ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಮೇ 10, 2013

ನಿಜಕ್ಕೂ ರಾಹುಲ್ ಬಗ್ಗೆ ಅಯ್ಯೋ ಎನಿಸುತ್ತಿದೆ! - ಪ್ರತಾಪ ಸಿಂಹ

ಮೊನ್ನೆ ಗುರುವಾರ ಬೆಳಗ್ಗೆ ಭಾರತೀಯ ಕೈಗಾರಿಕಾ ಒಕ್ಕೂಟ(CII)ವನ್ನು ಉದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿಯವರು ಮಾಡಿದ ಭಾಷಣವನ್ನು ಕೇಳಿದ ನಂತರ ಖಂಡಿತ ಅವರ ಕಟ್ಟಾ ವಿರೋಧಿಗಳಲ್ಲೂ ಅಯ್ಯೋ ಎಂಬ ಭಾವನೆ ಮೂಡಿರದೆ ಇರದು. ಭಾಷಣ ಮುಗಿಸುವ ವೇಳೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಜಾಗತಿಕ ಮಟ್ಟದ(ವರ್ಲ್ಡ್‌ವೈಡ್) Trendingನಲ್ಲಿ (ಚಾಲ್ತಿಯಲ್ಲಿರುವ ವಿಷಯ) ರಾಹುಲ್ ಎರಡನೇ ಸ್ಥಾನಕ್ಕೇರಿ ಬಿಟ್ಟಿದ್ದರು. Pappu, PappuCII, Rahul Gandhi ಇನ್ನು ಮುಂತಾದ ಹೆಸರಿನ ಹ್ಯಾಶ್‌ಟ್ಯಾಗ್‌ಗಳು (ಪದ, ಪದಗುಚ್ಛ) ಸೃಷ್ಟಿಯಾಗಿ ಕ್ಷಣಮಾತ್ರದಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡವು.

ಬಹುಶಃ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ನಂತರ ಅತಿ ಹೆಚ್ಚು ಗೇಲಿಗೊಳಗಾಗುತ್ತಿರುವ, ವಿಡಂಬನೆಗೆ ವಸ್ತುವಾಗುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ!
ಪಪ್ಪು ಅಂದರೆ ಪೆದ್ ಗುಂಡ, ದಡ್ ಶಿಖಾಮಣಿ. ಅಂತ ಪಪ್ಪು ಹೆಸರಿನ ಹ್ಯಾಶ್‌ಟ್ಯಾಗ್‌ನಡಿ ರಾಹುಲ್‌ರನ್ನು ಜನ ಗೇಲಿ ಮಾಡತೊಡಗಿದರು. ಆಶ್ಚರ್ಯವೆಂದರೆ ರಾಹುಲ್ ಗಾಂಧಿ ಬಾಯ್ತೆರೆದರೆ ಸಾಕು ತಕಥೈ ಎಂದು ಖುಷಿಯಿಂದ ಕುಣಿಯುವ, ಹಿರಿಹಿರಿ ಹಿಗ್ಗುವ ಸಿಎನ್‌ಎನ್-ಐಬಿಎನ್ ಚಾನೆಲ್‌ನ ಸಾಗರಿಕಾ ಘೋಷ್ ಕೂಡ “#PappuCII”ನಡಿ ‘The fumble for written notes took something away from the speech, for me’ ಎಂದುಬಿಟ್ಟರು. ಈ ಮಧ್ಯೆ ಅವರ ಭಾಷಣದ ಬಗ್ಗೆ ಪತ್ರಕರ್ತರು ಅಭಿಪ್ರಾಯ, ವಿಶ್ಲೇಷಣೆ ಬರೆಯತೊಡಗಿದರೆ, ಓದುಗರು ‘ಜಾನೆ ತು, ಯಾ ಜಾನೆ ನಾ’ ಚಿತ್ರದ ‘”Pappu Cant Dance Saala” ಹಾಡನ್ನು ಸ್ವಲ್ಪ ತಿರುಚಿ, ಆ ಪಪ್ಪುಗೆ ಡ್ಯಾನ್ಸ್ ಮಾಡೋಕೆ ಬರೋಲ್ಲ, ಈ ಪಪ್ಪುಗೆ (ರಾಹುಲ್‌ಗೆ) ಭಾಷಣ ಮಾಡೋಕೆ ಬರೋಲ್ಲ ಅನ್ನುವುದನ್ನು ಹೀಗೆ ಬರೆದರು.
Hai Muscular Hai Popular
Spectacular, He is a bachelor
Pappu ki gadi tez hai
Pappu kudiyon mein craze hai..
Pappu ki aankein light blue..
Pappu dikhta angrezzz hai
Rado ki ghadi haathon mein
Perfume Gucci wala…
But Pappu cant Speak Sala
Haan Pappu Bol nahi sakta…
ಇತ್ತ ಟ್ವಿಟ್ಟರ್‌ನಲ್ಲಿ ರಾಹುಲ್‌ರ ಮಾತು ಮಾತನ್ನೂ ಗೇಲಿ ಮಾಡುವ, ಟೀಕಿಸುವ, ಅವರ ದಡ್ಡತನವನ್ನು ಜಗಜ್ಜಾಹೀರು ಮಾಡುವ ಕೆಲಸ ಮುಂದುವರಿಯಿತು.
@Pankaj_IITD: Rahul Gandhi to India Inc that He knows thousands of Problems India facing, but no clue or agenda to resolve. Is he in Opposition?
@bobkhanna: Not a word from #PappuCII on how his government wrecked the institution of prime minister
@nidheeshn: I’m startin 2 wait in anticipation 4 Pappu’s next speech the same way I wait 4 PC George’s press conference. Awesome entertainment #PappuCII
@KRGAIKWAD: Rahul Gandhi to India Inc: If you want to have great dreams, you must sleep a lot.
ಈ ನಡುವೆ, ಇತ್ತೀಚೆಗೆ ನೆಹರು ಕುಟುಂಬದ ಭಕ್ತರಾಗಿ ಪರಿವರ್ತನೆಯಾಗಿರುವ ‘ರಾ’ದ ಮಾಜಿ ಮುಖ್ಯಸ್ಥ ಬಿ. ರಾಮನ್ ‘”@SORBONNE75: NaMo is too programmed like US politicos. Rahul’s style is more Indian, informal” ಎಂದು ಟ್ವೀಟ್ ಮಾಡಿದಾಗ ಸುಬೋಧ್ ಖನ್ನಾ ಎಂಬವರು ‘ಕಾಲ ಬದಲಾಗಿದೆ ರಾಮನ್‌’ ಎಂದು ಕೂಡಲೇ ತಿರುಗೇಟು ನೀಡಿದರು. ಇತ್ತ ಅಧ್ಯಾತ್ಮ ಗುರುಗಳಿರುವ ಹಾಗೆ ‘ಕ್ಷಮಾದಾನ ಗುರು’ವಾಗಿ ಹೊರಹೊಮ್ಮಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರನ್ನುದ್ದೇಶಿಸಿ ಸುಂದರಂ ಎಂಬವರು, ‘@katjupci We request u to plead mercy frm the whole nation fm hvng to listen to Pappu’s idiotic speeches #PappuCII’ ಎಂದು ಕಿಚಾಯಿಸಿದರು.
ಇದನ್ನೆಲ್ಲ ನೋಡಿದಾಗ ಎಂಥ ಕಟುಕ ಮನಸ್ಸುಗಳಿಗೂ ರಾಹುಲ್ ಬಗ್ಗೆ ಅಯ್ಯೋ ಎಂಬ ಕನಿಕರ, ಬೇಸರ ಮೂಡುವುದಿಲ್ಲವೆ?!
ಸುಮಾರು 55 ವರ್ಷ ದೇಶವಾಳಿದ ಕಾಂಗ್ರೆಸ್‌ನಲ್ಲಿ ಒಂದು ಒಳ್ಳೆಯ ಭಾಷಣ ಬರೆದುಕೊಡುವವರೂ ಇಲ್ಲವೆ?! ‘I want to give voice to the people, I want to change the system’ ಇಂಥ ವಾಕ್ಯಗಳನ್ನು ಶಾಲೆ, ಕಾಲೇಜುಗಳಲ್ಲಿನ ‘Pick and Speak’ ಸ್ಪರ್ಧೆಗಳಲ್ಲಿ ಕೇಳಬಹುದೇ ಹೊರತು ಮುಂದಿನ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್ಸಿಗರು ಒತ್ತಾಸೆ ಹೊಂದಿರುವ ವ್ಯಕ್ತಿಯಿಂದಲ್ಲ. ಅದೆಂಥ ಬಾಲಿಶ ಭಾಷಣವಾಗಿತ್ತೆಂಬುದನ್ನು ತಿಳಿದುಕೊಳ್ಳಲು ರಾಹುಲ್ ಹೇಳಿದ ಕಥೆಯೊಂದನ್ನು ಕೇಳಿ- ‘ಅದೊಂದು ಕಗ್ಗತ್ತಲ ರಾತ್ರಿ. ನಾನು ಮತ್ತು ನನ್ನ ತಂಡದವರು ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಭವಿಷ್ಯವನ್ನು ಅರಸಿಕೊಂಡು ಹೊರಟಿದ್ದ ಅನಕ್ಷರಸ್ಥ ಮುಸ್ಲಿಂ ಯುವಕನೊಬ್ಬ ಅದರಲ್ಲಿದ್ದ. ನಾನು ಅವನನ್ನು ಕೇಳಿದೆ-ನೀನು ಮುಂಬೈ ತಲುಪಿದಾಗ ಅಲ್ಲಿ ನೀನು ಮಾಡುವಂಥ ಯಾವ ಕೆಲಸವೂ ಇಲ್ಲ ಎಂದಾದರೆ ಏನು ಮಾಡುತ್ತೀಯಾ? ಅದಕ್ಕವನು ಹೇಳಿದ-ಅಲ್ಲಿಂದ ಬೆಂಗಳೂರಿಗೆ ಹೋಗುತ್ತೇನೆ. ಇಂಥ ಉತ್ಸಾಹ, ಚೇತನವೇ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು! ನನ್ನ ಮನಸ್ಸಿಗೆ ನಾಟಿದ ವಿಚಾರವೆಂದರೆ ಬಡ ಜನರು, ದುರ್ಬಲ ಜನರಲ್ಲಿರುವ ಇಂತಹ ಉತ್ಸಾಹ. ಒಬ್ಬರೇ ಒಬ್ಬರೂ ನಿರಾಶಾವಾದಿಗಳಾಗಿಲ್ಲ!’
ಇದಕ್ಕೆ ಯಾರನ್ನು ದೂರಬೇಕು?
ರಾಹುಲ್ ಗಾಂಧಿಯವರೇ, ನಿಮ್ಮದೇನೂ ತಪ್ಪಿಲ್ಲ ಬಿಡಿ. ಈ ಹಿಂದೊಮ್ಮೆ ನಿಮ್ಮ ತಾಯಿ ಸೋನಿಯಾ ಗಾಂಧಿಯವರು ಮಧ್ಯಾಹ್ನದ ವೇಳೆಗೆ ಚುನಾವಣಾ ಭಾಷಣವೊಂದನ್ನು ಮಾಡಬೇಕಿತ್ತು. ಆಗಮಿಸುವುದು ತಡವಾಗಿ ಸಂಜೆ ಸಭೆ ಆರಂಭವಾಯಿತು. ವೇದಿಕೆಯೇರಿದ ಸೋನಿಯಾ ಗಾಂಧಿಯವರು ಜನರನ್ನು ಸಂತುಷ್ಟಗೊಳಿಸುವ ಸಲುವಾಗಿ ‘ನೀವೆಲ್ಲ ಸುಡು ಬಿಸಿಲಿನಲ್ಲಿ ನಿಂತಿದ್ದೀರಿ. ನಾನು ಶಾಮಿಯಾನದ ಕೆಳಗಿದ್ದೇನೆ’ ಎಂದರು. ಜನ ಗೊಳ್ಳೆಂದು ನಗಲಾರಂಭಿಸಿದರು. ಏಕೆಂದರೆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸಭೆ ನಡೆಯಲಿದೆ ಎಂದು ಮುಂದಾಗಿ ಭಾಷಣ ಸಿದ್ಧಪಡಿಸಿದ್ದ ದಡ್ಡ ಶಿಖಾಮಣಿಗಳಿಗೆ ವಿಳಂಬವಾಗಿ ಆರಂಭವಾಗುತ್ತದೆಂದು ಗೊತ್ತಾದ ಕೂಡಲೇ ಅದನ್ನು ತಿದ್ದಬೇಕು ಎಂಬುದೇ ಮರೆತುಹೋಗಿತ್ತು. ಇನ್ನೂ ಮಜಾ ಸಂಗತಿಯೆಂದರೆ ಆ ವೇಳೆಗಾಗಲೇ ಧಾರಾಕಾರ ಮಳೆ ಸುರಿದು ಜನ ಒದ್ದೆಯಾಗಿ ನಿಂತಿದ್ದರು. ಹಾಗಿರುವಾಗ ‘ನೀವು ಸುಡು ಬಿಸಿಲಿನಲ್ಲಿ ನಿಂತಿದ್ದೀರಿ’ ಎಂದರೆ ಜನ ನಗದೇ ಇರುತ್ತಾರೆಯೇ?
ಭಾರತೀಯ ಉದ್ಯಮ ವಲಯದ ಅತಿರಥ ಮಹಾರಥರು ಉಪಸ್ಥಿತರಿರುವ ಈಐಐನಂತ ಪ್ರತಿಷ್ಠಿತ ವೇದಿಕೆಯಲ್ಲಿ ನಿಂತು ಮಾತನಾಡುವಾಗ ಉದ್ಯೋಗ ಅರಸಿಕೊಂಡು ಊರಿಂದೂರಿಗೆ ಅಲೆಯುವ ಅನಕ್ಷರಸ್ಥ ಯುವಕನ ಉದಾಹರಣೆಯನ್ನು ಕೊಡಬಾರದು ಎಂಬ ಕನಿಷ್ಠ ಜ್ಞಾನವೂ ಭಾಷಣ ಬರೆದುಕೊಟ್ಟ ಮೂರ್ಖಶಿಖಾಮಣಿಗಳಿಗಿರಲಿಲ್ಲವೆ? ಇಷ್ಟಕ್ಕೂ ಕೆಲಸಕ್ಕಾಗಿ ಊರಿಂದೂರಿಗೆ ಅಲೆಯುವುದು ಉತ್ಸಾಹ, ಸ್ಪಿರಿಟ್‌ನ ಲಕ್ಷಣವೇ? ಅಥವಾ ಎಲ್ಲೂ ಕೆಲಸ ಸಿಗದ ಹತಾಶೆ, ಬವಣೆಯ ಪ್ರತೀಕವೇ ಹೇಳಿ ರಾಹುಲ್? ಮೆಡಿಕಲ್, ಎಂಜಿನಿಯರಿಂಗ್ ಓದಿದ ಸುಶಿಕ್ಷಿತರೇ ಭಾರತದಲ್ಲಿ ಅವಕಾಶವಿಲ್ಲ ಎಂದು ಹೊರದೇಶಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಪ್ರತಿಭಾ ಪಲಾಯನ (Brain Drain) ಎಂದು ಬೇಸರಿಸಿಕೊಳ್ಳುತ್ತಿದ್ದೆವು. ಅವರಿಗೆ ಇಲ್ಲೇ ಅವಕಾಶ ಸೃಷ್ಟಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಮಾಡಬೇಕು ಎಂಬ ಮಾತು ಕೇಳಿಬರುತ್ತಿತ್ತು. ಹಾಗಿರುವಾಗ ಯಾವ ವಿದ್ಯೆಯೂ ಇಲ್ಲದ ಯುವಕನೊಬ್ಬ ಕೆಲಸಕ್ಕಾಗಿ ಊರೂರು ಅಲೆಯುವುದರಲ್ಲಿ ಯಾವ ಪುರುಷಾರ್ಥವಿದೆ? ಇಂತಹ ಯುವಕರಿಗೆ ಸೂಕ್ತ ಶಿಕ್ಷಣ, ತರಬೇತಿ ನೀಡಬೇಕು, ಉದ್ಯೋಗಾವಕಾಶ ಕಲ್ಪಿಸಬೇಕು, ಅದಕ್ಕೆ ಉದ್ಯಮ ವಲಯ ಕೂಡ ಸ್ಪಂದಿಸಬೇಕು, ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ತಾನು ಸೃಷ್ಟಿಕೊಡುತ್ತೇನೆ ಎಂದು ನೀವು ಹೇಳಬಹುದಿತ್ತಲ್ಲವೆ? ಇವತ್ತು ಬಿಹಾರ ಮತ್ತು ಮುಂಬೈ ಮಧ್ಯೆ ಸಂಘರ್ಷವೇಕೆ ನಡೆಯುತ್ತಿದೆ? ಬಿಹಾರಿಗಳು ಬಂದು ಮರಾಠಿಗರ ಕೆಲಸ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಲ್ಲವೆ? ಪ್ರತಿ ರಾಜ್ಯಗಳೂ ಉದ್ಧಾರವಾಗಬೇಕಾದ, ತನ್ನ ಜನರಿಗೆ ತನ್ನಲ್ಲೇ ಉದ್ಯೋಗಾವಕಾಶ ಸೃಷ್ಟಿಸಬೇಕಾದ ಅಗತ್ಯ ಕಾಣುವ ಬದಲು, ವಲಸೆಯಲ್ಲಿ ಅದ್ಯಾವ ಚೇತನ ನಿಮಗೆ ಕಾಣುತ್ತಿದೆ? ಅಕ್ಷರಜ್ಞಾನವಿಲ್ಲದ ಹಾಗೂ ಅಲ್ಪಸ್ವಲ್ಪ ಕಲಿತಿರುವ ಕೇರಳದವರು ಹೊಟ್ಟೆಪಾಡಿಗಾಗಿ ಹೀನಾತಿಹೀನ ಕೆಲಸವಾದರೂ ಸರಿ ಎಂದು ಅರಬ್ ರಾಷ್ಟ್ರಗಳಿಗೆ ತೆರಳುತ್ತಾರಲ್ಲಾ ಅವರು ಉತ್ಸಾಹದಿಂದ ಹೋಗುತ್ತಾರೆ ಅಂದುಕೊಂಡಿರಾ?
ನಮ್ಮ ರಾಹುಲ್ ಪಪ್ಪು ಅವರ ಮತ್ತೊಂದು ಸಮಸ್ಯೆಯೇನೆಂದರೆ, ಬರೆದುಕೊಟ್ಟಿದ್ದನ್ನೂ ಸರಿಯಾಗಿ ಇಟ್ಟುಕೊಳ್ಳುವುದಿಲ್ಲ. ಭಾಷಣವನ್ನು ಓದುತ್ತಿದ್ದ ರಾಹುಲ್‌ಗಾಂಧಿಯವರಿಗೆ ಮುಂದಿನ ಪುಟ ಸರಿಯಾಗಿ ಸಿಗದೆ ತಡವರಿಸಲಾರಂಭಿಸಿದರು. ಹಾಗೆ ಕಕ್ಕಾಬಿಕ್ಕಿಯಾಗಿ ಮೈಕ್ರೊಫೋನ್ ಹಾಕಿಕೊಂಡಿರುವುದನ್ನೂ ಮರೆತು ‘ಐ ಟ್ಟಡಡಿ ್ಝಡಿ’ ಎಂದು ಗೊಣಗಿಕೊಂಡರು, ಅದೂ ಪ್ರಸಾರವಾಗಿ ಬಿಟ್ಟಿತು! ಈ ಮಧ್ಯೆ ಪ್ರಶ್ನೋತ್ತರ ಸಮಯದಲ್ಲಿ ಕೇಳಿದ್ದು, ಉತ್ತರಿಸಿದ್ದು ಕೇವಲ ಎರಡೇ ಪ್ರಶ್ನೆಗಳಿಗಾದರೂ ಅಲ್ಲೂ ಯಡವಟ್ಟಾಯಿತು. ಝಾನ್ಸಿ ರಾಣಿಯನ್ನು ‘ಝಾನ್ಸಿ ಕೀ ರಾಣಿ’ ಎನ್ನುವ ಬದಲು ‘ರಾಣೀ ಕೀ ಝಾನ್ಸಿ’ ಎಂದರು.
ಇನ್ನೊಂದು ಮಜಭೂತಾದ ವಿಷಯ ಗೊತ್ತಾ?
‘ಸ್ಪೇನ್‌ನ ನೈಟ್ ಕ್ಲಬ್‌ಗೆ ಹೋದರೆ ಅಮಿತಾಭ್ ಬಚ್ಚನ್ ಡ್ಯಾನ್ಸ್ ಮಾಡುತ್ತಿರುವುದು ಕಾಣುತ್ತದೆ, ನ್ಯೂಯಾರ್ಕ್‌ನಲ್ಲಿ ಜನರು ಯೋಗ ಮಾಡುತ್ತಿದ್ದಾರೆ. ಇದು ಭಾರತೀಯರ ತಾಕತ್ತನ್ನು ತೋರಿಸುತ್ತದೆ’ ಎಂದರು. ಅಯ್ಯೋ ರಾಹುಲ್, ಅಮಿತಾಬ್ ಬಚ್ಚನ್ ಹಾಡುಗಳನ್ನು ಸ್ಪೇನ್‌ನ ನೈಟ್ ಕ್ಲಬ್‌ನಲ್ಲಿ ಹಾಕುವುದು, ನ್ಯೂಯಾರ್ಕ್‌ನಲ್ಲಿ ಯೋಗ ಮಾಡುವುದು ಭಾರತದ ಶಕ್ತಿ ಸಾಮರ್ಥ್ಯದ ಪ್ರತೀಕವೆನ್ನುವುದಾದರೆ, ಜಗತ್ತಿನ ಕಾಮುಕರ ಕಣ್ಮನ ತಣಿಸುತ್ತಿರುವ, ಅಂಗಾಂಗಗಳನ್ನು ಬಡಿದೆಬ್ಬಿಸುತ್ತಿರುವ ಪಂಜಾಬಿ ಮೂಲದ ಕರಣ್‌ಜಿತ್ ಕೌರ್ ವೋಹ್ರಾ ಅಲಿಯಾಸ್ ಸನ್ನಿ ಲಿಯೋನ್‌ಳದ್ದೂ ಗುರುತರ ಸಾಧನೆ ಎನ್ನುತ್ತೀರೋ?
ಇದನ್ನೆಲ್ಲಾ ನೋಡಿಯೇ ಖ್ಯಾತ ರಾಯಿಟರ್ಸ್ ಸುದ್ದಿಸಂಸ್ಥೆ ರಾಹುಲ್ ಸಿಐಐನಲ್ಲಿ ಮಾಡಿದ ಭಾಷಣವನ್ನು ‘Rahul Gandhi bemuses with ‘beehive’ speech to India Inc’ ಎಂದರೆ, ವಾಲ್‌ಸ್ಟ್ರೀಟ್ ಜರ್ನಲ್ ‘Rahul Gandhi Speech Hits Some Dud Notes’ ಎಂದಿದೆ. “Rahul mocked for “beehive’ speech” ಎಂದು ಲಂಡನ್‌ನ ಟೆಲಿಗ್ರಾಫ್ ಕುಟುಕಿದರೆ, ‘ಭಾರತ ಜೇನುಗೂಡಿನಂತಿದೆ’ ಎಂಬ ರಾಹುಲ್ ಮಾತಿಗೆ, ಹಾಗಾದರೆ ‘ರಾಣಿಜೇನು’ ಯಾರು ಎಂದು ಟ್ವಿಟರ್‌ನಲ್ಲಿ ಪರೋಕ್ಷವಾಗಿ ರಾಹುಲ್ ತಾಯಿ ಸೋನಿಯಾ ಗಾಂಧಿಯವರತ್ತ ವಾಗ್ಬಾಣ ಬಿಟ್ಟಿದ್ದಾರೆ.
ಇದೇನೇ ಇರಲಿ, ಇಲ್ಲಿ ಖಂಡಿತ ರಾಹುಲ್ ಗಾಂಧಿಯವರನ್ನು ದೂರುತ್ತಿಲ್ಲ!!
ಪಾಪ ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗಬೇಕೆಂಬ ಆಸೆ, ಆಕಾಂಕ್ಷೆಗಳೇ ಇಲ್ಲ. ನಾನು ಪ್ರಧಾನಿಯಾಗುತ್ತೇನೋ ಇಲ್ಲವೋ ಎಂಬ ಪ್ರಶ್ನೆಗಳೇ ಅಪ್ರಸ್ತುತ ಎಂದು ಸಿಐಐನಲ್ಲೂ ಹೇಳಿದ್ದಾರೆ. ಬರೆದು ಕೊಟ್ಟಿದ್ದನ್ನು ಓದಿ ಬರುತ್ತಾರಷ್ಟೇ. ಇಲ್ಲವಾದರೆ ‘ಜನರಿಗೆ ಧ್ವನಿ ಕೊಡುತ್ತೇನೆ’ ಎನ್ನುವ ಅವರಿಗೆ ಆ ಕೆಲಸ ಮಾಡಲು ಪ್ರಧಾನಿ ಸ್ಥಾನಕ್ಕಿಂತ ಯೋಗ್ಯ ಗಾದಿಯಿಲ್ಲ ಎಂಬುದು ಗೊತ್ತಾಗುತ್ತಿರಲಿಲ್ಲವೆ? ಒಂದು ವೇಳೆ, ಜನರನ್ನು ಉದ್ಧಾರ ಮಾಡಬೇಕೆಂಬ ಇಚ್ಛೆ, ಯೋಚನೆ ಅವರಲ್ಲಿ ನಿಜಕ್ಕೂ ಇದ್ದಿದ್ದರೆ 2004ರಿಂದ ಅಂದರೆ ಕಳೆದ 9 ವರ್ಷಗಳಿಂದ ಅಧಿಕಾರದಲ್ಲಿರುವ ಅವರು ಮಾಡಿ ತೋರಿಸಬಹುದಿತ್ತಲ್ಲವೆ? ಎನ್‌ಡಿಎ ಸರ್ಕಾರವಿದ್ದಾಗ ಇದ್ದ ವಿದೇಶಿ ಸಾಲ ಯುಪಿಎ ಬಂದ ಮೇಲೆ ಕಡಿಮೆಯಾಗುವ ಬದಲು ಏಕೆ ದುಪ್ಪಟ್ಟಾಗುತ್ತಿತು?್ತ ಕರ್ನಾಟಕದಲ್ಲಿ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಎಷ್ಟು ‘ಒಳ್ಳೆಯ’ ಆಡಳಿತ ಕೊಟ್ಟಿತೋ ಅದಕ್ಕಿಂತ ‘ಒಳ್ಳೆಯ’ ಆಡಳಿತವನ್ನು ಯುಪಿಎ-2 ನೀಡುತ್ತಿದೆ. ಏಕೆ? ಮನಮೋಹನ್ ಸಿಂಗ್ ಹೆಸರಿಗಷ್ಟೇ ಪ್ರಧಾನಿ, ಆಳುತ್ತಿರುವುದು ಸೋನಿಯಾ ಹಾಗೂ ರಾಹುಲ್ ಎಂದು ಎಲ್ಲರಿಗೂ ಗೊತ್ತು. ಇನ್ನು ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ಹೊಸದಾಗಿ ಮಾಡುವುದಕ್ಕೇನಿದೆ? ದೇಶ ಉದ್ಧಾರ ಮಾಡುವ ಕಥೆ ಹಾಗಿರಲಿ, ಈ ಅಮ್ಮ-ಮಗ ಪ್ರತಿನಿಧಿಸುವ ಅಮೇಠಿ-ರಾಯ್‌ಬರೇಲಿಗೆ ಹೋದಾಗ ಜನರು ಕಪ್ಪು ಬಾವುಟ ತೋರಿಸಿದ್ದು, ಅಣಕಿಸಿದ್ದು ಇದೇ ಕಾರಣಕ್ಕಲ್ಲವೆ? ರಾಜ್ಯ, ದೇಶವನ್ನು ಉದ್ಧಾರ ಮಾಡಿದರೆ, ಅಭಿವೃದ್ಧಿಯಾದರೆ ಜನರು ತಮ್ಮನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ಸಿಗರಿಗೆ ಚೆನ್ನಾಗಿ ಗೊತ್ತು. ಬರೀ ಲೂಟಿ ಮಾಡುವುದಕ್ಕೊಬ್ಬ ನೇತಾರ ಬೇಕು. ಅದಕ್ಕೇ ರಾಹುಲ್ ಗಾಂಧಿಯವರನ್ನು ತಳ್ಳಲು ಕಾಂಗ್ರೆಸ್ಸಿಗರು ಹವಣಿಸುತ್ತಿದ್ದಾರೆ. ಈ ಹಿಂದೆ ಪೈಲಟ್ ಆಗಿದ್ದ ರಾಜೀವ್ ಗಾಂಧಿಯವರನ್ನು ಒತ್ತಾಯಪೂರ್ವಕವಾಗಿ ಪ್ರಧಾನಿ ಮಾಡಿ ಬೋಫೋರ್ಸ್ ಹಗರಣ ಸೃಷ್ಟಿಸಿಕೊಂಡು ಕುರ್ಚಿ ಕಳೆದುಕೊಳ್ಳುವಂತೆ ಮಾಡಿದರು. ಈಗ ರಾಹುಲ್ ಗಾಂಧಿಯವರನ್ನು ತಳ್ಳಲು ಮುಂದಾಗಿದ್ದಾರೆ ಅಷ್ಟೇ.
ಪಾಪ ರಾಹುಲ್!

ಗುರುವಾರ, ಏಪ್ರಿಲ್ 4, 2013

ಕಂತ್ರಿ ಕೆಲಸ ಮಾಡಿ ‘ಐ ಲವ್ ಮೈ ಕಂಟ್ರಿ’ ಎಂದರೆ ಕ್ಷಮಿಸಿ ಬಿಡಬೇಕಾ?

Should i marry every woman I sleep with?
‘ನನ್ನ ಪತ್ನಿಯನ್ನು ಮದುವೆಯಾಗುತ್ತೀಯಾ?’ ಎಂದು ಕವಾಸ್ ಮಾಣಿಕ್ಷಾ ನಾನಾವತಿ ಕೇಳಿದಾಗ ಪ್ರೇಮ್ ಭಗವಾನ್ ದಾಸ್ ಅಹುಜಾ ಹೇಳಿದ ಮಾತುಗಳಿವು. ಕವಾಸ್ ಮಾಣಿಕ್ಷಾ ನಾನಾವತಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದರು. ಹಾಗಾಗಿ ಕರ್ತವ್ಯದ ಸಲುವಾಗಿ ಸದಾ ಮನೆಯಿಂದ ದೂರವೇ ಇರುತ್ತಿದ್ದರು. ಈ ಮಧ್ಯೆ 1959, ಏಪ್ರಿಲ್ 27ರಂದು ಮನೆಗೆ ಮರಳಿದಾಗ ಪತ್ನಿ ಸಿಲ್ವಿಯಾ ಏಕೋ ತನ್ನಿಂದ ವಿಮುಖಳಾಗಿರುವುದನ್ನು ಗಮನಿಸುತ್ತಾರೆ. ಆಕೆ ಸಮೀಪದಲ್ಲೇ ಇದ್ದ ಸ್ಫುರದ್ರೂಪಿ ಪ್ಲೇ ಬಾಯ್ ಪ್ರೇಮ್ ಅಹುಜಾನ ಬಲೆಗೆ ಬಿದ್ದಿರುತ್ತಾಳೆ, ಆತನನ್ನು ಗಾಢವಾಗಿ ಪ್ರೀತಿಸುತ್ತಿರುತ್ತಾಳೆ. ಅದನ್ನು ಗಂಡನಿಗೆ ನೇರವಾಗಿಯೂ ಹೇಳಿ ಬಿಡುತ್ತಾಳೆ. ಎದೆ ಒಡೆದೇ ಹೋದರೂ ಸಾವರಿಸಿಕೊಂಡ ನಾನಾವತಿ ಕೇಳುತ್ತಾರೆ ‘ಆತ ನಿನ್ನನ್ನು ಮದುವೆಯಾಗುತ್ತಾನಾ?’. ಆದರೆ ಆಕೆಗೂ ಉತ್ತರ ಗೊತ್ತಿರಲಿಲ್ಲ, ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಮಧ್ಯಾಹ್ನ ಪತ್ನಿ ಮತ್ತು ಮಕ್ಕಳನ್ನು ಸಿನಿಮಾಕ್ಕೆ ಕಳುಹಿಸಿದ ನಾನಾವತಿ, ನೌಕಾಪಡೆಯ ಕೇಂದ್ರಕ್ಕೆ ಹೋಗಿ ತನ್ನ ಪಿಸ್ತೂಲ್ ಹಾಗೂ 6 ಗುಂಡುಗಳನ್ನು ತೆಗೆದುಕೊಂಡು ನೇರವಾಗಿ ಅಹುಜಾನ ಮನೆಗೆ ತೆರಳಿ, ‘ನನ್ನ ಪತ್ನಿಯನ್ನು ವಿವಾಹವಾಗಿ ನನ್ನ ಮೂವರು ಮಕ್ಕಳನ್ನು ಸ್ವೀಕರಿಸುತ್ತೀಯಾ?’ ಎಂದು ಕೇಳುತ್ತಾರೆ. ಅದಕ್ಕೆ ‘ನಾನು ಮಲಗಿದ ಮಹಿಳೆಯರನ್ನೆಲ್ಲ ಮದುವೆಯಾಗುವುದಕ್ಕಾಗುತ್ತಾ?!’ ಎಂದು ಆತ ಉಡಾಫೆಯಿಂದ ಉತ್ತರಿಸುತ್ತಾನೆ. ನಾನಾವತಿ ಪಿಸ್ತೂಲಿನಿಂದ ಮೂರು ಗುಂಡುಗಳು ಹಾರುತ್ತವೆ, ಪ್ರೇಮ್ ಅಹುಜಾ ನೆಲಕ್ಕುರುಳುತ್ತಾನೆ! 1961, ನವೆಂಬರ್ 24ರಂದು 34 ವರ್ಷದ ಕವಾಸ್ ಮಾಣಿಕ್ಷಾ ನಾನಾವತಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಅಲ್ಲಿಗೆ ಒಬ್ಬ ಪ್ರತಿಭಾವಂತ, ಕಾರ್ಯದಕ್ಷ ನೌಕಾ ಅಧಿಕಾರಿಯ ಬದುಕಿಗೆ ತೆರೆಬಿದ್ದಂತಾಗುತ್ತದೆ, ಸಂಸಾರ ಬಿರುಗಾಳಿಗೆ ಸಿಲುಕುತ್ತದೆ.
ಹಾಗಂತ ಕಥೆ ಮುಗಿಯಲಿಲ್ಲ!
ಇತ್ತ 1960ರ ದಶಕದ ಮಧ್ಯಭಾಗದ ವೇಳೆಗೆ ಮುಂಬೈನಲ್ಲಿ ಖ್ಯಾತ ಸಿಂಧಿ ಸ್ವಾತಂತ್ರ್ಯ ಹೋರಾಟಗಾರ ಭಾಯಿ ಪ್ರತಾಪ್ ಭಾರೀ ಲಾಭ ತರುವ ಆಮದು ವ್ಯವಹಾರದಲ್ಲಿ ತೊಡಗಿದ್ದರು. ಈ ಭಾಯಿ ಪ್ರತಾಪ್ ಪಂಡಿತ್ ನೆಹರು, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವರಂಥ ಅತಿರಥ ಮಹಾರಥರ ಜತೆ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದವರಾಗಿದ್ದರು. 1947ರ ದೇಶ ವಿಭಜನೆಯ ನಂತರ ಬಲಾತ್ಕಾರದಿಂದ ಪಾಕಿಸ್ತಾನ ಬಿಟ್ಟು ಬಂದ ಸಿಂಧಿಗಳಿಗೆ ಗಾಂಧೀಧಾಮದಲ್ಲಿ ಆಶ್ರಯ ನೀಡಿದ್ದ ವ್ಯಕ್ತಿ ಅವರು. ಆಮದು ವ್ಯವಹಾರವೊಂದರಲ್ಲಿ ಸರಕುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಭಾಯಿ ಪ್ರತಾಪ್ ವಿರುದ್ಧ ಕೇಸೊಂದು ದಾಖಲಾಯಿತು. ತನಿಖೆಯೂ ಆರಂಭವಾಯಿತು. ಸಿರಿವಂತರೂ ಆಗಿದ್ದ ಭಾಯಿ ಪ್ರತಾಪ್ ಒಬ್ಬ ಯೋಗ್ಯ ವಕೀಲ ತನ್ನ ಪರ ವಕಾಲತ್ತು ವಹಿಸಬೇಕೆಂದು ಇಚ್ಛಿಸಿದರು, ಸಿಂಧಿಯೇ ಆಗಿದ್ದ ಯುವ ವಕೀಲ ರಾಮ್ ಜೇಠ್ಮಲಾನಿಯವರನ್ನು ಗೊತ್ತು ಮಾಡುತ್ತಾರೆ. ಆದರೆ ಪ್ರಕರಣ ತುಸು ಸಂಕೀರ್ಣವಾಗಿರುವುದರಿಂದ ಭಾಯಿ ಪ್ರತಾಪ್ಗೆ ಯುವಕನಿಗಿಂತ ನುರಿತ ಹಿರಿಯ ವಕೀಲ ಬೇಕೆನಿಸಿ ಜೇಠ್ಮಲಾನಿ ಬದಲಿಗೆ ಬೇರೊಬ್ಬ ವಕೀಲರನ್ನು ನಿಯೋಜಿಸುತ್ತಾರೆ.
ಆದರೆ… ನುರಿತ ವಕೀಲನಿಗೆ ಭಾಯಿ ಪ್ರತಾಪ್ರ ಅಮಾಯಕತೆಯನ್ನು ಸಾಬೀತುಪಡಿಸಲಾಗದೆ 18 ತಿಂಗಳ ಸೆರೆವಾಸವಾಗುತ್ತದೆ. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ ಇನ್ನೂ ದಿಗ್ಭ್ರಮೆ ಹುಟ್ಟಿಸುವಂತೆ ಶಿಕ್ಷೆ ಅವಧಿಯನ್ನು 5 ವರ್ಷಗಳಿಗೆ ಏರಿಸುತ್ತಾರೆ! ಕೊನೆಗೆ ವಿಧಿಯಿಲ್ಲದೆ ತಮ್ಮ ಪ್ರಭಾವ ಬಳಸಿ ಪ್ರಧಾನಿ ಪಂಡಿತ್ ನೆಹರು ಅವರನ್ನು ಸಂಪರ್ಕಿಸಿ, ಅವರ ಮೂಲಕ ಪ್ರಭಾವ ಬೀರಿ ಆಗಿನ ಮಹಾರಾಷ್ಟ್ರ ರಾಜ್ಯಪಾಲರಾದ ನೆಹರು ಸಹೋದರಿ ವಿಜಯಲಕ್ಷ್ಮೀ ಪಂಡಿತ್ ಮುಂದೆ 1962ರಲ್ಲಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಪ್ರಕರಣದ ಯೋಗ್ಯಾಯೋಗ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಭಾಯಿ ಪ್ರತಾಪ್ ಅಮಾಯಕರಾಗಿದ್ದರು, ಆದರೆ ಸರ್ಕಾರಿ ವಕೀಲ ಸೂಕ್ತ ಸಾಕ್ಷ್ಯವನ್ನು ಕೋರ್ಟ್ ಮುಂದಿಡದೇ ಇದ್ದಿದ್ದೇ ಶಿಕ್ಷೆಗೆ ಕಾರಣವಾಗಿದ್ದು ಎಂಬುದು ತಿಳಿಯುತ್ತದೆ. ಹಾಗಂತ ಅವರನ್ನು ಏಕಾಏಕಿ ಮಾಫಿ ಮಾಡುವಂತೆಯೂ ಇರಲಿಲ್ಲ. ಏಕೆಂದರೆ ಕವಾಸ್ ಮಾಣಿಕ್ಷಾ ನಾನಾವತಿ ಪ್ರಕರಣ ಹಸಿಯಾಗಿಯೇ ಇತ್ತು. ಆತ ಸೇರಿದ್ದ ಪಾರ್ಸಿ ಸಮುದಾಯವೂ ನಾನಾವತಿಗೆ ತೀರಾ ಘನಘೋರ ಶಿಕ್ಷೆ ವಿಧಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ನಾನಾವತಿ ಒಬ್ಬ ದಕ್ಷ ನೌಕಾ ಅಧಿಕಾರಿ, ಆತನಿಗೆ ಯಾವುದೇ ಅಪರಾಧ ಹಿನ್ನೆಲೆಯಿಲ್ಲ, ಅದ್ಭುತ ಸೇವಾ ಹಿನ್ನೆಲೆಯಿದೆ, ಅಹುಜಾ ಪ್ರಚೋದನೆಯಿಂದಾಗಿ ಆತ ಅಂತಹ ಕೆಲಸ ಮಾಡಬೇಕಾಗಿ ಬಂತು, ಈಗಾಗಲೇ ಆತ ಸಾಕಷ್ಟು ಶಿಕ್ಷೆ ಅನುಭವಿಸಿದ್ದಾನೆ, ಆತನಿಗೂ ಕ್ಷಮೆ ನೀಡಬೇಕೆಂಬ ಅಭಿಪ್ರಾಯಕ್ಕೆ ಬಂದಿತ್ತು.
ಹೀಗೆ ಭಾಯಿ ಪ್ರತಾಪ್ ನಾನಾವತಿಯವರ ಪ್ರಕರಣ ಸಿಂಧಿ-ಪಾರ್ಸಿ ಸಮಸ್ಯೆಯಾಗಿ ಬಿಟ್ಟಿತು!
ಅಂದರೆ ನಾನಾವತಿ ಪಾರ್ಸಿ. ಆತ ಕೊಲೆ ಮಾಡಿದ್ದ ಪ್ರೇಮ್ ಅಹುಜಾ ಸಿಂಧಿ. ಹಾಗಾಗಿ ಮತ್ತೊಬ್ಬ ಸಿಂಧಿ ರಾಮ್ ಜೇಠ್ಮಲಾನಿ ನಾನಾವತಿಗೆ ಶಿಕ್ಷೆ ಕೊಡಿಸಲು ಮುಂದಾದಾಗ ಪಾರ್ಸಿ ವಕೀಲ ಕಾರ್ಲ್ ಖಾಂಡೇಲ್ವಾಲಾ, ಬ್ಲಿಟ್ಜ್ ಪತ್ರಿಕೆಯ ಸಂಪಾದಕ-ಮಾಲೀಕ ರುಸ್ಸಿ ಕರಂಜಿಯಾ ನೇತೃತ್ವದಲ್ಲಿ ಇಡೀ ಪಾರ್ಸಿ ಸಮುದಾಯವೇ ನಾನಾವತಿಯ ಹಿಂದೆ ನಿಂತಿತ್ತು. ಹೀಗಾಗಿ ಸಿಂಧಿಯಾದ ಭಾಯಿ ಪ್ರತಾಪ್ಗೆ ಮಾತ್ರ ಕ್ಷಮೆ ನೀಡಿದರೆ ಪಾರ್ಸಿಗಳಿಗೆ ಕೋಪವುಂಟಾಗಲಿತ್ತು. ನಾನಾವತಿಗೆ ಮಾಫಿ ನೀಡಿದರೆ ಸಿಂಧಿ ಸಮುದಾಯಕ್ಕೆ ನೋವಾಗುತ್ತಿತ್ತು. ಎರಡೂ ಸಮುದಾಯಗಳಿಗೂ ನೋವಾಗದಂತಹ ಪರಿಹಾರವೊಂದು ರೂಪತಳೆಯಬೇಕಿತ್ತು. 1962. ಒಂದು ದಿನ ರಾಮ್ ಜೇಠ್ಮಲಾನಿ ತಮ್ಮ ಅಪಾರ್ಟ್ಮೆಂಟ್ನ ಕದ ತೆರೆದರೆ ಎದುರಿಗೆ ನಾನಾವತಿ ಪ್ರಕರಣದ ಸರ್ಕಾರಿ ವಕೀಲ ರಜನಿ ಪಟೇಲ್ ಹಾಗೂ ನಾನಾವತಿ ಪತ್ನಿ ಸಿಲ್ವಿಯಾ ನಿಂತಿದ್ದಾರೆ!
ಏಕಿರಬಹುದು?
ಎಂದು ಜೇಠ್ಮಲಾನಿ ಯೋಚಿಸುವುದರೊಳಗೆ ನೇರ ವಿಷಯಕ್ಕೆ ಬಂದ ರಜನಿ ಪಟೇಲ್, ‘ಸರ್ಕಾರ ಭಾಯಿ ಪ್ರತಾಪ್ ಹಾಗೂ ನಾನಾವತಿ ಇಬ್ಬರನ್ನೂ ಕ್ಷಮಿಸಲು ಸಿದ್ಧವಿದೆ. ಆದರೆ ಸಿಂಧಿ ಸಮುದಾಯವನ್ನು ಕೆರಳಿಸದೇ ಆ ಕೆಲಸ ಮಾಡಬೇಕು. ಒಂದು ವೇಳೆ ಪ್ರೇಮ್ ಅಹುಜಾನ ತಂಗಿ ಮಾಮೀ ಅಹುಜಾಳ ಮನವೊಲಿಸಿದರೆ ಎಲ್ಲವೂ ಸುಲಭವಾಗುತ್ತದೆ. ಇಷ್ಟಕ್ಕೂ ಕೊಲೆಗೀಡಾದ ಅಹುಜಾನ ತಂಗಿಯೇ ಕ್ಷಮಿಸಿದರೆ ಉಳಿದದ್ದೆಲ್ಲಾ ಮುಖ್ಯವಾಗುವುದಿಲ್ಲ’ ಎಂದರು. ರಾಮ್ ಜೇಠ್ಮಲಾನಿ ಹಾಗೂ ಮಾಮೀ ಅಹುಜಾ ಇಬ್ಬರೂ ಪರಸ್ಪರ ಚೆನ್ನಾಗಿ ಬಲ್ಲವರಾಗಿದ್ದರು. ನಾನಾವತಿಗೆ ಶಿಕ್ಷೆ ಕೊಡಿಸಲು ರಾಮ್ ಜೇಠ್ಮಲಾನಿಯವರನ್ನು ನಿಯೋಜಿಸಿದ್ದೇ ಆಕೆ. ಈಗ ಜೇಠ್ಮಲಾನಿ ಆಕೆಯ ಮನಸ್ಸನ್ನೇ ಪರಿವರ್ತನೆ ಮಾಡಬೇಕಿತ್ತು. ಅದಕ್ಕೆ ಜೇಠ್ಮಲಾನಿ ಒಪ್ಪಿಕೊಂಡರು. ಕವಾಸ್ ಮಾಣಿಕ್ಷಾ ನಾನಾವತಿಗೆ ಕ್ಷಮಾದಾನ ನೀಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಎಂದು ಆಕೆ ಲಿಖಿತವಾಗಿ ಕೊಟ್ಟಳು. ಒಂದೇ ದಿನ ಭಾಯಿ ಪ್ರತಾಪ್ ಹಾಗೂ ನಾನಾವತಿ ಬಿಡುಗಡೆಗೊಂಡರು.
ಈ ಪ್ರಕರಣವನ್ನು ಉದಾಹರಣೆಯಾಗಿಟ್ಟುಕೊಂಡು ಸಂಜಯ್ ದತ್ಗೆ ಕ್ಷಮಾದಾನ ನೀಡಬೇಕೆಂದು ಪ್ರತಿಪಾದಿಸುತ್ತಿರುವ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ನ ಹಾಲಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರ ತಲೆಯಲ್ಲಿ ತುಂಬಿರುವುದಾದರೂ ಏನು? ಎಲ್ಲಿಯ ನಾನಾವತಿ? ಎಲ್ಲಿಯ ಸಂಜಯ್ ದತ್? ನಾನಾವತಿಯವರದ್ದು ಭಾವನಾತ್ಮಕ ವಿಚಾರ, ಆವೇಶದಲ್ಲಿ ನಡೆದುಹೋದ ಅಚಾತುರ್ಯ. ತಮ್ಮಿಂದ ಅಚಾತುರ್ಯವಾದ ಕೂಡಲೇ ನಾನಾವತಿ ಪೊಲೀಸ್ ಠಾಣೆಗೆ ತೆರಳಿ ಸ್ವತಃ ತಪ್ಪೊಪ್ಪಿಕೊಂಡರು, ಕಾನೂನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರು. ಆದರೆ ಸಂಜಯ್ ಮಾಡಿದ್ದೇನು? ಮುಂಬೈ ದಾಳಿ ನಡೆದಿದ್ದು 1993, ಮಾರ್ಚ್ 12ರಂದು. ಪೊಲೀಸರು ಆತನನ್ನು ಟಾಡಾ ಕಾಯಿದೆಯಡಿ ಬಂಧಿಸಿದ್ದು 1993, ಏಪ್ರಿಲ್ 19ರಂದು. ಒಂದು ವೇಳೆ ಆತನಿಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಘಟನೆ ನಡೆದ ಮರುಕ್ಷಣವಾದರೂ ಪೊಲೀಸರಿಗೆ ದೇಶದ್ರೋಹಿಗಳ ಬಗ್ಗೆ ಸುಳಿವು ನೀಡಬಹುದಿತ್ತಲ್ಲವೆ? ಸೂಕ್ತ ಕಾರಣವಿಟ್ಟುಕೊಂಡು ಆವೇಶದಲ್ಲಿ ಮಾಡಿದ ಕೊಲೆಯನ್ನು ಸ್ವತಃ ಹೋಗಿ ಒಪ್ಪಿಕೊಂಡ ಹಾಗೂ ನೌಕಾ ದಳದಲ್ಲಿದ್ದುಕೊಂಡು ದೇಶಸೇವೆ ಮಾಡುತ್ತಿದ್ದ ನಾನಾವತಿಗೆ ಕ್ಷಮಾದಾನ ಕೊಟ್ಟಿದ್ದಕ್ಕೂ, ಮುಂಬೈ ದಾಳಿ ನಡೆದು ತಿಂಗಳಾದರೂ ದಾವೂದ್ ಇಬ್ರಾಹಿಂ, ಅನೀಸ್ ಇಬ್ರಾಹಿಂ, ಅಬುಸಲೇಂ ಜತೆ ಸಂಪರ್ಕವಿಟ್ಟುಕೊಂಡಿದ್ದ ದ್ರೋಹಿ ಸಂಜಯ್ ದತ್ಗೆ ಕ್ಷಮೆ ಕೊಡಬೇಕೆಂಬುದಕ್ಕೂ ವ್ಯತ್ಯಾಸವೇ ಇಲ್ಲವೆ? ಮನೆಯಲ್ಲಿ ಮೂರು ಲೈಸೆನ್ಸ್ ಹೊಂದಿದ್ದ ಮಾರಕ ಆಯುಧಗಳಿದ್ದರೂ ಎಕೆ-56, ಹ್ಯಾಂಡ್ ಗ್ರನೇಡ್ಗಳನ್ನು ಅಕ್ರಮವಾಗಿ ತಂದಿಟ್ಟುಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಆತನಿಗೆ? ಯಾರಾದರೂ ಆತ್ಮರಕ್ಷಣೆಗಾಗಿ ಗ್ರನೇಡ್ ಇಟ್ಟುಕೊಳ್ಳುತ್ತಾರಾ? ಆಗ ಅವರಪ್ಪ ಸುನೀಲ್ ದತ್ ಕಾಂಗ್ರೆಸ್ ಸಂಸದರಾಗಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಇದ್ದಿದ್ದೂ ಕಾಂಗ್ರೆಸ್ ಸರ್ಕಾರ. ಇವರ ಕುಟುಂಬಕ್ಕೆ ಅಪಾಯವಿದೆಯೆಂದು ಕೇಳಿದ್ದರೆ ಪೊಲೀಸರೇ ರಕ್ಷಣೆ ಕೊಡುತ್ತಿರಲಿಲ್ಲವೆ?
ಗುರುವಾರ ಪತ್ರಿಕಾಗೋಷ್ಠಿ ಕರೆದು, ‘ಐ ಲವ್ ಮೈ ಕಂಟ್ರಿ’ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾನಲ್ಲಾ ಇವನಿಗೆ ನಿಜಕ್ಕೂ ದೇಶದ ಬಗ್ಗೆ ಪ್ರೀತಿ ಇದ್ದಿದ್ದರೆ ಏಕೆ ದಾವೂದ್ ಇಬ್ರಾಹಿಂ 1993ರಲ್ಲಿ ದೇಶಕ್ಕೆ ಬಾಂಬಿಡುತ್ತಿದ್ದಾನೆ ಎಂಬುದನ್ನು ಪೊಲೀಸರಿಗೆ ತಿಳಿಸಲಿಲ್ಲ? ಒಂದು ವೇಳೆ, ಇವನಲ್ಲಿ ದೇಶ ಪ್ರೇಮವಿದ್ದಿದ್ದರೆ ಸ್ಫೋಟದ ಸುಳಿವು ನೀಡಿ 257 ಜನರ ಪ್ರಾಣ ಉಳಿಸುತ್ತಿದ್ದನಲ್ಲವೆ? ಹಾಗಿರುವಾಗ ಶಿಕ್ಷೆ ಕಾಯಂ ಆದ ಕೂಡಲೇ ‘ಐ ಲವ್ ಆಲ್ ದಿ ಸಿಟಿಝೆನ್ಸ್’ ಎಂದಿದ್ದಾನಲ್ಲ ಅದಕ್ಕೆ ಯಾವ ಅರ್ಥ ಬರುತ್ತದೆ ಹೇಳಿ? ‘ಒಂದು ವೇಳೆ ಸ್ಫೋಟಕ ಅಸ್ತ್ರಗಳು ಮುಂಬೈಗೆ ಬರುತ್ತಿವೆ ಎಂದು ಸಂಜಯ್ ದತ್ ಪೊಲೀಸರಿಗೆ ತಿಳಿಸಿದ್ದೇ ಆಗಿದ್ದರೆ ಮುಂಬೈ ಸರಣಿ ಸ್ಫೋಟವನ್ನು ತಡೆಯಬಹುದಿತ್ತು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಮ್ ಹೇಳಿರುವ ಮಾತನ್ನು ಕೇಳಿದರೇ ಗೊತ್ತಾಗುವುದಿಲ್ಲವೆ ಇವನೆಂಥ ವ್ಯಕ್ತಿ ಅನ್ನುವುದು? ಮುಂಬೈ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದೆದುರು 2002, ಜುಲೈ 26ರಂದು 2000, ಮಾರ್ಚ್ 14ರಂದು ಸಂಜಯ್ ದತ್-ಛೋಟಾ ಶಕೀಲ್-ಮಹೇಶ್ ಮಂಜ್ರೇಕರ್-ಹರೀಶ್ ಸುಗಂದ್- ಸಂಜಯ್ ಗುಪ್ತಾ ನಡುವೆ ನಡೆದಿದ್ದ ಟೆಲಿಫೋನ್ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಲಾಯಿತು. ಇದು ಏನನ್ನು ತೋರಿಸುತ್ತದೆ? ಮುಂಬೈ ದಾಳಿ ನಡೆದು 7 ವರ್ಷಗಳಾದರೂ ಸಂಜಯ್ ದತ್ ದೇಶದ್ರೋಹಿ ದಾವೂದ್ ಇಬ್ರಾಹಿಂ ಗುಂಪಿನ ಜತೆ ಸಂಪರ್ಕ-ಸಂಬಂಧ ಇಟ್ಟುಕೊಂಡಿದ್ದ ಎಂದಾಗಲಿಲ್ಲವೆ? ಮುಂಬೈ ದಾಳಿ ನಡೆದು 20 ವರ್ಷಗಳಾದರೂ ಒಮ್ಮೆಯಾದರೂ ಸಂಜಯ್ ದತ್ ಆ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆಯೇ? ಈ ಇಪ್ಪತ್ತು ವರ್ಷಗಳಲ್ಲಿ, ದಾವೂದ್ ಗುಂಪಿನ ಜತೆ ನಾನು ಸಂಬಂಧ ಇಟ್ಟುಕೊಂಡಿದ್ದು ತಪ್ಪು, ಅವರೆಲ್ಲ ದೇಶದ್ರೋಹಿಗಳು ಎಂದು ಒಮ್ಮೆಯಾದರೂ ಹೇಳಿದನೇ? ಅವರ ಜತೆ ಕೈಜೋಡಿಸುವಾಗ ಐ ಲವ್ ಮೈ ಕಂಟ್ರಿ ಎನ್ನುವ ದೇಶಪ್ರೇಮ ಎಲ್ಲಿ ಸತ್ತು ಬಿದ್ದಿತ್ತು? ಇಂಥ ವ್ಯಕ್ತಿಗೆ ಕ್ಷಮಾದಾನ ನೀಡಬೇಕೆ?
‘ಈ 20 ವರ್ಷಗಳಲ್ಲಿ ಆತ ಸಾಕಷ್ಟು ನೊಂದಿದ್ದಾನೆ, ಕಷ್ಟ ಅನುಭವಿಸಿದ್ದಾನೆ, ಆತನನ್ನು ಮಾಫಿ ಮಾಡಿ’ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಕಾಟ್ಜು ಮಹಾಶಯರು. ಆದರೆ ಆತ ಅನುಭವಿಸಿದ ಭಂಗವಾದರೂ ಯಾವುದು ಅಂದುಕೊಂಡಿರಿ? ಸಂಜಯ್ ದತ್ ಮೊದಲ ಪತ್ನಿ ರೀಚಾ ಶರ್ಮಾರನ್ನು ಮದುವೆಯಾಗಿದ್ದು 1987ರಲ್ಲಿ. ಆಕೆಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ಕೂಡಲೇ ಮಾಧುರಿ ದೀಕ್ಷಿತ್ರ ಹಿಂದೆ ಬಿದ್ದ. 1993ರ ದಾಳಿಯಲ್ಲಿ ಸಂಜಯ್ ನಿಜರೂಪ ಬಯಲಾದ ನಂತರ ಮಾಧುರಿ ದೂರವಾದರು. ಕೂಡಲೇ ರಿಯಾ ಪಿಳ್ಳೈಯರನ್ನು ಮದುವೆಯಾದರು. ಆಕೆಗೆ ಡೈವೋರ್ಸ್ ಕೊಟ್ಟು ಮಾನ್ಯತಾಳನ್ನು ಮದುವೆಯಾದರು. ಮಿಸ್ಟರ್ ಕಾಟ್ಜು, ಸಂಜಯ್ ದತ್ ಕಳೆದ 20 ವರ್ಷಗಳಲ್ಲಿ ಅನುಭವಿಸಿದ ಮಹಾ ‘ಕಷ್ಟ’ವೇನೆಂದರೆ ಮೊದಲ ಹೆಂಡತಿ ಹಾಸಿಗೆ ಹಿಡಿದಿರುವಾಗಲೇ ಮತ್ತೊಬ್ಬಳನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಮತ್ತೆರಡು ಮದುವೆಯಾಗಿ, ಮತ್ತೆರಡು ಮಕ್ಕಳನ್ನು ಮಾಡಿ, ಈ ಮಧ್ಯೆ 91 ಚಿತ್ರಗಳಲ್ಲಿ ನಟಿಸಿ, ಕೋಟಿ ಕೋಟಿ ಗಳಿಸಿ ಮಜಾ ಮಾಡಿದ್ದು ಅಷ್ಟೇ! ಇಂಥ ಮನುಷ್ಯನಿಗೆ ಕ್ಷಮೆ ನೀಡಿ ಎಂದು ಅದ್ಯಾವ ಮುಖ ಇಟ್ಟುಕೊಂಡು ಒತ್ತಾಯಿಸುತ್ತೀರ್ರೀ? ನಾನಾವತಿಗೆ ಕ್ಷಮೆ ನೀಡುವಾಗ ಆತ ಕೊಲೆಗೈದಿದ್ದ ಅಹುಜಾನ ತಂಗಿಯೇ ತನ್ನ ಅಭ್ಯಂತರವಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಳು. ಈ ಸಂಜಯ್ ಪೊಲೀಸರಿಗೆ ತಿಳಿಸದೇ ಹೋಗಿದ್ದರಿಂದ ಮುಂಬೈ ದಾಳಿಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಮರಿ ಕಳೆದುಕೊಂಡ 257 ಬಲಿಪಶುಗಳ ಕುಟುಂಬವನ್ನು ಒಮ್ಮೆಯಾದರೂ ಭೇಟಿಯಾಗಿ ಅವರ ಅಭಿಪ್ರಾಯ ಕೇಳಿದ್ದೀರಾ? ಕೈ, ಕಾಲು, ಕಣ್ಣು ಹಾಗೂ ಇತರೆ ಅಂಗಾಂಗ ಕಳೆದುಕೊಂಡು ಇಂದಿಗೂ ನರಳುತ್ತಿರುವ 900 ಜನರ ಭಾವನೆಗಳಿಗೆ ಕೊಳ್ಳಿಯಿಟ್ಟ ಸಂಜಯ್ ದತ್ಗೆ ಕ್ಷಮೆ ಕೊಡಬೇಕಾ? ಕಂತ್ರಿ ಕೆಲಸ ಮಾಡಿ ‘ಐ ಲವ್ ಮೈ ಕಂಟ್ರಿ’ ಎಂದ ಕೂಡಲೇ ಕ್ಷಮಿಸಿ ಬಿಡಬೇಕಾ ಕಾಟ್ಜು?
ಛೆ!

-ಪ್ರತಾಪ ಸಿಂಹ

ಟಿಪ್ಪುವನ್ನು ದ್ವೇಷಿಸಬೇಕೆಂದಲ್ಲ, ಸತ್ಯ ತಿಳಿಯಲಿ ಎಂದು!

‘ಒಬ್ಬ ಸಾಹಿತಿ ಆಡಿದ ಅಪ್ಪಟ ತಾಜಾ ಸುಳ್ಳಿನ ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೆಸರಿಡುವುದನ್ನು ವಿರೋಧಿಸುವಾಗ ಟಿಪ್ಪು ಹಿಂದು ದ್ವೇಷಿಯೆಂದೂ, 71 ಸಾವಿರ ಹಿಂದುಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂದು ಸುಳ್ಳು ಹೇಳಿದ್ದಾರೆ. ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲಿ ಕೊಡಗು ಪ್ರಾಂತ್ಯದಲ್ಲಿ ಅಷ್ಟು ಜನಸಂಖ್ಯೆ ಇತ್ತೇ ಎಂಬ ಬಗ್ಗೆ ಸಂಶಯವಿದೆ. ಸರ್ಕಾರವೇ ಪ್ರಕಟಿಸಿರುವ ಕೂರ್ಗ್ ಗೆಝೆಟಿಯರ್ ನೋಡಿದೆ. 1871ರಲ್ಲಿ ಕೂರ್ಗ್‌ನಲ್ಲಿ ಕೇವಲ 1,68,312 ಜನರಿದ್ದರು. 1981ರ ಜನಗಣತಿ ಪ್ರಕಾರ 3,22,829 ಜನಸಂಖ್ಯೆಯಿತ್ತು. 1782-99ರಲ್ಲಿ ಎಷ್ಟು ಜನರಿದ್ದಿರಬಹುದು ಎಂದು ಲೆಕ್ಕಹಾಕಿದರೆ 1 ಲಕ್ಷಕ್ಕಿಂತ ಹೆಚ್ಚಿರಲಾರರು. ಆ ನೂರು ಸಾವಿರ ಜನರಲ್ಲಿ 71 ಸಾವಿರ ಜನರನ್ನು ಇಸ್ಲಾಂ ಮತಕ್ಕೆ ಮತಾಂತರಿಸಿದ್ದರೆ 210 ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಮುಸ್ಲಿಮರಿರಬೇಕಿತ್ತು. ಈಗ ಕೊಡಗು ಜಿಲ್ಲೆಯ ಮುಸ್ಲಿಮರ ಸಂಖ್ಯೆ 14,730 ಮಾತ್ರ. ಸಂಶೋಧಕರು ಹಸಿ ಹಸಿ ಸುಳ್ಳು ಹೇಳಬಹುದೇ?’
ಹಾಗಂತ ಫೆಬ್ರವರಿ 9ರಂದು ಆರಂಭವಾದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೋ. ಚೆನ್ನಬಸಪ್ಪನವರು ಡಾ. ಚಿದಾನಂದಮೂರ್ತಿಯವರ ಮೇಲೆ ಟೀಕಾಪ್ರಹಾರ ಮಾಡಿಬಿಟ್ಟರು!
ಈ ನಾಡಿನ ಮಾಗಿದ ಹಾಗೂ ಹಿರಿತಲೆ ಚೆನ್ನಬಸಪ್ಪನವರು ತೆರೆದಿಟ್ಟ ಅಂಕಿ-ಅಂಶಗಳು ಹೇಗಿದ್ದವೆಂದರೆ ಅಕ್ಷರಜ್ಞಾನವಿಲ್ಲದವರೂ ಅಹುದಹುದೆಂದು ಬಿಡಬೇಕು. ಆದರೆ ಸ್ವಲ್ಪ ಸಮಾಧಾನವಾಗಿ ಕುಳಿತು ಯೋಚಿಸಿದರೆ ನಮ್ಮ ಚೆನ್ನಬಸಪ್ಪನವರು ಡ್ಯಾರೆಲ್ ಹಫ್ ಬರೆದ “How to Lie with Statistics’ ಪುಸ್ತಕದಿಂದ ಬಹಳಷ್ಟು ಪ್ರೇರಣೆ ಪಡೆದಿದ್ದಾರೆ ಎಂಬುದು ಕಾಣುತ್ತದೆ. ವಿವೇಕ ಕೈಕೊಟ್ಟಾಗ ಬುದ್ಧಿಯೂ ಮಂಕಾಗುತ್ತದಂತೆ. ಆದರೆ ಉದ್ದೇಶ ಶುದ್ಧಿಯಿಲ್ಲದ ಕೆಲವರು ಬುದ್ಧಿಯನ್ನೂ ವಿವೇಕರಹಿತವಾಗಿ ಬಳಸುತ್ತಾರೆ. ಹೀಗೆಯೇ ಹೇಳಬೇಕಾಗುತ್ತದೆ. ಏಕೆಂದರೆ 2011ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ಅಂದಾಜು 5.48 ಲಕ್ಷ. ಅದರಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚೂಕಡಿಮೆ ಒಂದೂಕಾಲು ಲಕ್ಷ. ಸ್ವಾಮಿ ಚೆನ್ನಬಸಪ್ಪನವರೇ, ಇಡೀ ಕೊಡಗು ಜಿಲ್ಲೆಯಲ್ಲಿ ಇರುವ ಮುಸ್ಲಿಮರ ಸಂಖ್ಯೆಯೆಂದು ನೀವು ಕೊಟ್ಟಿರುವ 14,730 ಸಂಖ್ಯೆಯ ಮೂರು ಪಟ್ಟು ಕೇವಲ ವಿರಾಜಪೇಟೆ ತಾಲೂಕಿನಲ್ಲೊಂದರಲ್ಲೇ ಇದ್ದಾರೆ! “ಆ ನೂರು ಸಾವಿರ ಜನರಲ್ಲಿ 71 ಸಾವಿರ ಜನರನ್ನು ಇಸ್ಲಾಂ ಮತಕ್ಕೆ ಮತಾಂತರಿಸಿದ್ದರೆ 210 ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಮುಸ್ಲಿಮರಿರಬೇಕಿತ್ತು” ಎನ್ನುವ ಚೆನ್ನಬಸಪ್ಪನವರ ‘ತರ್ಕ’ ಆ ಭಗವಂತನಿಗೇ ಮೆಚ್ಚಿಗೆಯಾಗಬೇಕು. ಮುಸ್ಲಿಮರ ಸಂಖ್ಯಾವೃದ್ಧಿಯ ದರದ ಕನಿಷ್ಠ ಅರಿವಾದರೂ ಇವರಿಗಿದೆಯೇ? ಯಾವುದೇ ಅಂಕಿ-ಅಂಶಗಳನ್ನು ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವಿಕಿಪಿಡಿಯಾ ಕೂಡ “Kodagu is home to a sizeable population of Muslims’, ಅಂದರೆ ಕೊಡಗಿನಲ್ಲಿ ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎನ್ನುತ್ತದೆ. ಇನ್ನು ‘ಟಿಪ್ಪು ಸುಲ್ತಾನ್ ಎಕ್ಸ್‌ರೇಡ್‌’ ಪುಸ್ತಕದಲ್ಲಿ “ಟಿಪ್ಪು ಒಬ್ಬ ಕಳ್ಳ ಬೆಕ್ಕು ಎಂಬಂತೆಯೇ ಕೊಡಗಿಗೆ ನುಗ್ಗಿದ. ಆತನ ಆಕ್ರಮಣ ಕೇವಲ ಸಾಮ್ರಾಜ್ಯಶಾಹಿಯೊಬ್ಬನ ಆಕ್ರಮಣವಾಗಿರಲಿಲ್ಲ. ಅದು ಸಾಂಸ್ಕೃತಿಕ ಮತ್ತು ಅಪ್ಪಟ ಮತೀಯ ಆಕ್ರಮಣವಾಗಿತ್ತು. ಟಿಪ್ಪುವಿನ ಈ ತಂತ್ರ ಅಲ್ಲಿ ಗೆದ್ದಿತು. ಟಿಪ್ಪು ಪೇಟೆ ಪಟ್ಟಣಗಳಿಗೆ ನುಗ್ಗುವಂತೆಯೇ ಊರೂರುಗಳಿಗೂ ನುಗ್ಗತೊಡಗಿದ. ಮತಾಂತರ ಇಲ್ಲವೇ ಖಡ್ಗಕ್ಕೆ ಬಲಿ ಸೂತ್ರವನ್ನು ಅನುಸರಿಸತೊಡಗಿದ. ಇದು ಕೊಡವರ ಶಕ್ತಿಯನ್ನು ಕುಂದಿಸತೊಡಗಿತು. ಮತ್ತು ಕೊಡವರ ಸೈನ್ಯ ಮಂಕಾಗತೊಡಗಿತು. ನೇರ ಯುದ್ಧದಿಂದ ಗೆಲ್ಲಲಾಗದು ಎಂಬುದನ್ನು ಅರಿತಿದ್ದ ಆತ ದೇವಸ್ಥಾನಗಳಿಗೆ ಲಗ್ಗೆ ಇಡತೊಡಗಿದ. ಹೀಗೆ ತನ್ನ ಮತಾಂಧ ನೆಲೆಯಿಂದ ರಾಜಕೀಯ ಬೇಳೆ ಬೇಯಿಸಿಕೊಂಡ ಟಿಪ್ಪು ಸಲೀಸಾಗಿ ಮಲಬಾರಿಗೆ ಮುಂದಡಿಯಿಟ್ಟ. ಕೊಡಗಿನಲ್ಲಿ ಆತ ನಡೆಸಿದ ಕ್ರೌರ್ಯದ ಕುರುಹುಗಳು ಇಂದೂ ಕಣ್ಣಿಗೆ ರಾಚುತ್ತವೆ. ಕೆಲವು ಇತಿಹಾಸಕಾರರು ಟಿಪ್ಪು ಸುಮಾರು 40 ಸಾವಿರ ಕೊಡವರನ್ನು ಮತಾಂತರಿಸಿದ ಮತ್ತು ಅಷ್ಟೇ ಸಂಖ್ಯೆಯ ಕೊಡವರನ್ನು  ಕೊಂದಿದ್ದ ಎಂದು ಬರೆದಿದ್ದಾರೆ. ಸಂಖ್ಯೆಯಲ್ಲಿ ಉತ್ಪ್ರೇಕ್ಷೆ ಇರುವುದನ್ನು ಅಲ್ಲಗೆಳೆಯಲಾಗದು. ಆದರೆ ಆತ ಕೊಡವರನ್ನು ಮತಾಂತರಿಸಿ ಅವರು ಇಂದು ‘ಕೊಡವ ಮಾಪಿಳ್ಳೆ’ಗಳೆಂದು ಕರೆಸಿಕೊಳ್ಳುತ್ತಿರುವುದು ಮತ್ತು  ಟಿಪ್ಪುವಿನ ‘ಅಹಮದಿ ಸೈನ್ಯದಲ್ಲಿ ನೂರಾರು ಸಂಖ್ಯೆಯ ಕೊಡವರು ಇದ್ದದ್ದು ಇತಿಹಾಸದ ಸತ್ಯಕ್ಕೆ ಸಾಕ್ಷಿಯಾಗಿವೆ’ ಎಂದು ಕೊಡವರೇ ಆಗಿರುವ ಲೇಖಕ ಐ.ಎಂ ಮುತ್ತಣ್ಣ ಬರೆದಿದ್ದಾರೆ. ಇಂದು ಕೊಡವ ಮನೆ ಹೆಸರುಗಳಿರುವ ಮಾಪಿಳ್ಳೆ(ಮುಸಲ್ಮಾನ)ಗಳಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ ಇವೆ), ದುದ್ದಿಯಂಡ, ಕದ್ದಡಿಯಂಡ, ಕೊಳುಮಂಡ, ದೇವಣಗೇರಿ ಗ್ರಾಮದಲ್ಲಿ ಪುಲಿಯಂಡ, ವೀರಾಜಪೇಟೆ ಸುತ್ತಮುತ್ತ ಕೂವಲೇರ, ಈತಲ್ತಂಡ, ಮೀತಲ್ತಂಡ, ಕುಪ್ಪೋಡಂಡ, ಕಪ್ಪಂಜೀರ, ಮಡಿಕೇರಿ ತಾಲೂಕಿನಲ್ಲಿ ಕಾಳೇರ, ಚೆಕ್ಕೇರ, ಚೆರ್ಮಕಾರಂಡ, ಮಣಿಯಂಡ, ಬಲಸೋಜಿಕಾರಂಡ, ಮಂಡೇಯಂಡ ಹೆಸರಿನ ಮನೆಗಳಿವೆ. ಇನ್ನೂ ಒಂದು ವಿಚಿತ್ರವೆಂದರೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿರುವ ಮುಸಲ್ಮಾನ ಮನೆತನದ ಹೆಸರು ಹರಿಶ್ಚಂದ್ರ! ಟಿಪ್ಪುವಿನ ಭಯದಿಂದ ಕೊಡಗಿನ ಅರಸ ಓಂಕಾರೇಶ್ವರ ದೇವಸ್ಥಾನದ ಕಳಶವನ್ನು ತೆಗೆದು ಗುಂಬಜ್ ಅನ್ನು ನಿರ್ಮಿಸಿದ. ದೂರದಿಂದ ನೋಡಿದರೆ ಇದು ಮಸೀದಿಯಂತೆ ಕಾಣುತ್ತಿತ್ತು. ಇಂದಿಗೂ ಓಂಕಾರೇಶ್ವರ ದೇವಸ್ಥಾನ ಗುಂಬಜ್ ಆಕಾರದಲ್ಲೇ ಇದೆ.
ಇವು ಏನನ್ನು ಸೂಚಿಸುತ್ತವೆ?
ಇನ್ನೂ ಒಂದು ಮಜಾ ಗೊತ್ತಾ? ಟಿಪ್ಪು ಕೂರ್ಗ್‌ನಲ್ಲಿ 71 ಸಾವಿರ ಹಿಂದುಗಳನ್ನು ಮತಾಂತರ ಮಾಡಿದ ಎಂದು ಡಾ. ಚಿದಾನಂದಮೂರ್ತಿಯವರು ಎಲ್ಲಿಯೂ ಹೇಳಿಯೇ ಇಲ್ಲ. ‘ಮಲಬಾರ್ ಪ್ರದೇಶ, ಕೂರ್ಗ್ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಟಿಪ್ಪು 70 ಸಾವಿರ ಕ್ರಿಶ್ಚಿಯನ್ನರನ್ನು, ಒಂದು ಲಕ್ಷ ಹಿಂದುಗಳನ್ನು ಮತಾಂತರ ಮಾಡಿದ’ ಎಂದು ಅವರು ಹೇಳಿದ್ದರೇ ಹೊರತು ‘ಕೂರ್ಗ್‌ನಲ್ಲಿ 71 ಸಾವಿರ ಹಿಂದುಗಳನ್ನು ಮತಾಂತರಿಸಿದ’ ಎಂದಲ್ಲ! ಹಾಗಿದ್ದರೂ ಅವರ ಹೇಳಿಕೆಯನ್ನು ತಿರುಚುವ, ತಮ್ಮದೇ ಆದ ಅಂಕಿ-ಅಂಶ ಕೊಡುವ ದರ್ದು ಚೆನ್ನಬಸಪ್ಪನವರಿಗೇನಿತ್ತು? ಸಾಹಿತ್ಯ ಸಮ್ಮೇಳದ ಸಮಾರೋಪ ಭಾಷಣ ಮಾಡಿದ ಎಂ.ಎಂ. ಕಲ್ಬುರ್ಗಿಯವರೂ ಚಿದಾನಂದಮೂರ್ತಿಯವರನ್ನು ಕುಟುಕಿದರು. ಕನ್ನಡ ಸಾಹಿತ್ಯ ಸಮ್ಮೇಳನದಂಥ ವೇದಿಕೆಯನ್ನು ತಮ್ಮ ಕ್ಷುಲ್ಲಕ ಮನಸ್ಥಿತಿಯನ್ನು ತೋರ್ಪಡಿಸಲು, ಚಿದಾನಂದಮೂರ್ತಿಯವರಂಥ ಪ್ರಾಮಾಣಿಕ ಸಂಶೋಧಕರನ್ನು ಹೀಗಳೆಯಲು ದುರುಪಯೋಗಪಡಿಸಿಕೊಂಡರೆ ಕಥೆ ಏನಾದೀತು? ‘ಕನ್ನಡ ಅರಸರ ಅಕನ್ನಡ ಪ್ರಜ್ಞೆ’ ಎಂಬ ಪುಸ್ತಕ ಬರೆದಿದ್ದ ಕಲ್ಬುರ್ಗಿ, ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಕಿತ್ತೊಗೆದು ಪರ್ಷಿಯನ್ ಹೇರಿದ ಟಿಪ್ಪು ಬಗ್ಗೆ ‘ಟಿಪ್ಪುವಿನ ಅಕನ್ನಡ ಪ್ರಜ್ಞೆ’ ಬರೆಯಲಿ ನೋಡೋಣ?
ಏಕೆ ಇದನ್ನೆಲ್ಲಾ ಹೇಳಬೇಕಾಗಿದೆಯೆಂದರೆ, ಬಹಳ ಅಪಾಯಕಾರಿ ಸಂಗತಿಯೇನೆಂದರೆ ಈ ವ್ಯಕ್ತಿಗಳು ಸಮಾಜದಲ್ಲಿ, ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವೇದಿಕೆಗಳು ಆಯಾಚಿತವಾಗಿ ದೊರೆಯುತ್ತವೆ. ಅಂತಹ ವೇದಿಕೆಗಳನ್ನು ಬಳಸಿಕೊಂಡು ಸುಳ್ಳು ಹೇಳಲು ಆರಂಭಿಸಿದರೆ ಅವರಿಂದ ಬುದ್ಧಿ ಹೇಳಿಸಿಕೊಳ್ಳುತ್ತಿರುವ ಸಮಾಜದ ಗತಿಯೇನು? ಇತಿಹಾಸದಿಂದ ಪಾಠ ಕಲಿಯದವರು, ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿದೆ. ಆದರೆ ಈ ಬುದ್ಧಿಜೀವಿ ಮಹಾಶಯರು ನೈಜ ಇತಿಹಾಸವನ್ನೇ ಓದಬೇಡಿ, ತಿಳಿದುಕೊಳ್ಳಬೇಡಿ, ಮಾತನಾಡಬೇಡಿ, ನಾವು ಹೇಳಿದ ಬೊಗಳೆಯನ್ನೇ ಕೇಳಿಕೊಂಡಿರಿ ಎನ್ನುತ್ತಾರಲ್ಲಾ, ಇದನ್ನು ಕೇಳಿಕೊಂಡು ಸುಮ್ಮನಿರಬೇಕೆ?!
ಇಷ್ಟಕ್ಕೂ ಅಬ್ದುಲ್ ಕಲಾಂ, ಅಬ್ದುಲ್ ನಜೀರ್ ಸಾಬ್‌ರಂಥ ಅಪ್ರತಿಮ ನೇತಾರರ ಹೆಸರನ್ನು ಬಿಟ್ಟು ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಉದ್ದೇಶಿತ ಕೇಂದ್ರೀಯ ವಿವಿಗೆ ಟಿಪ್ಪು ಹೆಸರೇ ಏಕೆ ಬೇಕು? ಯಾವ ಆ್ಯಂಗಲ್‌ನಲ್ಲಿ ಇವರಿಗೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಂತೆ ಕಾಣುತ್ತಾನೆ? ಸ್ವಾತಂತ್ರ್ಯ ಹೋರಾಟಗಾರ ಎಂದರೆ ಯಾರು ಹಾಗೂ ಯಾರನ್ನು ಹಾಗೆ ಕರೆಯಬಹುದು?
ಒಬ್ಬ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೇ ಎಂದು ತಿಳಿಯಲು ಇತಿಹಾಸದ ಟೈಮ್‌ಲೈನ್ (Timeline) ನೋಡಬೇಕಾಗುತ್ತದೆ. ಅಂದರೆ ಆಯಾ ಕಾಲಘಟ್ಟ ಹಾಗೂ ಘಟನೆಗಳನ್ನು ಕ್ರಮವಾಗಿ ನೋಡಬೇಕು. ಹಾಗೆ ನೋಡಿದಾಗ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನ ಯಾವ ಹೋರಾಟವನ್ನೂ ಸ್ವಾತಂತ್ರ್ಯ ಹೋರಾಟ ಎನ್ನುವುದಕ್ಕಾಗುವುದಿಲ್ಲ. ಅಶೋಕ ಮಡಿದ ನಂತರ ಇಡೀ ದೇಶ ಏಕ ಚಕ್ರಾಧಿಪತಿಯ ಆಡಳಿತಕ್ಕೆ ಒಳಪಟ್ಟ ಸಂದರ್ಭವೇ ಮತ್ತೆ ಒದಗಿ ಬಂದಿರಲಿಲ್ಲ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವರೆಗೂ ಭಾರತ ಎಂಬ ಏಕಮಾತ್ರ ದೇಶದ ಕಾನ್ಸೆಪ್ಟೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ರಾಜ್ಯ, ಗಡಿ, ಆಡಳಿತ ಉಳಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಡುತ್ತಿದ್ದರು. ಟಿಪ್ಪು, ಮರಾಠರು, ಕೊಡವರ ವಿರುದ್ಧ ಹೋರಾಡಿದಂತೆ ಟಿಪ್ಪುವಿನ ವಿರುದ್ಧ ನವಾಬ, ನಾಯರ್‌ಗಳೂ ಹೋರಾಡುತ್ತಿದ್ದರು. ಟಿಪ್ಪುವಿಗೆ ಬ್ರಿಟಿಷರ ವಿರುದ್ಧ ಎಷ್ಟು ದ್ವೇಷವಿತ್ತೋ, ಮರಾಠರಿಗೆ ಹೈದರ್-ಟಿಪ್ಪು ಮೇಲೂ ಅಷ್ಟೇ ಕೋಪವಿತ್ತು. ಹೈದರಾಲಿ ಬಗೆದ ದ್ರೋಹದಿಂದ ರಾಜ್ಯ ಕಳೆದುಕೊಂಡಿದ್ದ ಒಡೆಯರ್ ವಂಶಸ್ಥರಿಗೂ ಈ ಅಪ್ಪ-ಮಗನನ್ನು ಕಂಡರಾಗುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು 1771ರಲ್ಲೇ ಹೈದರಾಲಿಗೆ ಆಹ್ವಾನ ಕೊಟ್ಟಿದ್ದ ಮರಾಠರಿಗೆ ಹೈದರಾಲಿ-ಟಿಪ್ಪುಗಿಂತಲೂ ಮೊದಲೇ ಬ್ರಿಟಿಷರ ಮೇಲೆ ವೈರತ್ವವಿತ್ತು. ಆದರೆ ಅದೇ ಮರಾಠರು ಮೂರು, ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಪರವಿದ್ದರು. ಅಷ್ಟು ಮಾತ್ರವಲ್ಲ, ಮೊಘಲರು ರಜಪೂತರ ವಿರುದ್ಧ, ಮರಾಠರು ಮೊಘಲರು ಹಾಗೂ ಬಹಮನಿ ಸುಲ್ತಾನರ ವಿರುದ್ಧ ಹೋರಾಡುತ್ತಿದ್ದರು. ಎಲ್ಲರೂ ರಾಜ್ಯ ಕಳೆದುಕೊಂಡು ಬ್ರಿಟಿಷರು ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವವರೆಗೂ ಒಬ್ಬ ‘ಕಾಮನ್ ಎನಿಮಿ’ ಎನ್ನುವವನೂ ಇರಲಿಲ್ಲ, ಸಾಂಘಿಕ ಹೋರಾಟದ ಕಾಲವೂ ಬಂದಿರಲಿಲ್ಲ.
ಆದರೆ…
1857ರ ಹೊತ್ತಿಗೆ ಎಲ್ಲ ರಾಜವಂಶಗಳು, ದೊರೆಗಳು, ಸುಲ್ತಾನರು, ನಿಜಾಮರು, ನವಾಬರು, ಪಾಳೇಗಾರರು ಸೋತು ಶರಣಾಗಿ ‘ಬ್ರಿಟಿಷ’ರೆಂಬ ಒಬ್ಬ ಸಾಮಾನ್ಯ ಶತ್ರು ಸೃಷ್ಟಿಯಾದ. ಅಶೋಕ, ಅವನನ್ನು ಬಿಟ್ಟರೆ ಹೆಚ್ಚೂ ಕಡಿಮೆ ಭಾರತದ ಬಹುತೇಕ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದ ಅಕ್ಬರ್ ನಂತರ ತಲೆಯೆತ್ತಿದ ಅಂತಹ ಏಕೈಕ ಶಕ್ತಿಯೆಂದರೆ ಬ್ರಿಟಿಷರಾಗಿದ್ದರು. ಹೀಗೆ ಒಬ್ಬ ಕಾಮನ್ ಎನಿಮಿ, ಏಕಮಾತ್ರ ಶತ್ರು ಸೃಷ್ಟಿಯಾದ ನಂತರ ಎಲ್ಲರೂ ಕೈಜೋಡಿಸಿ ಮೊದಲು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ಮುಂದಾದರು. ಅಲ್ಲಿಂದ ಮುಂದಿನದ್ದನ್ನು ಮಾತ್ರ ಸ್ವಾತಂತ್ರ್ಯ ಹೋರಾಟ ಎನ್ನಬಹುದು.
ಆ 1857ರ ಕದನವನ್ನೂ ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆಯುವ ಮೂಲಕ ‘ದಂಗೆ’ಯ ರೂಪ ಕೊಡಲು ಪ್ರಯತ್ನಿಸಿದರು, ಅದೂ ಹಾಗೆಯೇ ಉಲ್ಲೇಖಗೊಳ್ಳುತ್ತಿತ್ತು. Sepoy Mutiny @¢ÚÈÛ Indian Mutiny  ಎಂದೇ ಕರೆಯುತ್ತಿದ್ದರು. ಕೊನೆಗೆ 1909ರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮರಾಠಿಯಲ್ಲಿ ಬರೆದ “The History of the War of Indian Independence’ ನಲ್ಲಿ 1857ರ ಕದನವನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (First War of Independence) ಎಂದು ವ್ಯಾಪಕವಾಗಿ ಬಳಸಿ ಪ್ರಚಲಿತಕ್ಕೆ ತಂದರು. ಅದಕ್ಕೂ ತಗಾದೆ ತೆಗೆದಿದ್ದ ಸಿಖ್ಖರು, 1845- 46 ರಲ್ಲಿ ನಡೆದ ಮೊದಲ ಆಂಗ್ಲೋ ಸಿಖ್ ಯುದ್ಧವನ್ನೇ ‘First War of Independence’ ಎಂದು ಕರೆಯಬೇಕೆಂದು ಪಟ್ಟು ಹಿಡಿದಿದ್ದರು.
ಇದೆಲ್ಲಾ ಏನನ್ನು ಸೂಚಿಸುತ್ತದೆ?
1857ರ ಸಿಪಾಯಿ ದಂಗೆಗಿಂತ ಮೊದಲಿನವು ಸ್ವಾತಂತ್ರ್ಯ ಸಂಗ್ರಾಮಗಳಾಗಿರಲಿಲ್ಲ. ಹಾಗಾಗಿ ಯಾರನ್ನೂ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕಾಗುವುದಿಲ್ಲ. ಅವು ತಮ್ಮ ರಾಜ್ಯ, ಭಾಗಗಳನ್ನು ಉಳಿಸಿಕೊಳ್ಳಲು ನಡೆಸುತ್ತಿದ್ದ ಹೋರಾಟಗಳಷ್ಟೇ ಆಗಿದ್ದವು. ನಮ್ಮ ಸಾಹಿತಿ ಮಹಾಶಯರಿಗೆ ಇಂತಹ ಸರಳ ಸತ್ಯವೂ ತಿಳಿದಿಲ್ಲವೆ? 1782ರಿಂದ 99ರವರೆಗೂ ಆಡಳಿತ ನಡೆಸಿದ, ಆ ಅವಧಿಯಲ್ಲಿ ತನ್ನ ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಅನ್ಯರದ್ದನ್ನು ಕಬಳಿಸುವುದಕ್ಕಾಗಿ ಮರಾಠರು, ಕೊಡವರು, ಮಲಬಾರಿನ ರಾಜರು, ಕರ್ನಾಟಕದ ದೊರೆಗಳ ಜತೆಗೆ ಬ್ರಿಟಿಷರ ವಿರುದ್ಧವೂ ಹೋರಾಡಿದ ಟಿಪ್ಪು ಹೇಗೆ ‘ಸ್ವಾತಂತ್ರ್ಯ ಹೋರಾಟಗಾರ’ನಾಗಿ ರೂಪುಗೊಂಡು ಬಿಡುತ್ತಾನೆ?! ಒಂದೇ ದೇಶ, ಒಂದೇ ವ್ಯವಸ್ಥೆ ಎನ್ನುವ ಕಲ್ಪನೆಗಳೇ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಅನ್ನುವುದಾದರೂ ಹೇಗೆ ನಡೆಯಲು ಸಾಧ್ಯ?
ಹಾಗಾದರೆ…
1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಿರಾಜುದ್ದೀನ್ ದೌಲಾನನ್ನೂ ಏಕೆ ಸ್ವಾತಂತ್ರ್ಯ ಹೋರಾಟಗಾರ ಎನ್ನಬಾರದು? 1782ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಫ್ರೆಂಚರ ಸಹಾಯ ಪಡೆದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗುವುದಾದರೆ, ಅವನಿಗಿಂತ 25 ವರ್ಷ ಮೊದಲೇ ಬ್ರಿಟಿಷರನ್ನು ಸೋಲಿಸಲು ಫ್ರೆಂಚರ ಜತೆ ಕೈಜೋಡಿಸಿದ್ದ ಸಿರಾಜುದ್ದೀನನೂ ಸ್ವಾತಂತ್ರ್ಯ ಹೋರಾಟಗಾರನೇ ಆಗಬೇಕಲ್ಲವೆ? ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಅಪ್ಪ ಹೈದರಾಲಿ ಕೂಡ ಸ್ವಾತಂತ್ರ್ಯ ಹೋರಾಟಗಾರನಾಗಿ ಬಿಡುವುದಿಲ್ಲವೇ?! ಅದಿರಲಿ, ಬ್ರಿಟಿಷರ ಸಹಾಯ ಪಡೆದು ಟಿಪ್ಪುವಿನ ದೌರ್ಜನ್ಯವನ್ನು ಮೆಟ್ಟಲು ಹೊರಟ ತಿರುವಾಂಕೂರು ರಾಜ, ಮರಾಠರು ಹಾಗೂ ಹೈದರಾಬಾದಿನ ನಿಜಾಮನನ್ನು ದೇಶದ್ರೋಹಿಗಳು ಎಂದು ಕರೆಯುತ್ತೀರಾ? ಟಿಪ್ಪು ಮಡಿದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಹೈದರಾಬಾದಿನ ನಿಜಾಮ 10 ಬೆಟಾಲಿಯನ್ ಕಳುಹಿಸಿದ್ದ, ಅವರಲ್ಲಿ 16 ಸಾವಿರ ಅಶ್ವದಳವಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪು ಫ್ರೆಂಚರ ಸಹಾಯ ಪಡೆದದ್ದು ನಿಜ. ಆದರೆ ಬ್ರಿಟಿಷರ ಜೊತೆಗೆ ಟಿಪ್ಪು ವಿರುದ್ಧ ಯುದ್ಧ ಮಾಡಲು ನಿಜಾಮನ ಸೈನ್ಯ ಬಂದಿತ್ತಲ್ಲ, ಅದರಲ್ಲೂ ನಿಜಾಮನ ಸೈನಿಕರ ಜೊತೆಗೆ ಹಳೆಯ ಫ್ರೆಂಚ್ ಸೈನ್ಯದ ಮೂರು ಸಾವಿರದ ಆರುನೂರು ಸೈನಿಕರಿದ್ದರು, ಇದಕ್ಕೇನನ್ನುತ್ತೀರಿ?
ಕೋ. ಚೆನ್ನಬಸಪ್ಪ, ಕಲ್ಬುರ್ಗಿಯವರು ಚಿದಾನಂದಮೂರ್ತಿಯವರ ಹೇಳಿಕೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟೀಕೆ ಮಾಡಿದ ದಿನವೇ ಇವರು ಹೇಳಿದ ಹಸಿ ಹಸಿ ಸುಳ್ಳನ್ನು ಸಾಕ್ಷ್ಯ ಸಮೇತ ನಿಮ್ಮ ಗಮನಕ್ಕೆ ತರಲು, ಐತಿಹಾಸಿಕ ಪಾತ್ರಗಳ ಜತೆಗೆ, ಭಟ್ಟಂಗಿ ಬರಹ ಮಾಡುವವರು ಹಾಗೂ ವಿಚಾರ ನಪುಂಸಕ ಹೇಳಿಕೆವೀರರ ಬಣ್ಣವನ್ನು ಸಾಕ್ಷ್ಯ ಸಮೇತ, ಆಧಾರಸಹಿತ ಬಯಲು ಮಾಡಲು ಕುಳಿತೆ. ಅದರ ಫಲವೇ ‘ಟಿಪ್ಪು ಸುಲ್ತಾನ: ಸ್ವಾತಂತ್ರ್ಯವೀರನಾ?’ ಕೃತಿ. ಟಿಪ್ಪುವನ್ನು ಯಾರೂ ದ್ವೇಷಿಸಬೇಕೆಂದಲ್ಲ, ಆದರೆ ಸತ್ಯಾಸತ್ಯತೆ ಏನೆಂದು ಎಲ್ಲರಿಗೂ ತಿಳಿಯಬೇಕು.
ಪುಸ್ತಕ ಅಂಗಡಿಗಳಲ್ಲಿದೆ. ಓದಿ, ನೀವೇ ನಿರ್ಧರಿಸಿ, ವಾದಿಸಿ!

-ಪ್ರತಾಪ ಸಿಂಹ

ಗೆದ್ದು ಗದ್ದುಗೆ ಏರಿದ ಮೇಲೆ ಈ ಬಿಜೆಪಿಯವರಲ್ಲಿ ಒಂದು ಗುರಿ, ಉದ್ದೇಶವಿದೆ ಎಂದು ಯಾವತ್ತಾದರೂ ಅನಿಸಿತಾ?

ಈ ಹಿಂದೆ 2007ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 1606, ಜೆಡಿಎಸ್ 1502 ಸೀಟುಗಳೊಂದಿಗೆ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದರೆ 1180 ಸ್ಥಾನಗಳೊಂದಿಗೆ ಉಳಿದೊಂದೇ ಕೊನೆಯ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತ್ತು. ಆದರೇನಂತೆ 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80, ಜೆಡಿಎಸ್ 28 ಸ್ಥಾನ ಪಡೆದುಕೊಂಡರೆ, ಬಿಜೆಪಿ 110 ಸ್ಥಾನ ಗಳಿಸಿ ಅಧಿಕಾರ ಹಿಡಿಯಿತು.

ಇಂಥದ್ದೊಂದು ಸಮರ್ಥನೆಯನ್ನು ಕೆಲವರು ನೀಡುತ್ತಿದ್ದಾರೆ!
2007ರಲ್ಲಿ ರಾಜಧಾನಿ ದಿಲ್ಲಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನ ಗಳಿಸಿದರೆ ಆಳುವ ಕಾಂಗ್ರೆಸ್ ಕೇವಲ 64 ಸ್ಥಾನಗಳನ್ನು ಪಡೆದಿತ್ತು. ಆದರೂ 2008ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದು ಬಿಜೆಪಿಯಲ್ಲ ಕಾಂಗ್ರೆಸ್! 2012 ಮಾರ್ಚ್‌ನಲ್ಲಿ ಪ್ರಕಟವಾದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 224 ಸ್ಥಾನ ಗಳಿಸುವುದರೊಂದಿಗೆ ಐತಿಹಾಸಿಕ ಜಯ ದಾಖಲಿಸಿದರೂ ಜುಲೈನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 12ರಲ್ಲಿ 10 ಮೇಯರ್ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ಇನ್ನೆರಡು ತಿಂಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳುತ್ತಿದ್ದಾರೆ!
ಖಂಡಿತ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳಲು, ಇಂಥ ಮಾತುಗಳನ್ನಾಡಿ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸಲು, ಆತ್ಮಸ್ಥೈರ್ಯ ತುಂಬಲು ಕರ್ನಾಟಕ ಬಿಜೆಪಿಯವರು ಪ್ರಯತ್ನಿಸಬಹುದು. ಬಿಜೆಪಿಯನ್ನು ಕಾಲೆಳೆದು ಕೆಳಗೆ ಬೀಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ವಿಘ್ನಸಂತೋಷವನ್ನು ಅನುಭವಿಸಬಹುದು. ಕುಮಾರಸ್ವಾಮಿಯವರೂ ರಾಮನಗರದಲ್ಲಿ, ಸಿದ್ದರಾಮಯ್ಯ ಮೈಸೂರು, ಡಾ. ಪರಮೇಶ್ವರ್ ಕೊರಟಗೆರೆ, ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ, ಖರ್ಗೆಯವರೂ ಗುಲ್ಬರ್ಗದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಮರ್ಥನೆಯನ್ನೂ ಕೊಡಬಹುದು. ಈ ಮಧ್ಯೆ ಬಿಜೆಪಿ ತನ್ನ ಭದ್ರಕೋಟೆಯಾದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಧೂಳಿಪಟವಾಗಲು ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಹಾಗೂ ಈಗ ಪಕ್ಷದ ಅಧ್ಯಕ್ಷ ಸ್ಥಾನ ಕೊಡದಿರುವುದೇ ಕಾರಣ ಎಂಬ ಸುದ್ದಿಯನ್ನೂ ಪ್ಲಾಂಟ್ ಮಾಡಿಸಲಾಗಿದೆ!
ಆದರೆ….
ಈ ಬಿಜೆಪಿಯವರು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ? ಬಿಜೆಪಿಗೆ ಇಂಥದ್ದೊಂದು ಪರಿಸ್ಥಿತಿ ಬಂದಿದ್ದಾದರೂ ಏಕೆ? ಬಿಜೆಪಿಯನ್ನು ಸೋಲಿಸಿದ್ದು ಕಾಂಗ್ರೆಸ್ಸೋ, ತಮ್ಮ ತಲೆ ಮೇಲೆ ಬಿಜೆಪಿಯವರೇ ಕಲ್ಲುಹಾಕಿಕೊಂಡರೇ? ಅದಕ್ಕೂ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ದಕ್ಷಿಣ ಕನ್ನಡದಂಥ ಅತ್ಯಂತ ಸಂವೇದನಾಶೀಲ, ಸೂಕ್ಷ್ಮಗ್ರಾಹಿ ಹಾಗೂ ‘ಸಂಘಪ್ರಿಯ’ ಜನರಿರುವ ಸ್ಥಳದಲ್ಲಿ ಬಿಜೆಪಿ ಸೋತಿದ್ದೇಕೆ? ಈ ಪ್ರಶ್ನೆಯನ್ನು ಏಕೆ ಮೊದಲು ಕೇಳಬೇಕಾಗಿದೆಯೆಂದರೆ, ಬಿಜೆಪಿ ಏನೂ ಆಗಿಲ್ಲದಾಗ, ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ, ಕಾಲೂರಿದ ಮೇಲೂ ಪಕ್ಷ ಕಷ್ಟಕ್ಕೆ ಸಿಲುಕಿದಾಗ ಕೈಬಿಡದ ಏಕೈಕ ಸ್ಥಳ ದಕ್ಷಿಣ ಕನ್ನಡ. ಅಂಥ ಸ್ಥಳದಲ್ಲಿ ಬಿಜೆಪಿ ಧೂಳೀಪಟವಾಗಿದ್ದೇಕೆ? ದಕ್ಷಿಣ ಕನ್ನಡದಲ್ಲಿ ಬಿಎಸ್‌ವೈ ಫ್ಯಾಕ್ಟರ್ರೇ ಅಲ್ಲ, ಆದರೂ ಬಿಜೆಪಿ ಸೋತಿದ್ದೇಕೆ?
1. ಅಭಿವೃದ್ಧಿಗೆ ವೋಟು ಹಾಕುವವರು
2. ಪಕ್ಷಕ್ಕೆ ವೋಟು ಕೊಡುವವರು
3. ಒಂದು ಸಿದ್ಧಾಂತಕ್ಕೆ, ವಿಚಾರಕ್ಕೆ ಮತ ನೀಡುವವರು
ಈಗಿನ ಮತದಾರರನ್ನು ಹೀಗೆ ಮೂರು ವಿಧಗಳಾಗಿ ವಿಂಗಡಿಸಬಹುದು. ಒಳ್ಳೆಯ ಕೆಲಸ ಮಾಡಿದವರಿಗೆ ಪಕ್ಷ ನೋಡದೆ ಕೆಲವರು ವೋಟು ಹಾಕಿದರೆ, ಇನ್ನು ಕೆಲವರು ಪಕ್ಷ ದೇಶವನ್ನೇ ಹಾಳು ಮಾಡುತ್ತಿದ್ದರೂ ನಿಷ್ಠೆ ಬಿಡುವುದಿಲ್ಲ. ಆದರೆ ದಕ್ಷಿಣ ಕನ್ನಡ ಮಟ್ಟಿಗೆ ಹೇಳುವುದಾದರೆ ಅಲ್ಲಿ ಅಭಿವೃದ್ಧಿ, ಪಕ್ಷ ಅನ್ನುವುದಕ್ಕಿಂತ ಸಿದ್ಧಾಂತ, ವಿಚಾರಕ್ಕೆ ಮೊದಲಿನ ಆದ್ಯತೆಯನ್ನು ಅಲ್ಲಿನ ಮತದಾರರು ನೀಡುತ್ತಾರೆ. ಈ ಸಿದ್ಧಾಂತ, ವಿಚಾರದಿಂದಾಗಿಯೇ ಅವರಲ್ಲಿ ಬಿಜೆಪಿಯೆಂಬ ಪಕ್ಷಕ್ಕೆ ನಿಷ್ಠೆ ಆರಂಭವಾಯಿತು. ಪಕ್ಷ ಸೈದ್ಧಾಂತಿಕ ನೆಲೆಯಲ್ಲಿ ಕೆಲಸ ಮಾಡುತ್ತಿದೆಯೇ ಎಂಬುದು ಖಾತ್ರಿಯಾದರೆ ಮಾತ್ರ ವೈಯಕ್ತಿಕ ಫಲಾಫಲ ನಿರೀಕ್ಷೆಯಿಲ್ಲದೆ ಅವರು ವೋಟು ಕೊಡುತ್ತಾರೆ. ಬಾಯಿಗೆ ಬಾಟ್ಲಿ ಇಟ್ಟರೆ, ಕಿಸೆಗೆ ಕಾಸು ಹಾಕಿದರೆ ವೋಟು ಕೊಡುವ ಜನ ದಕ್ಷಿಣ ಕನ್ನಡದವರಲ್ಲ. ಶಾಸಕರು, ಸಂಸದರು, ಸಚಿವರು ಬಂದರೆ ಬಯಲುಸೀಮೆ ಜನರು ಮುಗಿಬೀಳುವಂಥ ಅಡಿಯಾಳು ಮನಸ್ಥಿತಿಯೂ ಅವರಲ್ಲಿಲ್ಲ. ಆತ್ಮಗೌರವ, ಸ್ವಾಭಿಮಾನ ಬಿಟ್ಟುಕೊಡುವವರಲ್ಲ. ಒಳ್ಳೆಯ ಮಾತು, ಒಳ್ಳೆಯ ಕೆಲಸ, ಸೈದ್ಧಾಂತಿಕ ನಿಷ್ಠೆಯನ್ನಷ್ಟೇ ಬಯಸುತ್ತಾರೆ. ಕರಂಬಳ್ಳಿ ಸಂಜೀವ ಶೆಟ್ಟಿ, ಸಿ.ಜಿ. ಕಾಮತ್ ಮತ್ತು ಉರಿಮಜಲು ರಾಮಭಟ್ಟರು ಬಿಜೆಪಿಗೆ ಅಂತಹ ತಳಹದಿಯನ್ನು ಹಾಕಿಕೊಟ್ಟಿದ್ದಾರೆ. ದಕ್ಷಿಣ ಕನ್ನಡದ ಬಿಜೆಪಿ ಮತದಾರರಲ್ಲಿ ಇಂದಿಗೂ ಜನಸಂಘದ ಕಾಲದ ಮನಸ್ಥಿತಿಯಿದೆ. ಇದನ್ನು ಅಲ್ಲಿನ ನಾಯಕರು, ಅದರಲ್ಲೂ ಡಾ. ಪ್ರಭಾಕರ ಭಟ್ಟರು ಅರ್ಥಮಾಡಿಕೊಳ್ಳದೆ ಮಂಗಳೂರು ಮಹಾನಗರ ಪಾಲಿಕೆ ನಮ್ಮದು, ಮಂಗಳೂರು ದಕ್ಷಿಣ-ಉತ್ತರ ಎರಡೂ ಶಾಸಕರು ನಮ್ಮವರು, ಉಡುಪಿ ಜಿಲ್ಲೆಯಲ್ಲೂ ನಮ್ಮದೇ ದರ್ಬಾರು ಎಂಬ ದರ್ಪ ತೋರಲಾರಂಭಿಸಿದರು. ನಾವು ಏನು ಮಾಡಿದರೂ, ಎಂತಹ ಅಯೋಗ್ಯರನ್ನು ಮಂತ್ರಿ ಮಾಡಿದರೂ ಜಯಿಸಿಕೊಳ್ಳಬಹುದು ಎಂಬ ಭ್ರಮೆಗೆ ಒಳಗಾದರು. ಅವಿಭಜಿತ ದಕ್ಷಿಣ ಕನ್ನಡವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಡಾ. ಪ್ರಭಾಕರ ಭಟ್ಟರು ವೈಯಕ್ತಿಕವಾಗಿ ಶುದ್ಧ ಹಸ್ತರೇ. ಆದರೆ ಕಲ್ಲಡ್ಕದಲ್ಲಿ ಕಟ್ಟಿರುವ ಶಾಲೆಯನ್ನು “ದೊಡ್ಡದು” ಮಾಡಲು ಹಿಡಿದ ‘ಮಾರ್ಗ’ದ ಬಗ್ಗೆ, ಶ್ರೀಕರ ಪ್ರಭು ಹಾಗೂ ಮತ್ತಿತರ ತಮ್ಮ ಚೇಲಾ ಸೈನ್ಯ ಹಾಗೂ ಅದರ ಮಾತಿಗೆ ಕಿವಿಗೊಡುತ್ತಿರುವ ಬಗ್ಗೆ ಖಂಡಿತ ಅವರು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ತಾವು ‘ದಕ್ಷಿಣ ಕನ್ನಡದ ನರೇಂದ್ರ ಮೋದಿ’ ಎಂಬ ಭ್ರಮೆಯಿಂದ ಹೊರಬಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಏಕೆ ದೂರವಾಗುತ್ತಿದ್ದಾರೆ, ಮನನೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ಇಷ್ಟಕ್ಕೂ ಪಕ್ಷಕ್ಕೆ ಹತ್ತಾರು ವರ್ಷಗಳಿಂದ ಮಣ್ಣು ಹೊತ್ತ, ಮೂರ್ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟರು, ಸುಳ್ಯದ ಅಂಗಾರ, ಮಂಗಳೂರಿನ ಯೋಗೀಶ್ ಭಟ್ಟರನ್ನು ಬಿಟ್ಟು 2000ದಲ್ಲಿ ಬಿಜೆಪಿ ಸೇರಿದ ಕೃಷ್ಣ ಪಾಲೇಮಾರ್‌ಗೆ ಮಂತ್ರಿಗಿರಿ ಯಾವ ಕಾರಣಕ್ಕಾಗಿ ದೊರೆಯಿತು? ವೃತ್ತಿಪರ ಕೋರ್ಸ್‌ಗಳಲ್ಲಿರುವಂತೆ ಮಂತ್ರಿಗಿರಿಗಳಲ್ಲೂ ‘ಪೇಮೆಂಟ್‌’ ಸೀಟ್‌ಗಳಿದ್ದವೆ? ಕೊನೆಗೂ ಆಗಿದ್ದೇನು? ಈ ಬಂದರು ಖಾತೆ ಸಚಿವ ಪಾಲೇಮಾರ್ ದರ್ಬಾರಿನಲ್ಲೇ ಬೇಲಿಕೇರಿಯಲ್ಲಿದ್ದ ಅದಿರು ದಾಸ್ತಾನು ಕಾಣೆಯಾಯಿತು, ಸದನದಲ್ಲಿ ಪೋನೋಗ್ರಫಿ ನೋಡಿದರು. ಈ ಘಟನೆಗಳು ಪ್ರಜ್ಞಾವಂತರ ದಕ್ಷಿಣ ಕನ್ನಡವೇ ತಲೆತಗ್ಗಿಸುವಂತೆ ಮಾಡಿದವು. ಅಷ್ಟು ಮಾತ್ರವಲ್ಲ, ಒಂದು ವೇಳೆ ಕೇಂದ್ರ ನಾಯಕತ್ವ ಅಡ್ಡಗಾಲು ಹಾಕದಿದ್ದರೆ, ಶೆಟ್ಟರ್ ಮುಖ್ಯಮಂತ್ರಿಯಾದಾಗ ಪಾಲೇಮಾರ್ ಮತ್ತೆ ಮಂತ್ರಿಯಾಗಿ ಬಿಡುತ್ತಿದ್ದರು. ಈ ಮಧ್ಯೆ ಸ್ವಾಭಿಮಾನಿ ಹಾಲಾಡಿಯವರನ್ನು ಮನನೋಯಿಸುವ ಕೆಲಸ ನಡೆಯಿತು. ಅವರು ಜನರ ಸೇವೆ ಮಾಡುವುದಕ್ಕೆ ರಾಜಕೀಯಕ್ಕೆ ಬಂದಿದ್ದರೇ ಹೊರತು ಪುಢಾರಿ ಕೆಲಸ ಮಾಡಲು, ಕಾಲಿಗೆರಗಿ ಕೆಲವರ ಅಹಂ ಅನ್ನು ತಣಿಸಲು ಬಂದಿರಲಿಲ್ಲ. ಅಂತಹ ವ್ಯಕ್ತಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಮಂತ್ರಿಗಿರಿಯನ್ನು ತಪ್ಪಿಸಿ ಅವರು ಪಕ್ಷದಿಂದ ದೂರವಾಗುವಂತೆ ಮಾಡಲಾಯಿತು. ಇನ್ನು ದಕ್ಷಿಣ ಕನ್ನಡದಲ್ಲಂತೂ ಸಂಘ ಮತ್ತು ಸಂಘದ ಅಂಗ ಸಂಸ್ಥೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬೇರೆ ಬೇರೆಯಲ್ಲ. ಯಾರು ಸಂಘ ಹಾಗೂ ಪಕ್ಷಕ್ಕಾಗಿ ಮೈದಾನದಲ್ಲಿ ಮಲಗಿದರೋ, ರಸ್ತೆ ತಡೆ ಮಾಡಿದರೋ, ಮನೆಮನೆಗೆ ಹೋಗಿ ಪಕ್ಷದ ಪ್ರಚಾರ ಮಾಡಿದರೋ ಆ ಸಂಘ- ಹಿಂದು ಜಾಗರಣಾ ವೇದಿಕೆ-ಭಜರಂಗದಳದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದರು. ಮೊನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ನಾಲ್ಕಾರು ಭಾರಿ ಆಯ್ಕೆಯಾಗಿದ್ದ ಬಂಟ್ವಾಳದ ಗೋವಿಂದ ಪ್ರಭು ಅವರಿಗೆ ಕೊನೆ ಕ್ಷಣದವರೆಗೂ ಟಿಕೆಟ್ ನೀಡಿರಲಿಲ್ಲ, ಕೊನೆಗೆ ಕಾರ್ಯಕರ್ತರೇ ಸಿಡಿದೆದ್ದು ಟಿಕೆಟ್ ಕೊಡಿಸಬೇಕಾಗಿ ಬಂತು. ಇವೆಲ್ಲ ಏನನ್ನು ಸೂಚಿಸುತ್ತವೆ? ಬ್ರೋಕರ್‌ಗಳು ಹಿರಿಯರಿಗೆ ಹತ್ತಿರವಾದವರು, ಬೇಕು-ಬೇಡಗಳನ್ನು ನೋಡಿಕೊಳ್ಳುವವರಿಗೆ ಹುದ್ದೆ, ಸ್ಥಾನಗಳು ದೊರೆಯಲಾರಂಭಿಸಿದವು. ಈ ಮಧ್ಯೆ ನಳೀನ್ ಕುಮಾರ್ ಕಟೀಲು ಅವರಂಥ ಸ್ವಂತ ವ್ಯಕ್ತಿತ್ವವೇ ಇಲ್ಲದ ವ್ಯಕ್ತಿಯನ್ನು ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. ಅಂದರೆ ಇವರಿಗೆ ಪಕ್ಷದ ಮೇಲೆ ಹಿಡಿತ ಸಾಧಿಸಬೇಕೆಂಬ ಉದ್ದೇಶವಿದೆಯೇ ಹೊರತು ಜನರ ಅಭ್ಯುದಯದ ಬಗ್ಗೆ ಉತ್ಸುಕತೆ ಇಲ್ಲ ಎಂದಾಯಿತು.
ಈ ನಡುವೆ ವೋಟು ಕೊಡುವಾಗ ಏನೋ ಬದಲಾವಣೆ ತರುತ್ತಾರೆ ಎಂಬ ಆಶಯವಿತ್ತಲ್ಲ ಅದು ಸತ್ತುಹೋಯಿತು, ಪರಿಣಾಮವಾಗಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸೋತು ಹೋಯಿತು.
ಇದು ದಕ್ಷಿಣ ಕನ್ನಡವೊಂದರ ಕಥೆ ಮಾತ್ರ ಅಂದುಕೊಳ್ಳಬೇಡಿ, ಶಿವಮೊಗ್ಗ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಲ್ಲ ಕಡೆಯೂ ಇದೇ ಕಥೆ. ಇಲ್ಲಿ ಒಬ್ಬಿಬ್ಬರನ್ನು ದೂರುತ್ತಿಲ್ಲ. ಯಡಿಯೂರಪ್ಪನವರು ಪಕ್ಷದಿಂದ ದೂರವಾಗಿಯಾಗಿದೆ. ಅವರ ವಿಷಯ ಬೇಡ. ಆದರೆ 2011, ಆಗಸ್ಟ್‌ನಲ್ಲಿ ಯಡಿಯೂರಪ್ಪನವರ ಬೆಂಬಲದಿಂದಾಗಿಯೇ ಮುಖ್ಯಮಂತ್ರಿಯಾದ ಸದಾನಂದಗೌಡರಿಗೆ ಪಕ್ಷಕ್ಕೆ ಒಳ್ಳೆಯ ವರ್ಚಸ್ಸು ತಂದುಕೊಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ ಅವರು ಮಾಡಿದ್ದೇನು? ಹತ್ತಿದ ಏಣಿಯನ್ನೇ ಒದೆಯತೊಡಗಿದರು. ಇದು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಕೆರಳಿಸಿತು. ಬಿಎಸ್‌ವೈ ವಿರುದ್ಧದ ಒಂದು ಕೇಸಿಗೆ ಹೈಕೋರ್ಟ್ ತಡೆ ಕೊಟ್ಟಿದೆ ಎಂದು ವರದಿಗಾರರು ಕೇಳಿದರೆ, ಇನ್ನೂ 11 ಬಾಕಿಯಿವೆ ಎಂದು ಕುಟುಕಿದರು. ಅಂಬರೀಶ್ ಹುಟ್ಟುಹಬ್ಬಕ್ಕೆ ಹೋಗಿ, ‘ನೀವು ಖಳನಾಯಕನಾಗಿ ಬಂದು ನಾಯಕರಾಗಿದಿರಿ, ಕೆಲವರು ನಾಯಕರಾಗಿ ಬಂದು ಖಳನಾಯಕರಾಗುತ್ತಿದ್ದಾರೆ’ ಎಂದು ಗೇಲಿ ಮಾಡಿದರು. ಒಕ್ಕಲಿಗ ಸಮಾವೇಶಕ್ಕೆ ಹೋಗಿ, ನಿಮ್ಮಿಂದಲೇ ನಾನು ಮುಖ್ಯಮಂತ್ರಿಯಾದೆ ಎಂದು ಸುಖಾಸುಮ್ಮನೆ ಹೇಳಿದರು. ತಾವು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಾಗ ಯಾವ ಅನಂತ್-ಈಶ್ವರಪ್ಪ-ಶೆಟ್ಟರ್ ಬಣ ತಮ್ಮನ್ನು ವಿರೋಧಿಸಿತ್ತೋ,  ಮುಖ್ಯಮಂತ್ರಿಯಾದ ಮೇಲೆ ಆ ವಿರೋಧಿ ಪಾಳಯವನ್ನು ಸೇರಿ ತಮ್ಮನ್ನು ಆಯ್ಕೆ ಮಾಡಿದ್ದವರನ್ನೇ ದೂರ ಮಾಡಿದರು. ಒಂದು ವೇಳೆ, ಸದಾನಂದಗೌಡರು ಇಂಥ ಚಿಲ್ಲರೆ ಕೆಲಸ ಮಾಡದೆ, ಸಣ್ಣ ಬುದ್ಧಿಯನ್ನು ತೋರದೆ ದೋಷಾರೋಪಮುಕ್ತರಾದ ಕೂಡಲೇ ಯಡಿಯೂರಪ್ಪನವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರೆ ಬಿಎಸ್‌ವೈ ಶಾಂತಿಯಿಂದಿರುತ್ತಿದ್ದರು, ತಾವೂ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಿತ್ತು. ಇಷ್ಟೊಂದು ಕಹಿ ಘಟನೆಗಳು ಸಂಭವಿಸುತ್ತಿರಲಿಲ್ಲ, ವೈರತ್ವ ಸೃಷ್ಟಿಯಾಗುತ್ತಿರಲಿಲ್ಲ. ಬಿಜೆಪಿ ಒಡೆಯುವ, ಶೆಟ್ಟರ್ ಅವರಂಥ ನಿಸ್ತೇಜ ವ್ಯಕ್ತಿತ್ವ ಮುಖ್ಯಮಂತ್ರಿಯಾಗುವ ಪ್ರಸಂಗ ಬಹುಶಃ ಬರುತ್ತಿರಲಿಲ್ಲ. ಪ್ರಶ್ನೆಗಳಿಗೆ ಗೌಡರು ಎಂದಿನ ತಮ್ಮ ನಗೆ ಬೀರಿದ್ದರಷ್ಟೇ ಸಾಕಿತ್ತು. ಆದರೆ ಸದಾನಂದಗೌಡರು ಹಾಗೂ ಶೆಟ್ಟರ ಸಮಸ್ಯೆ ಏನೆಂದರೆ ಒಬ್ಬರು ಅನಗತ್ಯವಾಗಿ ಬಾಯ್ತೆರೆಯುತ್ತಿದ್ದರು, ಇವರು ಅಗತ್ಯವಿದ್ದರೂ ಬಾಯ್ಬಿಡುವುದಿಲ್ಲ.
ಹಾಗಿರುವಾಗ ಒಂದು ಕಾಲು ಡೆಲ್ಲಿಯಲ್ಲಿದ್ದರೂ ಕರ್ನಾಟಕದಲ್ಲಿ ಇನ್ನೊಂದು ಕಾಲನ್ನಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಕನಸ್ಸನ್ನು ಪೋಷಿಸುತ್ತಲೇ ಇರುವ ಬಿಜೆಪಿ ‘ರಾಷ್ಟ್ರೀಯ’ ನಾಯಕ ಅನಂತ್ ಕುಮಾರ್, ಅವರ ಶಿಷ್ಯೋತ್ತಮರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಹಾಗೂ ಮತ್ತೆ ಅಧ್ಯಕ್ಷರಾಗಲು ಹಪಾಹಪಿಸುತ್ತಿರುವ ಸದಾನಂದಗೌಡ ಇವರನ್ನೆಲ್ಲ ನೋಡಿಕೊಂಡು ಜನ ಮತ್ತೆ ಹೇಗೆತಾನೇ ಬಿಜೆಪಿ ಮತ ಕೊಡುತ್ತಾರೆ ಹೇಳಿ? ಐದು ವರ್ಷ ಜನರಿಗೆ ಬೇಸರ ಮೂಡಿಸಿದ, ಬಿಜೆಪಿಯ ಬಗ್ಗೆ ಜನ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿದ ಇದೇ ಮುಖಗಳು ಮತ್ತೆ ಪಕ್ಷದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿವೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ನಿಲ್ಲಬೇಕು ಎಂದು ಬಿಜೆಪಿ ಶಾಸಕರು, ಸಚಿವರೇ ಮೈಂಡ್ ಫಿಕ್ಸ್ ಮಾಡಿಕೊಂಡಿಲ್ಲ! ಅದಿರಲಿ, ಗೆದ್ದು ಗದ್ದುಗೆ ಏರಿದ ಮೇಲೆ ಈ ಬಿಜೆಪಿಯವರಲ್ಲಿ ಒಂದು ಗುರಿ, ಉದ್ದೇಶವಿದೆ ಎಂದು ಯಾವತ್ತಾದರೂ ಅನಿಸಿತಾ? ಮೂವರಲ್ಲಿ ಒಬ್ಬ ಮುಖ್ಯಮಂತ್ರಿಯಾದರೂ, ಒಬ್ಬ ಸಚಿವರಾದರೂ ಜನರಲ್ಲಿ ಭರವಸೆ ಉಳಿಯುವಂತೆ ನಡೆದುಕೊಂಡರೆ?
ಹಾಗಂತ ಬಿಜೆಪಿಯ ಭವಿಷ್ಯವೇ ಮಸುಕಾಗಿ ಹೋಯಿತು ಅಂತಲ್ಲ. ಈಗಲೂ ಎಚ್ಚೆತ್ತುಕೊಳ್ಳಬಹುದು. ಅದರ ಮೊದಲ ಹೆಜ್ಜೆಯಾಗಿ ಸೂಕ್ತ ವ್ಯಕ್ತಿಯನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕು. ಹಾಗೆ ಮಾಡುವಾಗ ಅದೇ ಹಳೆ, ಹಳಸಲು ಮುಖಗಳನ್ನು, ಬಸವಳಿದವರನ್ನು, ದುಡ್ಡುಮಾಡುವುದರಲ್ಲೇ ಜೀವನದ ಸಾರ್ಥಕ್ಯ ಕಾಣುತ್ತಿರುವ ದೊಡ್ಡ ಹೆಸರುಗಳನ್ನು, ಕೋಲೆಬಸವನಂಥ ವ್ಯಕ್ತಿತ್ವದ ನಳಿನ್ ಕುಮಾರ್ ಅವರನ್ನು, ಬಿಟ್ಟು ಬೇರೆಯವರ ಬಗ್ಗೆ ದೃಷ್ಟಿಹಾಯಿಸಬೇಕು. ಇಂದು ಬಿಜೆಪಿಯಲ್ಲಿ ಯಾರೂ ಸುಭಗರಿಲ್ಲ. ಜತೆಗೆ ಪ್ರಾಮಾಣಿಕತೆಯನ್ನೇ ಮಾನದಂಡವಾಗಿಸಿಕೊಳ್ಳಲು ಇಂದು ಯಾವ ಪಕ್ಷಕ್ಕೂ ಸಾಧ್ಯವಿಲ್ಲ. ಹಾಗಾಗಿ ಇಡೀ ರಾಜ್ಯವನ್ನು ಸುತ್ತಿ ಮತ್ತೆ ಸಂಘಟನೆ ಮಾಡುವಂಥ, ವಿಮುಖರಾಗಿರುವ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸುವ ಶಕ್ತಿಯನ್ನು ಮಾನದಂಡವಾಗಿಸಿಕೊಂಡರೆ, ಈ ಬಾರಿಯಲ್ಲ ಮುಂದಿನ ಬಾರಿಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಸಿ.ಟಿ. ರವಿಯವರತ್ತ ನೋಡಬಹುದು, ಪ್ರಹ್ಲಾದ ಜೋಶಿಯೂ ಇದ್ದಾರೆ. ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗಲಿಂದಲೂ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡಿರುವ ರವಿಗೆ ಹಳೆಯ ಕಾರ್ಯಕರ್ತರ ಪರಿಚಯವೂ ಇದೆ, ಸಂಪರ್ಕವೂ ಇದೆ. ಜೊತೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ನಿಚ್ಚಳ ಗೆಲುವು ತಂದುಕೊಟ್ಟಿರುವ ರವಿಗೆ ತಂತ್ರಗಾರಿಕೆಯೂ ಗೊತ್ತು, ಒಳ್ಳೆಯ ಮಾತುಗಾರನೂ ಹೌದು. ಇನ್ನು ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪ್ರಾಮುಖ್ಯತೆಗೆ ಬಂದ ಪ್ರಹ್ಲಾದ್ ಜೋಷಿ ಅವರಲ್ಲಿ ಸೈದ್ಧಾಂತಿಕ ಬದ್ಧತೆಯೂ ಇದೆ, ಚುನಾವಣಾ ರಾಜಕೀಯದಲ್ಲೂ ಅವರೊಬ್ಬ ಯಶಸ್ವೀ ರಾಜಕಾರಣಿ ಹಾಗೂ ಕ್ಲೀನ್ ಇಮೇಜ್ ಇದೆ. ಸಣ್ಣತನ ಬಿಟ್ಟರೆ ಸದಾನಂದಗೌಡರಿಗೂ ಅಧ್ಯಕ್ಷರಾಗುವ ಅರ್ಹತೆ, ಶಕ್ತಿ, ಮಾತುಗಾರಿಕೆ ಇದೆ. ಹಾಗಿರುವಾಗ ವಲಸೆ ಹಕ್ಕಿ ಗೋವಿಂದ ಕಾರಜೋಳರನ್ನು ಅಧ್ಯಕ್ಷರನ್ನಾಗಿ ಮಾಡುವ ಯೋಚನೆಯೇಕೆ ಬೇಕು? ಈ ನಡುವೆ ಹಾಲಾಡಿ ಶ್ರೀನಿವಾಸ ಶೆಟ್ಟರು, ಬಸವರಾಜ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಹಾಗೂ ಬಸವರಾಜ್ ಪಾಟೀಲ್ ಸೇಡಂ ಅವರನ್ನು ಸಕ್ರೀಯ ರಾಜಕಾರಣಕ್ಕೆ ತರುವ ಕೆಲಸ ಮಾಡಬೇಕು. ಅಂದಹಾಗೆ, ಡಾ. ಪ್ರಭಾಕರ ಭಟ್ಟರೇನು ಸಾಮಾನ್ಯ ವ್ಯಕ್ತಿಯಲ್ಲ. ಛಲವಾದಿ. ಯಾರನ್ನು ಬೇಕಾದರೂ ಗೆಲ್ಲಿಸುವ ತಾಕತ್ತಿದೆ. ಆದರೆ ಬಾಲಬಡುಕರ ಬದಲಿಗೆ ಪಕ್ಷದ ನಿಷ್ಠಾವಂತರಿಗೆ ಬೆಲೆಕೊಡುವಂತೆ, ಮಣೆಹಾಕುವಂತೆ ಅವರಿಗೆ ಕಿವಿಮಾತು ಹೇಳಬೇಕು. ಇತ್ತ ಬಿಜೆಪಿಯವರು ‘ಕೇಶವ ಕೃಪ’ಕ್ಕೆ ಸುಳ್ಳೇ ಸರ್ಕಿಟ್ ಹೊಡೆದರೆ ಸಾಲದು, ಜಯದೇವರು, ಮುಕುಂದರು ಹೇಳುವ ಬುದ್ಧಿವಾದವನ್ನು ಕಿವಿಯಿಂದಾಚೆಗೇ ಬಿಡದೆ ಮನಸ್ಸಿಗೆ ತೆಗೆದುಕೊಂಡು ಜನರಿಗೆ ಒಳ್ಳೆಯದನ್ನು ಮಾಡಬೇಕು. ಇವುಗಳ ಜತೆಗೆ ಸಂಘದಿಂದ ಪಕ್ಷದ ಜವಾಬ್ದಾರಿ ಪಡೆದುಕೊಂಡು ಹೋಗಿರುವ ಸಂತೋಷ್‌ಜೀಯವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಬೇಕು. ಸಂತೋಷ್‌ಜೀ ಬಗ್ಗೆ ಬಿಜೆಪಿಯಲ್ಲಿರುವ ಕೆಲವು ಹೊಟ್ಟೆಬಾಕರಿಗೆ ಅಸಮಾಧಾನವಿದೆ. ಆದರೆ ಅವರೊಬ್ಬ ನಿಷ್ಠುರವಾದಿ, ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿ ಬಿಡುವ ಅವರಂಥ ವ್ಯಕ್ತಿತ್ವವುಳ್ಳವರು ಬಿಜೆಪಿಗೆ ಅಗತ್ಯವಾಗಿ ಬೇಕು.
ಇಲ್ಲವಾದರೆ…
-ಪ್ರತಾಪ ಸಿಂಹ

ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ, ಮರೆಯಲೂಬಾರದು

ಅದು 1928, ಅಕ್ಟೋಬರ್ 30.
ಸೈಮನ್ ಆಯೋಗ ಇಂಗ್ಲೆಂಡ್ನಿಂದ ಆಗಮಿಸಿತ್ತು, ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಸೈಮನ್ ಕಮಿಷನ್ನಿಗೆ ಕಪ್ಪು ಬಾವುಟ ತೋರಿಸುವ ಮತ್ತು ‘ವಾಪಸ್ಸು ಹೋಗಿ’ ಎಂದು ಘೋಷಣೆ ಹಾಕುವ ಯೋಜನೆ ಅದಾಗಿತ್ತು. ಸೈಮನ್ ವಿರೋಧಿ ಪ್ರದರ್ಶನದ ನಿರ್ಧಾರ ಆಗುತ್ತಿದ್ದಂತೆಯೇ ಲಾಲಾ ಲಜಪತ್ರಾಯರ ಮನೆಗೆ ಹೋಗಿ ಪ್ರತಿಭಟನೆಯ ನೇತೃತ್ವ ವಹಿಸುವಂತೆ ಅವರನ್ನು ಒಪ್ಪಿಸಿ ಬಂದಿದ್ದ ಯುವಕ ಮತ್ತಾರೂ ಅಲ್ಲ, ಭಗತ್ ಸಿಂಗ್!
ಒಂದು ದಿನ ಸಾಯಂಕಾಲ ವೀರಕಲಿಗಳ ಕಥೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದುವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಮಗ ಹೇಳಿದ- ‘ಅಪ್ಪಾ, ಈ ಗದ್ದೆಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೇ ಬಾಂಬ್ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ’!
ಅವನೇ ಭಗತ್ ಸಿಂಗ್.
ಅತ್ಯಂತ ಎಳೇ ವಯಸ್ಸಿನಲ್ಲೇ ಆತನನ್ನು ಅತಿಯಾಗಿ ಕಾಡಿದ್ದು 1919ರಲ್ಲಿ ಸಂಭವಿಸಿದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ. ಅಂದು ಸಾವಿರಾರು ಜನರು ಹತ್ಯೆಯಾಗಿರುವ ಸುದ್ದಿ ಎಲ್ಲೆಡೆಯೂ ಹಬ್ಬಿತ್ತು. ಶಾಲೆ ಬಿಟ್ಟ ಕೂಡಲೇ ತಂಗಿಯ ಕೈಗೆ ಬ್ಯಾಗ್ ಕೊಟ್ಟ ಭಗತ್, ಅದೆತ್ತಲೋ ಹೆಜ್ಜೆ ಹಾಕಿದ. ರಾತ್ರಿ ಮನೆಗೆ ಮರಳಿದಾಗ ಕೈಯಲ್ಲಿ ಇಂಕ್ ಬಾಟಲಿಯಿತ್ತು. ಅದರಲ್ಲಿ ಶಾಯಿಯ ಬದಲು ಮಣ್ಣು ತುಂಬಿತ್ತು. ಆ ಮಣ್ಣು ಮನೆಯ ಪೂಜಾ ಕೊಠಡಿ ಸೇರಿ ನಿತ್ಯ ಆರಾಧನೆಗೆ ಭಾಜನವಾಯಿತು. ಅಷ್ಟಕ್ಕೂ ಅದು ಜಲಿಯನ್ವಾಲಾಬಾಗ್ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ದೇಶವಾಸಿಗಳ ರಕ್ತದಿಂದ ತೊಯ್ದಿದ್ದ ಮಣ್ಣಾಗಿತ್ತು!
1922ರಲ್ಲಿ ಗೋರಕ್ಪುರ ಜಿಲ್ಲೆಯ ಚೌರಿಚೌರಾ ಎಂಬಲ್ಲಿ ಕಾಂಗ್ರೆಸ್ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಆದರೆ ಪೊಲೀಸರು ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದಾಗ ರೊಚ್ಚಿಗೆದ್ದ ಜನ, 22 ಪೊಲೀಸರನ್ನು ಠಾಣೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿದರು. ಮನನೊಂದ ಗಾಂಧೀಜಿ ದೇಶಾದ್ಯಂತ ನಡೆಯುತ್ತಿದ್ದ ‘ಅಸಹಕಾರ ಚಳವಳಿ’ಯಿಂದಲೇ ಹಿಂದೆ ಸರಿದರು. 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ಅಸಹಕಾರದಂಥ ಮಹತ್ವದ ಚಳವಳಿಯನ್ನೇ ಕೈಬಿಟ್ಟಿದ್ದು ಸರಿಯೆ? ತನ್ನ ಬಾಲ್ಯದ ಹೀರೋ ಕರ್ತಾರ್ ಸಿಂಗ್ನನ್ನು ಗಲ್ಲಿಗೇರಿಸಿದಾಗ ಕಾಂಗ್ರೆಸ್ಸಿಗರೇಕೆ ಧ್ವನಿಯೆತ್ತಲಿಲ್ಲ? ಪೊಲೀಸರನ್ನು ಕೊಂದಾಗ ಮಾತ್ರ ಅಹಿಂಸಾವಾದ ಜಾಗೃತವಾಗುವುದೇಕೆ? ಎಂಬ ಪ್ರಶ್ನೆಗಳು 15 ವರ್ಷದ ಭಗತ್ ಸಿಂಗ್ನನ್ನು ಕಾಡಲಾರಂಭಿಸಿದವು. ಅದರಲ್ಲೂ ಲಾಲಾಲಜಪತ್ ರಾಯ್ ಪ್ರಾರಂಭಿಸಿದ್ದ ಲಾಹೋರ್ನ ನ್ಯಾಷನಲ್ ಕಾಲೇಜು ಸೇರಿದ ನಂತರ ಭಗತ್ ಸಿಂಗ್ ಸಂಪೂರ್ಣವಾಗಿ ಬದಲಾದ. ಸೈಮನ್ ಆಯೋಗ ಲಾಹೋರ್ಗೆ ಬಂದಿಳಿದಿದ್ದು ಅದೇ ಸಂದರ್ಭದಲ್ಲಿ. ಲಾಹೋರ್ ರೈಲು ನಿಲ್ದಾಣದ ಮುಂದೆ ನೆರೆದಿದ್ದ ಅಪಾರ ಜನಸಂದಣಿಯನ್ನು ನೋಡಿ ಸೈಮನ್ ಎದೆಗುಂದಿತು. ಕ್ರಾಂತಿಕಾರಿ ತರುಣರು ಸೈಮನ್ ಹಾದುಹೋಗಬೇಕಿದ್ದ ಸ್ಥಳದಲ್ಲಿ ಹೇಗೆ ದೃಢವಾಗಿ ನಿಂತಿದ್ದರೆಂದರೆ ಅವನು ಆಕಡೆಯಿಂದ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ.  ಲಾಹೋರ್ನ ಪೊಲೀಸ್ ಸೂಪರಿಂಟೆಂಡೆಂಟ್ ಸ್ಕಾಟ್ ಇತರ ಆಫೀಸರ್ರೊಂದಿಗೆ ಸ್ಟೇಷನ್ನಿನಲ್ಲಿದ್ದ. ಎಲ್ಲಿಯವರೆಗೆ ಈ ಯುವಕರ ಗುಂಪು ಮತ್ತು ಲಾಲಾ ಲಜಪತ್ರಾಯ್ ಇಲ್ಲಿಂದ ದೂರವಾಗುವುದಿಲ್ಲವೋ ಅಲ್ಲಿಯವರೆಗೆ ಸೈಮನ್ ಕಮೀಷನ್ನ ಸದಸ್ಯರನ್ನು ಈ ಪ್ರದರ್ಶನಗಳ ತೀಕ್ಷ್ಣ ಹೊಡೆತಗಳಿಂದ ರಕ್ಷಿಸುವುದು ಅಸಾಧ್ಯ ಎಂದರಿತ ಸ್ಕಾಟ್. ಆ ಕಾರಣಕ್ಕಾಗಿಯೇ ತನ್ನ ಅತ್ಯಂತ ನಂಬಿಕಸ್ಥ ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ನನ್ನು ಜನಸಂದಣಿಯ ನಡುವೆ ಜಾಗ ತೆರವು ಮಾಡಿಕೊಡುವ ಕೆಲಸಕ್ಕೆ ನೇಮಿಸಿದ್ದ, ಅವಶ್ಯಕವೆನಿಸಿದರೆ ಲಾಠೀಛಾರ್ಜ್ಗೂ ಆದೇಶಿಸಿದ್ದ. ಪ್ರಾರಂಭದಲ್ಲಿ ಜನತೆಯ ಮೇಲೆ ಲಾಠೀಛಾರ್ಜು ನಡೆಯಿತು. ಯಾವುದೋ ಸಮಾರಂಭದ ಉತ್ಸಾಹದಲ್ಲಿ ಜನ ಗುಂಪು ಸೇರುವುದು ಒಂದು ವಿಷಯ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದು ಬೇರೆಯ ವಿಷಯವಾಗಿತ್ತು. ಪೊಲೀಸರ ಭಯಂಕರ ಅಮಾನುಷ ವರ್ತನೆಯಿಂದಾಗಿ ಜನತೆ ಹಿಮ್ಮೆಟ್ಟಲಾರಂಭಿಸಿತು. ಮತ್ತೆ ಸ್ವಲ್ಪ ಸಮಯದ ನಂತರ ಒಂದುಗೂಡಿತು. ಒಮ್ಮೆ ಒಟ್ಟಿಗೆ ಸೇರುವುದು ಮರುಕ್ಷಣ ಚದುರಿ ಹೋಗುವುದು ನಡೆದೇ ಇತ್ತು. ಕೆಲವರು ಅಲ್ಲಿ ಇಲ್ಲಿ ಗುಂಪುಗುಂಪಾಗಿ ನಿಂತಿದ್ದರು. ರಸ್ತೆ ತೆರೆದುಕೊಂಡಿತ್ತು. ಆದರೆ ಲಾಲಾ ಲಜಪತ್ರಾಯ್ ತಾವು ನಿಂತಿದ್ದ ಸ್ಥಳದಿಂದ ಕದಲದೆ ದೃಢವಾಗಿ ನಿಂತಿದ್ದರು. ಯುವಕರ ಗುಂಪು ತಾವಿದ್ದ ಸ್ಥಳಕ್ಕೆ ಅಂಟಿಕೊಂಡಿತ್ತು. ಕಿಶನ್ಸಿಂಹ ಹಾಗೂ ಭಗತ್ಸಿಂಗ್ ಅಂತಹ ಬಲ ನೀಡುತ್ತಿದ್ದರು.
ಆಗ ಸ್ಯಾಂಡರ್ಸ್ ದೊಡ್ಡ ದೊಣ್ಣೆ ಹಿಡಿದು ಮುಂದೆ ಬಂದು ವೇಗವಾಗಿ ಗುಂಪಿನ ಮೇಲೆ ಮುಗಿಬಿದ್ದ. ಸಾಕಷ್ಟು ಜನರಿಗೆ ಗಾಯಗಳಾದವು. ಸ್ಯಾಂಡರ್ಸ್ ಲಾಲಾ ಲಜಪತ್ರಾಯರನ್ನೂ ಬಿಡಲಿಲ್ಲ. ಭಗತ್ಸಿಂಗ್ ಮತ್ತು ಅವನ ಜತೆಗಾರರು ಎಷ್ಟೇ ಪ್ರಯತ್ನಿಸಿದರೂ ಅವನ ಆಕ್ರಮಣವನ್ನು ತಡೆಯಲಾಗಲಿಲ್ಲ. ಲಜಪತ್ರಾಯರ ಹೆಗಲಿಗೆ ಮತ್ತು ಎದೆಗೆ ಏಟುಗಳು ಬಿದ್ದವು. ವಯೋವೃದ್ಧ ಲಾಲಾ ಲಜಪತ್ ರಾಯ್ ಅವರ ಎದೆಗೆ ಲಾಠಿಯಿಂದ ಬಡಿದು ಪ್ರಾಣಾಂತಿಕವಾಗಿ ಗಾಯಗೊಳಿಸಿದ. ಅದೇ ದಿನ ಸಂಜೆ ಮೋರೀ ದರ್ವಾಜಾದ ಮೈದಾನದಲ್ಲಿ ಕಾಂಗ್ರೆಸಿಗರ ಆಹ್ವಾನದ ಮೇಲೆ ಸಾರ್ವಜನಿಕ ಸಭೆ ನಡೆಯಿತು. ಮಾತಿಗೆ ನಿಂತ ಲಾಲಾ ಲಜಪತ್ರಾಯ್ ಇಂಗ್ಲಿಷ್ನಲ್ಲಿ ‘I declare that the blows struck at me will be the last nails in the coffin of the British rule in India’ ಎಂದು ಗುಡುಗಿದರು.
ಆದರೂ….
ಪೊಲೀಸರ ಹೊಡೆತದಿಂದ ಕುಗ್ಗಿಹೋಗಿದ್ದ ಲಜಪತ್ರಾಯ್ 18 ದಿನಗಳ ಕಾಲ (1928, ನವೆಂಬರ್ 17) ನರಳಿ ನಮ್ಮನ್ನಗಲಿದರು. ಈ ಘಟನೆ ಭಗತ್ ಸಿಂಗ್ ಎಂಬ ಮಹಾನ್ ಕ್ರಾಂತಿಕಾರಿಯ ಉಗಮಕ್ಕೆ ಕಾರಣವಾಯಿತು. ಕೆರಳಿದ ಭಗತ್ ಸಿಂಗ್ ಮತ್ತು ರಾಜಗುರು 1928, ಡಿಸೆಂಬರ್ 17ರ ಸಾಯಂಕಾಲ 4 ಗಂಟೆ ಸಮಯದಲ್ಲಿ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು. ಆ ವೇಳೆಗಾಗಲೇ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ್ ಆಜಾದರ ಪರಿಚಯವಾಗಿತ್ತು. ಆಜಾದರ ಮಾರ್ಗದರ್ಶನದಲ್ಲಿ ಮತ್ತೊಂದು ಯೋಜನೆ ಸಿದ್ಧವಾಯಿತು. 1929, ಏಪ್ರಿಲ್ನಲ್ಲಿ ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮುಂದೆ ಬ್ರಿಟಿಷ್ ಸರ್ಕಾರ ಎರಡು ಮಸೂದೆಗಳನ್ನು ಮುಂದಿಡಲಿತ್ತು. ಆ ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂಬುದು ಗೊತ್ತಾಗಿತ್ತು. ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಕೂಡ ವಿರುದ್ಧವಾಗಿತ್ತು. ಹಾಗಾಗಿ ಮಸೂದೆಗಳು ಬಿದ್ದು ಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವೈಸರಾಯ್ ತನ್ನ ‘ವೀಟೋ ಪವರ್’ ಉಪಯೋಗಿಸಿ ಮಸೂದೆಗೆ ಅಂಗೀಕಾರ ನೀಡುವ ಅವಕಾಶವಿತ್ತ. ಇತ್ತ ಚಂದ್ರಶೇಖರ್ ಆಜಾದ್ ಯೋಜನೆಯೊಂದನ್ನು ರೂಪಿಸಿದ್ದರು. 1929, ಏಪ್ರಿಲ್ 8ರಂದು ಅಧಿವೇಶನ ಆರಂಭವಾಯಿತು. ಪನಾಮ ಹ್ಯಾಟ್ ಧರಿಸಿದ್ದ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ ಬಾಂಬ್ ಮತ್ತು ರಿವಾಲ್ವರ್ಗಳೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ನಿರೀಕ್ಷೆಯಂತೆಯೇ ಮತದಾನದ ವೇಳೆ ಎರಡೂ ಮಸೂದೆಗಳು ಬಿದ್ದು ಹೋದವು. ವೀಟೋ ಅಧಿಕಾರವನ್ನು ಬಳಸಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸುವುದಾಗಿ ವೈಸರಾಯ್ ಘೋಷಣೆ ಮಾಡಿದ್ದೂ ಆಯಿತು. ಆದರೆ ವೀಟೋ ಪ್ರಯೋಗಿಸುವ ಮೊದಲು ಸದನದೊಳಗೆ ಬಾಂಬ್ ಸ್ಫೋಟ, ಇದ್ದಕ್ಕಿದ್ದಂತೆಯೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ. ಜನಜಂಗುಳಿಯಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ವಿಚಾರಣೆ ಎದುರಿಸುವ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದುದ್ದಗಲಕ್ಕೂ ಪಸರಿಸುವ, ಸಾರುವ ಸಲುವಾಗಿ ಬಂಧಿತರಾದರು. 1930, ಅಕ್ಟೋಬರ್ 7ರಂದು ತೀರ್ಪು ಹೊರಬಿತ್ತು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ಗೆ ಗಲ್ಲುಶಿಕ್ಷೆ ನಿಗದಿಯಾಯಿತು.
ಈ ನಡುವೆ ಮಹಾತ್ಮ ಗಾಂಧೀಜಿ ದುಂಡುಮೇಜಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡಿಗೆ ಹೊರಟು ನಿಂತರು.
ಆ ವೇಳೆಗಾಗಲೇ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ರನ್ನು ಗಲ್ಲಿಗೇರಿಸುವ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹಣೆ ಆರಂಭವಾಗಿತ್ತು. ಗಲ್ಲುಶಿಕ್ಷೆಯನ್ನು ತೆಗೆದುಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ‘ಯುವ ವಾಹಿನಿ’, ‘ನೌಜವಾನ್ ಭಾರತ್ ಸಭಾ’ ಹಾಗೂ ಖ್ಯಾತ ಗಾಂಧೀವಾದಿ ಅರುಣಾ ಅಸಫ್ ಅಲಿ ಸೇರಿದಂತೆ ಇಡೀ ದೇಶವಾಸಿಗಳು ಒಕ್ಕೊರಲಿನಿಂದ ಮಹಾತ್ಮನಿಗೆ ಮನವಿ ಮಾಡಿದರು. ಇಂಗ್ಲೆಂಡ್ಗೆ ತೆರಳಿದ ಗಾಂಧೀಜಿ 1931, ಮಾರ್ಚ್ 5ರಂದು ಲಾರ್ಡ್ ಇರ್ವಿನ್ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. ಅದರೊಂದಿಗೆ ಕಾಂಗ್ರೆಸ್ ಅಸಹಕಾರ ಚಳವಳಿಯನ್ನು ಅಧಿಕೃತವಾಗಿ ಕೈಬಿಡಲು ಒಪ್ಪಿತು. ಕಾಂಗ್ರೆಸ್ಸಿಗರ ವಿರುದ್ಧ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲು ಬ್ರಿಟಿಷ್ ಆಡಳಿತವೂ ಸಮ್ಮತಿ ನೀಡಿತು.
ಆದರೆ…..
ಗಾಂಧೀಜಿಯವರು, ಭಗತ್ ಸಿಂಗ್ಗೆ ಮಾಫಿ ನೀಡುವ ವಿಚಾರ ಬಿಟ್ಟು, ಉಳಿದೆಲ್ಲ ವಿಷಯಗಳ ಬಗ್ಗೆಯೂ ಇರ್ವಿನ್ ಜತೆ ಚರ್ಚಿಸಿದ್ದರು! ಒಂದು ವೇಳೆ, ಅಸಹಕಾರ ಚಳವಳಿಯನ್ನು ಕೈಬಿಡಬೇಕಾದರೆ, ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಭಗತ್ ಸಿಂಗ್ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡಬೇಕೆಂದು ಗಾಂಧೀಜಿ ಏನಾದರೂ ಪೂರ್ವಷರತ್ತು ಹಾಕಿದ್ದರೆ, ಬ್ರಿಟಿಷರಿಗೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ. ಆದರೆ….
ಭಗತ್ನನ್ನು ಉಳಿಸಿಕೊಳ್ಳಲು ಬೇರಾವುದೇ ಮಾರ್ಗಗಳು ಉಳಿದಿರಲಿಲ್ಲ. 1931, ಮಾರ್ಚ್ 23ರಂದು ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೊದಲು ಸುಖದೇವ್, ನಂತರ ಭಗತ್ಸಿಂಗ್, ಕೊನೆಯವನಾಗಿ ರಾಜಗುರು ಮುಖಕ್ಕೆ ಕಪ್ಪುಬಟ್ಟೆ ತೊಡದೆ, ಕೈಗೆ ಕೋಳ ಹಾಕಿಸಿಕೊಳ್ಳದೆ ಕುಣಿಕೆಯನ್ನು ಚುಂಬಿಸಿ ನಗುತ್ತಲೇ ತಲೆಕೊಟ್ಟು ನಮ್ಮಿಂದ ದೂರವಾದರು.
ಹಾಗಾಗೆ ಈ ದೇಶ ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ, ಮರೆಯಲೂಬಾರದು ಅಲ್ಲವೇ?

-ಪ್ರತಾಪ ಸಿಂಹ

ಶನಿವಾರ, ಫೆಬ್ರವರಿ 16, 2013

ಚಲೋ ದಿಲ್ಲಿ ಎಂದ ಅವರು ಹೋದರೆಲ್ಲಿ?

Netaji Subhash Chandra Bose and Germany!
ಈ ಹೆಸರಿನ ಪುಸ್ತಕವೊಂದು ಮೊನ್ನೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಯಿತು. ಅದನ್ನು ಬರೆದವರು ಮತ್ತಾರೂ ಅಲ್ಲ ನೇತಾಜಿ ಸುಭಾಶ್ಚಂದ್ರ ಬೋಸರ ಏಕಮಾತ್ರ ಪುತ್ರಿ ಪ್ರೊ.ಅನಿತಾ ಬೋಸ್ ಫಾಫ್! ಪುಸ್ತಕವನ್ನು ಬಿಡುಗಡೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಪಾತ್ರ ತುಂಬಾ ವಿಶಿಷ್ಟವಾದುದು. ‘ಇಂದಿಗೂ’ ನೇತಾಜಿ ಭಾರತೀಯರೆಲ್ಲರಿಗೂ ಪ್ರೇರಕರಾಗಿದ್ದಾರೆ’ ಎಂದರು.

ಆದರೆ…
‘ಇಂದಿಗೂ’ ಪ್ರೇರಕಶಕ್ತಿಯಾಗಿರುವ ನೇತಾಜಿಯವರ ಆಂತ್ಯ ಮಾತ್ರ ‘ಇಂದಿಗೂ’ ಅರಿಯದಾಗಿರುವುದೇಕೆ?
ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಇಂದಿಗೂ ಜನರಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುವ ಆ ಪ್ರೇರಕ ಶಕ್ತಿ ಎಲ್ಲಿ ಕಣ್ಮರೆಯಾಯಿತು? ದಿಲ್ಲಿಗೆ ನಡೆಯಿರಿ, ಅಧಿಕಾರವನ್ನು ಕಸಿದುಕೊಳ್ಳೋಣ ಎಂದು ರಣ ಕಹಳೆಯೂದಿದ್ದ, ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹಾಗೂ ಭಾರತ ರಾಷ್ಟ್ರೀಯ ಸೇನೆಯಲ್ಲಿ ಸ್ವಾತಂತ್ರ್ಯದ ತುಡಿತವನ್ನು ತುಂಬಿದ್ದ ಆ ನಾಯಕ ಹೋಗಿದ್ದಾದರೂ ಎಲ್ಲಿಗೆ?
1999, ಏಪ್ರಿಲ್ 14ರಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚಿಸಿದ ಜಸ್ಟೀಸ್ ಮನೋಜ್‌ಕುಮಾರ್ ಮುಖರ್ಜಿ ಆಯೋಗ ಪತ್ತೆ ಮಾಡಲು ಹೊರಟಿದ್ದೂ ಇದೇ ರಹಸ್ಯವನ್ನ!
1945ರ ಆಗಸ್ಟ್ ಬಳಿಕವೂ ನೇತಾಜಿ ರಷ್ಯಾದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಹಲವು ಕಥೆಗಳು ಮುಖರ್ಜಿ ಆಯೋಗದ ಬಳಿ ಇತ್ತು. ಆದರೆ ಸಾಕ್ಷಿ ಕೊರತೆಯಿಂದ ಇವ್ಯಾವುದನ್ನೂ ಒಪ್ಪಿಕೊಳ್ಳಲಾಗಲಿಲ್ಲ. ಇಂಥದ್ದೇ ಒಂದು ಕಥೆಯನ್ನು ಖೋಸ್ಲಾ ಆಯೋಗದೆದುರು ಡಾ. ಸತ್ಯನಾರಾಯಣ ಸಿಂಗ್ ಎಂಬುವರು ಹೇಳಿದ್ದರು. ಅವರ ಪ್ರಕಾರ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಸ್ಥಾಪಕ ಅಬಾನಿ ಮುಖರ್ಜಿಯವರ ಪುತ್ರ ಜಾರ್ಜ್ ಮುಖರ್ಜಿ ಒಮ್ಮೆ ಸತ್ಯನಾರಾಯಣ ಸಿಂಗ್‌ಗೆ ಒಂದು ಘಟನೆಯನ್ನು ಹೇಳಿದ್ದರಂತೆ. ಜಾರ್ಜ್ ಮುಖರ್ಜಿ ಹೇಳಿದ ಹಾಗೆ ಅವರ ತಂದೆ ಅಬಾನಿ ಮುಖರ್ಜಿ ಮತ್ತು ನೇತಾಜಿ ಸೈಬೀರಿಯಾದ ಜೈಲೊಂದರಲ್ಲಿ ಅಕ್ಕಪಕ್ಕದ ಕೊಠಡಿಗಳಲ್ಲಿದ್ದರಂತೆ. ನೇತಾಜಿ ರಷ್ಯಾದಲ್ಲಿದ್ದರು ಅನ್ನುವ ಹಲವಾರು ಕತೆಗಳಲ್ಲಿ ಇದೂ ಒಂದು. ಆದರೆ ಇಲ್ಲಿ ಒಂದು ಮುಖ್ಯ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಬಾನಿ ಮುಖರ್ಜಿ ಮತ್ತು ಅವರ ಸ್ನೇಹಿತ ವೀರೇಂದ್ರನಾಥ್ ಇಬ್ಬರನ್ನೂ 1937ರಲ್ಲಿ ರಷ್ಯಾದಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಬಳಿಕ ಅವರಿಬ್ಬರನ್ನೂ ಸ್ಟಾಲಿನ್‌ನ ಆಜ್ಞೆ ಪ್ರಕಾರ ಕೊಲ್ಲಲಾಯಿತು. ಈ ಕತೆಗೆ ಪೂರಕವಾಗಿ ಏಷ್ಯಾಟಿಕ್ ಸೊಸೈಟಿ ಮುಖಾಂತರ ರಷ್ಯಾಕ್ಕೆ ಹೋಗಿ ಸಂಶೋಧನೆ ನಡೆಸುತ್ತಿದ್ದಾಗ ಎರಡನೇ ಮಹಾಯುದ್ಧ ಮುಗಿದ ನಂತರವೂ ಬೋಸ್ ಅಲ್ಲಿದ್ದರು ಎಂಬ ಸ್ಫೋಟಕ ವಿಚಾರವನ್ನು ದಾಖಲೆ ಸಮೇತ ಹೊರತೆಗೆದ ಡಾ. ಪುರಬಿರಾಯ್ ತಮ್ಮ ಅಫಿಡವಿಟ್‌ನಲ್ಲಿ ಕೆಲವೊಂದು ನಿದರ್ಶನಗಳನ್ನು ಕೊಡುತ್ತಾರೆ- ‘ಗೋರ್ಬಚೆವ್‌ರ ಗ್ಲಾಸ್‌ನಾಸ್ಟ್ ಮತ್ತು ಪೆರಿಸ್ಟ್ರೋಯಿಕಾದ ಸಂದರ್ಭದಲ್ಲಿ ಅದೆಷ್ಟೋ ಮುಚ್ಚಿಟ್ಟ ಸತ್ಯಗಳು ಹೊರಬಂದವು. ಎನ್ಕೆಜಿಬಿ-ಕೆಜಿಬಿಯ ರಹಸ್ಯ ಪತ್ರಾಗಾರಗಳಿಂದ ದೊರಕಿದ ದಾಖಲೆಗಳಿಂದ ಈ ರಹಸ್ಯಗಳು ಬಯಲಾದವು. ಇದಕ್ಕೆ ಸರಿಯಾಗಿ ರಷ್ಯಾದ ಇಂಡಾಲಜಿಸ್ಟ್ ಮಿಟ್ರೋಕಿನ್ ಹೇಳುವಂತೆ, ಗ್ಲಾಸ್‌ನಾಸ್ಟ್‌ನಿಂದಾಗಿ ಸೋವಿಯತ್ ಚರಿತ್ರೆಯ ಕೆಲ ಖಾಲಿ ಜಾಗಗಳು ತುಂಬುತ್ತಿವೆ. ಭಾರತೀಯ ಕ್ರಾಂತಿಕಾರರಾದ ವೀರೇಂದ್ರನಾಥ ಮತ್ತು ಅಬಾನಿ ಮುಖರ್ಜಿ ಸೋವಿಯತ್ ರಷ್ಯಾದಿಂದ ಯಾವ ಸುಳಿವೂ ಇಲ್ಲದೆ ಕಾಣೆಯಾಗಿದ್ದರು. ಆದರೆ 1989ರಲ್ಲಿ ಸೋವಿಯತ್ ಲ್ಯಾಂಡ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಈ ಇಬ್ಬರು ಕ್ರಾಂತಿಕಾರಿಗಳ ಕತೆ ಏನಾಯಿತೆಂಬುದನ್ನು ತಿಳಿಸಲಾಗಿದೆ. ದೆಹಲಿಯ ನ್ಯಾಷನಲ್ ಆರ್ಕೈವ್ಸ್‌ನಲ್ಲಿರುವ ಒಂದು ವರದಿ ಸಿ-4, ಪಾರ್ಟ್ ಜಿ, ಏಪ್ರಿಲ್ 8-1946ರ ಪ್ರಕಾರ ಇಂಟೆಲಿಜೆನ್ಸ್ ಬ್ಯೂರೋ ಒಂದು ರಷ್ಯನ್ ವರದಿ ಬಗ್ಗೆ ಚರ್ಚಿಸುತ್ತಿತ್ತು. ರಷ್ಯನ್ ವರದಿ ಹೀಗೆ ಹೇಳಿತ್ತು-’ಮಾಸ್ಕೋದಲ್ಲಿ ಕಾಂಗ್ರೆಸ್‌ನ ಹಲವಾರು ನಿರಾಶ್ರಿತರು ಇದ್ದಾರೆ. ಅವರ ಪೈಕಿ ಬೋಸ್ ಕೂಡ ಒಬ್ಬರು’ ಎಂಬ ಮಾಹಿತಿಯನ್ನು ಕಾಬೂಲ್‌ನಲ್ಲಿದ್ದ ರಷ್ಯಾದ ರಾಯಭಾರಿ ಖೋಸ್ ಪ್ರಾಂತ್ಯದ ಆಫ್‌ಘಾನಿಸ್ತಾನದ ಗವರ್ನರ್‌ಗೆ ತಿಳಿಸಿದ್ದರು. ಇದೇ ಸಮಯದಲ್ಲಿ ರಷ್ಯಾದ ಕೆಲ ಅಧಿಕಾರಿಗಳೂ ಬೋಸ್ ರಷ್ಯಾದಲ್ಲಿದ್ದಾರೆಂದು ಹೇಳುತ್ತಿದ್ದರು. ಈ ವಿಷಯ ಪ್ರಸ್ತಾಪವಾಗಿದ್ದು ಇರಾನ್‌ನ ಟೆಹರಾನ್‌ನಿಂದ ಬಂದ ವರದಿಯೊಂದರಲ್ಲಿ. ಅಂದರೆ ರಷ್ಯಾದ ವೈಸ್ ಕಾನ್ಸುಲರ್ ಆಗಿದ್ದ ಮೊರಾಡೋಫ್ ‘ಬೋಸ್ ರಷ್ಯಾದಲ್ಲಿದ್ದರು’ ಎಂಬುದನ್ನು ಮಾರ್ಚ್ ತಿಂಗಳಲ್ಲಿ ಬಹಿರಂಗಗೊಳಿಸಿದ್ದರು ಎಂಬುದು ನಿಚ್ಚಳವಾಗುತ್ತದೆ.
ಹಾಗಾದರೆ ನೇತಾಜಿ ರಷ್ಯಾದಲ್ಲಿದ್ದರು ಎಂಬುದು ನೆಹರು ಅವರಿಗೆ ಗೊತ್ತಿತ್ತಾ?
ಬಹುಶಃ ಇಂಥದ್ದೊಂದು ಪ್ರಶ್ನೆಗೆ ಉತ್ತರ ನೇತಾಜಿ ಸಾವಿನ ರಹಸ್ಯದ ಬಗ್ಗೆ ಈ ಹಿಂದೆ ತನಿಖೆ ನಡೆಸಿದ್ದ ಖೋಸ್ಲಾ ಆಯೋಗದ ವಿಚಾರಣೆಯ ಸಂದರ್ಭದಲ್ಲೇ ಸಿಕ್ಕಿತ್ತು. ಆದರೆ ಇದರ ಬಗ್ಗೆ ಯಾರೆಂದರೆ ಯಾರೂ, ಖುದ್ದು ಜಸ್ಟಿಸ್ ಖೋಸ್ಲಾ ಕೂಡಾ ತಲೆಕೆಡಿಸಿಕೊಳ್ಳಲೇ ಇಲ್ಲ! ಖೋಸ್ಲಾ ಆಯೋಗದೆದುರು ಹೇಳಿಕೆ ನೀಡಿದ ಒಬ್ಬ ಸಾಕ್ಷಿದಾರನ ಹೆಸರು ಶ್ಯಾಮಲಾಲ್ ಜೈನ್. ಈತ ಸತ್ಯ ಪ್ರಮಾಣ ಮಾಡಿದ ಬಳಿಕ ಜಸ್ಟಿಸ್ ಖೋಸ್ಲಾ ಎದುರು ನೀಡಿದ ವಿಸ್ತಾರವಾದ ಹೇಳಿಕೆ ಅತ್ಯಂತ ಕುತೂಹಲಕರವಾಗಿದೆ. ಶ್ಯಾಮಲಾಲ್ ಜೈನ್ ಹೇಳಿಕೆ ಪ್ರಕಾರ, ನೇತಾಜಿ ರಷ್ಯಾದಲ್ಲಿರುವುದು ನೆಹರುಗೆ ಗೊತ್ತಿತ್ತು!
ಶ್ಯಾಮಲಾಲ್ ಜೈನ್ ಅವರ ಹೇಳಿಕೆಯನ್ನು ಪರಿಶೀಲಿಸುವ ಮುನ್ನ ಇನ್ನೊಂದು ಹಳೆಯ ರಹಸ್ಯ ಸರ್ಕಾರಿ ದಾಖಲೆಯ ಬಗ್ಗೆ ತಿಳಿಯಬೇಕು. ದೆಹಲಿಯಲ್ಲಿರುವ ಭಾರತ ಸರ್ಕಾರದ ಪತ್ರಾಗಾರ ‘ನ್ಯಾಷನಲ್ ಆರ್ಕೈವ್ಸ್‌ನಲ್ಲಿ ಒಂದು ದಾಖಲೆ ಇದೆ. ಇದು ಬ್ರಿಟಿಷ್ ಬೇಹುಗಾರಿಕಾ ತಂಡವೊಂದು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯೊಂದರ ಪ್ರತಿ. ನ್ಯಾಷನಲ್ ಆರ್ಕೈವ್ಸ್‌ನಲ್ಲಿರುವ ಈ ದಾಖಲೆಯ ಫೈಲ್ ನಂಬರ್ 273/ಐಎನ್‌ಎ. ಡಾಕ್ಯುಮೆಂಟ್ ಸಿ-4, ಪ್ಯಾರಾ-ಜಿನಲ್ಲಿರುವ ಮಾಹಿತಿ ಪ್ರಕಾರ ಖುದ್ದು ಜವಾಹರಲಾಲ್ ನೆಹರು ನೇತಾಜಿಯವರಿಂದ ಒಂದು ಸಂದೇಶವನ್ನು ಸ್ವೀಕರಿಸಿದ್ದರು. ಆ ಸಂದೇಶದಲ್ಲಿ ‘ನೇತಾಜಿಯು ರಷ್ಯಾದಲ್ಲಿದ್ದು, ಅವರು ಅಲ್ಲಿಂದ ಭಾರತಕ್ಕೆ ಪಲಾಯನ ಮಾಡಲು ಸಿದ್ಧರಾಗಿದ್ದಾರೆ. ಅವರು ಚಿತ್ರಾಲ್‌ನ ಮೂಲಕ ಭಾರತಕ್ಕೆ ಬರಲಿದ್ದು, ತನ್ನಣ್ಣ ಶರತ್ ಬೋಸ್‌ರ ಯಾವುದಾದರೊಬ್ಬ ಮಗ ನೇತಾಜಿಯವರನ್ನು ಚಿತ್ರಾಲ್‌ನಲ್ಲಿ ಭೇಟಿ ಮಾಡಬೇಕು’ ಎಂದು ಬರೆದಿತ್ತು. ಅಲ್ಲದೆ ನೇತಾಜಿಯವರು ತಾವು ಭಾರತಕ್ಕೆ ಮರಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವಂತೆ ನೆಹರು ಅವರಲ್ಲಿ ಕೇಳಿಕೊಂಡಿದ್ದರು. ಇದು ದೆಹಲಿಯ ನ್ಯಾಷನಲ್ ಆರ್ಕೈವ್ಸ್‌ನಲ್ಲಿರುವ ಒಂದು ರಹಸ್ಯ ದಾಖಲೆ.
ಇನ್ನು ಶ್ಯಾಮಲಾಲ್ ಜೈನ್ ಖೋಸ್ಲಾ ಆಯೋಗದೆದುರು ನೀಡಿದ್ದ ಹೇಳಿಕೆಯನ್ನು ಗಮನಿಸೋಣ-’ಒಂದು ದಿನ ಸಂಜೆ, ಅದು ಬಹುಶಃ 1945ರ ಡಿಸೆಂಬರ್ 26 ಅಥವಾ 27 ಇರಬೇಕು. ಜವಾಹರಲಾಲ್ ನೆಹರು ಅವರೇ ಖುದ್ದಾಗಿ ನನಗೆ ಫೋನ್ ಮಾಡಿದ್ದರು. ‘ಕೂಡಲೇ ನೀನು ಟೈಪ್‌ರೈಟರ್ ಜತೆ ಅಸಫ್ ಅಲಿಯವರ ಮನೆಗೆ ಬಾ, ನೀನು ಹಲವಾರು ಪತ್ರಗಳನ್ನು ಟೈಪ್ ಮಾಡೋದಿದೆ’ ಎಂದು ಹೇಳಿದ್ದರು. ನಾನು ಅದಕ್ಕೆ ಒಪ್ಪಿ ಕೂಡಲೇ ಟೈಪ್‌ರೈಟರನ್ನೂ ತೆಗೆದುಕೊಂಡು ಅಸಫ್ ಅಲಿಯವರ ಮನೆಗೆ ಹೋದೆ. ಅಲ್ಲಿ ಮೊದಲಿಗೆ ಕೆಲವೊಂದು ಪತ್ರಗಳನ್ನು ನನ್ನಿಂದ ಟೈಪ್ ಮಾಡಿಸಿದ ಜವಾಹರಲಾಲ್ ನೆಹರು ಬಳಿಕ ತಮ್ಮ ಕೋಟಿನ ಕಿಸೆಯಿಂದ ಒಂದು ಪತ್ರವನ್ನು ತೆಗೆದು, ಇದರ ನಾಲ್ಕು ಪ್ರತಿಗಳನ್ನು ಮಾಡಿಕೊಡುವಂತೆ ಕೇಳಿಕೊಂಡರು. ಈ ಕಾಗದವನ್ನು ನೋಡಿದ ನಾನು ಇದು ಕೈಯಲ್ಲಿ ಬರೆದ ಪತ್ರ ಹಾಗಾಗಿ ಓದಲು ಕೊಂಚ ಕಷ್ಟವಾಗುತ್ತದೆ’ ಅಂತಂದೆ. ಆಯೋಗದ ಮುಂದೆ ತನ್ನ ಹೇಳಿಕೆಯನ್ನು ಮುಂದುವರಿಸುತ್ತಾ ಶ್ಯಾಮಲಾಲ್ ಜೈನ್ ಹೇಳಿದ್ದರು- ‘ಈಗ ಆ ಕಾಗದಲ್ಲಿ ಏನು ಬರೆದಿತ್ತು ಎಂಬುದನ್ನು ಜ್ಞಾಪಿಸಿಕೊಂಡು, ಅದನ್ನೇ ಹೇಳಲು ಪ್ರಯತ್ನಿಸುತ್ತೇನೆ’.
‘ಸೈಗಾನ್‌ನಿಂದ ವಿಮಾನದ ಮೂಲಕ ಹೊರಟ ನೇತಾಜಿ ಸುಭಾಶ್‌ಚಂದ್ರ ಬೋಸ್, 1945ರ ಆಗಸ್ಟ್ 23ರಂದು ಮಂಚೂರಿಯಾದ ಡಿರೇನ್‌ಗೆ ಮಧ್ಯಾಹ್ನ 1-30ಕ್ಕೆ ಬಂದಿಳಿದರು. ಈ ವಿಮಾನವು ಜಪಾನಿ ಬಾಂಬರ್ ವಿಮಾನವಾಗಿತ್ತು. ನೇತಾಜಿ ಎರಡೂ ಕೈಗಳಲ್ಲಿ ಎರಡು ಸೂಟ್‌ಕೇಸ್ ಹಿಡಿದಿದ್ದರು. ನೇತಾಜಿ ಮತ್ತು ಅವರ ಜೊತೆಗೆ ಬಂದಿದ್ದ ಬೇರೆ ನಾಲ್ವರು, ಅವರಲ್ಲೊಬ್ಬ ಜನರಲ್ ಶಿಡೈ ಎಂಬ ಹೆಸರಿನ ಜಪಾನಿ (ಇತರರ ಹೆಸರು ನನಗೆ ಮರೆತು ಹೋಗಿದೆ…) ಹತ್ತಿರದಲ್ಲೇ ಇದ್ದ ಜೀಪ್‌ನಲ್ಲಿ ಕುಳಿತರು. ಈ ಜೀಪ್ ರಷ್ಯಾದ ಕಡೆಗೆ ಪ್ರಯಾಣ ಬೆಳೆಸಿತು. ಸುಮಾರು ಮೂರು ಗಂಟೆಯ ಬಳಿಕ ಈ ಜೀಪ್ ಮರಳಿ ಬಂತು. ಅಲ್ಲಿ ಕಾಯುತ್ತಿದ್ದ ವಿಮಾನದ ಪೈಲಟ್‌ಗೆ ವಿಚಾರ ತಿಳಿಸಿದ ಬಳಿಕ ಆತ ಮರಳಿ ಟೋಕಿಯೋಗೆ ಮರುಪ್ರಯಾಣ ಬೆಳೆಸಿದ.’
‘ಈ ಪತ್ರವನ್ನು ನನಗೆ ಟೈಪ್ ಮಾಡಲು ಕೊಟ್ಟ ನಂತರ ಜವಾಹರಲಾಲ್ ನೆಹರು ಅಸಫ್ ಅಲಿ ಬಳಿಗೆ ಹೋಗಿ 10-15 ನಿಮಿಷ ಮಾತುಕತೆಯಲ್ಲಿ ನಿರತರಾದರು. ನಾನು ಈ ಪತ್ರವನ್ನು ಪೂರ್ತಿಯಾಗಿ ಟೈಪ್ ಮಾಡಲಾಗಿರಲಿಲ್ಲ. ಏಕೆಂದರೆ ಪತ್ರ ಬರೆದ ವ್ಯಕ್ತಿಯ ಹೆಸರನ್ನು ನನಗೆ ಓದಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜವಾಹರಲಾಲ್‌ರೇ ಆ ಹೆಸರೇನೆಂದು ಹೇಳಿಯಾರು ಎಂದು ಅವರು ಮರಳುವುದನ್ನೇ ಕಾಯುತ್ತಿದ್ದೆ. ಇದರ ನಡುವೆ ಆ ಪತ್ರವನ್ನು ಹಲವಾರು ಬಾರಿ ಓದಿದೆ. ನೆಹರು ಅವರು ನಾನು ಟೈಪ್ ಮಾಡಿದ ಪೇಪರ್‌ಗಳನ್ನು ಟೈಪ್‌ರೈಟರ್‌ನಿಂದ ತೆಗೆದು ಹೇಗಿದೆಯೋ ಹಾಗೆ ಕೊಡಲು ಹೇಳಿದರು.’
ನಾನು ಸತ್ಯಪ್ರಮಾಣ ಮಾಡಿ ವಿಧಿಬದ್ಧವಾಗಿ ದೃಢೀಕರಿಸುತ್ತೇನೆ ಮತ್ತು ಆ ಬಳಿಕ ಜವಾಹರಲಾಲ್ ನೆಹರು ತಮ್ಮ ಬಳಿಯಿದ್ದ ರೈಟಿಂಗ್ ಪ್ಯಾಡ್‌ನಿಂದ ನಾಲ್ಕು ಹಾಳೆಗಳನ್ನು ಹರಿದುಕೊಟ್ಟರು. ಅವರಿಗೆ ಒಂದು ಪತ್ರದ ನಾಲ್ಕು ಪ್ರತಿಗಳು ಬೇಕಾಗಿದ್ದು, ಅವರು ನನಗೆ ಡಿಕ್ಟೇಷನ್ ನೀಡಿದ್ದನ್ನು ನಾನು ಟೈಪ್ ಮಾಡಬೇಕೆಂದು ಹೇಳಿದರು. ಅದಕ್ಕೂ ನಾನು ಒಪ್ಪಿಕೊಂಡೆ. ಆ ಪತ್ರದ ಸಾರಾಂಶ ನನಗೆ ಈಗ ನೆನಪಿರುವಂತೆ ಈ ಕೆಳಗಿನಂತಿದೆ’
‘ಡಿಯರ್ ಮಿಸ್ಟರ್ ಅಟ್ಲಿ
(ಬ್ರಿಟನ್ ಪ್ರಧಾನಿ)
ಒಂದು ನಂಬಲರ್ಹ ಮೂಲದ ಪ್ರಕಾರ ನನಗೆ ತಿಳಿದು ಬಂದದ್ದೇನೆಂದರೆ ನಿಮ್ಮ ಸುಭಾಶ್ಚಂದ್ರ ಬೋಸ್‌ರಿಗೆ ರಷ್ಯಾದೊಳಗೆ ಪ್ರವೇಶಿಸಲು ಸ್ಟಾಲಿನ್ ಅನುಮತಿ ಇತ್ತಿದ್ದಾರೆ. ಇದು ರಷ್ಯನ್ನರು ಮಾಡಿದ ಶುದ್ಧ ವಿಶ್ವಾಸಘಾತುಕತನ ಮತ್ತು ನಂಬಿಕೆದ್ರೋಹ. ಬ್ರಿಟನ್-ಅಮೆರಿಕದ ಮಿತ್ರರಾಷ್ಟ್ರವಾಗಿ ರಷ್ಯಾ ಈ ರೀತಿ ಮಾಡಬಾರದಿತ್ತು. ದಯವಿಟ್ಟು ಈ ವಿಷಯವನ್ನು ಗಮನಿಸಿ, ನಿಮಗೆ ಯಾವುದು ಸರಿಯೆಂದು ತೋರುತ್ತದೋ ಅದನ್ನೇ ಮಾಡಿ.
ಇತೀ ತಮ್ಮ ವಿಶ್ವಾಸಿ
ಜವಾಹರಲಾಲ್ ನೆಹರು.’
ಖೋಸ್ಲಾ ಆಯೋಗದ ಮುಂದೆ ಇಂಥ ದಿಗ್ಭ್ರಮೆ ಹುಟ್ಟಿಸುವ ಹೇಳಿಕೆ ನೀಡಿದ ಈ ಶ್ಯಾಮಲಾಲ್ ಜೈನ್ ಯಾರೆಂದರೆ ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾದ ಬಳಿಕ ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಯೋಧರನ್ನು, ಅಧಿಕಾರಿಗಳನ್ನು ಬಂಧಿಸಿ ಬ್ರಿಟಿಷರು ಕೆಂಪುಕೋಟೆಯಲ್ಲಿ ವಿಚಾರಣೆ ನಡೆಸುತ್ತಿದ್ದರಲ್ಲಾ ಆ ಸಮಯದಲ್ಲಿ ಐಎನ್‌ಎ ಪರ ನ್ಯಾಯಾಲಯದಲ್ಲಿ ವಾದಿಸಲು ‘ಐಎನ್‌ಎ ಡಿಫೆನ್ಸ್ ಕಮಿಟಿ’ಯೊಂದನ್ನು ಕಾಂಗ್ರೆಸ್ ರಚಿಸಿತ್ತು. ಈ ಡಿಫೆನ್ಸ್ ಕಮಿಟಿಯ ಅಧ್ಯಕ್ಷರಾಗಿದ್ದು ಖ್ಯಾತ ವಕೀಲ ಹಾಗೂ ಕಾಂಗ್ರೆಸ್ ಧುರೀಣ ಭೂಲಾಭಾಯಿ ದೇಸಾಯಿ. ನೆಹರು ಈ ಕಮಿಟಿಯ ಪ್ರಮುಖ ಸದಸ್ಯರಾಗಿದ್ದರು. ಇದೇ ಕಮಿಟಿಯ ಕಾರ್ಯದರ್ಶಿಯಾಗಿದ್ದವರು ಅಸಫ್ ಅಲಿ. ಈ ಶ್ಯಾಮಲಾಲ್ ಜೈನ್ ಅಸಫ್ ಅಲಿಯ ‘ಕಾನ್ಫಿಡೆನ್ಷಿಯಲ್ ಸ್ಟೆನೋ’ ಆಗಿದ್ದರು!
ಶ್ಯಾಮಲಾಲ್ ಜೈನ್ ಖೋಸ್ಲಾ ಆಯೋಗದೆದುರು ಈ ರೀತಿ ಆಘಾತಕಾರಿ ಹೇಳಿಕೆ ನೀಡಿದ್ದಕ್ಕಿಂತಲೂ ಆಘಾತಕಾರಿ ವಿಷಯಗಳು ಬಳಿಕ ನಡೆದವು. ಶ್ಯಾಮಲಾಲ್‌ರ ಈ ಹೇಳಿಕೆಯನ್ನು ಯಾರೆಂದರೆ ಯಾರೂ ವಿರೋಧಿಸಲಿಲ್ಲ. ಖೋಸ್ಲಾ ಆಯೋಗದ ವಿಚಾರಣೆಯ ಯಾವ ಹಂತದಲ್ಲೂ ಶ್ಯಾಮಲಾಲ್‌ರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಲೇ ಇಲ್ಲ. ಆಯೋಗದ ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲರೂ ಈ ಹೇಳಿಕೆಯ ಬಗ್ಗೆ  ಮಾತಾಡಲಿಲ್ಲ. ಬಳಿಕ ಆಯೋಗದೆದುರು ಬಂದ ಇತರೆ ಯಾವುದೇ ಸಾಕ್ಷಿದಾರರೂ ಶ್ಯಾಮಲಾಲ್‌ರ ಈ ಹೇಳಿಕೆ ಸುಳ್ಳೆಂದು ಹೇಳಲಿಲ್ಲ. ಈ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಲಿಲ್ಲ. ಅದೆಲ್ಲಾ ಹೋಗಲಿ ಶ್ಯಾಮಲಾಲ್ ಜೈನ್ ಆಯೋಗದೆದುರು ಪ್ರಮಾಣ ಮಾಡಿ ನೀಡಿದ ಈ ಹೇಳಿಕೆ ನಿಜವೋ ಸುಳ್ಳೋ ಎಂದು ಸ್ವತಃ ಆಯೋಗದ ಅಧ್ಯಕ್ಷರಾದ ಜಿ.ಡಿ. ಖೋಸ್ಲಾ ಅವರೇ ಪರೀಕ್ಷಿಸಲು ಮುಂದಾಗಲಿಲ್ಲ. ಕೊನೆಗೆ ಖೋಸ್ಲಾ ಆಯೋಗದ ಅಂತಿಮ ವರದಿಯಲ್ಲೂ ಈ ಹೇಳಿಕೆ ನಂಬಲನರ್ಹ ಅಂತ ಕೂಡಾ ಹೇಳಿರಲಿಲ್ಲ. ಅಲ್ಲಿಗೆ ಶ್ಯಾಮಲಾಲ್‌ರ ಹೇಳಿಕೆಯನ್ನು ಎಲ್ಲರೂ ನಿಜವೆಂದೇ ಒಪ್ಪಿಕೊಂಡಾಯಿತಲ್ಲ!
ಇಂತಹ ಸ್ಫೋಟಕ ಅಂಶಗಳು, ದಾಖಲೆಗಳನ್ನು ಹೊಂದಿರುವ, ಜಸ್ಟೀಸ್ ಮುಖರ್ಜಿ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡಿರುವ ಲೆಫ್ಟಿನೆಂಟ್ ಮಾನ್ವತಿ ಆರ್ಯ ಅವರ ‘ಜಡ್ಜ್‌ಮೆಂಟ್, ನೋ ಕ್ರಾಶ್, ನೋ ಡೆತ್‌’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದೇನೆ. ಇಂದು ಬಿಜಾಪುರದಲ್ಲಿ ಆರಂಭವಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಅನೌಪಚಾರಿಕವಾಗಿ ಬಿಡುಗಡೆಯಾಗಲಿದೆ ಹಾಗೂ ಅದೇ ವೇಳೆ ರಾಜ್ಯದೆಲ್ಲೆಡೆಯ ಓದುಗರಿಗೂ ಲಭ್ಯವಾಗಲಿದೆ. ನೇತಾಜಿಯಂಥ ಮಹಾನ್ ವ್ಯಕ್ತಿಯ ಬಗ್ಗೆ ಬರೆಯುವುದಕ್ಕಿಂತ ಪುಣ್ಯದ ಕೆಲಸ ಏನಿದೆ, ಹೇಳಿ?

For books contact my publisher Subrahmanya- 9448110034

- ಪ್ರತಾಪ ಸಿಂಹ

ಶನಿವಾರ, ಫೆಬ್ರವರಿ 9, 2013

ಅಫ್ಜಲ್ ಗುರು ನಿರ್ನಾಮ


ನವದೆಹಲಿ, ಫೆ. 9 : ಡಿಸೆಂಬರ್ 13, 2001ರಂದು ಭಾರತದ ಸಂಸತ್ ಭವನದ ಮೇಲೆ ನಡೆದ ಉಗ್ರ ದಾಳಿಯ ಪ್ರಮುಖ ರೂವಾರಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಯಕ ಮೊಹಮ್ಮದ್ ಅಫ್ಜಲ್ ಗುರುವನ್ನು ಫೆ.9ರ ಬೆಳಗಿನ ಜಾವ ನವದೆಹಲಿಯಲ್ಲಿರುವ ತೀಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ಗಲ್ಲಿಗೇರಿಸಿರುವುದು ತಡವಾಗಿದೆಯಾದರೂ ಕಡೆಗೂ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸುವ ಮುಖಾಂತರ ಜಾಗತಿಕ ಭಯೋತ್ಪಾದಕರಿಗೆ ಭಾರತ ಸ್ಪಷ್ಟ ಸಂದೇಶ ರವಾನಿಸಿರುವುದು ನಿರಾಳತೆಯನ್ನು ಮೂಡಿಸಿದೆ. 2012ರ ನವೆಂಬರ್ 21ರಂದು ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಉಗ್ರ ಅಜ್ಮಲ್ ಕಬಸ್‌ನನ್ನು ಗಲ್ಲಿಗೇರಿಸಿದ ನಂತರ ನೇಣಿಗೇರುತ್ತಿರುವ ಎರಡನೇ ಉಗ್ರ ಅಫ್ಜಲ್. 
ಸಂಸತ್ ದಾಳಿ ನಡೆದ ನಂತರ ಹನ್ನೊಂದು ವರ್ಷಗಳ ಸುದೀರ್ಘ ಸಮಯ ಸಾಕಷ್ಟು ನಾಟಕೀಯ ಬೆಳವಣಿಗೆಗಳನ್ನು ಕಂಡಿದೆ. ಸಂಸತ್ ದಾಳಿ ನಡೆದ ನಂತರ ಆತನನ್ನು ಗಲ್ಲಿಗೇರಿಸುವವರೆಗೆ ನಡೆದುಬಂದ ದಾರಿಯತ್ತ ಒಂದು ಬಾರಿ ಕಣ್ಣು ಹಾಯಿಸೋಣ.
ಡಿಸೆಂಬರ್ 13, 2001 : ಐದು ಉಗ್ರರು ಸಂಸತ್ ಭವನದ ಆವರಣದೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ 9 ಜನರನ್ನು ಬಲಿ ತೆಗೆದುಕೊಂಡು, 15 ಜನರನ್ನು ಗಾಯಗೊಳಿಸಿದ್ದರು. 
ಡಿಸೆಂಬರ್ 15, 2001 : ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅಫ್ಲಲ್ ಗುರುವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಯಿತು. ನಂತರ ದೆಹಲಿ ಯುನಿವರ್ಸಿಟಿಯ ಜಾಕಿರ್ ಹುಸೇನ್ ಕಾಲೇಜಿನ ಪ್ರಾಧ್ಯಾಪಕ ಎಸ್ಎಆರ್ ಗೀಲಾನಿಯನ್ನು ವಿಚಾರಣೆಗೆ ವಶಪಡಿಸಿಕೊಂಡು ನಂತರ ಬಂಧಿಸಲಾಯಿತು. ತದನಂತರ ಶೌಕತ್ ಹುಸೇನ್ ಗುರು ಮತ್ತು ಅಫ್ಸಾನ್ ಗುರುವನ್ನು ಕೂಡ ಬಂಧಿಸಲಾಯಿತು. 
ಡಿಸೆಂಬರ್ 29, 2001 : ಅಫ್ಲಲ್ ಗುರುವನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಯಿತು. 
ಜೂನ್ 4, 2002 : ಅಫ್ಜಲ್ ಗುರು, ಗೀಲಾನಿ, ಶೌಕತ್ ಹುಸೇನ್ ಗುರು ಮತ್ತು ಅಫ್ಸಾನ್ ಗುರು ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಯಿತು. ಡಿಸೆಂಬರ್ 18, 2002 : ಎಸ್ಎಆರ್ ಗೀಲಾನಿ, ಅಫ್ಜಲ್ ಗುರು, ಶೌಕತ್ ಹುಸೇನ್ ಗುರುವಿಗೆ ಮರಣದಂಡನೆ ವಿಧಿಸಲಾಯಿತು. ಆದರೆ, ಅಫ್ಸಾನ್ ಗುರುವನ್ನು ಆರೋಪದಿಂದ ಮುಕ್ತ ಮಾಡಲಾಯಿತು. 
ಆಗಸ್ಟ್ 30, 2003 : ಸಂಸತ್ ದಾಳಿಯ ಮತ್ತೊಬ್ಬ ಪ್ರಮುಖ ಆರೋಪಿ, ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಯಕ ಗಾಝಿ ಬಾಬಾನನ್ನು ಗಡಿ ರಕ್ಷಣಾ ಪಡೆ ಶ್ರೀನಗರದಲ್ಲಿ ಹತ್ಯೆಗೈಯುತ್ತದೆ. ಹತ್ತು ಗಂಟೆಗಳ ಕಾಲ ನಡೆದ ಗುಂಡಿ ದಾಳಿಯಲ್ಲಿ ಆತನ ಜೊತೆ ಇನ್ನೂ ಮೂವರು ಉಗ್ರರು ಹತರಾಗುತ್ತಾರೆ.  
ಅಕ್ಟೋಬರ್ 29, 2003 : ಗೀಲಾನಿಗೆ ಆರೋಪದಿಂದ ಮುಕ್ತಿ. ಆಗಸ್ಟ್ 4, 2005 : ಅಫ್ಜಲ್ ಗುರುವಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ದೃಢಪಡಿಸುತ್ತದೆ. ಆದರೆ, ಶೌಕರ್ ಹುಸೇನ್ ಗುರುವಿಗೆ ವಿಧಿಸಿದ್ದ ಮರಣದಂಡನೆಯನ್ನು 10 ವರ್ಷ ಕಠಿಣ ಜೈಲು ಶಿಕ್ಷೆಗೆ ಕಡಿಮೆ ಮಾಡುತ್ತದೆ. 
ಸೆಪ್ಟೆಂಬರ್ 26, 2006 : ಅಫ್ಜಲ್ ಗುರುವನ್ನು ಗಲ್ಲಿಗೇರಿಸಬೇಕೆಂದು ದೆಹಲಿ ಕೋರ್ಟ್ ಆದೇಶ ನೀಡುತ್ತದೆ. 
ಅಕ್ಟೋಬರ್ 3, 2006 : ಅಫ್ಲಲ್ ಗುರುವಿನ ಹೆಂಡತಿ ತಬಸ್ಸುಮ್ ಗುರು ತನ್ನ ಗಂಡನಿಗೆ ಕ್ಷಮಾದಾನ ನೀಡಬೇಕೆಂದು ಆಗ್ರಹಿಸಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆಯುತ್ತಾರೆ.  
ಜನವರಿ 12, 2007 : ಗಲ್ಲು ಶಿಕ್ಷೆ ನೀಡಿದ ಆದೇಶವನ್ನು ಮರುಪರಿಶೀಲಿಸಬೇಕು ಎಂಬು ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು 'ಮೆರಿಟ್ ಇಲ್ಲ' ಎಂದು ಸುಪ್ರೀಂಕೋರ್ಟ್ ತಿರಸ್ಕರಿಸುತ್ತದೆ. 
ಮೇ 19, 2010 : ದೆಹಲಿ ಸರಕಾರ ಕೂಡ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ, ಸುಪ್ರೀಂಕೋರ್ಟ್ ಆದೇಶವನ್ನು ಪುರಸ್ಕರಿಸುತ್ತದೆ.  
ಡಿಸೆಂಬರ್ 30, 2010 : ಶೌಕತ್ ಹುಸೇನ್ ಗುರುವನ್ನು ತೀಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.  
ಡಿಸೆಂಬರ್ 10, 2012 : ಡಿಸೆಂಬರ್ 22ರಂದು ಚಳಿಗಾಲದ ಅಧಿವೇಶನ ಮುಗಿದ ಮೇಲೆ ಉಗ್ರ ಅಫ್ಜಲ್ ಗುರುವಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಹೇಳುತ್ತಾರೆ.  
ಫೆಬ್ರವರಿ 3, 2013 : ಅಫ್ಜಲ್ ಗುರು ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡ ತಿರಸ್ಕರಿಸುತ್ತಾರೆ.  
ಫೆಬ್ರವರಿ 9, 2013 : ದೆಹಲಿಯ ತೀಹಾರ್ ಜೈಲಿನಲ್ಲಿ ಬೆಳಗಿನ 8 ಗಂಟೆಗೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗುತ್ತದೆ.

Read more at: http://kannada.oneindia.in/news/2013/02/09/india-afzal-guru-hanged-the-twists-and-turns-in-case-071430.html?utm_source=Daily-Newsletter&utm_medium=Email-Newsletter&utm_campaign=09022013

ನವದೆಹಲಿ, ಫೆ.9: ಮುಂಬೈ ದಾಳಿಕೋರ ಕಸಬ್ ನನ್ನು ಸದ್ದಿಲ್ಲದೆ ಗಲ್ಲುಗೇರಿಸಿದಂತೆ ಸಂಸತ್ ಮೇಲಿನ ದಾಳಿಯ ರೂವಾರಿ 43 ವರ್ಷದ ಅಫ್ಜಲ್ ಗುರುನನ್ನು ಸಹ ಇಂದು ಬೆಳಗ್ಗೆ 8 ಗಂಟೆಯಲ್ಲಿ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ತಾಜಾ ವರದಿಗಳ ಪ್ರಕಾರ ಕೇಂದ್ರ ಗೃಹ ಕಾರ್ಯದರ್ಶಿ ಆರ್ ಕೆ ಸಿಂಗ್ ಅವರು ಅಫ್ಜಲ್ ಗುರುನನ್ನು ಇಂದು ಬೆಳಗ್ಗೆ ನೇಣಿಗೆ ಹಾಕಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನು ಕೇಳಿ ಜನ ಸಂಭ್ರಮಿಸತೊಡಗಿದ್ದಾರೆ.
2001 ಡಿಸೆಂಬರ್ 13ರಂದು ಅಧಿವೇಶನ ನಡೆಯುತ್ತಿದ್ದಾಗಲೇ 5 ಮಂದಿ ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿ, 12 ಮಂದಿಯ ಸಾವಿಗೆ ಕಾರಣವಾಗಿದ್ದ ಜೈಷೆ ಮೊಹಮದ್ ಉಗ್ರ ಸಂಘಟನೆಯ ಭಯೋತ್ಪಾದಕನೇ ಈ ಅಫ್ಜಲ್ ಗುರು. ವೈದ್ಯ ಪದವಿ ಪಡೆದಿದ್ದ ಅಫ್ಜಲ್ ಗುರು, ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದ. ಆದರೆ ಭಯೋತ್ಪಾದನೆಯ ಜಾಲದಲ್ಲಿ ಸಿಕ್ಕಿಬಿದ್ದ. 
ಕೇಂದ್ರ ಗೃಹ ಸಚಿವಾಲಯದಿಂದಾಗಲಿ ಅಥವಾ ತಿಹಾರ್ ಜೈಲಿನ ಅಧಿಕಾರಿಗಳಾಗಲಿ ಅಫ್ಜಲ್ ಗುರುನನ್ನು ಗಲ್ಲಿಗೆ ಏರಿಸಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವುದನ್ನುತಡಮಾಡಿತಾದರೂ ಇದೀಗ ಖಚಿತಪಡಿಸಿದೆ. ಕಸಬ್ ವಿಷಯದಲ್ಲೂ ಸರಕಾರ ಇಂತಹುದೇ ನಿರ್ಧಾರ ತೆಗೆದುಕೊಂಡಿತ್ತು ಎಂಬುದು ಗಮನಾರ್ಹ. 
ಜನವರಿ 26ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಫ್ಜಲ್ ಗುರು ಕೋರಿದ್ದ ಗಲ್ಲು ರದ್ದು ಕೋರಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. 
2004ರಲ್ಲಿ ಸುದೀರ್ಘ ವಿಚಾರಣೆಯ ನಂತರ ಸುಪ್ರೀಂಕೋರ್ಟ್ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಕಾಯಂ ಮಾಡಿತ್ತು.

Read more at: http://kannada.oneindia.in/news/2013/02/09/india-indian-parliament-attacker-afzal-guru-hanged-feb-9-071424.html?utm_source=Daily-Newsletter&utm_medium=Email-Newsletter&utm_campaign=09022013

ಕಾನ್ ಖೋಲ್ಕರ್ ಕೇಳಿಸಿಕೊಳ್ಳಿ…ಮಿಸ್ಟರ್ ಖಾನ್!

My Name Is Khan. ಕಳೆದ ವಾರ ಬಿಡುಗಡೆಯಾದ ಈ ಚಿತ್ರವನ್ನು ಒಂದೇ ಪದದಲ್ಲಿ ವರ್ಣಿಸುವುದಾದರೆ ‘Horrible’. ಎರಡು ಪದಗಳಲ್ಲಿ ಹೇಳುವುದಾದರೆ ‘Bull shit’, ಮೂರು ಪದಗಳಲ್ಲಿ ವಿಮರ್ಶಿಸುವುದಾದರೆ ‘It’s a torture’, ನಾಲ್ಕು ಪದಗಳಲ್ಲಿ ಷರಾ ಬರೆಯುವುದಾದರೆ, ‘Pain in the ass’! ಮೂರು ತಾಸು ಕುಳಿತು ನೋಡಿ, ಹೀಗನಿಸದೇ ಹೋದರೆ ಹೇಳಿ. ಬೆಂಗಳೂರಿನ ಊರ್ವಶಿ ಥಿಯೇಟರ್‌ಗೆ ‘ಅವತಾರ್’ ಚಿತ್ರ ನೋಡಲು ಕಳೆದ ಬಾರಿ ಹೋದಾಗ ಒಂದು ಕಪ್ ಕೋಕ್ ಹಾಗೂ ಪಾಪ್ ಕಾರ್ನ್ ಫ್ರೀ ಕೊಟ್ಟಿದ್ದರು. ಅದೇ ಥಿಯೇಟರ್‌ನಲ್ಲಿ ಮೂರು ತಾಸು ‘ಮೈ ನೇಮ್ ಈಸ್ ಖಾನ್’ ಈ ಚಿತ್ರವನ್ನು ನೋಡಿದ ನಂತರ ಏನನ್ನಿಸುತ್ತದೆಯೆಂದರೆ-ಟಿಕೆಟ್ ಜತೆಗೊಂದು ಅನಾಸಿನ್ ಏಕೆ ಕೊಡಲಿಲ್ಲ?
ಇಂಥದ್ದೊಂದು ಕೆಟ್ಟ ಚಿತ್ರವನ್ನೂ, ಬಿಡುಗಡೆ ಮುನ್ನಾದಿನವಾದ ಫೆಬ್ರವರಿ 11ರಂದು ‘Go, watch MNIK’, “Give an answer to Shiv sena’ ಅಂತ ‘ಎನ್‌ಡಿಟಿವಿ’ಯಲ್ಲಿ ಬರ್ಖಾ ದತ್ ಹಾಗೂ ‘ಸಿಎನ್‌ಎನ್-ಐಬಿಎನ್’ನಲ್ಲಿ ರಾಜ್‌ದೀಪ್ ಸರ್ದೇಸಾಯಿ  ಹೇಳುತ್ತಿದ್ದುದನ್ನು ನೀವೇನಾದರೂ ನೋಡಿದ್ದರೆ ಮಾಧ್ಯಮಗಳು ಜನರನ್ನು ಹೇಗೆ ದಾರಿ ತಪ್ಪಿಸುತ್ತಿವೆ ಎಂದನಿಸದೇ ಇರದು. ಎರಡೂ ವರೆ ತಿಂಗಳ ಹಿಂದಷ್ಟೇ, “ಸುದ್ದಿಗೂ ಕಾಸು” (Paid News) ತೆಗೆದುಕೊಳ್ಳುತ್ತಿರುವ ಮಾಧ್ಯಮಗಳ ಹುಳುಕಿನ ಬಗ್ಗೆ ಗರತಿಯಂತೆ ಬರೆದಿದ್ದ ಸರ್ದೇಸಾಯಿ ‘ಮೈ ನೇಮ್ ಈಸ್ ಖಾನ್’ ವಿಚಾರದಲ್ಲಿ ಮಾಡಿದ್ದು ಎಂತಹ ‘ಘನ’ ಕಾರ್ಯ ಎಂಬ ಅನುಮಾನ ಕಾಡಲಾರಂಭಿಸುತ್ತದೆ.
ಅಷ್ಟಕ್ಕೂ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲೇನಿದೆ?
Mr. President(Bush), my name is KHAN. But I am not a terrorist… ಮಿಸ್ಟರ್ ಪ್ರೆಸಿಡೆಂಟ್, ನನ್ನ ಹೆಸರು ಖಾನ್. ಆದರೆ ನಾನು ಭಯೋತ್ಪಾದಕನಲ್ಲ… ಈ ಡೈಲಾಗ್ ಚಿತ್ರದುದ್ದಕ್ಕೂ ಅದೆಷ್ಟು ಬಾರಿ ಪುನರಾವರ್ತನೆಯಾಗುತ್ತದೆಯೆಂದರೆ ಕಿರಿಕಿರಿ, ಅಸಹ್ಯ, ವಾಕರಿಕೆ ಎಲ್ಲವೂ ಶುರುವಾಗುತ್ತವೆ.  ‘ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ’ ಎಂಬ ಒಂದು ಸಾಲಿನ ಸಂದೇಶ ಸಾರಲು ಮೂರು ತಾಸಿನ ಚಿತ್ರ ಮಾಡಿದ್ದಾರೆ. ಅಷ್ಟಕ್ಕೂ ಮುಸ್ಲಿಮರೆಲ್ಲ ಭಯೋತ್ಪಾದಕರು ಎಂದು ಹೇಳಿರುವುದಾದರೂ ಯಾರು? ಎಂತಹ ದಡ್ಡನೂ ಹಾಗೆ ಹೇಳುವುದಿಲ್ಲ. ಆದರೂ ಈ ಶಾರುಖ್‌ಗೇಕೆ ‘ಎಜ್ಝಿಠಿ’ ಕಾಡುತ್ತಿದೆ? ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ ಎಂದು ಬೊಬ್ಬೆ ಹಾಕುವ ಅಗತ್ಯವೇನಿದೆ? ಅಥವಾ ಅಂತಹ ಅಗತ್ಯ ಬಂದಿದ್ದಾದರೂ ಏಕೆ?
ಒಟ್ಟಾರೆಯಾಗಿ ಮುಸ್ಲಿಮರನ್ನೆಲ್ಲಾ, “ಖಾನ್” ಎಂಬ ಸರ್‌ನೇಮ್ ಇದ್ದವರನ್ನೆಲ್ಲಾ ಅಮೆರಿಕ ಭಯೋತ್ಪಾದಕರಂತೆ ನೋಡುತ್ತಿದೆ ಎಂದು ಚಿತ್ರದಲ್ಲಿ ತೋರಿಸಿದ್ದೀರಲ್ಲಾ, 2001, ಸೆಪ್ಟೆಂಬರ್ 11 ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿ 2995 ಅಮಾಯಕ ಜನರನ್ನು ಕೊಂದುಹಾಕಿದ ಮಹಮದ್ ಅಟ್ಟಾ, ಅಬ್ದುಲಜೀಜ್ ಅಲೊಮರಿ, ಮಜೀದ್ ಮಕೀಬ್, ನವಾಬ್ ಅಲ್‌ಹಝ್ಮಿ, ಫಯೀದ್ ರಶೀದ್, ಮೊಹಮದ್ ಅಲ್‌ಗಮ್ದಿ, ಹಮ್ಝಾ ಅಲ್‌ಗಮ್ದಿ, ಖಾಲಿದ್ ಅಲ್ಮಿದಾರ್ ಯಾರು? ಇವರಿಗೆ ಬೆಂಬಲ ಕೊಟ್ಟಿದ್ದು, ಹಣ ಸಹಾಯ ಮಾಡಿದ್ದು ಯಾವ ದೇಶಗಳು? ಆ ದಾಳಿಯ ನಂತರವೇ ಅಲ್ಲವೆ ಅಮೆರಿಕ ಮುಸ್ಲಿಮರನ್ನು ಅನುಮಾನದಿಂದ ಕಾಣಲು ಶುರು ಮಾಡಿದ್ದು? ಹಲೋ ಮಿಸ್ಟರ್ ಶಾರುಖ್ ಖಾನ್, ನಿಮ್ಮ ಚಿತ್ರ ಬಿಡುಗಡೆಯಾದ ಮರುದಿನ ಪುಣೆಯಲ್ಲಿ ನಡೆದ ಆರ್‌ಡಿಎಕ್ಸ್ ಸ್ಫೋಟದಲ್ಲಿ 11 ಜನ ಸತ್ತರು. ಅವರನ್ನು ಕೊಂದಿದ್ದಾರು? ಹೈದರಾಬಾದ್‌ನ ಲುಂಬಿನಿ ಗಾರ್ಡನ್‌ನಲ್ಲಿ ಬಾಂಬ್ ಸ್ಫೋಟ, ಕೊಯಮತ್ತೂರು ಬ್ಲಾಸ್ಟ್, ಅಹಮದಾಬಾದ್, ಸೂರತ್ ಬಾಂಬ್ ಸ್ಫೋಟ, ಸ್ಟೇನ್‌ನಲ್ಲಿ ಟ್ರೇನ್ ಬಾಂಬಿಂಗ್, ಲಂಡನ್ ಬಾಂಬಿಂಗ್, ಅಕ್ಷರಧಾಮ ಅಟ್ಯಾಕ್, ಪಾರ್ಲಿಮೆಂಟ್ ಅಟ್ಯಾಕ್, ಮುಂಬೈ ಅಟ್ಯಾಕ್ ಯಾರು ಮಾಡಿದ್ದು? ಆ ದಯಾಮಯಿ ದೇವರ ಹೆಸರು ಹೇಳಿಕೊಂಡು ಆತಂಕವಾದ ಮಾಡುತ್ತಿರುವುದು ಯಾರು? ಅನ್ಯಧರ್ಮೀಯರ ಮಕ್ಕಳು, ಮಹಿಳೆಯರ ಮೇಲೆ ಆಕ್ರಮಣ ಮಾಡುವ ಹೀನಕೃತ್ಯವೆಸಗುತ್ತಿರುವುದು ಯಾರಪ್ಪಾ? ನಿಮ್ಮ “ಖಾನ್” ಹೆಸರು ಕೇಳಿದ ಕೂಡಲೇ ‘ಕಾನ್’ಗಳು(ಕಿವಿ) ಅರಳಿ ಅನುಮಾನ ಪಡುತ್ತಾರೆ ಎಂಬುದೇ ನಿಮಗೆ ಒಂದು ದೊಡ್ಡ ಅವಮಾನ ಎಂದು ಭಾವಿಸುವುದಾದರೆ ನಿಮ್ಮ ಧರ್ಮೀಯರ ಬಾಂಬ್ ದಾಳಿಗೆ ಸಿಲುಕಿ ಅಪ್ಪ-ಅಮ್ಮನನ್ನು, ಹೆಂಡತಿ-ಮಕ್ಕಳನ್ನು ಕಳೆದುಕೊಂಡ ಒಬ್ಬ ಸಾಮಾನ್ಯ ವ್ಯಕ್ತಿಯ ನೋವು, ಹತಾಶೆ ಏನಿರಬಹುದು ಯೋಚನೆ ಮಾಡಿದ್ದೀರಾ? ಅನ್ಯ ಧರ್ಮೀಯರ ಮಕ್ಕಳನ್ನು ಕೊಲ್ಲುವಾಗ ಅವರಿಗೂ ನೋವಾಗುತ್ತದೆ ಎಂದು ಏಕೆ ನಿಮಗೆ ಅರ್ಥವಾಗುವುದಿಲ್ಲ? ಇಸ್ರೇಲ್, ಅಮೆರಿಕದ ವಿಷಯ ಬಿಡಿ, ಭಾರತೀಯರಾದ ನಾವು ನಿಮಗೇನು ಮಾಡಿದ್ದೇವೆ? ಏಕೆ ರಸ್ತೆ, ರೆಸ್ಟೋರೆಂಟ್, ಮನೆ, ಮಾರುಕಟ್ಟೆಗಳಲ್ಲಿ ಬಾಂಬ್ ಸಿಡಿಸಿ ಕೊಲ್ಲುತ್ತಾರೆ? ಹಾಗೆ ಕೊಲ್ಲುತ್ತಿರುವವರಾರು? ಮುಲ್ಲಾ ಉಮರ್, ಒಸಾಮಾ ಬಿನ್ ಲಾಡೆನ್, ಮೊಹಮದ್ ಅಲ್ ಝರ್ಖಾವಿ, ಇಲ್ಯಾಸ್ ಕಶ್ಮೀರಿ ಯಾವ ಧರ್ಮದವರು? ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎಂದು ಸಮಾಜಾಯಿಷಿ ಕೊಡುವುದಾದರೆ ಅವರನ್ನೇಕೆ ‘Own’ ಮಾಡಿಕೊಳ್ಳುತ್ತೀರಿ? ಮೈ ನೇಮ್ ಈಸ್ ಖಾನ್ ಚಿತ್ರ ಭಾರತದಲ್ಲಿ ಫ್ಲಾಪ್ ಆದರೂ ಪಾಕಿಸ್ತಾನ, ಬ್ರಿಟನ್, ಅರಬ್ ರಾಷ್ಟ್ರಗಳಲ್ಲಿ ಫುಲ್‌ಹೌಸ್ ನಡೆಯುತ್ತಿದೆ. ಏಕೆ? ಲಾಡೆನ್, ಮುಲ್ಲಾ ಉಮರ್‌ನ ಪೋಸ್ಟರ್‌ಗಳನ್ನಿಟ್ಟುಕೊಂಡು ಕರಾಚಿ, ಇಸ್ಲಾಮಾಬಾದ್, ಢಾಕಾಗಳಲ್ಲಿ ಹಣ ಸಂಗ್ರಹಣೆ ಮಾಡುವುದು ಎಂತಹ ಮನಸ್ಥಿತಿ? ಸಮಾಜಘಾತಕರನ್ನು ಹೀರೋಗಳೆಂಬಂತೆ ಬಿಂಬಿಸುತ್ತಿರುವವವರು ಯಾರು? ಅನುಮಾನಪಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿರುವವರಾರು? ಈ ಜಗತ್ತಿನಲ್ಲಿ ಸಾವಿರಾರು ಜಾತಿ, ವರ್ಗ, ಪಂಗಡ, ಧರ್ಮಗಳಿವೆ. ಅವುಗಳಲ್ಲೂ ಮನುಕುಲಕ್ಕೆ ಕಂಟಕವಾದ ವ್ಯಕ್ತಿಗಳಿದ್ದಾರೆ. ಆದರೆ ಯಾವ ಒಂದು ನಿರ್ದಿಷ್ಟ ಸಮುದಾಯವನ್ನೂ ಅನುಮಾನದಿಂದ ಕಾಣದೇ ಮುಸ್ಲಿಮರನ್ನು ಮಾತ್ರ ಶಂಕೆಯಿಂದ ನೋಡುವುದೇಕೆ?
ಖಂಡಿತ ಹಿಂದೂಗಳಲ್ಲೂ ದೇಶದ್ರೋಹಿಗಳು, ಸಮಾಜಘಾತಕರು ಸಾಕಷ್ಟು ಜನರಿದ್ದಾರೆ. ಹಿಂಸೆಯನ್ನು ಭಯೋತ್ಪಾದನೆ ಎನ್ನುವುದಾದರೆ ನಕ್ಸಲರೂ ಭಯೋತ್ಪಾದಕರೇ. ನಕ್ಸಲರೆಲ್ಲ ಹಿಂದೂಗಳೇ ಆಗಿದ್ದಾರೆ. ಆದರೆ ಯಾವ ಹಿಂದೂ ಕೂಡ ನಕ್ಸಲರನ್ನು ‘ನಮ್ಮವನು’ ಎಂದು Own ಮಾಡಿಕೊಳ್ಳುವುದಿಲ್ಲ. ಅವರನ್ನು ಸಮಾಜಘಾತಕ ಶಕ್ತಿಗಳು, ಬಂದೂಕಿನ ಪ್ರಯೋಗದಿಂದಲೇ ಅವರನ್ನು ಮಟ್ಟಹಾಕ ಬೇಕು ಎನ್ನುತ್ತೇವೆ. ‘ಆಪರೇಶನ್ ಗ್ರೀನ್ ಹಂಟ್’ ಎಂಬ ಗೌಪ್ಯ ಕಾರ್ಯಾಚರಣೆಯ ಮೂಲಕ ಸದ್ದಿಲ್ಲದೆ ನಕ್ಸಲರನ್ನು ಕೊಲ್ಲುತ್ತಿರುವುದೂ ಹಿಂದೂ ಸೈನಿಕರೇ. ಆದರೆ ಪಾಕಿಸ್ತಾನಿ ಸೈನಿಕರು, ಐಎಸ್‌ಐ ಏಕೆ  ಜಿಹಾದಿಗಳಿಗೆ ಬೆಂಬಲ ಕೊಡುತ್ತಾರೆ? ಇದೆಂಥಾ ಮನಸ್ಥಿತಿ? ಫಿಲಿಪ್ಪೀನ್ಸ್, ಥಾಯ್ಲೆಂಡ್, ಚೀನಾ, ಅಮೆರಿಕ, ಬ್ರಿಟನ್ ಎಲ್ಲ ದೇಶಗಳಲ್ಲೂ ಪ್ರತ್ಯೇಕತೆಯನ್ನು ಹುಟ್ಟುಹಾಕಿರುವವರು, ಧರ್ಮಕ್ಕಾಗಿ ಅಮಾಯಕರ ಮೇಲೆ ಬಾಂಬ್ ದಾಳಿ ಮಾಡಿ ಕೊಲ್ಲುತ್ತಿರುವವರು ಯಾವ ಧರ್ಮದವರು? ಯಾವ ಆಧಾರದ ಮೇಲೆ ಫಿಲಿಪ್ಪೀನ್ಸ್, ಥಾಯ್ಲೆಂಡ್‌ನ ಕೆಲ ಭಾಗಗಳು ಹಾಗೂ ಚೀನಾದ ಕ್ಷಿನ್‌ಜಿಯಾಂಗ್ ಪ್ರಾಂತ್ಯ ತಮಗೆ ಸೇರಬೇಕೆಂದು ಇಸ್ಲಾಮಿಕ್ ಭಯೋತ್ಪಾದಕರು ಪ್ರತಿಪಾದಿಸುತ್ತಿದ್ದಾರೆ? ನೀವು ಬಹುಸಂಖ್ಯಾತರಾಗುತ್ತಾ ಹೋಗುವ ಒಂದೊಂದೇ ಜಿಲ್ಲೆ, ರಾಜ್ಯಗಳಲ್ಲೂ ಪ್ರತ್ಯೇಕತಾ ಚಳವಳಿ ಆರಂಭಿಸುವುದಿಲ್ಲ ಎಂಬು ದಕ್ಕೆ ಖಾತ್ರಿಯೇನು? ಅಷ್ಟಕ್ಕೂ ಕಾಶ್ಮೀರವನ್ನು ಪಾಕಿಸ್ತಾನ ತನ್ನ ದೆಂದು ಯಾವ ಆಧಾರದ ಮೇಲೆ ಪ್ರತಿಪಾದಿಸುತ್ತಿದೆ ಹಾಗೂ ಕಾಶ್ಮೀರಿಗರು ಪ್ರತ್ಯೇಕಗೊಳ್ಳಬೇಕೆಂದು ಯಾವ ಆಧಾರದ ಮೇಲೆ ಹೋರಾಟಕ್ಕಿಳಿದಿದ್ದಾರೆ? ಇಲ್ಲೆಲ್ಲಾ ನಿಮ್ಮ ತಲೆಯಲ್ಲಿ ಕೆಲಸ ಮಾಡು ತ್ತಿರುವುದು ಧಾರ್ಮಿಕ ಭಾವನೆಯೇ ಅಲ್ಲವೆ? ಮುಸ್ಲಿಮರು ಬಹುಸಂಖ್ಯಾತರಾದರೆ ಉಳಿದವರ ಕಥೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರಕ್ಕಿಂತ ದೊಡ್ಡ ಉದಾಹರಣೆ ಬೇಕೆ?
ಮ್ಯಾಚ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಾಗ ಅಜರುದ್ದೀನ್‌ನನ್ನು ಹೇಗೆ ಮನಸ್ಸಿನಿಂದ ಕಿತ್ತುಹಾಕಿದೆವೋ ಅಜಯ್ ಜಡೇಜಾ, ನಿಖಿಲ್ ಚೋಪ್ರಾನನ್ನೂ ಅಷ್ಟೇ ನಿರ್ದಯವಾಗಿ ಆಚೆ ಹಾಕಿದೆವು. ಅಜಯ್ ಜಡೇಜಾ ಆರೋಪ ಮುಕ್ತನಾಗಿ ಹೊರಬಂದರೂ ನಮ್ಮ ಅನುಮಾನ ಹೋಗಲಿಲ್ಲ. ಆದರೆ ಅಜರ್ ಮಾಡಿದ್ದೇನು? ಆರೋಪವನ್ನು ತಳ್ಳಿಹಾಕಿ ವಿಚಾರಣೆ ಎದುರಿಸುವ ಬದಲು, ಕೋರ್ಟ್ ಮೊರೆ ಹೋಗುವ ಬದಲು ಸಿಕ್ಕಿಹಾಕಿಕೊಂಡ ಕೂಡಲೇ ‘ನಾನು ಮುಸ್ಲಿಮನೆಂಬ ಕಾರಣಕ್ಕೆ ಬಲಿಪಶು ಮಾಡಲಾಗು ತ್ತಿದೆ’ ಎಂದಿದ್ದರು! ಆ ಮೂಲಕ ತಾನೊಬ್ಬ ದೇಶದ್ರೋಹಿ ಎಂದು ಒಪ್ಪಿಕೊಂಡರು. ಅಂತಹ ದೇಶದ್ರೋಹಿಯನ್ನು ಇವತ್ತು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದ್ದು ಯಾರು? ಹೈದರಾಬಾದ್‌ನ ಅಜರ್‌ನನ್ನು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಚುನಾವಣೆಗೆ ನಿಲ್ಲಿಸಿದ್ದೇಕೆ? ಮೊರಾದಾಬಾದ್‌ನಲ್ಲಿ ಮುಸ್ಲಿಮರೇ ಬಹುಸಂಖ್ಯಾತರು ಎಂಬ ಕಾರಣಕ್ಕಲ್ಲವೆ? ಆತ್ಮಾವಲೋಕನ ಮಾಡಿಕೊಳ್ಳಬೇಕು ಎನಿಸುತ್ತಿಲ್ಲವೆ? ಹಿಂದೂಗಳೂ ಕೂಡ ದರೋಡೆಕೋರರನ್ನು, ಮೋಸಗಾರರನ್ನು ಗೆಲ್ಲಿಸಿದ ಉದಾಹರಣೆಗಳು  ಇವೆ. ಆದರೆ ದೇಶ ದ್ರೋಹಿಯೊಬ್ಬನನ್ನು ಎಂದಾದರೂ ಗೆಲ್ಲಿಸಿದ್ದಾರಾ? ಇಲ್ಲಿ ಒಂದು ಸಮುದಾಯದ ‘Ghetto Mentality’ ಕಾಣುವುದಿಲ್ಲವೆ?
೨೦೦೨ರಲ್ಲಿ ನಡೆದ ಗುಜರಾತ್ ಹಿಂಸಾಚಾರದ ಬಗ್ಗೆ ರಾಕೇಶ್ ಶರ್ಮಾ, ರಾಹುಲ್ ಧೋಲಾಕಿಯಾ ಮುಂತಾದ ಹಿಂದೂಗಳೇ ಮೋದಿ ಸರಕಾರ ಹಾಗೂ ಹಿಂದೂ ಕಟ್ಟರ್ ಪಂಥೀಯರನ್ನು ಟೀಕಿಸಿ ಸಾಕ್ಷ್ಯಚಿತ್ರ ಹಾಗೂ ಚಲನಚಿತ್ರಗಳನ್ನು ರೂಪಿಸಿದರು. ಗುಜರಾತ್ ಹಿಂಸಾಚಾರದಲ್ಲಿ ಸತ್ತ ಮುಸ್ಲಿಮರ ಸಂಖ್ಯೆ 700. ಕಾಶ್ಮೀರದಲ್ಲಿ ಮುಸ್ಲಿಮರ ಉಗ್ರವಾದಕ್ಕೆ ಬಲಿಯಾದವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು. 7 ಲಕ್ಷ ಹಿಂದೂಗಳು ಇಂದಿಗೂ ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಅವರ ಬಗ್ಗೆ ಯಾವ ಮುಸ್ಲಿಮರು ಒಂದು ಸಾಕ್ಷ್ಯಚಿತ್ರ, ಚಲನಚಿತ್ರ ಮಾಡಿದ್ದಾರೆ? ಐಪಿಎಲ್ ಆಯ್ಕೆ ಸಂಬಂಧ ಭುಗಿಲೆದ್ದ ವಿವಾದದ ಬೆನ್ನಲ್ಲೇ, “Pakistanis are good neighbours” ಎಂದು ಹೇಳಿಕೆ ನೀಡಿದಿರಲ್ಲಾ ಶಾರುಖ್ ಖಾನ್, ಹಾಗೆನ್ನಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ? 2008, ಸೆಪ್ಟೆಂಬರ್ 26ರಂದು ಮುಂಬೈ ಮೇಲೆ ದಾಳಿ ಮಾಡಿ 183ರನ್ನು ಹತ್ಯೆ ಮಾಡಿದವರು ಯಾವ ದೇಶದವರು? ಕಸಬ್ ಎಲ್ಲಿಯವನು? ಭಾರತದಲ್ಲಿ ಇದುವರೆಗೂ ನಡೆದಿರುವ ಬಾಂಬ್ ಸ್ಫೋಟಗಳಿಗೆಲ್ಲ ಯಾವ ರಾಷ್ಟ್ರ ಕಾರಣ? ಐಪಿಎಲ್ ಗಲಾಟೆಯ ನಂತರ ಪಾಕಿಸ್ತಾನದ ವೇಗದ ಬೌಲರ್ ಸೊಹೈಲ್ ತನ್ವೀರ್ ಪಾಕಿಸ್ತಾನಿ ಮಾಧ್ಯಮಗಳ ಮುಂದೆ ಹೇಳಿದ್ದೇನು ಗೊತ್ತೆ? ಏಕೆ ಪಾಕಿಸ್ತಾನಿಯರನ್ನು ಆಯ್ಕೆ ಮಾಡಲಿಲ್ಲ ಎಂದು ಕೇಳಿದ್ದಕ್ಕೆ, “ಹಿಂದೂಗಳ ಝೆಹಿನಿಯತ್ (ಹುಟ್ಟುಗುಣವೇ) ಅಂಥದ್ದು” ಎಂದಿದ್ದಾರೆ! ಅದಕ್ಕೆ ಧ್ವನಿಗೂಡಿಸಿದ ಪಾಕಿಸ್ತಾನಿ ಪತ್ರಕರ್ತನೊಬ್ಬ, “ಬಾಯಲ್ಲಿ ರಾಮ್ ರಾಮ್, ಬಗಲಲ್ಲಿ ಚೂರಿ” ಎಂದು ಹಿಂದೂಗಳನ್ನು ಟೀಕಿಸಿದ.  ‘ಸಾಮ್ನಾ’ದಲ್ಲಿ ಬಾಳಾ ಠಾಕ್ರೆ ಬರೆಯುವ ಒಂದೊಂದು ಸಾಲನ್ನೂ ದೊಡ್ಡ ವಿವಾದವನ್ನಾಗಿ ಪರಿವರ್ತಿಸುವ ಭಾರತದ ಸೆಕ್ಯುಲರ್ ಮಾಧ್ಯಮಗಳು  ಸೊಹೈಲ್ ತನ್ವೀರ್‌ನ ಅವಹೇಳನಕಾರಿ ಮಾತುಗಳನ್ನು ವ್ಯವಸ್ಥಿತವಾಗಿ ಮರೆಮಾಚಿದವು ಎಂಬುದು ಬೇರೆ ಮಾತು. ಆದರೆ ನಿಮ್ಮ ‘ಮೈ ನೇಮ್ ಈಸ್ ಖಾನ್’ ಚಿತ್ರವನ್ನು ಪ್ರಮೋಟ್ ಮಾಡಲು ಹಗಲೂ ರಾತ್ರಿ ‘Tweete’ ಮಾಡುತ್ತೀರಲ್ಲಾ ಶಾರುಖ್ ಖಾನ್, ಸ್ವಲ್ಪ ‘ಯು ಟ್ಯೂಬ್’ಗೆ ಹೋಗಿ ಸೊಹೈಲ್ ತನ್ವೀರ್‌ನ ಮಾತುಗಳನ್ನು ಕಿವಿಯಾರೆ ಕೇಳಿ, ಕಣ್ಣಾರೆ ನೋಡಿ… ಇಂತಹ ಮನಸ್ಥಿತಿ ಹೊಂದಿದವ ರಿಂದಲೇ ಹೆಚ್ಚಾಗಿ ಕೂಡಿರುವ ರಾಷ್ಟ್ರದ ಜನರನ್ನು ಯಾವ ಆಧಾರದ ಮೇಲೆ, ‘ಪಾಕಿಸ್ತಾನಿಯರು ಒಳ್ಳೆಯ ನೆರೆಹೊರೆಯವರು’ ಎನ್ನುತ್ತಿದ್ದೀರಿ?
ನಿಮ್ಮದು ನಿಜಕ್ಕೂ ಸಂಕುಚಿತ ಮನಸ್ಥಿತಿ.
ಶ್ರೀಲಂಕಾದಲ್ಲಿ ನಮ್ಮದೇ ಆದ ತಮಿಳರು ಪ್ರತ್ಯೇಕತಾ ಚಳವಳಿ ಆರಂಭಿಸಿದಾಗ ನಾವೆಂದೂ ಬೆಂಬಲ ನೀಡಲಿಲ್ಲ. ತಮಿಳುನಾಡಿನಲ್ಲಿ ರಾಜಕೀಯ ಕಾರಣಕ್ಕೆ ಗಲಾಟೆ, ಮುಷ್ಕರಗಳಾಗಿರಬಹುದು. ಆದರೆ ಪ್ರಭಾಕರನ್‌ನ ಮಟ್ಟಹಾಕಲು 1987ರಲ್ಲಿ ನಮ್ಮದೇ ಸೇನೆಯನ್ನು ಕಳುಹಿಸಿದ್ದೆವು. ಅದರ ವಿರುದ್ಧ ತಮಿಳಿಗರು ಬಿಟ್ಟರೆ ಒಟ್ಟಾರೆ ಹಿಂದೂ ಸಮಾಜ ಎಂದೂ ಪ್ರತಿಭಟನೆ ಮಾಡಲಿಲ್ಲ. ಆದರೆ ಇಸ್ರೇಲ್‌ನಲ್ಲೋ, ಇರಾಕ್‌ನಲ್ಲೋ ಗಲಾಟೆಯಾದರೆ ನೀವು ಭಾರತದಲ್ಲಿ ಏಕೆ ಬೊಬ್ಬೆ ಹಾಕುತ್ತಾರೆ, ಬಸ್ಸಿಗೆ ಕಲ್ಲು ಹೊಡೆಯುತ್ತಾರೆ?
ಮೈ ನೇಮ್ ಈಸ್ ಖಾನ್ ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅಮೆರಿಕದ ಅಧ್ಯಕ್ಷರ ಜತೆ ಔತಣಕೂಟ ಏರ್ಪಾಡಾಗಿರುತ್ತದೆ. ಆದರೆ ಪ್ರವೇಶ ಶುಲ್ಕವಾಗಿ 500 ಡಾಲರ್ ನೀಡಬೇಕಿರುತ್ತದೆ. ಶಾರುಖ್ ಖಾನ್ ಹಣ ಕೊಟ್ಟು ಪ್ರವೇಶ ಪಡೆಯಲು ಹೋದಾಗ, ‘Honey, this is only for Christians’ ಎಂದು ಅಲ್ಲಿದ್ದಾಕೆ ಹೇಳುತ್ತಾಳೆ! ಕ್ರೈಸ್ತರು ಎಲ್ಲಾದರೂ, ಎಂದಾದರೂ ನಿಧಿ ಸಂಗ್ರಹಣೆ ಕಾರ್ಯಕ್ರಮವೊಂದನ್ನು ‘For Christians Only’ ಎಂದು ನಿರ್ಬಂಧಿಸಿರುವುದನ್ನು ನೋಡಿದ್ದೀರಾ? ಮತಾಂತರದ ವಿಷಯ ದಲ್ಲಿ ನಾವೆಷ್ಟೇ ದೂರಿದರೂ ಉದಾರತೆ ವಿಷಯದಲ್ಲಿ ಕ್ರೈಸ್ತರ ಬಗ್ಗೆಯಾಗಲಿ, ಕ್ರೈಸ್ತ ಸಂಸ್ಥೆಗಳ ಬಗೆಗಾಗಲಿ ಯಾರೂ ಬೆರಳು ತೋರಲು ಸಾಧ್ಯವಿಲ್ಲ. ಇಷ್ಟಾಗಿಯೂ ಕ್ರೈಸ್ತರನ್ನು ಕೀಳಾಗಿ ಚಿತ್ರಿಸುವ ಅಗತ್ಯವೇನಿತ್ತು? ಇವತ್ತು ಯಾವುದೋ ಒಂದು ಧರ್ಮೀಯರು ನಿಮ್ಮ ಬಗ್ಗೆ ಅನುಮಾನಪಡುತ್ತಿಲ್ಲ. ಜಗತ್ತೇ ಶಂಕೆಯಿಂದ ನೋಡು ತ್ತಿದೆ, ಏಕೆ?
‘ಮೈ ನೇಮ್ ಈಸ್ ಖಾನ್’ ಬಿಡುಗಡೆಗೆ ಮೊದಲು ಎದ್ದಿದ್ದ ವಿವಾದದ ಹಿನ್ನೆಲೆಯಲ್ಲಿ ಎನ್‌ಡಿಟಿವಿಯಲ್ಲಿ ನಡೆದ ಸಂದರ್ಶನದ ವೇಳೆ, ‘ಶಾರುಖ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಗಲಾಟೆ ಮಾಡುತ್ತಿದ್ದೀರಾ?’ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆಯನ್ನು ಬರ್ಖಾ ದತ್ ಕೇಳುತ್ತಿದ್ದರು. ಒಂದು ವೇಳೆ ಹಿಂದೂಗಳೇನಾದರೂ ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್‌ಗಳನ್ನು ಮುಸ್ಲಿಮರೆಂಬಂತೆ ಕಂಡಿದ್ದರೆ ಏನಾಗಿರುತ್ತಿತ್ತು? ಸೂಪರ್‌ಸ್ಟಾರ್‌ಗಳಾಗುವುದು ಬಿಡಿ, ಕಿರುತೆರೆ ನಟರೂ ಆಗಿರುತ್ತಿರಲಿಲ್ಲ. ಶಾರುಖ್ ಖಾನ್ ಇವತ್ತು ದೊಡ್ಡ ಹೀರೋ ಆಗಿದ್ದರೆ ಅದಕ್ಕೆ ಹಿಂದೂಗಳ ಪ್ರೀತಿ, ವಿಶ್ವಾಸವೂ ಕಾರಣ. ಅಷ್ಟಕ್ಕೂ ನಾವು ಶಾರುಖ್, ಆಮೀರ್, ಸಲ್ಮಾನ್, ಬಿಸ್ಮಿಲ್ಲಾ ಖಾನ್, ಅಮ್ಜದ್ ಅಲಿ ಖಾನ್, ಎ.ಆರ್. ರೆಹಮಾನ್, ಅಲ್ಲಾ ರಖಾ ಹಾಗೂ ಅಬ್ದುಲ್ ಕಲಾಂ ಅವರನ್ನು ಭಾರತೀಯರೆಂಬಂತೆ ಕಂಡಿದ್ದೇವೆಯೇ ಹೊರತು ಮುಸ್ಲಿಮರೆಂದಲ್ಲ. ನಮಗೆಂದೂ ಅವರ ಧರ್ಮ ಮುಖ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಇಷ್ಟೆಲ್ಲಾ ಬರೆಯಬೇಕಾಯಿತು. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಇಂಥದ್ದೊಂದು ಚಿತ್ರ ಮಾಡಿದ್ದರೆ ನಾವೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಶಾರುಖ್ ಖಾನ್ ಒಬ್ಬ ಜನಪ್ರಿಯ ನಟ. ಆತ ಹೇಳಿದ್ದನ್ನೆಲ್ಲಾ ನಿಜವೆಂದು ನಂಬುವ ಸಾಕಷ್ಟು ಜನರಿದ್ದಾರೆ. ಅವರನ್ನು ದಾರಿತಪ್ಪಿಸುವ, ವೈಷಮ್ಯವನ್ನು ಹುಟ್ಟುಹಾಕುವ ಚಿತ್ರ ಗಳನ್ನು ಮಾಡುವುದು ಸರಿಯಲ್ಲ. ಸರ್ಫರೋಶ್, ಲಗಾನ್, ತಾರೆ ಜಮೀನ್ ಪರ್, 3 ಈಡಿಯಟ್ಸ್ ಮುಂತಾದ ಸಾಮಾಜಿಕ ಸಂದೇಶಗಳನ್ನೊಳಗೊಂಡ ಚಿತ್ರಗಳನ್ನು ಮಾಡುತ್ತಿರುವ ಆಮೀರ್ ಖಾನ್‌ರಿಂದ ಸ್ವಲ್ಪವಾದರೂ ಕಲಿತುಕೊಳ್ಳಿ. ಇಲ್ಲವಾದರೆ ಮುಂದೊಂದು ದಿನ ಜನರೆನ್ನುತ್ತಾರೆ Sharukh Sucks.
ಕಾನ್ ಖೋಲ್ಕರ್(ಕಿವಿ ತೆರೆದು) ಕೇಳಿಸಿಕೊಳ್ಳಿ..ಮಿಸ್ಟರ್ ಖಾನ್!

- ಪ್ರತಾಪ ಸಿಂಹ


ಅವರನ್ನು ನೆನಪಿಸಿಕೊಂಡರೆ ಸ್ವಾಭಿಮಾನ ಪುಟಿಯುತ್ತದೆ!

1893 ಭಾರತೀಯರಾದ ನಾವು ಈ ವರ್ಷ ವನ್ನು ಮರೆಯಲು ಸಾಧ್ಯವೇ? “Sisters and Brothers of America” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ ಸಲುವಾಗಿ ಹಿಂದೂಧರ್ಮದ ಅವಹೇಳನದಲ್ಲಿ ತೊಡಗಿದ್ದರು. ವಿವೇಕಾನಂದರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲೂ ಹಾಗೇ ಆಯಿತು. ಮಾತಿಗೆ ಎದ್ದು ನಿಂತ ವಿವೇಕಾನಂದರು ಒಂದಿಷ್ಟು ಕಾಲ ವಾಗ್ಝರಿಯನ್ನು ಹರಿಸಿ ಸಭೆಯಲ್ಲಿ ನೆರೆದಿದ್ದವರಿಗೆಲ್ಲ ಒಂದು ಪ್ರಶ್ನೆ ಕೇಳಿದರು.
ನಿಮ್ಮಲ್ಲಿ ಎಷ್ಟು ಜನ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದೀರಿ?
ಸಾವಿರಾರು ಜನ ನೆರೆದಿದ್ದ ಆ ಸಭೆಯಲ್ಲಿ ಕೈಮೇಲೇರಿದ್ದು ಒಂದಿಬ್ಬರದ್ದು ಮಾತ್ರ! ನಮ್ಮ ಧರ್ಮದ ಬಗ್ಗೆ ಒಂದಿನಿತೂ ಓದಿ ತಿಳಿದುಕೊಳ್ಳದೆ ಹಿಂದೂ ಧರ್ಮವನ್ನು ಮೌಢ್ಯ, ಮೂಢನಂಬಿಕೆ, ಗೊಡ್ಡುಗಳಿಂದ ಕೂಡಿರುವ ಅನಾಗರಿಕ ಧರ್ಮಎಂದು ಅವಹೇಳನ ಮಾಡುತ್ತಿದ್ದೀರಲ್ಲಾ ನಿಮಗೆಷ್ಟು ಧಾರ್ಷ್ಟ್ಯ?! ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಡೀ ಸಭೆಯೇ ಮೂಕವಿಸ್ಮಿತವಾಗಿ ಕುಳಿತುಕೊಳ್ಳುತ್ತದೆ.
ಅಲ್ಲಿಂದ ಬ್ರಿಟನ್‌ಗೆ ಬಂದರು.
ಹತ್ತಾರು ಭಾಷಣ, ಸಂವಾದ, ಚರ್ಚಾಕೂಟಗಳಿಗೆ ಅಲ್ಲೂ ಆಹ್ವಾನ ಬಂತು. ಹಾಗೊಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿವೇಕಾನಂದರು ಬ್ರಿಟಿಷ್ ಆಡಳಿತದ ವಿರುದ್ಧ ಕಟು ಟೀಕೆ ಮಾಡುತ್ತಿದ್ದರು. ಅದನ್ನು ಕಂಡ ಬ್ರಿಟಿಷ್ ಪತ್ರಕರ್ತರು ಸಿಡಿಮಿಡಿಗೊಂಡಿದ್ದರು. ಆದರೇನಂತೆ ವಿವೇಕಾನಂದರು ಮಾತ್ರ ಟೀಕಾಪ್ರಹಾರವನ್ನು ಮುಂದುವರಿಸಿಯೇ ಇದ್ದರು. ಹಾಗೆ ಟೀಕೆ ಮಾಡುತ್ತಿದ್ದ ಅವರು ಮಾತಿನ ಮಧ್ಯೆ, “ಆದರೂ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ” ಎಂದುಬಿಟ್ಟರು!!
ಮೊದಲೇ ಕುಪಿತಗೊಂಡಿದ್ದ ಬ್ರಿಟಿಷ್ ಪತ್ರಕರ್ತರಿಗೆ ಬ್ರಹ್ಮಾಸ್ತ್ರ ಸಿಕ್ಕಿದಂತಾಯಿತು. “ಇದುವರೆಗೂ ಬ್ರಿಟಿಷ್ ಸರಕಾರವನ್ನು ಭಾರೀ ಭಾರೀ ಟೀಕೆ ಮಾಡುತ್ತಿದ್ದಿರಲ್ಲಾ, ಇದ್ದಕ್ಕಿದ್ದಂತೆಯೇ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ ಎಂದಿದ್ದೇಕೆ? ಭಯವಾಯಿತೇ?!” ಎಂದು ಕಿಚಾಯಿಸಿದರು. ವಿವೇಕಾನಂದರು ನಿರುತ್ತರರಾಗಿ ನಿಲ್ಲುತ್ತಾರೆ, ಅವಮರ್ಯಾದೆಗೆ ಒಳಗಾಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಹಸನ್ಮುಖಿಯಾಗಿಯೇ ನಿಂತಿದ್ದ ವಿವೇಕಾನಂದರು ಬಾಯಿ ತೆರೆದರು…
“ನೋಡಿ, ಬ್ರಿಟನ್ ರಾಣಿ ವಿಕ್ಟೋರಿಯಾ ವಿಧವೆ. ನಮ್ಮ ಭಾರತ ದಲ್ಲಿ ವಿಧವೆಯರಿಗೆ ಬಹಳ ಗೌರವ ಕೊಡುತ್ತೇವೆ” ಎಂದರು!
ಗಪ್ಪಾಗುವ ಸರದಿ ಪತ್ರಕರ್ತರದ್ದಾಗಿತ್ತು. ವಿವೇಕಾನಂದರು ಬರೀ ಒಬ್ಬ ಸ್ವಾಮೀಜಿ, ಹಿಂದೂಧರ್ಮವನ್ನು ಉದ್ಧಾರ ಮಾಡಲು ಅವತರಿಸಿ ಬಂದ ಮಹಾಪುರುಷ, Messiah ಮಾತ್ರ ಎಂದು ಭಾವಿಸಬೇಡಿ. ಅವರಿಗೆ ತುಂಬಾ ಹಾಸ್ಯಪ್ರeಯೂ ಇತ್ತು, Presence of Mind ಅಂತಾರಲ್ಲಾ ಅದಂತೂ ಅದ್ಭುತ. ಗಂಭೀರವಾದ, ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಎದುರಾದಾಗಲೂ ಕೋಪಿಸಿಕೊಳ್ಳದೆ ತುಂಬಾ witty ಆಗಿ ಉತ್ತರಿಸುತ್ತಿದ್ದರು. ಬ್ರಿಟನ್ನಿನಲ್ಲೇ ಮತ್ತೊಂದು ಸಭೆ ನಡೆಯುತ್ತಿತ್ತು. ವಿವೇಕಾನಂದರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಎಲ್ಲರೂ ಆಶ್ಚರ್ಯಚಕಿತರಾಗಿ ಮಾತು ಕೇಳುತ್ತಿದ್ದರೆ ಒಬ್ಬ ಫಿರಂಗಿ ಮಾತ್ರ ವಿವೇಕಾನಂದರ ಕಾಲೆಳೆಯಲು ಹವಣಿಸುತ್ತಿದ್ದ.
ಫಿರಂಗಿ: What is the difference between Monk and a Monkey?
ವಿವೇಕಾನಂದ: Just Arms difference!
ಪ್ರಶ್ನಿಸಿದ ಫಿರಂಗಿ ವಿವೇಕಾನಂದರಿಂದ ಸರಿಸುಮಾರು ಮೊಳಕೈ ದೂರದಲ್ಲಿದ್ದ!! ಹಾಗಂತ ಎಲ್ಲ ಪ್ರಶ್ನೆಗಳಿಗೂ ಅವರು ತಿಳಿಹಾಸ್ಯ ದಲ್ಲೇ ಉತ್ತರಿಸುತ್ತಿ ದ್ದರು ಎಂದರ್ಥವಲ್ಲ. ಒಮ್ಮೆ ಹೀಗೂ ಆಯಿತು. ವಿವೇಕಾನಂದರು ಬುದ್ಧನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ಭಾಷಣ ವೊಂದರಲ್ಲಿ ಬುದ್ಧನ ಬಗ್ಗೆಯೇ ಹೇಳುತ್ತಿದ್ದರು, ಬಹುವಾಗಿ ಹೊಗಳುತ್ತಿದ್ದರು. ಇದನ್ನು ಕಂಡ ಬ್ರಿಟಿಷನೊಬ್ಬ ಕೇಳುತ್ತಾನೆ-ಬುದ್ಧ ಅಷ್ಟು ಗ್ರೇಟ್, ಇಷ್ಟು ಗ್ರೇಟ್ ಎನ್ನುತ್ತಿದ್ದೀರಲ್ಲಾ, ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲರೂ ಬ್ರಿಟನ್‌ಗೆ ಬಂದುಹೋಗಿದ್ದಾರೆ. ನಿಮ್ಮ ಬುದ್ಧ ಗ್ರೇಟ್ ಆಗಿದ್ದನೆನ್ನುವುದಾದರೆ ಆತನೇಕೆ ಬ್ರಿಟನ್‌ಗೆ ಭೇಟಿ ಕೊಡಲೇ ಇಲ್ಲ?!
ವಿವೇಕಾನಂದ: ಬುದ್ಧ ಬದುಕಿದ್ದಾಗ ನಿನ್ನ ಯುರೋಪ್ ಎಲ್ಲಿತ್ತು? ನಿನ್ನ ಬ್ರಿಟನ್ ಎಲ್ಲಿತ್ತು? ಅಮೆರಿಕವೆಲ್ಲಿತ್ತು?!
ಅದಕ್ಕಿಂತ ತಪರಾಕಿ ಬೇಕೆ?! ಬುದ್ಧ ಅವತರಿಸಿದ್ದು ಕ್ರಿಸ್ತ ಪೂರ್ವ ದಲ್ಲಿ. ಆಗ ಬ್ರಿಟನ್ನೂ ಇರಲಿಲ್ಲ, ಯುರೋಪೂ ಇರಲಿಲ್ಲ, ಅಷ್ಟೇಕೆ ಕ್ರಿಶ್ಚಿಯಾನಿಟಿಯೇ ಇರಲಿಲ್ಲ!! ವಿವೇಕಾನಂದರ ಜತೆ ಬ್ರಿಟನ್‌ಗೂ ಆಗಮಿಸಿದ್ದ ಸಿಸ್ಟರ್ ನಿವೇದಿತ ಎಷ್ಟು ಪ್ರಭಾವಿತಳಾಗಿದ್ದಳೆಂದರೆ, ನಾನೂ ಭಾರತಕ್ಕೆ ಬರುತ್ತೇನೆ, ನಿಮ್ಮ ದೇಶಸೇವೆಗೆ ನಾನೂ ಸಹಾಯ ಮಾಡುತ್ತೇನೆ ಎಂದಳು. “ನೋಡು…ಇತರ ಧರ್ಮಗಳ ಕಟ್ಟುಪಾಡುಗಳು, ಕಟ್ಟಳೆಗಳು ಅಷ್ಟಾಗಿ ತಾರ್ಕಿಕವಾಗಿರುವುದಿಲ್ಲ, ವಿeನಕ್ಕೆ ಹತ್ತಿರವಾಗಿರುವುದಿಲ್ಲ. ಹಾಗಾಗಿ ಮೊದಲು ಪರಾಮರ್ಶೆ ಮಾಡಿ, ನಂತರ ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಧರ್ಮದ ರೀತಿ ರಿವಾಜುಗಳು ತರ್ಕಬದ್ಧವಾಗಿರುತ್ತವೆ, ವಿeನಕ್ಕೆ ಅನುಗುಣವಾಗಿರುತ್ತವೆ. ಅವುಗಳನ್ನು ಮೊದಲು ಒಪ್ಪಿಕೊಂಡು ಅನುಸರಿಸಬೇಕು, ಕ್ರಮೇಣ ಆ ಕಟ್ಟುಪಾಡುಗಳ ಹಿಂದೆ ಇರುವ ತರ್ಕ, ಆಶಯ ಅರಿವಾಗುತ್ತದೆ. ಪಾಶ್ಚಿಮಾತ್ಯಳಾದ ನೀನು ಭಾರತಕ್ಕೆ ಬಂದ ನಂತರ ಅದೇಕೆ, ಇದೇಕೆ ಎಂದು ಪ್ರಾರಂಭದಲ್ಲೇ ಪ್ರಶ್ನಿಸಬೇಡ” ಎನ್ನುತ್ತಾ ಹೀಗೆ ಹೇಳುತ್ತಾರೆ- Anything that is western origin, first you verify it, then accept it. Anything that is Indian origin, first accept it, then verify it if necessary.
ಅವರಿಗೆ ಹಿಂದೂ ಧರ್ಮದ ಬಗ್ಗೆ ಅಷ್ಟೊಂದು ಬಲವಾದ ನಂಬಿಕೆಯಿತ್ತು.
ನೀವು ರೋಮಿ ರೋಲ್ಯಾಂಡ್(Romain Rolland) ಹೆಸರು ಕೇಳಿರಬಹುದು. ಆತ ಫ್ರೆಂಚ್ ನಾಟಕಕಾರ, ಇತಿಹಾಸಕಾರ, ಕಾದಂಬರಿಕಾರ. ಒಮ್ಮೆ ಈ ರೋಮಿ ರೋಲ್ಯಾಂಡ್ ಹಾಗೂ ರವೀಂದ್ರನಾಥ ಟಾಗೋರ್ ಪರಸ್ಪರ ಭೇಟಿಯಾಗುತ್ತಾರೆ. ಇಬ್ಬರೂ ಹೆಚ್ಚೂಕಡಿಮೆ ಸಮಕಾಲೀನರು. ರವೀಂದ್ರನಾಥ್ ಟಾಗೂರರಿಗೆ 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ದೊರೆತರೆ, ರೋಮಿ ರೋಲ್ಯಾಂಡ್ 1915ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದವರು. ಇಂತಹ ದಿಗ್ಗಜರ ಭೇಟಿ ಚರ್ಚೆಗೆ ತಿರುಗುತ್ತದೆ. ನನಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕು, ಅದಕ್ಕೆ ಯಾವ ಪುಸ್ತಕವನ್ನು ಓದಬೇಕು ಎಂದು ರೋಮಿ ರೋಲ್ಯಾಂಡ್ ಕೇಳುತ್ತಾರೆ. “If you want to know India, study Vivekananda. In him everything is positive, nothing negative” ಎನ್ನುತ್ತಾರೆ ರವೀಂದ್ರನಾಥ ಟಾಗೂರ್!! ರೋಮಿ ರೋಲ್ಯಾಂಡ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ವಿವೇಕಾನಂದರ ಎಲ್ಲ ಭಾಷಣ, ಚಿಂತನೆಗಳಿದ್ದಿದ್ದು ಇಂಗ್ಲಿಷ್‌ನಲ್ಲಿ ಮಾತ್ರ. ಕೊನೆಗೆ ತನ್ನ ಅಕ್ಕನಿಂದ ಓದಿಸಿ, ಹೇಳಿಸಿಕೊಂಡು ವಿವೇಕಾನಂದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂತಹ ನೊಬೆಲ್ ಪುರಸ್ಕೃತನೇ ವಿವೇಕಾನಂದರ ಬಗ್ಗೆ ಎಷ್ಟು ಸಮ್ಮೋಹಿತನಾಗುತ್ತಾನೆಂದರೆ, “The Life of Vivekananda and The universal Gospel” ಎಂಬ ಪುಸ್ತಕ ಬರೆಯುತ್ತಾನೆ. “I look upon Swamy Vivekananda as a fire of spiritual energy” ಎಂದು ತನ್ನ ಮೇಲಾದ ಪ್ರಭಾವವನ್ನು ಹೇಳಿಕೊಳ್ಳುತ್ತಾನೆ.
ಅಂತಹ ವಿವೇಕಾನಂದರು ಜನಿಸಿದ ನಾಡು ನಮ್ಮದು.
ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ಅವರನ್ನು “ಹಿಂದೂ ಧರ್ಮದ ರಾಯಭಾರಿ” ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the global face of India. He was the first Ambassador of modern India to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಷನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ Indian ethos, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. “Hands that serve are holier than the lips that pray” (ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು)- ಈ ಮಾತನ್ನು ಹೇಳಿದ್ದು ಗಾಂಧಿ ಎನ್ನುವವರಿದ್ದಾರೆ. ಅಲ್ಲಾ… ಅಲ್ಲಾ… ಮದರ್ ತೆರೇಸಾ ಎಂದು ಆಕೆಯ ತಲೆಗೆ ಕಟ್ಟುವವರಿದ್ದಾರೆ. ಸ್ವಾಮಿ ಸುಖಬೋಧಾನಂದ ಹಾಗೂ “ಯು ಕೆನ್ ವಿನ್” ಪುಸ್ತಕ ಬರೆದ ಶಿವ ಖೇರಾ ತಮ್ಮದೇ ಆದ ಪದಗಳಲ್ಲಿ ಅದೇ ವಾಕ್ಯವನ್ನು ರೀಸೈಕ್ಲ್ ಮಾಡಿದ್ದೂ ಇದೆ. Make no mistake, ಆ ಮಾತನ್ನು ಹೇಳಿದ್ದು ಸ್ವಾಮಿ ವಿವೇಕಾನಂದರು! ತುಂಬ articulate ಆಗಿ, extempore ಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life” (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ “ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!
ಹಾಗಂತ ವಿವೇಕಾನಂದರು ಹಿಂದೂ ಧರ್ಮವನ್ನು ಬರೀ ರೋಮ್ಯಾಂಟಿಸೈಝ್ ಮಾಡಲಿಲ್ಲ, ಹುಳುಕುಗಳನ್ನೂ ಹೇಳಿದರು. “Hinduism should reform, if not it will collapse on its own weight” ಎಂದು ಅದರ ಲೋಪಗಳನ್ನು ಎತ್ತಿತೋರಿದರು. ಇವತ್ತು ಒಬ್ಬ ಸಮಾಜವಾದಿ, ಸಮತಾವಾದಿ ಕೂಡ ಅವರನ್ನು ಒಪ್ಪಿಕೊಳ್ಳುತ್ತಾನೆ. ಗಾಂಧಿಯನ್ನು ಟೀಕಿಸುವವರಿದ್ದಾರೆ, ಆದರೆ ವಿವೇಕಾನಂದರನ್ನು ಟೀಕಿಸುವವರನ್ನು ಕಾಣುವುದು ಕಷ್ಟ. ಈಗೀಗ ನಮ್ಮ ಪಾರ್ಲಿಮೆಂಟನ್ನು ನೋಡಿ ಕೊಂಡು ಎಲ್ಲರೂ ಯೂತ್ ಪವರ್ ಬಗ್ಗೆ ಮಾತನಾಡುತ್ತಿದ್ದಾರೆ, ಯೂತ್ ಬಂದರೆ ಭಾರತ ಬದಲಾಗುತ್ತದೆ ಎನ್ನುತ್ತಿದ್ದಾರೆ. ವಿವೇಕಾ ನಂದರು 115 ವರ್ಷಗಳ ಹಿಂದೆಯೇ ಯುವಶಕ್ತಿ ಬಗ್ಗೆ ಹೇಳಿದ್ದರು. ಯೂತ್ ಎಂದರೆ ಯೌವನವಲ್ಲ, Free from prejudice, ಬೇರೆಯವರ ಒಳಿತನ್ನೂ ಬಯಸುವ ಮನಃಸ್ಥಿತಿ ಎಂದಿದ್ದರು.
1000 ವರ್ಷಗಳ ಕಾಲ ಬಾಹ್ಯಶಕ್ತಿಗಳ ಆಕ್ರಮಣ, ಆಡಳಿತ, ನಮ್ಮ ಜನರ ಕಗ್ಗೊಲೆ, ಅತ್ಯಾಚಾರ, ಮತಾಂತರ… ಇವುಗಳನ್ನು ತಡೆಯಲು ಒಂದು ವಿಜಯನಗರ ಸಾಮ್ರಾಜ್ಯ, ಒಬ್ಬ ಶಿವಾಜಿ, ಒಬ್ಬ ರಾಣಾ ಪ್ರತಾಪ್, ಒಬ್ಬ ಗುರು ಗೋವಿಂದ ಸಿಂಗ್, ದಯಾನಂದ ಸರಸ್ವತಿ ಅವತರಿಸಿ ಬಂದರು. ಅವರ ನಂತರ ಭಾರತದ Global face ಆಗಿ ಬಂದವರೇ ವಿವೇಕಾನಂದ. ಇಂತಹವರು ಹುಟ್ಟಿಬಂದ ಕಾರಣವೇ ಬಾಹ್ಯಶಕ್ತಿಗಳು ಭಾರತೀಯರನ್ನು ಕೊಂದರೂ ‘ಭಾರತೀಯತೆ’ಯನ್ನು ನಾಶಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಜನವರಿ 12 ವಿವೇಕಾನಂದರ ಜನ್ಮದಿನ.
ಮತ್ತೊಬ್ಬ ವಿವೇಕಾನಂದ ಅವತರಿಸಿ ಬರಲಿ ಎಂದು ನಿರೀಕ್ಷಿಸುವ ಬದಲು ಅವರ ಸಂದೇಶವನ್ನು ಅರಿತುಕೊಂಡು, ಈ ದೇಶ, ಧರ್ಮವನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಾವೇ ಮಾಡುವುದು ಒಳಿತಲ್ಲವೆ?

- ಪ್ರತಾಪ ಸಿಂಹ

ಕುಡೋಸ್ ಟು ಕಪಿಲ್ ಸಿಬಲ್!Thank you Mr. Kapil Sibal!
ಹಾಗಂತ ಹೇಳಲೇಬೇಕಾಗಿದೆ. ಅಂತಹ ಕೆಲಸವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಮಾಡಿದ್ದಾರೆ. ಕಳೆದ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಸಾಮಾಜಿಕ ವಿಚಾರಗಳ ಮೇಲಿನ 10ನೇ ‘ಎಡಿಟರ್‍ಸ್  ಕಾನ್ಫರೆನ್ಸ್’ನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅವರು, “ಈ ಡೀಮ್ಡ್ ಯೂನಿವರ್ಸಿಟಿಗಳೆಂಬ ಪರಿಕಲ್ಪನೆಯನ್ನೇ ಬರ್ಖಾಸ್ತು ಗೊಳಿಸಲಾಗುವುದು’ ಎಂದಿದ್ದಾರೆ. ಅದಕ್ಕಿಂತ ಒಂದು ದಿನ ಮೊದಲು, 44 ವಿವಿಗಳ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನವನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಈ ವಿವಿಗಳು ಶೈಕ್ಷಣಿಕ ಆದ್ಯತೆಗೆ ಬದಲು, ವೃತ್ತಿಪರವಾಗಿ ನಡೆಸುವ ಬದಲು ಕೌಟುಂಬಿಕ ಪಾಳೆಗಾರಿಕೆಯ ತಾಣಗಳಾಗಿವೆ. ಸಂಬಂಧವೇ ಇಲ್ಲದ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ನಾಯಿಕೊಡೆಗಳಂತೆ ಡಿಗ್ರಿಗಳನ್ನು ಸೃಷ್ಟಿಸುತ್ತಿವೆ. ಸಂಶೋಧನೆ, ನವೀನ ಬೋಧನಾ ವಿಧಾನದ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡದೇ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡಿಕೆ ಹಿಂದಿರುವ ಆಶಯಕ್ಕೇ ತಣ್ಣೀರು ಎರಚಿವೆ’ ಎಂದು ತನ್ನ 11 ಪುಟಗಳ ಅಫಿಡವಿಟ್‌ನಲ್ಲಿ ಕೇಂದ್ರ ತಿಳಿಸಿದೆ. ಪ್ರಕರಣ ಜನವರಿ 25ರಂದು ವಿಚಾರಣೆಗೆ ಬರಲಿದೆ. ಈಗಾಗಲೇ 44 ವಿವಿಗಳ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿದೆ. ಈ ವಿವಿಗಳಲ್ಲಿ 1,19, 363 ವಿದ್ಯಾರ್ಥಿಗಳಿದ್ದಾರೆ, ಎಂಫಿಲ್, ಪಿಎಚ್‌ಡಿ ಪದವಿ ಪಡೆಯಲು 2,124 ಮಂದಿ ಎನ್‌ರೋಲ್ ಆಗಿ ಸಂಶೋಧನೆ ನಡೆಸುತ್ತಿದ್ದಾರೆ, ಜತೆಗೆ 74,808 ವಿದ್ಯಾರ್ಥಿಗಳು ದೂರಶಿಕ್ಷಣ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ಲಕ್ಷದಷ್ಟು ವಿದ್ಯಾರ್ಥಿಗಳು ಈ ವಿವಿಗಳಲ್ಲಿ ಕಲಿಯುತ್ತಿದ್ದಾರೆ. ಅವರ ಭವಿಷ್ಯಕ್ಕಾಗಲಿ, ಪದವಿಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಯೂನಿವರ್ಸಿಟಿ ಡಿಗ್ರಿಗಳು ದೊರೆಯಲಿವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನಿಜಕ್ಕೂ ಇಂಥದ್ದೊಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ತ್ವರಿತ ಅಗತ್ಯವಿತ್ತು.

2009ರ ಮೇನಲ್ಲಿ ಮಾನವ ಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಲೇ ಸಿಬಲ್ ಸುಮ್ಮನೆ ಕೂರುವವರಲ್ಲ ಎಂಬ ಎಚ್ಚರಿಕೆ ಹೊರಬಿದ್ದಿತ್ತು. ಅಷ್ಟಕ್ಕೂ ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಇತ್ತೀಚಿನ ಕೆಲ ವರ್ಷಗಳಿಂದ ಲಂಗುಲಗಾಮಿಲ್ಲದಂತೆ ಸಿಕ್ಕಸಿಕ್ಕಂತೆ ಡೀಮ್ಡ್ ವಿವಿ ಸ್ಥಾನಮಾನ ನೀಡಲಾರಂಭಿಸಿತ್ತು. 2007, ಡಿಸೆಂಬರ್ 7ರಂದು ಇದೇ ಅಂಕಣದಲ್ಲಿ ಪ್ರಕಟವಾದ ‘ಇವು ಡೀಮ್ಡ್ ಯೂನಿವರ್ಸಿಟಿಗಳೋ, ಡೂಮ್ಡ್ ಯೂನಿವರ್ಸಿಟಿಗಳೋ?’ ಎಂಬ ಲೇಖನವನ್ನು ನೆನಪಿಸಿಕೊಳ್ಳಿ. ಡೀಮ್ಡ್ ಯೂನಿವರ್ಸಿಟಿ ಎಂಬ ಪರಿಕಲ್ಪನೆ ಬಂದಿದ್ದು ಹೇಗೆ ಗೊತ್ತೆ? ಸ್ವಾತಂತ್ರ್ಯ ಹೋರಾಟದಂತಹ ರಾಷ್ಟ್ರೀಯ ಚಳವಳಿಯ ಕಾಲದಲ್ಲೂ ದೇಶಾದ್ಯಂತ ಉನ್ನತ ಶಿಕ್ಷಣ ನೀಡುವ ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿದ್ದವು. ಸ್ವಾತಂತ್ರ್ಯ ಚಳವಳಿಗೆ ವಿದ್ಯಾರ್ಥಿಗಳು ಕೊಟ್ಟ ಕೊಡುಗೆ ಅಪಾರ. ಹೀಗೆ ಈ ಸಂಸ್ಥೆಗಳು ಶಿಕ್ಷಣ ಸೇವೆಯ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪರೋಕ್ಷವಾಗಿ ಭಾಗಿಯಾಗಿದ್ದವು. ಆಳುವವರ ಯಾವ ಪ್ರೋತ್ಸಾಹವೂ ಇಲ್ಲದ ಅಂತಹ ಕಷ್ಟಕಾಲದಲ್ಲೂ ನೈತಿಕತೆಯನ್ನು ಎತ್ತಿಹಿಡಿದ ಹಾಗೂ ಅಸ್ತಿತ್ವ ಉಳಿಸಿಕೊಂಡ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾನಮಾನ ನೀಡುವ ಬಗ್ಗೆ ಸರಕಾರ ಆಲೋಚಿಸಬೇಕು ಎಂದು 1948ರಲ್ಲಿ ನೇಮಕಗೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆಯೋಗ ಶಿಫಾರಸು ಮಾಡಿತು. ೧೯೫೬ರಲ್ಲಿ ಜಾರಿಗೆ ಬಂದ ಯುಜಿಸಿ ಕಾಯಿದೆಯ ಸೆಕ್ಷನ್ 12(ಬಿ) ಅಡಿ ಅಂತಹ ಅವಕಾಶ ಕಲ್ಪಿಸಲಾಯಿತು. ಅದನ್ನೇ “Deemed -to-be University” ಎನ್ನುವುದು. ಪ್ರಾರಂಭದಲ್ಲಿ ಕೇವಲ 3 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡ ಲಾಯಿತು. 1990ರವರೆಗೂ ಅಂದರೆ 35 ವರ್ಷಗಳಲ್ಲಿ ಅಂತಹ ವಿಶೇಷ ಸ್ಥಾನ  ನೀಡಿದ್ದು ಕೇವಲ 29 ಕಾಲೇಜುಗಳಿಗೆ. ಆನಂತರ ಉತ್ತಮ ನಿರ್ವಹಣೆ ಹೊಂದಿರುವ, ಪ್ರಾರಂಭವಾಗಿ ಕನಿಷ್ಠ ೨೫ ವರ್ಷಗಳಾಗಿರುವ ಶಿಕ್ಷಣ ಸಂಸ್ಥೆಗಳಿಗೂ ಡೀಮ್ಡ್ ವಿವಿ ಸ್ಥಾನ ನೀಡುವ ಪರಿಪಾಠ ಆರಂಭವಾಯಿತು.
ಆಗ ಶುರುವಾಯಿತು ನೋಡಿ ದಂಧೆ…
ಕರ್ನಾಟಕದ ೧೫ ಸೇರಿ ಭಾರತದಲ್ಲಿ ಒಟ್ಟು  137ಕ್ಕೂ ಹೆಚ್ಚು  ಡೀಮ್ಡ್ ವಿವಿಗಳಿವೆ. ಯುಜಿಸಿ ಯದ್ವಾತದ್ವ ವಿವಿ ಸ್ಥಾನ ನೀಡುವ ಮೂಲಕ ವ್ಯವಸ್ಥೆಯನ್ನು ಕುಲಗೆಡಿಸುತ್ತಿದೆ ಎಂಬ ಆರೋಪ ೨೦೦೮ರಲ್ಲೇ ಕೇಳಿ ಬಂದಿತ್ತು. ಹಾಗಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಿಬಲ್ ತನಿಖೆಗೆ ಆದೇಶಿಸಿದರು. ಯುಜಿಸಿಯೇ ತನಿಖಾ ಸಮಿತಿ ನೇಮಕ ಮಾಡಿತು, ಸಹಜವಾಗಿಯೇ ಅದು ಯುಜಿಸಿಗೆ ಕ್ಲೀನ್ ಚಿಟ್ ಕೊಟ್ಟಿತು. ಕೊನೆಗೆ ಸರಕಾರವೇ ಮತ್ತೊಂದು ಸಮಿತಿ ನೇಮಕ ಮಾಡಿತು. ದಂಧೆಯ ರಾಕ್ಷಸೀ ಸ್ವರೂಪ ಹೊರಬರ ತೊಡಗಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 5 ವರ್ಷಗಳಲ್ಲಿ 60 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ನೀಡಲಾಗಿದೆ!! ಅವುಗಳಲ್ಲಿ ಕೇವಲ 6 ಸರಕಾರಿ ನಿಯಂತ್ರಣದಲ್ಲಿರುವ ಕಾಲೇಜುಗಳು, ಉಳಿದವು ಗಳೆಲ್ಲ ಖಾಸಗಿ!!! ಜತೆಗೆ ಕನಿಷ್ಠ ೨೫ ವರ್ಷಗಳಿಂದ ಶಿಕ್ಷಣ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಮಾತ್ರ ಡೀಮ್ಡ್ ವಿವಿ ಸ್ಟೇಟಸ್ ನೀಡಬೇಕೆಂಬ ನಿಯಮವನ್ನೂ ಬದಲಿಸಿ 10 ವರ್ಷಕ್ಕೆ ಇಳಿಸಿರುವುದು ಬೆಳಕಿಗೆ ಬಂತು. ಸುಮಾರು 177 ಇನ್‌ಸ್ಟಿಟ್ಯೂಟ್‌ಗಳು ತಮಗೂ ಅಂತಹ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ 38 ಸಂಸ್ಥೆಗಳು ಪ್ರಾರಂಭವಾಗಿ 5 ವರ್ಷ ಕೂಡ ತುಂಬಿರಲಿಲ್ಲ! ಈ ದೇಶ ಕಂಡ ಅತ್ಯಂತ ಕೆಟ್ಟ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅಧಿಕಾರಾವಧಿಯಲ್ಲಿ ಏನೆಲ್ಲಾ ಕೆಡುಕುಗಳು ನಡೆದುಹೋಗಿವೆ. ಇದನ್ನೆಲ್ಲಾ ಪತ್ತೆಹಚ್ಚಿತು ಪಿ.ಎನ್. ಟಂಡನ್ ಸಮಿತಿ. ಅಲ್ಲದೆ 2005ರಲ್ಲಿ ಜಾರಿಗೆ ಬಂದ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕ ನಿಯಂತ್ರಣ ಕಾಯಿದೆಯನ್ನೂ ಗಾಳಿಗೆ ತೂರಿರುವುದು ತಿಳಿದು ಬಂತು. 137 ಡೀಮ್ಡ್ ಯೂನಿವರ್ಸಿಟಿಗಳ ಬಗ್ಗೆ ತನಿಖೆ ನಡೆಸಿದ ಸಮಿತಿ, ಅವುಗಳಲ್ಲಿ ಹೆಚ್ಚಿನವು ಬೋಧಕವರ್ಗ, ಮೂಲಭೂತ ಸೌಕರ್ಯ, ಅಕಾಡೆಮಿಕ್ ಕೋರ್ಸ್‌ಗಳ ವಿಚಾರದಲ್ಲಿ ಕಾನೂನನ್ನು ಉಲ್ಲಂಘಿಸಿವೆ. ಇಂತಹ ಯೂನಿವರ್ಸಿಟಿಗಳು ಕಾಲೇಜು ನಡೆಸುವುದು ದೊಡ್ಡ ಪ್ರಮಾದ ಎಂದು ತನ್ನ ವರದಿಯಲ್ಲಿ ತಿಳಿಸಿತು. ಅಷ್ಟೇ ಅಲ್ಲ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವ ಬದಲಾವಣೆ ತರಬೇಕೆಂದು ಸೂಚಿಸಲು ನೇಮಕಗೊಂಡಿದ್ದ ಪ್ರೊ. ಯಶ್‌ಪಾಲ್ ಆಯೋಗ,  “ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ಕೊಡುವುದನ್ನೇ ಶಾಶ್ವತವಾಗಿ ನಿಲ್ಲಿಸಬೇಕು. ಜತೆಗೆ ತಾಂತ್ರಿಕ ಹಾಗೂ ಬ್ಯುಸಿನೆಸ್ ಸ್ಕೂಲ್‌ಗಳ ಮೇಲ್ವಿಚಾರಣೆ ನಡೆಸುವ ಯುಜಿಸಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನೂ(AICTE) ರದ್ದುಪಡಿಸ ಬೇಕು” ಎಂದು ಶಿಫಾರಸು ಮಾಡಿತು.
ಕಬಿಲ್ ಸಿಬಲ್  ಮಾನ್ಯತೆ ರದ್ದುಪಡಿಸಲು ಕಳೆದ ಸೋಮವಾರ ಮುಂದಾಗಿರುವ 44 ವಿವಿಗಳು ತೀರಾ ಹದಗೆಟ್ಟಿರುವ ಡೀಮ್ಡ್ ವಿವಿಗಳಾಗಿವೆ. ಅಷ್ಟಕ್ಕೂ ಡೀಮ್ಡ್ ವಿವಿಗಳು ಮಾಡುತ್ತಿರುವುದಾದರೂ ಏನು? ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ… ಭಾರತೀಯ ವಿeನ ಮಂದಿರ(ಐಐಎಸ್‌ಸಿ), ನಿಮ್ಹಾನ್ಸ್, ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ, ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ ಮುಂತಾದ ಸಂಸ್ಥೆಗಳಿಗೆ ಡೀಮ್ಡ್ ವಿವಿ ಸ್ಥಾನಮಾನ ಕೊಟ್ಟಿದ್ದರಲ್ಲಿ ಅರ್ಥವೂ ಇದೆ. ಅಲ್ಲಿ ಪ್ರತಿಭೆಗೆ ಮಣೆ ಹಾಕುತ್ತಾರೆ, ಸ್ಪರ್ಧಾತ್ಮಕ  ಪರೀಕ್ಷೆ ಮೂಲಕ ಪ್ರವೇಶ ನೀಡುತ್ತಾರೆ, ಒಳ್ಳೆಯ ಸಂಶೋಧನೆಗಳೂ ನಡೆಯುತ್ತಿವೆ. ಆದರೆ ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ಪಡೆದುಕೊಂಡಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳಾದ ‘ಮನಿ’ಪಾಲ್, ಬಿಎಲ್‌ಡಿಇ, ದೇವರಾಜ್ ಅರಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್, ಜೈನ್ ಹಾಗೂ ಇನ್ನುಳಿದ ವಿವಿಗಳು ಯಾವ ರೀಸರ್ಚ್ ಮಾಡುತ್ತಿವೆ? ಪಠ್ಯದಲ್ಲಾಗಲಿ, ಗುಣಮಟ್ಟದ ಶಿಕ್ಷಣದಲ್ಲಾಗಲಿ ಯಾವ ಮಹಾ ಬದಲಾವಣೆ ತಂದಿವೆ? ಉನ್ನತ ಶಿಕ್ಷಣವನ್ನು ಎಷ್ಟು ‘ಉನ್ನತಿ’ಗೆ ಮಾಡಿವೆ?
ಏನಾದರೂ ‘ಉನ್ನತ ಮಟ್ಟ’ ತಲುಪಿದ್ದರೆ ಅದು ‘ಕ್ಯಾಪಿಟೇಶನ್ ಫೀ’ ಮಾತ್ರ. ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ಕೊಡುವ ಹಿಂದೆ ಇರುವ ಆಶಯ ಏನೇ ಇದ್ದರೂ ಆಗುತ್ತಿರುವುದು ಮಾತ್ರ ಶಿಕ್ಷಣದ ವ್ಯಾಪಾರೀಕರಣ. ಅಷ್ಟಕ್ಕೂ ಹಣಕಾಸು, ಶಿಕ್ಷಕರ ನೇಮಕ, ಪ್ರವೇಶಾತಿ, ಪಠ್ಯ ರಚನೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ, ಮೌಲ್ಯಮಾಪನ ಎಲ್ಲ ವಿಷಯಗಳಲ್ಲೂ ಸ್ವತಂತ್ರರು ಇವರು. ಇಂತಹ ಸ್ವಾತಂತ್ರ್ಯದ ಅಗತ್ಯ ಖಂಡಿತ ಇತ್ತು. ಏಕೆಂದರೆ…
1. ಪಠ್ಯವನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳಬಹುದು
2. ನವೀನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು
3. ಪ್ರಯೋಗಾಲಯಗಳ ಗುಣಮಟ್ಟವನ್ನು ಎತ್ತರಿಸಬಹುದು
4. ಮಾರ್ಕ್ಸ್ ಬದಲು ಗ್ರೇಡ್ ಕೊಡುವ ಅವಕಾಶವಿರುವುದರಿಂದ ಅಸೈನ್‌ಮೆಂಟ್, ಸರ್ಪ್ರೈಸ್ ಕ್ವಿಝ್, ಸೆಮಿನಾರ್‌ಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸಮಗ್ರ ಪರೀಕ್ಷೆ ನಡೆಸಬಹುದು
5. ಉತ್ತಮ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು
6. ಒಟ್ಟಾರೆಯಾಗಿ ಶಿಕ್ಷಣದ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಏನು ಬೇಕು ಅದನ್ನೆಲ್ಲಾ ಮಾಡಬಹುದು
ಆದರೆ ಆಗುತ್ತಿರುವುದೇನು?
1. ಡೀಮ್ಡ್ ಯೂನಿವರ್ಸಿಟಿಗಳಿಗೆ ಪ್ರವೇಶ ಸ್ವಾತಂತ್ರ್ಯವಿರುವು ದರಿಂದ ಮನಸ್ಸಿಗೆ ಬೇಕೆಂದವರಿಗೆ ಸೀಟು ವಿತರಣೆ
2. ಸಿಇಟಿ ಮೂಲಕ ಬಡ ಹಾಗೂ ಪ್ರತಿಭಾವಂತರಿಗೆ ಸಿಗುತ್ತಿದ್ದ ಸರಕಾರಿ ಸೀಟುಗಳಿಗೆ ಕತ್ತರಿ
3. ಆ ಮೂಲಕ ಶಿಕ್ಷಣವನ್ನು ಕಾಸಿದ್ದವರಿಗೆ ‘ಎಕ್ಸ್‌ಕ್ಲೂಸಿವ್’ ಮಾಡಿದ್ದು
4. ಪಠ್ಯದ ಅಪ್‌ಡೇಟ್‌ಗಿಂತ ಶುಲ್ಕದ ಹೆಚ್ಚಳಕ್ಕೆ ಆದ್ಯತೆ
5. ಕಾಲೇಜು ಮಾಲೀಕರು ಕಾಸಿನ ಬಲದಿಂದಾಗಿ ಪೊಲಿಟಿಕಲ್ ಪವರ್ ಬ್ರೋಕರ್‌ಗಳಾಗಿ ಮಾರ್ಪಾಡು
6. ಶಿಕ್ಷಕರ ನೇಮಕದಲ್ಲಿ ಸ್ವಜನ ಪಕ್ಷಪಾತ
7. ಆ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ತಣ್ಣೀರು
8. ವಿಸಿಯಿಂದ ಹಿಡಿದು ಸಣ್ಣ ಹುದ್ದೆಯವರೆಗೂ ಮನಸ್ಸಿಗೆ ಬಂದವರ ನೇಮಕ ಹಾಗೂ ಕುಟುಂಬ ಪಾರುಪತ್ಯ
9. ವಿದ್ಯಾರ್ಥಿಗಳ ಶೋಷಣೆ
10. ಗುಣಮಟ್ಟದ ಶಿಕ್ಷಣ, ಕಟ್ಟುನಿಟ್ಟಾದ ಪರೀಕ್ಷೆ ಬದಲು ಫಲಿತಾಂಶ ಹೆಚ್ಚಳಕ್ಕಾಗಿ ವಿದ್ಯಾರ್ಥಿಗಳಿಗೆ ‘ಸ್ಪೂನ್ ಫೀಡಿಂಗ್’
11. ಮೆಡಿಕಲ್ ಪದವಿ ಪಡೆದರೂ ಎಂ.ಡಿ. ಮಾಡಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣ.
12. ಎಂಡಿ ಸೀಟುಗಳು 60-90ಲಕ್ಷಕ್ಕೆ ಬಿಕರಿ
ಏಕೆ ಹೀಗಾಯಿತು?
1. ಡೀಮ್ಡ್ ಯೂನಿವರ್ಸಿಟಿ ಸ್ಟೇಟಸ್ ನೀಡುವ ಮೊದಲು ಯುಜಿಸಿ ಯೋಚಿಸಬೇಕಿತ್ತು.
2. ಕೂಲಂಕಷ ಪರಾಮರ್ಶೆ ನಡೆಸಬೇಕಿತ್ತು
3. ಬಹುತೇಕ ಕಾಲೇಜುಗಳು ರಾಜಕಾರಣಿಗಳ ಹಿಡಿತದಲ್ಲಿರು ವುದರಿಂದ ಅರ್ಜಿ ಹಾಕುವವರ Motive ಹಾಗೂ Motivating factor ಏನೆಂಬುದನ್ನು ತಿಳಿದುಕೊಳ್ಳಬೇಕಿತ್ತು!
4. ಕಾಲೇಜುಗಳ ಇತಿಹಾಸ, ಸಾಧನೆಯನ್ನು ಕೆದಕಿ ನೋಡಬೇಕಿತ್ತು
5. ಇಂತಿಷ್ಟು ಕಾಲಾವಧಿಗೊಮ್ಮೆ ಕಟ್ಟುನಿಟ್ಟಾಗಿ ತಪಾಸಣೆ, ಪರಾಮರ್ಶೆ ನಡೆಸಬೇಕಿತ್ತು
ಮಾಡಿದ್ದೇನು?
ಯುಜಿಸಿ ಯದ್ವಾತದ್ವ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ಕೊಟ್ಟಿತು. ತಪಾಸಣೆ, ಪರಾಮರ್ಶೆ ನಡೆಸಬೇಕಾದ AICTEನ ಮಾಜಿ ಅಧ್ಯಕ್ಷರೇ(ಆರ್.ಎ. ಯಾದವ್)(ಅವರನ್ನು ಮನೆಗೆ ಕಳುಹಿಸಿದ್ದು ಸಿಬಲ್ ಅವರೇ)ಕಾಸುಕೊಡದಿದ್ದರೆ ಮಾನ್ಯತೆ ರದ್ದು ಮಾಡಿಸುವುದಾಗಿ ಆಂಧ್ರದ ತಾಂತ್ರಿಕ ಕಾಲೇಜೊಂದನ್ನು ಬ್ಲ್ಯಾಕ್‌ಮೇಲ್ ಮಾಡಲು ಹೋಗಿ ಸಿಕ್ಕಿಬಿದ್ದರು! ಇನ್ನು ಹಿಸ್ಟರಿ ಟ್ರ್ಯಾಕ್ ಮಾಡಬೇಕೆಂಬುದೇನೋ ಸರಿ, ಆದರೆ ಕಾಲೇಜು ಪ್ರಾರಂಭವಾಗಿ ಕನಿಷ್ಠ 25 ವರ್ಷಗಳಾಗಿರಬೇಕು ಎಂಬ ನಿಯಮವನ್ನು 10 ವರ್ಷಕ್ಕೆ ಇಳಿಸಿದ ಮೇಲೆ ಯಾವ ಹಿಸ್ಟರಿಯನ್ನು ನೋಡುತ್ತೀರಿ? ವಿದ್ಯಾರ್ಥಿಗಳ ಶೋಷಣೆಯ ವಿಚಾರವನ್ನು ತೆಗೆದುಕೊಳ್ಳಿ. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು, 1970ರ ದಶಕದಲ್ಲಿ ದಿಲ್ಲಿಯಲ್ಲಿ ಶಾಲಾ ವಿದಾರ್ಥಿನಿ ಗೀತಾ ಚೋಪ್ರಾಳ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳಾದ  ರಂಗ ಮತ್ತು ಬಿಲ್ಲನನ್ನು ಸರಕಾರ ಗಲ್ಲಿಗೇರಿಸುವಂತೆ ಮಾಡಿದ್ದ ವಿದ್ಯಾರ್ಥಿ ಶಕ್ತಿ ಇವತ್ತು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧವೇ ಧ್ವನಿಯೆತ್ತುವ ಸ್ಥಿತಿಯಲ್ಲಿಲ್ಲ! ಡೀಮ್ಡ್ ಯೂನಿವರ್ಸಿಟಿಗಳಲ್ಲಿ ಮ್ಯಾನೇಜ್‌ಮೆಂಟ್‌ನದ್ದೇ ದರ್ಬಾರು. ಇಂಜಿನಿಯರಿಂಗ್‌ಗೆ ಸೇರಿದರೆ 4 ವರ್ಷವನ್ನೂ ಆತಂಕದಲ್ಲೇ ಕಳೆಯಬೇಕು. ಧ್ವನಿಯೆತ್ತಿದರೆ ಡಿಗ್ರಿಗೇ ಕುತ್ತು ಬರುತ್ತದೆ, ಶೀಲಕ್ಕೂ ಕುತ್ತು ಬಂದ, ಬರುತ್ತಿರುವ ಪ್ರಕರಣಗಳೂ ಸಾಕಷ್ಟಿವೆ. ‘ವಿಟಿಯು’ನಲ್ಲಾದರೆ ಕನಿಷ್ಠ ಹೋರಾಟ ಮಾಡಬಹುದು, ಉತ್ತರ ಪತ್ರಿಕೆ ತರಿಸಿಕೊಂಡು ಖುದ್ದು ನೋಡಬಹುದು. ಡೀಮ್ಡ್ ವಿವಿಗಳಲ್ಲೂ ಇವು ಸಾಧ್ಯವಿದ್ದರೂ ಬೇಕೆಂದರೆ ಯಾವ ವಿದ್ಯಾರ್ಥಿಯ ಜೀವನವನ್ನೂ ಹಾಳು ಮಾಡುವ ಅವಕಾಶ ವಿಭಾಗದ ಮುಖ್ಯಸ್ಥರಿಗಿರುತ್ತದೆ.
ಈ ಎಲ್ಲ ಕಾರಣಗಳಿಗಾಗಿ ಕಪಿಲ್ ಸಿಬಲ್ ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ಎಲ್ಲರೂ ಸ್ವಾಗತಿಸಲೇಬೇಕು. ಆದರೆ ಅಂತಿಮವಾಗಿ ಎಲ್ಲಾ ಡೀಮ್ಡ್ ವಿವಿಗಳನ್ನೂ ಬರ್ಖಾಸ್ತು ಮಾಡಲಾಗುವುದು ಎಂದು ಸಿಬಲ್ ಹೇಳಿರುವುದು ಖಂಡಿತ ಅತಿರೇಕ ಎನಿಸುತ್ತದೆ. ಅದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನು ಮುಂದೆ ಡೀಮ್ಡ್ ಯೂನಿವರ್ಸಿಟಿ ಅಥವಾ ಆಟೊನಾಮಸ್(ಸ್ವಾಯತ್ತೆ) ಸ್ಟೇಟಸ್ ನೀಡುವುದಿಲ್ಲ ಎಂದು ಘೋಷಿಸಿದ್ದರೆ ಖಂಡಿತ ಸಾಕಿತ್ತು, ಆಗಿಂದಾಗ್ಗೆ ತಪಾಸಣೆ ನಡೆಸಿ ನಿರ್ದಿಷ್ಟ ಗುಣಮಟ್ಟ ಕಾದುಕೊಳ್ಳದ ವಿವಿಗಳ ಸ್ಥಾನಮಾನವನ್ನೂ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರೆ ಚೆನ್ನಾಗಿಯೂ ಇರುತ್ತಿತ್ತು. ಅದಿರಲಿ, ಡೀಮ್ಡ್ ವಿವಿಗಳ ಸೊಕ್ಕಡಗಿಸಲು ಮುಂದಾಗಿದ್ದೇನೋ ಸರಿ, ಜಾತಿ ರಾಜಕಾರಣ, ಜಾತಿ ಚಳವಳಿ, ವಿದ್ಯಾರ್ಥಿಗಳ ಶೋಷಣೆಯ ಕೇಂದ್ರವಾಗಿರುವ ಸರಕಾರಿ ವಿವಿಗಳ ಸ್ನಾತ್ತಕೋತ್ತರ ಕೇಂದ್ರಗಳ ಕೊಳೆ ತೊಳೆಯುವುದು ಯಾವಾಗ ಸಿಬಲ್?
ಈ ಬಗ್ಗೆಯೂ ಆದಷ್ಟು ಬೇಗ ಯೋಚಿಸಿ…
Anyway, Kudos to Kapil Sibal!

- ಪ್ರತಾಪ ಸಿಂಹ

ಹೆತ್ತು-ಹೊತ್ತವರಿಗೆ ಕೊಡುವ ಬಳುವಳಿ ಇದೇನಾ?

ಅಮ್ಮಾ ನಿನ್ನ ಎದೆಯಾಳದಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳ ಬಳ್ಳಿ-
ಒಲವೂಡುತ್ತಿರುವ ತಾಯೆ
ಬಿಡದ ಬುವಿಯ ಮಾಯೆ…
ಆ ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ತಮ್ಮ ಕವಿತೆಯೊಂದರಲ್ಲಿ ಈ ರೀತಿ ಹಿಡಿದಿಟ್ಟಿದ್ದಾರೆ. ಅಮ್ಮಾ…  ಅದು ಹೆಣ್ಣಿರಲಿ, ಗಂಡಾಗಿರಲಿ, ಒಂದು ಮಗು ಜಾರಿ ಬಿದ್ದಾಗ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಇದೆಯಲ್ಲಾ ಅದೇ ‘ಅಮ್ಮಾ…’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ ಎಂದು ಬಹಳ ಅರ್ಥಪೂರ್ಣವಾಗಿ ಬರೆಯುತ್ತಾರೆ.
ಮಗುವಿನ ಆ ಧ್ವನಿ ಕೇಳಿದ ಕೂಡಲೇ ಅದೆಲ್ಲಿದ್ದರೂ ಅಮ್ಮ ಓಡಿ ಬರುತ್ತಾಳೆ, ‘ಅಯ್ಯೋ ಮಗನೇ ಬಿದ್ದಾ…’, ‘ಮಗಳೇ ಪೆಟ್ಟಾಯ್ತಾ…’ ಅಂತ ಎತ್ತಿ ಎದೆಗವುಚಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಅದೆಂಥ ಆಪ್ತತೆ, ಭದ್ರತೆ, ನೋವು ಮರೆಸುವ ಶಕ್ತಿ ಇದೆಯಲ್ಲವೆ? ಇನ್ನು ಕಣ್ಣಲ್ಲೇ ಹೆದರಿಸುವ, ಮಾತಲ್ಲೇ ಗದರಿಸುವ ಅಪ್ಪನಾದರೂ ಸರಿ, ತನ್ನ ಮಗು ಜಾರಿ ಬಿದ್ದಾಗ ಓಡಿ ಬಂದು ಮೇಲೆತ್ತಿ ಮುದ್ದಾಡುತ್ತಾನೆ, ಮುತ್ತಿಟ್ಟು ಕಣ್ಣೀರೊರೆಸುತ್ತಾನೆ. ಮಗುವಿನ ಚೇಷ್ಟೆ ಮೀತಿಮೀರಿದಾಗ, ಹಠ ಸಹನೆಯ ಎಲ್ಲೆ ದಾಟಿದಾಗ ಪಟ್ಟನೇ ಪೆಟ್ಟು ಕೊಟ್ಟು ಗದರಿಸಿದರೂ, ಮನದೊಳಗೆ ಮಗುವಿಗೆ ಹೊಡೆದ ತನ್ನ ಕೈಗೇ ಹಿಡಿಶಾಪ ಹಾಕಿಕೊಳ್ಳುತ್ತಾನೆ. ಅವನೆಂತಹ ಕಟುಕನಾಗಿದ್ದರೂ ಮಕ್ಕಳ ವಿಷಯದಲ್ಲಿ ಎಲ್ಲ ಅಪ್ಪ-ಅಮ್ಮಂದಿರೂ ಮೃದುವಾಗಿಯೇ ಇರುತ್ತಾರೆ. ನನಗಿಂತಲೂ ನನ್ನ ಮಕ್ಕಳು ದೊಡ್ಡ ಹುದ್ದೆಗೇರಬೇಕು, ತಾನು ದಾರಿತಪ್ಪಿದ್ದರೂ ನನ್ನ ಮಗ, ಮಗಳು ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂದೇ ಬಯಸುತ್ತಾನೆ.
ಇಂತಹ ನಿಸ್ವಾರ್ಥ ಪ್ರೀತಿಯನ್ನು ಧಾರೆ ಎರೆಯುವ ಅಪ್ಪ-ಅಮ್ಮ ನಿಗೆ ರೆಕ್ಕೆಪುಕ್ಕ ಬಲಿತ ಮಕ್ಕಳ ಮೇಲೆ ಯಾವ ಹಕ್ಕೂ ಇರುವುದಿಲ್ಲವೆ? ಒಳ್ಳೆಯ ಸ್ಕೂಲೇ ಬೇಕು ಎಂದು ಹುಡುಕಿ, ಫೀ ಕಟ್ಟಿ ಬದುಕಿಗೆ ದಿಕ್ಕು ತೋರುವ ಅಪ್ಪ, ನಮ್ಮ ಯೂನಿಫಾರ್ಮನ್ನು ತೊಳೆದು, ಶುಭ್ರಗೊಳಿಸಿ, ಇಸ್ತ್ರಿ ಹಾಕಿ, ಬಸ್‌ವರೆಗೂ ಬಂದು ಮೆಟ್ಟಿಲು ಹತ್ತಿಸಿ ಹೋಗುವ, ಸಂಜೆ ಸ್ಕೂಲ್ ಬಸ್‌ಗಾಗಿ ದಾರಿ ಕಾಯುವ ಅಮ್ಮನಿಗೆ ನಮ್ಮ ಮೇಲೆ ಯಾವ ಅಧಿಕಾರವೂ ಇಲ್ಲವಾ? ಮೈ ನೆರೆದು, 18 ತುಂಬಿದ ಕೂಡಲೇ ಅಪ್ಪ-ಅಮ್ಮ ಕೊಟ್ಟಿದ್ದೂ, ಕೊಡುತ್ತಿರುವುದೂ ಪ್ರೀತಿಯೇ ಎಂದು ಏಕೆ ನಮಗನಿಸುವುದಿಲ್ಲ? ನೆಲದಲ್ಲಿ ತೆವಳುವಾಗ ನಡಿಗೆಯನ್ನು ಕಲಿಸುವ, ಅಂಬೆಗಾಲಿಡುವಾಗ ಕೈ ಹಿಡಿದು ಮುನ್ನಡೆಸುವ, ಬಿದ್ದಾಗ ಎತ್ತಿ ಸಾವರಿಸುವ ಅಪ್ಪ-ಅಮ್ಮ, ಇಚ್ಛಿಸಿದವನನ್ನು ವರಿಸುವ ಮದುವೆಯೆಂಬ ನಿರ್ಧಾರದ ಸಂದರ್ಭದಲ್ಲಿ ಏಕೆ ಅಪಥ್ಯವಾಗಿ ಬಿಡುತ್ತಾರೆ? ನಮ್ಮ ಮಕ್ಕಳು ಎಡವಬಾರದು ಎಂಬ ಕಾರಣಕ್ಕೆ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ, ಸಲಹೆ, ಎಚ್ಚರಿಕೆ ಕೊಡುತ್ತಿದ್ದಾರೆ ಎಂಬ ಸುಪ್ತ ಸಂದೇಶ, ಕಾಳಜಿ ಅವರ ಮಾತಿನಲ್ಲಿದೆ ಎಂದು ಏಕನಿಸು ವುದಿಲ್ಲ?
“ಮುಂದೆ ನನ್ನ ಲೈಫ್ ಲೀಡ್ ಮಾಡುವುದಕ್ಕೆ ನನ್ನ ಅಪ್ಪ-ಅಮ್ಮನಿಂದ ಯಾವ ತೊಂದರೆಯೂ ಬರದಿದ್ದರೆ ಸಾಕು, ನನ್ನ ಪೇರೆಂಟ್ಸನ್ನು ಕೇಳುವುದಿಷ್ಟೇ”
ಹಾಗಂತ ಜನವರಿ 22ರಂದು ಟಿವಿ ಚಾನೆಲ್ಲೊಂದರಲ್ಲಿ ಪ್ರಸಾರ ವಾದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಅಶ್ವಿನಿ ಹೇಳುತ್ತಿದ್ದರೆ ಆಕೆಯನ್ನು ಹೆತ್ತು-ಹೊತ್ತ ಅಪ್ಪ-ಅಮ್ಮನ ಗತಿಯೇನಾಗಿರಬೇಕು ಹೇಳಿ? ಯಾವ ಪೋಷಕರು ತಾನೇ ತಮ್ಮ ಕರುಳ ಕುಡಿಯ ಅಧಃಪತನವನ್ನು ಬಯಸುತ್ತಾರೆ?
ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದ ವೈ.ಎಸ್. ಶ್ರೀನಿವಾಸ್ ಹಾಗೂ ಸರಸ್ವತಿ ದಂಪತಿಯ ಪುತ್ರಿಯೇ ಅಶ್ವಿನಿ. ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿಯಲ್ಲಿ ಓದುತ್ತಿದ್ದಳು. ಸ್ವಲ್ಪ ಮಾನಸಿಕ ಸಮಸ್ಯೆ ಹೊಂದಿದ್ದ ಆಕೆಯನ್ನು ಸಂಬಂಧಿಕರೊಬ್ಬರ ಮನೆಯಲ್ಲಿಡಲಾಗಿತ್ತು. ಚಪ್ಪಲಿ ಆಂಗಡಿಯ ಇರ್ಫಾನ್ ಪರಿಚಯ ವಾಗಿದ್ದು ಆಗಲೇ. ಪರಿಚಯ ಪ್ರೀತಿಗೆ ತೆರಳಿತು. ಕೊನೆಗೊಂದು ದಿನ ಮನೆಯವರಿಗೆ ತಿಳಿದು ತೀವ್ರ ವಿರೋಧವೂ ವ್ಯಕ್ತವಾಯಿತು. ಒಂದು ದಿನ ಇದ್ದಕ್ಕಿದ್ದಂತೆಯೇ ಅಶ್ವಿನಿ ನಾಪತ್ತೆಯಾದಳು. ಆಕೆಯನ್ನು ಅಪಹರಿಸಲಾಗಿದೆ, ಹುಡುಕಿಕೊಡಿ ಎಂದು ಶ್ರೀನಿವಾಸ್ ರಾಜ್ಯ ಹೈಕೋರ್ಟ್ ಮೊರೆ ಹೋದರು. ಅದುವರೆಗೂ ಎಲ್ಲಿಗೆ ಹೋಗಿದ್ದಾರೆ ಎಂಬ ಸುಳಿವೇ ಇರಲಿಲ್ಲ. ಯಾವಾಗ ‘ಹೇಬಿಯಸ್ ಕಾರ್ಪಸ್’ ಕೇಸು ಹಾಕಿದರೋ, ‘ಹಾಜರುಪಡಿಸಬೇಕು’ ಎಂದು ಕೋರ್ಟ್ ತಾಕೀತು ಹಾಕಿತೋ, ಜನವರಿ ೨೦ರಂದು ನಡೆದ ವಿಚಾರಣೆ ವೇಳೆ ಅಶ್ವಿನಿ-ಇರ್ಫಾನ್ ಅದೆಲ್ಲಿಂದಲೋ ಉದುರಿ ಕೆಳಗೆ ಬಂದವರಂತೆ ಕೋರ್ಟ್ ಮುಂದೆ ಪ್ರತ್ಯಕ್ಷರಾದರು. ‘ನಾವಿಬ್ಬರೂ ಪರಸ್ಪರ ಪ್ರೀತಿಸಿ ಸ್ವಯಿಚ್ಛೆಯಿಂದ ಮದುವೆಯಾಗಿದ್ದೇವೆ. ನನಗೆ ಯಾವ ಮಾನಸಿಕ ಸಮಸ್ಯೆಯೂ ಇಲ್ಲ” ಎಂದಳು ಅಶ್ವಿನಿ. ಆಕೆಯ ಪ್ರತಿಪಾದನೆಗೆ ಮನ್ನಣೆ ನೀಡಿದ ಹೈಕೋರ್ಟ್, “ಅಶ್ವಿನಿ ಹೊಸ ಬದುಕು ಆರಂಭಿಸಲಿದ್ದಾಳೆ. ಲವ್ ಜಿಹಾದ್ ಎನ್ನುವ ಅರ್ಜಿದಾರರ ವಾದ ಸರಿಯಲ್ಲ. ಇಂತಹ ಮಾನಸಿಕ ಸಮಸ್ಯೆಗೆ ಸಂಬಂಧಿಸಿದಂತೆ ಪೋಷಕರಿಗೇ ಚಿಕಿತ್ಸೆಯ ಅಗತ್ಯವಿದೆ” ಎಂದು ತೀರ್ಪು ನೀಡಿತು.
ಇಂತಹ ಮಾತುಗಳನ್ನು ಕೇಳಿಸಿಕೊಳ್ಳಲು ಯಾರಾದರೂ ಮಕ್ಕಳನ್ನು ಹಡೆದಿರುತ್ತಾರೆಯೇ? ಅವಳ ಅಪ್ಪ-ಅಮ್ಮ ದೂರು ಕೊಟ್ಟು, ಕೋರ್ಟ್ ಮೆಟ್ಟಿಲು ಹತ್ತದಿದ್ದರೆ ಮಗಳು ಬದುಕಿ ದ್ದಾಳೋ, ಸತ್ತಿದ್ದಾಳೋ ಎಂಬ ಸಂಗತಿಯೂ ಗೊತ್ತಾಗುತ್ತಿರಲಿಲ್ಲ, ಮಗಳ ಸುರಕ್ಷತೆ ಬಗ್ಗೆ ಅಪ್ಪ-ಅಮ್ಮನಿಗಿರುವ ಆತಂಕ, ಅದರ ಹಿಂದೆ ಇರುವ ಪ್ರೀತಿ, ಕಾಳಜಿ ಓಡಿ ಹೋಗುವ ಹುಡುಗಿಯರಿಗಾಗಲಿ, ಈ ಡೋಂಗಿ ಪ್ರೀತಿ-ಪ್ರೇಮ ಪ್ರತಿಪಾದಕರಿಗೇಕೆ ಅರ್ಥವಾಗುವುದಿಲ್ಲ?
ಖಂಡಿತ ಅದು ಲವ್ವೂ ಅಲ್ಲ, ಜಿಹಾದೂ ಅಲ್ಲ.
ಅಶ್ವಿನಿಯೇ ಹೇಳಿದಂತೆ ಕಳೆದ ಎರಡು ವರ್ಷಗಳಿಂದ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಆಕೆಗೀಗ 20 ವರ್ಷ ತುಂಬಿದೆ. ಅಂದರೆ ಪ್ರೇಮಕಥನ ಆರಂಭವಾದಾಗ ಆಕೆಗೆ  18 ವರ್ಷ.  ವಯಸ್ಸಿನ ಅಂತರ ಪ್ರೀತಿಗೆ ಅಡ್ಡವಾಗುವುದಿಲ್ಲ ಎಂಬುದು ನಿಜವಾಗಿದ್ದರೂ 17, 18ರಂಥ ಅಪ್ರಾಪ್ತ ವಯಸ್ಸಿನಲ್ಲಿ ಆರಂಭವಾಗುವ ಸೆಳೆತವನ್ನು ನೈಜ ಪ್ರೀತಿ ಎನ್ನುವುದಕ್ಕಾಗುತ್ತದೆಯೇ? ಅಪ್ರಾಪ್ತ ವಯಸ್ಸು, ಅಪ್ರಬುದ್ಧ ನಿರ್ಧಾರಗಳು ಎಷ್ಟು ದಿನ ಎರಡು ಜೀವಗಳನ್ನು ಹಿಡಿದಿಡಲು ಸಾಧ್ಯ? ದೈಹಿಕ ಕಾಮನೆಗಳು ಮೂಡುವ ಆ ವಯಸ್ಸಿನಲ್ಲಿ ಹಲವಾರು ಪ್ರಚೋದನೆಗಳಿಗೆ ಒಳಗಾಗುವುದು, ಹಿಂದೆ-ಮುಂದೆ ಯೋಚನೆ ಮಾಡದೆ ಯಾರನ್ನೋ ಇಷ್ಟಪಡುವುದು ಸಹಜವೇ. Love is nothing but deep understanding ಎನ್ನುತ್ತಾನೆ ಓಶೋ. ಹದಿನಾರು, ಹದಿನೇಳರಲ್ಲಿ ಅರಳುವ ಪ್ರೀತಿ, ಹದಿನೆಂಟು, ಹತ್ತೊಂಬತ್ತರಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಅದ್ಯಾವ Deep understanding  ಇರಲು ಸಾಧ್ಯ?
ಪ್ರೀತಿಗೆ ಜಾತಿ-ಧರ್ಮ, ಅಂತಸ್ತು ಯಾವತ್ತೂ ಅಡ್ಡಿಯಲ್ಲ, ಅಡ್ಡಿಯಾಗಲೂಬಾರದು. ಇರ್ಫಾನ್‌ನನ್ನು ಅಶ್ವಿನಿ ಪ್ರೀತಿಸಿದ್ದನ್ನೂ ತಪ್ಪು ಎನ್ನಲಾಗದು. ಅಷ್ಟಕ್ಕೂ ಪ್ರೀತಿ ಅನ್ನುವುದಕ್ಕೆ ಬಹಳ Dimensionಗಳಿವೆ ಬಿಡಿ! ಈ ಜನ್ಮ ಗೌರಿಗಾಗಿ ಎನ್ನುವ ಶಾರುಖ್ ಖಾನ್ ಒಂದು ಕಡೆ ಇದ್ದರೆ, ಪಕ್ಕದ ಮನೆಯ ರೀನಾ ದತ್ತಳನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವ ಆಮೀರ್ ಖಾನ್, ೧೫ ವರ್ಷ ಕಳೆದ ಮೇಲೆ ಮತ್ತೊಬ್ಬಳನ್ನು (ಕಿರಣ್ ರಾವ್) ಪ್ರೀತಿಸಿ ಮದುವೆಯಾದ ಕಥೆಯೂ ನಮ್ಮ ಕಣ್ಣಮುಂದಿದೆ! ಪ್ರೀತಿ ಸ್ಥಿರವೋ, ಅಸ್ಥಿರವೋ ಎಂಬುದಕ್ಕೆ ಕಾಲವೇ ಉತ್ತರ ನೀಡಲು ಸಾಧ್ಯ. ಆದರೆ ಮದುವೆಯೆಂಬ ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳುವಾಗ ಸ್ವಲ್ಪವಾದರೂ ಪ್ರಬುದ್ಧತೆ ಬೇಕಲ್ಲವೆ? ಅಶ್ವಿನಿ ಪ್ರಕರಣದಲ್ಲಿ ಪ್ರಬುದ್ಧತೆಯ ಕೊರತೆಯೇ ಎದ್ದು ಕಾಣುತ್ತಿದೆ. ಜಾತಿ-ಧರ್ಮ ಮೀರಿ ಪ್ರೀತಿಸುವುದು ತಪ್ಪಲ್ಲ. ಹಾಗಂತ ಪ್ರೀತಿ ಎಂಬುದು ಹುಚ್ಚಾಟವಾಗಬಾರದು. ಅದು ಹೆಣ್ಣಿರಲಿ, ಗಂಡಿರಲಿ 18 ತುಂಬಿದ ಕೂಡಲೇ ಸ್ವತಂತ್ರರು ಎಂಬುದೂ ಸರಿ. ಆದರೆ ನಿಜವಾಗಿ ನೀವು ಸ್ವತಂತ್ರರಾಗುವುದು ಮೈ ನೆರೆತಾಗಲೂ ಅಲ್ಲ, 18 ತುಂಬಿದಾಗಲೂ ಅಲ್ಲ. ಪ್ರೀತಿಯ ಜತೆಜತೆಗೇ ಪ್ರೀತಿಗಿಂತ ಓದಿಗೆ ಹೆಚ್ಚು ಆದ್ಯತೆ ಕೊಟ್ಟು, ವ್ಯಾಸಂಗ ಪೂರೈಸಿ, ಉದ್ಯೋಗಕ್ಕೆ ಸೇರಿ, ತನ್ನ ಕಾಲಮೇಲೆ ತಾನು ನಿಂತುಕೊಂಡ ನಂತರ ಮಾತ್ರ ಗಂಡು-ಹೆಣ್ಣು ಸ್ವತಂತ್ರರಾಗಲು ಸಾಧ್ಯ. ಆ ವೇಳೆಗೆ ವಯಸ್ಸಿನ ಕಾಮನೆಗಳ ತೀವ್ರತೆ ಕಡಿಮೆಯಾಗಿ, ಆವೇಶ ಕುಂದಿ, ಮನಸ್ಸು ಸ್ಥಿರಗೊಂಡು, ಬುದ್ಧಿ ವಿಕಾಸವಾಗಿ ಜೀವನ ಒಂದು ಘಟ್ಟಕ್ಕೆ ಬಂದು ತಲುಪಿರುತ್ತದೆ. ಒಂದು ವೇಳೆ, ಅಶ್ವಿನಿ ತನ್ನ ವ್ಯಾಸಂಗ ಪೂರೈಸಿ, ತನ್ನ ಕಾಲಮೇಲೆ ತಾನು ನಿಂತುಕೊಂಡ ಮೇಲೆ, ಇಂತಹವನನ್ನು ತಾನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರಿಗೆ ತಿಳಿಸಿದ್ದರೆ ಒಪ್ಪಬಹುದಿತ್ತು. ತನಗೆ ಅನುರೂಪನಾದ, ತಕ್ಕನಾದ ಜೀವನ ಸಂಗಾತಿಯನ್ನು ಅಥವಾ prospective partnerನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಹುಡುಗಿಗೂ ಇದೆ. ತಾನು ಎಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ, ಏಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಪೋಷಕರಿಗೆ ಮನವರಿಕೆಯನ್ನೇಕೆ ಮಾಡಿಕೊಡಬಾರದು? ಆಗಲೂ ಪೋಷಕರು ವಿರೋಧಿಸಿದ್ದರೆ, ಪ್ರೀತಿಗೆ ಅಡ್ಡವಾಗಿದ್ದರೆ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಅದು ಒಪ್ಪುವಂತಹ ಕ್ರಮವಾಗಿರುತ್ತಿತ್ತು. (ಏಕೆಂದರೆ ಬಹಳಷ್ಟು ಸಂದರ್ಭದಲ್ಲಿ  ಪೋಷಕರೂ ಕೂಡ ತಿಳಿಗೇಡಿಗಳಂತೆ ವರ್ತಿಸುವುದುಂಟು). ಪಿಯುಸಿಯಲ್ಲಿದ್ದಾಗಲೇ ಫೇಲಾಗಿದ್ದ ಅಶ್ವಿನಿ, ನಂತರ ಬಿಎಸ್ಸಿಯನ್ನು ಅರ್ಧಕ್ಕೆ ಬಿಟ್ಟು, ಅಪ್ರಾಪ್ತ ವಯಸ್ಸಿನಲ್ಲಿ ಮೊಳಕೆಯೊಡೆದ ಪ್ರೀತಿಗಾಗಿ ಅಪ್ಪ-ಅಮ್ಮನ್ನು ಬೀದಿಗೆ ತಂದು ನಿಲ್ಲಿಸಿದ್ದು ತಪ್ಪಲ್ಲವೆ? ಜನ್ಮ ನೀಡಿದವರ ಮಾನಮರ್ಯಾದೆಯನ್ನು ರಸ್ತೆಯಲ್ಲಿ ಹರಾಜು ಹಾಕುವುದು ಎಷ್ಟು ಸರಿ? ಇದನ್ನು ಪ್ರೀತಿ ಅಂತೀರೋ, ಹುಚ್ಚಾಟ ಅಂತೀರೋ? ಪ್ರೀತಿಗೆ ಅಂತಸ್ತು ಅಡ್ಡಿಯಾಗಬಾರದು. ಹಾಗಂತ ಯಾವನೋ ೭ ತರಗತಿ ಕೂಡ ಪಾಸು ಮಾಡದ ಚಪ್ಪಲಿ ಅಂಗಡಿಯವನನ್ನು ಕಟ್ಟಿಕೊಳ್ಳು ವುದಕ್ಕಾಗುತ್ತಾ? ಪ್ರೀತಿಗೆ ಯಾವ ಜಾತಿ-ಧರ್ಮದ ತಾರತಮ್ಯ ಗಳಿಲ್ಲದಿದ್ದರೂ ‘ಕಾರಣ’ವಾದರೂ ಬೇಕಲ್ಲವೆ?
“ಅಶ್ವಿನಿ ಹಾಗೂ ಇರ್ಫಾನ್ ಮದುವೆಗೆ ನಾನು ಸಾಕ್ಷಿಯಾಗಿ ದ್ದೇನೆ. ನಾನು ಮಠ ಹಾಗೂ ಮದರಸಾ ನಡೆಸುತ್ತಿಲ್ಲ. ಪ್ರೀತಿಯನ್ನು ಜಾತಿಯಲ್ಲಿ ಅಳೆದು ನ್ಯಾಯಾಂಗಕ್ಕೆ ಬರುವ ಕೆಟ್ಟ ಪ್ರವೃತ್ತಿಯನ್ನು ಬಿಡಬೇಕಿದೆ” ಎಂದು ಕೆಲವರು ಟಿವಿ ಕ್ಯಾಮೆರಾಗಳ ಮುಂದೆ ದೊಡ್ಡ ಪ್ರೇಮ ಪೂಜಾರಿಯಂತೆ ಪೋಸು ಕೊಟ್ಟರು. ಒಂದು ವೇಳೆ, ಅವರ ಮಗಳು ಮಟನ್‌ಸ್ಟಾಲ್ ರಫೀಕ್‌ನನ್ನೋ ಅಥವಾ ಪಂಕ್ಚರ್ ಅಂಗಡಿಯ ಮುಬಾರಕ್‌ನನ್ನೋ ಪ್ರೀತಿಸಿ, ಓಡಿ ಹೋಗಿದ್ದರೆ ಹೀಗೆಯೇ ಹೇಳುತ್ತಿದ್ದರೆ? ಅವರಂತೆಯೇ ‘ನಾನು ಅಪ್ಪನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟೆ’ ಎಂದು ಬೇರೆ ಯಾರಾದರೂ ಹೇಳಿದ್ದರೆ ಹೇಗಾಗಿರುತ್ತಿತ್ತು? ಇರ್ಫಾನ್‌ನಂಥ ಅನ್‌ಪಡ್‌ನ ಹಿಂದೆ ಓಡಿಹೋದ ಮಗಳನ್ನು ಹೆತ್ತ ಆ ತಂದೆ-ತಾಯಿಯ ನೋವೇಕೆ ಯಾರಿಗೂ ಅರ್ಥವಾಗುವುದಿಲ್ಲ? ಕೆಲವರು ತಮ್ಮ ಸಿಗರೇಟು ಹಚ್ಚಿಕೊಳ್ಳುವುದಕ್ಕೂ ಕಂಡವರ ಮನೆಗೆ ಬೆಂಕಿ ಇಡುತ್ತಾರೆ. ಆದರೆ ಹೆತ್ತವರ ನೋವು, ಸಾಮಾಜಿಕ ಅವಮಾನ ಅವರಿಗಷ್ಟೇ ಅರ್ಥವಾಗುತ್ತದೆ. ಅದಿರಲಿ, ಅವರ ಪ್ರೀತಿ ಜಾತಿ-ಧರ್ಮವನ್ನು ಮೀರಿದ್ದು ಎಂದಾದ ಮೇಲೆ ಮತಾಂತರದ ಪ್ರಶ್ನೆ ಅದೆಲ್ಲಿಂದ ಬಂತು? ಮದುವೆಯ ಸಂದರ್ಭದಲ್ಲಿ ಏಕೆ ಧರ್ಮ ಅಡ್ಡ ಬಂದು, ಮತಾಂತರಗೊಳ್ಳಬೇಕು? ಶಾರುಖ್ ಖಾನ್ ಗೌರಿಯನ್ನು ಮದುವೆಯಾಗುವಾಗ, ಆಮೀರ್ ಖಾನ್ ಕಿರಣ್‌ರಾವ್ ಮದುವೆಯಾಗುವಾಗ ಅಡ್ಡಬಾರದ ಇಸ್ಲಾಂ, ಚಪ್ಪಲಿ ಅಂಗಡಿಯ ಇರ್ಫಾನ್ ಅಶ್ವಿನಿಯನ್ನು ಮದುವೆಯಾಗುವಾಗ ಏಕೆ ದೊಡ್ಡ ತಡೆಗೋಡೆಯಾಗುತ್ತದೆ? ಅದಿರಲಿ, ಹಿಂದೂ ಹುಡುಗಿಯರೇ ಏಕೆ ಇಸ್ಲಾಂಗೆ ಮತಾಂತರಗೊಳ್ಳಬೇಕು? ಅವನ ಪ್ರೀತಿ ಅಷ್ಟು ಅಚಲ, ಅಮರ ಎನ್ನುವುದಾಗಿದ್ದರೆ ಇರ್ಫಾನ್‌ನೇ ಹಿಂದೂ ಧರ್ಮವನ್ನು ಸೇರಬಹುದಿತ್ತಲ್ಲವೆ? ಅಥವಾ ಅವಳು ಹಿಂದೂವಾಗಿಯೇ, ಅವನು ಮುಸ್ಲಿಂ ಆಗಿಯೇ ಉಳಿಯಬಹುದಿತ್ತಲ್ಲವೆ? ‘ವಿಶೇಷ ವಿವಾಹ ಕಾಯಿದೆ’ಯಲ್ಲಿ ಅಂಥದ್ದೊಂದು ಅವಕಾಶವೂ ಇದೆ. ಗೋವಾದಲ್ಲಂತೂ ಪೋರ್ಚುಗೀಸರ ಕಾಲದಿಂದಲೂ ಆ ಕಾಯಿದೆ ಇದೆ. ಸಂಜಯ್ ದತ್-ಮಾನ್ಯತಾ ಮದುವೆಯಾಗಿದ್ದೂ ಆ ಕಾಯಿದೆಯ ಅಡಿಯೇ. ಅಂದಮಾತ್ರಕ್ಕೆ ಮತಾಂತರಗೊಳ್ಳುವುದು ತಪ್ಪೆಂದೇನೂ ಅಲ್ಲ. ಅಂಬೇಡ್ಕರ್ ಕೂಡ ಕೊನೆ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಒಬ್ಬ ವ್ಯಕ್ತಿ ಏಕೆ ಮತಾಂತರಗೊಳ್ಳುತ್ತಾನೆ ಹೇಳಿ? ವಯಸ್ಸಿನ ಜತೆ ಬರುವ ಪ್ರಬುದ್ಧತೆ, ಕಾಲಾಂತರದಲ್ಲಿ ಆಗುವ ಬುದ್ಧಿ ವಿಕಾಸ, ಸ್ವಧರ್ಮದ ಬಗ್ಗೆ ಮೊಳಕೆಯೊಡೆಯುವ ಅನುಮಾನಗಳು ಧಾರ್ಮಿಕ ಜಿeಸೆಗೆ ಕಾರಣವಾಗುತ್ತವೆ, ಆಗ ಕೆಲವೊಬ್ಬರು ಮತಾಂತರಗೊಳ್ಳುತ್ತಾರೆ. ಆದರೆ ಅಶ್ವಿನಿ ಮತಾಂತರಗೊಂಡಿದ್ದರ ಹಿಂದೆ ಏನಿದೆ? ಅದು ‘ಲವ್ ಜಿಹಾದ್’ ಅಲ್ಲದಿದ್ದರೂ ಒಂದು ಸಮುದಾಯದ ಜಿಹಾದಿ ಮನಸ್ಥಿತಿಯನ್ನು ಖಂಡಿತ ಕಾಣಬಹುದಾಗಿದೆ. ಈ ಹಿಂದೆಯೂ ಮುಸ್ಲಿಮರು ಹಿಂದೂ ಹುಡುಗಿಯರನ್ನು ವಿವಾಹವಾದ, ಯಾವ ವಿರೋಧವೂ ವ್ಯಕ್ತವಾಗದ, ಪೋಷಕರು ಅವಮಾನ ಎಂದು ಭಾವಿಸದ ಪ್ರಕರಣಗಳಿವೆ. ಅಷ್ಟಕ್ಕೂ ರತ್ನಾ ಪಾಠಕ್, ನಾಸಿರುದ್ದೀನ್ ಶಾ ಅವರಂತಹ ಮಹಾನ್ ನಟನನ್ನು ಆಯ್ಕೆ ಮಾಡಿಕೊಂಡರು, ಗೌರಿ, ಶಾರುಖ್‌ನನ್ನು ವರಿಸಿದಳು, ಶುಭಲಕ್ಷ್ಮಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರ ಬಾಳ ಸಂಗಾತಿಯಾದರೇ ಹೊರತು ಯಾವುದೋ ಪಡಪೋಸಿಗಳನ್ನು ಕಟ್ಟಿಕೊಳ್ಳಲಿಲ್ಲ.
Love is blind ಎನ್ನುತ್ತಾರೆ ಕೆಲವರು. ಕೆಲವೊಮ್ಮೆ Lovers go blind. ಆಗ ಅಶ್ವಿನಿಯಂಥ ಪ್ರಕರಣಗಳು ಸಂಭವಿಸುತ್ತವೆ. ಹುಟ್ಟಿಸಿದ ತಪ್ಪಿಗೆ ಅಪ್ಪ-ಅಮ್ಮ ಸಮಾಜದ ಎದುರು ತಲೆತಗ್ಗಿಸು ವಂತಾಗುತ್ತದೆ.

- ಪ್ರತಾಪ ಸಿಂಹ