ನನ್ನ ಬ್ಲಾಗ್ ಪಟ್ಟಿ

ಬುಧವಾರ, ಜೂನ್ 29, 2011

ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗೌರವಪೂರ್ವಕ ವಂದನೆಗಳು. ಜೂನ್ 25ರಂದು ನಾನು ಬರೆದ ‘ಧೀರೇಂದ್ರ ಬಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?’ ಎಂಬ ಲೇಖನದಲ್ಲಿ ನಿಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ, ನಿಮ್ಮ ಮಾತು ಧೋರಣೆಯಲ್ಲಿ ಯಡಿಯೂರಪ್ಪನವರ ಪಕ್ಷಪಾತಿಯಾಗಿರುವುದು ಕಾಣುತ್ತದೆ ಎಂಬ ವಾಸ್ತವದ ಯಥಾ ಚಿತ್ರಣಕ್ಕೆ ಪ್ರತಿಯಾಗಿ, ಪ್ರತ್ಯುತ್ತರದ ರೂಪದಲ್ಲಿ ಲೇಖನವನ್ನೇ ಬರೆದು ಕಳುಹಿಸಿದ್ದು ಖಂಡಿತ ಸ್ವಾಗತಾರ್ಹ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ನಿಮಗೆ ಕೆಲವು ಪ್ರಶ್ನೆಗಳನ್ನೂ ಕೇಳಬೇಕೆಸುತ್ತಿದೆ. ನಿಮ್ಮ ಮೇಲಿನ ಗೌರವದ ನೆಲೆಯಲ್ಲೇ ಈ ಚರ್ಚೆಗೆ ಅನುವು ಮಾಡಿಕೊಡಿ. ಪೂಜ್ಯರೆ, ‘ವ್ಯಕ್ತಿ ದ್ವೇಷದ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ’ ಎಂದು ಹೇಳಿದ್ದೀರಲ್ಲಾ, ನಿಮ್ಮನ್ನು ರಾಜಕೀಯಕ್ಕೆ ಎಳೆದು ತಂದಿರುವವರಾಗಲಿ, ತರಲು ಪ್ರಯತ್ನಿಸುತ್ತಿರುವವರಾಗಲಿ ಯಾರು ನೀವೇ ಹೇಳಿ? ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಜತೆ ಸಂಧಾನಕ್ಕೆ ಯತ್ನಿಸಿದರು ಎಂದು ಅರೋಪ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಅದಕ್ಕೆ ಪ್ರತಿಯಾಗಿ ತೊಡೆತಟ್ಟಿ ‘ಆಣೆ’ ಸವಾಲು ಹಾಕಿದ್ದು ಸಿಎಂ ಯಡಿಯೂರಪ್ಪನವರು. ಅವರಿಬ್ಬರೂ ರಾಜಕಾರಣಿಗಳು. ಆರೋಪ, ಪ್ರತ್ಯಾರೋಪಗಳು ಅವರ ನಿತ್ಯಕಾಯಕ ಹಾಗೂ ಬದುಕಿನ ದೈನಂದಿನ ಸಮಸ್ಯೆ, ಸವಾಲುಗಳು. ಇವರಿಬ್ಬರ ನಡುವೆ ಇದೇ ಮೊದಲೇನು ಇಂತಹ ಆರೋಪ, ಸವಾಲುಗಳು ಎದುರಾಗಿದ್ದಲ್ಲ. ಯಡಿಯೂರಪ್ಪನವರು ಹಿಂದೊಮ್ಮೆ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ಅಬ್ಬರಿಸಿ ಕೊನೆಗೆ ಮೌನಕ್ಕೆ ಶರಣಾಗಿದ್ದು ಗೊತ್ತೇ ಇದೆ. ಈಗ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಡುವೆ ಯಾವ ಮಟ್ಟದ ಸಂಘರ್ಷ ನಡೆಯುತ್ತಿದೆಯೋ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡ ಹಾಗೂ ಕೃಷ್ಣ ಅವರ ನಡುವೆ ಇದಕ್ಕೂ ದೊಡ್ಡ ಬೀದಿ ಜಗಳ ನಡೆದಿತ್ತು.
ಕರ್ನಾಟಕದ ಮಹಾಜನತೆಗೆ ಅದೆಲ್ಲ ಗೊತ್ತು, ಕಿತ್ತಾಡಿಕೊಂಡು ಸುಮ್ಮನಾಗುತ್ತಾರೆ ಎಂಬುದೂ ತಿಳಿದಿದೆ. ಹಾಗಿರುವಾಗ ‘ನಾನು ಕುಮಾರಸ್ವಾಮಿಯವರಿಗೆ ಕರೆ ಮಾಡಿ, ಈ ಆಣೆ, ಪ್ರಮಾಣವನ್ನು ಕೈಬಿಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪನವರಿಗೂ ಇದೇ ಮಾತನ್ನು ಹೇಳಿದ್ದೇನೆ’ ಎಂದು ಹೇಳಿಕೊಂಡವರು ಯಾರು ಸ್ವಾಮೀಜಿ? ಇಷ್ಟಕ್ಕೂ ಮಾಧ್ಯಮಗಳಾಗಲಿ, ಯಡಿಯೂರಪ್ಪ-ಕುಮಾರಸ್ವಾಮಿಯವರಾಗಲಿ ನಿಮ್ಮ ಸಲಹೆ ಕೇಳಿದ್ದರೆ? ಮಧ್ಯಸ್ಥಿಕೆ ವಹಿಸಿ ಎಂದು ಯಾರಾದರೂ ನಿಮ್ಮನ್ನು ಒತ್ತಾಯಿಸಿದ್ದರೆ ಅಥವಾ ಕರೆದಿದ್ದರೆ ಏಕಾಗಿ, ತಾವು ರಾಜಕೀಯ ಪ್ರಹಸನಕ್ಕೆ ತಲೆಹಾಕಿದಿರಿ? ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರ ರಾಜಕೀಯ ವ್ಯಕ್ತಿಗಳ ಅಣೆ ಅಖಾಡವಾಗಬಾರದು ಎಂಬ ಕಳಕಳಿಯಿಂದ ಹೇಳಿದೆ ಎನ್ನುತ್ತೀರಲ್ಲಾ, ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯವನ್ನು ಇಷ್ಟು ವರ್ಷಗಳಿಂದ ಕಾಪಾಡುತ್ತಾ ಬಂದಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅದರ ಉಸಾಬರಿ ನೋಡಿಕೊಳ್ಳುತ್ತಾರೆ ಬಿಡಿ. ಇಷ್ಟಕ್ಕೂ ಅವರೇನು ಉಡುಪಿಯ ನಿಮ್ಮ ಮಠದಲ್ಲಿ ಆಣೆ ಮಾಡುತ್ತೇವೆಂದು ಹೇಳಿರಲಿಲ್ಲವಲ್ಲಾ? ಅಲ್ಲದೆ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಹಾಕುವುದು, ಹರಕೆ ಕೊಡುವುದು ಹೊಸದೇನೂ ಅಲ್ಲ.
ಇನ್ನು ಪಾವಿತ್ರ್ಯ ಕಾಪಾಡುವ ಪ್ರಶ್ನೆ ಎಲ್ಲಿಂದ ಬಂತು? ನೀವಾಗಿಯೇ ರಾಜಕೀಯ ತಿಕ್ಕಾಟದಲ್ಲಿ ಹಸ್ತಕ್ಷೇಪ ಮಾಡಿ, ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ ಎಂಬುದು ಎಂತಹ ಮಾತು ಸ್ವಾಮೀಜಿ? ಕರ್ನಾಟಕದಲ್ಲಿ ಆಗಾಗ್ಗೆ ಎದ್ದ ಬಂಡಾಯದಿಂದ ಬೇಸತ್ತಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರು ತಮ್ಮನ್ನು ಭೇಟಿ ಮಾಡಲು 2 ಬಾರಿ ಯಡಿಯೂರಪ್ಪನವರಿಗೆ ಅವಕಾಶ ನಿರಾಕರಿಸಿದ್ದಾಗ ಮಧ್ಯಸ್ಥಿಕೆ ವಹಿಸಿದ್ದು ಯಾರು? ರಾಜಕಾರಣಿಗಳ ಮನೆಗೆ ಪಾದಪೂಜೆ ಮಾಡಿಸಿಕೊಳ್ಳಲು ಹೋಗುವವರು ಯಾರು ಎಂಬುದನ್ನು ಶ್ರೀಗಳು ನೆನಪಿಸಿಕೊಳ್ಳುವುದೊಳಿತು. ‘ವ್ಯಕ್ತಿ ದ್ವೇಷದ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ’ ಎಂಬ ನಿಮ್ಮ ಅಳಲು ಅರ್ಥವಾಗುತ್ತದೆ ಬಿಡಿ. ಲಾಭವಾಗುವುದಿದ್ದರೆ ನೀವು ಯಾರನ್ನೂ ಎದುರುಹಾಕಿಕೊಳ್ಳುವುದಿಲ್ಲ ಎಂಬುದು ತಿಳಿದಿರುವ ಸಂಗತಿಯೇ. ದಿಲ್ಲಿಯ ವಸಂತ್್ಕುಂಜ್್ಲ್ಲಿರುವ ನಿಮ್ಮ ಮಠದ ಅರ್ಧ ಎಕರೆ ಜಮೀನನ್ನು ಕೊಟ್ಟಿದ್ದು ನರಸಿಂಹರಾವ್. ದೇವೇಗೌಡರು ಪ್ರಧಾನಿಯಾದಾಗ ಇನ್ನೂ ಒಂದು ಎಕರೆ ಪಡೆದುಕೊಂಡಿರಿ. ಹಾಗಿರುವ ವ್ಯಕ್ತಿ ದ್ವೇಷದ ರಾಜಕೀಯ ಮಾಡಲು ಹೇಗೆ ಸಾಧ್ಯ ಸ್ವಾಮೀಜಿ?
ರಾಜಕೀಯ ನಿಮ್ಮ ಕಾರ್ಯಸೂಚಿಯಿಂದ ಯಾವತ್ತು ಹೊರಗಿತ್ತು ಹೇಳಿ?
ಉಮಾಭಾರತಿಯವರಿಗೆ ದೀಕ್ಷೆ ನೀಡಿದ್ದು, ಆಕೆ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅದಕ್ಕಾಗಿ ಮಂಗಳೂರಿನಿಂದ ಪುತ್ತೂರಿನವರೆಗೂ ಉಮಾಭಾರತಿ ಜತೆ ಕಾರಲ್ಲಿ ತೆರಳಿ ಸಂಘಪರಿವಾರದ ನೇತಾರರನ್ನು ಭೇಟಿ ಮಾಡಿಸಿ ಭೂಮಿಕೆ ಸಿದ್ಧಪಡಿಸಿದ್ದು ಯಾರು? ನೀವೇ ಅಲ್ಲವೆ? 2004ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ‘ಎಸ್.ಎಂ. ಕೃಷ್ಣ ಅವರೇ ಪುನರಾಯ್ಕೆಯಾಗುತ್ತಾರೆ’ ಎಂದು ನೀವು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು ರಾಜಕೀಯ ಹಸ್ತಕ್ಷೇಪದ ದ್ಯೋತಕವೇ ಅಲ್ಲವೆ? ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ವಿಷಯಕ್ಕೆ ಬನ್ನಿ. ಸಚಿವ ಸೋಮಣ್ಣನವರ ವಿರುದ್ಧ ಕಾಂಗ್ರೆಸ್ ನೇತಾರ ಲೇಔಟ್ ಕೃಷ್ಣಪ್ಪನವರ ಪುತ್ರ ಪ್ರಿಯ ಕೃಷ್ಣ ಸ್ಪರ್ಧೆಗಿಳಿದಿದ್ದರು. ಬಹಳ ಜಿದ್ದಾಜಿದ್ದಿನಿಂದ ಕೂಡಿದ್ದ ಸಮರವದು. ಅಂತಹ ವೇಳೆಯಲ್ಲಿ ಪ್ರಿಯ ಕೃಷ್ಣ ಅವರ ಮನೆಗೆ ಅಬ್ಬರದಿಂದ ಹೋಗಿ ಪಾದಪೂಜೆ ಮಾಡಿಕೊಂಡಿರಲ್ಲಾ ನಿಮ್ಮನ್ನು ಗೌರವಿಸುವ ಆ ಕ್ಷೇತ್ರದ ಮತದಾರನಿಗೆ ಅದು ಯಾವ ಸಂದೇಶ ಕೊಡುವಂತಿತ್ತು?
ಇನ್ನು ‘ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ವಿರೋಧಿಸುವುದಲ್ಲ, ಎಲ್ಲಾ ಭ್ರಷ್ಟಾಚಾರಗಳನ್ನೂ ವಿರೋಧಿಸುತ್ತೇನೆ’ ಎಂಬ ನಿಮ್ಮ ಮಾತು ನಿಜಕ್ಕೂ ಸ್ಪಷ್ಟೋಕ್ತಿಯೇ ಸ್ವಾಮೀಜಿ? ಹಾಗಾದರೆ ಲಾಬಿ ಮಾಡುವುದು, ಭ್ರಷ್ಟರಿಂದ ದೇಣಿಗೆ ಪಡೆಯುವುದೂ ಭ್ರಷ್ಟಚಾರದ ಭಾಗಗಳೇ ಅಲ್ಲವೆ? ಈ ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ನಷ್ಟ ತಂದ 2ಜಿ ಹಗರಣದ ಪ್ರಮುಖ ರೂವಾರಿ ನೀರಾ ರಾಡಿಯಾಳನ್ನು ನನ್ನ ಶಿಷ್ಯೆ ಎಂದು ಹೇಗೆ ಹೇಳುತ್ತೀರಿ ಶ್ರೀಗಳೆ? ‘ಮಿಡ್ ಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಕೆ ನನ್ನ ಆಪ್ತ ಶಿಷ್ಯೆ ಎಂದು ನೀವೇ ಹೇಳಿಕೊಂಡಿಲ್ಲವೆ? ದಿಲ್ಲಿಯ ಮಠ ಕಟ್ಟುವಾಗ ಆಕೆಯಿಂದ ದೇಣಿಗೆ ಪಡೆದಿರಲ್ಲಾ ಅದು ಸರಿನಾ? ಆಕೆಗೂ ನನಗೂ ಯಾವ ಸಂಪರ್ಕವೂ ಇಲ್ಲ ಎನ್ನುತ್ತೀರಿ, ಹಾಗಿದ್ದರೆ ಆಕೆ ಏಕಾಗಿ ದಕ್ಷಿಣದ ಅಂಚಿನಲ್ಲಿರುವ ಮಠದ ಯತಿಯೊಬ್ಬರಿಗೆ ದೇಣಿಗೆ ನೀಡಿದಳು? ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ಔಟ್್ಲುಕ್್’ನ 2010 ಡಿಸೆಂಬರ್ 6ರ ಸಂಚಿಕೆಯ
Niira, Of Two Eyes ಎಂಬ ಲೇಖನದಲ್ಲಿ ರಾಡಿಯಾಳನ್ನು ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೇ ನೀವು ಎಂದು ಬರೆಯಲಾಗಿದೆಯಲ್ಲಾ ಇದು ಏನನ್ನು ಸೂಚಿಸುತ್ತದೆ?
ಒಮ್ಮೆ ಶಿಷ್ಯೆ ಎನ್ನುತ್ತೀರಿ, ಮಗದೊಮ್ಮೆ ಆಕೆ ಜತೆ ಯಾವ ಸಂಪರ್ಕವೂ ಇಲ್ಲ ಎನ್ನುತ್ತೀರಿ, ದೇಣಿಗೆ ಪಡೆದುಕೊಂಡಿದ್ದು ನಿಜ ಎಂದು ಒಪ್ಪಿಕೊಳ್ಳುತ್ತೀರಿ, ಇದರ ಅರ್ಥವೇನು? ಹಿಂದಿರುವ ಮರ್ಮವೇನು ಸ್ವಾಮೀಜಿ? ಆಕೆ ನೀಡಿದ ದೇಣಿಗೆ ಮೊತ್ತವೆಷ್ಟು? 50 ಕೋಟಿ ಎಂಬ ಅನುಮಾನಗಳಿದ್ದು, ಎಷ್ಟೆಂದು ನೀವೇ ಹೇಳಬಹುದಲ್ಲವೆ? ಭ್ರಷ್ಟಾಚಾರಿಗಳು ಯಾರೆಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕೇ ಹೊರತು ಮಠಾಧಿಪತಿಗಳಲ್ಲ ಎಂದು ಹೇಳುವ ನೀವು, “I have a good opinion about her and she is in constant touch with me. I even spoke to her about the 2G scam and her tapped conversations. I think she has done nothing wrong” ಎಂದು ‘ಮಿಡ್ ಡೇ’ ಸಂದರ್ಶನದಲ್ಲಿ ರಾಡಿಯಾಗೆ ಶುದ್ಧಹಸ್ತಳೆಂಬ ಸರ್ಟಿಫಿಕೆಟ್ ನೀಡುತ್ತೀರಿ! ಇದೆಂಥಾ ಇಬ್ಬಂದಿ ನಿಲುವು ನಿಮ್ಮದು? ಸ್ವಾಮೀಜಿ, ನಿಮ್ಮ ಮಠದ ಆಯ-ವ್ಯಯ ಪಟ್ಟಿಯನ್ನು ಬಹಿರಂಗ ಮಾಡುವುದಾಗಿ ನೀವು ಹೇಳಿರುವುದು ಸ್ವಾಗತಾರ್ಹ ವಿಷಯವಾಗಿದ್ದರೂ ದೇಣಿಗೆ ಸಂಗ್ರಹಣೆ ವಿಷಯದಲ್ಲೂ ನಾವು ಶುದ್ಧಹಸ್ತತೆಯನ್ನು ನಿರೀಕ್ಷಿಸಬಹುದೇ?
ಯಾವ ಮಾರ್ಗದಲ್ಲಿ ದುಡಿದಿದ್ದರೂ ದೇಣಿಗೆ ನೀಡುತ್ತಿದ್ದಾರೆಂಬ ಏಕಮಾತ್ರ ಕಾರಣಕ್ಕೆ ಸ್ವೀಕರಿಸುವುದು ಸರಿಯೇ?
ಅದಿರಲಿ, ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುವಂಥ ಗಿಮಿಕ್್ಗಳ ಹೊರತಾಗಿ ದಲಿತರನ್ನು ಸಮಾನವಾಗಿ ಕಾಣುವಂಥ ಯಾವ ಕೆಲಸ ನಡೆದಿದೆ? ಚಿತ್ರದುರ್ಗದ ನಮ್ಮ ಮುರುಘರಾಜೇಂದ್ರ ಶ್ರೀಗಳನ್ನು ತೆಗೆದುಕೊಳ್ಳಿ. ದಲಿತರಿಗೂ ಒಂದು ಮಠ ಬೇಕು, ಆ ಸಮುದಾಯವನ್ನೂ ಒಗ್ಗೂಡಿಸಬೇಕೆಂಬುದನ್ನು ಮನಗಂಡು ಮಾದಾರ ಚನ್ನಯ್ಯ ಸ್ವಾಮೀಜಿಯವರಿಗೆ ದೀಕ್ಷೆ ಕೊಟ್ಟಿದ್ದು, ತಮ್ಮ ಮಠಕ್ಕೆ ಸೇರಿದ ಜಮೀನನ್ನು ನೀಡಿ ಮಠ ಸ್ಥಾಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಮುರುಘರಾಜೇಂದ್ರ ಸ್ವಾಮೀಜಿ. ಇಂದು ಮಾದಾರ ಚನ್ನಯ್ಯ ಸ್ವಾಮೀಜಿಯವರು ದಲಿತರನ್ನು(ಎಡ) ಒಗ್ಗೂಡಿಸುತ್ತಿರುವುದು ಮಾತ್ರವಲ್ಲ ತಮ್ಮ ಸಮುದಾಯದವರು ಮತಾಂತರಗೊಳ್ಳುವುದನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಹೇಳಿಕೆಯೊಂದನ್ನು ನೀಡಿದ ಮುರುಘಾ ಶರಣರು ‘ಮಾಂಸಾಹಾರಿಗಳೂ ಬಸವಧರ್ಮ ಸೇರುವುದಕ್ಕೆ ಅಭ್ಯಂತರವಿಲ’್ಲ ಎಂದರು. ಮತಾಂತರದ ಬಗ್ಗೆ ಭಾರೀ ಭಾರಿ ಮಾತನಾಡುವ ನಿಮ್ಮಲ್ಲಿ ಹೇಳಿಕೆಗಳನ್ನು ಹೊರತುಪಡಿಸಿ ಇಂತಹ ಸಹೃದಯತೆ, ಒಳಗೊಳ್ಳುವಿಕೆಯನ್ನು ಕಾಣಲು ಸಾಧ್ಯವೆ? ಹಿಂದೂ ಐಕ್ಯತೆಯ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಸಹಭೋಜನ ಮಾಡೋಣ ಬನ್ನಿ ಎಂದು ಆಹ್ವಾನ ಕೊಟ್ಟಾಗ ಪಲಾಯನ ಮಾಡಿದ್ದೇಕೆ? ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದ್ದೇವೆ ಎನ್ನುವ ನೀವು, ದಲಿತರನ್ನು ಮತ್ತೆ ಪ್ರತ್ಯೇಕವಾಗಿಡುವುದಕ್ಕಿಂತ ನಿಮ್ಮ ಪೂರ್ಣಪ್ರಜ್ಞಾ ವಿದ್ಯಾಪೀಠಗಳ ವಸತಿ ವಿದ್ಯಾರ್ಥಿ ನಿಲಯಗಳನ್ನೇ ದಲಿತ ವಿದ್ಯಾರ್ಥಿಗಳಿಗೂ ಏಕೆ ತೆರೆಯಬಾರದು?
ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ನಿಮ್ಮ ಮಾಧ್ವ ಯುವಕ ವಿದ್ಯಾರ್ಥಿ ನಿಲಯದ ಬಾಗಿಲು ಅನ್ಯ ಜಾತಿ ಹಾಗೂ ದಲಿತರ ಪಾಲಿಗೆ ಮುಚ್ಚಿರುವುದೇಕೆ?
ಶ್ರೀಗಳೇ, ನಮ್ಮ ಪುರಾಣ ಪುಣ್ಯಕಥೆಗಳು ಹಾಗೂ ಅವುಗಳಲ್ಲಿರುವ ಮೌಲ್ಯಗಳನ್ನು ನಿಮಗೆ ಹೊಸದಾಗಿ ಹೇಳಿಕೊಡಬೇಕಿಲ್ಲ. ಪತಿವ್ರತೆ ಎಂದು ಗೊತ್ತಿದ್ದರೂ ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ. ಏಕೆಂದರೆ, ಸಮಾಜದ ಅಭಿಪ್ರಾಯಕ್ಕೆ ಆತ ಮಣಿಯಬೇಕಾಯಿತು. ಶಮಂತಕ ಮಣಿಯನ್ನು ಕದಿಯದಿದ್ದರೂ ಶ್ರೀಕೃಷ್ಣ ಆರೋಪ ಹೊತ್ತು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಾಗಿ ಬಂತು. ಹಾಗಿರುವಾಗ ಸಮಾಜದ ಗೌರವಕ್ಕೆ ಪಾತ್ರರಾಗಿರುವ, ಸಮಾಜದ ಸಾಕ್ಷೀಪ್ರಜ್ಞೆಯನ್ನು ಎತ್ತಿಹಿಡಿ ಯುವ ಸ್ಥಾನದಲ್ಲಿರುವ ನೀವು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ನಂಬಬಾರದು ಇನ್ನು ಮುಂತಾದ ಸಬೂಬು ಕೊಟ್ಟು, ತರ್ಕ ಮಾಡಿ ಭ್ರಷ್ಟರನ್ನು ಸಮರ್ಥಿಸುವುದು ಸರಿಯೇ?
ಇಷ್ಟೆಲ್ಲ ಪ್ರಶ್ನೆಗಳ ಹೊರತಾಗಿಯೂ ನಿಮ್ಮನ್ನು ಗೌರವಿಸಲು, ನಿಮ್ಮ ಬಗ್ಗೆ ಹೆಮ್ಮೆಪಡಲು ನಮಗೆ ಸಾಕಷ್ಟು ಕಾರಣಗಳಿವೆ. ಅಯೋಧ್ಯೆ ಚಳವಳಿಗೆ ನೀವು ಧುಮುಕಿದ ರೀತಿ, ಹಿಂದು ಜಾಗೃತಿಗೆ ನೀವು ಕೊಟ್ಟ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಇಂದು ಧರ್ಮಕ್ಕೆ ಎದುರಾಗುವ ಅಪಾಯಗಳು ಮಾತ್ರವಲ್ಲ, ಒಬ್ಬ ಸಾಮಾನ್ಯ ರೈತನಿಗೆ ಸಮಸ್ಯೆ ಎದುರಾದಾಗಲೂ ನೀವು ಧ್ವನಿ ಎತ್ತುತ್ತೀರಿ. ಎಸ್್ಇಝೆಡ್, ನಂದಿಕೂರು ಯೋಜನೆ ವಿಷಯದಲ್ಲಿ ನೀವು ಮಾಡಿದ ಹೋರಾಟ ಖಂಡಿತ ನೆನಪಿದೆ. ಇಂತಹ ನಿಮ್ಮ ಸೇವೆ, ಹೋರಾಟಗಳಿಂದಾಗಿ ನಿಮ್ಮನ್ನು ಮೆಚ್ಚುವ, ಗೌರವಿಸುವ ಅಸಂಖ್ಯ ಅಭಿಮಾನಿಗಳಿದ್ದಾರೆ. ಹಾಗೆ ಮೆಚ್ಚುವವರ ಮನದಲ್ಲೂ ನಿಮ್ಮ ರಾಜಕೀಯ ಸಖ್ಯದ ಬಗ್ಗೆ ಇರುಸು-ಮುರುಸುಗಳಿವೆ. ಈ ಹಿನ್ನೆಲೆಯಲ್ಲಿ, ನಾಡೇ ಮೆಚ್ಚುವ ನೀವು ಭ್ರಷ್ಟ ರಾಜಕಾರಣಿಗಳ ದೊಂಬರಾಟದಿಂದ ದೂರವಿದ್ದು ಧರ್ಮಕಾರ್ಯವನ್ನು ಮುಂದುವರಿಸಬೇಕೆಂಬುದೇ ನಮ್ಮ ವಿನಮ್ರ ಮನವಿ, ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದು ಎಂಬುದೇ ನಮ್ಮ ಕಳಕಳಿ.
ಕೃಪೆ: ಪ್ರತಾಪ ಸಿಂಹ