ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜೂನ್ 2, 2012

ಮನದ ಬಾಗಿಲೇ ಮುಚ್ಚಿರುವಾಗ ಗುಡಿಗಳ ಕದ ತೆರೆಯುವರೆ? - ಪ್ರತಾಪ ಸಿಂಹ

ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ.
ಗುರುಗಳು: ನಾರಾಯಣ
ನಂಬೂದರಿ: ನಿಮ್ಮ ಜಾತಿ?
ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ?
ನಂಬೂದರಿ: ಉಹೂಂ
ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.

ವಿಶ್ವಧರ್ಮ ಸಮ್ಮೇಳನಕ್ಕೆ ತೆರಳುವ ಮೊದಲು, ಅಂದರೆ 1892ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟ ಸ್ವಾಮಿ ವಿವೇಕಾನಂದರು ಅಲ್ಲಿನ ಜಾತಿಯತೆಯನ್ನು ಕಂಡು”I have wandered into a lunatic asylum!’ ಎಂದು ಕೋಪದಿಂದ ನುಡಿಯುತ್ತಾರೆ. ಅಂತಹ ಕೇರಳದಲ್ಲಿ ತೀರಾ ಕೆಳಜಾತಿಯಾದ ಇಳವ ಸಮುದಾಯದಲ್ಲಿ ಹುಟ್ಟಿದವರು ನಾರಾಯಣ ಗುರುಗಳು. ಆದರೂ ಸಂಸ್ಕೃತದಲ್ಲಿ ಆಳವಾದ ಅಧ್ಯಯನ ಮಾಡಿಕೊಂಡಿದ್ದರು. ವೇದ, ಶಾಸ್ತ್ರ, ಉಪನಿಷತ್ತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದರು, ಶಂಕರಾಚಾರ್ಯರಿಂದ ಪ್ರಭಾವಿತರಾಗಿದ್ದರು. ಆ ಕಾಲದಲ್ಲಿ ಕೇರಳದಲ್ಲಿ ಕೆಳಜಾತಿಯ ಹಿಂದೂಗಳಿಗೆ ದೇವಾಲಯಗಳಿಗೆ ಪ್ರವೇಶವಿರಲಿಲ್ಲ. ಹಾಗಾಗಿ ಒಂದು ದೇವಾಲಯವನ್ನು ಕಟ್ಟಿಸಬೇಕೆಂದು ಯೋಚಿಸಿದರು. ತಮ್ಮದೇ ಎಂಬ ಅಭಿಮಾನದಿಂದ, ಯಾರ ಭಯವೂ ಇಲ್ಲದೆ ಪ್ರಾರ್ಥನೆ ಮಾಡಬಲ್ಲ, ಸ್ನಾನಾದಿಗಳಿಂದ ಶುಚಿರ್ಭೂತರಾಗಿ, ಫಲಪುಷ್ಪಾದಿಗಳಿಂದ ಪೂಜಿಸುವ ಸಾತ್ವಿಕ ಮೂರ್ತಿಯನ್ನೊಳಗೊಂಡ ದೇವಸ್ಥಾನದ ನಿರ್ಮಾಣದಿಂದ ಹಿಂದೂ ಕೆಳವರ್ಗದವರಲ್ಲೂ ಸ್ವಾಭಿಮಾನ ಜಾಗೃತಗೊಳಿಸಲು ಮುಂದಾದರು. ಅರುವಿಪುರಂನಲ್ಲಿ ದೇವಾಲಯವೂ ಸಿದ್ಧವಾಯಿತು. 1888, ಶಿವರಾತ್ರಿಯಂದು ಮೂರ್ತಿ ಪ್ರತಿಷ್ಠಾಪನೆ ನಿಗದಿಯಾಯಿತು. ಅಂದು ಶ್ರೀನಾರಾಯಣ ಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು. ಯಾರ ಹಂಗೂ ಇಲ್ಲದೆ ತೀರ್ಥ, ಪ್ರಸಾದಗಳ ವಿತರಣೆಯಾಯಿತು, ಗುರುಗಳ ಹೃದಯ ಭಾರವಾಯಿತು, ಗಂಟಲ ನರಗಳು ಉಬ್ಬಿದವು, ಕಣ್ಣುಗಳು ಮಂಜಾದವು, ಆಗಸದತ್ತ ಮುಖ ಮಾಡಿದ ಅವರು”ಶಿವನೇ ಮಂಗಳವನ್ನು ದಯಪಾಲಿಸು, ದೀನರೂ ದಲಿತರೂ ಸಹ ಸುಖವನ್ನು ಕಾಣಲಿ, ಅವರಿಗೂ ಅಭಿವೃದ್ಧಿಯನ್ನು ಕರುಣಿಸು, ಜನರು ಸತ್ಯವಂತರಾಗಲಿ, ಧರ್ಮನಿಷ್ಠರಾಗಲಿ, ಅವರಲ್ಲಿ ಪರಸ್ಪರ ದ್ವೇಷಾಸೂಯೆಯ ಭಾವನೆಗಳು ಬಾರದಿರಲಿ, ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲದೃಷ್ಟಿ ಬೆಳೆಯಲಿ’ ಎಂದು ಕೈಮುಗಿದು ಕೇಳಿದರು.
ಈ ಘಟನೆ ನಡೆದು 124 ವರ್ಷಗಳಾದವು. ಆದರೆ, ಪರಿಸ್ಥಿತಿ ಬದಲಾಗಿದೆಯೇ?
ಮೊನ್ನೆ ಮೇ 2ರಂದು ಆಂಧ್ರಪ್ರದೇಶದ ವೈ.ಎಸ್. ಜಗನ್ಮೋಹನ್್ರೆಡ್ಡಿಯವರು ಪ್ರಸಿದ್ಧ ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಹಿಂದೂಯೇತರರು ದೇವಾಲಯ ಪ್ರವೇಶಿಸುವ ಮೊದಲು,”ನನಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿದೆ’ ಎಂದು ಬರೆಯಬೇಕು. ಕ್ಯಾಥೋಲಿಕ್ ಕ್ರೈಸ್ತರಾದ ಜಗನ್ಮೋಹನ್್ರೆಡ್ಡಿ ಬರೆದಿಲ್ಲ ಎಂಬ ಕಾರಣಕ್ಕೆ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. 2009ರಲ್ಲಿ ಭೇಟಿ ಕೊಟ್ಟಾಗಲೇ ಬರೆದಾಗಿದೆ, ಪ್ರತಿ ಬಾರಿಯೂ ಬರೆಯಬೇಕಿಲ್ಲ ಎಂದು ಅವರ ಅನುಯಾಯಿಗಳು ಹೇಳುತ್ತಿದ್ದರೂ ದೇವಾಲಯದ ಆಡಳಿತ ಮಂಡಳಿ ತನಿಖೆಗೆ ಆದೇಶ ನೀಡಿದೆ! ಇತ್ತ 2012, ಜನವರಿ 16ರಂದು ನಡೆದ ಶ್ರೀ ನಾರಾಯಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್,”ಖ್ಯಾತ ಗಾಯಕ ಕೆ.ಜೆ. ಯೇಸುದಾಸ್ ಅವರಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಾಲಯ ಪ್ರವೇಶಿಸಲು ಮುಕ್ತ ಅವಕಾಶ ಮಾಡಿಕೊಡಬೇಕು. ಆ ಮೂಲಕ ಖ್ಯಾತ ಗಾಯಕನ ಇಚ್ಛೆಯನ್ನು ಪೂರೈಸಬೇಕು’ ಎಂದು ಕರೆ ನೀಡಿದ್ದಾರೆ. 2006ರಲ್ಲಿ ಮಲೆಯಾಳಂ ಚಿತ್ರನಟಿ ಹಾಗೂ ಕನ್ನಡದಲ್ಲೂ ನಟಿಸಿರುವ ಕ್ರೈಸ್ತಳಾದ ಮೀರಾ ಜಾಸ್ಮಿನ್ ಗುರುವಾಯೂರು ದೇವಾಲಯಕ್ಕೆ ಭೇಟಿ ಕೊಟ್ಟು ತೆರಳಿದ ಮರುಕ್ಷಣದಲ್ಲೇ ಶುದ್ಧೀಕರಣ ಮಾಡಿದ್ದರು. ಪ್ರಸ್ತುತ ಕೇಂದ್ರ ಸಚಿವರಾಗಿರುವ ವಯಲಾರ್ ರವಿ ಅವರು 2006ರಲ್ಲಿ ತಮ್ಮ ಮೊಮ್ಮಗನಿಗೆ ಮೊದಲ ಗುಟುಕು (First feeding) ಕೊಡುವ ಕಾರ್ಯಕ್ರಮವನ್ನು ಗುರುವಾಯೂರು ದೇವಾಲಯದಲ್ಲಿ ಹಮ್ಮಿಕೊಂಡಿದ್ದರು. ಅದು ಮುಗಿದ ಬೆನ್ನಲ್ಲೇ ಮುಖ್ಯ ತಂತ್ರಿ (ಅರ್ಚಕ) ರಾಮನ್ ನಂಬೂದಿರಿ ಇಡೀ ದೇವಾಲಯವನ್ನು ಶುದ್ಧೀಕರಣ ಮಾಡಿದ್ದರು. ಏಕೆಂದರೆ ಮಗುವಿನ ಅಜ್ಜಿ, ಅಂದರೆ ವಯಲಾರ್ ರವಿ ಹೆಂಡತಿ ಮರ್ಸಿ ಕ್ರೈಸ್ತರು ಎಂಬ ಕಾರಣಕ್ಕೆ. ರವಿ ಪುತ್ರ ಕೃಷ್ಣ ಅವರ ಮದುವೆ ಇಲ್ಲೇ ನಡೆದಾಗಲೂ ಅದೇ ಕೆಲಸ ಮಾಡಲಾಗಿತ್ತು. ಇದರಿಂದ ನೊಂದ ವಯಲಾರ್ ರವಿ, “ನನ್ನ ಮಗ ಮದುವೆಯಾಗಿದ್ದು ಹಿಂದೂ ಯುವತಿಯನ್ನೇ. ಆದರೂ ಶುದ್ಧೀಕರಣ ಮಾಡಿದ್ದರು. ನನ್ನ ಮುಂದಿನ ತಲೆಮಾರು, ಅಂದರೆ ನನ್ನ ಮೊಮ್ಮಗ ಹಿಂದೂ ಅಪ್ಪ-ಅಮ್ಮನಿಗೆ ಜನಿಸಿದ್ದರೂ ಶುದ್ಧೀಕರಣ ಮಾಡಿದ್ದಾರೆ. ಇಳವರಾದ ನಮಗೆ ಜಾತಿ-ಧರ್ಮ ಬರುವುದು ತಂದೆ ಕಡೆಯಿಂದ. ನನ್ನ ಮಗ ಕೃಷ್ಣ ಹಿಂದೂವೇ ಆಗಿದ್ದಾನೆ. ಇಷ್ಟಕ್ಕೂ ನಾವೇಕೆ ಗುರುವಾಯೂರಿಗೆ ಬಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರೆ ನನ್ನ ಮೊದಲ ಮೊಮ್ಮಗು ತೀರಿಕೊಂಡಿತ್ತು. ಗುರುವಾಯೂರಪ್ಪನಿಗೆ ಹರಕೆ ಮಾಡಿಕೊಂಡ ನಂತರ ಜನಿಸಿದ ಮಗು ಇದು. ಆ ಮಗುವನ್ನೂ ಈ ರೀತಿ ಕಾಣಬೇಕೆ?’ ಎಂದು ಕಣ್ಣೀರಿಡುತ್ತಾ ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಎಂಬತ್ತು ವರ್ಷಗಳ ಹಿಂದೆ ಇದೇ ದೇವಾಲಯದ ಎದುರು ಪ್ರವೇಶ ನಿರಾಕರಿಸಿದ ಕಾರಣ ದಲಿತರು ಸತ್ಯಾಗ್ರಹ ಮಾಡಿದ್ದರು. ಅಷ್ಟೇಕೆ, ಪ್ರಧಾನಿ ಇಂದಿರಾ ಗಾಂಧಿಯವರು ಪುರಿಯ ಜಗನ್ನಾಥ ಮಂದಿರದ ಭೇಟಿಗೆ ಹೋದಾಗ ಆಕೆ ಪಾರ್ಸಿಯನ್ನು ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ ಹಿಂದಕ್ಕಟ್ಟಿದ್ದರು.
ಇಂತಹ ಧೋರಣೆ ವಿರುದ್ಧ ನಮ್ಮ ಯಾವ ಸೋಕಾಲ್ಡ್ ಹಿಂದೂ ಸಂತರೂ ಧ್ವನಿಯೆತ್ತುವುದಿಲ್ಲ, ಏಕೆ?
ಮೊನ್ನೆ ಜಗನ್ಮೋಹನ ರೆಡ್ಡಿಯ ತಿರುಪತಿ ಭೇಟಿಯ ಸಂಬಂಧ ವಿವಾದವೆದ್ದಾಗ ನಮ್ಮ ಯಾವ ಸನ್ಯಾಸಿ ಆ ಸಂಕುಚಿತ ಮನಸ್ಥಿತಿಯನ್ನು ಖಂಡಿಸಿದರು ಹೇಳಿ? ನಂಬಿಕೆ ಇಟ್ಟೇ ದೇವಾಲಯಕ್ಕೆ ಬರಬೇಕೆ? ಕುತೂಹಲದಿಂದ ಬಂದು ನಂತರ ಪ್ರಭಾವಿತರಾಗುವುದಕ್ಕೆ ಅವಕಾಶವನ್ನೇ ನೀಡಬಾರದೆ? ಈ Rituals, ವಿಧಿವಿಧಾನ ಎಂದರೇನು? ಇವುಗಳನ್ನು ಮಾಡಿದ್ದು ಯಾರು? ಪೂಜ್ಯ ಸ್ಥಳಗಳಿಗೆ ಬರುವವರು ಸ್ನಾನ ಮಾಡಿರಬೇಕು, ಶುಚಿತ್ವ ಕಾಪಾಡಬೇಕು ಎಂದು ನಿರೀಕ್ಷಿಸುವುದು ಸಹಜ. ವಿಧಿ-ವಿಧಾನ, ನಿಯಮಗಳ ಹೆಸರಿನಲ್ಲಿ ಧರ್ಮ, ದೇವಾಲಯಗಳನ್ನು”Exclusive‘ ಮಾಡುತ್ತಾ ಹೋದರೆ ಅದು ಹೇಗೆ ಧರ್ಮವಾಗಿ ಉಳಿದೀತು? ಇವತ್ತು ನಮ್ಮ ಧರ್ಮದ ಪರಿಸ್ಥಿತಿ ಹೇಗಿದೆಯೆಂದರೆ ಯಾರಾದರೂ ಹಿಂದೂವಾಗಬೇಕೆಂದು ಬಂದರೂ ಸಾಧ್ಯವಿಲ್ಲ. ಏಕೆಂದರೆ ಆತ ಹಿಂದೂಗಳಲ್ಲಿ ಯಾವ ಜಾತಿ ಸೇರಬೇಕು?! ಅಯ್ಯಪ್ಪ ಸ್ವಾಮಿಯ ದೇವಾಲಯ ಜಾತಿ-ಮತ ತಾರತಮ್ಯವಿಲ್ಲದೆ ಎಲ್ಲರಿಗೂ ತೆರೆದಿರುವುದರಿಂದ ಅಯಪ್ಪನನ್ನು ಆರಾಧಿಸುವ ಕ್ರೈಸ್ತರು, ಮುಸ್ಲಿಮರನ್ನೂ ಇಂದು ಕಾಣಬಹುದಾಗಿದೆ. ಇದರಿಂದ ಹಿಂದೂ ಧರ್ಮಕ್ಕೇ ಹೆಗ್ಗಳಿಕೆಯಲ್ಲವೇ? ಒಂದು ಧರ್ಮವೆನ್ನುವುದೂ”Exclusive‘ ಆಗಬೇಕಾ?
ಒಮ್ಮೆ ತಮ್ಮ ಧರ್ಮದ ಹಿರಿಮೆಯ ಬಗೆಗೆ ತಿಳಿಸಿಕೊಡಬೇಕೆಂದು ಬಯಸಿ ಕ್ರೈಸ್ತ ಪಾದ್ರಿಗಳು ನಾರಾಯಣ ಗುರುಗಳ ಬಳಿಗೆ ಹೋದರು. ನಿಮ್ಮ ಮತದ ಬಗ್ಗೆ ತಿಳಿದುಕೊಳ್ಳಬೇಕೆಂದು ನನಗೂ ಆಸೆಯಿದೆ ಎಂದ ಗುರುಗಳು, ನಿಮ್ಮ ಧರ್ಮದ ಮುಖ್ಯ ಸಂದೇಶವೇನು ಎಂದು ಕೇಳಿದರು. ಅದಕ್ಕೆ”ಯೇಸುಕ್ರಿಸ್ತನ ಸಂದೇಶವನ್ನು ಸಾರುವುದೇ ನಮ್ಮ ಕಾರ್ಯ. ಯೇಸುಕ್ರಿಸ್ತನು ಮನುಷ್ಯನ ಪಾಪಮುಕ್ತಿಗಾಗಿ ಆವತರಿಸಿದನು ಎಂಬುದೇ ನಮ್ಮ ಮತದ ತತ್ವ’ ಎಂದರು.
ಗುರುಗಳು: ಅಂದರೆ ಯೇಸುವಿನ ಜನನದಿಂದ ಪ್ರಪಂಚದ ಪಾಪ ನಾಶವಾಯಿತು ಎಂದಲ್ಲವೆ?
ಪಾದ್ರಿಗಳು: ಹೌದು
ಗುರುಗಳು: ಹಾಗಿದ್ದರೆ ಈಗ ನಾವೆಲ್ಲರು ಪಾಪರಹಿತರು ತಾನೇ?
ಪಾದ್ರಿಗಳು: ಹೌದು
ಗುರುಗಳು: ಅಂದ ಮೇಲೆ ನಾವು ನಿಮ್ಮ ತತ್ವವನ್ನು ನಂಬಲಿ ಬಿಡಲಿ ನಮಗೆ ಮೋಕ್ಷ ದೊರಕಬೇಕಲ್ಲವೆ?
ಪಾದ್ರಿಗಳು: ಹಾಗಲ್ಲ, ಯೇಸುವಿನ ತತ್ವವನ್ನು ನಂಬಿದರೆ ಮಾತ್ರ ಮೋಕ್ಷ ದೊರಕುತ್ತದೆ, ಇಲ್ಲವಾದರೆ ಸಿಗದು.
ಗುರುಗಳು: ಹಾಗಾದರೆ ಯೇಸುಕ್ರಿಸ್ತನ ಜನನದಿಂದ ಮನುಷ್ಯನ ಪಾಪ ಪರಿಹಾರವಾಗಲಿಲ್ಲ ಎಂದು ನೀವೇ ಒಪ್ಪಿಕೊಂಡಂತಾಯಿತಲ್ಲವೆ?
ಹಾಗೆಂದು ಗುರುಗಳು ಪ್ರಶ್ನಿಸಿದಾಗ ಪಾದ್ರಿಗಳು ನಿರುತ್ತರರಾದರು. ಯೇಸುಕ್ರಿಸ್ತನ ತತ್ವವನ್ನು ನಂಬಿದರಷ್ಟೇ ಮೋಕ್ಷ ಎಂದು ಪ್ರತಿಪಾದಿಸುವ ಪಾದ್ರಿಗಳಂತೆಯೇ ಜಾತಿಯಿಂದಲೇ ಶ್ರೇಷ್ಠರೆಂಬಂತೆ ಬೀಗುತ್ತಿರುವ ಮನಸ್ಸುಗಳು ಹಿಂದೂ ಧರ್ಮದ ಒಡಕಿಗೆ ಕಾರಣವಾಗಿವೆ. ಇಂತಹ ಮನಸ್ಸುಗಳೇ ಮಾಂಸಾಹಾರ, ಸಸ್ಯಾಹಾರ, ಸಹಪಂಕ್ತಿ ಭೋಜನ ಸಲ್ಲ ಎಂದು ಹಿಂದೂ ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿರುವುದು. ಇಷ್ಟಕ್ಕೂ Knowledge Based Economy ಬಂದಿರುವಾಗ ಜಾತಿ ಅನ್ನುವುದು ಇಂದಿಗೂ ಪ್ರಸ್ತುತವೇ? ಜಾತಿಯ ಆಧಾರದ ಮೇಲೆ ಒಬ್ಬ ವ್ಯಕ್ತಿ ಮೇಲು-ಕೀಳು, ಉಚ್ಚ-ನೀಚ ಎಂದು ಅಳೆಯಲಾದೀತೆ? ಜಾತಿಯೇ ಶ್ರೇಷ್ಠತೆಯ ಮಾನದಂಡವೇ? ಮುಸ್ಲಿಮರು, ಕ್ರೈಸ್ತರ ದೌರ್ಜನ್ಯದ ಬಗ್ಗೆ ಬರೆದಾಗ ಬಾಯಿಚಪ್ಪರಿಸಿ ಓದುವ ಮಂದಿ ಜಾತಿವಾದದ ವಿರುದ್ಧ ಮಾತನಾಡಿದರೆ ಸಿಡಿದೇಳುವುದೇಕೆ?
ಇಷ್ಟಕ್ಕೂ Knowledge Based Economy, ಆಂತರಿಕ ಶುದ್ಧಿ, ಸರಿಪಡಿಸುವಿಕೆ ಅನ್ನುವುದೇ ಆಗಬಾರದಾ?
ಹನ್ನೆರಡನೇ ಶತಮಾನದ ಬಸವಣ್ಣ, ಅದಕ್ಕೂ ಮೊದಲು ಬಂದ ಬುದ್ಧ, ಮಹಾವೀರರು ಇಂತಹ ಇಂಟರ್್ನಲ್ ಕರೆಕ್ಷನ್್ಗಳೇ ಎನ್ನುತ್ತಾರೆ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್. ಪೃಥ್ವಿಮಾತಾ ದ್ಯೌಃ ಪಿತಾ ಎಂದು ಹೇಳುವ ವೇದಗಳು ಜಾತಿಯನ್ನು ಸೃಷ್ಟಿಸಿದ್ದವೆ? ಇನ್ನು ಕೆಲವರು ಆಹಾರ ಪದ್ಧತಿಯ ಹೆಸರಿನಲ್ಲಿ ಮಾಡುತ್ತಿರುವ ತಾರತಮ್ಯಕ್ಕೆ ವೈದ್ಯಕೀಯ ಕಾರಣಗಳನ್ನು ತಳುಕು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಸಸ್ಯಾಹಾರಿಗಳೇನು ಮಾಂಸಾಹಾರಿಗಳಿಂತ ಹೆಚ್ಚು ಕಾಲ ಹಾಗೂ ಆರೋಗ್ಯಯುತವಾಗಿ ಬದುಕುತ್ತಾರೆಯೇ? ಜಗತ್ತಿನಲ್ಲಿಯೇ ಅತಿ ಹೆಚ್ಚು ದೀರ್ಘಾಯುಷಿಗಳಿರುವ ಜಪಾನ್ ಮಾಂಸಾಹಾರಿಗಳ ದೇಶವಲ್ಲವೆ? ಸಹಪಂಕ್ತಿ ಭೋಜನ ವಿಚಾರದಲ್ಲಿ ಎದ್ದಿರುವ ವಿವಾದದ ಬಗ್ಗೆ ಮೈಸೂರಿನ ವಕೀಲರಾದ ಪಿ.ಜೆ. ರಾಘವೇಂದ್ರ ಅವರು ಒಂದು ಮಾರ್ಮಿಕ ಕಥೆಯನ್ನು ಕಳುಹಿಸಿದ್ದರು.
“ಅದೊಂದು ಮನೆ. ಆ ಮನೆಯೊಳಗೊಂದು ಗುಬ್ಬಿಗೂಡು. ಆ ಗೂಡಿನಲ್ಲಿ ಗುಬ್ಬಿಯ ಸಂಸಾರ. ಮೊಟ್ಟೆಯಿಂದ ಹೊರಬಂದ ಗುಬ್ಬಿಮರಿಗೆ ಪ್ರಪಂಚ ನೋಡುವ ಕಾತುರ. ಆದರೆ ತಾಯಿಗುಬ್ಬಿ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ತಾಯಿ ಗುಬ್ಬಿ ಆಹಾರವನ್ನರಸಿ ಹೊರಗೆ ಹೋಗಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡ ಮರಿಗುಬ್ಬಿ ಗೂಡಿನಿಂದ ಹೊರಬಿದ್ದು ಅಂಗಳಕ್ಕೆ ಬಂತು. ಅಂಗಳದಿಂದ ಮನೆಯ ಹೊರಗೆ ಕಾಲಿಟ್ಟಿತು. ಈ ಗುಬ್ಬಿಯ ಮರಿಯಂತೆಯೇ ಕಾಗೆಯ ಮರಿಯೊಂದು ತನ್ನ ಗೂಡಿನ ಹೊರ ಬಂದು ಗುಬ್ಬಿಮರಿಯನ್ನು ನೋಡಿತು. ಸಂತಸದಿಂದ ಗುಬ್ಬಿ ಮತ್ತು ಕಾಗೆಯ ಮರಿಗಳು ಆಟವಾಡಿದವು. ಆಟದಲ್ಲಿ ತಲ್ಲೀನವಾಗಿ ತಮ್ಮನ್ನು ತಾವು ಮರೆತವು. ಸ್ನೇಹದ ಸುಖ ಉಂಡವು. ಆಟವಾಡುತ್ತಾ ಸಮಯ ಕಳೆದದ್ದೇ ಗೊತ್ತಾಗಿಲ್ಲ ಪಾಪ ಆ ಮರಿಗಳಿಗೆ!
ತಕ್ಷಣ ಎಚ್ಚೆತ್ತ ಆ ಪುಟ್ಟ ಪುಟ್ಟ ಮರಿಗಳು ತಮ್ಮ ತಮ್ಮ ಗೂಡು ಸೇರಿದವು. ಗೂಡು ಸೇರಿದ ಗುಬ್ಬಿಗೆ ಸಂತಸದ ಅನುಭವ. ಕಾಗೆಮರಿಯೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಾ ಖುಷಿಯಿಂದ ಬೀಗುತ್ತಿದ್ದ ಆ ಗುಬ್ಬಿ ಮರಿ ಎಂದಿನಂತಿರಲಿಲ್ಲ. ತಾಯಿಯ ಆಗಮನವನ್ನೇ ಎದುರು ನೋಡುತ್ತಾ ಪ್ರತಿನಿತ್ಯ ತನ್ನ ಬಾಯಿ ತೆರೆದು ಕೂರುತ್ತಿದ್ದ ತನ್ನ ಮರಿಯ ವರ್ತನೆ ಎಂದಿನಂತಿಲ್ಲವಲ್ಲಾ ಎಂಬುದು ಗುಬ್ಬಿ ಮರಿಯ ತಾಯಿಗೆ ಗೊತ್ತಾಯಿತು. ಎಲ್ಲಾದರೂ ಹೊರಗೆ ಹೋಗಿದ್ದೆಯಾ? ಗದರಿಸಿತು ತಾಯಿಗುಬ್ಬಿ. ಮರಿಗುಬ್ಬಿ ನಡೆದುದೆಲ್ಲವನ್ನೂ ಹೇಳಿತು. ಕೇಳಿಸಿಕೊಂಡ ತಾಯಿಗುಬ್ಬಿ ಕೋಪದಿಂದ ಗದರಿತು. ಹೋಗಿ ಹೋಗಿ ನೀನು ಆ ಕಾಗೆಯ ಮರಿಯೊಂದಿಗೆ ಸೇರಿ ಆಟವಾಡಿದೆಯಾ? ಥೂ.. ನಿನ್ನ. ನಮ್ಮ ಘನತೆಯೇನು, ಆ ಕಾಗೆಯ ಮರಿಯ ಜೀವನವೇನು? ನೀನು ಆ ನಿಕೃಷ್ಟ ಕಾಗೆ ಮರಿಯೊಂದಿಗೆ ಆಡಿದೆಯಾ? ಮರಿಗುಬ್ಬಿ ಕೇಳಿತು- ಏಕಮ್ಮಾ, ನಾನೇಕೆ ಆ ಕಾಗೆಯ ಮರಿಯೊಂದಿಗೆ ಆಡಬಾರದು? ಆಡಿದರೇನಾಗುತ್ತಮ್ಮಾ?
ತಾಯಿಗುಬ್ಬಿ ಹೇಳಿತು-”ಆ ಕಾಗೆಯ ಬಣ್ಣ ನೋಡು ಕರೀ ಬಣ್ಣ. ಎಷ್ಟೊಂದು ಅಸಹ್ಯ. ನೀನು ನೋಡು ಬಂಗಾರದ ಮೈಬಣ್ಣ. ನೀನು ಕಾಗೆಯ ಮರಿಯೊಂದಿಗೆ ಆಡಿದರೆ ನಿನ್ನ ಬಣ್ಣವೂ ಅದರಂತೆ ಕಪ್ಪಗಾಗುತ್ತದೆ. ಅದಕ್ಕಾಗಿ ನೀನು ಎಂದಿಗೂ ಕಾಗೆಯ ಮರಿಯೊಂದಿಗೆ ಆಡಬಾರದು. ಅರ್ಥವಾಯಿತೇ?’ ಅರ್ಥವಾಯ್ತಮ್ಮಾ ಎಂದಿತು ಮರಿಗುಬ್ಬಿ.”ಏನು ಅರ್ಥವಾಯ್ತು ನಿನಗೆ?’ ತಾಯಿಗುಬ್ಬಿ ಪ್ರಶ್ನಿಸಿತು. ಮರಿಗುಬ್ಬಿಯ ಉತ್ತರ ಮಾರ್ಮಿಕವಾಗಿತ್ತು.”ಅಮ್ಮಾ… ನನ್ನದೋ ಬಂಗಾರದ ಬಣ್ಣ. ಆ ಕಾಗೆಯ ಮರಿಯದ್ದು ಕಪ್ಪು ಬಣ್ಣ. ನಾವಿಬ್ಬರೂ ಒಟ್ಟಿಗೆ ಆಡಿದರೆ ಆ ಪುಟ್ಟ ಕಾಗೆಯ ಮರಿಗೆ ನನ್ನಂತೆಯೇ ಬಂಗಾರದ ಮೈ ಬಣ್ಣ ಬರಬಹುದಲ್ಲವೇ? ಹೇಳಮ್ಮಾ!’ ಗುಬ್ಬಿಮರಿಯ ಮಾತು ಕೇಳಿದ ತಾಯಿಗುಬ್ಬಿಗೆ ಜ್ಞಾನೋದಯವಾಯ್ತು. ತನ್ನ ತಪ್ಪಿನ ಅರಿವಾಯ್ತು. ಗುಬ್ಬಿಮರಿಯನ್ನು ತಬ್ಬಿ ಮುದ್ದಾಡಿ ಕ್ಷಮೆ ಕೇಳಿತು.”
ಆದರೆ ಮನದ ಬಾಗಿಲನ್ನೇ ಮುಚ್ಚಿಕೊಂಡಿರುವವರಿಗೆ ಈ ನೀತಿಕಥೆ ಹೇಗೆ ತಾನೇ ಅರ್ಥವಾದೀತು?
ಇನ್ನು ಈ ಮೇಲ್ಜಾತಿ-ಕೆಳಜಾತಿ ಎಂದು ತಾರತಮ್ಯ ಮಾಡುವ ಮನಸ್ಸುಗಳಿಗೆ ಓದುಗರಾದ ನೇತ್ರಾವತಿ ಎಂಬವರು ಮಿಂಚಂಚೆ ಮೂಲಕ ಒಂದು ಪ್ರಶ್ನೆ ಕೇಳಿದ್ದಾರೆ. ಸಾಮಾನ್ಯವಾಗಿ ನಮ್ಮ ಎಲ್ಲ ದೇವಸ್ಥಾನಗಳ ಅರ್ಚಕರೂ ಮೇಲ್ಜಾತಿಯವರೇ. ಆದರೂ ನಮ್ಮ ದೇವಸ್ಥಾನಗಳ ಗರ್ಭಗುಡಿಗಳೇಕೆ ಅಷ್ಟೊಂದು ಕೊಳಕಾಗಿರುತ್ತವೆ? ನೇತ್ರಾವತಿಯವರ ಪ್ರಶ್ನೆಯನ್ನು ನಮ್ಮ ನಡುವೆ ಮೇಲೆಂಬ ಭಾವನೆಯಿಂದ ನರಳುತ್ತಿರುವ ಮನಸ್ಸುಗಳು ಕೇಳಿಕೊಳ್ಳಬೇಕು.
ಆಚಾರ್ಯ ಕೃಪಲಾನಿಯವರಿಗೂ ಒಮ್ಮೆ ನಾರಾಯಣ ಗುರುಗಳಂಥದ್ದೇ ಅನುಭವವಾಗುತ್ತದೆ. ಅವರು ರೈಲಿನಲ್ಲಿ ತೆರಳುತ್ತಿರುವಾಗ ಮಾತಿಗೆಳೆದ ಸಹ ಪ್ರಯಾಣಿಕ,”ನಿಮ್ಮ ಜಾತಿ ಯಾವುದು?’ ಎಂದು ಕೇಳಿದನು. ಅವನ ಪ್ರಶ್ನೆಗೆ ಕೃಪಲಾನಿಯವರು ಉತ್ತರಿಸುವುದಿಲ್ಲ, ಯಾವುದೋ ಯೋಚನೆಗೆ ಬಿದ್ದಂತೆ ಕಾಣುತ್ತಾರೆ. ಆ ಪ್ರಯಾಣಿಕ ಮತ್ತೆ ನಿಮ್ಮ ಜಾತಿ ಯಾವುದು ಎಂದು ಕೇಳುತ್ತಾನೆ.
ಕೃಪಲಾನಿ: ನೀವು ಮೊದಲ ಸಲ ಕೇಳಿದಾಗಲೇ ನನಗೆ ಅರ್ಥವಾಯಿತು, ಆದರೆ ಏನೆಂದು ಹೇಳಲಿ ಎಂದು ಯೋಚಿಸುತ್ತಿದ್ದೆ!
ಪ್ರಯಾಣಿಕ: ಅದರಲ್ಲಿ ಯೋಚಿಸುವುದೇನಿದೆ?
ಕೃಪಲಾನಿ: ಬೆಳಗ್ಗೆ ಎದ್ದು ಕಕ್ಕಸಿಗೆ ಹೋದಾಗ ಜಲಧಾರನಾಗುತ್ತೇನೆ, ಗಡ್ಡ ಕೆರೆದುಕೊಳ್ಳುವಾಗ ಕ್ಷೌರಿಕನಾಗುತ್ತೇನೆ, ಸ್ನಾನ ಮಾಡಿ ಬಟ್ಟೆ ಒಗೆದುಕೊಂಡಾಗ ಅಗಸನಾಗುತ್ತೇನೆ, ಊಟ ತಯಾರಿಸುವಾಗ ಬಾಣಸಿಗನಾಗುತ್ತೇನೆ, ಕಾಲೇಜಿಗೆ ಹೋಗಿ ಪಾಠ ಮಾಡುವಾಗ ಬ್ರಾಹ್ಮಣನಾಗುತ್ತೇನೆ, ಸಂಬಳ ಎಣಿಸುವಾಗ ವೈಶ್ಯನಾಗುತ್ತೇನೆ, ರಾತ್ರಿ ಮನೆಗೆ ಕಳ್ಳರು ನುಗ್ಗಿದಾಗ ಕ್ಷತ್ರಿಯನಾಗುತ್ತೇನೆ. ಹೀಗಾಗಿ ನನ್ನ ಜಾತಿ ಯಾವುದು ಎಂದು ಕೇಳಿದರೆ ಉತ್ತರಿಸಲು ಕಷ್ಟವಾಗುತ್ತದೆ ಎಂದರು, ಪ್ರಶ್ನೆ ಕೇಳಿದವನು ಸುಸ್ತಾದ.
ನಮಗೆ ಬೇಕಿರುವುದು ಸ್ವಚ್ಛತೆ, ಸಭ್ಯತೆ ಮುಂತಾದ ಪೌರಪ್ರಜ್ಞೆಗಳೇ ಹೊರತು ಜಾತಿಗಳಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಂತೆ ಜಾತಿರಹಿತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಮುಂದಾದಾಗ ಹಿಂದೂ ಸಮಾಜ ಉಳಿಯಲು ಸಾಧ್ಯ. ಆಗ ಮಾತ್ರ, ಖಛಣ Say it with pride, We are Hindus, ಹಿಂದೂ ಎಂದು ಹೆಮ್ಮೆಯಿಂದ ಹೇಳಿ ಎಂಬ ವಿವೇಕಾನಂದರ ಮಾತುಗಳಿಗೆ ನಾವು ಬೆಲೆ ಕೊಟ್ಟಂತಾಗುತ್ತದೆ, ಅಲ್ಲವೇ?

 -  ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ