ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜನವರಿ 19, 2013

ಅವರು ಏಳಿ, ಎದ್ದೇಳಿ, ಗುರಿ ತಲುಪುವವರೆಗೂ ನಿಲ್ಲದಿರಿ ಎಂದು ಪ್ರೇರೇಪಿಸಿದರೆ, ಇವರು ಬನ್ನಿ ಭಜನೆಗಿಷ್ಟು ಎಂದು ಕಿಸೆಗೆ ಕೈ ಹಾಕುತ್ತಾರೆ!

ಮಹಾಭಾರತವೆಂದರೆ ಬರೀ ಕೌರವ, ಪಾಂಡವ, ಭೀಷ್ಮರಲ್ಲ. ಅದರ ಉಪಾಖ್ಯಾನದಲ್ಲಿ ಸಾಕಷ್ಟು ಸಾಹಸಗಾಥೆಗಳು, ಶೌರ್ಯ ಕಥೆಗಳು ಬರುತ್ತವೆ. ಅಂಥವುಗಳಲ್ಲಿ ಸಂಜಯ ಎಂಬ ರಾಜನೂ ಒಬ್ಬ. ಆತ ಶತ್ರುಗಳನ್ನು ಹಿಮ್ಮೆಟ್ಟಿಸಲಾಗದೆ ತನ್ನ ರಾಜ್ಯವನ್ನು ಕಳೆದುಕೊಂಡು, ಹೇಡಿಯಾಗಿ ಕುಳಿತಿರುತ್ತಾನೆ. ಇನ್ನು ತನ್ನಿಂದೇನಾಗದು, ರಾಜ್ಯವನ್ನು ಮರಳಿ ಗಳಿಸಲು ಸಾಧ್ಯವಾಗದು ಎಂದು ಕಣ್ಣೀರು ಸುರಿಸುತ್ತಿರುತ್ತಾನೆ. ಅದನ್ನು ಕಂಡ ಆತನ ತಾಯಿ ರಾಣಿ ವಿದುಲಾಳಿಗೆ ಅಸಾಧ್ಯ ಕೋಪವುಂಟಾಗುತ್ತದೆ. ಇವನು ತನ್ನ ಮಗನೇ ಅಲ್ಲ, ನನ್ನ ಗಂಡನಿಗೂ ಹುಟ್ಟಿದವನಲ್ಲ ಎನ್ನುತ್ತಾ, ಮಗನನ್ನು ಉದ್ದೇಶಿಸಿ-
ಮುಹೂರ್ತಂ ಜ್ವಲಿತಂ ಶ್ರೇಯೋ
ನತು ಧೂಮಾಯಿತಂ ಚಿರಂ

ಅಂದರೆ, ‘ನೂರಾರು ವರ್ಷ ಹೊಗೆಯಾಡುತ್ತಾ ಬಿದ್ದಿರುವುದಕ್ಕಿಂತ ಅಲ್ಪಕಾಲ ಬದುಕಿದರೂ ಪ್ರಜ್ವಲಿಸಿ ಬದುಕುವುದು ಶ್ರೇಯಸ್ಕರ’ ಎಂದು ಹೇಳುತ್ತಾಳೆ. ಆ ಮಾತುಗಳೇ ಸಂಜಯನಿಗೆ ಪ್ರೇರಣೆಯಾಗುತ್ತವೆ, ಮೇಲೆದ್ದು ಹೋರಾಡಿ ಮತ್ತೆ ರಾಜ್ಯ ಗಳಿಸುತ್ತಾನೆ. ಆಕೆಯ ಪ್ರೇರಣಾತ್ಮಕ ಮಾತುಗಳನ್ನು ನೆನಪಿಸಿಕೊಂಡಾಗಲೆಲ್ಲ ಅಲ್ಪಾಯುಷಿಗಳಾದರೂ ಅನಂತ ಕಾಲ ಉಳಿಯುವಂಥ ಕೆಲಸ ಮಾಡಿದ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ಸ್ವಾಮಿ ರಾಮತೀರ್ಥರು, ಜ್ಞಾನದೇವರು ಕಣ್ಣಮುಂದೆ ಬರುತ್ತಾರೆ. ಇವರೆಲ್ಲ ‘ಮುಹೂರ್ತಂ ಜ್ವಲಿತಂ ಶ್ರೇಯೋ’ ಎಂಬಂತೆ ಪ್ರಜ್ವಲಿಸಿ ಹೋದವರು. ಅದರಲ್ಲೂ ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ. ಆದರೇನಂತೆ…
Arise, awake, stop not till the goal is Reached!
ಎಂಬ ಅವರ ಈ ಒಂದು ಕರೆ ಇವತ್ತಿಗೂ ನಮಗೆ ಪ್ರೇರಣೆ ಕೊಡುತ್ತದೆ. ನಮ್ಮ ಪೂರ್ವಪರಂಪರೆಯನ್ನು ಅವರಷ್ಟು ಚೆನ್ನಾಗಿ ಅರ್ಥಮಾಡಿಕೊಂಡವರು ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟವರು ಮತ್ತೊಬ್ಬರಿಲ್ಲ. ಸುಮಾರು 700 ವರ್ಷಗಳ ಕಾಲ ಮುಸಲ್ಮಾನ ಆಕ್ರಮಣಕಾರರು ಹಾಗೂ ಬ್ರಿಟಿಷರ ದಾಸ್ಯಕ್ಕೊಳಗಾಗಿ ಆತ್ಮಸ್ಥೈರ್ಯ ಕಳೆದುಕೊಂಡಿದ್ದೆವು. ಅಂತಹ ಸನ್ನಿವೇಶದಲ್ಲಿ ಅಮೆರಿಕದ ಷಿಕಾಗೋದಲ್ಲಿ 1893ರಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಾ, ‘ಯಾವ ಭಾರತೀಯ ಆರ್ಯ ಋಷಿಗಳ ಜ್ಞಾನ ಸಂಪತ್ತಿಗೆ, ಅವರ ವೈಜ್ಞಾನಿಕ ಅನ್ವೇಷಣಾ ಪ್ರವೃತ್ತಿಗೆ ಹೋಲಿಸಿದಲ್ಲಿ ಆಧುನಿಕ ನವನವಾನ್ವೇಷಣೆಗಳೂ ಅತಿ ಚಿಕ್ಕಮಕ್ಕಳ ಆಟಿಕೆಗಳಂತೆ ತೋರುತ್ತವೆಯೋ, ಅಂತಹ ಶ್ರೇಷ್ಠ ಜ್ಞಾನಸಂಪತ್ತನ್ನು ಜಗತ್ತಿಗೆ ನೀಡಿದ ಭಾರತೀಯ ಶ್ರೇಷ್ಠ ಋಷಿಗಳ ಭವ್ಯ ಪರಂಪರೆಗೆ ಸೇರಿದ ವ್ಯಕ್ತಿ ನಾನು ಎಂಬ ಹೆಮ್ಮೆ ನನ್ನದು’ ಎಂದು ಅವರು ನಮ್ಮ ದೇಶ, ಧರ್ಮದ ಪರಿಚಯ ಮಾಡಿಕೊಟ್ಟ ಪರಿ ನಮ್ಮೊಳಗೆ ಸತ್ತುಬಿದ್ದಿದ್ದ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸಿತು. ಅವರು ಭಾರತೀಯ ಸಂಸ್ಕೃತಿ, ಆಳ-ಅಗಲ ಹರವು ವಿಸ್ತಾರವನ್ನು ಸಂಪೂರ್ಣವಾಗಿ ಅರಗಿಸಿಕೊಂಡಿದ್ದರಿಂದಲೇ ಅವರಲ್ಲಿ ಈ ಹೆಮ್ಮೆ ಮೂಡಿದ್ದು. ಆ ಹೆಮ್ಮೆಯನ್ನು ನಮ್ಮೊಳಗೂ ತುಂಬಿದರು.
ಒಮ್ಮೆ ವಿವೇಕಾನಂದರು ವಾರಾಣಸಿಯಲ್ಲಿ ಮಾತೆ ದುರ್ಗೆಯ ದರ್ಶನ ಮಾಡಿ ಬರುತ್ತಿರುತ್ತಾರೆ. ಅಲ್ಲಿ ದಢೂತಿ ಮಂಗಗಳು ತುಂಬಿರುತ್ತವೆ. ಅವುಗಳನ್ನು ಕಂಡು ಭಯಭೀತರಾದ ವಿವೇಕಾನಂದರು ಓಡಲು ಆರಂಭಿಸುತ್ತಾರೆ. ಮಂಗಗಳೂ ಅಟ್ಟಿಸಿಕೊಂಡು ಬರಲಾರಂಭಿಸುತ್ತವೆ. ಇನ್ನೇನು ಅವು ವಿವೇಕಾನಂದರ ಮೇಲೆರಗಬೇಕು ಅಷ್ಟರಲ್ಲಿ, ‘“Stop! Face the brutes!’ ಎಂಬ ಧ್ವನಿ ಕೇಳಿಸುತ್ತದೆ. ಅದು ಇದನ್ನೆಲ್ಲ ಗಮನಿಸುತ್ತಿದ್ದ ವೃದ್ಧ ಸನ್ಯಾಸಿಯ ಧ್ವನಿಯಾಗಿರುತ್ತದೆ. ಅಲ್ಲೇ ನಿಂತ ವಿವೇಕಾನಂದರು, ಮಂಗಗಳತ್ತ ತಿರುಗಿ ಸಿಟ್ಟಿನಿಂದ ನೋಡುತ್ತಾರೆ. ಕಪಿಗಳು ವಾಪಸ್ ಕಾಲುಕೀಳಲಾರಂಭಿಸಿದವು. ಮುಂದೊಂದು ದಿನ ವಿವೇಕಾನಂದರು ಹೇಳುತ್ತಾರೆ, “If you ever feel afraid of anything, always turn round and face it. Never think of running away’. ಅವರ ಜೀವನ ಸಂದೇಶವೇ ಇದು. ಮದ್ರಾಸ್್ನಲ್ಲಿ ವಿವೇಕಾನಂದರ ಉಪನ್ಯಾಸ ನಡೆಯುತ್ತಿತ್ತು. ವೃದ್ಧನೊಬ್ಬ ದಿನವೂ ತಪ್ಪದೇ ಹಾಜರಾಗುತ್ತಿದ್ದ. ಪ್ರತಿ ದಿನವೂ ಒಂದಲ್ಲ ಒಂದು ಪ್ರಶ್ನೆ ಕೇಳುತ್ತಿದ್ದ, ಆದರೆ ವಿವೇಕಾನಂದರು ಉತ್ತರಿಸುವುದು ಬಿಡಿ, ಆತನತ್ತ ಮುಖ ಮಾಡುತ್ತಲೂ ಇರಲಿಲ್ಲ. ಹೀಗೆಯೇ ಐದಾರು ದಿನಗಳು ಕಳೆದವು. ಕೊನೆಗೆ ಬೇಸತ್ತ ಮುದುಕ ವಿವೇಕಾನಂದರನ್ನು ಬೈಯ್ಯುತ್ತಾ ಹೊರನಡೆದ. ಆಗ ವಿವೇಕಾನಂದರು ನಗಲಾರಂಭಿಸಿದರು. ಆಶ್ಚರ್ಯಚಕಿತರಾದ ನೆರೆದ ಯುವಕರು ಏಕೆಂದು ಕೇಳಿದರು. ‘ನಿಮ್ಮಂಥ ಯುವಕರಿಗಾಗಿ ನನ್ನ ಇಡೀ ಜೀವನವನ್ನೇ ತ್ಯಾಗಮಾಡಿ ಬಿಡಬಲ್ಲೆ. ನಿಮಗೆ ನನ್ನ ಆದೇಶಗಳನ್ನು, ಆದರ್ಶಗಳನ್ನು ಕಾರ್ಯಗತಗೊಳಿಸುವ ಶಕ್ತಿಯೂ ಇದೆ, ಮನಸ್ಸೂ ಇದೆ. ಆದರೆ ಈ ಮುದುಕನಾದರೋ ಜೀವನವನ್ನೆಲ್ಲ ಪ್ರಾಪಂಚಿಕ ಸುಖಭೋಗಗಳಲ್ಲೇ ಕಳೆದಿದ್ದಾನೆ. ಈಗ ಇವನಿಗೆ ಭೋಗಕ್ಕೂ ಯೋಗ್ಯತೆಯಿಲ್ಲ, ಯೋಗಕ್ಕೂ ಯೋಗ್ಯತೆಯಿಲ್ಲ. ಬರೀ ಬಾಯಿ ಮಾತಿನಲ್ಲೇ ಭಗವಂತನನ್ನು ಪಡೆದುಕೊಂಡು ಬಿಡಬಹುದು ಎಂದು ಭಾವಿಸಿದ್ದಾನೆ ಈತ. ಯಾರಲ್ಲಿ ಪೌರುಷವಿಲ್ಲವೋ ಅಂಥವರಲ್ಲಿ ಇರುವುದು ಬರೀ ತಮಸ್ಸು ಮಾತ್ರ. ವೀರಾವೀರನಾದ ಅರ್ಜುನ ಕೂಡ ಈ ಪೌರುಷವನ್ನು ಕಳೆದುಕೊಂಡವನಂತೆ ಕಂಡುಬಂದಿದ್ದರಿಂದಲೇ ಅವನಲ್ಲಿ ಕ್ಷಾತ್ರಶಕ್ತಿಯನ್ನು ಕೃಷ್ಣ ಜಾಗೃತಗೊಳಿಸಿದ್ದು’ ಎನ್ನುತ್ತಾರೆ ವಿವೇಕಾನಂದರು!
ಇವತ್ತು, ಈ ಕ್ಷಣದಲ್ಲಿ, ನಮ್ಮ ದೇಶದ ಸೈನಿಕರ ಮೇಲೆ ಪಾಕಿಸ್ತಾನದಂಥ ಯಕಶ್ಚಿತ್ ರಾಷ್ಟ್ರಗಳು ದೌರ್ಜನ್ಯವೆಸಗುತ್ತಿರುವ ಸಂದರ್ಭದಲ್ಲಿ ನಮಗೆ, ನಮ್ಮನ್ನಾಳುತ್ತಿರುವವರಿಗೆ ಬೇಕಾಗಿರುವುದೂ ವಿವೇಕಾನಂದರು ಹೇಳಿದ ಕ್ಷಾತ್ರಗುಣವೇ ಅಲ್ಲವೆ?
ಅಮೆರಿಕದ ಒಬ್ಬ ಶಿಷ್ಯೆ ವಿವೇಕಾನಂದರನ್ನು ಉದ್ದೇಶಿಸಿ, ‘ಸ್ವಾಮೀಜಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಿಮ್ಮ ದೇಶದಲ್ಲಿ ಗದ್ದಲ, ಗಲಾಟೆ, ಆಂದೋಲನಗಳ ಸಂಖ್ಯೆ ತುಂಬಾ ಕಡಿಮೆಯಲ್ಲವೆ?’ ಎಂದು ಕೇಳುತ್ತಾಳೆ. ಆಗ ವಿವೇಕಾನಂದರು ‘ನನ್ನ ದೇಶದಲ್ಲಿ ಗದ್ದಲ, ಗಲಾಟೆಗಳು ಜಾಸ್ತಿಯಿದ್ದರೆ ನನಗೆ ಖುಷಿಯಾಗುತ್ತಿತ್ತು’ ಎನ್ನುತ್ತಾರೆ. ಆಕೆಗೆ ಆಶ್ಚರ್ಯವಾಗುತ್ತದೆ. ನೀವು ಶಾಂತಿಪ್ರಿಯರು ಅಂತ ಅಂದುಕೊಂಡಿದ್ದೆ ಎನ್ನುತ್ತಾಳೆ. ಆಗ ವಿವೇಕಾನಂದರು ತಮ್ಮ ಮಾತಿಗೆ ವಿವರಣೆ ನೀಡುತ್ತಾರೆ. ‘ನೀವು ಅಂದುಕೊಂಡಿರುವಂತೆ ನಮ್ಮವರು ಶಾಂತಿಪ್ರಿಯರು ಎನ್ನುವುದಕ್ಕಿಂತ ತಮಸ್ಸಿನ ಮುದ್ದೆಗಳಾಗಿ ನಿರ್ವೀರ್ಯರಾಗಿದ್ದಾರೆ. ಇವರಿಗೆ ಗದ್ದಲ, ಗಲಾಟೆ ಮಾಡುವ ಸಾಮರ್ಥ್ಯ ಎಲ್ಲಿಂದ ಬರಬೇಕು? ಇವರಲ್ಲಿ ಹೋರಾಟದ ಛಲ, ಮನೋಭಾವನೆ ಯಾವುವೂ ಇಲ್ಲವಾಗಿಬಿಟ್ಟಿವೆ’ ಎಂದು ಜಾಡಿಸುತ್ತಾರೆ.
ಇಂದು ನಮ್ಮ ಯಾವ ಸ್ವಾಮಿ, ಗುರು ಕ್ಷಾತ್ರ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಬೋಧಿಸುತ್ತಾನೆ, ಹೇಳಿ?
ಭಕ್ತಿಯಂತೆ, ಧ್ಯಾನವಂತೆ, ಸತ್ಸಂಗವಂತೆ, ಸಮಾಧಿಯಂತೆ, ಭಜನೆಯಂತೆ, ಅದಕ್ಕೊಂದು ದೀಕ್ಷೆ ತೆಗೆದುಕೊಳ್ಳಬೇಕಂತೆ! ಇವರಿಗೆ ಒಂದೂವರೆ ಕೋಟಿ ಅನುಯಾಯಿಗಳಿದ್ದಾರೆ, ವಿದೇಶಗಳಲ್ಲೂ ಫಾಲೋವರ್ಸ್ ಇದ್ದಾರೆ, ವಿದೇಶಗಳಲ್ಲೂ ಇವರ ಆಶ್ರಮಗಳಿವೆ, ಇಷ್ಟು ದೇಣಿಗೆ ಬರುತ್ತದೆ, ಇವರಿಗೆ ಒಟ್ಟು ಇಷ್ಟು ಆಶ್ರಮಗಳಿವೆ, ಇಷ್ಟು ಆದಾಯ ಬರುತ್ತದೆ, ಇಷ್ಟು ಕ್ಯಾಸೆಟ್ ಮಾರಾಟವಾಗಿವೆ. ಇವುಗಳಿಂದ ಇವತ್ತಿನ ಸ್ವಾಮಿಗಳನ್ನು ಅಳೆಯುತ್ತೇವೆ. ಅಂದು ಅಮೆರಿಕದ ನೆಲದಲ್ಲಿ ನಿಂತು ಕ್ರಿಶ್ಚಿಯಾನಿಟಿ, ಮುಸಲ್ಮಾನರನ್ನು ಉದ್ದೇಶಿಸಿ, ‘ಅನ್ಯ ರಾಷ್ಟ್ರಗಳು ಭಾರತದ ಮೇಲೆ ಮಾಡಿರುವ ದೌರ್ಜನ್ಯ, ದಬ್ಬಾಳಿಕೆ, ಅತಿರೇಕಗಳಿಗೆ ಸೇಡು ತೀರಿಸಿಕೊಳ್ಳಲು ಹಿಂದುಗಳೆಲ್ಲರೂ ಹಿಂದು ಮಹಾಸಾಗರದ ದಡದಲ್ಲಿ ನಿಂತು ಆ ಸಾಗರದ ತಳದಲ್ಲಿರುವ ಬಗ್ಗಡವನ್ನೆಲ್ಲ ತೆಗೆದು ನಿಮ್ಮ ಮುಖಕ್ಕೆ ಎರಚಿದರೂ ನೀವು ಮಾಡಿರುವ ಅನಾಚಾರಕ್ಕೆ ತಕ್ಕಶಾಸ್ತಿಯಾಗುವುದಿಲ್ಲ’ ಎನ್ನುತ್ತಾರೆ ವಿವೇಕಾನಂದರು. ಅಂತಹ ಮಾತನಾಡುವ ತಾಕತ್ತು ಇವತ್ತಿನ ನಮ್ಮ ಯಾವ ಗುರುವಿಗಿದೆ? ನಮ್ಮ ಧರ್ಮವನ್ನು ಹೀಗಳೆಯುವಂಥ ಕೆಲಸ ನಡೆಯುತ್ತಿದ್ದರೂ, ಮತಾಂತರದಂಥ ಆಕ್ರಮಣಗಳು ನಡೆಯುತ್ತಿದ್ದರೂ ನಮ್ಮ ಸ್ವಾಮೀಜಿಗಳು, ಅಧ್ಯಾತ್ಮ ಗುರುಗಳು ಏಕೆ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ? ಸ್ವಾಮಿಗಳು, ಗುರುಗಳು ಅಂದರೆ ಪೀಠದ ಮೇಲೆ ವಿರಾಜಮಾನರಾಗುವುದು, ದೇಣಿಗೆ ಕೊಟ್ಟ ಭಕ್ತರಿಗೆ ಶಾಲು ಹೊದಿಸುವುದು, ಸೇಬು, ಮೂಸಂಬಿ, ಅಕ್ಷತೆ ಕೊಡುವುದು. ಇದು ಒಬ್ಬ ಸ್ವಾಮಿ ಮಾಡುವ ಕೆಲಸವೇ?
ಒಂದು ಸಲ ಬ್ರಿಟಿಷ್ ಅಧಿಕಾರಿಯೊಬ್ಬ ವಿವೇಕಾನಂದರನ್ನು ಭೋಜನಕ್ಕೆ ಆಹ್ವಾನಿಸಿದ. ಮನೆಗೆ ಹೋದ ವಿವೇಕಾನಂದರ ಜತೆ ಹರಟೆ ಆರಂಭಿಸಿದನೇ ಹೊರತು ಎಷ್ಟು ಹೊತ್ತಾದರೂ ಊಟದ ಸುಳಿವಿಲ್ಲ! ಕಾಡುಹರಟೆಯನ್ನು ಮುಂದುವರಿಸುತ್ತಿದ್ದ ಅಧಿಕಾರಿ ಇದ್ದಕ್ಕಿದ್ದಂತೆಯೇ ಧ್ವನಿಯೇರಿಸಿದ, ‘ನೀವು, ನಿಮ್ಮ ಶಿಷ್ಯಂದಿರು ಸೇರಿ ಬ್ರಿಟಿಷರ ವಿರುದ್ಧ ಕುತಂತ್ರ ನಡೆಸುತ್ತಿದ್ದೀರಿ, ಪಿತೂರಿ ನಡೆಸುತ್ತಿದ್ದೀರಿ. ಅದು ನಮಗೆ ಗೊತ್ತಾಗಿದೆ’ ಎಂದ. ‘ನಿನಗೆ ಅಷ್ಟೆಲ್ಲಾ ವಿಷಯ ಗೊತ್ತಿದ್ದರೆ ಕೇಸ್ ಹಾಕುವುದು ಬಿಟ್ಟು, ಊಟಕ್ಕೇಕೆ ಕರೆದೆ?’ ಎಂದರು ವಿವೇಕಾನಂದರು! ಮುಖಭಂಗಕ್ಕೊಳಗಾದ ಆ ಅಧಿಕಾರಿ ಮತ್ತೂ ಉದ್ಧಟತನ ತೋರಿದ. ಇದ್ದಕ್ಕಿದ್ದಂತೆ ಎದ್ದು ನಿಂತ ವಿವೇಕಾನಂದರು, ಆತನ ಮನೆಯ ಬಾಗಿಲಿನ ಬೋಲ್ಟ್ ಹಾಕಿದರು. ನಂತರ ಆತನ ಬಳಿಗೆ ಹೋಗಿ ಕುತ್ತಿಗೆ ಹಿಡಿದು, ‘ನೀನಂದುಕೊಂಡಂತೆ ನಾನು ನಿಜಕ್ಕೂ ದುಷ್ಟನಾಗಿದ್ದರೆ ನಿನ್ನ ಕತ್ತು ಹಿಸುಕಿ ಕ್ರಿಮಿಯಂತೆ ಕೊಂದು ಹಾಕಿ ಹೋಗುತ್ತಿದ್ದೆ’ ಎಂದರು! ಅಂದರೆ ಅವರಲ್ಲಿ ಕ್ಷಾತ್ರತೇಜಸ್ಸು ಎಷ್ಟಿತ್ತು ಎಂಬುದನ್ನು ತೋರಿಸುತ್ತದೆ. ವಿವೇಕಾನಂದರೆಂದರೆ ಬರೀ ಷಿಕಾಗೋ ಭಾಷಣವಲ್ಲ, ಅನ್ಯಾಯದ ವಿರುದ್ಧ ಸಿಡಿದೇಳುವುದನ್ನೂ, ಅಗತ್ಯ ಬಂದಾಗ ಬಾಹುಬಲವನ್ನೂ ಬಳಸಬೇಕು ಎಂಬುದನ್ನೂ ನಮಗೆ ಹೇಳಿಕೊಟ್ಟಿದ್ದಾರೆ.
ಇವತ್ತಿನ ಅಧ್ಯಾತ್ಮ ಗುರುಗಳು, ಸಂತರು, ಸ್ವಾಮಿಗಳೇನು ಹೇಳಿಕೊಡುತ್ತಾರೆ?
ಐಐಟಿ, ಐಐಎಂಗಳಲ್ಲಿ ಓದಿದವರನ್ನು ಶಿಷ್ಯರನ್ನಾಗಿ ಮಾಡಿಕೊಂಡು ತಮ್ಮ ಮಾರ್ಕೆಟಿಂಗ್ ಮಾಡಿಕೊಳ್ಳುವುದು. ಆದರೆ ಅಂದು ಜಪಾನ್್ನಲ್ಲಿ ತಮ್ಮ ಜತೆಯೇ ಅಮೆರಿಕಕ್ಕೆ ಹಡಗು ಏರಿದ ಜೆ.ಎನ್. ಟಾಟಾ ತಮ್ಮಿಂದ ಆಕರ್ಷಿತರಾಗಿ ಅಧ್ಯಾತ್ಮದತ್ತ ಒಲವು ತೋರಿದಾಗ ವಿವೇಕಾನಂದರು ಹೇಳಿದ್ದೇನು? ನಿಮ್ಮಿಂದ ಬೇರೊಂದು ಕ್ಷೇತ್ರಕ್ಕೆ ಸಹಾಯವಾಗಬೇಕಿದೆ, ಒಂದು ವೈಜ್ಞಾನಿಕ ಸಂಶೋಧನಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಎಂದರೇ ಹೊರತು, ಈಗಿನವರಂತೆ ಧ್ಯಾನ, ಸಮಾಧಿ, ಯೋಗ, ಸತ್ಸಂಗ ಅಂತ ಎಲ್ಲದಕ್ಕೂ ಫೀಸು ಫಿಕ್ಸ್ ಮಾಡಿ ಕಿಸೆಗೆ ಕೈಹಾಕುವ, ದೇಣಿಗೆಗೆ ಬಾಯ್ಬಿಡುವ, ಶಿಷ್ಯನನ್ನಾಗಿ ಮಾಡಿಕೊಳ್ಳುವ ಕೆಲಸ ಮಾಡಲಿಲ್ಲ. ಅದರ ಫಲವಾಗಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರ(ಐಐಎಸ್್ಸಿ) ರೂಪತಳೆಯಿತು. ಮೊದಲ ತಲೆಮಾರಿನ ವಿಜ್ಞಾನಿಗಳು ನಮ್ಮ ದೇಶಕ್ಕೆ ದೊರೆತರು, ಅವರು ಉಪಗ್ರಹಗಳು, ಅವುಗಳ ಉಡಾವಣಾ ಯಂತ್ರಗಳನ್ನು ರೂಪಿಸಿದ್ದು ಮಾತ್ರವಲ್ಲ, ಈ ದೇಶವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಯೂ ಮಾಡಿದರು. ಅಂತಹ ಒಬ್ಬ ಪ್ರೇರಕ ಹಾಗೂ ದೇಶದ ಬಗ್ಗೆ ಚಿಂತಿಸುವ ಸ್ವಾಮಿಯನ್ನು ಇಂದು ತೋರಿಸಿ ನೋಡೋಣ?
ಒಮ್ಮೆ ವಿವೇಕಾನಂದರು ತಮ್ಮ ಶಿಷ್ಯರನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾರೆ. ಅಷ್ಟರಲ್ಲಿ ಪಂಡಿತನೊಬ್ಬ ಒಳಪ್ರವೇಶಿಸಿ, ‘ಸ್ವಾಮೀಜಿ ನಾನೊಬ್ಬ ವೇದಾಂತಿ. ಆದರೆ ನಾನು ದಶಾವತಾರವನ್ನು, ಅವತಾರ ವಾದವನ್ನು ಒಪ್ಪುವುದಿಲ್ಲ. ನಾನೂ ಒಬ್ಬ ಅವತಾರಿಯೇ’ ಎನ್ನುತ್ತಾನೆ. ಆಗ ವಿವೇಕಾನಂದರು, ‘ಹೌದೌದು, ನೀನೂ ಒಬ್ಬ ಅವತಾರಿಯೇ. ಆದರೆ ನೀನು ಮೀನೋ (ಮತ್ಸ್ಯ), ಆಮೆಯೋ (ಕೂರ್ಮವೋ) ಅಥವಾ ಹಂದಿಯೋ(ವರಾಹ) ಎಂದು ನೋಡಬೇಕಷ್ಟೇ’ ಎನ್ನುತ್ತಾರೆ! ಹೀಗೆ ವೇದಾಂತವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂಬ ಸಂದೇಶವನ್ನು ಖಾರವಾಗಿ ಉತ್ತರಿಸುತ್ತಾರೆ. ಇಂತಹ ಇಲ್ಲಸಲ್ಲದ ಆಲೋಚನೆ, ವೃಥಾ ಚರ್ಚೆಗಳಲ್ಲೇ ನಮ್ಮ ಈಗಿನ ಸ್ವಾಮೀಜಿಗಳು ಕಾಲ ಕಳೆಯುತ್ತಿದ್ದಾರೆ. ನಮ್ಮ ದೇಶದ, ಧರ್ಮದ, ಜನರ ಅಭಿವೃದ್ಧಿಗೆ, ಸರ್ವತೋಮುಖ ಬೆಳವಣಿಗೆಗೆ ಬೇಕಾದದ್ದರ ಬಗ್ಗೆ ಯೋಚಿಸದೇ ಧರ್ಮ ಶಾಸ್ತ್ರಗಳ ಬಗ್ಗೆ ಹಾಸ್ಯಾಸ್ಪದ ಚರ್ಚೆ ಮಾಡುವುದರಲ್ಲೇ ಸಮಯ ನೂಕುತ್ತಿದ್ದಾರೆ. ದೌರ್ಬಲ್ಯವನ್ನು ಧರ್ಮವೆಂಬಂತೆ ಜನರಿಗೆ ಬೋಧಿಸುತ್ತಿದ್ದಾರೆ.
ಆದರೆ…
ಒಂದು ವಿಷಯವನ್ನು ಮರೆಯಬೇಡಿ. ಇವತ್ತಿಗೂ ನಮ್ಮ ಸಮಾಜದಲ್ಲಿ, ಜನಮಾನಸದಲ್ಲಿ ಸ್ಥಾನ ಪಡೆದಿರುವ  ಹಕ್ಕ-ಬುಕ್ಕರನ್ನು ರೂಪಿಸಿದ ವಿದ್ಯಾರಣ್ಯರು, ಧರ್ಮ ರಕ್ಷಣೆಯ ಪಣತೊಟ್ಟ ಗುರುನಾನಕ್, ಮೊಘಲರನ್ನು ಮಟ್ಟಹಾಕಿದ ಶಿವಾಜಿಯನ್ನು ಪ್ರೇರೇಪಿಸಿದ ಸಮರ್ಥ ರಾಮದಾಸರು, ಮತಾಂತರದಂಥ ಆಕ್ರಮಣದ ವಿರುದ್ಧ ಧ್ವನಿಯೆತ್ತಿ ಧರ್ಮಜಾಗೃತಿಗೆ ಮುಂದಾದ ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರೇ ಹೊರತು ರೇಪ್ ಮಾಡಲು ಬಂದವರನ್ನು ‘ಅಣ್ಣಾ’ ಎಂದು ಅಂಗಲಾಚಬೇಕಿತ್ತು ಎಂದು ಹೇಳುವ ಷಂಡ ಸ್ವಾಮಿಗಳು, ‘ಫೈವ್ ಸ್ಟಾರ್್’ ಗುರುಗಳಲ್ಲ. ನಮ್ಮ ರಾಮಾಯಣ, ಮಹಾಭಾರತಗಳು ಕೊಟ್ಟಿದ್ದೂ ಧೀರತೆಯ ಸಂದೇಶ, ಪ್ರೇರಣೆಯನ್ನೇ.“The greatest sin is to think yourself weak’ ಎನ್ನುತ್ತಿದ್ದರು ವಿವೇಕಾನಂದ. ಎರಡನೇ ಮಹಾಯುದ್ಧದಲ್ಲಿ ಫ್ರಾನ್ಸ್ ಕೆಲವೇ ದಿನಗಳಲ್ಲಿ ಜರ್ಮನಿ ಎದುರು ಸೋತು ಶರಣಾದಾಗ, ‘ಅವರು ರಣರಂಗದಲ್ಲಿ ಸೋಲಲಿಲ್ಲ, They lost it in the nightclubs of Paris’ ಎಂಬ ಮಾತು ಕೇಳಿಬಂತು. ಭಾರತದ ಯುವಜನತೆ ಕೂಡ ಇಂದು ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಾಧು, ಸಂತರು, ಅಧ್ಯಾತ್ಮ ಗುರುಗಳು ವಿವೇಕಾನಂದರಂತೆ ನಮ್ಮ ಯುವಜನತೆಯಲ್ಲಿ ಕ್ಷಾತ್ರ ಶಕ್ತಿಯನ್ನು ತುಂಬಲು ಪ್ರಯತ್ನಿಸಿದರೆ ‘ರಾಷ್ಟ್ರೀಯ ಯುವದಿನ’ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.
ಅಂದಹಾಗೆ, ಸ್ವಾಮಿ ವಿವೇಕಾನಂದ ಜನಿಸಿ ಇಂದಿಗೆ ಭರ್ತಿ 150 ವರ್ಷಗಳಾದವು!

- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ