ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 4, 2013

ಕಂತ್ರಿ ಕೆಲಸ ಮಾಡಿ ‘ಐ ಲವ್ ಮೈ ಕಂಟ್ರಿ’ ಎಂದರೆ ಕ್ಷಮಿಸಿ ಬಿಡಬೇಕಾ?

Should i marry every woman I sleep with?
‘ನನ್ನ ಪತ್ನಿಯನ್ನು ಮದುವೆಯಾಗುತ್ತೀಯಾ?’ ಎಂದು ಕವಾಸ್ ಮಾಣಿಕ್ಷಾ ನಾನಾವತಿ ಕೇಳಿದಾಗ ಪ್ರೇಮ್ ಭಗವಾನ್ ದಾಸ್ ಅಹುಜಾ ಹೇಳಿದ ಮಾತುಗಳಿವು. ಕವಾಸ್ ಮಾಣಿಕ್ಷಾ ನಾನಾವತಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದರು. ಹಾಗಾಗಿ ಕರ್ತವ್ಯದ ಸಲುವಾಗಿ ಸದಾ ಮನೆಯಿಂದ ದೂರವೇ ಇರುತ್ತಿದ್ದರು. ಈ ಮಧ್ಯೆ 1959, ಏಪ್ರಿಲ್ 27ರಂದು ಮನೆಗೆ ಮರಳಿದಾಗ ಪತ್ನಿ ಸಿಲ್ವಿಯಾ ಏಕೋ ತನ್ನಿಂದ ವಿಮುಖಳಾಗಿರುವುದನ್ನು ಗಮನಿಸುತ್ತಾರೆ. ಆಕೆ ಸಮೀಪದಲ್ಲೇ ಇದ್ದ ಸ್ಫುರದ್ರೂಪಿ ಪ್ಲೇ ಬಾಯ್ ಪ್ರೇಮ್ ಅಹುಜಾನ ಬಲೆಗೆ ಬಿದ್ದಿರುತ್ತಾಳೆ, ಆತನನ್ನು ಗಾಢವಾಗಿ ಪ್ರೀತಿಸುತ್ತಿರುತ್ತಾಳೆ. ಅದನ್ನು ಗಂಡನಿಗೆ ನೇರವಾಗಿಯೂ ಹೇಳಿ ಬಿಡುತ್ತಾಳೆ. ಎದೆ ಒಡೆದೇ ಹೋದರೂ ಸಾವರಿಸಿಕೊಂಡ ನಾನಾವತಿ ಕೇಳುತ್ತಾರೆ ‘ಆತ ನಿನ್ನನ್ನು ಮದುವೆಯಾಗುತ್ತಾನಾ?’. ಆದರೆ ಆಕೆಗೂ ಉತ್ತರ ಗೊತ್ತಿರಲಿಲ್ಲ, ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಮಧ್ಯಾಹ್ನ ಪತ್ನಿ ಮತ್ತು ಮಕ್ಕಳನ್ನು ಸಿನಿಮಾಕ್ಕೆ ಕಳುಹಿಸಿದ ನಾನಾವತಿ, ನೌಕಾಪಡೆಯ ಕೇಂದ್ರಕ್ಕೆ ಹೋಗಿ ತನ್ನ ಪಿಸ್ತೂಲ್ ಹಾಗೂ 6 ಗುಂಡುಗಳನ್ನು ತೆಗೆದುಕೊಂಡು ನೇರವಾಗಿ ಅಹುಜಾನ ಮನೆಗೆ ತೆರಳಿ, ‘ನನ್ನ ಪತ್ನಿಯನ್ನು ವಿವಾಹವಾಗಿ ನನ್ನ ಮೂವರು ಮಕ್ಕಳನ್ನು ಸ್ವೀಕರಿಸುತ್ತೀಯಾ?’ ಎಂದು ಕೇಳುತ್ತಾರೆ. ಅದಕ್ಕೆ ‘ನಾನು ಮಲಗಿದ ಮಹಿಳೆಯರನ್ನೆಲ್ಲ ಮದುವೆಯಾಗುವುದಕ್ಕಾಗುತ್ತಾ?!’ ಎಂದು ಆತ ಉಡಾಫೆಯಿಂದ ಉತ್ತರಿಸುತ್ತಾನೆ. ನಾನಾವತಿ ಪಿಸ್ತೂಲಿನಿಂದ ಮೂರು ಗುಂಡುಗಳು ಹಾರುತ್ತವೆ, ಪ್ರೇಮ್ ಅಹುಜಾ ನೆಲಕ್ಕುರುಳುತ್ತಾನೆ! 1961, ನವೆಂಬರ್ 24ರಂದು 34 ವರ್ಷದ ಕವಾಸ್ ಮಾಣಿಕ್ಷಾ ನಾನಾವತಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಅಲ್ಲಿಗೆ ಒಬ್ಬ ಪ್ರತಿಭಾವಂತ, ಕಾರ್ಯದಕ್ಷ ನೌಕಾ ಅಧಿಕಾರಿಯ ಬದುಕಿಗೆ ತೆರೆಬಿದ್ದಂತಾಗುತ್ತದೆ, ಸಂಸಾರ ಬಿರುಗಾಳಿಗೆ ಸಿಲುಕುತ್ತದೆ.
ಹಾಗಂತ ಕಥೆ ಮುಗಿಯಲಿಲ್ಲ!
ಇತ್ತ 1960ರ ದಶಕದ ಮಧ್ಯಭಾಗದ ವೇಳೆಗೆ ಮುಂಬೈನಲ್ಲಿ ಖ್ಯಾತ ಸಿಂಧಿ ಸ್ವಾತಂತ್ರ್ಯ ಹೋರಾಟಗಾರ ಭಾಯಿ ಪ್ರತಾಪ್ ಭಾರೀ ಲಾಭ ತರುವ ಆಮದು ವ್ಯವಹಾರದಲ್ಲಿ ತೊಡಗಿದ್ದರು. ಈ ಭಾಯಿ ಪ್ರತಾಪ್ ಪಂಡಿತ್ ನೆಹರು, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವರಂಥ ಅತಿರಥ ಮಹಾರಥರ ಜತೆ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದವರಾಗಿದ್ದರು. 1947ರ ದೇಶ ವಿಭಜನೆಯ ನಂತರ ಬಲಾತ್ಕಾರದಿಂದ ಪಾಕಿಸ್ತಾನ ಬಿಟ್ಟು ಬಂದ ಸಿಂಧಿಗಳಿಗೆ ಗಾಂಧೀಧಾಮದಲ್ಲಿ ಆಶ್ರಯ ನೀಡಿದ್ದ ವ್ಯಕ್ತಿ ಅವರು. ಆಮದು ವ್ಯವಹಾರವೊಂದರಲ್ಲಿ ಸರಕುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಭಾಯಿ ಪ್ರತಾಪ್ ವಿರುದ್ಧ ಕೇಸೊಂದು ದಾಖಲಾಯಿತು. ತನಿಖೆಯೂ ಆರಂಭವಾಯಿತು. ಸಿರಿವಂತರೂ ಆಗಿದ್ದ ಭಾಯಿ ಪ್ರತಾಪ್ ಒಬ್ಬ ಯೋಗ್ಯ ವಕೀಲ ತನ್ನ ಪರ ವಕಾಲತ್ತು ವಹಿಸಬೇಕೆಂದು ಇಚ್ಛಿಸಿದರು, ಸಿಂಧಿಯೇ ಆಗಿದ್ದ ಯುವ ವಕೀಲ ರಾಮ್ ಜೇಠ್ಮಲಾನಿಯವರನ್ನು ಗೊತ್ತು ಮಾಡುತ್ತಾರೆ. ಆದರೆ ಪ್ರಕರಣ ತುಸು ಸಂಕೀರ್ಣವಾಗಿರುವುದರಿಂದ ಭಾಯಿ ಪ್ರತಾಪ್ಗೆ ಯುವಕನಿಗಿಂತ ನುರಿತ ಹಿರಿಯ ವಕೀಲ ಬೇಕೆನಿಸಿ ಜೇಠ್ಮಲಾನಿ ಬದಲಿಗೆ ಬೇರೊಬ್ಬ ವಕೀಲರನ್ನು ನಿಯೋಜಿಸುತ್ತಾರೆ.
ಆದರೆ… ನುರಿತ ವಕೀಲನಿಗೆ ಭಾಯಿ ಪ್ರತಾಪ್ರ ಅಮಾಯಕತೆಯನ್ನು ಸಾಬೀತುಪಡಿಸಲಾಗದೆ 18 ತಿಂಗಳ ಸೆರೆವಾಸವಾಗುತ್ತದೆ. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ ಇನ್ನೂ ದಿಗ್ಭ್ರಮೆ ಹುಟ್ಟಿಸುವಂತೆ ಶಿಕ್ಷೆ ಅವಧಿಯನ್ನು 5 ವರ್ಷಗಳಿಗೆ ಏರಿಸುತ್ತಾರೆ! ಕೊನೆಗೆ ವಿಧಿಯಿಲ್ಲದೆ ತಮ್ಮ ಪ್ರಭಾವ ಬಳಸಿ ಪ್ರಧಾನಿ ಪಂಡಿತ್ ನೆಹರು ಅವರನ್ನು ಸಂಪರ್ಕಿಸಿ, ಅವರ ಮೂಲಕ ಪ್ರಭಾವ ಬೀರಿ ಆಗಿನ ಮಹಾರಾಷ್ಟ್ರ ರಾಜ್ಯಪಾಲರಾದ ನೆಹರು ಸಹೋದರಿ ವಿಜಯಲಕ್ಷ್ಮೀ ಪಂಡಿತ್ ಮುಂದೆ 1962ರಲ್ಲಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಪ್ರಕರಣದ ಯೋಗ್ಯಾಯೋಗ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಭಾಯಿ ಪ್ರತಾಪ್ ಅಮಾಯಕರಾಗಿದ್ದರು, ಆದರೆ ಸರ್ಕಾರಿ ವಕೀಲ ಸೂಕ್ತ ಸಾಕ್ಷ್ಯವನ್ನು ಕೋರ್ಟ್ ಮುಂದಿಡದೇ ಇದ್ದಿದ್ದೇ ಶಿಕ್ಷೆಗೆ ಕಾರಣವಾಗಿದ್ದು ಎಂಬುದು ತಿಳಿಯುತ್ತದೆ. ಹಾಗಂತ ಅವರನ್ನು ಏಕಾಏಕಿ ಮಾಫಿ ಮಾಡುವಂತೆಯೂ ಇರಲಿಲ್ಲ. ಏಕೆಂದರೆ ಕವಾಸ್ ಮಾಣಿಕ್ಷಾ ನಾನಾವತಿ ಪ್ರಕರಣ ಹಸಿಯಾಗಿಯೇ ಇತ್ತು. ಆತ ಸೇರಿದ್ದ ಪಾರ್ಸಿ ಸಮುದಾಯವೂ ನಾನಾವತಿಗೆ ತೀರಾ ಘನಘೋರ ಶಿಕ್ಷೆ ವಿಧಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ನಾನಾವತಿ ಒಬ್ಬ ದಕ್ಷ ನೌಕಾ ಅಧಿಕಾರಿ, ಆತನಿಗೆ ಯಾವುದೇ ಅಪರಾಧ ಹಿನ್ನೆಲೆಯಿಲ್ಲ, ಅದ್ಭುತ ಸೇವಾ ಹಿನ್ನೆಲೆಯಿದೆ, ಅಹುಜಾ ಪ್ರಚೋದನೆಯಿಂದಾಗಿ ಆತ ಅಂತಹ ಕೆಲಸ ಮಾಡಬೇಕಾಗಿ ಬಂತು, ಈಗಾಗಲೇ ಆತ ಸಾಕಷ್ಟು ಶಿಕ್ಷೆ ಅನುಭವಿಸಿದ್ದಾನೆ, ಆತನಿಗೂ ಕ್ಷಮೆ ನೀಡಬೇಕೆಂಬ ಅಭಿಪ್ರಾಯಕ್ಕೆ ಬಂದಿತ್ತು.
ಹೀಗೆ ಭಾಯಿ ಪ್ರತಾಪ್ ನಾನಾವತಿಯವರ ಪ್ರಕರಣ ಸಿಂಧಿ-ಪಾರ್ಸಿ ಸಮಸ್ಯೆಯಾಗಿ ಬಿಟ್ಟಿತು!
ಅಂದರೆ ನಾನಾವತಿ ಪಾರ್ಸಿ. ಆತ ಕೊಲೆ ಮಾಡಿದ್ದ ಪ್ರೇಮ್ ಅಹುಜಾ ಸಿಂಧಿ. ಹಾಗಾಗಿ ಮತ್ತೊಬ್ಬ ಸಿಂಧಿ ರಾಮ್ ಜೇಠ್ಮಲಾನಿ ನಾನಾವತಿಗೆ ಶಿಕ್ಷೆ ಕೊಡಿಸಲು ಮುಂದಾದಾಗ ಪಾರ್ಸಿ ವಕೀಲ ಕಾರ್ಲ್ ಖಾಂಡೇಲ್ವಾಲಾ, ಬ್ಲಿಟ್ಜ್ ಪತ್ರಿಕೆಯ ಸಂಪಾದಕ-ಮಾಲೀಕ ರುಸ್ಸಿ ಕರಂಜಿಯಾ ನೇತೃತ್ವದಲ್ಲಿ ಇಡೀ ಪಾರ್ಸಿ ಸಮುದಾಯವೇ ನಾನಾವತಿಯ ಹಿಂದೆ ನಿಂತಿತ್ತು. ಹೀಗಾಗಿ ಸಿಂಧಿಯಾದ ಭಾಯಿ ಪ್ರತಾಪ್ಗೆ ಮಾತ್ರ ಕ್ಷಮೆ ನೀಡಿದರೆ ಪಾರ್ಸಿಗಳಿಗೆ ಕೋಪವುಂಟಾಗಲಿತ್ತು. ನಾನಾವತಿಗೆ ಮಾಫಿ ನೀಡಿದರೆ ಸಿಂಧಿ ಸಮುದಾಯಕ್ಕೆ ನೋವಾಗುತ್ತಿತ್ತು. ಎರಡೂ ಸಮುದಾಯಗಳಿಗೂ ನೋವಾಗದಂತಹ ಪರಿಹಾರವೊಂದು ರೂಪತಳೆಯಬೇಕಿತ್ತು. 1962. ಒಂದು ದಿನ ರಾಮ್ ಜೇಠ್ಮಲಾನಿ ತಮ್ಮ ಅಪಾರ್ಟ್ಮೆಂಟ್ನ ಕದ ತೆರೆದರೆ ಎದುರಿಗೆ ನಾನಾವತಿ ಪ್ರಕರಣದ ಸರ್ಕಾರಿ ವಕೀಲ ರಜನಿ ಪಟೇಲ್ ಹಾಗೂ ನಾನಾವತಿ ಪತ್ನಿ ಸಿಲ್ವಿಯಾ ನಿಂತಿದ್ದಾರೆ!
ಏಕಿರಬಹುದು?
ಎಂದು ಜೇಠ್ಮಲಾನಿ ಯೋಚಿಸುವುದರೊಳಗೆ ನೇರ ವಿಷಯಕ್ಕೆ ಬಂದ ರಜನಿ ಪಟೇಲ್, ‘ಸರ್ಕಾರ ಭಾಯಿ ಪ್ರತಾಪ್ ಹಾಗೂ ನಾನಾವತಿ ಇಬ್ಬರನ್ನೂ ಕ್ಷಮಿಸಲು ಸಿದ್ಧವಿದೆ. ಆದರೆ ಸಿಂಧಿ ಸಮುದಾಯವನ್ನು ಕೆರಳಿಸದೇ ಆ ಕೆಲಸ ಮಾಡಬೇಕು. ಒಂದು ವೇಳೆ ಪ್ರೇಮ್ ಅಹುಜಾನ ತಂಗಿ ಮಾಮೀ ಅಹುಜಾಳ ಮನವೊಲಿಸಿದರೆ ಎಲ್ಲವೂ ಸುಲಭವಾಗುತ್ತದೆ. ಇಷ್ಟಕ್ಕೂ ಕೊಲೆಗೀಡಾದ ಅಹುಜಾನ ತಂಗಿಯೇ ಕ್ಷಮಿಸಿದರೆ ಉಳಿದದ್ದೆಲ್ಲಾ ಮುಖ್ಯವಾಗುವುದಿಲ್ಲ’ ಎಂದರು. ರಾಮ್ ಜೇಠ್ಮಲಾನಿ ಹಾಗೂ ಮಾಮೀ ಅಹುಜಾ ಇಬ್ಬರೂ ಪರಸ್ಪರ ಚೆನ್ನಾಗಿ ಬಲ್ಲವರಾಗಿದ್ದರು. ನಾನಾವತಿಗೆ ಶಿಕ್ಷೆ ಕೊಡಿಸಲು ರಾಮ್ ಜೇಠ್ಮಲಾನಿಯವರನ್ನು ನಿಯೋಜಿಸಿದ್ದೇ ಆಕೆ. ಈಗ ಜೇಠ್ಮಲಾನಿ ಆಕೆಯ ಮನಸ್ಸನ್ನೇ ಪರಿವರ್ತನೆ ಮಾಡಬೇಕಿತ್ತು. ಅದಕ್ಕೆ ಜೇಠ್ಮಲಾನಿ ಒಪ್ಪಿಕೊಂಡರು. ಕವಾಸ್ ಮಾಣಿಕ್ಷಾ ನಾನಾವತಿಗೆ ಕ್ಷಮಾದಾನ ನೀಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಎಂದು ಆಕೆ ಲಿಖಿತವಾಗಿ ಕೊಟ್ಟಳು. ಒಂದೇ ದಿನ ಭಾಯಿ ಪ್ರತಾಪ್ ಹಾಗೂ ನಾನಾವತಿ ಬಿಡುಗಡೆಗೊಂಡರು.
ಈ ಪ್ರಕರಣವನ್ನು ಉದಾಹರಣೆಯಾಗಿಟ್ಟುಕೊಂಡು ಸಂಜಯ್ ದತ್ಗೆ ಕ್ಷಮಾದಾನ ನೀಡಬೇಕೆಂದು ಪ್ರತಿಪಾದಿಸುತ್ತಿರುವ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ನ ಹಾಲಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರ ತಲೆಯಲ್ಲಿ ತುಂಬಿರುವುದಾದರೂ ಏನು? ಎಲ್ಲಿಯ ನಾನಾವತಿ? ಎಲ್ಲಿಯ ಸಂಜಯ್ ದತ್? ನಾನಾವತಿಯವರದ್ದು ಭಾವನಾತ್ಮಕ ವಿಚಾರ, ಆವೇಶದಲ್ಲಿ ನಡೆದುಹೋದ ಅಚಾತುರ್ಯ. ತಮ್ಮಿಂದ ಅಚಾತುರ್ಯವಾದ ಕೂಡಲೇ ನಾನಾವತಿ ಪೊಲೀಸ್ ಠಾಣೆಗೆ ತೆರಳಿ ಸ್ವತಃ ತಪ್ಪೊಪ್ಪಿಕೊಂಡರು, ಕಾನೂನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರು. ಆದರೆ ಸಂಜಯ್ ಮಾಡಿದ್ದೇನು? ಮುಂಬೈ ದಾಳಿ ನಡೆದಿದ್ದು 1993, ಮಾರ್ಚ್ 12ರಂದು. ಪೊಲೀಸರು ಆತನನ್ನು ಟಾಡಾ ಕಾಯಿದೆಯಡಿ ಬಂಧಿಸಿದ್ದು 1993, ಏಪ್ರಿಲ್ 19ರಂದು. ಒಂದು ವೇಳೆ ಆತನಿಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಘಟನೆ ನಡೆದ ಮರುಕ್ಷಣವಾದರೂ ಪೊಲೀಸರಿಗೆ ದೇಶದ್ರೋಹಿಗಳ ಬಗ್ಗೆ ಸುಳಿವು ನೀಡಬಹುದಿತ್ತಲ್ಲವೆ? ಸೂಕ್ತ ಕಾರಣವಿಟ್ಟುಕೊಂಡು ಆವೇಶದಲ್ಲಿ ಮಾಡಿದ ಕೊಲೆಯನ್ನು ಸ್ವತಃ ಹೋಗಿ ಒಪ್ಪಿಕೊಂಡ ಹಾಗೂ ನೌಕಾ ದಳದಲ್ಲಿದ್ದುಕೊಂಡು ದೇಶಸೇವೆ ಮಾಡುತ್ತಿದ್ದ ನಾನಾವತಿಗೆ ಕ್ಷಮಾದಾನ ಕೊಟ್ಟಿದ್ದಕ್ಕೂ, ಮುಂಬೈ ದಾಳಿ ನಡೆದು ತಿಂಗಳಾದರೂ ದಾವೂದ್ ಇಬ್ರಾಹಿಂ, ಅನೀಸ್ ಇಬ್ರಾಹಿಂ, ಅಬುಸಲೇಂ ಜತೆ ಸಂಪರ್ಕವಿಟ್ಟುಕೊಂಡಿದ್ದ ದ್ರೋಹಿ ಸಂಜಯ್ ದತ್ಗೆ ಕ್ಷಮೆ ಕೊಡಬೇಕೆಂಬುದಕ್ಕೂ ವ್ಯತ್ಯಾಸವೇ ಇಲ್ಲವೆ? ಮನೆಯಲ್ಲಿ ಮೂರು ಲೈಸೆನ್ಸ್ ಹೊಂದಿದ್ದ ಮಾರಕ ಆಯುಧಗಳಿದ್ದರೂ ಎಕೆ-56, ಹ್ಯಾಂಡ್ ಗ್ರನೇಡ್ಗಳನ್ನು ಅಕ್ರಮವಾಗಿ ತಂದಿಟ್ಟುಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಆತನಿಗೆ? ಯಾರಾದರೂ ಆತ್ಮರಕ್ಷಣೆಗಾಗಿ ಗ್ರನೇಡ್ ಇಟ್ಟುಕೊಳ್ಳುತ್ತಾರಾ? ಆಗ ಅವರಪ್ಪ ಸುನೀಲ್ ದತ್ ಕಾಂಗ್ರೆಸ್ ಸಂಸದರಾಗಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಇದ್ದಿದ್ದೂ ಕಾಂಗ್ರೆಸ್ ಸರ್ಕಾರ. ಇವರ ಕುಟುಂಬಕ್ಕೆ ಅಪಾಯವಿದೆಯೆಂದು ಕೇಳಿದ್ದರೆ ಪೊಲೀಸರೇ ರಕ್ಷಣೆ ಕೊಡುತ್ತಿರಲಿಲ್ಲವೆ?
ಗುರುವಾರ ಪತ್ರಿಕಾಗೋಷ್ಠಿ ಕರೆದು, ‘ಐ ಲವ್ ಮೈ ಕಂಟ್ರಿ’ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾನಲ್ಲಾ ಇವನಿಗೆ ನಿಜಕ್ಕೂ ದೇಶದ ಬಗ್ಗೆ ಪ್ರೀತಿ ಇದ್ದಿದ್ದರೆ ಏಕೆ ದಾವೂದ್ ಇಬ್ರಾಹಿಂ 1993ರಲ್ಲಿ ದೇಶಕ್ಕೆ ಬಾಂಬಿಡುತ್ತಿದ್ದಾನೆ ಎಂಬುದನ್ನು ಪೊಲೀಸರಿಗೆ ತಿಳಿಸಲಿಲ್ಲ? ಒಂದು ವೇಳೆ, ಇವನಲ್ಲಿ ದೇಶ ಪ್ರೇಮವಿದ್ದಿದ್ದರೆ ಸ್ಫೋಟದ ಸುಳಿವು ನೀಡಿ 257 ಜನರ ಪ್ರಾಣ ಉಳಿಸುತ್ತಿದ್ದನಲ್ಲವೆ? ಹಾಗಿರುವಾಗ ಶಿಕ್ಷೆ ಕಾಯಂ ಆದ ಕೂಡಲೇ ‘ಐ ಲವ್ ಆಲ್ ದಿ ಸಿಟಿಝೆನ್ಸ್’ ಎಂದಿದ್ದಾನಲ್ಲ ಅದಕ್ಕೆ ಯಾವ ಅರ್ಥ ಬರುತ್ತದೆ ಹೇಳಿ? ‘ಒಂದು ವೇಳೆ ಸ್ಫೋಟಕ ಅಸ್ತ್ರಗಳು ಮುಂಬೈಗೆ ಬರುತ್ತಿವೆ ಎಂದು ಸಂಜಯ್ ದತ್ ಪೊಲೀಸರಿಗೆ ತಿಳಿಸಿದ್ದೇ ಆಗಿದ್ದರೆ ಮುಂಬೈ ಸರಣಿ ಸ್ಫೋಟವನ್ನು ತಡೆಯಬಹುದಿತ್ತು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಮ್ ಹೇಳಿರುವ ಮಾತನ್ನು ಕೇಳಿದರೇ ಗೊತ್ತಾಗುವುದಿಲ್ಲವೆ ಇವನೆಂಥ ವ್ಯಕ್ತಿ ಅನ್ನುವುದು? ಮುಂಬೈ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದೆದುರು 2002, ಜುಲೈ 26ರಂದು 2000, ಮಾರ್ಚ್ 14ರಂದು ಸಂಜಯ್ ದತ್-ಛೋಟಾ ಶಕೀಲ್-ಮಹೇಶ್ ಮಂಜ್ರೇಕರ್-ಹರೀಶ್ ಸುಗಂದ್- ಸಂಜಯ್ ಗುಪ್ತಾ ನಡುವೆ ನಡೆದಿದ್ದ ಟೆಲಿಫೋನ್ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಲಾಯಿತು. ಇದು ಏನನ್ನು ತೋರಿಸುತ್ತದೆ? ಮುಂಬೈ ದಾಳಿ ನಡೆದು 7 ವರ್ಷಗಳಾದರೂ ಸಂಜಯ್ ದತ್ ದೇಶದ್ರೋಹಿ ದಾವೂದ್ ಇಬ್ರಾಹಿಂ ಗುಂಪಿನ ಜತೆ ಸಂಪರ್ಕ-ಸಂಬಂಧ ಇಟ್ಟುಕೊಂಡಿದ್ದ ಎಂದಾಗಲಿಲ್ಲವೆ? ಮುಂಬೈ ದಾಳಿ ನಡೆದು 20 ವರ್ಷಗಳಾದರೂ ಒಮ್ಮೆಯಾದರೂ ಸಂಜಯ್ ದತ್ ಆ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆಯೇ? ಈ ಇಪ್ಪತ್ತು ವರ್ಷಗಳಲ್ಲಿ, ದಾವೂದ್ ಗುಂಪಿನ ಜತೆ ನಾನು ಸಂಬಂಧ ಇಟ್ಟುಕೊಂಡಿದ್ದು ತಪ್ಪು, ಅವರೆಲ್ಲ ದೇಶದ್ರೋಹಿಗಳು ಎಂದು ಒಮ್ಮೆಯಾದರೂ ಹೇಳಿದನೇ? ಅವರ ಜತೆ ಕೈಜೋಡಿಸುವಾಗ ಐ ಲವ್ ಮೈ ಕಂಟ್ರಿ ಎನ್ನುವ ದೇಶಪ್ರೇಮ ಎಲ್ಲಿ ಸತ್ತು ಬಿದ್ದಿತ್ತು? ಇಂಥ ವ್ಯಕ್ತಿಗೆ ಕ್ಷಮಾದಾನ ನೀಡಬೇಕೆ?
‘ಈ 20 ವರ್ಷಗಳಲ್ಲಿ ಆತ ಸಾಕಷ್ಟು ನೊಂದಿದ್ದಾನೆ, ಕಷ್ಟ ಅನುಭವಿಸಿದ್ದಾನೆ, ಆತನನ್ನು ಮಾಫಿ ಮಾಡಿ’ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಕಾಟ್ಜು ಮಹಾಶಯರು. ಆದರೆ ಆತ ಅನುಭವಿಸಿದ ಭಂಗವಾದರೂ ಯಾವುದು ಅಂದುಕೊಂಡಿರಿ? ಸಂಜಯ್ ದತ್ ಮೊದಲ ಪತ್ನಿ ರೀಚಾ ಶರ್ಮಾರನ್ನು ಮದುವೆಯಾಗಿದ್ದು 1987ರಲ್ಲಿ. ಆಕೆಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ಕೂಡಲೇ ಮಾಧುರಿ ದೀಕ್ಷಿತ್ರ ಹಿಂದೆ ಬಿದ್ದ. 1993ರ ದಾಳಿಯಲ್ಲಿ ಸಂಜಯ್ ನಿಜರೂಪ ಬಯಲಾದ ನಂತರ ಮಾಧುರಿ ದೂರವಾದರು. ಕೂಡಲೇ ರಿಯಾ ಪಿಳ್ಳೈಯರನ್ನು ಮದುವೆಯಾದರು. ಆಕೆಗೆ ಡೈವೋರ್ಸ್ ಕೊಟ್ಟು ಮಾನ್ಯತಾಳನ್ನು ಮದುವೆಯಾದರು. ಮಿಸ್ಟರ್ ಕಾಟ್ಜು, ಸಂಜಯ್ ದತ್ ಕಳೆದ 20 ವರ್ಷಗಳಲ್ಲಿ ಅನುಭವಿಸಿದ ಮಹಾ ‘ಕಷ್ಟ’ವೇನೆಂದರೆ ಮೊದಲ ಹೆಂಡತಿ ಹಾಸಿಗೆ ಹಿಡಿದಿರುವಾಗಲೇ ಮತ್ತೊಬ್ಬಳನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಮತ್ತೆರಡು ಮದುವೆಯಾಗಿ, ಮತ್ತೆರಡು ಮಕ್ಕಳನ್ನು ಮಾಡಿ, ಈ ಮಧ್ಯೆ 91 ಚಿತ್ರಗಳಲ್ಲಿ ನಟಿಸಿ, ಕೋಟಿ ಕೋಟಿ ಗಳಿಸಿ ಮಜಾ ಮಾಡಿದ್ದು ಅಷ್ಟೇ! ಇಂಥ ಮನುಷ್ಯನಿಗೆ ಕ್ಷಮೆ ನೀಡಿ ಎಂದು ಅದ್ಯಾವ ಮುಖ ಇಟ್ಟುಕೊಂಡು ಒತ್ತಾಯಿಸುತ್ತೀರ್ರೀ? ನಾನಾವತಿಗೆ ಕ್ಷಮೆ ನೀಡುವಾಗ ಆತ ಕೊಲೆಗೈದಿದ್ದ ಅಹುಜಾನ ತಂಗಿಯೇ ತನ್ನ ಅಭ್ಯಂತರವಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಳು. ಈ ಸಂಜಯ್ ಪೊಲೀಸರಿಗೆ ತಿಳಿಸದೇ ಹೋಗಿದ್ದರಿಂದ ಮುಂಬೈ ದಾಳಿಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಮರಿ ಕಳೆದುಕೊಂಡ 257 ಬಲಿಪಶುಗಳ ಕುಟುಂಬವನ್ನು ಒಮ್ಮೆಯಾದರೂ ಭೇಟಿಯಾಗಿ ಅವರ ಅಭಿಪ್ರಾಯ ಕೇಳಿದ್ದೀರಾ? ಕೈ, ಕಾಲು, ಕಣ್ಣು ಹಾಗೂ ಇತರೆ ಅಂಗಾಂಗ ಕಳೆದುಕೊಂಡು ಇಂದಿಗೂ ನರಳುತ್ತಿರುವ 900 ಜನರ ಭಾವನೆಗಳಿಗೆ ಕೊಳ್ಳಿಯಿಟ್ಟ ಸಂಜಯ್ ದತ್ಗೆ ಕ್ಷಮೆ ಕೊಡಬೇಕಾ? ಕಂತ್ರಿ ಕೆಲಸ ಮಾಡಿ ‘ಐ ಲವ್ ಮೈ ಕಂಟ್ರಿ’ ಎಂದ ಕೂಡಲೇ ಕ್ಷಮಿಸಿ ಬಿಡಬೇಕಾ ಕಾಟ್ಜು?
ಛೆ!

-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ