ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 4, 2013

ಗೆದ್ದು ಗದ್ದುಗೆ ಏರಿದ ಮೇಲೆ ಈ ಬಿಜೆಪಿಯವರಲ್ಲಿ ಒಂದು ಗುರಿ, ಉದ್ದೇಶವಿದೆ ಎಂದು ಯಾವತ್ತಾದರೂ ಅನಿಸಿತಾ?

ಈ ಹಿಂದೆ 2007ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 1606, ಜೆಡಿಎಸ್ 1502 ಸೀಟುಗಳೊಂದಿಗೆ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದರೆ 1180 ಸ್ಥಾನಗಳೊಂದಿಗೆ ಉಳಿದೊಂದೇ ಕೊನೆಯ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತ್ತು. ಆದರೇನಂತೆ 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80, ಜೆಡಿಎಸ್ 28 ಸ್ಥಾನ ಪಡೆದುಕೊಂಡರೆ, ಬಿಜೆಪಿ 110 ಸ್ಥಾನ ಗಳಿಸಿ ಅಧಿಕಾರ ಹಿಡಿಯಿತು.

ಇಂಥದ್ದೊಂದು ಸಮರ್ಥನೆಯನ್ನು ಕೆಲವರು ನೀಡುತ್ತಿದ್ದಾರೆ!
2007ರಲ್ಲಿ ರಾಜಧಾನಿ ದಿಲ್ಲಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನ ಗಳಿಸಿದರೆ ಆಳುವ ಕಾಂಗ್ರೆಸ್ ಕೇವಲ 64 ಸ್ಥಾನಗಳನ್ನು ಪಡೆದಿತ್ತು. ಆದರೂ 2008ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದು ಬಿಜೆಪಿಯಲ್ಲ ಕಾಂಗ್ರೆಸ್! 2012 ಮಾರ್ಚ್‌ನಲ್ಲಿ ಪ್ರಕಟವಾದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 224 ಸ್ಥಾನ ಗಳಿಸುವುದರೊಂದಿಗೆ ಐತಿಹಾಸಿಕ ಜಯ ದಾಖಲಿಸಿದರೂ ಜುಲೈನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 12ರಲ್ಲಿ 10 ಮೇಯರ್ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ಇನ್ನೆರಡು ತಿಂಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳುತ್ತಿದ್ದಾರೆ!
ಖಂಡಿತ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳಲು, ಇಂಥ ಮಾತುಗಳನ್ನಾಡಿ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸಲು, ಆತ್ಮಸ್ಥೈರ್ಯ ತುಂಬಲು ಕರ್ನಾಟಕ ಬಿಜೆಪಿಯವರು ಪ್ರಯತ್ನಿಸಬಹುದು. ಬಿಜೆಪಿಯನ್ನು ಕಾಲೆಳೆದು ಕೆಳಗೆ ಬೀಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ವಿಘ್ನಸಂತೋಷವನ್ನು ಅನುಭವಿಸಬಹುದು. ಕುಮಾರಸ್ವಾಮಿಯವರೂ ರಾಮನಗರದಲ್ಲಿ, ಸಿದ್ದರಾಮಯ್ಯ ಮೈಸೂರು, ಡಾ. ಪರಮೇಶ್ವರ್ ಕೊರಟಗೆರೆ, ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ, ಖರ್ಗೆಯವರೂ ಗುಲ್ಬರ್ಗದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಮರ್ಥನೆಯನ್ನೂ ಕೊಡಬಹುದು. ಈ ಮಧ್ಯೆ ಬಿಜೆಪಿ ತನ್ನ ಭದ್ರಕೋಟೆಯಾದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಧೂಳಿಪಟವಾಗಲು ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಹಾಗೂ ಈಗ ಪಕ್ಷದ ಅಧ್ಯಕ್ಷ ಸ್ಥಾನ ಕೊಡದಿರುವುದೇ ಕಾರಣ ಎಂಬ ಸುದ್ದಿಯನ್ನೂ ಪ್ಲಾಂಟ್ ಮಾಡಿಸಲಾಗಿದೆ!
ಆದರೆ….
ಈ ಬಿಜೆಪಿಯವರು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ? ಬಿಜೆಪಿಗೆ ಇಂಥದ್ದೊಂದು ಪರಿಸ್ಥಿತಿ ಬಂದಿದ್ದಾದರೂ ಏಕೆ? ಬಿಜೆಪಿಯನ್ನು ಸೋಲಿಸಿದ್ದು ಕಾಂಗ್ರೆಸ್ಸೋ, ತಮ್ಮ ತಲೆ ಮೇಲೆ ಬಿಜೆಪಿಯವರೇ ಕಲ್ಲುಹಾಕಿಕೊಂಡರೇ? ಅದಕ್ಕೂ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ದಕ್ಷಿಣ ಕನ್ನಡದಂಥ ಅತ್ಯಂತ ಸಂವೇದನಾಶೀಲ, ಸೂಕ್ಷ್ಮಗ್ರಾಹಿ ಹಾಗೂ ‘ಸಂಘಪ್ರಿಯ’ ಜನರಿರುವ ಸ್ಥಳದಲ್ಲಿ ಬಿಜೆಪಿ ಸೋತಿದ್ದೇಕೆ? ಈ ಪ್ರಶ್ನೆಯನ್ನು ಏಕೆ ಮೊದಲು ಕೇಳಬೇಕಾಗಿದೆಯೆಂದರೆ, ಬಿಜೆಪಿ ಏನೂ ಆಗಿಲ್ಲದಾಗ, ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ, ಕಾಲೂರಿದ ಮೇಲೂ ಪಕ್ಷ ಕಷ್ಟಕ್ಕೆ ಸಿಲುಕಿದಾಗ ಕೈಬಿಡದ ಏಕೈಕ ಸ್ಥಳ ದಕ್ಷಿಣ ಕನ್ನಡ. ಅಂಥ ಸ್ಥಳದಲ್ಲಿ ಬಿಜೆಪಿ ಧೂಳೀಪಟವಾಗಿದ್ದೇಕೆ? ದಕ್ಷಿಣ ಕನ್ನಡದಲ್ಲಿ ಬಿಎಸ್‌ವೈ ಫ್ಯಾಕ್ಟರ್ರೇ ಅಲ್ಲ, ಆದರೂ ಬಿಜೆಪಿ ಸೋತಿದ್ದೇಕೆ?
1. ಅಭಿವೃದ್ಧಿಗೆ ವೋಟು ಹಾಕುವವರು
2. ಪಕ್ಷಕ್ಕೆ ವೋಟು ಕೊಡುವವರು
3. ಒಂದು ಸಿದ್ಧಾಂತಕ್ಕೆ, ವಿಚಾರಕ್ಕೆ ಮತ ನೀಡುವವರು
ಈಗಿನ ಮತದಾರರನ್ನು ಹೀಗೆ ಮೂರು ವಿಧಗಳಾಗಿ ವಿಂಗಡಿಸಬಹುದು. ಒಳ್ಳೆಯ ಕೆಲಸ ಮಾಡಿದವರಿಗೆ ಪಕ್ಷ ನೋಡದೆ ಕೆಲವರು ವೋಟು ಹಾಕಿದರೆ, ಇನ್ನು ಕೆಲವರು ಪಕ್ಷ ದೇಶವನ್ನೇ ಹಾಳು ಮಾಡುತ್ತಿದ್ದರೂ ನಿಷ್ಠೆ ಬಿಡುವುದಿಲ್ಲ. ಆದರೆ ದಕ್ಷಿಣ ಕನ್ನಡ ಮಟ್ಟಿಗೆ ಹೇಳುವುದಾದರೆ ಅಲ್ಲಿ ಅಭಿವೃದ್ಧಿ, ಪಕ್ಷ ಅನ್ನುವುದಕ್ಕಿಂತ ಸಿದ್ಧಾಂತ, ವಿಚಾರಕ್ಕೆ ಮೊದಲಿನ ಆದ್ಯತೆಯನ್ನು ಅಲ್ಲಿನ ಮತದಾರರು ನೀಡುತ್ತಾರೆ. ಈ ಸಿದ್ಧಾಂತ, ವಿಚಾರದಿಂದಾಗಿಯೇ ಅವರಲ್ಲಿ ಬಿಜೆಪಿಯೆಂಬ ಪಕ್ಷಕ್ಕೆ ನಿಷ್ಠೆ ಆರಂಭವಾಯಿತು. ಪಕ್ಷ ಸೈದ್ಧಾಂತಿಕ ನೆಲೆಯಲ್ಲಿ ಕೆಲಸ ಮಾಡುತ್ತಿದೆಯೇ ಎಂಬುದು ಖಾತ್ರಿಯಾದರೆ ಮಾತ್ರ ವೈಯಕ್ತಿಕ ಫಲಾಫಲ ನಿರೀಕ್ಷೆಯಿಲ್ಲದೆ ಅವರು ವೋಟು ಕೊಡುತ್ತಾರೆ. ಬಾಯಿಗೆ ಬಾಟ್ಲಿ ಇಟ್ಟರೆ, ಕಿಸೆಗೆ ಕಾಸು ಹಾಕಿದರೆ ವೋಟು ಕೊಡುವ ಜನ ದಕ್ಷಿಣ ಕನ್ನಡದವರಲ್ಲ. ಶಾಸಕರು, ಸಂಸದರು, ಸಚಿವರು ಬಂದರೆ ಬಯಲುಸೀಮೆ ಜನರು ಮುಗಿಬೀಳುವಂಥ ಅಡಿಯಾಳು ಮನಸ್ಥಿತಿಯೂ ಅವರಲ್ಲಿಲ್ಲ. ಆತ್ಮಗೌರವ, ಸ್ವಾಭಿಮಾನ ಬಿಟ್ಟುಕೊಡುವವರಲ್ಲ. ಒಳ್ಳೆಯ ಮಾತು, ಒಳ್ಳೆಯ ಕೆಲಸ, ಸೈದ್ಧಾಂತಿಕ ನಿಷ್ಠೆಯನ್ನಷ್ಟೇ ಬಯಸುತ್ತಾರೆ. ಕರಂಬಳ್ಳಿ ಸಂಜೀವ ಶೆಟ್ಟಿ, ಸಿ.ಜಿ. ಕಾಮತ್ ಮತ್ತು ಉರಿಮಜಲು ರಾಮಭಟ್ಟರು ಬಿಜೆಪಿಗೆ ಅಂತಹ ತಳಹದಿಯನ್ನು ಹಾಕಿಕೊಟ್ಟಿದ್ದಾರೆ. ದಕ್ಷಿಣ ಕನ್ನಡದ ಬಿಜೆಪಿ ಮತದಾರರಲ್ಲಿ ಇಂದಿಗೂ ಜನಸಂಘದ ಕಾಲದ ಮನಸ್ಥಿತಿಯಿದೆ. ಇದನ್ನು ಅಲ್ಲಿನ ನಾಯಕರು, ಅದರಲ್ಲೂ ಡಾ. ಪ್ರಭಾಕರ ಭಟ್ಟರು ಅರ್ಥಮಾಡಿಕೊಳ್ಳದೆ ಮಂಗಳೂರು ಮಹಾನಗರ ಪಾಲಿಕೆ ನಮ್ಮದು, ಮಂಗಳೂರು ದಕ್ಷಿಣ-ಉತ್ತರ ಎರಡೂ ಶಾಸಕರು ನಮ್ಮವರು, ಉಡುಪಿ ಜಿಲ್ಲೆಯಲ್ಲೂ ನಮ್ಮದೇ ದರ್ಬಾರು ಎಂಬ ದರ್ಪ ತೋರಲಾರಂಭಿಸಿದರು. ನಾವು ಏನು ಮಾಡಿದರೂ, ಎಂತಹ ಅಯೋಗ್ಯರನ್ನು ಮಂತ್ರಿ ಮಾಡಿದರೂ ಜಯಿಸಿಕೊಳ್ಳಬಹುದು ಎಂಬ ಭ್ರಮೆಗೆ ಒಳಗಾದರು. ಅವಿಭಜಿತ ದಕ್ಷಿಣ ಕನ್ನಡವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಡಾ. ಪ್ರಭಾಕರ ಭಟ್ಟರು ವೈಯಕ್ತಿಕವಾಗಿ ಶುದ್ಧ ಹಸ್ತರೇ. ಆದರೆ ಕಲ್ಲಡ್ಕದಲ್ಲಿ ಕಟ್ಟಿರುವ ಶಾಲೆಯನ್ನು “ದೊಡ್ಡದು” ಮಾಡಲು ಹಿಡಿದ ‘ಮಾರ್ಗ’ದ ಬಗ್ಗೆ, ಶ್ರೀಕರ ಪ್ರಭು ಹಾಗೂ ಮತ್ತಿತರ ತಮ್ಮ ಚೇಲಾ ಸೈನ್ಯ ಹಾಗೂ ಅದರ ಮಾತಿಗೆ ಕಿವಿಗೊಡುತ್ತಿರುವ ಬಗ್ಗೆ ಖಂಡಿತ ಅವರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ತಾವು ‘ದಕ್ಷಿಣ ಕನ್ನಡದ ನರೇಂದ್ರ ಮೋದಿ’ ಎಂಬ ಭ್ರಮೆಯಿಂದ ಹೊರಬಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಏಕೆ ದೂರವಾಗುತ್ತಿದ್ದಾರೆ, ಮನನೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ಇಷ್ಟಕ್ಕೂ ಪಕ್ಷಕ್ಕೆ ಹತ್ತಾರು ವರ್ಷಗಳಿಂದ ಮಣ್ಣು ಹೊತ್ತ, ಮೂರ್ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟರು, ಸುಳ್ಯದ ಅಂಗಾರ, ಮಂಗಳೂರಿನ ಯೋಗೀಶ್ ಭಟ್ಟರನ್ನು ಬಿಟ್ಟು 2000ದಲ್ಲಿ ಬಿಜೆಪಿ ಸೇರಿದ ಕೃಷ್ಣ ಪಾಲೇಮಾರ್‌ಗೆ ಮಂತ್ರಿಗಿರಿ ಯಾವ ಕಾರಣಕ್ಕಾಗಿ ದೊರೆಯಿತು? ವೃತ್ತಿಪರ ಕೋರ್ಸ್‌ಗಳಲ್ಲಿರುವಂತೆ ಮಂತ್ರಿಗಿರಿಗಳಲ್ಲೂ ‘ಪೇಮೆಂಟ್‌’ ಸೀಟ್‌ಗಳಿದ್ದವೆ? ಕೊನೆಗೂ ಆಗಿದ್ದೇನು? ಈ ಬಂದರು ಖಾತೆ ಸಚಿವ ಪಾಲೇಮಾರ್ ದರ್ಬಾರಿನಲ್ಲೇ ಬೇಲಿಕೇರಿಯಲ್ಲಿದ್ದ ಅದಿರು ದಾಸ್ತಾನು ಕಾಣೆಯಾಯಿತು, ಸದನದಲ್ಲಿ ಪೋನೋಗ್ರಫಿ ನೋಡಿದರು. ಈ ಘಟನೆಗಳು ಪ್ರಜ್ಞಾವಂತರ ದಕ್ಷಿಣ ಕನ್ನಡವೇ ತಲೆತಗ್ಗಿಸುವಂತೆ ಮಾಡಿದವು. ಅಷ್ಟು ಮಾತ್ರವಲ್ಲ, ಒಂದು ವೇಳೆ ಕೇಂದ್ರ ನಾಯಕತ್ವ ಅಡ್ಡಗಾಲು ಹಾಕದಿದ್ದರೆ, ಶೆಟ್ಟರ್ ಮುಖ್ಯಮಂತ್ರಿಯಾದಾಗ ಪಾಲೇಮಾರ್ ಮತ್ತೆ ಮಂತ್ರಿಯಾಗಿ ಬಿಡುತ್ತಿದ್ದರು. ಈ ಮಧ್ಯೆ ಸ್ವಾಭಿಮಾನಿ ಹಾಲಾಡಿಯವರನ್ನು ಮನನೋಯಿಸುವ ಕೆಲಸ ನಡೆಯಿತು. ಅವರು ಜನರ ಸೇವೆ ಮಾಡುವುದಕ್ಕೆ ರಾಜಕೀಯಕ್ಕೆ ಬಂದಿದ್ದರೇ ಹೊರತು ಪುಢಾರಿ ಕೆಲಸ ಮಾಡಲು, ಕಾಲಿಗೆರಗಿ ಕೆಲವರ ಅಹಂ ಅನ್ನು ತಣಿಸಲು ಬಂದಿರಲಿಲ್ಲ. ಅಂತಹ ವ್ಯಕ್ತಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಮಂತ್ರಿಗಿರಿಯನ್ನು ತಪ್ಪಿಸಿ ಅವರು ಪಕ್ಷದಿಂದ ದೂರವಾಗುವಂತೆ ಮಾಡಲಾಯಿತು. ಇನ್ನು ದಕ್ಷಿಣ ಕನ್ನಡದಲ್ಲಂತೂ ಸಂಘ ಮತ್ತು ಸಂಘದ ಅಂಗ ಸಂಸ್ಥೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬೇರೆ ಬೇರೆಯಲ್ಲ. ಯಾರು ಸಂಘ ಹಾಗೂ ಪಕ್ಷಕ್ಕಾಗಿ ಮೈದಾನದಲ್ಲಿ ಮಲಗಿದರೋ, ರಸ್ತೆ ತಡೆ ಮಾಡಿದರೋ, ಮನೆಮನೆಗೆ ಹೋಗಿ ಪಕ್ಷದ ಪ್ರಚಾರ ಮಾಡಿದರೋ ಆ ಸಂಘ- ಹಿಂದು ಜಾಗರಣಾ ವೇದಿಕೆ-ಭಜರಂಗದಳದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದರು. ಮೊನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ನಾಲ್ಕಾರು ಭಾರಿ ಆಯ್ಕೆಯಾಗಿದ್ದ ಬಂಟ್ವಾಳದ ಗೋವಿಂದ ಪ್ರಭು ಅವರಿಗೆ ಕೊನೆ ಕ್ಷಣದವರೆಗೂ ಟಿಕೆಟ್ ನೀಡಿರಲಿಲ್ಲ, ಕೊನೆಗೆ ಕಾರ್ಯಕರ್ತರೇ ಸಿಡಿದೆದ್ದು ಟಿಕೆಟ್ ಕೊಡಿಸಬೇಕಾಗಿ ಬಂತು. ಇವೆಲ್ಲ ಏನನ್ನು ಸೂಚಿಸುತ್ತವೆ? ಬ್ರೋಕರ್‌ಗಳು ಹಿರಿಯರಿಗೆ ಹತ್ತಿರವಾದವರು, ಬೇಕು-ಬೇಡಗಳನ್ನು ನೋಡಿಕೊಳ್ಳುವವರಿಗೆ ಹುದ್ದೆ, ಸ್ಥಾನಗಳು ದೊರೆಯಲಾರಂಭಿಸಿದವು. ಈ ಮಧ್ಯೆ ನಳೀನ್ ಕುಮಾರ್ ಕಟೀಲು ಅವರಂಥ ಸ್ವಂತ ವ್ಯಕ್ತಿತ್ವವೇ ಇಲ್ಲದ ವ್ಯಕ್ತಿಯನ್ನು ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. ಅಂದರೆ ಇವರಿಗೆ ಪಕ್ಷದ ಮೇಲೆ ಹಿಡಿತ ಸಾಧಿಸಬೇಕೆಂಬ ಉದ್ದೇಶವಿದೆಯೇ ಹೊರತು ಜನರ ಅಭ್ಯುದಯದ ಬಗ್ಗೆ ಉತ್ಸುಕತೆ ಇಲ್ಲ ಎಂದಾಯಿತು.
ಈ ನಡುವೆ ವೋಟು ಕೊಡುವಾಗ ಏನೋ ಬದಲಾವಣೆ ತರುತ್ತಾರೆ ಎಂಬ ಆಶಯವಿತ್ತಲ್ಲ ಅದು ಸತ್ತುಹೋಯಿತು, ಪರಿಣಾಮವಾಗಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸೋತು ಹೋಯಿತು.
ಇದು ದಕ್ಷಿಣ ಕನ್ನಡವೊಂದರ ಕಥೆ ಮಾತ್ರ ಅಂದುಕೊಳ್ಳಬೇಡಿ, ಶಿವಮೊಗ್ಗ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಲ್ಲ ಕಡೆಯೂ ಇದೇ ಕಥೆ. ಇಲ್ಲಿ ಒಬ್ಬಿಬ್ಬರನ್ನು ದೂರುತ್ತಿಲ್ಲ. ಯಡಿಯೂರಪ್ಪನವರು ಪಕ್ಷದಿಂದ ದೂರವಾಗಿಯಾಗಿದೆ. ಅವರ ವಿಷಯ ಬೇಡ. ಆದರೆ 2011, ಆಗಸ್ಟ್‌ನಲ್ಲಿ ಯಡಿಯೂರಪ್ಪನವರ ಬೆಂಬಲದಿಂದಾಗಿಯೇ ಮುಖ್ಯಮಂತ್ರಿಯಾದ ಸದಾನಂದಗೌಡರಿಗೆ ಪಕ್ಷಕ್ಕೆ ಒಳ್ಳೆಯ ವರ್ಚಸ್ಸು ತಂದುಕೊಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ ಅವರು ಮಾಡಿದ್ದೇನು? ಹತ್ತಿದ ಏಣಿಯನ್ನೇ ಒದೆಯತೊಡಗಿದರು. ಇದು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಕೆರಳಿಸಿತು. ಬಿಎಸ್‌ವೈ ವಿರುದ್ಧದ ಒಂದು ಕೇಸಿಗೆ ಹೈಕೋರ್ಟ್ ತಡೆ ಕೊಟ್ಟಿದೆ ಎಂದು ವರದಿಗಾರರು ಕೇಳಿದರೆ, ಇನ್ನೂ 11 ಬಾಕಿಯಿವೆ ಎಂದು ಕುಟುಕಿದರು. ಅಂಬರೀಶ್ ಹುಟ್ಟುಹಬ್ಬಕ್ಕೆ ಹೋಗಿ, ‘ನೀವು ಖಳನಾಯಕನಾಗಿ ಬಂದು ನಾಯಕರಾಗಿದಿರಿ, ಕೆಲವರು ನಾಯಕರಾಗಿ ಬಂದು ಖಳನಾಯಕರಾಗುತ್ತಿದ್ದಾರೆ’ ಎಂದು ಗೇಲಿ ಮಾಡಿದರು. ಒಕ್ಕಲಿಗ ಸಮಾವೇಶಕ್ಕೆ ಹೋಗಿ, ನಿಮ್ಮಿಂದಲೇ ನಾನು ಮುಖ್ಯಮಂತ್ರಿಯಾದೆ ಎಂದು ಸುಖಾಸುಮ್ಮನೆ ಹೇಳಿದರು. ತಾವು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಾಗ ಯಾವ ಅನಂತ್-ಈಶ್ವರಪ್ಪ-ಶೆಟ್ಟರ್ ಬಣ ತಮ್ಮನ್ನು ವಿರೋಧಿಸಿತ್ತೋ,  ಮುಖ್ಯಮಂತ್ರಿಯಾದ ಮೇಲೆ ಆ ವಿರೋಧಿ ಪಾಳಯವನ್ನು ಸೇರಿ ತಮ್ಮನ್ನು ಆಯ್ಕೆ ಮಾಡಿದ್ದವರನ್ನೇ ದೂರ ಮಾಡಿದರು. ಒಂದು ವೇಳೆ, ಸದಾನಂದಗೌಡರು ಇಂಥ ಚಿಲ್ಲರೆ ಕೆಲಸ ಮಾಡದೆ, ಸಣ್ಣ ಬುದ್ಧಿಯನ್ನು ತೋರದೆ ದೋಷಾರೋಪಮುಕ್ತರಾದ ಕೂಡಲೇ ಯಡಿಯೂರಪ್ಪನವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರೆ ಬಿಎಸ್‌ವೈ ಶಾಂತಿಯಿಂದಿರುತ್ತಿದ್ದರು, ತಾವೂ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಿತ್ತು. ಇಷ್ಟೊಂದು ಕಹಿ ಘಟನೆಗಳು ಸಂಭವಿಸುತ್ತಿರಲಿಲ್ಲ, ವೈರತ್ವ ಸೃಷ್ಟಿಯಾಗುತ್ತಿರಲಿಲ್ಲ. ಬಿಜೆಪಿ ಒಡೆಯುವ, ಶೆಟ್ಟರ್ ಅವರಂಥ ನಿಸ್ತೇಜ ವ್ಯಕ್ತಿತ್ವ ಮುಖ್ಯಮಂತ್ರಿಯಾಗುವ ಪ್ರಸಂಗ ಬಹುಶಃ ಬರುತ್ತಿರಲಿಲ್ಲ. ಪ್ರಶ್ನೆಗಳಿಗೆ ಗೌಡರು ಎಂದಿನ ತಮ್ಮ ನಗೆ ಬೀರಿದ್ದರಷ್ಟೇ ಸಾಕಿತ್ತು. ಆದರೆ ಸದಾನಂದಗೌಡರು ಹಾಗೂ ಶೆಟ್ಟರ ಸಮಸ್ಯೆ ಏನೆಂದರೆ ಒಬ್ಬರು ಅನಗತ್ಯವಾಗಿ ಬಾಯ್ತೆರೆಯುತ್ತಿದ್ದರು, ಇವರು ಅಗತ್ಯವಿದ್ದರೂ ಬಾಯ್ಬಿಡುವುದಿಲ್ಲ.
ಹಾಗಿರುವಾಗ ಒಂದು ಕಾಲು ಡೆಲ್ಲಿಯಲ್ಲಿದ್ದರೂ ಕರ್ನಾಟಕದಲ್ಲಿ ಇನ್ನೊಂದು ಕಾಲನ್ನಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಕನಸ್ಸನ್ನು ಪೋಷಿಸುತ್ತಲೇ ಇರುವ ಬಿಜೆಪಿ ‘ರಾಷ್ಟ್ರೀಯ’ ನಾಯಕ ಅನಂತ್ ಕುಮಾರ್, ಅವರ ಶಿಷ್ಯೋತ್ತಮರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಹಾಗೂ ಮತ್ತೆ ಅಧ್ಯಕ್ಷರಾಗಲು ಹಪಾಹಪಿಸುತ್ತಿರುವ ಸದಾನಂದಗೌಡ ಇವರನ್ನೆಲ್ಲ ನೋಡಿಕೊಂಡು ಜನ ಮತ್ತೆ ಹೇಗೆತಾನೇ ಬಿಜೆಪಿ ಮತ ಕೊಡುತ್ತಾರೆ ಹೇಳಿ? ಐದು ವರ್ಷ ಜನರಿಗೆ ಬೇಸರ ಮೂಡಿಸಿದ, ಬಿಜೆಪಿಯ ಬಗ್ಗೆ ಜನ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿದ ಇದೇ ಮುಖಗಳು ಮತ್ತೆ ಪಕ್ಷದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿವೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ನಿಲ್ಲಬೇಕು ಎಂದು ಬಿಜೆಪಿ ಶಾಸಕರು, ಸಚಿವರೇ ಮೈಂಡ್ ಫಿಕ್ಸ್ ಮಾಡಿಕೊಂಡಿಲ್ಲ! ಅದಿರಲಿ, ಗೆದ್ದು ಗದ್ದುಗೆ ಏರಿದ ಮೇಲೆ ಈ ಬಿಜೆಪಿಯವರಲ್ಲಿ ಒಂದು ಗುರಿ, ಉದ್ದೇಶವಿದೆ ಎಂದು ಯಾವತ್ತಾದರೂ ಅನಿಸಿತಾ? ಮೂವರಲ್ಲಿ ಒಬ್ಬ ಮುಖ್ಯಮಂತ್ರಿಯಾದರೂ, ಒಬ್ಬ ಸಚಿವರಾದರೂ ಜನರಲ್ಲಿ ಭರವಸೆ ಉಳಿಯುವಂತೆ ನಡೆದುಕೊಂಡರೆ?
ಹಾಗಂತ ಬಿಜೆಪಿಯ ಭವಿಷ್ಯವೇ ಮಸುಕಾಗಿ ಹೋಯಿತು ಅಂತಲ್ಲ. ಈಗಲೂ ಎಚ್ಚೆತ್ತುಕೊಳ್ಳಬಹುದು. ಅದರ ಮೊದಲ ಹೆಜ್ಜೆಯಾಗಿ ಸೂಕ್ತ ವ್ಯಕ್ತಿಯನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕು. ಹಾಗೆ ಮಾಡುವಾಗ ಅದೇ ಹಳೆ, ಹಳಸಲು ಮುಖಗಳನ್ನು, ಬಸವಳಿದವರನ್ನು, ದುಡ್ಡುಮಾಡುವುದರಲ್ಲೇ ಜೀವನದ ಸಾರ್ಥಕ್ಯ ಕಾಣುತ್ತಿರುವ ದೊಡ್ಡ ಹೆಸರುಗಳನ್ನು, ಕೋಲೆಬಸವನಂಥ ವ್ಯಕ್ತಿತ್ವದ ನಳಿನ್ ಕುಮಾರ್ ಅವರನ್ನು, ಬಿಟ್ಟು ಬೇರೆಯವರ ಬಗ್ಗೆ ದೃಷ್ಟಿಹಾಯಿಸಬೇಕು. ಇಂದು ಬಿಜೆಪಿಯಲ್ಲಿ ಯಾರೂ ಸುಭಗರಿಲ್ಲ. ಜತೆಗೆ ಪ್ರಾಮಾಣಿಕತೆಯನ್ನೇ ಮಾನದಂಡವಾಗಿಸಿಕೊಳ್ಳಲು ಇಂದು ಯಾವ ಪಕ್ಷಕ್ಕೂ ಸಾಧ್ಯವಿಲ್ಲ. ಹಾಗಾಗಿ ಇಡೀ ರಾಜ್ಯವನ್ನು ಸುತ್ತಿ ಮತ್ತೆ ಸಂಘಟನೆ ಮಾಡುವಂಥ, ವಿಮುಖರಾಗಿರುವ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸುವ ಶಕ್ತಿಯನ್ನು ಮಾನದಂಡವಾಗಿಸಿಕೊಂಡರೆ, ಈ ಬಾರಿಯಲ್ಲ ಮುಂದಿನ ಬಾರಿಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಸಿ.ಟಿ. ರವಿಯವರತ್ತ ನೋಡಬಹುದು, ಪ್ರಹ್ಲಾದ ಜೋಶಿಯೂ ಇದ್ದಾರೆ. ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗಲಿಂದಲೂ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡಿರುವ ರವಿಗೆ ಹಳೆಯ ಕಾರ್ಯಕರ್ತರ ಪರಿಚಯವೂ ಇದೆ, ಸಂಪರ್ಕವೂ ಇದೆ. ಜೊತೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ನಿಚ್ಚಳ ಗೆಲುವು ತಂದುಕೊಟ್ಟಿರುವ ರವಿಗೆ ತಂತ್ರಗಾರಿಕೆಯೂ ಗೊತ್ತು, ಒಳ್ಳೆಯ ಮಾತುಗಾರನೂ ಹೌದು. ಇನ್ನು ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪ್ರಾಮುಖ್ಯತೆಗೆ ಬಂದ ಪ್ರಹ್ಲಾದ್ ಜೋಷಿ ಅವರಲ್ಲಿ ಸೈದ್ಧಾಂತಿಕ ಬದ್ಧತೆಯೂ ಇದೆ, ಚುನಾವಣಾ ರಾಜಕೀಯದಲ್ಲೂ ಅವರೊಬ್ಬ ಯಶಸ್ವೀ ರಾಜಕಾರಣಿ ಹಾಗೂ ಕ್ಲೀನ್ ಇಮೇಜ್ ಇದೆ. ಸಣ್ಣತನ ಬಿಟ್ಟರೆ ಸದಾನಂದಗೌಡರಿಗೂ ಅಧ್ಯಕ್ಷರಾಗುವ ಅರ್ಹತೆ, ಶಕ್ತಿ, ಮಾತುಗಾರಿಕೆ ಇದೆ. ಹಾಗಿರುವಾಗ ವಲಸೆ ಹಕ್ಕಿ ಗೋವಿಂದ ಕಾರಜೋಳರನ್ನು ಅಧ್ಯಕ್ಷರನ್ನಾಗಿ ಮಾಡುವ ಯೋಚನೆಯೇಕೆ ಬೇಕು? ಈ ನಡುವೆ ಹಾಲಾಡಿ ಶ್ರೀನಿವಾಸ ಶೆಟ್ಟರು, ಬಸವರಾಜ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಹಾಗೂ ಬಸವರಾಜ್ ಪಾಟೀಲ್ ಸೇಡಂ ಅವರನ್ನು ಸಕ್ರೀಯ ರಾಜಕಾರಣಕ್ಕೆ ತರುವ ಕೆಲಸ ಮಾಡಬೇಕು. ಅಂದಹಾಗೆ, ಡಾ. ಪ್ರಭಾಕರ ಭಟ್ಟರೇನು ಸಾಮಾನ್ಯ ವ್ಯಕ್ತಿಯಲ್ಲ. ಛಲವಾದಿ. ಯಾರನ್ನು ಬೇಕಾದರೂ ಗೆಲ್ಲಿಸುವ ತಾಕತ್ತಿದೆ. ಆದರೆ ಬಾಲಬಡುಕರ ಬದಲಿಗೆ ಪಕ್ಷದ ನಿಷ್ಠಾವಂತರಿಗೆ ಬೆಲೆಕೊಡುವಂತೆ, ಮಣೆಹಾಕುವಂತೆ ಅವರಿಗೆ ಕಿವಿಮಾತು ಹೇಳಬೇಕು. ಇತ್ತ ಬಿಜೆಪಿಯವರು ‘ಕೇಶವ ಕೃಪ’ಕ್ಕೆ ಸುಳ್ಳೇ ಸರ್ಕಿಟ್ ಹೊಡೆದರೆ ಸಾಲದು, ಜಯದೇವರು, ಮುಕುಂದರು ಹೇಳುವ ಬುದ್ಧಿವಾದವನ್ನು ಕಿವಿಯಿಂದಾಚೆಗೇ ಬಿಡದೆ ಮನಸ್ಸಿಗೆ ತೆಗೆದುಕೊಂಡು ಜನರಿಗೆ ಒಳ್ಳೆಯದನ್ನು ಮಾಡಬೇಕು. ಇವುಗಳ ಜತೆಗೆ ಸಂಘದಿಂದ ಪಕ್ಷದ ಜವಾಬ್ದಾರಿ ಪಡೆದುಕೊಂಡು ಹೋಗಿರುವ ಸಂತೋಷ್‌ಜೀಯವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಬೇಕು. ಸಂತೋಷ್‌ಜೀ ಬಗ್ಗೆ ಬಿಜೆಪಿಯಲ್ಲಿರುವ ಕೆಲವು ಹೊಟ್ಟೆಬಾಕರಿಗೆ ಅಸಮಾಧಾನವಿದೆ. ಆದರೆ ಅವರೊಬ್ಬ ನಿಷ್ಠುರವಾದಿ, ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿ ಬಿಡುವ ಅವರಂಥ ವ್ಯಕ್ತಿತ್ವವುಳ್ಳವರು ಬಿಜೆಪಿಗೆ ಅಗತ್ಯವಾಗಿ ಬೇಕು.
ಇಲ್ಲವಾದರೆ…
-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ