ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಆಗಸ್ಟ್ 6, 2012

ಭಾರತಮಾತೆಯನ್ನೇ ಬದಿಗೆಸೆದವರು ಭಾರತವನ್ನು ಬದಲಿಸಿಯಾರೆ? - ಪ್ರತಾಪ ಸಿಂಹ

ಇಂಥದ್ದೊಂದು  ಸಾಧ್ಯತೆಯ ಸೂಚನೆ ಗುರುವಾರವೇ ಹೊರಬಿದ್ದಿತ್ತು.ವಿವಿಧ ಟಿವಿ ಚಾನೆಲ್್ಗಳಲ್ಲಿ ಕಾಣಿಸಿಕೊಡ ಅಣ್ಣಾ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್, ಅಣ್ಣಾ ಅವರ ಕಟ್ಟಾ ಬೆಂಬಲಿಗರಾಗಿ ಹೊರಹೊಮ್ಮಿರುವ ನಟ ಅನುಪಮ್ ಖೇರ್ ಅದೇ ಸಂಕೇತಗಳನ್ನು ನೀಡಿದರು. ಒತ್ತಡ ತಂತ್ರದಿಂದ ಸಾಧ್ಯವಾಗಲಿಲ್ಲ ಎಂದ ಮೇಲೆ ನೇರವಾಗಿ ರಾಜಕೀಯ ಪ್ರವೇಶ ಮಾಡುವುದನ್ನು ಬಿಟ್ಟರೆ ಬೇರಾವ ಮಾರ್ಗಗಳಿವೆ ಎಂದು ಪ್ರಶಾಂತ್ ಭೂಷಣ್ ಕೇಳಿದರೆ, ಜವಾಹರಲಾಲ್ ನೆಹರು, ಮೌಲಾನಾ ಅಝಾದ್, ಸರ್ದಾರ್ ಪಟೇಲ್ ಕೂಡ ರಾಜಕಾರಣಿಗಳಾಗುವ ಮೊದಲು ನಮ್ಮಂತೆಯೇ ಚಳವಳಿಕಾರರಾಗಿದ್ದರು ಎಂದು ಅಣ್ಣಾ ತಂಡದ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸಮರ್ಥಿಸಿಕೊಂಡರು ಖೇರ್. ಚಾನೆಲ್್ಗಳಂತೂ ‘ನಾಲ್ಕನೇ ರಂಗ’ ತಲೆಯೆತ್ತೀತೆ ಎಂಬ ಪ್ರಶ್ನೆಯಿಟ್ಟುಕೊಂಡು ಚರ್ಚೆ ನಡೆಸಲಾರಂಭಿಸಿದವು.

ಅದರ ಬೆನ್ನಲ್ಲೇ ‘ಪಕ್ಷ’ ಸ್ಥಾಪನೆಯ ಘೋಷಣೆ ಅಧಿಕೃತವಾಗಿ ಹೊರಬಿದ್ದಿದೆ.
ಅಂಥದ್ದೊಂದು ಘೋಷಣೆ ಮಾಡುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದಾರೆ ಈ ಅರವಿಂದ ಕೇಜ್ರೀವಾಲ್? ಖಂಡಿತ ಅಣ್ಣಾ ಹಜಾರೆಯವರು ಮುಗ್ಧ ಮನುಷ್ಯ, ಈ ದೇಶದ ಒಳಿತಿನ ಬಗ್ಗೆ ಪ್ರಾಮಾಣಿಕ ಕಾಳಜಿಯೂ ಅವರಲ್ಲಿದೆ. ಆದರೆ ಅವರ ತಂಡದ ಸದಸ್ಯರ (ನ್ಯಾ.ಸಂತೋಷ್ ಹೆಗ್ಡೆ ಹೊರತುಪಡಿಸಿ) ಉದ್ದೇಶದಲ್ಲಿ ಸಾಚಾತನವಿದೆಯೇ? ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಲು, ಸಾಮಾಜಿಕ ಚಳವಳಿ ನಡೆಸಲು, ಒತ್ತಡ ತಂತ್ರದ ಮೂಲಕ ಜನಲೋಕಪಾಲ್ ಕಾಯಿದೆಯನ್ನು ಜಾರಿಗೆ ತರಲು ಹೊರಟವರು ಅದನ್ನು ನಡುನೀರಿನಲ್ಲಿ ಬಿಟ್ಟು ಖಾದಿ ತೊಟ್ಟು ರಾಜಕೀಯ ಮಾಡಲು ಮುಂದಾಗಿದ್ದೇಕೆ? ಆ ರೀತಿಯ ಉಮೇದು ಬರಲು ಕಾರಣವಾದರೂ ಏನು? ಅಣ್ಣಾ ಅವರನ್ನು ಅಣ್ಣಾ ತಂಡದವರೇ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಹೇಳಿರುವುದರಲ್ಲಿ ಸತ್ಯವಿದೆ ಎಂದನಿಸುತ್ತಿಲ್ಲವೆ? ಇಷ್ಟಕ್ಕೂ ಅಣ್ಣಾ ಪಕ್ಷ ಕಟ್ಟುತ್ತಿದ್ದಾರೆ ಎಂಬ ಸೂಚನೆ ಹೊರಬಿದ್ದ ಕೂಡಲೇ ಮೊದಲು ಸ್ವಾಗತಿಸಿದವರಾರು? ಟಿವಿ ಆನ್ ಮಾಡಿ ಕಾಂಗ್ರೆಸ್್ನ ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ ಮುಖದಲ್ಲಿನ ಮಂದಹಾಸವನ್ನು ನೋಡಿ!? ನಾವು ಅಣ್ಣಾ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇವೆ ಎಂದು ಇವರೆಲ್ಲ ಹೇಳುತ್ತಿರುವುದರ ಹಿಂದಿನ ಲೆಕ್ಕಾಚಾರ ಯಾವುದು?
ಅದಿರಲಿ, ಅಣ್ಣಾ ಪಕ್ಷ ಕಟ್ಟಿದರೆ ಅದರಿಂದ ಸಿಗುವ ಲಾಭ ಯಾರಿಗೆ ಅಂದುಕೊಂಡಿರಿ?
ನಿನ್ನೆ, ಮೊನ್ನೆಯವರೆಗೂ ಅಣ್ಣಾ ಹಾಗೂ ಅಣ್ಣಾ ತಂಡವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ, ಮಾಡಬಾರದ ಟೀಕೆ, ಆರೋಪ ಮಾಡುತ್ತಿದ್ದ, ಹೀನಾಯವಾಗಿ ನಿಂದಿಸುತ್ತಿದ್ದ ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್ ಹಾಗೂ ಇತರ ಕಾಂಗ್ರೆಸ್ಸಿಗರು ಇದ್ದಕ್ಕಿದ್ದಂತೆ ಅಣ್ಣಾ ರಾಜಕೀಯ ಪ್ರವೇಶವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿರುವುದೇಕೆ? ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ಸೂಚಿಸುತ್ತಿರುವುದೇಕೆ? ಅದರಲ್ಲೂ ದಿಗ್ವಿಜಯ್ ಸಿಂಗ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಅಣ್ಣಾ ಜತೆ ಬಾಬಾ ರಾಮ್್ದೇವ್ ಕೂಡ ತಮ್ಮದೇ ಪಕ್ಷ ಕಟ್ಟಿ ರಾಜಕೀಯಕ್ಕಿಳಿಯಲಿ, ಇಲ್ಲಾ ಅಣ್ಣಾ ಜತೆ ಸೇರಿಕೊಳ್ಳಲಿ ಎಂದಿದ್ದಾರೆ, ಏಕೆ?! ನೀವೇ ಹೇಳಿ, ಹೊಸ ಪಕ್ಷ ಕಟ್ಟಲು ಹೊರಟಿರುವ ಅಣ್ಣಾ ಯಾರ ವೋಟಿಗೆ ಕತ್ತರಿ ಹಾಕಲು ಹೊರಟಿದ್ದಾರೆ? ಕಾಂಗ್ರೆಸ್ಸೇತರ ಮತಗಳಿಗೇ ಅಲ್ಲವೆ? ಕಾಂಗ್ರೆಸ್ ವಿರೋಧಿ ಮತಗಳು ಒಡೆಯುವುದರಿಂದ ಯಾರಿಗೆ ಲಾಭ? ಸೋನಿಯಾ ಗಾಂಧಿಯವರಿಗೇ ಅಲ್ಲವೆ? ಅಂದಮೇಲೆ ಅಣ್ಣಾ ತಂಡದವರು ಪಕ್ಷ ಕಟ್ಟುವ ಮೂಲಕ 2014ರಲ್ಲಿ ಯಾರನ್ನು ಮತ್ತೆ ಅಧಿಕಾರಕ್ಕೇರಿಸಲು ಹೊರಟಿದ್ದಾರೆ? ಭ್ರಷ್ಟಾಚಾರವನ್ನು ತೊಡೆದು ಹಾಕುವ ಮಾತನಾಡುತ್ತಲೇ ಭ್ರಷ್ಟ ಕಾಂಗ್ರೆಸ್ಸಿಗೆ ಪರೋಕ್ಷವಾಗಿ ಸಹಾಯ ಮಾಡುವುದೇ ಇವರ ಉದ್ದೇಶವಾಗಿಲ್ಲವೆ? ಇಷ್ಟಕ್ಕೂ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು ಕೆಳವರ್ಗವೂ ಅಲ್ಲ, ಶ್ರೀಮಂತ ವರ್ಗವೂ ಅಲ್ಲ, ಮಧ್ಯಮವರ್ಗ. ಈ ದೇಶದಲ್ಲಿ ಭ್ರಷ್ಟಾಚಾರದಿಂದ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿರುವುದೇ ನಗರವಾಸಿ ಮಧ್ಯಮ ಹಾಗೂ ನೌಕರವರ್ಗ. ಇವತ್ತು ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಅತಿಹೆಚ್ಚು ಬೆಂಬಲ ವ್ಯಕ್ತವಾಗುತ್ತಿರುವುದೇ ಇವರಿಂದ. ಇವರು ಯಾವ ಪಕ್ಷದ ಸಾಂಪ್ರದಾಯಿಕ ಮತದಾರರು? ಈ ವರ್ಗ ಪಾರಂಪರಿಕವಾಗಿ ಕಾಂಗ್ರೆಸ್ ವಿರೋಧಿ. ಈಗ ಬಿಜೆಪಿ, ಈ ಮೊದಲು ಜನತಾ ಪಕ್ಷದ ಪರ ವಾಲುತ್ತಿತ್ತು. ಅಂದಮೇಲೆ ಅಣ್ಣಾ ಅವರ ಪಕ್ಷ ಯಾರ ವೋಟಿಗಾದರೂ ಕೈಹಾಕಿದರೆ ಅದು ಬಿಜೆಪಿ ಹಾಗೂ ಕಾಂಗ್ರೆಸ್ ವಿರೋಧಿ ಮತಗಳಿಗೇ ಅಲ್ಲವೆ?
ಒಂದು ವೇಳೆ, ಅಣ್ಣಾ ಅವರ ಪಕ್ಷವೇನಾದರೂ ಒಂದೆರಡು ಪರ್ಸೆಂಟ್ ವೋಟು ಬಾಚಿಕೊಂಡರೂ ಆಗುವ ಅಪಾಯವೆಂಥದ್ದು ಗೊತ್ತೆ?
ಚುನಾವಣಾ ರಾಜಕೀಯದಲ್ಲಿ ಒಂದೊಂದು ಪರ್ಸೆಂಟ್ ವೋಟುಗಳೂ ಎಂತಹ ವ್ಯತ್ಯಾಸ ಮಾಡಬಲ್ಲವು ಅಂದುಕೊಂಡಿರಿ? 1998ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 25.82 ಪರ್ಸೆಂಟ್ ವೋಟು ಪಡೆದರೂ ಗೆದ್ದಿದ್ದು 141 ಸೀಟುಗಳನ್ನು. ಆದರೆ, ಕಾಂಗ್ರೆಸ್್ಗಿಂತ ಕಡಿಮೆ, ಅಂದರೆ 25.50 ಪರ್ಸೆಂಟ್ ವೋಟು ಪಡೆದ ಬಿಜೆಪಿ 182 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಏಕಾಂಗಿಯಾಗಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದರೆ ಬಿಜೆಪಿ ತಾನು ಬಲಿಷ್ಠವಾಗಿರುವ ಕಡೆ ಮಾತ್ರ ಸ್ಪರ್ಧಿಸಿ ಉಳಿದವನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟು ಹೆಚ್ಚಿನ ಸೀಟು ಗೆದ್ದಿತು. 2009ರಲ್ಲಿ ಕಾಂಗ್ರೆಸ್ ಬಿಜೆಪಿಯ ಕಾರ್ಯತಂತ್ರವನ್ನೇ ಕಾಪಿ ಮಾಡಿ 206 ಸೀಟು ಗೆದ್ದಿದ್ದು ಮಾತ್ರವಲ್ಲ, ಸರಾಸರಿ ಮತಗಳನ್ನೂ ಹೆಚ್ಚಿಸಿಕೊಂಡಿತು. ಇಂತಹ ಅತ್ಯಂತ ಸೂಕ್ಷ್ಮ ಚುನಾವಣಾ ಲೆಕ್ಕಾಚಾರಗಳು ಇರುವಾಗ ಕಾಂಗ್ರೆಸ್ ವಿರೋಧಿ ಮತಗಳಿಗೇ ಕೈಹಾಕಲು ಹೊರಟಿರುವ ಅಣ್ಣಾ ತಂಡ, ಪರೋಕ್ಷವಾಗಿ ಕಾಂಗ್ರೆಸ್ಸನ್ನು ಖುಷಿಪಡಿಸಲು ಹೊರಟಿದೆಯಷ್ಟೇ. ಇಲ್ಲವಾದಲ್ಲಿ ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಏಕೆ ಮಂದಹಾಸ ಬೀರುತ್ತಿದ್ದರು? ಅದರಲ್ಲೂ ಪ್ರಸ್ತುತ ಎದುರಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕುಪಿತಗೊಂಡು ಕಾಂಗ್ರೆಸ್್ಗೆ ಪಾಠ ಕಲಿಸಲು ಕಾದಿರುವ ಮಧ್ಯಮವರ್ಗದ ಮತಗಳನ್ನು ಅಣ್ಣಾ ವಿಭಜನೆ ಮಾಡಿದರೆ ಅದರ ಲಾಭ ಕಾಂಗ್ರೆಸ್್ಗಲ್ಲದೆ ಮತ್ಯಾರಿಗಾಗುತ್ತದೆ? ತಾವು ಬೆದರಿಲ್ಲ ಎಂದು ತೋರಿಸಿಕೊಳ್ಳಲು ಬಿಜೆಪಿ ಕೂಡ ತಡವಾಗಿ ಅಣ್ಣಾ ನಿರ್ಧಾರವನ್ನು ಸ್ವಾಗತಿಸಿರಬಹುದು. ಆದರೆ ಪ್ರತೀಕೂಲ ಪರಿಣಾಮದ ಭಯ ಬಿಜೆಪಿಯನ್ನೂ ಖಂಡಿತ ಕಾಡುತ್ತಿರುತ್ತದೆ. ಹಾಗಿರುವಾಗ ಅಣ್ಣಾ ಅವರು ಯಾರಿಗೆ ಪರ್ಯಾಯವಾಗುತ್ತಾರೆ, ಬಿಜೆಪಿಗೋ, ಕಾಂಗ್ರೆಸ್್ಗೋ? ಈ ವಿಚಾರ ಅಣ್ಣಾ ತಂಡವರಿಗೆ ಗೊತ್ತಿಲ್ಲವೆ? ಜಂತರ್್ಮಂತರ್ ಎದುರು ಮೈಕ್ ಮುಂದೆ ಭಾಷಣ ಬಿಗಿದ ಕೂಡಲೇ ಬದಲಾವಣೆ ತರುವುದಕ್ಕೆ, ಭ್ರಷ್ಟ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿಯದಷ್ಟು ಮುಗ್ಧರೇ ಇವರೆಲ್ಲ? ಅಂತಹ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲೂ ಏಕಾಂಗಿಯಾಗಿ ಕಾಂಗ್ರೆಸ್್ಅನ್ನು ಹಣಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ಎಲ್ಲ ಪಕ್ಷಗಳು ಸೇರಿ ಜನತಾ ಪಕ್ಷ ಮಾಡಿಕೊಂಡಿದ್ದಲ್ಲವೆ? ಇನ್ನು ಅಂತಹ ರಾಷ್ಟ್ರವ್ಯಾಪಿ ಅಯೋಧ್ಯೆ ಚಳವಳಿಗೇ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಆಗಲಿಲ್ಲ, ಆಗ ಅದು ಗೆದ್ದ್ದದ್ದು 89 ಸೀಟು ಮಾತ್ರ. ಹಾಗಿರುವಾಗ ಕಾಂಗ್ರೆಸ್ ವಿರೋಧಿ ಮತಗಳನ್ನೇ ಒಡೆಯಲು ಹೊರಟಿರುವ ಇವರ ಉದ್ದೇಶದ ಬಗ್ಗೆ ಸಂಶಯ ಮೂಡುವುದಿಲ್ಲವೆ?
ಅಂದಹಾಗೆ, ಪಕ್ಷ ಕಟ್ಟಿ ಬದಲಾವಣೆ ತರುತ್ತೇವೆ ಎನ್ನುತ್ತಿರುವ ಈ ಅಣ್ಣಾ ತಂಡದಲ್ಲಿ ಅಣ್ಣಾ ಬಿಟ್ಟರೆ ಅಪ್ಪಟ ಪ್ರಾಮಾಣಿಕರು, ಉದ್ದೇಶ ಶುದ್ಧಿಯುಳ್ಳವರು ಯಾರಿದ್ದಾರೆ?
ಅರವಿಂದ ಕೇಜ್ರೀವಾಲ್? ಕಿರಣ್ ಬೇಡಿ? ಶಾಂತಿ ಹಾಗೂ ಪ್ರಶಾಂತ್ ಭೂಷಣ್? ಇವರೆಲ್ಲ ಕಲಿತವರು, ಇಂಗ್ಲಿಷ್ ಬಲ್ಲವರು, ಕುಶಲಮತಿಗಳು ಅನ್ನುವುದನ್ನು ಬಿಟ್ಟರೆ ಇವರ ಯೋಗ್ಯಾಯೋಗ್ಯತೆಯೇನು? ಇವರು ಸಮಾಜಕ್ಕೆ ಏನು ಮಾಡಿದ್ದಾರೆ? ತಮ್ಮ ಯೋಗ್ಯತೆ ಏನು ಎಂಬುದು ಇವರಿಗೆ ಗೊತ್ತಿರುವುದರಿಂದಲೇ ಅಲ್ಲವೇ ಸಾಮಾಜಿಕ ಸ್ವೀಕೃತಿಗೆ ಅಣ್ಣಾ ಎಂಬ ಮುಖವಾಡಕ್ಕೆ ಮೊರೆ ಹೋಗಿರುವುದು? ಅಣ್ಣಾ ಅವರನ್ನು ಹೊರಗಿಟ್ಟು ಪ್ರತ್ಯೇಕವಾಗಿ ಒಬ್ಬೊಬ್ಬರನ್ನೂ ನೋಡಿ?
ಇನ್ನು ಭ್ರಷ್ಟಾಚಾರದ ವಿಷಯದಲ್ಲಾದರೂ ಇವರಲ್ಲಿ ಬದ್ಧತೆಯಿದೆಯೇ? ಇವರು ಪ್ರಾಮಾಣಿಕವಾಗಿ ಭ್ರಷ್ಟಾಚಾರ ವಿರೋಧಿಗಳೇ ಆಗಿದ್ದರೆ ಗುಜರಾತ್ ಮುಖ್ಯಮಂತ್ರಿ ಮೋದಿಯವರನ್ನು ಮೊನ್ನೆ ಅನಗತ್ಯವಾಗಿ ತೆಗಳಿದ್ದೇಕೆ? ನರೇಂದ್ರ ಮೋದಿಯವರನ್ನು ‘ಮಾನವತೆಯ ಮರ್ಡರರ್್’ ಎಂದು ಅಣ್ಣಾ ತಂಡದ ಸದಸ್ಯ ಸಂಜಯ್ ಸಿಂಗ್ ಅಪ್ರಚೋದಿತ ಆಕ್ರಮಣ ಮಾಡಿದ್ದರ ಹಿಂದೆ ಇದ್ದ ಉದ್ದೇಶ ಯಾವುದು? ಆ ಮೂಲಕ ಯಾರನ್ನ ಓಲೈಸಲು, ಯಾವ ಪಕ್ಷವನ್ನು ಸಂತುಷ್ಟಪಡಿಸಲು ಹೊರಟಿದ್ದಾರೆ? ಭ್ರಷ್ಟಾಚಾರವನ್ನು ಹತ್ತಿಕ್ಕಲು ಉಪವಾಸ ಕುಳಿತವರಿಗೂ ಗುಜರಾತ್ ಹಿಂಸಾಚಾರಕ್ಕೂ ಏನು ಸಂಬಂಧ? ನಾಳೆ ಇವರೂ ಮುಸ್ಲಿಂ ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನಿದೆ? 2011, ಏಪ್ರಿಲ್್ನಲ್ಲಿ ಅಣ್ಣಾ ಮೊದಲು ಉಪವಾಸಕ್ಕೆ ಕುಳಿತಾಗ ವೇದಿಕೆಯ ಪರದೆ ಮೇಲೆ ಭಗವಾಧ್ವಜ ಹಿಡಿದ ಭಾರತ ಮಾತೆ ರಾರಾಜಿಸುತ್ತಿದ್ದಳು, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಸಾವರ್ಕರ್ ಭಾವಚಿತ್ರಗಳಿದ್ದವು. ನಿನ್ನೆಗೆ 10 ದಿನಗಳ ಕಾಲ ನಡೆದ ಉಪವಾಸದ ವೇಳೆ ವೇದಿಕೆಯಲ್ಲಿ ಭಾರತ ಮಾತೆ ಕಂಡಳೆ? ಆಕೆ ಮಾಯವಾಗಿದ್ದಾದರೂ ಏಕೆ? ಮುಸ್ಲಿಮರಲ್ಲಿ ಕೆಲವರು ವಿರೋಧಿಸಿದರೆಂಬ ಕಾರಣಕ್ಕೆ ಭಾರತ ಮಾತೆಯನ್ನು ಹೊಂದಿದ್ದ ಚಿಹ್ನೆಯನ್ನೇ ಬದಲಾಯಿಸುವುದಾದರೆ, ಮುಂದೆ ವೋಟಿಗಾಗಿ ಇವರು ಯಾವ ಮಟ್ಟಕ್ಕೆ ಇಳಿಯಬಹುದು ಎಂಬ ಅನುಮಾನ ಕಾಡುವುದಿಲ್ಲವೆ? ಕಾಂಗ್ರೆಸ್ ವಿರೋಧಿಸಿ ಪ್ರಜಾರಾಜ್ಯಂ ಕಟ್ಟಿದ ಚಿರಂಜೀವಿ ಈಗ ಕಾಂಗ್ರೆಸ್ ಸೇರಿದಂತೆ ಈ ಅಣ್ಣಾ ತಂಡದವರೂ ಕಾಂಗ್ರೆಸ್್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬುದಕ್ಕೆ ಯಾವ ಖಾತ್ರಿಯಿದೆ? ಬಾಬಾ ರಾಮ್್ದೇವ್ ರಾಮಲೀಲಾ ಮೈದಾನದಲ್ಲಿ ಉಪವಾಸಕ್ಕೆ ಕುಳಿತಾಗ ಸರ್ಕಾರ ಲಾಠಿ ಚಾರ್ಚ್ ಮಾಡಿಸಿತು. ಆದರೆ ಅಣ್ಣಾ ತಂಡವರು ಜಂತರ್್ಮಂತರ್್ನಲ್ಲಿ ಮೂರು ಸಲ ಉಪವಾಸ ಮಾಡಿದರೂ ಏಕೆ ಒಮ್ಮೆಯೂ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸಲಿಲ್ಲ? ರಾಮದೇವ್ ಸಹಾಯಕ ಆಚಾರ್ಯ ಬಾಲಕೃಷ್ಣ ಅವರನ್ನು ಸಿಬಿಐ ಜಾಮೀನು ರಹಿತ ಬಂಧನ ಮಾಡಿದೆ. ಅಂತಹ ಯಾವ ಕ್ರಮವನ್ನು ಅಣ್ಣಾ ತಂಡದ ವಿರುದ್ಧ ತೆಗೆದುಕೊಂಡಿದ್ದಾರೆ?
ಅಣ್ಣಾ ಹಝಾರೆಯವರು ಇವತ್ತು ಲೋಕಪಾಲಕ್ಕಾಗಿ ಹೋರಾಡುತ್ತಿರಬಹುದು. ಬಾಬಾ ರಾಮ್್ದೇವ್ ಕೂಡ ಕಡಿಮೆಯೇನಲ್ಲ. ಕಳೆದ ಹತ್ತು ವರ್ಷಗಳಿಂದ ಜನಜಾಗೃತಿ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಮೊದಮೊದಲಿಗೆ ಪೆಪ್ಸಿ, ಕೋಲಾದಿಂದಾಗುವ ಆರೋಗ್ಯಹಾನಿಯ ಬಗ್ಗೆ ಹೇಳಿದರು. ನಂತರ ಬಹುರಾಷ್ಟ್ರೀಯ ಕಂಪನಿಗಳ ಲೂಟಿಯ ಬಗ್ಗೆ ಗಮನ ಸೆಳೆದರು, ಆನಂತರ ದೇಶದ ಮೂಲೆಮೂಲೆಗೂ ಹೋಗಿ ಬ್ಲ್ಯಾಕ್್ಮನಿ ಬಗ್ಗೆ ಧ್ವನಿಯೆತ್ತಿದರು. ಆದರೆ ಅಣ್ಣಾ ಮತ್ತು ರಾಮ್್ದೇವ್ ಮಧ್ಯೆ ಇರುವ ವ್ಯತ್ಯಾಸವೆಂದರೆ ಅಣ್ಣಾಗೆ ಇಂಗ್ಲಿಷ್ ಬಲ್ಲ ಪ್ರಳಯಾಂತಕ ಶಿಷ್ಯರಿದ್ದಾರೆ, ರಾಮ್್ದೇವ್ ಪರ ಮಾತನಾಡುವವರು ಹಿಂದಿ ಮಾತನಾಡುವವರು. ಈ ಪ್ರಳಯಾಂತಕರು ಮೊದಲು ಲೋಕಪಾಲ್, ನಂತರ ಎಲೆಕ್ಟೋರಲ್ ರಿಫಾರ್ಮ್ಸ್ ಅಥವಾ ಚುನಾವಣಾ ಸುಧಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಬೊಬ್ಬೆಹಾಕುತ್ತಿದ್ದರು. ಅವುಗಳನ್ನೆಲ್ಲಾ ಮಧ್ಯಕ್ಕೆ ಬಿಟ್ಟು ಪಕ್ಷ ಕಟ್ಟಲು ಹೊರಟಿರುವುದೇಕೆ? ಇವರನ್ನು ನೋಡಿದರೆ ವಿ.ಪಿ. ಸಿಂಗ್ ನೆನಪಾಗುತ್ತಾರೆ! ‘ನಾನೇ ಬೊಫೋರ್ಸ್ ಹಗರಣವನ್ನು ಬೆಳಕಿಗೆ ತಂದಿದ್ದು’ ಅಂತೆಲ್ಲ ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಅವರು ಆಮೇಲೆ ಮಾಡಿದ್ದೇನು? ಬೊಫೋರ್ಸ್ ಹಗರಣದ ಬಗ್ಗೆ ಸೂಕ್ತ ತನಿಖೆಯನ್ನೇ ಮಾಡಿಸಲಿಲ್ಲ, ಅಲ್ಲವೇ?
ಅಣ್ಣಾ ತಂಡದವರೇ, ಈ ದೇಶದ ಎಷ್ಟೋ ಮತದಾರರು ಅನಕ್ಷರಸ್ಥರಿರಬಹುದು, ಆದರೆ ದಡ್ಡರಲ್ಲ. ದಕ್ಷಿಣ ದಿಲ್ಲಿಯಲ್ಲಿ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನು 1999ರಲ್ಲಿ ಜನ ಸೋಲಿಸಿದ್ದರು, ‘ಯು ಕ್ಯಾನ್ ವಿನ್್’ ಎಂಬ ಜನಪ್ರಿಯ ಪುಸ್ತಕ ಬರೆದ ಶಿವ ಖೇರಾ ಕೂಡಾ ಠೇವಣಿ ಕಳೆದುಕೊಂಡ ಉದಾಹರಣೆ ನಮ್ಮ ಮುಂದಿದೆ. ಕ್ಯಾಪ್ಟನ್ ಗೋಪಿನಾಥ್ 2009ರಲ್ಲಿ ಬೆಂಗಳೂರು ದಕ್ಷಿಣದಲ್ಲಿ ಠೇವಣಿ ಕಳೆದುಕೊಂಡಿದ್ದರು, ಶಿವರಾಮ ಕಾರಂತರು, ಜನರಲ್ ತಿಮ್ಮಯ್ಯ ಸೋತಿದ್ದಿದೆ, ವಿಶ್ವಕಪ್ ಗೆದ್ದಾಗ ಪಾಕಿಸ್ತಾನದಾದ್ಯಂತ ಎದ್ದ ಜನಪ್ರಿಯತೆಯ ಅಲೆಯಿಂದ ಉತ್ತೇಜಿತರಾಗಿ ಅಧಿಕಾರ ಹಿಡಿಯಲು ‘ತೆಹ್ರಿಕೆ ಇನ್ಸಾಫ್್’ ಪಕ್ಷ ಕಟ್ಟಿದ ಇಮ್ರಾನ್ ಖಾನ್ ಸ್ಪರ್ಧಿಸಿದ 6 ಕಡೆಗಳಲ್ಲೂ ಸೋತಿದ್ದು ನೆನಪಿರಬೇಕಲ್ಲವೇ? ಇವತ್ತು ಅಣ್ಣಾ ಟೀಮಿನಲ್ಲಿ ಮಾನಸಿಕವಾಗಿ ಸ್ಥಿಮಿತದಲ್ಲಿರುವ, ಪ್ರಾಮಾಣಿಕರೆನಿಸಿಕೊಂಡಿರುವ, ಯಾವುದೇ ಉದ್ದೇಶಗಳಿಟ್ಟುಕೊಳ್ಳದ, ಸ್ವತಂತ್ರ್ಯವಾಗಿ ಯೋಚಿಸುವ ಹಾಗೂ ಭ್ರಷ್ಟಾಚಾರದ ಬಗ್ಗೆ ನಿಜವಾಗಿಯೂ ಸಾತ್ವಿಕ ಸಿಟ್ಟು ಇಟ್ಟುಕೊಂಡಿರುವ ಏಕೈಕ ವ್ಯಕ್ತಿ ನಮ್ಮ ಸಂತೋಷ್ ಹೆಗ್ಡೆ ಮಾತ್ರ.
ಅಣ್ಣಾ ಅವರೇ, ನಿಮ್ಮ ತಂಡದಲ್ಲಿರುವವರಾರೂ ನಿಮ್ಮ ಮಾತು ಕೇಳುವುದಿಲ್ಲ ಎಂಬುದನ್ನು ಕಳೆದ ಜುಲೈನಲ್ಲಿ ನಡೆದ ಗೌಪ್ಯ ಮಾತುಕತೆ ವೇಳೆ ನೀವೇ ಒಪ್ಪಿಕೊಂಡಿದ್ದೀರಿ ಎಂದು ಕೇಂದ್ರ ಸಚಿವ ಹಾಗೂ ಸರ್ಕಾರದ ಪ್ರತಿನಿಧಿಯಾಗಿದ್ದ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ನಿಮ್ಮ ವೈಯಕ್ತಿಕ ಬ್ಲಾಗರ್ ಆಗಿದ್ದ ರಾಜು ಪರುಲೇಕರ್, ನಿಮ್ಮನ್ನು ಕಿರಣ್ ಬೇಡಿ ಮತ್ತು ಕೇಜ್ರೀವಾಲ್ ಹೇಗೆ ಬಂಧಿಯಾಗಿಟ್ಟುಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಈ ಮಧ್ಯೆ, “If Anna cannot run Team Anna, then how can he run the country’ ಎಂದು ಸುಬ್ರಹ್ಮಣ್ಯಂ ಸ್ವಾಮಿ ನಿಮ್ಮನ್ನು ಪ್ರಶ್ನಿಸಿದ್ದಾರೆ. ‘ಕುದುರೆ ಕಟ್ಟಲು ಬಾರದವನು ರಥ ಚಲಾಯಿಸಿಯಾನೇ?’ ಎಂಬ ಮಾತಿರುವುದು ನಿಮಗೂ ಗೊತ್ತಿರಬಹುದು. ಇಷ್ಟಕ್ಕೂ ನೀವು ಯಾವ ಭಾರತಮಾತೆಯಿಂದ ಪ್ರೇರಣೆ ಪಡೆಯುತ್ತಿದ್ದಿರೋ ಅದೇ ಭಾರತಮಾತೆಯ ಭಾವಚಿತ್ರವನ್ನು ಚಿಹ್ನೆಯಿಂದಲೇ ಕಿತ್ತೊಗೆಯುತ್ತಾರೆಂದರೆ ನಿಮಗೆ ನಿಮ್ಮ ತಂಡದ ಮೇಲೆ ಯಾವ ನಿಯಂತ್ರಣವಿದೆ ಹೇಳಿ ಅಣ್ಣಾ? ನಿಮ್ಮ ತಂಡದ ಸಾಚಾತನದ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನ, ಅಪನಂಬಿಕೆ ಮೂಡುವುದಿಲ್ಲವೇ? ಅಣ್ಣಾ, ನೀವು ಮೂಲತಃ ಸೇನೆಯಲ್ಲಿ ಟ್ರಕ್ ಡ್ರೈವರ್ ಆಗಿದ್ದವರು. ಕ್ಲೀನರ್್ಗಳು ಗಾಡಿ ಚಲಾಯಿಸಿ ಆ್ಯಕ್ಸಿಡೆಂಟ್ ಮಾಡುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ! ನಿಮ್ಮ ತಂಡದವರೂ ಕಾಂಗ್ರೆಸ್್ಗೆ ಲಾಭ ಮಾಡಿಕೊಡುವ ಸಲುವಾಗಿ ಪಕ್ಷ ಕಟ್ಟಿ ದೇಶವನ್ನು ಹೊಂಡಕ್ಕೆ ಕೆಡವದಿದ್ದರೆ ಸಾಕು. ಅಂದಹಾಗೆ, ನೀವು ಮೇಲ್ಪಂಕ್ತಿಯಾಗಿಟ್ಟುಕೊಂಡಿರುವ ಮಹಾತ್ಮ ಗಾಂಧೀಜಿಯವರೂ ಕೊನೆಗೆ ಚುಕ್ಕಾಣಿಯನ್ನು ನೆಹರುಗೆ ಕೊಟ್ಟು ದೇಶವನ್ನು ಹಳ್ಳಕ್ಕೆ ತಳ್ಳಿದ್ದರು.
ಎಚ್ಚರ!
  - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ