ನನ್ನ ಬ್ಲಾಗ್ ಪಟ್ಟಿ

ಶನಿವಾರ, ಅಕ್ಟೋಬರ್ 29, 2011

ನನ್ನ ಕನ್ನಡ ನಾಡು

'ಸ್ವಾಹಾ' ಕಾರ್ಯವನ್ನು ಬಯಲಿಗೆಳೆಯುವುದೇ 'ಸ್ವಾಮಿ' ಕಾರ್ಯ (ಬಾಲಸುಬ್ರಮಣ್ಯನ್)

ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ, ಕೆಲವೊಮ್ಮೆ ವಿಘ್ನಸಂತೋಷಿ ಎಂಬ ಭಾವನೆ ಮೂಡಿದರೂ ಆಶ್ಚರ್ಯವಾಗದು. ಅವರು ಈ ಎಲ್ಲವೂ ಹೌದು. ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೆ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು “How to Make Enemies and Antagonise People?’ ಎಂಬ ಪುಸ್ತಕವನ್ನೇ ಬರೆಯಬಹುದು ಎಂದು ಪತ್ರಕರ್ತ ಪ್ರೇಮ್ ಪಣಿಕ್ಕರ್ ಒಮ್ಮೆ ಕಿಚಾಯಿಸಿದ್ದರು. ಈ ವ್ಯಕ್ತಿ ಯಾವಾಗ ನಿಮ್ಮ ಸ್ನೇಹಿತರಾಗಿರುತ್ತಾರೆ, ಯಾವಾಗ ನಿಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ, ಸ್ವತಃ ಅವರೂ ಸೇರಿದಂತೆ! ಒಮ್ಮೆ, ಎಲ್್ಟಿಟಿಇ ಬಗ್ಗೆ ಮೃದುಧೋರಣೆ ತೋರುತ್ತಿರುವ ಮುಖ್ಯಮಂತ್ರಿ ಜಯಲಲಿತಾ ನನ್ನ ಕೊಲೆಗೈಯ್ಯಲು ಒಂದು ಡಜನ್್ಗೂ ಹೆಚ್ಚು ಭಾರಿ ಪ್ರಯತ್ನಿಸಿದ್ದಾರೆ, ಪಿತೂರಿ ನಡೆಸಿದ್ದಾರೆ ಎಂದು ಗುರುತರ ಆರೋಪ ಮಾಡಿದ್ದ ಅವರು, 1998ರ ವೇಳೆಗೆ ಜಯಲಲಿತಾ ಅವರ ಪರಮಾಪ್ತರಾಗಿ ಬಿಟ್ಟಿದ್ದರು! ಅಷ್ಟೇಕೆ, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮೊಟ್ಟಮೊದಲ ಭಾರಿಗೆ ಸ್ಥಿರ ಸರ್ಕಾರ ರಚಿಸಲು ಮುಂದಾದಾಗ ಎನ್್ಡಿಎ ಮೈತ್ರಿಕೂಟ ಸೇರಿದ ಎಐಎಡಿಎಂಕೆ ಧುರೀಣೆ ಜಯಲಲಿತಾ ಅವರು ಸುಬ್ರಹ್ಮಣ್ಯನ್ ಸ್ವಾಮಿಯವರನ್ನು ಕ್ಯಾಬಿನೆಟ್್ಗೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಇಟ್ಟು ಬಿಟ್ಟರು!! ಬಿಜೆಪಿಗೆ ಒಂಥರಾ ಬಿಸಿ ತುಪ್ಪವಾಗಿ ಬಿಟ್ಟಿತು. ಆದರೆ ಸುಬ್ರಹ್ಮಣ್ಯನ್ ಸ್ವಾಮಿಯಂಥವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದೆಂದರೆ ಬಗಲಿಗೆ ಕೆಂಡ ಕಟ್ಟಿಕೊಂಡಂತೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿತ್ತು. ಈ ಮನುಷ್ಯ ಸುಮ್ಮನೆ ಇರುವವನಲ್ಲ, ಸ್ನೇಹಿತನಾಗಿದ್ದಾಗ ಸಾಕ್ಷ್ಯ ಕಲೆಹಾಕಿ ಸ್ನೇಹ ಕಡಿದುಹೋದ ಮೇಲೆ ಮೈಮೇಲೆ ಎಗರಿ ಬರುತ್ತಾನೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡ ವಾಜಪೇಯಿ, ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಸುಬ್ರಹ್ಮಣ್ಯನ್ ಸ್ವಾಮಿ ಮಾತ್ರ ಬಿಲ್್ಕುಲ್ ಬೇಡವೆಂದರು. ಅಂತಿಮವಾಗಿ ಸರ್ಕಾರವೇನೋ ರಚನೆಯಾಯಿತು, ಅದರ ಬೆನ್ನಲ್ಲೇ ಸುಬ್ರಹ್ಮಣ್ಯನ್ ಸ್ವಾಮಿ ಅವರ ಟೀಕಾ ಪ್ರಹಾರವೂ ಆರಂಭವಾಯಿತು. ‘ಬಿಜೆಪಿ ಸರ್ಕಾರ ಅಮೆರಿಕದ ಎನ್ರಾನ್್ಗೆ ಅನುಮತಿ ಕೊಟ್ಟಿದ್ದೇಕೆ? ಹದಿಮೂರು ದಿನಗಳ ಕಾಲ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಜಪೇಯಿಯವರೇ ಎನ್ರಾನ್ ಯೋಜನೆಗೆ ಯೆಸ್ ಎಂದರು, ಏಕೆ? ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಿಜೆಪಿಗರು ಕೋಕಾ ಕೋಲಾ ಕುಡಿಯುವುದೇಕೆ? ಕೋಲಾ ಬದಲು ನಿಂಬೆ ರಸ ಹೀರಬಹುದಿತ್ತಲ್ಲವೆ?’
ಇಂತಹ ಹತ್ತಾರು ಪ್ರಶ್ನೆಗಳನ್ನು ಹಾಕಿ ಬಿಜೆಪಿಯನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡುಮಾಡಲು ಪ್ರಯತ್ನಿಸಿದರು. ಅದಕ್ಕೂ ಮೊದಲು ವಿ.ಪಿ. ಸಿಂಗ್ ಅವರನ್ನು ಹಣಿಯುವುದಕ್ಕಾಗಿ ಯಾವ ವ್ಯಕ್ತಿಯ ವಿರುದ್ಧ ಆ ಹಿಂದೆ ತೀವ್ರ ಹೋರಾಟ ನಡೆಸಿದ್ದರೋ ಅದೇ ಚಂದ್ರಶೇಖರ್ ಅವರ ಪಕ್ಷ ವಹಿಸಿದ್ದರು. ಸುಬ್ರಹ್ಮಣ್ಯನ್ ಸ್ವಾಮಿಯವರ ನಿಘಂಟಿನಲ್ಲಿ ನಿಷ್ಠೆ, ಬದ್ಧತೆಗಳಿಗೆ ಸ್ಥಾನವೇ ಇರಲಿಲ್ಲ. ಇಂತಹ ವಿಚಿತ್ರ, ಕೆಲವೊಮ್ಮೆ ವಿಕ್ಷಿಪ್ತ ಮನಃಸ್ಥಿತಿಗಳ ನಡುವೆಯೂ ಅವರು ಸರ್ಕಾರಗಳನ್ನು ಮುಜುಗರಕ್ಕೀಡುಮಾಡಿದ್ದು, ಪತನಕ್ಕೆ ಕಾರಣವಾಗಿದ್ದು ಇದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಬೆಳಕಿಗೆ ತಂದು ರಾಮಕೃಷ್ಣ ಹೆಗಡೆಯವರ ಸರ್ಕಾರ ಬೀಳುವುದಕ್ಕೆ ಕಾರಣರಾಗಿದ್ದೇ ಸುಬ್ರಹ್ಮಣ್ಯನ್ ಸ್ವಾಮಿ. ಅವರು ಹೊಸ ಹೊಸ ಪದಗುಚ್ಚಗಳನ್ನು ಹುಟ್ಟುಹಾಕಿದ್ದೂ ಇದೆ. ರಾಮಕೃಷ್ಣ ಹೆಗಡೆಯವರ ಮನಃಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ‘Intellectual Constipation’ನಿಂದ ನರಳುತ್ತಿದ್ದಾರೆ ಎಂದಿದ್ದರು. ಅವರನ್ನು ಯಾರೂ ತನ್ನ ಸ್ನೇಹಿತನೆಂದು ಭಾವಿಸುವುದಕ್ಕಾಗಲಿ, ನಂಬುವುದಕ್ಕಾಗಲಿ, ವಿಶ್ವಾಸವಿಡುವುದಕ್ಕಾಗಲಿ ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿಯನ್ನು ತಾವೇ ಸೃಷ್ಟಿಸಿಕೊಂಡಿದ್ದರು. ಒಂದು ಹಂತದಲ್ಲಂತೂ ಅವರೊಬ್ಬ ಸಿನಿಕ ಎಂದೇ ದೇಶವಾಸಿಗಳು ಭಾವಿಸುವಂತಾಗಿತ್ತು.
ಇಂತಹ ಸುಬ್ರಹ್ಮಣ್ಯನ್ ಸ್ವಾಮಿ ಒಮ್ಮೆಲೆ ಬದಲಾಗಿಬಿಟ್ಟರೆ?!
ಅಂಥದ್ದೊಂದು ಅನುಮಾನ ಈಗೀಗ ಕಾಡಲಾ ರಂಭಿಸಿದೆ. ಅವರ ಹಳೆಯ ತಿಕ್ಕಲುತನಗಳ ನಡುವೆಯೂ ಅವರನ್ನು ನಾವು ಇಷ್ಟಪಡಲು ಸಾಕಷ್ಟು ಕಾರಣಗಳು ಸೃಷ್ಟಿಯಾಗುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೊಸದೊಂದು ಸೂಚನೆಯೇ ನಮಗೆ ಸಿಗುತ್ತಿದೆ. ಎಪ್ಪತ್ತೆರಡು ವರ್ಷದ ಅವರ ನಡತೆಯಲ್ಲಿ ಆಹ್ಲಾದಕರ, ಆಪ್ಯಾಯಮಾನವಾದ ಬದಲಾವಣೆಗಳು, ಅದರಿಂದ ಸಮಾಜ ಮತ್ತು ದೇಶಕ್ಕೆ ಒಳಿತಾಗುವ ಲಕ್ಷಣಗಳು ಕಾಣುತ್ತಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಪಿಎಚ್್ಡಿಯನ್ನೂ ಮಾಡಿರುವ, ಇಬ್ಬರು ನೊಬೆಲ್ ಪುರಸ್ಕೃತರ ಜತೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರ ಜ್ಞಾನ, ತಿಳಿವಳಿಕೆಯ ಲಾಭ ದೇಶ ಮತ್ತು ಸಮಾಜಕ್ಕೆ ಲಭ್ಯವಾಗುವ ಎಲ್ಲ ಸಂಕೇತಗಳೂ ಗೋಚರಿಸುತ್ತಿವೆ. ಅವರು ರಾಜಕೀಯದೊಳಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ‘ಕ್ರುಸೇಡರ್್’ ಆಗಿ ಹೊರಹೊಮ್ಮಿದ್ದಾರೆ, ಪ್ರತಿಪಕ್ಷ ಬಿಜೆಪಿಗಿಂತ ಒಬ್ಬ ಸುಬ್ರಹ್ಮಣ್ಯನ್ ಸ್ವಾಮಿ ಇವತ್ತು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಇಷ್ಟಕ್ಕೂ ಅವರು ಕೇಂದ್ರ ಸರ್ಕಾರವನ್ನು ಮಟ್ಟಹಾಕಿದ, ಸೊಕ್ಕಡಗಿಸಿದ, ನಿದ್ದೆಗೆಡಿಸಿದ ಘಟನೆಗಳಾವುವು ಅಂದುಕೊಂಡಿರಿ?
1. ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ವೋಟು ಬೇಡಿದ್ದು, ಕೊನೆಗೆ ಅಧಿಕಾರದ ಗದ್ದುಗೆ ಏರಿದ್ದು ಬಿಜೆಪಿ. ಆದರೆ ಅದೇ ರಾಮನ ಸೇತುವೆಯನ್ನು ಯುಪಿಎ ಸರ್ಕಾರ ಹಾಗೂ ಕರುಣಾನಿಧಿಯವರ ತಮಿಳುನಾಡು ಸರ್ಕಾರ 2007ರಲ್ಲಿ ನಾಶಪಡಿಸಲು ಹೊರಟಾಗ ಬಿಜೆಪಿ ಬೊಬ್ಬೆ ಹಾಕಿತೇ ಹೊರತು, ಬೇರೇನನ್ನೂ ಮಾಡಲಿಲ್ಲ. ಅಂದು ರಾಮಸೇತುವಿನ ರಕ್ಷಣೆಗೆ ಮುಂದಾಗಿದ್ದು ಇದೇ ಸ್ವಾಮಿ. ಸೇತು ಸಮುದ್ರ ಹಡಗು ಕಾಲುವೆ ಯೋಜನೆಯನ್ನು ಕೈಬಿಡುವಂತೆ ಸುಬ್ರಹ್ಮಣ್ಯನ್ ಸ್ವಾಮಿಯವರು 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು. ಆದರೆ ಅವರ ಪತ್ರವನ್ನು ಪ್ರಧಾನಿ ನಿರ್ಲಕ್ಷಿಸಿದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸ್ವಾಮಿ, ಯೋಜನೆಗೆ ತಡೆಯಾಜ್ಞೆ ತಂದರು!
2. 1962ರ ಯುದ್ಧದ ನಂತರ ಭಾರತ-ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿತ್ತು. ಚೀನಾದ ಜತೆ ಮತ್ತೆ ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡಿದ್ದು ಮೊರಾರ್ಜಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಆದರೆ ಟಿಬೆಟ್್ನಲ್ಲಿರುವ ಹಿಂದು ಧರ್ಮದ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಗೆ 1981ರಲ್ಲಿ ಚೀನಾ ಅವಕಾಶ ನೀಡುವಂತೆ ಮಾಡಿದ್ದು ಸುಬ್ರಹ್ಮಣ್ಯನ್ ಸ್ವಾಮಿಯವರ ಮನವೊಲಿಕೆ ಪ್ರಯತ್ನ.
3. ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಆರಂಭಿಸಿದ್ದು ಮಾಜಿ ಪ್ರಧಾನಿ ನರಸಿಂಹ ರಾವ್, ಅದನ್ನು ಗಟ್ಟಿಗೊಳಿಸಿದ್ದು, ರಕ್ಷಣಾ ಒಪ್ಪಂದಗಳವರೆಗೂ ಕೊಂಡೊಯ್ದಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ 1982ರಲ್ಲಿ ಇಸ್ರೇಲ್್ಗೆ ಮೊಟ್ಟಮೊದಲ ಭಾರಿಗೆ ಭೇಟಿ ನೀಡಿದ ಭಾರತೀಯ ರಾಜಕಾರಣಿ ಸುಬ್ರಹ್ಮಣ್ಯನ್ ಸ್ವಾಮಿ. ಆಗಿನ ಖ್ಯಾತ ಇಸ್ರೇಲಿ ನಾಯಕ ಇಝೆಲ್ ರಬಿನ್, ಪ್ರಧಾನಿ ಮೆನಕಿಮ್ ಬೆಗಿನ್ ಅವರನ್ನು ಭೇಟಿಯಾಗುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಸ್ಥಾಪನೆಗೆ ಪೂರಕ ಪ್ರಯತ್ನ ಮಾಡಿದರು.
4. ಇವೆಲ್ಲಕ್ಕಿಂತ ಮುಖ್ಯವಾಗುವುದು 2ಜಿ ಹಗರಣದ ಆಳ ಮತ್ತು ಹರವನ್ನು ತೆರೆದಿಡುವಲ್ಲಿ ಸ್ವಾಮಿ ವಹಿಸಿದ ಪಾತ್ರ. ಮಾಜಿ ಟೆಲಿಕಾಂ ಸಚಿವ ಎ. ರಾಜ ರಾಜಿನಾಮೆ ನೀಡಿದ್ದು 2011ರಲ್ಲಾಗಿದ್ದರೂ ಸುಬ್ರಹ್ಮಣ್ಯನ್ ಸ್ವಾಮಿ 2008ರಿಂದಲೇ ಆತನ ಹಿಂದೆ ಬಿದ್ದಿದ್ದರು, ಹಗರಣವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದರು. ರಾಜ ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು 2008ರಲ್ಲಿ ಬರೆದ 5 ಪತ್ರಗಳನ್ನು ಪ್ರಧಾನಿ ಕಸದ ಬುಟ್ಟಿಗೆ ಎಸೆದಾಗ, ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುಪ್ರೀಂಕೋರ್ಟ್ ರಾಜಾ ಸೇರಿದಂತೆ ಉದ್ಯಮ ಸಂಸ್ಥೆಗಳ ದೊಡ್ಡ ದೊಡ್ಡ ತಲೆಗಳ ಪಾತ್ರವನ್ನೂ ತಲಾಷ್ ಮಾಡಬೇಕೆಂದು ಸಿಬಿಐಗೆ ನಿರ್ದೇಶನ ನೀಡಿತು. ಅಲ್ಲದೆ ಸಿಬಿಐ ತನಿಖೆ ಮೇಲೆ ತಾನೇ ನಿಗಾ ಇಟ್ಟಿತು. ಅದರ ಪರಿಣಾಮವೇ ಇಂದು ಎಲ್ಲರೂ ತಿಹಾರ್ ಜೈಲು ಸೇರಿರುವುದು. ಹಾಗಂತ ಸ್ವಾಮಿ ಸುಮ್ಮನಾಗಲಿಲ್ಲ. ಹಾಲಿ ಗೃಹ ಸಚಿವ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ರಾಜಾ ಜತೆ ಸಮಾನ ಪಾಲುದಾರ ಎಂದು ಚಿದಂಬರಂ ಅವರನ್ನೂ ಕಟಕಟೆಗೆ ಎಳೆದು ತರಲು ಸ್ವಾಮಿ ಮುಂದಾಗಿದ್ದಾರೆ. ಶಿವಗಂಗಾದಿಂದ ಅಕ್ರಮವಾಗಿ ಚುನಾಯಿತರಾಗಿದ್ದಾರೆಂದು ಚಿದಂಬರಂ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್್ಗೂ ಹೋಗಿದ್ದಾರೆ. ಸೋನಿಯಾ ಗಾಂಧಿಯವರನ್ನೂ ಬಿಟ್ಟಿಲ್ಲ. ಸೋನಿಯಾ ಗಾಂಧಿಯವರನ್ನು ಒಬ್ಬ ಭ್ರಷ್ಟ ಮಹಿಳೆ ಎಂದು ಕರೆಯುವ, ಹಾಗೆ ಕರೆದೂ ಜಯಿಸುವ ತಾಕತ್ತು ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ಸುಬ್ರಹ್ಮಣ್ಯನ್ ಸ್ವಾಮಿಯವರಿಗೆ ಮಾತ್ರ! ಸಾವಿರಾರು ಕೋಟಿ ರು.ಗಳನ್ನು ಆಕೆ ನುಂಗಿದ್ದಾರೆ ಎಂದು ಸ್ವಾಮಿ ಬಹಿರಂಗ ಆಪಾದನೆ ಮಾಡಿದ್ದಾರೆ. ಹೊಸ ದೆಹಲಿಯಲ್ಲಿರುವ ಅವರ ನಿವಾಸದ ಮೇಲೆ ಕಾಂಗ್ರೆಸ್ಸಿಗರು ದಾಳಿ ಮಾಡಿದ್ದರೂ ಸ್ವಾಮಿ ಸುಮ್ಮನಾಗಿಲ್ಲ.
ಈ ಮಧ್ಯೆ ಮುಂಬೈ ಭಯೋತ್ಪಾದಕ ದಾಳಿಯ ನಂತರ ಡಿಎನ್್ಎ ಪತ್ರಿಕೆಗೆ ಬರೆದ ‘ಹೌ ಟು ವೈಪ್್ಔಟ್ ಇಸ್ಲಾಮಿಕ್ ಟೆರರ್ರಿಸಂ’ ಎಂಬ ಅವರ ಲೇಖನ ‘ಸಿಕ್್’ಯುಲರ್್ವಾದಿಗಳಿಂದ ತೀವ್ರ ಟೀಕೆಗೆ ಒಳಗಾದರೂ ಸ್ವಾಮಿ ಸತ್ಯವಾದ ಮಾತುಗಳನ್ನಾಡಿದ್ದಾರೆ. ಕೇರಳದಲ್ಲಿ ತಲೆಯೆತ್ತುತ್ತಿರುವ ಇಸ್ಲಾಮಿಕ್ ಬ್ಯಾಂಕಿಂಗ್ ವಿರುದ್ಧ ಹೋರಾಡಿದ್ದೂ ಸ್ವಾಮಿಯವರೇ ಹೊರತು ಬಿಜೆಪಿಯಲ್ಲ. ಈ ಮಧ್ಯೆ, ಕಳೆದ ಮಂಗಳವಾರ ಯುಪಿಎ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್್ಎಸಿ) ಮುಖ್ಯಸ್ಥೆ ಸೋನಿಯಾ ಗಾಂಧಿಯವರ ವಿರುದ್ಧ ದೆಹಲಿಯಲ್ಲಿ ಎಫ್್ಐಆರ್ ದಾಖಲಿಸಿದ್ದಾರೆ. ಆಕೆಯ ನೇತೃತ್ವದ ಎನ್್ಎಸಿ ತರಲು ಹೊರಟಿರುವ ಕೋಮುಹಿಂಸಾಚಾರ ತಡೆ ಕಾಯಿದೆ ಹಿಂದುಗಳಿಗೆ ಹೇಗೆ ಮಾರಕವಾಗಲಿದೆ ಮತ್ತು ಹಿಂದುಗಳನ್ನು ಹಣಿಯುವ ಉದ್ದೇಶ ಹೊಂದಿದೆ ಎಂಬುದನ್ನು ತಮ್ಮ ದೂರಿನಲ್ಲಿ ಪರಿ ಪರಿಯಾಗಿ ವಿವರಿಸಿದ್ದಾರೆ. ಹೀಗೆ ಅವರೊಬ್ಬ ಹಿಂದುಪರ ‘ಕ್ರೆಡಿಬಲ್ ವಾಯ್ಸ್್’ಆಗಿ ಹೊರಹೊಮ್ಮಿದ್ದಾರೆ. ಹಾಗಾಗಿ ರಾಷ್ಟ್ರವಾದಿಗಳ ಮನಸು ಮತ್ತು ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕ, ಕೋರ್ಟ್್ಗೆಳೆಯುವ ಮೂಲಕ ಭ್ರಷ್ಟರನ್ನು ಮಟ್ಟಹಾಕುತ್ತಿದ್ದಾರೆ, ನಡುಕ ಹುಟ್ಟಿಸುತ್ತಿದ್ದಾರೆ. ಅವರ ಪಾಲಿಗೆ ‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯು ವುದೇ ‘ಸ್ವಾಮಿ’ಕಾರ್ಯ! ಅದು ಜಾರಿಯಲ್ಲಿರಲಿ.
- ಕೃಪೆ: ಪ್ರತಾಪ ಸಿಂಹ

ಶನಿವಾರ, ಅಕ್ಟೋಬರ್ 22, 2011

ಇವರ ವರದಿಗಳು ಸರ್ಕಾರಕ್ಕೆ ಮಾತ್ರ ‘ವಿನೋದ’ ತರುತ್ತಿಲ್ಲ!

ನಮ್ಮ ಕೇಂದ್ರ ಸರ್ಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದಾರೆ, ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದಾರೆ, ಹಾಲಿ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಈಗ ಕಾಡಲು ಆರಂಭಿಸಿದೆ, ಒಂದು ವೇಳೆ ಚಿದಂಬರಂ ಅವರು ರಾಜಿನಾಮೆ ನೀಡಬೇಕಾಗಿ ಬಂದರೆ ಕುತ್ತು ಕೊನೆಗೆ ಬಂದು ನಿಲ್ಲುವುದು ತನ್ನ ಕುರ್ಚಿಯ ಬಳಿಯೇ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಯಭೀತಿಗೊಂಡಿದ್ದಾರೆ, ಅವರ ಪ್ರಾಮಾಣಿಕತೆ, ಕಾರ್ಯದಕ್ಷತೆ ಬಗ್ಗೆ ಜನರ ಮನದಲ್ಲೂ ಅನುಮಾನಗಳು ಮನೆಮಾಡಿವೆ, ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳು ತಿಹಾರ್ ಜೈಲು ಸೇರಿದ್ದಾರೆ, ಎ. ರಾಜ, ಕನಿಮೋಳಿ, ಕಲ್ಮಾಡಿ ಜೈಲೇ ಶಾಶ್ವತವಾಗಿ ಬಿಡುತ್ತದೇನೋ ಎಂಬ ಆತಂಕದಲ್ಲಿದ್ದಾರೆ, ಮಾಜಿ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಮ್ಮನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಮಾಡುವಂತಾಗಿ ಬಿಟ್ಟಿದೆ, ತಮ್ಮ ಇಲಾಖೆಯಲ್ಲಿ ನುಂಗಿರುವುದನ್ನು ಯಾವ ಕ್ಷಣಕ್ಕೂ ಹೊರಹಾಕಬಹುದು ಎಂದು ಅಧಿಕಾರಶಾಹಿಗಳು, ಮಂತ್ರಿಗಳು ನಡುಗಲು ಆರಂಭಿಸಿದ್ದಾರೆ. ಈ ಮಧ್ಯೆ 2011, ಜೂನ್ 29ರಂದು ತಮ್ಮ ನಿವಾಸದಲ್ಲಿ ಐದು ಪ್ರಮುಖ ಮಾಧ್ಯಮ ಸಂಸ್ಥೆಗಳ ಸಂಪಾದಕರ ಜತೆ ನಡೆಸಿದ ಸಂವಾದ/ಗೋಷ್ಠಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು, ‘ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಹದ್ದುಮೀರಿ ನಡೆಯುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಕಾರ್ಯವ್ಯಾಪ್ತಿ ದಾಟಿ ಸರ್ಕಾರದ ನೀತಿನಿರೂಪಣೆಗಳ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿಎಜಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಹಾಗಾದರೆ…
ರಾಷ್ಟ್ರದ ಪ್ರಧಾನಿ ಕೋಪತಾಪ ವ್ಯಕ್ತಪಡಿಸುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿರುವ, ಸರ್ಕಾರದ ಮೈಯಲ್ಲಿ ಬೆವರೂರುವಂತೆ ಮಾಡಿರುವ, ಭ್ರಷ್ಟರಿಗೆ ಇಷ್ಟೆಲ್ಲಾ ತ್ರಾಸ ಕೊಡುತ್ತಿರುವ ವ್ಯಕ್ತಿಯಾದರೂ ಯಾರು?
ವಿನೋದ್ ರಾಯ್!
2008, ಜನವರಿ 7ರಂದು ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿನೋದ್ ರಾಯ್ ಮಾಡಿದ್ದೇನು ಗೊತ್ತೆ?
1. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ(NHRM)ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದಿದ್ದೇವೆ ಎಂಬ ಕೇಂದ್ರ ಸರ್ಕಾರದ ಪ್ರತಿಪಾದನೆ ಎಂತಹ ಹಸಿ ಸುಳ್ಳು ಎಂಬ ವರದಿಯನ್ನು ಸಿಎಜಿ 2009ರಲ್ಲಿ ನೀಡಿತು. ವಾಸ್ತವದಲ್ಲಿ ದೇಶದ 71 ಪರ್ಸೆಂಟ್ ಜಿಲ್ಲೆಯಲ್ಲಿ ಈ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂಬ ಅಂಶವನ್ನು ಅದು ಹೊರಹಾಕಿತು!
2. ಕಾಮನ್ವೆಲ್ತ್ ಹಗರಣವನ್ನು ಬೆಳಕಿಗೆ ತಂದಿದ್ದೇ 2009ರ ಸಿಎಜಿ ವರದಿ! ಎಷ್ಟೊಂದು ಅವ್ಯವಹಾರಗಳು ನಡೆದಿವೆ ಹಾಗೂ ನಡೆಯುತ್ತಿವೆ ಎಂಬುದನ್ನು ರಾಷ್ಟ್ರದ ಮುಂದಿಟ್ಟ ಸಿಎಜಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಜೈಲು ಸೇರಲು ಭಾಷ್ಯ ಬರೆಯಿತು.
3. 2009ರಲ್ಲಿ ಅಡ್ಮಿರಲ್ ಗೋರ್ಶ್ಕೋವ್ (ರಷ್ಯಾದಿಂದ ಹಳೇ ಹಡಗು ಖರೀದಿ) ಹಗರಣ ಬಹಿರಂಗ.
4. 2009ರಲ್ಲಿ ಶಸ್ತ್ರಾಸ್ತ್ರ ಖರೀದಿ ಹಗರಣ ಹಾಗೂ ಸರ್ಕಾರದ ಬೊಕ್ಕಸಕ್ಕೆ 9 ಸಾವಿರ ಕೋಟಿ ರೂ. ನಷ್ಟವುಂಟುಮಾಡಿದ ಅವ್ಯವಹಾರ ಬೆಳಕಿಗೆ.
5. 2011ರಲ್ಲಿ ಇಸ್ರೇಲ್್ನಿಂದ ನಮ್ಮ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’(RAW)ಮಾಡಿದ ಚಾಲಕ ರಹಿತ ವಿಮಾನ ಖರೀದಿಯಲ್ಲಿ ಎಸಗಲಾದ 450 ಕೋಟಿ ಅವ್ಯವಹಾರ ಹೊರಕ್ಕೆ.
6. 2ಜಿ ಸ್ಪೆಕ್ಟ್ರಂ ಹಗರಣ! 2003ರಿಂದ 6 ವರ್ಷಗಳವರೆಗಿನ ದಾಖಲೆ, ಲೆಕ್ಕ ಪತ್ರಗಳನ್ನು ಪರಿಶೀಲಿಸಿ 2ಜಿ ಹಗರಣವನ್ನು ರಾಷ್ಟ್ರದ ಮುಂದೆ ಖುಲ್ಲಂಖುಲ್ಲಾ ಮಾಡಿದ್ದೇ ಸಿಎಜಿ. ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ವರದಿ ನೀಡಿದ ಪರಿಣಾಮವೇ ನಮ್ಮ ಮಂತ್ರಿಮಹೋದಯರಿಂದು ಜೈಲು ಸೇರಿದ್ದಾರೆ.
ಇದೇನು ಸಾಮಾನ್ಯ ಕೆಲಸವೇ? ಅಂತಹ ಅಣ್ಣಾ ಹಜಾರೆಯವರ ಚಾರಿತ್ರ್ಯ ವಧೆ ಮಾಡಲು ಮುಂದಾದ, ಭ್ರಷ್ಟರೆಂದು ಕರೆದ, ಬಾಬಾ ರಾಮ್್ದೇವ್ ಬೆಂಬಲಿಗರ ಮೇಲೆ ಲಾಟಿ ಪ್ರಹಾರ ಮಾಡಿ ಒಬ್ಬರ ಜೀವವನ್ನೇ ತೆಗೆದ ಕಾಂಗ್ರೆಸ್ ಪಕ್ಷ ವಿನೋದ್ ರಾಯ್ ಅವರನ್ನು ಸುಮ್ಮನೆ ಬಿಟ್ಟೀತೆ?
ಮೊದಲಿಗೆ 1.76 ಲಕ್ಷ ಕೋಟಿ ರೂ. ನಷ್ಟವೆಂಬುದು ತುಂಬಾ ಉತ್ಪ್ರೇಕ್ಷೆಯ ಅಂದಾಜು ಎಂದು ಕಾಂಗ್ರೆಸ್ ಟೀಕಿಸಿತು. ಆದರೆ ವಿನೋದ್ ರಾಯ್ ಜಗ್ಗಲಿಲ್ಲ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ಕಾಂಗ್ರೆಸ್ ರಚಿಸಿತಾದರೂ ತನ್ನದೇ ಸಂಸದ ಪಿ.ಸಿ. ಚಾಕೋ ಅವರನ್ನೇ ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಜೆಪಿಸಿ ವಿನೋದ್ ರಾಯ್ ಅವರನ್ನೇ ವಿಚಾರಣೆಗೆ ಬರುವಂತೆ ಸೂಚಿಸಿದೆ! ಹಾಗಂತ ವಿನೋದ್ ರಾಯ್ ಬಗ್ಗುವವರಲ್ಲ. ನಾನು ಯಾರ ಮುಂದೆ ಬೇಕಾದರೂ ದಾಖಲೆ ಸಮೇತ ಅಂಕಿ-ಅಂಶ ನೀಡುತ್ತೇನೆ ಎಂದಿದ್ದಾರೆ. ಮೊನ್ನೆ ಮಂಗಳವಾರ ಹೈದರಾಬಾದ್್ನ ಪೊಲೀಸ್ ಅಕಾಡೆಮಿಯಲ್ಲಿ ನಡೆದ 26ನೇ ಸರ್ದಾರ್ ವಲ್ಲಭಭಾಯಿ ಜ್ಞಾಪನಾ ಭಾಷಣ ಮಾಡಿದ ವಿನೋದ್ ರಾಯ್, ‘ಈ ಸರ್ಕಾರದ ಸಮಗ್ರತೆ ತಳಕ್ಕಿಳಿದಿದೆ, ಆಡಳಿತ ಪಾತಾಳ ಸೇರಿದೆ, ಸರ್ಕಾರಿ ಅಧಿಕಾರಿಗಳ ಅತ್ಮಸ್ಥೈರ್ಯ ಉಡುಗಿಹೋಗಿದೆ. ಹಾಗಾಗಿ ನಿರ್ಣಯ ಕೈಗೊಳ್ಳುವಿಕೆಯೇ ಬಲಿಪಶುವಾಗಿ ಬಿಟ್ಟಿದೆ’ ಎನ್ನುವ ಮೂಲಕ ಸರ್ಕಾರದ ಜತೆ ಸಂಘರ್ಷಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದ್ದಾರೆ.
ಅವರು ನಮಗೆ ಆಪ್ತವಾಗುತ್ತಿರುವುದೇ ಇಂತಹ ಎದೆಗಾರಿಕೆ ತೋರುತ್ತಿರುವುದರಿಂದ!
ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ, ಲೋಕಾಯುಕ್ತ, ಮುಂದೆ ಲೋಕಪಾಲ ಮುಂತಾದ ಬಲಿಷ್ಠ ಇನ್್ಸ್ಟಿಟ್ಯೂಷನ್್ಗಳ ರಚನೆ ಜತೆಗೆ ಚುನಾವಣಾ ಆಯೋಗ ಬಲಗೊಳಿಸಿದ ಟಿ.ಎನ್. ಶೇಷನ್, ಖ್ಯಾತ ಸಿವಿಸಿ (ಮುಖ್ಯ ಜಾರಿ ಆಯುಕ್ತ) ಎನ್. ವಿಠ್ಠಲ್ ಹಾಗೂ ಹಾಲಿ ಸಿಎಜಿ ವಿನೋದ್ ರಾಯ್ ಅವರಂಥ ಕ್ರುಸೇಡರ್್ಗಳೂ ಪ್ರಮುಖವಾಗುತ್ತಾರೆ. ನೀವೇ ಯೋಚನೆ ಮಾಡಿ, ಕಾಮನ್ವೆಲ್ತ್ ಹಾಗೂ 2ಜಿ ಬಗ್ಗೆ ಸಿಎಜಿ ಧೈರ್ಯಶಾಲಿ ವರದಿ ನೀಡದೇ ಹೋಗಿದ್ದರೆ ರಾಷ್ಟ್ರಾದ್ಯಂತ ಭ್ರಷ್ಟಾಚಾರ ವಿರೋಧಿ ಭಾವನೆ ವ್ಯಾಪಿಸಲು, ಅಣ್ಣಾ ಹಜಾರೆ ಜನರ ಧ್ವನಿಯಾಗಿ ಹೊರಹೊಮ್ಮಲು ಸಾಧ್ಯವಿತ್ತೇ? ಅವರ ಒಂದು ವರದಿ ಕಲ್ಮಾಡಿಯನ್ನೂ ಜೈಲಿಗೆ ದಬ್ಬಿತು, ಎ. ರಾಜ ಮಂತ್ರಿ ಪದವಿ ಕಳೆದುಕೊಳ್ಳುವ ಜತೆಗೆ ಕೃಷ್ಣನ ಜನ್ಮಸ್ಥಳವನ್ನು ಸೇರುವಂತೆ ಮಾಡಿತು. ಉದ್ಯಮ ಕ್ಷೇತ್ರದ ಮುಖ್ಯಸ್ಥರನ್ನೂ ಕಂಬಿ ಎಣಿಸುವಂತೆ ಮಾಡುವ ಮೂಲಕ ದುಡ್ಡಿದ್ದರೆ ಏನನ್ನೂ ಮಾಡಬಹುದು, ಮಾಡಿ ಜಯಿಸಬಹುದು ಎಂಬ ನಂಬುಗೆಯನ್ನು ಸುಳ್ಳಾಗಿಸಿತು.
ಅವರ ಬಗ್ಗೆ ಗೌರವ ಮೂಡುವುದೇ, ನಮ್ಮ ಮನಸ್ಸು ಅವರಿಗೊಂದು ಸಲಾಮು ಹಾಕುವುದೇ ಈ ಕಾರಣಕ್ಕೆ!
1972ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ವಿನೋದ್ ರಾಯ್ ವೃತ್ತಿಯಲ್ಲಿ, ಜವಾಬ್ದಾರಿಯಲ್ಲೂ ಕುಶಲಮತಿ ಎನಿಸಿಕೊಂಡವರು. ಅದು 2006. ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದರು. ಮುಂಬರುವ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದ್ದರು. ಅಚಾನಕ್ಕಾಗಿ ಪ್ಯಾರಾವೊಂದು ಕಂಡಿತು. ಅದರಲ್ಲಿ ‘ಇಂಡಿಯಾ ಇನ್್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ’ ಎಂಬ ಕಂಪನಿ ಆರಂಭ ಮಾಡುವ ವಾಗ್ದಾನವಿತ್ತು. ಅಣಕವೆಂದರೆ ಚಿದಂಬರಂ ಹಿಂದಿನ ಬಾರಿಯ ಬಜೆಟ್ ಮಂಡನೆ ವೇಳೆಯೇ ಅಂಥದ್ದೊಂದು ಕಂಪನಿ ಆರಂಭ ಮಾಡುವುದಾಗಿ ಭಾಷಣದಲ್ಲಿ ಹೇಳಿದ್ದರು! ಅದು ನೆನಪಾಗಿ ಕೋಪೋದ್ರಿಕ್ತರಾದ ಅವರು, ‘ನಿಮಗೆ ಒಂದು ಕಂಪನಿ ಆರಂಭಿಸಲು ಎಷ್ಟು ಕಾಲ ಬೇಕು?’ ಎಂದು ರೇಗಿದರು. ಮಾಮೂಲಿ ಕಾರಣ. ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಹಣಕಾಸು ಸೇವಾ ಇಲಾಖೆ ನಡುವಿನ ಅಲೆದಾಟದಲ್ಲಿ ಕಡತ ಕೊಳೆಯುತ್ತಿತ್ತು. ಆತಂಕಕ್ಕೊಳಗಾದ ಅಧಿಕಾರಿಗಳು ಬೆಚ್ಚಿ ನಿಂತಿದ್ದಾಗ, ಆ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ಹೇಳಿದರು-’ಈ ವಾರಾಂತ್ಯದೊಳಗೆ…’! ಹಾಗೆ ಹೇಳಿದ ಅವರು ಕಚೇರಿಗೆ ವಾಪಸ್ಸಾಗಿ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನು ಒಳಕರೆದು ಸಂಜೆಯೊಳಗೆ ಕಂಪನಿ ದಾಖಲಾಗಬೇಕು ಎಂದರು. ‘Next to impossible’ಎಂಬ ಉತ್ತರ ಬಂತು! ‘ನಿಮ್ಮ ಸಹೋದ್ಯೋಗಿಗಳು ಹೇಳುತ್ತಿದ್ದರು- ನೀವೊಬ್ಬ ಬಹಳ ಒಳ್ಳೆಯ, ದಕ್ಷ ಅಧಿಕಾರಿಯಂತೆ ನಮ್ಮ ಇಲಾಖೆಯ ಪ್ರತಿಷ್ಠೆ ಪಣಕ್ಕಿದೆ. ಈ ಕೆಲಸ ಆಗಲೇಬೇಕು’ ಎಂದು ತಲೆಸವರಿದರು ವಿನೋದ್ ರಾಯ್. ಇಡೀ ಆಡಳಿತಯಂತ್ರ ಕಾರ್ಯಕ್ಕಿಳಿಯಿತು, ವಿದ್ಯುತ್ ಕಡಿತದ ನಡುವೆ ಜನರೇಟರ್ ತಂದು ಹಗಲೂ ರಾತ್ರಿ ಕೆಲಸ ಮಾಡಿದರು. ಮರುದಿನ ಕಂಪನಿ ರಿಜಿಸ್ಟರ್ ಆಗಿ ಚಿದಂಬರಂ ಮೇಜಿನ ಮೇಲೆ ದಾಖಲೆ ಇತ್ತು!
ವಿನೋದ್್ರಾಯ್ ಹಣಕಾಸು ಕಾರ್ಯದರ್ಶಿಯಾಗಿದ್ದಾಗಲೂ ಅಷ್ಟೇ. ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸಾಧನೆ ಆಧಾರಿತ ಸವಲತ್ತು, ಉತ್ತೇಜನೆ ನೀಡಬೇಕೆಂಬ ಪ್ರಸ್ತಾಪವಿಟ್ಟಿದ್ದರು. ಅದಕ್ಕೆ ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದಾಗಲೂ ಬಿಡಿ ಬಿಡಿಯಾಗಿ ವಿವರಿಸಿ ಸಚಿವರ ಒಪ್ಪಿಗೆ ಪಡೆದರು. ಅವರೆಂದೂ ನ್ಯಾಯದ ಪರ. ಕುರ್ಚಿ ಬಿಸಿ ಮಾಡಿ ಸಂಬಳ ಗಿಟ್ಟಿಸಿಕೊಳ್ಳುವುದನ್ನು ಎಂದೂ ಸಹಿಸಿದವರಲ್ಲ. ಇವತ್ತು ಸಿಎಜಿಯಾಗಿ ನೀಡಿರುವ ವರದಿ ತಾವು ಯಾರ ಕೆಳಗೆ ಹಣಕಾಸು ಕಾಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರೋ ಅದೇ ಚಿದಂಬರಂ ಕುತ್ತಿಗೆಯನ್ನು ಸುತ್ತಿಕೊಂಡಿದೆ. ಇದು ವಿನೋದ್ ರಾಯ್ ಅವರಲ್ಲಿ ಇರುವುದು ವ್ಯಕ್ತಿನಿಷ್ಠೆಯಲ್ಲ, ವೃತ್ತಿನಿಷ್ಠೆ ಎಂಬುದನ್ನು ತೋರಿಸುತ್ತದೆ. ಇಂಥವರಿದ್ದರೆ ವ್ಯವಸ್ಥೆಯ ಬಗ್ಗೆಯೂ ಜನರಿಗೆ ಅಲ್ಪಸ್ವಲ್ಪ ವಿಶ್ವಾಸ ಉಳಿಯುತ್ತದೆ, ಹೆಚ್ಚಾಗುತ್ತದೆ.
May his tribe increase!
ಕೃಪೆ: ಪ್ರತಾಪ ಸಿಂಹ

ಸೋಮವಾರ, ಅಕ್ಟೋಬರ್ 17, 2011

ಹೊಣೆಗಾರಿಕೆ ಇಲ್ಲದೇ ಪ್ರಭಾವಿಯಾಗೋದು ಹೀಗೇನಾ?

Who matter?
ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ವಿಶ್ವವಿಖ್ಯಾತ”ಫೋರ್ಬ್ಸ್್’ ಮ್ಯಾಗಝಿನ್ ಪ್ರತಿವರ್ಷ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ, ಪ್ರಭಾವಗಳನ್ನು ಅಳೆದು ತೂಗುತ್ತದೆ. ಕೊನೆಗೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಒಂದರಿಂದ 10 ಸ್ಥಾನಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳೇ ಅಂದರೆ ಪ್ರಧಾನಿ, ರಾಷ್ಟ್ರಾಧ್ಯಕ್ಷ ಇಂತಹ ಸ್ಥಾನಗಳಲ್ಲಿರುವವರು ಆಕ್ರಮಿಸಿರುತ್ತಾರೆ. ಇಷ್ಟಕ್ಕೂ ಪ್ರಭಾವಿ, ಬಲಶಾಲಿ ಎನಿಸಿಕೊಳ್ಳಲು ಹಣವೊಂದೇ ಇದ್ದರೆ ಸಾಲದು. ಹಾಗಾಗಿ ಒಂದು ದೇಶದ ರಾಜಕೀಯ ಅಧಿಕಾರ, ಅರ್ಥವ್ಯವಸ್ಥೆ, ಸೇನೆ, ಅಧಿಕಾರಶಾಹಿ ವರ್ಗ ಮುಂತಾದುವುಗಳ ಮೇಲೆ ಹೊಂದಿರುವ ಹಿಡಿತ, ನಿಯಂತ್ರಣ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಮುಖ ಅಂಶಗಳಾಗುತ್ತವೆ. ಜಗತ್ತಿನ ಪ್ರಮುಖ ಆರ್ಥಿಕಶಕ್ತಿಗಳಲ್ಲಿ ಒಂದಾಗಿರುವ ಭಾರತದ ಪ್ರಭಾವಿ ವ್ಯಕ್ತಿಗಳಿಗೂ ಸಹಜವಾಗಿಯೇ ಇದರಲ್ಲಿ ಸ್ಥಾನ ದಕ್ಕಬೇಕು ಹಾಗೂ ದಕ್ಕುತ್ತಲೂ ಇದೆ. ಹಾಗಾದರೆ ಭಾರತದಲ್ಲಿಯೇ ಅತ್ಯಂತ ಪ್ರಭಾವಿ ವ್ಯಕ್ತಿ ಯಾರು? ಯಾರಾಗಬೇಕಿತ್ತು? ಪ್ರಧಾನಿಯಲ್ಲವೆ? ಆದರೆ ಪ್ರಧಾನಿ ಬದಲು ಸೋನಿಯಾ ಗಾಂಧಿಯವರು ಏಕೆ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ?
2011ರ ಸಾಲಿನ ಪಟ್ಟಿಯಲ್ಲಿ ಆಕೆ ವಿಶ್ವದ 9ನೇ ಅತ್ಯಂತ ಬಲಿಷ್ಠ ವ್ಯಕ್ತಿ ಎಂದು ಫೋರ್ಬ್ಸ್ ಹೇಳಿದೆ!
ಚೀನಾ ಅಧ್ಯಕ್ಷ ಹು ಜಿಂಟಾವೋ ಮೊದಲ, ಅಮೆರಿಕ ಅಧ್ಯಕ್ಷ ಒಬಾಮ ಎರಡನೇ, ಸೌದಿ ಅರೇಬಿಯಾದ ರಾಜ ಅಲ್ ಸೌದ್ 3ನೇ, ಮುಂದುವರಿದ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್್ಗಳ ಸಾಲಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬದಲು ಸೋನಿಯಾ ಗಾಂಧಿಯವರು ಕಾಣಿಸಿಕೊಳ್ಳುತ್ತಿರುವುದಾದರೂ ಏಕೆ ಹಾಗೂ ಹೇಗೆ? ಇಷ್ಟಕ್ಕೂ ಭಾರತವನ್ನು ಆಳುತ್ತಿರುವವರು ಯಾರು? ಮನಮೋಹನ್ ಸಿಂಗ್ ಅವರೋ, ಸೋನಿಯಾ ಗಾಂಧಿಯವರೋ? ಮನಮೋಹನ್ ಸಿಂಗ್ ಅವರಾಗಿದ್ದರೆ, ಅವರ ಮಾತೇ ಅಂತಿಮವಾಗಿದ್ದರೆ, ಸಂಪುಟ ಹಾಗೂ ಸರ್ಕಾರ ಅವರ ನಿಯಂತ್ರಣದಲ್ಲಿದ್ದರೆ ಸೋನಿಯಾ ಗಾಂಧಿಯವರು ಹೇಗೆ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಳ್ಳುತ್ತಿದ್ದರು? 1999ರಲ್ಲಿ ವಿಜಯ್ ಕುಮಾರ್ ಮಲ್ಹೋತ್ರಾ ಎದುರು ದೇಶದಲ್ಲಿಯೇ ಅತ್ಯಂತ ಸುಶಿಕ್ಷಿತ ಲೋಕಸಭಾ ಕ್ಷೇತ್ರವಾದ ದಕ್ಷಿಣ ದೆಹಲಿಯಲ್ಲಿ ಸೋತಿದ್ದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಅವರೆಂದೂ ನೇರ ಚುನಾವಣೆಯಲ್ಲಿ ಗೆದ್ದವರಲ್ಲ, ಗೆಲ್ಲುವ ಸಾಮರ್ಥ್ಯವೂ ಅವರಿಗಿಲ್ಲ. ಹಾಗಿರುವಾಗ ಪ್ರಧಾನಿಗೆ ಸಂಪುಟದ ಮೇಲೆ ಯಾವ ನಿಯಂತ್ರಣವಿರಲು ಸಾಧ್ಯ? ಇವುಗಳಿಂದ ಸ್ಪಷ್ಟವಾಗುವುದೇನೆಂದರೆ ಸೋನಿಯಾ ಗಾಂಧಿಯವರ ಕೈಯಲ್ಲಿ ಈ ದೇಶದ ಜುಟ್ಟು, ಚುಕ್ಕಾಣಿ ಇದೆ. ಅದರ ಬಗ್ಗೆ ಯಾರ ತಕರಾರೂ ಇಲ್ಲ ಬಿಡಿ.
ಆದರೆ ಒಂದು ಸರ್ಕಾರದ ಮೇಲೆ ನಿಯಂತ್ರಣ ಹೊಂದಿದವರಿಗೆ ಜವಾಬ್ದಾರಿಗಳೂ ಇರುವುದಿಲ್ಲವೆ?
2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿದ ಸೋನಿಯಾ ಗಾಂಧಿಯವರು”ರಾಷ್ಟ್ರೀಯ ಸಲಹಾ ಮಂಡಳಿ’(ಎನ್್ಎಸಿ) ರಚನೆ ಮಾಡಿಕೊಂಡು ಅದರ ಅಧ್ಯಕ್ಷೆಯಾದಾಗಲೇ ಜವಾಬ್ದಾರಿಯಿಲ್ಲದ ಅಧಿಕಾರ ಚಲಾಯಿಸುವ ಅವರ ಉದ್ದೇಶ ಜನರಿಗೆ ಮನವರಿಕೆಯಾಗಿತ್ತು. ಅಂದಮಾತ್ರಕ್ಕೆ ಅವರ ಬೇಜವಾಬ್ದಾರಿಯನ್ನು ದೇಶವಾಸಿಗಳು ಸಹಿಸಿಕೊಳ್ಳಬೇಕಾದ ಅಗತ್ಯವೇನಿದೆ? 2004ರಿಂದ 2011ರವರೆಗೂ ಅದೆಷ್ಟು ಹಗರಣಗಳು ಸಂಭವಿಸಿದವು? ಯಾವ ಹಗರಣದ ವಿಷಯವಾಗಿ ಸೋನಿಯಾ ಗಾಂಧಿಯವರು ಬಾಯ್ತೆರೆದಿದ್ದಾರೆ? ಯಾವ ಹಗರಣದ ಸಲುವಾಗಿ ವೈಯಕ್ತಿಕ ಜವಾಬ್ದಾರಿ ಹೊತ್ತಿದ್ದಾರೆ ಹೇಳಿ? 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದ ಇರಾಕ್್ಗೆ ಸಂಬಂಧಿಸಿದ “Oil-for-food” ಹಗರಣ ಸಂಭವಿಸಿತು. ಆಗಿನ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರನ್ನು ಮನೆಗೆ ಕಳುಹಿಸಿ ತಿಪ್ಪೆ ಸಾರಿಸಿದರು. 2009ರಲ್ಲಿ ಮರು ಆಯ್ಕೆಯಾದ ನಂತರವಂತೂ ಹಗರಣಗಳ ಸಾಲೇ ಸೃಷ್ಟಿಯಾಗಿದೆ. 2ಜಿ ಲೂಟಿ, ಕಾಮನ್ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಲಾವಾಸಾ ಹಗರಣ, ಕ್ಯಾಶ್ ಫಾರ್ ಓಟ್ ಇವುಗಳಿಗೆಲ್ಲ ಯಾರು ಹೊಣೆ? ಈ ಪ್ರಧಾನಿಗಂತೂ ಪತ್ರಿಕಾ ಸಂಪಾದಕರು, ಸುದ್ದಿ ಚಾನೆಲ್್ಗಳ ಮುಖ್ಯಸ್ಥರ ಪತ್ರಿಕಾಗೋಷ್ಠಿ ನಡೆಸಿ ಮೊಸಳೆ ಕಣ್ಣೀರು ಸುರಿಸುವುದಷ್ಟೇ ಗೊತ್ತು. ಅದಿರಲಿ, ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯ ಅನುಮೋದನೆ ಇಲ್ಲದೆ ಯಾವುದಾದರೂ ಪಾಲಿಸಿ ಡಿಸಿಷನ್್ಗಳನ್ನು ತೆಗೆದುಕೊಳ್ಳಲು, ಅನ್ಯ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವೆ?
ಅಮೆರಿಕದ ಜತೆಗಿನ ನಾಗರಿಕ ಅಣು ಸಹಕಾರ ಒಪ್ಪಂದವನ್ನು ತೆಗೆದುಕೊಳ್ಳಿ. ಅದಕ್ಕಾಗಿ ಸರ್ಕಾರವನ್ನೇ ಅಪಾಯಕ್ಕೆ ದೂಡಿಕೊಳ್ಳುವಂತಹ ಜರೂರತ್ತು ಏನಿತ್ತು? ಇಂತಹ ಅಪಾಯವನ್ನು ಮೈಗೆಳೆದುಕೊಳ್ಳುವ ಹಿಂದೆ ಲಾಭದ ಲೆಕ್ಕಾಚಾರವಿರಲಿಲ್ಲ ಎಂದು ಹೇಗೆತಾನೇ ನಂಬುವುದು? 1.76 ಸಾವಿರ ಕೋಟಿ ರೂ.ಗಳ 2ಜಿ ಹಗರಣವನ್ನೇ ಮುಚ್ಚಿಹಾಕಲು, ಕಪಿಲ್ ಸಿಬಲ್ ಅವರನ್ನು ಮುಂದೆ “Zero Loss” ಎಂದು ಲಜ್ಜೆ ಬಿಟ್ಟು ಪ್ರತಿಪಾದಿಸಲು ಮುಂದಾದ ಉದಾಹರಣೆ ಇರುವಾಗ ನಾಗರಿಕ ಅಣುಸಹಕಾರ ಒಪ್ಪಂದದಿಂದಲೂ ಭಾರೀ ಲಾಭವಾಗುವ ಕಾರಣವಿತ್ತು ಎಂಬ ಅನುಮಾನ ಮೂಡುವುದಿಲ್ಲವೆ? ಇಷ್ಟಕ್ಕೂ ಈ ಒಪ್ಪಂದಲ್ಲಿ ತೊಡಗಿರುವ ಹಣದ ಪ್ರಮಾಣವೆಷ್ಟು? ಭಾರತ ಒಟ್ಟು 10 ಹೊಸ ಅಣುಸ್ಥಾವರಗಳನ್ನು ನಿರ್ಮಾಣ ಮಾಡಬೇಕು. ಒಂದೊಂದರ ನಿರ್ಮಾಣಕ್ಕೂ 4 ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ಇವುಗಳಲ್ಲಿ ಸಿಂಹಪಾಲು ಅಮೆರಿಕದ ಕಂಪನಿಗಳ ಪಾಲಾಗಲಿದ್ದು ಕನಿಷ್ಠ 20 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ಅಲ್ಲಿನ ಕಂಪನಿಗಳಿಗೆ ದೊರೆಯುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಭಾರತದ ಒಟ್ಟಾರೆ ಅಗತ್ಯದ ಶೇ. 4ರಷ್ಟು ವಿದ್ಯುತ್ ಮಾತ್ರ ಅಣುಶಕ್ತಿಯಿಂದ ದೊರೆಯುತ್ತದೆ. ಹಾಗಿರುವಾಗ ಇಂತಹ ಒಪ್ಪಂದಕ್ಕಾಗಿ ಸರ್ಕಾರವನ್ನೇ ಒತ್ತೆಯಾಗಿಡಲು ಹೊರಟಿದ್ದೇಕೆ? ಅದರ ಬೆನ್ನಲ್ಲೇ ಸಂಸತ್ತಿನಲ್ಲಿ ನಡೆದಿದ್ದೇನು? ಓಟಿಗಾಗಿ ನೋಟು (ಕ್ಯಾಶ್ ಫಾರ್ ಓಟ್) ಹಗರಣ ಯಾರ ಸರ್ಕಾರ ಉಳಿಸಿಕೊಳ್ಳುವುದಕ್ಕೆ ನಡೆಯಿತು? ಹಣ ಕೊಟ್ಟ ದಲ್ಲಾಳಿ ಅಮರ್ ಸಿಂಗ್ ಇರಬಹುದು, ಹಣವನ್ನು ಪೂರೈಸಿದವರು ಯಾರು? ಹಾಗೆ ಅನೈತಿಕ ಮಾರ್ಗದಿಂದ ಸರ್ಕಾರ ಉಳಿಸಿಕೊಳ್ಳುವುದರ ಹಿಂದೆ ಇದ್ದ ಅಂತಿಮ ಫಲಾನುಭವಿಗಳು ಯಾರು? ಒಂದು ವೇಳೆ ಸೋನಿಯಾ ಗಾಂಧಿಯವರು ಬೇಡ ಎಂದಿದ್ದರೆ ಆ ಒಪ್ಪಂದ ಮಾಡಿಕೊಳ್ಳಲು ಮನಮೋಹನ್ ಸಿಂಗ್ ಮುಂದಾಗುತ್ತಿದ್ದರೆ? ಇನ್ನು ಕಳೆದ ಚಳಿಗಾಲದ ಅಧಿವೇಶನದ ವೇಳೆ 2ಜಿ ಲೂಟಿಗೆ ಸಂಬಂಧಿಸಿದರೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯ ಮಾಡಿದಾಗ ಸಂಸತ್ತಿನ ಕಲಾಪವನ್ನೇ ಬಲಿಕೊಟ್ಟು ಬೇಡಿಕೆಯನ್ನು ತಿರಸ್ಕರಿಸಲು ಕಾರಣವೇನಿತ್ತು?
ಇಲ್ಲಿ ಇನ್ನೊಂದು ವಿಚಾರವನ್ನು ಹೇಳಬೇಕು. ಅನುಮಾನಗಳಿಗೆ ಪುಷ್ಠಿಕೊಡುವಂತೆ ಅಮೆರಿಕದಲ್ಲಿರುವ ಎನ್್ಆರ್್ಐ ನಾರಾಯಣ್ ಕಟಾರಿಯಾ ಎಂಬವರು”ದಿ ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆಗೆ ಸೋನಿಯಾ ಅವರ ವಿರುದ್ಧ ಆರೋಪಗಳ ಸರಮಾಲೆ ಹೊತ್ತ ಜಾಹೀರಾತು ನೀಡಿದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷ 200 ದಶಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿತು. ಆದಾಗ್ಯೂ ಸೋನಿಯಾ ಗಾಂಧಿಯವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ನ್ಯೂಯಾರ್ಕ್ ಸುಪ್ರೀಂ ಕೋರ್ಟ್್ನ ನ್ಯಾಯಾಧೀಶರಾದ ಎಮಿಲಿ ಗುಡ್್ಮ್ಯಾನ್ ಮೊಕದ್ದಮೆಯನ್ನು ವಜಾ ಮಾಡಿದರು. ಏಕೆಂದರೆ ತನ್ನ ಮಾನನಷ್ಟವಾಗಿದೆ ಎಂದು ಪ್ರತಿಪಾದಿಸಿದ ವ್ಯಕ್ತಿಯೇ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕಾಗಲಿ, ಪಾಟಿ ಸವಾಲು ಎದುರಿಸುವುದಕ್ಕಾಗಲಿ ಮುಂದೆ ಬರಲಿಲ್ಲ! ಏಕಾಗಿ? ಒಂದು ವೇಳೆ, ಆಕೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರೆ ಯಾವ ರೀತಿ ತನ್ನ ಮಾನನಷ್ಟವಾಗಿದೆ ಎಂಬುದನ್ನು ವಿವರಿಸಬೇಕಾಗುತ್ತಿತ್ತು. ಆರೋಪಗಳು ನಿರಾಧಾರ ಎಂದು ಸಾಬೀತು ಮಾಡಬೇಕಾದ ಜವಾಬ್ದಾರಿ ಆಕೆಯದ್ದಾಗುತ್ತಿತ್ತು. ಈ ಘಟನೆ ಎಲ್ಲ ಅನುಮಾನಗಳಿಗೂ ಉತ್ತರ ರೂಪದಂತಿದೆ.
ಇಷ್ಟಾಗಿಯೂ ಎಲ್ಲರನ್ನೂ ಪ್ರಶ್ನಿಸುವ ಮಾಧ್ಯಮಗಳೂ ಇಂದು ಸೋನಿಯಾ ಗಾಂಧಿಯವರನ್ನಾಗಲಿ, ಅವರ ಪುತ್ರ ರಾಹುಲ್ ಗಾಂಧಿಯವರನ್ನಾಗಲಿ ಒಂದು ಕ್ಷಣಕ್ಕೂ ಪ್ರಶ್ನಿಸುವುದಿಲ್ಲ. ಅವರಿಂದ ಹೊಣೆಗಾರಿಕೆ ಕೇಳುವುದಿಲ್ಲ. ಇದು ನಿಜಕ್ಕೂ ಅಶ್ಚರ್ಯ ಹುಟ್ಟಿಸುತ್ತದೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸುವಾಗ”ಫೋರ್ಬ್ಸ್್’ ಪತ್ರಿಕೆ ಸೋನಿಯಾ ಗಾಂಧಿಯವರು ರಾಜಕೀಯ, ಅರ್ಥವ್ಯವಸ್ಥೆ ಜತೆಗೆ ಮಾಧ್ಯಮಗಳ ಮೇಲೆ ಹೊಂದಿರುವ ಹಿಡಿತವನ್ನೂ ಗಣನೆಗೆ ತೆಗೆದುಕೊಳ್ಳುವುದೊಳಿತು!! ಇವತ್ತೇನಾದರೂ ಯಾರಾದರೂ ಸೋನಿಯಾ ಗಾಂಧಿಯವರನ್ನು, ಐದಾರು ವರ್ಷಗಳಲ್ಲಿ ಬಹುಕೋಟಿ ಒಡೆಯನಾಗಿರುವ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಪ್ರಶ್ನಿಸುತ್ತಿದ್ದರೆ, ಮೈಚಳಿ ಹುಟ್ಟಿಸುತ್ತಿದ್ದರೆ ಅದು ಡಾ. ಸುಬ್ರಹ್ಮಣ್ಯಂ ಸ್ವಾಮಿ ಮಾತ್ರ.
ಇದೇನೇ ಇರಲಿ, ಏಕೆ ಇವತ್ತು ಸೋನಿಯಾ ಗಾಂಧಿಯವರನ್ನು ನೇರವಾಗಿ ಪ್ರಶ್ನಿಸಬೇಕಾಗಿದೆಯೆಂದರೆ ಅವರ ಒಂದೊಂದು ನಡೆಗಳೂ ಅನುಮಾನಾಸ್ಪದವಾಗಿ ಪರಿಣಮಿಸುತ್ತಿವೆ, ಒಂದೊಂದು ಹಗರಣಗಳು ಸಂಭವಿಸಿದಾಗಲೂ ಸಂಶಯಾಸ್ಪದ ಮೌನಕ್ಕೆ ಶರಣಾಗುತ್ತಾರೆ. ಹೀಗೇಕೆ? ಇದರಿಂದ, ಬಹಳ ಐಶಾರಾಮಿ ಜೀವನ ನಡೆಸುವ ಸೋನಿಯಾ ಗಾಂಧಿಯವರೂ ಹಗರಣಗಳ ಫಲಾನುಭವಿಯಾಗಿರಬಹುದೆಂಬ ಶಂಕೆ ಮೂಡುವುದಿಲ್ಲವೆ?
ಕೃಪೆ: ಪ್ರತಾಪ ಸಿಂಹ


ಶುಕ್ರವಾರ, ಅಕ್ಟೋಬರ್ 7, 2011

ಲೋಕಪಾಲ ವ್ಯಾಪ್ತಿಗೆ ನ್ಯಾಯಾಂಗ ಸೇರುವುದು ಬೇಡ!

ಪ್ರಸ್ತುತ ನನೆಗುದಿಗೆ ಬಿದ್ದಿರುವ ಜನ ಲೋಕಪಾಲ್ ಮಸೂದೆಯ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಜತೆ ಅರುಣಾ ರಾಯ್ ಹಾಗೂ ಡಾ. ಜಯಪ್ರಕಾಶ್ ನಾರಾಯಣ್ ಹೆಸರುಗಳೂ ಚಾಲ್ತಿಯಲ್ಲಿವೆ. ಇಂದಿರಾ ಗಾಂಧಿಯವರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ರೂಪಿಸಿದ ಮಹಾನ್ ನೇತಾರ ಜೆಪಿಯವರ ಹೆಸರನ್ನೇ ಹೊಂದಿರುವ ಈ ಜಯಪ್ರಕಾಶ್ ನಾರಾಯಣ್ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆಂಧ್ರದ ಗುಂಟೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದ ಡಾ. ಜಯಪ್ರಕಾಶ್ ನಾರಾಯಣ್ ಲೋಕಸೇವಾ ಆಯೋಗದತ್ತ ಆಕರ್ಷಿತರಾದರು. 1980ರ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲಿಗರಾಗಿ ಪಾಸಾಗಿ ಆಡಳಿತಶಾಹಿ ಸೇರಿ 16 ವರ್ಷ ಜನಸೇವೆ ಮಾಡಿದರು. ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣ ಮಾಡಬೇಕಾದ ತುರ್ತು ಅಗತ್ಯವಿದೆ ಎಂದೆನಿಸಿ ಸಿವಿಲ್ ಸರ್ವಿಸ್್ಗೆ ಶರಣು ಹೊಡೆದು 2006, ಅಕ್ಟೋಬರ್ 2ರಂದು ‘ಲೋಕಸತ್ತಾ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದರು. ಈ ಲೋಕಸತ್ತಾ ಚಳವಳಿ ಆಡಳಿತಾತ್ಮಕ ಹಾಗೂ ರಾಜಕೀಯ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ತನ್ನ ಹೋರಾಟ ನಡೆಸುತ್ತಿದೆ. ಸಂಸತ್ತಿನ ಮುಂದೆ ಲೋಕಪಾಲ ಮಸೂದೆಯನ್ನಿಟ್ಟ ಸಂದರ್ಭದಲ್ಲಿ ಡಾ. ಜಯಪ್ರಕಾಶ್ ನಾರಾಯಣ್ ನೀಡಿರುವ ವರದಿಯ ಅಂಶಗಳನ್ನೂ ಹೊಸ ಕಾಯಿದೆಯಲ್ಲಿ ಸೇರಿಸುವ ಬಗ್ಗೆ ನಾವು ಗಮನಹರಿಸುತ್ತೇವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಆ ಮಟ್ಟಿಗೆಡಾ. ಜಯಪ್ರಕಾಶ್ ನಾರಾಯಣ್ ಅವರ ಮಾತಿಗೆ ಮನ್ನಣೆ ಸಿಕ್ಕುತ್ತಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅವರನ್ನು ಮಾತಿಗೆ ಎಳೆದಾಗ ಹಲವಾರು ಗಮನಾರ್ಹ ಅಂಶಗಳು ತಿಳಿದುಬಂದವು … 1. ಒಂದು ದೇಶವನ್ನು ಹಾಳುಗೆಡವಬೇಕೆಂದರೆ ನ್ಯಾಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಬೇಕು, ಆ ದೇಶವನ್ನೇ ನಾಶಪಡಿಸಬೇಕೆಂದರೆ ಜನರನ್ನು ಭ್ರಷ್ಟಗೊಳಿಸಬೇಕು ಎಂದಿದ್ದ ಚಾಣಕ್ಯ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ರಾಜಕಾರಣಿಗಳನ್ನು ದೂರುವ ನಮ್ಮ ಸಮಾಜ, ಜನ ಸ್ವತಃ ಭ್ರಷ್ಟರಾಗಿದ್ದಾರೆ ಎಂದನಿಸುವುದಿಲ್ಲವೆ?
-ಖಂಡಿತ ಇಲ್ಲ. ಇದೊಂದು ತಪ್ಪು ತಿಳಿವಳಿಕೆ. ಇವತ್ತು ಜನ ಏಕೆ ಲಂಚ ಕೊಡುತ್ತಾರೆ? ಅವರೇನು ಯಾವುದೋ ಫೇವರ್ ಪಡೆದುಕೊಳ್ಳುವುದಕ್ಕೆ ಲಂಚ ಕೊಡುತ್ತಿಲ್ಲ. ಒಂದು ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಾಸ್ಪೋರ್ಟ್, ಸಾಮಾನ್ಯ ಭೂದಾಖಲೆಗಳು, ಸರ್ಟಿಫಿಕೆಟ್್ಗಳನ್ನು ಪಡೆದುಕೊಳ್ಳಬೇಕಾದರೂ ಲಂಚ ಕೊಡಬೇಕು. ಇವೇನು ಸರ್ಕಾರ ಜನರಿಗೆ ಮಾಡುವ ಉಪಕಾರವಲ್ಲ. ನ್ಯಾಯಯುತವಾಗಿ ನೀಡುವುದಕ್ಕೂ ಲಂಚ ಕೊಡಬೇಕು. ಹೀಗೆ ಜನ ಲಂಚ ಕೊಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ನಿಜ ಹೇಳಬೇಕೆಂದರೆ ಜನ ಭ್ರಷ್ಟಾಚಾರಕ್ಕೆ ಬಲಿಪಶುಗಳಾಗುತ್ತಿದ್ದಾರೆ. ನಮ್ಮ ಭಾರತೀಯರಷ್ಟು ಪ್ರಾಮಾಣಿಕರು ಜಗತ್ತಿನಲ್ಲಿಯೇ ಇಲ್ಲ. ಉದಾಹರಣೆಗೆ ಅಮೆರಿಕವನ್ನು ತೆಗೆದುಕೊಳ್ಳಿ. ಅಕಸ್ಮಾತ್ ನ್ಯೂಯಾರ್ಕ್್ನಲ್ಲಿ ಪವರ್ ಷಟ್್ಡೌನ್ ಆದರೆ ದರೋಡೆ ನಡೆದುಬಿಡುತ್ತದೆ, ಲೂಟಿ ಮಾಡಿ ಬಿಡುತ್ತಾರೆ, ನೂರಾರು ಅತ್ಯಾಚಾರಗಳು, ಕೊಲೆಗಳು ನಡೆದುಹೋಗುತ್ತವೆ! ಆದರೆ ನಮ್ಮ ಭಾರತದಲ್ಲಿ ಕರೆಂಟ್ ಹೋಗುವುದು ದೈನಂದಿನ, ಕೆಲ ಗಂಟೆಗಳಿಗೊಮ್ಮೆ ಸಂಭವಿಸುವ ಘಟನೆ. ಹಾಗಂತ ನಮ್ಮಲ್ಲಿ ಕರೆಂಟ್ ಹೋದಾಗಲೆಲ್ಲ ದರೋಡೆ, ರೇಪ್ ಸಂಭವಿಸುವುದಾಗಿದ್ದರೆ ಇವತ್ತು ಯಾರೂ, ಏನೂ ಉಳಿದಿರುತ್ತಿರಲಿಲ್ಲ. ಈ ಹಿಂದೊಮ್ಮೆ ಜಗತ್ತಿನಾದ್ಯಂತ ಒಂದು ಪ್ರಾಮಾಣಿಕತೆಯ ಪರೀಕ್ಷೆ ನಡೆದಿತ್ತು. ಅಂದರೆ ಪರ್ಸ್್ಗಳಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ತುಂಬಿ ಭಾರತದ ವಿವಿಧ ನಗರಗಳ ಬೀದಿಗಳಲ್ಲಿ ಬಿಸಾಡಲಾಗಿತ್ತು. ಕೆಲವೆಡೆ ಮೊಬೈಲ್ ಫೋನ್್ಗಳನ್ನು ಹಾಕಲಾಗಿತ್ತು. ಅದನ್ನು ಗಮನಿಸಿದ ಸಣ್ಣಪುಟ್ಟ ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಸಾಮಾನ್ಯ ಜನರು ಪರ್ಸ್್ನಲ್ಲಿದ್ದ ವಿಳಾಸಕ್ಕೆ ಹಿಂದಿರುಗಿಸಿದ್ದರು. ಹಾಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂದಿರುಗಿಸಿದವರಲ್ಲಿ ಭಾರತೀಯರೇ(85 ಪರ್ಸೆಂಟ್) ಹೆಚ್ಚಿದ್ದರು. ಹಾಗಾಗಿ ನಮ್ಮ ಸಮಾಜವೂ ಭ್ರಷ್ಟವಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬ್ರಿಟನ್ನಿನ ಮಾಜಿ ಪ್ರಧಾನಿಯೊಬ್ಬರು ಹೇಳಿದ್ದರು-’ಜನ ಒಳ್ಳೆಯ ಕೆಲಸ ಮಾಡುವುದಕ್ಕೆ ಸರ್ಕಾರ ಸಹಕಾರ ನೀಡಬೇಕು’. ಸರ್ಕಾರವೇ ಭ್ರಷ್ಟಾಚಾರಕ್ಕಿಳಿದರೆ ಜನ ಅಸಹಾಯಕರಾಗಬೇಕಾಗುತ್ತದೆ ಅಷ್ಟೇ.
2. ನೀವೊಬ್ಬ ಐಎಎಸ್ ಅಧಿಕಾರಿಯಾಗಿದ್ದವರು, ನಂತರ ಸರ್ಕಾರಿ ಸೇವೆ ಬಿಟ್ಟು ಎನ್್ಜಿಓ ಆರಂಭಿಸಿದಿರಿ, ಈಗ ರಾಜಕೀಯಕ್ಕೆ ಕಾಲಿಟ್ಟಿದ್ದೀರಿ. ನಿಮಗೆ ಆಡಳಿತಶಾಹಿ, ಸಾಮಾಜಿಕ ಸೇವೆ, ರಾಜಕೀಯ ಅನುಭವ ಮೂರೂ ಇವೆ. ಪ್ರಸ್ತುತ ನನೆಗುದಿಗೆ ಬಿದ್ದಿರುವ ಲೋಕಪಾಲ ಕಾಯಿದೆ ಜಾರಿಗೆ ಬಂದರೆ ಭ್ರಷ್ಟಾಚಾರವನ್ನು ತಡೆಯಬಹುದು ಎಂದನಿಸುತ್ತದೆಯೇ?
-ಹೌದು, ಒಂದು ಒಳ್ಳೆಯ ಕಾಯಿದೆಯ ಕೊರತೆಯೇ ಹಾಲಿ ಪರಿಸ್ಥಿತಿಗೆ ಕಾರಣ. ಲೋಕಪಾಲ ಬಂದರೆ ಭ್ರಷ್ಟರಲ್ಲಿ ಮೊದಲಿಗೆ ಭಯ ಮನೆಮಾಡುತ್ತದೆ, ಸಿಕ್ಕಿಬೀಳುವ ಹೆದರಿಕೆಯೇ ಪರಿಸ್ಥಿತಿಯನ್ನು ಎಷ್ಟೋಮಟ್ಟಿಗೆ ಸುಧಾರಿಸಿ ಬಿಡುತ್ತದೆ.
3. ಆದರೆ ಲೋಕಪಾಲವಿರಬಹುದು, ಲೋಕಾಯುಕ್ತರಿರಬಹುದು ಅವರನ್ನು ನೇಮಕ ಮಾಡುವವರು ರಾಜಕಾರಣಿಗಳೇ. ಹಾಗಿರುವಾಗ ಲೋಕಪಾಲದ ಮೇಲೆ ಯಾವ ಮಟ್ಟದವರೆಗೂ ವಿಶ್ವಾಸವಿಡಬಹುದು, ಲೋಕಪಾಲದ ಜತೆ ಚುನಾವಣಾ ಸುಧಾರಣೆಗಳೂ ಅಷ್ಟೇ ಅಗತ್ಯ ಎಂದನಿಸುವುದಿಲ್ಲವೆ?
-ನೋಡಿ… ಲೋಕಪಾಲರನ್ನು ಆಯ್ಕೆ ಮಾಡುವವರು ಪ್ರಧಾನಿ, ಮಂತ್ರಿಗಳು ಹಾಗೂ ಲೋಕಸಭಾಧ್ಯಕ್ಷರು. ಇದೇನು ಕೆಟ್ಟ ಆಯ್ಕೆ ಸಮಿತಿಯಿಲ್ಲ. ಇಂಥ 7 ಜನರಿಂದ ಕೂಡಿರುವ ಸಮಿತಿ 9 ಸದಸ್ಯರ ಲೋಕಪಾಲವನ್ನು ನೇಮಕಮಾಡುತ್ತದೆ. ಆದರಲ್ಲೂ ಪದಚ್ಯುತ ಕೇಂದ್ರ ವಿಚಕ್ಷಣ ಆಯುಕ್ತ(ಸಿವಿಸಿ) ಪಿ.ಜೆ. ಥಾಮಸ್ ಪ್ರಕರಣದ ನಂತರ ಸರ್ಕಾರ ಮನಸೋಯಿಚ್ಛೆ ವರ್ತಿಸಲು ಸಾಧ್ಯವಿಲ್ಲ. ಈ ಹಿಂದೆ ಬಹುಮತದ ಆಧಾರದ ಮೇಲೆ ಆಯ್ಕೆ ಮಾಡುತ್ತಿದ್ದರು. ಥಾಮಸ್ ಪ್ರಕರಣದಲ್ಲೂ ಪ್ರತಿಪಕ್ಷದ ನಾಯಕಿಯ ವಿರೋಧದ ನಡುವೆಯೂ ಸರ್ಕಾರ ತನಗಿಷ್ಟ ಬಂದಂತೆ ವರ್ತಿಸಿತ್ತು. ಆದರೆ ಥಾಮಸ್ ಆಯ್ಕೆಯನ್ನು ಅಸಿಂಧುಗೊಳಿಸುವಾಗ ಬಹುಮತವೊಂದೇ ಆಯ್ಕೆಗೆ ಮಾನದಂಡವಲ್ಲ ಎಂದು ಸುಪ್ರೀಂಕೋರ್ಟ್ ಸ್ಟಷ್ಟಪಡಿಸಿದೆ. ಹಾಗಿದ್ದಾಗ್ಯೂ ಚುನಾಚಣಾ ಸುಧಾರಣೆಗಳು ಬಹುಮುಖ್ಯ. ಇಲ್ಲಿ ಮೊದಲಿಗೆ ರಾಜಕೀಯ ಪಕ್ಷಗಳೇ ಸುಧಾರಣೆ, ಬದಲಾವಣೆಗೆ ಮೈಯೊಡ್ಡಿಕೊಳ್ಳಬೇಕು. ನಾನು, ನಿಮ್ಮಂಥವರು, ಅಂದರೆ ಒಬ್ಬ ಸಾಮಾನ್ಯ, ಪ್ರತಿಭಾವಂತ, ಜನಪರ ಕಾಳಜಿಯುಳ್ಳ, ಪ್ರಾಮಾಣಿಕ ವ್ಯಕ್ತಿಗಳನ್ನೂ ಪಕ್ಷದೊಳಕ್ಕೆ ಬಿಟ್ಟುಕೊಳ್ಳಬೇಕು, ಅವರೂ ತಮ್ಮ ಯೋಚನೆ, ವಿಚಾರ, ಚಿಂತನೆಗಳನ್ನು ಮುಂದಿಡಲು ಅವಕಾಶ ಮಾಡಿಕೊಡಬೇಕು, ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ನೀಡಬೇಕು. ಹೀಗೆ ಶುದ್ಧ, ಪ್ರಾಮಾಣಿಕ ಜನರುಗಳಿಂದ ಕೂಡಿದರೆ ತನ್ನಿಂದತಾನೇ ಸುಧಾರಣೆಯಾಗುತ್ತದೆ. ದುರದೃಷ್ಟವಶಾತ್, ಇವತ್ತು ಪಕ್ಷಗಳು ಕೆಲವು ವ್ಯಕ್ತಿ, ಕುಟುಂಬಗಳ ಖಾಸಗಿ ಅಸ್ತಿಯಾಗಿವೆ. ಅದು ಬದಲಾಗಬೇಕು.
4. ಇವತ್ತು ನ್ಯಾಯಾಧೀಶರೂ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿಲ್ಲ, ವೈ.ಕೆ. ಸಬರ್್ವಾಲ್, ಕೆ.ಜಿ. ಬಾಲಕೃಷ್ಟನ್, ಸೌಮಿತ್ರ ಸೇನ್, ದಿನಕರನ್ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್ ಮುಂತಾದವರ ಉದಾಹರಣೆ ಇದೆ. ಹಾಗಾಗಿ ನ್ಯಾಯಾಂಗವನ್ನೂ ಲೋಕಪಾಲದ ವ್ಯಾಪ್ತಿಗೆ ಏಕೆ ತರಬಾರದು?
-ನೋ, ತರಬಾರದು. ಅಂದಮಾತ್ರಕ್ಕೆ ನ್ಯಾಯಾಧೀಶರೆಲ್ಲ ಪ್ರಾಮಾಣಿಕರು, ಅವರು ಸಾರ್ವಜನಿಕ ಪರಾಮರ್ಶೆಗೆ ನಿಲುಕದವರು ಎಂದರ್ಥವಲ್ಲ. ನ್ಯಾಯಾಧೀಶರೂ ಸಾರ್ವಜನಿಕ ಸೇವಕರಾಗಿರುವುದರಿಂದ ಅವರ ಬದುಕು, ನಡತೆಯೂ ಪರಾಮರ್ಶೆಗೆ ಒಳಪಡಬೇಕು. ಹಾಗಂತ ಅವರನ್ನು ಯಾರು ಪರಾಮರ್ಶೆಗೆ ಒಳಪಡಿಸಬೇಕು? ಒಂದೇ ವ್ಯವಸ್ಥೆ (ಲೋಕಪಾಲ) ಎಲ್ಲ ಕ್ಷೇತ್ರಗಳನ್ನೂ ನಿಯಂತ್ರಿಸಲು ಅವಕಾಶವೀಯುವುದು ಅಪಾಯಕಾರಿ. ಒಂದು ವೇಳೆ, ಲೋಕಪಾಲವೇ ಭ್ರಷ್ಟಗೊಂಡರೆ ಏನು ಮಾಡುವುದು? ಇಷ್ಟಕ್ಕೂ ಲೋಕಪಾಲ, ಲೋಕಾಯುಕ್ತದಲ್ಲಿರುವವರೂ ನ್ಯಾಯಾಧೀಶರೇ ಆಗಿರುತ್ತಾರೆ. ಸಮಸ್ಯೆಗೆ ಒಂದೇ ವ್ಯವಸ್ಥೆ ಪರಿಹಾರವಾಗುವುದಿಲ್ಲ. ಸುಪ್ರೀಂ ಕೋರ್ಟ್ ಅತ್ಯಂತ ಪ್ರಬಲ ವ್ಯವಸ್ಥೆ. ಅದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದು ಹೇಳುವ ಅಧಿಕಾರವೂ ಇದೆ. ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಮೇಲಾಟ ದೇಶಕ್ಕೆ ಒಳ್ಳೆಯದಲ್ಲ. ಒಬ್ಬ ಲೋಕಾಯುಕ್ತ ಅಥವಾ ಲೋಕಪಾಲನನ್ನು ಕಿತ್ತೊಗೆಯುವ ಅಧಿಕಾರ ಯಾರಿಗಿದೆ? ನ್ಯಾಯಾಂಗಕ್ಕಲ್ಲವೆ? ಲೋಕಪಾಲ ಹಾಗೂ ನ್ಯಾಯಾಂಗದ ನಡುವೆಯೇ ತಿಕ್ಕಾಟ ಆರಂಭವಾಗಬಹುದು. ಭ್ರಷ್ಟ ನ್ಯಾಯಾಧೀಶರನ್ನು ಹೊರಹಾಕಬೇಕು ನಿಜ, ಆದರೆ ನ್ಯಾಯಾಂಗವನ್ನು ಲೋಕಪಾಲದ ವ್ಯಾಪ್ತಿಗೆ ತರಬಾರದು. ಕರ್ನಾಟಕದ ಹೆಮ್ಮೆಯ ಪುತ್ರ ನ್ಯಾ. ಸಂತೋಷ್ ಹೆಗ್ಡೆ, ಪರಮ ಪ್ರಾಮಾಣಿಕ ನ್ಯಾ. ವಿ.ಆರ್. ಕೃಷ್ಣ ಅಯ್ಯರ್ ಹಾಗೂ ಪ್ರಾಮಾಣಿಕ ಮತ್ತು ಧೈರ್ಯಶಾಲಿ ನ್ಯಾ. ಜೆ.ಎಸ್. ವರ್ಮಾ ಅವರಂಥ ಮಹಾನುಭಾವರು ರೂಪಿಸಿರುವ, ರೂಪುರೇಷೆ ಹಾಕಿಕೊಟ್ಟಿರುವ ರಾಷ್ಟ್ರೀಯ ನ್ಯಾಯಾಂಗ ಆಯೋಗ ನ್ಯಾಯಾಂಗದ ಮೇಲೆ ನಿಗಾ ಇಟ್ಟರೆ ಸಾಕು.
5. ಇಂಗ್ಲೆಂಡಿನಲ್ಲಿ ಶಾಸಕ/ಸಂಸದರನ್ನು “”Vanguards in protecting public exchequer” ಎನ್ನುತ್ತಾರೆ. ಭಾರತದಲ್ಲಿ ರಕ್ಷಣೆ ಬದಲು ಭಕ್ಷಣೆ ಮಾಡುತ್ತಿದ್ದಾರೆ. ನಿಮ್ಮ ಪ್ರಕಾರ ಯಾರು ಒಬ್ಬ ಆದರ್ಶಪ್ರಾಯ ಅಥವಾ ಮಾದರಿ ಶಾಸಕ/ಸಂಸದನೆನಿಸುತ್ತಾನೆ?
-ಶುದ್ಧ, ಕಟಿಬದ್ಧ, ಸಮರ್ಥ, ಸಮಗ್ರತೆಯುತ ವ್ಯಕ್ತಿ ಮಾತ್ರ ನಮ್ಮ ಚುನಾಯಿತ ಪ್ರತಿನಿಧಿಯಾಗಬೇಕು.

6. ಇಂದು ‘ಮೊದಲ ತಲೆಮಾರಿನ ರಾಜಕಾರಣಿ’ಗಳನ್ನು ಕಾಣುವುದೇ ಕಷ್ಟವಾಗಿದೆ. ಸಮೀಕ್ಷೆಗಳ ಪ್ರಕಾರ ಭಾರತದ ಶೇ. 35ರಷ್ಟು ಯುವ/ನವ ರಾಜಕಾರಣಿಗಳು ಕೌಟುಂಬಿಕ ಹಿನ್ನೆಲೆಯಿಂದ ಬಂದವರಾಗಿದ್ದರೆ. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರಾದರೂ ರಾಜಕಾರಣದಲ್ಲಿ ಇದ್ದವರೇ, ಇರುವವರೇ ಆಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗತಿಯೇನು?

-ಇವತ್ತು ಕಾಂಗ್ರೆಸ್್ನಲ್ಲಿ 30 ವರ್ಷದೊಳಗಿನ ರಾಜಕಾರಣಿಗಳನ್ನು ಗಣನೆಗೆ ತೆಗೆದುಕೊಂಡರೆ ನೂರಕ್ಕೆ ನೂರರಷ್ಟು ಫ್ಯಾಮಿಲಿ ಪಾಲಿಟಿಕ್ಸ್್ನಿಂದ ಬಂದವರು, 40 ವರ್ಷದೊಳಗಿನವರಲ್ಲಿ ಈ ಪ್ರಮಾಣ 85 ಪರ್ಸೆಂಟ್ ಇದೆ. ಒಟ್ಟಾರೆಯಾಗಿ 35-40 ಪರ್ಸೆಂಟ್ ಆಗಿದೆ. ಅದರಲ್ಲೂ ಯುವಕರಲ್ಲಿ ನೀವೊಬ್ಬ ಮಂತ್ರಿ, ಶಾಸಕ, ಸಂಸದ ಮುಂತಾದ ರಾಜಕಾರಣಿಯ ಮಗನಾಗಿಲ್ಲದಿದ್ದರೆ ನಿಮಗೆ ಟಿಕೆಟ್ಟೂ ಸಿಗುವುದಿಲ್ಲ, ರಾಜಕಾರಣಕ್ಕೂ ಕಾಲಿಡುವುದಕ್ಕಾಗುವುದಿಲ್ಲ. ಆ ಹಂತಕ್ಕೆ ತಲುಪಿದ್ದೇವೆ!
7. ರಾಹುಲ್ ಗಾಂಧಿ, ಪ್ರಿಯಾ ದತ್, ದುಶ್ಯಂತ್ ಸಿಂಗ್, ಸಚಿನ್ ಪೈಲಟ್, ಮಾನವೇಂದ್ರ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ಸುಖಬೀರ್ ಬಾದಲ್, ಉಮರ್ ಅಬ್ದುಲ್ಲಾ ಮುಂತಾದವರು ರಾಜಕಾರಣಕ್ಕೆ ಬಂದಿದ್ದು ತಪ್ಪೆಂದಲ್ಲ, ಆದರೆ ನ್ಯಾಯಬೆಲೆ ಅಂಗಡಿ ಮುಂದಾಗಲಿ, ರೇಷನ್ ಕಾರ್ಡ್, ಪಾಸ್್ಪೋರ್ಟ್ ಅಥವಾ ಇನ್ನಾವುದೇ ಕಾರಣಕ್ಕಾಗಲಿ ಇವರೆಂದೂ ಕ್ಯೂನಲ್ಲಿ ನಿಂತವರಲ್ಲ, ಲಂಚ ಕೊಡಬೇಕಾದ ಅನಿವಾರ್ಯತೆಗೆ ಬಿದ್ದವರಲ್ಲ. ಇಂಥವರಿಗೆ ಸಾಮಾನ್ಯ ಜನರ ನೋವು, ಅಳಲು ಹೇಗೆ ಅರ್ಥವಾದೀತು? ಆದರಲ್ಲೂ ಇವತ್ತಿನ ರಾಜಕಾರಣಿಗಳು, ಮಂತ್ರಿವರ್ಯರು ದೊಡ್ಡ ಕಾರ್ಪೊರೇಟ್ ಕಂಪನಿಗಳ ವಕ್ತಾರರಂತೆ ವರ್ತಿಸುತ್ತಿರುವುದನ್ನು ನೋಡಿದರೆ ಇವರಿಂದ ಜನಸಾಮಾನ್ಯನ ಹಿತರಕ್ಷಣೆಯನ್ನ ನಿರೀಕ್ಷಿಸಲು ಸಾಧ್ಯವೆ?
-ವಂಶಪಾರಂಪರ್ಯ ರಾಜಕಾರಣವೇ ರಾಂಗ್, ಅವರಿಗೆ ರಾಜಕೀಯ ರಂಗಕ್ಕಿಳಿಯುವ ಹಕ್ಕೇ ಇಲ್ಲ ಎಂದರೆ ತಪ್ಪಾಗುತ್ತದೆ. ಕೌಟುಂಬಿಕ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದರೂ ಜನರಿಗೆ ಸ್ಪಂದಿಸುತ್ತಿರುವವರೂ ಇದ್ದಾರೆ. ಆದರೂ ಯಾವುದೇ ಹಿನ್ನೆಲೆ ಹೊಂದಿಲ್ಲದ, ಪ್ರಾಮಾಣಿಕ, ಸುಶಿಕ್ಷಿತ ಹೊಸ ತಲೆಮಾರಿನ ಯುವಕರೂ ರಾಜಕಾರಣಕ್ಕೆ ಬರಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕೆಲವೇ ಕುಂಟುಂಬಗಳು ರಾಜಕಾರಣವನ್ನು ಆಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಹಾಗೂ ರಾಷ್ಟ್ರದ ಯುವಜನತೆ ವಂಶಾಡಳಿತ ಮಾಡುತ್ತಿರುವವರ ಹಿಂದೆ ಕೇವಲ ಬಾವುಟ ಹಿಡಿದು ಹೋಗುವವರಾಗಬೇಕಾಗುತ್ತದೆ.
8. ಪ್ರಜಾಪ್ರಭುತ್ವ ಹಾಗೂ ರಾಜಕಾರಣ ಯುವಜನತೆಗೆ ಆಕರ್ಷಕವಾಗುವಂತೆ ಹೇಗೆ ಮಾಡಬಹುದು?
-ಅರ್ಥವ್ಯವಸ್ಥೆ ಬೆಳೆದಂತೆ ಮಧ್ಯಮವರ್ಗ ದೊಡ್ಡದಾಗುತ್ತಿದೆ. ಅಂದರೆ ಯುವಜನತೆ ತಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗೇರುತ್ತಿದೆ. ಹಾಗಾಗಿ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ದೇಶ, ನೆಲ, ಜಲ ಎನ್ನವುದು ಮಧ್ಯಮವರ್ಗದ ಮೌಲ್ಯಗಳಾಗಿವೆ. ಈ ಮಧ್ಯಮ ವರ್ಗ ಯಾರ ಹೆದರಿಕೆಯೂ ಇಲ್ಲದೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ನ್ಯಾಯಕ್ಕಾಗಿ ಧ್ವನಿಯೆತ್ತುತ್ತದೆ. ಇಂಥ ಮಧ್ಯಮ ವರ್ಗದ ಗಾತ್ರ ದೊಡ್ಡದಾದಂತೆ ಪ್ರಜಾಪ್ರಭುತ್ವ ಕೂಡ ರಂಗೇರುತ್ತದೆ.

ಕೃಪೆ: ಪ್ರತಾಪ ಸಿಂಹ


ಈ ವಿಷಯಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದಾರಾ?

ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ ಗಾಂಧೀಜಿಯವರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದಾರೆ? ಇಷ್ಟಕ್ಕೂ ಮಹಾತ್ಮ ಗಾಂಧೀಜಿಯವರು ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು? ಯಾವ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದರು? ಯಾವ ವಿಷಯಗಳನ್ನು, ಧೋರಣೆಗಳನ್ನು, ಮನಃಸ್ಥಿತಿಗಳನ್ನು ಗಾಂಧೀಜಿ ಕಟುವಾಗಿ ಟೀಕಿಸುತ್ತಿದ್ದರು?
ವಿಷಯ-1
‘Gandhiji was not awarded the Nobel peace prize because he refused to be converted’! ಹಾಗೆಂದು ಹೇಳಿದವರು ಯಾವ ಹಿಂದುತ್ವವಾದಿಯೂ ಅಲ್ಲ, ವಿಶ್ವವಿಖ್ಯಾತ ಲೇಖಕ, ಬರಹಗಾರ, ದಾರ್ಶನಿಕ ಸ್ಟೀಫನ್ ನ್ಯಾಪ್. ಅವರು ಹೇಳಿದಂತೆ ಕ್ರೈಸ್ತರಾಗಿ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೇ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಲಿಲ್ಲವೆ? ಅದು ನಿಜವೆಂದಾದರೆ ಗಾಂಧೀಜಿಗೂ ಕ್ರೈಸ್ತ ಮತಿಯರಿಗೂ ಯಾವುದಾದರೂ ವೈಷಮ್ಯ ಅಥವಾ ಅಭಿಪ್ರಾಯಭೇದಗಳಿದ್ದವೆ? ನ್ಯಾಪ್ ಮುಂದುವರಿದು ಎಚ್ಚರಿಸುತ್ತಾರೆ-’ಇಂದು ಕ್ರೈಸ್ತ ಮಿಷನರಿಗಳು ಭಾರತದಾದ್ಯಂತ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು ಆಮಿಷ, ಪ್ರಚೋದನೆ, ಮೋಸ, ಬೆದರಿಕೆಗಳ ಮೂಲಕ ಜನರನ್ನು ಮತಾಂತರ ಮಾಡುತ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಈ ರೀತಿಯ ಬೆದರಿಕೆ, ಕೊಲೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಾಂಧೀಜಿಯವರ ಸಂದೇಶ ಬಹಳ ಮುಖ್ಯವಾಗುತ್ತದೆ. ನಿರ್ಲಕ್ಷ್ಯ ತಳೆದರೆ ಈ”ಮಿಷನರಿ ಟೆರರಿಸಂ’ ಇಸ್ಲಾಮಿಕ್ ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ’. ಹಾಗಾದರೆ ಗಾಂಧೀಜಿಯವರು ಕ್ರೈಸ್ತ ಮಿಷನರಿಗಳ ಬಗ್ಗೆ, ಮತಾಂತರದ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು?
ಮೊದಲಿಗೆ ಇಸ್ಲಾಂ, ತದನಂತರ ಕ್ರಿಶ್ಚಿಯಾನಿಟಿ. ಭಾರತ ಹಲವು ಶತಮಾನಗಳಿಂದಲೂ ಈ ಎರಡು ಮತಗಳ ಆಕ್ರಮಣವನ್ನು ಎದುರಿಸುತ್ತಾ ಬಂದಿದೆ. ಇಂಥದ್ದೊಂದು ಅಪಾಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದವರಲ್ಲಿ ಇಬ್ಬರು ಪ್ರಮುಖರು. ಮೊದಲನೆಯವರು ಸ್ವಾಮಿ ವಿವೇಕಾನಂದ, ಎರಡನೆಯವರು ಮಹಾತ್ಮ ಗಾಂಧೀಜಿ! ‘Hindus need to be saved from spiritual darkness’ ಇದು ಕ್ರೈಸ್ತ ಮಿಷನರಿಗಳ ಘೋಷವಾಕ್ಯವಾಗಿದ್ದ ಕಾಲದಲ್ಲಿ ಹಿಂದುಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ, ಎತ್ತಿ ಹಿಡಿಯುವ ಕೆಲಸಕ್ಕೆ ಕೈಹಾಕಿದ ಸ್ವಾಮಿ ವಿವೇಕಾನಂದರು ಅಕಾಲಿಕ ಮರಣವನ್ನಪ್ಪಿದ ನಂತರ ನಮ್ಮ ಧರ್ಮದ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ”ಗ್ಲೋಬಲ್ ವಾಯ್ಸ್್’ ಆಗಿ ಹೊರಹೊಮ್ಮಿದವರು ಗಾಂಧೀಜಿ. ಕ್ರೈಸ್ತ ಮಿಷನರಿಗಳನ್ನು’Vendors of goods’ ಎಂದು ಟೀಕಿಸಿದರು.”ಈ ಮಿಷನರಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೆಂದರೆ ನಮ್ಮ ಕುಟುಂಬದ ಅವನತಿಯಾದಂತೆ. ನಮ್ಮ ಆಚಾರ, ವಿಚಾರ, ಊಟ, ಉಡುಪು, ನಡತೆ ಎಲ್ಲವನ್ನೂ ಹಾಳುಗೆಡವುತ್ತಾರೆ’ ಎಂದು ಗಾಂಧೀಜಿ ಎಚ್ಚರಿಸುತ್ತಾರೆ.
1. ನಾನೊಬ್ಬ ಸನಾತನಿ ಹಿಂದು ಎಂದೇಕೆ ಕರೆದುಕೊಳ್ಳುತ್ತೇನೆ?
2. ನಾನೇಕೆ ಮತಾಂತರಗೊಳ್ಳಲಿಲ್ಲ?
3. ಮತಾಂತರದಲ್ಲಿ ನನಗೇಕೆ ನಂಬಿಕೆಯಿಲ್ಲ?
4. ಮತಾಂತರವೆಂಬುದು ಶಾಂತಿಗೆ ಒಂದು ತೊಡಕು ಹೇಗೆ?
5. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹಾರುವ ಕ್ರಮವೇಕೆ ಸರಿಯಲ್ಲ?
6. ಅನ್ಯಧರ್ಮೀಯನೊಬ್ಬನನ್ನು ಹಿಂದುವಾಗಿ ಮತಾಂತರ ಮಾಡುವುದನ್ನೂ ನಾನೇಕೆ ಒಪ್ಪುವುದಿಲ್ಲ?
7. ಬಹುತೇಕ ಭಾರತೀಯ ಕ್ರೈಸ್ತರೇಕೆ ತಮ್ಮ ಮೂಲದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತ ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಂಧಾನುಕರಣೆಗೆ ಮುಂದಾಗಿದ್ದಾರೆ?
8. ಹಿಂದು ಧರ್ಮವನ್ನು ಬುಡಮೇಲು ಮಾಡುವ ಮಿಷನರಿಗಳ ಹುನ್ನಾರ, ಉದ್ದೇಶವೆಂಥದ್ದು?
9. ಒಬ್ಬ ಹಿಂದು ಹಿಂದುವಾಗಿ ಉಳಿದರೆ ಇವರಿಗೇನು ನೋವು?
10. ಈ ಮಿಷನರಿಗಳು ಧರ್ಮದ ವ್ಯಾಪಾರಿಗಳು ಹೇಗಾಗುತ್ತಾರೆ?
11. ನಮ್ಮ ಹರಿಜನರನ್ನು ಮತಾಂತರ ಮಾಡುವುದನ್ನು ಏಕೆ ನಾನು ವಿರೋಧಿಸುತ್ತೇನೆ?
12. ಮತಾಂತರವೆಂದರೆ ಅತ್ಮ ಶುದ್ಧೀಕರಣವೇ ಹೊರತು ಮತ ಬದಲಾವಣೆಯಲ್ಲ!
13. ಕ್ರಿಶ್ಚಿಯಾನಿಟಿ ಮತ್ತು ಅದರ ಸಾಮ್ರಾಜ್ಯಶಾಹಿ ಮನಸ್ಥಿತಿ
14. ಈ ಮಿಷನರಿಗಳು ಬಡವರನ್ನು, ಬಡತನವನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಾರೆ?
15. ಇಷ್ಟಕ್ಕೂ ನಾನೇಕೆ ನನ್ನ ಧರ್ಮವನ್ನು ಬದಲಾಯಿಸಲಿ?
1921ರಿಂದ 1937ರವರೆಗೂ ಇಂತಹ ಒಂದೊಂದು ಪ್ರಶ್ನೆಗಳನ್ನೆತ್ತಿಕೊಂಡು ತಮ್ಮ”ಯಂಗ್ ಇಂಡಿಯಾ’ ಮತ್ತು”ಹರಿಜನ’ ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿಯವರು ಮತಾಂತರವನ್ನು ಖಂಡಿಸಿ, ಮಿಷನರಿಗಳ ನೈಜ ಉದ್ದೇಶದ ಮೇಲೆ ಬೆಳಕು ಚೆಲ್ಲಿ ಸತತವಾಗಿ ಬರೆಯುತ್ತಾರೆ. ಇವತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಜೀಸಸ್್ನ ಯಾವ ತತ್ವವನ್ನು ಪಾಲಿಸುತ್ತಿವೆ ಎಂದು ಪ್ರಶ್ನಿಸುತ್ತಾರೆ, ಉದಾಹರಣೆ ಸಮೇತ ಅವುಗಳ ಇಬ್ಬಂದಿ ನಿಲುವನ್ನು ಖಂಡಿಸುತ್ತಾರೆ. 1937, ಜೂನ್ 3ರ”ಹರಿಜನ’ದಲ್ಲಿ,”ಜೀಸಸ್್ನೊಬ್ಬ ಮಾನವೀಯತೆಯ ಮಹಾನ್ ಭೋದಕ. ಆದರೆ ಅವನೊಬ್ಬನೇ ದೈವೀ ಪುತ್ರನೆಂಬುದನ್ನು ನಾನು ಒಪ್ಪುವುದಿಲ್ಲ. ನಾವೆಲ್ಲರೂ ದೇವರ ಮಕ್ಕಳೇ. ದೇವರು ಯಾರೋ ಒಬ್ಬನಿಗೆ ಮಾತ್ರ ಪಿತೃವಾಗಲು ಸಾಧ್ಯವಿಲ್ಲ’ ಎಂದು ಬರೆಯುತ್ತಾರೆ. ಬೈಬಲ್ಲನ್ನು ಚೆನ್ನಾಗಿ ಓದಿಕೊಂಡಿದ್ದ, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಮೆಚ್ಚಿಕೊಂಡಿದ್ದ, ಜೀಸಸ್್ನಿಂದ ಪ್ರೇರಿತರಾಗಿಯೇ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿ ಎನ್ನುತ್ತಿದ್ದ ಗಾಂಧೀಜಿ, ಮತಾಂತರವನ್ನು ಮಾತ್ರ ಸುತರಾಂ ಒಪ್ಪುತ್ತಿರಲಿಲ್ಲ. ಅದರ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ”ಒಂದು ವೇಳೆ ನನ್ನ ಬಳಿ ಅಧಿಕಾರವಿದ್ದರೆ, ಕಾನೂನು ತರುವ ಸಾಮರ್ಥ್ಯ ನನಗಿದ್ದಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ಮತಾಂತರದ ನಿಷೇಧ’ ಎಂದಿದ್ದರು ಬಾಪೂಜಿ.
ವಿಷಯ-2
‘ನನ್ನೊಬ್ಬ ಮುಸಲ್ಮಾನ ಸ್ನೇಹಿತ ಕೆಲ ಸಮಯದ ಹಿಂದೆ ಪುಸ್ತಕವೊಂದನ್ನು ಕಳುಹಿಸಿದ್ದ. ಒಂದು ತೊಟ್ಟು ಹಾಲನ್ನೂ ಬಿಡಲೊಪ್ಪದೆ ಹಸುವನ್ನು ಹೇಗೆ ಹಿಂಡುತ್ತೇವೆ, ಅವುಗಳನ್ನು ಹೇಗೆ ಹಸಿವಿನಿಂದ ನರಳಿಸುತ್ತೇವೆ, ಎತ್ತುಗಳನ್ನು ಹೇಗೆ ದುಡಿಸಿಕೊಳ್ಳುತ್ತೇವೆ, ಅತಿಭಾರ ಹಾಕಿ ಹೇಗೆ ದೌರ್ಜನ್ಯಕ್ಕೆ ಈಡುಮಾಡುತ್ತೇವೆ. ಒಂದು ವೇಳೆ ಅವುಗಳಿಗೆ ಮಾತು ಬಂದಿದ್ದರೆ ನಮ್ಮ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತಿದ್ದವು, ಜಗತ್ತು ದಿಗ್ಭ್ರಮೆಗೊಳ್ಳುತ್ತಿತ್ತು ಎಂಬುದನ್ನು ಅದರಲ್ಲಿ ವಿವರಿಸಲಾಗಿತ್ತು’.
ಅದನ್ನು 1921, ಅಕ್ಟೋಬರ್ 6ರ”ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆಯುತ್ತಾರೆ.”ನಾನು ಗೋವನ್ನು ಗೌರವಿಸುತ್ತೇನೆ, ಪ್ರೀತಿಯಿಂದ ಕಾಣುತ್ತೇನೆ. ಗೋವು ಕೃಷಿ ಆಧಾರಿತ ಈ ದೇಶದ ರಕ್ಷಕಿ. ನಮ್ಮ ಮುಸಲ್ಮಾನ ಸಹೋದರರೂ ಇದನ್ನು ಒಪ್ಪುತ್ತಾರೆ. ನಾನು ಗೋವನ್ನು ಗೌರವಿಸಿದಂತೆ ನನ್ನ ದೇಶವಾಸಿಗಳನ್ನೂ ಗೌರವಿಸುತ್ತೇನೆ. ಆತ ಹಿಂದು ಇರಬಹುದು, ಮುಸಲ್ಮಾನನಾಗಿರಬಹುದು. ಹಸುವಿನಷ್ಟೇ ಮನುಷ್ಯನೂ ಉಪಯೋಗಕಾರಿ. ಅಂದಮಾತ್ರಕ್ಕೆ ಹಸುವನ್ನು ರಕ್ಷಿಸುವುದಕ್ಕೋಸ್ಕರ ಮುಸಲ್ಮಾನನ ವಿರುದ್ಧ ನಾನು ಹೊರಡಬೇಕಾ, ಕೊಲ್ಲಬೇಕಾ? ಹಾಗೆ ಮಾಡಿದರೆ ನಾನು ಮುಸಲ್ಮಾನ ಹಾಗೂ ಗೋವು ಇಬ್ಬರ ಶತ್ರುತ್ವವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಗೋವನ್ನು ಸಂರಕ್ಷಿಸಲು ನನಗೆ ಕಾಣುವ ಏಕೈಕ ಮಾರ್ಗವೆಂದರೆ ನನ್ನ ಮುಸಲ್ಮಾನ ಸಹೋದರರಿಗೆ ಮನವರಿಕೆ ಮಾಡಿಕೊಡುವುದು’. ಹೀಗೆ ಗೋಸಂರಕ್ಷಣೆಯ ಬಗ್ಗೆ ಗಾಂಧೀಜಿ ಬಹುವಾಗಿ ವಿವರಿಸುತ್ತಾರೆ. ಗೋವು ಪೂಜನೀಯ ಎಂಬುದನ್ನು ಅವರ ಬರವಣಿಗೆಗಳಲ್ಲೆಲ್ಲ ಪ್ರತಿಪಾದಿಸುತ್ತಾರೆ.
ವಿಷಯ-3
ರಾಮರಾಜ್ಯ! ಭಾರತ ಸ್ವತಂತ್ರಗೊಂಡ ಕೂಡಲೇ ಅದನ್ನು ರಾಮರಾಜ್ಯವನ್ನಾಗಿ ಮಾಡುವುದಾಗಿ ಮೊದಲು ಹೇಳಿದವರೇ ಮಹಾತ್ಮ ಗಾಂಧೀಜಿ. ಅಂದರೆ ಸ್ವಾತಂತ್ರ್ಯ ನೀಡಿದ ನಂತರ ಯಾವ ರೀತಿಯ ವ್ಯವಸ್ಥೆ ರೂಪಿಸುತ್ತೀರಿ ಎಂಬ ಪ್ರಶ್ನೆಗೆ”ರಾಮನಂಥ ಅದರ್ಶ ರಾಜ್ಯ’ ಎಂದಿದ್ದರು ಮಹಾತ್ಮ. ಇನ್ನೂ ಬಿಡಿಸಿ ಹೇಳುವುದಾದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಡೆಸಿದ ಆದರ್ಶ, ನ್ಯಾಯ, ತ್ಯಾಗ ಮುಂತಾದ ಮೌಲ್ಯಗಳನ್ನು ಹೊಂದಿರುವ ರಾಜ್ಯ ನಿರ್ಮಾಣ. ಆ ಬಗ್ಗೆ 1947, ಫೆಬ್ರವರಿ 27ರಂದು ಬರೆಯುತ್ತಾ,”ಯಾರೂ ತಪ್ಪಾಗಿ ಭಾವಿಸಬಾರದು, ರಾಮರಾಜ್ಯವೆಂದರೆ ಹಿಂದುಗಳ ಆಡಳಿತವಲ್ಲ. ದೇವರ ಸಾಮ್ರಾಜ್ಯ. ರಾಮನೆಂಬುದು ಖುದಾ ಅಥವಾ ದೇವರ ಇನ್ನೊಂದು ಹೆಸರಷ್ಟೇ. ದೇವರ ಸಾಮ್ರಾಜ್ಯವೆಂದರೆ ದಗಾ, ವಂಚನೆ, ಅನ್ಯಾಯಗಳಿಲ್ಲದ, ಎಲ್ಲರನ್ನೂ ಸಮನಾಗಿ ಕಾಣುವ ಆಡಳಿತ’ ಎನ್ನುತ್ತಾರೆ.
ಈ ಮೇಲಿನ ಮೂರು ಅಂಶಗಳು ಏನನ್ನು ಸೂಚಿಸುತ್ತವೆ? ಹಾಗೂ ಈ ವಿಚಾರಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದನ್ನು ಕೇಳಿದ್ದೀರಾ? ಗಾಂಧೀಜಿ ಎಂದರೆ ಬರೀ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸಿದ ನೇತಾರ ಮಾತ್ರವಾ? ಅಥವಾ ಸ್ವಸ್ಥ ಸಮಾನ ಸಮಾಜ ನಿರ್ಮಾಣದ ಕನಸು ಕಂಡ, ಈ ದೇಶದ ನೆಲ, ಜಲ, ಜೀವಸಂಕುಲಗಳನ್ನು ಪ್ರೀತಿಸಿದ, ಸಂಸ್ಕೃತಿಯನ್ನು ಗೌರವಿಸಿದ, ಅದರ ಸಂರಕ್ಷಣೆ ಮಾಡಬೇಕೆಂದು ಪ್ರತಿಪಾದಿಸಿದ ವ್ಯಕ್ತಿಯೂ ಹೌದಲ್ಲವೆ? ಹಾಗಾದರೆ ಗಾಂಧೀಜಿ ಪ್ರತಿಪಾದಿಸಿದ ಗೋಸಂರಕ್ಷಣೆ, ಮತಾಂತರ ನಿಷೇಧ, ರಾಮರಾಜ್ಯ ನಿರ್ಮಾಣಗಳ ಬಗ್ಗೆ ಮಾತನಾಡಿದರೆ ಇವತ್ತು ಯಾವ ಪಟ್ಟ ಸಿಗುತ್ತದೆ? ಅವರು ಬಲವಾಗಿ ಪ್ರತಿಪಾದಿಸಿದ ವಿಚಾರಗಳ ಬಗ್ಗೆ ಈಗ ಧ್ವನಿಯೆತ್ತಿದರೆ ಯಾವ ಹಣೆಪಟ್ಟಿಯನ್ನು ಅಂಟಿಸುತ್ತಾರೆ? ಒಂದು ಹಂತದಲ್ಲಂತೂ ಗಾಂಧೀಜಿಯವರು ‘Muslims are bullies and Hindus cowards’ ಎಂದು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ನಾನೊಬ್ಬ ಗಾಂಧಿವಾದಿ ಎಂದು ಕರೆದುಕೊಳ್ಳುವ ಯಾವ ವ್ಯಕ್ತಿಯ ಬಾಯಲ್ಲಿ ಮತಾಂತರದ ಬಗ್ಗೆ ಗಾಂಧೀಜಿ ಯಾವ ಅಭಿಪ್ರಾಯ, ನಿಲುವು ಹೊಂದಿದ್ದರು ಎಂಬ ವಿಚಾರ ಹೊರಬರುತ್ತಿದೆ? ಈ ದೇಶದ ನೆಲ, ಜಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸಿ, ಮತಾಂತರವನ್ನು ಕಟುವಾಗಿ ಖಂಡಿಸಿದ ಗಾಂಧೀಜಿಯವರ ಮಾತುಗಳನ್ನು ಯಾವ ಗಾಂಧಿ ಟೋಪಿವಾಲಾ ಇಂದು ಉದಾಹರಿಸುತ್ತಾನೆ ಹೇಳಿ?

ಕೃಪೆ: ಪ್ರತಾಪ ಸಿಂಹ