ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 9, 2013

ಕುಡೋಸ್ ಟು ಕಪಿಲ್ ಸಿಬಲ್!Thank you Mr. Kapil Sibal!
ಹಾಗಂತ ಹೇಳಲೇಬೇಕಾಗಿದೆ. ಅಂತಹ ಕೆಲಸವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಮಾಡಿದ್ದಾರೆ. ಕಳೆದ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಸಾಮಾಜಿಕ ವಿಚಾರಗಳ ಮೇಲಿನ 10ನೇ ‘ಎಡಿಟರ್‍ಸ್  ಕಾನ್ಫರೆನ್ಸ್’ನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅವರು, “ಈ ಡೀಮ್ಡ್ ಯೂನಿವರ್ಸಿಟಿಗಳೆಂಬ ಪರಿಕಲ್ಪನೆಯನ್ನೇ ಬರ್ಖಾಸ್ತು ಗೊಳಿಸಲಾಗುವುದು’ ಎಂದಿದ್ದಾರೆ. ಅದಕ್ಕಿಂತ ಒಂದು ದಿನ ಮೊದಲು, 44 ವಿವಿಗಳ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನವನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಈ ವಿವಿಗಳು ಶೈಕ್ಷಣಿಕ ಆದ್ಯತೆಗೆ ಬದಲು, ವೃತ್ತಿಪರವಾಗಿ ನಡೆಸುವ ಬದಲು ಕೌಟುಂಬಿಕ ಪಾಳೆಗಾರಿಕೆಯ ತಾಣಗಳಾಗಿವೆ. ಸಂಬಂಧವೇ ಇಲ್ಲದ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ನಾಯಿಕೊಡೆಗಳಂತೆ ಡಿಗ್ರಿಗಳನ್ನು ಸೃಷ್ಟಿಸುತ್ತಿವೆ. ಸಂಶೋಧನೆ, ನವೀನ ಬೋಧನಾ ವಿಧಾನದ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡದೇ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡಿಕೆ ಹಿಂದಿರುವ ಆಶಯಕ್ಕೇ ತಣ್ಣೀರು ಎರಚಿವೆ’ ಎಂದು ತನ್ನ 11 ಪುಟಗಳ ಅಫಿಡವಿಟ್‌ನಲ್ಲಿ ಕೇಂದ್ರ ತಿಳಿಸಿದೆ. ಪ್ರಕರಣ ಜನವರಿ 25ರಂದು ವಿಚಾರಣೆಗೆ ಬರಲಿದೆ. ಈಗಾಗಲೇ 44 ವಿವಿಗಳ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿದೆ. ಈ ವಿವಿಗಳಲ್ಲಿ 1,19, 363 ವಿದ್ಯಾರ್ಥಿಗಳಿದ್ದಾರೆ, ಎಂಫಿಲ್, ಪಿಎಚ್‌ಡಿ ಪದವಿ ಪಡೆಯಲು 2,124 ಮಂದಿ ಎನ್‌ರೋಲ್ ಆಗಿ ಸಂಶೋಧನೆ ನಡೆಸುತ್ತಿದ್ದಾರೆ, ಜತೆಗೆ 74,808 ವಿದ್ಯಾರ್ಥಿಗಳು ದೂರಶಿಕ್ಷಣ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ಲಕ್ಷದಷ್ಟು ವಿದ್ಯಾರ್ಥಿಗಳು ಈ ವಿವಿಗಳಲ್ಲಿ ಕಲಿಯುತ್ತಿದ್ದಾರೆ. ಅವರ ಭವಿಷ್ಯಕ್ಕಾಗಲಿ, ಪದವಿಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಯೂನಿವರ್ಸಿಟಿ ಡಿಗ್ರಿಗಳು ದೊರೆಯಲಿವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನಿಜಕ್ಕೂ ಇಂಥದ್ದೊಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ತ್ವರಿತ ಅಗತ್ಯವಿತ್ತು.

2009ರ ಮೇನಲ್ಲಿ ಮಾನವ ಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಲೇ ಸಿಬಲ್ ಸುಮ್ಮನೆ ಕೂರುವವರಲ್ಲ ಎಂಬ ಎಚ್ಚರಿಕೆ ಹೊರಬಿದ್ದಿತ್ತು. ಅಷ್ಟಕ್ಕೂ ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಇತ್ತೀಚಿನ ಕೆಲ ವರ್ಷಗಳಿಂದ ಲಂಗುಲಗಾಮಿಲ್ಲದಂತೆ ಸಿಕ್ಕಸಿಕ್ಕಂತೆ ಡೀಮ್ಡ್ ವಿವಿ ಸ್ಥಾನಮಾನ ನೀಡಲಾರಂಭಿಸಿತ್ತು. 2007, ಡಿಸೆಂಬರ್ 7ರಂದು ಇದೇ ಅಂಕಣದಲ್ಲಿ ಪ್ರಕಟವಾದ ‘ಇವು ಡೀಮ್ಡ್ ಯೂನಿವರ್ಸಿಟಿಗಳೋ, ಡೂಮ್ಡ್ ಯೂನಿವರ್ಸಿಟಿಗಳೋ?’ ಎಂಬ ಲೇಖನವನ್ನು ನೆನಪಿಸಿಕೊಳ್ಳಿ. ಡೀಮ್ಡ್ ಯೂನಿವರ್ಸಿಟಿ ಎಂಬ ಪರಿಕಲ್ಪನೆ ಬಂದಿದ್ದು ಹೇಗೆ ಗೊತ್ತೆ? ಸ್ವಾತಂತ್ರ್ಯ ಹೋರಾಟದಂತಹ ರಾಷ್ಟ್ರೀಯ ಚಳವಳಿಯ ಕಾಲದಲ್ಲೂ ದೇಶಾದ್ಯಂತ ಉನ್ನತ ಶಿಕ್ಷಣ ನೀಡುವ ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿದ್ದವು. ಸ್ವಾತಂತ್ರ್ಯ ಚಳವಳಿಗೆ ವಿದ್ಯಾರ್ಥಿಗಳು ಕೊಟ್ಟ ಕೊಡುಗೆ ಅಪಾರ. ಹೀಗೆ ಈ ಸಂಸ್ಥೆಗಳು ಶಿಕ್ಷಣ ಸೇವೆಯ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪರೋಕ್ಷವಾಗಿ ಭಾಗಿಯಾಗಿದ್ದವು. ಆಳುವವರ ಯಾವ ಪ್ರೋತ್ಸಾಹವೂ ಇಲ್ಲದ ಅಂತಹ ಕಷ್ಟಕಾಲದಲ್ಲೂ ನೈತಿಕತೆಯನ್ನು ಎತ್ತಿಹಿಡಿದ ಹಾಗೂ ಅಸ್ತಿತ್ವ ಉಳಿಸಿಕೊಂಡ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾನಮಾನ ನೀಡುವ ಬಗ್ಗೆ ಸರಕಾರ ಆಲೋಚಿಸಬೇಕು ಎಂದು 1948ರಲ್ಲಿ ನೇಮಕಗೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆಯೋಗ ಶಿಫಾರಸು ಮಾಡಿತು. ೧೯೫೬ರಲ್ಲಿ ಜಾರಿಗೆ ಬಂದ ಯುಜಿಸಿ ಕಾಯಿದೆಯ ಸೆಕ್ಷನ್ 12(ಬಿ) ಅಡಿ ಅಂತಹ ಅವಕಾಶ ಕಲ್ಪಿಸಲಾಯಿತು. ಅದನ್ನೇ “Deemed -to-be University” ಎನ್ನುವುದು. ಪ್ರಾರಂಭದಲ್ಲಿ ಕೇವಲ 3 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡ ಲಾಯಿತು. 1990ರವರೆಗೂ ಅಂದರೆ 35 ವರ್ಷಗಳಲ್ಲಿ ಅಂತಹ ವಿಶೇಷ ಸ್ಥಾನ  ನೀಡಿದ್ದು ಕೇವಲ 29 ಕಾಲೇಜುಗಳಿಗೆ. ಆನಂತರ ಉತ್ತಮ ನಿರ್ವಹಣೆ ಹೊಂದಿರುವ, ಪ್ರಾರಂಭವಾಗಿ ಕನಿಷ್ಠ ೨೫ ವರ್ಷಗಳಾಗಿರುವ ಶಿಕ್ಷಣ ಸಂಸ್ಥೆಗಳಿಗೂ ಡೀಮ್ಡ್ ವಿವಿ ಸ್ಥಾನ ನೀಡುವ ಪರಿಪಾಠ ಆರಂಭವಾಯಿತು.
ಆಗ ಶುರುವಾಯಿತು ನೋಡಿ ದಂಧೆ…
ಕರ್ನಾಟಕದ ೧೫ ಸೇರಿ ಭಾರತದಲ್ಲಿ ಒಟ್ಟು  137ಕ್ಕೂ ಹೆಚ್ಚು  ಡೀಮ್ಡ್ ವಿವಿಗಳಿವೆ. ಯುಜಿಸಿ ಯದ್ವಾತದ್ವ ವಿವಿ ಸ್ಥಾನ ನೀಡುವ ಮೂಲಕ ವ್ಯವಸ್ಥೆಯನ್ನು ಕುಲಗೆಡಿಸುತ್ತಿದೆ ಎಂಬ ಆರೋಪ ೨೦೦೮ರಲ್ಲೇ ಕೇಳಿ ಬಂದಿತ್ತು. ಹಾಗಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಿಬಲ್ ತನಿಖೆಗೆ ಆದೇಶಿಸಿದರು. ಯುಜಿಸಿಯೇ ತನಿಖಾ ಸಮಿತಿ ನೇಮಕ ಮಾಡಿತು, ಸಹಜವಾಗಿಯೇ ಅದು ಯುಜಿಸಿಗೆ ಕ್ಲೀನ್ ಚಿಟ್ ಕೊಟ್ಟಿತು. ಕೊನೆಗೆ ಸರಕಾರವೇ ಮತ್ತೊಂದು ಸಮಿತಿ ನೇಮಕ ಮಾಡಿತು. ದಂಧೆಯ ರಾಕ್ಷಸೀ ಸ್ವರೂಪ ಹೊರಬರ ತೊಡಗಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 5 ವರ್ಷಗಳಲ್ಲಿ 60 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ನೀಡಲಾಗಿದೆ!! ಅವುಗಳಲ್ಲಿ ಕೇವಲ 6 ಸರಕಾರಿ ನಿಯಂತ್ರಣದಲ್ಲಿರುವ ಕಾಲೇಜುಗಳು, ಉಳಿದವು ಗಳೆಲ್ಲ ಖಾಸಗಿ!!! ಜತೆಗೆ ಕನಿಷ್ಠ ೨೫ ವರ್ಷಗಳಿಂದ ಶಿಕ್ಷಣ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಮಾತ್ರ ಡೀಮ್ಡ್ ವಿವಿ ಸ್ಟೇಟಸ್ ನೀಡಬೇಕೆಂಬ ನಿಯಮವನ್ನೂ ಬದಲಿಸಿ 10 ವರ್ಷಕ್ಕೆ ಇಳಿಸಿರುವುದು ಬೆಳಕಿಗೆ ಬಂತು. ಸುಮಾರು 177 ಇನ್‌ಸ್ಟಿಟ್ಯೂಟ್‌ಗಳು ತಮಗೂ ಅಂತಹ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ 38 ಸಂಸ್ಥೆಗಳು ಪ್ರಾರಂಭವಾಗಿ 5 ವರ್ಷ ಕೂಡ ತುಂಬಿರಲಿಲ್ಲ! ಈ ದೇಶ ಕಂಡ ಅತ್ಯಂತ ಕೆಟ್ಟ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅಧಿಕಾರಾವಧಿಯಲ್ಲಿ ಏನೆಲ್ಲಾ ಕೆಡುಕುಗಳು ನಡೆದುಹೋಗಿವೆ. ಇದನ್ನೆಲ್ಲಾ ಪತ್ತೆಹಚ್ಚಿತು ಪಿ.ಎನ್. ಟಂಡನ್ ಸಮಿತಿ. ಅಲ್ಲದೆ 2005ರಲ್ಲಿ ಜಾರಿಗೆ ಬಂದ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕ ನಿಯಂತ್ರಣ ಕಾಯಿದೆಯನ್ನೂ ಗಾಳಿಗೆ ತೂರಿರುವುದು ತಿಳಿದು ಬಂತು. 137 ಡೀಮ್ಡ್ ಯೂನಿವರ್ಸಿಟಿಗಳ ಬಗ್ಗೆ ತನಿಖೆ ನಡೆಸಿದ ಸಮಿತಿ, ಅವುಗಳಲ್ಲಿ ಹೆಚ್ಚಿನವು ಬೋಧಕವರ್ಗ, ಮೂಲಭೂತ ಸೌಕರ್ಯ, ಅಕಾಡೆಮಿಕ್ ಕೋರ್ಸ್‌ಗಳ ವಿಚಾರದಲ್ಲಿ ಕಾನೂನನ್ನು ಉಲ್ಲಂಘಿಸಿವೆ. ಇಂತಹ ಯೂನಿವರ್ಸಿಟಿಗಳು ಕಾಲೇಜು ನಡೆಸುವುದು ದೊಡ್ಡ ಪ್ರಮಾದ ಎಂದು ತನ್ನ ವರದಿಯಲ್ಲಿ ತಿಳಿಸಿತು. ಅಷ್ಟೇ ಅಲ್ಲ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವ ಬದಲಾವಣೆ ತರಬೇಕೆಂದು ಸೂಚಿಸಲು ನೇಮಕಗೊಂಡಿದ್ದ ಪ್ರೊ. ಯಶ್‌ಪಾಲ್ ಆಯೋಗ,  “ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ಕೊಡುವುದನ್ನೇ ಶಾಶ್ವತವಾಗಿ ನಿಲ್ಲಿಸಬೇಕು. ಜತೆಗೆ ತಾಂತ್ರಿಕ ಹಾಗೂ ಬ್ಯುಸಿನೆಸ್ ಸ್ಕೂಲ್‌ಗಳ ಮೇಲ್ವಿಚಾರಣೆ ನಡೆಸುವ ಯುಜಿಸಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನೂ(AICTE) ರದ್ದುಪಡಿಸ ಬೇಕು” ಎಂದು ಶಿಫಾರಸು ಮಾಡಿತು.
ಕಬಿಲ್ ಸಿಬಲ್  ಮಾನ್ಯತೆ ರದ್ದುಪಡಿಸಲು ಕಳೆದ ಸೋಮವಾರ ಮುಂದಾಗಿರುವ 44 ವಿವಿಗಳು ತೀರಾ ಹದಗೆಟ್ಟಿರುವ ಡೀಮ್ಡ್ ವಿವಿಗಳಾಗಿವೆ. ಅಷ್ಟಕ್ಕೂ ಡೀಮ್ಡ್ ವಿವಿಗಳು ಮಾಡುತ್ತಿರುವುದಾದರೂ ಏನು? ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ… ಭಾರತೀಯ ವಿeನ ಮಂದಿರ(ಐಐಎಸ್‌ಸಿ), ನಿಮ್ಹಾನ್ಸ್, ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ, ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ ಮುಂತಾದ ಸಂಸ್ಥೆಗಳಿಗೆ ಡೀಮ್ಡ್ ವಿವಿ ಸ್ಥಾನಮಾನ ಕೊಟ್ಟಿದ್ದರಲ್ಲಿ ಅರ್ಥವೂ ಇದೆ. ಅಲ್ಲಿ ಪ್ರತಿಭೆಗೆ ಮಣೆ ಹಾಕುತ್ತಾರೆ, ಸ್ಪರ್ಧಾತ್ಮಕ  ಪರೀಕ್ಷೆ ಮೂಲಕ ಪ್ರವೇಶ ನೀಡುತ್ತಾರೆ, ಒಳ್ಳೆಯ ಸಂಶೋಧನೆಗಳೂ ನಡೆಯುತ್ತಿವೆ. ಆದರೆ ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ಪಡೆದುಕೊಂಡಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳಾದ ‘ಮನಿ’ಪಾಲ್, ಬಿಎಲ್‌ಡಿಇ, ದೇವರಾಜ್ ಅರಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್, ಜೈನ್ ಹಾಗೂ ಇನ್ನುಳಿದ ವಿವಿಗಳು ಯಾವ ರೀಸರ್ಚ್ ಮಾಡುತ್ತಿವೆ? ಪಠ್ಯದಲ್ಲಾಗಲಿ, ಗುಣಮಟ್ಟದ ಶಿಕ್ಷಣದಲ್ಲಾಗಲಿ ಯಾವ ಮಹಾ ಬದಲಾವಣೆ ತಂದಿವೆ? ಉನ್ನತ ಶಿಕ್ಷಣವನ್ನು ಎಷ್ಟು ‘ಉನ್ನತಿ’ಗೆ ಮಾಡಿವೆ?
ಏನಾದರೂ ‘ಉನ್ನತ ಮಟ್ಟ’ ತಲುಪಿದ್ದರೆ ಅದು ‘ಕ್ಯಾಪಿಟೇಶನ್ ಫೀ’ ಮಾತ್ರ. ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ಕೊಡುವ ಹಿಂದೆ ಇರುವ ಆಶಯ ಏನೇ ಇದ್ದರೂ ಆಗುತ್ತಿರುವುದು ಮಾತ್ರ ಶಿಕ್ಷಣದ ವ್ಯಾಪಾರೀಕರಣ. ಅಷ್ಟಕ್ಕೂ ಹಣಕಾಸು, ಶಿಕ್ಷಕರ ನೇಮಕ, ಪ್ರವೇಶಾತಿ, ಪಠ್ಯ ರಚನೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ, ಮೌಲ್ಯಮಾಪನ ಎಲ್ಲ ವಿಷಯಗಳಲ್ಲೂ ಸ್ವತಂತ್ರರು ಇವರು. ಇಂತಹ ಸ್ವಾತಂತ್ರ್ಯದ ಅಗತ್ಯ ಖಂಡಿತ ಇತ್ತು. ಏಕೆಂದರೆ…
1. ಪಠ್ಯವನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳಬಹುದು
2. ನವೀನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು
3. ಪ್ರಯೋಗಾಲಯಗಳ ಗುಣಮಟ್ಟವನ್ನು ಎತ್ತರಿಸಬಹುದು
4. ಮಾರ್ಕ್ಸ್ ಬದಲು ಗ್ರೇಡ್ ಕೊಡುವ ಅವಕಾಶವಿರುವುದರಿಂದ ಅಸೈನ್‌ಮೆಂಟ್, ಸರ್ಪ್ರೈಸ್ ಕ್ವಿಝ್, ಸೆಮಿನಾರ್‌ಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸಮಗ್ರ ಪರೀಕ್ಷೆ ನಡೆಸಬಹುದು
5. ಉತ್ತಮ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು
6. ಒಟ್ಟಾರೆಯಾಗಿ ಶಿಕ್ಷಣದ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಏನು ಬೇಕು ಅದನ್ನೆಲ್ಲಾ ಮಾಡಬಹುದು
ಆದರೆ ಆಗುತ್ತಿರುವುದೇನು?
1. ಡೀಮ್ಡ್ ಯೂನಿವರ್ಸಿಟಿಗಳಿಗೆ ಪ್ರವೇಶ ಸ್ವಾತಂತ್ರ್ಯವಿರುವು ದರಿಂದ ಮನಸ್ಸಿಗೆ ಬೇಕೆಂದವರಿಗೆ ಸೀಟು ವಿತರಣೆ
2. ಸಿಇಟಿ ಮೂಲಕ ಬಡ ಹಾಗೂ ಪ್ರತಿಭಾವಂತರಿಗೆ ಸಿಗುತ್ತಿದ್ದ ಸರಕಾರಿ ಸೀಟುಗಳಿಗೆ ಕತ್ತರಿ
3. ಆ ಮೂಲಕ ಶಿಕ್ಷಣವನ್ನು ಕಾಸಿದ್ದವರಿಗೆ ‘ಎಕ್ಸ್‌ಕ್ಲೂಸಿವ್’ ಮಾಡಿದ್ದು
4. ಪಠ್ಯದ ಅಪ್‌ಡೇಟ್‌ಗಿಂತ ಶುಲ್ಕದ ಹೆಚ್ಚಳಕ್ಕೆ ಆದ್ಯತೆ
5. ಕಾಲೇಜು ಮಾಲೀಕರು ಕಾಸಿನ ಬಲದಿಂದಾಗಿ ಪೊಲಿಟಿಕಲ್ ಪವರ್ ಬ್ರೋಕರ್‌ಗಳಾಗಿ ಮಾರ್ಪಾಡು
6. ಶಿಕ್ಷಕರ ನೇಮಕದಲ್ಲಿ ಸ್ವಜನ ಪಕ್ಷಪಾತ
7. ಆ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ತಣ್ಣೀರು
8. ವಿಸಿಯಿಂದ ಹಿಡಿದು ಸಣ್ಣ ಹುದ್ದೆಯವರೆಗೂ ಮನಸ್ಸಿಗೆ ಬಂದವರ ನೇಮಕ ಹಾಗೂ ಕುಟುಂಬ ಪಾರುಪತ್ಯ
9. ವಿದ್ಯಾರ್ಥಿಗಳ ಶೋಷಣೆ
10. ಗುಣಮಟ್ಟದ ಶಿಕ್ಷಣ, ಕಟ್ಟುನಿಟ್ಟಾದ ಪರೀಕ್ಷೆ ಬದಲು ಫಲಿತಾಂಶ ಹೆಚ್ಚಳಕ್ಕಾಗಿ ವಿದ್ಯಾರ್ಥಿಗಳಿಗೆ ‘ಸ್ಪೂನ್ ಫೀಡಿಂಗ್’
11. ಮೆಡಿಕಲ್ ಪದವಿ ಪಡೆದರೂ ಎಂ.ಡಿ. ಮಾಡಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣ.
12. ಎಂಡಿ ಸೀಟುಗಳು 60-90ಲಕ್ಷಕ್ಕೆ ಬಿಕರಿ
ಏಕೆ ಹೀಗಾಯಿತು?
1. ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ನೀಡುವ ಮೊದಲು ಯುಜಿಸಿ ಯೋಚಿಸಬೇಕಿತ್ತು.
2. ಕೂಲಂಕಷ ಪರಾಮರ್ಶೆ ನಡೆಸಬೇಕಿತ್ತು
3. ಬಹುತೇಕ ಕಾಲೇಜುಗಳು ರಾಜಕಾರಣಿಗಳ ಹಿಡಿತದಲ್ಲಿರು ವುದರಿಂದ ಅರ್ಜಿ ಹಾಕುವವರ Motive ಹಾಗೂ Motivating factor ಏನೆಂಬುದನ್ನು ತಿಳಿದುಕೊಳ್ಳಬೇಕಿತ್ತು!
4. ಕಾಲೇಜುಗಳ ಇತಿಹಾಸ, ಸಾಧನೆಯನ್ನು ಕೆದಕಿ ನೋಡಬೇಕಿತ್ತು
5. ಇಂತಿಷ್ಟು ಕಾಲಾವಧಿಗೊಮ್ಮೆ ಕಟ್ಟುನಿಟ್ಟಾಗಿ ತಪಾಸಣೆ, ಪರಾಮರ್ಶೆ ನಡೆಸಬೇಕಿತ್ತು
ಮಾಡಿದ್ದೇನು?
ಯುಜಿಸಿ ಯದ್ವಾತದ್ವ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ಕೊಟ್ಟಿತು. ತಪಾಸಣೆ, ಪರಾಮರ್ಶೆ ನಡೆಸಬೇಕಾದ AICTEನ ಮಾಜಿ ಅಧ್ಯಕ್ಷರೇ(ಆರ್.ಎ. ಯಾದವ್)(ಅವರನ್ನು ಮನೆಗೆ ಕಳುಹಿಸಿದ್ದು ಸಿಬಲ್ ಅವರೇ)ಕಾಸುಕೊಡದಿದ್ದರೆ ಮಾನ್ಯತೆ ರದ್ದು ಮಾಡಿಸುವುದಾಗಿ ಆಂಧ್ರದ ತಾಂತ್ರಿಕ ಕಾಲೇಜೊಂದನ್ನು ಬ್ಲ್ಯಾಕ್‌ಮೇಲ್ ಮಾಡಲು ಹೋಗಿ ಸಿಕ್ಕಿಬಿದ್ದರು! ಇನ್ನು ಹಿಸ್ಟರಿ ಟ್ರ್ಯಾಕ್ ಮಾಡಬೇಕೆಂಬುದೇನೋ ಸರಿ, ಆದರೆ ಕಾಲೇಜು ಪ್ರಾರಂಭವಾಗಿ ಕನಿಷ್ಠ 25 ವರ್ಷಗಳಾಗಿರಬೇಕು ಎಂಬ ನಿಯಮವನ್ನು 10 ವರ್ಷಕ್ಕೆ ಇಳಿಸಿದ ಮೇಲೆ ಯಾವ ಹಿಸ್ಟರಿಯನ್ನು ನೋಡುತ್ತೀರಿ? ವಿದ್ಯಾರ್ಥಿಗಳ ಶೋಷಣೆಯ ವಿಚಾರವನ್ನು ತೆಗೆದುಕೊಳ್ಳಿ. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು, 1970ರ ದಶಕದಲ್ಲಿ ದಿಲ್ಲಿಯಲ್ಲಿ ಶಾಲಾ ವಿದಾರ್ಥಿನಿ ಗೀತಾ ಚೋಪ್ರಾಳ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳಾದ  ರಂಗ ಮತ್ತು ಬಿಲ್ಲನನ್ನು ಸರಕಾರ ಗಲ್ಲಿಗೇರಿಸುವಂತೆ ಮಾಡಿದ್ದ ವಿದ್ಯಾರ್ಥಿ ಶಕ್ತಿ ಇವತ್ತು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧವೇ ಧ್ವನಿಯೆತ್ತುವ ಸ್ಥಿತಿಯಲ್ಲಿಲ್ಲ! ಡೀಮ್ಡ್ ಯೂನಿವರ್ಸಿಟಿಗಳಲ್ಲಿ ಮ್ಯಾನೇಜ್‌ಮೆಂಟ್‌ನದ್ದೇ ದರ್ಬಾರು. ಇಂಜಿನಿಯರಿಂಗ್‌ಗೆ ಸೇರಿದರೆ 4 ವರ್ಷವನ್ನೂ ಆತಂಕದಲ್ಲೇ ಕಳೆಯಬೇಕು. ಧ್ವನಿಯೆತ್ತಿದರೆ ಡಿಗ್ರಿಗೇ ಕುತ್ತು ಬರುತ್ತದೆ, ಶೀಲಕ್ಕೂ ಕುತ್ತು ಬಂದ, ಬರುತ್ತಿರುವ ಪ್ರಕರಣಗಳೂ ಸಾಕಷ್ಟಿವೆ. ‘ವಿಟಿಯು’ನಲ್ಲಾದರೆ ಕನಿಷ್ಠ ಹೋರಾಟ ಮಾಡಬಹುದು, ಉತ್ತರ ಪತ್ರಿಕೆ ತರಿಸಿಕೊಂಡು ಖುದ್ದು ನೋಡಬಹುದು. ಡೀಮ್ಡ್ ವಿವಿಗಳಲ್ಲೂ ಇವು ಸಾಧ್ಯವಿದ್ದರೂ ಬೇಕೆಂದರೆ ಯಾವ ವಿದ್ಯಾರ್ಥಿಯ ಜೀವನವನ್ನೂ ಹಾಳು ಮಾಡುವ ಅವಕಾಶ ವಿಭಾಗದ ಮುಖ್ಯಸ್ಥರಿಗಿರುತ್ತದೆ.
ಈ ಎಲ್ಲ ಕಾರಣಗಳಿಗಾಗಿ ಕಪಿಲ್ ಸಿಬಲ್ ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ಎಲ್ಲರೂ ಸ್ವಾಗತಿಸಲೇಬೇಕು. ಆದರೆ ಅಂತಿಮವಾಗಿ ಎಲ್ಲಾ ಡೀಮ್ಡ್ ವಿವಿಗಳನ್ನೂ ಬರ್ಖಾಸ್ತು ಮಾಡಲಾಗುವುದು ಎಂದು ಸಿಬಲ್ ಹೇಳಿರುವುದು ಖಂಡಿತ ಅತಿರೇಕ ಎನಿಸುತ್ತದೆ. ಅದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನು ಮುಂದೆ ಡೀಮ್ಡ್ ಯೂನಿವರ್ಸಿಟಿ ಅಥವಾ ಆಟೊನಾಮಸ್(ಸ್ವಾಯತ್ತೆ) ಸ್ಟೇಟಸ್ ನೀಡುವುದಿಲ್ಲ ಎಂದು ಘೋಷಿಸಿದ್ದರೆ ಖಂಡಿತ ಸಾಕಿತ್ತು, ಆಗಿಂದಾಗ್ಗೆ ತಪಾಸಣೆ ನಡೆಸಿ ನಿರ್ದಿಷ್ಟ ಗುಣಮಟ್ಟ ಕಾದುಕೊಳ್ಳದ ವಿವಿಗಳ ಸ್ಥಾನಮಾನವನ್ನೂ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರೆ ಚೆನ್ನಾಗಿಯೂ ಇರುತ್ತಿತ್ತು. ಅದಿರಲಿ, ಡೀಮ್ಡ್ ವಿವಿಗಳ ಸೊಕ್ಕಡಗಿಸಲು ಮುಂದಾಗಿದ್ದೇನೋ ಸರಿ, ಜಾತಿ ರಾಜಕಾರಣ, ಜಾತಿ ಚಳವಳಿ, ವಿದ್ಯಾರ್ಥಿಗಳ ಶೋಷಣೆಯ ಕೇಂದ್ರವಾಗಿರುವ ಸರಕಾರಿ ವಿವಿಗಳ ಸ್ನಾತ್ತಕೋತ್ತರ ಕೇಂದ್ರಗಳ ಕೊಳೆ ತೊಳೆಯುವುದು ಯಾವಾಗ ಸಿಬಲ್?
ಈ ಬಗ್ಗೆಯೂ ಆದಷ್ಟು ಬೇಗ ಯೋಚಿಸಿ…
Anyway, Kudos to Kapil Sibal!

- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ