ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜನವರಿ 19, 2013

ಮುಸಲ್ಮಾನರು ಕಾಂಗ್ರೆಸ್್ಗೆ ಮಾತ್ರ ಮತ ನೀಡಬೇಕೇ?

ಇಂತಹ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಡಿರುವ ಮಾತುಗಳಾದರೂ ಎಂಥವು? ಮಾಡಿರುವ ಆರೋಪವಾದರೂ ಎಂಥದ್ದು? ಡಿಸೆಂಬರ್ 20ರಂದು ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾಗಿ ನರೇಂದ್ರ ದಾಮೋದರದಾಸ್ ಮೋದಿ ಹ್ರಾಟ್ರಿಕ್ ಜಯ ಗಳಿಸಿದಾಗ ಜನಾದೇಶವನ್ನು ಗೌರವಿಸುವ ಬದಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಡಿದ್ದೇನು? ಡಿಸೆಂಬರ್ 23ರಂದು ‘ಹೆಡ್್ಲೈನ್ಸ್ ಟುಡೆ’ ಚಾನೆಲ್್ಗೆ ನೀಡಿದ ಸಂದರ್ಶನದಲ್ಲಿ ಅವರು ಮುಸ್ಲಿಮರ ವಿರುದ್ಧ ಮಾಡಿದ ಅವಮಾನಕಾರಿ ಆರೋಪವೇನೆಂದುಕೊಂಡಿರಿ?

‘ಬಿಜೆಪಿಯವರು ಮುಸ್ಲಿಂ ಬಾಹುಳ್ಯದ ಸ್ಥಳಗಳಲ್ಲೆಲ್ಲ ಪ್ರತಿ ವೋಟಿಗೆ 500 ನಂತೆ ನೀಡಿ, ಅವರು ಮತದಾನ ಮಾಡದಂತೆ ತಡೆದಿದ್ದಾರೆ. ಆ ಮೂಲಕ ಮುಸ್ಲಿಮರು ಬಹುಸಂಖ್ಯಾತರಾಗಿರುವ ಒಟ್ಟು 19 ಕ್ಷೇತ್ರಗಳಲ್ಲಿ ಬಿಜೆಪಿ 12 ರಲ್ಲಿ ಜಯಭೇರಿ ಬಾರಿಸಿದೆ. ಕಳೆದ 15-20 ವರ್ಷಗಳಿಂದ ಬಿಜೆಪಿ ಅಳವಡಿಸಿಕೊಂಡು ಬರುತ್ತಿರುವ ತಂತ್ರವೇ ಇದು. ಮುಸಲ್ಮಾನರಿಗೆ ದುಡ್ಡು ಕೊಟ್ಟು ಅವರ ಚುನಾವಣಾ ಗುರುತಿನ ಚೀಟಿಗಳನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ನನ್ನ ಬಳಿ ಸಬೂತೂ ಇದೆ’
ಇಂಥದ್ದೊಂದು ಗಂಭೀರ ಆರೋಪ ಯಾವ ಸಂದೇಶವನ್ನು ಕೊಡುತ್ತದೆ? ಮುಸಲ್ಮಾನರ ಮತಗಳು ಮಾರಾಟಕ್ಕಿವೆ ಎಂಬ ತಪ್ಪುಗ್ರಹಿಕೆಯನ್ನು ಮೂಡಿಸುವುದಿಲ್ಲವೆ? ಒಂದು ವೇಳೆ, ಮಾರಾಟಕ್ಕಿದ್ದಿದ್ದೇ ಆಗಿದ್ದರೆ ಗುಜರಾತ್ ಚುನಾವಣೆಗೆ 400 ಕೋಟಿ ಸುರಿದ ಕಾಂಗ್ರೆಸ್ಸೇ ಅವುಗಳನ್ನು ಖರೀದಿಸಬಹುದಿತ್ತಲ್ಲವೆ? ಅದಿರಲಿ, ಕಳೆದ 15-20 ವರ್ಷಗಳಿಂದ ಬಿಜೆಪಿ ಈ ತಂತ್ರ ಅಳವಡಿಸಿಕೊಂಡು ಬಂದಿದೆ ಎನ್ನುತ್ತಾರಲ್ಲಾ, ಈ ಮಾತನ್ನು ಎಷ್ಟರಮಟ್ಟಿಗೆ ಒಪ್ಪುವುದಕ್ಕಾಗುತ್ತದೆ? ಈ ಅವಧಿಯಲ್ಲಿ 2002ರ ಗುಜರಾತ್ ಹಿಂಸಾಚಾರ ಹಾಗೂ ಚುನಾವಣೆ ಎರಡೂ ನಡೆದುಹೋಗಿವೆ. 2012ರಲ್ಲಿ ಮೋದಿ ಬಗ್ಗೆ ಮುಸಲ್ಮಾನರ ಕೋಪ ತುಸು ತಣ್ಣಗಾಗಿರಬಹುದು, ಆದರೆ 2002ರಲ್ಲೂ ಅವರು ಮತಗಳನ್ನು ಮಾರಿಕೊಂಡಿದ್ದರೆ? ಈ ದಿಗ್ವಿಜಯ್ ಸಿಂಗ್್ಗೆ ಮೊದಲೇ ತಲೆಕೆಟ್ಟುಹೋಗಿತ್ತಾ? ಅಥವಾ ಈ ಬಾರಿಯ ಚುನಾವಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮುಸಲ್ಮಾನರು ಮೋದಿಗೆ ಮತ ನೀಡಿದ್ದಾರೆ ಎಂದು ತಿಳಿದ ಮೇಲೆ ಅವರ ತಲೆಕೆಟ್ಟುಹೋಯಿತೆ? ಮುಸ್ಲಿಮರು ತಮಗೆ ಮಾತ್ರ ವೋಟು ಕೊಡಬೇಕೆಂಬ ದಾರ್ಷ್ಟ್ಯ ಕಾಂಗ್ರೆಸ್್ಗೇಕೆ? ಕಾಂಗ್ರೆಸ್್ಗೆ ಮತ ನೀಡದ ಮುಸಲ್ಮಾನರು ತಮ್ಮ ಮತಗಳನ್ನು ಮಾರಿಕೊಂಡಿದ್ದಾರೆ ಎಂದೆ?
ಅದಿರಲಿ, ಈ ಬಾರಿ ಗುಜರಾತ್ ಮುಸ್ಲಿಮರು ಮೋದಿಗೆ ಮತ ನೀಡಿದ್ದಾದರೂ ಏಕೆ?
‘ಒಂದೆಡೆ ಕಾಂಗ್ರೆಸ್ ಮುಸ್ಲಿಮರನ್ನು ಮೊದಲಿನಿಂದಲೂ ಮತಬ್ಯಾಂಕ್್ನಂತೆಯೇ ಕಾಣುತ್ತಾ ಬಂತು. ಆದರೆ ನಮ್ಮ ಸಮುದಾಯದ ಹಿತಾಸಕ್ತಿಯನ್ನು ಮಾತ್ರ ಎಂದೂ ಕಾಪಾಡಲಿಲ್ಲ, ಮುಸ್ಲಿಮರಿಗೆ ಅಂತ ಏನೂ ಮಾಡಲಿಲ್ಲ. ಇನ್ನೊಂದೆಡೆ ಎಲ್ಲರ ಅಭ್ಯುದಯವನ್ನೂ ಬಯಸುವ ಮೋದಿಯ ಸಮಗ್ರ ಅಭಿವೃದ್ಧಿ ಮಂತ್ರ ಮುಸಲ್ಮಾನರಲ್ಲೂ ಹೊಸ ಭರವಸೆಯನ್ನು ಮೂಡಿಸಿತು’ ಎಂದು ಸೌರಾಷ್ಟ್ರದ ಉದ್ಯಮಿ ಇಕ್ಬಾಲ್ ಕೆಶೋದ್ವಾಲಾ ಹೇಳಿದರೆ, ಮತ್ತೊಬ್ಬ ಉದ್ಯಮಿ ಝಫರ್ ಸರೇಝ್್ವಾಲಾ, ‘ನನ್ನ ಸ್ನೇಹಿತರು ಈ ಬಾರಿ ಬಿಜೆಪಿಗೆ ವೋಟು ಕೊಡುತ್ತೇವೆಂದರು. ಏಕೆ ಅಂತ ಕೇಳಿದಾಗ, ಬಿಜೆಪಿಯವರು ಮನೆಗೆ ಬಂದು ಮತಯಾಚಿಸಿದರು, ನಮಗೆ ಫೋನ್ ಮಾಡಿ ಮತ ಕೊಡಿ ಅಂತ ಕೇಳಿದರು. ಕಾಂಗ್ರೆಸ್್ನವರು ಚುನಾವಣೆ ಸಂದರ್ಭದಲ್ಲೂ ನಮ್ಮ ಬಳಿಗೆ ಬರಲಿಲ್ಲ, ನಾವುTaken for granted ಎಂಬ ಧೋರಣೆ’ ಎಂಬ ವಸ್ತುಸ್ಥಿತಿಯನ್ನು ರಾಷ್ಟ್ರೀಯ ಮಾಧ್ಯಮಗಳೆದುರು ತೆರೆದಿಟ್ಟರು. 2002ರಲ್ಲಿ ಗುಜರಾತ್ ಹಿಂಸಾಚಾರ ನಡೆದಾಗ ತಮ್ಮ ಉದ್ಯಮ ನೆಲಕಚ್ಚಿ ಮೋದಿ ವಿರುದ್ಧ ಸಿಡಿದೆದ್ದು ಅವರನ್ನು ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತಂದು ನಿಲ್ಲಿಸಲು ಹೊರಟಿದ್ದ ವ್ಯಕ್ತಿ ಝಫರ್. ಆದರೆ ಮೋದಿಯವರನ್ನು ಬ್ರಿಟನ್್ನಲ್ಲಿ ಭೇಟಿಯಾದ ನಂತರ ಭರವಸೆ ಮೂಡಿ ಗುಜರಾತ್್ಗೆ ವಾಪಸಾಗಿ ಮತ್ತೆ ಉದ್ಯಮ ಕಟ್ಟಿ ಕೋಟ್ಯಾಧಿಪತಿಯಾಗಿದ್ದಾರೆ. ಇಂದು ಮೋದಿಯವರ ಕಟ್ಟಾ ಬೆಂಬಲಿಗನಾಗಿ ಹೊರಹೊಮ್ಮಿದ್ದಾರೆ. ಮುಸಲ್ಮಾನರಿಗೆ ಒಂದೇ ಒಂದು ಟಿಕೆಟ್ ನೀಡದ ಮೋದಿಯನ್ನು ನೀವೇಕೆ ಬೆಂಬಲಿಸುತ್ತೀರಿ ಎಂದು ಕೇಳಿದಾಗ, ‘ಕಾಂಗ್ರೆಸ್್ನ ಮಾಧವ ಸಿನ್ಹ್ ಸೋಲಂಕಿ ಮುಖ್ಯಮಂತ್ರಿಯಾಗಿದ್ದಾಗ 15 ಮುಸಲ್ಮಾನ ಶಾಸಕರು ಗುಜರಾತ್ ವಿಧಾನಸಭೆಯಲ್ಲಿದ್ದರು. ಇಷ್ಟಾಗಿಯೂ ಗಲಭೆಪೀಡಿತ ಪ್ರದೇಶ ಕಾಯಿದೆಯನ್ನು (Disturbed Area Act) ಜಾರಿಗೆ ತಂದರು. ಇದರಿಂದ ಮುಸಲ್ಮಾನರ ಮೇಲಾದ ದೌರ್ಜನ್ಯ ಅಷ್ಟಿಷ್ಟಲ್ಲ. ಆ ಕಾಯಿದೆ ಇಂದಿಗೂ ಮುಸ್ಲಿಮರ ಪಾಲಿಗೆ ಕಂಟಕವಾಗಿದೆ. ಹಾಗಿರುವಾಗ ನಾಮ್್ಕೆ ವಾಸ್ತೆಗೆ ಮುಸಲ್ಮಾನರಿಗೆ ಟಿಕೆಟ್ ಕೊಟ್ಟು, ಅವರು ಆರಿಸಿ ಬಂದು ಏನು ಪ್ರಯೋಜನವಾಯಿತು? ನನಗಂತೂ ಈ ರೀತಿಯ ಹೆಸರಿಗಷ್ಟೇ ಪ್ರಾತಿನಿಧ್ಯ ನೀಡುವ ಆಮೀಷದಲ್ಲಿ ಯಾವ ನಂಬಿಕೆಯೂ ಇಲ್ಲ, ಅದರಿಂದ ಮುಸಲ್ಮಾನರಿಗೂ ಯಾವ ಲಾಭವಿಲ್ಲ’ ಎಂದರು.
ಅದಿರಲಿ, ಮುಸಲ್ಮಾನರು ತಮ್ಮ ಮತಗಳನ್ನು 500ಗೆ ಮಾರಿಕೊಂಡಿದ್ದಾರೆ ಎಂಬ ಅವಮಾನಕಾರಿ ಹಾಗೂ ದರ್ಪದ ಮಾತುಗಳನ್ನಾಡುವ ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಮುಸಲ್ಮಾನರಿಗೆ ಮಾಡಿದ್ದಾದರೂ ಏನು?
ರಾಜ್ಯ ಶಾಸನ ಸಭೆಗಳು, ಸಂಸತ್ತು, ಸಂಪುಟದಲ್ಲಿ ಸಾಂಕೇತಿಕ ಪ್ರಾತಿನಿಧಿತ್ವ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಬೇರೇನು ಮಾಡಿದೆ? ಒಬ್ಬ ಅಹ್ಮದ್ ಪಟೇಲ್ ಕಾಂಗ್ರೆಸ್್ನಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಿಟ್ಟರೆ ಅದರಿಂದ ಒಬ್ಬ ಸಾಮಾನ್ಯ ಮುಸಲ್ಮಾನನಿಗೇನು ಲಾಭ, ಸಹಾಯ ಸಿಗುತ್ತದೆ? ಸಲ್ಮಾನ್ ಖುರ್ಷಿದ್, ರೆಹಮಾನ್ ಖಾನ್, ಅಬ್ದುಲ್ ರೆಹಮಾನ್ ಅಂಟುಳೆಯಂಥವರು ಕಾಂಗ್ರೆಸ್ ಕ್ಯಾಬಿನೆಟ್ ಸೇರಿದರೆ ಮುಸಲ್ಮಾನರ ಶ್ರೇಯೋಭಿವೃದ್ಧಿಯಾದಂತೆಯೇ? ಹಜ್ ಯಾತ್ರೆಗೆ ಸಬ್ಸಿಡಿ ನೀಡುವುದರಿಂದ, ಕೆಲ ಸ್ಕಾಲರ್್ಶಿಪ್ ನೀಡುವುದರಿಂದ ಮುಸ್ಲಿಮರ ಅಭ್ಯುದಯ ಆಗಿ ಬಿಡುತ್ತದೆಯೇ? ಮುಸ್ಲಿಮರ ಸಮಗ್ರ ಅಭಿವೃದ್ಧಿಗೆ ಇವರು ಏನು ಮಾಡಿದ್ದಾರೆ? ಕುಟುಂಬ ಯೋಜನೆಯನ್ನು ಧಿಕ್ಕರಿಸಬೇಡಿ, ಮಿತಿಮೀರಿದ ಮಕ್ಕಳ ಸಂಖ್ಯೆ ನಿಮಗೇ ಹೊರೆಯಾಗುವುದು, ಅವರ ಭವಿಷ್ಯವೂ ಮಸುಕಾಗುತ್ತದೆ ಎಂದು ತಿಳಿಹೇಳುವ, ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಯಾವತ್ತಾದರೂ ಮಾಡಿದೆಯೇ? ಕಸಬ್, ಅಫ್ಜಲ್ ಗುರುವನ್ನಿಟ್ಟುಕೊಂಡೂ ರಾಜಕೀಯ ಮಾಡುತ್ತದೆ ಕಾಂಗ್ರೆಸ್. ಇವರನ್ನು ಗಲ್ಲಿಗೇರಿಸಿದರೆ ಅಲ್ಪಸಂಖ್ಯಾತರು ಮುನಿಸಿಕೊಳ್ಳುತ್ತಾರೆ ಎಂಬ ಭ್ರಮೆ ಸೃಷ್ಟಿಸಿ ಆ ಮೂಲಕ ಬಿಜೆಪಿಯನ್ನು ಭೂತ ಎಂಬಂತೆ ಬಿಂಬಿಸಿ ರಾಜಕೀಯವಾಗಿ ಲಾಭ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಮಾಡಿಕೊಂಡು ಬರುತ್ತಿರುವುದು ಇದನ್ನೇ ಅಲ್ಲವೆ? ಭಯೋತ್ಪಾದಕ ದಾಳಿಯಲ್ಲಿ ಸತ್ತವರೆಲ್ಲ ಹಿಂದುಗಳೇ ಅಲ್ಲ, ಸಾಕಷ್ಟು ಮುಸಲ್ಮಾನರೂ ಪ್ರಾಣಕಳೆದುಕೊಂಡಿದ್ದಾರೆ. ಭಯೋತ್ಪಾದನೆ ಎಲ್ಲರಿಗೂ ಕಂಟಕವೇ. ಆದರೂ ಕಾಂಗ್ರೆಸ್ ಭಯೋತ್ಪಾದನೆಯಲ್ಲೂ ರಾಜಕೀಯ ಬೆರೆಸಿ, ಅಲ್ಪಸಂಖ್ಯಾತರ ಬಗ್ಗೆ ಬಹುಸಂಖ್ಯಾತರಲ್ಲಿ ಅನ್ಯಥಾ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತದೆ. ರಾಷ್ಟ್ರೀಯ ಮುಖ್ಯವಾಹಿನಿಗೆ ಮುಸಲ್ಮಾನರು ಬರಲು ಕಾಂಗ್ರೆಸ್ ಬಿಡುವುದೇ ಇಲ್ಲ. ಒಂಥರಾ Ghettoism ಬೆಳೆಸಿ, ಮುಸ್ಲಿಮರನ್ನು ಭಯದಲ್ಲಿಟ್ಟು, ಮತಗಳನ್ನು ಕಬಳಿಸುವ ತಂತ್ರವದು. ಮೊನ್ನೆ ಗುಜರಾತ್ ಚುನಾವಣೆಯಲ್ಲಿ ಅದು ಮತ್ತೊಂದು ತಂತ್ರ ಹೂಡಿತು. ಗುಜರಾತ್್ನಲ್ಲಿ ಮುಸಲ್ಮಾನರಿಗೆ ಮನೆ ಸಿಗುವುದಿಲ್ಲ ಎಂದಿತು. ಇದು ದೂರದ ಮಾತಾಗಿಲ್ಲದಿದ್ದರೂ, ಇದಕ್ಕೆ ಮುಸಲ್ಮಾನರು, ಕ್ರಿಶ್ಚಿಯನ್ನರು, ಹಿಂದುಗಳು ಎಂಬ ಬೇಧವಿದೆಯೇ? ನಮ್ಮ ಹಿಂದೂ ದಲಿತರಿಗೆ ಎಷ್ಟು ಜನ ಮನೆ ಕೊಡುತ್ತಾರೆ ನಗರಗಳಿಗೆ ಬಂದು ಕೇಳಿ? ಹಿಂದುಗಳು ಹಿಂದುಗಳಿಗೇ ಮನೆ ಕೊಡುವ ಮೊದಲು ಆಹಾರ ಪದ್ಧತಿ ಕೇಳಿ, ಜಾತಿ ಅಂದಾಜು ಮಾಡುವ ಸಂಕುಚಿತತೆ, ಧೂರ್ತತೆ ತೋರುತ್ತಾರೆ. ಈ ತಾರತಮ್ಯ ಎನ್ನುವುದು ಎಲ್ಲ ಮತ, ಜನಾಂಗ, ಸಮುದಾಯಗಳಲ್ಲೂ ಇದೆ. ಕೆಲವು ಏರಿಯಾಗಳಲ್ಲಿ ಮನೆ ನೀಡುವ ಮೊದಲು ಜಾತಿ ಕೇಳಿದರೆ, ಮತ್ತೆ ಕೆಲವು ಏರಿಯಾಗಳು ಎಷ್ಟೇ ಮೇಲ್ಜಾತಿಯವರಾದರೂ ಶ್ರೀಮಂತರಿಗಷ್ಟೇ ನಿಲುಕುತ್ತವೆ. ಹಾಗಿರುವಾಗ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪ್ರೇರಿತ ಮಾಧ್ಯಮಗಳ ಇಂಥ ಆರೋಪದಲ್ಲಿ ಯಾವ ಹುರುಳಿದೆ? ಮುಸಲ್ಮಾನರಿಗೆ ಮನೆ ಸಿಗುವುದಿಲ್ಲ, ಫ್ಲಾಟ್ ಸಿಗುವುದಿಲ್ಲ ಬೇಧಭಾವ, ತಾರತಮ್ಯ ಮಾಡುತ್ತಾರೆ ಎನ್ನುವ ಸೆಕ್ಯುಲರ್ ಮಾಧ್ಯಮಗಳ ಪ್ರೈಮ್ ಟೈಂ ಆ್ಯಂಕರ್್ಗಳಲ್ಲಿ ಎಷ್ಟು ಜನ ಮುಸ್ಲಿಮರಿದ್ದಾರೆ ಮೊದಲು ಹೇಳಿ? ಬಿಜೆಪಿ ಕೋಮುವಾದ ಮಾಡುತ್ತದೆ ಅನ್ನುವವರು ಛತ್ತೀಸ್್ಗಢದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್್ನ ಅಜಿತ್ ಜೋಗಿ ಮಗಳು ಅನುಷ್ಕಾ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎನ್ನುವುದನ್ನು ಹೇಳಲಿ? ಅಜಿತ್ ಜೋಗಿ ಕ್ರಿಶ್ಚಿಯನ್, ಅನುಷ್ಕಾ ಪ್ರೀತಿಸಿದ್ದು ಮುಸ್ಲಿಂ ಯುವಕನನ್ನು. ಅದನ್ನು ತಪ್ಪಿಸಲು ಆಕೆಯನ್ನು ಉನ್ನತ ವ್ಯಾಸಂಗದ ನೆಪದಲ್ಲಿ ಬ್ರಿಟನ್್ಗೆ ಕಳುಹಿಸಿದರು. ಆದರೆ ಆಕೆಯ ಬಾಯ್್ಫ್ರೆಂಡ್ ಅವಳನ್ನು ಅಲ್ಲಿಯೂ ಹಿಂಬಾಲಿಸಿದ, ಪ್ರೀತಿ ಮುಂದುವರಿಯಿತು. ಕೊನೆಗೆ ಆಕೆಯನ್ನು ಬಲವಂತವಾಗಿ ಮನೆಗೆ ಕರೆತಂದಾಗ ಆತ್ಮಹತ್ಯೆ ಮಾಡಿಕೊಂಡಳು. ಆಗ ಕಾಂಗ್ರೆಸ್ ನಾಯಕ ಜೋಗಿಗೆ ಮುಖ್ಯವಾಗಿದ್ದು ಧರ್ಮವೇ ಅಲ್ಲವೆ? ಇಷ್ಟಾಗಿಯೂ ಮುಸಲ್ಮಾನರು ಬಿಜೆಪಿಯನ್ನು ದ್ವೇಷಿಸಲಿ, ಯಾರೂ ಬೇಡವೆನ್ನುವುದಿಲ್ಲ.
ಆದರೆ…
ಒಂಬೈನೂರು ವರ್ಷ ದೇಶವಾಳಿದ ಮುಸಲ್ಮಾನರನ್ನು 60 ವರ್ಷಗಳಲ್ಲಿ ದೈನೇಸಿ ಸ್ಥಿತಿಗೆ ಕೊಂಡೊಯ್ದಿದ್ದು ಯಾರು? ರಾಜೇಂದ್ರ ಸಾಚಾರ್ ಸಮಿತಿ ರಚನೆ ಮಾಡಬೇಕಾದ, ಮೀಸಲಾತಿ ಕೊಡಿ ಎಂದು ಶಿಫಾರಸು ಮಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದವರಾರು? ಅಲ್ಪಸಂಖ್ಯಾತರ ರಕ್ಷಕನಂತೆ ಮಾತನಾಡುವ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೇರು ನಾಯಕ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಮೊಮ್ಮಗಳು ನಜ್ಮಾ ಹೆಫ್ತುಲ್ಲಾರನ್ನು ಮೂಲೆಗುಂಪು ಮಾಡಿದ್ದೇಕೆ? ಕಾಂಗ್ರೆಸ್ ಮಾತ್ರವಲ್ಲ, ನರೇಂದ್ರ ಮೋದಿಯೆಂಬ ಭೂತವನ್ನು ಸೃಷ್ಟಿಸಿ ಮುಸ್ಲಿಮರ ವೋಟಿಗೆ ಕೈ ಹಾಕುವ ಇತರೆ ಸೆಕ್ಯುಲರ್ ಪಕ್ಷಗಳು ಮುಸಲ್ಮಾನರಿಗೆ ಏನು ಮಾಡಿವೆ? ಇತ್ತೀಚೆಗೆ ರಾಜ್ಯಸಭಾ ಸದಸ್ಯ ಹಾಗೂ ‘ನಯೀ ದುನಿಯಾ’ ಎಂಬ ಉರ್ದು ಪತ್ರಿಕೆಯ ಸಂಪಾದಕರಾದ ಶಾಹಿದ್ ಸಿದ್ದಿಕಿ ವೆಬ್ ಆಧಾರಿತ ಚಾನೆಲ್ ‘ನ್ಯೂಸ್ ಲಾಂಡ್ರಿ’ಗೆ ನೀಡಿದ ಸಂದರ್ಶನದಲ್ಲಿ,Champion of Muslims ಎಂದು ಕೊಚ್ಚಿಕೊಳ್ಳುವ ಮುಲಾ ಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದಲ್ಲಿ ಮುಸಲ್ಮಾನ ಶಾಸಕ, ಸಂಸದರ ಪರಿಸ್ಥಿತಿ ಹೇಗಿದೆ ಎಂದರೆ ಅವರು ಪಕ್ಷದಲ್ಲಿ ಬಾಯಿ ತೆರೆಯುವುದು ಎರಡೇ ಬಾರಿ- ಒಂದು ಪಾನ್ ಹಾಕಿಕೊಳ್ಳುವಾಗ, ಇನ್ನೊಂದು ಪಾನ್ ಉಗಿಯುವಾಗ’! ಎಂದು ಹೇಳಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದು ಬೊಗಳೆ ಬಿಡುವ ದೇವೇಗೌಡರೂ ಮಾಡಿದ್ದೆಲ್ಲ ಸ್ವಂತಕ್ಕೇ, ಇಲ್ಲವೇ ಮಕ್ಕಳಿಗೆ ಎಂಬುದನ್ನು ಮುಸಲ್ಮಾನರು ಮರೆಯಬಾರದು. ಬಿಜೆಪಿ ಹಿಂದೂವಾದಿಯಂತೆ ಕಾಣಬಹುದು, ಆದರೆ ಎಲ್ಲ ಪಕ್ಷಗಳೂ ರಾಜಕೀಯ ಮಾಡುವುದು ಸಂಖ್ಯೆ ನೋಡಿಯೇ. ಈ ಬಾರಿಯ ಗುಜರಾತ್ ಚುನಾವಣಾ ಪ್ರಚಾರಾಂದೋಲನದಲ್ಲಿ ಕಾಂಗ್ರೆಸ್ ಮುಸ್ಲಿಂ ಎಂಬ ಪದವನ್ನು ಒಮ್ಮೆಯೂ ಎತ್ತಲಿಲ್ಲ. ಎಲ್ಲಿ ಹಿಂದುಗಳು ಮುನಿಸಿಕೊಂಡು ಬಿಡುತ್ತಾರೋ ಎಂಬ ಭಯ. ಅಂದರೆ ಮತಗಳ ಪ್ರಮಾಣವಾರನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ರಾಜಕೀಯ ಮಾಡುತ್ತದೆ ಎಂದಾಗಲಿಲ್ಲವೆ? ಈ ಸಲ ಕಾಂಗ್ರೆಸ್ ‘ಎಂ’ (ಮುಸ್ಲಿಂ) ಎಂಬ ಪದವನ್ನು ‘ಕೆ’ (ಕಾಫಿರ್) ಎಂಬಂತೆ ನೋಡಿತು. ಇದಕ್ಕಿಂತ ನನ್ನ 6 ಕೋಟಿ ಗುಜರಾತಿಗಳೇ ಎನ್ನುವ ಮೋದಿಯ Inclusive Politics ಮೇಲು’ ಎಂಬ ಝಫರ್ ಸರೇಝ್್ವಾಲಾ ಮಾತು ಎಲ್ಲರ ಕಣ್ತೆರಸಬೇಕು. ಇಲ್ಲವಾದರೆ ದಿಗ್ವಿಜಯ್ ಸಿಂಗ್ ಅಂಥವರ ಅವಿವೇಕದ, ಅವಮಾನಕಾರಿ ಮಾತುಗಳನ್ನು ಮುಸಲ್ಮಾನರು ಕೇಳಬೇಕಾಗುತ್ತದೆ, ಅಲ್ಲವೆ?

-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ