ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜುಲೈ 2, 2012

ಇನ್ಮುಂದೆ ಏನೇ ಬೇಕಾದರೂ ‘ಹುಡ್ಕು’ ಗುರು!


ಅವರ ಹೆಸರು ಅರುಣ್ ಕುಮಾರ್. ಅಪ್ಪಟ ಕನ್ನಡಿಗರು. ಮೂಲತಃ ಮೈಸೂರಿನವರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್್ನಲ್ಲಿ ಪದವಿ ಪಡೆದವರು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೂ ಅದರಲ್ಲಿ ಒಂದು ಕಂಪ್ಯೂಟರ್ ವಿಷಯಇರುತ್ತಿತ್ತು. ಅರುಣ್ ಕುಮಾರ್್ ಗೆ ಮೆಕ್ಯಾನಿಕಲ್ಗಿಂತ ಕಂಪ್ಯೂಟರ್ನಲ್ಲಿ ಹೆಚ್ಚು ಆಸಕ್ತಿಯಿತ್ತು. ಪದವಿ ಮುಗಿದ ನಂತರ ಕಂಪ್ಯೂಟರ್ ಬಗೆಗಿನ ಗೀಳಿನ ಹಿಂದೆಯೇ ಹೊರಟರು. ಅದು 1980ರ ದಶಕದ ಕೊನೆಯ ಭಾಗ. ಪ್ರತಿಭಾ ಪಲಾಯನದ ಕೂಗು ಮೊಳಗುತ್ತಿದ್ದ ಕಾಲ. ಆದರೂ ಭವ್ಯ ಬದುಕಿನ ಕನಸಿನ ಹಿಂದೆ ಹೊರಟವರಿಗೆಲ್ಲ ಕಾಣುತ್ತಿದ್ದುದೇ ಅಮೆರಿಕ. ಅರುಣ್ ಕುಮಾರ್ ಕೂಡ ಅಮೆರಿಕದತ್ತ ಮುಖ ಮಾಡಿದ್ದರಲ್ಲಿ ಯಾವ ಅಶ್ಚರ್ಯವೂ ಇರಲಿಲ್ಲ. ಅಲ್ಲಿನ ನ್ಯೂಯಾರ್ಕ್್ನ ‘ಕೋರಮಂಡಲ್’ ಕಂಪನಿಯಲ್ಲಿ ಹಿರಿಯ ಸಾಫ್ಟ್ವೇರ್ ಎಂಜಿನಿಯರ್ ಆಗಿ ಉದ್ಯೋಗಕ್ಕೆ ಸೇರಿದರು. ISAM, RDBMS , XML ಮುಂತಾದ ಟೆಕ್ನಾಲಜಿಗಳಲ್ಲಿ, ಸಿ೤೤, ಸಿ ಹಾಗೂ ಜಾವಾ ಮುಂತಾದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗಳಲ್ಲಿ ಪರಿಣತಿ ಸಾಧಿಸಿದರು. ಅದರ ಜತೆ ಸಂಬಳವೂ ಹೆಚ್ಚಾಗತೊಡಗಿತು. ಅಮೆರಿಕವನ್ನು ಅರಸಿ ಬಂದ ಉದ್ದೇಶವೂ ಸಾಕಾರಗೊಳ್ಳತೊಡಗಿತು. 1994ರಲ್ಲಿ ನ್ಯೂಯಾರ್ಕ್ನ ‘ಬೇಸ್ ಒನ್ ಇಂಟರ್ನ್ಯಾಷನಲ್’ ಎಂಬ ಕಂಪನಿ ಸೇರಿದರು. ವರ್ಷಕ್ಕೆ 1.5 ಲಕ್ಷ ಡಾಲರ್ ಸಂಬಳ ಬರತೊಡಗಿತು. ಆ ವೇಳೆಗಾಗಲೇ ಮದುವೆಯೂ ಆಗಿತ್ತು. ಮಗನೂ ಜನಿಸಿದ್ದ, ತದನಂತರ ಮತ್ತೊಬ್ಬ ಪುತ್ರನ ಜನನವಾಯಿತು. ಆದರೆ ಅರುಣ್ ಕುಮಾರ್ ಮಾತ್ರ ತೃಪ್ತರಾಗಲಿಲ್ಲ. ಒಳ್ಳೆಯ ಸಂಬಳ, ಮಡದಿ, ಮಕ್ಕಳ ಜತೆ ಅಮೆರಿಕದಲ್ಲೇ ನೆಲೆಗೊಳ್ಳುವ ಉತ್ಸುಕತೆಯ ಬದಲು ತಾಯ್ನಾಡ ಸೆಳೆತ ಒಳಗೊಳಗೇ ತುಡಿಯತೊಡಗಿತು. ಮಕ್ಕಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು ಎನಿಸತೊಡಗಿತು. ಕನ್ನಡ ನಾಡಿಗೆ ಮರಳಿ ಬೆಂಗಳೂರಿನಲ್ಲೇ ಏನಾದರೂ ಮಾಡಬೇಕು ಎಂದೆನಿಸಲಾರಂಭಿಸಿತು.

1996ರಲ್ಲೇ ಅಮೆರಿಕ ತೊರೆಯುವ ನಿರ್ಧಾರ ಕೈಗೊಂಡರು. ವೃತ್ತಿಗೆ ತಿಲಾಂಜಲಿ ಇತ್ತು ಮಡದಿ ಮಕ್ಕಳ ಜತೆ ಭಾರತಕ್ಕೆ ವಾಪಸ್ಸಾಗಲು ಮುಂದಾದರು. ಹಾಗಂತ ಕಂಪನಿಯ ಆಡಳಿತ ಮಂಡಳಿಗೆ ಹೇಳಿದಾಗ ಅರುಣ್ ಕುಮಾರ್ ಅವರನ್ನು ಕಳೆದುಕೊಳ್ಳಲು ಅವರು ಸುತಾರಂ ಒಪ್ಪಲಿಲ್ಲ. ನೀವು ಹೋಗಲೇಬೇಕೆಂದಾದರೆ ನಾವು ಬೆಂಗಳೂರಿನಲ್ಲೇ ನಮ್ಮ ಕಂಪನಿಯ ಒಂದು ಬ್ರ್ಯಾಂಚ್ ತೆರೆಯುತ್ತೇವೆ. ಅಲ್ಲಿಯೇ ಕೆಲಸ ಮುಂದುವರಿಸುವ ಮೂಲಕ ಕಂಪನಿಯ ಜತೆಗಿನ ಸಂಬಂಧವನ್ನು ಮುಂದುವರಿಸಬೇಕು ಎಂದು ಕೇಳಿಕೊಂಡರು. 1997ರಲ್ಲಿ ಅರುಣ್ ಕುಮಾರ್ ಬೆಂಗಳೂರಿಗೆ ಆಗಮಿಸುವ ವೇಳೆಗೆ ‘ಬೇಸ್ ಒನ್ ಸಾಫ್ಟ್್ವೇರ್ ಪ್ರೈವೇಟ್ ಲಿಮಿಟೆಡ್್’ ಎಂಬ ಕಂಪನಿಯ ಬ್ರ್ಯಾಂಚ್ ಯಲಹಂಕದಲ್ಲಿ ಸಿದ್ಧವಾಗಿತ್ತು. ಅಲ್ಲಿಂದಲೇ ಸೇವೆ ಮುಂದುವರಿಯಿತು.
ಹಾಗಂತ ಅರುಣ್ ಕುಮಾರ್ ಬರೀ ವೃತ್ತಿಯನ್ನಷ್ಟೇ ಮುಂದುವರಿಸಲಿಲ್ಲ. ಅವರು ಎಂಜಿನಿಯರಿಂಗ್ ಪದವೀಧರಾದರೂ ಎಸ್.ಎಲ್. ಭೈರಪ್ಪ, ತರಾಸು, ಬೇಂದ್ರೆ, ಕೆ.ವಿ. ಅಯ್ಯರ್ ಮುಂತಾದವರನ್ನು ಚೆನ್ನಾಗಿ ಓದಿಕೊಂಡಿದ್ದಾರೆ, ಅವರ ಪುಸ್ತಕಗಳನ್ನು ಇತರರಿಗೆ ಹಂಚಿದ್ದಾರೆ. ಅಮೆರಿಕ ಸೇರಿದಾಗಲೂ ಕನ್ನಡದ ಮೇರು ಲೇಖಕರ ಕೃತಿಗಳನ್ನು ಓದುವ ಹವ್ಯಾಸವನ್ನು ಮಾತ್ರ ಬಿಟ್ಟಿರಲಿಲ್ಲ. ಮಕ್ಕಳಿಂದ ನಮ್ಮ ಸಂಸ್ಕೃತಿ, ಪರಂಪರೆಯ ಕೊಂಡಿ ಕಳಚಬಾರದು ಎಂಬ ಅಶಯದೊಂದಿಗೆ ಇಲ್ಲಿಗೆ ಬಂದರಾದರೂ ಕನ್ನಡಕ್ಕೂ ಏನಾದರೂ ಕೈಲಾದ ಸೇವೆ ಮಾಡಬೇಕು ಎಂದು ಚಿಂತಿಸತೊಡಗಿದರು. ಶೇಷಾದ್ರಿ ವಾಸು ಅವರು “ಬರಹ’ವನ್ನು ಕನ್ನಡಿಗರಿಗೆ ಕೊಟ್ಟಹಾಗೆ ತಾನೂ ಏನನ್ನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೇ…
http://www.hudku.com!
2006, ನವೆಂಬರ್ 1ರಂದು ‘ಹುಡ್ಕು’ ಡಾಟ್್ಕಾಂ ಎಂಬ ಪೈಲಟ್ (ಪ್ರಾಯೋಗಿಕ) ಪ್ರಾಜೆಕ್ಟ್ ಆರಂಭಿಸಿದರು. ಇವತ್ತು ಕನ್ನಡ ಹೆಸರನ್ನು ಹೊತ್ತ ವೆಬ್್ಸೈಟ್್ಗಳನ್ನು ಹುಡುಕುವುದೇ ಕಷ್ಟ. ಹಾಗಿರುವಾಗ ‘ಹುಡ್ಕು’ ಎಂಬ ಗೂಗಲ್್ನಂತಹ ‘ಸರ್ಚ್ ಎಂಜಿನ್್’ ರೂಪಿಸಲು ಅರುಣ್ ಕುಮಾರ್ ಮುಂದಾಗಿದ್ದರು. ‘ಹುಡ್ಕು’ ಎಂಬುದು ಕ್ರಿಯಾ ಪದ, ‘ಸರ್ಚ್್’ ಅಥವಾ ಶೋಧಿಸು ಎಂದರ್ಥ. ವಿಶ್ವಮಟ್ಟದಲ್ಲಿ ಪ್ರಚಲಿತವಾಗಬೇಕಾದರೆ ಒಂದು ಇಂಗ್ಲಿಷ್ ಹೆಸರನ್ನೇ ಕೊಡಬೇಕೆಂದು ಸಾಮಾನ್ಯವಾಗಿ ಯೋಚಿಸಿದರೆ ಅರುಣ್ ಕುಮಾರ್ ಮಾತ್ರ , ‘ಹುಡ್ಕು’ ಎಂಬ ಕನ್ನಡ ಪದವನ್ನೇ ಪ್ರಚಲಿತಗೊಳಿಸಲು ಯೋಚಿಸಿದರು. ಈ ನಿಟ್ಟಿನಲ್ಲಿ ಸಾಕಷ್ಟು ಯೋಜಿಸಿದರು. ಆದರೆ ಒಂದು ಸರ್ಚ್ ಎಂಜಿನ್ ಸಿದ್ಧಪಡಿಸುವುದು ಸಾಮಾನ್ಯದ ಮಾತಲ್ಲ. ಗೂಗಲ್ ಕೂಡ ಮಾಹಿತಿಯ ಕೊಂಡಿ ಅಥವಾ ಲಿಂಕ್್ಗಳನ್ನು ಕೊಡುತ್ತದೆಯೇ ಹೊರತು ಮಾಹಿತಿಯನ್ನೇ ನೇರವಾಗಿ ಕೊಡುವುದಿಲ್ಲ. ಅದು ಕೊಡುವ ಲಿಂಕ್್ಗಳೂ ವಸ್ತುನಿಷ್ಠ ಮಾಹಿತಿಯನ್ನೇ ಕೊಡಬೇಕೆಂದಿಲ್ಲ. ಹಾಗಾಗಿ ಜನರಿಗೆ ಅನುಕೂಲಕರವಾದ, ಸರಳವಾಗಿ ಲಭ್ಯವಾಗುವಂಥ ಸಿದ್ಧ ಹಾಗೂ ನಿಖರ ಮಾಹಿತಿಯನ್ನು ‘ಹುಡ್ಕು’ದಲ್ಲಿ ನೀಡಲು ಯೋಚಿಸಿದರು. ಅದರಲ್ಲೂ ಜನರಿಗೆ ತೀರಾ ಅತ್ಯಗತ್ಯವಾದ ಸೇವೆಗಳು, ಅವುಗಳು ಸ್ಥಳೀಯವಾಗಿ ಎಲ್ಲೆಲ್ಲಿ ಲಭ್ಯವಿವೆ ಎಂಬ ನಿಖರ ಮಾಹಿತಿ ನೀಡುವುದಕ್ಕೂ ಮುಂದಾದರು.
ಶಾಲೆಗಳು,
ರಕ್ತನಿಧಿಗಳು
ಡಯಾಗ್ನಾಸ್ಟಿಕ್್ಸೆಂಟರ್
ವೈದ್ಯರು
ಕೃಷಿ ಉಪಕರಣಗಳು
ಬ್ಯಾಂಕ್ ಸೇವೆ
ಗೃಹ ನಿರ್ಮಾಣಕ್ಕೆ ಬೇಕಾದ ವಸ್ತುಗಳು
ಹೋಟೆಲ್ ರೆಸ್ಟೋರೆಂಟ್್ಗಳು
ಮುಂತಾದ ಸೇವೆಗಳು ಟ್ಯಾಬ್, ಲ್ಯಾಪ್ಟಾಪ್, ಸೆಲ್ಫೋನ್್ಗಳಲ್ಲೂ ಲಭ್ಯವಾಗುವಂತೆ ಮಾಡಲು ಮುಂದಾದರು. ಮಾಹಿತಿ ವಿಳಾಸ, ಸಂಪರ್ಕ ಸಂಖ್ಯೆಯೊಂದಿಗೆ ದೊರೆಯಬೇಕೆಂದು ಬಯಸಿದರು. ಅದಕ್ಕೆ ಸಾಕಷ್ಟು ಸಮಯ, ಸಹಾಯ ಬೇಕೆನಿಸಿತು. ಆಗ ನೆನಪಾದವರೇ ಸಿ.ಆರ್. ಬಾಲಾಜಿ ಹಾಗೂ ಮೆಹರ್ ಸಿಂಹಾದ್ರಿ. ಬಾಲಾಜಿಯವರು ಎಚ್್ಪಿ ಕಂಪನಿಯ ಅಂಗವಾದ Mphasis16 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದವರು, ಅದರ ಉಪಮುಖ್ಯಸ್ಥರ ಸ್ಥಾನಕ್ಕೆ ಏರಿದ್ದವರು. ಆಂಧ್ರಪ್ರದೇಶದ ವಾರಂಗಲ್್ನ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನ ಪದವೀಧರ ಸಿಂಹಾದ್ರಿ 7 ವರ್ಷದ ಅನುಭವ ಹೊಂದಿದವರು. ಈ ಮೂವರೂ ಸೇರಿ 2010ರಲ್ಲಿ ‘ಹುಡ್ಕು’ ಡಾಟ್್ಕಾಂ ಅನ್ನು ಕೃತಿಗಿಳಿಸಲು ಸಾಂಘಿಕ ಪ್ರಯತ್ನ ಆರಂಭಿಸಿದರು. ಅದರ ಫಲವಾಗಿ 2011, ಆಗಸ್ಟ್ 15ರಂದು ‘ಹುಡ್ಕು’ ಅಧಿಕೃತವಾಗಿ ಆರಂಭಗೊಂಡಿತು. ಹಾಗಂತ ಇದೊಂದು ಬರೀ ಬೆಂಗಳೂರು, ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾದ ಸರ್ಚ್್ಎಂಜಿನ್ ಎಂದುಕೊಳ್ಳಬೇಡಿ!
ಇದುವರೆಗೂ 160 ದೇಶಗಳ, 3800 ನಗರಗಳಿಂದ ಜನರು ‘ಹುಡ್ಕು’ ಮೂಲಕ ಮಾಹಿತಿ ಹುಡುಕಿದ್ದಾರೆ!
ಜಗತ್ತಿನ ಮೂಲೆ ಮೂಲೆಗಳ ಮಾಹಿತಿ ಇಲ್ಲಿ ಲಭ್ಯವಿದೆ. ಸಾಮಾನ್ಯ ಜನರಿಂದ ಆರಂಭವಾಗಿ, ಉದ್ಯಮಿಗಳು, ಪ್ರವಾಸಿಗರು, ವ್ಯಾಪಾರಿಗಳು, ಮಾರಾಟಗಾರರು, ವರ್ಗೀಕೃತ ಜಾಹೀರಾತು ನೋಡುವವರು, ಮನೆ ಹುಡುಕುವವರು, ಗೃಹಿಣಿಯರಿಗೆ ಇದು ಉಪಯುಕ್ತ. ಒಂದು ನಿರ್ದಿಷ್ಟ ಕಂಪನಿಯ ಸರಕುಗಳು ಎಲ್ಲಿ ಲಭ್ಯವಿವೆ ಎಂಬುದನ್ನೂ ‘ಹುಡ್ಕು’ಬಹುದು. ಬೆಂಗಳೂರಿನಲ್ಲಿರುವ ದಿನಪತ್ರಿಕೆ ಹಾಗೂ ಮ್ಯಾಗಝಿನ್ ಕಚೇರಿಗಳು ಎಂದು ಹುಡುಕಲು ಕೊಟ್ಟರೂ ವಿಳಾಸ, ಫೋನ್ ನಂಬರ್ ಜೊತೆ ಮಾಹಿತಿ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ಒಂದು ನಿರ್ದಿಷ್ಟ ಸ್ಥಳ, ನಗರ ಆಧಾರಿತ(Location Based Search) ಮಾಹಿತಿ ಕೂಡ ಲಭ್ಯವಿದೆ. ‘ರೆಸ್ಟೋರೆಂಟ್ ವಿತ್ ಸ್ವಿಮ್ಮಿಂಗ್ ಪೂಲ್’ ಎಂದು ಹುಡುಕಿದರೆ ಈಜುಕೊಳಗಳಿರುವ ಹೊಟೇಲ್್ಗಳ ಮಾಹಿತಿಯೇ ಬರುತ್ತದೆ. ಅದು ಇದೆಯೋ, ಇದು ಇದೆಯೋ ಎಂದು ಕರೆ ಮಾಡಿ ವಿಚಾರಿಸಿಕೊಳ್ಳಬೇಕಾದ ತ್ರಾಸವೇ ಇರುವುದಿಲ್ಲ. ಜತೆಗೆ ಆಲ್ಫಬಿಟಿಕಲ್ ಆರ್ಡರ್ ಅಥವಾ ಅಂಕಲಿಪಿಗನುಗುಣವಾಗಿ ಮಾಹಿತಿ ಕಾಣುತ್ತದೆ. ಬರೀ ಮಾಹಿತಿ ಪಡೆದುಕೊಳ್ಳುವ ಸೌಲಭ್ಯ ಮಾತ್ರವಲ್ಲ, ವೆಬ್ಸೈಟ್್ನ ಬಲತುದಿಯಲ್ಲಿ “Post your Ad’ ಎಂಬ ಆಪ್ಷನ್ ಇದ್ದು, ನಿಮ್ಮ ಮನೆ ಬಾಡಿಗೆಗೆ ಲಭ್ಯವಿದ್ದರೆ, ನಿವೇಶನ, ಹಳೆ ಕಾರು, ಮೊಬೈಲ್ ಅಥವಾ ಏನನ್ನೇ ಮಾರುವುದಾದರೂ ಪುಕ್ಕಟೆಯಾಗಿ ಜಾಹೀರಾತುಗಳನ್ನೂ ಹಾಕಬಹುದು. ಇದೊಂಥರಾ ಯೆಲ್ಲೋ ಪೇಜಸ್ ಹಾಗೂ ಕ್ಲಾಸಿಫೈಡ್ಸ್ ಎರಡೂ ಇರುವ ವೆಬ್್ಸೈಟ್. ಈಗಾಗಲೇ ‘ಜಸ್ಟ್ ಡಯಲ್್’, ‘ಸುಲೇಖಾ ಡಾಟ್್ಕಾಂ’ ಗಳು ಪ್ರಚಲಿತದಲ್ಲಿದ್ದರೂ ಇವುಗಳಲ್ಲಿ ಯಾವುದಾದರೂ ಮಾಹಿತಿ ಕೇಳಿದರೆ ತಮಗೆ ಬೇಕಾದವರ, ಆಯ್ದ ವಿಳಾಸವನ್ನಷ್ಟೇ ಕೊಟ್ಟುಬಿಡುತ್ತಾರೆ. ಆದರೆ ‘ಹುಡ್ಕು’ನಲ್ಲಿ ಹಂಗಿಲ್ಲದೆ ಎಲ್ಲ ಮಾಹಿತಿ, ವಿಳಾಸಗಳೂ ಲಭ್ಯವಾಗುತ್ತವೆ.
ಇಲ್ಲಿ ಮತ್ತೊಂದು ವಿಚಾರವೆಂದರೆ ‘ಹುಡ್ಕು’ ಇನ್ನೂ ಪರಿಪೂರ್ಣ ಸರ್ಚ್ ಎಂಜಿನ್ ಆಗಿಲ್ಲ. ಎಲ್ಲ ದೇಶ, ನಗರ, ಸ್ಥಳಗಳ ಮಾಹಿತಿ ಅಲ್ಲಿಲ್ಲ. ಪ್ರಾರಂಭದಲ್ಲಿ ಇಂಗ್ಲಿಷ್ ಬಲ್ಲ, ಇಂಗ್ಲಿಷ್ ಭಾಷೆ ಬಳಕೆಯಲ್ಲಿರುವ ದೇಶ, ನಗರಗಳನ್ನಷ್ಟೇ ಗುರಿಯಾಗಿಸಿಕೊಳ್ಳಲಾಗಿದೆ. ಇನ್ನೂ ಸಾಕಷ್ಟು ಮಾಹಿತಿಯನ್ನು ತುಂಬುವುದಿದೆ. ಅದಕ್ಕೆ ಕನ್ನಡಿಗರಾದ ನಮ್ಮ ಸಹಾಯ, ಪ್ರೋತ್ಸಾಹದ ಅಗತ್ಯವಿದೆ. XML ಟೆಕ್ನಾಲಜಿಯಲ್ಲಿ 4 ಪೇಟೆಂಟ್್ಗಳನ್ನು, ನ್ಯೂಮೆರಿಕ್ ಎನ್್ಕೋಡಿಂಗ್್ನಲ್ಲಿ ಮತ್ತೊಂದು ಪೇಟೆಂಟ್ ಪಡೆದಿರುವ ಅರುಣ್ ಕುಮಾರ್ ಬುದ್ಧಿವಂತರಾದರೂ ನಮ್ಮ, ನಿಮ್ಮ ಪ್ರೋತ್ಸಾಹ ಅವರನ್ನು ಇನ್ನೂ ಉತ್ಸಾಹಿತರನ್ನಾಗಿ, ಬಲಿಷ್ಠರನ್ನಾಗಿ ಮಾಡಬಲ್ಲದು. ನೆನಪಿಡಿ, ಸ್ಟೀವ್ ಜಾಬ್ಸ್ ‘ಆಯಪಲ್’ ಕಂಪನಿಯನ್ನು ಆರಂಭಿಸಿದ್ದೂ ಮನೆಯ ಗ್ಯಾರೇಜ್ನಲ್ಲೇ. ಇವತ್ತು ಜಗತ್ತೇ ಆರ್ಥಿಕ ಹಿನ್ನಡೆಯ ಸುಳಿಯಲ್ಲಿ ಸಿಲುಕಿದೆ. ಮಾರುಕಟ್ಟೆ ಕುಸಿದಿದೆ. ಇಂತಹ ಸಂದರ್ಭದಲ್ಲೂ ಕೈಯಲ್ಲಿದ್ದ 60 ಲಕ್ಷಗಳನ್ನು ಹೂಡಿ ಕನ್ನಡ ಪದವನ್ನು ಪ್ರಚುರಪಡಿಸಲು, ಯಶಸ್ಸು ‘ಹುಡ್ಕು’ದಕ್ಕೆ ಹೊರಟಿರುವ ಕನ್ನಡಿಗ ಅರುಣ್್ಕುಮಾರ್ ಅವರ ಬೆನ್ನುತಟ್ಟುವುದು ನಮ್ಮ ಕರ್ತವ್ಯವಲ್ಲವೇ?
ಇನ್ನು ಏನೇ ಬೇಕಾದರೂ ತಲೆಕೆಡಿಸಿಕೊಳ್ಳಬೇಡ, ಸಿಕ್ಕುತ್ತೆ ‘ಹುಡ್ಕು’ ಗುರು!

-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ