ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 9, 2013

ಭಯೋತ್ಪಾದನೆಯ ‘ವಿಶ್ವರೂಪ’ ತೋರಿಸುತ್ತಿರುವವರು ಯಾರು?

ಘಟನೆ-1
ಬುಧವಾರ ರಾತ್ರಿ ತಮಿಳುನಾಡು ಸರ್ಕಾರ ಏಕಾಏಕಿ ಕಮಲ್ ಹಾಸನ್ ಅವರ ‘ವಿಶ್ವರೂಪಂ’ ಚಿತ್ರದ ಬಿಡುಗಡೆಗೆ ಎರಡು ವಾರಗಳ ನಿರ್ಬಂಧ ಹಾಕಿಬಿಟ್ಟಿದೆ! ಈ ಚಿತ್ರ ಮುಸಲ್ಮಾನರು ಹಾಗೂ ಅವರ ನಂಬಿಕೆಗಳಿಗೆ ಘಾಸಿಯುಂಟುಮಾಡುತ್ತದೆ. ಒಂದು ವೇಳೆ, ಚಿತ್ರವನ್ನು ಬಿಡುಗಡೆ ಮಾಡಿದ್ದೇ ಆದರೆ ಸಾಮಾಜಿಕ ಸೌಹಾರ್ದ ಕದಡಲಿದೆ, ಹಾಗಾಗಿ ಬಿಡುಗಡೆ ಮಾಡಕೂಡದು ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಖಿಂಂಓ) ಹಾಗೂ ಅದರ ಶಾಸಕ ಜವಾಹಿರುಲ್ಲಾ ಎಚ್ಚರಿಕೆ ನೀಡಿದ್ದಾರೆ. ಕೆಲವು ದೃಶ್ಯಗಳನ್ನು ಕಿತ್ತು ಹಾಕಿದರೂ ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ ಎಂದು ಫೆಡರೇಷನ್ ಆಫ್ ಇಸ್ಲಾಮಿಕ್ ಮೂವ್‌ಮೆಂಟ್ ಸಂಚಾಲಕ ಮೊಹಮದ್ ಹನೀಫ್ ಹೇಳಿದ್ದಾರೆ. ಅಲ್ಲದೆ ಖಿಂಂಓ ಬೆಂಬಲಿಗರು ಕಮಲ್ ಹಾಸನ್ ಕಚೇರಿ ಮುಂದೆ ಪ್ರತಿಭಟನೆ ಮಾಡಿರುವುದು ಮಾತ್ರವಲ್ಲ, ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಥಳಿಸಿದ್ದಾರೆ. ಈ ಮಧ್ಯೆ ತಮಿಳುನಾಡಿನ 20 ಮುಸ್ಲಿಂ ಸಂಘಟನೆಗಳು ಒಟ್ಟು ಸೇರಿ ಚೆನ್ನೈ ಪೊಲೀಸ್ ಆಯುಕ್ತ ಆರ್. ರಾಜಗೋಪಾಲ್ ಅವರನ್ನು ಭೇಟಿಯಾಗಿ ‘ವಿಶ್ವರೂಪಂ’ ಬಿಡುಗಡೆಗೆ ಅವಕಾಶ ನೀಡಬಾರದೆಂದು ಒತ್ತಡ ಹೇರಿದ್ದಾರೆ. ಇವುಗಳೆಲ್ಲದರ ಪರಿಣಾಮವೇ ಎರಡು ವಾರಗಳ ನಿರ್ಬಂಧ.
ಘಟನೆ-2
ಈ ನಡುವೆ ಕಳೆದ ವಾರ ಕೇರಳದಲ್ಲಿ ‘ರೋಮನ್ಸ್‌’ ಎಂಬ ಚಿತ್ರ ಬಿಡುಗಡೆಯಾಗಿದೆ. ಅದರಲ್ಲಿ ನ್ಯಾಯಾಲಯದಲ್ಲಿ ದೋಷಿಗಳೆಂದು ಸಾಬೀತಾದ ಇಬ್ಬರು ಅಪರಾಧಿಗಳು ಹಳ್ಳಿಯೊಂದರಲ್ಲಿ ತಲೆಮರೆಸಿಕೊಂಡು ಪಾದ್ರಿಗಳ ವೇಶದಲ್ಲಿರುತ್ತಾರೆ. ಅಷ್ಟೇ ಅಲ್ಲ, ಬಿಶಪ್ ನಮ್ಮನ್ನು ಕಳುಹಿಸಿದ್ದಾರೆ ಎಂದು ಜನರನ್ನು ಮಂಗ ಮಾಡಿರುತ್ತಾರೆ. ಈ ಚಿತ್ರ ಬಿಡುಗಡೆಯಾಗಿ ವಾರ ತುಂಬುತ್ತಿರುವ ಸಂದರ್ಭದಲ್ಲಿ ಕ್ರೈಸ್ತ ಸಂಘಟನೆಗಳು ತಗಾದೆ ತೆಗೆದಿದ್ದು, ಚರ್ಚ್ ಅನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ, ಚಿತ್ರದ ಮೇಲೆ ನಿಷೇಧ ಹೇರಬೇಕೆಂದು ಪ್ರತಿಭಟನೆಗಿಳಿದಿದ್ದಾರೆ!
ನೀವೇ ಹೇಳಿ, ಸಣ್ಣತನ ಸಂಕುಚಿತತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವ ಈ ಘಟನೆಗಳು ಏನನ್ನು ಸೂಚಿಸುತ್ತವೆ?
ಇಂದು ಯಾವ ಸಮುದಾಯ, ಧರ್ಮೀಯರಲ್ಲಿ ಅಸಹನೆ ಅನ್ನುವುದು ಬೆಳೆಯುತ್ತಿದೆ? ಒಂಬೈನೂರು ವರ್ಷಗಳ ಕಾಲ ಮುಸಲ್ಮಾನರು, ಕ್ರೈಸ್ತರ ದಾಸ್ಯಕ್ಕೊಳಗಾಗಿದ್ದ ಹಿಂದುಗಳು ಸಹನೆ ಕಳೆದುಕೊಳ್ಳುತ್ತಿದ್ದಾರೆಯೇ ಅಥವಾ ಈ ದೇಶಕ್ಕೆ ಬಂದ ಪರಕೀಯ ಧರ್ಮಗಳ ಅನುಯಾಯಿಗಳು ಇಂದು ವಿನಾಕಾರಣ ಅಸಹನೆ ತೋರುತ್ತಿದ್ದಾರೆಯೇ? ತಮಿಳುನಾಡಿನಲ್ಲಿ ಜಾತಿ, ಧರ್ಮಕ್ಕಿಂತ ಭಾಷಾ ಪ್ರೀತಿಯೇ ದೊಡ್ಡದು ಎಂದು ಹೇಳಿಕೊಳ್ಳುತ್ತಿದ್ದ ಕಾಲವೊಂದಿತ್ತು. ತಮಿಳು ಅನ್ನುವುದೇ ನಮ್ಮ ಜಾತಿ, ಧರ್ಮ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಇಂದು ನಾವು ಕಾಣುತ್ತಿರುವುದೇನು? ‘ವಿಶ್ವರೂಪಂ’ ಚಿತ್ರದ ಬಿಡುಗಡೆಗೆ 15 ದಿನಗಳ ನಿರ್ಬಂಧ ಹೇರುವಾಗ ತಮಿಳುನಾಡು ಸರ್ಕಾರ ಕೊಟ್ಟಿರುವ ಕಾರಣವೇನು ಗೊತ್ತೆ? ‘ಕಾನೂನು ಸುವ್ಯವಸ್ಥೆಗೆ ಧಕ್ಕೆ’ ಬರಬಹುದು!! ಪೆರಿಯಾರ್ ಚಳವಳಿ ಸಂದರ್ಭದಲ್ಲಿ ನಮ್ಮ ದೇವದೇವತೆಗಳ ಮೂರ್ತಿಗಳಿಗೆ ಚಪ್ಪಲಿ ಹಾರಹಾಕಿ ಮೆರವಣಿಗೆ ಮಾಡಿದ್ದನ್ನು ಕಂಡಿದ್ದೇವೆ, ಹಿಂದುಗಳ ಭಾವನೆಗೆ ಅತಿಯಾದ ನೋವು, ಘಾಸಿಯುಂಟುಮಾಡಿದ ಆ ಸಂದರ್ಭದಲ್ಲಿ ಇರದಿದ್ದ ಕಾನೂನು ಸುವ್ಯವಸ್ಥೆ ಚಿಂತೆಯನ್ನು ಈಗ ತಂದಿಟ್ಟಿರುವವರಾರು? ಚಿತ್ರವನ್ನು ಬಿಡುಗಡೆ ಮಾಡಿದ್ದೇ ಆದರೆ ಶಾಂತಿ, ಸೌಹಾರ್ದ ಕದಡುತ್ತದೆ ಎಂಬ ಮುಸ್ಲಿಂ ಸಂಘಟನೆಗಳ ಮಾತಿನ ಅರ್ಥ ನಾವು ಕದಡುತ್ತೇವೆ ಎಂಬ ಧಮಕಿಯೇ ಅಲ್ಲವೆ? 1998ರಲ್ಲಿ 58 ಹಿಂದುಗಳನ್ನು ಆಹುತಿ ತೆಗೆದುಕೊಂಡ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಯಾವ ಸಂಘಟನೆಯ ಸದಸ್ಯರು ಭಾಗಿಯಾಗಿ ಬಂಧಿತರಾಗಿದ್ದರೋ ಅದೇ ಮುಸ್ಲಿಂ ಮುನ್ನೇತ್ರ ಕಳಗಂ ಇಂದು ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದೆ! ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ, 2ರಲ್ಲಿ ಗೆದ್ದಿದೆ. ಇದೆಂಥ ಮೂಲಭೂತವಾದಿ ಪಕ್ಷವೆಂದರೆ ಇತ್ತೀಚೆಗೆ ಬಿಡುಗಡೆಯಾದ ಖ್ಯಾತ ತಮಿಳು ನಟ ವಿಜಯ್ ಜೋಸೆಫ್ ಅಭಿನಯಿಸಿರುವ ಹಾಗೂ ಅವರ ತಂದೆಯೇ ನಿರ್ಮಾಪಕರಾಗಿದ್ದ ಸೂಪರ್ ಹಿಟ್ ಚಿತ್ರ ‘ತುಪ್ಪಾಕಿ’ ವಿರುದ್ಧವೂ ಪ್ರತಿಭಟಿಸಿತ್ತು. ಇದರ ಜತೆಗೆ ಇನ್ನಿತರ 20 ಮುಸ್ಲಿಂ ಸಂಘಟನೆಗಳೂ ‘ಮುಸ್ಲಿಮರ ಭಾವನೆಗೆ ನೋವುಂಟು ಮಾಡುವ ದೃಶ್ಯವಿದೆ’ ಎಂದು ಗಲಾಟೆಗೆ ಬಂದಿದ್ದವು. ಕೊನೆಗೆ ಆ ದೃಶ್ಯವನ್ನು ತೆಗೆದುಹಾಕಿದ್ದು ಮಾತ್ರವಲ್ಲ, ಮುಂದಿನ ಚಿತ್ರದಲ್ಲಿ ತಾನು ಮುಸಲ್ಮಾನ ಹೀರೋನ ಪಾತ್ರ ನಿರ್ವಹಿಸುವುದಾಗಿ ವಿಜಯ್ ಜೋಸೆಫ್ ಭರವಸೆ ನೀಡಬೇಕಾಯಿತು!
ಇದಿಷ್ಟೇ ಅಲ್ಲ…
ಅಮೆರಿಕದಲ್ಲಿ ಯಾರೋ ತಲೆಕೆಟ್ಟವನು ಇಸ್ಲಾಂ ವಿರೋಧಿ ಚಿತ್ರ ರೂಪಿಸಿದ್ದಾನೆಂಬ ನೆಪ ಇಟ್ಟುಕೊಂಡು ಕಳೆದ ಸೆಪ್ಟೆಂಬರ್‌ನಲ್ಲಿ ಅಣ್ಣಾ ಸಲೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಮುಸಲ್ಮಾನರು ದಾಳಿ ಮಾಡಿದರು. ಅತಿ ಹೆಚ್ಚು ಭದ್ರತೆ ಹೊಂದಿದ ಅಂತಹ ಸ್ಥಳಕ್ಕೆ ನುಗ್ಗಿ ಇಡೀ ಕಚೇರಿಯನ್ನು ಲೂಟಿ, ದ್ವಂಸ ಮಾಡಿ ಕ್ಯಾರೇ ಎನ್ನದೆ ಹೊರಟುಹೋದರು.
ಈಗ ಹೇಳಿ, ಅಸಹನೀಯರಾಗುತ್ತಿರುವವರು, ಧಾರ್ಮಿಕ ಮೂಲಭೂತವಾದಿಗಳು, ಕಾನೂನು ಮುರಿಯುವವರು ಯಾರು?
ಯಾವುದೋ ಬಾಂಗ್ಲಾದೇಶಿ ರೋಹಿಂಗ್ಯ ಮುಸಲ್ಮಾನರ ಮೇಲೆ ಬರ್ಮಾದಲ್ಲಿ ದೌರ್ಜನ್ಯವಾದರೆ ಭಾರತದಲ್ಲಿ ಅಮರ್ ಜವಾನ್ ಸ್ಮಾರಕ ಧ್ವಂಸ ಮಾಡುವವರು, ಪೊಲೀಸರನ್ನೇ ಥಳಿಸುವವರು ಯಾರು? ನಮ್ಮ ಹಿಂದೂ ದೇವ-ದೇವತೆಗಳ ಭಾವಚಿತ್ರಗಳನ್ನು ಟಾಯ್ಲೆಟ್‌ಗಳಲ್ಲಿ ಬಳಸುವ ಸಲಕರಣೆಗಳು, ಒಳಉಡುಪುಗಳ ಮೇಲೆ ಮುದ್ರಿಸಿ ಹಿಂದೂ ಧರ್ಮವನ್ನು ಅವಮಾನಿಸಿದರು. ಹಾಗಂತ ಭಾರತದಲ್ಲಿನ ಮುಸಲ್ಮಾನರು, ಕ್ರೈಸ್ತರ ಮೇಲೆ ಹಿಂದುಗಳು ದಾಳಿ ಮಾಡಿದರೇ? ಅಥವಾ ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಬಸ್ ಕಾರುಗಳು ದ್ವಂಸ ಮಾಡಿದರೆ? ಇನ್ನು ಮಲೆಯಾಳಂ ಚಿತ್ರ ‘ರೋಮನ್ಸ್‌’ ವಿಚಾರಕ್ಕೆ ಬಂದರೆ ಅದನ್ನು ನಿರ್ದೇಶಿಸಿರುವ ಬೊಬನ್ ಸ್ಯಾಮ್ಯುಯೆಲ್ ಹಾಗೂ ಒಬ್ಬ ಹೀರೊ ಕುಂಚಕೋ ಬೊಬನ್ ಇಬ್ಬರೂ ಕ್ರೈಸ್ತರೇ. ಅದು ರಾಬರ್ಟ್ ಡಿ’ನಿರೋ ಹಾಗೂ ಶಾನ್ ಪೆನ್ ಅವರ “We’re No Angels’ ಚಿತ್ರದಿಂದ ಪ್ರೇರಿತವಾಗಿದೆ. ಇಬ್ಬರು ಅಪರಾಧಿಗಳು ಕದ್ದುಮುಚ್ಚಿ ಪಾದ್ರಿಗಳ ಸೋಗುಹಾಕಿದರೆ ಕ್ರೈಸ್ತರು, ಚರ್ಚ್ ಮೈಪರಚಿಕೊಳ್ಳುವಂಥ ಯಾವ ಅವಮಾನ ಸಂಭವಿಸಿಬಿಡುತ್ತದೆ? ಜೀಸಸ್ ಕ್ರೈಸ್ಟ್ ಸೂಪರ್ ಸ್ಟಾರ್, ಡಾ ವಿನ್ಸಿ ಕೋಡ್ ಚಿತ್ರಗಳು ಬಂದಾಗಲೂ ಇದೇ ರೀತಿ ಬೊಬ್ಬೆ ಹಾಕಿ ಆ ಚಿತ್ರಗಳನ್ನು ನಿಷೇಧಿಸಿದ್ದರು. ಆದರೆ ನಮ್ಮ ಹಿಂದುಗಳಲ್ಲಿ ದೇವರನ್ನು ನಾವೇ ಗೇಲಿ ಮಾಡುತ್ತೇವೆ, ವಿಡಂಬನೆ ಮಾಡಿ ಭೈರಪ್ಪನವರು ‘ಪರ್ವ’ವನ್ನೇ ಬರೆದಿದ್ದಾರೆ, ಯಾವುದೇ ಯಕ್ಷಗಾನ ನೋಡಿದರೂ ನಮ್ಮ ಒಂದಲ್ಲ ಒಂದು ದೇವತೆಗಳ ಗೇಲಿ ಇದ್ದೇ ಇರುತ್ತದೆ. ರಾಮನನ್ನು ಒಪ್ಪುವವರು ಹಾಗೂ ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕಾಗಿ ರಾಮನನ್ನು ಟೀಕಿಸುವವರೂ ನಮ್ಮಲ್ಲೇ ಇದ್ದಾರೆ. ಶ್ರೀಕೃಷ್ಣನನ್ನು ಮುದ್ದು ಕೃಷ್ಣ ಎಂದೂ ಕರೆಯುತ್ತೇವೆ, ಕಳ್ಳ ಕೃಷ್ಣ ಎಂದೂ ಕಿಚಾಯಿಸುತ್ತೇವೆ. ಇಂತಹದ್ದನ್ನು ಅನ್ಯಧರ್ಮಗಳಲ್ಲಿ ಕಾಣಲು ಸಾಧ್ಯವಿದೆಯೇ?
ಇಷ್ಟಾಗಿಯೂ…
ಯಾವ ಕಾರಣಕ್ಕಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರು ಆರೆಸ್ಸೆಸ್ ಹಾಗೂ  ಬಿಜೆಪಿ ‘ಹಿಂದು ಟೆರರಿಸಂ’ ಅನ್ನು ಹುಟ್ಟುಹಾಕುತ್ತಿವೆ ಎಂದು ಆರೋಪಿಸುತ್ತಿದ್ದಾರೆ? ಹಾಗಾದರೆ, ಒಬ್ಬ ಹಿಂದೂ ಭಯೋತ್ಪಾದಕನೆಂದು ಸಾಬೀತಾದ ಒಂದು ಉದಾಹರಣೆಯನ್ನು ಕೊಡಿ ನೋಡೋಣ? ಮಾತೆತ್ತಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಹೆಸರತ್ತ ಬೊಟ್ಟು ಮಾಡುತ್ತಾರೆ, ಮಾಲೆಗಾಂವ್, ಮೆಕ್ಕಾ ಮಸೀದಿ, ಅಜ್ಮೇರ್ ದರ್ಗಾ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳತ್ತ ಕೈ ತೋರುತ್ತಾರೆ. ಆದರೆ ಮಾಲೆಗಾಂವ್ ಸ್ಫೋಟ ನಡೆದಿದ್ದು 2008ರಲ್ಲಿ, ಪ್ರಗ್ಯಾ ಸಿಂಗ್‌ರನ್ನು ಬಂಧಿಸಿದ್ದು 2009ರಲ್ಲಿ. ಆಕೆಯನ್ನು ಜೈಲಿಗೆ ಹಾಕಿ 4 ವರ್ಷಗಳಾದರೂ ಒಂದು ಚಾರ್ಜ್‌ಶೀಟ್ ಹಾಕಲು ಏಕೆ ಇಂದಿಗೂ ಸಾಧ್ಯವಾಗಿಲ್ಲ? ಆಕೆಯ ವಿರುದ್ಧ ಹಾಕಿರುವ ಚಾರ್ಜ್‌ಶೀಟ್ ಮಾಲೆಗಾಂವ್ ಸ್ಫೋಟಕ್ಕಿಂತಲೂ ಮೊದಲು ಅಂದರೆ 2007ರಲ್ಲಿ ನಡೆದಿದ್ದ ಸುನೀಲ್ ಜೋಶಿ ಕೊಲೆಗೆ ಸಂಬಂಧಿಸಿದ್ದು. ಆಕೆಯ ವಿರುದ್ಧ ಇರುವ ಏಕೈಕ ಆರೋಪ ಮಾಲೆಗಾಂವ್ ಸ್ಫೋಟದಲ್ಲಿ ಬಳಸಿರುವುದು ಆಕೆಯ ಬೈಕನ್ನು ಎಂಬುದು. ಆ ಬೈಕನ್ನು ಆಕೆ 2004ರಲ್ಲೇ ಮಾರಿದ್ದರು. ಮಾರಿದ ಬೈಕ್‌ಗೂ ಆಕೆಗೂ ಏನು ಸಂಬಂಧ? ಅದಕ್ಕೂ ಮಿಗಿಲಾಗಿ ಭಯೋತ್ಪಾದಕರೇನು ಸ್ವಂತ ಬೈಕ್‌ನಲ್ಲಿ ಬಾಂಬಿಡುವಷ್ಟು ದಡ್ಡರೇ? ಕಳೆದ ಆಗಸ್ಟ್ 29ರಂದು ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 9 ಭಯೋತ್ಪಾದಕರು ದಾಳಿ ಮಾಡಲು ತಂದಿದ್ದು ಚಿತ್ರದುರ್ಗದ ಕದ್ದ ಬೈಕೇ. ಹಾಗಿರುವಾಗ ಈ ಕೇಂದ್ರದ ಕೊಳಕು ಕಾಂಗ್ರೆಸ್ ಸರ್ಕಾರ ಯಾರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ? ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳು ಸಂಭವಿಸಿದ ಪ್ರಾರಂಭದಲ್ಲಿ ಮಹಾರಾಷ್ಟ್ರ ಆಖಿಖ, ಸಿಬಿಐ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳತ್ತ ಬೆರಳು ತೋರಿದ್ದವು. ಆದರೆ ಯುಪಿಎ ಸೃಷ್ಟಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣಗಳನ್ನು ಕೈಗೆತ್ತಿಕೊಂಡ ಕೂಡಲೇ ಹೇಗೆ ಹಿಂದೂ ಭಯೋತ್ಪಾದಕರು ಉದ್ಭವಿಸಿದರು? ಃಐಆ ಬಳಿ ಅಂಥ ಗಟ್ಟಿ ಸಾಕ್ಷ್ಯವಿದ್ದರೆ ಏಕೆ ಸಮಗ್ರ ಚಾರ್ಜ್‌ಶೀಟ್ ಹಾಕಿ, ನ್ಯಾಯಾಂಗ ವಿಚಾರಣೆಗೆ ಅವಕಾಶ ಮಾಡಿಕೊಟ್ಟು ಶಿಕ್ಷಿಸಲು ಮುಂದಾಗುತ್ತಿಲ್ಲ? ಪ್ರಗ್ಯಾ ಸಿಂಗ್ ಅವರ ವಿರುದ್ಧ ಸ್ಫೋಟಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಚಾರ್ಜ್‌ಶೀಟ್ ಹಾಕುವ ಬದಲು, ಪ್ರಚೋದನಕಾರಿ ಭಾಷಣಗಳ ಬಗ್ಗೆ ಚಾರ್ಜ್‌ಶೀಟ್ ಹಾಕಲು ಹೊರಟಿದೆ!
ಅದಿರಲಿ, 1998ರ ಕೊಯಮತ್ತೂರು ಬ್ಲಾಸ್ಟ್ ನಂತರ ಮುಸ್ಲಿಂ ಸಂಘಟನೆ ಅಂಜುಮ್ ಉನ್, ತದನಂತರ ‘ಸಿಮಿ’ಗಳನ್ನು ನಿಷೇಧಿಸಿದಂತೆ, ಕೇಸರಿ ಭಯೋತ್ಪಾದನೆ ಮಾಡುತ್ತಿರುವುದೇ, ಸಾಕ್ಷ್ಯಗಳಿರುವುದೇ ಆದರೆ ಬಿಜೆಪಿ, ಆರೆಸ್ಸೆಸ್ಸನ್ನು ಏಕೆ ನಿಷೇಧಿಸಿಲ್ಲ ಶಿಂಧೆಯವರೇ?
ಈ ಕೇಂದ್ರ ಸರ್ಕಾರ ಹೇಳುವಂತೆ ಮಾಲೆಗಾಂವ್, ಮೆಕ್ಕಾ ಮಸೀದಿ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಿಗೆ ಹಿಂದೂ ಭಯೋತ್ಪಾದಕರು, ಕೇಸರಿ ಭಯೋತ್ಪಾದನೆ ಕಾರಣವೆನ್ನುವುದಾದರೆ ಈ ಆರೀಫ್ ಖಸ್ಮಾನಿ ಯಾರು, ಆತ ಮಾಡಿದ್ದೇನು? ಬುಧವಾರ ರಾತ್ರಿ ನಡೆದ ಚರ್ಚೆ ವೇಳೆ ಖ್ಯಾತ ಟೀವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಹಾಗೂ ಗುರುವಾರ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಎಸ್. ಗುರುಮೂರ್ತಿಯವರು ಈತನ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಉಲ್ಲೇಖಿಸಿ ಮಾಡಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದ ಬಳಿ ಉತ್ತರಗಳಿವೆಯೇ? ಆರೀಫ್ ಖಸ್ಮಾನಿ ಲಷ್ಕರೆ ತಯ್ಯೆಬಾದ ಮುಖ್ಯ ಸಂಚಾಲಕ ಹಾಗೂ ಆತನೇ 2007ರ ಸಂಜೋತಾ ಎಕ್ಸ್‌ಪ್ರೆಸ್ ದಾಳಿಗೆ ಕಾರಣ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವೇ ಹೇಳಿದೆ. ಖಸ್ಮಾನಿಗೆ ದಾವೂದ್ ಇಬ್ರಾಹಿಂ ಹಣ ಪೂರೈಸುತ್ತಾನೆ ಎಂದೂ ತಿಳಿಸಿದೆ. ಅಮೆರಿಕದ ವಿತ್ತ ಇಲಾಖೆಯೂ ಸಂಜೋತಾ ಎಕ್ಸ್‌ಪ್ರೆಸ್ ದಾಳಿಗೆ ಖಸ್ಮಾನಿಯೇ ಕಾರಣ ಎಂದಿರುವುದು ಮಾತ್ರವಲ್ಲ, ಆ ಸ್ಫೋಟಕ್ಕೆ ಲಷ್ಕರೆ ತಯ್ಯೆಬಾ, ದಾವೂದ್ ಹಾಗೂ ಖಸ್ಮಾನಿ ಕಾರಣವೆಂದಿದೆ. ಅದನ್ನು ಪಾಕಿಸ್ತಾನದ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲ್ಲಿಕ್ ಕೂಡ ಒಪ್ಪಿಕೊಂಡಿದ್ದಾರೆ, ಡೆವಿಡ್ ಹೇಡ್ಲಿ ವಿಚಾರಣೆ ವೇಳೆಯೂ ಬಯಲಿಗೆ ಬಂದಿದ್ದು ಇದೇ ಅಂಶ. ಹಾಗಿದ್ದರೂ ಹಿಂದೂ ಭಯೋತ್ಪಾದನೆ ಕಾರಣ ಎಂದು ಗೃಹ ಸಚಿವ ಹೇಗೆ ಲಜ್ಜೆಯಿಲ್ಲದೆ ಹೇಳುತ್ತಿದ್ದಾರೆ? ಒಂದು ವೇಳೆ ಕಸಬ್ ಜೀವಂತ ಸಿಗದಿದ್ದರೆ ಮುಂಬೈ ಮೇಲೆ ದಾಳಿ ಮಾಡಿದ್ದೂ ಆರೆಸ್ಸೆಸ್, ಬಿಜೆಪಿ ಸೃಷ್ಟಿಸಿರುವ ಹಿಂದೂ ಭಯೋತ್ಪಾದಕರು ಎಂದುಬಿಡುತ್ತಿದ್ದರೇನೋ ಈ ‘ಸುಶೀಲ’(?) ಶಿಂಧೆ?! ಇಷ್ಟಕ್ಕೂ ಕಸಬ್ ಹಾಗೂ ಇನ್ನಿತರ 9 ಪಾಕಿ ದುರುಳರು ಬಂದಿದ್ದು ಮೋದಿ ಆಳುವ ಗುಜರಾತ್ ಕಡಲ ಕಿನಾರೆ ಮೂಲಕ ಹಾಗೂ ಎಲ್ಲರ ರಿಸ್ಟ್‌ಗಳಲ್ಲೂ ಹಿಂದುಗಳು ಧರಿಸುವ ಕೈದಾರಗಳಿದ್ದವು! ಆಗ ಕೇಂದ್ರ ಸಚಿವರಾಗಿದ್ದ ಅಬ್ದುಲ್ ರೆಹಮಾನ್ ಅಂಟುಳೆ ಮಹಾಶಯ ಹಿಂದೂ ಮೂಲಭೂತವಾದಿಗಳೇ ಕಾರಣ ಎಂದು ಹೇಳಿಕೆಯನ್ನೂ ಕೊಟ್ಟಿದ್ದರು!! ಈ ಕಾಂಗ್ರೆಸ್‌ನ ಲಜ್ಜೆಗೇಡಿಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಈ ಶಿಂಧೆ, ಅಂಟುಳೆ, ಈ ಹಿಂದೆ 2010ರಲ್ಲಿ ‘ಕೇಸರಿ ಭಯೋತ್ಪಾದನೆ’ ಎಂದಿದ್ದ ಆಗಿನ ಗೃಹ ಸಚಿವ ಚಿದಂಬರಂಗಿಂತ ದೊಡ್ಡ ಉದಾಹರಣೆ ಬೇಕಾ? ಆದರೆ ಇವತ್ತು ಮಾಲಿಯಲ್ಲಿ, ಫಿಲಪ್ಪೀನ್ಸ್‌ನಲ್ಲಿ, ಇಂಡೋನೇಷ್ಯಾದ ಬಾಲಿಯಲ್ಲಿ, ಥಾಯ್ಲೆಂಡ್‌ನಲ್ಲಿ, ಚೀನಾದ ಕ್ಷಿನ್ ಜಿಯಾಂಗ್‌ನಲ್ಲಿ, ಬಾಂಗ್ಲಾದಲ್ಲಿ, ಪಾಕಿಸ್ತಾನದ ಕ್ವೆಟ್ಟಾದಲ್ಲಿ, ಅಫ್ಘಾನಿಸ್ತಾನದಲ್ಲಿ ಅನ್ಯಧರ್ಮೀಯರು ಹಾಗೂ ಸ್ವಧರ್ಮೀಯರ ಮೇಲೆ ದಾಳಿ, ದೌರ್ಜನ್ಯ, ಹತ್ಯೆ ಮಾಡುತ್ತಿರುವವರು ಯಾರು ಎಂದು ಶಿಂಧೆ ಸಾಹೇಬರು ಸ್ವಲ್ಪ ತಲೆ ಖರ್ಚು ಮಾಡಿದರೆ ಭಯೋತ್ಪಾದನೆಯ ನಿಜವಾದ ‘ವಿಶ್ವರೂಪ’ ಎಲ್ಲಿದೆ ಎಂಬುದು ಕಾಣುತ್ತದೆ, ಅಲ್ಲವೆ?

 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ