಲ್ಲಿ ಸೇವೆ ಸಲ್ಲಿಸಿದ ಅವರು, ತಾಯ್ನಾಡಿಗೆ ಮರಳಿ 1984ರಲ್ಲಿ ಧಾರವಾಡದಲ್ಲಿ “ಸಮಾಜ ಪರಿವರ್ತನಾ ಸಮುದಾಯ” ಎಂಬ ಸಂಘಟನೆಯನ್ನು ಆರಂಭಿಸಿದರು. ಆದರ ಮೂಲಕ ಪರಿಸರ, ಪಂಚಾಯತ್ ರಾಜ್ ಸಂಬಂಧಿ ಹೋರಾಟಗಳನ್ನು ನಡೆಸಿದರು. ಅದಕ್ಕೆ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರವೂ ದೊರೆಯಿತು. ನಂತರ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದರು. ಇವತ್ತು ಮೈನಿಂಗ್ ಮೇಲೆ ನಿಷೇಧ ಹೇರಿದ್ದರೆ, ಅಕ್ರಮ ಗಣಿಗಾರಿಕೆ ನಿಂತಿದ್ದರೆ, ಗಣಿ ದುಡ್ಡು ರಾಜಕಾರಣ ಹಾಗೂ ಸರ್ಕಾರದ ಮೇಲೆ ಸವಾರಿ ಮಾಡುವುದು ನಿಯಂತ್ರಣವಾಗುತ್ತಿದ್ದರೆ, ಚಿತ್ರದುರ್ಗ-ತುಮಕೂರುಗಳೂ ಬಳ್ಳಾರಿಯಂತಾಗುವುದಕ್ಕೆ ಕಡಿವಾಣ ಬಿದ್ದಿದ್ದರೆ ಅದಕ್ಕೆ ಎಸ್.ಆರ್. ಹಿರೇಮಠರು ಕಾರಣ. ಉತ್ತರ ಕರ್ನಾಟಕವನ್ನು ‘ಗಂಡುಮೆಟ್ಟಿದ ನಾಡು’ ಎನ್ನುತ್ತಾರೆ. ಅಂತಹ ನಾಡಿನಲ್ಲಿ ಹುಟ್ಟಿರುವ ಗಂಡುಮಗ ಹಿರೇಮಠ. ಇಂದು ನಮ್ಮ ಮಠಮಾನ್ಯಗಳು, ಸ್ವಾಮೀಜಿಗಳು ಭ್ರಷ್ಟರಾಜಕಾರಣಿಗಳ ಜತೆ ಕೈಜೋಡಿಸಿರುವುದನ್ನು ಕಾಣುತ್ತಿದ್ದೇವೆ. ಶಮಂತಕ ಮಣಿಯನ್ನು ಕದ್ದ ಆರೋಪ ಬಂದಾಗ ಅದನ್ನು ತಂದೊಪ್ಪಿಸುವವರೆಗೂ ರಾಜ್ಯ ಪ್ರವೇಶ ಮಾಡುವುದಿಲ್ಲ ಎಂದು ಶಪಥ ಮಾಡಿದ, ತಂದೊಪ್ಪಿಸಿ ಕಳಂಕ ನಿವಾರಣೆ ಮಾಡಿಕೊಂಡ ಶ್ರೀಕೃಷ್ಣನ ಪದತಲದಲ್ಲಿ ಕುಳಿತು ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಗೆ ಮತ್ತೆ ಗದ್ದುಗೆ ಕೊಡಬೇಕೆಂದು ಪ್ರತಿಪಾದಿಸುತ್ತಿರುವ, ಭ್ರಷ್ಟರ ವಕಾಲತ್ತು ವಹಿಸುವ, ಸುಪ್ರೀಂ ಕೋರ್ಟ್್ನಿಂದಲೇ ಕಳಂಕಿತಳೆನಿಸಿಕೊಂಡಿರುವ ರಾಡಿಯಾಳಿಂದ 2 ಕೋಟಿ ಪಡೆದುಕೊಂಡ ಸ್ವಾಮಿಗಳು ನಮ್ಮ ನಡುವೆ ಇರುವ ಈ ಸಂದರ್ಭದಲ್ಲಿ ಸಮಾಜಕಾರ್ಯ ಮಾಡಬೇಕಾದ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಬೇಕಾದ ಮಠಗಳ ಕೆಲಸವನ್ನು ಹಿರೇಮಠರು ಮಾಡುತ್ತಿದ್ದಾರೆ. ನಮ್ಮ ಸಮಾಜ ನಿಜಕ್ಕೂ ಗುರುವಂದನೆ ಮಾಡಬೇಕಿರುವುದು ಖೈರ್ನಾರ್, ತಿನೈಕರ್ ಹಾಗೂ ಹಿರೇಮಠರಿಗೆ ಹೊರತು ಗಣಿ ಧೂಳು ಅಂಟಿರುವ ರಾಜಕಾರಣಿಗಳ ಕೈಯಿಂದ ಪಾದದ ಧೂಳು ತೊಳೆಸಿಕೊಳ್ಳುವ ಸ್ವಾಮೀಜಿಗಳಿಗಲ್ಲ! ಇಷ್ಟಕ್ಕೂ ಆ ಮಠ, ಈ ಮಠ ಏಕೆ, ಹಿರೇಮಠ ಇರುವಾಗ?
 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ