ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಸೆಪ್ಟೆಂಬರ್ 11, 2012

ಬಾಯ್ಬಿಟ್ಟರೆ ಬಣ್ಣ ಬಯಲಾಗುತ್ತೆಂಬ ಭಯವೇ ಮನಮೋಹನ್ ಸಿಂಗ್?

ಹಝಾರೋ ಜವಾಬೋನ್ ಸೆ ಅಚ್ಛಿ ಹೈ ಖಾಮೋಶಿ ಮೇರಿ
ನ ಜಾನೆ ಕಿತ್ನೆ ಸವಾಲೋ ಕೀ ಆಬ್ರೂ ರಖೇ…
ಇತಿಹಾಸ ಕಂಡು ಕೇಳರಿಯದ 1.85 ಲಕ್ಷ ಕೋಟಿ ಮೊತ್ತದ ಕಲ್ಲಿದ್ದಲು ಹಗರಣ ನಿಮ್ಮ ಮೂಗಿನ ಕೆಳಗೇ ಹೇಗೆ ಸಂಭವಿಸಿತು ಹೇಳಿ? ಈ ದೇಶದ ಪ್ರಜೆಗಳಿಗೆ, ನಿಮ್ಮನ್ನು ಆಯ್ಕೆ ಮಾಡಿರುವ ಮತದಾರರಿಗೆ ಉತ್ತರ ಕೊಡಿ? ಎಂದು ಕೇಳಿದರೆ ‘ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಮೇಲು’ ಎನ್ನುತ್ತಾರಲ್ಲಾ…. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯೊಬ್ಬರು ಹೇಳುವಂಥ ಮಾತೇ ಇದು?! ಇದಕ್ಕಿಂತ ಬೇಜವಾಬ್ದಾರಿತನ ಬೇರೊಂದಿದೆಯೇ? ಇದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನವಲ್ಲದೆ ಮತ್ತೇನು? ಅಷ್ಟು ಮಾತ್ರವಲ್ಲ, ‘ನನ್ನನ್ನೇ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡ ಟೀಕೆಗಳಿಗೆ ಉತ್ತರಿಸದಿರುವುದು ನನ್ನ ಸಾಮಾನ್ಯ ಧೋರಣೆ’ ಎಂದೂ ಹೇಳಿದ್ದಾರೆ!

ಅಲ್ಲಾ…
ಈ ಮಾತನ್ನು ಹೇಳುತ್ತಿರುವುದು ನಿಜಕ್ಕೂ ಮನಮೋಹನ್ ಸಿಂಗ್ ಅವರೇನಾ? ಅವರಿಗೇನಾದರೂ ಮರೆವಿನ ಸಮಸ್ಯೆ ಇದೆಯಾ? 2008 ಜುಲೈನಲ್ಲಿ ಅಮೆರಿಕದೊಂದಿಗಿನ ನಾಗರಿಕ ಅಣುಸಹಕಾರ ಒಪ್ಪಂದದ ಸಂಬಂಧ ಸಂಸತ್ತಿನಲ್ಲಿ ಎದುರಾಗಿದ್ದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಅಂತಿಮ ಉತ್ತರ ಕೊಡುವಾಗ ಹಾಗೂ ಹಣಕೊಟ್ಟು ವೋಟು ಖರೀದಿ ಮಾಡಿ ವಿಶ್ವಾಸಮತ ಗೆದ್ದ ತರುವಾಯ ವಿರೋಧ ಪಕ್ಷದ ನಾಯಕ ಲಾಲಕೃಷ್ಣ ಆಡ್ವಾಣಿಯವರ ವಿರುದ್ಧ ತಾವೇ ಮಾಡಿದ್ದ ವೈಯಕ್ತಿಕ ದಾಳಿ ಮನಮೋಹನ್ ಸಿಂಗ್್ರಿಗೆ ಅಷ್ಟು ಬೇಗ ಮರೆತುಹೋಯಿತೇ? ಅಂದು ‘ಆಡ್ವಾಣಿಯವರೇ ನಿಮ್ಮ ಆಸ್ಟ್ರಾಲಜರನ್ನು (ಜ್ಯೋತಿಷಿ) ಬದಲಾಯಿಸಿಕೊಳ್ಳಿ’ ಎಂದು (ನೀವು ಪ್ರಧಾನಿಯಾಗುವುದಿಲ್ಲ ಎಂದು ತಿವಿಯಲು) ಕುಹಕವಾಡಲು ಮನಮೋಹನ್ ಸಿಂಗ್್ಗೆ ಬಾಯಿ ಬರುತ್ತದೆ, ‘ಆಡ್ವಾಣಿಯವರು ಪ್ರಧಾನಿ ಸ್ಥಾನ ತಮ್ಮ ಆಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ’ ಎಂದು ವೈಯಕ್ತಿಕ ದಾಳಿ ಮಾಡಲು, ಚುಚ್ಚು ಮಾತನಾಡಲು ಅವರ ನಾಲಗೆ ಹೊರಳುತ್ತದೆ, ಆದರೆ ಹಗರಣದ ಬಗ್ಗೆ ವಿವರಣೆ ಕೊಡಿ ಎಂದು ಕೇಳಿದ ಕೂಡಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆಯೇ?
Oil for Food ಅಥವಾ ತೈಲಕ್ಕಾಗಿ ಆಹಾರ ಹಗರಣ
ಮುಂಬೈ ದಾಳಿ
ಕಾಮನ್ವೆಲ್ತ್ ಹಗರಣ
2ಜಿ ಹಗರಣ
ಆದರ್ಶ್ ಹೌಸಿಂಗ್ ಹಗರಣ
ಲವಾಸಾ ಹಗರಣ
ಕಲ್ಲಿದ್ದಲು ಹಗರಣ
ಅದರ ಬೆನ್ನಲ್ಲೇ ಕೇಳಿಬರುತ್ತಿದೆ ಥೋರಿಯಂ ಹಗರಣ
ಇಂತಹ ಹಗರಣಗಳು ನಡೆದಾಗ ಅವುಗಳ ಹೊಣೆಗಾರಿಕೆ ಯಾರದ್ದಾಗುತ್ತದೆ? ಯಾರು ಅವುಗಳನ್ನು ನಿಯಂತ್ರಿಸುವ, ಸಂಭವಿಸಿದ ನಂತರ ಸಮಜಾಯಿಷಿ ನೀಡುವ, ಸರಿಪಡಿಸುವ ಜವಾಬ್ದಾರಿ ಹೊಂದಿರುತ್ತಾರೆ? ಅವುಗಳ ಬಗ್ಗೆ ದೇಶಕ್ಕೆ ಉತ್ತರಿಸಬೇಕಾದವರು ಯಾರು?
ಪ್ರಧಾನಿಯಲ್ಲವೆ? ಆದರೆ ನಮ್ಮ ಪ್ರಧಾನಿ ಮನಮೋಹನ್್ಸಿಂಗ್ ಮಾಡುತ್ತಿರುವುದೇನು? ನಾಗರಿಕ ಅಣುಸಹಕಾರ ಒಪ್ಪಂದ ಏಕೆ ಅಗತ್ಯ ಎಂದು ಸಂಸತ್ತಿಗೆ ವಿವರಿಸುವಾಗ ‘ನಾನೊಬ್ಬ ಹಳ್ಳಿಯಿಂದ ಬಂದವನು…’ ಎಂದು ಭಾವನಾತ್ಮಕ ಭಾಷಣ ಕೊಡಲು ಆಗುತ್ತದೆ, ಆದರೆ ಹೊಣೆಗಾರಿಕೆಯನ್ನು ಕೇಳಿದರೆ ಮೌನವೇಕೆ? ನಾವು ನಮ್ಮ ಸಂವಿಧಾನವನ್ನು ಪ್ರಮುಖವಾಗಿ ಯಾವ ದೇಶದಿಂದ ನಕಲು ಮಾಡಿಕೊಂಡಿದ್ದೇವೋ ಆ ಬ್ರಿಟನ್್ನಲ್ಲಿ ಚುನಾವಣೆ ನಂತರ ಗೆದ್ದವರು ಆಡಳಿತ ಪಕ್ಷವಾದರೆ ವಿರೋಧ ಪಕ್ಷಗಳನ್ನು ‘ಪೀಪಲ್ಸ್ ರೆಪ್ರಸೆಂಟಟೀವ್ಸ್್’ ಎನ್ನುತ್ತಾರೆ. ಅಂದರೆ ಜನರ ಪರವಾಗಿ ಧ್ವನಿಯೆತ್ತುವವರು, ಜನರ ಪರ ವಕಾಲತ್ತು ವಹಿಸುವವರು, ಜನರಿಗೆ ಅನ್ಯಾಯವಾದರೆ ಪ್ರತಿರೋಧವೊಡ್ಡುವವರು ಎಂದರ್ಥ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಎತ್ತಿರುವುದೂ ಜನಪರ ಧ್ವನಿಯನ್ನೇ. ಅದಕ್ಕೇಕೆ ನೀವು ಉತ್ತರ ನೀಡುತ್ತಿಲ್ಲ? ಇಡೀ ದೇಶಕ್ಕೇ ಉತ್ತರದಾಯಿಯಾದ ಪ್ರಧಾನಿಗೆ “Right to silence not available to Prime Minister’, ಮೌನ ತಳೆಯುವ ಹಕ್ಕು, ಅವಕಾಶವಿಲ್ಲ ಎಂದು ಅರುಣ್ ಜೇಟ್ಲಿ ಹೇಳಿರುವುದು ನಿಮಗೆ ಅರ್ಥವಾಗುತ್ತಿವಲ್ಲವೇ?
ಅಥವಾ
‘ಮೌನಂ ಸಮ್ಮತಿ ಲಕ್ಷಣಂ’ ಎಂದು ನಿಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೀರಾ ಮಿಸ್ಟರ್ ಮನಮೋಹನ್? ಈಗ ನೀವು ತಳೆದಿರುವ ಮೌನವನ್ನು ನೋಡಿದರೆ 2008ರಲ್ಲಿ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಅನುಮೋದನೆ ಪಡೆಯುವಾಗ ಸರ್ಕಾರವನ್ನೇ ಪಣಕ್ಕಿಟ್ಟಿದ್ದರ ಬಗ್ಗೆಯೂ ಅನುಮಾನಗಳೇಳುತ್ತಿವೆ. ಪ್ರಸ್ತುತ ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿ, ಹೊರಬರುತ್ತಿರುವ ಭಾರಿ ಹಗರಣಗಳನ್ನು ನೋಡಿದರೆ ಅಣು ಒಪ್ಪಂದದ ಹಿಂದೆಯೂ ಯಾವುದೋ ಲಾಭದಾಯಕ ಲೆಕ್ಕಾಚಾರ ಇದ್ದೇ ಇರಬೇಕು ಎಂದನಿಸುತ್ತಿಲ್ಲವೆ? ತಮ್ಮ ಸರ್ಕಾರದ ಉಳಿವನ್ನೇ ಪಣಕ್ಕಿಟ್ಟು, ಸಂಸದರನ್ನು ಖರೀದಿಸಿ ಒಪ್ಪಂದಕ್ಕೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳುತ್ತಾರೆಂದರೆ ಇವರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನಗಳೇಳುವುದಿಲ್ಲವೆ?
ಹಾಗಂತ ಮನಮೋಹನ್ ಸಿಂಗ್ ಮಾತನಾಡುವುದೇ ಇಲ್ಲ, ಅಂತಲ್ಲ!
2009, ಮಾರ್ಚ್ 25ರಂದು ಕಾಂಗ್ರೆಸ್್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಸೋನಿಯಾ ಗಾಂಧಿಯವರು, ‘ಮನಮೋಹನ್ ಸಿಂಗ್ ಅವರೇ ನಮ್ಮ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ’ ಎಂದು ಘೋಷಣೆ ಮಾಡಿದರು. ಪಕ್ಕದಲ್ಲೇ ಇದ್ದ ಮನಮೋಹನ್ ಸಿಂಗ್ ಎಷ್ಟು ಉತ್ಸಾಹಿತರಾದರೆಂದರೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲಕೃಷ್ಣ ಆಡ್ವಾಣಿಯವರ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದರು. ಆಡ್ವಾಣಿಯವರನ್ನು ‘ಅವಕಾಶವಾದಿ’ ಎಂದು ಟೀಕಿಸಿದರು. ‘ಆಡ್ವಾಣಿಯವರು ಗೃಹ ಸಚಿವರಾಗಿದ್ದಾಗ ಸಂಸತ್ತಿನ ಮೇಲೆ ದಾಳಿಯಾಯಿತು, ಕೆಂಪುಕೋಟೆ ಮೇಲೆ ಆಕ್ರಮಣ ನಡೆಯಿತು, ಗುಜರಾತ್ ಹತ್ಯಾಕಾಂಡ ಸಂಭವಿಸಿತು, ಇಂಡಿಯನ್ ಏರ್್ಲೈನ್ಸ್ ವಿಮಾನವೂ ಅಪಹರಣಕ್ಕೊಳಗಾಯಿತು. ಕೊನೆಗೆ ಭಯೋತ್ಪಾದಕರಿಗೇ ಬಿಡುಗಡೆಯ ಉಡುಗೊರೆ ಸಿಕ್ಕಿತು. ಆಡ್ವಾಣಿಯವರ ಸಾಧನೆ ಇದೇ!’ ಎಂದಿದ್ದರು.
ಮನಮೋಹನ್ ಸಿಂಗ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಮಗ್ಗುಲಲ್ಲೇ ಸೋನಿಯಾ ಗಾಂಧಿಯವರು ಕುಳಿತಿದ್ದ ಕಾರಣದಿಂದಲೋ ಏನೋ ಹಿಂದೆಂದೂ ಕಾಣದಂತಹ ಧೈರ್ಯ ತೋರಿಸಿದ ಅವರು, ‘ನಾನು ದುರ್ಬಲ ಪ್ರಧಾನಿಯೋ ಅಥವಾ ಪ್ರಬಲ ಪ್ರಧಾನಿಯೋ ಎಂಬುದನ್ನು ನಮ್ಮ ಸರ್ಕಾರದ ಸಾಧನೆಗಳೇ ಹೇಳುತ್ತವೆ. ಆದರೆ ನನ್ನನ್ನು ದುರ್ಬಲ ಪ್ರಧಾನಿ ಎನ್ನುವ ಆಡ್ವಾಣಿಯವರು, ಬಾಬರಿ ಮಸೀದಿ ನೆಲಸಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಬಿಟ್ಟರೆ ರಾಷ್ಟ್ರ ಕಲ್ಯಾಣಕ್ಕೆ ಯಾವ ಕೊಡುಗೆ ಕೊಟ್ಟಿದ್ದಾರೆ?’ ಎಂದು ಬಿಟ್ಟರು! ಅದು ನಿಜಕ್ಕೂ ಗಂಭೀರ ಆರೋಪವಾಗಿತ್ತು. ಆ ಸಮಯದಲ್ಲಿ ವರುಣ್ ಗಾಂಧಿಯವರು ಕೋಮುದ್ವೇಷ ಹುಟ್ಟು ಹಾಕಿದ್ದಾರೆ ಎಂದು ಯಾವ ಭಾಷಣವನ್ನು ಕಾಂಗ್ರೆಸ್ ಟೀಕಿಸುತ್ತಿತ್ತೋ, ಮನಮೋಹನ್ ಸಿಂಗ್ ಟೀಕೆ ಕೂಡ ಅಷ್ಟೇ ಅಪಾಯಕಾರಿಯಾಗಿತ್ತು. ಹಾಗಂತ ಆಡ್ವಾಣಿಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನ ಅಂದರೆ ಮಾರ್ಚ್ 26 ರಂದು ಅರುಣಾಚಲ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಲು ನಿಂತ ಆಡ್ವಾಣಿಯವರು, ಮನಮೋಹನ್್ಸಿಂಗ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಸೋನಿಯಾ ಗಾಂಧಿಯವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಪ್ರಧಾನಿ ಯಾರಾಗಬಹುದೆಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆದರೆ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯ ಹಿಂಬಾಗಿಲು ಬಿಟ್ಟು ನೇರವಾಗಿ ಜನರಿಂದ ಲೋಕಸಭೆಗೆ ಆಯ್ಕೆಯಾಗಬೇಕು! ಆಗ ಜನರೂ ಅವರನ್ನು ಒಪ್ಪಿಕೊಳ್ಳುತ್ತಾರೆ  ಎಂದು ಮೊದಲ ಗುದ್ದು ನೀಡಿದರು. ಮನಮೋಹನ್್ಸಿಂಗ್ ಅವರು ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ. ಸೋನಿಯಾ ಗಾಂಧಿಯವರ ಅನುಮತಿಯಿಲ್ಲದೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ! ಸೋನಿಯಾ ಅಂಕಿತವಿಲ್ಲದೆ ಒಂದು ಕಡತವೂ ಮುಂದೆ ಸಾಗುವುದಿಲ್ಲ’ ಎಂದು ಟೀಕಾಪ್ರಹಾರ ಮಾಡಿದರು. ಅಷ್ಟಲ್ಲದೆ, ಅಮೆರಿಕದಲ್ಲಿ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳು ಟಿವಿ ಮುಂದೆ ನೇರವಾಗಿ ಚರ್ಚಾಸಮರ ನಡೆಸುತ್ತಾರೆ. ಇಡೀ ದೇಶ ಅದನ್ನು ವೀಕ್ಷಿಸಿ, ಯಾರಿಗೆ ವೋಟು ಹಾಕಬೇಕೆಂದು ನಿರ್ಧರಿಸುತ್ತದೆ. ಮನಮೋಹನ್್ಸಿಂಗ್ ಅವರ ಜತೆ ನಾನೂ ನೇರ ಚರ್ಚೆಗೆ ಸಿದ್ಧನಿದ್ದೇನೆ ಎಂದರು.
ಅಂದು ಮನಮೋಹನ್ ಸಿಂಗ್ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಆ ಸವಾಲನ್ನು ಸ್ವೀಕರಿಸಬೇಕಿತ್ತು ಹಾಗೂ ಸ್ವೀಕರಿಸುತ್ತಿದ್ದರು. ಆದರೆ ಪ್ರಧಾನಿಯಂಥ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿದ್ದ, ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೂ ಬಿಂಬಿತವಾಗಿದ್ದ ಮನಮೋಹನ್ ಸಿಂಗ್ ಸವಾಲೆಸೆದ 15 ದಿನಗಳಾದರೂ ಪ್ರತಿಕ್ರಿಯಿಸಲಿಲ್ಲ! ಕೊನೆಗೆ ಪಕ್ಷದ ವಕ್ತಾರೆ ಜಯಂತಿ ನಟರಾಜನ್ ಮೂಲಕ ‘ಈ ಆಡ್ವಾಣಿಗೆ ಅಮೆರಿಕದ ಬಗ್ಗೆ ವ್ಯಾಮೋಹ ಹೆಚ್ಚು’ ಎಂದು ಹೇಳಿಕೆ ಕೊಡಿಸಿ ಖಠ್ಝಡಿ ಛಟಿಜ ಖ್ಡಟಿ ಥರಾ ಓಡಿಹೋಗಿದ್ದರು.
ಮನಮೋಹನ್ ಸಿಂಗ್ ಅವರೇ, ಬೇರೆಯವರ ಮೇಲೆ ಆರೋಪ ಮಾಡುವವರು, ತಮ್ಮ ಮೇಲೆ ಆರೋಪ ಬಂದಾಗಲೂ ಉತ್ತರಿಸಬೇಕಾಗುತ್ತದೆ. ಕಂದಹಾರ್, ಬಾಬರಿ ಮಸೀದಿ ನೆಲಸಮದ ಬಗ್ಗೆ ಆಡ್ವಾಣಿಯವರನ್ನು ಟೀಕಿಸುವ, ಅವರಿಂದ ಹೊಣೆಗಾರಿಕೆ ಕೇಳುವ ನಿಮಗೆ ಹೊಣೆಗಾರಿಕೆ, ಉತ್ತರದಾಯಿತ್ವ ಇಲ್ಲವೆ? ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಬಿಟ್ಟರೆ ಇಷ್ಟೊಂದು ದೀರ್ಘ ಕಾಲ ದೇಶವಾಳಿದ್ದು ತಾವೇ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು, ನಿಮ್ಮ ಅಧಿಕಾರಾವಧಿಯಲ್ಲಿ ನಡೆದಷ್ಟು ಥರಾವರಿ ಹಗರಣಗಳು ಸ್ವತಂತ್ರ ಭಾರತದ ಒಟ್ಟಾರೆ ಇತಿಹಾಸದಲ್ಲೇ ನಡೆದಿಲ್ಲ ಎಂದ ಕೂಡಲೇ ಮುನಿಸಿಕೊಳ್ಳುವುದೇಕೆ? ಈ ದೇಶದ ಸಂಪತ್ತಿನ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕಿದೆ ಎಂದು ಹೇಳುವುದಕ್ಕೆ ಇವರಿಗೆ ಬಾಯಿಬರುತ್ತದೆ! ಕಲ್ಲಿದ್ದಲಿನಂಥ 1.85 ಲಕ್ಷ ಕೋಟಿ ಹಗರಣ ಹೇಗಾಯಿತು ಎಂದು ಕೇಳಿದರೆ ಬಾಯಿ ಬಿಡುವುದಿಲ್ಲ ಎನ್ನುವ ನಿಮ್ಮನ್ನು “Silence of tragic PM’ ಎಂದು ‘ವಾಷಿಂಗ್ಟನ್ ಪೋಸ್ಟ್್’ ಪತ್ರಿಕೆ ಕರೆದಿದ್ದರಲ್ಲಿ ಯಾವ ತಪ್ಪಿದೆ ಹೇಳಿ? ಅಮೆರಿಕದ ಪ್ರತಿಷ್ಠಿತ ಟೈಮ್ಸ್ ಮ್ಯಾಗಝೀನ್ ನಿಮ್ಮನ್ನು “The Underachiever’ ಎಂದು ಕರೆದ ಕೂಡಲೇ, ನಮಗೆ ಅನ್ಯರಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದು ಗರತಿಯಂತೆ ಫೋಸ್ ಕೊಡುವುದೇಕೆ?
ಭಾರತೀಯ ಮಾಧ್ಯಮಗಳು ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಶ್ ಹಾಗೂ ಒಬಾಮ ವಿರುದ್ಧ ಅದೆಷ್ಟು ಕವರ್ ಸ್ಟೋರಿಗಳನ್ನು ಪ್ರಕಟಿಸಿಲ್ಲ ಹೇಳಿ?
ಇತ್ತೀಚೆಗೆ ಆಮೀರ್ ಖಾನ್ ಅವರು ಟೈಮ್ಸ್ ಮ್ಯಾಗಝೀನ್್ನ ಕವರ್ ಪೇಜ್ ಮೇಲೆ ಕಾಣಿಸಿಕೊಂಡಾಗ ಖುಷಿ ಪಟ್ಟ ನಾವು, ‘ವಾಷಿಂಗ್ಟನ್ ಪೋಸ್ಟ್್’ ಮನಮೋಹನ್ ಸಿಂಗ್ ಅವರ ಎರಡನೇ ಅವಧಿ ಕಳಪೆ ಹಾಗೂ ಅವರು ಅತ್ಯಂತ ಭ್ರಷ್ಟ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದರೆ ಏಕೆ ಮುನಿಸಿಕೊಳ್ಳಬೇಕು? ಜತೆಗೆ ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಗಾಂಧಿಯವರ “poodle’ (ಸಾಕುಪ್ರಾಣಿ) ಎಂದಿರುವುದು ಕಟು ಪದವೇ ಆಗಿದ್ದರೂ ಅದು ನಿಜವಲ್ಲವೇ? ಒಂದು ವೇಳೆ, ಅವರು ಸೋನಿಯಾ ಅವರ ಕೈಗೊಂಬೆಯಲ್ಲದೆ ಹೋದರೆ ತಪ್ಪಿತಸ್ಥರನ್ನು ಸಂಪುಟದಿಂದ ಕೈಬಿಟ್ಟು ಆ ಮೂಲಕವಾದರೂ ಉತ್ತರ ಕೊಡಿ ನೋಡೋಣ?
ಅಥವಾ
ಬಾಯಿ ಬಿಟ್ಟರೆ ಬಣ್ಣ ಬಯಲಾಗುತ್ತದೆ ಎಂದು ಬಾಯ್ಮುಚ್ಚಿಕೊಂಡಿದ್ದೀರಾ ಮನಮೋಹನ್ ಸಿಂಗ್?
 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ