ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಸೆಪ್ಟೆಂಬರ್ 4, 2012

ಕನ್ನಡ ತಾಯಿಯ ಹೆಮ್ಮೆಯ ವೀರ ಪುತ್ರಿಯರು

ಕಿತ್ತೂರ ರಾಣಿ ಚೆನ್ನಮ್ಮ (1778 - 1829)
1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 30 ವರ್ಷದ ಮೊದಲೇ ಬ್ರಿಟಿಷರ ವಿರುದ್ಧ ಯುದ್ಧವನ್ನು ಸಾರಿದ ಗಂಡು ಮೆಟ್ಟಿದ ನಾಡಿನ ವೀರ ಹೆಣ್ಣು ನಮ್ಮ ಚೆನ್ನಮ್ಮ.ಬೆಳಗಾವಿ ಜಿಲ್ಲೆಯ ಕಿತ್ತೂರಿನ ರಾಣಿ. ಕುದುರೆ ಸವಾರಿ, ಕತ್ತಿ ವರಸೆಯಲ್ಲಿ ಪರಿಣಿತಿ ಹೊಂದಿದ್ದ ಚೆನ್ನಮ್ಮ, ತನ್ನ ಗಂಡ, ಕಿತ್ತೂರು ಸಂಸ್ಥಾನದ ದೊರೆ ರಾಜ ಮಲ್ಲಸರ್ಜನ ಮರಣದ ತರುವಾಯ, ಇದ್ದ ಏಕೈಕ ಪುತ್ರನೂ ಮರಣ ಹೊಂದಿದ್ದ ಕಾರಣ, ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ತೆಗೆದುಕೊಂಡ


ು ಸಂಸ್ಥಾನದ ದೊರೆಯನ್ನಾಗಿ ಮಾಡಿದಳು. ಬ್ರಿಟಿಷರು ಇದನ್ನು ಒಪ್ಪದೆ ಸಂಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಮುಂದಾದಾಗ, ತನ್ನ ಕೆಳಗಿನ ದಂಡನಾಯಕ ಸಂಗೊಳ್ಳಿರಾಯಣ್ಣನ ಒಡಗೂಡಿ ಬ್ರಿಟಿಷರ ವಿರುದ್ಧ ವೀರಾವೇಶದ ಯುದ್ಧ ಮಾಡಿದಳು.ಕಡೆಗೆ ಬ್ರಿಟಿಷರ ಕುತಂತ್ರದಿಂದ ಸೆರೆಸಿಕ್ಕಿ ಬೈಲಹೊಂಗಲದ ಕೋಟೆಯಲ್ಲಿ ಬಂಧಿತಳಾಗಿರುವಾಗಲೇ ಅಸುನೀಗಿದಳು.
ಇಡೀ ಭಾರತದಲ್ಲಿ ಕಪ್ಪ ಕಾಣಿಕೆಯನ್ನು ಬ್ರಿಟಿಷರಿಗೆ ಒಪ್ಪಿಸುವ ಪದ್ಧತಿಯ ವಿರುದ್ಧ ದಂಗೆ ಎದ್ದ ಮೊದಲ್ಲ ರಾಜ ವಂಶ ಇವಳದು.

ಬೆಳವಾಡಿ ಮಲ್ಲಮ್ಮ (17ನೇ ಶತಮಾನ)
ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವಳಾದ ಮಲ್ಲಮ್ಮ ದೇವಿಯು, ಸೋದೆಯ ಅರಸ ಮಧುಲಿಂಗನಾಯಕ ರ ಮಗಳಾಗಿದ್ದಳು. ಬೆಳವಾಡಿಯ ರಾಣಿಯಾದ ಮೇಲೆ ತನ್ನ ಪತಿಯ ಮರಣಾ ನಂತರ ಮರಾಠ ದಂಡನಾಯಕ ರಘುನಾಥ್ ನೇಡ್ಕರ್ ನ ದಾಳಿಯ ವಿರುದ್ಧ ಹೋರಾಡಿ ಸಂಸ್ಥಾನವನ್ನು ರಕ್ಷಿಸಿದಳು.ಅವಳನ್ನು ಯುದ್ಧದಲ್ಲಿ ಸೋಲಿಸುವುದು ಅಸಾಧ್ಯ್ವವಾಗಿರುತ್ತದೆ. ಯುದ್ಧದಲ್ಲಿ ರಣಚಂಡಿಯಂತೆ ಕಾದುತ್ತಿರುತ್ತಾಳೆ. ನಂತರದ ಮರಾಠಿಗರ ವಿರುದ್ಧದ ಮತ್ತೊಂದು ಯುದ್ಧದಲ್ಲಿ ಶತ್ರುವು ಮಲ್ಲಮ್ಮನು ಯುದ್ಧ ಮಾಡುವಾಗ ಅವಳ ಕುದುರೆಯ ಕಾಲನ್ನು ಕತ್ತರಿಸುತ್ತಾನೆ. ಇದರಿಂದ ಶತ್ರುಗಳು ಮಲ್ಲಮ್ಮನನ್ನು ಸೆರೆಹಿಡಿದು ಶಿವಾಜಿಯ ಮುಂದೆ ತರುತ್ತಾರೆ. ಶಿವಾಜಿಯು ಮಲ್ಲಮ್ಮಳ ವೀರಾವೇಶಕ್ಕೆ, ಅವಳ ಕೆಚ್ಚಿನ ನುಡಿಗಳಿಗೆ ನಿಬ್ಬೆರಗಾಗಿ ಅವಳಿಗೆ ಎಲ್ಲಾ ಮನ್ನಣೆ, ಗೌರವವನ್ನು ನೀಡಿ " ತಾಯಿ, ನಾನು ತಪ್ಪು ಮಾಡಿದೆ. ನಮಗೆ ನಿನ್ನ ಸಂಸ್ಥಾನ ಬೇಡ " ಎಂದು ಅವಳನ್ನು ಬೀಳ್ಕೊಡುತ್ತಾನೆ. ಮಲ್ಲಮ್ಮಳು ಎಂದೂ ಕುದುರೆಯ ಮೇಲೆ, ಸೀರೆಯನ್ನು ’ವೀರಗಚ್ಚೆಯಲ್ಲಿ’ ಧರಿಸಿ ಕುಳಿತು ಹೋರಾಡುತ್ತಿದ್ದಳು ಎಂದು ಅವಳ ಆಸ್ಥಾನದ ಮರಾಠಿ ಪಂಡಿತ ಮುತಾಲಿಕನು ಬರೆಯುತ್ತಾನೆ.


ಕೆಳದಿ ಚೆನ್ನಮ್ಮ (1650-1700)
ಚೆನ್ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಕೆಳದಿ ಸಂಸ್ಥಾನದ ರಾಣಿಯಾಗಿದ್ದಳು. ತನ್ನ ಪತಿ ದೊರೆ ಸೋಮಶೇಖರನ ನಂತರ ಕೆಳದಿ ನಾಯಕರ ವಂಶದ ರಾಣಿಯಾಗಿ ಕೆಳದಿ ಸಂಸ್ಥಾನದ ರಾಣಿಯಾದಳು.ಬಸವಪ್ಪನಾಯಕ ಎಂಬುವವನನ್ನು ದತ್ತು ತೆಗೆದುಕೊಂಡಳು. ಚೆನ್ನಮ್ಮಾಜಿಯು ಮುಘಲ್ ದೊರೆಗಳಿಗೆ ಹೆದರಿ ತನ್ನಲ್ಲಿ ಆಶ್ರಯ ಕೋರಿ ಬಂದ ಶಿವಾಜಿಯ ಮಗನಿಗೆ ಆಶ್ರಯ ನೀಡಿದಳು. ಇದರಿಂದ ಕುಪಿತನಾದ ಮೊಘಲ್ ದೊರೆ ಔರಂಗಾಜೇಬನು ಇದನ್ನೆ ನೆಪವಾಗಿಟ್ಟುಕೊಂಡು ತನ್ನ ರಾಜ್ಯ ವಿಸ್ತಾರ ಮಾಡಲು ಇವಳ ವಿರುದ್ಧ ಯುದ್ಧ ಸಾರಿದನು.ಈ ಚಿಕ್ಕ ಸಂಸ್ಥಾನವು ಎಷ್ಟು ವೀರಾವೇಶದಿಂದ ಹೋರಾಡಿತ್ತೆಂದರೆ ಔರಂಗಾಜೇಬನು ಸಂಸ್ಥಾನದ ಜೊತೆ ಯುದ್ಧಒಪ್ಪಂದಕ್ಕೆ ಬರಬೇಕಾಯಿತು. ಸೌಂದರ್ಯದಲ್ಲಿ ಉನ್ನತವಾಗಿದ್ದ ಚೆನ್ನಮ್ಮ ತಾಯಿಯು ಯುದ್ಧದಲ್ಲಿ ಶತ್ರುಗಳನ್ನು ದುರ್ಗೆಯಂತೆ ಕೊಲ್ಲುವ ನೈಪುಣ್ಯ ಹೊಂದಿದ್ದಳು ಎಂದು ಅವಳ ಆಸ್ಥಾನಿಕರು ಬರೆಯುತ್ತಾರೆ. ದೇಶದಲ್ಲಿನ ಎಲ್ಲಾ ಹಿಂದೂ ರಾಜರೂ ಔರಂಗಾಜೇಬನಿಗೆ ಹೆದರಿ ಶಿವಾಜಿಯ ಮಗನಿಗೆ ಆಶ್ರಯ ನೀಡಲು ಹೆದರಿದಾಗ ಈ ಕನ್ನಡ ತಾಯಿಯು ಆಶ್ರಯ ನೀಡಿದಳು. ಚೆನ್ನಮ್ಮ ಕೊಲ್ಲೂರಿನ ಮೂಕಾಂಬಿಕೆಗೆ ಮತ್ತು ಕೆಳದಿಯ ರಾಮೇಶ್ವರ ದೇಗುಲಕ್ಕೆ ಅನೇಕ ಕೊಡುಗೆಗಳನ್ನು ನೀಡಿದಳು. ಆಡಳಿತದಲ್ಲಿ ಅನೇಕ ಸುಧಾರಣೆ ತಂದು, 25 ವರುಷ ಆಡಳಿತ ನಡೆಸಿ ಜನ ಮನ್ನಣೆ ಪಡೆದಳು.

ಅಬ್ಬಕಾ ರಾಣಿ (16ನೇ ಶತಮಾನ)
ಅಬ್ಬಕ್ಕ ರಾಣಿಯ ಪೂರ್ಣ ಹೆಸರು ರಾಣಿ ಅಬ್ಬಕ್ಕ ಚೌಟ. ಇವಳು ಕರ್ನಾಟಕದ ಕರಾವಳಿಯನ್ನು ಆಳಿದ ಚೌಟ ವಂಶದ ರಾಣಿ. ಚೌಟ ವಂಶದ ರಾಜಧಾನಿಯು ಪುತ್ತಿಗೆ ಯಾಗಿದ್ದರೂ, ಉಲ್ಲಾಳದಿಂದ ಅಬ್ಬಕ್ಕರಾಣಿಯು ಆಡಳಿತ ನಡೆಸುತ್ತಿದ್ದಳು. ಉಲ್ಲಾಳವು ಸಮೃದ್ಧಿ ಹೊಂದಿದ್ದ ಬಂದರು ಆಗಿದ್ದರಿಂದ ಪೋರ್ಚುಗೀಸರು ಗೋವೆಯನ್ನು ಆಕ್ರಮಿಸಿದ ನಂತರ ತಮ್ಮ ಕಣ್ಣು ಅದರತ್ತ ಹಾಯಿಸಿದರು. ಅಬ್ಬಕ್ಕ ರಾಣಿಯು ಪೋರ್ಚುಗೀಸರ ಪದೇ ಪದೆಯ ದಾಳಿಯನ್ನು ಹಿಮ್ಮೆಟ್ಟಿಸಿ 40 ವರ್ಷಗಳ ಕಾಲ ಉಲ್ಲಾಳ ಸಂಸ್ಥಾನವನ್ನು ರಕ್ಷಿಸಿದಳು. ತನ್ನ ಶೌರ್ಯದಿಂದ ’ಅಭಯ ರಾಣಿ’ ಎಂದು ಖ್ಯಾತಿ ಹೊಂದಿದ್ದಳು. ಭಾರತದ ವಸಾಹುತಶಾಹಿಗಳ ವಿರುದ್ಧ ಹೋರಾಡಿದ ಮೊದಲ ರಾಜವಂಶ ಇವಳದು. ಆದ್ದರಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎನ್ನಬಹುದು.

ಅವಳ ಸೈನ್ಯದಲ್ಲಿ ಹಿಂದೂಗಳು, ಮುಸಲ್ಮಾನರು ಇಬ್ಬರೂ ಇದ್ದರು. 1555 ರಲ್ಲಿ ಪೋರ್ಚುಗೀಸರು ’ಸಿಲ್ವೇರ’ ಎಂಬ ಅಧಿಕಾರಿಯನ್ನು ಅಬ್ಬಕ್ಕ ರಾಣಿಯಿಂದ ಕಪ್ಪ ವಸೂಲಿ ಮಾಡಲು ಕಳುಹಿದರು. ಅಬ್ಬಕ್ಕ ರಾಣಿ ಇದಕ್ಕೆ ಒಪ್ಪದೆ ಯುದ್ಧ ಸಾರಿ, ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದಳು. ಮತ್ತೆ ಉಲ್ಲಾಳದ ಮೇಲೆ 1557 ರಲ್ಲಿ ದಾಳಿ ಮಾಡಿ,ಅರಮನೆಯನ್ನು ಮುತ್ತಲಾಗಿ ಅಬ್ಬಕ್ಕ ರಾಣಿಯು ಮಸೀದಿಯಲ್ಲಿ ಆಶ್ರಯ ಪಡೆದು 200 ಜನರ ಸೈನ್ಯವನ್ನು ಸಂಘಟಿಸಿ, ಮರು ದಾಳಿ ನೆಡೆಸಿ, ೭೦ ಪೋರ್ಚುಗೀಸ್ ಸೈನಿಕರನ್ನು ಸೆರೆಹಿಡಿಸಿದಳು. ಅಲ್ಲದೆ ದಾಳಿಯ ಮುಂದಾಳತ್ವ ವಹಿಸಿದ್ದ ಜನರಲ್ ’ಪಿಕ್ಸೋಟೊ’ ವನ್ನು ಕೊಂದಳು. ಪೋರ್ಚುಗೀಸ್ ಆಕ್ರಮಿತ ಮಂಗಳೂರು ಕೋಟೆಯನ್ನು ವಶಪಡಿಸಿಕೊಂಡಳು. 1569ರಲ್ಲಿ ಮತ್ತೊಂದು ಪೋರ್ಚುಗೀಸ್ ದಾಳಿಯಾಗಿ, ಕುತಂತ್ರ ಬುದ್ಧಿಯ ಬೇರೆಯಾಗಿದ್ದ ತನ್ನ ಪತಿಯೇ ಪೋರ್ಚುಗೀಸರಿಗೆ ಸಹಾಯ ಮಾಡಿದ ಕಾರಣ ಇವಳು ಸೆರೆಸಿಕ್ಕು, ಸೆರೆಮನೆಯಲ್ಲಿಯೇ ಹೋರಾಡುತ್ತಾ ವೀರಮರಣ ಹೊಂದಿದಳು. ಇಂದಿಗೂ ಕರಾವಳಿಯ ಜಾನಪದ ಗೀತೆಗಳಲ್ಲಿ ಮತ್ತು ಯಕ್ಷಗಾನದಲ್ಲಿ ಅಬ್ಬಕ್ಕರಾಣಿಯ ವೀರತೆಯ, ಒಳ್ಳೆ ಕಾರ್ಯಗಳ ಪ್ರಸ್ತುತಿ ಬರುತ್ತದೆ.

ಒನಕೆ ಓಬವ್ವ (18ನೇ ಶತಮಾನ) -
4ನೇ ಮದಕರಿ ನಾಯಕನು ಚಿತ್ರದುರ್ಗದ ಪಾಳೆಯಗಾರನಾಗಿ ಆಳುತ್ತಿದ್ದ ಕಾಲವದು. ಹೈದರಾಲಿಯು ಹಳೆಯ ಮೈಸೂರು ಭಾಗವನ್ನು ಪೂರ್ತಿಯಾಗಿ ಆಕ್ರಮಿಸಿದ್ದ. ಉಳಿದಿದ್ದು ಮಾತ್ರ ಈ ಚಿತ್ರದುರ್ಗದ ಸಂಸ್ಥಾನ. ಹೈದರಾಲಿ ಎಷ್ಟು ಪ್ರಯತ್ನಪಟ್ಟರೂ ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ಭೇದಿಸಲು ದುಸ್ಸಾಧ್ಯವಾಗಿತ್ತು. ಆ ಕೋಟೆಯು ಉಕ್ಕಿನ ಕೋಟೆ ಎಂದೇ ಪ್ರಸಿದ್ದಿ ಹೊಂದಿತ್ತು. ಐದಾರು ಬೆಟ್ಟಗಳನ್ನು ಚಾಚಿಕೊಂಡು ವಿಸ್ತಾರವಾಗಿತ್ತು. ಈ ಸನ್ನಿವೇಶದಲ್ಲಿ ಹೈದರಾಲಿಯು ಗೂಢಚಾರಿಕೆಯ ಮೂಲಕ ಕೋಟೆಯಲ್ಲಿ ಒಂದು ರಹಸ್ಯ ಕಿಂಡಿ ಇರುವುದನ್ನು ಅರಿತುಕೊಂಡ. ತನ್ನ ಸೈನಿಕರಿಗೆ ಆ ರಹಸ್ಯ ಕಿಂಡಿ ಭೇದಿಸಲು ಆದೇಶಿಸಿದ. ಆ ಕಿಂಡಿ ಇರುವ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಗಸ್ತಿನವನು ಮಧ್ಯಾಹ್ನದ ಊಟಕ್ಕೆ ಸಮೀಪದಲ್ಲೇ ಇದ್ದ ಮನೆಗೆ ತೆರಳಿದ್ದ. ಅವನಿಗೆ ನೀರು ತರಲು ಆ ಗಸ್ತಿನವನ ಮಡದಿ ಓಬವ್ವ ನುಸುಳುತ್ತಿದ್ದ ಸೈನಿಕರನ್ನು ನೋಡಿದಳು. ಅಲ್ಲೇ ವೀರಗಚ್ಚೆಯುಟ್ಟು ಮನೆಯಲ್ಲಿದ್ದ ಒನಕೆಯನ್ನು ತಂದು ಒಬ್ಬೊಬ್ಬ ಶತ್ರು ಸೈನಿಕನು ನುಸುಳಿದಂತೆ ಅವರ ರುಂಡ ಚಂಡಾಡಿದಳು. ಓಬವ್ವಳನ್ನು ಹುಡುಕುತ್ತಾ ಬಂದ ಅವಳ ಪತಿ ಒನಕೆ ಹಿಡಿದು ರಕ್ತಸಿಕ್ತಳಾಗಿದ್ದ ಓಬವ್ವಳನ್ನು, ಅವಳ ಸುತ್ತ ಹರಡಿ ಬಿದ್ದಿದ್ದ ನೂರಾರು ಶತ್ರುಸೈನಿಕರ ಮೃತ ದೇಹಗಳನ್ನು ನೋಡಿ ನಿಬ್ಬೆರಗಾದ. ಮೊದಲೇ ನುಸುಳಿದ್ದ ಒಬ್ಬ ಶತ್ರು ಸೈನಿಕನ ಇರಿತದಿಂದ ಓಬವ್ವ ನಂತರ ಮೃತಳಾದಳು. ಒಬ್ಬ ಸಾಮಾನ್ಯ ಕನ್ನಡ ಮಹಿಳೆ ಕೆಚ್ಚು, ಪರಾಕ್ರಮ ತೋರಿಸಿದ ಸನ್ನಿವೇಶವದು. ಈ ಘಟನೆ ನಡೆದದ್ದು ಸುಮಾರು 1770 ರಿಂದ 1778 ರ ನಡುವಿನಲ್ಲಿ.

ಈ ಎಲ್ಲಾ ವೀರ ಮಹಿಳೆಯರು, ಕನ್ನಡಿಗನದು ಎಂತಹ ಕೆಚ್ಚಿನ ರಕ್ತ, ಎಂತಹ ಪರಾಕ್ರಮದ ರಕ್ತ, ಎಂತಹ ವೀರ ರಕ್ತ ಎಂಬುದಕ್ಕೆ ಪ್ರತಿಬಿಂಬವಾಗಿ ನಿಲ್ಲುತ್ತಾರೆ. ನೊಂದವರಿಗೆ, ಆಶ್ರಯಿಸಿದವರಿಗೆ ಆಸರೆ ನೀಡುವ, ಮುನಿದರೆ, ಕೆರಳಿಸಿದರೆ ರುಂಡಚೆಂಡಾಡುವ ರಕ್ತ ನಮ್ಮದು. ಇಂತಹ ವೀರತನದ, ಪರಾಕ್ರಮದ, ಸೌಹಾರ್ದತೆಯ ಗಂಡು ಮೆಟ್ಟಿದ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ