ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜನವರಿ 19, 2013

ಡೆಲ್ಲಿಯಲ್ಲಿ ಇಬ್ಬರೇ ಸೇಫ್; ಸೋನಿಯಾ ಮತ್ತು ಶೀಲಾ!

ಸಂಜಯ್ ಚೋಪ್ರಾ
ಗೀತಾ ಚೋಪ್ರಾ
ಇವರಿಬ್ಬರೂ ದಕ್ಷಿಣ ದೆಹಲಿಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಕ್ಕಳು. 1978, ಅಗಸ್ಟ್ 16ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಎಲ್ಲಿಗೆ ಹೋದರು ಅಂತ ಯಾರಿಗೂ ತಿಳಿಯದಾಯಿತು. ವಾಸ್ತವದಲ್ಲಿ ಅವರು ಅಪಹರಣಕ್ಕೊಳಗಾಗಿದ್ದರು. ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದ್ದ ರಂಗ ಖುಷ್ ಅಲಿಯಾಸ್ ಖುಲ್ಜಿತ್ ಸಿಂಗ್ ಹಾಗೂ ಜಸ್ಬೀರ್ ಸಿಂಗ್ (ಬಿಲ್ಲ) ಅವರನ್ನು ಅಪಹರಿಸಿದ್ದರು. ಆದರೆ ಅವರು ಸಾಗುತ್ತಿದ್ದ ಕಾರು ಸಾರ್ವಜನಿಕ ಬಸ್್ಗೆ ಡಿಕ್ಕಿ ಹೊಡೆದ ಕಾರಣ ಇಡೀ ಪ್ಲಾನ್ ಉಲ್ಟಾ ಹೊಡೆಯಿತು. ಹಾಗಂತ ಸಂಜಯ್ ಹಾಗೂ ಗೀತಾ ಮನೆಗೆ ವಾಪಸ್ಸಾಗಲಿಲ್ಲ. ಪೊಲೀಸರ ಹುಡುಕಾಟ ಆರಂಭವಾಯಿತು. ಆದರೂ ಪ್ರಯೋಜನವಾಗಲಿಲ್ಲ. ಅಗಸ್ಟ್ 29ರಂದು ಎರಡು ಮೃತ ದೇಹಗಳು ದೊರೆತವು. ದುರಾದೃಷ್ಟವಶಾತ್, ಸಂಜಯ್ ಹಾಗೂ ಗೀತಾ ಹೆಣವಾಗಿದ್ದರು. ಶವಪರೀಕ್ಷೆ ವೇಳೆ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂತು. ಬಾಲಕಿ ಗೀತಾ ಮೇಲೆ ಅತ್ಯಾಚಾರವೂ ಎಸಗಲಾಗಿತ್ತು. ಇಂಥದ್ದೊಂದು ಘನಘೋರ ಕೃತ್ಯ ಎಸಗಿ ರಂಗ-ಬಿಲ್ಲ ನಗರವನ್ನೇ ತೊರೆದು ಪರಾರಿಯಾಗಿದ್ದರು.

ಅಂದು ಇಡೀ ದೆಹಲಿ ಬೀದಿಗಿಳಿಯಿತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಸರ್ಕಾರ ಥರ ಥರ ನಡುಗತೊಡಗಿತು!
ಇವತ್ತಿನಂತೆ ಅಂದು ಸೆಟಲೈಟ್ ಅಥವಾ ಕೇಬಲ್ ಚಾನೆಲ್್ಗಳಿರಲಿಲ್ಲ. ಇಪ್ಪತ್ನಾಲ್ಕುಗಂಟೆ ಸುದ್ದಿ ಪ್ರಸಾರ ಮಾಡುವ ವಾಹಿನಿಗಳೂ ಇರಲಿಲ್ಲ. ಅದು ಬಿಡಿ, ಕನಿಷ್ಠ ಬೆಳಗ್ಗೆ, ಮಧ್ನಾಹ್ನ, ರಾತ್ರಿಗೊಮ್ಮೆಯಂತೆ ಸುದ್ದಿ ಬಿತ್ತರಿಸುವ ಚಾನೆಲ್್ಗಳೂ ಇರಲಿಲ್ಲ. The nation is OUTRAGED, The Country is PAINED, The people are asking QUESTIONS ಎಂದು ದೇಶವಾಸಿಗಳ ಪರವಾಗಿ ಬೊಬ್ಬಿರಿಯುವ, ಧ್ವನಿಯೆತ್ತುವ ಆ್ಯಂಕರ್್ಗಳೂ ಇರಲಿಲ್ಲ. ಅತ್ಯಾಚಾರವೆಸಗಿದವರನ್ನು ನಿರ್ವೀರ್ಯರನ್ನಾಗಿಸಬೇಕು (chemical castration) ಎಂದು ಪ್ರತಿಪಾದಿಸುವ ಪರಿಣತರೂ ಇರಲಿಲ್ಲ, ಅಂತಹ ಟೀವಿ ಚರ್ಚೆಗಳೂ ನಡೆಯುತ್ತಿರಲಿಲ್ಲ.
ಇಷ್ಟಾಗಿಯೂ…
ಇಡೀ ನಗರವೇ ರೊಚ್ಚಿಗೆದ್ದಿತು. ಪ್ರತಿಯೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತರಗತಿಗಳಿಂದ ಹೊರಬಂದು ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದರು. ಪ್ರತಿಭಟನೆ ನಿಲ್ಲಲಿಲ್ಲ, ಪ್ರತಿಭಟನಾಕಾರರು ಕದಲಲಿಲ್ಲ. ಸರ್ಕಾರ ದಿಕ್ಕೆಟ್ಟಿತು. ಅಪರಾಧಿಗಳನ್ನು ಹಿಡಿಯಲು ಎಲ್ಲ ಪ್ರಯತ್ನವನ್ನೂ ಮಾಡಿತು. ಕೊನೆಗೂ ರಂಗ-ಬಿಲ್ಲ ರೈಲೊಂದರಲ್ಲಿ ಪತ್ತೆಯಾಗಿ, ಸಿಕ್ಕಿಬಿದ್ದರು. ನ್ಯಾಯಾಲಯವೂ ಜನಧ್ವನಿಗೆ ಸ್ಪಂದಿಸಿತು. ಅತ್ಯಂತ ತ್ವರಿತವಾಗಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತು. ಇತ್ತ ಮೊರಾರ್ಜಿ ಸರ್ಕಾರ ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಳ್ಳಲಿಲ್ಲ. ಸಂಜಯ್ ಚೋಪ್ರಾ ಹಾಗೂ ಗೀತಾ ಚೋಪ್ರಾ ಹೆಸರಿನಲ್ಲಿ ಮಕ್ಕಳ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಯನ್ನು ಆರಂಭಿಸುವ ಮೂಲಕ ಜನರ ಭಾವನೆಗಳಿಗೆ ಮನ್ನಣೆಯನ್ನೂ ನೀಡಿತು,ನೋವಿಗೆ ಸ್ಪಂದಿಸುವ ಕೆಲಸವನ್ನೂ ಮಾಡಿತು.
ಆದರೆ…
ಡಿಸೆಂಬರ್ 16ರಂದು ಚಲಿಸುವ ಬಸ್್ನಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಕಬ್ಬಿಣದ ರಾಡಿನಿಂದ ಅಮಾನುಷವಾಗಿ ಚುಚ್ಚಿ ರಸ್ತೆಯ ಮೇಲೆ ನಗ್ನವಾಗಿ ಬಿಸಾಡಿ ಹೋಗಿದ್ದ ಘಟನೆ ಹಾಗೂ ಅದರ ಬೆನ್ನಲ್ಲೇ ಎದ್ದ ಪ್ರತಿಭಟನೆಗೆ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಸ್ಪಂದಿಸಿದ್ದಾದರೂ ಹೇಗೆ? 1978ರಂತೆ ಈ ಬಾರಿಯೂ ದೆಹಲಿಯ ಜನ ಸ್ವಯಂಪ್ರೇರಿತರಾಗಿ ಬೀದಿಗಿಳಿದರು. ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಿಟ್ಟು ಪ್ರತಿಭಟನೆಗೆ ಮುಂದಾದರು. ಅವರೇನು ರಾಜಕೀಯ ಪಕ್ಷಗಳ ರ್ಯಾಲಿಗಳಿಗೆ ನೂರು, ಐನೂರು ರೂಪಾಯಿ ಗರಿಗರಿ ನೋಟು ಪಡೆದುಕೊಂಡು ಲಾರಿಗಳಲ್ಲಿ ಬಂದ ಜನರಾಗಿರಲಿಲ್ಲ. ಅಂಥವರನ್ನು ಆಕ್ಸ್್ಫರ್ಡ್್ನಲ್ಲಿ ಕಲಿತ ಮನಮೋಹನ್ ಸಿಂಗ್ ಹಾಗೂ ಬ್ರಿಟನ್್ನಂಥ ಅತ್ಯಂತ ನಾಗರಿಕ ರಾಷ್ಟ್ರದಲ್ಲಿ ಅಷ್ಟಿಷ್ಟು ಕಲಿತ ಸೋನಿಯಾ ಗಾಂಧಿಯವರ ಸರ್ಕಾರ ನಡೆಸಿಕೊಂಡ ರೀತಿ ಹೇಗಿತ್ತು? ಅನಾಗರಿಕರಂತೆ ನಡೆದುಕೊಂಡಿದ್ದೇಕೆ? ಚೀನಾದ ತಿಯಾನನ್್ಮನ್ ಸ್ಕ್ವೇರ್ ಎದುರು ಜನ ಸೇರಿದರೆ, ಯುಗೋಸ್ಲಾವಿಯಾದ ಸರ್ವಾಧಿಕಾರಿ ಸ್ಲೊಬದಾನ್ ಮಿಲೊಸೆವಿಚ್ ವಿರುದ್ಧ ಜನ ಸಿಡಿದೆದ್ದರೆ, ಈಜಿಪ್ಟ್್ನ ತಹ್ರೀರ್ ಸ್ಕ್ವೇರ್ ಮುಂದೆ ಜನ ನೆರೆದರೆ, ಮುಮ್ಮರ್ ಗಢಾಫಿಯನ್ನು ಪದಚ್ಯುತಗೊಳಿಸಲು ಜನ ಮುಂದಾದರೆ ನಮ್ಮ ಮಾಧ್ಯಮ ಹಾಗೂ ಸರ್ಕಾರದಿಂದ “Popular Movement’, “Popular Outrage’ ಎಂಬ ಹೊಗಳಿಕೆ ಕೇಳಿಬರುತ್ತದೆ. ಅದೇ ನಮ್ಮ ದೇಶದ ರಾಜಧಾನಿಯಲ್ಲಿ ಭ್ರಷ್ಟ, ನಿರ್ವೀರ್ಯ, ನಿಶ್ಶಕ್ತ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ನೀರಿನ ಫಿರಂಗಿ, ಆಶ್ರುವಾಯು ಪ್ರಯೋಗ ಹಾಗೂ ಲಾಠಿ ಚಾರ್ಜ್! ಒಂದು ಪ್ರಭುದ್ಧ ಪ್ರಜಾಪ್ರಭುತ್ವ ರಾಷ್ಟ್ರದ ಚುಕ್ಕಾಣಿ ಹಿಡಿದ ಸರ್ಕಾರ ನಡೆದುಕೊಳ್ಳುವ ರೀತಿಯೇ ಇದು? ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರಲ್ಲಾ ಇವರಿಗೆ ನಾಚಿಕೆಯೇ ಇಲ್ಲವೆ? ಇಷ್ಟಕ್ಕೂ ವಿದ್ಯಾರ್ಥಿಗಳು ಮಾಡಿದ ತಪ್ಪಾದರೂ ಏನು? ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳೊಳಗೆ ಕಾಂಗ್ರೆಸ್ ವಿದ್ಯಾರ್ಥಿ ಸಂಘವಾದ ಎನ್್ಎಸ್್ಯುಐನ ಗೂಂಡಾಗಳನ್ನು ನುಗ್ಗಿಸಿ ಇಡೀ ಪ್ರತಿಭಟನೆಗೆ ಕಳಂಕ ತರಲು ಪ್ರಯತ್ನಿಸಿದರಲ್ಲಾ ಇವರಿಗೆ ನೈತಿಕತೆ ಅನ್ನೋದೇ ಇಲ್ಲವೆ? ಈ ಸೋನಿಯಾ ಗಾಂಧಿ ಕೃಪಾಪೋಷಿತ ನಾಟಕ ಮಂಡಳಿಯಿಂದ ನಾವು ಇನ್ನು ಯಾವ್ಯಾವ ನಾಟಕಗಳನ್ನು ನೋಡಬೇಕು? ಈ ಕಾಂಗ್ರೆಸ್ಸಿಗರು ದೇಶವನ್ನು ಯಾವ ಮಟ್ಟಕ್ಕೆ ಇಳಿಸಿಯಾರು? ಇನ್ನು ಈ ದೇಶದ ಯೂತ್ ಐಕಾನ್ (ಯುವಜನತೆಯ ಮುಕುಟಮಣಿ) ರಾಹುಲ್ ಗಾಂಧಿ ಮಾಡಿದ ನಾಟಕವೇನು ಸಾಮಾನ್ಯದ್ದೇ? ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಭರವಸೆಯನ್ನು ಕೊಡುವ ಹಗಲುವೇಷ ತೊಟ್ಟರು. ಕೊನೆಗೆ ತಿಳಿದುಬಂದಿದ್ದೇನೆಂದರೆ ಅವರೆಲ್ಲ ಕಾಂಗ್ರೆಸ್್ನ ಎನ್್ಎಸ್್ಯುಐ ಸಂಘಟನೆಯವರೇ ಆಗಿದ್ದರು! ಕಣ್ಣೆದುರಿಗೇ ಇಂಥ ಮೋಸ ಮಾಡುತ್ತಾರಲ್ಲಾ ಇವರಿಗೆ ಅತ್ಮಸಾಕ್ಷಿ ಅನ್ನುವುದೇ ಇಲ್ಲವೆ?
1999, ಇದೇ ಡಿಸೆಂಬರ್ 24ರಂದು ನಮ್ಮ ಇಂಡಿಯನ್ ಏರ್್ಲೈನ್ಸ್ ವಿಮಾನ ಅಪಹರಣವಾದಾಗ ಆಗಿನ ಅಟಲ್್ಬಿಹಾರಿ ವಾಜಪೇಯಿ ಸರ್ಕಾರ ಹೇಗೆ ನಡೆದುಕೊಂಡಿತು?
ಅಂದು ಕೂಡ ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬದವರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಿದ್ದರು. ಹಾಗಂತ ಪೊಲೀಸರನ್ನು ಕರೆದು ಅವರನ್ನು ಅಟಲ್ ಹೊರದಬ್ಬಿಸಲಿಲ್ಲ. ಅತಿದೊಡ್ಡ ಬೆಲೆ ತೆತ್ತಾದರೂ 184 ದೇಶವಾಸಿಗಳ ಪ್ರಾಣ ರಕ್ಷಣೆಗೆ ಮುಂದಾದರು. ಆದರೆ ಈ ಸರ್ಕಾರ ಪ್ರಧಾನಿ ಮನೆಮುಂದೆ, ರಾಷ್ಟ್ರಪತಿ ಭವನದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೂ ಹೇಗೆ ನಡೆದುಕೊಂಡಿತು? ಅದು ಬಿಡಿ, ಇಡೀ ದೇಶ ರೊಚ್ಚಿಗೆದ್ದಿದ್ದರೂ, ನೊಂದಿದ್ದರೂ ಅವರ ಮೇಲೆ ಲಾಠಿ ಚಾರ್ಜ್ ನಡೆದು ನೂರಾರು ವಿದ್ಯಾರ್ಥಿ ಹಾಗೂ ಪೋಷಕರು ಗಾಯಗೊಳ್ಳುವವರೆಗೂ ನಮ್ಮ ಪ್ರಧಾನಿ ಎಲ್ಲಿ ನಿದ್ರೆ ಮಾಡುತ್ತಿದ್ದರು? ಒಂದು ಹೇಳಿಕೆ ಕೊಡಲು ನಮ್ಮ ಪ್ರಧಾನಿಗೆ 7 ದಿನ(ಡಿಸೆಂಬರ್ 23) ಬೇಕಾಯಿತೆ? ಅದೇ ಡಿಸೆಂಬರ್ 15ರಂದು ಅಮೆರಿಕದ ಕನೆಕ್ಟಿಕಟ್್ನಲ್ಲಿ ತಲೆಕೆಟ್ಟವನೊಬ್ಬ ಮಾಡಿದ ಗುಂಡಿನ ದಾಳಿಯಲ್ಲಿ 20 ಮಕ್ಕಳು ಮಡಿದಾಗ ದೇಶವಾಸಿಗಳನ್ನುದ್ದೇಶಿ ಮಾತನಾಡುತ್ತಿದ್ದ ಅಧ್ಯಕ್ಷ ಬರಾಕ್ ಒಬಾಮ “Heal the broken hearted and bind up their wounds’ ಎನ್ನುತ್ತಾ ಕಣ್ಣೀರಿಟ್ಟರು. ಆದರೆ ನಮ್ಮ ಪ್ರಧಾನಿ ನಡೆದುಕೊಂಡಿದ್ದು ಹೇಗೆ?
‘ನನ್ನ ಭಾರತ ದೇಶವಾಸಿಗಳೇ, ಕಳೆದ ಭಾನುವಾರ (ಡಿಸೆಂಬರ್ 16) ದೆಹಲಿಯಲ್ಲಿ ನಡೆದ ಪೈಶಾಚಿಕ ಗ್ಯಾಂಗ್್ರೇಪ್ ವಿರುದ್ಧ ಎದ್ದಿರುವ ಕೋಪತಾಪ ಖಂಡಿತ ಅರ್ಥಮಾಡಿಕೊಳ್ಳುವಂಥದ್ದೇ. ಮೂವರು ಹೆಣ್ಣುಮಕ್ಕಳ ತಂದೆಯಾದ ನಾನೂ ನಿಮ್ಮಂತೆಯೇ ನೊಂದಿರುವೆನು… ಇಂಥ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದನ್ನು ನಿಮಗೆ ಆಗಿಂದಾಗ್ಗೆ ತಿಳಿಸಲಿದೆ. ನಾನು ಸಮಾಜದ ಎಲ್ಲ ಸಮುದಾಯಗಳಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಹಾಗೂ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡುವಂತೆ ಕೋರುತ್ತೇನೆ…’ ಎಂಬ ಬರೆದುಕೊಟ್ಟ ಸಂದೇಶವನ್ನು ಯಾಂತ್ರಿಕವಾಗಿ ಓದಿದ ಮನಮೋಹನ್ ಸಿಂಗ್, ಕೊನೆಗೆ ‘ಠೀಕ್ ಹೈ’ (ಓಕೆನಾ? ಸರೀನಾ?) ಎಂದು ಬಿಟ್ಟರು.
‘ಅದೃಷ್ಟವಶಾತ್್’ ಅದೂ ಪ್ರಸಾರವಾಗಿಬಿಟ್ಟಿತು, ಪ್ರಧಾನಿಯ ವೇಷವೂ ಕಳಚಿ ಬಿತ್ತು!
ಅದುವರೆಗೂ ಪ್ರಧಾನಿ ಹೇಳಿದ್ದೆಲ್ಲ ಬೊಗಳೆ ಎಂದು ಸಾಬೀತಾಗಲಿಲ್ಲವೆ? ನನಗೂ ಮೂವರು ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಿದ್ದೆಲ್ಲ ಜನರ ಕಣ್ಣೊರೆಸುವ ಮಾತುಗಳಷ್ಟೇ ಎಂದು ಅದರಿಂದ ತಿಳಿಯಲಿಲ್ಲವೆ? ಅಲ್ಲ, ಈ ವ್ಯಕ್ತಿಯೇನು ಮನುಷ್ಯನೋ, ಮರದ ತುಂಡೋ? ಈ ವ್ಯಕ್ತಿ ಭಾವುಕರಾಗುವುದು ಅಣು ಸಹಕಾರ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಲಾಭ ಮಾಡುವ ಸಲುವಾಗಿ ಸಂಸತ್ತಿನ ಒಪ್ಪಿಗೆ ಪಡೆಯಲು ಭಾಷಣಕ್ಕೆ ನಿಂತಾಗ ಮಾತ್ರವೇ? ನಮ್ಮ ದೇಶದ ಚಿಲ್ಲರೆ ಮಾರುಕಟ್ಟೆಗೆ ನೂರಕ್ಕೆ ನೂರು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟು ನಮ್ಮ ವ್ಯಾಪಾರಿಗಳನ್ನು ಬೀದಿಪಾಲು ಮಾಡಿ ಅಮೆರಿಕದ ವಾಲ್್ಮಾರ್ಟ್, ಬ್ರಿಟನ್್ನ  ಟೆಸ್ಕೋ, ಫ್ರಾನ್ಸ್್ನ ಕ್ಯಾರ್್ಫೋರ್್ಗಳಂಥ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾದಾಗ ಮಾತ್ರ ಮನಮೋಹನ್ ಸಿಂಗ್್ರ ಮನಸ್ಸು, ಹೃದಯ ಮಿಡಿಯುತ್ತವೆಯೇ? ಇನ್ನು ಪ್ರಧಾನಿಯ ಜುಟ್ಟು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಿಗೆ ಯಾವ ಹೊಣೆಗಾರಿಕೆ, ಜವಾಬ್ದಾರಿಗಳೇ ಇಲ್ಲವೆ?
ಯುಪಿಎ ಅಧ್ಯಕ್ಷೆ ಹಾಗೂ ಪ್ರಧಾನಿಯೇ ಹೀಗಿರುವಾಗ ಅವರ ಸಂಪುಟದಲ್ಲಿರುವ ಸಚಿವರು ಹಾಗೂ ಪಕ್ಷದಲ್ಲಿರುವವರಿಂದ ಯಾವ ಸಭ್ಯತೆ, ಸುಸಂಸ್ಕೃತತೆಯನ್ನು ನಿರೀಕ್ಷಿಸಲು ಸಾಧ್ಯ? ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಅವರ ಸುಪುತ್ರ ಹಾಗೂ ಕಾಂಗ್ರೆಸ್ ಪುಢಾರಿ ಅಭಿಜಿತ್ ಮುಖರ್ಜಿ ಗ್ಯಾಂಗ್ ರೇಪ್ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಮಧ್ಯ ವಯಸ್ಸು ದಾಟಿರುವ ಮಹಿಳೆಯರನ್ನು “DENTED and PAINTED women’ ಎಂದು ಅತ್ಯಂತ ಕೀಳಾಗಿ ಕರೆದಿದ್ದಾನೆ. ಇವನ ಪ್ರಕಾರ ಶಾಲೆ, ಕಾಲೇಜಿಗೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಅಮ್ಮಂದಿರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ? ಐವತ್ತೆರಡು ವರ್ಷದ ಈತ ತನ್ನ ಪತ್ನಿ ಹಾಗೂ ಸಹೋದರಿಯರನ್ನೂ DENTED and PAINTED ಎನ್ನುತ್ತಾನಾ? ಅವರ ದೇಹದಲ್ಲೂ Dent (ಉಬ್ಬು-ತಗ್ಗು)ಗಳಿಲ್ಲವೇ? (ಈ ಪದಕ್ಕೆ ಅನೈತಿಕ ಎನ್ನುವ ಅರ್ಥವೂ ಬರುತ್ತದೆ) ಅವರೂ ಮೇಕಪ್ ಮಾಡಿಕೊಳ್ಳುವುದಿಲ್ಲವೇ? ಟ್ವಿಟರ್್ನಲ್ಲಿ ಪ್ರಿಯಾ ಜೇಮ್ಸ್ ಎಂಬಾಕೆ “MUCK-her-jee’ ಎಂದು ಕರೆದಿರುವುದು ಈತನ ಮನಸ್ಥಿತಿಗೆ ಹಿಡಿದ ಕನ್ನಡಿಯಲ್ಲದೆ ಮತ್ತೇನು? ಈ ಕೇಂದ್ರದ ಕಾಂಗ್ರೆಸ್ಸಿಗರು ಯಾವ ಮಟ್ಟಕ್ಕಿಳಿದಿದ್ದಾರೆಂದರೆ 2ಜಿ, ಕಲ್ಲಿದ್ದಲು, ಕಾಮನ್ವೆಲ್ತ್, ಲವಾಸಾ, ಅದರ್ಶ ಹೌಸಿಂಗ್ ಎಂಥ ಹಗರಣ ಸಂಭವಿಸಿದರೂ ಇವರಿಗೆ ನಾಚಿಕೆಯಾಗುವುದಿಲ್ಲ. ಹಾಗಾಗಿಯೇ ಮುಖ್ಯ ವಿಷಯ ಬಿಟ್ಟು ಉಳಿದೆಲ್ಲ ಮಾತನಾಡುವ ತಿವಾರಿ ಹಾಗೂ ವಕೀಲೆಯೊಬ್ಬರನ್ನು ಜಡ್ಜ್ ಮಾಡುವುದಾಗಿ ಅಮಿಷವೊಡ್ಡಿ ಮಂಚಕ್ಕೆಳೆದಿದ್ದ ಬೋಳುದಲೆಯ ವ್ಯಕ್ತಿಯೊಬ್ಬ ಇವತ್ತು ರೇಪ್ ಬಗ್ಗೆ ಕಾಂಗ್ರೆಸ್್ನ ಕ್ರಮವನ್ನು ಸಮರ್ಥನೆ ಮಾಡುತ್ತಿದ್ದಾನೆ. ಇದಕ್ಕಿಂತ ನಾಚಿಕೆಗೇಡು ಮತ್ತೇನಿದೆ? ಈಗ ಹೇಳಿ, ಕೇಂದ್ರದಲ್ಲಿರುವುದು ಮಾನ-ಮರ್ಯಾದೆ ಇಲ್ಲದವರ ಸರ್ಕಾರ ಎಂಬ ಬಗ್ಗೆ ಯಾವುದಾದರೂ ಅನುಮಾನವಿದೆಯೇ? ಡೆಲ್ಲಿಯಲ್ಲಿರುವುದು ಕಾಂಗ್ರೆಸ್ ಸರ್ಕಾರ, ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ಕಾಂಗ್ರೆಸ್ ಹಿಡಿತದಲ್ಲಿದೆ. ಹಾಗಿರುವಾಗ ಯಾರು ಅದರ ಹೊಣೆ ಹೊರಬೇಕು ಹೇಳಿ? ಡೆಲ್ಲಿಯಲ್ಲಿ ಇಬ್ಬರೇ ಸೇಫ್ ಸೋನಿಯಾ ಮತ್ತು ಶೀಲಾ ಎಂದು ಜನ ಆಡಿಕೊಳ್ಳುತ್ತಿರುವುದರಲ್ಲಿ ಯಾವ ಆಶ್ಚರ್ಯವಿದೆ?

- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ