ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಏಪ್ರಿಲ್ 26, 2011

ಪಟೇಲ್, ಶಾಸ್ತ್ರಿಯನ್ನೇ ಬಿಡದವರು ಅಣ್ಣಾನನ್ನು ಉಳಿಸಿಯಾರೇ?


ಖಂಡಿತ ಆ ಬಗ್ಗೆ ಅನುಮಾನಗಳು ಕಾಡುತ್ತಿವೆ. ಇತರರ ಯಶಸ್ಸನ್ನು ಸಹಿಸುವ ಗುಣ ನೆಹರು ಕುಟುಂಬದ ರಕ್ತದಲ್ಲೇ ಇಲ್ಲ. ಭಾರತ ರಾಷ್ಟ್ರೀಯ ಸೇನೆಯನ್ನು (INA) ಕಟ್ಟಿದ್ದ ಸುಭಾಷ್್ಚಂದ್ರ ಬೋಸ್, ಬರ್ಮಾ ಮೂಲಕ ಬ್ರಿಟಿಷರ ಮೇಲೆ ದಾಳಿ ಮಾಡುವುದಾಗಿ 1944ರಲ್ಲಿ ರೇಡಿಯೋ ಭಾಷಣ ಮಾಡಿದಾಗ “ಸುಭಾಷ್ ವಿರುದ್ಧ ನಾನೇ ಖಡ್ಗ ಹಿಡಿದು ಹೋರಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ವ್ಯಕ್ತಿ ಜವಾಹರಲಾಲ್ ನೆಹರು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಸೂಚನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ನೀಡಿದ್ದರು. ಅಂತಹ ನೆಹರು ಕುಟುಂಬ ಇಡೀ ದೇಶವಾಸಿಗಳ ಕಣ್ಣಲ್ಲಿ ಹೀರೋ ಆಗಿ ಹೊರಹೊಮ್ಮಿರುವ ಅಣ್ಣಾ ಹಜಾರೆಯವರನ್ನು ಬಿಡುತ್ತದೆಯೇ? ಕಪಿಲ್ ಸಿಬಲ್, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ ನೀಡುತ್ತಿರುವ ಹೇಳಿಕೆಗಳು, ಕೆಸರೆರಚುವ ಪ್ರಯತ್ನಗಳು ಏನನ್ನು ಸೂಚಿಸುತ್ತಿವೆ? ಇದುವರೆಗೂ ನೆಹರು ಕುಟುಂಬ ಹಾಗೂ ಕಾಂಗ್ರೆಸ್ ಭಟ್ಟಂಗಿಗಳು “ತುಳಿದು’ ಬಂದ ಹಾದಿಯಾದರೂ ಹೇಗಿದೆ?

ಘಟನೆ-1

“The power of reconstruction is always greater than the power of destruction”! ನಮ್ಮ ದೇಶದ ಅತ್ಮಗೌರವದ ಪ್ರತೀಕದಂತಿರುವ ಸೋಮನಾಥ ದೇವಾಲಯದ ಅಡಿಗಲ್ಲು ಇಡುವ ಸಮಾರಂಭಕ್ಕೆ ಅಗಮಿಸಿದ್ದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಾಗೆಂದಿದ್ದರು. ಜುನಾಯದ್, ಮಹಮದ್ ಘಜ್ನಿ, ಅಲ್ಲಾವುದ್ದೀನ್ ಖಿಲ್ಜಿ, ಮುಜಫ್ಫರ್ ಶಾ, ಮಹಮದ್ ಬೆಗ್ದಾ ಹಾಗೂ ಕೊನೆಯದಾಗಿ ಮೊಘಲ್ ದೊರೆ ಔರಂಗಜೇಬ ಇವರಿಂದ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಸೋಮನಾಥ ದೇವಾಲಯ 6 ಬಾರಿ ನಾಶಗೊಂಡು 5 ಸಲ ಪುನರ್ ನಿರ್ಮಾಣಗೊಂಡಿತ್ತು. ಸೋಮನಾಥ ದೇವಾಲಯವಿದ್ದಿದ್ದು ಪ್ರಭಾಸ್ ಪಟ್ಟಣದಲ್ಲಿ. ಅದು ಜುನಾಗಡ್್ಗೆ ಸೇರಿತ್ತು. ಜನಸಂಖ್ಯೆಯ ಶೇ. 80 ರಷ್ಟು ಹಿಂದುಗಳೇ ಇದ್ದರೂ ಅಲ್ಲಿನ ನವಾಬ ಜುನಾಗಢ್ ಅನ್ನು ಪಾಕಿಸ್ತಾನದೊಂದಿಗೆ ಸೇರ್ಪಡೆ ಮಾಡಲು ಹವಣಿಸುತ್ತಿದ್ದ. ಇದರ ವಿರುದ್ಧ ಬಂಡೆದ್ದ ಜನ ಶಾಮಲ್್ದಾಸ್ ಗಾಂಧಿ ನೇತೃತ್ವದಲ್ಲಿ ಬದಲಿ ಸರ್ಕಾರ ರಚಿಸಿದರು. ದಿಕ್ಕೆಟ್ಟ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ಆನಂತರ ಭಾರತೀಯ ಒಕ್ಕೂಟಕ್ಕೆ ಸೇರಿಸಿಕೊಳ್ಳುವಂತೆ ಶಾಮಲ್್ದಾಸ್ ಕರೆಕೊಟ್ಟ ಕಾರಣ 1947, ನವೆಂಬರ್ 12ರಂದು ಖುದ್ದು ಅಗಮಿಸಿದ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜುನಾಗಢದ ಸೇರ್ಪಡೆ ಜತೆಗೆ ಸೋಮನಾಥ ದೇವಾಲಯದ ಪುನರ್ ನಿರ್ಮಾಣಕ್ಕೂ ಆದೇಶ ನೀಡಿದರು. ಅಂತಹ ಪ್ರಸ್ತಾವವನ್ನಿಟ್ಟುಕೊಂಡು ಸರ್ದಾರ್ ಪಟೇಲ್, ಕೆ.ಎಂ. ಮುನ್ಷಿ ಮತ್ತಿತರ ಕಾಂಗ್ರೆಸ್ ನಾಯಕರು ಗಾಂಧೀಜಿ ಬಳಿಗೆ ಹೋದಾಗ ಬಹಳ ಖುಷಿಯಿಂದಲೇ ಸಮ್ಮತಿಸಿದ ಮಹಾತ್ಮ, ಜನರ ದೇಣಿಗೆಯಿಂದ ಮರು ನಿರ್ಮಾಣ ಕಾರ್ಯ ನಡೆಯಲಿ ಎಂದರು.

ಅದರೆ ಈ ಘಟನೆಯಿಂದ ಮುಸ್ಲಿಮರಿಗಿಂತ ಹೆಚ್ಚು ಕೋಪ ಬಂದಿದ್ದು ಕಾಶ್ಮೀರಿ ಪಂಡಿತ ಜವಾಹರಲಾಲ್ ನೆಹರುಗೆ!

ಅವರು ಸೋಮನಾಥ ದೇವಾಲಯದ ಪುನರ್ ನಿರ್ಮಾಣವನ್ನು ಹಿಂದು ಪುನರುತ್ಥಾನದಂತೆ ಕಂಡರು. ಆದರೇನಂತೆ ಉಕ್ಕಿನ ಮನುಷ್ಯ ಪಟೇಲ್ ಗಂಡೆದೆಯ ಮುಂದೆ ಉತ್ತರ ಕುಮಾರನಂತಿದ್ದ ನೆಹರು ಆರ್ಭಟ ನಡೆಯಲಿಲ್ಲ. ಸೋಮನಾಥ ದೇವಾಲಯದ ಸ್ಥಳದಲ್ಲಿದ್ದ ಮಸೀದಿಯನ್ನು ಎತ್ತಂಗಡಿ ಮಾಡಿದರು. ಈ ಮಧ್ಯೆ ಸರ್ದಾರ್ ಪಟೇಲ್ ಹಾಗೂ ಗಾಂಧೀಜಿ ಇಬ್ಬರೂ ತೀರಿಕೊಂಡರು. ಮುನ್ಷಿ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾರ್ಯವೇನೋ ಮುಂದುವರಿಯಿತು. ಆದರೆ 1964ರವರೆಗೂ ಬದುಕಿದ್ದ ನೆಹರು, ಸರ್ದಾರ್ ಪಟೇಲ್ ಹೆಸರನ್ನು ಯಾವೊಬ್ಬ ಕಾಂಗ್ರೆಸ್ಸಿಗರೂ ಎತ್ತದಂತೆ ಮಾಡಿದರು! ಇವತ್ತು ಬಿಜೆಪಿ, ಆರೆಸ್ಸೆಸ್ಸಿಗರ ಬಾಯಲ್ಲಿ ಸರ್ದಾರ್ ಪಟೇಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳಬಹುದು. ರಾಷ್ಟ್ರವಾದಿಗಳಿಗಂತೂ ಸರ್ದಾರ್ ಪಟೇಲ್ ಯಾವತ್ತೂ ಆದರ್ಶಪ್ರಾಯ. ಆದರೆ ಒಬ್ಬ ಪಂಚಾಯಿತಿ ಮಟ್ಟದ ಕಾಂಗ್ರೆಸ್ಸಿಗನಿಂದ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕನವರೆಗೂ ಒಬ್ಬರಾದರೂ ಸರ್ದಾರ್ ಪಟೇಲ್ ನಮ್ಮ ಹೆಮ್ಮೆಯ ನಾಯಕ ಎಂದು ಹೇಳುವುದನ್ನು ಕೇಳಿದ್ದೀರಾ?!

ಘಟನೆ-2

ಆ ದಿನ 1965, ಆಗಸ್ಟ್ 31. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದರು. ಇನ್ನೇನು ತಿನ್ನಲು ಆರಂಭಿಸಬೇಕು, ಅಷ್ಟರಲ್ಲಿ ಬಳಿಗೆ ಬಂದ ಅಪ್ತ ಕಾರ್ಯದರ್ಶಿ ಕಿವಿಯಲ್ಲೇನೋ ಉಸುರಿದರು. ಊಟ ಮರೆತ ಶಾಸ್ತ್ರೀಜಿ, “10 ಜನಪಥ್್’ನಲ್ಲಿರುವ ಪ್ರಧಾನಿ ಕಚೇರಿಯತ್ತ ಧಾವಿಸಿದರು. ಅಲ್ಲಿ ಭೂಸೇನೆ, ನೌಕಾ ದಳ ಹಾಗೂ ವಾಯುಪಡೆಯ ಮುಖ್ಯಸ್ಥರು ಪ್ರಧಾನಿಗಾಗಿ ಕಾದಿದ್ದರು. ಏನಾಗುತ್ತಿದೆ ಎಂದು ಎಲ್ಲರೂ ಯೋಚಿಸುವಷ್ಟರಲ್ಲಿ, ಅಂದರೆ ಐದೇ ನಿಮಿಷದಲ್ಲಿ ಸಭೆ ಮುಗಿಯಿತು. “ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ’ ಎಂದು ಹದಿನೈದು ದಿನಗಳ ಹಿಂದಷ್ಟೇ ಕೆಂಪುಕೋಟೆಯ ಮೇಲೆ ಗುಡುಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ, ಗಡಿ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡಿದ್ದರು! ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿದೊಡ್ಡ ಸಂಘರ್ಷ ಅದಾಗಿತ್ತು. ಭಾರತೀಯ ಸೇನೆ ಲಾಹೋರ್ ಸಮೀಪಕ್ಕೆ ತಲುಪಿತು. ಪಾಕ್ ಪರ ರಣರಂಗಕ್ಕಿಳಿಯುವುದಾಗಿ ಚೀನಾ ಬೆದರಿಕೆ ಹಾಕಿದರೂ ಶಾಸ್ತ್ರೀಜಿ ಬಗ್ಗಲಿಲ್ಲ. 1948ರಲ್ಲಿ ಪಾಕ್ ದಾಳಿ ಮಾಡಿದಾಗ ರಣಹೇಡಿ ನೆಹರು ವಿಶ್ವಸಂಸ್ಥೆಯ ಕದತಟ್ಟಿದರೆ, 1965ರಲ್ಲಿ ವಿಶ್ವಸಂಸ್ಥೆಯೇ ಓಡಿಬರುವಂತೆ ಮಾಡಿದರು ಶಾಸ್ತ್ರೀಜಿ! 1962ರಲ್ಲಿ ಚೀನಾ ಎದುರು ಉಂಟಾದ ಸೋಲು ಇಡೀ ದೇಶದ ಅತ್ಮಸ್ಥೈರ್ಯವನ್ನು ಉಡುಗಿಸಿದರೆ 1965ರಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತೀಯರು ಮತ್ತೆ ಎದೆಯುಬ್ಬಿಸಿ ನಡೆಯುವಂತೆ ಮಾಡಿದರು ಶಾಸ್ತ್ರೀಜಿ. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ 17 ವರ್ಷ ಪ್ರಧಾನಿಯಾಗಿದ್ದ ನೆಹರು ಅವರನ್ನು ಧೈರ್ಯ, ಛಲ, ಜನಪ್ರಿಯತೆ ಎಲ್ಲದರಲ್ಲೂ ಮೀರಿಸಿದರು. ಅದು ಕಾಂಗ್ರೆಸ್್ನಲ್ಲಿದ್ದ ನೆಹರು ಪುತ್ರಿ ಇಂದಿರಾ ಗಾಂಧಿಗಾಗಲಿ, ನೆಹರು ಕುಂಟುಂಬದ ಭಟ್ಟಂಗಿಗಳಿಗಾಗಲಿ ಪಥ್ಯವಾಗಲಿಲ್ಲ.

1966, ಜನವರಿ 11ರ ರಾತ್ರಿ.

ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತಾಷ್ಕೆಂಟ್್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ನೀಲಿಗಟ್ಟಿದ ದೇಹ ಭಾರತಕ್ಕೆ ಬಂತು. ಒಂದೆಡೆ ಇಡೀ ದೇಶವೇ ದುಃಖದ ಮಡುವಿಗೆ ಬಿದ್ದಿದ್ದರೆ ಇನ್ನೊಂದೆಡೆ ನೆಹರು ಕುಟುಂಬದ ಭಟ್ಟಂಗಿಗಳು ಶವಪರೀಕ್ಷೆಯನ್ನೂ ಮಾಡಲು ಬಿಡದೆ ಶಾಸ್ತ್ರೀಜಿಯವರನ್ನು ಇತಿಹಾಸದ ಕಸದಬುಟ್ಟಿಗೆ ದೂಡುವ ಪಿತೂರಿ ನಡೆಸುತ್ತಿದ್ದರು. ಗಾಂಧೀಜಿ, ನೆಹರು ಅವರನ್ನು ಅಂತ್ಯಸಂಸ್ಕಾರ ಮಾಡಿದ್ದ ಸ್ಥಳದಲ್ಲೇ ಶಾಸ್ತ್ರೀಜಿಯವರ ಕೊನೆಯ ವಿಧಿ-ವಿಧಾನಗಳನ್ನು ನೆರವೇರಿಸಲು ಕಾಂಗ್ರೆಸ್ಸಿಗರೇ ವಿರೋಧ ವ್ಯಕ್ತಪಡಿಸಿದರು. ಅವರ ದೇಹವನ್ನು ಅಲಹಾಬಾದ್್ಗೆ ಕೊಂಡೊಯ್ಯುವಂತೆ ಸೂಚಿಸಿದರು. ಇಂತಹ ಧೂರ್ತತನವನ್ನು ಜನರ ಮುಂದಿಡುವುದಾಗಿ ಅವರ ಪತ್ನಿ ಲಲಿತಾ ಶಾಸ್ತ್ರಿ ಬೆದರಿಕೆ ಹಾಕಿದಾಗ ದೆಹಲಿಯಲ್ಲೇ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲಾಯಿತು. ಅವರ ಸಮಾಧಿಯ ಮೇಲೆ “ಜೈ ಜವಾನ್, ಜೈ ಕಿಸಾನ್್’ ಎಂದು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಲಲಿತಾ ಶಾಸ್ತ್ರಿಯವರು ಉಪವಾಸ ಕೂರುವುದಾಗಿ ಮತ್ತೆ ಧಮಕಿ ಹಾಕಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಕಾಂಗ್ರೆಸ್ ಕಚೇರಿಯಿಂದ ಶಾಸ್ತ್ರೀಜಿಯವರ ಭಾವಚಿತ್ರವನ್ನು ಕಿತ್ತೊಗೆಯಲಾಗಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿ ಬಗ್ಗೆ ನೆಹರುಗೆ ಎಷ್ಟು ಮತ್ಸರವಿತ್ತೆಂದರೆ ಸ್ವಾತಂತ್ರ್ಯಾನಂತರ ರಚನೆಯಾದ ಹಂಗಾಮಿ ಕೇಂದ್ರ ಸಂಪುಟಕ್ಕೆ ಶಾಸ್ತ್ರಿಯವರನ್ನು ತೆಗೆದುಕೊಂಡರೂ ಖಾತೆ ರಹಿತ ಮಂತ್ರಿಯನ್ನಾಗಿಸಿದ್ದರು. 1963ರಲ್ಲಿ ನೆಹರು ತಮ್ಮ ಸಂಪುಟದಿಂದ ಕೈಬಿಟ್ಟಾಗ ಶಾಸ್ತ್ರೀಜಿ ಪತ್ರಿಕೆಗಳಿಗೆ ಅಂಕಣ ಬರೆದು ಹೊಟ್ಟೆಹೊರೆಯಬೇಕಾಯಿತು. ಕಾಂಗ್ರೆಸ್ ಶಾಸ್ತ್ರೀಜಿ ಬಗ್ಗೆ ಎಂತಹ ಧೋರಣೆ ಅನುಸರಿಸುತ್ತಾ ಬಂದಿದೆ ಎಂದರೆ ಶಾಸ್ತ್ರೀಜಿ ಜನ್ಮದಿನ ಕೂಡ ಅಕ್ಟೋಬರ್ 2ರಂದೇ ಎಂಬುದು ಎಷ್ಟು ಮಕ್ಕಳಿಗೆ ಗೊತ್ತು? 2004ರಲ್ಲಿ ಶಾಸ್ತ್ರೀಜಿಯವರ ಜನ್ಮಶತಮಾನೋತ್ಸವದ ಬಗ್ಗೆ ಕಾಂಗ್ರೆಸ್ ಯಾವ ಅಸಕ್ತಿಯನ್ನೂ ತೋರದಿದ್ದಾಗ, ಅವರ ಮಕ್ಕಳಾದ ಅನಿಲ್ ಹಾಗೂ ಸುನೀಲ್ ಶಾಸ್ತ್ರಿ ಸಾರ್ವಜನಿಕವಾಗಿ ಟೀಕಿಸಿದ್ದರು. ಹೀಗೆ ಈ ದೇಶದ ಧೀರ ಪುತ್ರನನ್ನೇ ಸಹಿಸಲಿಲ್ಲ ಕಾಂಗ್ರೆಸ್.

ಘಟನೆ-3

1991, ಜೂನ್ 21. ರಾಜಕೀಯ ನಿವೃತ್ತಿ ಯಾಚಿಸಿದ್ದ ಪಾಮುಲಪರ್ತಿ ವೆಂಕಟ ನರಸಿಂಹರಾವ್, ಅಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಾಗಂತ ಖುಷಿಪಡುವ ಸ್ಥಿತಿಯಲ್ಲಿರಲಿಲ್ಲ. ಹಣದುಬ್ಬರ ಶೇ. 17ಕ್ಕೇರಿತ್ತು. ಸಾಲ 90 ಶತಕೋಟಿ ಪೌಂಡ್್ಗೇರಿತ್ತು. 100 ಕೋಟಿ ಸಾಲ ಕೊಡುವುದಕ್ಕೂ ವಿಶ್ವಬ್ಯಾಂಕ್ ಹಾಗೂ ಎಡಿಬಿ ಸಿದ್ಧವಿರಲಿಲ್ಲ. ಹಿಂದಿನ ಪ್ರಧಾನಿ ಚಂದ್ರಶೇಖರ್ ಚಿನ್ನವನ್ನು ಅಡವಿಟ್ಟಿದ್ದರು. ಭಾರತ ಡಿಫಾಲ್ಟರ್ ಆಗುವುದು ಖಚಿತವಾಗಿತ್ತು. ದಿವಾಳಿಯಾಗುವುದೆಂದರೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ, ಪುರಾತನ ನಾಗರಿಕತೆ ಎಂಬ ಘನತೆ, ಹೆಗ್ಗಳಿಕೆ ಮಣ್ಣು ಪಾಲಾದಂತೆ. ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳೆಂಬ ಬಿಳಿ ಆನೆಗಳು, ಪರಮ ಭ್ರಷ್ಟ ನೌಕರಶಾಹಿಯಿಂದಾಗಿ ದೇಶ ಹೀನಾಯ ಸ್ಥಿತಿಗೆ ತಲುಪಿತ್ತು. ಇಂತಹ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಪ್ರಾಧಾನಿಯಾಗಿ ನೆಹರು ಪ್ರಣೀತ ಅರೆ ಸಮಾಜವಾದವನ್ನು (Quasi Socialism) ತಿಪ್ಪೆಗೆ ಎಸೆಯುವುದು, ಇಂದಿರಾ ಗಾಂಧಿ ಹುಟ್ಟು ಹಾಕಿದ್ದ “ಬಾಬು ಸಂಸ್ಕೃತಿ’, ಇನ್್ಸ್ಪೆಕ್ಟರ್ ರಾಜ್, ಪರ್ಮಿಟ್ ರಾಜ್, ಲೈಸೆನ್ಸ್ ರಾಜ್್ಗಳಿಗೆ ತಿಲಾಂಜಲಿ ಹಾಕುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಅದರೂ ಧೈರ್ಯ ತೋರಿ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದವರು ನರಸಿಂಹರಾವ್. ಇವತ್ತು ಪ್ಲಾಸ್ಟಿಕ್ ಮನಿ, High End Technology, ಬಗೆ ಬಗೆಯ ಕಾರು, ಕೈಗೆಟುಕುವ ಬೆಲೆಯಲ್ಲಿ ಟಿವಿ, ಫ್ರಿಜ್, ಬ್ಯಾಂಕಿಂಗ್, ಇಂಟರ್್ನೆಟ್ ಸೇವೆ ಲಭ್ಯವಾಗಿದ್ದರೆ ಅದಕ್ಕೆ ನರಸಿಂಹರಾವ್ ಕಾರಣ. ಅವರನ್ನು ಸುಧಾರಣಾವಾದಿ, ವಿದ್ವಾಂಸ, ವಿಧ್ವಂಸಕ ಏನು ಬೇಕಾದರೂ ಕರೆಯಿರಿ. ಲಕೂಭಾಯಿ ಪಾಠಕ್, ಸೈಂಟ್ ಕೀಟ್ಸ್, ಜೆಎಂಎಂ ಹಗರಣಗಳನ್ನಿಟ್ಟುಕೊಂಡು ಜರೆಯಿರಿ. ಅದರೆ ಭಾರತ ಇವತ್ತು ಚೀನಾಕ್ಕೆ ಸಡ್ಡು ಹೊಡೆಯುವಂತೆ ಬೆಳೆದಿದ್ದರೆ ಅದರ ಹಿಂದೆ ನರಸಿಂಹ ರಾವ್ ಪರಿಶ್ರಮ, ದೂರದೃಷ್ಟಿಯಿದೆ. ಇನ್ನು 1993ರಲ್ಲಿ ಸಂಭವಿಸಿದ ಭೀಕರ ಲಾತೂರ್ ಭೂಕಂಪವನ್ನು ನಿಭಾಯಿಸಿದ ರೀತಿಯನ್ನು ಮರೆಯಲು ಸಾಧ್ಯವೆ?

ಇಂತಹ ನರಸಿಂಹರಾವ್ 2004, ಡಿಸೆಂಬರ್ 23ರಂದು ರಾಜಧಾನಿ ದೆಹಲಿಯಲ್ಲಿ ಅಗಲಿದಾಗ ಕಾಂಗ್ರೆಸ್ ಮಾಡಿದ್ದೇನು ಗೊತ್ತೆ?

ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲು ಎಐಐಸಿ ಕಚೇರಿಯ ಒಳಕ್ಕೆ ಕೊಂಡೊಯ್ಯುವುದಕ್ಕೂ ಅವಕಾಶ ನೀಡಲಿಲ್ಲ, ಗೇಟನ್ನೇ ಮುಚ್ಚಿ ಬಿಟ್ಟರು! ಕನಿಷ್ಠ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲೇ ಜಾಗ ಕೊಡಿ ಎಂಬ ರಾವ್ ಕುಟುಂಬದ ಮನವಿಗೂ ಸೋನಿಯಾ ಗಾಂಧಿ ಸೊಪ್ಪು ಹಾಕಲಿಲ್ಲ. ಕೊನೆಗೆ ಹೈದರಾಬಾದ್್ನಲ್ಲಿ ನಡೆದ ಅಂತ್ಯ ಸಂಸ್ಕಾರಕ್ಕೆ ಎಚ್.ಡಿ. ದೇವೇಗೌಡ, ಲಾಲ್್ಕೃಷ್ಣ ಆಡ್ವಾಣಿಯವರಂಥ ವಿರೋಧ ಪಕ್ಷದ ನಾಯಕರು ಆಗಮಿಸಿದರಾದರೂ ಸೋನಿಯಾ ಗಾಂಧಿ ಅಂತಹ ಸೌಜನ್ಯ ತೋರಲಿಲ್ಲ. ಕಳೆದ ವರ್ಷ ನಡೆದ ಕಾಂಗ್ರೆಸ್್ನ 125ನೇ ಜಯಂತಿ ವೇಳೆ ಮಾಡಿದ 15 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್್ನ ಎಲ್ಲ ಪ್ರಧಾನಿಗಳ ಹೆಸರನ್ನೂ ಉಲ್ಲೇಖಿಸಿದ ಸೋನಿಯಾ, “Rajiv Gandhi scripted the course of Economic policies that were followed by the government (headed by Rao) for the following five years” ಎಂದರೇ ಹೊರತು ರಾವ್ ಅವರ ಸಣ್ಣ ಪ್ರಸ್ತಾಪವನ್ನೂ ಮಾಡಲಿಲ್ಲ. ಆರ್ಥಿಕ ಉದಾರೀಕರಣದ ರೂವಾರಿ ರಾವ್ ಅವರಾಗಿದ್ದರೂ ರಾಜೀವ್್ಗೆ ಕ್ರೆಡಿಟ್ ಕೊಡಲು ಪ್ರಯತ್ನಿಸಿದರು. ಕಾಂಗ್ರೆಸ್್ನ ಇಂತಹ ಧೋರಣೆಯ ಬಗ್ಗೆ ಬರೆಯುತ್ತಾ ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಹೀಗೆನ್ನುತ್ತಾರೆ- ”To forget his achievements, but to remember his mistakes, is a product of cold and deliberate calculation”.

ಇಷ್ಟು ಮಾತ್ರವಲ್ಲ, ಸೀಟು ಬಿಡಲೊಪ್ಪದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿಯವರನ್ನು 1998ರಲ್ಲಿ ಪದಚ್ಯುತಗೊಳಿಸಿ ಸೋನಿಯಾ ಗಾಂಧಿಯವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ ಅಕೆಯ ಬೆಂಬಲಿಗ ಗೂಂಡಾಗಳು ಕೇಸರಿಯವರನ್ನು ಎಐಸಿಸಿ ಕಚೇರಿಯಿಂದ ಎತ್ತಿ ಆಚೆ ಹಾಕಿದ್ದರು. ಜವಾಹರಲಾಲ್ ನೆಹರು ಕುಟುಂಬದ ಬುದ್ಧಿಯೇ ಅಂಥದ್ದು, ತನಗಿಂತ ಪ್ರಸಿದ್ಧರಾಗುವುದನ್ನು ಅದು ಸಹಿಸುವುದೇ ಇಲ್ಲ. ಸ್ವಾತಂತ್ರ್ಯ ಬಂದ ತರುವಾಯ ರಚನೆಯಾದ ಸರಕಾರದಲ್ಲಿ ಅಂತಹ ಅಂಬೇಡ್ಕರ್ ಅವರನ್ನೇ ಮಂತ್ರಿ ಮಾಡುವುದಕ್ಕೆ ನೆಹರು ಸಿದ್ಧರಿರಲಿಲ್ಲ. 1951-52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನು ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಹಾಗಿರುವಾಗ ಏಕಾಏಕಿ ಬಂದು ಇಡೀ ರಾಷ್ಟ್ರದ ಮೆಚ್ಚುಗೆಗೆ ಪಾತ್ರರಾಗಿರುವ ಅಮಾಯಕ ಅಣ್ಣಾ ಹಜಾರೆಯವರನ್ನು ಸೋನಿಯಾ ಗಾಂಧಿಯವರ ಚೇಲಾಗಳು ಬಿಡುತ್ತಾರೆಯೇ? ಈ ದೇಶದ ಧೀರ ಪುತ್ರರಾದ ಸುಭಾಷ್್ಚಂದ್ರ ಬೋಸ್, ಅಂಬೇಡ್ಕರ್, ಸರ್ದಾರ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನೇ ಹೊಸಕಿಹಾಕಲು ಪ್ರಯತ್ನಿಸಿದ ನೆಹರು ಕುಟುಂಬ ಅಣ್ಣಾನ ಯಶಸ್ಸನ್ನು ಸಹಿಸಿಕೊಂಡೀತೆ? ಈಗಾಗಲೇ ಅದರ ಎಲ್ಲ ಸೂಚನೆಗಳೂ ಕಾಣುತ್ತಿವೆ.

Beware of dogs !

ಇಂತಹ ಎಚ್ಚರಿಕೆಯ ಫಲಕಗಳನ್ನು ಶ್ರೀಮಂತರ ಮನೆ ಮುಂದೆ ಕಾಣಬಹುದು. ಕಪಿಲ್ ಸಿಬಲ್, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿಗಳಿರುವವರೆಗೂ ಸೋನಿಯಾ ಗಾಂಧಿಯವರಿಗೆ ಅಂತಹ ಅಗತ್ಯವೇ ಎದುರಾಗುವುದಿಲ್ಲ! ಇವರು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಸೋನಿಯಾ ಮನೆ ಮುಂದೆ “Beware of Sibal, Moily, Digvijay singh and Tiwari” ಎಂದು ಹಾಕಬೇಕೇನೋ ಎಂದನಿಸುತ್ತಿದೆ. ಇವರೇನು ಸಚಿವ ಮಹಾಶಯರೋ ಅಥವಾ ಸೋನಿಯಾ ಗಾಂಧಿಯವರ ಸಾಕು ಪ್ರಾಣಿಗಳೋ? ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಕ್ಷಮತೆ ಬಗ್ಗೆ ಪ್ರಶ್ನಿಸುತ್ತಿರುವ ಈ ದಿಗ್ವಿಜಯ್ ಸಿಂಗ್್ಗೇನಾದರೂ ಮತಿಭ್ರಮಣೆಯಾಗಿದೆಯೇ?

“ನಿಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಒಂದರ ಹಿಂದೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಆತನಿಗೆ ಕಾಂಗ್ರೆಸ್್ನ ಬೆಂಬಲವಿದೆ ಎಂದೇ ನಾನು ಭಾವಿಸುತ್ತೇನೆ. ಬಹಳಷ್ಟು ಹೇಳಿಕೆಗಳು ಸತ್ಯಕ್ಕೆ ದೂರವಾದವು. ಆತನ ಉದ್ದೇಶ ಜನರಲ್ಲಿ ಗೊಂದಲ ಸೃಷ್ಟಿಸುವುದು, ದಾರಿತಪ್ಪಿಸುವುದು ಹಾಗೂ ಲೋಕಪಾಲ ಮಸೂದೆ ಸಂಬಂಧ ನಡೆಯುತ್ತಿರುವ ಪ್ರಕ್ರಿಯೆಯನ್ನು ಹಾಳುಗೆಡುವುದಾಗಿದೆ. ಇಂತಹ ಕೃತ್ಯಗಳಿಗೆ ನಿಮ್ಮ ವೈಯಕ್ತಿಕ ಒಪ್ಪಿಗೆ ಇದೆಯೇ?” ಎಂದು ಏಪ್ರಿಲ್ 18ರಂದು ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ಬಹಳ ಮುಗ್ಧವಾಗಿ ಕೇಳಿದ್ದಾರೆ. ಇದನ್ನೆಲ್ಲಾ ಮಾಡಿಸುತ್ತಿರುವುದೇ ಸೋನಿಯಾ ಗಾಂಧಿ ಎಂಬುದು ಎಂತಹ ಕಟುವಾಸ್ತವ ಅಲ್ಲವೇ?

ಛೇ!

ಕೃಪೆ: ಪ್ರತಾಪಸಿಂಹ.ಕಾಂ
ಗುರುವಾರ, ಏಪ್ರಿಲ್ 21, 2011

ನೋಡ್ತಾ ಇರಿ, ಹಜಾರೆ ಹೋರಾಟವನ್ನು ಹಳ್ಳ ಹಿಡಿಸುವವರಿದ್ದಾರೆ, ಜೋಕೆ!

‘ಆ ಶ್ರೀರಾಮಚಂದ್ರನನ್ನೂ ಬಿಡಲಿಲ್ಲ, ಶ್ರೀಕೃಷ್ಣ ಪರಮಾತ್ಮನನ್ನೂ ಬಿಡಲಿಲ್ಲ, ಮಹಾತ್ಮ ಗಾಂಧಿಯ ಗ್ರಹಚಾರವನ್ನು ಬಿಡಿಸದೇ ಹೋಗಲಿಲ್ಲ. ಹೀಗಿರುವಾಗ ನಮ್ಮ ಜನ ಅಣ್ಣಾ ಹಜಾರೆಯನ್ನು ಬಿಡ್ತಾರೇನ್ರಿ?’

ಇಂಥದೊಂದು ಸಂದೇಶ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಲಕ್ಷಾಂತರ ಮಂದಿ ಆತಂಕಗೊಂಡು ಇದನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಅಣ್ಣಾ ಹಜಾರೆ ಹಾಗೂ ಅವರು ಕೈಗೆತ್ತಿಕೊಂಡ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಹಳ್ಳಹಿಡಿಸುವುದು ಹೇಗೆ, ಅಣ್ಣಾಗೆ ಕಪ್ಪು ಚುಕ್ಕೆ ಮೆತ್ತೋದು ಹೇಗೆ ಎಂಬ ಬಗ್ಗೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಸೆಟೆದೆದ್ದು ನಿಂತವರೇನು ಸುಬಗರಾ ಎಂಬ ಅಪಸ್ವರ ಟಿಸಿಲೊಡೆಯುತ್ತಿದೆ. ಪಕ್ಷಭೇದ ಮರೆತು ಭ್ರಷ್ಟರೆಲ್ಲ ಒಂದಾಗುತ್ತಿದ್ದಾರೆ. ಅಣ್ಣಾ ಮೇಲೆ ಕೂರಿಸಬೇಕಿರುವ ಗೂಬೆಗಾಗಿ ಎಲ್ಲರ ಶೋಧ ಆರಂಭಗೊಂಡಂತಿದೆ.

ಒಟ್ಟಾರೆ ಒಂದು ಚಳವಳಿಯನ್ನು ಕತ್ತು ಹಿಡಿದು ಸಾಯಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿರುವ ಸ್ಪಷ್ಟ ಸೂಚನೆಗಳು ಹೊರಹೊಮ್ಮುತ್ತಿರುವುದಂತೂ ಸತ್ಯ.

ಭ್ರಷ್ಟಾಚಾರವನ್ನು ನಿಗ್ರಹಿಸಲು ಲೋಕಪಾಲ ಮಸೂದೆ ಜಾರಿಯೊಂದೇ ಉಳಿದಿರುವ ದಾರಿ ಎಂದು ಭಾವಿಸಿದ ಅಣ್ಣಾ ಹಜಾರೆ, ದಿಲ್ಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವಾಗ ದೇಶವ್ಯಾಪಿ ಈ ಪರಿಯ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ದೇಶದೆಲ್ಲೆಡೆ, ಎಲ್ಲ ರಂಗಗಳಲ್ಲೂ ವ್ಯಾಪಿಸಿದ ಭ್ರಷ್ಟಾಚಾರದಿಂದ ರೋಸಿ ಹೋದ ಜನತೆಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಒಂದು ಅವಕಾಶ ಹಾಗೂ ಈ ಆಕ್ರೋಶದ ಮೊತ್ತವಾಗಿ ರೂಪ ತಾಳುವ ಒಂದು ಜನಾಂದೋಲನಕ್ಕೆ ಪ್ರಾಮಾಣಿಕ, ವಿಶ್ವಾಸಾರ್ಹ ನಾಯಕತ್ವದ ಅಗತ್ಯವಿತ್ತು. ಇದನ್ನು ದೇಶವಾಸಿಗಳು ಅಣ್ಣಾ ಹಜಾರೆಯವರಲ್ಲಿ ಕಂಡಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಅಣ್ಣಾ ಬದಲು ಅವರಂಥ ಮತ್ತೊಬ್ಬ ನಾಯಕ ಈ ಹೋರಾಟದ ಮುಂದಾಳತ್ವ ವಹಿಸಿದ್ದರೂ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೇನೋ?

ಆದರೆ ಜನಸ್ಪಂದನ ಅದೆಷ್ಟು ತೀಕ್ಷ್ಣ ಹಾಗೂ ಭರ್ಜರಿಯಾಗಿತ್ತೆಂದರೆ, ಅಣ್ಣಾ ಉಪವಾಸ 97 ಗಂಟೆ ಕಳೆಯುವುದರೊಳಗೆ ಕೇಂದ್ರದ ಭಂಡ ಸರ್ಕಾರ, ನಿರ್ಲಿಪ್ತ ನಾಯಕತ್ವ ಮಣಿಯಲೇ ಬೇಕಾಯಿತು. ಈ ವಿಷಯದಲ್ಲಿ ಇನ್ನೂ ವಿಳಂಬ ಮಾಡಿದ್ದರೆ, ಚೌಕಾಶಿ ನಡೆಸಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗಬಹುದೆಂದು ಕೇಂದ್ರ ಸರಕಾರದ ನೊಗ ಹೊತ್ತವರಿಗೆ ಅನಿಸಿರಬೇಕು. ಅಣ್ಣಾ ಬೇಡಿಕೆಗಳಿಗೆ ಮಣಿದರು. ಪ್ರತಿಪಕ್ಷಗಳ ನಾಯಕರು ಸಹ ಈ ವಿಷಯದಲ್ಲಿ ಕಲ್ಲವಿಲರಾಗಿದ್ದರು. ಈ ವಿಷಯದಲ್ಲಿ ಯಾವ ಸ್ಪಷ್ಟ ನಿಲುವು ತಳೆಯಬೇಕು ಎಂದು ಆ ನಾಯಕರೂ ತಲೆಕೆಡಿಸಿಕೊಂಡಿದ್ದರು.ನಮ್ಮಿಂದಾಗದ ಕೆಲಸವನ್ನು ಅಣ್ಣಾ ಹಜಾರೆ ಮಾಡಿದರು ಎಂದು ಅಡ್ವಾಣಿಯವರಂಥವರು ಉಪಾಯವಾಗಿ ಹೇಳಿದರು.

ನಮ್ಮ ಸಂಸತ್ತು ಸಣ್ಣ- ಪುಟ್ಟ ವಿಷಯಗಳಿಗೆಲ್ಲ ಸಭಾತ್ಯಾಗ ಕಂಡಿದೆ. ಚಿಲ್ಲರೆ ವಿಷಯಗಳಿಗೆ ಜಗಳವಾಡಿದ್ದಕ್ಕೆ ಸಾಕ್ಷಿಯಾಗಿದೆ. ಆದರೆ ಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಒಬ್ಬನೇ ಸದಸ್ಯ ಒತ್ತಾಯಿಸಿಲ್ಲ. ಕಳೆದ ನಲವತ್ತೆರಡು ವರ್ಷಗಳಿಂದ ಈ ಮಸೂದೆ ಅಂಗೀಕಾರಕ್ಕಾಗಿ ಕಾದು ಕುಳಿತಿದೆ. ಈ ದೇಶದ ಯಾವ ರಾಜ್ಯದ ಮುಖ್ಯಮಂತ್ರಿಯೂ ಲೋಕಾಯುಕ್ತ ಸಂಸ್ಥೆಯನ್ನು ಸದೃಢಗೊಳಿಸಲು ಅವರಿಗೆ ಪರಮಾಧಿಕಾರ ನೀಡಲು ಮುಂದೆ ಬರಲಿಲ್ಲ. ಒಬ್ಬೇ ಒಬ್ಬ ಮುಖ್ಯಮಂತ್ರಿಯನ್ನಾಗಲಿ, ಮಂತ್ರಿಯನ್ನಾಗಲಿ, ಲೋಕಾಯುಕ್ತರಿಗೆ ಶಿಕ್ಷಿಸಲು ಸಾಧ್ಯವಾಗಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಲೋಕಾಯುಕ್ತರೇ ಮೆತ್ತಗಾಗಿದ್ದಾರೆ. ಭ್ರಷ್ಟಾಚಾರ ನಮಗೆ ಚರ್ಚೆಯ ವಸ್ತುವೂ ಆಗದಷ್ಟು ನಾವು ಅದನ್ನು ಒಪ್ಪಿಕೊಳ್ಳುವ ಹಂತಕ್ಕೆ ಹೋಗಿದ್ದೆವು. ಯಾಕೆಂದರೆ ಎಷ್ಟೇ ಮಾತನಾಡಿದರೂ ಪ್ರಯೋಜನವಿಲ್ಲ, ಎಲ್ಲರೂ ಭ್ರಷ್ಟರೇ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಯಾರು ಭ್ರಷ್ಟರಲ್ಲ, ಎಲ್ಲಿ ಅದು ಇಲ್ಲ, ಹಣ ತೆಗೊಂಡು ಕೆಲಸ ಮಾಡಿಕೊಡ್ತಾನಲ್ಲ ಅದೇ ಪುಣ್ಯ ಎಂದು ನಾವು ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದೆವು. ಅಂಥ ಸ್ಥಿತಿಯಲ್ಲಿ ಅಣ್ಣಾ ಹಜಾರೆ ಹೋರಾಟ ಪರಿಹಾರವಾಗದಿದ್ದರೂ, ಹೊಸ ಆಶಾಭಾವನೆಯಾಗಿ ಕಂಡಿರುವುದು ದಿಟ.

ಯಾವಾಗ ಅಣ್ಣಾ ಹಜಾರೆ ‘ಮ್ಯಾಜಿಕ್’ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿತೋ, ಭ್ರಷ್ಟಶಕ್ತಿಗಳು ಮಸಲತ್ತು ನಡೆಸಲಾರಂಭಿಸಿದರು. ಬಾಬಾರಾಮದೇವ್ ಈ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದಂತೆ, ಬಾಬಾಗೆ ಅಷ್ಟೆಲ್ಲ ಹಣ ಎಲ್ಲಿಂದ ಬಂತು? ಅವರು ತೆರಿಗೆಗಳ್ಳರಲ್ಲವೇನು? ಎಂಬ ಮಾತುಗಳು ಕೇಳಿ ಬರಲಾರಂಭಿಸಿದವು. ಅಣ್ಣಾ ಹಜಾರೆ ಜತೆಗಿದ್ದ ಕಾನೂನು ಪರಿಣತರಾದ ಶಾಂತಿಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಸರಕಾರ- ನಾಗರಿಕ ಸಮಾಜದ ಪ್ರತಿನಿಧಿಗಳ ಜಂಟಿ ಸಮಿತಿಯಲ್ಲಿ ಸೇರಿಸಿಕೊಳ್ಳುವುದಕ್ಕೆ ಪ್ರತಿರೋಧ ಬಂತು. ಆನಂತರ ಮೊದಲ ಸಭೆಯ ಮುನ್ನಾದಿನ ಶಾಂತಿಭೂಷಣ್ ಅವರ ಚಾರಿತ್ರ್ಯವಧೆ ಮಾಡುವ ಸಿಡಿಯೊಂದನ್ನು ಬಿಡುಗಡೆ ಮಾಡಲಾಯಿತು.

ಅದಾಗಿ ಎರಡು ದಿನಗಳ ಬಳಿಕ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟಿನಲ್ಲಿ ಹಾಕಿ, ಬ್ಲ್ಯಾಕ್ ಮೇಲ್ ಮಾಡುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿದ್ದಾರೆಂದು ಪ್ರಶಾಂತ್ ಭೂಷಣ್ ಮೇಲೆ ಗೂಬೆ ಕೂರಿಸಲಾಯಿತು. ಅಪ್ಪ-ಮಗ ಸೇರಿ ಇತ್ತೀಚಿಗೆ ನೂರಾರು ಕೋಟಿ ರೂ. ಆಸ್ತಿ ಖರೀದಿಸಿದ್ದಾರೆ. ಆ ಹಣ ಅವರಿಗೆಲ್ಲಿಂದ ಬಂತು? ಎಂದು ಅಮರ್್ಸಿಂಗ್ ಕೇಳಿದರು. ಕಾಂಗ್ರೆಸ್ ಅಮರ್ ಸಿಂಗ್ ಅವರಿಗೆ ‘ಸುಪಾರಿ’ ಕೊಟ್ಟು ಈ ಮಾತುಗಳನ್ನು ಹೇಳಿಸುತ್ತಿದೆ ಎಂದು ಬಿಜೆಪಿ ಟೀಕಿಸಿತು.

ಈ ಮಧ್ಯೆ ಕಾಂಗ್ರೆಸ್ ಕೂಡ ಅಣ್ಣಾ ಹಜಾರೆ ವಿರುದ್ಧ ಅಸಹನೆ ಕಾರಿಕೊಳ್ಳಲಾರಂಭಿಸಿತು. ದಿಗ್ವಿಜಯ್ ಸಿಂಗ್ ಹಾಗೂ ಕಪಿಲ್ ಸಿಬಲ್ ಬಹಿರಂಗವಾಗಿಯೇ ಅಣ್ಣಾ ವಿರುದ್ಧ ಮಾತಿಗಿಳಿದರು. ಲೋಕಪಾಲ್ ಮಸೂದೆ ಅಂಗೀಕಾರವಾದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಾ, ಅದರಿಂದ ಸಾಮಾನ್ಯ ಪ್ರಜೆಗೆ ಏನು ಪ್ರಯೋಜನ ಎಂದು ಸಚಿವ ಸಿಬಲ್ ಉಡಾಫೆ ಮಾತುಗಳನ್ನು ಆಡಿದರು. ಲೋಕಪಾಲ್ ಮಸೂದೆಯನ್ನು ಸಿದ್ಧಪಡಿಸಲು ರಚಿಸಲಾಗಿರುವ ಸಮಿತಿಯಲ್ಲಿ ಸರಕಾರದ ಪರವಾಗಿ ಸಿಬಲ್ ಕೂಡ ಸದಸ್ಯರಲ್ಲೊಬ್ಬರು. ಅವರಿಂದ ಇಂಥ ಮಾತು!

ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿ ಐವರು ಸಾಮಾಜಿಕ ಕಾರ್ಯಕರ್ತರನ್ನು ಸೇರಿಸಿದ್ದನ್ನು ಪ್ರಶ್ನಿಸಿ ವಕೀಲರ ತಂಡವೊಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದೆ. ಐವರು ಸಚಿವರಿರುವ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿದ ಔಚಿತ್ಯವೇನು? ಸಂಸದೀಯ ಸಮಿತಿಗೆ ಸಂಸದರು ಸದಸ್ಯರಾಗಿರಬೇಕು. ಅದು ಬಿಟ್ಟು ಇವರನ್ನೇಕೆ ನೇಮಿಸಿದ್ದೀರಿ ಎಂದು ಇವರು ಪ್ರಶ್ನಿಸಿದ್ದಾರೆ. ಇವರ ವಾದವನ್ನೇನಾದರೂ ಕೋರ್ಟ್ ಎತ್ತಿ ಹಿಡಿದರೆ ಅಲ್ಲಿಗೆ ಕೇಸು ಫಡ್ಚಾ!

ಅಣ್ಣಾ ಹಜಾರೆ ಹಾಗೂ ಅವರ ಸನಿಹವಿರುವ ವ್ಯಕ್ತಿಗಳ ಹೆಸರಿಗೆ ಕುಂದುಂಟು ಮಾಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಣ್ಣಾ ಇಡೀ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ದ್ರೋಹವೆಸಗಿದ್ದಾರೆ, ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ, ಸಂಸದರನ್ನು ಧಿಕ್ಕರಿಸಿ, ಸರಕಾರವನ್ನು ಬ್ಲ್ಯಾಕ್್ಮೇಲ್ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಈ ರೀತಿ ಸವಾಲು ಹಾಕುವ ರೀತಿಯಲ್ಲಿ ನಡೆದುಕೊಂಡರೆ ಸರಕಾರವಾಗಲಿ, ಸಂಸತ್ ಆಗಲಿ ಏಕಿರಬೇಕು ಎಂದು ಕೆಲವು ಕಾಂಗ್ರೆಸ್ ಪರ ಬುದ್ಧಿಜೀವಿಗಳು ತಮ್ಮ ವಿಚಾರಧಾರೆ ಹರಿಬಿಡಲಾರಂಭಿಸಿದ್ದಾರೆ. ಇನ್ನು ಕೆಲವರು ಅಣ್ಣಾ ಹಜಾರೆಯವರನ್ನು ಮಹಾತ್ಮ ಗಾಂಧಿಗೆ ಹೋಲಿಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಗಾಂಧಿ ಎಂದೂ ಸೆಕೆಂಡ್ ಕ್ಲಾಸ್ ರೈಲನ್ನು ಬಿಟ್ಟು ಪ್ರಯಾಣಿಸಲಿಲ್ಲ. ಆದರೆ ಈ so called ಗಾಂಧೀಜಿ ವಿಮಾನದಲ್ಲಿ ಸಂಚರಿಸುತ್ತಾರೆ ಎಂದು ಗೇಲಿ ಮಾಡುತ್ತಿದ್ದಾರೆ. ಟ್ವಿಟರ್ ಹಾಗೂ ಫೇಸ್್ಬುಕ್್ನಲ್ಲಿ ಉದ್ದೇಶಪೂರ್ವಕವಾಗಿ ಇಂಥ ಸಂದೇಶಗಳು ಪ್ರತಿದಿನ ಹರಿದಾಡುತ್ತಿವೆ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ‘ಓಪನ್’ ಮ್ಯಾಗಜಿನ್ ಅಣ್ಣಾ ಹಜಾರೆ ಕುರಿತು This man is not your Hero ಎಂಬ ಲೇಖನ ಪ್ರಕಟಿಸಿದೆ. ಈ ಪತ್ರಿಕೆಯ ನಾಲ್ಕು ಲಕ್ಷ ಪ್ರತಿಗಳನ್ನು ರಾಜಕೀಯ ಪಕ್ಷದ ಮುಖಂಡರೊಬ್ಬರು ಖರೀದಿಸಿ, ಉಚಿತವಾಗಿ ಹಂಚುವ ಹುನ್ನಾರ ನಡೆಸಿದ್ದಾರಂತೆ! ಈ ಪತ್ರಿಕೆಯಲ್ಲಿ ಅಣ್ಣಾ ಕುರಿತು ಪ್ರಕಟವಾಗಿರುವ ಲೇಖನವೊಂದನ್ನೇ ಜೆರಾಕ್ಸ್ ಮಾಡಿಸಿ ಅದನ್ನು ಎಲ್ಲೆಡೆ ಹಂಚುವ ಕೆಲಸವನ್ನೂ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಈ ಲೇಖನ ಹೀಗೆ ಆರಂಭವಾಗುತ್ತದೆ-’ಹೆಡ್ ಲೈನ್ಸ್ ಟುಡೇ’ ಟಿವಿ ವಾಹಿನಿಯ ಕಾರ್ಯಕ್ರಮ ನಿರೂಪಕ ರಾಹುಲ್ ಕನ್ವಲ್ ಅಣ್ಣಾ ಹಜಾರೆ, ಕಿರಣ್ ಬೇಡಿ ಮತ್ತು ಅರವಿಂದ ಕೇಜ್ರಿವಾಲ (ನಾಗರಿಕ ಸಮಾಜದ ಸದಸ್ಯರಲ್ಲೊಬ್ಬರು) ಅವರ ಜತೆಗೆ ಮಾತಾಡುತ್ತಿದ್ದಾನೆ. ‘ಅದ್ಸರಿ? ಮುಂದಿನ ನಿಮ್ಮ ಕ್ರಮವೇನು?’ ಎಂದು ಅಣ್ಣಾ ಅವರಿಗೆ ಕೇಳುತ್ತಾನೆ. ಅಣ್ಣಾ ಉತ್ತರ ಹೇಳಲು ತಡವರಿಸುತ್ತಾರೆ. ತಕ್ಷಣ ನಿರೂಪಕ ಮತ್ತೊಂದು ಪ್ರಶ್ನೆ ಕೇಳುತ್ತಾನೆ- ‘ಅಣ್ಣಾ ಹಜಾರೆ ಅವರೇ, ನೀವೇ ಹೇಳಿದಿರಿ ಭ್ರಷ್ಟರನ್ನು ಗಲ್ಲಿಗೇರಿಸಬೇಕು ಅಂತ. ಇದು ಗಾಂಧಿತತ್ವಕ್ಕೆ ವಿರುದ್ಧ ಅಲ್ಲವೇ?’

ಅದಕ್ಕೆ ಅಣ್ಣಾ ಹಿಂದಿಯಲ್ಲಿ ಹೇಳುತ್ತಾರೆ- ‘ಅದಕ್ಕಾಗಿಯೇ ನಾನು ಹೇಳುತ್ತಿರುವುದು. ಅದೇನೆಂದರೆ ಗಾಂಧಿ ತತ್ವವೊಂದೇ ಅಲ್ಲ, ಇಂದಿನ ಪರಿಸ್ಥಿತಿಯಲ್ಲಿ ನಾವು ಶಿವಾಜಿ ಕಡೆಗೂ ನೋಡಬೇಕಾದ ಅಗತ್ಯವಿದೆ ಎಂದು. ಪಟೇಲ್ ತಪ್ಪುಗಳನ್ನು ಮಾಡಿದರು. ಛತ್ರಪತಿ ಶಿವಾಜಿ ತಪ್ಪು ಮಾಡಿದವರ ಕೈಗಳನ್ನು ಕತ್ತರಿಸಿದರು. ಶಿವಾಜಿಯ ಈ ನೀತಿಯ ಬಗ್ಗೆ ನಾವೆಲ್ಲ ಯೋಚಿಸಬೇಕಿದೆ. ನೂರಕ್ಕೆ ನೂರರಷ್ಟು ಅಹಿಂಸಾವಾದಿ ಸಾಧುವಲ್ಲ, ಸಾಧ್ಯವೂ ಇಲ್ಲ. ಅದಕ್ಕಾಗಿಯೇ ನಾನು ಹೀಗೆ ಹೇಳುತ್ತಿರುವುದು, ಭ್ರಷ್ಟರನ್ನು ಗಲ್ಲಿಗೇರಿಸಬೇಕೆಂದು….. ತಕ್ಷಣ ಕಿರಣ್ ಬೇಡಿ ಮಧ್ಯ ಪ್ರವೇಶಿಸುತ್ತಾರೆ- ‘ಅಣ್ಣಾ ಅವರು ಹೇಳುತ್ತಿರುವುದು ಅಕ್ಷರಶಃ ಅರ್ಥದಲ್ಲಿ ಪರಿಗಣಿಸಬಾರದು. ನಮ್ಮ ದೇಶದಲ್ಲಿ ಭ್ರಷ್ಟರು ಸಿಕ್ಕಿಬಿದ್ದರೂ ಶಿಕ್ಷೆಯಾಗುವುದಿಲ್ಲ. ಹೇಗೋ ಬಚಾವ್ ಆಗಿಬಿಡುತ್ತಾರೆ. ಹಣಕಾಸಿನ ಅಪರಾತಪರಾ ಮಾಡಿದವರು ಜಾಮೀನು ಪಡೆದು ಹೊರಬಂದು ಸಾಕ್ಷ್ಯನಾಶಪಡಿಸಿ ಪಾರಾಗುತ್ತಾರೆ. ಅವರು ತಿಂದ ಹಣವನ್ನು ವಸೂಲಿ ಮಾಡುವುದಿಲ್ಲ. ಈ ಅರ್ಥದಲ್ಲಿ ಅಣ್ಣಾ ತಮ್ಮ ಆಕ್ರೋಶವನ್ನು ಹಾಗೇ ವ್ಯಕ್ತಪಡಿಸಿದ್ದಾರೆ.’ ಅಣ್ಣಾ ಹಜಾರೆ ಆಂದೋಲನ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ತಿಳಿಯಲು ಈ ಪ್ರಸಂಗವೊಂದೇ ಸಾಕು ಎಂದು ‘ಓಪನ್’ ಪತ್ರಿಕೆ ಬರೆಯುತ್ತದೆ.

ಅಣ್ಣಾ ಹಜಾರೆ ವಿರುದ್ಧ ಮಾತಾಡಲು ಯಾವ ರಾಜಕೀಯ ನಾಯಕರೂ ಸಿದ್ಧರಿಲ್ಲ. ಆ ಧೈರ್ಯವನ್ನು ಯಾರೂ ತೋರುತ್ತಿಲ್ಲ. ಕಾರಣ ಅವರ ಹಿಂದೆ ಇಡೀ ದೇಶವೇ ನಿಂತಿದೆ. ಅವರ ಬೆಂಬಲಕ್ಕಾಗಿ ಪ್ರತಿ ಊರಿನಲ್ಲೂ ಯುವಕರಪಡೆ ಹುಟ್ಟಿಕೊಂಡಿದೆ. ದೇಶದ ಜನ ಅಣ್ಣಾ ಹಜಾರೆಯವರಲ್ಲಿ ಹೊಸ ಭರವಸೆ ಆಸೆಯನ್ನು ಕಾಣುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದ ಜನ ಅವರಿಗೆ ನೀಡಿದ ಹಠಾತ್ ಬೆಂಬಲ ಇತ್ತೀಚಿನ ವರ್ಷಗಳಲ್ಲೇ ಬೆರಗು ಮೂಡಿಸುವಂಥದ್ದು. ಅಣ್ಣಾ ಅಸ್ತ್ರ ಅದೆಷ್ಟು ಪ್ರಖರವಾಗಿತ್ತೆಂದರೆ, ಉಪವಾಸ ಆರಂಭಿಸುತ್ತೇನೆಂದು ಹೇಳುತ್ತಿದ್ದಂತೆ ಪ್ರಧಾನಿ ಪತರಗುಟ್ಟಿ ಹೋದರು. ನಿರಶನ ನಿಲ್ಲಿಸುವಂತೆ ಮನವಿ ಮಾಡಿದರು. ಅದಕ್ಕೆಲ್ಲ ಅಣ್ಣಾ ಜಗ್ಗಲಿಲ್ಲ. ನಿಜಕ್ಕೂ ಅಣ್ಣಾ ಯುಪಿಎ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದರು. ಅವರು ಹೇಳಿದ್ದಕ್ಕೆಲ್ಲ ‘ಹೂಂ’ ಅಂದರು. ಉಪವಾಸ ನಿಲ್ಲಿಸಿದರೆ ಸಾಕಾಗಿತ್ತು, ಮುಂದೆ ನೋಡಿಕೊಳ್ಳೋಣ ಎಂಬುದು ಅವರ ತಂತ್ರವಾಗಿತ್ತು.

ಆಗ ಆ ತಂತ್ರವನ್ನು ಹೆಣೆದು, ಒಂದೊಂದೇ ಪ್ರಯೋಗವನ್ನು ಮಾಡಲಾರಂಭಿಸಿದ್ದಾರೆ. ಅದಕ್ಕಾಗಿ ರಾಜಕೀಯ ನಾಯಕರು ಬಹಿರಂಗವಾಗಿ ಬಾಯಿಬಿಡುತ್ತಿಲ್ಲ. ಎಲ್ಲ ಒಳಗೊಳಗೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ಕರಪತ್ರ ಹಂಚಿಕೆಗೆ ಶರಣಾಗಿದ್ದಾರೆ. ಅಣ್ಣಾ ಹಜಾರೆ ಮಹಾ ಜಿಗುಟ, ತಮ್ಮ ಹಿಂದ್ ಸ್ವರಾಜ್ ಟ್ರಸ್ಟ್ ಗೆ ಸರಕಾರ ನೀಡಿದ 22 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ತಮ್ಮ ಊರಾದ ರಾಲೇಗಾನ್ ಸಿದ್ಧಿಯನ್ನು ಸ್ವಂತ ಆಡೊಂಬಲ ಮಾಡಿಕೊಂಡಿದ್ದಾರೆ, ಈ ಊರಿಗೆ ಅವರೇ ಸರಕಾರ, ಅಣ್ಣಾ ಒಬ್ಬ ಸರ್ವಾಧಿಕಾರಿ ಎಂದು ಬರೆದ ಕರಪತ್ರಗಳು ಎಲ್ಲೆಡೆ ಸದ್ದಿಲ್ಲದೇ ಹರಿದಾಡುತ್ತಿವೆ.

ಅಣ್ಣಾ ಹಜಾರೆ ಮೊದಲು ನರೇಂದ್ರ ಮೋದಿಯನ್ನು ಹೊಗಳಿದಾಗ ಅವರು ಕೋಮುವಾದಿ, ಬಿಜೆಪಿ ಬಗ್ಗೆ ಅನುಕಂಪ ಹೊಂದಿದವರೆಂದು ಹೇಳಿದವರು, ಅಣ್ಣಾ ಹಜಾರೆಯವರು ಉಪವಾಸಕ್ಕೆ ಕುಳಿತಾಗ ಹಿಂದೆ ಭಾರತ ಮಾತೆಯ ಫೋಟೋ ನೋಡಿ ಇವರು ಆರೆಸ್ಸಿಸ್ಸಿಗರು ಎಂದು ಪುಂಗಿ ಊದಿದರು. ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದು ಇನ್ನು ಕೆಲವರಿಗೆ ಅಪಥ್ಯವಾಯಿತು. ಅಣ್ಣಾ ವಿರುದ್ಧ ಸಂಚು ಹೂಡಲು ಇಷ್ಟೇ ಸಾಕಾಯಿತು.

ತಮ್ಮ ಬುಡ ಅಲುಗಾಡಲಿದೆ ಎಂಬುದು ರಾಜಕಾರಣಿಗಳಿಗೆ ಖಾತ್ರಿಯಾದರೆ ಸಾಕು, ಅವರು ಯಾರನ್ನಾದರೂ ಬಲಿ ಕೊಡಲು ಸಿದ್ಧ. ಎಂಥವರನ್ನಾದರೂ ಬದ್ನಾಮ್ ಮಾಡಲು ಹಿಂದೇಟು ಹಾಕುವುದಿಲ್ಲ. ಭ್ರಷ್ಟಾಚಾರದ ವಿಷಯ ಬಂದರೆ ಎಲ್ಲ ಪಕ್ಷಗಳ ನಾಯಕರೂ ಒಂದಾಗುತ್ತಾರೆ. ಕಳೆದ ಆರು ದಶಕಗಳ ಅವಧಿಯಲ್ಲಿ ಕೇರಳದ ಒಬ್ಬ ಸಚಿವರನ್ನು ಹೊರತುಪಡಿಸಿದರೆ, ಒಬ್ಬೇ ಒಬ್ಬ ಮಂತ್ರಿಗಾಗಲಿ, ಶಾಸಕರಿಗಾಗಲಿ, ಸಂಸದರಿಗಾಗಲಿ ಶಿಕ್ಷೆಯಾಗಿಲ್ಲ. ಅಧಿಕಾರಕ್ಕೆ ಬಂದ ಬಹುತೇಕ ಮಂದಿ ನೂರಾರು ಕೋಟಿ ರೂ.ಗಳನ್ನು ದೋಚಿದ್ದಾರೆ, ಬೊಕ್ಕಸವನ್ನು ಕೊಳ್ಳೆ ಹೊಡೆದಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಯಾರೂ, ಏನೂ ಮಾಡದಂಥ ಹತಾಶ ಸ್ಥಿತಿ! ಸೂರ್ಯನೂ ಮುಳುಗಿದಾಗ ಹಣತೆಯಾದರೂ ಮುಂದೆ ಬಂದು ‘ನಾನಿದ್ದೇನೆ, ಚಿಂತಿಸಬೇಡ’ ಎಂದು ಹೇಳಿದರೆ, ಈಗ ಅದನ್ನೂ ನಂದಿಸಲು ಕೆಲವರು ಪಣ ತೊಟ್ಟಿದ್ದಾರೆ.

ಇಷ್ಟಕ್ಕೂ ಅಣ್ಣಾ ಹಜಾರೆ ಕೈಗೆತ್ತಿಕೊಂಡ ಹೋರಾಟದಲ್ಲಿ ಅವರು ಸಾಂಕೇತಿಕ. ಅವರು ಪ್ರಸ್ತಾಪಿಸಿದ ಭ್ರಷ್ಟಾಚಾರ ನಿರ್ಮೂಲನೆಯೇ ಪ್ರಧಾನ ಅಂಶ. ಅವರ ಕಾಳಜಿಯೂ ಅದೇ. ಇದನ್ನು ಬಿಟ್ಟು ಅಣ್ಣಾ ಹಜಾರೆಯವರ ವಿರುದ್ಧವೇ ಹೋರಾಟಕ್ಕೆ ನಿಂತರೆ ಏನಾದೀತು? ಅದು ಇಡೀ ವ್ಯವಸ್ಥೆಯ ಕ್ರೂರ ಅಣಕವಲ್ಲವಾ? ನಮ್ಮನ್ನೇ ನಾವು ಹೀಯಾಳಿಸಿಕೊಂಡಂತಲ್ಲವಾ? ಯೋಚಿಸಬೇಕು.

ಕೃಪೆ: ವಿಭಟ್.ಇನ್ (ವಿಶ್ವೇಶ್ವರ ಭಟ್)

ಮಂಗಳವಾರ, ಏಪ್ರಿಲ್ 19, 2011

ಅಣ್ಣಾಗೆ ಆ ಪರಿ ಬೆಂಬಲ ವ್ಯಕ್ತವಾಗಲು ಕಾರಣವೇನಣ್ಣಾ?

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು! ಒಬ್ಬ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಉಪವಾಸಕ್ಕೆ ಕುಳಿತ ಮಾತ್ರಕ್ಕೆ ಇಡೀ ದೇಶವೇ ಅವರ ಹಿಂದೆ ಟೊಂಕ ಕಟ್ಟಿ ನಿಂತಿದ್ದೇಕೆ? ಸ್ವತಃ ಅಣ್ಣಾ ಅವರಿಗೇ ಅಶ್ಚರ್ಯವಾಗುವಂಥ ರೀತಿಯಲ್ಲಿ ದೇಶವಾಸಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಲು ಕಾರಣವಾದ ಅಂಶಗಳಾದರೂ ಯಾವುವು? ಅವರ ಉಪವಾಸಕ್ಕೆ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಬಂದಿದ್ದಾದರೂ ಹೇಗೆ? ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಂತಹ ಮೇರು ನಾಯಕ ಕರೆಕೊಟ್ಟ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೊರೆದು ಹೋರಾಟಕ್ಕೆ ಧುಮುಕಿದ್ದನ್ನು ಕೇಳಿದ್ದೆವು , ಓದಿದ್ದೆವು . ಇವತ್ತು ಅಣ್ಣಾ ಕರೆ ಕೊಡದಿದ್ದರೂ ಶಾಲೆ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇಕೆ? 0226155789ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಅಣ್ಣಾ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ಎಂದ ಕರೆಗೆ 7 ಲಕ್ಷ ಜನ ಸ್ಪಂದಿಸಿದ್ದಾರೆ! ಜಗತ್ತಿನ 400ಕ್ಕೂ ಹೆಚ್ಚು ಭಾಗಗಳಲ್ಲಿ ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳಾಗಿವೆ!! ಹೀಗೆ ನಾಗರಿಕ ಸಮಾಜದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾತ್ವಿಕ ಸಿಟ್ಟು ಮಾತ್ರವಲ್ಲ, ರಾಜಕಾರಣಿಗಳನ್ನು ಹಿಡಿದು ಥಳಿಸುವಂಥ ಅಕ್ರೋಶ ವ್ಯಕ್ತವಾಗುತ್ತಿರುವುದೇಕೆ? ಅಣ್ಣಾ ಹಜಾರೆಯವರಿಗೆ ಆ ಪರಿ ಜನ ಬೆಂಬಲ ವ್ಯಕ್ತವಾಗಲು, ಅವರು ನೈಜ ಅರ್ಥದಲ್ಲಿ ದೊಡ್ಡ ಹೀರೋ ಅಗಲು ಮುಖ್ಯ ಕಾರಣಕರ್ತರಾರು?

ಡಾ. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ!

ಸರಕಾರ ಲೋಕಪಾಲ್ ಮಸೂದೆಯ ಕರಡು ಸಿದ್ಧಪಡಿಸಲು ಒಪ್ಪಿಕೊಳ್ಳುವುದರೊಂದಿಗೆ ಏಪ್ರಿಲ್ 9 ರಂದು ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು. ಆ ಸಂದರ್ಭದಲ್ಲಿ ನಡೆದ ರ್ಯಾಲಿಯಲ್ಲಿ ರಾರಾಜಿಸುತ್ತಿದ್ದ ಫಲಕಗಳು ಇವರಿಬ್ಬರ ಬಗ್ಗೆ ದೇಶವಾಸಿಗಳಲ್ಲಿರುವ ಅಭಿಪ್ರಾಯಕ್ಕೆ ಕನ್ನಡಿ ಹಿಡಿದಿದ್ದವು.

100 ಕೋಟಿ ಒಬ್ಬ (ಮಧು) ಕೋಡಾ, 100 ಕೋಡಾ ಒಬ್ಬ (ಸುರೇಶ್) ಕಲ್ಮಾಡಿ, 100 ಕಲ್ಮಾಡಿ ಒಬ್ಬ (ಎ) ರಾಜಾ, 100 ರಾಜಾ ಒಬ್ಬ ರಾಣಿ(ಸೋನಿಯಾ).

ಹಾಗೂ

‘ಶೂನ್ಯ ಮೋಹನ್್’, ‘ಗುಲಾಮನಾದ ಸರ್ದಾರ್್’, ‘ಹುಲಿಗಳು ಹುಟ್ಟಿದ ನಾಡಿಗೆ ಅಪಮಾನ ಮಾಡಬೇಡ ಮನಮೋಹನ್. ಸರ್ದಾರನಾಗಿ ಗುಲಾಮನ ಕೆಲಸ ಮಾಡಬೇಡ.’

ಇಂತಹ ಬ್ಯಾನರ್್ಗಳನ್ನು ಕಾಣಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡವರಾರು? ಅಂತಹ ಸನ್ನಿವೇಶ ನಿರ್ಮಾಣವಾಗಿದ್ದಾದರೂ ಏಕೆ? 2004ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ನೇಮಕಗೊಂಡಾಗ, ಒಬ್ಬ ಸರಳ, ಸಜ್ಜನ, ಸಮರ್ಥ, ಶುದ್ಧಹಸ್ತ ವ್ಯಕ್ತಿ ಎಂಬುದೇ ಮನಮೋಹನ್ ಸಿಂಗ್್ರ ಹೆಗ್ಗಳಿಕೆಯಾಗಿತ್ತು. ಏಳು ವರ್ಷಗಳ ನಂತರ ಜನರಲ್ಲಿ ಯಾವ ಅಭಿಪ್ರಾಯ ನೆಲೆಗೊಂಡಿದೆ?“I’m not such a big culprit as is projected”ಎಂದು ಅಲವತ್ತುಕೊಳ್ಳುವ ಪರಿಸ್ಥಿತಿಯನ್ನು ಪ್ರಧಾನಿ ಸೃಷ್ಟಿಸಿಕೊಂಡಿದ್ದೇಕೆ? ಒಂದೆಡೆ ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ನಮ್ಮ ಅರ್ಥವ್ಯವಸ್ಥೆ ಮಾತ್ರ ಗಣನೀಯ ಪ್ರಗತಿ ತೋರುತ್ತಿದ್ದರೂ ಭಾರತದ ಪ್ರತಿಷ್ಠೆಯೇಕೆ ಕುಂದುತ್ತಿದೆ? ಕುಂದು ತರುತ್ತಿರುವ ಸಂಗತಿಯಾದರೂ ಯಾವುದು? ಸರ್ಕಾರ ಕಳಂಕಿತವಾಗಿರುವಾಗ ಪ್ರಧಾನಿ ನಿಷ್ಕಳಂಕಿತರಾಗಿರಲು ಸಾಧ್ಯವೆ?

1. ಕಾಮನ್್ವೆಲ್ತ್ ಹಗರಣ

2. 2ಜಿ ಹಗರಣ

3. ಕಾರ್ಗಿಲ್ ಹುತಾತ್ಮರಿಗೂ ದ್ರೋಹ(ಆದರ್ಶ್ ಹೌಸಿಂಗ್ ಹಗರಣ)

4. ಸಿವಿಸಿ ನೇಮಕದಲ್ಲೂ ಅಡ್ಡಮಾರ್ಗ

5. ವಿಕಿಲೀಕ್ಸ್್ನಿಂದ ಹೊರಬಿದ್ದ ಸಂಸದರ ಖರೀದಿ ಹಗರಣ.

ಇಂತಹ ಒಂದೊಂದು ಹಗರಣಗಳು ಹೊರಬಿದ್ದಾಗಲೂ ಪ್ರಧಾನಿ ಯಾವ ರೀತಿಯ ಧೋರಣೆ ತೋರುತ್ತಾ ಬಂದಿದ್ದಾರೆ? ಬೆಲೆ ಏರಿಕೆಯಾದರೆ ಕೃಷಿ ಸಚಿವ ಶರದ್ ಪವಾರ್ ಕಾರಣ, 2ಜಿ ಹಗರಣಕ್ಕೆ ರಾಜಾ ಮತ್ತು ಮೈತ್ರಿಕೂಟದ ಅನಿವಾರ್ಯತೆಗಳು ಕಾರಣ, ಕಾಮನ್್ವೆಲ್ತ್ ಹಗರಣಕ್ಕೆ ಕಲ್ಮಾಡಿ ಹೊಣೆಗಾರರು. ಹೀಗೆ ಒಂದೊಂದಕ್ಕೆ ಒಬ್ಬೊಬ್ಬರು ಹೊಣೆಗಾರರಾದರೆ ಪ್ರಧಾನಿಗೆ ಕೆಲಸವೇನಿದೆ? ಇನ್ನು ತೀರಾ ಅನಿವಾರ್ಯವಾದಾಗ ರಾಜಿನಾಮೆಯ ಪ್ರಹಸನ ನಡೆಯುತ್ತದೆ. ಅಂದರೆ ಹಗರಣಗಳು ಎದುರಾದಾಗ, ಸರಕಾರದ ಸಮಗ್ರತೆಯ ಮೇಲೆಯೇ ಅನುಮಾನಗಳ ಕಾರ್ಮೋಡ ಆವರಿಸಿದಾಗ, ಸರಕಾರ ಸಂಕಷ್ಟಕ್ಕೆ ಸಿಲುಕಿದಾಗ ಸಂಬಂಧಪಟ್ಟ ಸಚಿವರ ರಾಜಿನಾಮೆ ಪಡೆದ ಮಾತ್ರಕ್ಕೆ ಕಳಂಕ ಹೊರಟು ಹೋಗುತ್ತದೆಯೇ?

ಕಳೆದ ಏಳು ವರ್ಷಗಳಿಂದ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿಕೊಂಡು ಬರುತ್ತಿರುವುದು ಇದನ್ನೇ ಅಲ್ಲವೇ? ಇಷ್ಟಾಗಿಯೂ ರಾಜಿನಾಮೆಯಿಂದ ಆಗಿದ್ದಾದರೂ ಏನು?

ಪ್ರಧಾನಿ ಮನಮೋಹನ್ ಸಿಂಗ್ ಅವರೇ, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ರಾಜಿನಾಮೆ ನೀಡಿ ಏಳು ವರ್ಷಗಳಾಗುತ್ತ ಬಂದವು, ಅವರ ವಿರುದ್ಧ ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಂಡಿದ್ದೀರಿ? ರಾಜಿನಾಮೆ ಕೊಡಿಸಿದ ಮಾತ್ರಕ್ಕೆ ಸಮಸ್ಯೆ, ಕಳಂಕ ಪರಿಹಾರವಾಗಿ ಬಿಡುತ್ತದೆಯೇ? ಐಪಿಎಲ್ ಕೊಚ್ಚಿ ಪಾಲುದಾರಿಕೆ ವಿಷಯದಲ್ಲಿ ತಮ್ಮ ಪತ್ನಿಯಾಗಲಿದ್ದ ಸುನಂದಾ ಪುಷ್ಕರ್ ಪರ ಲಾಬಿ ಮಾಡಿದರೆಂಬ ಕಾರಣಕ್ಕೆ ವಿದೇಶಾಂಗ ಸಚಿವ ಶಶಿ ತರೂರ್ ರಾಜಿನಾಮೆ ಪಡೆದಿದ್ದೇನೋ ಸರಿ, ಮುಂದೇನಾಯಿತು? ಅಶೋಕ್ ಚವಾಣ್ ವಿಷಯಕ್ಕೆ ಬರೋಣ. ಕಾರ್ಗಿಲ್ ಯುದ್ಧ ಕಲಿಗಳು ಹಾಗೂ ಯುದ್ಧದಲ್ಲಿ ಹುತಾತ್ಮರಾಗಿರುವ ಯೋಧರ ಪತ್ನಿಯರ ವಸತಿಗೆಂದು ನಿರ್ಮಿಸಲಾದ ಅದರ್ಶ ಹೌಸಿಂಗ್ ಸೊಸೈಟಿ ಹಗರಣ ಭುಗಿಲೆದ್ದಾಗ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ರಾಜಿನಾಮೆ ಪಡೆದ ನಂತರ ಏನು ಮಾಡಿದ್ದೀರಿ? ಅವರ ವಿರುದ್ಧದ ತನಿಖೆ ಯಾವ ಹಂತದಲ್ಲಿದೆ? ಚವಾಣ್ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ? ಇಡೀ ದೇಶಕ್ಕೆ ಕಳಂಕ ತಂದ ಕಾಮನ್್ವೆಲ್ತ್ ಹಗರಣದ ರೂವಾರಿ ಸುರೇಶ್ ಕಲ್ಮಾಡಿಗೆ ಯಾವ ಶಿಕ್ಷೆ ನೀಡಿದ್ದೀರಿ? ಏಕೆ ಕಲ್ಮಾಡಿಯವರನ್ನು ಇಂದಿಗೂ ಬಂಧಿಸಿಲ್ಲ? ಕೇಂದ್ರ ವಿಚಕ್ಷಣಾ ಅಯೋಗದ ಕಳಂಕಿತ ಹಾಗೂ ಪದಚ್ಯುತ ಮುಖ್ಯಾಧಿಕಾರಿ ಪಿ.ಜೆ. ಥಾಮಸ್ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸುವಾಗ, ಪ್ರತಿಪಕ್ಷದ ವಿರೋಧದ ಹೊರತಾಗಿಯೂ ತಮ್ಮ ಮನಸ್ಸಿನಂತೆ ನಡೆದುಕೊಳ್ಳುವಾಗ ತೋರಿದ ದರ್ಪ ಈಗ ಎಲ್ಲಿಗೆ ಹೋಯಿತು? 2ಜಿ ಹಗರಣದ ಸಲುವಾಗಿ ಎ. ರಾಜಾ ಅವರ ರಾಜಿನಾಮೆ ಪಡೆದುಕೊಂಡ ನೀವು, ಥಾಮಸ್ ಪ್ರಕರಣದಲ್ಲಿ ಏಕೆ ನೈತಿಕ ಹೊಣೆ ಹೊರಲಿಲ್ಲ? ಏಕೆ ರಾಜಿನಾಮೆ ನೀಡುವ ನೈತಿಕತೆ ತೋರಲಿಲ್ಲ? ಕ್ಷಮೆ ಕೇಳಿದ್ದೇ ದೊಡ್ಡ ಮುತ್ಸದ್ದಿತನವೇ? ಎ. ರಾಜಾ ವಿರುದ್ಧ ಒಂದು ಅರೋಪಪಟ್ಟಿ ಸಿದ್ಧಪಡಿಸಿ ತನಿಖೆಗೆ ಆದೇಶಿಸಲು 16 ತಿಂಗಳು ಬೇಕಾದವೇ? ಎಂದು ಸುಪ್ರೀಂಕೋರ್ಟ್ ಟೀಕಾಪ್ರಹಾರ ಮಾಡಬೇಕಾಗಿ ಬಂತೆಂದರೆ ಪ್ರಧಾನಿ ಎಷ್ಟು ನಿಷ್ಕ್ರಿಯರಾಗಿದ್ದಾರೆ, ಭ್ರಷ್ಟಾಚಾರದ ಬಗ್ಗೆ ಎಂತಹ ಭಾವನೆ ಹೊಂದಿದ್ದಾರೆ ಎಂಬುದನ್ನು ಸೂಚಿಸುವುದಿಲ್ಲವೆ? ಈ ದೇಶ ಕಂಡ ಅತ್ಯಂತ ಭ್ರಷ್ಟ ಸರಕಾರದ ಮುಂದಾಳು ನೀವು ಎಂಬ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವೆ?

2011, ಫೆಬ್ರವರಿ 16ರಂದು ದೇಶದ ಪ್ರಭಾವಿ ಇಂಗ್ಲಿಷ್ ಚಾನೆಲ್್ಗಳ ಮುಖ್ಯಸ್ಥರ ಜತೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದೇನು? ಬಿಜೆಪಿ ಬಹಳ ಕಟು ಧೋರಣೆ ಅನುಸರಿಸುತ್ತಿದೆ, ತನ್ನ ಸಚಿವರೊಬ್ಬರನ್ನು ರಕ್ಷಿಸಲು ಸಹಕರಿಸದ ಕಾರಣ ಅದು ವರಾತಕ್ಕೆ ಇಳಿದಿದೆ ಎಂದು ವಿಷಯಾಂತರ ಮಾಡಲು ಯತ್ನಿಸಿದಿರಲ್ಲಾ 1.7 ಲಕ್ಷ ಕೋಟಿ 2ಜಿ ಹಗರಣಕ್ಕೆ ಕೊಡುವ ಸಮರ್ಥನೆ ಇದೇನಾ? ಜತೆಗೆ ಮೈತ್ರಿಕೂಟದ ಅನಿವಾರ್ಯಗಳು ತಮ್ಮನ್ನು ತಡೆಯುತ್ತಿವೆ ಎನ್ನುವುದಾದರೆ ನೀವು ಯಾರಿಗಾಗಿ, ಯಾರ ಸೇವೆ ಮಾಡುವುದಕ್ಕಾಗಿ ಪ್ರಧಾನಿ ಗಾದಿಯಲ್ಲಿದ್ದೀರಿ? ‘ದಿ ಹಿಂದು’ ಪತ್ರಿಕೆ ಬೆಳಕಿಗೆ ತಂದ ವಿಕಿಲೀಕ್ಸ್ ಹಾಗೂ ಓಟಿಗಾಗಿ ಕಾಸು ಹಗರಣದ ಬಗ್ಗೆ ಬಿಜೆಪಿ ಬೊಬ್ಬೆ ಹಾಕಿದರೆ, “ಅದು ಮುಗಿದ ವಿಚಾರ. ಚುನಾವಣೆಯಲ್ಲಿ ಜನ ತೀರ್ಪು ಕೊಟ್ಟಿದ್ದಾರೆ. ಬಿಜೆಪಿಗೆ ಪಾಠ ಕಲಿಸಿದ್ದಾರೆ” ಎಂದು ಏಕೆ ವಿವೇಚನೆ ಇಲ್ಲದವರಂತೆ ಸಮಜಾಯಿಷಿ ನೀಡುತ್ತೀರಿ? ಹೀಗೆಲ್ಲಾ ಮಾತನಾಡುವ ಮನಮೋಹನ್ ಸಿಂಗ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ? ಇಡೀ ದೇಶದಲ್ಲಿಯೇ ಅತ್ಯಂತ ಸುಶಿಕ್ಷಿತ ಲೋಕಸಭಾ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ದಿಲ್ಲಿಯಲ್ಲಿ 1998ರಲ್ಲಿ ಸೋಲುಂಡಿದ್ದ ಹಾಗೂ ಮತ್ತೆಂದೂ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ತೋರದ ಮನಮೋಹನ್್ಗೆ ಜನಾದೇಶದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ? ಒಂದು ವೇಳೆ, ಪ್ರಮುಖ ಪ್ರತಿಪಕ್ಷವೇನಾದರೂ ಭ್ರಷ್ಟಾಚಾರದ ಬಗ್ಗೆ ಧ್ವನಿಯೆತ್ತಿದರೆ ಕಾಂಗ್ರೆಸ್, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರತ್ತ ಕೈ ತೋರುತ್ತದೆ.

ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಡುವ ಭ್ರಷ್ಟಾಚಾರ ಸಮರ್ಥನೆಗೂ, ಯಡಿಯೂರಪ್ಪನವರ ನಿರ್ಲಜ್ಜತನಕ್ಕೂ ಯಾವ ವ್ಯತ್ಯಾಸವಿದೆ?

ಯಡಿಯೂರಪ್ಪನವರ ರೂಪದಲ್ಲಿ ಬಿಜೆಪಿಯ ಒಬ್ಬ ಭ್ರಷ್ಟ ಮುಖ್ಯಮಂತ್ರಿಯತ್ತ ಬೊಟ್ಟು ಮಾಡುತ್ತಾ ತಮ್ಮ ಪರಮಭ್ರಷ್ಟ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿರುವ ಮನಮೋಹನ್ ಸಿಂಗ್್ಗೆ ದೇಶವೇ ಕೊಂಡಾಡುತ್ತಿರುವ ನರೇಂದ್ರ ಮೋದಿ, ನಿತೀಶ್ ಕುಮಾರ್ ಎಂಬ ಬಿಜೆಪಿ-ಎನ್್ಡಿಎ ಮುಖ್ಯಮಂತ್ರಿಗಳೇಕೆ ಕಾಣುತ್ತಿಲ್ಲ? ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಗದ್ದುಗೆ ಏರಿರಬಹುದು. ಅದರೆ ಇಡೀ ರಾಷ್ಟ್ರದಲ್ಲಿ ಯಾರಾದರೂ ಒಳ್ಳೆಯ ಮುಖ್ಯಮಂತ್ರಿಗಳಿದ್ದಾರಾ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಹುಡುಕಲು ಹೊರಟರೆ ಕಾಣುವುದು ನಿತೀಶ್ ಕುಮಾರ್, ನರೇಂದ್ರ ಮೋದಿ, ರಮಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್ ಮೊದಲಾದ ಬಿಜೆಪಿ-ಎನ್್ಡಿಎ ಮುಖ್ಯಮಂತ್ರಿಗಳಷ್ಟೇ! ಇವರನ್ನು ಬಿಟ್ಟರೆ ಯೋಗ್ಯ ಹಾಗೂ ಒಳ್ಳೆಯ ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವ ಒಬ್ಬ ಮುಖ್ಯಮಂತ್ರಿಯನ್ನು ಹೆಸರಿಸಲಿ ನೋಡೋಣ? ಮನಮೋಹನ್ ಸರಕಾರ ವಿತ್ತೀಯ ಕೊರತೆಯೊಂದೇ ಅಲ್ಲ, ಉತ್ತಮ ಅಡಳಿತ ಹಾಗೂ ನೈತಿಕತೆಯ ಕೊರತೆಯನ್ನೂ ಎದುರಿಸುತ್ತಿದೆ ಎಂದು ಅವರ ಸಂಪುಟದಲ್ಲೇ ಇರುವ ಗೃಹಸಚಿವ ಪಿ. ಚಿದಂಬರಂ ಹೇಳುತ್ತಾರೆಂದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿರಬಹುದು?

ಹೀಗೆ ಮೇಲಿಂದ ಮೇಲೆ ಬೆಳಕಿಗೆ ಬಂದ ಹಗರಣಗಳು ಜನರ ಭಾವನೆಗಳಿಗೆ ನೋವುಂಟು ಮಾಡಿದವು, ಸಾಕ್ಷಿಪ್ರಜ್ಞೆಯನ್ನು ಕೆಣಕಿದವು, ಮನಸ್ಸನ್ನು ಹತಾಶೆಗೊಳಿಸಿದವು. ಯಾವ ಸಂಕೋಚವೂ ಇಲ್ಲದೆ ಇತರರ ಮೇಲೆ ಗೂಬೆ ಕೂರಿಸುವ, ಭ್ರಷ್ಟಾಚಾರವನ್ನು, ಸಂಸದರ ಖರೀದಿಯನ್ನು ಸಮರ್ಥಿಸಿಕೊಳ್ಳುವ ಪ್ರಧಾನಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಯಡಿಯೂರಪ್ಪನವರಂತಹ ಮುಖ್ಯಮಂತ್ರಿಗಳು ಇರುವಾಗ ದೇಶವಾಸಿಗಳಲ್ಲಿ ರಾಜಕಾರಣಿಗಳ ಬಗ್ಗೆ ಆಕ್ರೋಶ, ವ್ಯವಸ್ಥೆಯ ಮೇಲೆ ಜುಗುಪ್ಸೆ, ಭವಿಷ್ಯದ ಮೇಲೆ ಭ್ರಮನಿರಸನ ಸೃಷ್ಟಿಯಾಗದೇ ಇದ್ದೀತೆ? ಅಂತಹ ಅಕ್ರೋಶಕ್ಕೆ ಧ್ವನಿಯಾಗಲು ಅಣ್ಣಾ ಹೊರಟಾಗ ಜನ ಬೆಂಬಲಿಸದೇ ಇರುತ್ತಾರೆಯೇ?

ಕೃಪೆ: ಫ್ರತಾಪ ಸಿಂಹ

ಬುಧವಾರ, ಏಪ್ರಿಲ್ 13, 2011

ನಿತ್ಯ ಭಾರತದ ಮರ್ಯಾದೆ ಹರಾಜು ಹಾಕುವ ಪಡಪೋಶಿ ಪತ್ರಕರ್ತರು!


ಈ ಪತ್ರಕರ್ತರಿದ್ದಾರಲ್ಲಾ, ಮಹಾ ಪಡಪೋಶಿಗಳು!

ಅವರಿಗೆ ಹಿಂದೆ- ಮುಂದೆ ಇಲ್ಲ, ಮನಸ್ಸಿಗೆ ಬಂದ ವರದಿಗಳನ್ನು ಬರೆದು, ಅದಕ್ಕೆ ತಮ್ಮ ಹೆಸರು (ಬೈಲೈನ್) ಹಾಕಿಸಿಕೊಂಡು ಕೀರ್ತಿ, ಪ್ರಶಸ್ತಿ ಪಡೆದು ಸುಮ್ಮನೆ ಎದ್ದು ಹೋಗಿ ಬಿಡುತ್ತಾರೆ. ಇವರನ್ನು ವಿದೇಶಿ ವರದಿಗಾರರು (Foreign Correspondents) ಅಂತಾರೆ. ಅಮೆರಿಕ, ಬ್ರಿಟನ್, ಕೆನಡ, ಫ್ರಾನ್ಸ್ ಮುಂತಾದ ದೇಶಗಳ ಪ್ರಮುಖ ಪತ್ರಿಕೆಗಳ ಭಾರತ ವರದಿಗಾರರಿವರು. ಇವರ ಕೇಂದ್ರ ವಾಸಸ್ಥಾನ ನವದೆಹಲಿ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ನಲ್, ಫೈನಾನ್್ಶಿಯಲ್ ಟೈಮ್ಸ್, ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್, ನ್ಯೂಸ್ ವೀಕ್, ದಿ ಗಾರ್ಡಿಯನ್, ಟೈಮ್ಸ್ ಮುಂತಾದ ಪ್ರತಿಷ್ಠಿತ ವಿದೇಶಿ ಪತ್ರಿಕೆಗಳು ಭಾರತ ವ್ಯವಹಾರಗಳನ್ನು ವರದಿ ಮಾಡಲೆಂದು ಈ ಮಹಾಶಯರನ್ನು ಕಳಿಸಿ ಕೊಡುತ್ತವೆ. ನಮ್ಮಲ್ಲಿ ಪನಿಶ್ ಮೆಂಟ್ ಟ್ರಾನ್ಸಫರ್ ಎಂದು ಬೀದರ್, ಗುಲ್ಬರ್ಗಕ್ಕೆ ಕಳಿಸುತ್ತೇವಲ್ಲ, ಅದೇ ರೀತಿ ವಿದೇಶಿ ಪತ್ರಿಕೆಗಳು ತಮ್ಮ ವರದಿಗಾರರನ್ನು ಭಾರತಕ್ಕೆ ಕಳಿಸುತ್ತವೆ!

ಮೊದಲೇ ಭಾರತದ ಬಗ್ಗೆ ಕೀಳರಿಮೆ, ಪೂರ್ವಗ್ರಹ ಹಾಗೂ ತಾತ್ಸಾರ. ಜತೆಗೆ ಪನಿಶ್್ಮೆಂಟ್ ಟ್ರಾನ್ಸ್್ಫರ್ ಉರಿ ಬೇರೆ. ನಮ್ಮ ದೇಶದ ಬಗ್ಗೆ ಅವರಿಗೆ ಅದೆಂಥದೋ ಕೆಟ್ಟ ಭಾವ, ವಿಚಿತ್ರ ಉದಾಸೀನ. ಭಾರತವೆಂದರೆ ಅವರಿಗೆ ಸ್ವಲ್ಪವೂ ಗೌರವವಿಲ್ಲ. ಇಲ್ಲಿನ ಬಡತನ, ಅನಾರೋಗ್ಯ, ಅನಕ್ಷರತೆ, ಧೂಳು, ಸೆಗಣಿ, ಚರಂಡಿ ನೀರು, ಹೊಂಡ ಬಿದ್ದ ರಸ್ತೆಗಳು, ಸೊಳ್ಳೆ, ಹಾವು, ತಿಗಣೆ, ಬಿಡಾಡಿ ನಾಯಿ, ರಸ್ತೆ ಮೇಲಿನ ದನ, ಎಮ್ಮೆ, ಎಲೆ ಅಡಕೆ ಉಗಿಯುವಿಕೆ, ರಸ್ತೆ ಬದಿಯ ಮೂತ್ರ, ಮಲ ವಿಸರ್ಜನೆಯೇ ಅವರಿಗೆ ದೊಡ್ಡದಾಗಿ ಕಾಣಿಸುತ್ತದೆ. ಅವುಗಳನ್ನೇ ದೊಡ್ಡದಾಗಿ ಮಾಡಿ ಲೇಖನ, ವರದಿಗಳನ್ನು ಬರೆದು ವಿದೇಶಗಳಲ್ಲಿರುವ ತಮ್ಮ ಪತ್ರಿಕೆಗಳಿಗೆ ಕಳಿಸಿ ಕೊಡುತ್ತಾರೆ. ಈ ಪ್ರಭೃತಿಗಳು ಕಳಿಸಿದ್ದೇ ‘ಮಹಾಪ್ರಸಾದ’ವೆಂದು ಭಾವಿಸಿ ಅಲ್ಲಿನ ಪತ್ರಿಕೆಗಳು ಕಣ್ಮುಚ್ಚಿ ಪ್ರಕಟಿಸುತ್ತವೆ.

ಇಂಥ ವರದಿ, ವಿಶ್ಲೇಷಣೆ, ನುಡಿ ಚಿತ್ರ (Feature) ಹಾಗೂ ಲೇಖನಗಳನ್ನು ಓದಿದ ವಿದೇಶಿಯರು ಭಾರತ ಹಾಗೂ ಭಾರತೀಯರ ಬಗ್ಗೆ ಎಂಥ ಅಭಿಪ್ರಾಯ ತಳೆಯಬಹುದು? ಈ ಸ್ಟೋರಿಗಳನ್ನು ಓದಿದ ಬಳಿಕವೂ ಅವರು ಭಾರತದ ಬಗ್ಗೆ ಸದಭಿಪ್ರಾಯ ಹೊಂದಲು ಸಾಧ್ಯವಾ? ನಮ್ಮ ಬಗ್ಗೆ ಅವರು ಅದೆಂಥ ಭಯಾನಕ, ಅಸಹ್ಯ, ತಿರಸ್ಕಾರದ ಇಮೇಜುಗಳನ್ನು ಮನಸ್ಸಿನಲ್ಲಿ ಸೃಷ್ಟಿಸಿಕೊಳ್ಳಬಹುದು? ಇವರು ಅದೆಂಥ ತೀವ್ರ, ಅಗಾಧ ನಕಾರಾತ್ಮಕ ದೃಶ್ಯಗಳನ್ನು ಭಾರತದ ಬಗ್ಗೆ ವಿದೇಶಿಯಲ್ಲಿ ಕಟ್ಟಿಕೊಡಬಹುದು? ಇವರು ನಡೆಸುವ ದುಪಳಿ, ದಾಂಧಲೆ, ಕೀಟಲೆ, ಭಾನಗಡಿ, ಉಪಾದ್ಯ್ವಾಪಿತನ ಒಂದಾ, ಎರಡಾ?

ಇಡೀ ದೇಶದ ಬಗ್ಗೆ ಕಪ್ಪು ಚುಕ್ಕೆ ಮೂಡಿಸಲು, ಈ ವಿದೇಶಿ ವರದಿಗಾರರ ಒಂದು ವರದಿ ಸಾಕು- ಯಾವನೋ ಒಬ್ಬ ವಿದೇಶಿ ಪ್ರಜೆ ಜೀವನ ಪರ್ಯಂತ ಭಾರತದ ಕಡೆ ಮುಖ ಮಾಡದೇ, ಸ್ವಾಟೆ ತಿರುಗಿಸಲು ಒಂದೇ ಒಂದು ಲೇಖನ ಸಾಕು. ಹಾಗೆಂದು ಇವರೇನು ಭಾರತದ ಬಗ್ಗೆ ಬರೆಯಲು ಪರಿಣತರಾ? ಭಾರತದ ಕುರಿತು ಓದಿಕೊಂಡವರಾ? ದೇಶದ ಉದ್ದಗಲ ಪ್ರವಾಸ ಮಾಡಿದವರಾ? ನಮ್ಮ ದೇಶದ ಇತಿಹಾಸ, ಸಮಾಜ, ಜಾತಿ, ಸಂಸ್ಕೃತಿ, ಧರ್ಮ, ವೈವಿಧ್ಯ, ಪ್ರಾದೇಶಿಕ ಸೊಗಡು, ಪುರಾಣ, ಐತಿಹ್ಯಗಳ ಬಗ್ಗೆ ತಿಳಿದುಕೊಂಡವರಾ? ಉಹುಂ… ಏನೂ ಇಲ್ಲ. ವಿದೇಶಿ ಪತ್ರಿಕೆಗಳ ಬಿಳಿ ತೊಗಲಿನ ಪತ್ರಕರ್ತರು ಎಂಬ ಕಾರಣಕ್ಕೇ ಇವರದು ಡೌಲು, ಪುಂಗಿ. ಈ ದೇಶದಲ್ಲಿ ಹುಟ್ಟಿ, ಬೆಳೆದು, ಓದಿದವರಿಗೇ ಇಲ್ಲಿನ ಸಂಕೀರ್ಣತೆ ಅರ್ಥವಾಗುವುದಿಲ್ಲ. ಇಡೀ ಜೀವನವನ್ನು ಅದಕ್ಕಾಗಿ ಮುಡಿಪಾಗಿಟ್ಟವರಿಗೂ ಅಸಾಧ್ಯ.

ಹಾಗಿರುವಾಗ ಈ ಪಡಪೋಶಿಗಳು ಬರಬರುತ್ತಲೇ expert ಕಾಮೆಂಟರಿ ಹೇಳಲು ಶುರು ಮಾಡಿ ಬಿಡುತ್ತಾರೆ. ಇವರಿಗೆ ಮೊದಲು ಕಣ್ಣಿಗೆ ಕಾಣುವುದೇ ನಕಾರಾತ್ಮಕ ಸಂಗತಿಗಳು! ಇದೆಂಥ ದರಿದ್ರ ದೇಶವಪ್ಪಾ? ಇಲ್ಲಿನ ಜನ ಅದೆಷ್ಟು ಹೊಲಸಪ್ಪಾ? ಇಂಥ ಕೊಳಗೇರಿಯಲ್ಲಿ ಜನ ಹೇಗೆ ಜೀವನ ಸಾಗಿಸ್ತಾರಪ್ಪಾ? ಎಂದೇ ರಾಗ ತೆಗೆಯುತ್ತಾರೆ. ಇವೇ ಅವರ ವರದಿಗಳಿಗೆ ವಸ್ತುವಾಗುತ್ತವೆ. ಈ ಪಡಪೋಶಿಗಳು ಕಳಿಸಿದ ಸ್ಟೋರಿಗಳನ್ನು ಸುದ್ದಿ ಮನೆಯಲ್ಲಿರುವ ಪೂರಾಪೋಶಿಗಳು ಕಾಲು ಬಾಲ ಸೇರಿಸಿ, ಹೈಲೈಟ್ ಮಾಡಿ, ಮುಖ ಪುಟದಲ್ಲಿ display ಮಾಡಿ ಪ್ರಕಟಿಸುತ್ತಾರೆ!

ಏನಾಗಬೇಡ ನಮ್ಮ ದೇಶದ ಇಮೇಜಿಗೆ?

ಇಂದಿಗೂ ಭಾರತವೆಂದರೆ ಅಮೆರಿಕ, ಬ್ರಿಟನ್್ನಲ್ಲಿ ‘ಹಾವಾಡಿಗರ ದೇಶ’ (Land of Snake-Charmers) ಎಂಬ ಕಲ್ಪನೆಯಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲಿಯೇ ಅಗಾಧ ಪ್ರಗತಿ ಸಾಧಿಸಿ ನಿಬ್ಬೆರಗಾಗಿಸಿದರೂ, ‘ಟೈಮ್್’ನಂಥ ನಿಯತಕಾಲಿಕ ಹಾವಾಡಿಗನ ಬುಟ್ಟಿಯ ಬದಲು, ಕಂಪ್ಯೂಟರ್ ಮಾನಿಟರ್ ಒಳಗೆ ಮಲಗಿದ ಹಾವಿನ ರೇಖಾ ಚಿತ್ರವನ್ನು ಬಿಡಿಸಿ ಪ್ರಕಟಿಸುತ್ತದೆ! ಅದೆಂಥ ಹೆಬ್ಬಾವು ಮಲಗಿರಬೇಡ?

ಮೊದಲ ಬಾರಿಗೆ ಭಾರತಕ್ಕೆ ಭೇಟಿಯಿತ್ತ ಅಡ್ನಾಡಿ ಪ್ರವಾಸಿಗನೊಬ್ಬ ಬರೆದ ಪ್ರವಾಸ ಕಥನವನ್ನು ‘ನ್ಯೂಯಾರ್ಕ್ ಪೋಸ್ಟ್್’ ಎಂಬ ಪತ್ರಿಕೆ 2009ರ ಸೆಪ್ಟೆಂಬರ್ 4ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಆ ಲೇಖನ ಹೀಗೆ ಆರಂಭವಾಗುತ್ತದೆ- ‘Let’s face it. India is really intimidating. The heart breaking poverty, the heat, the crazy traffic, the begging. It’s an unpredictable place, in fact, there are few things you can count on when visiting- except, perhaps, a week-long bout of Delhi Belly…. some one noted that ‘pink is the navy blue of India.’

ಈತ ನಮಗೆ ಹೇಗೆ ಎತ್ತಿದ್ದಾನೆ ಮಂಗಳಾರತಿಯನ್ನು ನೋಡಿ. ಹೃದಯವಿದ್ರಾವಕ ಬಡತನ, ಬಿಸಿಲು, ಯರ್ರಾಬಿರ್ರಿ ಟ್ರಾಫಿಕ್, ಭಿಕ್ಷಾಟನೆ ಕಂಡು ಅವನಿಗೆ ಭಾರತ ಅಂದ್ರೆ ಭಯಾನಕವಂತೆ! ಹಾಗಂತ ಬರೆಯುತ್ತಾನೆ, ಅದನ್ನೇ ಅಲ್ಲಿನ ಪತ್ರಿಕೆ ಯಥಾವತ್ತು ಪ್ರಕಟಿಸುತ್ತದೆ. ಈ ಪ್ರವಾಸಿ ಕಥನವನ್ನು ಓದಿದ ಯಾರೇ ಆಗಲಿ, ಭಾರತದ ಕಡೆ ಮುಖ ಹಾಕಿ ಮಲಗಲಾರ. ಭಾರತಕ್ಕೆ ಹೊರಟ ವಿಮಾನದಲ್ಲೇನಾದರೂ ಓದಿದರೆ, ವಾಪಸ್ ಬರುವ ವಿಮಾನದಲ್ಲಿ ತಿರುಗಿ ಬರಲು ಯೋಚಿಸಿಯಾನು. ಅಂಥ ಬೇಜವಾಬ್ದಾರಿ ಬರೆಹ!

ಬಹುತೇಕ ವಿದೇಶಿ ವರದಿಗಾರರು ಬರುವಾಗಲೇ ಭಾರತದ ಬಗ್ಗೆ ಪೂರ್ವಗ್ರಹಗಳನ್ನು ಲೋಡ್ ಮಾಡಿಕೊಂಡೇ ಬರುತ್ತಾರೆ. ಇಲ್ಲಿಗೆ ಬಂದ ಬಳಿಕ ಅವರಿಗೆ ಫೀಡ್ ಮಾಡಲು ಅಂಥದೇ ಜನ ಸಿಗುತ್ತಾರೆ. ಯಾಕೆಂದರೆ ಇವನಿಗಿಂತ ಮೊದಲು ಇದ್ದವನು ತನ್ನ ಸಂಪರ್ಕಗಳನ್ನೆಲ್ಲ ಇವನಿಗೆ ಅಂಟಿಸಿ ಹೋಗುತ್ತಾನೆ. ರಾಯಭಾರ ಕಚೇರಿಗಳಲ್ಲಿನ ಕಾಕ್್ಟೇಲ್ ಪಾರ್ಟಿ, ರಾಯಭಾರಿಗಳ ಜತೆಗಿನ ಸಖ್ಯ, ವಿದೇಶಿ ವರದಿಗಾರರ ಸಂಘದಲ್ಲಿ ನಡೆಯುವ ನಿತ್ಯ ಹರಟೆ, ಬುದ್ಧಿ ಜೀವಿಗಳೆಂದು ಕರೆಯಿಸಿಕೊಳ್ಳುವವರಿಂದ ಭಾರತದ ಬಗ್ಗೆ ಕೊರೆತ, ನಕಾರಾತ್ಮಕ ಚಿಂತನೆಯ ಬೀಜ ಬಿತ್ತನೆಯಿಂದ ಬಹುಬೇಗ ಆತ ಭಾರತ ದ್ವೇಷೀ ಮನೋಭಾವ ತಳೆಯುತ್ತಾನೆ. ಇದರಿಂದಾಗಿ ಆತ ನಿಜವಾದ ಭಾರತವನ್ನು ನೋಡುವುದೇ ಇಲ್ಲ. ಅವನಿಗೆ ಈ ದೇಶದ ಸೊಗಡು, ಸಂಸ್ಕೃತಿಯೇ ಅರ್ಥವಾಗುವುದಿಲ್ಲ. ಗ್ರಾಮ ಭಾರತ ಅವನ ಕಣ್ಣಿಗೆ ಧೂಳಿನ ಕವಚ, ಪರದೆಯನ್ನು ನಿರ್ಮಿಸುವುದರಿಂದ ಆತ ತೆರೆ ಸರಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಬರುವಾಗ ಯಾವ ಅಭಿಪ್ರಾಯ ಇಟ್ಟುಕೊಂಡು ಬಂದಿದ್ದನೋ, ಹೋಗುವಾಗಲೂ ಅದನ್ನು ಜೋಪಾನವಾಗಿ ತೆಗೆದುಕೊಂಡು ಹೋಗುತ್ತಾನೆ. ಈ ಮಧ್ಯದ ಅವಧಿಯಲ್ಲಿ ಸಾಧ್ಯವಾಗುವಷ್ಟು ಹಾನಿಯನ್ನು ಮಾಡುತ್ತಾನೆ. ಇದರಿಂದ ಆತ ಕಳೆದುಕೊಳ್ಳುವುದೇನಿಲ್ಲ.

ಈ ಪಡಪೋಶಿ ಪತ್ರಕರ್ತ ಭಯೋತ್ಪಾದಕನಿಗಿಂತ ಅಪಾಯಕಾರಿ. ಆತ ನಮ್ಮ ದೇಶದ ಬಗ್ಗೆ ಏನು ಬರೆಯುತ್ತಾನೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಯಾಕೆಂದರೆ ಅವನ ಪತ್ರಿಕೆ ಇಲ್ಲಿ ಸಿಗುವುದಿಲ್ಲ. ಅವನು ಬರೆದಿದ್ದೇ ವೇದವಾಕ್ಯ. ಅವನನ್ನು ಪ್ರಶ್ನಿಸುವವರು ಯಾರು? ಹೀಗಿರುವಾಗ ಅವನ ಮೇಲೆ ಏನಂತ ಕ್ರಮ ಜರುಗಿಸುವುದು? ಅವನ ವರದಿಯನ್ನು ಇಲ್ಲಿನ ನಮ್ಮ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು ಓದಬಹುದು. ಅವರು ಭಾರತದಲ್ಲಿದ್ದೂ ಪರಕೀಯರು ಬಿಡಿ. ಹಾಗೂ ಹೀಗೂ ನಾಲ್ಕೈದು ವರ್ಷ ಬೇಕಾಬಿಟ್ಟಿ ವರದಿ ಮಾಡುವಷ್ಟರಲ್ಲಿ ಸ್ವದೇಶಕ್ಕೆ ಮರಳುವ ಕಾಲ ಬರುತ್ತದೆ. (ಎಲ್ಲ ವಿದೇಶಿ ವರದಿಗಾರರೂ ಹೀಗೆ ಅಂತಲ್ಲ. ಬಿಬಿಸಿಯ ಮಾರ್ಕ್ ಟುಲಿ ಅವರಂಥ ವರದಿಗಾರರು ಮೂರು ದಶಕಗಳಿಂದ ವರದಿ ಮಾಡಿದ್ದಾರೆ. ನಿವೃತ್ತಿಯ ನಂತರವೂ ದೆಹಲಿಯಲ್ಲಿಯೇ ನೆಲೆಸಿದ್ದಾರೆ. ಅದು ಬೇರೆ ಮಾತು.)

ಕೆಲ ವರ್ಷಗಳ ಹಿಂದೆ ಕಾಶ್ಮೀರದ ಬಡಾವಣೆಯೊಂದರಲ್ಲಿ ಉಗ್ರಗಾಮಿಯೊಬ್ಬ ಅಡಗು ತಾಣದಲ್ಲಿ ಕುಳಿತಿದ್ದಾನೆಂಬ ಖಚಿತ ಮಾಹಿತಿ ಸಿಕ್ಕ ತಕ್ಷಣ ಸೇನೆ ಅಲ್ಲಿಗೆ ನುಗ್ಗಿ ಅವನನ್ನು ಹಿಡಿಯಿತು. ಸುದ್ದಿ ಇಷ್ಟೆ. ಆದರೆ ನಾಲ್ಕು ದಿನಗಳ ಬಳಿಕ ‘ನ್ಯೂಯಾರ್ಕ್ ಟೈಮ್ಸ್್’ನಲ್ಲಿ ‘ಕಾಶ್ಮೀರದಲ್ಲಿ ಭಾರತೀಯ ಸೇನಾ ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ’ ಎಂಬ ವರದಿ ಪ್ರಕಟವಾಗಿತ್ತು! ಭಾಷೆ ಹಾಗೂ ಗ್ರಹಿಕೆಯ ದೃಷ್ಟಿಯಿಂದ ಉತ್ತಮ ಯುವ ಪತ್ರಕರ್ತರು ದೆಹಲಿಯಲ್ಲಿ ಬಿಡಾರ ಹೂಡಿ ವಿದೇಶಗಳಲ್ಲಿರುವ ತಮ್ಮ ಪತ್ರಿಕೆಗಳಿಗೆ ವರದಿ ಮಾಡುವ ಪರಿಯಿದು!

ಕೆಲ ತಿಂಗಳುಗಳ ಹಿಂದೆ ‘ಫೋರ್ಬ್ಸ್್’ ಮ್ಯಾಗಜಿನ್್ನಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಆಹ್ವಾನದ ಮೇರೆಗೆ ಅಮೆರಿಕದ ಡಲ್ಲಾಸ್ ಮೂಲದ ಕಂಪನಿಯೊಂದು ಭೋಪಾಲ್ ಸನಿಹ ತನ್ನ ಶಾಖೆಯನ್ನು ತೆರೆಯಲು ನಿರ್ಧರಿಸಿತ್ತು. ಆದರೆ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದ ಕೋರ್ಟ್ ತೀರ್ಪಿನ ಕುರಿತು ‘ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್್’ ಪತ್ರಿಕೆ ಭಾರತೀಯ ಅಧಿಕಾರಶಾಹಿ, ನ್ಯಾಯಾಂಗದ ಕುರಿತು ನಕಾರಾತ್ಮಕ ಲೇಖನ ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಡಲ್ಲಾಸ್ ಮೂಲದ ಕಂಪನಿ ತನ್ನ ಯೋಜನೆಗೆ ಎಳ್ಳು- ನೀರು ಬಿಟ್ಟಿತು. ಅಂತಾರಾಷ್ಟ್ರೀಯ ಮಟ್ಟದ ಎಷ್ಟೋ ನಿರ್ಧಾರಗಳ ಹಿಂದೆ ಈ ಪಡಪೋಶಿ ಪತ್ರಕರ್ತರ ವರದಿಗಳು ಕರಾಮತ್ತು ನಡೆಸುತ್ತವೆ ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ.

ಈ ವಿದೇಶಿ ವರದಿಗಾರರು ಭಾರತದಲ್ಲಿನ ಮೂಢನಂಬಿಕೆ, ದಟ್ಟ ದಾರಿದ್ರ್ಯ, ಧಾರ್ಮಿಕ ಆಚರಣೆಗಳನ್ನು ವಿದೇಶಿ ಓದುಗರಿಗಾಗಿ ರಸವತ್ತಾಗಿ ಬರೆಯುತ್ತಾರೆ.ಅಕ್ಷರಶಃ ನಮ್ಮ ಬಡತನವನ್ನು ಮಾರುವ ಸರಕನ್ನಾಗಿ ಪರಿಗಣಿಸುತ್ತಾರೆ. ಉದಾಹರಣೆಗೆ ‘ನ್ಯೂಯಾರ್ಕ್ ಟೈಮ್ಸ್್’ ನ ವರದಿಗಾರ ರಾಜಸ್ತಾನಕ್ಕೆ ಹೋಗಿ ಒಂದು ವರದಿ ಸಿದ್ಧಪಡಿಸಿದ್ದ. ಅಲ್ಲಿನ ಆದಿವಾಸಿ ಹುಡುಗಿಯರಿಗೆ ಜಾನುವಾರುಗಳಿಗೆ ನೀಡುವ ಇಂಜೆಕ್ಷನ್ ನೀಡಿ, ಅವರ ಹಾರ್ಮೋನ್್ಗಳನ್ನು ದಿಢೀರ್ ವೃದ್ಧಿಯಾಗುವಂತೆ ಮಾಡಿ, ಹತ್ತು- ಹನ್ನೆರಡು ವರ್ಷದ ಬಾಲಕಿಯರು ಹದಿನೆಂಟು- ಇಪ್ಪತ್ತು ವರ್ಷದ ಯುವತಿಯರ ಹಾಗೆ ಕಾಣುವಂತೆ ಬೆಳೆಸಿ ಅವರನ್ನು ಅರಬ್ ದೇಶಗಳಿಗೆ ವೇಶ್ಯಾವಾಟಿಕೆಗೆ ಕಳುಹಿಸುತ್ತಾರೆ ಎಂದು ಬರೆದಿದ್ದ. ಇಂಥ ವರದಿ ಅಮೆರಿಕದ ಪತ್ರಿಕೆಯಲ್ಲಿ ಪ್ರಕಟವಾದರೆ, ಅಲ್ಲಿನ ಜನತೆ ಭಾರತದ ಬಗ್ಗೆ ಎಂಥ ಭಾವನೆ ಬೆಳೆಸಿಕೊಳ್ಳಬಹುದು?

ಇದು ನಿಜಕ್ಕೂ ಅತ್ಯಂತ ಹೇಯ ಹಾಗೂ ಅಮಾನುಷ ಕೃತ್ಯ, ಅನುಮಾನವೇ ಇಲ್ಲ. ಆದರೆ ದೇಶದ ಯಾವುದೋ ಒಂದು ಕುಗ್ರಾಮದಲ್ಲಿ ನಡೆದ ಈ ಘಟನೆಯನ್ನು ಅಮೆರಿಕದ ಪ್ರತಿಷ್ಠಿತ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದರೆ, ಭಾರತೀಯ ಯುವತಿಯರು ಜಾನುವಾರ ಇಂಜೆಕ್ಷನ್್ನಿಂದಲೇ ಮಹಿಳೆಯರಂತೆ ಕಾಣುತ್ತಾರೆ ಎಂಬ ನಿರ್ಧಾರಕ್ಕೆ ಬಂದರೆ ಅಚ್ಚರಿಯಿಲ್ಲ. ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿರುವ ಆದಿವಾಸಿಗಳು ಬಡತನದ ಬೇಗೆಯಿಂದ ಹೊಟ್ಟೆಗಿಲ್ಲದೆ ಇಲಿಗಳನ್ನು ಕೊಂದು ಅದನ್ನು ತಿನ್ನುತ್ತಾರೆ ಎಂದು ವಿದೇಶಿ ವರದಿಗಾರ ಒಮ್ಮೆ ಬರೆದಿದ್ದ.

ಅಸಲಿ ವಿಷಯವೇ ಬೇರೆ. ಆದಿವಾಸಿಗಳು ಬಡತನದಲ್ಲಿರುವುದು ನಿಜ. ಆದರೆ ಇಲಿ ಅವರಿಗೆ ಹಬ್ಬದೂಟದಲ್ಲಿ ಕಜ್ಜಾಯವಿದ್ದಂತೆ. ಮನೆಯಲ್ಲಿ ಇಲಿ ಹಾಕಿದ ಅಡುಗೆ ಮಾಡಿದ್ದಾರೆಂದರೆ ಅಂದು ಏನೋ ವಿಶೇಷವಿದೆಯೆಂದೇ ಅರ್ಥ. ಆದರೆ ಹೊಟ್ಟೆಗೆ ಏನೂ ಇಲ್ಲವೆಂದೂ ಇಲಿ ತಿಂದು ಬದುಕುತ್ತಾರೆಂದು ಆ ಪಡಪೋಶಿ ಬರೆದರೆ?

ಹಿಂದಿನ ಸೂರ್ಯಗ್ರಹಣದ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ಕೆಲವು ವಿಕಲ ಚೇತನ ಮಕ್ಕಳು ತಮ್ಮ ದೈಹಿಕ ನೂನ್ಯತೆ ಹೋಗಲಾಡಿಸಲು ಯಾವುದೋ ಡಂಬಾಚಾರಿಯ ಮಾತು ಕೇಳಿ ಕುತ್ತಿಗೆ ತನಕ ಮಣ್ಣಿನಲ್ಲಿ ಹೂತುಕೊಂಡ ಫೋಟೋ, ವರದಿ ನೀವು ನೋಡಿದ್ದಿರಬಹುದು. ಕನ್ನಡ ಪತ್ರಿಕೆಗಳನ್ನು ಹೊರತುಪಡಿಸಿದರೆ ಈ ಸುದ್ದಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟೊಂದು ಪ್ರಧಾನವಾಗಿ ಪ್ರಕಟವಾಗಿರಲಿಲ್ಲ. ಆದರೆ ಅಮೆರಿಕ, ಬ್ರಿಟನ್್ನ ಪತ್ರಿಕೆಗಳ ಮುಖಪುಟದಲ್ಲಿ ಈ ಸುದ್ದಿ- ಚಿತ್ರ ರಾರಾಜಿಸಿದ್ದವು. ಭಾರತದ ಮರ್ಯಾದೆಯನ್ನು ಹರಾಜಿಗಿಡಲಾಗಿತ್ತು!

ಇಂಥ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ಅಂತಾರಾಷ್ಟ್ರೀಯ ನಾಯಕರು ಗಮನಿಸದೇ ಹೋಗುವುದಿಲ್ಲ. ಭಾರತ ಸರ್ಕಾರ ವರ್ಷವಿಡೀ ಮಾಡುವ ಕೆಲಸ ಇಂಥ ಒಂದೆರಡು ವರದಿಗಳಿಂದ ನೀರು ಪಾಲಾಗುತ್ತದೆ.

ಈ ಪಡಪೋಶಿಗಳ ಉಪಟಳಕ್ಕೆ ಉಪಾಯವೇನು? ಯೋಚಿಸಿ.

ಕೃಪೆ: ವಿಶ್ವೇಶ್ವರ ಭಟ್

ಗುರುವಾರ, ಏಪ್ರಿಲ್ 7, 2011

ಜ್ಞಾನಪೀಠವೇಕೆ, ಸರಸ್ವತಿ ಸಮ್ಮಾನಕ್ಕೂ ಅಡ್ಡಗಾಲು ಹಾಕಿದ್ದರು!


Interview by- ಪ್ರತಾಪ್ ಸಿಂಹ

1. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ನೀವು ತುಂಬಾ ಮುಜುಗರಕ್ಕೊಳಗಾಗುತ್ತೀರಿ ಎಂಬುದು ನಿಮ್ಮೆಲ್ಲ ಓದುಗರಿಗೂ ಗೊತ್ತಿದೆ. ಆದರೆ, ಜ್ಞಾನಪೀಠಕ್ಕೂ ಮಿಗಿಲಾದ ‘ಸರಸ್ವತಿ ಸಮ್ಮಾನ್್’ ಹುಡುಕಿಕೊಂಡು ಬಂದಿರುವುದು ನಿಮಗಿಂತ ನಿಮ್ಮ ಓದುಗರಿಗೆ ಹೆಚ್ಚು ಸಂತಸ ತಂದಿದೆ. ಈ ಬಗ್ಗೆ ಏನನ್ನುತ್ತೀರಿ?

ನನ್ನ ಓದುಗರಿಗೆ ಸಂತಸ ತಂದಿದೆ ಎಂಬುದು ನಿಜ.ಆದರೆ, ನಾನು ನಿರ್ಲಿಪ್ತನಾಗಿದ್ದೇನೆ. ಇಷ್ಟಕ್ಕೂ ಪ್ರಶಸ್ತಿಯಿಂದ ಒಂದು ಕೃತಿಯ ತೂಕ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಒಂದು ಸಾಹಿತ್ಯ ಕೃತಿಯು ಎಷ್ಟು ಮುಂಬರುವ ತಲೆಮಾರುಗಳ ಹೃದಯವನ್ನು ತಟ್ಟುತ್ತದೆ ಮತ್ತು ಅವರ ಜೀವನದ ಸಮಸ್ಯೆಗಳಿಗೆ ಅಭಿವ್ಯಕ್ತಿ ಕೊಡುತ್ತದೆ ಎನ್ನುವುದರಿಂದ ಆ ಕೃತಿಯ ಆಯಸ್ಸು ನಿರ್ಧಾರವಾಗುತ್ತದೆ.

2. ಒಂದೊಂದು ಕೃತಿಯಲ್ಲೂ ನಮ್ಮ ಸಮಾಜ, ವ್ಯಕ್ತಿ, ಇತಿಹಾಸ, ಸಂಸ್ಕೃತಿ, ಪರಂಪರೆಗಳಿಗೆ ಬಾಧಿಸುವಂಥ ವಿಶಿಷ್ಟ ಸಮಸ್ಯೆಗಳನ್ನು ಸ್ಪರ್ಶಿಸಿ, ಆಳಕ್ಕಿಳಿದು ವಿಶ್ಲೇಷಿಸುವ ತಮ್ಮ ಕಥಾನಕಗಳು ವೈಚಾರಿಕ ಹಾಗೂ ಸಾಮಾನ್ಯ ಓದುಗರಿಗೂ ಸಮನಾಗಿಯೇ ತಲುಪಿವೆ. ಬಹುತೇಕ ಲೇಖಕರಿಗೆ ಓದುಗರ ವ್ಯಾಪ್ತಿ ಕಡಿಮೆಯಾಗುತ್ತಿದ್ದರೆ ನಿಮ್ಮ ಓದುಗರ ವ್ಯಾಪ್ತಿ ಹಿಗ್ಗುತ್ತಿದೆ ಎಂಬುದು ತಮ್ಮ ಈಚಿನ ಕಾದಂಬರಿಗಳಿಂದ ಕಂಡುಬರುತ್ತಿದೆ. ಜ್ಞಾನಪೀಠವೂ ಬಂದಿದ್ದರೆ ತಮ್ಮ ಅಪಾರ ಓದುಗ ವೃಂದಕ್ಕೆ ಖುಷಿಯಾಗುತ್ತಿತ್ತು. ಆಗಿಂದಾಗ್ಗೆ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದರೂ ಜ್ಞಾನಪೀಠವೇಕೆ ಕೈತಪ್ಪುತ್ತಿದೆ?

ಬರೀ ಜ್ಞಾನಪೀಠವಲ್ಲ, ಸರಸ್ವತಿ ಸಮ್ಮಾನಕ್ಕೂ ಕಳೆದ ಹದಿನೈದು ವರ್ಷಗಳಿಂದ ಅಡ್ಡಗಾಲು ಹಾಕುತ್ತಿದ್ದರು. ಮೊದಲು ಕನ್ನಡದಿಂದ ಆಯ್ಕೆಯಾಗಿ ಆ ಕೃತಿಯು ಶಿಫಾರಸಾಗಬೇಕು. ಆನಂತರ ಅದು ದಕ್ಷಿಣ ಭಾರತದ ಭಾಷೆಗಳ ಮಟ್ಟದಲ್ಲಿ ಆಯ್ಕೆಯಾಗಬೇಕು. ಅಂತಹ ಆರು ವಲಯಗಳನ್ನು ಸರಸ್ವತಿ ಸಮ್ಮಾನದವರು ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಗೆದ್ದ ನಂತರ ಆರೂ ವಲಯಗಳಲ್ಲಿ ಗೆದ್ದ ಒಂದೊಂದು ಪುಸ್ತಕ ಅಂದರೆ ಒಟ್ಟು ಆರು ಪುಸ್ತಕಗಳ ಆಯ್ಕೆ ಸಮಿತಿಯು ರಾಷ್ಟ್ರಮಟ್ಟದ ಜ್ಯೂರಿಗಳ ಸಮಿತಿಗೆ ಕಳುಹಿಸುತ್ತದೆ. ಅಲ್ಲಿ ತೇರ್ಗಡೆಯಾದ ಪುಸ್ತಕಕ್ಕೆ ಪ್ರಶಸ್ತಿ ಕೊಡುತ್ತಾರೆ. ಕನ್ನಡದಲ್ಲಿ ನನ್ನ ಹೆಸರು ಕನ್ನಡ ಭಾಷಾ ಸಮಿತಿಯಲ್ಲೇ ತೇರ್ಗಡೆಯಾಗದಂತೆ ಕಳೆದ ಹಲವು ವರ್ಷಗಳಿಂದ ಕನ್ನಡ ಸದಸ್ಯರುಗಳು ತಡೆಯುತ್ತಿದ್ದರು.

3. ನಿಮ್ಮ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರೂ ಭೈರಪ್ಪ ಜ್ಞಾನಪೀಠಕ್ಕೆ ಅರ್ಹರು ಎನ್ನುತ್ತಾರೆ. ಆದರೂ ಸಾಹಿತ್ಯ ವಲಯದಲ್ಲೇ ನಿಮ್ಮ ಬಗ್ಗೆ ಯಾಕಿಂಥ ಅಸಹನೆ?

ಎಲ್ಲರೂ ಅಸಹನೆಯಿಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಅಸಹನೆಯುಳ್ಳವರೇ ಹೆಚ್ಚಾಗಿ ವಿಶ್ವವಿದ್ಯಾಲಯಗಳ ಸಾಹಿತ್ಯ ವಿಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅವರಲ್ಲಿ ಭೈರಪ್ಪನವರನ್ನು ಹೊರಗಿಡಬೇಕೆಂಬ ಐಕಮತ್ಯ ಇರುವಷ್ಟು ಗಟ್ಟಿಯಾಗಿ ಅವರ ಬದಲು ಯಾರನ್ನು ಮೇಲೆತ್ತಬೇಕು ಎಂಬುದರಲ್ಲಿ ಐಕಮತ್ಯವಿಲ್ಲ. ಆದರೆ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಏಕೆಂದರೆ ಇಂತಹ ಪ್ರಶಸ್ತಿಗಳಿಂದ ಯಾವ ಕೃತಿಯೂ ಬದುಕುವುದಿಲ್ಲ. ಅದು ಬದುಕುವುದು ತನ್ನ ಅಂತಃಶಕ್ತಿಯಿಂದ. ಹೀಗೆ ಒಬ್ಬನಿಗೆ ಬರುವುದನ್ನು ತಪ್ಪಿಸುವವರು ಪ್ರಶಸ್ತಿಗಳಿಗೆ ಸಲ್ಲದ ಮಹತ್ವ ಕೊಡುತ್ತಾರೆ.

4. ಸಾಹಿತ್ಯವೆಂದರೆ ಸಮಾಜಮುಖಿ, ಸಮಕಾಲೀನವಾಗಿರಬೇಕೆಂಬ ಒಂದಭಿಪ್ರಾಯ, ಇಲ್ಲಾ ಇಲ್ಲಾ ಅದು ಚೆನ್ನಾಗಿ ಓದಿಸಿಕೊಂಡು ಹೋಗುವಂತಿರಬೇಕು ಎಂಬ ಮತ್ತೊಂದು ಅಭಿಪ್ರಾಯವೂ ಇದೆ. ನಿಮ್ಮ ಬಗ್ಗೆ ಇರುವ, ನಿಮ್ಮ ವಿರೋಧಿಗಳು ಜರೆಯುವ ಅಂಶವೇನೆಂದರೆ ಭೈರಪ್ಪ ಜನಪ್ರಿಯ ಕಾದಂಬರಿಕಾರರಷ್ಟೆ. ಜನಪ್ರಿಯತೆ ಆಧಾರದ ಮೇಲೆ ಶ್ರೇಷ್ಠತೆಯನ್ನು ಅಳೆಯುವುದಕ್ಕಾಗಲ್ಲ ಎನ್ನುತ್ತಾರೆ. ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಇದು ಜನರ ಹೃದಯವನ್ನು ಆವರಿಸಬಲ್ಲ ರಸವನ್ನು ಸೃಷ್ಟಿಸಲಾರದ, ತಂತ್ರಗಳನ್ನೇ ಸಾಹಿತ್ಯವೆಂದು ಪ್ರತಿಪಾದಿಸಿದ ನವ್ಯರು ಆರಂಭಿಸಿದ ಟೀಕೆ. ಕುಮಾರವ್ಯಾಸನಷ್ಟು ಜನಪ್ರಿಯ ಕವಿಯು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಬೇರೊಬ್ಬನಿಲ್ಲ. ಆದರೆ ಅವನ ಸಾಹಿತ್ಯಶಕ್ತಿ ಕಡಿಮೆಯದೇ?

5. ಚಳವಳಿಗಳು, ವಾದಗಳು ಕಾದಂಬರಿಕಾರರಿಗೆ ಎಷ್ಟರ ಮಟ್ಟಿಗೆ ಅಗತ್ಯ?

ವಾಸ್ತವವಾಗಿ ಚಳವಳಿಗಳು ಸ್ವಲ್ಪ ಮಟ್ಟಿಗೆ ಹೊಸ ವೈಚಾರಿಕ ಪ್ರಚೋದನೆಯನ್ನು ಲೇಖಕನಿಗೆ ಕೊಡಬಹುದು. ಆದರೆ ಚಳವಳಿಗಳಲ್ಲಿ ತೊಡಗಿಸಿಕೊಂಡವನು ಸೃಷ್ಟಿಶೀಲತೆಯ ನಿರ್ಲಿಪ್ತೆಯನ್ನು ಕಳೆದುಕೊಳ್ಳುತ್ತಾನೆ.

6. ಕನ್ನಡದ ಯಾವ ಲೇಖಕರೂ ತಲುಪದಷ್ಟು ಅನ್ಯ ಭಾಷಾ ಓದುಗರನ್ನು ನೀವು ತಲುಪಿದ್ದೀರಿ. ನಿಮ್ಮ ಕಾದಂಬರಿಗಳ ಬಗ್ಗೆ ಅವರ ಪ್ರತಿಕ್ರಿಯೆ ಹೇಗಿದೆ?

ಭಾರತದ ಎಲ್ಲ ಭಾಷೆಯ ಓದುಗರೂ ನನ್ನನ್ನು ತಮ್ಮ ಪ್ರಾಂತ್ಯದವನೆಂದೇ ಸ್ವೀಕರಿಸಿದ್ದಾರೆ. ಭೈರಪ್ಪನವರು ಕನ್ನಡದಲ್ಲಿ ಬರೆಯುತ್ತಿರುವ ಅತ್ಯಂತ ಜನಪ್ರಿಯ ಮರಾಠಿ ಲೇಖಕ ಎಂದು ಮಹಾರಾಷ್ಟ್ರದವರು ಹೇಳುತ್ತಾರೆ. ನನ್ನ ಗೃಹಭಂಗವನ್ನು ಓದಿದ ಪಂಜಾಬಿ ಲೇಖಕರೊಬ್ಬರು ಜೀವನದ ಕಸುವು ಮತ್ತು ಕೋಪದಲ್ಲಿ ಹೊರಬರುವ ಬೈಗುಳಗಳಲ್ಲಿ ಕರ್ನಾಟಕ ಮತ್ತು ಪಂಜಾಬು ಎರಡೂ ಒಂದೇ ಎಂಬುದನ್ನು ಭೈರಪ್ಪನವರು ತೋರಿಸಿದ್ದಾರೆ. ಆ ಮೂಲಕ ಅವರು ಭಾರತದ ಏಕತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ನಾನೊಬ್ಬ ಭಾರತೀಯ ಲೇಖಕ. ಪ್ರಾದೇಶಿಕತೆಯ ಆಳಕ್ಕೆ ಇಳಿದರೂ ನಾನು ಸೃಷ್ಟಿಸುವ ಪಾತ್ರ ಮತ್ತು ಸನ್ನಿವೇಶಗಳು ಇಡೀ ಭಾರತವನ್ನು ವ್ಯಕ್ತಗೊಳಿಸುತ್ತವೆ.

7. ಇವತ್ತಿನ ಯುವಜನತೆಯ ಬೇಕು ಬೇಡಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಪತ್ರಿಕೆ, ಚಾನೆಲ್್ಗಳು ತಮ್ಮ ಹೂರಣ, ತಂತ್ರ ರೂಪಿಸಬೇಕೆಂಬ ಮಾತಿದೆ. ಅದು ಸಾಹಿತ್ಯಕ್ಕೂ ಅನ್ವಯಿಸುತ್ತದಾ?

ಇವತ್ತಿನ ಯುವಕರು ಹಿಂದಿನವರಿಗಿಂತ ಹೆಚ್ಚು ಸಾಮಾನ್ಯ ಜ್ಞಾನ ಮತ್ತು ಲೋಕಾನುಭವಗಳನ್ನು ಪಡೆದವರು. ಇಪ್ಪತ್ತೆರಡು ವಯಸ್ಸಿನ ಒಳಗಿರುವ ಬಹುತೇಕ ಕಂಪ್ಯೂಟರ್ ಎಂಜಿನಿಯರ್್ಗಳು ಅಮೆರಿಕ, ಯೂರೋಪುಗಳನ್ನೆಲ್ಲ ಸುತ್ತು ಹಾಕಿ ಬಂದಿರುತ್ತಾರೆ. ಇಂಟರ್್ನೆಟ್್ನಲ್ಲಿ ಎಷ್ಟೆಷ್ಟೋ ಸಂಗತಿಗಳನ್ನು ಓದಿರುತ್ತಾರೆ. ಅಂತಹವರಲ್ಲಿ ಆಸಕ್ತಿ ಹುಟ್ಟಿಸಬೇಕಾದರೆ ಲೇಖಕನಲ್ಲಿಯೂ ಅದೇ ವಿಶಾಲ ವ್ಯಾಪ್ತಿಯ ಅನುಭವ ಮತ್ತು ಜ್ಞಾನವಿರಬೇಕು.

8. ಇವತ್ತು ಸಾಹಿತ್ಯ ಔಟ್್ಡೇಟೆಡ್, ಯುವಜನಾಂಗ ಓದುತ್ತಿಲ್ಲ, ಪುಸ್ತಕದಿಂದ ದೂರವಾಗುತ್ತಿದೆ ಎಂಬ ಮಾತಿದೆ. ಇದಕ್ಕೆ ಸಾಹಿತಿಗಳು ಕಾರಣವೇ?

ಜನಗಳು ಓದುತ್ತಿಲ್ಲ ಎಂಬುದು ಸುಳ್ಳು ಮಾತು. ಹಿಂದಿದ್ದಕ್ಕಿಂತ ಈಗ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತಿವೆ. ಬರೀ ನನ್ನ ಪುಸ್ತಕಗಳನ್ನು ಲಕ್ಷಿಸಿ ಈ ಮಾತನ್ನು ಹೇಳುತ್ತಿಲ್ಲ. ಕನ್ನಡ ಸಾಹಿತ್ಯ ಕೃತಿಗಳನ್ನು ಓದದೇ ಇರುವ ಯುವಜನರು ಇಂಗ್ಲಿಷ್ ಮಾಧ್ಯಮದ ಸರಕುಗಳು.

9. ನೀವೊಬ್ಬ ದೊಡ್ಡ, ಜನಪ್ರಿಯ ಲೇಖಕರಾಗಿ ಉದಯೋನ್ಮುಖ, ಹೊಸದಾಗಿ ಬರೆಯಬೇಕೆಂಬ ಇಚ್ಛೆ ಹೊಂದಿರುವವರಿಗೆ ನಿಮ್ಮ ಸಲಹೆ ಏನು?

ಪ್ರಪಂಚದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಪ್ರಾತಿನಿಧಿಕವಾದುವುಗಳನ್ನಾದರೂ ಮೊದಲು ಓದಬೇಕು. ಬರೀ ಸಾಹಿತ್ಯದ ಓದಿಗೆ ಸೀಮಿತಗೊಳ್ಳದೆ ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ ಮೊದಲಾದುವುಗಳನ್ನೂ ಓದಬೇಕು. ‘ಇಸಂ’ ಮತ್ತು ಐಡಿಯಾಲಜಿಗಳ ಬಲೆಗೆ ಬೀಳಬಾರದು. ಆದರೆ ಅವುಗಳ ಪರಿಚಯವಿರಬೇಕು.

10. ಒಬ್ಬ ಸಾಹಿತಿಯ ಶ್ರೇಷ್ಠತೆ ಕೊನೆಗೂ ವ್ಯಕ್ತವಾಗುವುದು ಪ್ರಶಸ್ತಿ ಪುರಸ್ಕಾರವೆಂಬ ಮಾನದಂಡದಿಂದಲೇ?

ಖಂಡಿತ ಇಲ್ಲ.

ಕೃಪೆ: ಪ್ರತಾಪ ಸಿಂಹ

ಮಂಗಳವಾರ, ಏಪ್ರಿಲ್ 5, 2011

ಜಗದಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದಾತ ನೇಪಥ್ಯದಲ್ಲೇ ನಿಂತ!


World Wide Web!

ನೀವೊಬ್ಬ ಉದ್ಯೋಗಾಕಾಂಕ್ಷಿಯಾಗಿರಬಹುದು, ಯಾವುದೋ ಒಂದು ಸಂಶೋಧನೆಗೆ ಮಾಹಿತಿ ಹುಡುಕುತ್ತಿರಬಹುದು, ಯಾವುದಾದರೊಂದು ವಿಷಯ-ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾಗಿರಬಹುದು, ಮನರಂಜನೆ ಬೇಕಾಗಿರಬಹುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕೆನಿಸಿದರೂ, ಸಮಯ ಹರಣ ಮಾಡಬೇಕೆಂದಾದರೂ ಸರಿ, ಈ ವರ್ಲ್ಡ್ ವೈಡ್ ವೆಬ್ ಇದೆಯಲ್ಲಾ ಅದು ನೈಜ ಅರ್ಥದಲ್ಲಿ paradise of opportunities! ಬಹುಶಃ ಯಾವೊಂದು ಸಂಶೋಧನೆಯೂ wwwನಷ್ಟು ಶೀಘ್ರವಾಗಿ, ಈ ಪರಿಯಾಗಿ ಆವರಿಸಿದ್ದಿಲ್ಲ. ಯಾವೊಂದು ಕ್ರಾಂತಿಯಿಂದಲೂ ಮನುಷ್ಯನಿಗೆ ಈ ರೀತಿಯ ಅಗತ್ಯತೆ, ಅನಿವಾರ್ಯತೆಯನ್ನು ಸೃಷ್ಟಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಎಲ್ಲರಿಗೂ ಪ್ರವೇಶವಿದೆ, ಎಲ್ಲರಿಗೂ ಅವಕಾಶಗಳಿವೆ. ಈ ವರ್ಲ್ಡ್ ವೈಡ್ ವೆಬ್ ಮನುಷ್ಯ ಜೀವನದ ಯಾವ ಅಂಶಗಳನ್ನೂ ಮುಟ್ಟದೆ ಬಿಟ್ಟಿಲ್ಲ. ಅದು ಶಿಕ್ಷಣ, ಸೆಕ್ಸ್, ಸಮಾಧಿ, ಔಷಧಿ, ಕೃಷಿ, ಕೈಗಾರಿಕೆ, ಉತ್ಪಾದನೆ ಯಾವ ಕ್ಷೇತ್ರಗಳನ್ನೂ ಬಾಕಿ ಉಳಿಸಿಲ್ಲ. ಒಂದು ಕರೆಂಟ್ ಬಿಲ್ ಕಟ್ಟುವುದಿರಬಹುದು, ಫೋನ್ ಬಿಲ್ ತುಂಬುವುದಿರಬಹುದು, ಬಸ್, ಟ್ರೈನ್, ಏರ್ ಟಿಕೆಟ್ ಬುಕ್ ಮಾಡುವುದಿರಬಹುದು ಕುಳಿತಲ್ಲೇ ಎಲ್ಲವನ್ನೂ ಸಾಧ್ಯವಾಗಿಸಿರುವುದು ವರ್ಲ್ಡ್ ವೈಡ್ ವೆಬ್. ನಿಮ್ಮದೊಂದು ಸರಕು ಇರಬಹುದು, ಹಳೇ ವಾಹನ ಇರಬಹುದು, ಬಾಡಿಗೆ ಮನೆ ಇರಬಹುದು ಯಾವ ಏಜೆಂಟ್್ಗಳ, ಜಾಹೀರಾತುಗಳ ಸಹಾಯವಿಲ್ಲದೆ ಗ್ರಾಹಕರನ್ನು ತಲುಪುವ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿದೆ. ಉದ್ಯಮಿಗಳು, ಕೈಗಾರಿಕೆಗಳು, ಟೆಲಿಕಾಂ ಕಂಪನಿಗಳು ಯೋಚಿಸುವ ವಿಧಾನವನ್ನೇ, ಮಾರುಕಟ್ಟೆ ತಂತ್ರವನ್ನೇ ಬದಲಾಯಿಸಿ ಬಿಟ್ಟಿದೆ. ವೆಬ್ ಲೋಕ ಬದುಕಿನ ಆಯಾಮಗಳನ್ನೆಲ್ಲ ಆವರಿಸಿಕೊಂಡಿದೆ. ಜನರ ಸಂವಹನದ ಬಗೆಯನ್ನೇ ಬದಲಾಯಿಸಿಬಿಟ್ಟಿದೆ. ಇವತ್ತು ವೆಬ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ.

ಆದರೆ…

ಇಂಥದ್ದೊಂದು ವ್ಯವಸ್ಥೆಯನ್ನು ಸೃಷ್ಟಿಸಿದ, ಇದನ್ನೆಲ್ಲ ಸಾಧ್ಯವಾಗಿಸಿದ ಆ ಪುಣ್ಯಾತ್ಮ ಯಾರು?

ಜಗತ್ತಿನಲ್ಲಿ ಎಂಥೆಂಥದೋ ಅನ್ವೇಷಣೆಗಳಾಗಿವೆ. ಇವತ್ತು ಒಬ್ಬನ ಹೆಸರಲ್ಲಿ ಗುರುತಿಸಲಾಗುತ್ತಿರುವ ಅನ್ವೇಷಣೆ ವಾಸ್ತವದಲ್ಲಿ ಎಷ್ಟೋ ಕೈಗಳ ಮಿಳಿತದಿಂದ ಆಗಿರುವಂಥದ್ದು. ಈ ವಿಷಯದಲ್ಲಿ ತುಂಬ ಭಿನ್ನವಾಗಿ ಉಳಿಯುವವನೆಂದರೆ ಟಿಮ್ ಬರ್ನರ್ಸ್ ಲೀ. ಈ ಹೆಸರು ನಿಮಗೆ ಅಷ್ಟೇನೂ ಪರಿಚಿತ ಎನಿಸದಿದ್ದರೂ ‘ವರ್ಲ್ಡ್ ವೈಡ್ ವೆಬ್್’ ಎಂಬ ಹೆಸರನ್ನಂತೂ ಅಂತರ್ಜಾಲದ ಪರಿಕಲ್ಪನೆ ಇರುವ ಎಲ್ಲರೂ ಕೇಳಿಯೇ ಇರುತ್ತೀರಿ. ಈ ಡಬ್ಲ್ಯುಡಬ್ಲ್ಯುಡಬ್ಲ್ಯುವನ್ನು ವಿನ್ಯಾಸಗೊಳಿಸಿರುವಾತ ಬರ್ನರ್ಸ್. ಇದರ ಇಡಿ ಶ್ರೇಯಸ್ಸು ಅವನೊಬ್ಬನಿಗೇ ಸಲ್ಲುತ್ತದೆ ಎಂಬುದೇ ವಿಶೇಷ. ಈ ಸೌಲಭ್ಯವನ್ನು ಮುಕ್ತವಾಗಿ ಹಾಗೂ ಉಚಿತವಾಗಿ ಇಟ್ಟುಕೊಂಡು ಬಂದಿರುವುದರ ಹೆಚ್ಚುಗಾರಿಕೆಯೂ ಆತನದ್ದೇ. ಇಂಗ್ಲೆಂಡ್್ನ ಆಕ್ಸ್್ಫರ್ಡ್ ಯೂನಿವರ್ಸಿಟಿಯ ಕ್ವೀನ್ಸ್ ಕಾಲೇಜಿನಲ್ಲಿ 1976ರಲ್ಲಿ ಪದವೀಧರರಾದವರು ಬರ್ನರ್ಸ್ ಲೀ ಸೋಲ್ಡರಿಂಗ್ ಕಬ್ಬಿಣ, ಟಿಟಿಎಲ್ ಗೇಟ್, ಎಮ್6800 ಪ್ರೊಸೆಸರ್ ಹಾಗೂ ಹಳೆ ಟಿವಿಯನ್ನು ಉಪಯೋಗಿಸಿಕೊಂಡು ತಮ್ಮದೊಂದು ಮೊದಲ ಕಂಪ್ಯೂಟರ್ ವಿನ್ಯಾಸಗೊಳಿಸಿಕೊಂಡಿದ್ದರು ಅವರು. ಇಂಗ್ಲೆಂಡ್್ನ ಪ್ರಮುಖ ಟೆಲಿಕಾಂ ಸಾಧನಗಳ ಉತ್ಪಾದಕ ಪ್ಲೆಸ್ಸಿ ಟೆಲಿಕಮ್ಯುನಿಕೇಷನ್ ಲಿಮಿಟೆಡ್್ನಲ್ಲಿ ಟ್ರಾನ್ಶಾಕ್ಷನ್ ವ್ಯವಸ್ಥೆ, ಮೆಸೇಜ್ ರಿಲೆ ಹಾಗೂ ಬಾರ್್ಕೋಡ್ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದರು. 1978ರಲ್ಲಿ ಡಿ.ಜಿ. ನ್ಯಾಶ್ ಎಂಬ ಕಂಪನಿಯಲ್ಲಿ ಮಲ್ಟಿಟಾಸ್ಕಿಂಗ್ ಆಪರೇಟಿಂಗ್ ಸಿಸ್ಟಮ್ ಇತ್ಯಾದಿ ಜವಾಬ್ದಾರಿ ನಿರ್ವಹಿಸಿದರು.

ಅದು 1980ನೇ ವರ್ಷ.

ಜಿನೇವಾದ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಯುರೋಪಿಯನ್ ಲ್ಯಾಬೋರೇಟರಿಯಲ್ಲಿ (SERA) ಆರು ತಿಂಗಳ ಅವಧಿಗೆ ಸಾಫ್ಟ್್ವೇರ್ ಎಂಜಿನಿಯರ್ ಆಗಿದ್ದ ಬ್ರಿಟನ್ನಿನ ಬರ್ನರ್ಸ್ ಲೀ. ಅದೇ ಕಂಪನಿಯಲ್ಲಿ ಹಾರ್ಡ್್ವೇರ್, ಸಾಫ್ಟ್್ವೇರ್್ಗಳ ಭಿನ್ನ ಭಿನ್ನ ಕೆಲಸಗಳಲ್ಲಿ ಸುಮಾರು ಹತ್ತು ಸಾವಿರ ಮಂದಿ ತೊಡಗಿಸಿಕೊಂಡಿದ್ದರು. ಇ-ಮೇಲ್ ಹಾಗೂ ಕಡತಗಳ ಹಸ್ತಾಂತರದ ಮೂಲಕ ಇವರೆಲ್ಲರ ಕೆಲಸ ಬೆಸೆದುಕೊಂಡಿತ್ತು. ಎಲ್ಲ ಯೋಜನೆಗಳೂ ಅನೇಕ ವಿಜ್ಞಾನಿಗಳ ಮಧ್ಯೆ ಹಂಚಿ ಹೋಗಿ ಒಬ್ಬರು ಇನ್ನೊಬ್ಬರೊಂದಿಗೆ ವ್ಯವಹರಿಸುವ ವ್ಯವಸ್ಥೆಯೊಂದರ ನಿರ್ಮಾಣ ಅಗತ್ಯವಾಗಿತ್ತು. ಅಂತ ಸಂದರ್ಭದಲ್ಲೇ ಅಲ್ಲಿದ್ದ ಬರ್ನರ್ಸ್ ‘ಎನ್ಕ್ವಯರ್್’ (Enquire) ಎಂಬ ಸಾಫ್ಟ್್ವೇರ್ ವ್ಯವಸ್ಥೆಯನ್ನು ರೂಪಿಸಿದ. ಈಗಿನ ವರ್ಲ್ಡ್ ವೈಡ್ ವೆಬ್್ನ ಪೂರ್ವರೂಪವೇ ಅದಾಗಿತ್ತು. ವೆಬ್್ನಲ್ಲಿ ಈಗ ಕಾಣುವ ಅನೇಕ ರಚನೆಗಳಿದ್ದರೂ ಕೆಲಮಟ್ಟಿಗೆ ಭಿನ್ನವಾಗಿತ್ತು. ಬರ್ನರ್ಸ್ ಲೀ ಹೇಳಿಕೊಂಡಂತೆ ‘ಎನ್ಕ್ವಯರ್್’ ಎಂಬ ನಾಮಕರಣಕ್ಕೆ ‘ಎನ್ಕ್ವಯರ್ ಅಪಾನ್ ವಿತ್ ಎವೆರಿಥಿಂಗ್್’ ಎಂಬ ಪುಸ್ತಕವೇ ಪ್ರೇರಣೆ.

ಆದರೆ ಬರ್ನರ್ಸ್್ನ ಇಂಥದ್ದೊಂದು ಅದ್ಭುತ ಐಡಿಯಾವನ್ನು ಯಾರೂ ಗಣನೆಗೇ ತೆಗೆದುಕೊಳ್ಳಲಿಲ್ಲ. ‘ಇನ್ಫೋಮೇಶ್್’, ‘ಇನ್ಫಾರ್ಮೇಷನ್ ಮೈನ್್’ ಎಂದೆಲ್ಲ ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡು ಅದನ್ನು ಪರಿಚಯಿಸಲು ನೋಡಿದಾಗಲೂ ಈತನ ಬಾಸ್್ಗಳಿಗೆ ಆ ಬಗ್ಗೆ ಆಸಕ್ತಿಯೇ ಕುದುರಲಿಲ್ಲ. ಆತನ ಪ್ರಸ್ತಾವಗಳೆಲ್ಲವೂ ‘ಕುತೂಹಲಕರವಾಗಿರುವುದಂತೂ ಹೌದು, ಆದರೆ ಅಸ್ಪಷ್ಟವಾಗಿದೆ’ ಎಂಬ ಒಕ್ಕಣೆ ಹೊತ್ತು ವಾಪಸಾದವು.

ಕೊನೆಗೊಮ್ಮೆ ತನ್ನ ಆವಿಷ್ಕಾರವನ್ನು ನೇರವಾಗಿ ಜನರೆದುರು ಇಟ್ಟ ಬರ್ನರ್ಸ್. ‘ವರ್ಲ್ಡ್ ವೈಡ್ ವೆಬ್್’ (ಡಬ್ಲ್ಯುಡಬ್ಲ್ಯುಡಬ್ಲ್ಯು) ಯೋಜನೆಯ ಅಸ್ತಿತ್ವ ಸಾರುವ ಅಂತರ್ಜಾಲ ಸುದ್ದಿಸಮೂಹವೊಂದನ್ನು ಸೃಷ್ಟಿಸಿದ. ಅಲ್ಲಿ ನೀಡಲಾದ ಸಂದೇಶದಲ್ಲಿ ಮೊದಲ ವೆಬ್್ಸೈಟ್್ಗಾಗಿ ಬೇಕಾದ ಮೊದಲ ವೆಬ್ ಬ್ರೌಸರ್ ಅನ್ನು ಡೌನ್್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿತ್ತು. ಆಗಸ್ಟ್ 6, 1996ರ ಮಧ್ಯಾಹ್ನ 2:56:20 ಗಂಟೆಗೆ ಸರಿಯಾಗಿ ವೆಬ್್ಸೈಟ್ ಲಾಂಚ್ ಆಯಿತು. ವೆಬ್ ಬ್ರೌಸರ್ ಡೌನ್್ಲೋಡ್ ಮಾಡಿಕೊಳ್ಳಬೇಕಾದ http://info.cern.chಗೆ ಅವತ್ತಿನಿಂದಲೇ 10 ಹಿಟ್ಸ್್ಗಳಿಂದ ಆರಂಭಿಸಿ 100- 1000 ಎಂದು ಹಿಗ್ಗುತ್ತಲೇ ಹೋಯಿತು. ಹೋಮ್್ಪೇಜ್, ಸರ್ಚ್ ಇಂಜಿನ್, ಡಾಟ್ ಕಾಮ್ ಲೋಕಗಳೆಂಬ ಅದ್ಭುತ ಸಂಗತಿಗಳಿಗೆ ತಾನಿವತ್ತು ನಾಂದಿ ಹಾಡುತ್ತಿದ್ದೇನೆ ಎಂಬ ಕಲ್ಪನೆ ಖುದ್ದು ಬರ್ನರ್ಸ್್ಗೂ ಇರಲಿಲ್ಲ. ಎಲ್ಲ ಸರ್ವರ್್ಗಳಿಗೂ ಕಳುಹಿಸಲಾಗಿದ್ದ ಸಂದೇಶವನ್ನು ಕೆಲವರಂತೂ ಓದಿದರು. ಹಾಗೆ ಓದಿದವರ ಕಣ್ಣಿನಲ್ಲಿ ನ್ಯೂಸ್ ಗ್ರೂಪ್್ನ ಸಂದೇಶ ಸಾಧ್ಯತೆಗಳ ನಕ್ಷತ್ರವನ್ನೇ ಮಿನುಗಿಸಿತು. ಅಕ್ಷರ, ಚಿತ್ರಗಳು, ವಿಡಿಯೋ, ಲಿಂಕ್್ಗಳು ಎಲ್ಲವನ್ನೂ ಪಡೆಯಬಹುದಾದ ಮಹತ್ ಸಾಧ್ಯತೆಯಾಗಿ ವರ್ಲ್ಡ್ ವೈಡ್ ವೆಬ್ ತೆರೆದುಕೊಂಡಿತು.

ಇಂಟರ್ನೆಟ್್ನ ಮೂಲ ಸಂಶೋಧಕ ಈತನಲ್ಲದಿರಬಹುದು. ಅದು ಅಮೆರಿಕದ ಡಿಫೆನ್ಸ್ ಎಸ್ಟಾಬ್ಲಿಷ್್ಮೆಂಟ್್ನ ಹಿಡಿತದಲ್ಲಿತ್ತು. ಎರಡನೇ ಮಹಾಯುದ್ಧದ ನಂತರ ಅವರು ಅಂಥದ್ದೊಂದು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದರು. ಅದು ಒಂದೆಡೆಯಿಂದ ಮತ್ತೊಂದೆಡೆಗೆ ಮಾಹಿತಿ ರವಾನಿಸುವುದಕ್ಕಷ್ಟೇ ಬಳಕೆಯಾಗುತ್ತಿತ್ತು. ಆ ವ್ಯವಸ್ಥೆ ಯಾರೋ ಒಬ್ಬರ ಏಕಸ್ವಾಮ್ಯಕ್ಕೆ ಒಳಪಡಬಾರದು ಎಂಬ ಯೋಚನೆಯಿಂದ ಒಂದು ಟೆಲಿಫೋನ್ ಲೈನ್ ಹಾಗೂ ಕಂಪ್ಯೂಟರ್ ಬಳಸಿಕೊಂಡು ಟಿಮ್ ಮಾಹಿತಿ ರವಾನೆ ಮಾಡಲು ಯತ್ನಿಸಿ, ಯಶಸ್ವಿಯಾದರು. ಆ ಮೂಲಕ ಇಂಟರ್ನೆಟ್ ಮೇಲೆ ಅಮೆರಿಕ ಹೊಂದಿದ್ದ ಮೊನೊಪಲಿಯನ್ನು ಹೊಡೆದು, ಜನಸಾಮಾನ್ಯರಿಗೂ ತಲುಪುವಂತೆ ಮಾಡಿದರು. ಒಂದು ಸಣ್ಣ ಅನ್ವೇಷಣೆ ಮಾಡಿದರೂ ಪೇಟೆಂಟ್ ಮಾಡಿಕೊಂಡು ಬಿಡುವವರ ನಡುವೆಯೂ, ಲೀ ಅದನ್ನು ಪೇಟೆಂಟ್ ಮಾಡಿಕೊಂಡು ತನ್ನ ವಶದಲ್ಲಿಟ್ಟುಕೊಳ್ಳಲು, ದುಡ್ಡು ಮಾಡಲು ಪ್ರಯತ್ನಿಸದೇ ವೆಬ್ಬನ್ನು ಡೆಮೊಕ್ರಟೈಸ್ ಮಾಡಿದರು.

ಅತನನ್ನು ನೆನಪಿಸಿಕೊಳ್ಳಲು ಕಾರಣವೇನಿರಬಹುದೆಂದು ಅಂದುಕೊಂಡಿರಿ?

ಮಾರ್ಚ್ ಕೊನೆ ವಾರ ಹೈದರಾಬಾದ್್ನಲ್ಲಿ ವೆಬ್ ಬಗ್ಗೆ ಒಂದು ವಿಚಾರ ಸಂಕಿರಣ ಏರ್ಪಾಡಾಗಿತ್ತು. ವರ್ಲ್ಡ್ ವೈಡ್ ವೆಬ್ ಒಕ್ಕೂಟದ ನಿರ್ದೇಶಕರಾಗಿರುವ ಸರ್. ಟಿಮ್ ಬರ್ನರ್ಸ್ ಲೀ ಕೂಡ ಅಗಮಿಸಿದ್ದರು. ಪಕ್ಕದ ಚಿತ್ರವನ್ನು ನೋಡಿ, ಒಂದು ಮೂಲೆಯಲ್ಲಿ ಅಬ್ಬೆಪಾರಿಯಂತೆ ಕುಳಿತಿರುವ ವ್ಯಕ್ತಿಯೇ ಟಿಮ್. ಈ ಫೋಟೋ ‘ಬ್ಯುಸಿನೆಸ್ ಲೈನ್್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು ಸಣ್ಣ ಸಂದರ್ಶನ ಕೊಡಿ ಎಂದು ಹೋದರೆ, No, not now. Perhaps, some time later ಎಂದರಂತೆ ಲೀ! ಪ್ರಚಾರಕ್ಕಾಗಿ ಮುಗಿಬೀಳುವವರು, ಹತಾಶರಂತೆ ಹಾತೊರೆಯುವವರು, ಪತ್ರಿಕೆಗಳ ಜತೆ ಡೀಲ್ ಮಾಡಿಕೊಂಡು ಆತ್ಮರತಿಯನ್ನು (ಅಡ್ವರ್ಟೈಸ್್ಮೆಂಟ್) ನೈಜ ಸುದ್ದಿಯಂತೆ ದುಡ್ಡು ಕೊಟ್ಟು ಪ್ರಕಟಿಸಿಕೊಳ್ಳುವವರು, ಯಾವೊಂದೂ ಸಾಧನೆ ಮಾಡದಿದ್ದರೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವವರು, ಪದ್ಮಶ್ರೀಗಾಗಿ ಲಾಬಿ ಮಾಡುವವರು, ವೇದಿಕೆಯ ಹಿಂದಿನ ಸೀಟಿನಲ್ಲಿ ಕೂರಿಸಿದರು ಎಂದು ಮುನಿಸಿಕೊಳ್ಳುವವರು ತುಂಬಿರುವ ಕಾಲದಲ್ಲಿ ಪ್ರಚಾರ-ಪ್ರಶಂಸೆ ತಾನಾಗಿಯೇ ಅರಸಿಕೊಂಡು ಬಂದರೂ ಬೇಡವೆನ್ನುವ ಟಿಮ್ ಲೀಯಂಥವರಿದ್ದಾರೆ ಎಂಬುದು ಮಹದಾಶ್ಚರ್ಯ. ನಿಷ್ಕಾಮ ಕರ್ಮ, ನಿಜವಾದ ಧರ್ಮಎಂಬ ಮಾತು ಇಂತಹ ವ್ಯಕ್ತಿಗಳಿಗಾಗಿಯೇ ಸೃಷ್ಟಿಯಾಯಿತೇನೋ? ಈ ಮೇಲಿನ ಫೋಟೋವನ್ನು ನೋಡಿದಾಗ ಆತನ ಬಗ್ಗೆ ಹೇಳಬೇಕೆನಿಸಿತು

ಕೃಪೆ : ಪ್ರತಾಪ ಸಿಂಹ