ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 30, 2011

ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

ಅವರೊಬ್ಬ ಹುಟ್ಟು ಹೋರಾಟಗಾರ, ಅವರ ಸಿಡುಕು ಮುಖದ ಹಿಂದಿದ್ದಿದ್ದು ಸಾತ್ವಿಕ ಸಿಟ್ಟು, ಮೂವತ್ತು ವರ್ಷ ಪರಿಶ್ರಮಪಟ್ಟು ಪಕ್ಷ ಕಟ್ಟಿದ್ದೇ ಅವರು. ಇಂತಹ ಹೊಗಳಿಕೆ ಗುಣವಾಚಕಗಳನ್ನು ನಾವು ಇದುವರೆಗೂ ಓದುತ್ತಾ ಕೇಳುತ್ತಾ ಬಂದಿದ್ದೆವು. ಹಾಗೆಂದೇ ನಂಬಿದ್ದೆವು.

ಆದರೆ…

ನಮ್ಮ ನಂಬಿಕೆ ನಿಜವಾಗಿತ್ತಾ? ನಾವು ಭಾವಿಸಿದಂತೆಯೇ ಇದ್ದರಾ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ? ಅವರ ಸಿಡುಕು ಮುಖದ ಹಿಂದೆ ಇದ್ದಿದ್ದು ನಿಜಕ್ಕೂ ಸಾತ್ವಿಕ ಸಿಟ್ಟಾ? ಇಷ್ಟಕ್ಕೂ ನಿಜವಾದ ಯಡಿಯೂರಪ್ಪ ಯಾರು? ನಾವು ನಂಬಿಕೊಂಡು, ಕಲ್ಪಿಸಿಕೊಂಡು, ಗೌರವಿಸಿಕೊಂಡು ಬಂದಿದ್ದ ವ್ಯಕ್ತಿಯಾ ಅಥವಾ ಈಗ ಕಾಣುತ್ತಿರುವ ಅಧಿಕಾರಲಾಲಸಿ, ಧನದಾಹಿಯಾ?

“ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ಹೈಕಮಾಂಡ್ ಗುರುವಾರ ಬೆಳಗ್ಗೆ ಸೂಚನೆ ನೀಡಿತು. ಆದರೆ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಲವಾರು ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದರು! ಬೆಂಗಳೂರಿನ ರೇಸ್್ಕೇರ್ಸ್್ನಲ್ಲಿನ ತಮ್ಮ ನಿವಾಸಕ್ಕೆ ವಿವಿಧ ಇಲಾಖೆಗಳ ಕಡತಗಳನ್ನು ತರಿಸಿಕೊಂಡ ಸಿಎಂ ಅಲ್ಲಿಯೇ ಸಹಿಹಾಕಿದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಐಎನ್್ಎಸ್ ಪ್ರಸಾದ್, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಶೋಕ್ ಕುಮಾರ್ ಮನೋಳಿ ಮುಂತಾದ ಕೆಲ ಹಿರಿಯ ಅಧಿಕಾರಿಗಳನ್ನು ಕರೆಸಿ ಕಡತ ವಿಲೇವಾರಿ ಮಾಡಿದರು.”

ಈ ಪತ್ರಿಕಾ ವರದಿ ಏನನ್ನು ಸೂಚಿಸುತ್ತದೆ?

ಗುರುವಾರ ಬೆಳಗ್ಗೆ ಬಿಜೆಪಿ ಸಂಸದೀಯ ಸಭೆಯಿಂದ ಹೊರಬಂದ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್, ಬಿ.ಎಸ್. ಯಡಿಯೂರಪ್ಪನವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು 10 ಗಂಟೆಗೆ. ಅಲ್ಲಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣ ಮುಂದುವರಿಯುವ ನೈತಿಕ ಹಕ್ಕನ್ನೂ ಯಡಿಯೂರಪ್ಪನವರು ಕಳೆದುಕೊಂಡರು. ಪಕ್ಷಕ್ಕಿಂತ ಯಾವ ವ್ಯಕ್ತಿಯೂ ದೊಡ್ಡವನಲ್ಲ. ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಯಡಿಯೂರಪ್ಪನವರು ಅದರ ಮುಖ್ಯಸ್ಥರಷ್ಟೇ. ಪಕ್ಷಕ್ಕೆ ವಿಶ್ವಾಸವಿಲ್ಲವೆಂದಾದರೆ ನೇತಾರನನ್ನು ಯಾವ ಕ್ಷಣಕ್ಕೂ ಅದು ಬದಲಿಸಬಹುದು. ಹಾಗೆ ವಿಶ್ವಾಸವಿಲ್ಲ ಎಂದ ಮೇಲೂ ಯಡಿಯೂರಪ್ಪನವರು ಮಾಡಿದ್ದೇನು? ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಯಿರಿ ಎಂದು ಸೂಚಿಸಿದ ನಂತರವೂ ಕಡತಗಳಿಗೆ ಸಹಿಹಾಕುವ ಮೂಲಕ ಅಧಿಕಾರ ಚಲಾಯಿಸಿದ್ದೇಕೆ? ಇದರರ್ಥವೇನು? ಪಕ್ಷದ ಆದೇಶವನ್ನೂ ಧಿಕ್ಕರಿಸುತ್ತಾರೆಂದರೆ ಕಡತಗಳ ಹಿಂದೆ ಯಾವುದೋ ಕಮಾಯಿಯ ಲೆಕ್ಕಾಚಾರವಿರಬೇಕಲ್ಲವೆ? ಇಪ್ಪತ್ತುಕೋಟಿ ರುಪಾಯಿಗಳನ್ನು ಚೆಕ್ ಮೂಲಕ ತೆಗೆದುಕೊಂಡು ಸಿಕ್ಕಿಹಾಕಿಕೊಂಡಿರುವ ಯಡಿಯೂರಪ್ಪನವರೆಷ್ಟು ಸತ್ಯಸಂಧರೆಂಬುದು ಗೊತ್ತೇ ಇದೆ. ಹಾಗಿರುವಾಗ ಕಡತಗಳಿಗೆ ಸಹಿ ಹಾಕಿರುವುದರ ಹಿಂದೆಯೂ ಯಾವುದೋ ಲಾಭ-ನಷ್ಟಗಳ ಲೆಕ್ಕಾಚಾರ ಇರಬೇಕಲ್ಲವೆ? ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲೂ ಕಡತಗಳನ್ನು ವಿಲೇವಾರಿ ಮಾಡುತ್ತಾರೆಂದರೆ ಇವರ 3 ವರ್ಷದ ಆಡಳಿತ ಯಾವ ಉದ್ದೇಶ, ಗುರಿ ಇಟ್ಟುಕೊಂಡು ನಡೆದಿರಬೇಕು ಹೇಳಿ? ಇಂತಹ ವ್ಯಕ್ತಿಯ ವಿರುದ್ಧ ಲೋಕಾಯುಕ್ತರ ವರದಿಯಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಯಾವ ಆಶ್ಚರ್ಯವಿದೆ? ಇವರಿಗೆ ರಾಜಕೀಯ ಅಧಿಕಾರವೆಂಬುದು ತಮ್ಮ ಖಾಸಗಿ ಸಾಮ್ರಾಜ್ಯ ಕಟ್ಟುವುದಕ್ಕಷ್ಟೇ ಬೇಕಾಗಿತ್ತು ಎಂದನಿಸುವುದಿಲ್ಲವೆ? ಒಬ್ಬ ಬಿಜೆಪಿ ಮುಖ್ಯಮಂತ್ರಿಯಿಂದ ಇಂಥದ್ದನ್ನು ನೀವೆಂದಾದರೂ ನಿರೀಕ್ಷಿಸಿದ್ದಿರಾ?

ಅದು 2008, ಸೆಪ್ಟೆಂಬರ್. ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ಆ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ, ಪ್ರಶ್ನೆ ಕೇಳುವ ವಿರಳ ಅವಕಾಶ ದೊರೆತಿತ್ತು. ಮೋದಿಯವರೇ ನಿಮ್ಮ ಯಶಸ್ಸಿನ ಹಿಂದಿರುವ ಗುಟ್ಟೇನು? ಮಹಾಭ್ರಷ್ಟ ಅಧಿಕಾರಶಾಹಿ ವರ್ಗವನ್ನು ಹೇಗೆ ಹತೋಟಿಗೆ ತೆಗೆದುಕೊಂಡಿರಿ? ಅವರ ಭ್ರಷ್ಟತೆಯನ್ನು ಹೇಗೆ ಮಟ್ಟ ಹಾಕಿದ್ದೀರಿ? ಎಂದು ಕೇಳಿದಾಗ, ‘ನಾನು ಏನೂ ಮಾಡಲಿಲ್ಲ. ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡತೊಡಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ವಾಪಸಾಗುವಾಗ 11 ಕಳೆದಿರುತ್ತಿತ್ತು. ನಮ್ಮ ಮುಖ್ಯಮಂತ್ರಿಯೇ ಕೆಲಸ ಮಾಡುತ್ತಿದ್ದಾರೆ, ನಾವ್ಹೇಗೆ ಸುಮ್ಮನೆ ಕುಳಿತುಕೊಳ್ಳುವುದು ಎಂದು ಉಳಿದವರೂ ಸರಿಯಾಗಿ ಕೆಲಸ ಮಾಡಲಾರಂಭಿಸಿದರು. ಸಾಮಾನ್ಯವಾಗಿ ಐಎಎಸ್, ಐಪಿಎಸ್ ಮುಂತಾದ ಅಧಿಕಾರಶಾಹಿ ವರ್ಗದಲ್ಲಿ ಶೇ.80ರಷ್ಟು ಜನ ಒಳ್ಳೆಯವರೇ ಇರುತ್ತಾರೆ. ಆದರೆ 20 ಪರ್ಸೆಂಟ್ ಭ್ರಷ್ಟರ ಹಾವಳಿ ಎಷ್ಟಿರುತ್ತದೆಂದರೆ ಅವರನ್ನು ಎದುರು ಹಾಕಿಕೊಳ್ಳುವ ಬದಲು ಒಂದಿಷ್ಟು ಕಿಸೆಗಿಳಿಸಿಕೊಂಡು ಸುಮ್ಮನಿರುವುದೇ ವಾಸಿ ಎಂಬ ಮನಸ್ಥಿತಿಗೆ ತಲುಪಿರುತ್ತಾರೆ. ನಾನು ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡಲು ಆರಂಭಿಸಿದ್ದನ್ನು ಕಂಡು 80 ಪರ್ಸೆಂಟ್ ಒಳ್ಳೆಯವರು ಉತ್ಸಾಹಿತರಾಗಿ ಕಾರ್ಯಪ್ರವೃತ್ತರಾದರು. ನಾನು ಬಿಡಿಗಾಸನ್ನೂ ಮುಟ್ಟಲಿಲ್ಲ. ಅಯ್ಯೋ, ನಮ್ಮ ಮುಖ್ಯಮಂತ್ರಿಯೇ ಕಾಸು ತೆಗೆದುಕೊಳ್ಳುವುದಿಲ್ಲ. ನಾವೇನಾದರೂ ತೆಗೆದುಕೊಂಡಿದ್ದು ಗೊತ್ತಾದರೆ ಗತಿಯೇನು ಎಂಬ ಭಯದಿಂದ 20 ಪರ್ಸೆಂಟ್ ಭ್ರಷ್ಟರೂ ಸರಿದಾರಿಗೆ ಬಂದರು’ ಎಂದಿದ್ದರು ಮೋದಿ!

ಕಳೆದ ಒಂಬತ್ತು ವರ್ಷಗಳಿಂದ ಗುಜರಾತನ್ನು ಆಳುತ್ತಿರುವ ನರೇಂದ್ರ ಮೋದಿಯವರು ರಾಜಕೀಯ ಪ್ರವೇಶ ಮಾಡಿದ್ದು ಸಂಘದಿಂದ. ಅವರಿಗೆ ಸಂಸ್ಕಾರ ಕೊಟ್ಟಿದ್ದೂ ಸಂಘ. ಆದರೆ ನಮ್ಮನ್ನು ಆಳುತ್ತಿರುವ ಬಿ.ಎಸ್. ಯಡಿಯೂರಪ್ಪನವರನ್ನು ನೋಡಿದಾಗ, ಅವರ ವರ್ತನೆ ಮತ್ತು ಹಪಾಹಪಿಯನ್ನು ಕಂಡಾಗ ಸಂಘಪರಿವಾರದ ಗರಡಿಯಲ್ಲಿ ಪಳಗಿದ ವ್ಯಕ್ತಿ ಇವರೇನಾ ಎಂಬ ಸಂಶಯ ಕಾಡುವುದಿಲ್ಲವೆ? ಇವರು ಸಂಘದ ಶಾಖೆಗೆ ಹೋಗಿ ಕಲಿತಿದ್ದೇನು? ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ದೇಶಪ್ರೇಮಿಗಳ ಕಥೆ ಕೇಳಿ ಜೀವನದಲ್ಲಿ ಅಳಡಿಸಿಕೊಂಡಿದ್ದೇನು? ನಾನು ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ… ಎಂದು ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ‘ಮೋದಿ ಮಾದರಿ’ಯ ಆಡಳಿತ ನಡೆಸುತ್ತೇವೆಂದಿದ್ದ ಯಡಿಯೂರಪ್ಪನವರು ಮಾಡಿದ್ದೇನು? ಒಂಬತ್ತು ವರ್ಷಗಳ ಆಡಳಿತದಲ್ಲಿ ಮೋದಿ ವಿರುದ್ಧ ಭ್ರಷ್ಟಾಚಾರದ ಒಂದು ಸಣ್ಣ ಆರೋಪವನ್ನು ತೋರಿಸಿ ನೋಡೋಣ? ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ, ಪ್ರಧಾನಿಯಾದ ಆರು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಎದುರಿಸದ ಅಟಲ್ ಬಿಹಾರಿ ವಾಜಪೇಯಿ ಮುನ್ನಡೆಸಿದ ಬಿಜೆಪಿಯಲ್ಲಿ ಯಡಿಯೂರಪ್ಪನಂಥವರಿದ್ದಾರೆ ಎಂಬುದೇ ಆಶ್ಚರ್ಯ ತರುವುದಿಲ್ಲವೆ? ಅದ್ಯಾವುದೋ ಕಪೋಲಕಲ್ಪಿತ ಜೈನ್ ಡೈರಿಯಲ್ಲಿ ‘ಎಲ್್ಕೆ’ ಎಂಬ ಎರಡಕ್ಷರಗಳಿವೆ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷಗಾದಿಗೆ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ದೋಷಮುಕ್ತರಾಗುವವರೆಗೂ ರಾಜಕೀಯದಿಂದ ಹೊರಬಂದ ಆಡ್ವಾಣಿಯವರು ಕಟ್ಟಿದ ಪಕ್ಷದಲ್ಲಿ ಇಂಥ ಯಡ್ಡಿ, ರೆಡ್ಡಿಗಳು?!

ಎತ್ತ ಸಾಗುತ್ತಿದೆ ರಾಜ್ಯ ಬಿಜೆಪಿ? ಏನಾಗಿದೆ ಈ ಯಡಿಯೂರಪ್ಪನವರಿಗೆ?

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಕನಿಷ್ಠ ಅರಿವೂ ಇಲ್ಲವೆ? ಪಕ್ಷಕ್ಕೆ ಸಡ್ಡು ಹೊಡೆಯಲು ಹೋದ ಉಮಾಭಾರತಿ ಏನಾದರು? ಆಡ್ವಾಣಿ ವಿರುದ್ಧ ಹರಿಹಾಯ್ದ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಮದನ್್ಲಾಲ್ ಖುರಾನ ರಾಜಕೀಯವಾಗಿ ನಿರ್ನಾಮಗೊಂಡು ಮತ್ತೆ ಪಕ್ಷದ ಕಾಲಿಗೆ ಬಿದ್ದಿದ್ದು ಗೊತ್ತಿಲ್ಲವೆ? ಒಂದು ಲಕ್ಷ ರೂ.ಗಳನ್ನು ರಸೀದಿಯಿಲ್ಲದೆ ಪಕ್ಷದ ನಿಧಿಗೆ ತೆಗೆದುಕೊಂಡಿದ್ದ ಬಂಗಾರು ಲಕ್ಷ್ಮಣ್್ರನ್ನು ವಾಜಪೇಯಿ ಒಂದು ಕ್ಷಣವೂ ನಿಧಾನಿಸದೇ ಮನೆಗೆ ಕಳುಹಿಸಿದ್ದು ನೆನಪಿಲ್ಲವೆ? ಛತ್ತೀಸ್್ಗಢದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದ ಕೇಂದ್ರ ಸಚಿವ ದಿಲೀಪ್ ಸಿಂಗ್ ಜುದೇವ್ ಮೈನಿಂಗ್ ಲೈಸೆನ್ಸ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಾಗ ಅವರನ್ನು ಸಂಪುಟದಿಂದ ತೆಗೆದುಹಾಕಿದ್ದಲ್ಲದೆ ಅವರ ರಾಜಕೀಯ ಜೀವನವೇ ಹೆಚ್ಚೂಕಡಿಮೆ ಮುಗಿಯುವಂತೆ ಮಾಡಿದರು ಅಟಲ್. ಇಂತಹ ಉದಾಹರಣೆಗಳಿರುವಾಗ ರಾಷ್ಟ್ರ ಸೇವಿಕಾ ಸಂಘದಿಂದ ಬಂದ ಶೋಭಾ ಕರಂದ್ಲಾಜೆಯವರ ಬುದ್ಧಿಗೂ ಗರಬಡಿದಿದೆಯೇ? ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಸಂಘದ ಧ್ಯೇಯ, ಧೋರಣೆಯನ್ನು ಈಕೆಯೂ ಮರೆತುಬಿಟ್ಟರೆ? ಏಕೆ ಭ್ರಷ್ಟ ಯಡಿಯೂರಪ್ಪನವರ ಬಾಲಬಡುಕಿಯಂತೆ ವರ್ತಿಸುತ್ತಿದ್ದಾರೆ? ಕಲ್ಯಾಣ್ ಸಿಂಗ್್ಗಾದ ಗತಿ, ವಸುಂಧರಾ ರಾಜೆಯ ಸೊಕ್ಕಡಗಿಸಿದ್ದು, ತಲೆಹರಟೆ ಮಾಡಿದ ಗೋವಿಂದಾಚಾರ್ಯ ಮೂಲೆಗುಂಪಾಗಿದ್ದು ಈ ದುರಂಹಕಾರಿ ಯಡಿಯೂರಪ್ಪ ಮತ್ತು ಅವರ ಜಾತಿ ನಾಯಕರಿಗೆ ತಿಳಿದಿಲ್ಲವೆ? ಆ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಸೋಮಣ್ಣ, ಉಮೇಶ್ ಕತ್ತಿ, ‘ಖಾಲಿ’ ತಲೆಯ ಬಸವರಾಜ ಬೊಮ್ಮಾಯಿಯವರನ್ನು ಅಪ್ತರನ್ನಾಗಿ ಇಟ್ಟುಕೊಂಡಿರುವುದು ಯಡಿಯೂರಪ್ಪನವರು ನೈತಿಕವಾಗಿ ಎಷ್ಟು ಅಧಃ ಪತನಕ್ಕಿಳಿದಿದ್ದಾರೆ ಎಂಬುದರ ಸಂಕೇತವಲ್ಲವೆ? ಈ ರಾಜ್ಯದ ಎಲ್ಲ ಪಕ್ಷಗಳ ಬಾಗಿಲನ್ನೂ ತಟ್ಟಿ, ನಡುಮನೆಗೆ ನುಗ್ಗಿ ಬಂದಿರುವ ಹುಟ್ಟಾ ಅವಕಾಶವಾದಿ ಸೋಮಣ್ಣನ ಬಗ್ಗೆ ಬಿಡಿಸಿ ಹೇಳುವುದಕ್ಕೇನಿದೆ? ಇನ್ನು ಯಾವ ಲಜ್ಜೆಗೇಡಿ ರೇಣುಕಾಚಾರ್ಯ ತಮ್ಮ ಪತನಕ್ಕೆ ಮುಂದಾಗಿದ್ದರೋ ಅಂತಹ ವ್ಯಕ್ತಿಯ ಜತೆ ಗೌಪ್ಯ ಮಾತುಕತೆ ನಡೆಸುತ್ತಿದ್ದಾರಲ್ಲಾ ಈ ಯಡ್ಡಿ ತಲೆಯಲ್ಲೇನು ಲದ್ದಿ ತುಂಬಿದೆಯೇ? ಸಂಘಪರಿವಾರದಿಂದ ಬಂದ ವ್ಯಕ್ತಿ ಈ ರೀತಿ ಜಾತಿ ನಾಯಕರನ್ನು ಸೇರಿಸಿಕೊಂಡು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲಾ..?!

ಈ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರು ಒಂದನ್ನು ಅರ್ಥಮಾಡಿಕೊಳ್ಳಬೇಕು, ಅವರೇನು ನರೇಂದ್ರ ಮೋದಿಯಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ 43 ಹಾಲಿ ಶಾಸಕರಿಗೆ ಟಿಕೆಟ್ ಕೊಡಲಿಲ್ಲ. ಹಾಗೆ ಮಾಡಿಯೂ ಜಯಿಸಿಕೊಂಡರು. ಅದಕ್ಕೆ ಅವರ ನ್ಯಾಯಪರತೆ ಹಾಗೂ ಅಭಿವೃದ್ಧಿ ಕಾರ್ಯಗಳೇ ಕಾರಣ. ಗುಜರಾತ್್ನಲ್ಲಿ ನರೇಂದ್ರ ಮೋದಿಯವರ ಗಾಣಿಗ ಸಮುದಾಯ 0.5 ಪರ್ಸೆಂಟ್್ಗಿಂತ ಕಡಿಮೆ ಇದೆ. ಆದರೂ ಮೋದಿ ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆಯಾಗಿ ಬರುತ್ತಾರೆ. ಕಾರಣ, ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಾಮಾಣಿಕತೆ. ಈ ಎರಡೂ ವಿಷಯಗಳ ಬಗ್ಗೆ ಮಾತನಾಡುವ ಅರ್ಹತೆಯಾದರೂ ಯಡಿಯೂರಪ್ಪನವರಿಗಿದೆಯೆ?

ಭಾರತೀಯ ಜನತಾ ಪಕ್ಷ ಯಾವುದೋ ಒಂದು ಜಾತಿಯ ಅಸ್ತಿಯಲ್ಲ. 2004, 2008ರ ಚುನಾವಣೆಗೂ ಮೊದಲು ಬಿಜೆಪಿಯ ಅಭ್ಯರ್ಥಿಗಳನ್ನು ಸತತವಾಗಿ ಆಯ್ಕೆ ಮಾಡಿ ಕಳುಹಿಸುತ್ತಿದ್ದುದು ಮಂಗಳೂರು, ಉಡುಪಿ, ಉತ್ತರ ಕನ್ನಡ ಮುಂತಾದ ಕರಾವಳಿ ಭಾಗಗಳು ಹಾಗೂ ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗಗಳೇ ಹೊರತು ನಿರಾಣಿ, ಸೋಮಣ್ಣ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯಗಳ ಸಂಬಂಧಿಕರಲ್ಲ. ಬಿಜೆಪಿಗೆ ಈ ರಾಜ್ಯದಲ್ಲಿ ಒಳ್ಳೆಯ ಹೆಸರು ತಂದುಕೊಡುವುದರಲ್ಲಿ ಬ್ರಾಹ್ಮಣರ ಬಹುದೊಡ್ಡ ಪಾಲಿದೆ. ಸಂಖ್ಯಾಬಲದಲ್ಲಿ ಅವರು ನಿರ್ಣಾಯಕವಲ್ಲದಿದ್ದರೂ ಬಿಜೆಪಿಯನ್ನು ಕಟ್ಟಿಬೆಳೆಸಿದವರು ಅವರೇ. ಅಂತಹ ಪಕ್ಷವನ್ನು ಜಾತಿ ಲೆಕ್ಕಾಚಾರಗಳನ್ನು ಮುಂದಿಟ್ಟು ಒತ್ತೆಯಾಗಿಟ್ಟುಕೊಳ್ಳಲು ಯಡಿಯೂರಪ್ಪನವರಿಗೆ ಅವಕಾಶ ಮಾಡಿಕೊಡಬಾರದಲ್ಲವೇ? ಬಿಜೆಪಿಯನ್ನು ಜೆಡಿಎಸ್್ನಂತೆ ಒಂದು ಕುಟುಂಬ, ಒಂದು ಜಾತಿಯ ಒಂದು ಭಾಗದವರ ಪಕ್ಷವಾಗಲು ಬಿಡಬಾರದು ಎಂದೆನಿಸುತ್ತಿಲ್ಲವೇ? 2001ರಲ್ಲಿ ಗುಜರಾತ್್ನಲ್ಲೂ ಹೀಗೇ ಆಗಿತ್ತು. ಕೇಶುಭಾಯಿ ಪಟೇಲರನ್ನು ಇಳಿಸಿ ಮೋದಿಯನ್ನು ಪ್ರತಿಷ್ಠಾಪಿಸಿದಾಗ ಸಂಖ್ಯಾಬಲದಲ್ಲಿ ಬಹಳ ನಿರ್ಣಾಯಕವಾಗಿದ್ದ ಪಟೇಲರ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ಸೃಷ್ಟಿಯಾಗಿತ್ತು. ಆದರೆ 2002, 2007ರಲ್ಲಿ ಮೋದಿ ಭಾರೀ ಬಹುಮತದೊಂದಿಗೆ ಮತ್ತೆ ಆರಿಸಿ ಬಂದರು. ಕರ್ನಾಟಕದಲ್ಲಿ ಬುದ್ಧಿಗೇಡಿ, ಜಾತಿವಾದಿ ಮಠಾಧೀಶರಿರಬಹುದು, ಆದರೆ ಪ್ರಜ್ಞಾವಂತ ಮತದಾರರಿಗೆ ಕೊರತೆಯಿಲ್ಲ. ಹಾಗಾಗಿ ಜಾತಿ ದಾಳದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹೊರಟಿರುವ ಯಡಿಯೂರಪ್ಪನವರನ್ನು ಕಿತ್ತೊಗೆದು, ಬಿಜೆಪಿ ಒಂದು ಸಮುದಾಯದ ಕಪಿಮುಷ್ಠಿಗೆ ಸೇರದಂತೆ ರಕ್ಷಿಸಬೇಕು.

ಇದನ್ನು ಬಿಟ್ಟು ಬಿಜೆಪಿ ಹೈಕಮಾಂಡ್್ಗೂ ಬೇರೆ ದಾರಿಯಿಲ್ಲ.

ಮುಂದಿನ ವಾರವೇ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ. 2ಜಿ ಹಗರಣದ ಮುಖ್ಯ ಆರೋಪಿ ಎ.ರಾಜಾ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಆಗಿನ ವಿತ್ತ ಸಚಿವ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಕೂಡಾ ಇದರಲ್ಲಿ ಭಾಗಿ ಎಂದು ಬೆರಳು ತೋರಿದ್ದಾರೆ. ಭ್ರಷ್ಟ ಯಡಿಯೂರಪ್ಪನವರನ್ನು ಉಚ್ಛಾಟಿಸದೆ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರನ್ನು ಟೀಕಿಸುವುದಕ್ಕಾಗಲೀ, ಸಂಸತ್ತಿನಲ್ಲಿ ಕಾಂಗ್ರೆಸ್ಸನ್ನು ಹಣಿಯುವುದಕ್ಕಾಗಲೀ ಬಿಜೆಪಿಗೆ ಹೇಗೆ ತಾನೇ ಸಾಧ್ಯ? ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡುವುದಕ್ಕಾಗುತ್ತದೆ? ಹಾಗಾಗಿ ಯಡಿಯೂರಪ್ಪನವರನ್ನು ಕಿತ್ತೊಗೆಯಲೇಬೇಕು.

That’s it!

ಕೃಪೆ: ಪ್ರತಾಪ ಸಿಂಹ

ಸೋಮವಾರ, ಜುಲೈ 18, 2011

ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?


ಅವರ ಶಾಲೆಯಲ್ಲಿ ಗಣೇಶ ಚತುರ್ಥಿಯಂದು ವರ್ಷ ವರ್ಷವೂ ಗದ್ದಲ, ಗೌಜು. ಬಹಳ ಭಕುತಿಯಿಂದ ಗಣೇಶನ ಆರಾಧನೆ ನಡೆಯುತ್ತಿತ್ತು. ಮಕ್ಕಳಿಗದು ಸಂಭ್ರಮದ ಕ್ಷಣ. ಪ್ರಸಾದದ ಸ್ವಾದ ಮಕ್ಕಳಲ್ಲಿ ಹೊಸ ಉಮೇದು ಸೃಷ್ಟಿಸುತ್ತಿತ್ತು. ಪೂಜೆಗಾಗಿ ಮಕ್ಕಳಿಂದಲೇ ಒಂದೂವರೆ ಆಣೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇತ್ತ ಅಸಾಧ್ಯ ತಲೆನೋವೆಂದು ಹಾಸಿಗೆ ಹಿಡಿದ ಅಪ್ಪ ಕುಮಾರಸಾಮಿ ಮತ್ತೆಂದೂ ಮೇಲೇಳದ ಸ್ಥಳ ಸೇರಿದ್ದ. ಬೆನ್ನಲ್ಲೇ ಅಜ್ಜ ಚಿನ್ನಪ್ಪ ನಾಡರ್ ಕೂಡ ಅಗಲಿದ್ದ. ಅಂತಹ ಕಷ್ಟದ ಸ್ಥಿತಿಯಲ್ಲೂ ಒಂದೂವರೆ ಆಣೆ ಕೊಟ್ಟ ಬಾಲಕನೊಬ್ಬ ದೇವರಿಗೆ ವಂದಿಸಿ ಪ್ರಸಾದದ ಪಾಲು ಪಡೆಯಲು ಸಾಲಿನಲ್ಲಿ ನಿಂತ. ಸಾಲಿನಲ್ಲಿ ಬಂದೇ ಪ್ರಸಾದ ಪಡೆಯಬೇಕೆಂಬ ಕಟ್ಟುನಿಟ್ಟಾದ ಸೂಚನೆಯಿದ್ದರೂ ವಿದ್ಯಾರ್ಥಿಗಳು ನೂಕುನುಗ್ಗುಲು ಆರಂಭಿಸಿದರು. ಆದರೆ ಈ ಬಾಲಕ ಮಾತ್ರ ಸಾಲಿನಿಂದ ಹೊರಗುಳಿದು ಒಂದು ಮೂಲೆಯಲ್ಲಿ ನಿಂತುಕೊಂಡ. ಸ್ವಲ್ಪ ತಡವಾದರೂ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕೇ ಸಿಗುತ್ತದೆ ಎಂದು ಆತ ಭಾವಿಸಿದ್ದ. ಕೊನೆಗೂ ನೂಕುನುಗ್ಗಲು ಕಡಿಮೆಯಾಯಿತು. ಬಾಲಕನಿಗೆ ಪ್ರಸಾದ ದೊರೆಯಿತು. ಆದರೆ ಪಾಲು ಮಾತ್ರ ಸಣ್ಣದಾಗಿತ್ತು. ಪ್ರಸಾದದಲ್ಲಿ ಸಿಗುವ ವಿವಿಧ ತಿನಿಸುಗಳ ಸಂಖ್ಯೆಯಲ್ಲೂ ಕಡಿತವಾಗಿತ್ತು. ತನಗೆ ಎಷ್ಟು ಸಿಕ್ಕಿತೋ ಅಷ್ಟು ಪ್ರಸಾದದ ಜತೆ ಬಾಲಕ ಮನೆಗೆ ತೆರಳಿದ. ಅದನ್ನು ಕಂಡ ಅಜ್ಜಿ, ‘ಏಕೆ ನಿನಗೆ ಕಡಿಮೆ ಪ್ರಸಾದ ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದಳು. ನಾನು ಎಲ್ಲರಂತೆಯೇ ಒಂದೂವರೆ ಆಣೆ ಕೊಟ್ಟಿದ್ದರೂ ಅವರೇಕೆ ನನಗೆ ಕಡಿಮೆ ಪ್ರಸಾದ ಕೊಟ್ಟರು ಎಂದು ಬಾಲಕ ಮರು ಪ್ರಶ್ನೆ ಹಾಕಿದ. ನೀನೂ ಕೂಡ ಉಳಿದವರಂತೆಯೇ ನೂಕುನುಗ್ಗುಲಿನಲ್ಲಿ ಸೇರಿ ಮೊದಲಿಗೇ ಪ್ರಸಾದ ಪಡೆಯಬೇಕಿತ್ತು ಎಂದು ಅಜ್ಜಿ ದಬಾಯಿಸಿದಳು. ನಾನು ಎಲ್ಲರಂತೆಯೇ ದುಡ್ಡುಕೊಟ್ಟಿದ್ದೇನೆ, ಸಮಪಾಲು ಕೊಡಬೇಕಾಗಿದ್ದು ಶಿಕ್ಷಕರ ಜವಾಬ್ದಾರಿಯಲ್ಲವೆ? ಆತ ತನ್ನ ಜವಾಬ್ದಾರಿಯನ್ನೇಕೆ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಮತ್ತೆ ಪ್ರಶ್ನೆಹಾಕಿದ. ಇಂತಹ ಪ್ರತಿಪ್ರಶ್ನೆಗಳನ್ನು ಎದುರಿಸಲಾರದೆ ಅಜ್ಜಿಯೇ ಬಾಯಿಮುಚ್ಚಿಕೊಂಡಳು. ಪಾಪ, ಆಕೆಗೇನು ಗೊತ್ತಿತ್ತು ತನ್ನ ಮೊಮ್ಮಗ ಮುಂದೊಂದು ದಿನ ಸಾಮಾಜಿಕ ಪಿಡುಗಾಗಿದ್ದ ಅಸಮಾನತೆಯೆ ವಿರುದ್ಧ ಧ್ವನಿಯೆತ್ತುತ್ತಾನೆ, ಇಡೀ ಜನಸಮುದಾಯವನ್ನೇ ಒಗ್ಗೂಡಿಸಿ ಹೋರಾಡುತ್ತಾನೆಂದು?!

ಇದು ಸ್ವಾತಂತ್ರ್ಯ ಹೋರಾಟಗಾರ, ತಮಿಳುನಾಡಿನ ಲೆಜೆಂಡರಿ ಮುಖ್ಯಮಂತ್ರಿಯಾಗಿದ್ದ ಕೆ. ಕಾಮರಾಜರ ಜೀವನಗಾಥೆ!

ನಾಡರ್ ಸಮುದಾಯಕ್ಕೆ ಸೇರಿದ್ದರೂ ಕಾಮರಾಜರ ಅಸಕ್ತಿ ವ್ಯಾಪಾರ ವಹಿವಾಟು ಬಿಟ್ಟು, ಸ್ವಾತಂತ್ರ್ಯ ಹೋರಾಟದತ್ತ ವಾಲಿತ್ತು. 1919ರಲ್ಲಿ ಮಹಾತ್ಮ ಗಾಂಧೀಜಿ ರೌಲತ್ ಕಾಯಿದೆಯ ವಿರುದ್ಧ ಧರಣಿಗೆ ಕರೆ ನೀಡಿದಾಗ 16 ವರ್ಷದ ಕಾಮರಾಜ್ ಕೂಡ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಹೋಮ್್ರೂಲ್ ಚಳವಳಿಯ ನಂತರ ಕಾಂಗ್ರೆಸ್್ನ ಪೂರ್ಣಕಾಲಿಕ ಸದಸ್ಯನಾಗಿ ಬಿಟ್ಟರು. ಪಂಜಾಬ್ ಹತ್ಯಾಕಾಂಡದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಸೂಚನೆ ಕೊಟ್ಟ ನಂತರ ಆತಂಕಿತರಾದ ಕುಟುಂಬಸ್ಥರು ಆತನ ಚಿಕ್ಕಪ್ಪ ಕುರುಪ್ಪಯ್ಯ ನಾಡರ್್ರನ್ನು ಕಳುಹಿಸಿ ಕಾಮರಾಜರನ್ನು ತಿರುವನಂತಪುರದಿಂದ ವಿರುಧ್ ನಗರಕ್ಕೆ ಕರೆಸಿಕೊಂಡರು. ಆದರೂ 1920ರ ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಲಾಗಲಿಲ್ಲ. ಈ ಘಟನೆಯ ನಂತರ ಕಾಮರಾಜರ ಸಾಹಸಕ್ಕೆ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗವೆಂದರೆ ವಿವಾಹ ಎಂಬ ತೀರ್ಮಾನಕ್ಕೆ ಬಂದರು. ಹಾಗಾದರೂ ಮಗ ದಾರಿಗೆ ಬರುತ್ತಾನೆಂಬ ಆಸೆ ತಾಯಿಯದ್ದಾಗಿತ್ತು. ಅದಕ್ಕಾಗಿ ಗೌಪ್ಯ ತಯಾರಿಯೂ ನಡೆಯಿತು. ಆದರೆ ಕಾಮರಾಜರ ಜೀವನ ಧ್ಯೇಯ ಸೇವೆಯಾಗಿತ್ತೇ ಹೊರತು, ಸಾಂಸಾರಿಕ ಬದುಕಿನ ಹಿಂದೆ ಅವರು ಹೊರಟಿರಲಿಲ್ಲ. ಕುಟುಂಬದ ಸದಸ್ಯರ ಯೋಜನೆ ಫಲಿಸಲಿಲ್ಲ. ಕಾಂಗ್ರೆಸ್ ಸೇರಿದ ನಂತರವಂತೂ ಧರಣಿ, ಪ್ರತಿಭಟನೆ ಆಯೋಜಿಸುವುದು ನಿತ್ಯಕಾಯಕವಾಯಿತು. 1857ರಲ್ಲಿ ನಡೆದಿದ್ದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಭಾರತೀಯರನ್ನು ಹಿಂಸಿಸಿದ್ದ ಜನರಲ್ ನೀಲ್್ನ ಪ್ರತಿಮೆಯನ್ನು ಕಿತ್ತೊಗೆಯಲು ಮುಂದಾದರು. 1927ರಲ್ಲಿ ತಮಿಳುನಾಡಿಗೆ ಆಗಮಿಸಿದ್ದ ಗಾಂಧೀಜಿಯವರ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ ಅಹಿಂಸಾ ಮಾರ್ಗದಲ್ಲೇ ಕಿತ್ತೊಗೆಯುವಂತೆ ಸಲಹೆ ನೀಡಿದ್ದರು. ಹೀಗೆ ಕಾಮರಾಜರು ಓದು-ಬರಹಕ್ಕೆ ತಿಲಾಂಜಲಿ ಇತ್ತರೂ ರಾಜಕೀಯವಾಗಿ ಪ್ರಾಮುಖ್ಯತೆಗೆ ಬರಲಾರಂಭಿಸಿದರು. ಕಾಮರಾಜ ಮೊದಲು ಬಂಧನಕ್ಕೊಳಗಾಗಿದ್ದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಾಗ. ಕಲ್ಕತ್ತಾದ ಅಲಿಪುರ್ ಜೈಲಿನಲ್ಲಿ ಎರಡು ವರ್ಷವಿದ್ದರು. ಈ ಮಧ್ಯೆ ತಾಯಿ ಪಾರ್ವತಿ ಅಮ್ಮಳ್್ಳ ಆರೋಗ್ಯ ಹದಗೆಡುತ್ತಾ ಬಂತು. ಮೊಮ್ಮಗನನ್ನು ನೋಡಬೇಕೆಂದು ಕೊನೆ ಕ್ಷಣದವರೆಗೂ ಹಾತೊರೆದರೂ ಕಾಮರಾಜರು ಮಣಿಯಲಿಲ್ಲ. ಸ್ವಾತಂತ್ರ್ಯ ಹೋರಾಟ ಆ ಪರಿ ಅವರನ್ನು ಆವರಿಸಿತ್ತು.

ಕಾಂಗ್ರೆಸ್್ನಲ್ಲಿ ಕಾಮರಾಜರಿಗೆ ‘ಕಿಂಗ್ ಮೇಕರ್್’ ಎಂಬ ಬಿರುದಿತ್ತು.

1931ರಲ್ಲಿ ಮಧುರೈನಲ್ಲಿ ನಡೆದ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಆಗ ತಮಿಳುನಾಡು ಕಾಂಗ್ರೆಸ್್ನಲ್ಲಿ ಎರಡು ಬಣಗಳಿದ್ದವು. ಸಿ. ರಾಜಗೋಪಾಲಚಾರಿ (ರಾಜಾಜಿ) ನೇತೃತ್ವದ ಒಂದು ಬಣವಾದರೆ ಇನ್ನೊಂದು ಬಣಕ್ಕೆ ಎಸ್. ಸತ್ಯಮೂರ್ತಿ ನೇತಾರರಾಗಿದ್ದರು. ಬಡಬಗ್ಗರಿಂದಲೇ ಕೂಡಿದ್ದ ಸತ್ಯಮೂರ್ತಿ ಬಣಕ್ಕೆ ಕವಡೆ ಕಿಮ್ಮತ್ತು ಸಿಗುತ್ತಿರಲಿಲ್ಲ. ಇದರಿಂದ ಕುಪಿತರಾದ ಕಾಮರಾಜ, ಸತ್ಯಮೂರ್ತಿ ಬಣಕ್ಕೆ ಬೆಂಬಲ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸತ್ಯಮೂರ್ತಿಯವರನ್ನು ಮೆರವಣಿಗೆಯಲ್ಲಿ ಕರೆದೊಯ್ದಾಗ ರಾಜಾಜಿ ಬೇಕೆಂದೇ ದೂರ ಉಳಿದಿದ್ದರು. ನಂತರ ನಡೆದ ಸಭೆಯಲ್ಲಿ ಮೊದಲೇ ನಿರ್ಧಾರಿತವಾಗಿದ್ದಂತೆ ರಾಜಾಜಿಯವರನ್ನು ಪ್ರಾದೇಶಿಕ ಕಾಂಗ್ರೆಸ್್ನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆದರೆ ರಾಜಾಜಿ ಬಣದವರು ಉಪಾಧ್ಯಕ್ಷ ಸ್ಥಾನವನ್ನು ಸತ್ಯಮೂರ್ತಿಯವರಿಂದ ತಪ್ಪಿಸಲು ಯತ್ನಿಸಿದಾಗ ಕಾರ್ಯಪ್ರವೃತ್ತರಾದ ಕಾಮರಾಜ, ಅನ್ಯಾಯವನ್ನು ಸರಿಪಡಿಸಿದ್ದಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಯಲ್ಲಿ ಸತ್ಯಮೂರ್ತಿ ಬಣದವರೇ ಆಯ್ಕೆಯಾಗುವಂತೆ ನೋಡಿಕೊಂಡರು. ಹೀಗೆ ರಾಜಾಜಿಯವರು ಉತ್ಸವ ಮೂರ್ತಿಯಂತೆ ಅಧಿಕಾರಾವಧಿ ಪೂರೈಸುವಂತೆ ಮಾಡಿ, ಅಧಿಕಾರ ಚಲಾಯಿಸದಂತೆ ಕೈಕಟ್ಟಿದರು.

ಐಟಿಜಿಛ್ಛಡಿ, ಎಸ್.ಸತ್ಯಮೂರ್ತಿಯವರೇ ಕಾಮರಾಜರ ರಾಜಕೀಯ ಗುರು.

ಈ ಮಧ್ಯೆ ವಿರುಧು ನಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಮರಾಜ ಭಾಗಿಯಾಗಿದ್ದಾರೆಂಬ ಅರೋಪ ಹೊರಿಸಿದರು ಬ್ರಿಟಿಷರು. ಡಾ. ಪಿ. ವರದರಾಜುಲು ನಾಯ್ಡು ಮತ್ತು ಜಾರ್ಜ್ ಜೋಸೆಫ್ ಕಾಮರಾಜರ ಪರವಾಗಿ ವಾದಿಸಿ ಅಮಾಯಕರೆಂದು ಸಾಬೀತುಪಡಿಸಿದರು. 1940ರಲ್ಲಿ ವಾಧ್ರಾದಲ್ಲಿದ್ದ ಗಾಂಧೀಜಿಯವರನ್ನು ಭೇಟಿಯಾಗಲು ಹೋಗುತ್ತಿದ್ದ ಕಾಮರಾಜರನ್ನು ಮತ್ತೆ ಬಂಧಿಸಿ ವೆಲ್ಲೂರು ಜೈಲಿಗೆ ತಳ್ಳಲಾಯಿತು. ಜೈಲಿನಿಂದಲೇ ವಿರುಧು ನಗರ ಮುನ್ಸಿಪಲ್ ಕೌನ್ಸಿಲ್್ಗೆ ಆಯ್ಕೆಯಾದರು. ಗಾಂಧೀಜಿಯವರು ಆರಂಭಿಸಿದ್ದ ಕ್ವಿಟ್ ಇಂಡಿಯಾ ಚಳವಳಿಗೆ ತಯಾರಿ, ಕುಮ್ಮಕ್ಕು ಆರೋಪದ ಮೇಲೆ 1942ರಲ್ಲಿ ಬಂಧನಕ್ಕೊಳಗಾದರು. ಕಾಮರಾಜರ ಬಗ್ಗೆ ಜನರಿಗಾಗಲಿ, ಸ್ಥಳೀಯ ಕಾಂಗ್ರೆಸ್ ನಾಯಕರಿಗಾಗಲಿ ಎಂತಹ ವಿಶ್ವಾಸ, ಗೌರವಿತ್ತೆಂದರೆ 1945ರಲ್ಲಿ ಗಾಂಧೀಜಿ, ನೆಹರು ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ರಾಜಾಜಿಯವರನ್ನು ಸೋಲಿಸಿ ಕಾಮರಾಜರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಗಿತ್ತು. ಹಾಗಂತ ಅವರು ಯಾರ ವಿರುದ್ಧವೂ ವೈಷಮ್ಯ ಸಾಧಿಸಿದವರಲ್ಲ. 1954, ಏಪ್ರಿಲ್ 13ರಂದು ಕೆ. ಕಾಮರಾಜ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾದಾಗ ತಮ್ಮ ನಾಯಕತ್ವದ ವಿರುದ್ಧ ಯಾರು ಸ್ಪರ್ಧಿಸಿದ್ದರೋ ಅಂತಹ ಸಿ. ಸುಬ್ರಹ್ಮಣ್ಯಂ ಮತ್ತು ಎಂ. ಭಕ್ತವತ್ಸಲಂ ಅವರನ್ನೇ ಹಣಕಾಸು ಹಾಗೂ ಕೃಷಿ ಸಚಿವರನ್ನಾಗಿ ಸಂಪುಟಕ್ಕೆ ತೆಗೆದುಕೊಂಡರು! ಜನರ ಅಭ್ಯುದಯವನ್ನಷ್ಟೇ ಬಯಸುವ ವ್ಯಕ್ತಿಯಲ್ಲಿ ಮಾತ್ರ ಇಂತಹ ಹೃದಯ ವೈಶಾಲ್ಯತೆ, ಕಾಳಜಿಯನ್ನು ಕಾಣಲು ಸಾಧ್ಯ.

ವೈಷಮ್ಯವನ್ನೇ ಒಡಲಲ್ಲಿ ತುಂಬಿಕೊಂಡಂತೆ ವರ್ತಿಸುವ ಈಗಿನ ರಾಜಕಾರಣಿಗಳು ಹಾಗೂ ಕಾಮರಾಜರ ನಡುವೆ ಎಂತಹ ವ್ಯತ್ಯಾಸ?

ಬಾಲ್ಯಾವಸ್ಥೆಯಲ್ಲಿ ಅಕ್ಷರ ಕಲಿಕೆಗೆ ಶರಣು ಹೊಡೆದರೂ ಕಾಮರಾಜರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ಗೊತ್ತಿತ್ತು. ತಮಗೂ ಮೊದಲು ಮುಖ್ಯಮಂತ್ರಿಯಾಗಿದ್ದ ಸಿ. ರಾಜಗೋಪಾಲಚಾರಿ ಸರಕಾರ ಹಣಕಾಸು ಮುಗ್ಗಟ್ಟಿನಿಂದ ಮುಚ್ಚಿದ್ದ 6 ಸಾವಿರ ಶಾಲೆಗಳನ್ನು ಮತ್ತೆ ತೆರೆದರು. ಅಷ್ಟೇ ಅಲ್ಲ, 12 ಸಾವಿರ ಹೊಸ ಶಾಲೆಗಳನ್ನು ಆರಂಭಿಸಿದರು. ಪ್ರತಿ ಪಂಚಾಯಿತಿಗೂ ಕನಿಷ್ಠ ಪ್ರಾಥಮಿಕ ಶಾಲೆಯೊಂದಾದರೂ ಇರುವಂತೆ ಮಾಡಿದರು. ಹಾಲಿ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಿದರು. 11ನೇ ತರಗತಿವರೆಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದರು. ಬಡಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧ್ಯಾಹ್ನದ ಊಟ ಯೋಜನೆಯನ್ನು ಜಾರಿಗೆ ತಂದರು. ಅದು ಜಗತ್ತಿನಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿತ್ತು! ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಮಕ್ಕಳ ಮನಸ್ಸಿಗೆ ನಾಟಬಾರದೆಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ಜಾರಿಗೆ ತಂದರು. ಬ್ರಿಟಿಷರ ಕಾಲದಲ್ಲಿ ಮದ್ರಾಸ್ ರಾಜ್ಯದ ಶಿಕ್ಷಣದ ಪ್ರಮಾಣ ಶೇ. 7 ಆಗಿದ್ದರೆ ಕಾಮರಾಜರ ಆಡಳಿತದಲ್ಲಿ ಅದು 37 ಪರ್ಸೆಂಟ್್ಗೇರಿತು! ರಾಜಾಜಿ ಅಧಿಕಾರಾವಧಿಯಲ್ಲಿ 12 ಸಾವಿರ ಇದ್ದ ಶಾಲೆಗಳ ಸಂಖ್ಯೆ ಕಾಮರಾಜ ಆಡಳಿತಾವಧಿಯಲ್ಲಿ 27 ಸಾವಿರಕ್ಕೇರಿದವು. ಪ್ರತಿಷ್ಠಿತ ಐಐಟಿ-ಮದ್ರಾಸ್ ಆರಂಭವಾಗಿದ್ದೂ (1959) ಕಾಮರಾಜರ ಕಾಲದಲ್ಲೇ.

ಮಣಿ ಮುತ್ತುವರ್, ವೈಕೈ, ಅಲಿಯರ್, ಸಾತನೂರ್, ಕೃಷ್ಣಗಿರಿ ಅಣೆಕಟ್ಟುಗಳು ನಿರ್ಮಾಣಗೊಂಡವು. ಮೆಟ್ಟೂರು ಕಾಲುವೆ ನಿರ್ಮಾಣಗೊಂಡಿತು. ಸಣ್ಣ ನಿರಾವರಿ ಯೋಜನೆಯಡಿ ಸಾವಿರಾರು ಭಾವಿಗಳು ರೂಪುಗೊಂಡವು. ರೈತರಿಗೆ ಶೇ. 25ರ ಸಬ್ಸಿಡಿಯಲ್ಲಿ ಸಾಲ ಕೊಟ್ಟರು. ಕಾಮರಾಜರ ಅವಧಿಯಲ್ಲಿ ಒಂದೂವರೆ ಕೋಟಿ ಎಕರೆ ಜಮೀನಿಗೆ ನೀರು ಲಭ್ಯವಾಗಿ ಕೃಷಿ ಕಾರ್ಯ ನಡೆಯಿತು. ಕೈಗಾರಿಕಾ ಕ್ಷೇತ್ರದ ಬಗ್ಗೆ ಹೇಳುವುದಾದರೂ ತಿರುಚಿಯ ಬಿಎಚ್್ಇಎಲ್, ನೈವೇಲಿ ಕಾರ್ಖಾನೆ ತಲೆಯೆತ್ತಿದವು. ಹಾಗಂತ ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1963, ಅಕ್ಟೋಬರ್ 2ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು, ಹಿರಿಯ ಕಾಂಗ್ರೆಸ್ ನಾಯಕರು ಪದವಿ ತೊರೆದು ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಅದು ‘ಕಾಮ್್ರಾಜ್ ಸೂತ್ರ’ವೆಂದೇ ಪ್ರಸಿದ್ಧಿಯಾಯಿತು. ಪ್ರಧಾನಿ ನೆಹರು ಅವರೇ ಅದನ್ನು ಮೆಚ್ಚಿಕೊಂಡರು. ಅದೇ ವರ್ಷದ ಅಕ್ಟೋಬರ್ 9ರಂದು ಕಾಮರಾಜರನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು. ನೆಹರು ತೀರಿಕೊಂಡ ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿ, ಅವರ ಅಕಾಲಿಕ ಅಂತ್ಯದ ನಂತರ ಇಂದಿರಾ ಗಾಂಧಿ ಹೀಗೆ ಉತ್ತರಾಧಿಕಾರತ್ವವನ್ನು ಸುಸೂತ್ರಗೊಳಿಸಿದವರೂ ಕಾಮರಾಜರೇ.

ಈ ದೇಶ ಬಹಳಷ್ಟು ಲೆಜೆಂಡರಿ ಮುಖ್ಯಮಂತ್ರಿಗಳನ್ನು ಕಂಡಿದೆ. ಬಿಜು ಪಟ್ನಾಯಕ್, ನಂಬೂದರಿಪಾಡ್, ಕರ್ಪೂರಿ ಠಾಕೂರ್, ದೇವರಾಜ ಅರಸ್ ಮುಂತಾದವರು ಕಣ್ಣಮುಂದೆ ಬರುತ್ತಾರೆ. ಆದರೆ ‘ಭಾರತ ರತ್ನ’ವೆನಿಸಿದ್ದು ಕೆ. ಕಾಮರಾಜರು ಮಾತ್ರ. ಕೊನೆವರೆಗೂ ಅವಿವಾಹಿತರಾಗಿಯೇ ಉಳಿದು ಜನಸೇವೆ ಮಾಡಿದರು. ಅವರು ಜನಿಸಿದ್ದು 1903, ಜುಲೈ 15ರಂದು. ಇಂದು ಅವರ ಜನ್ಮದಿನ. ಅಂತಹ Towering personality, ಮಹಾನ್ ವ್ಯಕ್ತಿಯ ಹೆಸರನ್ನು ತನ್ನ ಹುಟ್ಟಿನ ಮೂಲದಲ್ಲೇ ಅನೈತಿಕತೆಯನ್ನಿಟ್ಟುಕೊಂಡು ಅನ್ಯರ ಹಾದರದ ಕಥೆ ಹೇಳುವ, ತನ್ನ ಮನಸ್ಸಿನಲ್ಲಿ ತುಂಬಿಕೊಂಡಿರುವ ಕಾಮಪಿಪಾಸೆಯನ್ನು ಹೊರಹಾಕುವ ಅಶ್ಲೀಲ ಪುಸ್ತಕದ ಟೈಟಲ್ ಆಗಿ ಬಳಸಿಕೊಂಡನಲ್ಲಾ ಆ ಅಯೋಗ್ಯ…

ಶೇಮ್!

ಕೃಪೆ: ಪ್ರತಾಪ ಸಿಂಹ

ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

ಇಬ್ರಾಹಿಂ ಖಾನ್

ಇಕ್ಲಾಕ್ ಅಹ್ಮದ್

ಮೊಹಮದ್ ಜಹೀರ್

ಖುರ್ಷಿದ್ ಲಾಲಾ

ಇವರನ್ನು ಬಚಾವ್ ಮಾಡುವುದಕ್ಕಲ್ಲ, ಬಡಿದು ಸಾಯಿಸಲು ನಾನು ಬಯಸಿದ್ದೆ ರಾಥೋಡ್ ಸಾಬ್! Infact, ಆ ಕೆಲಸವನ್ನು ನೀವಿಂದು ಪೂರ್ಣಗೊಳಿಸಲಿದ್ದೀರಿ, ಈಗಲೇ… ಇಷ್ಟಕ್ಕೂ ನಿಮ್ಮ ಮನೆಗೆ ಜಿರಲೆಗಳು ಬಂದರೆ ಏನು ಮಾಡುತ್ತೀರಿ? ಅವುಗಳನ್ನು ಸಾಕಿ ಸಲಹುವುದಿಲ್ಲ, ಬಡಿದು ಸಾಯಿಸುತ್ತೀರಿ. ಈ ನಾಲ್ಕೂ ಜಿರಲೆಗಳು ನನ್ನ ಮನೆಯನ್ನು ಕೊಳಕು ಮಾಡುತ್ತಿದ್ದವು. ಅದನ್ನಿಂದು ಸ್ವಚ್ಛ ಮಾಡುತ್ತಿದ್ದೇನಷ್ಟೇ.

ಅಷ್ಟರಲ್ಲಿ ಮಾತನ್ನು ತುಂಡರಿಸಿದ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಕೇಳುತ್ತಾರೆ, ‘ನೀನ್ಯಾರು?’

ಎಲ್ಲಿ, ಯಾವ ಕ್ಷಣದಲ್ಲಿ ಬಾಂಬ್ ಸಿಡಿಯುತ್ತದೋ ಎಂಬ ಭಯದಿಂದಾಗಿ ಬಸ್ಸು, ಟ್ರೈನು ಹತ್ತುವುದಕ್ಕೂ ಹೆದರುತ್ತಿರುವ ವ್ಯಕ್ತಿಯೇ ನಾನು. ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಟರೆ ಯಾವುದೋ ಯುದ್ಧಕ್ಕೆ ಹೋಗುತ್ತಿದ್ದಾನೆ, ವಾಪಸ್ ಬರುತ್ತಾನೋ ಇಲ್ಲವೋ ಎಂಬ ಭಯ ಆವರಿಸಿಕೊಳ್ಳುವ ಹೆಂಡತಿಯ ಗಂಡ ನಾನು. ಗಂಟೆ ಗಂಟೆಗೂ ಆಕೆ ಕರೆ ಮಾಡುತ್ತಾಳೆ, ಊಟ ಮಾಡಿದೆಯೋ ಇಲ್ಲವೋ, ಚಹಾ ಕುಡಿದೆಯೋ ಇಲ್ಲವೋ ಎಂದು ಕೇಳುತ್ತಾಳೆ. ಏಕೆಂದುಕೊಂಡಿರಿ? ಅವಳ ಉದ್ದೇಶ ಯೋಗಕ್ಷೇವು ವಿಚಾರಣೆಯಾಗಿರುವುದಿಲ್ಲ, ನಾನು ಬದುಕಿದ್ದೇನೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ! ಮುಂಬೈನ ಮಳೆಯಲ್ಲಿ ಮುಳುಗಿ ಸಾಯುತ್ತೇನೆ, ಬಾಂಬ್ ಸ್ಫೋಟದಲ್ಲಿ ಮಡಿಯುತ್ತೇನೆ, ಗಡ್ಡ ಬೆಳೆಸುವವರನ್ನು, ಟೋಪಿ ಹಾಕುವವರನ್ನು ನೋಡಿ ದಿಗಿಲುಗೊಳ್ಳುತ್ತೇನೆ, ವ್ಯಾಪಾರ ಮಾಡೋಣ ಅಂತ ಅಂಗಡಿ ಖರೀದಿ ಮಾಡುತ್ತೇನೆ, ಹೆಸರೇನಿಡಲಿ ಎಂದು ಹೆದರುತ್ತೇನೆ. ದಂಗೆ ವೇಳೆ ಹೆಸರು ನೋಡಿ ಬೆಂಕಿಹಚ್ಚಿಯಾರು ಎಂಬ ಭಯ. ಜಗಳ ಯಾರದ್ದೇ ಆಗಿರಲಿ, ವಿನಾಕಾರಣ ಸಾಯುವವನು ಮಾತ್ರ ನಾನು. ನಿಮಗೆ ದಟ್ಟ ಜನಸಂದಣಿ ಕಾಣುತ್ತದಲ್ಲವೆ ಅದನ್ನು ನೋಡಿ, ಅವನೇ ನಾನು… I am just a stupid common man, wanting to clean his house!

ಮೊನ್ನೆ ಬುಧವಾರ ಮುಂಬೈ ಸರಣಿ ಸ್ಫೋಟ ಸಂಭವಿಸಿದ ನಂತರ, ಅಸಹಾಯಕತೆ-ಹತಾಶೆ-ನೋವು ನಮ್ಮೆಲ್ಲರನ್ನೂ ಆವರಿಸಿರುವ, ದೂರದ ಮುಂಬೈನಲ್ಲಿ ಮಡಿದವರಿಗಾಗಿ ನಮ್ಮ ಮನಸ್ಸು ದುಃಖದ ಮಡುವಿಗೆ ಬಿದ್ದಿರುವ ಈ ಸಂದರ್ಭದಲ್ಲಿ “A wednesday‘ ಚಿತ್ರ ಹಾಗೂ ಅದರಲ್ಲಿ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಮತ್ತು ಕಾಮನ್ ಮ್ಯಾನ್ ನಡುವೆ ನಡೆಯುವ ಸಂಭಾಷಣೆಗಳು ಬಹುವಾಗಿ ಕಾಡುತ್ತಿವೆ. ಭಯೋತ್ಪಾದಕ ದಾಳಿಗಳು, ಹತ್ಯಾಕಾಂಡಗಳು, ತನ್ನವರನ್ನು ಕಳೆದುಕೊಂಡ ನೋವು, ಸರ್ಕಾರದ ಷಂಡತನ ಒಬ್ಬ ಸಾಮಾನ್ಯ ಮನುಷ್ಯನನ್ನು ಹೇಗೆ ಪ್ರತಿ ಭಯೋತ್ಪಾದನೆಗೆ ತಳ್ಳುತ್ತದೆ ಎಂಬುದನ್ನು ಅದರ ಒಂದೊಂದು ಡೈಲಾಗ್್ಗಳೂ ಬಿಚ್ಚಿಡುತ್ತವೆ.

ರಾಥೋಡ್: ಸ್ಟುಪಿಡ್ ಕಾಮನ್ ಮ್ಯಾನ್ ಹೇಗೆ ಹೋದ, ಅದೂ 6 ಕೆಜಿ ಆರ್್ಡಿಎಕ್ಸ್ ಜತೆ?

ಕಾಮನ್ ಮ್ಯಾನ್: ಓ… ನಿಮಗೇನಾದರೂ ಕಷ್ಟವಾಗುತ್ತಿದೆಯೇ ರಾಥೋಡ್ ಸಾಬ್? ನಾನು ಜೀವನವಿಡೀ ನರಳುತ್ತಾ ಸಾಯುತ್ತಿರಬೇಕಿತ್ತಾ? ಇದೆಲ್ಲಾ ಅಚಾನಕ್ಕಾಗಿ ಆಗಿದ್ದಲ್ಲಾ, ಸಮಯ ಸಿಕ್ಕಿರಲಿಲ್ಲ ಅಂದುಕೊಳ್ಳಿ. ಮುರುಕು ರೊಟ್ಟಿ ಸಂಪಾದಿಸುವುದರಲ್ಲೇ ಕಾಲ ಕಳೆದುಹೋಯಿತು.

ರಾಥೋಡ್: ಒಬ್ಬ ಇಬ್ರಾಹಿಂನನ್ನು ನಾವು ಕೊಲ್ಲದಿದ್ದರೆ ನೀನು ಅಮಾಯಕರನ್ನೆಲ್ಲ ಸಾಯಿಸಿ ಬಿಡುತ್ತೀಯಾ?

ಕಾಮನ್ ಮ್ಯಾನ್: ಇಲ್ಲದಿದ್ದರೂ ಅವರು ಇಂದಲ್ಲ ನಾಳೆ, ಒಂದಲ್ಲ ಒಂದು ಸ್ಫೋಟದಲ್ಲಿ ಸತ್ತೇ ಸಾಯುತ್ತಾರೆ ಸಾಬ್. ಇಬ್ರಾಹಿಂ ಖಾನ್್ನಂಥ ವ್ಯಕ್ತಿಗಳೇ ಸಾಯಿಸುತ್ತಾರೆ. ಕಳೆದ ಬಾರಿ ಟ್ರೈನ್್ನಲ್ಲಿ ಸಾಯಿಸಿದ್ದರು, ಈ ಬಾರಿ ಇನ್ನೆಲ್ಲಾದರೂ ಕೊಲ್ಲುತ್ತಾರೆ. ಅವರು ಸಾಯಿಸುತ್ತಿರುವವರೆಗೂ ನಾವು ಉತ್ತರ ಕೊಡುವುದನ್ನು ಕಲಿಯುವುದಿಲ್ಲ.

ರಾಥೋಡ್: ನೀನ್ಯಾರು?

ಕಾಮನ್ ಮ್ಯಾನ್: ಅಂದರೆ?

ರಾಥೋಡ್: ಹಿಂದುವೋ, ಮುಸ್ಲಿಮನೋ ಅಥವಾ…

ಕಾಮನ್ ಮ್ಯಾನ್: ನನಗೆ ಕೊಡುವುದು ತರುವುದು ಏನೂ ಇಲ್ಲ

ರಾಥೋಡ್: ಇದೇ…

ಕಾಮನ್ ಮ್ಯಾನ್: ನಾನು ಹೇಳಿದೆನಲ್ಲಾ, I am just a stupid common man. ಏನನ್ನೂ ಸಾಬೀತುಪಡಿಸುವ ಇರಾದೆ ನನಗಿಲ್ಲ. ನಾನು ನಿಮಗೆ ನೆನಪು ಮಾಡಿಕೊಡಲು ಬಯಸುವುದಿಷ್ಟೇ-ಜನರೊಳಗೆ ಕೋಪ ಮಡುಗಟ್ಟಿದೆ. ಅದನ್ನು ಟೆಸ್ಟ್ ಮಾಡಲು ಹೋಗಬೇಡಿ. We are Resilient by Force, not by Choice. ನಿಮ್ಮನ್ನು ಹೆದರಿಸಲು ನನಗೆ 4 ವಾರ ಸಾಕಾದವು. ಹಾಗಿರುವಾಗ ನಮ್ಮನ್ನು ಕೊಲ್ಲುವವರು ನಮಗಿಂತ ಬುದ್ಧಿವಂತರಾಗಿರಲು ಸಾಧ್ಯವೆ? ಬಾಂಬ್ ಅಂತ ಟೈಪ್ ಮಾಡಿ, ್ನಇಂಟರ್ನೆಟ್್ನಲ್ಲಿ ಸರ್ಚ್ ಕೊಡಿ, 351 ಸೈಟ್್ಗಳು ಸಿಗುತ್ತವೆ. ಬಾಂಬನ್ನು ಹೇಗೆ ತಯಾರಿಸುತ್ತಾರೆ, ಅದಕ್ಕೆ ಬೇಕಾದ ವಸ್ತುಗಳಾವುವು ಎಂಬ ಎಲ್ಲ ಮಾಹಿತಿ ದೊರೆಯುತ್ತದೆ, ಅದೂ ಪುಕ್ಕಟೆಯಾಗಿ! ನಾವು ಬಟ್ಟೆ ತೊಳೆಯಲು ಬಳಸುವ ಸೋಪಿನಲ್ಲೂ ಒಂದು ಬಾಂಬ್ ಮಾಡಲು ಸಾಧ್ಯವಿದೆ ಎಂದು ನಿಮಗೆ ಗೊತ್ತಾ? ಹ್ಞಾಂ, ಒಬ್ಬ ಸಾಮಾನ್ಯ ಮನುಷ್ಯನಿಗೆ ಇದಕ್ಕಿಂತ ಉಪಯುಕ್ತ ಉತ್ಪನ್ನ ಇದುವರೆಗೂ ತಯಾರಾಗಿಲ್ಲ. ತಪ್ಪು ನಮ್ಮದು, ನಾವು ಬಹಳ ಬೇಗ Used ಆಗಿಬಿಡುತ್ತೇವೆ. ಇಂಥ ಘಟನೆಗಳು ಸಂಭವಿಸಿದಾಗ ಚಾನೆಲ್್ಗಳನ್ನು ತಡಕಾಡಿ, ಎಸ್ಸೆಮ್ಮೆಸ್ ಕಳುಹಿಸಿ, ಫೋನ್ ಮಾಡಿ, ಸದ್ಯ ನಾವು ಬದುಕಿದೆವಲ್ಲಾ ಎಂದು ಪರಿಸ್ಥಿತಿ ವಿರುದ್ಧ ಹೋರಾಡುವ ಬದಲು ಅಡ್ಜೆಸ್ಟ್ ಮಾಡಿಕೊಂಡು ಬಿಡುತ್ತೇವೆ. ನಮ್ಮದೂ ಮಜಬೂರಿ ಅಲ್ಲವಾ ಸಾಬ್? ನಮಗೆ ಮನೆ ನಡೆಸುವುದಕ್ಕೆ ಬರುತ್ತದೆ. ಆದರೆ ಸರಕಾರವನ್ನು ಏಕೆ ಚುನಾಯಿಸುತ್ತೇವೆ ಎಂದರೆ ಅದು ದೇಶವನ್ನು ಸಂಭಾಳಿಸಲಿ ಎಂದು. ಸರ್ಕಾರ, ಪೋಲಿಸ್ ಫೋರ್ಸ್, ಇಂಟೆಲಿಜೆನ್ಸ್ ಇನ್ನು ಮುಂತಾದ ನೀವು ‘ಪೆಸ್ಟ್ ಕಂಟ್ರೋಲ್್’ ಇದ್ದಂತೆ, ಆದರೆ ಏನೂ ಮಾಡುವುದಿಲ್ಲ. Why are you not nipping them in the bud? ಏಕೆ ಅವರನ್ನು ಮೊಳಕೆಯಲ್ಲೇ ಚಿವುಟುತ್ತಿಲ್ಲ? ಒಬ್ಬ ಅಪರಾಧಿಯೋ ಅಲ್ಲವೋ ಎಂದು ಸಾಬೀತು ಮಾಡಲು ನಿಮಗೆ 10 ವರ್ಷ ಬೇಕಾಗುತ್ತದೆ. ಇದು ನಿಮ್ಮ ಕಾರ್ಯದಕ್ಷತೆಗೆ ಸವಾಲು ಎಂದೆನಿಸುವುದಿಲ್ಲವೆ? ಈ ನಾಟಕ ನಿಲ್ಲಬೇಕು, This whole bloddy system is flawed!

ರಾಥೋಡ್: ಏಕೆ, ನಿನ್ನವರ್ಯಾರಾದರೂ ಸತ್ತಿದ್ದಾರಾ?

ಕಾಮನ್ ಮ್ಯಾನ್: ಅಲ್ಲೀವರೆಗೂ ನಾನು ಕಾಯಬೇಕಿತ್ತಾ?

ಇಂತಹ ಒಂದೊಂದು ಡೈಲಾಗ್್ಗಳೂ ನಮ್ಮೊಳಗಿಂದು ಮಡುಗಟ್ಟಿರುವ ಭಾವನೆಗಳಿಗೆ ಕನ್ನಡಿ ಹಿಡಿದಿವೆ ಎಂದೆನಿಸುತ್ತಿಲ್ಲವೆ?

ಈ ರೀಲು ರಿಯಲ್ಲಾಗುವ ಹಂತಕ್ಕೆ ಬಂದು ತಲುಪುತ್ತಿರುವ ಹಾಗಿದೆಯಲ್ಲವೆ? ಇನ್ನು ಎಷ್ಟು ದಿನ ಅಂತ ಇದನ್ನೆಲ್ಲಾ ಸಹಿಸಿಕೊಂಡು ಸುಮ್ಮನಿರುತ್ತೀರಿ? ಇನ್ನೆಷ್ಟು ಕಾಲ ಕೈಕಟ್ಟಿ ಕುಳಿತುಕೊಳ್ಳುತ್ತೀರಿ? ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡರೆ ಸಮಾಜ ಸಿಡಿದೇಳದೆ ಬೇರೆ ದಾರಿ ಏನಿದೆ? ಬುಧವಾರದ ಸರಣಿ ಸ್ಫೋಟದಲ್ಲಿ ಪ್ರಿಯಾ ಎನ್ನುವ ಹುಡುಗಿಯ ಕೈ ತುಂಡಾಗಿದೆ, ಮಹೇಶ್ ಕರ್ಮಚಾರಿ ಎಂಬ ಹಸುಳೆ ಜೀವನ್ಮರಣದ ನಡುವೆ ಹೋರಾಡುತ್ತಿದೆ. ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದರ ದುಃಖ, ಅಂಗಾಂಗಗಳು ಊನಗೊಂಡು ಜೀವನ ನಿತ್ಯ ನರಕವಾಗುವ ನೋವು ಈ ಸರ್ಕಾರಕ್ಕೆ ಅರ್ಥವಾಗುವುದು ಯಾವಾಗ? ಅಥವಾ ಅರ್ಥವಾಗಲಿ ಎಂದು ಆಶಿಸುತ್ತಾ ಕುಳಿತುಕೊಳ್ಳಬೇಕಾ? ಸಾವು ಅನಿವಾರ್ಯ, ಆದರೆ ಈ ರೀತಿ ಸಾವನ್ನು ಒಪ್ಪಿಕೊಳ್ಳುವುದಕ್ಕಾಗುತ್ತದಾ? ಇಂತಹ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರತೀಕಾರಕ್ಕೆ ಮುಂದಾದರೆ ‘ಸ್ಯಾಫ್ರಾನ್ ಟೆರರಿಸಂ’ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಎಲ್ಲ ರೀತಿಯ ದೌರ್ಜನ್ಯ, ಆಕ್ರಮಣಗಳ ಹೊರತಾಗಿಯೂ ಇತಿಹಾಸದುದ್ದಕ್ಕೂ ಸಹಿಷ್ಣುತೆ ಪ್ರದರ್ಶಿಸುತ್ತಾ ಬಂದಿರುವ ಹಿಂದುಗಳನ್ನು ಕೋಮುವಾದಿಗಳು ಎನ್ನುತ್ತಾರೆ.

ಮಾಲೆಗಾಂವ್, ಅಜ್ಮೇರ್್ಗಳಲ್ಲಿ ನಡೆದಿದ್ದು ಹಿಂದು ಪ್ರತೀಕಾರವೇ ಹೊರತು ಭಯೋತ್ಪಾದನೆಯಲ್ಲ. ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಬುಖಾರಿಯ ವಿರುದ್ಧ ವಾರೆಂಟ್ ಮೇಲೆ ವಾರೆಂಟ್ ಹೊರಡಿಸಿದರೂ ಆತನನ್ನು ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ. ಆದರೇ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಜೈಲಿಗೆ ದಬ್ಬುವಾಗ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಿಲ್ಲದ ಪೌರುಷ ಬಂದು ಬಿಡುತ್ತದೆ. ಮಾತೆತ್ತಿದರೆ ಕೇಸರಿ ಭಯೋತ್ಪಾದನೆ ಎನ್ನುತ್ತಾರೆ. ಅನುಮಾನ, ಆರೋಪ, ದೋಷಾರೋಪಗಳೇನೇ ಇರಲಿ, ಕಳೆದ 7 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಒಬ್ಬನೇ ಒಬ್ಬ ಹಿಂದುವನ್ನು ನ್ಯಾಯಾಲಯದಲ್ಲಿ ಭಯೋತ್ಪಾದಕನೆಂದು ಸಾಬೀತುಪಡಿಸಲು ಕಾಂಗ್ರೆಸಿನಿಂದಾಗಿದೆಯೇ? ಆದರೂ ಅಮೆರಿಕದ ಅಧಿಕಾರಿಗಳ ಜತೆಗಿನ ಖಾಸಗಿ ಮಾತುಕತೆ ವೇಳೆ ‘ಸ್ಯಾಫ್ರಾನ್ ಟೆರರಿಸಮ್ಮೇ’ ಅತಿ ದೊಡ್ಡ ಕಂಟಕ ಎನ್ನುತ್ತಾರೆ ರಾಹುಲ್ ಗಾಂಧಿ. ಈ ಮಗ ಮತ್ತು ಆತನ ಅಮ್ಮ, ಭಯೋತ್ಪಾದನೆಯಲ್ಲಿ ತೊಡಗಿರುವ ಸಮುದಾಯ ಹಾಗೂ ದೇಶದ ವಿರುದ್ಧ ಒಂದೇ ಒಂದು ಹೇಳಿಕೆ ಕೊಟ್ಟಿದ್ದನ್ನು ಉದಾಹರಿಸಿ ನೋಡೋಣ? ಅಷ್ಟೇಕೆ, ಮುಂಬೈ ದಾಳಿಗೆ ಅವಕಾಶ ಮಾಡಿಕೊಟ್ಟ ಅಸಮರ್ಥ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ಯಾವ ಕ್ರಮಕೈಗೊಂಡಿದೆ ಹೇಳಿ? 26/11 ನಂತರ ಒತ್ತಡಕ್ಕೆ ಮಣಿದು ವಿಲಾಸ್್ರಾವ್ ದೇಶ್್ಮುಖ್ ರಾಜಿನಾಮೆ ಪಡೆಯುವ ನಾಟಕ ನಡೆಯಿತೇ ಹೊರತು ಮತ್ತೇನೂ ಅಲ್ಲ. ಅವರೊಬ್ಬ ಅಸಮರ್ಥ ವ್ಯಕ್ತಿ ಎಂದಾದ ಮೇಲೆ ಅವರನ್ನು 2009ರಲ್ಲಿ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇಕೆ? ಮೊನ್ನೆ ನಡೆದ ಸಂಪುಟ ಪುನಾರಚನೆ ವೇಳೆ ದೇಶ್್ಮುಖ್್ಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನದ ಬಳುವಳಿ ನೀಡಿದೆ! ಕಾಂಗ್ರೆಸ್್ನ ಮಿತ್ರ ಪಕ್ಷವಾದ ಎನ್್ಸಿಪಿ ಕೂಡ 2008, ನವೆಂಬರ್್ನಲ್ಲಿ ತನ್ನ ಪಕ್ಷದ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಆರ್.ಆರ್. ಪಾಟೀಲರ ರಾಜೀನಾಮೆ ಪಡೆದಿತ್ತು. ಆದರೆ 2009ರಲ್ಲಿ ಮತ್ತೆ ಉಪಮುಖ್ಯಮಂತ್ರಿ ಮಾಡಿತು! ಭಯೋತ್ಪಾದನೆ ಮೂಲೋತ್ಪಾಟನೆ ವಿಷಯದಲ್ಲಿ ಕಾಂಗ್ರೆಸ್್ಗೆ ಯಾವ ಕಾಳಜಿಯೂ ಇಲ್ಲ, ಈ ದೇಶವಾಸಿಗಳ ಬಗ್ಗೆ ಇಟಲಿಯಲ್ಲಿ ಜನಿಸಿದಾಕೆಗೆ ಯಾವ ಸಂವೇದನೆಗಳೂ ಇಲ್ಲ ಎಂಬುದು ಇದರಿಂದ ತಿಳಿಯುವುದಿಲ್ಲವೆ?

Make no mistake, 2008ರಿಂದ ಇದುವರೆಗೂ ಒಂದೂ ಪ್ರಮುಖ ಭಯೋತ್ಪಾದಕ ದಾಳಿ ಮುಂಬೈನಲ್ಲಿ ನಡೆದಿರಲಿಲ್ಲವೆಂದಾದರೆ ಅದಕ್ಕೆ ಭಾರತ ಕಾರಣವಲ್ಲ. ಅಂತಾರಾಷ್ಟ್ರೀಯ ಒತ್ತಡ ಹಾಗೂ ಪ್ರತಿಕೂಲ ಪರಿಣಾಮಕ್ಕೆ ಹೆದರಿ ಪಾಕಿಸ್ತಾನ ತೆಪ್ಪಗಿತ್ತೇ ಹೊರತು, ಭಾರತದ ಪೌರುಷಕ್ಕೆ ಅಂಜಿಯಲ್ಲ. ಇನ್ನು ಬಹಳ ಕುತೂಹಲಕಾರಿ ಅಂಶವೆಂದರೆ ಜುಲೈ 13 ಕಸಬ್್ನ ಜನ್ಮದಿನ. ಸರಣಿ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ಹೇಮಂತ್ ಮೆಹ್ತಾ ಎಂಬವರು ‘ಈ ಸ್ಫೋಟ ಕಸಬ್ ಜನ್ಮದಿನದ ಉಡುಗೊರೆಯಂತೆ. ಆದರೆ ನಮ್ಮ ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನಕ್ಕೆ ಯಾವ ಉಡುಗೊರೆ ಕೊಡುತ್ತಾರೆ?’ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದರು. ಸಂಸತ್ತಿನ ಮೇಲೆ ಆಕ್ರಮಣ ಮಾಡಿದ ಅಫ್ಜಲ್ ಗುರುವನ್ನೇ ಗಲ್ಲಿಗೆ ಹಾಕದೆ ಸಾಕಿ ಸಲಹುತ್ತಿರುವ ಈ ಸರ್ಕಾರ ಯಾವ ಉಡುಗೊರೆ ಕೊಟ್ಟೀತು? 2004ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 21 ಭಯೋತ್ಪಾದಕ ದಾಳಿಗಳಾಗಿವೆ ಎಂದರೆ ನಂಬುತ್ತೀರಾ?

2008ರಲ್ಲಿ ಮುಂಬೈ ದಾಳಿ ನಡೆದಾಗ, ‘ಪ್ರತಿಯೊಂದು ಸಾರ್ವಭೌಮ ರಾಷ್ಟ್ರಕ್ಕೂ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ’ ಎಂದರು ಆಗಿನ್ನೂ ್ನಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬರಾಕ್ ಒಬಾಮ. ಅಂತಹ ಸೂಚನೆ ಸಿಕ್ಕಿದರೂ ಪಾಕ್ ವಿರುದ್ಧ ಹುಲ್ಲುಕಡ್ಡಿ ಎತ್ತುವ ಧೈರ್ಯ ತೋರಲಿಲ್ಲ. ನಾವು ಮುಂದೊಂದು ದಿನ ಆರ್ಥಿಕವಾಗಿ ಮಾತ್ರ ಸೂಪರ್ ಪವರ್ ಆಗಬಹುದಷ್ಟೇ. ಕಿಸೆಯಲ್ಲಿ ದುಡ್ಡು ತುಂಬಿಕೊಂಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ? ಅಮೆರಿಕದ ಬಗ್ಗೆ ಮಾತನಾಡುವುದಕ್ಕೂ ನಾಚಿಕೆಯಾಗಬೇಕು. ಅವರು ಸದ್ದಾಂನನ್ನು ಹಿಡಿದು ನ್ಯಾಯಾಲಯದ ಕಟಕಟೆಗೆ ಎಳೆದು ತರಲಿಲ್ಲ. ಗುಂಡು ಹಾಕಿದರು. ಒಸಾಮನನ್ನು ಹಿಡಿದು ನ್ಯಾಯದೇವತೆ ಮುಂದೆ ನಿಲ್ಲಿಸಲಿಲ್ಲ, ನಿನ್ನ ಕಡೆ ಆಸೆ ಏನೆಂದು ಕೇಳಿ ಬಿರ್ಯಾನಿಯನ್ನೂ ತಿನ್ನಿಸಲಿಲ್ಲ. ಕೊಂದು ಸಮುದ್ರಕ್ಕೆ ಬಿಸಾಡಿದರು.

ಆದರೆ ನಾವೇನು ಮಾಡುತ್ತಿದ್ದೇವೆ?

ಧರ್ಮಕ್ಕಾಗಿ ಸತ್ತವರಿಗೆ ದೇವರು ಸ್ವರ್ಗದಲ್ಲಿ ಬಗೆ ಬಗೆಯ ಭೋಜನಗಳು ಮತ್ತು 72 ಕನ್ಯೆಯರನ್ನು ಕೊಡುತ್ತಾನೆಂಬ ನಂಬಿಕೆ ಇಸ್ಲಾಮಿಕ್ ಭಯೋತ್ಪಾದಕರಲ್ಲಿದೆ! ಕಸಬ್್ಗೆ ಬಿರ್ಯಾನಿ ಸರ್ವ್ ಮಾಡಿ ಬಾಯಿ ರುಚಿ ತೀರಿಸಿರುವ ಕಾಂಗ್ರೆಸ್ಸಿಗರು, 72 ಕನ್ಯೆಯರನ್ನೂ ಕೊಡುವುದಕ್ಕಾಗಿ ಬಹುಶಃ ಆತನನ್ನು ಇನ್ನೂ ಜಿಂದಾ ಇಟ್ಟುಕೊಂಡಿದ್ದಾರೆ. ಅಷ್ಟನ್ನೂ ಇಲ್ಲೇ ಕೊಟ್ಟುಬಿಟ್ಟರೆ ಸಾಯುವ ಪ್ರಮಯವೇ ಬರುವುದಿಲ್ಲ. ನಮ್ಮ ರಾಷ್ಟ್ರಪತಿಗಳು ಆತನ ಕ್ಷಮಾದಾನ ಅರ್ಜಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಕಸಬ್್ಗೆ ಸಹಜ ಸಾವು ಬಂದು ಬಿಟ್ಟಿರುತ್ತದೆ.

ಏಷ್ಯನ್ ಡ್ರಾಮಾ ಕೃತಿಯಲ್ಲಿ ಅದರ ಕರ್ತೃ ಗನ್ನರ್ ಮಿರ್ದಾಲ್ ಭಾರತವನ್ನುದ್ದೇಶಿಸಿ ಅದ್ಯಾವ ಕ್ಷಣದಲ್ಲಿ “Soft state‘ ಬರೆದರೋ ಏನೋ, ಐವತ್ತು ವರ್ಷ ದೇಶವಾಳಿದ, ಈಗಲೂ ಆಳುತ್ತಿರುವ ಕಾಂಗ್ರೆಸ್ ಈ ದೇಶವನ್ನು ಅಕ್ಷರಶಃ ಷಂಡರಾಷ್ಟ್ರವನ್ನಾಗಿಸಲು ಹೊರಟಿದೆಯಲ್ಲಾ ಅದಕ್ಕೆ ಏನನ್ನಬೇಕು? ಶಿವಾಜಿ ಮಹಾರಾಜ, ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಝಾದ್್ಗೆ ಜನ್ಮವಿತ್ತ ಈ ಭರತಖಂಡವನ್ನ ಯಾವ ಸ್ಥಿತಿಗೆ ತಂದುಬಿಟ್ಟಿತು?

ಕೃಪೆ: ಪ್ರತಾಪ ಸಿಂಹ

ಗುರುವಾರ, ಜುಲೈ 14, 2011

ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?


ರಾಹುಲ್ ಗಾಂಧಿ!

ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ?

ಯಾರೀತ?

ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಉತ್ತರ ಪ್ರದೇಶದ ಭಟ್ಟಾ ಪರ್ಸೂಲ್್ಗೆ ಈತ ಪಾದಯಾತ್ರೆ ಹೊರಟ ಕೂಡಲೇ ಮಾಧ್ಯಮಗಳೇಕೆ ಹುಚ್ಚೆದ್ದು ಕುಣಿಯತೊಡಗಿವೆ? ಯಾವ ಕಾರಣಕ್ಕಾಗಿ ಈತನ ಯಾತ್ರೆ “Media event’ ಆಗಿಬಿಟ್ಟಿದೆ? ಕಳೆದ ಮೇನಲ್ಲಿ ಭಟ್ಟಾ ಪರ್ಸೂಲ್್ಗೆ ಆಗಮಿಸಿ 8 ರೈತರನ್ನು ಪ್ರಧಾನಿ ಬಳಿಗೆ ಕೊಂಡೊಯ್ದು ಎರಡು ಗ್ರಾಮಗಳ ಒಟ್ಟು 70 ಜನರನ್ನು ಕಗ್ಗೊಲೆಗೈಯ್ಯಲಾಗಿದೆ, ಅವರನ್ನು ಚಿತೆಗೇರಿಸಿದ ಚಿತ್ರವಿದು ಎಂದು ಸುಳ್ಳೇ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಮತ್ತೆ ಭಟ್ಟಾ ಪರ್ಸೂಲ್್ಗೆ ಹೊರಟ ಕೂಡಲೇ ಮಾಧ್ಯಮಗಳೇಕೆ ಬುದ್ಧಿಗೇಡಿಗಳಂತೆ ವರ್ತಿಸುತ್ತಿವೆ? ಯಾರ ಬಗ್ಗೆಯೂ ಇರದ, ರಾಹುಲ್ ವಿಷಯದಲ್ಲಿ ಮಾತ್ರ ಕಾಣುವ ಇಂಥದ್ದೊಂದು ಮೋಹವೇಕೆ? ಆತ ಭಾರತವನ್ನು ಉದ್ಧಾರ ಮಾಡುವುದಕ್ಕಾಗಿ ಜನ್ಮತಳೆದಿರುವ ಅವತಾರ ಪುರುಷನೇನು? ಬಡವರ ಮೇಲೆ, ಬಡವರ ಮೇಲಾಗುವ ದೌರ್ಜನ್ಯಗಳ ಬಗ್ಗೆ, ಅತ್ಯಾಚಾರಗಳ, ಭ್ರಷ್ಟಾಚಾರದ ಬಗ್ಗೆ ಆತನಿಗೆ ನಿಜಕ್ಕೂ ಕಾಳಜಿಯಿದೆ ಎನ್ನುವುದಾದರೆ ದೌರ್ಜನ್ಯ, ಅತ್ಯಾಚಾರಗಳು ಸಂಭವಿಸುತ್ತಿರುವುದು ಬರೀ ಉತ್ತರ ಪ್ರದೇಶದಲ್ಲಿ ಮಾತ್ರವೆ? ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸುತ್ತಿರುವ, ಅವರ ಅಮ್ಮ ಸೋನಿಯಾ ಗಾಂಧಿಯವರು ನಿಯುಕ್ತಿ ಮಾಡಿರುವ ಕಿರಣ್ ರೆಡ್ಡಿ ಮುಖ್ಯಮಂತ್ರಿಯಾಗಿರುವ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾದೆಂಡ್ಲ ಗ್ರಾಮದ ಎನ್. ಮೌನಿಕಾ ಎಂಬ 16 ವರ್ಷದ ಯುವತಿ ಕೊಲೆಯಾಗಿ ಹೋಗಿದ್ದಾಳೆ. ಆಂಧ್ರ ಇವ್ಯಾಂಜೆಲಿಕಲ್ ಲುಥೆರನ್ ಚರ್ಚ್್ನ ಪಾದ್ರಿ ದಾಸಿ ಅಜಯ್ ಬಾಬು ಆಕೆಯ ಮೇಲೆ ಅತ್ಯಾಚಾರವೆಸಗಿ, ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾನೆ. ಆಕೆಯ ಚೀರಾಟವನ್ನು ಕೇಳಿ ಧಾವಿಸಿದ ನೆರೆಯವರು ಗುಂಟೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಕ್ಷಣದಲ್ಲೂ ಸ್ಥಳಕ್ಕೆ ಆಗಮಿಸಿದ ಪಾದ್ರಿಯ ಚಿಕ್ಕಪ್ಪ ಸ್ಟೀವನ್, ಅಡುಗೆ ಮಾಡುತ್ತಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಸುಟ್ಟುಕೊಂಡೆ ಎಂದು ಹೇಳಿಕೆ ಕೊಡುವಂತೆ ಒತ್ತಡ ಹೇರಿ ಸಿಕ್ಕಿಹಾಕಿಕೊಂಡಿದ್ದಾನೆ. ಕಳೆದ ಮಾರ್ಚ್್ನಲ್ಲಿ ಆಂಧ್ರದ ಚಿರಾಲಾದಲ್ಲಿ ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಏಪ್ರಿಲ್್ನಲ್ಲಿ ಹೈದರಾಬಾದ್ ಬಳಿಯ ನಾರಾಯಣಗುಡ ಬ್ಯಾಪ್ಟಿಸ್ಟ್ ಚರ್ಚ್್ನಲ್ಲಿ ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದ 18 ವರ್ಷದ ಯುವತಿಯನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ರೇಪ್ ಮಾಡಲಾಯಿತು.

ಇವ್ಯಾವುವೂ ರಾಹುಲ್ ಗಾಂಧಿಯವರ ಕಣ್ಣಿಗೆ ಕಾಣಲಿಲ್ಲವೆ?

ಇವು ಅತ್ಯಾಚಾರ, ಅನಾಚಾರಗಳಲ್ಲವಾ? ಅಥವಾ ಆಂಧ್ರದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರವಾಗಿದ್ದರಿಂದ ಆತನ ಬಾಯಿಂದ ಮಾತು ಹೊರಡುತ್ತಿಲ್ಲವೋ? ಜಗತ್ತಿನ ಪ್ರಮುಖ ರಾಷ್ಟ್ರಗಳ ರಾಯಭಾರ ಕಚೇರಿಯನ್ನು ಹೊಂದಿರುವ ದೇಶದ ರಾಜಧಾನಿ ದೆಹಲಿಯನ್ನು “ರೇಪ್ ಕ್ಯಾಪಿಟಲ್್’ ಮಾಡಿರುವವರು ಯಾರು? ಆಗಿಂದಾಗ್ಗೆ ಚಲಿಸುವ ಕಾರುಗಳಲ್ಲಿ ಎಳೆದೊಯ್ದು ಅತ್ಯಾಚಾರವೆಸಗುವ ಪ್ರಕರಣಗಳು ಸಂಭವಿಸುತ್ತಿದ್ದರೂ ರಾಹುಲ್ ಎಂದಾದರೂ ಬಾಯಿ ತೆರೆದಿದ್ದಾರೆಯೇ? ದೆಹಲಿಯಲ್ಲಿರುವುದೂ ಕಾಂಗ್ರೆಸ್ ಸರಕಾರವೇ ಹಾಗೂ ದೆಹಲಿ ಪೋಲಿಸ್ ಪಡೆಯನ್ನು ನಿಯಂತ್ರಿಸುವುದೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ. ಈ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ? ಈ ರಾಹುಲ್ ಗಾಂಧಿ ಯಾವ ಯುವ ಕಾಂಗ್ರೆಸ್್ನ ಚುಕ್ಕಾಣಿ ಹಿಡಿದಿದ್ದಾರೋ ಅದಕ್ಕೆ ಎಂತಹ ಇತಿಹಾಸವಿದೆ ಗೊತ್ತಾ? ಇಡೀ ದೇಶವನ್ನೇ ದಿಗ್ಬ್ರಮೆಗೊಳಿಸಿದ 1995ರ ತಂದೂರ್ ಕೊಲೆ ಪ್ರಕರಣವನ್ನು ನೆನಪಿಸಿಕೊಳ್ಳಿ. ಪತ್ನಿ ನೈನಾ ಸಾಹ್ನಿಯನ್ನು ಕೊಂದು ಸುಟ್ಟುಹಾಕಿದ ಸುಶೀಲ್ ಶರ್ಮಾ ಕೂಡಾ ಯುವ ಕಾಂಗ್ರೆಸ್ ನೇತಾರನಾಗಿದ್ದ. 1999ರಲ್ಲಿ ಜೆಸ್ಸಿಕಾ ಲಾಲ್್ನನ್ನು ಕೊಂದವನೂ ಕೂಡ ಮನು ಶರ್ಮಾ ಎಂಬ ಯೂತ್ ಕಾಂಗ್ರೆಸ್ ನಾಯಕ!

ಈ ಮಧ್ಯೆ ಭಟ್ಟಾ ಪರ್ಸೂಲ್ ಪಾದಯಾತ್ರೆ ಸಂದರ್ಭದಲ್ಲಿ “ಉತ್ತರ ಪ್ರದೇಶವನ್ನು ದಲ್ಲಾಳಿಗಳು, ಮಧ್ಯವರ್ತಿಗಳು ಆಳುತ್ತಿದ್ದಾರೆ’ ಎಂದು ರಾಹುಲ್ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆಂದರೆ ಕೇಂದ್ರವನ್ನು ಆಳುತ್ತಿರುವವರು ಯಾರು? 2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ್ ಹೌಸಿಂಗ್ ಹಗರಣ ಇಂಥ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷದ ನೇತಾರರಾದ ಅಮ್ಮ-ಮಕ್ಕಳ ಇಬ್ಬಂದಿ ಧೋರಣೆ ಮಾಧ್ಯಮಗಳಿಗೆ ಗೊತ್ತಿಲ್ಲವೇನು? ಇವರು, ಇವರ ಕುಟುಂಬದ್ದು ಎಂತಹ “ಶುದ್ಧಹಸ್ತ’ ಎಂಬುದು ಈ ದೇಶದ ಜನರಿಗೆ ಗೊತ್ತಿಲ್ಲವೆಂದು ಭಾವಿಸಿದ್ದಾರೇನು? ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಹಗರಣವಾದ ಜೀಪ್ ಹಗರಣ ನಡೆದಿದ್ದು ನೆಹರು ಪ್ರಧಾನಿಯಾಗಿದ್ದಾಗ. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರಂತೂ ಪ್ರಜಾಪ್ರಭುತ್ವದ ಕೊಲೆಗಾತಿ. ಇನ್ನು ಗಲೀ ಗಲೀ ಮೇ ಶೋರ್ ಹೇ, ರಾಜೀವ್ ಗಾಂಧೀ ಚೋರ್ ಹೇ… ಎಂಬ ಹಾಡು ದೇಶದ ಮೂಲೆ ಮೂಲೆಗಳಲ್ಲೂ ಮೊಳಗಲು ಕಾರಣರಾದವರು ಹಾಗೂ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಮಾಡಿದ್ದೇ ರಾಹುಲ್ ತಂದೆ ರಾಜೀವ್ ಗಾಂಧಿ. ಬೋಫೋರ್ಸ್ ಹಗರಣ ಬಯಲಾದಾಗ “ಅಯ್ಯೋ, ಪ್ರಧಾನಿಯೇ ಲಂಚ ತೆಗೆದುಕೊಳ್ಳುತ್ತಾನೆ, ನಮ್ಮದೇನು ಮಹಾ..’ ಎಂಬ ಮಾತು ಕೇಳಿ ಬಂತು. ಆ ಹಗರಣದಿಂದ ಒಬ್ಬ ಸಾಮಾನ್ಯ ಸರಕಾರಿ ನೌಕರನಿಗೂ ಲಂಚ ತೆಗೆದುಕೊಳ್ಳಲು ಪ್ರೇರಣೆ, ಆತ್ಮಸ್ಥೈರ್ಯ ದೊರೆಯಿತು. ಇಂತಹ ಹಿನ್ನೆಲೆಯಿಂದ ಬಂದಿರುವ ರಾಹುಲ್ ಗಾಂಧಿ ಅದ್ಯಾವ ಮುಖ ಇಟ್ಟುಕೊಂಡು ಈ ರೀತಿಯ ಹೇಳಿಕೆ ನೀಡಿದ್ದಾರೆ? ಅವರ “10 ಜನಪಥ್್’ ನಿವಾಸದಿಂದ ಜಂತರ್ ಮಂಥರ್್ಗಿರುವ ಅಂತರ ಕೇವಲ 2 ಕಿ.ಮೀ. ಇತ್ತ ದೆಹಲಿಯಿಂದ ಭಟ್ಟಾ ಪರ್ಸೂಲ್್ಗೆ 100 ಕಿ.ಮೀ. ಒಂದು ವೇಳೆ ರಾಹುಲ್ ಗಾಂಧಿಗೆ ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಅಣ್ಣಾ ಹಜಾರೆ ಜಂತರ್ ಮಂಥರ್್ನಲ್ಲಿ ಉಪವಾಸ ಕುಳಿತಿದ್ದಾಗ ಏಕೆ ಹೋಗಲಿಲ್ಲ? 100 ಕಿ.ಮೀ. ದೂರಕ್ಕೆ ಹೋಗಲು ಸಮಯವಿದೆ, 2 ಕಿಲೋ ಮೀಟರ್ ಹತ್ತಿರದಲ್ಲಿರುವ ಜಂತರ್ ಮಂಥರ್ ದೂರವಾಗಿ ಬಿಡುತ್ತದೆಯೇ?

ಇವರೆಂತಹ ವ್ಯಕ್ತಿಯೆಂದರೆ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಉಲ್ಲೇಖಿಸಿ,“I feel ashamed to call myself an INDIAN after seeing what has happened here in UP’ ಎನ್ನುತ್ತಾರೆ. ಈ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿದರ್ಭಗಳಲ್ಲಿ. ಈ ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿದೆ. ರೈತರ ಕೃಷಿ ಭೂಮಿ ಸ್ವಾಧೀನದ ಬಗ್ಗೆ ದೊಡ್ಡ ಹುಯಿಲೆದ್ದಿರುವುದೇ ಹರ್ಯಾಣದಲ್ಲಿ. ಅಲ್ಲೂ ಕಾಂಗ್ರೆಸ್ ಆಡಳಿತವಿದೆ. ಆಗ ಭಾರತೀಯನೆಂದು ಹೇಳಿಕೊಳ್ಳಲು ರಾಹುಲ್್ಗೆ ಅವಮಾನವೆನಿಸಲಿಲ್ಲವೆ? ರೈತರ ಕೃಷಿ ಭೂಮಿಯನ್ನು ಯದ್ವಾತದ್ವಾ ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಬರುವುದಾದರೂ ಓಬಿರಾಯನ ಕಾಲದ ಕಾಯಿದೆಗೆ ತಿದ್ದುಪಡಿ ತರಬೇಕಾಗಿರುವುದಾದರೂ ಯಾರು? ರೈತರ ಭೂಮಿಯನ್ನು ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ 2007ರಿಂದಲೂ ಸಂಸತ್ತಿನ ಮುಂದಿದ್ದರೂ ಅದಕ್ಕೆ ಅಂಗೀಕಾರ ಪಡೆದುಕೊಳ್ಳಲು ಕಾಂಗ್ರೆಸ್ ಏಕೆ ಮನಸ್ಸು ಮಾಡುತ್ತಿಲ್ಲ? ಇಷ್ಟೆಲ್ಲಾ ಗೋಮುಖವ್ಯಾಘ್ರ ಧೋರಣೆ ಅನುಸರಿಸುತ್ತಿದ್ದರೂ, ಸ್ವತಂತ್ರವಾಗಿ ಒಂದು ಒಳ್ಳೆಯ ಭಾಷಣ ಮಾಡುವ ತಾಕತ್ತಿಲ್ಲದಿದ್ದರೂ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿಲ್ಲದಿದ್ದರೂ ಮಾಧ್ಯಮಗಳು ಮಾತ್ರ ಈತನನ್ನು “ಯುತ್ ಐಕಾನ್್’ (ಯುವಜನತೆಯ ಮುಕುಟಮಣಿ) ಎಂದು ಹಾಡಿ ಹೊಗಳುತ್ತವೆ. ಕಾಂಗ್ರೆಸ್ ಪಕ್ಷದಲ್ಲೇ ಮಿಲಿಂದ್ ದಿಯೋರಾ ಇದ್ದಾರೆ, ಸಚಿನ್ ಪೈಲಟ್, ಜಿತೇನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸಂದೀಪ್ ದೀಕ್ಷಿತ್ ಇದ್ದಾರೆ. ಇವರ್ಯಾರು ಮಾಧ್ಯಮಗಳಿಗೆ “ಯುತ್ ಐಕಾನ್್’ ಎನಿಸುವುದಿಲ್ಲ. ಅಣಕವೆಂದರೆ, ನಮ್ಮ ಇಂಗ್ಲಿಷ್ ಮಾಧ್ಯಮಗಳಿಗೆ ನಲವತ್ತೊಂದು ವರ್ಷ ಕಳೆದು ನಲವತ್ತೆರಡಕ್ಕೆ ಕಾಲಿಟ್ಟಿರುವ ಈತ ಯುವಜನತೆಯ ಮುಕುಟಮಣಿಯಾಗಿ ಕಾಣುವ ಜತೆಗೆ “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಆಗಿಯೂ ತೋರುತ್ತಾರೆ! ಬ್ರಿಟನ್, ಅಮೆರಿಕದಲ್ಲಿ ಈತನ ವಯಸ್ಸಿಗೆ ಬರುವಷ್ಟರಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರಾಗಿರುತ್ತಾರೆ. ಅಷ್ಟೇಕೆ ಈತನ ತಂದೆ ರಾಜೀವ್ ಗಾಂಧಿಯೇ ಪ್ರಧಾನಿಯಾಗಿದ್ದರು. ಒಂದು ವೇಳೆ, ರಾಹುಲ್ ಅವಿವಾಹಿತರಾಗಿಯೇ ಉಳಿದರೆ ಅವರಿಗೆ 60, 70 ವರ್ಷಗಳಾದಾಗಲೂ ಈ ಮಾಧ್ಯಮಗಳು “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಎನ್ನುತ್ತವೇನೋ?!

ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಡಿಯಾಳು ಮನಃಸ್ಥಿತಿಯನ್ನು ಹೊಂದಿರುವ ಮಾಧ್ಯಮಗಳು ಯಾರನ್ನು ಮುಕುಟಮಣಿ ಎನ್ನುತ್ತವೆಯೋ ಆತನ ಬಗ್ಗೆ ಹಾಗೂ ಮಾಧ್ಯಮಗಳ ಗುಲಾಮಗಿರಿಯ ಬಗ್ಗೆ ಯುವಜನತೆಯ ಆನ್್ಲೈನ್ ತಾಣಗಳಾದ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ ಎಂತಹ ಮೆಸೇಜ್್ಗಳು ಕಾಣಸಿಗುತ್ತವೆ ಎಂಬುದನ್ನು ನೋಡಿ…

1. ರಾಹುಲ್್ಗಾಂಧಿ ಉತ್ತರ ಪ್ರದೇಶದಲ್ಲಿ ಯಾಕೆ ಪಾದಯಾತ್ರೆ ಕೈಗೊಂಡಿದ್ದಾರೆಂದು ಗೊತ್ತಾ? ವಾಹನಗಳು ಓಡಾಡುವಂಥ ರಸ್ತೆಗಳನ್ನು ನಿರ್ಮಿಸಬೇಕೆಂದು 50 ವರ್ಷ ದೇಶವಾಳಿದ ಆತನ ಪಕ್ಷಕ್ಕೆ ಅನಿಸಲೇ ಇಲ್ಲ -ಅಮಿತ್ ಮಾಳವೀಯ

2. ಹರಿಯಾಣದ ಕಾಂಗ್ರೆಸ್ ಸರಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದರ ವಿರುದ್ಧ ಅಂಬಾಲದ 6 ಗ್ರಾಮಗಳ ಜನ ಧರಣಿ ನಡೆಸುತ್ತಿದ್ದಾರೆ. ರಾಹುಲ್ ಈ ಗ್ರಾಮಗಳಿಗೇಕೆ ಬರುವುದಿಲ್ಲ? -ಮೃತ್ಯುಂಜಯ ಕುಮಾರ್ ಝಾ

3. ರಾಹುಲ್ ಗಾಂಧಿ ರೋಟಿ ತಿಂದರು ಎನ್ನುತ್ತಿವೆ ಸುದ್ದಿ ಚಾನೆಲ್್ಗಳು! -ಪ್ರಶಾಂತ್

4. ಕೆಲವು ಇಂಗ್ಲಿಷ್ ಚಾನೆಲ್್ಗಳು ರಾಹುಲ್್ಗಾಂಧಿ ಎಲ್ಲಿ ಸ್ನಾನ ಮಾಡಿದರು, ಎಷ್ಟು ರೋಟಿ ತಿಂದರು, ಎಷ್ಟು ಕಿಲೋ ಮೀಟರ್ ನಡೆದರು ಎಂಬ ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುತ್ತಿವೆ. -ರಿತುಪರ್ಣ ಘೋಷ್

5. ನಿಮ್ಮಲ್ಲಿ ಯಾರಾದರೂ ರಾಮಲೀಲಾ ಮೈದಾನದಲ್ಲಿ ನಡೆದ ದೌರ್ಜನ್ಯದ ಬಗ್ಗೆ ರಾಹುಲ್್ಗಾಂಧಿ ಮಾತನಾಡಿದ್ದನ್ನು ನೋಡಿದಿರಾ? ಆಂಧ್ರಪ್ರದೇಶದ ರೈತರ ಬವಣೆ ಬಗ್ಗೆ ಧ್ವನಿಯೆತ್ತಿದ್ದನ್ನು ಕೇಳಿದ್ದೀರಾ? ಇವು Paid TV channels’. -ನಿತೀಶ್ ಕುಮಾರ್

6. ಈ ರಾಹುಲ್ ಗಾಂಧಿಗೆ ಬಿಜೆಪಿ/ಬಿಎಸ್ಪಿ ಆಡಳಿತವಿರುವ ರಾಜ್ಯಗಳೇ ಏಕೆ ಕಾಣುತ್ತವೆ? ಜೈತಾಪುರ್, ಲವಾಸಾ ಹಾಗೂ ಕೊಂಕಣ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭೂಹಗರಣಗಳೇಕೆ ಕಾಣುವುದಿಲ್ಲ? -ಅಶೋಕ್ ಕುಮಾರ್.

ಟ್ವಿಟ್ಟರ್್ನಲ್ಲಿ ‘“rahulfacts’‘ ಎಂಬ ಶೀರ್ಷಿಕೆಯಡಿ ಆತನ ಇಬ್ಬಂದಿ ನಿಲುವನ್ನು ತೊಳೆಯುವ ಕೆಲಸ ನಿತ್ಯವೂ ನಡೆಯುತ್ತಿದೆ. ಒಬ್ಬ ಯುತ್ ಐಕಾನ್ ಆದವರಿಗೆ ಫೇಸ್್ಬುಕ್, ಟ್ವಿಟ್ಟರ್್ಗಳು ಬಹಳ ಮುಖ್ಯ. ಇವರೆಡರಲ್ಲೂ ರಾಹುಲ್ ಹಾಗೂ ಮೋದಿ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿ, ಅಭಿಮಾನಿಗಳ ಸಂಖ್ಯೆಯನ್ನೂ ತಾಳೆ ಹಾಕಿದರೆ ಯಾರು ಯುವಜನತೆಯ ಮುಕುಟಮಣಿ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆ ಎಂಬ ರಾಹುಲ್ ಹೇಳಿಕೆಯನ್ನು ಚಾನೆಲ್್ಗಳು ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಅತಿ ಪ್ರಚಾರಕೊಟ್ಟು ಪ್ರಸಾರ ಮಾಡುತ್ತಿದ್ದರೆ, ‘UP is run by touts may be, But what about the whole country it is being run by mega touts’ ಎಂದು ಯುವಜನತೆ ಮುಖಕ್ಕೆ ಉಗುಳುತ್ತಿತ್ತು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಬ ಎನ್ನುತ್ತಾರೆ. ಇಂಗ್ಲಿಷ್ ಚಾನೆಲ್್ಗಳು ಅದನ್ನು ನೆಹರು ಕುಟುಂಬವನ್ನು ಹೊತ್ತುನಿಲ್ಲುವ ಸ್ಥಂಬವೆಂದು ಭಾವಿಸಿದಂತಿದೆ. ತೆಲಂಗಾಣ ಸಮಸ್ಯೆ ಇಡೀ ಆಂಧ್ರಪ್ರದೇಶವೇ ರಣರಂಗವಾಗುವ ಅಪಾಯವನ್ನು ತಂದೊಡ್ಡುತ್ತಿರುವ ಸಮಯದಲ್ಲೂ ಚಾನೆಲ್್ಗಳು ರಾಹುಲ್್ಗಾಂಧಿಯ ಬಾಲ ಹಿಡಿದು ಹೊರಟಿರುವುದನ್ನು ನೋಡಿದರೆ ಹಾಗನಿಸದೇ ಇರದು. ಛೇ!

ಕೃಪೆ: ಪ್ರತಾಪ ಸಿಂಹ

ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ದಲಿತರು ಸಂಬಂಧ ಬೆಳೆಸುವಂತಾಗಬೇಕು!

ಭಾರತದಲ್ಲಿ ದಲಿತ ಚಿಂತನೆ ಎಂದರೆ ಅದನ್ನು ಕಡ್ಡಾಯವಾಗಿ ಮಾರ್ಕ್ಸ್್ವಾದದೊಂದಿಗೆ ತಳಕು ಹಾಕುವುದು, ಮೇಲ್ವರ್ಗವನ್ನು ನಿಂದಿಸುವುದು ಎಂಬ ಕಲ್ಪನೆ ಲಾಗಾಯ್ತಿನಿಂದ ಬೆಳೆದುಬಿಟ್ಟಿದೆ. ಈ ಚೌಕಟ್ಟಿನ ಹೊರಗೆ ನಿಂತು, ಶಿಕ್ಷಣ ಹಾಗೂ ಉದ್ಯಮಶೀಲತೆಯ ಮುಖಾಂತರವೇ ದಲಿತ ವಿಮೋಚನೆಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನಕ್ಕೆ ಇಳಿದಿರುವ ವಿಶಿಷ್ಟ ಚಿಂತಕ ಚಂದ್ರಭಾನ್ ಪ್ರಸಾದ್. “ಪಯೋನೀರ್್’ನಲ್ಲಿ ಪ್ರತಿವಾರ “ದಲಿತ್ ಡೈರಿ’ ಅಂಕಣ ಬರೆಯುವ ಅವರು ದೇಶದ ಮೊದಲ ದಲಿತ ಅಂಕಣಕಾರರೂ ಹೌದು. “ಕನ್ನಡ ಪ್ರಭ’ ಓದುಗರಿಗೂ ಇವರು ತಮ್ಮ ಬರಹಗಳ ಮೂಲಕ ಪರಿಚಿತರು. ಇದೀಗ ದಲಿತ ಉದ್ಯಮಿಗಳನ್ನು ಗುರುತಿಸಿ, ಒಂದೆಡೆ ಕಲೆ ಹಾಕಿ, ಅವರದ್ದೇ ಆದ ಒಂದು ಒಕ್ಕೂಟವನ್ನು ಅರಂಭಿಸಲು ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡಿದ್ದಾರೆ. ಅದರ ಅಂಗವಾಗಿ ಚಂದ್ರಭಾನ್ ಪ್ರಸಾದ್ ಬುಧವಾರ ಬೆಂಗಳೂರಿಗೂ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಸಂದರ್ಶನದ ರೂಪದಲ್ಲಿ ಮಾತಿಗೆಳೆದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು.

1. ದಲಿತ ಉದ್ಯಮಿಗಳನ್ನು ಗುರುತಿಸಿ, ಒಗ್ಗೂಡಿಸಲು ನೀವು ಯತ್ನಿಸುತ್ತಿರುವ ಹಿಂದಿನ ಉದ್ದೇಶವೇನು?

ದಲಿತರಲ್ಲೂ ಉದ್ಯಮಿಗಳಿದ್ದಾರೆ, ಯಾರ ಸಹಾಯವೂ ಇಲ್ಲದೆ ಕಷ್ಟಪಟ್ಟು ಮೇಲೆ ಬಂದವರಿದ್ದಾರೆ ಎಂಬುದನ್ನು ತೋರಿಸುವ ಹಾಗೂ ದಲಿತರು ಸ್ವಂತ ಶಕ್ತಿಯಿಂದ ಏನನ್ನೂ ಮಾಡಲಾರರು ಎಂಬ ಮಿಥ್ಯೆಯನ್ನು ಹೊಡೆದು ಹಾಕುವ ಯತ್ನವಿದು.

2. ಇದರಲ್ಲಿ ಎಷ್ಟರಮಟ್ಟಿನ ಯಶಸ್ಸು ಲಭಿಸಿದೆ?

ದಲಿತ ಉದ್ಯಮಿಗಳು ಎಲ್ಲ ಕಡೆ ಕಾಣಸಿಗುತ್ತಿದ್ದಾರೆ. ಸಣ್ಣ ಪುಟ್ಟ ನಿರ್ಮಾಣಗಳಲ್ಲ ಟೌನ್್ಶಿಪ್್ಗಳನ್ನು ನಿರ್ಮಿಸುತ್ತಿರುವ ದಲಿತರನ್ನು ಕಂಡು ಹುಡುಕಿದ್ದೇವೆ. ಸಿಐಐ, ಫಿಕ್ಕಿಗೆ ಪ್ರತಿಯಾಗಿ ನಾವು ದಲಿತ ಉದ್ಯಮಿಗಳಿಂದಲೇ ಕೂಡಿರುವ ‘ಡಿಕ್ಕಿ’ (ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಆರಂಭಿಸಿದ್ದೇವೆ. ಮಹಾರಾಷ್ಟ್ರದಲ್ಲಿ ಇದರ ನಾಲ್ಕು ಚಾಪ್ಟರ್್ಗಳು ಈಗಾಗಲೇ ಆರಂಭವಾಗಿದ್ದು, ಈ ವರ್ಷ ದೇಶಾದ್ಯಂತ ಒಟ್ಟು 50 ಚಾಪ್ಟರ್್ಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡಿದ್ದೇವೆ.

3. ಮೀಸಲಾತಿಯನ್ನು ಬಿಟ್ಟು ದಲಿತರ ಏಳಿಗೆಗೆ ಏನು ಮಾಡಬೇಕು?

ದಲಿತರಿಗೆ ಮಾರುಕಟ್ಟೆ ಬೇಕು. ಜತೆಗೆ ದಲಿತ ಉದ್ಯಮಿಗಳೂ ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳಬೇಕು. ದಲಿತರೆಂಬ ಕಾರಣಕ್ಕೆ ಯಾರೂ ಆರ್ಡರ್ ಕೊಡುವುದಿಲ್ಲ ಹಾಗೂ ಆರ್ಡರ್ ನಿರಾಕರಿಸುವುದಿಲ್ಲ. ತಮ್ಮಲ್ಲೂ ಪ್ರತಿಭೆ ಇದೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ದಲಿತರು ತೋರಿಸಬೇಕು. ನಾನು ಇಲ್ಲಿಗೆ ಆಗಮಿಸುವ ಮೊದಲು ಚೆನ್ನೈಗೆ ಹೋಗಿದ್ದೆ. ಅಲ್ಲಿ ನಮ್ಮ ದಲಿತನೊಬ್ಬ ಪಿಝಾ ಹಟ್ ಇಟ್ಟಿದ್ದಾನೆ! ಮಾರಾಟವಾಗದೆ ಉಳಿದ ಪಿಝಾಗಳನ್ನು ಮರುದಿನ ಬಿಸಿ ಮಾಡಿಕೊಡಲು ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀಯಾ ಎಂದು ಕೇಳಿದಾಗ, ಮರುದಿನಕ್ಕೆ ಉಳಿಸಿಕೊಳ್ಳುವ ಪ್ರಮೇಯವೇ ಇಲ್ಲ, ಒಂದು ವೇಳೆ ಖಾಲಿಯಾಗದೆ ಉಳಿದರೆ ಅವುಗಳನ್ನು ತೊಟ್ಟಿಗೆ ಹಾಕುತ್ತೇನೆಯೇ ಹೊರತು ಮರುದಿನ ಬಿಸಿ ಮಾಡಿಕೊಡುವುದಿಲ್ಲ ಎಂದ! ಅಂದರೆ ಜನರ ವಿಶ್ವಾಸ ಗಳಿಸುವುದು, ಉಳಿಸಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು. ಹಾಗಾಗಿಯೇ ಆತನನ್ನೂ ಯಾರೂ ದಲಿತನೆಂಬಂತೆ ಕಾಣುವುದಿಲ್ಲ, ಎಲ್ಲರಿಗಿಂತಲೂ ಹೆಚ್ಚು ಗಿರಾಕಿಗಳನ್ನು ಹೊಂದಿದ್ದಾನೆ.

4. ತಮ್ಮ ಬಗ್ಗೆ ಸವರ್ಣೀಯರಲ್ಲಿರುವ ಕೀಳು ಭಾವನೆಯನ್ನು ತೊಡೆದು ಹಾಕಲು ದಲಿತರು ಮಾಡಬೇಕಾಗಿರುವುದೇನು?

“ಜನಾಂಗೀಯ ತಾರತಮ್ಯವನ್ನು ತೊಡೆದು ಹಾಕಬೇಕಾದರೆ ಸಾವಿರಾರು ಸಂಖ್ಯೆಯಲ್ಲಿ ಕರಿಯರು ಉದ್ಯಮಿಗಳಾಗಬೇಕು. ಬಿಳಿಯರಿಗೆ ಉದ್ಯೋಗ ಕೊಡಬೇಕು” ಎಂದು ಮೂವತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿ ಕಪ್ಪುವರ್ಣೀಯ ಬುದ್ಧಿಜೀವಿಗಳು ಒತ್ತಿ ಹೇಳಿದರು. ನಮ್ಮಲ್ಲೂ ಅದೇ ಬದಲಾವಣೆಯಾಗಬೇಕು. ದಲಿತರೆಂದರೆ ಕೆಲಸ ಕೇಳುವವರು ಎಂಬ ಭಾವನೆ ಹೋಗಬೇಕಾದರೆ ಮೇಲ್ಜಾತಿಯವರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ದಲಿತರು ಪಡೆದುಕೊಳ್ಳಬೇಕು. ಹಾಗೆ ಆರ್ಥಿಕ ಮಟ್ಟವನ್ನು ಏರಿಸಿಕೊಂಡು ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜೊತೆ ಸಂಬಂಧ ಬೆಳೆಸಬೇಕು! ಆಗ ಪರಸ್ಪರ ಅಪನಂಬಿಕೆಗಳೂ ದೂರವಾಗುತ್ತವೆ, ಜಾತಿ ಕಂದಕಗಳೂ ಮುಚ್ಚಿ ಹೋಗುತ್ತವೆ. ಸಮಾಜದಲ್ಲೂ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗುತ್ತದೆ!

5. ಹಾಗಾದರೆ ಇಂದಿಗೂ ಮೇಲ್ಜಾತಿ ವಿರುದ್ಧದ ಕೋಪತಾಪಗಳನ್ನೇ ಜೀವಾಳವಾಗಿಟ್ಟುಕೊಂಡಿರುವ ದಲಿತ ನಾಯಕರ ಬಗ್ಗೆ ಏನನ್ನುತ್ತೀರಿ?

ತಪ್ಪು. ನಾವು ಮೇಲ್ಜಾತಿ ದ್ವೇಷ ಬಿಟ್ಟು, ಅವರ ಜತೆ ಕೈಜೋಡಿಸಲು ಹಾಗೂ ಪಾಲುದಾರಿಕೆಗೆ ಯತ್ನಿಸುತ್ತಿದ್ದೇವೆ.

6. ಇನ್ನು ಮೀಸಲಾತಿಯ ವಿಷಯಕ್ಕೆ ಬರುವುದಾದರೆ, ಕೆನೆ ಪದರವನ್ನು ಮೀಸಲಿನಿಂದ ಹೊರಗಿಡುವುದನ್ನು ದಲಿತ ಬುದ್ಧಿಜೀವಿಗಳೇ ವಿರೋಧಿಸುವುದೇಕೆ? ಅದರಿಂದ ಮೀಸಲು ವಂಚಿತ ದಲಿತರಿಗೇ ಲಾಭವಾಗುವುದಿಲ್ಲವೇ?

ಖಂಡಿತ ಸರಿಯಲ್ಲ. ಒಮ್ಮೆ ಮೀಸಲು ಸೌಲಭ್ಯವನ್ನು ಬಳಸಿಕೊಂಡವರು ಜನರಲ್ ಕೆಟಗರಿ ಜತೆ ಸ್ಪರ್ಧೆ ಮಾಡಬೇಕೇ ಹೊರತು ಮುಂದಿನ ತಲೆಮಾರಿಗೂ ಬೇಡಬಾರದು. ಆಗ ಮಾತ್ರ ಉಳಿದವರಿಗೆ ಅದರ ಲಾಭ ಸಿಗಲು ಸಾಧ್ಯ.

7. ಮಾಯಾವತಿಯವರ ಬಗ್ಗೆ ನಿಮಗೇನನಿಸುತ್ತದೆ? ಪ್ರತಿಮೆ ಅನಾವರಣ, ಉದ್ಯಾನವನಗಳ ಮರುನಾಮಕರಣ ಬಿಟ್ಟು ಆಕೆ ದಲಿತರ ಏಳಿಗೆಗೆ ಏನನ್ನಾದರೂ ಮಾಡುತ್ತಿದ್ದಾರೆಯೇ?

ಸೈಕಲಾಜಿಕಲ್ ಎಂಪವರ್್ಮೆಂಟ್. ಆಕೆ ಮಾನಸಿಕ ಮಟ್ಟದಲ್ಲಿ ಬದಲಾವಣೆ ತಂದಿದ್ದಾರೆ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ದಲಿತರು ಬಹಳ ಆತ್ಮವಿಶ್ವಾಸದಿಂದಿದ್ದಾರೆ.

8. ಇಂಗ್ಲಿಷ್ ದೇವಿಯ ಪ್ರತಿಷ್ಠಾಪನೆಯ ನಂತರ ಅದೇನೋ “ಜಾನುವಾರುಗಳ ದೌರ್ಜನ್ಯದಿಂದ ಮುಕ್ತಿ” ಎಂಬ ಹೊಸ ಚಳವಳಿ ಆರಂಭಿಸಿದ್ದೀರಂತಲ್ಲ?

ನೋಡಿ…, ಹಸು, ಎತ್ತು, ಕರು, ಎಮ್ಮೆ, ಮೇಕೆ, ಹಂದಿಗಳ ಹಿಂದೆ ಹೋದರೆ ಏನಾಗುತ್ತೆ? ಅವುಗಳ ಮಾಡುವ ಮಲ, ಮೂತ್ರವನ್ನು ಸ್ವಚ್ಛಗೊಳಿಸಬೇಕು. ಜಾನುವಾರುಗಳು ಅನಕ್ಷರಸ್ಥ ಪ್ರಾಣಿಗಳು. ಅವುಗಳನ್ನು ಮೇಯಿಸಲು ಹೊರಡಿಸಿದಾಗ ಅವು ಮುಂದೆ ಸಾಗುತ್ತವೆ. ದಲಿತರು ಬಾಲ ಹಿಡಿದು ಸಾಗಬೇಕು. ಇಂತಹ ಅನಕ್ಷರಸ್ಥ ಪ್ರಾಣಿಗಳು ನಮ್ಮನ್ನು ಮುನ್ನಡೆಸಿದರೆ ದಲಿತರು ಹೋಗಿ ಸೇರುವುದೆಲ್ಲಿಗೆ? ದಲಿತರು ಜಾನುವಾರುಗಳ ಹಿಂದೆ ಹೋಗುವುದನ್ನು ಬಿಡಬೇಕು. ಅದಕ್ಕೇ ನಾನು ದಲಿತರಿಗೆ ಹೇಳುತ್ತೇನೆ- ನಿಮ್ಮ ವೈರಿಗಳ ವಿರುದ್ಧ ತೆಗೆದುಕೊಳ್ಳಬೇಕಾದ ಅತಿ ದೊಡ್ಡ ಪ್ರತೀಕಾರವೆಂದರೆ ಆತನ ಜತೆ ಕುಸ್ತಿಗಿಳಿಯುವುದಲ್ಲ, ಆತನಿಗೊಂದು ಜಾನುವಾರುವನ್ನು ದಾನವಾಗಿ ಕೊಡುವುದು. ಆಗ ಆತನ ಒಂದು ತಲೆಮಾರು ಜಾನುವಾರುಗಳ ಪಾಲನೆ ಪೋಷಣೆಯಲ್ಲೇ ಹಿಂದೆ ಬೀಳುತ್ತದೆ!

9. ಇವತ್ತು ದಲಿತ ಉದ್ಯಮಿಗಳು ಮಾತ್ರವಲ್ಲ, ದೇಶದ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಬಾಬಾರಾಮದೇವ್, ಮಾತಾ ಅಮೃತಾನಂದಮಯಿ ಅವರಂತಹ ಹಿಂದುಳಿದ ಜನಾಂಗಗಳ ವ್ಯಕ್ತಿಗಳು ದೊಡ್ಡ ಹೆಸರು ಮಾಡುತ್ತಿರುವುದು ದಲಿತ ಚಿಂತಕರಾದ ನಿಮಗೆ ಖುಷಿ ಕೊಡುವುದಿಲ್ಲವೆ?

ಈ ಸಾಧು-ಸಂತರ ಬಗ್ಗೆ ನನಗೆ ಯಾವ ಮೋಹವೂ ಇಲ್ಲ. ಅವರು ಎಲ್ಲರಿಂದ ವಿಮುಖರಾಗಿರುವ ವ್ಯಕ್ತಿಗಳು. ಹಿಂದುಳಿದ ವರ್ಗದ ವ್ಯಕ್ತಿಯೇ ಸಾಧುವಾದರೂ ಆತ ಎಲ್ಲರಂತೆ ತಿನ್ನುವಂತಿಲ್ಲ, ಕುಡಿಯುವ ಹಾಗಿಲ್ಲ, ಆಹಾರ ಸೇವನೆಯಲ್ಲೂ ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಹಾಗಿರುವಾಗ ಮೇಲ್ಜಾತಿ- ಕೆಳಜಾತಿ ಸಂತರ ನಡುವೆ ಯಾವ ವ್ಯತ್ಯಾಸವಿರುತ್ತದೆ.

10. ಮೇಲ್ಜಾತಿಯವರು ದಲಿತರನ್ನು ನೋಡುವ, ಕಾಣುವ, ನಡೆಸಿಕೊಳ್ಳುವ ವಿಧಾನದಲ್ಲಿ ಈಗ ಏನಾದರೂ ಬದಲಾವಣೆ ಕಾಣುತ್ತಿದೆಯೇ?

ಖಂಡಿತ. ದಲಿತರಲ್ಲಿ ಯಾರು ಯಶಸ್ವಿಯಾಗಿದ್ದಾರೋ ಅವರಿಗೆ ಸವರ್ಣೀಯರಿಂದ ಯೋಗ್ಯ ಗೌರವ ದೊರೆಯುತ್ತಿದೆ. ಇದು ಜಾಗತೀಕರಣದ ಕಾಲ. ನಿಮ್ಮ ಜಾತಿಯ ಆಧಾರದ ಮೇಲೆ ಯಾರೂ ನಿಮಗೆ ಗೌರವ ಕೊಡುವುದಿಲ್ಲ. ನೀವು ಮೇಲ್ಜಾತಿಯವರಾಗಿದ್ದು ಕೈಯಲ್ಲಿ ಮೊಬೈಲ್, ಓಡಾಡಲು ಕಾರು ಇಲ್ಲದಿದ್ದರೆ ಯಾರೂ ಕ್ಯಾರೆ ಎನ್ನುವುದಿಲ್ಲ. ದಲಿತನೊಬ್ಬ ಚೆನ್ನಾಗಿ ಉಡುಪು ಧರಿಸಿಕೊಂಡು, ಇಂಗ್ಲಿಷ್್ನಲ್ಲಿ ಸರಾಗವಾಗಿ ಮಾತನಾಡುತ್ತಾ ಒಳ್ಳೆಯ ಕಾರಿನಲ್ಲಿ ಬಂದಿಳಿದರೆ ಯಾರು ತಾನೇ ನಿನ್ನನ್ನು ಮುಟ್ಟುವುದಿಲ್ಲ ಎನ್ನುತ್ತಾರೆ? ಆ ಕಾರಣಕ್ಕಾಗಿಯೇ ದಲಿತರೂ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು, ಕೆಲಸ ಕೊಡುವವರಾಗಬೇಕು ಎಂದು ನಾನು ಪ್ರತಿಪಾದಿಸುತ್ತಿರುವುದು. ದಲಿತರೆಂದರೆ ಕೆಲಸ ಕೇಳುವವರು ಎಂಬ ಭಾವನೆ ಹೋಗಬೇಕಾದರೆ ಮೇಲ್ಜಾತಿಯವರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ದಲಿತರು ಪಡೆದುಕೊಳ್ಳಬೇಕು. ಹಾಗೆ ಆರ್ಥಿಕ ಮಟ್ಟವನ್ನು ಏರಿಸಿಕೊಂಡು ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ಸಂಬಂಧ ಬೆಳೆಸಬೇಕು! ಆಗ ಪರಸ್ಪರ ಅಪನಂಬಿಕೆಗಳೂ ದೂರವಾಗುತ್ತವೆ, ಜಾತಿ ಕಂದಕಗಳೂ ಮುಚ್ಚಿ ಹೋಗುತ್ತವೆ. ಸಮಾಜದಲ್ಲೂ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗುತ್ತದೆ.

ಕೃಪೆ: ಪ್ರತಾಪ ಸಿಂಹ