ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 9, 2013

ಕೃತಘ್ನ ವ್ಯವಸ್ಥೆಗೆ ಪೊಲೀಸರು ಕೃತಜ್ಞರಾಗಿರಲು ಸಾಧ್ಯವೇ?

2009, ಫೆಬ್ರವರಿ 16ರಂದೂ ಹೀಗೆಯೇ ಆಗಿತ್ತು. ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಶಿವಕುಮಾರ್ ರಜೆ ಮೇಲೆ ತೆರಳಿದ್ದರು. ಆದರೆ ಕಮಾಂಡೆಂಟ್ ರಜೆ ದಯಪಾಲಿಸಿದ್ದರೂ ಅವರ ಕೆಳಗಿನ ಇನ್ಸ್‌ಪೆಕ್ಟರ್ ನಾಗೇಗೌಡರಿಗೆ ಸಹಿಸಲಾಗಲಿಲ್ಲ. ಆ ರಜೆಯನ್ನು ಕಡಿತ ಮಾಡಿ, ವಾಪಸ್ ಬಾ ಎಂದರು. ಶಿವಕುಮಾರ್‌ಗೂ ಹತಾಶೆಯ ಕಟ್ಟೆಯೊಡೆಯಿತು, ಬಂದೂಕನ್ನೆತ್ತಿ ಇನ್ಸ್‌ಪೆಕ್ಟರ್ ನಾಗೇಗೌಡರ ಎದೆ ಸೀಳಿ, ಕೆಳಕ್ಕುರುಳಿಸಿದ. ಅಷ್ಟು ಮಾತ್ರವಲ್ಲ, ತಾನೂ ಆತ್ಮಹತ್ಯೆ ಮಾಡಿಕೊಂಡ. ಕಳೆದ ಭಾನುವಾರ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲೂ ರಕ್ತ ಹರಿಯಿತು. ಗೌರಿಬಿದನೂರಿನಲ್ಲಿ ಕಟ್ಟಿಸಿರುವ ಹೊಸಮನೆಯ ಗೃಹಪ್ರವೇಶಕ್ಕೆ ಕಾನ್‌ಸ್ಟೆಬಲ್ ಆನಂದ್ ಕುಮಾರ್ ಒಂದು ವಾರ ರಜೆ ಕೇಳಿದ್ದಾರೆ. ಈ ಮೊದಲು ಕಾನ್‌ಸ್ಟೆಬಲ್ ಆಗಿದ್ದು ಇತ್ತೀಚೆಗೆ ತಾನೇ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಪಾಸು ಮಾಡಿ ತರಬೇತಿ ಮುಗಿಸಿ ಡಿಸೆಂಬರ್‌ನಲ್ಲಷ್ಟೇ ರಾಜಾನುಕುಂಟೆ ಠಾಣೆಯ ಉಸ್ತುವಾರಿ ಪಡೆದುಕೊಂಡು ಬಂದಿದ್ದ ಎಸ್‌ಐ ವಿಜಯ್‌ಕುಮಾರ್ ರಜೆಯನ್ನು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಆತ ಅನಧಿಕೃತ ರಜೆಗಳನ್ನು ಮಾಡಿದ್ದೇ ನಿರಾಕರಣೆಗೆ ಕಾರಣವಾಗಿತ್ತು. ಈ ಮಧ್ಯೆ ತನ್ನ ತಂದೆ, ಹೆಂಡತಿಯನ್ನು ಕರೆದುಕೊಂಡು ಬಂದ ಆನಂದ್ ರಜೆಗಾಗಿ ಅಂಗಲಾಚಿದ್ದಾರೆ. ಅಷ್ಟರಲ್ಲಿ ಮಾತಿನ ಚಕಮಕಿ, ಬೈಗುಳಗಳ ವಿನಿಮಯವೂ ನಡೆದಿದೆ. ಏಯ್ ನಿನ್ನ ಹೆಂಡ್ತೀನ ಕರ್ಕೊಂಡ್ ಬರ್ತಿಯೇನೋ ಎಂದು ಕೆಣಕಿದಾಗ ಆನಂದ್ ರೈಫಲ್ ಎತ್ತಿ ವಿಜಯ್‌ಕುಮಾರ್‌ಗೆ ಗುಂಡಿಕ್ಕಿದ್ದಾರೆ. ಹೀಗೆ ರಾಜ್ಯ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ವಿಷಾದಕರ ಎರಡು ಘಟನೆಗಳು ನಡೆದುಹೋಗಿಬಿಟ್ಟಿವೆ.

ಏಕಾಗಿ?
ಸೇನೆಯಲ್ಲಿ ಇಂಥ ಘಟನೆಗಳು ಸರ್ವೇ ಸಾಮಾನ್ಯ. ರಜೆ ವಿಚಾರಕ್ಕೆ ಆಗಿಂದಾಗ್ಗೆ ಮೇಲಾಧಿಕಾರಿಗಳು ಮತ್ತು ಸೈನಿಕರ ನಡುವೆ ಜಟಾಪಟಿ, ಹತ್ಯೆನಡೆಯುತ್ತಿರುತ್ತವೆ. ಗಡಿ ಕಾಯುವ ಸಾಮಾನ್ಯ ಸೈನಿಕನಲ್ಲಿ ಮಾತ್ರ ಕಾಣುತ್ತಿದ್ದ ಹತಾಶೆ ನಮ್ಮ ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್‌ಗಳಲ್ಲೂ ತುಂಬಿಕೊಳ್ಳುತ್ತಿದೆಯೇ? ಕೆಲಸದ ಒತ್ತಡ ಹಾಗೂ ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಿಲುಕಿ ನಲುಗುತ್ತಿದ್ದಾರೆಯೇ? ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವ, ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸುವ ಪೊಲೀಸರೇ ದೌರ್ಜನ್ಯ, ಹಿಂಸೆಗೊಳಗಾಗುತ್ತಿದ್ದಾರೆಯೇ? ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಕಂದಕ ಸೃಷ್ಟಿಯಾಗಿದೆಯೇ? ಇವರ ನಡುವೆ ಸಂವಹನದ ಸಮಸ್ಯೆ ಇದೆಯೇ? ಇಲ್ಲವಾದರೆ ಶಿವಕುಮಾರ್, ಆನಂದ್‌ಕುಮಾರ್ ತಾಳ್ಮೆ ಕಳೆದುಕೊಂಡು ಬಂದೂಕನ್ನೇಕೆ ಎತ್ತಿಕೊಳ್ಳುತ್ತಿದ್ದರು?
ನಿನ್ನೆ ಮೊನ್ನೆ ಡಿಗ್ರಿ ಮುಗಿಸಿ, ಪರೀಕ್ಷೆ ಪಾಸಾಗಿ ತರಬೇತಿ ಪಡೆದು ಬರುವ ಎಸ್‌ಐ, ಹತ್ತು-ಹದಿನೈದು ವರ್ಷದ ಅನುಭವ, ಸೇವಾ ಹಿರಿತನ ಹೊಂದಿರುವ ಕಾನ್‌ಸ್ಟೆಬಲ್‌ಗಳನ್ನು ಹೇಗೆ ಸಂಭೋದಿಸುತ್ತಾನೆ? ತನ್ನ ಅಪ್ಪನ ವಯಸ್ಸಿನ ಕಾನ್‌ಸ್ಟೆಬಲ್‌ಗಳನ್ನು ಏಕವಚನದಲ್ಲಿ ಕರೆಯದ, ಗೌರವದಿಂದ ನಡೆಸಿಕೊಳ್ಳುವ ಅದೆಷ್ಟು ಮಂದಿ ಎಸ್‌ಐಗಳಿದ್ದಾರೆ ಹೇಳಿ? ಖಂಡಿತ ರಜೆ ವಿಷಯದಲ್ಲಿ ಎಸ್‌ಐ, ಇನ್ಸ್‌ಪೆಕ್ಟರ್‌ಗಳು ಕೂಡ ಅನಿವಾರ್ಯ ಧರ್ಮಸಂಕಟ ಎದುರಿಸುತ್ತಿದ್ದಾರೆ. ಹಾಗಂತಕೆಳಗಿನವರನ್ನು ಅವರು ನಡೆಸಿಕೊಳ್ಳುವ ರೀತಿ ಹೇಗಿರುತ್ತದೆ? ಸಾರ್, ಒಂದು ರಜೆ ಕೊಡಿ ಅಂತ ಕಾನ್ಸ್‌ಟೇಬಲ್ ಕೇಳಿದರೆ, ‘ಯಾಕೇ…?’ ಎಂಬ ದರ್ಪದ ಪ್ರಶ್ನೆಯೋ, ‘ಹೋಗೋ’ ಎನ್ನುವ ತಿರಸ್ಕಾರವೇ ಅಲ್ಲವೇ ಎದುರಾಗುವುದು? ಸಾರ್, ನಮ್ಮ ಸಂಬಂಧಿಕರು ತೀರಿಕೊಂಡಿದ್ದಾರೆ, ಒಂದು ದಿನ ರಜೆ ಕೊಡಿ ಎಂದರೆ ‘ಹೋಗಿ, ನೀನೇನು ಬದುಕಿಸುತ್ತೀಯಾ?’, ಸಾರ್, ನನ್ನ ಹೆಂಡತಿಯ ಡೆಲಿವರಿ ಇದೆ ಅಂದರೆ, ‘ನೀನು ಹೋಗದಿದ್ದರೆ ಹೆರಿಗೆ ಆಗೋದೇ ಇಲ್ವಾ?’ ಇಂಥ ಸಂವೇದನೆಯೇ ಇಲ್ಲದ ಮಾತುಗಳನ್ನು ಕೇಳಬೇಕಾಗುತ್ತದೆ. ಇಂಥ ಮಾತುಗಳು ಎಸ್‌ಐ, ಇನ್ಸ್‌ಪೆಕ್ಟರ್ ಅಥವಾ ಇನ್ನಾವುದೋ ಮೇಲಾಧಿಕಾರಿಯ ಬಗ್ಗೆ ಒಬ್ಬ ಪೇದೆಯ ಎದೆಯಲ್ಲಿ ಯಾವ ಭಾವನೆ ಮೂಡಿಸುತ್ತವೆ? ಆತ ಹುದ್ದೆಗೆ ಹೆದರಿ ಸುಮ್ಮನಾಗಬಹುದೇ ಹೊರತು, ಮೇಲಿನವರ ಬಗ್ಗೆ ಅವನಲ್ಲಿ ಗೌರವ ಬೆಳೆಯುವುದಿಲ್ಲ.
ಇದು ಮೊದಲು ಬದಲಾಗಬೇಕು.
ಇಷ್ಟಕ್ಕೂ ಇವತ್ತು ಪೊಲೀಸ್ ಇಲಾಖೆ ನಿಂತಿರುವುದೇ ಕಾನ್‌ಸ್ಟೆಬಲ್‌ಗಳ ಮೇಲೆ ಅಲ್ಲವೆ? ರಸ್ತೆ ಬದಿ ಮಾರಾಟಗಾರರು, ಪಾನಿಪುರಿ ಮಾರುವವರಿಂದ ಐದೋ ಹತ್ತೋ ರೂಪಾಯಿ ತೆಗೆದುಕೊಳ್ಳುವ ಕಾನ್‌ಸ್ಟೆಬಲ್‌ಗಳ ಬಗ್ಗೆ ಸಾಮಾನ್ಯ ಜನರಾದ ನಾವೂ ತಾತ್ಸಾರ ಭಾವನೆ ಹೊಂದಿದ್ದೇವೆ. ಆದರೆ ಕೋಮುಗಲಭೆಯಾಗಲಿ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಲಿ, ದೊಂಬಿ ನಡೆಯಲಿ, ಆರೋಪಿಯ ಬಂಧನವಿರಲಿ ಮೊದಲು ಜೀವದ ಹಂಗುತೊರೆದು ನುಗ್ಗುವವರೇ ಕಾನ್‌ಸ್ಟೆಬಲ್‌ಗಳು. ಪೊಲೀಸ್ ಇಲಾಖೆಯ ಪಾಲಿಗೆ ಕಾನ್‌ಸ್ಟೆಬಲ್‌ಗಳೇ Foot Soldiers. 2003, ಡಿಸೆಂಬರ್ 13ರಂದು ನಮ್ಮ ಸಂಸತ್ ಮೇಲೆ ದಾಳಿ ನಡೆದಾಗಲೂ ಸತ್ತಿದ್ದು ಹೆಚ್ಚಾಗಿ ಕಾನ್‌ಸ್ಟೆಬಲ್‌ಗಳೇ. ಮೊನ್ನೆ ಗಡಿಯಲ್ಲಿ ಸತ್ತವರೂ ಕಾನ್‌ಸ್ಟೆಬಲ್‌ಗಳ ಇನ್ನೊಂದು ರೂಪವಾದ ಸಾಮಾನ್ಯ ಸೈನಿಕರೇ ಹೊರತು ಆಫೀಸರ್‌ಗಳಲ್ಲ.
ಮಣಭಾರದ ರೈಫಲ್ ಹೊತ್ತು ಹೆಣಕಾಯುವಂತೆ ರಸ್ತೆ ರಸ್ತೆ ಮೇಲೆ ನಿಗಾ ಇಡುವ ಕಾನ್‌ಸ್ಟೆಬಲ್‌ಗಳಿಗೆ, ವಾರದ ರಜೆಯಿಲ್ಲ ಎಂದರೆ ನಂಬುತ್ತೀರಾ? ಪೊಲೀಸ್ ಮ್ಯಾನ್ಯುವಲ್ ಪ್ರಕಾರ ಪೊಲೀಸರು ಯಾವಾಗಲೂ ಆನ್‌ಡ್ಯುಟಿಯೇ. ಯಾವಾಗ ಕರೆದರೂ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲ ಅಂದರೆ ಅಶಿಸ್ತು ಎಂದೇ ಪರಿಗಣಿಸಲ್ಪಡುತ್ತದೆ. ಹಾಗಂತ ವಾರಕ್ಕೊಂದು ರಜೆಯೂ ಇಲ್ಲದೇ ದುಡಿಯುವುದು ಸಾಧ್ಯವೇ?
ಇದುವರೆಗೂ ನಾಲ್ಕು ಪೊಲೀಸ್ ಆಯೋಗಗಳು ಬಂದುಹೋಗಿವೆ. ಆದರೆ ಅವುಗಳು ಕೊಟ್ಟ ಶಿಫಾರಸು ಮಾತ್ರ ಜಾರಿಯಾಗಿಲ್ಲ. ಎಸ್‌ಐ, ಇನ್ಸ್‌ಪೆಕ್ಟರ್ ದಯೆ ತೋರಿದರೆ, ಅವರಿಗೆ ಜೀ ಹೂಝೂರ್ ಎಂದು ಸಲಾಮು ಹೊಡೆಯುತ್ತಿದ್ದರೆ, ತಿಂಗಳಿಗೆ ಒಂದೆರಡು ರಜೆ ಸಿಗಬಹುದು.
ಇನ್ನೊಂದು ಮಜಾ ಕೇಳಿ, ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ, ಎಸ್ಪಿ ನೇತೃತ್ವದಲ್ಲಿ, ಡಿಸಿಪಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇಂತಿಷ್ಟು ಜನ ಕಳ್ಳಕಾಕರು, ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಬಿರುದು ಬಾವಲಿ ತೆಗೆದುಕೊಳ್ಳುತ್ತಾರೆ. ಆದರೆ ಈ “ನೇತೃತ್ವ”ದ ಹಿಂದಿರುವ ವ್ಯಕ್ತಿ, ಶಕ್ತಿಗಳು ಸಾಮಾನ್ಯ ಕಾನ್‌ಸ್ಟೆಬಲ್‌ಗಳೇ ಅಲ್ಲವೆ? ಶ್ರಮ ಹಂಚಿಕೊಳ್ಳುವುದಕ್ಕೆ ಕಾನ್‌ಸ್ಟೆಬಲ್‌ಗಳು ಬೇಕು, ಇನಾಮು, ಸವಲತ್ತು ಮಾತ್ರ ಮೇಲಾಧಿಕಾರಿಗಳಿಗೇ ಮೀಸಲು. ಇಂದೆಂಥಾ ನ್ಯಾಯ? ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಒಂದು ಲಕ್ಷ ಪೊಲೀಸರಿದ್ದು, ಅವರಲ್ಲಿ ಎಸ್‌ಐ ಹಾಗೂ ಅವರಿಗಿಂತ ಮೇಲಿನ ಕೇವಲ 6 ಸಾವಿರ ಅಧಿಕಾರಿಗಳಿಗೆ ಮಾತ್ರ ತನಿಖೆ ಮಾಡುವ ಅಧಿಕಾರವಿದೆ. ಅದರಲ್ಲೂ ದಲಿತ ದೌರ್ಜನ್ಯದಂಥ ಪ್ರಕರಣಗಳಿದ್ದರೆ ಎಸ್ಪಿ ಹಾಗೂ ಮೇಲಿನ ಅಧಿಕಾರಿಗಳು ಮಾತ್ರ ತನಿಖೆ ಮಾಡಬೇಕು. ಈ ರೀತಿಯ Officers ಮತ್ತು Men ಎಂಬ ತಾರತಮ್ಯ ಮೊದಲು ಹೋಗಬೇಕು, ಕಾನ್‌ಸ್ಟೆಬಲ್‌ಗಳಿಗೆ ಹೆಚ್ಚಿನ ಹೊಣೆ, ಬುದ್ಧಿ ಉಪಯೋಗಿಸುವ ಜವಾಬ್ದಾರಿ ನೀಡಬೇಕು. ಬರೀ ಸೆಲ್ಯೂಟ್ ಹೊಡೆಯುವುದನ್ನು ಮಷೀನ್ ಕೂಡ ಮಾಡುತ್ತದೆ. ಮೇಲಿನ ಅಧಿಕಾರಿಗಳ ಅಹಂ ಅನ್ನು ತಣಿಸುವುದು, ಹೆಣಭಾರದ ರೈಫಲ್ ಹೊತ್ತು ಗಸ್ತು ತಿರುಗುವುದು, ಇಷ್ಟೇ ಕೆಲಸ ಮಾಡಿಕೊಂಡು ಹೋದರೆ ಅವರಿಗೆ ವೃತ್ತಿಯಲ್ಲಿ ಆಸಕ್ತಿ ಹೊರಟು ಹೋಗಿ, ರೋಬೋಟ್‌ಗಳಾಗಿ ಬಿಡುತ್ತಾರೆ.
ಕಳೆದ 10 ವರ್ಷಗಳಲ್ಲಿ ಸಾಕಷ್ಟು ಹೊಸ ಕಾನೂನುಗಳು ಬಂದಿವೆ. ಉಗ್ರರ ಚಟುವಟಿಕೆ, ಆಂತರಿಕ ಭದ್ರತೆಗಳಿಂದಾಗಿ ಪೊಲೀಸರ ಕೆಲಸ ಮಿತಿಮೀರಿದೆ. ಏರುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಜವಾಬ್ದಾರಿಗಳಿಗೆ ಅನುಗುಣವಾಗಿ ಪೊಲೀಸ್ ಬಲ ಮತ್ತು ಅವರಿಗೆ ನೀಡಲಾಗುವ ಸೌಲಭ್ಯ ಹೆಚ್ಚಿಸಲಾಗಿದೆಯೇ? ಮೊದಲೆಲ್ಲ ಪೊಲೀಸ್ ಠಾಣೆ ಹಿಂಭಾಗದಲ್ಲೇ ಪೊಲೀಸ್ ವಸತಿ ಸಮುಚ್ಚಯ ಕೂಡ ಇರುತ್ತಿತ್ತು. ಆಗ ಸಮಯವಿದ್ದಾಗ ವಿಶ್ರಾಂತಿಪಡೆಯಲು ಅನುಕೂಲವಾಗಿತ್ತು. ಈಗ ಹಾಗಿಲ್ಲ. ಇದರಿಂದಾಗಿ ಪೊಲೀಸರಿಗೆ ಕೌಟುಂಬಿಕ ಜೀವನವೇ ಇಲ್ಲದಂತಾಗಿದೆ. ಕೆಲವೆಡೆ ಪೊಲೀಸ್ ಕ್ವಾರ್ಟ್ರಸ್‌ಗಳಂತೂ ಕುದುರೆ ಲಾಯವನ್ನು ನೆನಪಿಸುವಂತಿವೆ. ಕಳಪೆ ಸೌಲಭ್ಯಗಳನ್ನು ಕೊಟ್ಟು ಉತ್ಕೃಷ್ಟ ಸೇವೆ ಬಯಸುವುದು ತರವೇ?
ಇದೆಲ್ಲ ಸರಿಪಡಬೇಕಾದರೆ ಪೊಲೀಸ್ ಕಾಯಿದೆ ಬದಲಾಗಬೇಕು.
1950ರಲ್ಲಿ ಜಾರಿಗೆ ಬಂದ ಸಂವಿಧಾನ ಇಂದು ಯಥಾವತ್ತಾಗಿದೆಯೇ? ಅದು ಬಂದು 65 ವರ್ಷಗಳಲ್ಲಿ 98 ತಿದ್ದುಪಡಿಗಳಾಗಿವೆ. ಹಾಗಿರುವಾಗ ಪೊಲೀಸ್ ಆ್ಯಕ್ಟ್ ಏಕೆ ಹಾಗೇ ಉಳಿದಿದೆ? ಇಂದಿಗೂ ನಮ್ಮಲ್ಲಿರುವುದು 1861ರ ಪೊಲೀಸ್ ಕಾಯಿದೆಯೇ ಎಂದರೆ ನಂಬುತ್ತೀರಾ? ಬ್ರಿಟಿಷರು ಪೊಲೀಸ್ ಕಾಯಿದೆ ತಂದಿದ್ದು, ಪೊಲೀಸ್ ವ್ಯವಸ್ಥೆಯನ್ನು ತಂದಿದ್ದು ಅವರ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಹೊರತು, ಭಾರತದಲ್ಲಿನ ಸಮಾಜದ ಹಿತದೃಷ್ಟಿಯಿಂದಲ್ಲ. 152 ವರ್ಷಗಳಷ್ಟು ಹಳೆಯದಾದ ಅಂತಹ ಕಾಯಿದೆಗೆ ತಿದ್ದುಪಡಿ ತರಲು ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿಯಿಲ್ಲವೇಕೆ? ಇಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಕಾಟ ಕೊಡುವ ಎಸ್‌ಐ, ಇನ್ಸ್‌ಪೆಕ್ಟರ್, ಎಸಿಪಿಗಳನ್ನು ಮಾತ್ರ ದೂರಿ ಪ್ರಯೋಜನವೇನು? ಇದಕ್ಕೆಲ್ಲ ಮೂಲಕಾರಣ ನಮ್ಮನ್ನಾಳುವ ರಾಜಕಾರಣಿಗಳು. ಅದರಲ್ಲೂ ನಮ್ಮ ರಾಜ್ಯದಲ್ಲಿ ಪೋಸ್ಟಿಂಗ್‌ಗೆ ಸ್ಥಳೀಯ ಶಾಸಕನಿಂದ ‘ಮಿನಿಟ್‌’ (Minute In Minutes) ತೆಗೆದುಕೊಂಡು ಬರಬೇಕೆಂದು ಆದೇಶ ಮಾಡಿದ ರಾಮಕೃಷ್ಣ ಹೆಗಡೆ ಅವರ ದರಿದ್ರ ನೀತಿ ಪೊಲೀಸ್ ವ್ಯವಸ್ಥೆ ರಾಜಕಾರಣಿಗಳ ದಾಳವಾಗಲು ಮೂಲಕಾರಣವಾಯಿತು. ಸ್ಥಳೀಯ ಶಾಸಕ ತನಗೆ ಬೇಕಾದ ವ್ಯಕ್ತಿಗೆ ಮಾತ್ರ ಮಿನಿಟ್ ಕೊಡುತ್ತಾನೆ. ಅದನ್ನು ಪಡೆದುಕೊಂಡವನಂತೂ ಶಾಸಕನ ಶ್ರೀರಕ್ಷೆ ತನಗಿದೆ ಎಂದು ಆತ ಹೇಳಿದಂತೆ, ಮನಬಂದಂತೆ ವರ್ತಿಸುತ್ತಾನೆ. ಇದರಿಂದ ಪೊಲೀಸ್ ಇಲಾಖೆಯ ಫಂಕ್ಷನಲ್ ಅಟಾನಮಿಗೆ (ಕಾರ್ಯ ಸ್ವಾತಂತ್ರ್ಯ) ಹೊಡೆತ ಬಿತ್ತು. ಅದನ್ನು ಪೊಲೀಸ್ ಅಧಿಕಾರಿಗಳೂ ದುರುಪಯೋಗಪಡಿಸಿ ಕೊಳ್ಳಲಾರಂಭಿಸಿದರು. ಇತ್ತೀಚೆಗೆ ಬೇಲೂರು-ಮೂಡಿಗೆರೆ ರಸ್ತೆಯಲ್ಲಿ ಕಾರೊಂದು ಅಫಘಾತಕ್ಕೊಳಗಾಗಿತ್ತು. ಕೂಡಲೇ ಸ್ಥಳೀಯ ಗೋಣಿಬೀಡು ಠಾಣೆಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿಕೊಂಡು ಹೋದರು. ಇನ್ಶೂರೆನ್ಸ್ ಕ್ಲೈಮ್ ಮಾಡಲು ಸಿ ಫಾರ್ಮ್ ಕೊಡಿ ಎಂದು ಮರುದಿನ ಹೋಗಿ ಕೇಳಿದರೆ, ‘ಆಗಲ್ಲಾ ರೀ… ನಿನ್ನೆಯೇ ಬರಬೇಕಿತ್ತು, ಡೈರಿ ಕ್ಲೋಸ್ ಮಾಡಿದ್ದೇನೆ’ ಎಂದು ಮುಖ ಗಂಟಿಕ್ಕಿಕೊಂಡು ಮಾತನಾಡಿದರು ಎಸ್‌ಐ ರೇವಣ್ಣ. ‘ಸಿ ಫಾರ್ಮ್ ಕೊಡಬಾರದು ಅಂತ ಏನಿಲ್ಲ, ಘಟನೆ ನಡೆದು ತಿಂಗಳಾದರೂ ಕೊಡಬಹುದು, ಸಾರ್‌ಗೆ ಬಹುಶಃ ಕೈ ಬೆಚ್ಚಗೆ ಮಾಡಬೇಕು’ ಎಂದು ಪೇದೆಯೊಬ್ಬರು ಹೇಳಿದರು. ನ್ಯಾಯಯುತವಾಗಿ ಪಡೆದುಕೊಳ್ಳುವಂಥ ಒಂದು ಸಿ. ಫಾರ್ಮ್‌ಗೂ ರೇವಣ್ಣನಂಥ ಎಸ್‌ಐಗಳ ಕೈಬೆಚ್ಚಗೆ ಮಾಡಲೇಬೇಕು, ಆತ್ಮಗೌರವ ಬಿಟ್ಟು ಅಂಗಲಾಚಬೇಕು.
ಏಕೆಂದರೆ…
ನೀವು ಎಸ್‌ಐ, ಇನ್ಸ್‌ಪೆಕ್ಟರ್ ವಿರುದ್ಧ ಎಸ್ಪಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ, ಎಸ್ಪಿಗೆ ಏನು ಮಾಡುವುದಕ್ಕೂ ಆಗುವುದಿಲ್ಲ. ಎಸ್‌ಐ ಅನ್ನು ಸ್ವತಂತ್ರವಾಗಿ ಸಂಸ್ಪೆಂಡ್ ಮಾಡುವಂಥ ಅಧಿಕಾರವೂ ಎಸ್ಪಿಗಿಲ್ಲ. ಹೆಚ್ಚೆಂದರೆ ಬೈಯ್ಯಬಹುದು. ಆತನನ್ನು ಎತ್ತಂಗಡಿ ಮಾಡಿಸಬೇಕೆಂದರೆ ಸ್ಥಳೀಯ ಶಾಸಕನ ಕೈಕಾಲು ಹಿಡಿಯಬೇಕು. ಇಂತಹ ಪರಿಸ್ಥಿತಿಯೇ ವ್ಯವಸ್ಥೆ ಹದಗೆಡಲು ಕಾರಣ. ಹಾಗಾಗಿ ಈ Godfather ಪಾಲಿಟಿಕ್ಸ್ ಹೋಗಬೇಕು. ಪೊಲೀಸ್ ಅಧಿಕಾರಿಗಳು ಒಬ್ಬ ರಾಜಕಾರಣಿಗೆ ಅಧೀನರಾಗಿರುವ ಬದಲು ನಿಯಮ, ಚೌಕಟ್ಟಿಗೆ ಬದ್ಧರಾಗಿರುವಂತೆ, ಅಕೌಂಟೆಬಲ್ ಆಗಿರುವಂತೆ ಮಾಡಬೇಕು.
ಹಾಗಾಗಬೇಕಾದರೆ ನಾಲ್ಕನೇ ಪೊಲೀಸ್ ಆಯೋಗದ ಶಿಫಾರಸುಗಳು ಸಂಪೂರ್ಣವಾಗಿ ಜಾರಿಯಾಗಲೇಬೇಕು.
ಆಗ ಪೊಲೀಸರ ವಿರುದ್ಧ ಬರುವ ದೂರುಗಳನ್ನು ಆಲಿಸಲು ಜಿಲ್ಲಾ, ವಲಯ, ರಾಜ್ಯ ಮಟ್ಟದಲ್ಲಿ ಸಮಿತಿಗಳು ನಿರ್ಮಾಣವಾಗುತ್ತವೆ. ಒಬ್ಬ ನಿವೃತ್ತ ಜಡ್ಜ್, ಎಸ್ಪಿ, ಡಿವೈಎಸ್ಪಿಗಳು ಅದರಲ್ಲಿರುತ್ತಾರೆ. ಕೆಲವೊಂದು ವಿಘ್ನಸಂತೋಷಿ ಮನಸ್ಥಿತಿಯ ಎಸ್‌ಐ, ಇನ್ಸ್‌ಪೆಕ್ಟರ್‌ಗಳನ್ನು ಹೊರತುಪಡಿಸಿ ನೋಡಿದರೆ ರಜೆ ಕೊಡದಿರುವುದಕ್ಕೆ ಎಸ್‌ಐ, ಇನ್ಸ್‌ಪೆಕ್ಟರ್‌ಗಳಿಗೂ ಸಾಕಷ್ಟು ಕಾರಣಗಳಿವೆ. ಶಿವಕುಮಾರ್ ಹಾಗೂ ಆನಂದ್‌ಕುಮಾರ್ ಪ್ರಕರಣಗಳನ್ನಿಟ್ಟುಕೊಂಡು ಎಸ್‌ಐ, ಇನ್ಸ್‌ಪೆಕ್ಟರ್, ಎಸಿಪಿಗಳನ್ನೇ ಜರಿಯುವುದಕ್ಕಾಗುವುದಿಲ್ಲ.
ಇಷ್ಟಕ್ಕೂ 6 ಕೋಟಿ ಜನಸಂಖ್ಯೆಯಿರುವ ಕರ್ನಾಟಕದಲ್ಲಿರುವ ಪೊಲೀಸರ ಸಂಖ್ಯೆಯೆಷ್ಟು?
ಒಂದು ಲಕ್ಷ ಮೀರುವುದಿಲ್ಲ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ 150-200 ಜನರಿಗೆ ಒಬ್ಬ ಪೊಲೀಸ್ ಇರಬೇಕು. ನಮ್ಮ ರಾಜ್ಯದಲ್ಲಿ 700-800 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಉಳಿದೆಡೆಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಲ ಉತ್ತಮವಾಗಿದೆ. ಆದರೂ ಶೇ.20ರಷ್ಟು ಕೊರತೆ ಇದೆ. ಉಳಿದ ಪ್ರದೇಶಗಳಲ್ಲಿ ಈ ಕೊರತೆ ಇನ್ನೂ ಹೆಚ್ಚಿದೆ. ಪ್ರತಿ ಸ್ಟೇಷನ್‌ನಲ್ಲಿ ಕನಿಷ್ಠ 35 ಜನ ಇರಬೇಕು, ಅದರಲ್ಲಿ 30 ಪರ್ಸೆಂಟ್ ಮಹಿಳೆಯರಿರಬೇಕು ಎಂಬುದು ನಾಲ್ಕನೇ ಪೊಲೀಸ್ ಆಯೋಗದ ಪ್ರಮುಖ ಶಿಫಾರಸು. ಆದರೆ 35 ಪೊಲೀಸರಿರುವ ಎಷ್ಟು ಸ್ಟೇಷನ್‌ಗಳಿವೆ ಹೇಳಿ? ಪ್ರತಿವರ್ಷವೂ ಪೊಲೀಸ್ ನೇಮಕಾತಿ ನಡೆಯಬೇಕೆಂದೂ ಹೇಳಿದೆ. ಆದರೆ ಈ ಭ್ರಷ್ಟ ಬಿಜೆಪಿ ಸರ್ಕಾರ ಬಂದ ನಾಲ್ಕೂವರೆ ವರ್ಷಗಳಲ್ಲಿ ಪೊಲೀಸ್ ನೇಮಕಾತಿ ನಡೆದಿರುವುದು ಒಮ್ಮೆ ಮಾತ್ರ! ಹಾಗಿರುವಾಗ ಎಸ್‌ಐ, ಇನ್ಸ್‌ಪೆಕ್ಟರ್‌ಗಳು ಸಿಬ್ಬಂದಿ ಕೊರತೆಯನ್ನು ಅನುಭವಿಸದೇ ಇರುತ್ತಾರೆಯೇ? ಹಾಗಾಗಿ ಅವರನ್ನಷ್ಟೇ ದೂರಿ ಏನು ಉಪಯೋಗ? ವಿ.ಎಸ್. ಆಚಾರ್ಯ ಅವರು ಗೃಹಸಚಿವರಾಗಿದ್ದಾಗ ಗೃಹ ಕಾರ್ಯದರ್ಶಿ ಶಿವಪುತ್ರ ಜಾಮ್ದಾರ್, ಡಿಜಿ ಅಜಯ್ ಕುಮಾರ್ ಒಟ್ಟು ಸೇರಿ ಸುಪ್ರೀಂಕೋರ್ಟ್ ಸೂಚನೆಯಂತೆ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಸ್ಥಾಪಿಸುವ ಯೋಗ್ಯ ಕೆಲಸ ಮಾಡಿದರು. ಅದರ ಮೂಲಕವೇ ಪೊಲೀಸ್ ವರ್ಗಾವಣೆಗಳು ನಡೆಯಬೇಕು ಮತ್ತು ಅನಗತ್ಯವಾಗಿ 2 ವರ್ಷಕ್ಕಿಂತ ಮುಂಚೆ ಅವರ ವರ್ಗಾವಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಕೂಡ ಹೇಳಿತ್ತು. ಆದರೆ ಪೊಲೀಸ್‌ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ರಚನೆಯಾಗಿದ್ದರೂ, ಸಂಪೂರ್ಣ ನಿಯಂತ್ರಣವನ್ನು ಸರ್ಕಾರ ಬಿಟ್ಟುಕೊಟ್ಟಿಲ್ಲ, ಏಕೆ? ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವ, ತುಚ್ಛವಾಗಿ ನೋಡುವ ಕೃತಘ್ನ ವ್ಯವಸ್ಥೆಗೆ ಪೊಲೀಸರು ಕೃತಜ್ಞರಾಗಿರಲು ಸಾಧ್ಯವೇ?
ಈ ಹಿನ್ನೆಲೆಯಲ್ಲಿ ಪೊಲೀಸ್ ಸುಧಾರಣೆಗಳನ್ನು ತರುವುದೇ ಸಮಸ್ಯೆಯ ಪರಿಹಾರಕ್ಕೆ ಯೋಗ್ಯ ಮಾರ್ಗ. ಆ ಮೂಲಕ ಸಿಬ್ಬಂದಿ ಕೊರತೆ ನೀಗಿಸಿ ಪ್ರತಿಯೊಬ್ಬ ಪೇದೆಗೂ ದಿನಕ್ಕೆ 8 ತಾಸು ಕೆಲಸ, ವಾರಕ್ಕೊಂದು ರಜೆ ಸಿಗುವಂತೆ, ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತು ರಜೆ ದೊರೆಯುವಂತೆ ಮಾಡಬೇಕು. ಅವರ ಮಕ್ಕಳಿಗೆ ಉಚಿತ ಅಥವಾ ರಿಯಾಯಿತಿ ಶಿಕ್ಷಣ, ಪ್ರವಾಸ ರಜೆ ಹಾಗೂ ಭತ್ಯೆ ನೀಡಬೇಕು. ಎಂಪ್ಲಾಯಿ ಬೆನಿಫಿಟ್ ಎಲ್ಲವೂ ಅವರಿಗೆ ಸಿಗಬೇಕು. ಸುಲಭ ಸಾಲ ಹಾಗೂ ಎಲ್ಲ ಪೊಲೀಸರಿಗೂ ವಸತಿ ಕೊಡಬೇಕು, ವರ್ಗಾವಣೆಯಲ್ಲಿ ಪ್ರಭಾವ ಇರಬಾರದು, ಮೆರಿಟ್‌ಗೆ ಮಾತ್ರ ಬೆಲೆ ಎನ್ನುವಂತಾಗಬೇಕು. ಇದೆಲ್ಲ ಮಾಡಿದಾಗ ನಮ್ಮ ಸಮಾಜಕ್ಕೆ ಒಳ್ಳೆಯ ಭದ್ರತೆಯೂ ಸಿಗುತ್ತದೆ. ನಾನು ದುಡಿದರೆ ನನ್ನ ಭವಿಷ್ಯಕ್ಕೇ ಒಳ್ಳೆಯದಾಗುತ್ತದೆ, ಪ್ರಮೋಷನ್ ಸಿಗುತ್ತದೆ, ಕೆಲಸಕ್ಕೆ ಮನ್ನಣೆ, ಪ್ರತಿಫಲ ಸಿಗುತ್ತದೆ ಎಂದರೆ ಎಲ್ಲರು ಚೆನ್ನಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ. ಇಲ್ಲದೆ ಹೋದರೆ ಪೊಲೀಸ್ ಇಲಾಖೆಯೆಂಬುದು Stress Releasing ಗೆ ಬದಲು Stress Inducing ವ್ಯವಸ್ಥೆಯಾಗಿ ಮೊನ್ನೆ ನಡೆದಂಥ ಅವಘಡಗಳು ಸಂಭವಿಸುತ್ತವೆ. ಆಗ ಮೇಲಿನ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಾರೆಂದು ಪರಸ್ಪರ ದೂರಿ ಯಾವುದೇ ಪ್ರಯೋಜನವಾಗುವುದಿಲ್ಲ, ಕಾನ್‌ಸ್ಟೆಬಲ್‌ಗಳ ಹೀನಾಯ ಪರಿಸ್ಥಿತಿಯೂ ಬದಲಾಗುವುದಿಲ್ಲ.
ಅಲ್ಲವೆ?

 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ