ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಮೇ 10, 2013

ನಿಜಕ್ಕೂ ರಾಹುಲ್ ಬಗ್ಗೆ ಅಯ್ಯೋ ಎನಿಸುತ್ತಿದೆ! - ಪ್ರತಾಪ ಸಿಂಹ

ಮೊನ್ನೆ ಗುರುವಾರ ಬೆಳಗ್ಗೆ ಭಾರತೀಯ ಕೈಗಾರಿಕಾ ಒಕ್ಕೂಟ(CII)ವನ್ನು ಉದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿಯವರು ಮಾಡಿದ ಭಾಷಣವನ್ನು ಕೇಳಿದ ನಂತರ ಖಂಡಿತ ಅವರ ಕಟ್ಟಾ ವಿರೋಧಿಗಳಲ್ಲೂ ಅಯ್ಯೋ ಎಂಬ ಭಾವನೆ ಮೂಡಿರದೆ ಇರದು. ಭಾಷಣ ಮುಗಿಸುವ ವೇಳೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಜಾಗತಿಕ ಮಟ್ಟದ(ವರ್ಲ್ಡ್‌ವೈಡ್) Trendingನಲ್ಲಿ (ಚಾಲ್ತಿಯಲ್ಲಿರುವ ವಿಷಯ) ರಾಹುಲ್ ಎರಡನೇ ಸ್ಥಾನಕ್ಕೇರಿ ಬಿಟ್ಟಿದ್ದರು. Pappu, PappuCII, Rahul Gandhi ಇನ್ನು ಮುಂತಾದ ಹೆಸರಿನ ಹ್ಯಾಶ್‌ಟ್ಯಾಗ್‌ಗಳು (ಪದ, ಪದಗುಚ್ಛ) ಸೃಷ್ಟಿಯಾಗಿ ಕ್ಷಣಮಾತ್ರದಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡವು.

ಬಹುಶಃ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ನಂತರ ಅತಿ ಹೆಚ್ಚು ಗೇಲಿಗೊಳಗಾಗುತ್ತಿರುವ, ವಿಡಂಬನೆಗೆ ವಸ್ತುವಾಗುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ!
ಪಪ್ಪು ಅಂದರೆ ಪೆದ್ ಗುಂಡ, ದಡ್ ಶಿಖಾಮಣಿ. ಅಂತ ಪಪ್ಪು ಹೆಸರಿನ ಹ್ಯಾಶ್‌ಟ್ಯಾಗ್‌ನಡಿ ರಾಹುಲ್‌ರನ್ನು ಜನ ಗೇಲಿ ಮಾಡತೊಡಗಿದರು. ಆಶ್ಚರ್ಯವೆಂದರೆ ರಾಹುಲ್ ಗಾಂಧಿ ಬಾಯ್ತೆರೆದರೆ ಸಾಕು ತಕಥೈ ಎಂದು ಖುಷಿಯಿಂದ ಕುಣಿಯುವ, ಹಿರಿಹಿರಿ ಹಿಗ್ಗುವ ಸಿಎನ್‌ಎನ್-ಐಬಿಎನ್ ಚಾನೆಲ್‌ನ ಸಾಗರಿಕಾ ಘೋಷ್ ಕೂಡ “#PappuCII”ನಡಿ ‘The fumble for written notes took something away from the speech, for me’ ಎಂದುಬಿಟ್ಟರು. ಈ ಮಧ್ಯೆ ಅವರ ಭಾಷಣದ ಬಗ್ಗೆ ಪತ್ರಕರ್ತರು ಅಭಿಪ್ರಾಯ, ವಿಶ್ಲೇಷಣೆ ಬರೆಯತೊಡಗಿದರೆ, ಓದುಗರು ‘ಜಾನೆ ತು, ಯಾ ಜಾನೆ ನಾ’ ಚಿತ್ರದ ‘”Pappu Cant Dance Saala” ಹಾಡನ್ನು ಸ್ವಲ್ಪ ತಿರುಚಿ, ಆ ಪಪ್ಪುಗೆ ಡ್ಯಾನ್ಸ್ ಮಾಡೋಕೆ ಬರೋಲ್ಲ, ಈ ಪಪ್ಪುಗೆ (ರಾಹುಲ್‌ಗೆ) ಭಾಷಣ ಮಾಡೋಕೆ ಬರೋಲ್ಲ ಅನ್ನುವುದನ್ನು ಹೀಗೆ ಬರೆದರು.
Hai Muscular Hai Popular
Spectacular, He is a bachelor
Pappu ki gadi tez hai
Pappu kudiyon mein craze hai..
Pappu ki aankein light blue..
Pappu dikhta angrezzz hai
Rado ki ghadi haathon mein
Perfume Gucci wala…
But Pappu cant Speak Sala
Haan Pappu Bol nahi sakta…
ಇತ್ತ ಟ್ವಿಟ್ಟರ್‌ನಲ್ಲಿ ರಾಹುಲ್‌ರ ಮಾತು ಮಾತನ್ನೂ ಗೇಲಿ ಮಾಡುವ, ಟೀಕಿಸುವ, ಅವರ ದಡ್ಡತನವನ್ನು ಜಗಜ್ಜಾಹೀರು ಮಾಡುವ ಕೆಲಸ ಮುಂದುವರಿಯಿತು.
@Pankaj_IITD: Rahul Gandhi to India Inc that He knows thousands of Problems India facing, but no clue or agenda to resolve. Is he in Opposition?
@bobkhanna: Not a word from #PappuCII on how his government wrecked the institution of prime minister
@nidheeshn: I’m startin 2 wait in anticipation 4 Pappu’s next speech the same way I wait 4 PC George’s press conference. Awesome entertainment #PappuCII
@KRGAIKWAD: Rahul Gandhi to India Inc: If you want to have great dreams, you must sleep a lot.
ಈ ನಡುವೆ, ಇತ್ತೀಚೆಗೆ ನೆಹರು ಕುಟುಂಬದ ಭಕ್ತರಾಗಿ ಪರಿವರ್ತನೆಯಾಗಿರುವ ‘ರಾ’ದ ಮಾಜಿ ಮುಖ್ಯಸ್ಥ ಬಿ. ರಾಮನ್ ‘”@SORBONNE75: NaMo is too programmed like US politicos. Rahul’s style is more Indian, informal” ಎಂದು ಟ್ವೀಟ್ ಮಾಡಿದಾಗ ಸುಬೋಧ್ ಖನ್ನಾ ಎಂಬವರು ‘ಕಾಲ ಬದಲಾಗಿದೆ ರಾಮನ್‌’ ಎಂದು ಕೂಡಲೇ ತಿರುಗೇಟು ನೀಡಿದರು. ಇತ್ತ ಅಧ್ಯಾತ್ಮ ಗುರುಗಳಿರುವ ಹಾಗೆ ‘ಕ್ಷಮಾದಾನ ಗುರು’ವಾಗಿ ಹೊರಹೊಮ್ಮಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರನ್ನುದ್ದೇಶಿಸಿ ಸುಂದರಂ ಎಂಬವರು, ‘@katjupci We request u to plead mercy frm the whole nation fm hvng to listen to Pappu’s idiotic speeches #PappuCII’ ಎಂದು ಕಿಚಾಯಿಸಿದರು.
ಇದನ್ನೆಲ್ಲ ನೋಡಿದಾಗ ಎಂಥ ಕಟುಕ ಮನಸ್ಸುಗಳಿಗೂ ರಾಹುಲ್ ಬಗ್ಗೆ ಅಯ್ಯೋ ಎಂಬ ಕನಿಕರ, ಬೇಸರ ಮೂಡುವುದಿಲ್ಲವೆ?!
ಸುಮಾರು 55 ವರ್ಷ ದೇಶವಾಳಿದ ಕಾಂಗ್ರೆಸ್‌ನಲ್ಲಿ ಒಂದು ಒಳ್ಳೆಯ ಭಾಷಣ ಬರೆದುಕೊಡುವವರೂ ಇಲ್ಲವೆ?! ‘I want to give voice to the people, I want to change the system’ ಇಂಥ ವಾಕ್ಯಗಳನ್ನು ಶಾಲೆ, ಕಾಲೇಜುಗಳಲ್ಲಿನ ‘Pick and Speak’ ಸ್ಪರ್ಧೆಗಳಲ್ಲಿ ಕೇಳಬಹುದೇ ಹೊರತು ಮುಂದಿನ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್ಸಿಗರು ಒತ್ತಾಸೆ ಹೊಂದಿರುವ ವ್ಯಕ್ತಿಯಿಂದಲ್ಲ. ಅದೆಂಥ ಬಾಲಿಶ ಭಾಷಣವಾಗಿತ್ತೆಂಬುದನ್ನು ತಿಳಿದುಕೊಳ್ಳಲು ರಾಹುಲ್ ಹೇಳಿದ ಕಥೆಯೊಂದನ್ನು ಕೇಳಿ- ‘ಅದೊಂದು ಕಗ್ಗತ್ತಲ ರಾತ್ರಿ. ನಾನು ಮತ್ತು ನನ್ನ ತಂಡದವರು ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಭವಿಷ್ಯವನ್ನು ಅರಸಿಕೊಂಡು ಹೊರಟಿದ್ದ ಅನಕ್ಷರಸ್ಥ ಮುಸ್ಲಿಂ ಯುವಕನೊಬ್ಬ ಅದರಲ್ಲಿದ್ದ. ನಾನು ಅವನನ್ನು ಕೇಳಿದೆ-ನೀನು ಮುಂಬೈ ತಲುಪಿದಾಗ ಅಲ್ಲಿ ನೀನು ಮಾಡುವಂಥ ಯಾವ ಕೆಲಸವೂ ಇಲ್ಲ ಎಂದಾದರೆ ಏನು ಮಾಡುತ್ತೀಯಾ? ಅದಕ್ಕವನು ಹೇಳಿದ-ಅಲ್ಲಿಂದ ಬೆಂಗಳೂರಿಗೆ ಹೋಗುತ್ತೇನೆ. ಇಂಥ ಉತ್ಸಾಹ, ಚೇತನವೇ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು! ನನ್ನ ಮನಸ್ಸಿಗೆ ನಾಟಿದ ವಿಚಾರವೆಂದರೆ ಬಡ ಜನರು, ದುರ್ಬಲ ಜನರಲ್ಲಿರುವ ಇಂತಹ ಉತ್ಸಾಹ. ಒಬ್ಬರೇ ಒಬ್ಬರೂ ನಿರಾಶಾವಾದಿಗಳಾಗಿಲ್ಲ!’
ಇದಕ್ಕೆ ಯಾರನ್ನು ದೂರಬೇಕು?
ರಾಹುಲ್ ಗಾಂಧಿಯವರೇ, ನಿಮ್ಮದೇನೂ ತಪ್ಪಿಲ್ಲ ಬಿಡಿ. ಈ ಹಿಂದೊಮ್ಮೆ ನಿಮ್ಮ ತಾಯಿ ಸೋನಿಯಾ ಗಾಂಧಿಯವರು ಮಧ್ಯಾಹ್ನದ ವೇಳೆಗೆ ಚುನಾವಣಾ ಭಾಷಣವೊಂದನ್ನು ಮಾಡಬೇಕಿತ್ತು. ಆಗಮಿಸುವುದು ತಡವಾಗಿ ಸಂಜೆ ಸಭೆ ಆರಂಭವಾಯಿತು. ವೇದಿಕೆಯೇರಿದ ಸೋನಿಯಾ ಗಾಂಧಿಯವರು ಜನರನ್ನು ಸಂತುಷ್ಟಗೊಳಿಸುವ ಸಲುವಾಗಿ ‘ನೀವೆಲ್ಲ ಸುಡು ಬಿಸಿಲಿನಲ್ಲಿ ನಿಂತಿದ್ದೀರಿ. ನಾನು ಶಾಮಿಯಾನದ ಕೆಳಗಿದ್ದೇನೆ’ ಎಂದರು. ಜನ ಗೊಳ್ಳೆಂದು ನಗಲಾರಂಭಿಸಿದರು. ಏಕೆಂದರೆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸಭೆ ನಡೆಯಲಿದೆ ಎಂದು ಮುಂದಾಗಿ ಭಾಷಣ ಸಿದ್ಧಪಡಿಸಿದ್ದ ದಡ್ಡ ಶಿಖಾಮಣಿಗಳಿಗೆ ವಿಳಂಬವಾಗಿ ಆರಂಭವಾಗುತ್ತದೆಂದು ಗೊತ್ತಾದ ಕೂಡಲೇ ಅದನ್ನು ತಿದ್ದಬೇಕು ಎಂಬುದೇ ಮರೆತುಹೋಗಿತ್ತು. ಇನ್ನೂ ಮಜಾ ಸಂಗತಿಯೆಂದರೆ ಆ ವೇಳೆಗಾಗಲೇ ಧಾರಾಕಾರ ಮಳೆ ಸುರಿದು ಜನ ಒದ್ದೆಯಾಗಿ ನಿಂತಿದ್ದರು. ಹಾಗಿರುವಾಗ ‘ನೀವು ಸುಡು ಬಿಸಿಲಿನಲ್ಲಿ ನಿಂತಿದ್ದೀರಿ’ ಎಂದರೆ ಜನ ನಗದೇ ಇರುತ್ತಾರೆಯೇ?
ಭಾರತೀಯ ಉದ್ಯಮ ವಲಯದ ಅತಿರಥ ಮಹಾರಥರು ಉಪಸ್ಥಿತರಿರುವ ಈಐಐನಂತ ಪ್ರತಿಷ್ಠಿತ ವೇದಿಕೆಯಲ್ಲಿ ನಿಂತು ಮಾತನಾಡುವಾಗ ಉದ್ಯೋಗ ಅರಸಿಕೊಂಡು ಊರಿಂದೂರಿಗೆ ಅಲೆಯುವ ಅನಕ್ಷರಸ್ಥ ಯುವಕನ ಉದಾಹರಣೆಯನ್ನು ಕೊಡಬಾರದು ಎಂಬ ಕನಿಷ್ಠ ಜ್ಞಾನವೂ ಭಾಷಣ ಬರೆದುಕೊಟ್ಟ ಮೂರ್ಖಶಿಖಾಮಣಿಗಳಿಗಿರಲಿಲ್ಲವೆ? ಇಷ್ಟಕ್ಕೂ ಕೆಲಸಕ್ಕಾಗಿ ಊರಿಂದೂರಿಗೆ ಅಲೆಯುವುದು ಉತ್ಸಾಹ, ಸ್ಪಿರಿಟ್‌ನ ಲಕ್ಷಣವೇ? ಅಥವಾ ಎಲ್ಲೂ ಕೆಲಸ ಸಿಗದ ಹತಾಶೆ, ಬವಣೆಯ ಪ್ರತೀಕವೇ ಹೇಳಿ ರಾಹುಲ್? ಮೆಡಿಕಲ್, ಎಂಜಿನಿಯರಿಂಗ್ ಓದಿದ ಸುಶಿಕ್ಷಿತರೇ ಭಾರತದಲ್ಲಿ ಅವಕಾಶವಿಲ್ಲ ಎಂದು ಹೊರದೇಶಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಪ್ರತಿಭಾ ಪಲಾಯನ (Brain Drain) ಎಂದು ಬೇಸರಿಸಿಕೊಳ್ಳುತ್ತಿದ್ದೆವು. ಅವರಿಗೆ ಇಲ್ಲೇ ಅವಕಾಶ ಸೃಷ್ಟಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಮಾಡಬೇಕು ಎಂಬ ಮಾತು ಕೇಳಿಬರುತ್ತಿತ್ತು. ಹಾಗಿರುವಾಗ ಯಾವ ವಿದ್ಯೆಯೂ ಇಲ್ಲದ ಯುವಕನೊಬ್ಬ ಕೆಲಸಕ್ಕಾಗಿ ಊರೂರು ಅಲೆಯುವುದರಲ್ಲಿ ಯಾವ ಪುರುಷಾರ್ಥವಿದೆ? ಇಂತಹ ಯುವಕರಿಗೆ ಸೂಕ್ತ ಶಿಕ್ಷಣ, ತರಬೇತಿ ನೀಡಬೇಕು, ಉದ್ಯೋಗಾವಕಾಶ ಕಲ್ಪಿಸಬೇಕು, ಅದಕ್ಕೆ ಉದ್ಯಮ ವಲಯ ಕೂಡ ಸ್ಪಂದಿಸಬೇಕು, ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ತಾನು ಸೃಷ್ಟಿಕೊಡುತ್ತೇನೆ ಎಂದು ನೀವು ಹೇಳಬಹುದಿತ್ತಲ್ಲವೆ? ಇವತ್ತು ಬಿಹಾರ ಮತ್ತು ಮುಂಬೈ ಮಧ್ಯೆ ಸಂಘರ್ಷವೇಕೆ ನಡೆಯುತ್ತಿದೆ? ಬಿಹಾರಿಗಳು ಬಂದು ಮರಾಠಿಗರ ಕೆಲಸ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಲ್ಲವೆ? ಪ್ರತಿ ರಾಜ್ಯಗಳೂ ಉದ್ಧಾರವಾಗಬೇಕಾದ, ತನ್ನ ಜನರಿಗೆ ತನ್ನಲ್ಲೇ ಉದ್ಯೋಗಾವಕಾಶ ಸೃಷ್ಟಿಸಬೇಕಾದ ಅಗತ್ಯ ಕಾಣುವ ಬದಲು, ವಲಸೆಯಲ್ಲಿ ಅದ್ಯಾವ ಚೇತನ ನಿಮಗೆ ಕಾಣುತ್ತಿದೆ? ಅಕ್ಷರಜ್ಞಾನವಿಲ್ಲದ ಹಾಗೂ ಅಲ್ಪಸ್ವಲ್ಪ ಕಲಿತಿರುವ ಕೇರಳದವರು ಹೊಟ್ಟೆಪಾಡಿಗಾಗಿ ಹೀನಾತಿಹೀನ ಕೆಲಸವಾದರೂ ಸರಿ ಎಂದು ಅರಬ್ ರಾಷ್ಟ್ರಗಳಿಗೆ ತೆರಳುತ್ತಾರಲ್ಲಾ ಅವರು ಉತ್ಸಾಹದಿಂದ ಹೋಗುತ್ತಾರೆ ಅಂದುಕೊಂಡಿರಾ?
ನಮ್ಮ ರಾಹುಲ್ ಪಪ್ಪು ಅವರ ಮತ್ತೊಂದು ಸಮಸ್ಯೆಯೇನೆಂದರೆ, ಬರೆದುಕೊಟ್ಟಿದ್ದನ್ನೂ ಸರಿಯಾಗಿ ಇಟ್ಟುಕೊಳ್ಳುವುದಿಲ್ಲ. ಭಾಷಣವನ್ನು ಓದುತ್ತಿದ್ದ ರಾಹುಲ್‌ಗಾಂಧಿಯವರಿಗೆ ಮುಂದಿನ ಪುಟ ಸರಿಯಾಗಿ ಸಿಗದೆ ತಡವರಿಸಲಾರಂಭಿಸಿದರು. ಹಾಗೆ ಕಕ್ಕಾಬಿಕ್ಕಿಯಾಗಿ ಮೈಕ್ರೊಫೋನ್ ಹಾಕಿಕೊಂಡಿರುವುದನ್ನೂ ಮರೆತು ‘ಐ ಟ್ಟಡಡಿ ್ಝಡಿ’ ಎಂದು ಗೊಣಗಿಕೊಂಡರು, ಅದೂ ಪ್ರಸಾರವಾಗಿ ಬಿಟ್ಟಿತು! ಈ ಮಧ್ಯೆ ಪ್ರಶ್ನೋತ್ತರ ಸಮಯದಲ್ಲಿ ಕೇಳಿದ್ದು, ಉತ್ತರಿಸಿದ್ದು ಕೇವಲ ಎರಡೇ ಪ್ರಶ್ನೆಗಳಿಗಾದರೂ ಅಲ್ಲೂ ಯಡವಟ್ಟಾಯಿತು. ಝಾನ್ಸಿ ರಾಣಿಯನ್ನು ‘ಝಾನ್ಸಿ ಕೀ ರಾಣಿ’ ಎನ್ನುವ ಬದಲು ‘ರಾಣೀ ಕೀ ಝಾನ್ಸಿ’ ಎಂದರು.
ಇನ್ನೊಂದು ಮಜಭೂತಾದ ವಿಷಯ ಗೊತ್ತಾ?
‘ಸ್ಪೇನ್‌ನ ನೈಟ್ ಕ್ಲಬ್‌ಗೆ ಹೋದರೆ ಅಮಿತಾಭ್ ಬಚ್ಚನ್ ಡ್ಯಾನ್ಸ್ ಮಾಡುತ್ತಿರುವುದು ಕಾಣುತ್ತದೆ, ನ್ಯೂಯಾರ್ಕ್‌ನಲ್ಲಿ ಜನರು ಯೋಗ ಮಾಡುತ್ತಿದ್ದಾರೆ. ಇದು ಭಾರತೀಯರ ತಾಕತ್ತನ್ನು ತೋರಿಸುತ್ತದೆ’ ಎಂದರು. ಅಯ್ಯೋ ರಾಹುಲ್, ಅಮಿತಾಬ್ ಬಚ್ಚನ್ ಹಾಡುಗಳನ್ನು ಸ್ಪೇನ್‌ನ ನೈಟ್ ಕ್ಲಬ್‌ನಲ್ಲಿ ಹಾಕುವುದು, ನ್ಯೂಯಾರ್ಕ್‌ನಲ್ಲಿ ಯೋಗ ಮಾಡುವುದು ಭಾರತದ ಶಕ್ತಿ ಸಾಮರ್ಥ್ಯದ ಪ್ರತೀಕವೆನ್ನುವುದಾದರೆ, ಜಗತ್ತಿನ ಕಾಮುಕರ ಕಣ್ಮನ ತಣಿಸುತ್ತಿರುವ, ಅಂಗಾಂಗಗಳನ್ನು ಬಡಿದೆಬ್ಬಿಸುತ್ತಿರುವ ಪಂಜಾಬಿ ಮೂಲದ ಕರಣ್‌ಜಿತ್ ಕೌರ್ ವೋಹ್ರಾ ಅಲಿಯಾಸ್ ಸನ್ನಿ ಲಿಯೋನ್‌ಳದ್ದೂ ಗುರುತರ ಸಾಧನೆ ಎನ್ನುತ್ತೀರೋ?
ಇದನ್ನೆಲ್ಲಾ ನೋಡಿಯೇ ಖ್ಯಾತ ರಾಯಿಟರ್ಸ್ ಸುದ್ದಿಸಂಸ್ಥೆ ರಾಹುಲ್ ಸಿಐಐನಲ್ಲಿ ಮಾಡಿದ ಭಾಷಣವನ್ನು ‘Rahul Gandhi bemuses with ‘beehive’ speech to India Inc’ ಎಂದರೆ, ವಾಲ್‌ಸ್ಟ್ರೀಟ್ ಜರ್ನಲ್ ‘Rahul Gandhi Speech Hits Some Dud Notes’ ಎಂದಿದೆ. “Rahul mocked for “beehive’ speech” ಎಂದು ಲಂಡನ್‌ನ ಟೆಲಿಗ್ರಾಫ್ ಕುಟುಕಿದರೆ, ‘ಭಾರತ ಜೇನುಗೂಡಿನಂತಿದೆ’ ಎಂಬ ರಾಹುಲ್ ಮಾತಿಗೆ, ಹಾಗಾದರೆ ‘ರಾಣಿಜೇನು’ ಯಾರು ಎಂದು ಟ್ವಿಟರ್‌ನಲ್ಲಿ ಪರೋಕ್ಷವಾಗಿ ರಾಹುಲ್ ತಾಯಿ ಸೋನಿಯಾ ಗಾಂಧಿಯವರತ್ತ ವಾಗ್ಬಾಣ ಬಿಟ್ಟಿದ್ದಾರೆ.
ಇದೇನೇ ಇರಲಿ, ಇಲ್ಲಿ ಖಂಡಿತ ರಾಹುಲ್ ಗಾಂಧಿಯವರನ್ನು ದೂರುತ್ತಿಲ್ಲ!!
ಪಾಪ ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗಬೇಕೆಂಬ ಆಸೆ, ಆಕಾಂಕ್ಷೆಗಳೇ ಇಲ್ಲ. ನಾನು ಪ್ರಧಾನಿಯಾಗುತ್ತೇನೋ ಇಲ್ಲವೋ ಎಂಬ ಪ್ರಶ್ನೆಗಳೇ ಅಪ್ರಸ್ತುತ ಎಂದು ಸಿಐಐನಲ್ಲೂ ಹೇಳಿದ್ದಾರೆ. ಬರೆದು ಕೊಟ್ಟಿದ್ದನ್ನು ಓದಿ ಬರುತ್ತಾರಷ್ಟೇ. ಇಲ್ಲವಾದರೆ ‘ಜನರಿಗೆ ಧ್ವನಿ ಕೊಡುತ್ತೇನೆ’ ಎನ್ನುವ ಅವರಿಗೆ ಆ ಕೆಲಸ ಮಾಡಲು ಪ್ರಧಾನಿ ಸ್ಥಾನಕ್ಕಿಂತ ಯೋಗ್ಯ ಗಾದಿಯಿಲ್ಲ ಎಂಬುದು ಗೊತ್ತಾಗುತ್ತಿರಲಿಲ್ಲವೆ? ಒಂದು ವೇಳೆ, ಜನರನ್ನು ಉದ್ಧಾರ ಮಾಡಬೇಕೆಂಬ ಇಚ್ಛೆ, ಯೋಚನೆ ಅವರಲ್ಲಿ ನಿಜಕ್ಕೂ ಇದ್ದಿದ್ದರೆ 2004ರಿಂದ ಅಂದರೆ ಕಳೆದ 9 ವರ್ಷಗಳಿಂದ ಅಧಿಕಾರದಲ್ಲಿರುವ ಅವರು ಮಾಡಿ ತೋರಿಸಬಹುದಿತ್ತಲ್ಲವೆ? ಎನ್‌ಡಿಎ ಸರ್ಕಾರವಿದ್ದಾಗ ಇದ್ದ ವಿದೇಶಿ ಸಾಲ ಯುಪಿಎ ಬಂದ ಮೇಲೆ ಕಡಿಮೆಯಾಗುವ ಬದಲು ಏಕೆ ದುಪ್ಪಟ್ಟಾಗುತ್ತಿತು?್ತ ಕರ್ನಾಟಕದಲ್ಲಿ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಎಷ್ಟು ‘ಒಳ್ಳೆಯ’ ಆಡಳಿತ ಕೊಟ್ಟಿತೋ ಅದಕ್ಕಿಂತ ‘ಒಳ್ಳೆಯ’ ಆಡಳಿತವನ್ನು ಯುಪಿಎ-2 ನೀಡುತ್ತಿದೆ. ಏಕೆ? ಮನಮೋಹನ್ ಸಿಂಗ್ ಹೆಸರಿಗಷ್ಟೇ ಪ್ರಧಾನಿ, ಆಳುತ್ತಿರುವುದು ಸೋನಿಯಾ ಹಾಗೂ ರಾಹುಲ್ ಎಂದು ಎಲ್ಲರಿಗೂ ಗೊತ್ತು. ಇನ್ನು ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ಹೊಸದಾಗಿ ಮಾಡುವುದಕ್ಕೇನಿದೆ? ದೇಶ ಉದ್ಧಾರ ಮಾಡುವ ಕಥೆ ಹಾಗಿರಲಿ, ಈ ಅಮ್ಮ-ಮಗ ಪ್ರತಿನಿಧಿಸುವ ಅಮೇಠಿ-ರಾಯ್‌ಬರೇಲಿಗೆ ಹೋದಾಗ ಜನರು ಕಪ್ಪು ಬಾವುಟ ತೋರಿಸಿದ್ದು, ಅಣಕಿಸಿದ್ದು ಇದೇ ಕಾರಣಕ್ಕಲ್ಲವೆ? ರಾಜ್ಯ, ದೇಶವನ್ನು ಉದ್ಧಾರ ಮಾಡಿದರೆ, ಅಭಿವೃದ್ಧಿಯಾದರೆ ಜನರು ತಮ್ಮನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ಸಿಗರಿಗೆ ಚೆನ್ನಾಗಿ ಗೊತ್ತು. ಬರೀ ಲೂಟಿ ಮಾಡುವುದಕ್ಕೊಬ್ಬ ನೇತಾರ ಬೇಕು. ಅದಕ್ಕೇ ರಾಹುಲ್ ಗಾಂಧಿಯವರನ್ನು ತಳ್ಳಲು ಕಾಂಗ್ರೆಸ್ಸಿಗರು ಹವಣಿಸುತ್ತಿದ್ದಾರೆ. ಈ ಹಿಂದೆ ಪೈಲಟ್ ಆಗಿದ್ದ ರಾಜೀವ್ ಗಾಂಧಿಯವರನ್ನು ಒತ್ತಾಯಪೂರ್ವಕವಾಗಿ ಪ್ರಧಾನಿ ಮಾಡಿ ಬೋಫೋರ್ಸ್ ಹಗರಣ ಸೃಷ್ಟಿಸಿಕೊಂಡು ಕುರ್ಚಿ ಕಳೆದುಕೊಳ್ಳುವಂತೆ ಮಾಡಿದರು. ಈಗ ರಾಹುಲ್ ಗಾಂಧಿಯವರನ್ನು ತಳ್ಳಲು ಮುಂದಾಗಿದ್ದಾರೆ ಅಷ್ಟೇ.
ಪಾಪ ರಾಹುಲ್!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ