ನನ್ನ ಬ್ಲಾಗ್ ಪಟ್ಟಿ

ಗುರುವಾರ, ಏಪ್ರಿಲ್ 4, 2013

ಟಿಪ್ಪುವನ್ನು ದ್ವೇಷಿಸಬೇಕೆಂದಲ್ಲ, ಸತ್ಯ ತಿಳಿಯಲಿ ಎಂದು!

‘ಒಬ್ಬ ಸಾಹಿತಿ ಆಡಿದ ಅಪ್ಪಟ ತಾಜಾ ಸುಳ್ಳಿನ ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೆಸರಿಡುವುದನ್ನು ವಿರೋಧಿಸುವಾಗ ಟಿಪ್ಪು ಹಿಂದು ದ್ವೇಷಿಯೆಂದೂ, 71 ಸಾವಿರ ಹಿಂದುಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂದು ಸುಳ್ಳು ಹೇಳಿದ್ದಾರೆ. ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲಿ ಕೊಡಗು ಪ್ರಾಂತ್ಯದಲ್ಲಿ ಅಷ್ಟು ಜನಸಂಖ್ಯೆ ಇತ್ತೇ ಎಂಬ ಬಗ್ಗೆ ಸಂಶಯವಿದೆ. ಸರ್ಕಾರವೇ ಪ್ರಕಟಿಸಿರುವ ಕೂರ್ಗ್ ಗೆಝೆಟಿಯರ್ ನೋಡಿದೆ. 1871ರಲ್ಲಿ ಕೂರ್ಗ್‌ನಲ್ಲಿ ಕೇವಲ 1,68,312 ಜನರಿದ್ದರು. 1981ರ ಜನಗಣತಿ ಪ್ರಕಾರ 3,22,829 ಜನಸಂಖ್ಯೆಯಿತ್ತು. 1782-99ರಲ್ಲಿ ಎಷ್ಟು ಜನರಿದ್ದಿರಬಹುದು ಎಂದು ಲೆಕ್ಕಹಾಕಿದರೆ 1 ಲಕ್ಷಕ್ಕಿಂತ ಹೆಚ್ಚಿರಲಾರರು. ಆ ನೂರು ಸಾವಿರ ಜನರಲ್ಲಿ 71 ಸಾವಿರ ಜನರನ್ನು ಇಸ್ಲಾಂ ಮತಕ್ಕೆ ಮತಾಂತರಿಸಿದ್ದರೆ 210 ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಮುಸ್ಲಿಮರಿರಬೇಕಿತ್ತು. ಈಗ ಕೊಡಗು ಜಿಲ್ಲೆಯ ಮುಸ್ಲಿಮರ ಸಂಖ್ಯೆ 14,730 ಮಾತ್ರ. ಸಂಶೋಧಕರು ಹಸಿ ಹಸಿ ಸುಳ್ಳು ಹೇಳಬಹುದೇ?’
ಹಾಗಂತ ಫೆಬ್ರವರಿ 9ರಂದು ಆರಂಭವಾದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೋ. ಚೆನ್ನಬಸಪ್ಪನವರು ಡಾ. ಚಿದಾನಂದಮೂರ್ತಿಯವರ ಮೇಲೆ ಟೀಕಾಪ್ರಹಾರ ಮಾಡಿಬಿಟ್ಟರು!
ಈ ನಾಡಿನ ಮಾಗಿದ ಹಾಗೂ ಹಿರಿತಲೆ ಚೆನ್ನಬಸಪ್ಪನವರು ತೆರೆದಿಟ್ಟ ಅಂಕಿ-ಅಂಶಗಳು ಹೇಗಿದ್ದವೆಂದರೆ ಅಕ್ಷರಜ್ಞಾನವಿಲ್ಲದವರೂ ಅಹುದಹುದೆಂದು ಬಿಡಬೇಕು. ಆದರೆ ಸ್ವಲ್ಪ ಸಮಾಧಾನವಾಗಿ ಕುಳಿತು ಯೋಚಿಸಿದರೆ ನಮ್ಮ ಚೆನ್ನಬಸಪ್ಪನವರು ಡ್ಯಾರೆಲ್ ಹಫ್ ಬರೆದ “How to Lie with Statistics’ ಪುಸ್ತಕದಿಂದ ಬಹಳಷ್ಟು ಪ್ರೇರಣೆ ಪಡೆದಿದ್ದಾರೆ ಎಂಬುದು ಕಾಣುತ್ತದೆ. ವಿವೇಕ ಕೈಕೊಟ್ಟಾಗ ಬುದ್ಧಿಯೂ ಮಂಕಾಗುತ್ತದಂತೆ. ಆದರೆ ಉದ್ದೇಶ ಶುದ್ಧಿಯಿಲ್ಲದ ಕೆಲವರು ಬುದ್ಧಿಯನ್ನೂ ವಿವೇಕರಹಿತವಾಗಿ ಬಳಸುತ್ತಾರೆ. ಹೀಗೆಯೇ ಹೇಳಬೇಕಾಗುತ್ತದೆ. ಏಕೆಂದರೆ 2011ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ಅಂದಾಜು 5.48 ಲಕ್ಷ. ಅದರಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚೂಕಡಿಮೆ ಒಂದೂಕಾಲು ಲಕ್ಷ. ಸ್ವಾಮಿ ಚೆನ್ನಬಸಪ್ಪನವರೇ, ಇಡೀ ಕೊಡಗು ಜಿಲ್ಲೆಯಲ್ಲಿ ಇರುವ ಮುಸ್ಲಿಮರ ಸಂಖ್ಯೆಯೆಂದು ನೀವು ಕೊಟ್ಟಿರುವ 14,730 ಸಂಖ್ಯೆಯ ಮೂರು ಪಟ್ಟು ಕೇವಲ ವಿರಾಜಪೇಟೆ ತಾಲೂಕಿನಲ್ಲೊಂದರಲ್ಲೇ ಇದ್ದಾರೆ! “ಆ ನೂರು ಸಾವಿರ ಜನರಲ್ಲಿ 71 ಸಾವಿರ ಜನರನ್ನು ಇಸ್ಲಾಂ ಮತಕ್ಕೆ ಮತಾಂತರಿಸಿದ್ದರೆ 210 ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಮುಸ್ಲಿಮರಿರಬೇಕಿತ್ತು” ಎನ್ನುವ ಚೆನ್ನಬಸಪ್ಪನವರ ‘ತರ್ಕ’ ಆ ಭಗವಂತನಿಗೇ ಮೆಚ್ಚಿಗೆಯಾಗಬೇಕು. ಮುಸ್ಲಿಮರ ಸಂಖ್ಯಾವೃದ್ಧಿಯ ದರದ ಕನಿಷ್ಠ ಅರಿವಾದರೂ ಇವರಿಗಿದೆಯೇ? ಯಾವುದೇ ಅಂಕಿ-ಅಂಶಗಳನ್ನು ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವಿಕಿಪಿಡಿಯಾ ಕೂಡ “Kodagu is home to a sizeable population of Muslims’, ಅಂದರೆ ಕೊಡಗಿನಲ್ಲಿ ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎನ್ನುತ್ತದೆ. ಇನ್ನು ‘ಟಿಪ್ಪು ಸುಲ್ತಾನ್ ಎಕ್ಸ್‌ರೇಡ್‌’ ಪುಸ್ತಕದಲ್ಲಿ “ಟಿಪ್ಪು ಒಬ್ಬ ಕಳ್ಳ ಬೆಕ್ಕು ಎಂಬಂತೆಯೇ ಕೊಡಗಿಗೆ ನುಗ್ಗಿದ. ಆತನ ಆಕ್ರಮಣ ಕೇವಲ ಸಾಮ್ರಾಜ್ಯಶಾಹಿಯೊಬ್ಬನ ಆಕ್ರಮಣವಾಗಿರಲಿಲ್ಲ. ಅದು ಸಾಂಸ್ಕೃತಿಕ ಮತ್ತು ಅಪ್ಪಟ ಮತೀಯ ಆಕ್ರಮಣವಾಗಿತ್ತು. ಟಿಪ್ಪುವಿನ ಈ ತಂತ್ರ ಅಲ್ಲಿ ಗೆದ್ದಿತು. ಟಿಪ್ಪು ಪೇಟೆ ಪಟ್ಟಣಗಳಿಗೆ ನುಗ್ಗುವಂತೆಯೇ ಊರೂರುಗಳಿಗೂ ನುಗ್ಗತೊಡಗಿದ. ಮತಾಂತರ ಇಲ್ಲವೇ ಖಡ್ಗಕ್ಕೆ ಬಲಿ ಸೂತ್ರವನ್ನು ಅನುಸರಿಸತೊಡಗಿದ. ಇದು ಕೊಡವರ ಶಕ್ತಿಯನ್ನು ಕುಂದಿಸತೊಡಗಿತು. ಮತ್ತು ಕೊಡವರ ಸೈನ್ಯ ಮಂಕಾಗತೊಡಗಿತು. ನೇರ ಯುದ್ಧದಿಂದ ಗೆಲ್ಲಲಾಗದು ಎಂಬುದನ್ನು ಅರಿತಿದ್ದ ಆತ ದೇವಸ್ಥಾನಗಳಿಗೆ ಲಗ್ಗೆ ಇಡತೊಡಗಿದ. ಹೀಗೆ ತನ್ನ ಮತಾಂಧ ನೆಲೆಯಿಂದ ರಾಜಕೀಯ ಬೇಳೆ ಬೇಯಿಸಿಕೊಂಡ ಟಿಪ್ಪು ಸಲೀಸಾಗಿ ಮಲಬಾರಿಗೆ ಮುಂದಡಿಯಿಟ್ಟ. ಕೊಡಗಿನಲ್ಲಿ ಆತ ನಡೆಸಿದ ಕ್ರೌರ್ಯದ ಕುರುಹುಗಳು ಇಂದೂ ಕಣ್ಣಿಗೆ ರಾಚುತ್ತವೆ. ಕೆಲವು ಇತಿಹಾಸಕಾರರು ಟಿಪ್ಪು ಸುಮಾರು 40 ಸಾವಿರ ಕೊಡವರನ್ನು ಮತಾಂತರಿಸಿದ ಮತ್ತು ಅಷ್ಟೇ ಸಂಖ್ಯೆಯ ಕೊಡವರನ್ನು  ಕೊಂದಿದ್ದ ಎಂದು ಬರೆದಿದ್ದಾರೆ. ಸಂಖ್ಯೆಯಲ್ಲಿ ಉತ್ಪ್ರೇಕ್ಷೆ ಇರುವುದನ್ನು ಅಲ್ಲಗೆಳೆಯಲಾಗದು. ಆದರೆ ಆತ ಕೊಡವರನ್ನು ಮತಾಂತರಿಸಿ ಅವರು ಇಂದು ‘ಕೊಡವ ಮಾಪಿಳ್ಳೆ’ಗಳೆಂದು ಕರೆಸಿಕೊಳ್ಳುತ್ತಿರುವುದು ಮತ್ತು  ಟಿಪ್ಪುವಿನ ‘ಅಹಮದಿ ಸೈನ್ಯದಲ್ಲಿ ನೂರಾರು ಸಂಖ್ಯೆಯ ಕೊಡವರು ಇದ್ದದ್ದು ಇತಿಹಾಸದ ಸತ್ಯಕ್ಕೆ ಸಾಕ್ಷಿಯಾಗಿವೆ’ ಎಂದು ಕೊಡವರೇ ಆಗಿರುವ ಲೇಖಕ ಐ.ಎಂ ಮುತ್ತಣ್ಣ ಬರೆದಿದ್ದಾರೆ. ಇಂದು ಕೊಡವ ಮನೆ ಹೆಸರುಗಳಿರುವ ಮಾಪಿಳ್ಳೆ(ಮುಸಲ್ಮಾನ)ಗಳಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ ಇವೆ), ದುದ್ದಿಯಂಡ, ಕದ್ದಡಿಯಂಡ, ಕೊಳುಮಂಡ, ದೇವಣಗೇರಿ ಗ್ರಾಮದಲ್ಲಿ ಪುಲಿಯಂಡ, ವೀರಾಜಪೇಟೆ ಸುತ್ತಮುತ್ತ ಕೂವಲೇರ, ಈತಲ್ತಂಡ, ಮೀತಲ್ತಂಡ, ಕುಪ್ಪೋಡಂಡ, ಕಪ್ಪಂಜೀರ, ಮಡಿಕೇರಿ ತಾಲೂಕಿನಲ್ಲಿ ಕಾಳೇರ, ಚೆಕ್ಕೇರ, ಚೆರ್ಮಕಾರಂಡ, ಮಣಿಯಂಡ, ಬಲಸೋಜಿಕಾರಂಡ, ಮಂಡೇಯಂಡ ಹೆಸರಿನ ಮನೆಗಳಿವೆ. ಇನ್ನೂ ಒಂದು ವಿಚಿತ್ರವೆಂದರೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿರುವ ಮುಸಲ್ಮಾನ ಮನೆತನದ ಹೆಸರು ಹರಿಶ್ಚಂದ್ರ! ಟಿಪ್ಪುವಿನ ಭಯದಿಂದ ಕೊಡಗಿನ ಅರಸ ಓಂಕಾರೇಶ್ವರ ದೇವಸ್ಥಾನದ ಕಳಶವನ್ನು ತೆಗೆದು ಗುಂಬಜ್ ಅನ್ನು ನಿರ್ಮಿಸಿದ. ದೂರದಿಂದ ನೋಡಿದರೆ ಇದು ಮಸೀದಿಯಂತೆ ಕಾಣುತ್ತಿತ್ತು. ಇಂದಿಗೂ ಓಂಕಾರೇಶ್ವರ ದೇವಸ್ಥಾನ ಗುಂಬಜ್ ಆಕಾರದಲ್ಲೇ ಇದೆ.
ಇವು ಏನನ್ನು ಸೂಚಿಸುತ್ತವೆ?
ಇನ್ನೂ ಒಂದು ಮಜಾ ಗೊತ್ತಾ? ಟಿಪ್ಪು ಕೂರ್ಗ್‌ನಲ್ಲಿ 71 ಸಾವಿರ ಹಿಂದುಗಳನ್ನು ಮತಾಂತರ ಮಾಡಿದ ಎಂದು ಡಾ. ಚಿದಾನಂದಮೂರ್ತಿಯವರು ಎಲ್ಲಿಯೂ ಹೇಳಿಯೇ ಇಲ್ಲ. ‘ಮಲಬಾರ್ ಪ್ರದೇಶ, ಕೂರ್ಗ್ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಟಿಪ್ಪು 70 ಸಾವಿರ ಕ್ರಿಶ್ಚಿಯನ್ನರನ್ನು, ಒಂದು ಲಕ್ಷ ಹಿಂದುಗಳನ್ನು ಮತಾಂತರ ಮಾಡಿದ’ ಎಂದು ಅವರು ಹೇಳಿದ್ದರೇ ಹೊರತು ‘ಕೂರ್ಗ್‌ನಲ್ಲಿ 71 ಸಾವಿರ ಹಿಂದುಗಳನ್ನು ಮತಾಂತರಿಸಿದ’ ಎಂದಲ್ಲ! ಹಾಗಿದ್ದರೂ ಅವರ ಹೇಳಿಕೆಯನ್ನು ತಿರುಚುವ, ತಮ್ಮದೇ ಆದ ಅಂಕಿ-ಅಂಶ ಕೊಡುವ ದರ್ದು ಚೆನ್ನಬಸಪ್ಪನವರಿಗೇನಿತ್ತು? ಸಾಹಿತ್ಯ ಸಮ್ಮೇಳದ ಸಮಾರೋಪ ಭಾಷಣ ಮಾಡಿದ ಎಂ.ಎಂ. ಕಲ್ಬುರ್ಗಿಯವರೂ ಚಿದಾನಂದಮೂರ್ತಿಯವರನ್ನು ಕುಟುಕಿದರು. ಕನ್ನಡ ಸಾಹಿತ್ಯ ಸಮ್ಮೇಳನದಂಥ ವೇದಿಕೆಯನ್ನು ತಮ್ಮ ಕ್ಷುಲ್ಲಕ ಮನಸ್ಥಿತಿಯನ್ನು ತೋರ್ಪಡಿಸಲು, ಚಿದಾನಂದಮೂರ್ತಿಯವರಂಥ ಪ್ರಾಮಾಣಿಕ ಸಂಶೋಧಕರನ್ನು ಹೀಗಳೆಯಲು ದುರುಪಯೋಗಪಡಿಸಿಕೊಂಡರೆ ಕಥೆ ಏನಾದೀತು? ‘ಕನ್ನಡ ಅರಸರ ಅಕನ್ನಡ ಪ್ರಜ್ಞೆ’ ಎಂಬ ಪುಸ್ತಕ ಬರೆದಿದ್ದ ಕಲ್ಬುರ್ಗಿ, ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಕಿತ್ತೊಗೆದು ಪರ್ಷಿಯನ್ ಹೇರಿದ ಟಿಪ್ಪು ಬಗ್ಗೆ ‘ಟಿಪ್ಪುವಿನ ಅಕನ್ನಡ ಪ್ರಜ್ಞೆ’ ಬರೆಯಲಿ ನೋಡೋಣ?
ಏಕೆ ಇದನ್ನೆಲ್ಲಾ ಹೇಳಬೇಕಾಗಿದೆಯೆಂದರೆ, ಬಹಳ ಅಪಾಯಕಾರಿ ಸಂಗತಿಯೇನೆಂದರೆ ಈ ವ್ಯಕ್ತಿಗಳು ಸಮಾಜದಲ್ಲಿ, ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವೇದಿಕೆಗಳು ಆಯಾಚಿತವಾಗಿ ದೊರೆಯುತ್ತವೆ. ಅಂತಹ ವೇದಿಕೆಗಳನ್ನು ಬಳಸಿಕೊಂಡು ಸುಳ್ಳು ಹೇಳಲು ಆರಂಭಿಸಿದರೆ ಅವರಿಂದ ಬುದ್ಧಿ ಹೇಳಿಸಿಕೊಳ್ಳುತ್ತಿರುವ ಸಮಾಜದ ಗತಿಯೇನು? ಇತಿಹಾಸದಿಂದ ಪಾಠ ಕಲಿಯದವರು, ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿದೆ. ಆದರೆ ಈ ಬುದ್ಧಿಜೀವಿ ಮಹಾಶಯರು ನೈಜ ಇತಿಹಾಸವನ್ನೇ ಓದಬೇಡಿ, ತಿಳಿದುಕೊಳ್ಳಬೇಡಿ, ಮಾತನಾಡಬೇಡಿ, ನಾವು ಹೇಳಿದ ಬೊಗಳೆಯನ್ನೇ ಕೇಳಿಕೊಂಡಿರಿ ಎನ್ನುತ್ತಾರಲ್ಲಾ, ಇದನ್ನು ಕೇಳಿಕೊಂಡು ಸುಮ್ಮನಿರಬೇಕೆ?!
ಇಷ್ಟಕ್ಕೂ ಅಬ್ದುಲ್ ಕಲಾಂ, ಅಬ್ದುಲ್ ನಜೀರ್ ಸಾಬ್‌ರಂಥ ಅಪ್ರತಿಮ ನೇತಾರರ ಹೆಸರನ್ನು ಬಿಟ್ಟು ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಉದ್ದೇಶಿತ ಕೇಂದ್ರೀಯ ವಿವಿಗೆ ಟಿಪ್ಪು ಹೆಸರೇ ಏಕೆ ಬೇಕು? ಯಾವ ಆ್ಯಂಗಲ್‌ನಲ್ಲಿ ಇವರಿಗೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಂತೆ ಕಾಣುತ್ತಾನೆ? ಸ್ವಾತಂತ್ರ್ಯ ಹೋರಾಟಗಾರ ಎಂದರೆ ಯಾರು ಹಾಗೂ ಯಾರನ್ನು ಹಾಗೆ ಕರೆಯಬಹುದು?
ಒಬ್ಬ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೇ ಎಂದು ತಿಳಿಯಲು ಇತಿಹಾಸದ ಟೈಮ್‌ಲೈನ್ (Timeline) ನೋಡಬೇಕಾಗುತ್ತದೆ. ಅಂದರೆ ಆಯಾ ಕಾಲಘಟ್ಟ ಹಾಗೂ ಘಟನೆಗಳನ್ನು ಕ್ರಮವಾಗಿ ನೋಡಬೇಕು. ಹಾಗೆ ನೋಡಿದಾಗ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನ ಯಾವ ಹೋರಾಟವನ್ನೂ ಸ್ವಾತಂತ್ರ್ಯ ಹೋರಾಟ ಎನ್ನುವುದಕ್ಕಾಗುವುದಿಲ್ಲ. ಅಶೋಕ ಮಡಿದ ನಂತರ ಇಡೀ ದೇಶ ಏಕ ಚಕ್ರಾಧಿಪತಿಯ ಆಡಳಿತಕ್ಕೆ ಒಳಪಟ್ಟ ಸಂದರ್ಭವೇ ಮತ್ತೆ ಒದಗಿ ಬಂದಿರಲಿಲ್ಲ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವರೆಗೂ ಭಾರತ ಎಂಬ ಏಕಮಾತ್ರ ದೇಶದ ಕಾನ್ಸೆಪ್ಟೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ರಾಜ್ಯ, ಗಡಿ, ಆಡಳಿತ ಉಳಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಡುತ್ತಿದ್ದರು. ಟಿಪ್ಪು, ಮರಾಠರು, ಕೊಡವರ ವಿರುದ್ಧ ಹೋರಾಡಿದಂತೆ ಟಿಪ್ಪುವಿನ ವಿರುದ್ಧ ನವಾಬ, ನಾಯರ್‌ಗಳೂ ಹೋರಾಡುತ್ತಿದ್ದರು. ಟಿಪ್ಪುವಿಗೆ ಬ್ರಿಟಿಷರ ವಿರುದ್ಧ ಎಷ್ಟು ದ್ವೇಷವಿತ್ತೋ, ಮರಾಠರಿಗೆ ಹೈದರ್-ಟಿಪ್ಪು ಮೇಲೂ ಅಷ್ಟೇ ಕೋಪವಿತ್ತು. ಹೈದರಾಲಿ ಬಗೆದ ದ್ರೋಹದಿಂದ ರಾಜ್ಯ ಕಳೆದುಕೊಂಡಿದ್ದ ಒಡೆಯರ್ ವಂಶಸ್ಥರಿಗೂ ಈ ಅಪ್ಪ-ಮಗನನ್ನು ಕಂಡರಾಗುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು 1771ರಲ್ಲೇ ಹೈದರಾಲಿಗೆ ಆಹ್ವಾನ ಕೊಟ್ಟಿದ್ದ ಮರಾಠರಿಗೆ ಹೈದರಾಲಿ-ಟಿಪ್ಪುಗಿಂತಲೂ ಮೊದಲೇ ಬ್ರಿಟಿಷರ ಮೇಲೆ ವೈರತ್ವವಿತ್ತು. ಆದರೆ ಅದೇ ಮರಾಠರು ಮೂರು, ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಪರವಿದ್ದರು. ಅಷ್ಟು ಮಾತ್ರವಲ್ಲ, ಮೊಘಲರು ರಜಪೂತರ ವಿರುದ್ಧ, ಮರಾಠರು ಮೊಘಲರು ಹಾಗೂ ಬಹಮನಿ ಸುಲ್ತಾನರ ವಿರುದ್ಧ ಹೋರಾಡುತ್ತಿದ್ದರು. ಎಲ್ಲರೂ ರಾಜ್ಯ ಕಳೆದುಕೊಂಡು ಬ್ರಿಟಿಷರು ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವವರೆಗೂ ಒಬ್ಬ ‘ಕಾಮನ್ ಎನಿಮಿ’ ಎನ್ನುವವನೂ ಇರಲಿಲ್ಲ, ಸಾಂಘಿಕ ಹೋರಾಟದ ಕಾಲವೂ ಬಂದಿರಲಿಲ್ಲ.
ಆದರೆ…
1857ರ ಹೊತ್ತಿಗೆ ಎಲ್ಲ ರಾಜವಂಶಗಳು, ದೊರೆಗಳು, ಸುಲ್ತಾನರು, ನಿಜಾಮರು, ನವಾಬರು, ಪಾಳೇಗಾರರು ಸೋತು ಶರಣಾಗಿ ‘ಬ್ರಿಟಿಷ’ರೆಂಬ ಒಬ್ಬ ಸಾಮಾನ್ಯ ಶತ್ರು ಸೃಷ್ಟಿಯಾದ. ಅಶೋಕ, ಅವನನ್ನು ಬಿಟ್ಟರೆ ಹೆಚ್ಚೂ ಕಡಿಮೆ ಭಾರತದ ಬಹುತೇಕ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದ ಅಕ್ಬರ್ ನಂತರ ತಲೆಯೆತ್ತಿದ ಅಂತಹ ಏಕೈಕ ಶಕ್ತಿಯೆಂದರೆ ಬ್ರಿಟಿಷರಾಗಿದ್ದರು. ಹೀಗೆ ಒಬ್ಬ ಕಾಮನ್ ಎನಿಮಿ, ಏಕಮಾತ್ರ ಶತ್ರು ಸೃಷ್ಟಿಯಾದ ನಂತರ ಎಲ್ಲರೂ ಕೈಜೋಡಿಸಿ ಮೊದಲು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ಮುಂದಾದರು. ಅಲ್ಲಿಂದ ಮುಂದಿನದ್ದನ್ನು ಮಾತ್ರ ಸ್ವಾತಂತ್ರ್ಯ ಹೋರಾಟ ಎನ್ನಬಹುದು.
ಆ 1857ರ ಕದನವನ್ನೂ ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆಯುವ ಮೂಲಕ ‘ದಂಗೆ’ಯ ರೂಪ ಕೊಡಲು ಪ್ರಯತ್ನಿಸಿದರು, ಅದೂ ಹಾಗೆಯೇ ಉಲ್ಲೇಖಗೊಳ್ಳುತ್ತಿತ್ತು. Sepoy Mutiny @¢ÚÈÛ Indian Mutiny  ಎಂದೇ ಕರೆಯುತ್ತಿದ್ದರು. ಕೊನೆಗೆ 1909ರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮರಾಠಿಯಲ್ಲಿ ಬರೆದ “The History of the War of Indian Independence’ ನಲ್ಲಿ 1857ರ ಕದನವನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (First War of Independence) ಎಂದು ವ್ಯಾಪಕವಾಗಿ ಬಳಸಿ ಪ್ರಚಲಿತಕ್ಕೆ ತಂದರು. ಅದಕ್ಕೂ ತಗಾದೆ ತೆಗೆದಿದ್ದ ಸಿಖ್ಖರು, 1845- 46 ರಲ್ಲಿ ನಡೆದ ಮೊದಲ ಆಂಗ್ಲೋ ಸಿಖ್ ಯುದ್ಧವನ್ನೇ ‘First War of Independence’ ಎಂದು ಕರೆಯಬೇಕೆಂದು ಪಟ್ಟು ಹಿಡಿದಿದ್ದರು.
ಇದೆಲ್ಲಾ ಏನನ್ನು ಸೂಚಿಸುತ್ತದೆ?
1857ರ ಸಿಪಾಯಿ ದಂಗೆಗಿಂತ ಮೊದಲಿನವು ಸ್ವಾತಂತ್ರ್ಯ ಸಂಗ್ರಾಮಗಳಾಗಿರಲಿಲ್ಲ. ಹಾಗಾಗಿ ಯಾರನ್ನೂ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕಾಗುವುದಿಲ್ಲ. ಅವು ತಮ್ಮ ರಾಜ್ಯ, ಭಾಗಗಳನ್ನು ಉಳಿಸಿಕೊಳ್ಳಲು ನಡೆಸುತ್ತಿದ್ದ ಹೋರಾಟಗಳಷ್ಟೇ ಆಗಿದ್ದವು. ನಮ್ಮ ಸಾಹಿತಿ ಮಹಾಶಯರಿಗೆ ಇಂತಹ ಸರಳ ಸತ್ಯವೂ ತಿಳಿದಿಲ್ಲವೆ? 1782ರಿಂದ 99ರವರೆಗೂ ಆಡಳಿತ ನಡೆಸಿದ, ಆ ಅವಧಿಯಲ್ಲಿ ತನ್ನ ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಅನ್ಯರದ್ದನ್ನು ಕಬಳಿಸುವುದಕ್ಕಾಗಿ ಮರಾಠರು, ಕೊಡವರು, ಮಲಬಾರಿನ ರಾಜರು, ಕರ್ನಾಟಕದ ದೊರೆಗಳ ಜತೆಗೆ ಬ್ರಿಟಿಷರ ವಿರುದ್ಧವೂ ಹೋರಾಡಿದ ಟಿಪ್ಪು ಹೇಗೆ ‘ಸ್ವಾತಂತ್ರ್ಯ ಹೋರಾಟಗಾರ’ನಾಗಿ ರೂಪುಗೊಂಡು ಬಿಡುತ್ತಾನೆ?! ಒಂದೇ ದೇಶ, ಒಂದೇ ವ್ಯವಸ್ಥೆ ಎನ್ನುವ ಕಲ್ಪನೆಗಳೇ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಅನ್ನುವುದಾದರೂ ಹೇಗೆ ನಡೆಯಲು ಸಾಧ್ಯ?
ಹಾಗಾದರೆ…
1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಿರಾಜುದ್ದೀನ್ ದೌಲಾನನ್ನೂ ಏಕೆ ಸ್ವಾತಂತ್ರ್ಯ ಹೋರಾಟಗಾರ ಎನ್ನಬಾರದು? 1782ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಫ್ರೆಂಚರ ಸಹಾಯ ಪಡೆದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗುವುದಾದರೆ, ಅವನಿಗಿಂತ 25 ವರ್ಷ ಮೊದಲೇ ಬ್ರಿಟಿಷರನ್ನು ಸೋಲಿಸಲು ಫ್ರೆಂಚರ ಜತೆ ಕೈಜೋಡಿಸಿದ್ದ ಸಿರಾಜುದ್ದೀನನೂ ಸ್ವಾತಂತ್ರ್ಯ ಹೋರಾಟಗಾರನೇ ಆಗಬೇಕಲ್ಲವೆ? ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಅಪ್ಪ ಹೈದರಾಲಿ ಕೂಡ ಸ್ವಾತಂತ್ರ್ಯ ಹೋರಾಟಗಾರನಾಗಿ ಬಿಡುವುದಿಲ್ಲವೇ?! ಅದಿರಲಿ, ಬ್ರಿಟಿಷರ ಸಹಾಯ ಪಡೆದು ಟಿಪ್ಪುವಿನ ದೌರ್ಜನ್ಯವನ್ನು ಮೆಟ್ಟಲು ಹೊರಟ ತಿರುವಾಂಕೂರು ರಾಜ, ಮರಾಠರು ಹಾಗೂ ಹೈದರಾಬಾದಿನ ನಿಜಾಮನನ್ನು ದೇಶದ್ರೋಹಿಗಳು ಎಂದು ಕರೆಯುತ್ತೀರಾ? ಟಿಪ್ಪು ಮಡಿದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಹೈದರಾಬಾದಿನ ನಿಜಾಮ 10 ಬೆಟಾಲಿಯನ್ ಕಳುಹಿಸಿದ್ದ, ಅವರಲ್ಲಿ 16 ಸಾವಿರ ಅಶ್ವದಳವಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪು ಫ್ರೆಂಚರ ಸಹಾಯ ಪಡೆದದ್ದು ನಿಜ. ಆದರೆ ಬ್ರಿಟಿಷರ ಜೊತೆಗೆ ಟಿಪ್ಪು ವಿರುದ್ಧ ಯುದ್ಧ ಮಾಡಲು ನಿಜಾಮನ ಸೈನ್ಯ ಬಂದಿತ್ತಲ್ಲ, ಅದರಲ್ಲೂ ನಿಜಾಮನ ಸೈನಿಕರ ಜೊತೆಗೆ ಹಳೆಯ ಫ್ರೆಂಚ್ ಸೈನ್ಯದ ಮೂರು ಸಾವಿರದ ಆರುನೂರು ಸೈನಿಕರಿದ್ದರು, ಇದಕ್ಕೇನನ್ನುತ್ತೀರಿ?
ಕೋ. ಚೆನ್ನಬಸಪ್ಪ, ಕಲ್ಬುರ್ಗಿಯವರು ಚಿದಾನಂದಮೂರ್ತಿಯವರ ಹೇಳಿಕೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟೀಕೆ ಮಾಡಿದ ದಿನವೇ ಇವರು ಹೇಳಿದ ಹಸಿ ಹಸಿ ಸುಳ್ಳನ್ನು ಸಾಕ್ಷ್ಯ ಸಮೇತ ನಿಮ್ಮ ಗಮನಕ್ಕೆ ತರಲು, ಐತಿಹಾಸಿಕ ಪಾತ್ರಗಳ ಜತೆಗೆ, ಭಟ್ಟಂಗಿ ಬರಹ ಮಾಡುವವರು ಹಾಗೂ ವಿಚಾರ ನಪುಂಸಕ ಹೇಳಿಕೆವೀರರ ಬಣ್ಣವನ್ನು ಸಾಕ್ಷ್ಯ ಸಮೇತ, ಆಧಾರಸಹಿತ ಬಯಲು ಮಾಡಲು ಕುಳಿತೆ. ಅದರ ಫಲವೇ ‘ಟಿಪ್ಪು ಸುಲ್ತಾನ: ಸ್ವಾತಂತ್ರ್ಯವೀರನಾ?’ ಕೃತಿ. ಟಿಪ್ಪುವನ್ನು ಯಾರೂ ದ್ವೇಷಿಸಬೇಕೆಂದಲ್ಲ, ಆದರೆ ಸತ್ಯಾಸತ್ಯತೆ ಏನೆಂದು ಎಲ್ಲರಿಗೂ ತಿಳಿಯಬೇಕು.
ಪುಸ್ತಕ ಅಂಗಡಿಗಳಲ್ಲಿದೆ. ಓದಿ, ನೀವೇ ನಿರ್ಧರಿಸಿ, ವಾದಿಸಿ!

-ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ