ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 9, 2013

ಹೆತ್ತು-ಹೊತ್ತವರಿಗೆ ಕೊಡುವ ಬಳುವಳಿ ಇದೇನಾ?

ಅಮ್ಮಾ ನಿನ್ನ ಎದೆಯಾಳದಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳ ಬಳ್ಳಿ-
ಒಲವೂಡುತ್ತಿರುವ ತಾಯೆ
ಬಿಡದ ಬುವಿಯ ಮಾಯೆ…
ಆ ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ತಮ್ಮ ಕವಿತೆಯೊಂದರಲ್ಲಿ ಈ ರೀತಿ ಹಿಡಿದಿಟ್ಟಿದ್ದಾರೆ. ಅಮ್ಮಾ…  ಅದು ಹೆಣ್ಣಿರಲಿ, ಗಂಡಾಗಿರಲಿ, ಒಂದು ಮಗು ಜಾರಿ ಬಿದ್ದಾಗ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಇದೆಯಲ್ಲಾ ಅದೇ ‘ಅಮ್ಮಾ…’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ ಎಂದು ಬಹಳ ಅರ್ಥಪೂರ್ಣವಾಗಿ ಬರೆಯುತ್ತಾರೆ.
ಮಗುವಿನ ಆ ಧ್ವನಿ ಕೇಳಿದ ಕೂಡಲೇ ಅದೆಲ್ಲಿದ್ದರೂ ಅಮ್ಮ ಓಡಿ ಬರುತ್ತಾಳೆ, ‘ಅಯ್ಯೋ ಮಗನೇ ಬಿದ್ದಾ…’, ‘ಮಗಳೇ ಪೆಟ್ಟಾಯ್ತಾ…’ ಅಂತ ಎತ್ತಿ ಎದೆಗವುಚಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಅದೆಂಥ ಆಪ್ತತೆ, ಭದ್ರತೆ, ನೋವು ಮರೆಸುವ ಶಕ್ತಿ ಇದೆಯಲ್ಲವೆ? ಇನ್ನು ಕಣ್ಣಲ್ಲೇ ಹೆದರಿಸುವ, ಮಾತಲ್ಲೇ ಗದರಿಸುವ ಅಪ್ಪನಾದರೂ ಸರಿ, ತನ್ನ ಮಗು ಜಾರಿ ಬಿದ್ದಾಗ ಓಡಿ ಬಂದು ಮೇಲೆತ್ತಿ ಮುದ್ದಾಡುತ್ತಾನೆ, ಮುತ್ತಿಟ್ಟು ಕಣ್ಣೀರೊರೆಸುತ್ತಾನೆ. ಮಗುವಿನ ಚೇಷ್ಟೆ ಮೀತಿಮೀರಿದಾಗ, ಹಠ ಸಹನೆಯ ಎಲ್ಲೆ ದಾಟಿದಾಗ ಪಟ್ಟನೇ ಪೆಟ್ಟು ಕೊಟ್ಟು ಗದರಿಸಿದರೂ, ಮನದೊಳಗೆ ಮಗುವಿಗೆ ಹೊಡೆದ ತನ್ನ ಕೈಗೇ ಹಿಡಿಶಾಪ ಹಾಕಿಕೊಳ್ಳುತ್ತಾನೆ. ಅವನೆಂತಹ ಕಟುಕನಾಗಿದ್ದರೂ ಮಕ್ಕಳ ವಿಷಯದಲ್ಲಿ ಎಲ್ಲ ಅಪ್ಪ-ಅಮ್ಮಂದಿರೂ ಮೃದುವಾಗಿಯೇ ಇರುತ್ತಾರೆ. ನನಗಿಂತಲೂ ನನ್ನ ಮಕ್ಕಳು ದೊಡ್ಡ ಹುದ್ದೆಗೇರಬೇಕು, ತಾನು ದಾರಿತಪ್ಪಿದ್ದರೂ ನನ್ನ ಮಗ, ಮಗಳು ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂದೇ ಬಯಸುತ್ತಾನೆ.
ಇಂತಹ ನಿಸ್ವಾರ್ಥ ಪ್ರೀತಿಯನ್ನು ಧಾರೆ ಎರೆಯುವ ಅಪ್ಪ-ಅಮ್ಮ ನಿಗೆ ರೆಕ್ಕೆಪುಕ್ಕ ಬಲಿತ ಮಕ್ಕಳ ಮೇಲೆ ಯಾವ ಹಕ್ಕೂ ಇರುವುದಿಲ್ಲವೆ? ಒಳ್ಳೆಯ ಸ್ಕೂಲೇ ಬೇಕು ಎಂದು ಹುಡುಕಿ, ಫೀ ಕಟ್ಟಿ ಬದುಕಿಗೆ ದಿಕ್ಕು ತೋರುವ ಅಪ್ಪ, ನಮ್ಮ ಯೂನಿಫಾರ್ಮನ್ನು ತೊಳೆದು, ಶುಭ್ರಗೊಳಿಸಿ, ಇಸ್ತ್ರಿ ಹಾಕಿ, ಬಸ್‌ವರೆಗೂ ಬಂದು ಮೆಟ್ಟಿಲು ಹತ್ತಿಸಿ ಹೋಗುವ, ಸಂಜೆ ಸ್ಕೂಲ್ ಬಸ್‌ಗಾಗಿ ದಾರಿ ಕಾಯುವ ಅಮ್ಮನಿಗೆ ನಮ್ಮ ಮೇಲೆ ಯಾವ ಅಧಿಕಾರವೂ ಇಲ್ಲವಾ? ಮೈ ನೆರೆದು, 18 ತುಂಬಿದ ಕೂಡಲೇ ಅಪ್ಪ-ಅಮ್ಮ ಕೊಟ್ಟಿದ್ದೂ, ಕೊಡುತ್ತಿರುವುದೂ ಪ್ರೀತಿಯೇ ಎಂದು ಏಕೆ ನಮಗನಿಸುವುದಿಲ್ಲ? ನೆಲದಲ್ಲಿ ತೆವಳುವಾಗ ನಡಿಗೆಯನ್ನು ಕಲಿಸುವ, ಅಂಬೆಗಾಲಿಡುವಾಗ ಕೈ ಹಿಡಿದು ಮುನ್ನಡೆಸುವ, ಬಿದ್ದಾಗ ಎತ್ತಿ ಸಾವರಿಸುವ ಅಪ್ಪ-ಅಮ್ಮ, ಇಚ್ಛಿಸಿದವನನ್ನು ವರಿಸುವ ಮದುವೆಯೆಂಬ ನಿರ್ಧಾರದ ಸಂದರ್ಭದಲ್ಲಿ ಏಕೆ ಅಪಥ್ಯವಾಗಿ ಬಿಡುತ್ತಾರೆ? ನಮ್ಮ ಮಕ್ಕಳು ಎಡವಬಾರದು ಎಂಬ ಕಾರಣಕ್ಕೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ, ಸಲಹೆ, ಎಚ್ಚರಿಕೆ ಕೊಡುತ್ತಿದ್ದಾರೆ ಎಂಬ ಸುಪ್ತ ಸಂದೇಶ, ಕಾಳಜಿ ಅವರ ಮಾತಿನಲ್ಲಿದೆ ಎಂದು ಏಕನಿಸು ವುದಿಲ್ಲ?
“ಮುಂದೆ ನನ್ನ ಲೈಫ್ ಲೀಡ್ ಮಾಡುವುದಕ್ಕೆ ನನ್ನ ಅಪ್ಪ-ಅಮ್ಮನಿಂದ ಯಾವ ತೊಂದರೆಯೂ ಬರದಿದ್ದರೆ ಸಾಕು, ನನ್ನ ಪೇರೆಂಟ್ಸನ್ನು ಕೇಳುವುದಿಷ್ಟೇ”
ಹಾಗಂತ ಜನವರಿ 22ರಂದು ಟಿವಿ ಚಾನೆಲ್ಲೊಂದರಲ್ಲಿ ಪ್ರಸಾರ ವಾದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಅಶ್ವಿನಿ ಹೇಳುತ್ತಿದ್ದರೆ ಆಕೆಯನ್ನು ಹೆತ್ತು-ಹೊತ್ತ ಅಪ್ಪ-ಅಮ್ಮನ ಗತಿಯೇನಾಗಿರಬೇಕು ಹೇಳಿ? ಯಾವ ಪೋಷಕರು ತಾನೇ ತಮ್ಮ ಕರುಳ ಕುಡಿಯ ಅಧಃಪತನವನ್ನು ಬಯಸುತ್ತಾರೆ?
ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದ ವೈ.ಎಸ್. ಶ್ರೀನಿವಾಸ್ ಹಾಗೂ ಸರಸ್ವತಿ ದಂಪತಿಯ ಪುತ್ರಿಯೇ ಅಶ್ವಿನಿ. ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿಯಲ್ಲಿ ಓದುತ್ತಿದ್ದಳು. ಸ್ವಲ್ಪ ಮಾನಸಿಕ ಸಮಸ್ಯೆ ಹೊಂದಿದ್ದ ಆಕೆಯನ್ನು ಸಂಬಂಧಿಕರೊಬ್ಬರ ಮನೆಯಲ್ಲಿಡಲಾಗಿತ್ತು. ಚಪ್ಪಲಿ ಆಂಗಡಿಯ ಇರ್ಫಾನ್ ಪರಿಚಯ ವಾಗಿದ್ದು ಆಗಲೇ. ಪರಿಚಯ ಪ್ರೀತಿಗೆ ತೆರಳಿತು. ಕೊನೆಗೊಂದು ದಿನ ಮನೆಯವರಿಗೆ ತಿಳಿದು ತೀವ್ರ ವಿರೋಧವೂ ವ್ಯಕ್ತವಾಯಿತು. ಒಂದು ದಿನ ಇದ್ದಕ್ಕಿದ್ದಂತೆಯೇ ಅಶ್ವಿನಿ ನಾಪತ್ತೆಯಾದಳು. ಆಕೆಯನ್ನು ಅಪಹರಿಸಲಾಗಿದೆ, ಹುಡುಕಿಕೊಡಿ ಎಂದು ಶ್ರೀನಿವಾಸ್ ರಾಜ್ಯ ಹೈಕೋರ್ಟ್ ಮೊರೆ ಹೋದರು. ಅದುವರೆಗೂ ಎಲ್ಲಿಗೆ ಹೋಗಿದ್ದಾರೆ ಎಂಬ ಸುಳಿವೇ ಇರಲಿಲ್ಲ. ಯಾವಾಗ ‘ಹೇಬಿಯಸ್ ಕಾರ್ಪಸ್’ ಕೇಸು ಹಾಕಿದರೋ, ‘ಹಾಜರುಪಡಿಸಬೇಕು’ ಎಂದು ಕೋರ್ಟ್ ತಾಕೀತು ಹಾಕಿತೋ, ಜನವರಿ ೨೦ರಂದು ನಡೆದ ವಿಚಾರಣೆ ವೇಳೆ ಅಶ್ವಿನಿ-ಇರ್ಫಾನ್ ಅದೆಲ್ಲಿಂದಲೋ ಉದುರಿ ಕೆಳಗೆ ಬಂದವರಂತೆ ಕೋರ್ಟ್ ಮುಂದೆ ಪ್ರತ್ಯಕ್ಷರಾದರು. ‘ನಾವಿಬ್ಬರೂ ಪರಸ್ಪರ ಪ್ರೀತಿಸಿ ಸ್ವಯಿಚ್ಛೆಯಿಂದ ಮದುವೆಯಾಗಿದ್ದೇವೆ. ನನಗೆ ಯಾವ ಮಾನಸಿಕ ಸಮಸ್ಯೆಯೂ ಇಲ್ಲ” ಎಂದಳು ಅಶ್ವಿನಿ. ಆಕೆಯ ಪ್ರತಿಪಾದನೆಗೆ ಮನ್ನಣೆ ನೀಡಿದ ಹೈಕೋರ್ಟ್, “ಅಶ್ವಿನಿ ಹೊಸ ಬದುಕು ಆರಂಭಿಸಲಿದ್ದಾಳೆ. ಲವ್ ಜಿಹಾದ್ ಎನ್ನುವ ಅರ್ಜಿದಾರರ ವಾದ ಸರಿಯಲ್ಲ. ಇಂತಹ ಮಾನಸಿಕ ಸಮಸ್ಯೆಗೆ ಸಂಬಂಧಿಸಿದಂತೆ ಪೋಷಕರಿಗೇ ಚಿಕಿತ್ಸೆಯ ಅಗತ್ಯವಿದೆ” ಎಂದು ತೀರ್ಪು ನೀಡಿತು.
ಇಂತಹ ಮಾತುಗಳನ್ನು ಕೇಳಿಸಿಕೊಳ್ಳಲು ಯಾರಾದರೂ ಮಕ್ಕಳನ್ನು ಹಡೆದಿರುತ್ತಾರೆಯೇ? ಅವಳ ಅಪ್ಪ-ಅಮ್ಮ ದೂರು ಕೊಟ್ಟು, ಕೋರ್ಟ್ ಮೆಟ್ಟಿಲು ಹತ್ತದಿದ್ದರೆ ಮಗಳು ಬದುಕಿ ದ್ದಾಳೋ, ಸತ್ತಿದ್ದಾಳೋ ಎಂಬ ಸಂಗತಿಯೂ ಗೊತ್ತಾಗುತ್ತಿರಲಿಲ್ಲ, ಮಗಳ ಸುರಕ್ಷತೆ ಬಗ್ಗೆ ಅಪ್ಪ-ಅಮ್ಮನಿಗಿರುವ ಆತಂಕ, ಅದರ ಹಿಂದೆ ಇರುವ ಪ್ರೀತಿ, ಕಾಳಜಿ ಓಡಿ ಹೋಗುವ ಹುಡುಗಿಯರಿಗಾಗಲಿ, ಈ ಡೋಂಗಿ ಪ್ರೀತಿ-ಪ್ರೇಮ ಪ್ರತಿಪಾದಕರಿಗೇಕೆ ಅರ್ಥವಾಗುವುದಿಲ್ಲ?
ಖಂಡಿತ ಅದು ಲವ್ವೂ ಅಲ್ಲ, ಜಿಹಾದೂ ಅಲ್ಲ.
ಅಶ್ವಿನಿಯೇ ಹೇಳಿದಂತೆ ಕಳೆದ ಎರಡು ವರ್ಷಗಳಿಂದ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಆಕೆಗೀಗ 20 ವರ್ಷ ತುಂಬಿದೆ. ಅಂದರೆ ಪ್ರೇಮಕಥನ ಆರಂಭವಾದಾಗ ಆಕೆಗೆ  18 ವರ್ಷ.  ವಯಸ್ಸಿನ ಅಂತರ ಪ್ರೀತಿಗೆ ಅಡ್ಡವಾಗುವುದಿಲ್ಲ ಎಂಬುದು ನಿಜವಾಗಿದ್ದರೂ 17, 18ರಂಥ ಅಪ್ರಾಪ್ತ ವಯಸ್ಸಿನಲ್ಲಿ ಆರಂಭವಾಗುವ ಸೆಳೆತವನ್ನು ನೈಜ ಪ್ರೀತಿ ಎನ್ನುವುದಕ್ಕಾಗುತ್ತದೆಯೇ? ಅಪ್ರಾಪ್ತ ವಯಸ್ಸು, ಅಪ್ರಬುದ್ಧ ನಿರ್ಧಾರಗಳು ಎಷ್ಟು ದಿನ ಎರಡು ಜೀವಗಳನ್ನು ಹಿಡಿದಿಡಲು ಸಾಧ್ಯ? ದೈಹಿಕ ಕಾಮನೆಗಳು ಮೂಡುವ ಆ ವಯಸ್ಸಿನಲ್ಲಿ ಹಲವಾರು ಪ್ರಚೋದನೆಗಳಿಗೆ ಒಳಗಾಗುವುದು, ಹಿಂದೆ-ಮುಂದೆ ಯೋಚನೆ ಮಾಡದೆ ಯಾರನ್ನೋ ಇಷ್ಟಪಡುವುದು ಸಹಜವೇ. Love is nothing but deep understanding ಎನ್ನುತ್ತಾನೆ ಓಶೋ. ಹದಿನಾರು, ಹದಿನೇಳರಲ್ಲಿ ಅರಳುವ ಪ್ರೀತಿ, ಹದಿನೆಂಟು, ಹತ್ತೊಂಬತ್ತರಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಅದ್ಯಾವ Deep understanding  ಇರಲು ಸಾಧ್ಯ?
ಪ್ರೀತಿಗೆ ಜಾತಿ-ಧರ್ಮ, ಅಂತಸ್ತು ಯಾವತ್ತೂ ಅಡ್ಡಿಯಲ್ಲ, ಅಡ್ಡಿಯಾಗಲೂಬಾರದು. ಇರ್ಫಾನ್‌ನನ್ನು ಅಶ್ವಿನಿ ಪ್ರೀತಿಸಿದ್ದನ್ನೂ ತಪ್ಪು ಎನ್ನಲಾಗದು. ಅಷ್ಟಕ್ಕೂ ಪ್ರೀತಿ ಅನ್ನುವುದಕ್ಕೆ ಬಹಳ Dimensionಗಳಿವೆ ಬಿಡಿ! ಈ ಜನ್ಮ ಗೌರಿಗಾಗಿ ಎನ್ನುವ ಶಾರುಖ್ ಖಾನ್ ಒಂದು ಕಡೆ ಇದ್ದರೆ, ಪಕ್ಕದ ಮನೆಯ ರೀನಾ ದತ್ತಳನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವ ಆಮೀರ್ ಖಾನ್, ೧೫ ವರ್ಷ ಕಳೆದ ಮೇಲೆ ಮತ್ತೊಬ್ಬಳನ್ನು (ಕಿರಣ್ ರಾವ್) ಪ್ರೀತಿಸಿ ಮದುವೆಯಾದ ಕಥೆಯೂ ನಮ್ಮ ಕಣ್ಣಮುಂದಿದೆ! ಪ್ರೀತಿ ಸ್ಥಿರವೋ, ಅಸ್ಥಿರವೋ ಎಂಬುದಕ್ಕೆ ಕಾಲವೇ ಉತ್ತರ ನೀಡಲು ಸಾಧ್ಯ. ಆದರೆ ಮದುವೆಯೆಂಬ ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಸ್ವಲ್ಪವಾದರೂ ಪ್ರಬುದ್ಧತೆ ಬೇಕಲ್ಲವೆ? ಅಶ್ವಿನಿ ಪ್ರಕರಣದಲ್ಲಿ ಪ್ರಬುದ್ಧತೆಯ ಕೊರತೆಯೇ ಎದ್ದು ಕಾಣುತ್ತಿದೆ. ಜಾತಿ-ಧರ್ಮ ಮೀರಿ ಪ್ರೀತಿಸುವುದು ತಪ್ಪಲ್ಲ. ಹಾಗಂತ ಪ್ರೀತಿ ಎಂಬುದು ಹುಚ್ಚಾಟವಾಗಬಾರದು. ಅದು ಹೆಣ್ಣಿರಲಿ, ಗಂಡಿರಲಿ 18 ತುಂಬಿದ ಕೂಡಲೇ ಸ್ವತಂತ್ರರು ಎಂಬುದೂ ಸರಿ. ಆದರೆ ನಿಜವಾಗಿ ನೀವು ಸ್ವತಂತ್ರರಾಗುವುದು ಮೈ ನೆರೆತಾಗಲೂ ಅಲ್ಲ, 18 ತುಂಬಿದಾಗಲೂ ಅಲ್ಲ. ಪ್ರೀತಿಯ ಜತೆಜತೆಗೇ ಪ್ರೀತಿಗಿಂತ ಓದಿಗೆ ಹೆಚ್ಚು ಆದ್ಯತೆ ಕೊಟ್ಟು, ವ್ಯಾಸಂಗ ಪೂರೈಸಿ, ಉದ್ಯೋಗಕ್ಕೆ ಸೇರಿ, ತನ್ನ ಕಾಲಮೇಲೆ ತಾನು ನಿಂತುಕೊಂಡ ನಂತರ ಮಾತ್ರ ಗಂಡು-ಹೆಣ್ಣು ಸ್ವತಂತ್ರರಾಗಲು ಸಾಧ್ಯ. ಆ ವೇಳೆಗೆ ವಯಸ್ಸಿನ ಕಾಮನೆಗಳ ತೀವ್ರತೆ ಕಡಿಮೆಯಾಗಿ, ಆವೇಶ ಕುಂದಿ, ಮನಸ್ಸು ಸ್ಥಿರಗೊಂಡು, ಬುದ್ಧಿ ವಿಕಾಸವಾಗಿ ಜೀವನ ಒಂದು ಘಟ್ಟಕ್ಕೆ ಬಂದು ತಲುಪಿರುತ್ತದೆ. ಒಂದು ವೇಳೆ, ಅಶ್ವಿನಿ ತನ್ನ ವ್ಯಾಸಂಗ ಪೂರೈಸಿ, ತನ್ನ ಕಾಲಮೇಲೆ ತಾನು ನಿಂತುಕೊಂಡ ಮೇಲೆ, ಇಂತಹವನನ್ನು ತಾನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರಿಗೆ ತಿಳಿಸಿದ್ದರೆ ಒಪ್ಪಬಹುದಿತ್ತು. ತನಗೆ ಅನುರೂಪನಾದ, ತಕ್ಕನಾದ ಜೀವನ ಸಂಗಾತಿಯನ್ನು ಅಥವಾ prospective partnerನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಹುಡುಗಿಗೂ ಇದೆ. ತಾನು ಎಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ, ಏಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಪೋಷಕರಿಗೆ ಮನವರಿಕೆಯನ್ನೇಕೆ ಮಾಡಿಕೊಡಬಾರದು? ಆಗಲೂ ಪೋಷಕರು ವಿರೋಧಿಸಿದ್ದರೆ, ಪ್ರೀತಿಗೆ ಅಡ್ಡವಾಗಿದ್ದರೆ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಅದು ಒಪ್ಪುವಂತಹ ಕ್ರಮವಾಗಿರುತ್ತಿತ್ತು. (ಏಕೆಂದರೆ ಬಹಳಷ್ಟು ಸಂದರ್ಭದಲ್ಲಿ  ಪೋಷಕರೂ ಕೂಡ ತಿಳಿಗೇಡಿಗಳಂತೆ ವರ್ತಿಸುವುದುಂಟು). ಪಿಯುಸಿಯಲ್ಲಿದ್ದಾಗಲೇ ಫೇಲಾಗಿದ್ದ ಅಶ್ವಿನಿ, ನಂತರ ಬಿಎಸ್ಸಿಯನ್ನು ಅರ್ಧಕ್ಕೆ ಬಿಟ್ಟು, ಅಪ್ರಾಪ್ತ ವಯಸ್ಸಿನಲ್ಲಿ ಮೊಳಕೆಯೊಡೆದ ಪ್ರೀತಿಗಾಗಿ ಅಪ್ಪ-ಅಮ್ಮನ್ನು ಬೀದಿಗೆ ತಂದು ನಿಲ್ಲಿಸಿದ್ದು ತಪ್ಪಲ್ಲವೆ? ಜನ್ಮ ನೀಡಿದವರ ಮಾನಮರ್ಯಾದೆಯನ್ನು ರಸ್ತೆಯಲ್ಲಿ ಹರಾಜು ಹಾಕುವುದು ಎಷ್ಟು ಸರಿ? ಇದನ್ನು ಪ್ರೀತಿ ಅಂತೀರೋ, ಹುಚ್ಚಾಟ ಅಂತೀರೋ? ಪ್ರೀತಿಗೆ ಅಂತಸ್ತು ಅಡ್ಡಿಯಾಗಬಾರದು. ಹಾಗಂತ ಯಾವನೋ ೭ ತರಗತಿ ಕೂಡ ಪಾಸು ಮಾಡದ ಚಪ್ಪಲಿ ಅಂಗಡಿಯವನನ್ನು ಕಟ್ಟಿಕೊಳ್ಳು ವುದಕ್ಕಾಗುತ್ತಾ? ಪ್ರೀತಿಗೆ ಯಾವ ಜಾತಿ-ಧರ್ಮದ ತಾರತಮ್ಯ ಗಳಿಲ್ಲದಿದ್ದರೂ ‘ಕಾರಣ’ವಾದರೂ ಬೇಕಲ್ಲವೆ?
“ಅಶ್ವಿನಿ ಹಾಗೂ ಇರ್ಫಾನ್ ಮದುವೆಗೆ ನಾನು ಸಾಕ್ಷಿಯಾಗಿ ದ್ದೇನೆ. ನಾನು ಮಠ ಹಾಗೂ ಮದರಸಾ ನಡೆಸುತ್ತಿಲ್ಲ. ಪ್ರೀತಿಯನ್ನು ಜಾತಿಯಲ್ಲಿ ಅಳೆದು ನ್ಯಾಯಾಂಗಕ್ಕೆ ಬರುವ ಕೆಟ್ಟ ಪ್ರವೃತ್ತಿಯನ್ನು ಬಿಡಬೇಕಿದೆ” ಎಂದು ಕೆಲವರು ಟಿವಿ ಕ್ಯಾಮೆರಾಗಳ ಮುಂದೆ ದೊಡ್ಡ ಪ್ರೇಮ ಪೂಜಾರಿಯಂತೆ ಪೋಸು ಕೊಟ್ಟರು. ಒಂದು ವೇಳೆ, ಅವರ ಮಗಳು ಮಟನ್‌ಸ್ಟಾಲ್ ರಫೀಕ್‌ನನ್ನೋ ಅಥವಾ ಪಂಕ್ಚರ್ ಅಂಗಡಿಯ ಮುಬಾರಕ್‌ನನ್ನೋ ಪ್ರೀತಿಸಿ, ಓಡಿ ಹೋಗಿದ್ದರೆ ಹೀಗೆಯೇ ಹೇಳುತ್ತಿದ್ದರೆ? ಅವರಂತೆಯೇ ‘ನಾನು ಅಪ್ಪನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟೆ’ ಎಂದು ಬೇರೆ ಯಾರಾದರೂ ಹೇಳಿದ್ದರೆ ಹೇಗಾಗಿರುತ್ತಿತ್ತು? ಇರ್ಫಾನ್‌ನಂಥ ಅನ್‌ಪಡ್‌ನ ಹಿಂದೆ ಓಡಿಹೋದ ಮಗಳನ್ನು ಹೆತ್ತ ಆ ತಂದೆ-ತಾಯಿಯ ನೋವೇಕೆ ಯಾರಿಗೂ ಅರ್ಥವಾಗುವುದಿಲ್ಲ? ಕೆಲವರು ತಮ್ಮ ಸಿಗರೇಟು ಹಚ್ಚಿಕೊಳ್ಳುವುದಕ್ಕೂ ಕಂಡವರ ಮನೆಗೆ ಬೆಂಕಿ ಇಡುತ್ತಾರೆ. ಆದರೆ ಹೆತ್ತವರ ನೋವು, ಸಾಮಾಜಿಕ ಅವಮಾನ ಅವರಿಗಷ್ಟೇ ಅರ್ಥವಾಗುತ್ತದೆ. ಅದಿರಲಿ, ಅವರ ಪ್ರೀತಿ ಜಾತಿ-ಧರ್ಮವನ್ನು ಮೀರಿದ್ದು ಎಂದಾದ ಮೇಲೆ ಮತಾಂತರದ ಪ್ರಶ್ನೆ ಅದೆಲ್ಲಿಂದ ಬಂತು? ಮದುವೆಯ ಸಂದರ್ಭದಲ್ಲಿ ಏಕೆ ಧರ್ಮ ಅಡ್ಡ ಬಂದು, ಮತಾಂತರಗೊಳ್ಳಬೇಕು? ಶಾರುಖ್ ಖಾನ್ ಗೌರಿಯನ್ನು ಮದುವೆಯಾಗುವಾಗ, ಆಮೀರ್ ಖಾನ್ ಕಿರಣ್‌ರಾವ್ ಮದುವೆಯಾಗುವಾಗ ಅಡ್ಡಬಾರದ ಇಸ್ಲಾಂ, ಚಪ್ಪಲಿ ಅಂಗಡಿಯ ಇರ್ಫಾನ್ ಅಶ್ವಿನಿಯನ್ನು ಮದುವೆಯಾಗುವಾಗ ಏಕೆ ದೊಡ್ಡ ತಡೆಗೋಡೆಯಾಗುತ್ತದೆ? ಅದಿರಲಿ, ಹಿಂದೂ ಹುಡುಗಿಯರೇ ಏಕೆ ಇಸ್ಲಾಂಗೆ ಮತಾಂತರಗೊಳ್ಳಬೇಕು? ಅವನ ಪ್ರೀತಿ ಅಷ್ಟು ಅಚಲ, ಅಮರ ಎನ್ನುವುದಾಗಿದ್ದರೆ ಇರ್ಫಾನ್‌ನೇ ಹಿಂದೂ ಧರ್ಮವನ್ನು ಸೇರಬಹುದಿತ್ತಲ್ಲವೆ? ಅಥವಾ ಅವಳು ಹಿಂದೂವಾಗಿಯೇ, ಅವನು ಮುಸ್ಲಿಂ ಆಗಿಯೇ ಉಳಿಯಬಹುದಿತ್ತಲ್ಲವೆ? ‘ವಿಶೇಷ ವಿವಾಹ ಕಾಯಿದೆ’ಯಲ್ಲಿ ಅಂಥದ್ದೊಂದು ಅವಕಾಶವೂ ಇದೆ. ಗೋವಾದಲ್ಲಂತೂ ಪೋರ್ಚುಗೀಸರ ಕಾಲದಿಂದಲೂ ಆ ಕಾಯಿದೆ ಇದೆ. ಸಂಜಯ್ ದತ್-ಮಾನ್ಯತಾ ಮದುವೆಯಾಗಿದ್ದೂ ಆ ಕಾಯಿದೆಯ ಅಡಿಯೇ. ಅಂದಮಾತ್ರಕ್ಕೆ ಮತಾಂತರಗೊಳ್ಳುವುದು ತಪ್ಪೆಂದೇನೂ ಅಲ್ಲ. ಅಂಬೇಡ್ಕರ್ ಕೂಡ ಕೊನೆ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಒಬ್ಬ ವ್ಯಕ್ತಿ ಏಕೆ ಮತಾಂತರಗೊಳ್ಳುತ್ತಾನೆ ಹೇಳಿ? ವಯಸ್ಸಿನ ಜತೆ ಬರುವ ಪ್ರಬುದ್ಧತೆ, ಕಾಲಾಂತರದಲ್ಲಿ ಆಗುವ ಬುದ್ಧಿ ವಿಕಾಸ, ಸ್ವಧರ್ಮದ ಬಗ್ಗೆ ಮೊಳಕೆಯೊಡೆಯುವ ಅನುಮಾನಗಳು ಧಾರ್ಮಿಕ ಜಿeಸೆಗೆ ಕಾರಣವಾಗುತ್ತವೆ, ಆಗ ಕೆಲವೊಬ್ಬರು ಮತಾಂತರಗೊಳ್ಳುತ್ತಾರೆ. ಆದರೆ ಅಶ್ವಿನಿ ಮತಾಂತರಗೊಂಡಿದ್ದರ ಹಿಂದೆ ಏನಿದೆ? ಅದು ‘ಲವ್ ಜಿಹಾದ್’ ಅಲ್ಲದಿದ್ದರೂ ಒಂದು ಸಮುದಾಯದ ಜಿಹಾದಿ ಮನಸ್ಥಿತಿಯನ್ನು ಖಂಡಿತ ಕಾಣಬಹುದಾಗಿದೆ. ಈ ಹಿಂದೆಯೂ ಮುಸ್ಲಿಮರು ಹಿಂದೂ ಹುಡುಗಿಯರನ್ನು ವಿವಾಹವಾದ, ಯಾವ ವಿರೋಧವೂ ವ್ಯಕ್ತವಾಗದ, ಪೋಷಕರು ಅವಮಾನ ಎಂದು ಭಾವಿಸದ ಪ್ರಕರಣಗಳಿವೆ. ಅಷ್ಟಕ್ಕೂ ರತ್ನಾ ಪಾಠಕ್, ನಾಸಿರುದ್ದೀನ್ ಶಾ ಅವರಂತಹ ಮಹಾನ್ ನಟನನ್ನು ಆಯ್ಕೆ ಮಾಡಿಕೊಂಡರು, ಗೌರಿ, ಶಾರುಖ್‌ನನ್ನು ವರಿಸಿದಳು, ಶುಭಲಕ್ಷ್ಮಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರ ಬಾಳ ಸಂಗಾತಿಯಾದರೇ ಹೊರತು ಯಾವುದೋ ಪಡಪೋಸಿಗಳನ್ನು ಕಟ್ಟಿಕೊಳ್ಳಲಿಲ್ಲ.
Love is blind ಎನ್ನುತ್ತಾರೆ ಕೆಲವರು. ಕೆಲವೊಮ್ಮೆ Lovers go blind. ಆಗ ಅಶ್ವಿನಿಯಂಥ ಪ್ರಕರಣಗಳು ಸಂಭವಿಸುತ್ತವೆ. ಹುಟ್ಟಿಸಿದ ತಪ್ಪಿಗೆ ಅಪ್ಪ-ಅಮ್ಮ ಸಮಾಜದ ಎದುರು ತಲೆತಗ್ಗಿಸು ವಂತಾಗುತ್ತದೆ.

- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ