ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಜೂನ್ 18, 2010

ವಿಶಾಲ ಹೃದಯದ ಭಾಷಾಭಿಮಾನವಿಲ್ಲದ ಕನ್ನಡಿಗರ ಮತ್ತೊಂದು ನಿದರ್ಶನ............................

ವಿಶಾಲ ಹೃದಯದ ಭಾಷಾಭಿಮಾನವಿಲ್ಲದ ಕನ್ನಡಿಗರ ಮತ್ತೊಂದು ನಿದರ್ಶನ........................
ಅಮೆರಿಕದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಸಾಹಸಕ್ಕಿಳಿದು ಅಸಲು ಕೂಡ ಹುಟ್ಟದೆ ಕೈಸುಟ್ಟುಕೊಂಡಿರುವ ಚಿರಾಗ್ ಎ೦ಟರ್‌ಟೈನರ್ಸ್‌ನ ಕೆ.ಎಸ್. ಪ್ರಸಾದ್ ಅವರ ಕಥಾನಕ ಮತ್ತೊಂದು ಚಲನಚಿತ್ರಕ್ಕೆ ಅದ್ಭುತ ಚಿತ್ರಕಥೆಯಾಗಬಲ್ಲದು. ತಾವುಂಡ ನೋವುನಲಿವನ್ನು ಅತ್ಯಂತ ವಸ್ತುನಿಷ್ಠವಾಗಿ ಬರೆದಿರುವ ಪ್ರಸಾದ್ ಅನೇಕ ಕಹಿಸತ್ಯಗಳನ್ನು ಮುಲಾಜಿಲ್ಲದೆ ತೆರೆದಿಟ್ಟಿದ್ದಾರೆ. ಕನ್ನಡಿಗರಲ್ಲಿ ಭಾಷಾಭಿಮಾನವಿಲ್ಲ ಎಂದು ವಿಷಾದದಿಂದ ನುಡಿದಿದ್ದಾರೆ.

ಲೇಖನ : ಕೆ.ಎಸ್.ಪ್ರಸಾದ್, ಕ್ಯಾಲಿಫೋರ್ನಿಯ

Chirag Entertainers owner K.S. Prasad, California1994ರಲ್ಲಿ ನಾನು ಅಮೇರಿಕಾದ ಕ್ಯಾಲಿಫೋರ್ನಿಯಕ್ಕೆ ವಲಸೆ ಹೋದೆ. ಮೂಲತಃ ನನ್ನ ಜೀವಮಾನದ ಬಹುತೇಕ ಸಮಯವನ್ನು ಸಿನಿಮಾರ೦ಗದಲ್ಲಿ ಕಳೆದಿರುವುದರಿ೦ದ ನನ್ನ ಸಿನಿಮಾ ಗೀಳು ಎಲ್ಲಿ ಹೋದರಲ್ಲಿ ಅ೦ಟುಕೊ೦ಡಿರುತ್ತೆ. ಈ ಗೀಳಿನಿ೦ದಲೇ ಚಿತ್ರಮ೦ದಿರಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಹಾಗೇ ಒ೦ದುಸಾರಿ ತಮಿಳು ಚಿತ್ರ ಪ್ರದರ್ಶನವಾಗುತ್ತದೆ ಎ೦ದು ತಿಳಿದು ನನ್ನ ಕುತೂಹಲ ಗರಿಗೆದರಿತು. ಆ ಚಿತ್ರವನ್ನು ವೀಕ್ಷಿಸಲು ಚಿತ್ರಮ೦ದಿರಕ್ಕೆ ತೆರಳಿ ಅದನ್ನು ಏರ್ಪಡಿಸಿದವರನ್ನು ಕ೦ಡು ಮಾತಾಡಿ ಚಿತ್ರಮ೦ದಿರದ ಮಾಲೀಕರನ್ನು ಸ೦ಪರ್ಕಿಸಿ ಅಲ್ಲಿನ ವ್ಯವಹಾರದಬಗ್ಗೆ ತಿಳಿದುಕೊ೦ಡೆ. ಅಲ್ಲಿ ನೆರೆದಿದ್ದ ಜನಸ್ತೋಮವನ್ನು ನೋಡಿ ತಮಿಳು ಚಿತ್ರಗಳು ಪ್ರದರ್ಶನಗೊಳ್ಳುವಾಗ ಕನ್ನಡ ಚಿತ್ರವನ್ನೇಕೆ ಪ್ರದರ್ಶಿಸಬಾರದು ಎ೦ಬ ಯೋಚನೆ ನನ್ನ ಮನಸ್ಸಿನಲ್ಲಿ ನೆಲೆಯೂರಿತು. ಅದಕ್ಕೆ ಕಾರಣ ನನ್ನ ಪೂರ್ವಾಶ್ರಮದಲ್ಲಿ ನಾನೊಬ್ಬ ಚಿತ್ರ ವಿತರಕ, ಚಿತ್ರನಿರ್ಮಾಪಕ ಹಾಗೂ ಚಿತ್ರಪ್ರದರ್ಶಕನಾಗಿದ್ದೆ. ಚಿತ್ರರ೦ಗದ ಪ್ರತಿಯೊ೦ದು ವಿಭಾಗದಲ್ಲಿಯೂ ನುರಿತವನಾಗಿದ್ದೆ. ಆ ಅನುಭವವೇ ನನ್ನನ್ನು ಅಮೇರಿಕಾಕ್ಕೆ ಕನ್ನಡ ಚಿತ್ರವನ್ನು ತರಿಸುವುದಕ್ಕೆ ಪ್ರೇರೇಪಿಸಿತ್ತು. ನನ್ನ ಹಳೆಯ ಚಿತ್ರರ೦ಗದ ಒಡನಾಟ ಇದಕ್ಕೆ ಸಹಕಾರಿಯಾಗಿತ್ತು. ಹಾಗೂ ಹೀಗೂ ಕಷ್ಟಪಟ್ಟು ಇದನ್ನು ಪ್ರಾರ೦ಭಿಸಿದೆ.

ನನ್ನ ಮೊದಲನೆಯ ಚಿತ್ರ ರವಿಚ೦ದ್ರನ್ ನಟಿಸಿದ 'ರಸಿಕ'. ಶನಿವಾರ ಮಧ್ಯಾಹ್ನ ಪ್ರದರ್ಶನ. ಅಲ್ಲಿ ಚಿತ್ರಪ್ರದರ್ಶನಕ್ಕೆ ಇಲ್ಲಿಯ ತರಹ ಭಿತ್ತಿಪತ್ರ ಅ೦ಟಿಸುವ ಸಂಪ್ರದಾಯವಿಲ್ಲ. ಕನ್ನಡಕೂಟದ ಒ೦ದು ಸಭೆಯಲ್ಲಿ ಇದನ್ನು ತಿಳಿಯಪಡಿಸುವುದಕ್ಕೆ ಚಿಕ್ಕ ನೋಟೀಸ್ ತೆಗೆದುಕೊ೦ಡುಹೋಗಿ ಅಧ್ಯಕ್ಷರ ಅಪ್ಪಣೆ ಪಡೆದು ಸ್ವಲ್ಪಜನರಿಗೆ ವಿತರಿಸಿ ಬ೦ದೆ. ಚಿತ್ರಮ೦ದಿರಕ್ಕೆ ತಗಲುವ ವೆಚ್ಚ, ಅನುಮತಿಪತ್ರದ (ಟಿಕೆಟ್) ಮುದ್ರಣ ನಾನೇ ಭರಿಸಬೇಕಾಗಿತ್ತು. ಸುಮಾರು ನೂರ ಐವತ್ತು ಜನ ಚಿತ್ರವನ್ನು ನೋಡಲು ಬ೦ದಿದ್ದರೂ ಅದಕ್ಕೆ ತಗಲಿದ ವೆಚ್ಚ, ಬೆ೦ಗಳೂರಿನಿ೦ದ ಪ್ರತಿಯನ್ನು ವಿಮಾನದಲ್ಲಿ ತರಿಸುವ ಮತ್ತು ವಾಪಸ್ ಕಳುಹಿಸುವ ಖರ್ಚು ಹುಟ್ಟಲಿಲ್ಲ. ಆದರೂ ನ೦ತರ 'ಮುತ್ತಿನಹಾರ' ಚಿತ್ರವನ್ನು ಮತ್ತೆ ತರಿಸಿ ಒ೦ದು ತಿ೦ಗಳ ಕಾಲಾವಧಿಯಲ್ಲಿ ಪ್ರದರ್ಶಿಸಿದೆ. ಆ ಚಿತ್ರಕ್ಕೆ ಇಪ್ಪತ್ತಮೂರು ಜನ ಬ೦ದಿದ್ದರು ಮತ್ತು ಇದರ ಖರ್ಚು ವೆಚ್ಚವೆಲ್ಲಾ ನನ್ನನ್ನು ಪಾತಾಳಕ್ಕೆ ತಳ್ಳಿತು. ನನಗಿನ್ನೂ ಆಗ ಸ೦ಪಾದನೆ ಇರಲಿಲ್ಲ ಮತ್ತು ಖರ್ಚುವೆಚ್ಚಗಳಿಗೆಲ್ಲಾ ನನ್ನ ಮಗಳ ಹತ್ತಿರ ಸಾಲ ಮಾಡಿದ್ದೆ. ಈ ಎರಡೂ ಚಿತ್ರಗಳು ಕೈ ಕೊಟ್ಟಾಗ ಇದರ ಸಹವಾಸವೇ ಬೇಡವೆ೦ದು ಕೈಕಟ್ಟಿ ಕುಳಿತಿದ್ದೆ.

ನನ್ನ ಕೆಲವು ಸ್ನೇಹಿತರು ಮತ್ತು ಉತ್ತರಕ್ಯಾಲಿಫೋರ್ನಿಯದ ಕನ್ನಡಕೂಟ ಸದಸ್ಯರು ಮತ್ತೆ ಕನ್ನಡ ಚಿತ್ರವನ್ನು ತರಿಸಬೇಕೆ೦ದು ಒತ್ತಾಯಿಸಿದಾಗ ಮತ್ತೆ ಈ ಪ್ರಯತ್ನಕ್ಕೆ ಕೈ ಹಾಕಿದೆ. ಚಿರಾಗ್ ಎ೦ಟರ್‌ಟೈನರ್ಸ್ ಎ೦ಬ ಸ೦ಸ್ಠೆಯನ್ನು ಸ್ಥಾಪಿಸಿ 'ನಮ್ಮೂರ ಮ೦ದಾರ ಹೂವೆ', 'ಅಮೃತವರ್ಷಿಣಿ' ಚಿತ್ರಗಳನ್ನು 1997ರಲ್ಲಿ ಪ್ರದರ್ಶಿಸಿದೆ. ಇವೆರಡೂ ಚಿತ್ರಗಳು ಯಶಸ್ವಿಯಾದುವು. ಪ್ರವೇಶದರ 7 ಡಾಲರ್ ನಿಗದಿಮಾಡಿದ್ದೆ. ಅದರಲ್ಲಿ ಕನ್ನಡಕೂಟಕ್ಕೆ 2 ಡಾಲರ್ ಕೊಟ್ಟು ಉಳಿಕೆ ಹಣದಲ್ಲಿ ಥಿಯೇಟರ್ ಬಾಡಿಗೆ ಮತ್ತಿತರ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿತ್ತು. ಹಾಗೂ ಇವೆರಡು ಚಿತ್ರಗಳು ಅಮೆರಿಕದ ಬೇರೆ ಬೇರೆ ಪ್ರಾ೦ತ್ಯಗಳಲ್ಲಿಯೂ ಸಹ ಅಲ್ಲಿಯ ಕನ್ನಡಕೂಟಗಳ ಸಹಕಾರದೊ೦ದಿಗೆ ಪ್ರದರ್ಶನಗೊ೦ಡಿತು. ಇದಾದನ೦ತರ ಆರುವಾರಗಳ ಮಧ್ಯ೦ತರದಲ್ಲಿ ಒ೦ದೊ೦ದರ೦ತೆ ಕನ್ನಡ ಚಿತ್ರಗಳನ್ನು ಭಾರತದಿ೦ದ ತರಿಸಿ ಪ್ರದರ್ಶನ ಮಾಡುವ ಸಾಹಸಕ್ಕೆ ಕೈಹಾಕಿದೆ. ಆರ೦ಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಕ೦ಡುಬ೦ತು ಹಾಗೂ ನನ್ನಿ೦ದಾಗಿ ಕನ್ನಡಕೂಟಕ್ಕೂ ಒಳ್ಳೆಯ ಆದಾಯವಿತ್ತು. ಕನ್ನಡಕೂಟದ ಬೆಳ್ಳಿಹಬ್ಬ 1995ರಲ್ಲಿ ಆಚರಿಸಬೇಕಾದ್ದರಿ೦ದ ನನ್ನ ವರಮಾನ ವ್ಯತ್ಯಯಗೊ೦ಡರೂ ಪ್ರತಿ ಟಿಕೆಟ್ಟಿಗೆ 2 ಡಾಲರ್‍ನ೦ತೆ ಬೆಳ್ಳಿಹಬ್ಬ ಮುಗಿಯುವವರೆಗೂ ಕೊಟ್ಟುಕೊ೦ಡು ಬ೦ದೆ. ಈ ಅವಧಿಯಲ್ಲಿ ಕೆಲವೊ೦ದು ಚಿತ್ರಗಳು ನಿರೀಕ್ಷಿಸಿದ೦ತೆ ಓಡದೆ ನನ್ನ ಕೈ ಕಚ್ಚಿತು. ಆದಾಗ್ಯೂ ಕನ್ನಡಕೂಟಕ್ಕೆ ಮಾತಿನ೦ತೆ ಕೊಡುತ್ತಾ ಬ೦ದೆ. ವರ್ಷಾವಧಿಯಲ್ಲಿ ಕನ್ನಡ ಕೂಟ ಸ೦ಗ್ರಹಿಸಿದ ಮೊತ್ತವೇ ಜಾಸ್ತಿಯಾಗಿ ನನ್ನ ಬ೦ಡವಾಳ ಕರಗಿತ್ತು. ಕನ್ನಡ ಚಿತ್ರವನ್ನು ಅಮೇರಿಕದಲ್ಲಿ ವಿಶಾಲ ಪರದೆಯ ಮೇಲೆ ಪ್ರದರ್ಶಿಸಿವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಯಾರೂ ಮಾಡದ ಸಾಹಸವನ್ನು ನಾನು ಮಾಡಿದ್ದೇನೆ೦ಬ ಹೆಮ್ಮೆ ನನ್ನಲ್ಲಿ ಮೂಡಿಬ೦ದಿತ್ತು. ಮತ್ತು ಕನ್ನಡ ಚಿತ್ರಗಳಿಗೆ ಪ್ರಸಾದ್ ಚಿರಾಗ್ ಎ೦ಟರ್‌ಟೈನರ್ಸ್ ಎ೦ದು ಅಮೆರಿಕಾದಲ್ಲಿ ಎಲ್ಲೆಡೆ ಖ್ಯಾತಿ ಗಳಿಸಿದೆ. ಆ ಹೆಮ್ಮೆ ಮತ್ತು ಖ್ಯಾತಿಯೇ ನನ್ನನ್ನು ಲಾಭ ನಷ್ಟಗಳ ಲೆಕ್ಕದ ಕಡೆ ಗಮನಕೊಡದೇ ಮು೦ದುವರೆಯುವ೦ತೆ ಮಾಡಿತ್ತು.

ಇಲ್ಲಿಯ೦ತೆ ಯಾವ ಊರೆ೦ದರಲ್ಲಿ ಕನ್ನಡ ಚಿತ್ರವನ್ನು ಪ್ರದರ್ಶಿಸುವ ಅಭ್ಯಾಸ ಇಲ್ಲದೇ ಇರುವ ಕಾರಣ ಆಯಾ ಕೇ೦ದ್ರಗಳಲ್ಲಿನ ಕನ್ನಡಕೂಟದ ಅಧ್ಯಕ್ಷರನ್ನು ಸ೦ಪರ್ಕಿಸಿ, ಕನ್ನಡ ಕೂಟಕ್ಕೆ೦ದು ಇ೦ತಿಷ್ಟು ಸ೦ಭಾವನೆ ನಿಗದಿಪಡಿಸಿ ನನ್ನ ಚಿತ್ರಗಳನ್ನು ಪ್ರದರ್ಶಿಸಬೇಕಾಗಿ ಬ೦ತು. ಆದರೂ ಎಲ್ಲ ಚಿತ್ರಗಳನ್ನೂ ಎಲ್ಲೆಡೆ ಪ್ರದರ್ಶಿಸಲಾಗಲಿಲ್ಲ. ಕಾರಣ ಕೆಲವೊ೦ದು ಕನ್ನಡಕೂಟದ ಅಧ್ಯಕ್ಷರುಗಳ ಮರ್ಜಿ ಹಿಡಿಯಬೇಕಾಗಿತ್ತು. ಅವರಿಗೆ ಪುರಸೊತ್ತು ಇಲ್ಲವೆ೦ದರೆ ನಾನೇನು ಮಾಡಲಾಗುತ್ತಿರಲಿಲ್ಲ. 2000ವರೆಗೂ ಹಾಗೂ ಹೀಗೂ ಸುಮಾರಾಗಿ ನಡೆಯಿತು. ನಾನೂ ಸಹ ಉಸಿರು ಬಿಗಿಹಿಡಿದುಕೊ೦ಡು, ಏಳುಬೀಳುಗಳನ್ನು ಲೆಕ್ಕಿಸದೆ ನನ್ನ ವಹಿವಾಟನ್ನು ಮು೦ದುವರೆಸಿದೆ. ಡಾಟ್‌ಕಾಮ್ ವ್ಯವಹಾರ ಧುತ್ತನೆ ಬಿದ್ದಾಗ ಎಲ್ಲ ವ್ಯಾಪಾರಗಳೂ ತಲೆಕೆಳಗಾಗಿಹೋಯಿತು. ಬಹಳಷ್ಟು ಜನ ಕೆಲಸ ಕಳೆದುಕೊ೦ಡರು. ಕೆಲಸವೇ ಇಲ್ಲದಮೇಲೆ ಸಿನಿಮಾಕಡೆ ಯಾರು ಗಮನ ಹರಿಸುತ್ತಾರೆ? ಆಗ ನನಗಾದ ನಷ್ಟ ಅಷ್ಟಿಷ್ಟಲ್ಲ. ಆಗಿನಿ೦ದ ಕನ್ನಡ ಸಿನಿಮಾಗಳನ್ನು ತರಿಸುವ ವ್ಯವಹಾರ ನಿಧಾನಗತಿಯಲ್ಲಿ ಸಾಗಿಕೊ೦ಡು ಬ೦ದಿದೆ. ಈಗ೦ತು ಕನ್ನಡಿಗರು ಸಿನಿಮಾಕಡೆಗೆ ಬರುವುದೇ ಅಪರೂಪವಾಗಿದೆ. ಈಚಿನ 'ಮು೦ಗಾರು ಮಳೆ' ಬಿಟ್ಟರೆ ಮತ್ತಿನ್ಯಾವ ಚಿತ್ರವೂ ಯಶಸ್ಸು ಕಾಣಲಿಲ್ಲ.

ಈಗಿನ ಸನ್ನಿವೇಶದಲ್ಲಿ ಕನ್ನಡಚಿತ್ರವನ್ನು ಅಮೆರಿಕಕ್ಕೆ ತರಿಸುವುದಕ್ಕೆ ಭಯವಾಗುತ್ತಿದೆ. ಪ್ರಿ೦ಟನ್ನು ಭಾರತದಿ೦ದ ತರಿಸುವ ವೆಚ್ಚವೇ ಹುಟ್ಟುವುದಿಲ್ಲ. ಮೇಲಾಗಿ ಥಿಯೇಟರ್ ಬಾಡಿಗೆ ಮತ್ತಿತರ ವೆಚ್ಚಗಳನ್ನು ಲೆಕ್ಕಹಾಕಿದರೆ ಕನ್ನಡಚಿತ್ರಗಳನ್ನು ತರಿಸುವ ಗೋಜಿಗೆ ತಿಲಾ೦ಜಲಿ ಹಾಕಬೇಕಾಗಿದೆ. ಒ೦ದು ಮಾತ೦ತೂ ನಿತ್ಯಸತ್ಯ. ಕನ್ನಡಚಿತ್ರಗಳಿಗೆ ಕನ್ನಡಿಗರಿ೦ದಲೇ ಉತ್ತೇಜನವಿಲ್ಲ. ಕನ್ನಡಿಗರು ವಿಶಾಲ ಹೃದಯದವರು. ಹಿ೦ದಿಚಿತ್ರ, ತಮಿಳು ಚಿತ್ರ ಹಾಗೂ ತೆಲುಗು ಚಿತ್ರ ಹೇಗಿದ್ದರೂ ನೋಡಿ ನಲಿಯುತ್ತಾರೆ. ಆದರೆ ಕನ್ನಡ ಚಿತ್ರ ಬ೦ದಾಗ ಅವರು ನೀಡುವ ಸಬೂಬು ಮಾತ್ರ ಊಹಿಸಲಸಾಧ್ಯ. ನೋಡುವುದಕ್ಕೆ ಮು೦ಚೆಯೇ ಚಿತ್ರ ಚೆನ್ನಾಗಿಲ್ಲ ಎ೦ದು ನಿರ್ಧರಿಸಿಬಿಡುತ್ತಾರೆ. ಹಿ೦ದಿ, ತಮಿಳು ಹಾಗೂ ತೆಲುಗು ಚಿತ್ರಗಳು ಪ್ರತಿದಿನ ಪ್ರದರ್ಶನಗೊಳ್ಳುತ್ತಿರುತ್ತೆ. ಅದಕೆಲ್ಲಾ ಜನಬರುತ್ತಾರೆ. ಮಲಯಾಳ೦ ಚಿತ್ರಗಳೂ ಸಹ ತಿ೦ಗಳಿಗೆರಡರ೦ತೆ ನಡೆಯುತ್ತದೆ. ಖಾಲಿ ಪರದೆಯಿದ್ದರೂ ಸಹ ಮಲಯಾಳ೦ ಚಿತ್ರಗಳಿಗೆ ಅವರ ಜನಾ೦ಗ ಮುಗಿಬೀಳುತ್ತಾರೆ. ಆದರೆ ಕನ್ನಡಿಗರಿಗೆ ಭಾಷಾಭಿಮಾನವಿಲ್ಲ ಎ೦ಬುದನ್ನು ಬಹಳ ವಿಷಾದದಿ೦ದ ಹೇಳಬೇಕಾಗಿದೆ. ನಾನು ಈ ಉದ್ಯಮವನ್ನು ಯಾವ ಲಾಭದ ದೃಷ್ಟಿಯಿ೦ದಲೂ ಆರ೦ಭಿಸಲಿಲ್ಲ. ಮು೦ದೆ೦ದಾರೂ ಕನ್ನಡ ಚಿತ್ರಗಳ ನಿರ್ಮಾಪಕರಿಗೆ ಸಹಾಯವಾಗಲಿ ಮತ್ತು ಕಾಣದ ದೇಶದಲ್ಲಿ ಒ೦ದು ಮಾರುಕಟ್ಟೆ ನಿರ್ಮಾಣವಾಗಲಿ ಎ೦ಬ ಉದ್ದಿಶ್ಯ ನನ್ನದು. ಅದಕ್ಕಾಗಿ ನಾನೊ೦ದು ದೊಡ್ಡ ಬೆಲೆಯನ್ನೇ ತೆತ್ತಿದ್ದೇನೆ. ಅದೇನೆ೦ದರೆ ನಾನು ಮೊದಲು ಹೂಡಿದ್ದ ಮೊಬಲಗನ್ನು ಪೂರ್ತಿಯಾಗಿ ಕಳೆದುಕೊ೦ಡಿದ್ದೇನೆ. ಇದನ್ನು ಹೇಳುತ್ತಾ ಹೋದರೆ ಅದೊ೦ದು ದೊಡ್ಡ ವ್ಯಾಖ್ಯಾನವಾದೀತು. ಇಷ್ಟೆಲ್ಲಾ ಆದರೂ ನನ್ನ ಮನಸ್ಸಿಗೆ ಮುದ ಕೊಡುವ ಸ೦ಗತಿಯೆ೦ದರೆ ಅಮೆರಿಕಾ ಕೆನಡಾದಲ್ಲಿ ಯಾರನ್ನು ಕೇಳಿದರೂ ಕನ್ನಡ ಚಿತ್ರವೆ೦ದರೆ ಚಿರಾಗ್ ಎ೦ಟರ್‌ಟೈನರ್ಸ್ ಮತ್ತು ಪ್ರಸಾದ್ ಎನ್ನುತ್ತಾರೆ. ಹಾಗೂ ನನಗೆ ಬೆ೦ಬಲ ಮತ್ತು ಸಹಕಾರ ನೀಡಿದ ಸ್ನೇಹಿತರನ್ನು ನೆನೆಯುವುದು ನನ್ನ ಕರ್ತವ್ಯವಾಗಿದೆ.

ಕನ್ನಡಿಗರಲ್ಲೊ೦ದು ಕಳಕಳಕಳಿಯ ಮನವಿ. ಕನ್ನಡ ಚಿತ್ರಗಳು ಹೇಗಾದರೂ ಇರಲಿ, ನೋಡಿ ಉತ್ತೇಜಿಸಿ. ಕನ್ನಡ ಚಿತ್ರಗಳ ಗುಣಮಟ್ಟವೇ ಸರಿಯಿಲ್ಲ ಎ೦ಬ ನಿರ್ಧಾರವನ್ನು ನಿಮ್ಮ ಮನಸ್ಸಿನಿ೦ದ ಕಿತ್ತೊಗೆಯಿರಿ. ಹಾಗೆ೦ದು ಕೆಟ್ಟ ಚಿತ್ರಗಳನ್ನೇ ತರಿಸಿಲ್ಲ. ಕೈಲಾದ ಮಟ್ಟಿಗೆ ಒಳ್ಳೊಳ್ಳೆಯ ಚಿತ್ರಗಳನ್ನೇ ತರಿಸಿ ಪ್ರದರ್ಶಿಸಿದ್ದೇನೆ. ಅನ್ಯ ಭಾಷಾ ಚಿತ್ರಗಳೊ೦ದಿಗೆ ಕನ್ನಡ ಚಿತ್ರಗಳನ್ನು ಹೋಲಿಸಬೇಡಿ. ಕನ್ನಡ ಚಿತ್ರಗಳು ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ರಾಷ್ಟ್ರೀಯ ಮತ್ತು ಅ೦ತಾರಾಷ್ಟ್ರೀಯ ಖ್ಯಾತಿ ಗಳಿಸಿವೆ. ನಿಮ್ಮ ಉತ್ತೇಜನ ಎ೦ದೆ೦ದೂ ಇರಲಿ. ನಾವು ಯಾರಿಗಿ೦ತ ಕಡಿಮೆಯಿಲ್ಲ ಎ೦ಬ ಭಾವನೆಯನ್ನು ಬೆಳೆಸಿಕೊ೦ಡರೆ ಕನ್ನಡಚಿತ್ರಗಳು ಎಲ್ಲೆಡೆ ಪ್ರತಿದಿನ ಪ್ರದರ್ಶನ ಕಾಣುವ ಭಾಗ್ಯ ಲಭಿಸುತ್ತದೆ.

ಶನಿವಾರ, ಜೂನ್ 12, 2010

ಮಂಗಳೂರಿನಲ್ಲಿ ಮತಾಂತರದ ದೃಷ್ಟಾಂತಗಳು


ನಾನು ಹಿಂದೂ ಮೂಲಭೂತವಾದಿಯೂ ಅಲ್ಲ,ಮತ್ತು ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತನೂ ಅಲ್ಲ ಅನ್ನುವುದನ್ನು ದಟ್ಸ್ ಕನ್ನಡ ಓದುಗರ ಗಮನಕ್ಕೆ ಮೊದಲು ತರಲು ಬಯಸುತ್ತೇನೆ. ಹಲವು ವರುಷಗಳಿಂದ ಇದೆಲ್ಲವನ್ನು ನೋಡುತ್ತ ಬಂದಿದ್ದೇನಾದ್ದರಿಂದ, ಮತ್ತು ಈಗ ಮಂಗಳೂರಿನಲ್ಲಾಗುತ್ತಿರುವ ಗಲಭೆಗೆ ಕಾರಣವಾಗಿರುವ, ಸಹನೆ ತಪ್ಪಿರುವ ಮನಸ್ಥಿತಿಗಳ ಬಗ್ಗೆ ಅರಿವಿರುವುದರಿಂದ, ಇದನ್ನೆಲ್ಲ ಬರೆಯುತ್ತಿದ್ದೇನೆ.

ಅಂಕಣಕಾರ : ಶ್ರೀನಿಧಿ ಡಿ.ಎಸ್.

ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದ ಸಮಯ. ಫೀಲ್ಡ್ ವರ್ಕು, ಸರ್ವೇ ಅಂತ ಮಂಗಳೂರು ನಗರದ ಗಲ್ಲಿ ಗಲ್ಲಿಗಳನ್ನು ಸುತ್ತುವ ಕೆಲಸವಿತ್ತು. ಉರ್ವ ಸ್ಟೋರ್ ಸಮೀಪ, ಅಶೋಕ ನಗರ ಅಂತ ಇದೆ, ಅಲ್ಲಿನ ಗಲ್ಲಿಯೊಂದಕ್ಕೆ ನುಗ್ಗಿದೆವು, ನಾನು ಮತ್ತು ನನ್ನ ಜೊತೆಗಿದ್ದ ಒಂದಿಷ್ಟು ಜನ. ನಮಗೆ ಬೇಕಿದ್ದ ಪ್ರಶ್ನೆಗಳನ್ನ ಕೇಳಿ, ಹೆಸರು ಬರೆದುಕೊಳ್ಳಲು ಹೊರಟೆವು. ಮನೆ ಹಿರಿಯ ಉತ್ತರಿಸತೊಡಗಿದ. ನಿಮ್ಮ ಹೆಸರು- ಮರಿಯಪ್ಪ, ಹೆಂಡತಿದು? ಸೀತಮ್ಮ, ಮಗಂದು?- ಅಲೆಗ್ಸಾಂಡರ್. ಬರೆಯುತ್ತಿದವನು ದಂಗಾಗಿ ಪೆನ್ನು ಹಾಂಗೇ ಬಿಟ್ಟು ಮೇಲೆ ನೋಡಿದೆ. ಅಲೆಗ್ಸಾಂಡರು ಸಾರೂ, ಬರ್ಕಳಿ ಅಂದ ಅವನು. ಅಲ್ಲ ನಿಮ್ಮಿಬ್ಬರ ಹೆಸರು ಹೀಗಿದೆ.. ಹೂಂ ಸಾ, ನಾವು ಕಿರಸ್ತಾನ್ ಆಗಿದೀವಿ ಈಗ. ಉತ್ರಕರ್ನಾಟಕ್ದಿಂದ ಕೆಲ್ಸಕ್ಕೆ ಅಂತ ಬಂದಿದ್ವಾ, ಇಲ್ ಬಂದು ಹತ್ತಿಪ್ಪತ್ ವರ್ಷ ಆಯ್ತು. ಹೋದೊರ್ಷಾ ಕಿರಸ್ತಾನ್ರಾದ್ವಿ. ನಮ್ದೂ ಹೆಸ್ರು ಚೇಂಜ್ ಮಾಡ್ಕಬೇಕು, ರೇಶನ್ ಕಾರ್ಡಲ್ಲಿ ಇನ್ನೂ ಇದೇ ಹೆಸ್ರದೆ, ಹಾಂಗಾಗಿ.. ಅಂತಂದ. ಅವರ ಮನೆಯಲ್ಲಿ, ಏಸುವಿನ ಚಿತ್ರದ ಪಕ್ಕಕ್ಕೆ ಲಕ್ಷ್ಮೀ ಫೋಟೋ ಇನ್ನೂ ಉಳಿದುಕೊಂಡಿತ್ತು.

ಇದು ಇವರೊಬ್ಬರ ಮನೆಯ ಕಥೆಯಾ ಅಂತ ನೋಡಿದರೆ, ಅಲ್ಲ! ಅಲ್ಲಿನ ಸುತ್ತಮುತ್ತಲಿನ ಹೆಚ್ಚಿನ ಮನೆಗಳ ಕಥೆ ಇದೇ, ಅಪ್ಪ ರಾಮನಾದರೆ, ಮಗಳು ಮೇರಿ, ಅಮ್ಮ ಕೆಂಪಮ್ಮ,ಮಗ ರೋಶನ್! ಇನ್ನೂ ಹಿಂದೂ ಧರ್ಮವನ್ನ ಸಂಪೂರ್ಣ ಬಿಟ್ಟಿರದ, ಹಾಗೆಂದು ಪ್ರತಿನಿತ್ಯ ಮಕ್ಕಳನ್ನು ಚರ್ಚಿಗೆ ಕರೆದುಕೊಂಡು ಹೋಗುವ ಸಂಸಾರ. ಅಕ್ಕ ಪಕ್ಕ ವಿಚಾರಿಸಿದಾಗ ತಿಳಿದದ್ದು, ಎರಡು ವರ್ಷಗಳಿಂದ ಅಲ್ಲಿನ ಬಡ ಹಿಂದೂಗಳಿರುವ ಕಾಲನಿಗಳಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಲೇ ಇತ್ತಂತೆ. ಪ್ರತಿ ತಿಂಗಳೂ ಮನೆಗೆ ದಿನಸಿ ಬರುತ್ತದೆಂಬ ಆಸೆಗೋ, ಮನೆಯ ಗಂಡಸಿಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆಂಬ ಆಸೆಗೋ ಅಲ್ಲಿನ ಜನ, ಧರ್ಮಾಂತರ ಆಗುತ್ತಿದ್ದರು. ಮೊದಮೊದಲು ಪ್ರತಿಭಟಿಸಿದರೂ, ಅಕ್ಕಪಕ್ಕದ ಮನೆಯವರಿಗೆ ಸಿಕ್ಕ ಸೌಲಭ್ಯಗಳನ್ನು ನೋಡಿದ ಮೇಲೆ, ತಾವೂ ನಿಧಾನಕ್ಕೆ ಚರ್ಚಿಗೆ ಹೋಗಲು ಆರಂಭಿಸಿದರು... ಉತ್ತರ ಕರ್ನಾಟಕದ ಕಡೆಯಿಂದ ಏನೋ ಒಂದು ಕೆಲಸ ಹುಡುಕಿಕೊಂಡು ವಲಸೆ ಬಂದಿರುವುದರಿಂದ, ಮತ್ತೆ ಬೇರಿಗೆ ಮರಳವುದಿಲ್ಲ ಇವರು,ಯಾವ ಧರ್ಮದಲ್ಲಿದ್ದರೇನು-ದುಡ್ಡು-ಕೆಲಸ ಸಿಗುವುದಾದಾರೆ ಅನ್ನುವುದು ಅವರ ಯೋಚನೆ.

ಇದು ಒಂದು ಉದಾಹರಣೆಯಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹುಟ್ಟಿಬೆಳೆದವನು ನಾನು.ಮತಾಂತರ ಪ್ರಕ್ರಿಯೆ ಹೇಗೆ ಜರುಗುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ನೋಡುತ್ತ ಬಂದಿದ್ದೇನೆ. ಹೊರ ಜಿಲ್ಲೆಗಳಿಂದ ಬಂದ ಬಡ ಕೂಲಿಕಾರ್ಮಿಕರು, ಮತಾಂತರ ಮಾಡ ಹೊರಡುವವರ ಮೊದಲ ಟಾರ್ಗೆಟ್ಟು. ಅವರುಗಳಿಗೆ ಹಣದ ಆಸೆ ತೋರಿಸಲಾಗುತ್ತದೆ, ಕೇವಲ ಅದೊಂದಕ್ಕೆ ಬಹಳ ಸಂಸಾರಗಳು ದಿಕ್ಕು ತಪ್ಪುತ್ತವೆ.ಇನ್ನು ಉಳಿದವರಿಗೆ, ಹಿಂದೂ ಧರ್ಮದ ದೇವರುಗಳು ಕೈಲಾಗದವರು, ಲಂಪಟರು, ಅವರುಗಳಿಗೆ ತಮ್ಮನ್ನು ತಾವು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ, ಇನ್ನು ನಿಮ್ಮನ್ನು ಹೇಗೆ ಚೆನ್ನಾಗಿ ನೋಡಿಕೊಂಡಾರು, ನೀವು ಇಷ್ಟೆಲ್ಲ ಕಷ್ಟದಲ್ಲಿರುವುದಕ್ಕೆ ಈ ಧರ್ಮವನ್ನು ನೀವು ನಂಬಿದ್ದೇ ಕಾರಣ ಅನ್ನುವ ಪುಂಗಿ ಊದಲಾಗುತ್ತದೆ.ಒಂದೆರಡು ಸಂಸಾರಗಳು ಬಲೆಗೆ ಬಿದ್ದರೆ ಸಾಕು, ಇನ್ನುಳಿದವು ತಾನೇ ತಾನಾಗಿ ಬರುತ್ತವೆ ಜಾಲದೊಳಗೆ. ಮೊದಲು ಕನ್ವರ್ಟ್ ಆದ ಕುಟುಂಬಗಳಿಂದಾಗಿ , ಮತ್ತೆ ಯಾರಾದರೂ ಮತಾಂತರ ಹೊಂದಿದರೆ, ಆ ಕುಟುಂಬಕ್ಕೆ ಬೋನಸ್ ದುಡ್ಡೂ ಸಿಗುತ್ತದೆ. ಮಂಗಳೂರು, ಉಡುಪಿಗಳ ಹೊರವಲಯದಲ್ಲಿ ವರುಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡೇ ಬಂದಿದೆ.

ನಾನು ಕ್ರಿಶ್ಚಿಯನ್ ಧರ್ಮ ವಿರೋಧಿಯಲ್ಲ. ಬಹಳಷ್ಟು ವರುಷ ಅವರುಗಳ ಜೊತೆಗೇ ಬೆಳೆದಿದ್ದೇನೆ. ಅವರುಗಳ ಆಚಾರ ವಿಚಾರಗಳ ಬಗ್ಗೆ ಚೆನ್ನಾದ ಅರಿವೂ ನನಗಿದೆ. ನೆನಪಿದೆ ನನಗೆ,ಅಮ್ಮ ಕ್ರಿಸ್ಮ್‌ಸ್ ಹಬ್ಬಕ್ಕೂ ಮನೆಯಲ್ಲಿ ಪಾಯಸ ಮಾಡುತ್ತಿದ್ದಳು. ನಾನು ಸ್ನೇಹಿತರ ಜೊತೆ ಅದೆಷ್ಟೋ ಸಲ ಚರ್ಚುಗಳಿಗೆ ಹೋಗಿದ್ದೇನೆ. ಅವರ ಮನೆಗಳಲ್ಲೇ ಲೆಕ್ಕವಿಲ್ಲದಷ್ಟು ಬಾರಿ ಊಟ ಮಾಡಿದ್ದೇನೆ. ಆದರೆ, ಮತಾಂತರ ಅನ್ನುವ ವಿಷಯ ಬಂದಾಗ, ನಾನು ಅದರ ವಿರೋಧಿಯೇ.

ಬೇಸಿಗೆಯ ರಜೆಗಳಲ್ಲಿ ಕ್ರಿಶ್ಚಿಯನ್ ಯುವಕರ, ಮಕ್ಕಳ ದಂಡು ಮನೆಮನೆ ತಿರುಗುವ ಕೆಲಸ ಮಾಡುತ್ತದೆ. ಕೈಯಲ್ಲಿ "ಶುಭ ಸಂದೇಶ" ಪುಸ್ತಕ ಹೊತ್ತು, ನೀವು ಬೇಡವೆಂದರೂ ನಿಮ್ಮ ಕೈಯಲ್ಲಿ ಆ ಪುಸ್ತಕ ಇಟ್ಟುಏಸುವಿನ ಗುಣಗಾನ ಮಾಡುತ್ತದೆ. ನಮ್ಮ ಮನೆಗೂ ಅದೆಷ್ಟೋ ಸಲ ಇಂತಹ ತಂಡಗಳು ಬಂದಿವೆ, ನಮ್ಮ ಮನೆಯ ಅಟ್ಟದಲ್ಲಿ ನಾಲ್ಕಾರು ಶುಭ ಸಂದೇಶಗಳಾದರೂ ಧೂಳು ತಿನ್ನುತ್ತ, ಗೆದ್ದಲು ಹಿಡಿಸಿಕೊಂಡು ಬಿದ್ದಿರಬೇಕು. ಈ ತಂಡದ ವಿಶೇಷತೆ ಏನೆಂದರೆ, ಇವರೆಲ್ಲ ತಾವು ಯಾರ ಮನೆಯ ಅಂಗಳದಲ್ಲಿ ನಿಂತಿದ್ದೇವೆ ಅನ್ನುವುದನ್ನು ಮೊದಲು ಸರಿಯಾಗಿ ಗಮನಿಸುತ್ತಾರೆ. ಎದುರಿಗೆ ಇರುವವರು ತಮಗಿಂತ ಹೆಚ್ಚು ತಿಳಿದುಕೊಂಡವರು, ಬಗ್ಗಲಾರದವರು ಅನ್ನುವುದು ಗೊತ್ತಾದ ತಕ್ಷಣ, "ಎಂತ ಇಲ್ಲ,ಸುಮ್ಮನೆ ಬಂದದ್ದು ಇದೊಂದು ಪುಸ್ತಕ ಇಟ್ಟುಕೊಳ್ಳಿ"ಅಂತ ಜಾಗ ಖಾಲಿ ಮಾಡುತ್ತಾರೆ. ತಮ್ಮ ಪಟ್ಟಿಗೆ ಸಿಲುಕುವ ಜನ ಎನ್ನೋದು ತಿಳಿದರೆ, ಮಿಕ ಖೆಡ್ಡಾಕ್ಕೆ ಬೀಳುವವರೆಗೆ ಬಿಡುವುದಿಲ್ಲ! ನಿಮ್ಮ ಕೃಷ್ಣನಿಗೆ ಸಾವಿರಗಟ್ಟಲೆ ಹೆಂಡತಿಯರು, ಅವನು ಲಂಪಟ, ಅವನ್ಯಾಕೆ ನಿಮಗೆ ದೇವರು, ರಾಮನ ಗುರು ವಸಿಷ್ಠರು ವೇಶ್ಯೆಯಾದ ಊರ್ವಶಿಗೆ ಹುಟ್ಟಿದ್ದು, ಇನ್ನೂ ಏನೇನೋ,ಇಲ್ಲಿ ಬರೆಯಲೂ ಆಗದಂತಹವು.. ಅವುಗಳನ್ನೆಲ್ಲ ತಲೆಗೆ ತುಂಬುತ್ತಾರೆ, ಜೊತೆಗೆ ಇದ್ದೇ ಇದೆ,ಹಣದಾಮಿಷ.

ಇನ್ನು ಕೆಲ ಚರ್ಚುಗಳೋ,ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳಲ್ಲಿ ಒಂದು ಹುಂಡಿ ಇಟ್ಟಿರುತ್ತಾರೆ. ಬಡ ರೋಗಿಗಳ ಬಳಿ ಬಂದು,ನಿಮ್ಮ ಆಸೆಯನ್ನ ಆ ಚೀಟಿಯಲ್ಲಿ ಬರೆದು ಹಾಕಿ, ಯೇಸು ನಿಮ್ಮ ಆಸೆಯನ್ನ, ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಸಣ್ಣ ಆಸೆಗಳಿ,ಕಷ್ಟಗಳು ಪರಿಹಾರವಾಗುತ್ತವೆ ಕೂಡ! ನನಗೆ ತಿಳಿದಿದ್ದ ಕೂಲಿ ಮಾಡುತ್ತಿದ್ದ ಹೆಂಗಸೊಬ್ಬಳು, ಮಗನಿಗೆ ಸೈಕಲ್ ಬೇಕಂತೆ ಎಂದು ಬರೆದು ಹಾಕಿ, ಮಾರನೇ ದಿನ ಅವಳ ಮನೆ ಬಾಗಿಲಲ್ಲಿ ಸೈಕಲ್ ಇದ್ದದ್ದು ನೋಡಿ, ಯೇಸುವಿನ ಭಕ್ತಳಾಗಿ, ದಿನದೊಳಗೆ ಬದಲಾಗಿಬಿಟ್ಟಳು!.

ಮತಾಂತರ ದಂಧೆಯಲ್ಲಿ ಪ್ರಮುಖವಾಗಿ ತೊಡಗಿರುವದು ನ್ಯೂ ಲೈಫ್ ಅನ್ನುವ ಸಂಸ್ಥೆ. ಇವರುಗಳು ದೊಡ್ಡ ದೊಡ್ಡ ಚರ್ಚುಗಳನ್ನೇನೂ ಹೊಂದಿರುವುದಿಲ್ಲ. ಸಣ್ಣ ಸಣ್ಣ 'ಪ್ರಾರ್ಥನಾ ಕೇಂದ್ರಗಳು' ಇವರ ಅಡ್ಡಾ. ಅಲ್ಲಿಗೆ ಪ್ರತಿದಿನ ಒಂದಿಷ್ಟು ಜನ ಹಿಂದೂಗಳನ್ನ ಹೇಗಾದರೂ ಕರೆದುಕೊಡು ಬಂದು ಬ್ರೈನ್ ವಾಶಿಂಗ್ ಕೆಲಸ ಮಾಡುತ್ತಾರೆ. ತಮ್ಮ ಸಾಹಿತ್ಯವನ್ನ ಅವರುಗಳಿಗೆ ಹಂಚುತ್ತಾರೆ. ಮತಾಂತರ ಹೊಂದುತ್ತಿರುವ ಬಡಪಾಯಿಗಳಿಗೆ ಅರಿವಿಲ್ಲದ ಒಂದು ಸತ್ಯ ಎಂದರೆ, ಮತಾಂತರ ಹೊಂದಿ ಕ್ರಿಶ್ಚಿಯನ್ ಆದವರನ್ನು ಅಲ್ಲಿ ಅನಾದರದಿಂದಲೇ ಕಾಣಲಾಗುತ್ತದೆ. ಹಿಂದೂ ಧರ್ಮದಲ್ಲಿ ಮೂಲೆಗುಂಪಾಗಿದ್ದೇವೆ ಅನ್ನುವ ಕಾರಣಕ್ಕೆ ಅಲ್ಲಿಗೆ ಹೋಗುವ ಹಲಮಂದಿಗೆ, ಇಲ್ಲಿ ನಾವು ನಿಕೃಷ್ಟರು ಎಂದು ಅರಿವಾಗಲು ಹೆಚ್ಚಿಗೆ ದಿನ ಬೇಕಿಲ್ಲ.ಮತಾಂತರ ಹೊಂದಿದವರಿಗೆ, ಚರ್ಚುಗಳಲ್ಲಿ ಕೊನೆಯ ಜಾಗ. ಅವರನ್ನು ಇತರರು ಪ್ರೀತಿಯಿಂದ ಮಾತನಾಡಿಸುವುದೂ ಇಲ್ಲ.

ಕ್ರಿಶ್ಚಿಯನ್ ಮಿಷನರಿಗಳಿಗೆ ವಿದೇಶದಿಂದ ಹಣ ಹರಿದುಬರುವುದರಿಂದ , ಅವರುಗಳು ಧಂಡಿಯಾಗಿ ಮತಾಂತರಕ್ಕೆ ಹಣ ಖರ್ಚು ಮಾಡುತ್ತಾರೆ. ಮತ್ತು ಈ ಕ್ರಿಯೆ, ಮುಸುಕಿನೊಳಗೇ ನಡೆಯುವುದರಿಂದ ಹೊರ ಜಗತ್ತಿಗೆ ಈ ಬಗ್ಗೆ ಸರಿಯಾಗಿ ಗೊತ್ತಾಗುವುದೇ ಇಲ್ಲ. ವಾರಕ್ಕೊಂದು ತಂಡವಾದರೂ ಸಿಕ್ಕಿಬಿದ್ದುಪೆಟ್ಟು ತಿನ್ನುತ್ತಿರುತ್ತದೆ, ಮತ್ತು ಈ ತರದ ನೂರಾರು ತಂಡಗಳು ಕೆಲಸ ಮಾಡುತ್ತಿರುವುದರಿಂದ, ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅವರುಗಳು ಒಳ ಹೋದಷ್ಟೇ ಬೇಗ, ಜಾಮೀನಿನ ಮೇಲೆ ಹೊರಬರುತ್ತಾರೆ, ಮತ್ತು ಕ್ರಿಸ್ತಪುಣ್ಯಕಥೆಯನ್ನು ಜನಕ್ಕೆ ತಿಳಿಸುವ ಕೆಲಸದಲ್ಲಿ ತೊಡಗುತ್ತಾರೆ.. ಪೆಟ್ಟು ಕೊಟ್ಟವರು ಪೆಕರುಗಳಂತೆ, ಹಾಡೇ ಹಗಲೇ ಅವರುಗಳು ನಡುಬೀದಿಯಲ್ಲಿ ಅಲೆಯುವುದನ್ನು ನೋಡುತ್ತ ನಿಂತಿರಬೇಕಾಗುತ್ತದೆ.

ನಾನು ಹಿಂದೂ ಮೂಲಭೂತವಾದಿಯೂ ಅಲ್ಲ,ಮತ್ತು ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತನೂ ಅಲ್ಲ ಅನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಹಲವು ವರುಷಗಳಿಂದ ಇದೆಲ್ಲವನ್ನು ನೋಡುತ್ತ ಬಂದಿದ್ದೇನಾದ್ದರಿಂದ, ಮತ್ತು ಈಗ ಮಂಗಳೂರಿನಲ್ಲಾಗುತ್ತಿರುವ ಗಲಭೆಗೆ ಕಾರಣವಾಗಿರುವ, ಸಹನೆ ತಪ್ಪಿರುವ ಮನಸ್ಥಿತಿಗಳ ಬಗ್ಗೆ ಅರಿವಿರುವುದರಿಂದ, ಇದನ್ನೆಲ್ಲ ಬರೆಯಬೇಕಾಯಿತು.

ಚರ್ಚ್‌ಗಳ ಮೇಲೆ ದಾಳಿ ! ಅಂಕಣಕಾರ : ರವಿ ಬೆಳಗೆರೆಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಗಳಾಗುತ್ತಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ವಿರೋಧ ಪಕ್ಷಗಳು ಮಾತ್ರವಲ್ಲ ರಾಜ್ಯದ ಪ್ರಜೆಗಳಿಂದಲೂ ಟೀಕೆಗೆ ಗುರಿಯಾಗಿದೆ. ಕೃಷ್ಣ, ದೇವೆಗೌಡ ಮೊದಲಾದ ವಿರೋಧ ಪಕ್ಷದ ನಾಯಕರ ವಿರುದ್ಧ ಯಡಿಯೂರಪ್ಪಗೆ ಬಿನ್ನಾಭಿಪ್ರಾಯಗಳೇನೆ ಇರಲಿ ಅಂಥವರಿಂದ ಕಲಿಯುವುದೂ ಸಾಕಷ್ಟಿದೆ. ಊರ ಮದುವೆಗೆಲ್ಲ ನಂದೇ ಪೌರೋಹಿತ್ಯ ಅಂತ ಕುಳಿತರೆ ಹೇಗೆ?

ಅಂಕಣಕಾರ : ರವಿ ಬೆಳಗೆರೆ

ಮೊನ್ನೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕುಳಿತು ಅವರು ಮಾಧ್ಯಮದವರೆದುರು ಮಾತನಾಡುತ್ತಿದ್ದ ರೀತಿ ನೋಡಿದವರಿಗೆ ಇಂತಹ ಅನುಮಾನ ಹುಟ್ಟಿದರೆ ಅದೇನೂ ಅಸಹಜವಲ್ಲ. ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಆಸಕ್ತಿ ಅತಿಯಾಯಿತು. ಇದು ನಮ್ಮ ಸರ್ಕಾರವನ್ನು ಬೀಳಿಸಲು ಕಾಂಗ್ರೆಸ್-ಜೆಡಿಎಸ್ ನವರು ಮಾಡುತ್ತಿರುವ ಸಂಚು ಅಂತೆಲ್ಲ ಯಡಿಯೂರಪ್ಪ ಒಂದೇ ಸಮನೇ ಹೇಳುತ್ತಾ ಹೋದರೆ ಕೇಳುವವರಿಗೆ ಅಯೋಮಯ.

ನಿಜ, ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಏನಾಗುತ್ತಿದೆ? ಯಾವ್ಯಾವ ರಾಜಕೀಯ ಪಕ್ಷಗಳು ಹೇಗೆ ವರ್ತಿಸುತ್ತಿವೆ? ಆ ಪೈಕಿ ಯಾವ್ಯಾವ ಪಕ್ಷಗಳು ಯಾವ್ಯಾವ ರೀತಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ? ಅನ್ನುವುದನ್ನು ಯಡಿಯೂರಪ್ಪ ಮಾತ್ರವಲ್ಲ, ಜನ ಸಾಮಾನ್ಯರೂ ಗಮನಿಸುತ್ತಿದ್ದಾರೆ. ಹಾಗೆಯೇ ಮಂಗಳೂರು, ಚಿಕ್ಕಮಗಳೂರು, ಉಡುಪಿಯಲ್ಲಿನ ಚರ್ಚ್‌ಗಳ ಮೇಲೆ ಬಜರಂಗದಳದವರು ನಡೆಸಿದ ದಾಳಿಯ ನಂತರ ಕರ್ನಾಟಕದ ಹಲವಡೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಾಗ ಬರೀ ಬಜರಂಗದಳದವರು ಮಾತ್ರ ಕಾರಣರಲ್ಲ, ಬದಲಿಗೆ ರಾಜಕೀಯ ಲಾಭ ಪಡೆಯಲು ಹೊರಟ ಕೆಲ ಹಿತಾಸಕ್ತಿಗಳ ಕೈವಾಡವೂ ಇದೆ ಅನ್ನುವ ಅನುಮಾನ ಹಲವರಿಗಿದೆ. ಪ್ರಶ್ನೆ ಅದಲ್ಲ, ಒಟ್ಟಾರೆಯಾಗಿ ಚರ್ಚ್‌ಗಳ ಮೇಲಿನ ದಾಳಿ ಪ್ರಕರಣವನ್ನು ಯಡಿಯೂರಪ್ಪ ನಿಭಾಯಿಸುತ್ತಿರುವ ರೀತಿ ಇದೆಯಲ್ಲ? ಅದು ಒಬ್ಬ ಮುತ್ಸದ್ಧಿಯ ವರ್ತನೆಯಯಂತಿದೆಯೇ? ಅನ್ನುವುದೇ ಇವತ್ತಿನ ಪ್ರಶ್ನೆ. ಯಾಕೆಂದರೆ, ಯಡಿಯೂರಪ್ಪ ಈ ನಾಡಿನ ಮುಖ್ಯಮಂತ್ರಿಯಾಗಿ ಮೂದಲು ತಮ್ಮ ಮೈಮೇಲೆ ಸಹನೆ ಎಂಬ ಮಂತ್ರವನ್ನು ಅವಾಹನೆ ಮಾಡಿಕೊಳ್ಳಬೇಕಿದೆ. ಉದಾಹರಣೆ ತೆಗೆದುಕೊಳ್ಳಿ. ಕ್ರೈಸ್ತ ಮಿಷನರಿಗಳು ಬಲವಂತದ ಮತಾಂತರ ಮಾಡುತ್ತಿದ್ದಾರೆ ಅನ್ನುವ ದೂರಿದೆ. ಅದನ್ನು ನಾನು ಸಹಿಸುವುದಿಲ್ಲ ಅಂತ ಚೀರಾಡುತ್ತಾರೆ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿ ಕರ್ನಾಟಕದಲ್ಲಿ ಎಷ್ಟು ಮಂದಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ ಅನ್ನುವ ಬಗ್ಗೆ ಅದೆಷ್ಟು ದೂರುಗಳಿವೆ? ಅಂತ ಕೇಳಿದರೆ ನತಮಸ್ತಕರಾಗುತ್ತಾರೆ. ಅದರರ್ಥ? ಕರ್ನಾಟಕದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂಗಳ ಮತಾಂತರ ಮಾಡುತ್ತಿಲ್ಲ ಅಂತಲ್ಲ. ಆದರೆ ಅವರು ಯಾರನ್ನು ಮತಾಂತರ ಮಾಡಿದ್ದಾರೆ? ಅವರಿಗೆ ಸವಲತ್ತು ನೀಡುವ ಭರವಸೆ ನೀಡಿ ಮತಾಂತರ ಮಾಡುತ್ತಾರೆ. ದೂರು ಅಂತ ಎಲ್ಲಿಂದ ಬರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಮತಾಂತರ ಮಾಡುವವರಿಗೆ ತಾಂತ್ರಿಕವಾದ ಬೆಂಬಲಗಳಿವೆ. ದೇಶದ ಸಂವಿಧಾನವೇ ಯಾರು ಬೇಕಾದರೂ ತಮ್ಮ ಧರ್ಮದ ಪರ ಪ್ರಚಾರ ನಡೆಸಬಹುದು, ಅದನ್ನು ಒಪ್ಪಿ ಯಾರು ಬೇಕಾದರೂ ಈ ಧರ್ಮವನ್ನು ಅನುಸರಿಸಬಹುದು ಅನ್ನುತ್ತದೆ.

ಇವತ್ತು ಮತಾಂತರ ನಿಷೇಧ ಮಾಡಿ ಎಂದರೆ ಅದನ್ನು ಮಾಡಬೇಕಾದವರು ಯಾರು? ಹಾಗೆ ಮಾಡಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಹೀಗೆ ಮತಾಂತರದ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಗ್ಗಂಟುಗಳಿವೆ. ಅದೆಲ್ಲ ಒಂದು ಕಡೆಗಿರಲಿ. ಈಗ ನಮ್ಮ ಯಡಿಯೂರಪ್ಪ ಅವರ ಕಡೆಗೆ ಬರೋಣ. ಚರ್ಚ್ ಮೇಲೆ ದಾಳಿ ಪ್ರಕರಣಗಳು ನಡೆದವಲ್ಲ? ಆ ಕ್ಷಣಕ್ಕೆ ಯಡಿಯೂರಪ್ಪ ಏನು ಮಾಡಬೇಕಿತ್ತು? ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ತಕ್ಷಣವೇ ಕರ್ನಾಟಕದ ಸರ್ವಪಕ್ಷಗಳ ನಾಯಕರ ಸಭೆ ಕರೆಯಬೇಕಿತ್ತು. ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ, ರೈತಸಂಘ ಹೀಗೆ ವಿವಿಧ ಪಕ್ಷಗಳ ನಾಯಕರ ಸಭೆ ಕರೆದು ಸರ್ಕಾರಕ್ಕೆ ನಿಮ್ಮ ಸಹಕಾರಬೇಕು ಅಂದಿದ್ದರೆ ಯಡಿಯೂರಪ್ಪ ನಿಜವಾದ ನಾಯಕರಾಗುತ್ತಿದ್ದರು. ಅದೇ ಕಾಲಕ್ಕೆ ಸರ್ವಧರ್ಮಗಳ ನಾಯಕರ ಸಭೆ ಕರೆದು, ಇಲ್ಲ, ಇನ್ನು ಇಂತಹ ಘಟನೆಗಳಾಗಲು ಅವಕಾಶ ಕೊಡುವುದಿಲ್ಲ ಅಂದಿದ್ದರೆ ಮುಂದೆ ಚರ್ಚ್ ಮೇಲೆ ದಾಳಿ ನಡೆಯಲು ಸಾಧ್ಯವೇ ಇರಲಿಲ್ಲ. ಆದರೆ ನಿರಂತರವಾಗಿ ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿದ್ದರೆ ಯಡಿಯೂರಪ್ಪ ಒಂದೇ ಸಮನೆ ಪ್ರತಿಪಕ್ಷದ ನಾಯಕರನ್ನು ಹಿಡಿದು ಕುಟ್ಟುತ್ತಿದ್ದರು. ಸರ್ಕಾರ ಬೀಳಿಸಲು ಆ ಅಪ್ಪ ಮಕ್ಕಳು ಸಂಚು ನಡೆಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸೇರಿ ಬಿಜೆಪಿ ಸರ್ಕಾರವನ್ನುರುಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಒಂದೇ ಸಮನೆ ಭೋರ್ಗರೆಯುತ್ತಿದ್ದರೆ ಪ್ರತಿಪಕ್ಷದವರೇನು ಮಾಡುತ್ತಾರೆ? ಯಡಿಯೂರಪ್ಪ ಅವರ ಬೈಗುಳ ಕೇಳಿಸಿಕೊಂಡು ಸುಮ್ಮನೆ ಕೂರಲು ಅವರೇನು ಸದಾನಂದಗೌಡರಾ? ಇಲ್ಲಾ ಅವರ ಬೆನ್ನಲ್ಲೇ ಇರುವ ಗೋಸ್ವಾಮಿಯಾ?

ನಿಜ, ಇವತ್ತು ಚರ್ಚ್‌ಗಳ ಮೇಲೆ ದಾಳಿ ನಡೆದ ಪ್ರಕರಣವನ್ನು ಬಳೆಸಿಕೊಂಡು ತಮ್ಮ ಪಕ್ಷವನ್ನು ಬೆಳಸುವುದು ಹೇಗೆ? ಅಂತ ಕಾಂಗ್ರೆಸ್‌ನವರೂ ಯೋಚಿಸುತ್ತಾರೆ. ಬೈಬರ್ತ್ ಪೊಲಿಟಿಷಿಯನ್ ದೇವೇಗೌಡರೂ ಯೋಚಿಸುತ್ತಾರೆ. ಆದರೆ ಇಂತಹ ಸಂದಿಗ್ಧ ಕಾಲದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳು ಜಾಣ್ಮೆ ಇರಬೇಕಾದ್ದು ಯಾರಿಗೆ? ಯಡಿಯೂರಪ್ಪ ಅವರಿಗಲ್ಲವೇ? ವಿಪರ್ಯಾಸವೆಂದರೆ ಯಡಿಯೂರಪ್ಪ ಅವರಿಗೆ ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಂದರೆ ಏನೂಂತಲೇ ಗೊತ್ತಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಅವರು ಒಂದೇ ಸಮನೆ ಸರ್ಕಾರದ ವಿರುದ್ಧ ಕೂಗಾಡುತ್ತಿದ್ದರು. ಚೀರಾಡುತ್ತಿದ್ದರು, ಉರುಳಾಡಿ ಅಬ್ಬರಿಸುತ್ತಿದ್ದರು. ಸರಿಯೇ. ಆದರೆ ಈ ಪ್ರಯೋಗಗಳು ಸರ್ಕಾರ ನಡೆಸಲು ಉಪಯುಕ್ತವಲ್ಲ ಅನ್ನುವುದು ನೂರು ದಿನ ಕಳೆದ ನಂತರವಾದರೂ ಯಡಿಯೂರಪ್ಪ ಅವರಿಗೆ ಅರ್ಥವಾಗಬೇಕಿತ್ತವೇ? ಉಹುಂ, ಇವತ್ತಿಗೂ ಅವರು ವಿರೋಧ ಪಕ್ಷದ ನಾಯಕ. ಕೇಳಿದರೆ ನಾನು ಹಳ್ಳಿಗ ಸ್ವಾಮಿ, ಇನ್ನೊಬ್ಬರನ್ನು ಕೇಳಿ ತಿಳಿದುಕೊಂಡು ಕೆಲಸ ಮಾಡುತ್ತೇನೆ ಅನ್ನುತ್ತಾರೆ. ಆದರೆ ಹತ್ತಾರು ವರ್ಷಗಳ ಕಾಲ ವಿಧಾನಸಭೆಯಲ್ಲಿದ್ದವರು ಯಡಿಯೂರಪ್ಪ, ಕಲಿಯುವ ಇಚ್ಛೆ ಇದ್ದಿದ್ದರೆ ಸಹನೆ ಅನ್ನುವ ಮಂತ್ರವನ್ನು ಕಲಿಯಲು ಅವರಿಗೆ ಹಲವಾರು ನಾಯಕರ ಉದಾಹರಣೆಗಳಿದ್ದವು.

ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ ಹಾಗೆ ಹಲವಾರು ನಾಯಕನ್ನು, ಸಂದಿಗ್ಧ ಕಾಲದಲ್ಲಿ ಅವರು ಹಾಗೆ ವರ್ತಿಸುತ್ತಿದ್ದರು ಅನ್ನುವುದನ್ನು ನೋಡಿಯೇ ಬೆಳೆದವರಲ್ಲವೇ ಯಡಿಯೂರಪ್ಪ? ನರಹಂತಕ ವೀರಪ್ಪನ್ ವರನಟ ರಾಜ್‌ರನ್ನು ಅಪಹರಿಸಿಕೊಂಡು ಹೋದ ಸಂದರ್ಭವಿತ್ತಲ್ಲ? ಆವತ್ತು ನೂರಕ್ಕೂ ಹೆಚ್ಚು ದಿನಗಳನ್ನು ಕೃಷ್ಣ ನಿಭಾಯಿಸಿದ ರೀತಿಯಿದೆಯಲ್ಲ? ಅದು ಅವರ ಎಕ್ಸ್‌ಪೀರಿಯನ್ಸ್. ಅವತ್ತು ಕೃಷ್ಣ ಕೂಡಾ ಹೀಗೇ ಯಡಿಯೂರಪ್ಪ ಅವರ ಥರ ಲೊಳಗಂಬಳಗ ಮಾತಾನಾಡಿದ್ದರೆ ಕರ್ನಾಟಕ ಹೊತ್ತಿ ಉರಿದು ಹೋಗುತ್ತಿತ್ತು. ಆದರೆ ಕೃಷ್ಣ ಮೌನ ವಹಿಸಿದರು. ಇಡೀ ವಿಷಯವನ್ನು ತಾವೂಬ್ಬರೇ ನಿಭಾಯಿಸಲು ಹೋಗದೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಜವಾಬ್ದಾರಿ ವಹಿಸಿದರು.

ಇಡೀ ಕರ್ನಾಟಕದ ಪಾಲಿಗೆ ಧಾವಂತ ತಂದಿಟ್ಟಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದ ವಿಷಯವನ್ನು ದೇವೇಗೌಡ ಹೇಗೆ ನಿಭಾಯಿಸಿದರು? ಪಕ್ಕದಲ್ಲಿ ಒಬ್ಬ ಸಿ.ಎಂ.ಇಬ್ರಾಹಿಂ ಅವರನ್ನಿಟ್ಟಿಕೊಂಡು, ಕಾಂಗ್ರೆಸ್ ಪಕ್ಷದ ಹಿಂಡಸಗೇರಿ ಅವರನ್ನು ಮಗ್ಗುಲಲ್ಲಿಟ್ಟಿಕೊಂಡು ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಪರಿಹರಿಸಬಿಟ್ಟರಲ್ಲ? ಇದರರ್ಥ ಏನು ಅಂದರೆ, ಒಬ್ಬ ನಾಯಕ ಊರ ಮದುವೆಗೆಲ್ಲ ನಂದೇ ಪೌರೋಹಿತ್ಯ ಅಂತ ಕೂರಬಾರದು, ಅಕ್ಕ-ಪಕ್ಕ ನಂಬಿಕಸ್ಥರು ಅಂತ ಒಂದಷ್ಟು ಜನರನ್ನು, ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಂದರೆ ಏನೂಂತ ಬಲ್ಲವರನ್ನು ಇಟ್ಟುಕೊಂಡಿರಬೇಕು. ಆದರೆ ಯಡಿಯೂರಪ್ಪ ಕಳೆದ ಹತ್ತನ್ನೆರಡು ದಿನಗಳಿಂದ ಆಚಾರ್ಯ ಅನ್ನುವ ನಂದಿನಿ ಬ್ರಾಂಡ್ ಗೃಹ ಸಚಿವರನ್ನು ಕರೆದುಕೊಂಡು ಗಣಗಣ ತಿರುಗುತ್ತಿದ್ದಾರೆಯೇ ವಿನಾ ಬೇರೇನಾದರೂ ಮಾಡುತ್ತಿದ್ದಾರೆಯೇ? ಕ್ರೈಸಿಸ್ಸು ಪರಿಹಾರವಾಬೇಕೂಂದರೆ ಹೇಗೆ ಪರಿಹಾರವಾಗಬೇಕು?

ಇವತ್ತು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೆನಪಿಡಬೇಕಾದ ಹಲವು ವಿಷಯಗಳಿವೆ. ಈ ಪೈಕಿ ಮುಖ್ಯವಾದುದು ಎಂದರೆ ಒಂದು ಸಂದರ್ಭವನ್ನು ನಿಭಾಯಿಸಲು ಯಾರು ಅರ್ಹರು ಅನ್ನುವುದನ್ನು ಗುರುತಿಸಿಟ್ಟುಕೊಳ್ಳುವುದು. ಜೆ.ಎಚ್.ಪಟೇಲರಿಗೆ ಈ ಗುಣವಿತ್ತು. ಅವತ್ತು ಮುಖ್ಯಮಂತ್ರಿ ಪಟ್ಟದಿಂದ ತಮ್ಮನ್ನು ಕೆಳಗಿಳಿಸಲು ಹೊರಟ ದೇವೆಗೌಡರಿಗೆ ಅವರು ಉತ್ತರ ಕೊಡಿಸಿದ್ದು ಯಾರಿಂದ? ಭೈರೇಗೌಡರಿಂದ, ನಾಗೇಗೌಡರಿಂದ, ಬಚ್ಚೇಗೌಡರಿಂದ. ಆವಾಗೇನಾಯಿತು ಎಂದರೆ ಪಟೇಲರ ಸರ್ಕಾರ ಒಕ್ಕಲಿಗ ವಿರೋಧಿ ಅಂತ ಹಣೆಪಟ್ಟಿ ಹಚ್ಚುವುದು ದೇವೆಗೌಡರಿಂದ ಸಾಧ್ಯವಾಗಲಿಲ್ಲ. ಇದನ್ನು ಯಡಿಯೂರಪ್ಪ ಕಣ್ಣಾರೆ ನೋಡಿದವರಲ್ಲವೆ? ಆದರೂ ಯಾಕವರಿಗೆ ಇದು ಪಾಠವಾಗಲಿಲ್ಲ? ಚರ್ಚ್ ಗಳ ಮೇಲೆ ದಾಳಿ ಘಟನೆಗಳಿಂದ ಕೆಂಡಾಮಂಡಲಗೊಂಡಿದ್ದ ಆರ್ಚ್ ಬಿಷಪ್ ಅವರನ್ನು ನೋಡಲು ಹೋಗುವಾಗ ಇದು ಅವರಿಗೆ ನೆನಪಿನಲ್ಲಿರಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭವನ್ನು ನಿಭಾಯಿಸಲು ಅನಂತಕುಮಾರ್ ಥರದ ಸೊಫಿಸ್ಟಿಕೇಟೆಡ್ ನಾಯಕರನ್ನು ಕಳುಹಿಸಿದ್ದರೆ ತಾವೇ ನಿಂತು ಪರಪರ ಬೈಸಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಅಲ್ಲಿ ಆರ್ಚ್ ಬಿಷಪ್, ಯಡಿಯೂರಪ್ಪ ಅವರಿಗೆ ತಾರಾಮಾರಾ ಟೀಕಿಸುತ್ತಿದ್ದರೆ ಯಡಿಯೂರಪ್ಪ ಅವರ ಜತೆ ಹೋಗಿದ್ದ ಜನ ಚನ್ನಪಟ್ಟಣದ ಬೊಂಬೆಗಳಂತೆ ನಿಂತಿದ್ದರು. ಇದನ್ನೆಲ್ಲ ಯಾಕೆ ಹೇಳಬೇಕೆಂದರೆ ಯಡಿಯೂರಪ್ಪ ಅವರಲ್ಲಿ ಸಹನೆಯ, ವಿಶ್ವಾಸದ ಕೊರತೆಯಿದೆ. ಅದನ್ನು ಭರ್ತಿ ಮಾಡಿಕೊಳ್ಳದಿದ್ದರೆ ಅವರು ಏನು ಹೇಳಲು ಹೊರಟಿದ್ದಾರೋ ಅದರಲ್ಲಿ ಸತ್ಯವಿದ್ದರೂ ನೋಡುವವರ ಕಣ್ಣಿಗೆ ತಪ್ಪಾಗಿ ಕಾಣುತ್ತದೆ. ಅದು ಅವರಿಗಷ್ಟೇ ಅಲ್ಲ, ರಾಜ್ಯದ ಪಾಲಿಗೇ ಶಾಪವಾಗುತ್ತದೆ ಅನ್ನುವುದನ್ನು ಅವರು ಮರೆಯಬಾರದು.

ಕಸಾಯಿಖಾನೆಗೆ ಕಲಿಯುಗದ ಕಾಮಧೇನು


ಪರವಾನಗಿ ಇಲ್ಲದೆ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವ ಕೃತ್ಯ ಕರ್ನಾಟಕದಲ್ಲಿ ಅವ್ಯಾಹತವಾಗಿ ಸಾಗಿದೆ. ಕಾನೂನು ಪಾಲಕರು ಗೋಪಾಲಕರಾಗುವುದು ಯಾವಾಗ?

ಲೇಖನ : ಪಶುಪತಿ

ಭರತಖಂಡದಲ್ಲಿ ಗೋವು ಪವಿತ್ರವಾದ ಪ್ರಾಣಿ. ಭಾರತದ ಪುರಾಣಗಳಲ್ಲಿ ಗೋವಿಗೆ ಅತಿವಿಶಿಷ್ಟ ಸ್ಥಾನ. ಹದಿನಾರು ಕೋಟಿ ದೇವತೆಗಳು ಗೋವಿನಲ್ಲಿ ವಾಸಿಸುತ್ತಾರೆಂತಲೂ, ಹಸು ಕಲಿಯುಗದ ಕಾಮಧೇನು ಎಂತಲೂ, ಬಸವ ಶಿವನ ವಾಹನವೆಂತಲೂ ಹಿಂದೂ ಧರ್ಮದ ನಂಬಿಕೆ. ಗೋವುಗಳ ರಕ್ಷಣೆಗಾಗಿ ಬೆಟ್ಟವನ್ನೇ ಕೈಯಲ್ಲಿ ಎತ್ತಿಹಿಡಿದ ಗೋವರ್ಧನ ಗಿರಿಧಾರಿಯ ಕಥೆಯನ್ನು ಕೇಳದವರಾರು. ಗೋ ಸಂತಾನವೇ ಕೃಷಿಗೆ ಮೂಲಾಧಾರ, ರೈತನ ಬದುಕಿಗೆ ದನಕರುಗಳೇ ಜೀವಾಳ. ಹಸು ಎಮ್ಮೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಬಿಸಿಬಿಸಿ ಕಾಫಿ, ನಂದಿನಿ ಪೇಢ ಆಹಾರದ ಮೂಲದ್ರವ್ಯಗಳು. ಹೋರಿ ರೈತನ ಮನೆಯ ಗಂಡಾಳು. ದವಸಧಾನ್ಯಗಳನ್ನು ಅವನೇ ಉತ್ತಿ ಬಿತ್ತಿ ಬೆಳೆದು ಮನೆಗೆ ಸಾಗಿಸಬೇಕು. ಅವನಿಂದಲೇ ಗೊಬ್ಬರ, ಅವನಿರುವುದರಿಂದಲೇ ಕಣಜ.

ದನಕರುಗಳ ಐಹಿಕ ಮಹತ್ವವನ್ನು ಸಾರಿ ಹೇಳುವುದಕ್ಕೆ ಭಾರತೀಯ ಸಾಹಿತ್ಯದಲ್ಲಿ, ಜನಪದಗಳಲ್ಲಿ ದನಪದಗಳು ಹೇರಳವಾಗಿ ಸಿಗುತ್ತವೆ. ಹಾಗಾಗಿಯೇ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು ಎಂಬ ಗೀತೆ, ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು ಎಂಬ ನೀತಿ ಹೇಳುವ ಪುಣ್ಯಕೋಟಿ ಕಥೆ ಹುಟ್ಟಿಕೊಂಡದ್ದು. ಮನುಕುಲದ ಇತಿಹಾಸ ಹುಡುಕುತ್ತಾ ಹೋದರೆ ಮಾನವ ಸಾಕುಪ್ರಾಣಿಯಾಗಿ ಆಯ್ದುಕೊಂಡ ಮೊದಲೆರಡು ಪ್ರಾಣಿಗಳಲ್ಲಿ ಹಸುಕೂಡ ಒಂದು. ಇನ್ನೊಂದು, ನೀವು ಅಥವಾ ಪಕ್ಕದ ಮನೆಯವರು ಸಾಕಿರುವ ನಾಯಿ.

ನಾನಾ ರೂಪಗಳಲ್ಲಿ ಅತ್ಯಂತ ಉಪಯುಕ್ತ ಜೀವ ಹಾಗೂ ಪವಿತ್ರ ಎನಿಸಿರುವ ಗೋವನ್ನು ಹತ್ಯೆ ಮಾಡಬಾರದು, ಆದರ ಮಾಂಸ ಭಕ್ಷಣೆ ಮಾಡಬಾರದು ಎಂದೂ ಹಿಂದೂ ಮತಸ್ಥರು ನಂಬುತ್ತಾರೆ. ಹಾಗೆಯೇ ಗೋಹತ್ಯೆ ನಿಷೇಧ ಮಾಡಬೇಕೆಂದು ಹಲವು ವರ್ಷಗಳಿಂದ ಸರಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಭಾರತದಲ್ಲಿ ನಾನಾ ಧರ್ಮಗಳಿಗೆ ಸೇರಿದ ನಾಗರಿಕರ ವೈಯಕ್ತಿಯ ಅಭಿರುಚಿಗಳು ಎಷ್ಟೋ ವೇಳೆ ಹಿಂದೂ ಧರ್ಮದವರು ಪರಿಪಾಲನೆ ಮಾಡುವ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ಇದೆ. ಹಸು ಕೂಡ ಒಂದು ಪ್ರಾಣಿ ಅದನ್ನು ಭಕ್ಷಿಸುವುದು ತಮ್ಮ ಹಕ್ಕು ಎಂದು ಅವರು ವಾದಿಸುತ್ತಾರೆ. ಈ ವಿಚಾರದಲ್ಲಿ ಭಾರತದ ಪ್ರಜೆಗಳಲ್ಲಿ ಭಿನ್ನ ನಿಲುವುಗಳು ಮೂಡಿವೆ. ಆದ್ದರಿಂದ ಯಾವುದು ಸರಿ, ಯಾವುದು ತಪ್ಪು ಎಂದು ಇದಂಇತ್ಥಂ ಎಂದು ಇದುವರೆವಿಗೆ ತೀರ್ಮಾನವಾಗಿಲ್ಲ.

ಗೋಹತ್ಯೆ ಕುರಿತ ಅಹವಾಲುಗಳು ನ್ಯಾಯಾಲಯದ ಕಟೆಕಟೆ ಹತ್ತಿವೆ. ಈ ಜಿಜ್ಞಾಸೆ ಅತ್ಯಂತ ಜಟಿಲವಾಗಿದೆ. ಭಾರತವು ವಿಶಾಲವೂ ಅತ್ಯಂತ ಸಂಕೀರ್ಣ ರಾಷ್ಟ್ರವೂ ಆಗಿರುವುದರಿಂದ ತೀರ್ಪುಗಳು ಏಕರೂಪವಾಗಿರುವುದಿಲ್ಲ. ಹಾಗಾಗಿ, ಒಂದೊಂದು ರಾಜ್ಯದಲ್ಲಿ ಒಂದೊಂದು ತೆರನಾದ ಕಾನೂನುಗಳು, ನಿಯಮಾವಳಿಗಳು ಚಾಲ್ತಿಯಲ್ಲಿವೆ. ಆದಕಾರಣ ಗೋವಿನ ವಿಚಾರದಲ್ಲಿ ಕಾನೂನುಗಳು ಗೋಜಲುಗೋಜಲಾಗಿವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ವಸಮ್ಮತ ಮೂಡಿ ಭಾರತದಲ್ಲಿ ಏಕರೂಪ ಗೋಸಂಹಿತೆ ಜಾರಿಗೆ ಬರುವುದು ಬಾಕಿಯಿದೆ.

ನಮ್ಮ ಕರ್ನಾಟಕದಲ್ಲಿ ಗೋಹತ್ಯೆ ತಡೆ ಮತ್ತು ನಿಯಂತ್ರಣ ಕಾಯ್ದೆ ಇದೆ. ಇದಕ್ಕೆ ಸಂಬಂಧಿಸಿದ ನಿಯಮಾವಳಿ ಮತ್ತು ಉಲ್ಲೇಖಗಳನ್ನು THE KARNATAKA PREVENTION OF COW SLAUGHTER AND CATTLE PRESERVATION ACT, 1964 ಕಲಂನಲ್ಲಿ ನಿರೂಪಿಸಲಾಗಿದೆ. ಅನೇಕ ಕಾನೂನುಗಳು ಉಲ್ಲಂಘನೆ ಆಗುವಂತೆ ಈ ಕಾನೂನು ಸಹ ಉಲ್ಲಂಘನೆ ಆಗುತ್ತಿರುವ ಪ್ರಕರಣಗಳು ನಿತ್ಯ ವರದಿ ಆಗುತ್ತಿರುತ್ತವೆ. ದನಕರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಬಹುದು ಎಂಬ ಉಲ್ಲೇಖವೂ ಕಾಯಿದೆಯಲ್ಲಿದೆ. ಆದರೆ, ಯಾವ ಸ್ಥಿತಿಯಲ್ಲಿರುವ ಹಸು, ಎಮ್ಮೆ, ರಾಸುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ಕಾನೂನಿನಲ್ಲಿ ಕಲಂಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಪರವಾನಗಿ ಪತ್ರವಿಲ್ಲದೆ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸಬಾರದು ಎಂಬ ಕಟ್ಟಳೆ ನಿಚ್ಚಳವಾಗಿದೆ. ಆದರೂ ಅಲ್ಲಲ್ಲಿ ಆಗಾಗ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ಕಾನೂನನ್ನು ಉಲ್ಲಂಘಿಸುವವರಿಗೆ ಶಿಕ್ಷೆಯ ಪರಿವೆ ಎಳ್ಳಷ್ಟೂ ಇರುವುದಿಲ್ಲ. ಶಿಕ್ಷೆಯಾದರೂ ಎಷ್ಟಿದೆ? ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ಮತ್ತು ಸಾವಿರ ರು. ಜುಲ್ಮಾನೆ.

1975ರಲ್ಲಿ ಈ ಕಾನೂನು ತಿದ್ದುಪಡಿಯಾಗಿದೆ. ತದನಂತರ ಯಾವ ತಿದ್ದುಪಡಿಯನ್ನೂ ತಂದಿಲ್ಲ. ಈ ಕಾನೂನಿನಲ್ಲಿ ನಮೂದಿಸಿರುವ ವಿನಾಯತಿಗಳ ದುರ್ಲಾಭವನ್ನು ಅನೇಕರು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅಷ್ಟಕ್ಕೂ, ಎಷ್ಟು ಅಧಿಕಾರಿಗಳಿಗೆ ಈ ಕಾನೂನಿನ ಬಗ್ಗೆ ತಿಳಿವಳಿಕೆಯಿದೆ? ಸರ್ಕಾರದ ತುತ್ತತುದಿಯಲ್ಲಿ ಕುಳಿತಿರುವವರೇ ಕಣ್ಮುಚ್ಚಿ ಕುಳಿತಿರುವಾಗ ಕೆಳಗಿನವರಿಂದ ಕಠಿಣ ಕ್ರಮಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಇದರ ಜೊತೆಗೆ ಕಾನೂನಿಗೆ ತಿದ್ದುಪಡಿ ತಂದು ಕಟ್ಟಳೆಗಳನ್ನು, ನಿಯಮಗಳನ್ನು ಇನ್ನಷ್ಟು ಸ್ಪಷ್ಟ ಮತ್ತು ಕಠಿಣ ಮಾಡುವ ಅಗತ್ಯವೂ ಇದೆ. ಹಬ್ಬ-ಹರಿದಿನಗಳಂದು ಮತ್ತು ಗಾಂಧಿ ಜಯಂತಿಯಂಥ ಆಚರಣೆಗಳಂದು ಮಾತ್ರ ಗೋಹತ್ಯೆ ಮಾಡಬಾರದೆಂದು ಸರ್ಕಾರ ಕಟ್ಟಪ್ಪಣೆ ಮಾಡುತ್ತದೆಯೇ ಹೊರತು ಉಳಿದ ದಿನಗಳಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡ ನಿದರ್ಶನಗಳು ಹೆಚ್ಚಿಗೆ ಸಿಗುವುದಿಲ್ಲ.

ಕಳೆದ ವಾರ ಚಿಕ್ಕಮಂಗಳೂರಿನಿಂದ ಹಸುಗಳ ಅನಧಿಕೃತ ಸಾಗಣೆ ಸುದ್ದಿ ನಮ್ಮಲ್ಲಿ ವರದಿಯಾಗಿತ್ತು. ಮೊನ್ನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಇಂಥ ಪ್ರಕರಣ ನಡೆದಿದೆ. ಅದರ ಬಗ್ಗೆ ನಮ್ಮ ಬಾತ್ಮೀದಾರ ಬಿದರೆ ಪ್ರಕಾಶ್ ಚುಟುಕು ಮಾಹಿತಿ ಮತ್ತು ಚಿತ್ರಗಳನ್ನು ರವಾನಿಸಿದ್ದಾರೆ. "ಗುಬ್ಬಿಯಲ್ಲಿ ಕಸಾಯಿಖಾನೆಗೆ ದನಗಳನ್ನು ಅಕ್ರಮವಾಗಿ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿನ ಐತಿಹಾಸಿಕ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂದೆಯೇ ನಡೆಯುತ್ತಿರುವ ಈ ಕೃತ್ಯ ಭಕ್ತರ ಮನಸ್ಸಿಗೆ ನೋವು ತರುವ ಸಂಗತಿಯಾಗಿದೆ" ಎಂದು ನೋವಿನಿಂದ ಅವರು ಹೇಳಿಕೊಂಡಿದ್ದಾರೆ. ಇಂಥ ಕೃತ್ಯಗಳು ಅವ್ಯಾಹತವಾಗಿ ರಾಜ್ಯಾದ್ಯಂತ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿದೆ.

ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು?

ಮುಂದುವರಿದಿದೆ...)

ಕ್ಯಾಸಲ್ ರಾಕ್ ಶಿಬಿರದ ನಂತರ ಸಫ್ದರ್ ನಾಗೋರಿಯೊಂದಿಗೆ ನಾನು ಹೈದರಾಬಾದ್ ಗೆ ಹೋದೆ. ಅಲ್ಲಿ ಸಫ್ದರ್ ಮತ್ತು ಸುಭಾನ್ ರೊಂದಿಗೆ ಸೇರಿ ನಾನು ಮೌಲಾನ ನಜೀರುದ್ದೀನ್ ಅಬ್ದುಲ್ ಅಲಿ ಮಿಸ್ಗಾಹಿ ಎಂಬುವವರನ್ನು ಭೇಟಿಯಾದೆ. ಅವರು ನಡೆಸುತ್ತಿದ್ದ ಮದರಸಾದಲ್ಲಿ ಒಂದು ರಾತ್ರಿ ಉಳಿದು ಮಾರನೆಯ ದಿನ ಅವರನ್ನು ಭೇಟಿ ಮಾಡಿದೆವು. ಅವರನ್ನು ಆನಂತರ ಪೊಲೀಸರು ಬಂಧಿಸಿದರು. ಅವರನ್ನು ಭೇಟಿಯಾಗಲು ಹೋದಾಗ ಯಾಸಿರ್‌ನ ಹಿರಿಯಣ್ಣ ಜಬೀರ್‌ನನ್ನು ಭೇಟಿಯಾದೆವು. ಅವನಿಗೆ ಮತ್ತೊಬ್ಬ ಅಣ್ಣನಿದ್ದ, ಆತ ಸೌದಿ ಅರೇಬಿಯಾದಲ್ಲಿರುವ ವಿಷಯ ತಿಳಿಯಿತು. ಸದರಿ ಜಬೀರ್ ನನ್ನು ಪರಿಚಯದ ಹಫೀಜ್ ಎಂಬಾತನಿಗೆ ಒಂದು ಹಾರ್ಡ್ ಡಿಸ್ಕ್ ಕೊಟ್ಟಿದ್ದು, ಅದರಲ್ಲಿ ಅಪಘಾನಿಸ್ತಾನ ಮತ್ತು ಇರಾಕ್‌ನ ಯುದ್ಧದ ದೃಶ್ಯಗಳಿರುವುದಾಗಿ ತಿಳಿದು ಬಂತು. ಅಮೆರಿಕವು ಮುಸ್ಲಿಮರ ಮೇಲೆ ಎಸಗಿದ ಅನ್ಯಾಯಗಳ ವಿವರಣೆ ಅದರಲ್ಲಿತ್ತು. ಅದಾದ ಮೇಲೆ ಅಬ್ದುಲ್ ಅಲಿ ಮಿಸ್ಗಾಹಿ ಅವರು ಬಂದರು. ನಾವೆಲ್ಲ ಒಟ್ಟಿಗೆ ಊಟ ಮಾಡಿದೆವು.

ಅವತ್ತು ನಡೆದ ಚರ್ಚೆಯಲ್ಲಿ ಷಾಹಜಿ ಸಾಹಿ, ಅಬ್ದುಲ್ ಬರ್ ಫಲಾಹಿ ಅತಾವುಲ್ಲಾ ವಜೀರ್ ಸಾಬ್, ಜಮೀರ್ ಸಿದ್ದೀಕಿ ಸಾಬ್ ಇವರೆಲ್ಲ ಸೇರಿ ತಂಝೀಮ್ (ಗುಂಪು) ಒಂದನ್ನು ರಚಿಸಿಕೊಂಡಿದ್ದು, ಅದಕ್ಕೆ ಅಬ್ದುಲ್ ಅಲಿ ಮಿಲ್ಗಾಹಿ ಅವರನ್ನು ಸ್ವಾಗತಿಸಿರಲಿಲ್ಲ ಎಂಬ ವಿಷಯ ತಿಳಿಸಿದರು. ಆ ಕಾರಣದಿಂದಾಗಿಯೇ ಏನೂ, ಅವರು ರಚಿಸಿಕೊಂಡ ತಂಝೀಮ್ ಧರ್ಮ ಸಮ್ಮತವಾದುದಲ್ಲವೆಂದೂ, ಅದಕ್ಕೆ ಖಚಿತವಾದ ಗುರಿ, ಸಿದ್ಧಾಂತ ಯಾವುದೂ ಇಲ್ಲವೆಂದೂ ಅಬ್ದುಲ್ ಅಲಿ ಮಿಸ್ಗಾಹಿ ಅವರ ಮೊಬೈಲ್‌ಗೆ ಮೇಲಿಂದ ಮೇಲೆ ಟೆಲಿಫೋನ್ ಕರೆಗಳು ಬರುತ್ತಿದ್ದವು. ಏಕೆಂದರೆ ಅವರ ಮಗನನ್ನು ಗುಜರಾತದ ಏನ್ ಕೌಂಟರ್ ನಲ್ಲಿ ಕೊಲೆ ಮಾಡಲಾಗಿತ್ತು. ಹೀಗಾಗಿ, ಪೊಲೀಸರ ವಿರುದ್ಧ ಮೊಕದ್ದಮೆ ಹೂಡುವಂತೆ ಪತ್ರಕರ್ತರು ಅವರನ್ನು ಒತ್ತಾಯಿಸುತ್ತಿದ್ದರು. ಅದನ್ನು ನಮಗೆ ವಿವರಿಸಿದ ಅಬ್ದುಲ್ ಅಲಿ ಮಿಸ್ಗಾಹಿ ಅವರಕು ಒಂದು ಪತ್ರಿಕಾಗೋಷ್ಠಿಯನ್ನು ಮಾತನಾಡಲು ಹೊರಟು ಹೋದರು.

ನನಗೆ ಕಂಪ್ಯೂಟರ್‌ಗಳ ಜ್ಞಾನ ಅಷ್ಟಾಗಿ ಇಲ್ಲ. ಆದರೆ ಅವತ್ತು ನಾನು ಹೈದರಾಬಾದಿನಲ್ಲಿ ಸಲಾವುದೀನ್ ಸರಾಯ್(ಛತ್ರದಂತಹುದು)ನಲ್ಲಿ ಧಡೂತಿ ದೇಹದ ಷಾಹಿದ್ ಎಂಬಾತನನ್ನು ಭೇಟಿ ಮಾಡಿದೆ. ಅವರನ್ನು ನಾನು ದಿಲ್ಲಿಯ ಸಿಮಿ ಕೇಂದ್ರ ಕಚೇರಿಯಲ್ಲಿ ನೋಡಿದ್ದೆ. ಹೈದರಾಬಾದಿನಲ್ಲಿ ನಾನು ಭೇಟಿ ಮಾಡಿದ ಸಿಮಿ ಸದಸ್ಯರೆಂದರೆ ಜಬೀರ್, ಯಾಸಿನ್ ಮತ್ತು ಮೊತಾಸಿನ್ ಮಾತ್ರ. ಸಿಮಿ ಸಂಘಟನೆ ಯಾವುದಾದರೂ ಕಾರ್ಯಾಚರಣೆ ಮಾಡುತ್ತಿದ್ದರೆ, ಅದಕ್ಕೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ (S.I.O) ಬೆಂಬಲ ನೀಡುವುದಿಲ್ಲ. ಅಂತೆಯೇ S.I.O ಮಾಡುವ ಕಾರ್ಯಾಚರಣೆಗೆ SIMI ಸಂಘಟನೆ ಬೆಂಬಲ ನೀಡುವುದಿಲ್ಲ. SIO ಸಂಘಟನೆ ಮಾಲತಃ ಜಮಾತ್-ಎ-ಇಸ್ಲಾಂನ ಅಂಗ ಸಂಸ್ಥೆಯಾಗಿರುವುದರಿಂದ ಅದು SIMI ಗಿಂತಲೂ ಹೈದರಾಬಾದ್‌ನಲ್ಲಿ ಬಲಿಷ್ಠವಾಗಿದೆ.

ಚೋರಲ್ ಶಿಬರದಲ್ಲಿ ಮುಖವಾಡಗಳನ್ನೂ, ಕೈಗೆ ತೊಟ್ಟುಕೊಳ್ಳುವ ಗ್ಲೋವ್ಸ್‌ಗಳನ್ನೂ ಬಳಸುವ ವಿಧಾನ ಹೇಳಿಕೊಡಲಾಯಿತು. ಆದರೆ ವಿಪರೀತ ಸೆಖೆಯಿರುತ್ತಿದ್ದ ಕಾರಣ ಗ್ಲೋವ್ಸ್‌ಗಳು ತೊಯ್ದು ಹೋಗುತ್ತಿದ್ದವು. ಇಂದೋರ್‌ನ ಡಾ. ಫೆಜಲ್ ಎಂಬ ವೈದ್ಯಕೀಯ ವಿದ್ಯಾರ್ಥಿ ಸಿರಿಂಜುಗಳನ್ನು ಬಳಸುವುದನ್ನು ಹೇಗೆಂಬುದನ್ನು ಶಿಬಿರಾರ್ಥಿಗಳಿಗೆ ಹೇಳಿಕೊಟ್ಟ. ಅಗತ್ಯ ಬಿದ್ದಾಗ ತೆಗೆದುಕೊಳ್ಳುವ ಮಾತ್ರೆಗಳು ಕುರಿತಾಗಿಯೂ ತಿಳಿಸಿದ ಚೋರಲ್ ಸಭೆಯಲ್ಲಿ (ಎರಡನೇ ಬಾರಿ ನಡೆದಾಗ) ನನಗೆ ಹ್ಯಾಂಡ್ ಗ್ರೆನೇಡ್‌ಗಳನ್ನು ಸಂಪಾದಿಸುವ ಕುರಿತಂತೆ ಆದೇಶ ನೀಡಲಾಯಿತು. ಅದಕ್ಕೆ ಬೇಕಾದ ಸಾಮಗ್ರಿ ಸಿಕ್ಕದ್ದೇ ಆದಲ್ಲಿ, ಒಂದು ವರ್ಷದೊಳಗೆ ನಾವೇ ಹ್ಯಾಂಡ್ ಗ್ರೆನೇಡ್‌ಗಳನ್ನು ತಯಾರಿಸಿಕೊಳ್ಳುವ ಕುರಿತಾಗಿಯೂ ನಿರ್ಣಯ ಕೈಗೊಳ್ಳಲಾಯಿತು. ಅವತ್ತಿನ ತನಕ ಹ್ಯಾಂಡ್ ಗ್ರೆನೇಡ್‌ಗಳನ್ನು ತಯಾರು ಮಾಡುವ ಫಾರ್ಮುಲಾ ನನಗೆ ಗೊತ್ತಿರಲಿಲ್ಲ. ಆದರೆ ಅದರಲ್ಲಿ ಹಫೀಜ್ ನಿಪುಣನಾಗಿದ್ದಾನೆ. ಮತೀಯ ದಂಗೆಗಳಾದಾಗ ಹ್ಯಾಂಡ್ ಗ್ರೆನೇಡ್ ಗಳನ್ನು ಬಳಸಬೇಕೆಂದು ಚೋರಲ್‌ನ ಎರಡನೇ ಶಿಬಿರದಲ್ಲಿ ತೀರ್ಮಾನಿಸಲಾಯಿತು. ನಮ್ಮ ಗುಂಪಿನವನೇ ಆದ ಸಿಬ್ಲಿ ಮೂಲತಃ ಇಂಜನಿಯರ್ ನಾಗಿದ್ದು, ಅವನಿಗೆ ಬಾಂಬ್ ಗಳನ್ನು ತಯಾರು ಮಾಡುವುದು ಚೆನ್ನಾಗಿ ಗೊತ್ತು.

ಕರ್ನಾಟಕದಲ್ಲಿ ಅರೆಸ್ಟ್

ಹುಬ್ಬಳ್ಳಿಯಲ್ಲಿದ್ದಾಗ ನಾನು ನಾಸಿರ್‌ನನ್ನು ಭೇಟಿಯಾಗಲಿಲ್ಲವಾದರೂ ಅವನು ಸಫ್ದರ್‌ನನ್ನು ಭೇಟಿಯಾಗಲು ಹಫೀಜ್‌ನ ಜೊತೆಗೆ ಭೋಪಾಲ್‌ಗೆ ಬಂದಿದ್ದನೆಂಬ ಸಂಗತಿ ನನಗೆ ಗೊತ್ತಿತ್ತು. ಹಫೀಜ್ ಮತ್ತು ನಾಸೀರ್ ಇಬ್ಬರೂ ಕರ್ನಾಟಕದವರು. ಕಳುವು ಮಾಡಿದ ಬೈಕೊಂದನ್ನು ಒಯ್ಯುತ್ತಿದ್ದಾಗ ನಾಸೀರ್ ಪೊಲೀಸರ ಕೈಗೆ ಸಿಕ್ಕುಬಿದ್ದನೆಂದೂ, ಆತ ಮೌಲಾನ ನಾಸೀರುದ್ದೀನ್ ಶಾಹ್ ಅವರ ಮಗನೆಂದೂ ನನಗ ಆನಂತರ ಗೊತ್ತಾಯಿತು. ಈ ಮಧ್ಯೆ ನಾನು ಹನ್ನೊಂದು ಪಿಸ್ತುಲುಗಳನ್ನೂ, ನಲವತ್ತು ಕಾಡತೂಸುಗಳನ್ನೂ, ಖರೀದಿಸಿದ್ದೆನಾದರೂ ಅವುಗಳಲ್ಲಿ ಹೆಚ್ಚಿನ ಪಿಸ್ತೂಲುಗಳು ಕೆಟ್ಟು ಹೋದವು. ಅವು ಮಧ್ಯೆ ಪ್ರದೇಶದ ಬುರ್ಹಾನ್ ಪುರದಲ್ಲಿ ಸಿಗುತ್ತಿದ್ದು, ಅವು ಸಿಕ್ಕುವು ಜಾಗ ಷೌಕತ್‌ಗೆ ಚೆನ್ನಾಗಿ ಗೊತ್ತು. ಕರ್ನಾಟಕದಲ್ಲಿ ಇವು ಎಲ್ಲಿ ಸಿಗುತ್ತವೆಂದು ನನಗೆ ಗೊತ್ತಿಲ್ಲ. ಮಹಾರಾಷ್ಟ್ರಕ್ಕೆ ನಾನು ಯಾವುದೇ ಆಯುಧವನ್ನು ಸರಬರಾಜು ಮಾಡಿಲ್ಲ.

ರಂಜಾನ್ ತಿಂಗಳಲ್ಲಿ ಭಾರತದಲ್ಲಿ ತಂಝೀಮ್, ಮದರಸಾ ಮತ್ತು ಸಿಮಿಗೆ ಜನ ದೇಣಿಗೆ ಕೊಡುತ್ತಾರೆ. ಇಂದೋರ್ ನಲ್ಲಿ ಮಹಮ್ಮದ್ ರಮೀಜ್ ಮತ್ತು ರಜಾಕ್ ದೇಣಿಗೆ ಸಂಗ್ರಹಿಸುತ್ತಾರೆ. ಹೆಚ್ಚಿನ ಹಣ ಬಂಧಿತರಾದ ಸಿಮಿ ಸಂಘಟನೆಯ ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡಿಸುವುದಕ್ಕೆ ಖರ್ಚಾಗುತ್ತದೆ. ಖಂಡ್ವಾದ ಸಿಮಿ ಸದಸ್ಯರ ಬಿಡುಗಡೆಗೆ ಈಗಾಗಲೇ 35 ಸಾವಿರ ರುಪಾಯಿಗಳನ್ನು ವಕೀಲರಿಗೆ ಕೊಡಲಾಗಿದೆ. ಭೋಪಾಲದಲ್ಲಿ ಒಂದು ಮನೆ ಬಾಡಿಗೆಗೆ ಹಿಡಿದು ಅದರಲ್ಲಿ ನಮ್ಮ ಕಚೇರಿ ತೆರೆಯಲಾಗಿದೆ. ನನಗೆ ಭೋಪಾಲದ ಮುನೀರ್ ದೇಶ್ ಮುಖ್ ಗೊತ್ತು. ಆತ ಕಳೆದ ಎಂಟು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ. ಐದು ವರ್ಷಗಳ ಹಿಂದೆ ಆತನನ್ನು ನಾನು ಔರಂಗಾಬಾದ್‌ನಲ್ಲಿ ಇಮ್ರಾನ್ ಮದುವೆಯಲ್ಲಿ ಭೇಟಿಯಾಗಿದ್ದೆ. ಈಗ್ಗೆ ಎರಡೂವರೆ ವರ್ಷದ ಹಿಂದೆ ಇಮ್ರಾನ್‌ನ ಬಂಧನವಾಯಿತು. ಆತ ಬಹುಶಃ ಇಂದೋರ್ ಅಥವಾ ಉತ್ತರ ಭಾರತದ ಸಾಗರ್ ಜೈಲಿನಲ್ಲಿರಬೇಕು.

ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು?ಕರ್ನಾಟಕದ ನೆಮ್ಮದಿಯ ತಾಣವಾದ ಜೋಯಿಡಾ ಕಾಡಿನ ಪಕ್ಕದಲ್ಲೇ ಇರುವ ಕಾಸಲ್‌ರಾಕ್ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ನಡೆದ ಸಿಮಿ ಉಗ್ರರ ಸಭೆಗಳ ಕುರಿತಾಗಿ, ಅವರು ಮಾಡಿದ ಚರ್ಚೆಗಳ ಕುರಿತಾಗಿ, ಖರೀದಿಸಿದ ಶಸ್ತ್ರಾಸ್ತ್ರಗಳ ಕುರಿತಾಗಿ ಹೆಸರಾಂತ ಉಗ್ರವಾದಿ ಕಮರುದ್ದೀನ್ ನಾಗೋರಿ ಎಂಬಾತ ಮಂಪರು ಪರೀಕ್ಷೆಯಲ್ಲಿ ಬಾಯಿಬಿಟ್ಟ ವಿವರಗಳು ಇಲ್ಲಿವೆ. ಮಂಪರು ಪರೀಕ್ಷೆಯಲ್ಲಿ ಹುಬ್ಬಳ್ಳಿ, ಕಾಸಲ್‌ರಾಕ್‌ನಲ್ಲಿ ನಡೆಸುತ್ತಿರುವ ಚಟುವಟಿಕೆಗಳು, ಎನ್‌ಕೌಂಟರ್ ಸ್ಪೆಷಾಲಿಸ್ಟ್ ದಯಾನಾಯಕ್ ಹತ್ಯೆ ಮಾಡುವ ಕುರಿತು ಮಾನಾಡಿದ್ದಾನೆ. ಉಗ್ರವಾದವೆಂಬುದು ಕರ್ನಾಟಕಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದಕ್ಕೆ ನಾಗೋರಿ ಮಾತುಗಳೇ ಸಾಕ್ಷಿ.

ಅಂಕಣಕಾರ : ರವಿ ಬೆಳಗೆರೆ

"ನಾನು ಕಮರುದ್ದೀನ್ ನಾಗೋರಿ, ಕಮರುದ್ದೀನ್ ಅಲಿಯಾಸ್ ರಾಜು ಅಲಿಯಾಸ್ ಅಬ್ದುಲ್ಲಾ ಅಲಿಯಾಸ್ ಸಲ್ಮಾನ್ ಚಾಂದ್ ಮಹಮ್ಮದ್ ನಾಗೋರಿ. ನಾನು 11/2, ನಾಗೋರಿ ಮೂಹಲ್ಲಾ, ತೋಪಖಾನಾ ರಸ್ತೆ, ಉಜ್ಜೈನ್ ನ ನಿವಾಸ, ಜೆಹಾದ್ ಸಂಬಂಧಿ ಚಟುವಟಿಕೆಗಳನ್ನು ಮಾಡಲೆಂದೇ ನಾನು 'ಸಿಮಿ' ಸಂಘಟನೆ ಸೇರಿದೆ. ಇಸ್ಲಾಂ ಬಗ್ಗೆ ಪ್ರಚಾರ ಮಾಡುವುದು, ಮುಸ್ಲಿಂ ಸಮಾಜದ ಮೇಲೆ ನಡೆಯುವ ದಬ್ಬಾಳಿಕೆಯನ್ನು ವಿರೋಧಿಸುವುದು ಮತ್ತು ಅಲ್ಲಾಹುವಿಗಾಗಿ ಪ್ರಾಣತ್ಯಾಗ ಮಾಡುವುದು ಜೆಹಾದ್ ನ ಉದ್ದೇಶಗಳಾಗಿರುತ್ತವೆ.

1991ರಲ್ಲಿ ಮುಂಬಯಿಯಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರ ಮತ್ತು ಗುಜರಾತಿದಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ನಾವು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಹೌದು. ಕೃಷ್ಣಾ ಕಮೀಷನ್ ವರದಿಯಲ್ಲಿ ಈ ಮುಸ್ಲಿಂ ವಿರೋಧಿ ದಂಗೆಯಲ್ಲಿ ಯಾರ್ಯಾರು ಪಾಲ್ಗೊಂಡಿದ್ದಾರೆಂಬುದರ ವಿವರಗಳಿವೆ. ಆದರೆ ಅಂಥವರ ವಿರುದ್ಧ ಸರ್ಕಾರ ಕ್ರಮಕೈಗೊಂಡಿಲ್ಲ. ನಮ್ಮ ಕೈಗೆ ಕೃಷ್ಣಾ ಕಮೀಷನ್ ವರದಿಯ ಪ್ರತಿ ಸಿಕ್ಕ ಮೇಲೆ ಮುಸ್ಲಿಮರ ಮೇಲೆ ಹಲ್ಲೆ ಮಾಡಿದ ಅಂಥ ವ್ಯಕ್ತಿಗಳ ಪಟ್ಟಿಮಾಡುವುದು ಸಾಧ್ಯವಾಗುತ್ತಿದೆ ಆದರೆ ಪ್ರತಿ ದೊರೆಕಿಸಿಕೊಳ್ಳುವ ಜವಾಬ್ದಾರಿಯನ್ನು ಎಹತೆಶಾಮ್ ನಿಗೆ ವಹಿಸಿಕೊಡಲಾಗಿತ್ತು. ಆದರೆ ಅವನು ಮುಂಬೈ ಸ್ಫೋಟದ ನಂತರ ಬಂಧಿತನಾದ. ಹೀಗಾಗಿ ಆ ವರದಿ ನಮ್ಮ ಕೈಗೆ ಸಿಗಲಿಲ್ಲ. ಮಸೀದಿ ಧ್ವಂಸವಾಗುವುದನ್ನೂ, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವಾಗುವುದನ್ನೂ ಕಣ್ಣಾರೆ ನೋಡಿದ ಮೇಲೆ ನಾವೇ ಇಂತಹ ನಿರ್ಣಯಗಳಿಗೆ ಬಂದಿದ್ದೆವೆಯೇ ಹೊರತು ಈ ವಿಷಯದಲ್ಲಿ ನಮ್ಮನ್ನು ಯಾರೂ ಪ್ರಚೋದಿಸಿಲ್ಲ.

ನಾವು ಚೋರಲ್ ನಲ್ಲಿ ಒಂದು ಶಿಬಿರ ಏರ್ಪಡಿಸಿದ್ದು, ಅಲ್ಲಿ ಏರಗನ್‌ನಿಂದ ಗುರಿಯಿಡುವುದನ್ನು ಶಿಬಿರಾರ್ಥಿಗಳಿಗೆ ಕಲಿಸಲಾಯಿತು. ನನ್ನ ಹತ್ತಿರ ಬುರಹಾನ್ ಪುರದಿಂದ ತಂದಿದ್ದ ಏಳು ಕಂಟ್ರಿ ಪಿಸ್ತೂಲಿಗಳಿದ್ದು ಅವುಗಳನ್ನು ತಲಾ ಐದೂವರೆ ಸಾವಿರ ರುಪಾಯಿಗಳಿಗೆ ನಾನೇ ಖರೀದಸಿದ್ದೆ. ಆ ಏಳು ಪಿಸ್ತೂಲುಗಳು ಪೈಕಿ ನಾಲ್ಕು ಪಿಸ್ತೂಲುಗಳನ್ನು ನಾನು ಹುಬ್ಬಳ್ಳಿಯ ಅದ್ನಾನ್ ಗೆ ಕಳಿಸಿಕೊಟ್ಟಿದ್ದೆ. ಸದ್ಯಕ್ಕೆ ಏಳು ಪಿಸ್ತೂಲುಗಳು ಪೊಲೀಸರಿಗೆ ಸಿಕ್ಕು ಹೋಗಿವೆ. ಚೋರಲ್ ಶಿಬಿರದಲ್ಲಿ ಇಪ್ಪತ್ತೊಂದು ಜನ ಭಾಗವಹಿಸಿದ್ದರು. ಅವರಲ್ಲಿ ಒಂದಿಬ್ಬರು ಖಂಡ್ವಾದಿಂದ ಬಂದಿದ್ದರು. ಅದ್ನಾನ್, ಹಫೀಜ್, ಮಂಜರ್ ಮತ್ತು ಜಾರ್ಖಂಡ್ ದಿಂದ ದನಿಷ್ ಮಧ್ಯಪ್ರದೇಶದಿಂದ ಇಬ್ಬರು, ಉತ್ತರ ಪ್ರದೇಶದಿಂದ ಇಬ್ಬರು, ಕೇರಳದಿಂದ ಸಿಬ್ಲಿ ಹಾಗೂ ಮುಂಬೈಯಿಂದ ಸುಭಾನ್ ಬಂದಿದ್ದರು. ಉಳಿದವರು ಇಂದೋರ್ ಹಾಗೂ ಖಂಡ್ವಾದವರಾಗಿದ್ದರು.

ಏಪ್ರಿಲ್ ತಿಂಗಳಲ್ಲಿ ನಾನು ಕ್ಯಾಸಲ್ ರಾಕ್ ಶಿಬಿರಕ್ಕೆ ಹೋಗಿದ್ದೆ ಎಂಬುದು, ಹುಬ್ಬಳ್ಳಿಯಿಂದ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿದ ನಂತರ ಸಿಗುವ ತಾಣ. ಕ್ಯಾಸಲ್ ರಾಕ್ (castle rock) ಸಭೆಯ ನಂತರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಾನು ಪಿಸ್ತೂಲುಗಳನ್ನು ಹುಬ್ಬಳ್ಳಿಯಲ್ಲಿ ಅದ್ನಾನ್‌ಗೆ ಕೊಟ್ಟೆ. ಹುಬ್ಬಳ್ಳಿಯಲ್ಲಿ ನಾನು ಒಂದು ದಿವಸ ಮಟ್ಟಿಗೆ ತಂಗಿದ್ದೆ. ಮುಂದೆ ಪಿಸ್ತೂಲುಗಳನ್ನು ಅದ್ನಾನ್ ನನಗೆ ಹಿಂತಿರುಗಿಸಿದ್ದ. ಕ್ಯಾಸಲ್ ರಾಕ್ ಶಿಬಿರ ನಡೆಯುತ್ತಿದ್ದಾಗ ನನ್ನ ಬಳಿ ಯಾವುದೇ ವಾಕೀ-ಟಾಕೀ ಇರಲಿಲ್ಲ.

ಪೆಟ್ರೋಲ್ ಬಾಂಬ್

ಚೋರಲ್ ಶಿಬಿರದಲ್ಲಿ ನಾನು ಐದಾರು ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸಿ ಶಿಬಿರಾರ್ಥಿಗಳಿಗೆ ಅವುಗಳ ಬಳಕೆ ಹೇಗೆಂಬುದನ್ನು ತೋರಿಸಿದ್ದೆ. ಮತೀಯ ದಂಗೆಗಳಾದಾಗ, ಹೆಚ್ಚಿನ ಹಿಂದೂಗಳು ಮೈಮೇಲೆ ಬಿದ್ದರೆ ಆ ಪೆಟ್ರೋಲ್ ಬಾಂಬ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅವರಿಗೆ ವಿವರಿಸಿದ್ದೆ. ಇವುಗಳನ್ನು ತಯಾರಿಸಲು ಬೇಕಾದ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ತಯಾರಿಸುವ ವಿಧಾನವೂ ಸುಲಭ. ಈ ಬಾಂಬುಗಳು ಭಯಂಕರವಾಗಿ ಶಬ್ದ ಮಾಡುತ್ತವೆ, ಆದರೆ ಇವುಗಳಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸುವುದಿಲ್ಲ ಎಂದು ನಾನು ಅವರಿಗೆ ವಿವರಿಸಿದ್ದೆ. ಅವುಗಳನ್ನು ನಾನು ಬಾಬ್ರಿ ಮಸೀದಿ ಉಧ್ವಸ್ತವಾದ ನಂತರ ಉಜ್ಜೈನ್‌ನಲ್ಲಿ ನಡೆದ ಮತೀಯ ದಂಗೆಗಳು ಕಾಲದಲ್ಲಿ ತಯಾರು ಮಾಡುವುದನ್ನು ಕಲಿತಿದ್ದೆ. ಆ ದಿನಗಳಲ್ಲಿ ದಂಗೆಗಳು ಹದಿನೈದು ದಿನ ನಡೆದಿದ್ದವು. ಇಂಥ ಪೆಟ್ರೋಲ್ ಬಾಂಬ್‌ಗಳಿಂದ ನಾನು ಮೂವತ್ತು-ಮೂವತ್ತೈದು ಜನರನ್ನು ಕೊಂದಿದ್ದೆ. ಹಿಂದೂಗಳು ಮೈಮೇಲೆ ಏರಿ ಬಂದಾಗ ನಮಗೆ ತಿರುಗಿ ನಿಂತು ಬಡಿದಾಡಲು ಬೇರೆ ದಾರಿಯಿರುವುದಿಲ್ಲ ನೋಡಿ? ಮಧ್ಯ ಪ್ರದೇಶದಲ್ಲೂ ಮೇಲಿಂದ ಮೇಲೆ ಕೋಮು ಗಲಭೆಗಳಾಗುತ್ತವಾದ್ದರಿಂದ ಅವುಗಳ ವಿರುದ್ಧ ಬಡಿದಾಡಲು ನಾವು ಸಿದ್ಧರಿರಬೇಕು ಎಂದು ಶಿಬಿರಾರ್ಥಿಗಳಿಗೆ ಹೇಳಿದೆ. ಸುಲ್ತಾನ್ ಗೇಟ್‌ನಲ್ಲಿ ನಡೆದ ದಂಗೆಯಲ್ಲಿ ಭಜರಂಗ ದಳದವರು ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದು ಮುಸ್ಲಿಂ ಮನೆಯೊಂದನ್ನು, ಅದರೊಳಗಿದ್ದವರ ಸಮೇತ ಸುಟ್ಟು ಹಾಕಿದರು. ಇಂಥ ಹಲ್ಲೆಗಳನ್ನು ಎದುರಿಸಲು ನಾವೆಲ್ಲ ಸಿದ್ಧರಿರಬೇಕು ಎಂದು ಅವರಿಗೆ ಹೇಳಿದೆ.

ಕುರಾನ್‌ನಲ್ಲಿ ಹುಡುಕಿ

ಕ್ಯಾಸಲ್ ರಾಕ್ ಶಿಬಿರವನ್ನು ನಡೆಸಲು ಹುಬ್ಬಳ್ಳಿಯ ಅದ್ನಾನ್ ಸಾರ್ವಜನಿಕರಿಂದ ದೇಣಿಗೆ ಪಡೆದು ತಂದಿದ್ದ. ಅಂತೆಯೇ ಅವನಿಗೆ ಸಫ್ದರ್ ನಾಗೋರಿಯಿಂದಲೂ ಸ್ವಲ್ಪ ಹಣ ಬಂದಿತ್ತು. ಚೋರಲ್ ಶಿಬಿರಕ್ಕೆ ಸುಮಾರು ಆರು ಸಾವಿರ ಹಣ ಕೊಟ್ಟರು. ಎಷ್ಟು ಖರ್ಚಾಯಿತು, ಯಾರೆಲ್ಲ ಹಾಜರಿದ್ದರು ಅಂತ ಗೊತ್ತಿಲ್ಲ, ಯಾಕೆಂದರೆ ಆ ಸಭೆಗೆ ನಾನು ಹಾಜರಾಗಿರಲಿಲ್ಲ. ಆದರೆ ಉಜ್ಜೈನ್‌ನಲ್ಲಿ ಜುಲೈ 5 ಮತ್ತು 6ರಂದು ನಡೆದ ಸಭೆಗೆ ಎಹತ್‌ಶಾಮ್ ಹಾಜರಾಗಿದ್ದ. ಅವತ್ತಿನ ಸಭೆಯಲ್ಲಿ ಭಾರತೀಯ ಮುಸ್ಲಿಮರ ಮೇಲೆ ನಡೆಯುವ ಹಿಂಸಾಚಾರ ಕುರಿತು ಚರ್ಚಿಯಲಾಯಿತಲ್ಲದೆ, ಸಿಮಿ ಸಂಘಟನೆ ನಿಷ್ಕ್ರಿಯವಾಗಿರುವ ಬಗ್ಗೆಯೂ ಕಳವಳದಿಂದ ಮಾತನಾಡಲಾಯಿತು. ಫೀಲ್ಡ್‌ನಲ್ಲಿ ಕೆಲಸ ಮಾಡಲು ನಮಗೆ ತುಂಬ ಜನ ಹುಡುಗರು ಬೇಕು. ಹೊಸ ಹುಡುಗರನ್ನು ಸೇರಿಸಿಕೊಳ್ಳಲು ನಾವು ತೀರ್ಮಾನಿಸಿದೆವು. ಆದರೆ ಈ ವಿಷಯದಿಂದ ಸಿಮಿ ಸಂಘಟನೆಯನ್ನು ದೂರವಿಡಲು ನಾವು ನಿರ್ಧರಿಸಿದೆವು. ಈ ಸಂದರ್ಭದಲ್ಲೇ ಎಹತೆಶಾಮ್ ಗೆ ಕೃಷ್ಣಾ ವರದಿಯನ್ನು ಸಂಪಾದಿಸುವಂತೆ ಸೂಚಿಸಲಾಯಿತು. ಹಾಗೇನೇ, ಮುಸ್ಲಿಮರ ವಿರುದ್ಧ ಕೆಲಸ ಮಾಡಿದ ಹಿಂದೂ ಪ್ರಮುಖರನ್ನು ಕೊಲ್ಲುವ ಬಗ್ಗೆ ಭಾರತದ ವಿವಿಧ ಮುಸ್ಲಿಂ ನಾಯಕರ ಅಭಿಪ್ರಾಯವೇನಿದೆ ಎಂಬುದನ್ನು ತಿಳಿದುಕೊಳ್ಳುವಂತೆ ಸುಭಾನ್ ಗೆ ಆದೇಶ ನೀಡಲಾಯಿತು. ಕುರಾನ್ ಗ್ರಂಥವನ್ನು ಮತ್ತೊಮ್ಮೆ ಅಭ್ಯಸಿಸಿ, ನಮ್ಮ ಧರ್ಮದ ವಿರುದ್ಧ ಈ ತೆರೆನಾದ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಏನು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ವಿವರಿಸುವಂತೆ ಸಾರ್ಜಿಲ್‌ಗೆ ಸೂಚಿಸಲಾಯಿತು. ಅವತ್ತಿನ ಸಭೆಯ ನಂತರ ನಾನು, ಎಹತೆಶಾಮ್, ಸಿಬ್ಲಿ, ಹಫೀಜ್, ಸಾರ್ಜಿಲ್ ಮುಂತಾದವರು ಚೆದುರಿದೆವು. ಸಾರ್ಜಿಲ್, ಸಿಬ್ಲಿ, ಮತ್ತು ಇನ್ನೂಬ್ಬ ವ್ಯಕ್ತಿಯೊಂದಿಗೆ ಎಹತೆಶಾಮ್ ಮುಂಬೈಗೆ ಹೋದ. ಆಗ ನಡೆದ ಸಭೆಯಲ್ಲಿ ನಾನಷ್ಟೆ ಅಲ್ಲದೆ ಇಡೀ ಸಿಮಿ ಸಂಘಟನೆ ಮುಂಬೈ ಸ್ಫೋಟಗಳನ್ನು ಬೆಂಬಲಿಸಬೇಕೆಂದು ತೀರ್ಮಾನಿಲಾಯಿತು.

ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯವನ್ನು ತಡೆಹಿಡಿಯುವಲ್ಲಿ, ನಮ್ಮ ಸರ್ಕಾರದ ಪಾತ್ರ ಜಾಸ್ತಿ ಇರಬೇಕು.

ಕನ್ನಡ ಗಣಕ ಪರಿಷತ್ತಿನ ಮೇಲೆ ಬಂದಿರುವ ಆರೋಪ ತುಂಬ ಗಂಭೀರವಾಗಿದೆ. ಈ ವಿಷಯವಾಗಿ ಸರ್ಕಾರದವರು ಆಸಕ್ತಿ ವಹಿಸಿ ಕ.ಗ.ಪ. ಮೇಲೆ ಬಂದಿರುವ ಆರೋಪ ಸರಿಯೋ, ಇಲ್ಲವೊ ಎಂಬುದನ್ನು ಪರಿಶಿಲಿಸಬೇಕಾಗಿ ವಿನಂತಿಸುತ್ತೇವೆ.

ನುಡಿ ಕನ್ನಡ ತಂತ್ರಾಂಶದಲ್ಲಿ ಬಳಸಿರುವ ಅಕ್ಷರ (ಫಾಂಟ್) ವನ್ನು ಆಕೃತಿ ತಂತ್ರಾಂಶದಿಂದ ಕದ್ದದ್ದು ಎಂದು ಯಾರೋ ಆರೋಪ ಮಾಡಿದ್ದರೆ ನಾವು ಅಷ್ಟು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ ಆದರೆ ಈ ಆರೋಪ ಮಾಡುತ್ತಿರುವವರು ಸ್ವತಃ ಕನ್ನಡ ಗಣಕ ಪರಿಶತ್ತಿನಲ್ಲಿರುವವರೇ! ಒಬ್ಬರು ಕನ್ನಡ ಗಣಕ ಪರಿಷತ್ತಿನ ಡಾ. ಯು. ಬಿ. ಪವನಜ ಹಾಗು ಇನ್ನೊಬ್ಬರು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಸತ್ಯನಾರಾಯಣ. ಇವರುಗಳು ನಮಗೆ ಬರೆದ ಮೇಲ್ ಗಳಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಆಕೃತಿ ತಂತ್ರಾಂಶದ ಮಾಲಿಕರಾದ ಆನಂದ್ ಸಹ ಶೇಶಾದ್ರಿ ವಾಸುರವರ ಬರಹದ ಮೊದಲ ಆವೃತ್ತಿಯಲ್ಲಿ ಆಕೃತಿ ಫಾಂಟ್ ಕದ್ದು ಉಪಯೋಗಿಸಿದ್ದರು, ನಂತರ ಬರಹ ತಂತ್ರಾಂಶದಿಂದ ಕನ್ನಡ ಗಣಕ ಪರಿಷತ್ತಿನವರು ಫಾಂಟ್ ಕದ್ದು ನುಡಿಯಲ್ಲಿ ಉಪಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಗಾದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ನೀವೇ ಪರೀಕ್ಷೆ ಮಾಡಿ ಅರಿಯಬೇಕು. ಆಕೃತಿಯವರು ನುಡಿ ಫಾಂಟ್ ಕದ್ದದ್ದು ಎಂದು ನಿರೂಪಿಸಲು ಅವರ ಬಳಿ ದಾಖಲೆಗಳಿವೆ ಎಂದು ಮಂಡಿಸುತ್ತಾರೆ. ಹಾಗಾದರೆ ಕನ್ನಡ ಗಣಕ ಪರಿಷತ್ತಿನವರು ಇದು ಸುಳ್ಳು ಎಂದು ನಿರೂಪಿಸಬೇಕು. ನೀವು ಹೋಗಿ ಪರೀಕ್ಷಿಸಬೇಕು. ಒಂದು ಫಾಂಟ್ ತಯಾರಿಸಲು ಬೇಕಾದ ಸಾಮಗ್ರಿಗಳು, ಕಾಗದಗಳು, ಅಕ್ಷರದ ಬಿಡಿ ಭಾಗಗಳು ಮತ್ತು ಅದನ್ನು ಮಾಡಿಸಿದ ಸ್ಕ್ಯಾನ್ ಮಾಡಿದ ಪುರಾವೆಗಳಿವೆಯೇ ಎಂದು ದಯವಿಟ್ಟು ಪರೀಕ್ಷಿಸಿ.
ಅಕಸ್ಮಾತ್, ಮೇಲಿನವರು ತಿಳಿಸಿದಂತೆ ಅದು ನಿಜವೇ ಆಗಿದ್ದರೆ ಅದು ನಮ್ಮ ಕನ್ನಡಿಗರಿಗೆ ಆದ ಅವಮಾನ ಹಾಗು ಕದ್ದು ತಯಾರಿಸಿದ ವಸ್ತುವನ್ನು ಸರ್ಕಾರ ಉಪಯೋಗಿಸುವಂತೆ ಮಾಡಿ ಕನ್ನಡ ಗಣಕ ಪರಿಷತ್ತು ಸರ್ಕಾರದ ದಾರಿ ತಪ್ಪಿಸದಿದ್ದರೆ ಇದಕ್ಕಿಂತ ಅನ್ಯಾಯ ಬೇರೊಂದಿಲ್ಲ.

ತಂತ್ರಜ್ಞಾನದಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ

ಸ್ವಾಭಿಮಾನಿ ಕನ್ನಡಿಗರೇ,

ಉಡುಪಿ, ಆ. 03 : ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ತನ್ನ ಸ್ಥಾನವನ್ನು ಕಳೆದುಕೊಳ್ಳತೊಡಗಿದೆ. ಮುಂದಿನ ದಿನದಲ್ಲಿ ಜನರು ಮಾತಾನಾಡುವುದನ್ನೇ ನಿಲ್ಲಿಸಿ ಬರೀ ಕಂಪ್ಯೂಟರ್ ಮೂಲಕ ಮಾತನಾಡುವಂತಹ ದಿನಗಳು ದೂರವಿಲ್ಲ ಎಂದು ಖ್ಯಾತ ಭಾಷಾತಜ್ಞ ಡಾ.ಕೆ.ವಿ.ನಾರಾಯಣ ವಿಷಾದಿಸಿದರು.

ನಗರದಲ್ಲಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ 60ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಲಿಪಿ ಮತ್ತು ಬೆಳವಣಿಗೆ ಹಾಗೂ ಶಾಸನ ಅಧ್ಯಯನ ಇಲಾಖೆ ಹಾಗೂ ಯುಜಿಸಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ರಾಜ್ಯದ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮುಂದುವರೆದ ತಂತ್ರಜ್ಞಾನದ ಪರಿಣಾಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಗಂಡಾಂತರ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದು ಕನ್ನಡ ಭಾಷೆಯಷ್ಟೆ ಅಲ್ಲ ಯಾವ ಭಾಷೆಯನ್ನು ಕಲಿಯಬೇಕೆಂದರೂ ಕಂಪ್ಯೂಟರಿನ ಮೊರೆ ಹೋಗಬೇಕಾಗಿದೆ. ಬರೆಯುವ ಪರಿಪಾಠ ಸಂಪೂರ್ಣ ನಿಂತುಹೋಗಿದೆ. ಕಂಪ್ಯೂಟರ ಮುಂದೆ ಕುಳಿತುಕೊಂಡು ಕನ್ನಡ ಕಲಿಯುವ ಸಮಯಬಂದಿದೆ. ಇದರ ಪ್ರತಿಫಲವೇ ಇಂದಿನ ಎಸ್ಎಂಎಸ್ ಮೂಲಕ ಸುದ್ದಿ ರವಾನಿಸುವುದು ಎಂದು ಅವರು ಖೇದ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಸುಮಾರು 6 ಸಾವಿರ ಭಾಷೆಗಳು ಚಾಲ್ತಿಯಲ್ಲಿವೆ. ಆದರೆ 100 ಭಾಷೆಗಳಿಗೆ ಮಾತ್ರ ಲಿಪಿ ಇದೆ. ಇದರಲ್ಲಿ ಒಂದೇ ಲಿಪಿಯನ್ನು ಅನೇಕ ಭಾಷೆಗಳಲ್ಲಿ ಕಾಣಬಹುದು. ಹತ್ತು ಲಿಪಿಗಳು ಮಾತ್ರ ಸ್ವಂತ ಭಾಷೆಯನ್ನು ಹೊಂದಿವೆ. ಆ ಹತ್ತು ಭಾಷೆಗಳಲ್ಲಿ ಕನ್ನಡ ನಾಲ್ಕು ಅಥವಾ ಐದನೇ ಸ್ಥಾನದಲ್ಲಿದೆ. ಐತಿಹಾಸಿಕ ಭಾಷೆಯಾಗಿರುವ ಕನ್ನಡವನ್ನು ಕಲಿಯಲು ವಿದೇಶಿ ಸಂಶೋಧಕರು ಆಸಕ್ತಿ ವಹಿಸಿರುವುದು ತಿಳಿದಿರುವ ಸಂಗತಿ ಎಂದು ನಾರಾಯಣ ವಿವರಿಸಿದರು. ಇತಿಹಾಸದಲ್ಲಿ ಶಾಸನಶಾಸ್ತ್ರಕ್ಕೆ ಅಷ್ಟಾಗಿ ಮಹತ್ವವಿಲ್ಲ. ಅನಾದಿ ಕಾಲದಿಂದಲೂ ಶಾಸನಶಾಸ್ತ್ರ ಕೇವಲ ಐತಿಹಾಸಿಕ ಆಧಾರವಾಗಿ ಗುರುತಿಸಿಸಿಕೊಂಡಿದೆ. ಆದ್ದರಿಂದ ಸಂಶೋಧಕರು, ಉಪನ್ಯಾಸಕರು ಶಾಸನಶಾಸ್ತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅದನ್ನು ಕಾಪಾಡುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಸಚಿವಾಲಯದ ನಿರ್ದೇಶಕಿ ಉಷಾ ಸುರೇಶ್ ಮಾತನಾಡಿ, ಸುಮಾರು 300 ವರ್ಷಗಳ ಹಳೆಯದಾದ 20 ಲಕ್ಷಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದರು. ಅಮೂಲ್ಯವಾಗಿರುವ ಶಾಸನ ಮತ್ತು ಶಾಸನ ಬರಹಗಳು ಸಂಶೋಧಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿವೆ. ಇದರ ಉಪಯೋಗವನ್ನು ಅನೇಕ ಸಂಶೋಧನಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಆಸಕ್ತರು ಇಲಾಖೆಯ ವೆಬ್ ಸೈಟ್ ಮೂಲಕ ವಿವರವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಐತಿಹಾಸಿಕ ದಾಖಲೆಗಳಿಗೆ ಸಂಬಂಧಿಸದಂತೆ ಇಲಾಖೆಯು 100 ತಜ್ಞರ ಹೇಳಿಕೆಯನ್ನು ಕ್ಯಾಸೆಟ್ ರೂಪದಲ್ಲಿ ಹೊರತರಲಾಗಿದೆ ಎಂದು ಉಷಾ ಸುರೇಶ್ ಹೇಳಿದರು.