ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಮಾರ್ಚ್ 14, 2011

ವಿಶ್ವ ಕನ್ನಡ ಸಮ್ಮೇಳನ – ಏನಿದೆ, ಏನಿರಬೇಕಾಗಿತ್ತು?ವಸಂತ ಶೆಟ್ಟಿ, ಬೆಂಗಳೂರು
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !

ಏನಿದೆ?

ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು.

ಏನ್ ಇರಬೇಕಾಗಿತ್ತು ?

ಕವಿ ಗೋಷ್ಟಿ, ಹಾಸ್ಯ, ನಾಟಕ, ಸಂಗೀತದಂತಹ ವಿಷಯಗಳನ್ನು ಬಿಟ್ಟು ಚಿಂತನೆಗೆ ಹಚ್ಚುವ ಚರ್ಚಾ ಗೋಷ್ಟಿಗಳತ್ತ ನೋಡಿದಾಗ ಕಾಣೋದು ಸುಮಾರು 16 ಗೋಷ್ಟಿಗಳು. ಇವುಗಳಲ್ಲಿ ಕನ್ನಡಿಗರ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಕಲಿಕೆಗೆ ಸಂಬಂಧಿಸಿದಂತೆ ಇರೋದು ಒಂದೇ ಒಂದು ಗೋಷ್ಟಿ, ಅದರಲ್ಲೂ ತಾಯ್ನುಡಿ ಶಿಕ್ಷಣದ ಮಹತ್ವ, ಇವತ್ತು ಅದು ಯಾವ ಹಂತದಲ್ಲಿದೆ, ಜಾಗತೀಕರಣದ ಸ್ಪರ್ಧೆಗೆ ಸಜ್ಜುಗೊಳಿಸಲು ಅದರಲ್ಲಿ ಆಗಬೇಕಾದ ಸುಧಾರಣೆಗಳೇನು, ಬದುಕಿನ ಎಲ್ಲ ಹಂತದ ವಿದ್ಯೆಯನ್ನು ಕನ್ನಡದಲ್ಲಿ ತರಲು ಆಗಬೇಕಾದ ಕೆಲಸಗಳೇನು ಅನ್ನುವ ವಿಷಯವೇನೂ ಚರ್ಚೆಯ ಅಜೆಂಡಾದಲ್ಲಿ ಇಲ್ಲ. ಜಗತ್ತಿನ ಮುಂಚೂಣಿಲ್ಲಿರುವ ಎಲ್ಲ ದೇಶಗಳು ತಮ್ಮ ಏಳಿಗೆಗೆ ಏಣಿಯಾಗಿಸಿಕೊಂಡಿರುವುದು ತಮ್ಮ ತಾಯ್ನುಡಿಯನ್ನು. ಮಕ್ಕಳ ಬುದ್ದಿ ವಿಕಾಸಕ್ಕೆ ತಾಯ್ನುಡಿ ಕಲಿಕೆಗಿಂತ ಒಳ್ಳೆಯ ಹಾದಿಯಿಲ್ಲ ಅನ್ನುವುದನ್ನು ಜಗತ್ತು ಸಾರಿ ಸಾರಿ ಹೇಳಿದೆ. ತಮ್ಮ ತಮ್ಮ ತಾಯ್ನುಡಿಯನ್ನು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಎಲ್ಲ ದೇಶಗಳು ಏಳಿಗೆ ಸಾಧಿಸಿ ಮುನ್ನಡೆದಿದ್ದರೆ, ಅಂತಹದೊಂದು ಕನಸು ಕಾಣುವುದೇ ಅಪರಾಧ, ಅದು ಎಂದಿಗೂ ಸಾಧ್ಯವಿಲ್ಲ ಅನ್ನುವ ಆತ್ಮಹತ್ಯಾ ಭಾವ ಆವರಿಸಿಕೊಂಡಿರುವ ಭಾರತದಂತಹ ದೇಶ, ಏಳಿಗೆ ಹೊಂದಿರುವ ದೇಶದ ಬ್ಯಾಕ್ ಆಫೀಸ್ ನಂತೆ ಕೆಲಸ ಮಾಡುತ್ತ ಒಂದಿಷ್ಟು ಸರ್ವಿಸಸ್ ನ ಪುಡಿಗಾಸು ಸಂಪಾದಿಸಿಕೊಂಡು, ಅದನ್ನೇ ಏಳಿಗೆ ಎಂದು ನಂಬಿ, ಸಮಾಜವನ್ನು ನಂಬಿಸುವಂತಹ ದಡ್ಡತನ ತೋರಿಸುತ್ತಿದೆ. ಹೀಗೆ ಹುಟ್ಟುತ್ತಿರುವ ಪುಡಿಗಾಸಿಗೆ ಕಾರಣವಾಗಿರುವ ಇಂಗ್ಲಿಷ್ ಒಂದೇ ನಮ್ಮನ್ನು ನಮ್ಮ ಬಡತನದಿಂದ, ದಾರಿದ್ರ್ಯದಿಂದ, ಕಷ್ಟದಿಂದ ಪಾರು ಮಾಡುವ ಕಾಮಧೇನು ಅನ್ನುವ ಕೆಲವು ಪ್ರಭಾವಿಗಳ ನಂಬಿಕೆಗಳು ತಾಯ್ನುಡಿ ಶಿಕ್ಷಣವನ್ನು ಮೇಲೆತ್ತುವ, ಅದರಲ್ಲಿ ಅನ್ನದ ವಿದ್ಯೆ ತರುವ, ಆ ಮೂಲಕ ಒಳ್ಳೆಯ ದುಡಿಮೆ ಹುಟ್ಟಿಸುವ ವ್ಯವಸ್ಥೆಗೆ ಅಡಿಪಾಯ ಹಾಕಬೇಕಿದ್ದ ಸರ್ಕಾರದ ದಿಕ್ಕು ತಪ್ಪಿಸುತ್ತಿದೆ ಅಂದರೆ ತಪ್ಪಾಗದು.

ಕನ್ನಡ ನುಡಿಯ ಯೋಗ್ಯತೆ ಹೆಚ್ಚಿಸುವುದು ಯಾವಾಗ?

ಇನ್ನೂ ಕನ್ನಡ ನುಡಿಯಲ್ಲಾಗಬೇಕಾದ ಸುಧಾರಣೆ ಬಗ್ಗೆಯೂ ಯಾವ ಚರ್ಚೆಯೂ ಏರ್ಪಟ್ಟಿಲ್ಲ. ಜ್ಞಾನ-ವಿಜ್ಞಾನದ ಸಾರವನ್ನು ಕನ್ನಡಿಗರಿಗೆ ಕನ್ನಡದಲ್ಲೇ ತರಲು ನಮ್ಮ ನುಡಿ ಸಿದ್ಧವಾಗಿದೆಯೇ? ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದಲ್ಲೂ ಹಂತ ಹಂತವಾಗಿ ಒಳ್ಳೆಯ ಕಲಿಕೆ ತರಲು ನಮ್ಮ ನುಡಿಯ ಸುತ್ತ ಭಾಷಾ ವಿಜ್ಞಾನದ ಕಣ್ಣಿನಿಂದ ಆಗಬೇಕಾದ ಕೆಲಸಗಳೇನು? ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಪ್ರತಿಭಾವಂತ ಹುಡುಗರನ್ನು ಸೆಳೆಯುವುದು ಹೇಗೆ? ಅಂತಹದೊಂದು ವಾತಾವರಣ (eco-system) ಕಟ್ಟುವುದರಲ್ಲಿ ಸರ್ಕಾರದ, ವಿಶ್ವವಿದ್ಯಾಲಯಗಳ, ಶಿಕ್ಷಣ ತಜ್ಞರ, ಭಾಷಾ ವಿಜ್ಞಾನಿಗಳ ಪಾತ್ರವೇನು ಅನ್ನುವ ಬಗ್ಗೆ ಚರ್ಚೆ ನಡೆದಿದ್ದಲ್ಲಿ, ಕನ್ನಡಕ್ಕೆ ಇವತ್ತು ಇಲ್ಲದಿರುವ ಕೆಲವು ಯೋಗ್ಯತೆ ತಂದು ಕೊಡುವ ಬಗ್ಗೆ ನಿಜವಾದ ಅರ್ಥದಲ್ಲಿ ಕೆಲಸ ಶುರುವಾಗಿದೆ ಅನ್ನಬಹುದಿತ್ತು. ನಮ್ಮ ನುಡಿಗೆ ಯೋಗ್ಯತೆ ತಂದುಕೊಡದೇ ನಮ್ಮ ವೈಫಲ್ಯತೆಗೆ ಜಾಗತೀಕರಣವನ್ನು ಬೈದು ಏನು ಪ್ರಯೋಜನವಾಗದು.

ಉದ್ದಿಮೆಗಾರಿಕೆ ಹೆಚ್ಚಿಸುವುದು ಹೇಗೆ?

ಉದ್ಯಮಿ ನಾರಾಯಣ ಮೂರ್ತಿಯವರನ್ನು ಕರೆಸುತ್ತಿರುವುದದಿಂದ ಚರ್ಚಾ ಗೋಷ್ಟಿಗಳಲ್ಲಿ ಉದ್ದಿಮೆಗಾರಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆನೋ ಅಂದುಕೊಂಡಿದ್ದೆ. ಉದ್ಯಮಿಯೊಬ್ಬರು ಈ ಸಭೆಗೆ ಚಾಲನೆ ನೀಡುತ್ತಿರುವುದದಿಂದ ಉದ್ದಿಮೆಗಾರಿಕೆ, ಉದ್ಯಮಿಗಳಾಗುವುದು, ಉದ್ಯಮಗಳನ್ನು ಕಟ್ಟುವುದು ಹೀಗೆ ಉದ್ದಿಮೆಗಾರಿಕೆಯ ನಾನ ಮಝಲನ್ನು ಮುಟ್ಟುವ, ಕನ್ನಡಿಗರಲ್ಲಿ ಈ ಕೊರತೆಯನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸುವ ಅವಕಾಶವಿತ್ತು. ಗೋಷ್ಟಿಗಳ ಪಟ್ಟಿ ನೋಡಿದಾಗ ಈ ಬಗ್ಗೆ ಗಮನ ಕೊಟ್ಟ ಹಾಗಿಲ್ಲ.

ನಾಳೆ ನಮ್ಮದಾಗಲಿ

ಕನ್ನಡವೆಂದರೆ ಬರೀ ಸಾಹಿತ್ಯ, ಸಂಗೀತ, ನಾಟಕ,ಸಿನೆಮಾ ಅನ್ನುವ ಜುಟ್ಟಿನ ಮಲ್ಲಿಗೆಗೆ ಸೀಮಿತವಾಗಿರುವಾಗ, ಅದರಲ್ಲೂ ಬದುಕಿನ ವಿದ್ಯೆಗಳನ್ನು ತರಬಹುದು, ಅದರಲ್ಲೂ ಅನ್ನ ಹುಟ್ಟಿಸಬಹುದು ಅನ್ನುವುದನ್ನು ಸಾಧಿಸಿ ತೋರಿಸುವ ಹೊಣೆಗಾರಿಕೆ ಕನ್ನಡದ ಬಗ್ಗೆ ಕನಸು ಕಾಣುವ ಎಲ್ಲ ಕನ್ನಡದ ಯುವಕರ ಮುಂದಿದೆ. ಇವತ್ತಿನ ವ್ಯವಸ್ಥೆಯನ್ನು ಅಲ್ಲಗಳೆಯದೆಲೆ ಇಂದಿನ ವ್ಯವಸ್ಥೆಯ ಸಾರವನ್ನು ಹೀರಿಕೊಂಡೇ ನಾಳೆ ಕನ್ನಡದಲ್ಲೂ ಈಗಿರುವುದಕ್ಕಿಂತಲೂ ಅದ್ಭುತವಾದ ವ್ಯವಸ್ಥೆ ಕಟ್ಟುವ ಕೆಲಸವಾಗಬೇಕಿದೆ. ಇಂದಿರುವ ವ್ಯವಸ್ಥೆಯನ್ನು ಚಿಮ್ಮುಹಲಗೆಯಾಗಿಸಿಕೊಂಡೇ ಆಗಸಕ್ಕೆ ನೆಗೆಯುವ ಕನಸು ಕಾಣಬೇಕಿದೆ. ಅದಾಗದೇ ಎಷ್ಟು ಸಮ್ಮೇಳನ, ಸಭೆ ಮಾಡಿದರೂ ಕನ್ನಡ ಮುಂದಾಗದು.

ಕೃಪೆ :ನಿಲುಮೆ.ವರ್ಡ್ ಪ್ರೆಸ್.ಕಾಂ

ಶನಿವಾರ, ಮಾರ್ಚ್ 12, 2011

ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾರಾಯಣ ಮೂರ್ತಿಯವರು ನೀಡಿದ ಭಾಷಣ

ಎರಡನೇ ವಿಶ್ವ ಕನ್ನಡ ಸಮ್ಮೇಳನ, ಬೆಳಗಾವಿ ಮಾಚ್ 11, 2011

ಶ್ರೀ ಎನ್. ಆರ್. ನಾರಾಯಣ ಮೂರ್ತಿ, ಸಂಸ್ಥಾಪಕರು, ಇನ್ ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್

ಆತ್ಮೀಯ ನಾಡ ಬಂಧುಗಳೇ,

ನಮ್ಮ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸನ್ಮಾನ್ಯ ಮಂತ್ರಿವರ್ಯರೇ, ಅಧಿಕಾರಿವರ್ಗದವರೇ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆಸಲ್ಲಿಸುತ್ತಿರುವ ಗಣ್ಯರೇ, ಅತಿಥಿಗಳೇ, ಮಾಧ್ಯಮದವರೇ, ಬಹು ಮುಖ್ಯವಾಗಿ ಯವಕ-ಯುವತಿಯರೇ , ಎಲ್ಲಕ್ಕೂ ಮಿಗಿಲಾಗಿ ನನ್ನ ಕನ್ನಡ ಬಾಂಧವರೇ . . . . .

ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನನ್ನನ್ನು ಆದರದಿಂದ ಆಹ್ವಾನಿಸಿ, ಉದ್ಘಾಟಿಸಲು ಆತ್ಮೀಯವಾಗಿ ಆಮಂತ್ರಣ ನೀಡಿದ ತಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ನಮ್ಮ ಕನ್ನಡ ನಾನು ಸುಮಾರು ಎರಡು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ. ಇಲ್ಲಿ ವಿಶ್ವಮಾನ್ಯ ರಾಜರು ಆಳಿ. ,, ಕನ್ನಡ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಬನವಾಸಿಯ ಕದಂಬರಿರಲಿ, ಬಾದಾಮಿಯ ಹಾಗೂ ಕಲ್ಯಾಣದ ಚಾಲುಕ್ಯರಿರಲಿ,, ದೋರ ದಮುದ್ರದ ಹೊಯ್ಸಳರಿರಲಿ, ವಿಜಯನಗರದ ರಾಯರಿರಲಿ, ಎಲ್ಲರೂ ನಾಡಿನ ಸಂಸ್ಕೃತಿಗಾಗಿ, ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ್ದಾರೆ. ನಮ್ಮ ನಾಡಿನಲ್ಲಿ ಅನೇಕ ಅನುಭಾವಿಗಳು ಜನ್ಮ ತೆಳೆದು ನಾಡನ್ನು ಪುನೀತ ಮಾಡಿದ್ದಾರೆ. ಬಸವಣ್ಣ, ಮಧ್ವಾಚಾರ್ಯರು, ಅಕ್ಕ ಮಹಾದೇವಿ ಅವರು ನೆಲದ ಮಣ್ಣಿನಿಂದಲೇ ಬಂದಿದ್ದಾರೆ. ಹೆಸರಾಂತ ದಾಸರು, ವಚನಕಾರರು, ವಿದ್ವಾಂಸರು, ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂಪದ್ಭರಿತವಾಗಿ ಮಾಡಿದ್ದಾರೆ. ಪುರಂದರ ದಾಸರು, ಕನಕದಾಸರು, ಶಿಶುನಾಳ ಷರೀಫರು, ಅಲ್ಲಮ ಪ್ರಭು, ಬಸವಣ್ಣನಂತಹವರನ್ನು ನಾವು ಸ್ಮರಿಸಲೇಬೇಕು. ಆಧುನಿಕ ಕನ್ನಡ ನಾಡಿಗಾಗಿ, ಅದರ ಸಂಸ್ಕೃತಿಗಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟ ಅವರು ಪ್ರಾತ : ಸ್ಮರಣೀಯರು. ಸನ್ಮಾನ್ಯರಾದ ಕುವೆಂಪು, . ರಾ. ಬೇಂದ್ರೆ, ಶಿವರಾಮ ಕಾರಂತ, ಸರ್ ಎಂ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅಂತಹವರನ್ನು ನಾಬು ನೆನೆಯಲೇ ಬೇಕು.

ಈಗ ನಮ್ಮ ಕನ್ನಡ ನಾಡು ಕೇವಲ ಬಂಗಾರದ ಗಣಿ, ಗಂಧದ ಕಾಡು, ರೇಷ್ಮೆ ಗೂಡಿಗಷ್ಟೇ ಪ್ರಸಿದ್ಧಿಯಲ್ಲದೆ, ಆಧುನಿಕ ತಂತ್ರಜ್ಞಾನದಲ್ಲಿ ಜಗತ್ತಿನ ಗಮನ ಸೆಳೆದಿದೆ. ನಮ್ಮ ರಾಜಧಾನಿಯಾದ ಬೆಂಗಳೂರು ತಂತ್ರಾಂಶ ತಂತ್ರಜ್ಞಾನಗಳ ಸಾಪ್ಟ್ ವೇರ್ ಕಂಪನಿಗಳ ತವರೂರಾಗಿದೆ. ವಿಶ್ವದಾದ್ಯಂತ ಪ್ರಸಿದ್ಧವಾದ ನಗರಗಳಲ್ಲಿ ಬೆಂಗಳೂರೂ ಒಂದಾಗಿದೆ. ಇನ್ನು ಸ್ವಲ್ಪ ಕಾಲದಲ್ಲಿ ಬೆಂಗಳೂಡರ್್ ಎನ್ನುವ ಪದ ಇಂಗ್ಲೀಷ್ ಪದ ಕೋಶದಲ್ಲಿ ಸೇರಿದರೂ ಆಶ್ಚರ್ಯವಿಲ್ಲ.

ಉತ್ತರ ಕರ್ನಾಟಕ ನನಗೆ ಅಪರಿಚಿತ ಪ್ರದೇಶವಲ್ಲ. ನಾನು ಉತ್ತರ ಕರ್ನಾಟಕದ ಅಳಿಯನಾಗಿದ್ದೇನೆ. ಜೀವನದ ಅನೇಕ ಸುಂದರ ಸುಮಧುರ ದಿನಗಳನ್ನು ನಾನು ಇಲ್ಲಿ ಕಳೆದಿದ್ದೇನೆ. ಬೆಳಗಾವಿ ಗಂಡು ಮೆಟ್ಟಿನ ಪ್ರದೇಶ. ಇಲ್ಲಿ ವೀರರಾಣಿ ಚನ್ನಮ್ಮ, ಅವಳ ವಿಶ್ವಾಸದ ಭಂಟ ಸಂಗೊಳ್ಳಿ ರಾಯಣ್ಣ, ತಮ್ಮ ನೆತ್ತರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ನೀಡಿದ್ದಾರೆ. ಇಲ್ಲಿ ಪಕ್ಕದಲ್ಲಿರುವ ಹಲಸಿ ಒಂದು ಕಾಲಕ್ಕೆ ಕದಂಬರ ಕದಂಬರ ಉಪ ರಾಜಧಾನಿಯಾಗಿತ್ತು. ಹೀಗೆ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಉತ್ತರ ಕರ್ನಾಟಕ ನಮ್ಮ ಕನ್ನಡ ನಾಡಿನ ಹೃದಯವಾಗಿದೆ.

ನಾನು ಹುಟ್ಟಿದ್ದು ಅವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ. ಓದಿದ್ದು ಮೈಸೂರು ಮತ್ತು ಕಾನ್ಪುರ. ಕೆಲಸ ಮಾಡಿದ್ದು ಅಹಮದಾಬಾದ್, ಮುಂಬೈ, ಪುಣೆ ಮತ್ತು ಪ್ಯಾರಿಸ್. ಹೀಗಾಗಿ ನನಗೆ ಕೆಲವು ಭಾಷೆ ಬರುತ್ತದೆ. ನನ್ನ ಉದ್ದಿಮೆಯಲ್ಲಿ ಬಹು ಭಾಷೆ ಸಹಾಯಕವಾಗುತ್ತದೆ. ಆದರೂ, ನನ್ನ ಹೃದಯದಲ್ಲಿ ನಾನು ಯಾವಾಗಲೂ ಕನ್ನಡಿಗನೇ ! ನಮ್ಮ ಮನೆಯ ಭಾಷೆ ಕನ್ನಡ !! ವ್ಯವಹಾರಿಕ ಭಾಷೆ ಇಂಗ್ಲೀಷ್. ಆದರೂ ನಾನು ನನ್ನ ಭಾವನೆಗಳನ್ನು ಇಂದಿಗೂ ಕನ್ನಡದಲ್ಲಿಯೇ ಹೇಳಬಯಸುತ್ತೇನೆ. ನಾನು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಎಂತಹಾ ಸಿರಿವಂತರ ಅತಿಥಿ ಸತ್ಕಾರವಿರಲಿ ನನಗೆ ನಮ್ಮ ಬೆಂಗಳೂರಿಗೆ ಬಂದು ನಮ್ಮ ಕಾಫಿ ಕುಡಿದರೇ ನೆಮ್ಮದಿ. ನೆಮ್ಮದಿಗೂ ವ್ಯವಹಾರಕ್ಕೂ ಅಂತರವಿದೆ. ಸುಮಾರು ನಲವತ್ತು ವರ್ಷದ ಹಿಂದೆ ನಾನು ಪದವೀಧರನಾದಾಗ, ನನಗೆ ಕೆಲಸವೆಂದರೆ ಬೆಂಗಳೂರಿನ ಸಾರ್ವಜನಿಕ ವಲಯದ ಕೆಲಸ ! ಇಲ್ಲವೇ ದೂರದ ನಾಡಿನಲ್ಲಿ ಕೆಲಸಮಾಡಿದ್ದು ಅಹಮದಾಬಾದ್, ಪುಣೆ, ಮುಂಬೈ, ಭೂಪಾಲ್, ದೆಹಲಿ ಆಗಿರಬಹುದು. ಅಲ್ಲಿನ ಅಪರಿಚಿತ ಭಾಷೆಗೆ, ಸಂಸ್ಕೃತಿಗೆ ನಾವು ಹೊಂದಿಕೊಂಡು ಹೋಗಬೇಕಿತ್ತು. ಆಗ ನಾನೊಂದು ಕನಸು ಕಾಣುತ್ತಿದ್ದೆ. ಒಂದು ದಿನ ಬೇರೆ ಪ್ರದೇಶದವರು ಕನ್ನಡ ನಾಡಿಗೆ ವಲಸೆ ಬಂದರೆ ಎಷ್ಟು ಚಂದ ಎಂದು ! ನಮ್ಮ ಇನ್ಪೋಸಿಸ್ನ್ ವಿಶಾಲವಾದ ಕ್ಯಾಂಪಸ್ನಲ್ಲಿ ಕುಳಿತಾಗ ವಿವಿಧ ಭಾಷೆಯನ್ನಾಡುವ ತರುಣ-ತರುಣಿಯರನ್ನು ನೋಡಿದಾಗ ನನ್ನ ಮನಸ್ಸು ನವಲತ್ತು ವರ್ಷಗಳ ಹಿಂದೆ ಹಾರಿ ಹೋಗುತ್ತದೆ.

ನಾವು ಕನ್ನಡಿಗರು. ಸ್ವಭಾತಃ ಸೌಮ್ಯರು. ಸುಶೀಲರು. ಜಗಳ ಗಂಟರಲ್ಲ. ಮೃದು ಭಾಷಿಗರು. ಆದ್ದರಿಂದಲೇ, ಉತ್ತರ ಭಾರತದಲ್ಲಿ ಇಂಜಿನಿಯರ್ಸ್ ಅಂದರೆ ಮೈಸೂರು ಇಂಜಿನಿಯರ್ಸ್ ಎನ್ನುತ್ತಾರೆ. ಇಂತಹ ಸೊಬಗಿನ ಕನ್ನಡ ನಾಡು ನಾಳೆಯತ್ತ ದಾಪುಗಾಲು ಹಾಕುತ್ತಿರುವಾಗ ನನಗೆ ನನ್ನ ನಾಡಿನ ಕಡು ಬಡವರ ನೆನಪಾಗುತ್ತದೆ. ಹೊರಗಿನ ಅನೇಕ ದೇಶಗಳನ್ನು ಸುತ್ತುತ್ತಿರುವಾಗ, ಅಲ್ಲಿ ಅವರು ಸಾಧಿಸಿರುವ ಪ್ರಗತಿಯನ್ನು ಕಂಡು ನಿಬ್ಬರಗಾಗುತ್ತಿರುವಾಗ, ನನಗೆ ಸಹಜವಾಗಿಯೇ ನಮ್ಮ ನಾಡಿನ ಕಡು ಬಡವರ ನೆನಪಾಗುತ್ತದೆ. ನಮ್ಮ ಅನೇಕ ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಉತ್ತಮ ಶಿಕ್ಷಕರಿಲ್ಲ. ಸರಿಯಾದ ವಿದ್ಯುತ್ ಪೂರೈಕೆ ಇಲ್ಲ. ಕುಡಿಯುವ ನೀರಿಲ್ಲ. ಸಾಕಷ್ಟು ಉತ್ತಮ ಆರೋಗ್ಯ ಕೇಂದ್ರಗಳಿಲ್ಲ. ಭಾರತದ ಕನ್ನಡ ನಾಡಿನ ಅಭ್ಯುದಯವೆಂದರೆ ಕೇವಲ ದೊಡ್ಡ ದೊಡ್ಡ ಪಟ್ಟಣಗಳು ಮಾತ್ರವಲ್ಲ, ಸಾಪ್ಟ್ವೇರ್ ಕಂಪನಿಗಳಷ್ಟೇ ಅಲ್ಲ, ದೂರದ ಗ್ರಾಮಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇರದ ಅಸಹಾಯಕ ಜನರ ಜೀವನಮಟ್ಟ ಎಂದು ಬದಲಾಗುವುದೋ ಅಂದೇ ನಮ್ಮ ನಾಡಿನ ಪ್ರಗತಿಯಾದ ಹಾಗೆ. ನಾವೆಲ್ಲರೂ ನಿಟ್ಟಿನಲ್ಲಿ ವಿಚಾರಮಾಡಬೇಕು, ಉದಾಹರಣೆಗೆ ನಮ್ಮ ಇನ್ಪೋಸಿಸ್ ಕಂಪನಿಯ ಇನ್ಪೋಸಿಸ್ ಪ್ರತಿಷ್ಠಾನ ತನ್ನಿಂದ ಆದಷ್ಟೂ ಶಾಲೆಗೊಂದು ಗ್ರಂಥಾಲಯ ವೈದ್ಯಕೀಯ ನೆರವು, ಧರ್ಮಶಾಲೆಯ ಕಟ್ಟಡ, ನಶಿಸಿಹೋಗುತ್ತಿರುವ ಕಲೆಗೆ ಪುನಜರ್ಿವ ನೀಡುವ ಪ್ರಯತ್ನ. ಹೀಗೆ ಹಲವು ವಿಧದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಬಡತನದ ರೇಖೆಯನ್ನು ಅಳಿಸಲು ನಾನು ನಮ್ಮ ಇಂದಿನ ಜನಾಂಗಕ್ಕೆ ಕೇಳಿಕೊಳ್ಳುತ್ತೇನೆ. ನಾನು ಅಸ್ತಮಿಸುತ್ತಿರುವ ಸೂರ್ಯ ! ನೀವೇ ನಮ್ಮ ದೇಶದ ಸಂಪತ್ತು. ಭವಿಷ್ಯ ಹಾಗೂ ಉದಯಿಸುತ್ತಿರುವ ಸೂರ್ಯ !! ನೀವು ಮುಂದೆ ಬರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ವಿವೇಚನೆಯಿಂದ ನಿಷ್ಠೆಯಿಂದ ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು. ನೀವು ಹಣದಿಂದ ಓಡಿದರೆ, ಹಣ ನಿಮ್ಮಿಂದ ಓಡಿ ಹೋಗುತ್ತದೆ. ಮೊದಲು ನೀವು ಕೆಲಸ ಕಲಿಯಬೇಕು. ನಮ್ಮ ಕೆಲಸವನ್ನು ಪ್ರೀತಿಸಬೇಕು. ಮುನ್ನುಗ್ಗಿ ಯಶಸ್ಸನ್ನು ಸಾಧಿಸಬೇಕು. ನೀವೇ ಸ್ವಂತ ಉದ್ದಿಮೆದಾರರಾದರೆ ಅನೇಕ ಹೊಸ ಕೆಲಸದ ಅವಕಾಶಗಳು ತಾನಾಗಿಯೇ ಬಾಯಿ ತೆರೆಯುತ್ತವೆ. ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದರಿಂದ ನಾವು ಬಡತನವನ್ನು ಹೊಡೆದೋಡಿಸಬಹುದು. ಹೊಸ ಹೊಸ ಸವಾಲುಗಳಿಗೆ ಆಹ್ವಾನಗಳಿಗೆ ನೀಡಬೇಕು. ಮುಗ್ಗಟ್ಟುಗಳನ್ನು ಎದುರಿಸಿ ನಿಂತುಕೊಳ್ಳಬೇಕು. ಆದರೆ, ನೀವು ಕನ್ನಡಿಗರಾಗಿಯೇ ಇರಬೇಕು. ಉನ್ನತ ಧ್ಯೇಯೋದ್ದೇಶಗಳನ್ನು ಇರಿಸಿಕೊಂಡು ಉದಾರ ದೃಷ್ಠಿ ಉಳ್ಳವರಾಗಿ ನಿಸ್ವಾರ್ಥ ಮತ್ತು ತ್ಯಾಗ ಮನೋಭಾವದಿಂದ ನುಡಿದರೆ ಅಭಿವೃದ್ಧಿ ಖಂಡಿತ ಸಾಧ್ಯ. ಇದನ್ನು ನನ್ನ ಬಾಳಿನ ಅನುಭವದಲ್ಲಿ ಕಲಿತಿದ್ದೇನೆ.

ಇಂತಹ ವಿಶೇಷ ಸಮ್ಮೇಳನದ ಸಂದರ್ಭದಲ್ಲಿ ನನಗೆ ಆದಿ ಕವಿ ಪಂಪ ನೆನಪಾಗುತ್ತಾರೆ. ನನಗೆ ಕಾಲವೇನಾದರೂ ಎದುರಿಗೆ ನಿಂತು ಮತ್ತೆ ಏನು ಬೇಕು ಅಂದರೆ ಮರಿ ದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಕರ್ನಾಟಕ ದೇಶದೋಳ್ ಎನ್ನುತ್ತೇನೆ.

ಜೈ ಹಿಂದ್ ! ಜೈ ಕರ್ನಾಟಕ !

ಕೃಪೆ :ಅವಧಿ.ಕಾಮ್

ಶುಕ್ರವಾರ, ಮಾರ್ಚ್ 11, 2011

ವಿಶ್ವೇಶ್ವರ ಭಟ್ - ನೂರೆಂಟು ಮಾತು - ತವರಿಗೆ ಮರಳಿದ ಖುಷಿ, ರೋಮಾಂಚನ!

ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಹದಿನಾಲ್ಕು ವರ್ಷದ ಬಳಿಕ ನಾನು ಪುನಃ ‘ಕನ್ನಡಪ್ರಭ’ ಪತ್ರಿಕೆ ಸೇರಿದ್ದೇನೆ. ಎಲ್ಲವೂ ವಿಸ್ಮಯವೆನಿಸುತ್ತಿದೆ

ಕೆಲವು ಸಂಗತಿಗಳನ್ನು ವ್ಯಾಖ್ಯಾನಿಸಲು ಆಗುವುದಿಲ್ಲ. ಅರ್ಥೈಸಿಕೊಳ್ಳಲು ಹಿಡಿತಕ್ಕೆ ಸಿಗುವುದಿಲ್ಲ. ಅವುಗಳನ್ನು ಏನೆಂದು ಕರೆಯಬೇಕೋ ತಿಳಿಯುವುದಿಲ್ಲ. ಬಂದ ಹಾಗೆ ಸುಮ್ಮನೆ ಒಪ್ಪಿಕೊಳ್ಳಬೇಕಾಗುತ್ತದೆ, ಮರು ಮಾತಾಡದೇ. ನಾನಂತೂ ಕನಸು ಮನಸಿನಲ್ಲಿಯೂ ‘ಕನ್ನಡಪ್ರಭ’ದ ಸಂಪಾದಕನಾಗಬಹುದು ಎಂದು ಎಣಿಸಿರಲಿಲ್ಲ. ಇಂದಿಗೂ ಇದು ನನ್ನ ಪಾಲಿಗೆ ವಿಸ್ಮಯವೇ, ರೋಮಾಂಚನವೇ.

ಹೆಚ್ಚು ಪ್ರಸಾರವಿರುವ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಈಗ ‘ಕನ್ನಡಪ್ರಭ’ದಲ್ಲಿ ಸಂಪಾದಕನಾದುದಕೆ ರೋಮಾಂಚನವೇಕೆ ಎಂದು ನೀವು ಕೇಳಬಹುದು. ಹೇಳುತ್ತೇನೆ ಕೇಳಿ.

ಹಾಗೆ ನೋಡಿದರೆ ನಾನು ‘ವಿಜಯಕರ್ನಾಟಕ’ಕ್ಕೂ ಸಂಪಾದಕನಾಗಬಹುದು ಎಂದು ಅಂದುಕೊಂಡಿರಲಿಲ್ಲ. ಯಾಕೆಂದರೆ ನನಗೆ ಆಗ ಸಂಪಾದಕನಾಗುವ ವಯಸ್ಸೂ ಆಗಿರಲಿಲ್ಲ. ಬರವಣಿಗೆ, ಲೋಕಾನುಭವ, ಪತ್ರಿಕೋದ್ಯಮ ಪರಿಣತಿಯ ಜತೆ ಜತೆಗೆ ಸಂಪಾದಕರಾಗಲು ಕೆಲವು ಅರ್ಹತೆಗಳಿವೆ. ಅವ್ಯಾವುವೆಂದರೆ ವಯಸ್ಸು ಐವತ್ತೈದು ದಾಟಿರಬೇಕು, ಕೂದಲು ಹಣ್ಣಾಗಿರಬೇಕು, ಪೂರ್ತಿ ಉದುರಿದ್ದರೆ ಭೇಷು, ಸೋಡಗ್ಲಾಸಿನ ಗುಳಿಂಪು ಕನ್ನಡಕ ಧರಿಸಿರಬೇಕು, ಕನಿಷ್ಠ ಎರಡು ಆಪರೇಶನ್ ಗಳನ್ನಾದರೂ ಮಾಡಿಸಿಕೊಂಡಿರಬೇಕು… ಹೀಗೆ ಸಂಪಾದಕರ ಬಗ್ಗೆ ಕೆಲವು ಇಮೇಜ್ ಗಳಿವೆ. ನನಗೆ ಇಂಥ ಯಾವುದೇ ಅರ್ಹತೆಗಳಾಗಲಿ, ಇಮೇಜ್ ಗಳಾಗಲಿ ಇರಲಿಲ್ಲ.

ಆಗ ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಘಟಾನುಘಟಿಗಳಿದ್ದರು. ನನ್ನ ವಯಸ್ಸಿನಷ್ಟೇ ಭರ್ತಿ ಅನುಭವ ಹೊಂದಿದ ಹಿರಿಯ ಪತ್ರಕರ್ತರಿದ್ದರು. ಅಲ್ಲದೇ ನಾನು ಆಗ ಪತ್ರಿಕೋದ್ಯಮ ಫೀಲ್ಡ್ ನಲ್ಲೂ ಇರಲಿಲ್ಲ. ಅಂದಿನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರಿಂದ ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ಹೊರಗುಳಿದಿದ್ದೆ. (ಹಾಗೆಂದು ಪತ್ರಿಕೋದ್ಯಮವನ್ನು ಕೊರಳಿಗೆ ಸುತ್ತಿಕೊಂಡೇ ಇದ್ದೆ. ಇದೇ ಸಂದರ್ಭದಲ್ಲಿ ಪತ್ರಿಕಾ ಹೆಡ್ ಲೈನ್ ಗೆ ಸಂಬಂಧಿಸಿದಂತೆ ‘ತಲೆಬರಹ – ಪತ್ರಿಕೆ ಹಣೆಬರಹ’ ಎಂಬ ಪುಸ್ತಕ ಬರೆದಿದ್ದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅದನ್ನು ಪ್ರಕಟಿಸಿತ್ತು.)

ಆದರೂ ‘ವಿಕ’ ಮಾಲೀಕರಾದ ವಿಜಯ ಸಂಕೇಶ್ವರರು ನನಗೊಂದು ಅವಕಾಶ ನೀಡಿದರು. ಆಗ ಅವರ ಪತ್ರಿಕೆ ಆರಂಭವಾಗಿ ಒಂದು ವರ್ಷವಾಗಿತ್ತು. ಅವರ ನಿರೀಕ್ಷೆಗೆ ತಕ್ಕ ಹಾಗೆ ಪತ್ರಿಕೆ ಪ್ರಸಾರ ಏರಿರಲಿಲ್ಲ. ದರ ಸಮರಕ್ಕಿಳಿದು ಆರು ತಿಂಗಳಾಗಿತ್ತು. ಒಬ್ಬರು ಸಂಪಾದಕರು ಬದಲಾಗಿದ್ದರು, ಇನ್ನೊಬ್ಬರು ಬಂದು ಕುಳಿತಿದ್ದರು.

ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ರೇಸ್ ಕೋರ್ಸ್ ನಿವಾಸವಿದೆಯಲ್ಲ, ಅಲ್ಲಿ ಅಂದಿನ ಪ್ರತಿಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಉಳಿದುಕೊಂಡಿದ್ದ ಸಂಕೇಶ್ವರ ಮತ್ತು ನನ್ನ ನಡುವೆ ಮೊದಲ ಭೇಟಿಯಾಯಿತು. ಅದಕ್ಕೂ ಮೊದಲು ನಾವು ಅಲ್ಲಲ್ಲಿ ಭೇಟಿಯಾದಾಗ ‘ಹಲೋ ಹಲೋ’ ಎಂದು ಕುಶಲೋಪರಿಗಳನ್ನು ವಿನಿಮಯ ಮಾಡಿಕೊಂಡಿದ್ದನ್ನು ಬಿಟ್ಟರೆ ಕುಳಿತು ಮಾತಾಡಿದ್ದಿಲ್ಲ. ಪತ್ರಿಕೋದ್ಯಮ ಹಾಗೂ ಅವರ ಪತ್ರಿಕೆಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಸುಮಾರು ಎರಡು ಗಂಟೆ ಮಾತುಕತೆಯಾಯಿತು.

ಮರುದಿನ ಬೆಳಗ್ಗೆ ನನಗೆ ಹಾಗೂ ಅವರಿಗೆ ಆತ್ಮೀಯರಾದ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಿ, ‘ಸಂಕೇಶ್ವರರು ಕೇಳುತ್ತಿದ್ದಾರೆ, ಅವರ ಪತ್ರಿಕೆಗೆ ಸಂಪಾದಕರಾಗಿ ಬರಲು ಸಿದ್ಧರಿದ್ದೀರಾ?’ ಎಂದು ಕೇಳಿದರು. ಅವರು ಜೋಕ್ ಮಾಡುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ನನಗೆ ಮೂರ್ನಾಲ್ಕು ಗಂಟೆ ಹಿಡಿಯಿತು! ನಾನು ಒಂದು ವಾರದ ಬಳಿಕ ನನ್ನ ಸಮ್ಮತಿ ತಿಳಿಸಿದ ಬಳಿಕ, ನನ್ನ ಹಾಗೂ ಸಂಕೇಶ್ವರರ ನಡುವೆ ಎರಡನೇ ಭೇಟಿಯಾಯಿತು. ಆಗ ಅವರೊಂದು ಮಾತನ್ನು ಹೇಳಿದ್ದರು- ‘ಇನ್ನು ಆರು ತಿಂಗಳಲ್ಲಿ ಪತ್ರಿಕೆ ಪ್ರಸಾರ ಕನಿಷ್ಠ 75 ಸಾವಿರ ದಾಟಬೇಕು. ಇಲ್ಲದಿದ್ದರೆ ಪತ್ರಿಕೆ ಮುಚ್ಚಲು ಹಿಂದೇಟು ಹಾಕುವುದಿಲ್ಲ. ಗೊತ್ತಲ್ಲ, ನಾನು ಇದೇ ಕಾರಣಕ್ಕಾಗಿ ‘ನೂತನ’ ವಾರಪತ್ರಿಕೆ ಹಾಗೂ ‘ಭಾವನಾ’ ಮಾಸಿಕವನ್ನು ಮುಚ್ಚಿದ್ದೇನೆ. ವಿಕವನ್ನು ಮುಚ್ಚುವ ಪ್ರಸಂಗ ಬಂದರೆ ನಿಮಗೆ ಐದು ಲಕ್ಷ ರು. ಪರಿಹಾರ ನೀಡುತ್ತೇನೆ. ಪತ್ರಿಕೆ ಪ್ರಸಾರ ಹೇಗೆ ಏರಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು’ ಎಂದು ಸಂಕೇಶ್ವರ ನೇರಾನೇರ ಹೇಳಿದ್ದರು.

ಸಂಕೇಶ್ವರರು ನನ್ನಲ್ಲಿ ಸಂಪಾದಕನ ಸಂಪನ್ನಗುಣವನ್ನು ಹೇಗೆ ಶೋಧಿಸಿದರೋ ಗೊತ್ತಿಲ್ಲ. ನಾನು ಸಂಪಾದಕನೆಂದು ನನ್ನನ್ನೇ ನಂಬಿಸಿಕೊಳ್ಳುವ ಹೊತ್ತಿಗೆ ಎರಡು- ಮೂರು ತಿಂಗಳು ಕಳೆದಿದ್ದವು. ಆಗ ನನಗೆ ಮೂವತ್ನಾಲ್ಕು. ಎಂಟು ವರ್ಷ ಪತ್ರಿಕೆಯಲ್ಲಿ, ನಾಲ್ಕು ವರ್ಷ ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಮೇಷ್ಟ್ರಾಗಿ ಕೆಲಸ ಮಾಡಿದ ಚಿಗುರು, ತೊದಲು ಅನುಭವ ಅಷ್ಟೆ. ಒಂದು ವೇಳೆ ನಾನೇ ವಿಜಯ ಸಂಕೇಶ್ವರ ಆಗಿದ್ದೆ ಎನ್ನಿ, ವಿಶ್ವೇಶ್ವರ ಭಟ್ ಎಂಬ ಎಳಸು ಆಸಾಮಿಯನ್ನು ಖಂಡಿತವಾಗಿಯೂ ಸಂಪಾದಕನನ್ನಾಗಿ ನೇಮಿಸುತ್ತಿರಲಿಲ್ಲ. ನೂರಾರು ಕೋಟಿ ರು. ಬಂಡವಾಳ ಹಾಕಿ ಉದ್ಯಮ ಆರಂಭಿಸಿದಾಗ ಶುದ್ಧ ಕಸುಬಿಯನ್ನು ಬಿಟ್ಟು ಪತ್ರಿಕೋದ್ಯಮದಲ್ಲಿ ಕಣ್ಣು ಬಿಡುತ್ತಿರುವ ಮುಂಗಾಲಪುಟಕಿಯನ್ನು ಅದೂ ಸಂಪಾದಕನನ್ನಾಗಿ ನೇಮಿಸೋದುಂಟಾ?

ಆದರೆ ಸಂಕೇಶ್ವರರು ‘ಶ್ರೀ ಮಲ್ಲಿಕಾರ್ಜುನ’ನ (ಅವರ ಎಲ್ಲ ಟ್ರಕ್ಕು, ಬಸ್ ಗಳ ಮೇಲೆಲ್ಲ ಶ್ರೀ ಮಲ್ಲಿಕಾರ್ಜುನ ಎಂದೇ ಬರೆಸಿರುತ್ತಾರೆ.) ಮೇಲೆ ಭಾರ ಹಾಕಿ ನನ್ನನ್ನು ಪತ್ರಿಕೆಯ ನೊಗಕ್ಕೆ ಕಟ್ಟಿ ಹಾಕಿದ್ದರು! ಈ ವಿಷಯದಲ್ಲಿ ಅವರ (ಭಂಡ) ಧೈರ್ಯವನ್ನು ಮೆಚ್ಚಲೇಬೇಕು. ಮುಂದಿನದನ್ನು ಹೇಳಬೇಕಿಲ್ಲ. ಪತ್ರಿಕೆ ಸಾಗಿದ ದಾರಿಯಲ್ಲಿ ನೀವೇ ಸಾಕ್ಷಾತ್ ಪಥಿಕರಾಗಿದ್ದೀರಿ.

ನನಗೆ ‘ಕನ್ನಡಪ್ರಭ’ ಹೊಸ ಪತ್ರಿಕೆಯಲ್ಲ. ‘ಸಂಯುಕ್ತ ಕರ್ನಾಟಕ’ದ ಬೆಂಗಳೂರು ಆವೃತ್ತಿಯಲ್ಲಿ ಎರಡು ವರ್ಷ ಟ್ರೇನಿ ಹಾಗೂ ಕಾಯಂ ಉಪಸಂಪಾದಕನಾಗಿ ಕೆಲಸ ಮಾಡಿದ ಬಳಿಕ ನಾನು ಸೇರಿದ್ದು ‘ಕನ್ನಡಪ್ರಭ’ವನ್ನು. ನನಗೆ ‘ಕೆಲಸ ಕೊಟ್ಟವರು’ ಎನ್ನುವುದಕ್ಕಿಂತ ನನಗೆ ‘ಕೆಲಸ ಕಲಿಸಿ ಕೊಟ್ಟವರು’ ವೈಯೆನ್ಕೆ. ನಾಲ್ಕು ವರ್ಷಗಳ ಕಾಲ ‘ಕನ್ನಡಪ್ರಭ’ದ ಡೆಸ್ಕ್ ನಲ್ಲಿ ನಾನು ಉಪ ಸಂಪಾದಕನಾಗಿದ್ದೆ. ಒಂದು ದಿನ ವೈಯೆನ್ಕೆಯವರು ನನ್ನನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ಸಂಪಾದಕೀಯ ಸಲಹೆಗಾರರಾಗಿರುವ ಟಿ.ಜೆ.ಎಸ್. ಜಾರ್ಜ್ ಅವರ ಕೊಠಡಿಗೆ ಕರೆದುಕೊಂಡು ಹೋದರು. ಏಷಿಯನ್ ಕಾಲೇಜಿನಲ್ಲಿ ಕನ್ನಡ ಪತ್ರಿಕೋದ್ಯಮ ಕೋರ್ಸನ್ನು ಆರಂಭಿಸುವ ಆಲೋಚನೆಯನ್ನು ಜಾರ್ಜ್ ವ್ಯಕ್ತಪಡಿಸಿದರು. ‘ಕನ್ನಡ ಪತ್ರಿಕೋದ್ಯಮ ಸಿಲಬಸ್ ನ್ನು ರೂಪಿಸಿ, ಇಡೀ ಕೋರ್ಸನ್ನು ನೀವು ನಿಭಾಯಿಸಬಹುದಾ?’ ಎಂದು ಜಾರ್ಜ್ ಕೇಳಿದಾಗ ನಾನು ಒಪ್ಪಿಕೊಂಡೆ. ಮುಂದಿನ ನಾಲ್ಕು ವರ್ಷ ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ ನನ್ನ ಮನೆಯೇ ಆಯಿತು. ಅಂದರೆ ಕನ್ನಡಪ್ರಭ ಹಾಗೂ ಅದರ ಮಾತೃಸಂಸ್ಥೆ ನಡೆಸಿದ ಕಾಲೇಜಿನಲ್ಲಿ ಒಟ್ಟಾರೆ ಎಂಟು ವರ್ಷ ಕೆಲಸ ಮಾಡಿದ್ದೆ.

ಹದಿನಾಲ್ಕು ವರ್ಷಗಳ ಬಳಿಕ ಪುನಃ ‘ಕನ್ನಡಪ್ರಭ’ಕ್ಕೆ ಮರಳಿದ್ದು ಮರಳಿ ಮನೆಗೆ ಬಂದಂಥ ಸಂತಸ ನೀಡುತ್ತಿದೆ. ರೋಮಾಂಚನವಾಗುತ್ತಿದೆ ಎಂದು ಹೇಳಿದ್ದು ಈ ಕಾರಣಕ್ಕಾಗಿ.

ಇನ್ನೂ ಒಂದು ಕಾರಣವಿದೆ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರಸಂಗ. ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗ ‘ಕನ್ನಡಪ್ರಭ’ ಪತ್ರಿಕಾಲಯಕ್ಕೆ ತೀರಾ ಅಳುಕಿನಿಂದ ಪ್ರವೇಶಿಸಿದ್ದೆ. ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರನ್ನು ದೂರದಿಂದಾದರೂ ಒಮ್ಮೆ ಕಣ್ಣಾರೆ ನೋಡಬೇಕೆಂಬುದು ನನ್ನ ಆಸೆಯಾಗಿತ್ತು. ಆ ದಿನಗಳಲ್ಲಿ ಖಾದ್ರಿಯವರ ಸಂಪಾದಕೀಯ, ಅವರ ವ್ಯಕ್ತಿತ್ವ, ಧೀಮಂತಿಕೆ ಉತ್ತುಂಗದಲ್ಲಿತ್ತು. ಅವರ ಕುರಿತು ಅನೇಕ ದಂತಕತೆಗಳು ಹರಿದಾಡುತ್ತಿದ್ದವು. ಖಾದ್ರಿ ಸಂಪಾದಕೀಯ ಬರೆದರೆ ಸರಕಾರ ಅಲುಗಾಡುತ್ತದೆ ಎಂದೆಲ್ಲ ಜನ ಮಾತಾಡಿಕೊಳ್ಳುತ್ತಿದ್ದರು. ಅವರ ಸುತ್ತ ಒಂದು ‘ಪ್ರಭಾವಳಿ’ ನಿರ್ಮಾಣವಾಗಿತ್ತು. ಅವರನ್ನೊಮ್ಮೆ ಕಣ್ತುಂಬಿಸಿಕೊಳ್ಳಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅವರ ಮಾತು, ಹಾವಭಾವ, ದಾಢಸಿತನ, ಗಡಸು ದನಿ, ದಢೂತಿ ದೇಹ, ನೀಟಾದ ದಿರಿಸಿನಿಂದ ಅವರನ್ನು ಕಂಡವರು ತುಸು ಅಳುಕುತ್ತಿದ್ದರು. ಇದಕ್ಕೆ ಅವರ ನಿರ್ಭೀತ ಬರಹ ಪುಟವಿಟ್ಟಂತಾಗಿತ್ತು. ಅಲ್ಲದೇ ಖಾದ್ರಿಯವರಿಗೆ ರಾಜ್ಯ- ರಾಷ್ಟ್ರಮಟ್ಟದ ನಾಯಕರ ಸಂಪರ್ಕವಿತ್ತು. ಅವರು ತಮ್ಮ ಧೀಮಂತ ಬರಹ ಹಾಗೂ ವ್ಯಕ್ತಿತ್ವದಿಂದಾಗಿ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಚುಟುಕಾದ, ಚಾಟಿಯೇಟಿನಂತಿರುವ, ವಿಶಿಷ್ಟ ಬರವಣಿಗೆಯ ಶೈಲಿಯಿಂದಾಗಿ ಅವರು ಉಳಿದವರಿಗಿಂತ ಭಿನ್ನರಾಗಿ ಗುರುತಿಸಿಕೊಂಡಿದ್ದರು.

ಖಾದ್ರಿಯವರ ಈ ಎಲ್ಲ ಚಿತ್ರಣಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು, ಬಹಳ ನಿರೀಕ್ಷೆ, ತವಕಗಳ ಗಂಟು ಕಟ್ಟಿಕೊಂಡು, ಅವರ ಕೊಠಡಿ ಮುಂದೆ ಗುಬ್ಬಚ್ಚಿ ಹಾಗೆ ನಿಂತುಕೊಂಡೆ. ಖಾದ್ರಿ ತಮ್ಮ ದೈನಂದಿನ ಸಂಪಾದಕೀಯವನ್ನು ಸಹಾಯಕನಿಗೆ ಡಿಕ್ಟೇಟ್ ಮಾಡುತ್ತಿದ್ದರು. ‘ಸಂಪಾದಕರು ಒಂದು ಗಂಟೆಯ ನಂತರ ಸಿಕ್ತಾರೆ’ ಅಂದ್ರು. ನಾನು ಒಂದು ಗಂಟೆ ಹೊರಗಡೆ ಅವರಿಗಾಗಿ ಕಾಯುತ್ತಾ ನಿಂತಿದ್ದೆ. ಅಷ್ಟೊತ್ತಿಗೆ ಅವರನ್ನು ಭೇಟಿ ಮಾಡಲು ಮೂರ್ನಾಲ್ಕು ಜನ ಅವರ ಕೊಠಡಿಯೊಳಗೆ ನುಗ್ಗಿಬಿಟ್ಟರು. ಅವರಲ್ಲೊಬ್ಬರು ಬಂದಗದ್ದೆ ರಮೇಶ್ ಎಂಬುದು ಆ ನಂತರ ನನಗೆ ಗೊತ್ತಾಯ್ತು. ಈ ಮೂರ್ನಾಲ್ಕು ಜನ ಸಹ ಸುಮಾರು ಮುಕ್ಕಾಲು ಗಂಟೆ ಖಾದ್ರಿ ಜತೆ ಹರಟುತ್ತಿದ್ದರು. ನಾನು ಹೊರಗಡೆ ಹಾಗೆ ನಿಂತೇ ಇದ್ದೆ. ಅವರೆಲ್ಲ ಹೋದ ಬಳಿಕ ನನ್ನನ್ನು ಕರೆಯಬಹುದು ಎಂದು ಯೋಚಿಸುತ್ತಿದ್ದರೆ, ಖಾದ್ರಿ ಊಟಕ್ಕೆ ಹೊರಟು ಹೋದರು. ‘ಸಾಯಂಕಾಲ ಐದು ಗಂಟೆ ಬಳಿಕ ಸಂಪಾದಕರು ಬರ್ತಾರೆ. ಆಗ ಬನ್ನಿ. ನಿಮ್ಮನ್ನು ಅವರ ಬಳಿಗೆ ಕರೆದುಕೊಂಡು ಹೋಗ್ತೇನೆ’ ಎಂದು ಸಹಾಯಕರು ತಿಳಿಸಿದರು. ಬೇಸರವಾಯಿತು. ಆದರೆ ಬೇರೆ ದಾರಿಯಿರಲಿಲ್ಲ. ನಾನೂ ನಿಂತು ನಿಂತು ಸುಸ್ತಾಗಿದ್ದೆ. ಆದರೆ ಖಾದ್ರಿಯವರನ್ನು ಭೇಟಿ ಮಾಡಲೇ ಬೇಕು ಎಂಬ ಹಠ ಪುನಃ ನನ್ನನ್ನು ‘ಕನ್ನಡಪ್ರಭ’ ಕಾರ್ಯಾಲಯದತ್ತ ಕರೆಯಿತು. ಐದು ಗಂಟೆಗೆ ಬರುತ್ತಾರೆಂದು ನಾನು ಅರ್ಧ ಗಂಟೆ ಮುಂಚಿತವಾಗಿ ಹೋದೆ.

ಸರಿಯಾಗಿ ಐದಕ್ಕೆ ಖಾದ್ರಿ ಬಂದರು. ಹಾಲು ಬಿಳಿ ಪಂಚೆ, ಗರಿಗರಿ ಖದರು, ಮೇಲೊಂದು ಜಾಕೀಟು, ನಿಧಾನವಾಗಿ ಹೆಜ್ಜೆ ಹಾಕಿ ಬರುತ್ತಿದ್ದರೆ ಸಲಗದ ಗೆಟಪ್ಪು. ನನಗೆ ಒಳಗೊಳಗೆ ಪುಕುಪುಕು. ಅವರ ಕೊಠಡಿಗೆ ಕರೆದಾಗ ಅವರ ಮುಂದಿನ ಕುರ್ಚಿ ಮೇಲೆ ಕುಳಿತುಕೊಳ್ಳಲು ಅಂಜಿಕೆ. ಹೆಸರು, ಊರು, ಕುಲ, ಗೋತ್ರ, ಆಸಕ್ತಿ ಎಲ್ಲವನ್ನೂ ಕೇಳಿದರು. ಪತ್ರಕರ್ತನಾಗಬೇಕೆಂದಿದ್ದೇನೆ ಎಂದಾಗ ಖಾದ್ರಿ ತಮ್ಮ ಎಂದಿನ ಅಧಿಕಾರವಾಣಿಯಿಂದ, ‘ಬರೀ ಸುಮ್ಮನೆ ಹಾಗೆ ಹೇಳಿದರೆ ಪ್ರಯೋಜನವಿಲ್ಲ. ಪತ್ರಿಕೋದ್ಯಮ ಅಂದ್ರೆ ತಪಸ್ಸು. ಅದಂದ್ರೆ ತ್ಯಾಗ. ಇದು ಉಳಿದ ವೃತ್ತಿಯಂತೆ ಅಲ್ಲ’ ಎಂದು ಹೇಳಿ ‘ನಿಮ್ಮ ಭಾಷೆ ಹೇಗಿದೆ? ಮೊದಲು ಕಾಗುಣಿತ ತಪ್ಪಿಲ್ಲದೇ ಬರೆಯುವುದನ್ನು ಕಲಿತುಕೋ. ಭಾಷಾ ಶುದ್ಧಿಗೆ ಗಮನ ಕೊಡು. ಅದು ಸಾಧಿಸದೇ ಪತ್ರಿಕಾಲಯದ ಕಡೆ ಬರಬೇಡ. ನನಗೆ ಬೇರೆ ಕೆಲಸವಿದೆ, ನೀನು ಹೊರಡು’ ಎಂದು ಬೆನ್ನು ಸವರಿ ಕಳಿಸಿದ್ದರು. ಆ ಇಡೀ ದಿನ ಅವರಿಗಾಗಿ ವ್ಯಯಿಸಿದ್ದು ಸಾರ್ಥಕವೆನಿಸಿತು.

ಆನಂತರ ಸಂಪಾದಕರಾದ ವೈಯೆನ್ಕೆ ಹಾಗೂ ನನ್ನದು ಅವಿನಾಭಾವ ಸಂಬಂಧ. ನಾನು ಮೊದಲು ಭೇಟಿಯಾದಾಗ ಅವರು ಪ್ರಜಾವಾಣಿ ಸಂಪಾದಕರಾಗಿ ನಿವೃತ್ತರಾಗಿದ್ದರು. ಅದಾಗಿ ಎರಡು ವರ್ಷಗಳ ಬಳಿಕ ಅವರು ‘ಕನ್ನಡಪ್ರಭ’ದ ಸಂಪಾದಕರಾದರು. ಸುಮಾರು ಹನ್ನೊಂದು ವರ್ಷ ಅವರು ಸಂಪಾದಕರಾಗಿದ್ದರು. ನನ್ನ ಅವರ ಸಂಬಂಧ ಮೊದಲ ಭೇಟಿಯಿಂದ ಶುರುವಾಗಿ ಅವರ ಅಂತಿಮ ಯಾತ್ರೆಯಲ್ಲಿ ಪರ್ಯವಸಾನಗೊಳ್ಳುವ ತನಕ ನಡೆಯಿತು. ಹೆಚ್ಚು ಕಮ್ಮಿ ಪ್ರತಿದಿನ ‘ಕನ್ನಡಪ್ರಭ’ದ ಅವರ ಚೇಂಬರ್ ನಲ್ಲಿ ಭೇಟಿಯಾಗುತ್ತಿದ್ದೆ. ಪತ್ರಿಕೋದ್ಯಮದ ಅನೇಕ ಪಟ್ಟುಗಳನ್ನು ನನಗೆ ಕಲಿಸಿದವರು ವೈಯೆನ್ಕೆ. ನಾನು ಅವರ ಗರಡಿಯಲ್ಲಿ ಪಳಗಿದವನು ಎಂಬುದು ನನಗೆ ಅಭಿಮಾನದ ಸಂಗತಿಯೇ. ವೈಯೆನ್ಕೆಯವರ ಕೊನೆಯ ಎಂಟು ವರ್ಷಗಳ ಅವಧಿಯಲ್ಲಿ ನಾನು ಅವರೊಂದಿಗೆ ನಿಕಟವಾಗಿದ್ದೆ.

ಏಷಿಯನ್ ಕಾಲೇಜಿನಲ್ಲಿ ಮೇಷ್ಟ್ರಾಗಿ ಸೇರಿದರೂ, ಪತ್ರಿಕೋದ್ಯಮವನ್ನು ಬೇರೆ ದೃಷ್ಟಿಯಿಂದ ನೋಡಲು, ಅಧ್ಯಯನ ಮಾಡಲು ಸಹಾಯಕವಾಯಿತು. ಜಾರ್ಜ್ ಅವರಂಥ ಧೀಮಂತ ಪತ್ರಕರ್ತರ ಒಡನಾಟ, ಅನುಭವ ಕಥನ ಪ್ರಾಪ್ತಿಯಾಗಿದ್ದು ಇಲ್ಲಿಯೇ. ಪತ್ರಿಕೋದ್ಯಮ ಮೇಷ್ಟ್ರಾದವರು ಪುಸ್ತಕ ಬರೆಯಬೇಕೆಂದು ಪ್ರಚೋದಿಸಿದವರೇ ಜಾರ್ಜ್. ನನ್ನಿಂದ ‘ಪತ್ರಿಕೋದ್ಯಮ ಪಲ್ಲವಿ’ ಬರೆಯಿಸಿದವರೇ ಅವರು. ನಾನು ಆಗ ‘ಕನ್ನಡಪ್ರಭ’ದಲ್ಲಿದ್ದಾಗ ಇದ್ದ ಪ್ರಮುಖ ಪತ್ರಕರ್ತರೆಂದರೆ ಕೆ. ಸತ್ಯನಾರಾಯಣ. ಅವರು ಬರಹ, ನಡೆನುಡಿಗಳಿಂದಲೇ ನಮಗೆ ಪತ್ರಿಕೋದ್ಯಮ ಪಾಠ ಹೇಳಿಕೊಟ್ಟವರು. ನಂತರ ಅವರು ‘ಕನ್ನಡಪ್ರಭ’ದ ಸಂಪಾದಕರೂ ಆದರು.

ಕಾಲ ಚಕ್ರ ತಿರುಗುತ್ತಲೇ ಇರುತ್ತದೆ. ಹದಿನಾಲ್ಕು ವರ್ಷದ ಬಳಿಕ ನಾನು ‘ಕನ್ನಡಪ್ರಭ’ದ ಕಚೇರಿಯಲ್ಲಿ ಬಂದು ಕುಳಿತಿದ್ದೇನೆ. ಪ್ರಧಾನ ಸಂಪಾದಕನಾಗಿ!

ಕನ್ನಡಪ್ರಭಕ್ಕೆ 47 ವರ್ಷಗಳ ಭವ್ಯ ಇತಿಹಾಸವಿದೆ. ಕರ್ನಾಟಕ ಮತ್ತು ಕನ್ನಡಿಗರ ಒತ್ತಾಸೆಗಳಿಗೆ ಪತ್ರಿಕೆ ಸ್ಪಂದಿಸುತ್ತಾ ಬಂದಿದೆ. ಕನ್ನಡಪರ ಹೋರಾಟಗಳಿಗೆ ಧ್ವನಿಯಾಗಿದೆ. ಎನ್.ಎಸ್. ಸೀತಾರಾಂ ಶಾಸ್ತ್ರಿ, ಕೆ. ಎಸ್. ರಾಮಕೃಷ್ಣ ಮೂರ್ತಿ, ವೈಯೆನ್ಕೆ, ಖಾದ್ರಿ ಶಾಮಣ್ಣ ಅವರಂಥ ಧೀಮಂತ ಸಂಪಾದಕರು ಕಟ್ಟಿ ಬೆಳೆಸಿದ ಪತ್ರಿಕೆಯ ಜವಾಬ್ದಾರಿ ಸಿಕ್ಕಿರುವುದು ಸಂತಸ ತಂದಿದೆ. ಜಾರ್ಜ್ ಹಾಗೂ ಕೆ. ಸತ್ಯನಾರಾಯಣ ಅವರಿಗೆ ಹದಿನಾಲ್ಕು ವರ್ಷಗಳ ಹಿಂದೆ ಎಷ್ಟು ವಯಸ್ಸಾಗಿತ್ತೋ ಈಗಲೂ ಅಷ್ಟೇ ವಯಸ್ಸಾಗಿದೆ. ಅವರಿಬ್ಬರ ಮಾರ್ಗದರ್ಶನ ಈಗಲೂ ಸಿಗುತ್ತಿದೆ.

ಈಗ ನನಗೆ ಬೇಕಿರುವುದು ನಿಮ್ಮ ಪ್ರೀತಿ, ವಿಶ್ವಾಸ, ಬೆಂಬಲ.

ಅದಕ್ಕೆ ಹೇಳಿದ್ದು ರೋಮಾಂಚನವಾಗುತ್ತಿದೆ ಅಂತ.

ಗುರುವಾರ, ಮಾರ್ಚ್ 10, 2011

ಬರೀ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ?

ನಾರಾಯಣಮೂರ್ತಿ ಕನ್ನಡ ನಾಡಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?
ಬರೀ ಸಾಹಿತ್ಯ ಕೃಷಿ
ಯೊಂದೇ ಕನ್ನಡದ ಕೈಂಕರ್ಯವೇ?
ಕೃಪೆ:ಪ್ರತಾಪ ಸಿಂಹ
ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?


Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
ಯಥಾ ಪ್ರಕಾರ ಕೆಲ ಮಾಧ್ಯಮದ ಮಂದಿ ’ಮತಾಂತರ’ ಅನ್ನುವ ಸಾಮಾಜಿಕ ಶಾಂತಿಗೆ ಅನಿಷ್ಟವಾಗಿರುವ ವಿಷಯವನ್ನು ಮೂಲೆಗೆ ತಳ್ಳಿ, ’ಹಸಿರು ಬಾವುಟ, ಮಾಂಸ, ಆತಂಕ’ ಅನ್ನುವ ಚಿಮೂ ಅವರ ವಾಕ್ಯದ ಸುತ್ತ ಚರ್ಚೆಯನ್ನ ಗಿರಕಿ ಹೊಡೆಸುತ್ತಲೇ ಇದ್ದಾರೆ! ನಿಜ, ಹಸಿರು ಬಾವುಟ ಹಾರಿಸುವುದನ್ನ,ಮೈಕಿನಲ್ಲಿ ನಮಾಜ್ ಕೇಳಿಸುವುದಕ್ಕೆಲ್ಲ ಆತಂಕ ಪಡಬೇಕಿಲ್ಲ, ಕ್ರೈಸ್ತರೆಲ್ಲ ಕೋಮುವಾದಿಗಳು ಅನ್ನೋ ಹೇಳಿಕೆಗಳು ಚಿಮೂ ಅವರಂಥ ಸಂಶೋಧಕರಿಂದ ಬರಬಾರದಿತ್ತು. ಅದಕ್ಕೆ ಸಂಶೋಧನಾ ಭಾಷೆಯನ್ನೇ ಉಪಯೋಗಿಸಿ ಮಾತನಾಡಬಹುದಿತ್ತು. ಹೀಗೆ ಮಾಡದೆ ಇರುವುದು ಅವರ ಸಮರ್ಥಕರನ್ನು ಒಂದು ಗಳಿಗೆ ತಡ ಬಡಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಈಗ ಇದ್ದ ಹಾಗೆಯೇ ಅವರ ಮಾತುಗಳನ್ನು ಯಾರು ಒಪ್ಪಲು ಕಷ್ಟವಾದೀತು. ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ’ಚಿಮೂ ಅವರು ಅಪಾಯಕಾರಿ ಮನಸ್ಥಿತಿ ತಲುಪಿದ್ದಾರೆ, ಇಂಥ ಮಾತುಗಳಿಂದ ರಕ್ತಪಾತವಾಗಬಹುದು’ ಅಂತ ಹುಯಿಲೆಬ್ಬಿಸುವುದನ್ನೂ ಒಪ್ಪಲಾಗುವುದಿಲ್ಲ.
ಚಿಮೂ ಅವ್ರ ಪತ್ರದ ಕೆಲವೇ ಕೆಲವು ಅಂಶಗಳನ್ನ ಹಿಡಿದು ಯಾಕೆ ಚರ್ಚೆ ನಡೆಯುತ್ತಿದೆ? ಆ ಪತ್ರದಲ್ಲಿ ಅವರು ಬರಿ ಇಷ್ಟನ್ನು ಮಾತ್ರವೇ ಬರೇದಿದ್ದು? ಅಥವಾ ತಮಗೆ ಯಾವುದು ಬೇಕೋ ಅದನ್ನ ಮಾತ್ರ ಆರಿಸಿಕೊಂಡು ಪತ್ರದ ಹಿಂದಿನ ನಿಜವಾದ ಆತಂಕವನ್ನು ಮರೆಮಾಡಿರುವುದು ಚರ್ಚೆಯ ಹಾದಿ ತಪ್ಪಿಸುತ್ತದೆ. ಎಡ-ಬಲ ಪಂಥೀಯರ ಹಿಂದಿನ ಎಲ್ಲ ಚರ್ಚೆಗಳನ್ನ ನೋಡುತ್ತ ಬಂದರೆ ’ಹಾದಿ ತಪ್ಪಿಸುವ’ ಚರ್ಚೆಗೇ ಪ್ರಾಮುಖ್ಯತೆ ಅನ್ನುವುದು ಸ್ಪಷ್ಟವಾಗುತ್ತದೆ.
ಬಹು ಧರ್ಮವಿರುವ ರಾಷ್ಟ್ರದಲ್ಲಿ ಅನ್ಯ ಧರ್ಮಗಳೆಡೆಗೆ ಭಯ,ಅಪನಂಬಿಕೆಗಳಿರುವುದು ಸಹಜ,ಇದಕ್ಕೆ ಮುಖ್ಯವಾದ ಕಾರಣ ಊಹಾತ್ಮಕ ಭಯ.ತಮ್ಮ ಧರ್ಮೀಯರ ಸಂಖ್ಯೆ ಎಲ್ಲಿ ಈ ದೇಶದಲ್ಲಿ ಕಡಿಮೆಯಾಗಿ ಬಿಡುವುದೋ ಎಂಬ ಭಯ ಬಹುಸಂಖ್ಯಾತರಲ್ಲೂ,ಅಲ್ಪಸಂಖ್ಯಾತರಲ್ಲೂ ಇರುತ್ತದೆ.ಚಿಮೂ ಅವರ ಪತ್ರ ಕೆಲವು ಬಹುಸಂಖ್ಯಾತರನ್ನ ತಲ್ಲಣವನ್ನ ಪ್ರತಿನಿಧಿಸುತ್ತಿದೆ,ಅ ತಲ್ಲಣಗಳನ್ನ ಅರಿತು ಅದರ ನಿವಾರಣೆಗೆ ಪ್ರಯತ್ನಿಸುದನ್ನ ಬಿಟ್ಟು,ಬೆದರಿದವರ ಮೇಲೆ ಹಾವು ಎಸೆಯುವಂತ ಕೆಲಸವಾಗಬಾರದು.ನಮ್ಮ ವಿದ್ವಾಂಸರ ‘ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಎಂಬ ವಾದ ಜನತೆಯಲ್ಲಿ ಇನ್ನಷ್ಟು ಕೋಮುವಾದಕ್ಕೆ ಅಂಟಿಕೊಳ್ಳುವಂತೆ ಮಾಡುತ್ತಿದೆ.ಸರ್ಕಾರಗಳ ನೀತಿಯೂ ಇದಕ್ಕೆ ಪೂರಕವಾಗಿಯೇ ಇದ್ದಾಗ ಇದರ ತೀವ್ರತೆ ಇನ್ನೂ ಹೆಚ್ಚು.ವಿಚಾರವಾದವೂ ಒಂದು ಮಗ್ಗುಲಿಗೆ ಸರಿಯಾಗಿ ಅನ್ವಯಿಸುತ್ತ ಇನ್ನೊಂದನ್ನು ಬಿಟ್ಟೂಬಿಟ್ಟಾಗ ಎರಡನೆ ಗುಂಪು ತಮ್ಮ ವಿಚಾರವೆಲ್ಲ ಸರಿ ಎಂದು ಭಾವಿಸಿ ಬಿಡಬಹುದು.
ಉದಾಹರಣೆಗೆ ಟೀವಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು ದೀಪ ಹಚ್ಚಲಿಲ್ಲ ಅಂದ್ರೆ ಪ್ರಳಯವಾಗುತ್ತದೆ ಅಂತ ಹೆದರಿಸೋ ಡೋಂಗಿ ಜ್ಯೋತಿಷಿಗಳನ್ನು ತೆಗಳುವಾಗ ಇರುವ ಹುಮ್ಮಸ್ಸು, ದೇವರು ಖಾಯಿಲೆ ವಾಸಿ ಮಾಡುತ್ತಾನೆ ಬನ್ನಿ ಅಂತ ’ಬೆನ್ನ(ನ್ನಿ) ಹಿಂದೆ(ನ್)’ ನಿಂತು ತಲೆ ಮೇಲೆ ಕೈಯಿಟ್ಟು ಪವಾಡದ ಮಂಕೂ ಬೂದಿ ಎರಚುವಾಗ ತನ್ನ ತೀವ್ರತೆ ಕಳೆದುಕೊಂಡಿತ್ತು. ಇಂದು ಮಾಟ ಮಂತ್ರದ ಬಗ್ಗೆ ಟೀಕಿಸುವ ಮಂದಿ ಹೀಗೆ ಕೆಲ ವರ್ಷದ ಹಿಂದೆ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ತಲೇ ಮೇಲೆ ಕೈಯಿಡಿಸಿಕೊಂಡು ತಲೆ(ಇದ್ದವ್ರು!) ತಿರುಗಿ ಬಿದ್ದಾಗ ಚರ್ಚೆಯಾಗಲೇ ಇಲ್ಲ.
ಇನ್ನು ’ಮತಾಂತರ’ದ ಬಗ್ಗೆ ಚಿಮೂ ಅವರ ಆತಂಕಕ್ಕೆ ಕಾರಣವಿಲ್ಲವೇ? ಭಾರತದ ಸಂವಿಧಾನದ ಅಡಿಯಲ್ಲಿ ಸ್ವ ಇಚ್ಚೆಯಿಂದ ಮತಾಂತರವಾಗಬಹುದು ಅಂತ ವಾದಿಸಿದರೂ ಸಹ ವಾಸ್ತವ ಬೇರೆಯೇ ಆಗಿದೆ ಎಂಬುದು ಪ್ರಗತಿ ಮತ್ತು ಪ್ರತಿಗಾಮಿಗಳೀಬ್ಬರಿಗೂ ತಿಳಿದ ವಿಷಯವೇ. ಇವೆಲ್ಲ ನ್ಯೂಟನ್ನನ ಮೂರನೇ ನಿಯಮದ ಹಾಗೆ.ಕ್ರಿಯೆಗೊಂದು ಪ್ರತಿಕ್ರಿಯೆ ಇರುತ್ತದೆ ಅನ್ನುವ ಅಂಶವನ್ನು ಅರ್ಥಮಾಡಿಕೊಂಡು ತಪ್ಪು ಯಾರೇ ಮಾಡಿದರು ಅದನ್ನು ವಿರೋಧಿಸುವುದನ್ನು ಕಲಿತರೆ ಶಾಂತಿ ನೆಲೆಸಬಲ್ಲದು.
ನಾವು ಬದುಕ ಬಂದವರು. ಹೊಡದಾಡಿ ಸಾಯುವುದಕ್ಕಲ್ಲ. ಸುಂದರ ಭಾರತವನ್ನು ಕಟ್ಟಲಿಕ್ಕೆ. ಇದಕ್ಕೆ ರಿಲಿಜಿಯನ್ ಎನ್ನುವ ಸಂಗತಿ ಅಡ್ಡಿ ಮಾಡಬಾರದು.ಓಲೈಕೆಯಂತೂ ಬೇಡವೇ ಬೇಡ. ಜನರಿಗೆ ಬೇಕಾಗಿರುವುದು ಸಹಬಾಳ್ವೆ ಮಾತ್ರ.ತುತ್ತು ಅನ್ನಕ್ಕಾಗಿ ಹೋರಾಡುವ ಜನರಿಗ್ಯಾವ ಧರ್ಮ ಸ್ವಾಮೀ? ಅವರೆಂದಿಗೂ ಒಟ್ಟಿಗೆ ಬದುಕ ಬಯಸುವವರು.ಸೌಹಾರ್ದತೆ ಅನ್ನುವುದು ನಮ್ಮ ರಕ್ತದ ಗುಣ.
ಇಡಿ ದೇಶವೇ ಅಯೋಧ್ಯ ವಿವಾದದ ಬಿಸಿಯಲ್ಲಿರುವಾಗ,ಕರ್ನಾಟಕದ ಮೂಲೆಯ ಹಿಂದೂಗಳೇ ಹೆಚ್ಚಿರುವ ಊರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಮುಸ್ಲಿಂ ಬಾಂಧವರಿಗೊಸ್ಕರ ಖುದ್ದು ನಿಂತು ಮಸೀದಿ ಕಟ್ಟಿಸಿ ಕೊಡುವ ಹಿಂದೂಗಳಿದ್ದಾರೆ.ಕಾಶ್ಮೀರ ಅನ್ನೋ ಅಗ್ನಿ ಕುಂಡದೊಳಗೆ,ನಿಷೇಧಾಜ್ಞೆಯ ಸಮಯದಲ್ಲೂ ಸಹ ಅಂಜದೆ ಪಕ್ಕದ ಮನೆಯ ಕಾಶ್ಮೀರಿ ಪಂಡಿತರ ಅಂತ್ಯ ಸಂಸ್ಕಾರವನ್ನ ಹಿಂದೂ ಧರ್ಮದ ಶೈಲಿಯಲ್ಲಿ ಮಾಡುವ ಮುಸ್ಲಿಂ ಹೃದಯಗಳಿವೆ,ಶಿಕ್ಷಣ,ಸೇವಾ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಪಾಡಿಗೆ ತಾವು ದುಡಿಯುವ ಕ್ರೈಸ್ತ ಮನಸ್ಸುಗಳಿವೆ.
ಭಾರತದಲ್ಲಿ ಬಹು ಧರ್ಮವಿರಬಹುದು,ಆದರೆ ಭಾರತೀಯತೆ ಅಂದರೆ ಮಾನವೀಯತೆ ಅಷ್ಟೇ! ನನ್ನ ಮಟ್ಟಿಗೆ ಭಾರತೀಯತೆ ಅಂದರೆ ಎಲ್ಲರನ್ನ ಬೆಸೆಯುವ ಕೊಂಡಿ. ಎಲ್ಲರನ್ನು ಬೆಸೆಯುವ ಕೊಂಡಿಯನುಡುಕುತ ಮುಂದೆ ಸಾಗೋಣ.

(ಚಿತ್ರ ಕೃಪೆ : ದಿಹಿಂದೂ.ಕಾಂ)