ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 4, 2013

ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ, ಮರೆಯಲೂಬಾರದು

ಅದು 1928, ಅಕ್ಟೋಬರ್ 30.
ಸೈಮನ್ ಆಯೋಗ ಇಂಗ್ಲೆಂಡ್ನಿಂದ ಆಗಮಿಸಿತ್ತು, ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಸೈಮನ್ ಕಮಿಷನ್ನಿಗೆ ಕಪ್ಪು ಬಾವುಟ ತೋರಿಸುವ ಮತ್ತು ‘ವಾಪಸ್ಸು ಹೋಗಿ’ ಎಂದು ಘೋಷಣೆ ಹಾಕುವ ಯೋಜನೆ ಅದಾಗಿತ್ತು. ಸೈಮನ್ ವಿರೋಧಿ ಪ್ರದರ್ಶನದ ನಿರ್ಧಾರ ಆಗುತ್ತಿದ್ದಂತೆಯೇ ಲಾಲಾ ಲಜಪತ್ರಾಯರ ಮನೆಗೆ ಹೋಗಿ ಪ್ರತಿಭಟನೆಯ ನೇತೃತ್ವ ವಹಿಸುವಂತೆ ಅವರನ್ನು ಒಪ್ಪಿಸಿ ಬಂದಿದ್ದ ಯುವಕ ಮತ್ತಾರೂ ಅಲ್ಲ, ಭಗತ್ ಸಿಂಗ್!
ಒಂದು ದಿನ ಸಾಯಂಕಾಲ ವೀರಕಲಿಗಳ ಕಥೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದುವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಮಗ ಹೇಳಿದ- ‘ಅಪ್ಪಾ, ಈ ಗದ್ದೆಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೇ ಬಾಂಬ್ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ’!
ಅವನೇ ಭಗತ್ ಸಿಂಗ್.
ಅತ್ಯಂತ ಎಳೇ ವಯಸ್ಸಿನಲ್ಲೇ ಆತನನ್ನು ಅತಿಯಾಗಿ ಕಾಡಿದ್ದು 1919ರಲ್ಲಿ ಸಂಭವಿಸಿದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ. ಅಂದು ಸಾವಿರಾರು ಜನರು ಹತ್ಯೆಯಾಗಿರುವ ಸುದ್ದಿ ಎಲ್ಲೆಡೆಯೂ ಹಬ್ಬಿತ್ತು. ಶಾಲೆ ಬಿಟ್ಟ ಕೂಡಲೇ ತಂಗಿಯ ಕೈಗೆ ಬ್ಯಾಗ್ ಕೊಟ್ಟ ಭಗತ್, ಅದೆತ್ತಲೋ ಹೆಜ್ಜೆ ಹಾಕಿದ. ರಾತ್ರಿ ಮನೆಗೆ ಮರಳಿದಾಗ ಕೈಯಲ್ಲಿ ಇಂಕ್ ಬಾಟಲಿಯಿತ್ತು. ಅದರಲ್ಲಿ ಶಾಯಿಯ ಬದಲು ಮಣ್ಣು ತುಂಬಿತ್ತು. ಆ ಮಣ್ಣು ಮನೆಯ ಪೂಜಾ ಕೊಠಡಿ ಸೇರಿ ನಿತ್ಯ ಆರಾಧನೆಗೆ ಭಾಜನವಾಯಿತು. ಅಷ್ಟಕ್ಕೂ ಅದು ಜಲಿಯನ್ವಾಲಾಬಾಗ್ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ದೇಶವಾಸಿಗಳ ರಕ್ತದಿಂದ ತೊಯ್ದಿದ್ದ ಮಣ್ಣಾಗಿತ್ತು!
1922ರಲ್ಲಿ ಗೋರಕ್ಪುರ ಜಿಲ್ಲೆಯ ಚೌರಿಚೌರಾ ಎಂಬಲ್ಲಿ ಕಾಂಗ್ರೆಸ್ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಆದರೆ ಪೊಲೀಸರು ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದಾಗ ರೊಚ್ಚಿಗೆದ್ದ ಜನ, 22 ಪೊಲೀಸರನ್ನು ಠಾಣೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿದರು. ಮನನೊಂದ ಗಾಂಧೀಜಿ ದೇಶಾದ್ಯಂತ ನಡೆಯುತ್ತಿದ್ದ ‘ಅಸಹಕಾರ ಚಳವಳಿ’ಯಿಂದಲೇ ಹಿಂದೆ ಸರಿದರು. 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ಅಸಹಕಾರದಂಥ ಮಹತ್ವದ ಚಳವಳಿಯನ್ನೇ ಕೈಬಿಟ್ಟಿದ್ದು ಸರಿಯೆ? ತನ್ನ ಬಾಲ್ಯದ ಹೀರೋ ಕರ್ತಾರ್ ಸಿಂಗ್ನನ್ನು ಗಲ್ಲಿಗೇರಿಸಿದಾಗ ಕಾಂಗ್ರೆಸ್ಸಿಗರೇಕೆ ಧ್ವನಿಯೆತ್ತಲಿಲ್ಲ? ಪೊಲೀಸರನ್ನು ಕೊಂದಾಗ ಮಾತ್ರ ಅಹಿಂಸಾವಾದ ಜಾಗೃತವಾಗುವುದೇಕೆ? ಎಂಬ ಪ್ರಶ್ನೆಗಳು 15 ವರ್ಷದ ಭಗತ್ ಸಿಂಗ್ನನ್ನು ಕಾಡಲಾರಂಭಿಸಿದವು. ಅದರಲ್ಲೂ ಲಾಲಾಲಜಪತ್ ರಾಯ್ ಪ್ರಾರಂಭಿಸಿದ್ದ ಲಾಹೋರ್ನ ನ್ಯಾಷನಲ್ ಕಾಲೇಜು ಸೇರಿದ ನಂತರ ಭಗತ್ ಸಿಂಗ್ ಸಂಪೂರ್ಣವಾಗಿ ಬದಲಾದ. ಸೈಮನ್ ಆಯೋಗ ಲಾಹೋರ್ಗೆ ಬಂದಿಳಿದಿದ್ದು ಅದೇ ಸಂದರ್ಭದಲ್ಲಿ. ಲಾಹೋರ್ ರೈಲು ನಿಲ್ದಾಣದ ಮುಂದೆ ನೆರೆದಿದ್ದ ಅಪಾರ ಜನಸಂದಣಿಯನ್ನು ನೋಡಿ ಸೈಮನ್ ಎದೆಗುಂದಿತು. ಕ್ರಾಂತಿಕಾರಿ ತರುಣರು ಸೈಮನ್ ಹಾದುಹೋಗಬೇಕಿದ್ದ ಸ್ಥಳದಲ್ಲಿ ಹೇಗೆ ದೃಢವಾಗಿ ನಿಂತಿದ್ದರೆಂದರೆ ಅವನು ಆಕಡೆಯಿಂದ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ.  ಲಾಹೋರ್ನ ಪೊಲೀಸ್ ಸೂಪರಿಂಟೆಂಡೆಂಟ್ ಸ್ಕಾಟ್ ಇತರ ಆಫೀಸರ್ರೊಂದಿಗೆ ಸ್ಟೇಷನ್ನಿನಲ್ಲಿದ್ದ. ಎಲ್ಲಿಯವರೆಗೆ ಈ ಯುವಕರ ಗುಂಪು ಮತ್ತು ಲಾಲಾ ಲಜಪತ್ರಾಯ್ ಇಲ್ಲಿಂದ ದೂರವಾಗುವುದಿಲ್ಲವೋ ಅಲ್ಲಿಯವರೆಗೆ ಸೈಮನ್ ಕಮೀಷನ್ನ ಸದಸ್ಯರನ್ನು ಈ ಪ್ರದರ್ಶನಗಳ ತೀಕ್ಷ್ಣ ಹೊಡೆತಗಳಿಂದ ರಕ್ಷಿಸುವುದು ಅಸಾಧ್ಯ ಎಂದರಿತ ಸ್ಕಾಟ್. ಆ ಕಾರಣಕ್ಕಾಗಿಯೇ ತನ್ನ ಅತ್ಯಂತ ನಂಬಿಕಸ್ಥ ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ನನ್ನು ಜನಸಂದಣಿಯ ನಡುವೆ ಜಾಗ ತೆರವು ಮಾಡಿಕೊಡುವ ಕೆಲಸಕ್ಕೆ ನೇಮಿಸಿದ್ದ, ಅವಶ್ಯಕವೆನಿಸಿದರೆ ಲಾಠೀಛಾರ್ಜ್ಗೂ ಆದೇಶಿಸಿದ್ದ. ಪ್ರಾರಂಭದಲ್ಲಿ ಜನತೆಯ ಮೇಲೆ ಲಾಠೀಛಾರ್ಜು ನಡೆಯಿತು. ಯಾವುದೋ ಸಮಾರಂಭದ ಉತ್ಸಾಹದಲ್ಲಿ ಜನ ಗುಂಪು ಸೇರುವುದು ಒಂದು ವಿಷಯ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದು ಬೇರೆಯ ವಿಷಯವಾಗಿತ್ತು. ಪೊಲೀಸರ ಭಯಂಕರ ಅಮಾನುಷ ವರ್ತನೆಯಿಂದಾಗಿ ಜನತೆ ಹಿಮ್ಮೆಟ್ಟಲಾರಂಭಿಸಿತು. ಮತ್ತೆ ಸ್ವಲ್ಪ ಸಮಯದ ನಂತರ ಒಂದುಗೂಡಿತು. ಒಮ್ಮೆ ಒಟ್ಟಿಗೆ ಸೇರುವುದು ಮರುಕ್ಷಣ ಚದುರಿ ಹೋಗುವುದು ನಡೆದೇ ಇತ್ತು. ಕೆಲವರು ಅಲ್ಲಿ ಇಲ್ಲಿ ಗುಂಪುಗುಂಪಾಗಿ ನಿಂತಿದ್ದರು. ರಸ್ತೆ ತೆರೆದುಕೊಂಡಿತ್ತು. ಆದರೆ ಲಾಲಾ ಲಜಪತ್ರಾಯ್ ತಾವು ನಿಂತಿದ್ದ ಸ್ಥಳದಿಂದ ಕದಲದೆ ದೃಢವಾಗಿ ನಿಂತಿದ್ದರು. ಯುವಕರ ಗುಂಪು ತಾವಿದ್ದ ಸ್ಥಳಕ್ಕೆ ಅಂಟಿಕೊಂಡಿತ್ತು. ಕಿಶನ್ಸಿಂಹ ಹಾಗೂ ಭಗತ್ಸಿಂಗ್ ಅಂತಹ ಬಲ ನೀಡುತ್ತಿದ್ದರು.
ಆಗ ಸ್ಯಾಂಡರ್ಸ್ ದೊಡ್ಡ ದೊಣ್ಣೆ ಹಿಡಿದು ಮುಂದೆ ಬಂದು ವೇಗವಾಗಿ ಗುಂಪಿನ ಮೇಲೆ ಮುಗಿಬಿದ್ದ. ಸಾಕಷ್ಟು ಜನರಿಗೆ ಗಾಯಗಳಾದವು. ಸ್ಯಾಂಡರ್ಸ್ ಲಾಲಾ ಲಜಪತ್ರಾಯರನ್ನೂ ಬಿಡಲಿಲ್ಲ. ಭಗತ್ಸಿಂಗ್ ಮತ್ತು ಅವನ ಜತೆಗಾರರು ಎಷ್ಟೇ ಪ್ರಯತ್ನಿಸಿದರೂ ಅವನ ಆಕ್ರಮಣವನ್ನು ತಡೆಯಲಾಗಲಿಲ್ಲ. ಲಜಪತ್ರಾಯರ ಹೆಗಲಿಗೆ ಮತ್ತು ಎದೆಗೆ ಏಟುಗಳು ಬಿದ್ದವು. ವಯೋವೃದ್ಧ ಲಾಲಾ ಲಜಪತ್ ರಾಯ್ ಅವರ ಎದೆಗೆ ಲಾಠಿಯಿಂದ ಬಡಿದು ಪ್ರಾಣಾಂತಿಕವಾಗಿ ಗಾಯಗೊಳಿಸಿದ. ಅದೇ ದಿನ ಸಂಜೆ ಮೋರೀ ದರ್ವಾಜಾದ ಮೈದಾನದಲ್ಲಿ ಕಾಂಗ್ರೆಸಿಗರ ಆಹ್ವಾನದ ಮೇಲೆ ಸಾರ್ವಜನಿಕ ಸಭೆ ನಡೆಯಿತು. ಮಾತಿಗೆ ನಿಂತ ಲಾಲಾ ಲಜಪತ್ರಾಯ್ ಇಂಗ್ಲಿಷ್ನಲ್ಲಿ ‘I declare that the blows struck at me will be the last nails in the coffin of the British rule in India’ ಎಂದು ಗುಡುಗಿದರು.
ಆದರೂ….
ಪೊಲೀಸರ ಹೊಡೆತದಿಂದ ಕುಗ್ಗಿಹೋಗಿದ್ದ ಲಜಪತ್ರಾಯ್ 18 ದಿನಗಳ ಕಾಲ (1928, ನವೆಂಬರ್ 17) ನರಳಿ ನಮ್ಮನ್ನಗಲಿದರು. ಈ ಘಟನೆ ಭಗತ್ ಸಿಂಗ್ ಎಂಬ ಮಹಾನ್ ಕ್ರಾಂತಿಕಾರಿಯ ಉಗಮಕ್ಕೆ ಕಾರಣವಾಯಿತು. ಕೆರಳಿದ ಭಗತ್ ಸಿಂಗ್ ಮತ್ತು ರಾಜಗುರು 1928, ಡಿಸೆಂಬರ್ 17ರ ಸಾಯಂಕಾಲ 4 ಗಂಟೆ ಸಮಯದಲ್ಲಿ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು. ಆ ವೇಳೆಗಾಗಲೇ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ್ ಆಜಾದರ ಪರಿಚಯವಾಗಿತ್ತು. ಆಜಾದರ ಮಾರ್ಗದರ್ಶನದಲ್ಲಿ ಮತ್ತೊಂದು ಯೋಜನೆ ಸಿದ್ಧವಾಯಿತು. 1929, ಏಪ್ರಿಲ್ನಲ್ಲಿ ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮುಂದೆ ಬ್ರಿಟಿಷ್ ಸರ್ಕಾರ ಎರಡು ಮಸೂದೆಗಳನ್ನು ಮುಂದಿಡಲಿತ್ತು. ಆ ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂಬುದು ಗೊತ್ತಾಗಿತ್ತು. ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಕೂಡ ವಿರುದ್ಧವಾಗಿತ್ತು. ಹಾಗಾಗಿ ಮಸೂದೆಗಳು ಬಿದ್ದು ಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವೈಸರಾಯ್ ತನ್ನ ‘ವೀಟೋ ಪವರ್’ ಉಪಯೋಗಿಸಿ ಮಸೂದೆಗೆ ಅಂಗೀಕಾರ ನೀಡುವ ಅವಕಾಶವಿತ್ತ. ಇತ್ತ ಚಂದ್ರಶೇಖರ್ ಆಜಾದ್ ಯೋಜನೆಯೊಂದನ್ನು ರೂಪಿಸಿದ್ದರು. 1929, ಏಪ್ರಿಲ್ 8ರಂದು ಅಧಿವೇಶನ ಆರಂಭವಾಯಿತು. ಪನಾಮ ಹ್ಯಾಟ್ ಧರಿಸಿದ್ದ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ ಬಾಂಬ್ ಮತ್ತು ರಿವಾಲ್ವರ್ಗಳೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ನಿರೀಕ್ಷೆಯಂತೆಯೇ ಮತದಾನದ ವೇಳೆ ಎರಡೂ ಮಸೂದೆಗಳು ಬಿದ್ದು ಹೋದವು. ವೀಟೋ ಅಧಿಕಾರವನ್ನು ಬಳಸಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸುವುದಾಗಿ ವೈಸರಾಯ್ ಘೋಷಣೆ ಮಾಡಿದ್ದೂ ಆಯಿತು. ಆದರೆ ವೀಟೋ ಪ್ರಯೋಗಿಸುವ ಮೊದಲು ಸದನದೊಳಗೆ ಬಾಂಬ್ ಸ್ಫೋಟ, ಇದ್ದಕ್ಕಿದ್ದಂತೆಯೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ. ಜನಜಂಗುಳಿಯಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ವಿಚಾರಣೆ ಎದುರಿಸುವ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದುದ್ದಗಲಕ್ಕೂ ಪಸರಿಸುವ, ಸಾರುವ ಸಲುವಾಗಿ ಬಂಧಿತರಾದರು. 1930, ಅಕ್ಟೋಬರ್ 7ರಂದು ತೀರ್ಪು ಹೊರಬಿತ್ತು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ಗೆ ಗಲ್ಲುಶಿಕ್ಷೆ ನಿಗದಿಯಾಯಿತು.
ಈ ನಡುವೆ ಮಹಾತ್ಮ ಗಾಂಧೀಜಿ ದುಂಡುಮೇಜಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡಿಗೆ ಹೊರಟು ನಿಂತರು.
ಆ ವೇಳೆಗಾಗಲೇ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ರನ್ನು ಗಲ್ಲಿಗೇರಿಸುವ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹಣೆ ಆರಂಭವಾಗಿತ್ತು. ಗಲ್ಲುಶಿಕ್ಷೆಯನ್ನು ತೆಗೆದುಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ‘ಯುವ ವಾಹಿನಿ’, ‘ನೌಜವಾನ್ ಭಾರತ್ ಸಭಾ’ ಹಾಗೂ ಖ್ಯಾತ ಗಾಂಧೀವಾದಿ ಅರುಣಾ ಅಸಫ್ ಅಲಿ ಸೇರಿದಂತೆ ಇಡೀ ದೇಶವಾಸಿಗಳು ಒಕ್ಕೊರಲಿನಿಂದ ಮಹಾತ್ಮನಿಗೆ ಮನವಿ ಮಾಡಿದರು. ಇಂಗ್ಲೆಂಡ್ಗೆ ತೆರಳಿದ ಗಾಂಧೀಜಿ 1931, ಮಾರ್ಚ್ 5ರಂದು ಲಾರ್ಡ್ ಇರ್ವಿನ್ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. ಅದರೊಂದಿಗೆ ಕಾಂಗ್ರೆಸ್ ಅಸಹಕಾರ ಚಳವಳಿಯನ್ನು ಅಧಿಕೃತವಾಗಿ ಕೈಬಿಡಲು ಒಪ್ಪಿತು. ಕಾಂಗ್ರೆಸ್ಸಿಗರ ವಿರುದ್ಧ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲು ಬ್ರಿಟಿಷ್ ಆಡಳಿತವೂ ಸಮ್ಮತಿ ನೀಡಿತು.
ಆದರೆ…..
ಗಾಂಧೀಜಿಯವರು, ಭಗತ್ ಸಿಂಗ್ಗೆ ಮಾಫಿ ನೀಡುವ ವಿಚಾರ ಬಿಟ್ಟು, ಉಳಿದೆಲ್ಲ ವಿಷಯಗಳ ಬಗ್ಗೆಯೂ ಇರ್ವಿನ್ ಜತೆ ಚರ್ಚಿಸಿದ್ದರು! ಒಂದು ವೇಳೆ, ಅಸಹಕಾರ ಚಳವಳಿಯನ್ನು ಕೈಬಿಡಬೇಕಾದರೆ, ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಭಗತ್ ಸಿಂಗ್ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡಬೇಕೆಂದು ಗಾಂಧೀಜಿ ಏನಾದರೂ ಪೂರ್ವಷರತ್ತು ಹಾಕಿದ್ದರೆ, ಬ್ರಿಟಿಷರಿಗೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ. ಆದರೆ….
ಭಗತ್ನನ್ನು ಉಳಿಸಿಕೊಳ್ಳಲು ಬೇರಾವುದೇ ಮಾರ್ಗಗಳು ಉಳಿದಿರಲಿಲ್ಲ. 1931, ಮಾರ್ಚ್ 23ರಂದು ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೊದಲು ಸುಖದೇವ್, ನಂತರ ಭಗತ್ಸಿಂಗ್, ಕೊನೆಯವನಾಗಿ ರಾಜಗುರು ಮುಖಕ್ಕೆ ಕಪ್ಪುಬಟ್ಟೆ ತೊಡದೆ, ಕೈಗೆ ಕೋಳ ಹಾಕಿಸಿಕೊಳ್ಳದೆ ಕುಣಿಕೆಯನ್ನು ಚುಂಬಿಸಿ ನಗುತ್ತಲೇ ತಲೆಕೊಟ್ಟು ನಮ್ಮಿಂದ ದೂರವಾದರು.
ಹಾಗಾಗೆ ಈ ದೇಶ ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ, ಮರೆಯಲೂಬಾರದು ಅಲ್ಲವೇ?

-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ