ನನ್ನ ಬ್ಲಾಗ್ ಪಟ್ಟಿ

ಶನಿವಾರ, ಸೆಪ್ಟೆಂಬರ್ 1, 2012

ಕ್ಯಾಸಲ್‌ರಾಕ್ ಅರಣ್ಯದಲ್ಲಿ ಟಾರ್ಗೆಟ್ ಪ್ರಾಕ್ಟಿಸ್!

ಹುಬ್ಬಳ್ಳಿ: ಮಾಧ್ಯಮದ ಪ್ರಮುಖರು, ರಾಜಕಾರಣಿಗಳು ಮತ್ತು ಹಿಂದೂ ಪರ ಸಂಘಟನೆಯ ಪ್ರಮುಖರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲು ಹೋಗಿ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ೧೧  ಶಂಕಿತ ಉಗ್ರರಲ್ಲಿ ಕೆಲವರು ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಅರಣ್ಯದಲ್ಲಿ‘ಟಾರ್ಗೆಟ್ ಪ್ರಾಕ್ಟಿಸ್’ ನಡೆಸುತ್ತಿದ್ದರಂತೆ!

ಹುಬ್ಬಳ್ಳಿಯಲ್ಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಶಂಕಿತ ಉಗ್ರರು, ವಾರದಲ್ಲಿ ಎರಡ್ಮೂರು ಬಾರಿ ಕ್ಯಾಸಲ್‌ರಾಕ್ ಅರಣ್ಯದಲ್ಲಿ ಒಟ್ಟುಗೂಡಿ ಮರಗಳಿಗೆ ರಟ್ಟಿನ ಅಂಕಿಗಳ ಗುರುತು ಕಟ್ಟಿ ಗುಂಡು ಹೊಡೆದು ಗುರಿ ಸಾಧನೆ ಮಾಡುತ್ತಿದ್ದರಂತೆ. ಎತ್ತ ನೋಡಿದರತ್ತ ದಟ್ಟ ಕಾಡು. ಪಟ್ಟಣ-ಹಳ್ಳಿಗಳಿಂದ ದೂರ, ರೈಲು ಹಳಿ ಬಿಟ್ಟರೆ ಸುಸ್ಥಿತಿಯಲ್ಲಿರುವ ಬೇರೆ ರಸ್ತೆಯೂ ಇಲ್ಲದಿರುವ ಈ ಪ್ರದೇಶ ಒಗ್ಗೂಡುವಿಕೆಗೆ ಪ್ರಶಸ್ತ ಸ್ಥಳವಾಗಿದೆ. ಹಾಗಾಗಿ ಗುಂಡಿನ ಗುರಿ ಸಾಧನೆ, ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ತರಬೇತಿ, ಮಾಹಿತಿ ಹಂಚಿಕೊಳ್ಳುವುದು, ಒಟ್ಟುಗೂಡಿ ಚರ್ಚೆ, ಮುಂದಿನ ಯೋಜನೆ ರೂಪಿಸಲು ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದರು. ಬಂಧಿತರಲ್ಲಿ ಒಬ್ಬ ಸಿಸಿಬಿ ಪೊಲೀಸರಿಗೆ ಈ ಮಾಹಿತಿ ಬಾಯಿ ಬಿಟ್ಟಿದ್ದರಿಂದ ಈ ಗುಂಡಿನ ಜಾಡು ಹಿಡಿದು ಶೋಧಿಸುವ ಹೊಣೆ ಈಗ ಹುಬ್ಬಳ್ಳಿ ಮತ್ತು ಬೆಳಗಾವಿ ಪೊಲೀಸರ ಹೆಗಲಿಗೆ ಬಿದ್ದಿದೆ. ಈ ಕುರಿತಂತೆ ಯಾವುದೇ ಅಧಿಕಾರಿ ಖಚಿತಪಡಿಸುತ್ತಿಲ್ಲ. ಆದರೆ, ಕ್ಯಾಸಲ್‌ರಾಕ್ ಅರಣ್ಯದೆಡೆ ಪೊಲೀಸ್ ಜೀಪುಗಳು ಮಾತ್ರ ಓಡಾಡಲು ಶುರು ಮಾಡಿವೆ. ಇಷ್ಟರಲ್ಲಿಯೇ ಆ ಶಂಕಿತರನ್ನು ಈ ಅರಣ್ಯ ಪ್ರದೇಶಕ್ಕೆ ಕರೆದು ತರುವ ಸಾಧ್ಯತೆಗಳೂ ಇವೆ.

ಬದಲಾದ ತರಬೇತಿ ಸ್ಥಳ: ನಾಲ್ಕು ವರ್ಷಗಳ ಹಿಂದೆ ಇಂಥದೇ ದುಷ್ಕೃತ್ಯಕ್ಕೆ ಕೈ ಹಾಕಿ, ಸದ್ಯ ಹಿಂಡಲಗಾ ಜೈಲಿನಲ್ಲಿರುವ ೧೭ ಶಂಕಿತ ಉಗ್ರರೂ ಕಲಘಟಗಿ ಪಟ್ಟಣದ ಹಿಂದಿರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ‘ಟಾರ್ಗೆಟ್ ಪ್ರಾಕ್ಟಿಸ್’ ಮಾಡಿದ್ದನ್ನು ಬಂಧಿತರಲ್ಲಿ ಒಬ್ಬನಾದ ಡಾ. ಮಿರ್ಜಾ ಬೇಗ್ ತನಿಖೆ ನಡೆಸುತ್ತಿದ್ದ ಸಿಒಡಿ ಪೊಲೀಸ್ ತಂಡಕ್ಕೆ ಸ್ವತಃ ತೋರಿಸಿದ್ದ ಎನ್ನುವುದು ಇಲ್ಲಿ ಗಮನೀಯ. ಮರಗಳ ರೆಂಬೆಗಳಿಗೆ ಗುಂಡು ತಾಗಿರುವುದು, ದಪ್ಪ ಬೊಡ್ಡೆಯನ್ನು ಕಾಲಿನಿಂದ ವೇಗವಾಗಿ ಏರಿದ್ದ, ರೆಂಬೆಗಳಿಗೆ ನೇತಾಡಿ ನೆಲಕ್ಕೆ ಜಿಗಿದಿದ್ದ, ನೆಲದೊಳಗೆ ಅಡಗಿ ಕುಳಿತಿದ್ದ (ಬಂಕರ್), ಜಿಂಕೆ ಮರಿಯನ್ನು ಇಡಿಯಾಗಿ ಬೇಯಿಸಿ ತಿಂದಿದ್ದ ಕುರುಹುಗಳು ಈ ಟಾರ್ಗೆಟ್ ಪ್ರಾಕ್ಟಿಸ್ ಪ್ರದೇಶದಲ್ಲಿ ಲಭ್ಯವಾಗಿವೆ ಎನ್ನುವುದನ್ನು ಸಿಒಡಿ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ.

ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು, ಅಣೆಕಟ್ಟೆಗಳನ್ನು ಉಡಾಯಿಸುವುದು ಇವರ ಗುರಿಯಾಗಿತ್ತು. ಅದೃಷ್ಟ ಕೈಕೊಟ್ಟು ೨೧ರಲ್ಲಿ ೧೭ ಶಂಕಿತರು ಜೈಲು ಪಾಲಾಗಿದ್ದರಿಂದ ಇನ್ನುಳಿದವರ ಟಾರ್ಗೆಟ್ ಪ್ರಾಕ್ಟಿಸ್ ಸ್ಥಳ ಕಲಘಟಗಿ ಅರಣ್ಯದಿಂದ ಕ್ಯಾಸಲ್‌ರಾಕ್ ಅರಣ್ಯಕ್ಕೆ ಬದಲಾಗಿದೆ.

ಅಳಿಸದ ಉಗ್ರರ ನೆರಳು: ಸದ್ಯ ಹಿಂಡಲಗಾ ಜೈಲಿನಲ್ಲಿರುವ ಅಸಾದುಲ್ಲಾ ಅಬೂಬಕ್ಕರ್ ಮತ್ತು ಮೊಹ್ಮದ್ ಆಸೀಫ್ ದುಷ್ಕೃತ್ಯಕ್ಕಾಗಿ ಬಳಸಲೆಂದೇ ಹುಬ್ಬಳ್ಳಿಯಲ್ಲಿ ಕದಿಯಲಾಗಿದ್ದ ಬೈಕ್‌ನಲ್ಲಿ ತುಮಕೂರಿನ ಹೊನ್ನಾಳಿ ಬಳಿ ವೇಗವಾಗಿ ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.  ನ್ಯಾಯಾಲಯದ ಇವರ ಹಾವಭಾವಗಳನ್ನು ಕಂಡು,‘ಇದು ಮೇಲ್ನೋಟಕ್ಕೆ ಬೈಕ್ ಕಳ್ಳತನ ಅನಿಸಿದ್ದರೂ ಆಂತರ್ಯದಲ್ಲಿ ಬೇರೆನೋ ಇದೆ ಎನ್ನುವ ಅನುಮಾನವಿದೆ, ಶೋಧಿಸಿ ನೋಡಿ’ ಎಂದು ಪೊಲೀಸರಿಗೆ ನಿರ್ದೇಶಿಸಿದ್ದು ಉತ್ತರ ಕರ್ನಾಟಕದಲ್ಲಿ ಹೆಣೆದುಕೊಂಡಿದ್ದ ಉಗ್ರರ ಜಾಲ ಬಯಲಾಗುವಂತೆ ಮಾಡಿತ್ತು.  ಅಬ್ಬಾ ಉಗ್ರರು ಹಿಂಡಲಗಾ ಜೈಲು ಪಾಲಾದರು ಎಂದು ನಿಟ್ಟುಸಿರು ಬಿಡುವ ವೇಳೆಗೆ ಈಗ ಮತ್ತೆ ಅವರು ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಅದೂ ಈ ರಾಜ್ಯದ ದೊರೆ ಜಗದೀಶ್ ಶೆಟ್ಟರ್ ಮನೆಯ ಆಸುಪಾಸಿನಲ್ಲಿ! ಉಗ್ರರ ನೆರಳು ಈಗ ಮಗ್ಗಲು ಬದಲಿಸಿದೆ!

ಮತ್ತೊಬ್ಬ ಉಗ್ರನ ಸೆರೆ
ಬುಧವಾರ ೧೧ ಮಂದಿ ಶಂಕಿತ ಉಗ್ರನನ್ನು ಬಂಧಿಸಿದ್ದ ಪೊಲೀಸರು, ಆಂಧ್ರದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಒಬೇದುಲ್ಲಾ ರೆಹಮಾನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಎಂಬಿಎ ಪದವೀಧರನಾಗಿದ್ದು, ಎಲ್‌ಇಟಿ ಹಾಗೂ ಹುಜಿ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ. ಆತನಿಂದ ಪ್ರಮುಖ ದಾಖಲೆ ಹಾಗೂ ಕೆಲವು ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಬಂಧಿಸಿರುವ ೧೧ ಮಂದಿಯ ಸಂಪರ್ಕ ಕೂಡ ಇತ್ತು ಎನ್ನಲಾಗಿದೆ.

- ಕ್ಯಾಸಲ್‌ರಾಕ್ ಅರಣ್ಯದಲ್ಲಿ ಟಾರ್ಗೆಟ್ ಪ್ರಾಕ್ಟಿಸ್!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ