ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಜೂನ್ 26, 2012

ಹಿಂದೂಗಳು ಕೋಮುವಾದಿಗಳಾಗಿದ್ದರೆ ಈ ದೇಶ ಜಾತ್ಯತೀತವಾಗಿರಲು ಸಾಧ್ಯವಿತ್ತೆ? - ಪ್ರತಾಪ ಸಿಂಹ


ಈ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್್ಗೇನಾಗಿದೆ? ಅವರ ಚೇಲಾಗಳು ಯಾಕಾಗಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಎಳೆದು ತರುತ್ತಿದ್ದಾರೆ? ಯಾವ ಉದ್ದೇಶ ಸಾಧನೆಗಾಗಿ ರಾಜಧರ್ಮವನ್ನು ಪಾಲಿಸಿ ಎಂಬ ವಾಜಪೇಯಿಯವರ ಕಿವಿಮಾತನ್ನು ಈಗ ಉಲ್ಲೇಖಿಸುತ್ತಿದ್ದಾರೆ?  ನಿತೀಶ್ ಕುಮಾರ್ ಮಾತನಾಡುತ್ತಿರುವ ಜಾತ್ಯತೀತತೆಯಾದರೂ ಯಾವುದು? ಇಷ್ಟಕ್ಕೂ ಜಾತ್ಯತೀತತೆ ಎಂದರೇನು? ಒಂದು ವೇಳೆ ಹಿಂದೂಗಳು ಬಹುಸಂಖ್ಯಾತರಾಗಿಲ್ಲದೇ ಹೋಗಿದ್ದರೆ ಈ ದೇಶ ಜಾತ್ಯತೀತವಾಗಿರುವುದಕ್ಕಾದರೂ ಸಾಧ್ಯವಿತ್ತೆ? ಯಾವ ಕಾರಣಕ್ಕಾಗಿ ಇವರೆಲ್ಲ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿದ್ದಾರೆ? 2002, ಫೆಬ್ರವರಿ 27 ಹಾಗೂ ತದನಂತರ ನಡೆದಿದ್ದಾದರೂ ಏನು? ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದಾದರೂ ಏನನ್ನು?

2001, ಅಕ್ಟೋಬರ್ 7ರಂದು ಗುಜರಾತ್್ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಇನ್ನೂ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿಯೇ ಇರಲಿಲ್ಲ. ಸಂವಿಧಾನದ ನಿಯಮದಂತೆ ಚುನಾವಣೆಯಲ್ಲಿ ಆರಿಸಿಬರುವ ಸಲುವಾಗಿ 2002, ಫೆಬ್ರವರಿ 19ರಂದು ರಾಜ್್ಕೋಟ್್ನಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಫೆಬ್ರವರಿ 24ರಂದು ಫಲಿತಾಂಶ ಪ್ರಕಟವಾಯಿತು. ಮೋದಿ ಗೆಲುವು ಸಾಧಿಸಿದರು. ಇದಾಗಿ ಮೂರು ದಿನಗಳಲ್ಲಿಯೇ ಅಂದರೆ, 2002, ಫೆಬ್ರವರಿ 27ರಂದು ಫೈಜಾಬಾದ್್ನಿಂದ ಅಹಮದಾಬಾದ್್ಗೆ ತೆರಳುತ್ತಿದ್ದ ಸಾಬರ್್ಮತಿ ಎಕ್ಸ್್ಪ್ರೆಸ್ ರೈಲಿನ ಮೇಲೆ ಪೂರ್ವಯೋಜಿತ ದಾಳಿ ನಡೆಯಿತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 58 ಜನರು ಸಜೀವ ದಹನವಾದರು. ಆ ಮೂಲಕ ಶಾಂತಿಯಿಂದಿದ್ದ ಹಿಂದೂಗಳನ್ನು ಪ್ರಚೋದಿಸಿದವರಾರು?
ನಿಮಗೆ ನೆನಪಿರಲಿ, Hindus never Act, They only react!
ಅಂದು ಗುಜರಾತ್್ನಲ್ಲಿ ಆಗಿದ್ದೂ ಇದೇ. ಐವತ್ತೆಂಟು ಕರಸೇವಕರ ಸಜೀವ ದಹನಕ್ಕೆ ಹಿಂದೂಗಳು ಪ್ರತೀಕಾರ ತೆಗೆದುಕೊಳ್ಳಲು ಹೊರಟ ಕಾರಣ ಕೋಮುದಳ್ಳುರಿ ಆರಂಭವಾಯಿತು. ನಿಮಗೆ ಮತ್ತೂ ಒಂದು ಅಂಶ ನೆನಪಿರಲಿ, ನರೇಂದ್ರ ಮೋದಿ ಗುಜರಾತ್್ನ ಮುಖ್ಯಮಂತ್ರಿಯಾಗಿ ಕೇವಲ ನಾಲ್ಕು ತಿಂಗಳಾಗಿತ್ತು. ಅವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ರಾಜ್ಯ ವಿಧಾನಸಭೆಯ ಮುಖ ನೋಡಿದ ವ್ಯಕ್ತಿಯೂ ಅಲ್ಲ! ಅಷ್ಟೇಕೆ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲು ಮುಖ್ಯಮಂತ್ರಿ ಕಚೇರಿಯನ್ನೂ ಜೀವಮಾನದಲ್ಲಿ ಕಂಡಿರಲಿಲ್ಲ!! ಅಂತಹ ಅನನುಭವದ ಹೊರತಾಗಿಯೂ ಗೋಧ್ರಾ ಘಟನೆ ಸಂಭವಿಸಿದ ದಿನವೇ ಕರ್ಫ್ಯೂ ವಿಧಿಸಿದರು. ಮಾರ್ಚ್ 1ರ ವೇಳೆಗೆ ಇಡೀ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿತ್ತು. ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದು ಮಾತ್ರವಲ್ಲ ಎರಡು ಸೇನಾ ತುಕಡಿಗಳನ್ನು ಕರೆಸಲಾಗಿತ್ತು. ಇಡೀ ರಾಜ್ಯವೇ ದಂಗೆ ಎದ್ದಿರುವಾಗ ಯಾವ ಪೊಲೀಸ್ ಪಡೆ, ಅರೆಸೇನಾ ಪಡೆ ಅಥವಾ ಸೈನ್ಯ ಅದನ್ನು ನಿಯಂತ್ರಿಸಲು ಸಾಧ್ಯ? ಇಷ್ಟಾಗಿಯೂ ಕೇವಲ ನಾಲ್ಕು ದಿನಗಳಲ್ಲಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಆ ವೇಳೆಗಾಗಲೇ 750 ಮುಸಲ್ಮಾನರ ಹತ್ಯೆಯಾಗಿತ್ತು. ಆದರೆ ಅದಕ್ಕಾಗಿ ಮೋದಿಯನ್ನು ಕೋಮುವಾದಿಯೆಂದು ದೂರುವವರು ಮೋದಿ ಆದೇಶಿಸಿದ ಕಂಡಲ್ಲಿ ಗುಂಡಿಗೆ 250 ಹಿಂದೂಗಳು ಸತ್ತರು ಎಂಬುದನ್ನು ಮಾತ್ರ ಯಾಕೆ ಗುರುತಿಸುವುದಿಲ್ಲ? ಇಂತಹ ಮನಸ್ಥಿತಿಯೇ ಮೋದಿ ವಿರುದ್ಧದ ನಕಾರಾತ್ಮಕ ಪ್ರಚಾರಾಂದೋಲನಕ್ಕೆ ಕಾರಣವಾಯಿತು. ಆ ಸಂದರ್ಭದಲ್ಲಿ ವಾಜಪೇಯಿಯವರು ಟೀಕೆಗೆ ಜಗ್ಗಿ “ರಾಜಧರ್ಮವನ್ನು ಪಾಲಿಸಿ” ಎಂದು  ಮೋದಿಗೆ ಕಿವಿಮಾತು ಹೇಳಿದ್ದೂ ನಿಜ. ಒತ್ತಡ ಹೆಚ್ಚಾದಾಗ ಮೋದಿಯವರನ್ನು ಬದಲಿಸಲು ಯೋಚಿಸಿದ್ದೂ ನಿಜವೇ. ಆ ಸಂದರ್ಭಕ್ಕೆ ಅನುಗುಣವಾಗಿ ವಾಜಪೇಯಿಯವರು ನೀಡಿದ ಹೇಳಿಕೆಯನ್ನು ಇಂದಿಗೂ ಉಲ್ಲೇಖಿಸುವ “Sick’ಲರ್್ವಾದಿಗಳಿಗೆ ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಾಜಪೇಯಿಯವರು ಆಡಿದ ಮಾತುಗಳೇಕೆ ನೆನಪಾಗುವುದಿಲ್ಲ?
2002, ಏಪ್ರಿಲ್್ನಲ್ಲಿ ಗೋವಾದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭವಾಯಿತು. ವಿನಾಕಾರಣ ತಮ್ಮನ್ನು ಕಟುವಾಗಿ ಟೀಕಿಸುತ್ತಿದ್ದ ಮಾಧ್ಯಮಗಳಿಂದಾಗಿ ಮನನೊಂದು ಮೋದಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾದರು. ಆದರೆ ಅವರ ರಾಜಿನಾಮೆಯನ್ನು ತಿರಸ್ಕರಿಸಲಾಯಿತು. ಏಪ್ರಿಲ್ 12ರಂದು ಗೋವಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಗುಜರಾತ್ ಹಿಂಸಾಚಾರದ ಬಗ್ಗೆ ಮಾತನಾಡಿದರು. “ಭಾರತದ ಜಾತ್ಯತೀತತೆಯೇ ಅಪಾಯದಲ್ಲಿದೆ ಎಂಬ ಆರೋಪಗಳು ಇಂದು ಕೇಳಿಬರುತ್ತಿವೆ. ನಮ್ಮ ವಿರುದ್ಧ ಆರೋಪಿಸುತ್ತಿರುವ ಈ ವ್ಯಕ್ತಿಗಳು ಯಾರು? ಈ ವ್ಯಕ್ತಿಗಳ ಪ್ರಕಾರ ಜಾತ್ಯತೀತತೆಯ ಅರ್ಥವೇನು? ಮುಸ್ಲಿಮರು ಮತ್ತು ಕ್ರೈಸ್ತರು ಕಾಲಿಡುವ ಮೊದಲೇ ಈ ದೇಶ ಜಾತ್ಯತೀತವಾಗಿತ್ತು. ಮುಸ್ಲಿಮರು ಮತ್ತು ಕ್ರೈಸ್ತರು ಬಂದ ಮೇಲೆ ಭಾರತ ಜಾತ್ಯತೀತ ರಾಷ್ಟ್ರವಾಗಲಿಲ್ಲ. ಈ ದೇಶಕ್ಕೆ ಆಗಮಿಸಿದ ಅನ್ಯ ಧರ್ಮೀಯರಿಗೆ ಅವರವರ ನಂಬಿಕೆ, ಆಚಾರ ವಿಚಾರಗಳನ್ನು ಅನುಸರಿಸಲು, ಆರಾಧಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಅವರನ್ನು ಯಾರೂ ಬಲಪ್ರಯೋಗದ ಮೂಲಕ ಮತಾಂತರಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಬಲಾತ್ಕಾರವಾಗಿ ಮತಾಂತರ ಮಾಡುವ ಸಂಸ್ಕೃತಿ ನಮ್ಮ ದೇಶದಲ್ಲಿರಲಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಘಟನೆಗಳು ನಡೆಯುತ್ತವೆ. ಅವು ಕೈಮೀರಿ ದೊಡ್ಡ ತಿಕ್ಕಾಟಗಳೂ ಆಗಬಹುದು. ಆದರೆ ಎಲ್ಲ ಘಟನೆಗಳ ಮೂಲಕ್ಕೆ ಹೋಗಿ ನೋಡಿದರೆ ಅವು ಹೆಚ್ಚುತ್ತಿರುವ ಅಸಹನೆಯ ಫಲವಾಗಿರುತ್ತವೆ.
ಗುಜರಾತ್್ನಲ್ಲಿ ನಡೆದಿದ್ದಾದರೂ ಏನು? ಒಂದು ವೇಳೆ ಅಮಾಯಕ ಕರಸೇವಕರನ್ನು ಸಾಬರ್್ಮತಿ ರೈಲಿನ ಬೋಗಿಗಳಲ್ಲಿ ಜೀವಂತವಾಗಿ ಸುಟ್ಟುಹಾಕುವ ಪಿತೂರಿ ರೂಪಿಸದೆ ಹೋಗಿದ್ದಿದ್ದರೆ ಗುಜರಾತ್ ಹಿಂಸಾಚಾರವೇ ಸಂಭವಿಸುತ್ತಿರಲಿಲ್ಲ. ಆದರೆ ಅದಾಗಲಿಲ್ಲ. ಕರಸೇವಕರನ್ನು ಸಜೀವವಾಗಿ ದಹನ ಮಾಡಲಾಯಿತು. ಇದಕ್ಕೆ ಕಾರಣಕರ್ತರಾರು? ಸರಕಾರ ಈ ಬಗ್ಗೆ ತನಿಖೆ ನಡೆಸುತ್ತಿದೆ. ಗೂಢಚರ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ. ಆದರೆ ಗುಜರಾತ್ ದುರಂತಕ್ಕೆ ಎಡೆಮಾಡಿಕೊಟ್ಟ ಮೂಲ ಕಾರಣವನ್ನು ನಾವು ಮರೆಯಬಾರದು. ಗೋಧ್ರಾ ನಂತರದ ಹಿಂಸಾಚಾರವನ್ನು ಖಂಡಿತ ಖಂಡಿಸಲೇಬೇಕು. ಆದರೆ ಬೋಗಿಗೆ ಬೆಂಕಿ ಇಟ್ಟವರಾರು? ಆ ಬೆಂಕಿ ಹರಡಿದ್ದು ಹೇಗೆ?
ನಮ್ಮದು ಬಹುಧರ್ಮೀಯ ರಾಷ್ಟ್ರ. ಹಲವಾರು ಭಾಷೆಗಳು ನಮ್ಮ ದೇಶದಲ್ಲಿವೆ. ಒಬ್ಬೊಬ್ಬರು ಒಂದೊಂದು ದೇವರನ್ನು ಆರಾಧಿಸುತ್ತಾರೆ. ನಾವು ಶಾಂತಿಯುತ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಧರ್ಮಗಳಿಗೆ ಸಮಾನ ಗೌರವ ನೀಡಬೇಕೆಂದು ನಾವು ನಂಬಿದ್ದೇವೆ. ಯಾರೂ ಕೂಡ ಭಾರತದ ಜಾತ್ಯತೀತತೆಯ ಬಗ್ಗೆ ಪ್ರಶ್ನಿಸಬಾರದು. ನಮ್ಮ ಪಾಲಿಗೆ ಗೋವಾದಿಂದ ಗುವಾಹಟಿಯವರೆಗೂ ಭಾರತದ ಮಣ್ಣು ಒಂದೇ. ಈ ನೆಲದಲ್ಲಿ ವಾಸಿಸುತ್ತಿರುವವರೆಲ್ಲ ಒಂದೇ. ನಮಗೆ ಧಾರ್ಮಿಕ ತೀವ್ರವಾದದಲ್ಲಿ ನಂಬಿಕೆ ಇಲ್ಲ. ಇಂದು ಭಯೋತ್ಪಾದನೆ ನಮ್ಮ ದೇಶಕ್ಕೆ ಅತಿ ದೊಡ್ಡ ಬೆದರಿಕೆಯಾಗಿದೆ. ನಾನು ಜಗತ್ತಿನ ಯಾವ ರಾಷ್ಟ್ರಕ್ಕೆ ಹೋದರೂ ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದವರು ಉಗ್ರ ಇಸ್ಲಾಂ ಭಯೋತ್ಪಾದನೆಯ ಬೀಜ ಬಿತ್ತುತ್ತಿದೆಯೆಂದು ದೂರುತ್ತಾರೆ. ಇಸ್ಲಾಂನಲ್ಲಿ ಎರಡು ಮುಖಗಳಿವೆ. ಒಂದು ಅನ್ಯ ಧರ್ಮೀಯರ ಬಗ್ಗೆ ಸಹಿಷ್ಣು ಭಾವನೆ ಹೊಂದಿದೆ. ಸತ್ಯ ಮಾರ್ಗವನ್ನು ತುಳಿಯಬೇಕೆಂದು, ಪರಸ್ಪರ ಪ್ರೀತಿ, ಅನುಕಂಪ ಮತ್ತು ಸಂವೇದನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳುತ್ತದೆ. ಆದರೆ ಇಂದು ಇಸ್ಲಾಂ ಹೆಸರಿನಲ್ಲಿ ತಲೆಯೆತ್ತುತ್ತಿರುವ ಭಯೋತ್ಪಾದನೆಯಲ್ಲಿ ಸಹಿಷ್ಣುತೆಗೆ ಜಾಗವೇ ಇಲ್ಲ. ಅವರು ಜಿಹಾದ್್ನ ಕಹಳೆಯೂದಿದ್ದಾರೆ. ಇಡಿ ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮಾತನ್ನಾಡುತ್ತಿದ್ದಾರೆ. ಎಲ್ಲೆಲ್ಲಿ ಮುಸ್ಲಿಮರಿದ್ದಾರೋ ಅಲ್ಲೆಲ್ಲಾ ಅವರು ಇತರರೊಂದಿಗೆ ಬೆರೆತು ಬದುಕುವುದಕ್ಕೆ ಸಿದ್ಧರಿಲ್ಲ. ತಮ್ಮ ತತ್ತ್ವಗಳನ್ನು ಶಾಂತಿಯುತವಾಗಿ ಪ್ರಚಾರ ಮಾಡುವ ಬದಲಾಗಿ ಬೆದರಿಕೆ ಮತ್ತು ಭಯೋತ್ಪಾದನೆಯ ಮೂಲಕ ಹರಡಲು ಯತ್ನಿಸುತ್ತಿದ್ದಾರೆ. ಈ ಅಪಾಯದ ಬಗ್ಗೆ ಜಗತ್ತು ಎಚ್ಚೆತ್ತುಕೊಂಡಿದೆ. ಭಯೋತ್ಪಾದನೆಯ ಬಗ್ಗೆ ನಿರ್ಲಕ್ಷ್ಯ ತಳೆಯುವ ಮೂಲಕ ನಾವೆಂಥ ಘೋರ ಅಪರಾಧವಾಸಗಿದೆವು ಎಂದು ಜಗತ್ತಿನ ರಾಷ್ಟ್ರಗಳು ಅರ್ಥಮಾಡಿಕೊಳ್ಳಲಾರಂಭಿಸಿವೆ. ಈಗ ಎಚ್ಚೆತ್ತು ಸಂಘಟಿತರಾಗುತ್ತಿವೆ. ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ವಾನುಮತ ರೂಪಿಸಲು ಯತ್ನಿಸಲಾಗುತ್ತಿದೆ.
ಆದರೆ ನಾವು ಅವರಿಗೆ ನಮ್ಮ ಅನುಭವವನ್ನು ಹೇಳುತ್ತಿದ್ದೇವೆ. ನಮ್ಮ ದೇಶದಲ್ಲಿ ನಾವೆಂದೂ ಅನ್ಯ ಧರ್ಮೀಯರನ್ನು ಬಲಾತ್ಕಾರ ಪಡಿಸಿಲ್ಲ. ನಾವು ಅಥವಾ ಅವರು ಎಂಬ ತಾರತಮ್ಯವನ್ನೂ ಮಾಡಿಲ್ಲ. ನಾವು ಪೂಜಿಸುವ ವಿಧಾನ ಬೇರೆ ಬೇರೆಯಾಗಿರಬಹುದು. ಆದರೆ ದೇವರು ಒಬ್ಬನೇ. ಈ ಕಾರಣಕ್ಕಾಗಿಯೇ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತಿದೆ”.
ಅಂದು ವಾಜಪೇಯಿಯವರು ಮಾಡಿದ ಈ ಭಾಷಣದ ಸಾರವೇನು?
ಒಂದು ವೇಳೆ ಗೋಧ್ರಾ ಘಟನೆ ಸಂಭವಿಸದೇ ಹೋಗಿದ್ದರೆ ಗುಜರಾತ್ ಕೋಮುದಳ್ಳುರಿಯೂ ನಡೆಯುತ್ತಿರಲಿಲ್ಲ ಹಾಗೂ ನರೇಂದ್ರ ಮೋದಿ ಕೋಮುವಾದಿ ಎಂಬ ಪಟ್ಟಕಟ್ಟಿಕೊಳ್ಳಬೇಕಾದ ಅಗತ್ಯವೂ ಬರುತ್ತಿರಲಿಲ್ಲ, ಅಲ್ಲವೇ? ಇಷ್ಟಕ್ಕೂ ಈ ದೇಶದಲ್ಲಿ ಹಿಂದೂಗಳೇ ಆರಂಭಿಸಿದ ಒಂದೇ ಒಂದು ಕೋಮುದಂಗೆ, ದಳ್ಳುರಿಯನ್ನು ತೋರಿಸಿ ನೋಡೋಣ? ಕನಿಷ್ಠ ಈ ನಮ್ಮ ಹಿಂದೂ ಭಾರತ ಅನ್ಯ ದೇಶದ ಮೇಲೆ ಆಕ್ರಮಣ ಮಾಡಿದ ಉದಾಹರಣೆಯನ್ನಾದರೂ ತೋರಿಸಿ? ಹಾಗಿರುವಾಗ ಯಾವ ಆಧಾರದ ಮೇಲೆ ಒಬ್ಬ ವ್ಯಕ್ತಿಗೆ ಕಟ್ಟಾ ಹಿಂದುತ್ವವಾದಿ ಎಂಬ ಹಣೆಪಟ್ಟಿ ಕಟ್ಟಿ ಕೋಮುವಾದಿ ಎಂದು ಜರಿಯುತ್ತೀರಿ? ಯಾವ ಕಾರಣಕ್ಕಾಗಿ ಮಾಧ್ಯಮಗಳು ನರೇಂದ್ರ ಮೋದಿಯವರೊಬ್ಬರನ್ನೇ ಕೋಮುವಾದಿ ಎಂದು ಬೊಟ್ಟುಮಾಡಿ ತೋರುತ್ತವೆ? 1984ರಲ್ಲಿ ದಿಲ್ಲಿಯ ಬೀದಿಬೀದಿಗಳಲ್ಲಿ ನಾಲ್ಕು ಸಾವಿರ ಸಿಖ್ಖರ ಮಾರಣಹೋಮ ಮಾಡಿದ ಕಾಂಗ್ರೆಸ್ಸಿಗರು ಮಾಧ್ಯಮಗಳಿಗೆ ಕೋಮುವಾದಿಗಳೆನಿಸುವುದಿಲ್ಲವೇ? ಅಂತಹ ಹೀನ, ಪೈಶಾಚಿಕ ಕೃತ್ಯವನ್ನೂ “ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ” ಎಂದು ಲಜ್ಜೆಗೆಟ್ಟು ಸಮರ್ಥಿಸಿಕೊಂಡ ರಾಜೀವ್ ಗಾಂಧಿಯವರನ್ನು ನಮ್ಮ ಮಾಧ್ಯಮಗಳು ಎಂದಾದರೂ ಕೋಮುವಾದಿ ಎಂದು ಕರೆದಿದ್ದನ್ನು ಕೇಳಿದ್ದೀರಾ? ಮುಸ್ಲಿಮರನ್ನೇ ಜೀವಾಳವಾಗಿಟ್ಟುಕೊಂಡಿರುವ ಮಜಲೀಸ್ ಇತ್ತೇಹುದಾಲ್ ಮುಸಲ್ಮೀನ್ ಪಕ್ಷದ ಅಸಾದುದ್ದೀನ್ ಓವೈಸಿ, ಮುಂಬೈ ಸ್ಫೋಟಕ್ಕೆ ಹಿಂದೂಗಳೇ ಕಾರಣವೆಂದಿದ್ದ ಕಾಂಗ್ರೆಸ್ಸಿನ ಅಬ್ದುರ್ ರೆಹಮಾನ್ ಅಂಟುಳೆ, ಅಬ್ದುಲ್ ನಾಸರ್ ಮದನಿ ಇವರಿಗೆ ಕೋಮುವಾದಿಗಳಂತೆ ಕಾಣಿಸುವುದಿಲ್ಲವೇಕೆ? ಈ ದೇಶ ವಿಭಜನೆಗೆ ಕಾರಣವಾದ ಪಕ್ಷದ ಹೆಸರನ್ನು ಹೊತ್ತಿರುವ ಹಾಗೂ ಕೇರಳವನ್ನು ಮತ್ತೊಂದು ಕಾಶ್ಮೀರವನ್ನಾಗಿಸಲು ಹವಣಿಸುವ ಮುಸ್ಲಿಮ್ ಲೀಗ್ ಹಾಗೂ ಅದರ ನಾಯಕರು ಕೋಮುವಾದಿಗಳಲ್ಲವೇ? ಅಂತಹವರ ಜತೆ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಕೋಮುವಾದಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತಿಲ್ಲವೇ? ಇಂದು ಭಾರತದಲ್ಲಿ ಕಟ್ಟರ್ ಪಂಥೀಯತೆಯನ್ನು ಹುಟ್ಟುಹಾಕುತ್ತಿರುವ ವಹಾಬಿಸಮ್ ಬಗ್ಗೆ ಯಾರೂ ಯಾಕೆ ಮಾತನಾಡುವುದಿಲ್ಲ? ಈ ದೇಶದ ಉದ್ದಗಲಕ್ಕೂ ಬಾಂಬಿಡುತ್ತಿರುವ, ಮಾರುಕಟ್ಟೆ-ರೈಲುಗಳನ್ನು ಸ್ಫೋಟಿಸುತ್ತಿರುವ ಇಂಡಿಯನ್ ಮುಜಾಹಿದ್ದೀನ್, ಜಮಾತೆ ಇಸ್ಲಾಮಿ ಹಾಗೂ ಅವುಗಳ ಹಿತೈಷಿಗಳನ್ನು ಕೋಮುವಾದಿಗಳೆಂದು ಕರೆಯುವ ತಾಕತ್ತು ನಮ್ಮ ಯಾವ ರಾಜಕೀಯ ನೇತಾರನಿಗಿದೆ?
ಅದಿರಲಿ, ನಮ್ಮ ಸಂವಿಧಾನ 1950, ಜನವರಿ 26ರಂದು ಜಾರಿಗೆ ಬಂದಾಗ ಅದರ ಪೀಠಿಕೆಯಲ್ಲಿ (Preamble)“ಸೆಕ್ಯುಲರ್್” ಪದವಿತ್ತೇ? 1976ರಲ್ಲಿ ಮಾಡಿದ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಪೀಠಿಕೆಗೆ ಸೆಕ್ಯುಲರ್ ಹಾಗೂ ಸೋಶಿಯಲಿಸ್ಟ್ ಎಂಬ ಪದಗಳನ್ನು ಸೇರಿಸಲಾಯಿತು. ಆ ಪದಗಳನ್ನು ಸೇರಿಸುವುದಕ್ಕೂ ಮೊದಲು ಭಾರತ ಸೆಕ್ಯುಲರ್ ರಾಷ್ಟ್ರವೇ ಆಗಿತ್ತು. ಇಷ್ಟಕ್ಕೂ ನಮ್ಮ ಭಾರತದ ಸಂಸ್ಕೃತಿ, ಪರಂಪರೆಯಲ್ಲೇ ದ್ವೇಷಾಸೂಯೆ, ಆಕ್ರಮಣವನ್ನು ಕಾಣಲು ಸಾಧ್ಯವಿಲ್ಲ. ನಮ್ಮ ಧರ್ಮ ಭರತಖಂಡದಲ್ಲೇ ಬೌದ್ಧಿಸಂ, ಜೈನಿಸಂಗಳು ಜನ್ಮತಳೆಯಲು ಅವಕಾಶ ಮಾಡಿಕೊಟ್ಟಿದ್ದು ಮಾತ್ರವಲ್ಲ ಬೆಳೆಸಿ ಪೋಷಿಸಿದ ಇತಿಹಾಸ ಹೊಂದಿದೆ. ಝೊರಾಷ್ಟ್ರಿಯುನ್, ಜುದಾಯಿಸಂ (ಯಹೂದಿ) ಮತಾನುಯಾಯಿಗಳಿಗೆ ಆಶ್ರಯ ನೀಡಿದ್ದು ಮಾತ್ರವಲ್ಲ ಇಸ್ಲಾಮ್ ಕ್ರಿಶ್ಚಿಯಾನಿಟಿಗಳು ನಮ್ಮ ನೆಲಕ್ಕೆ ಕಾಲಿರಿಸಲು, ಮತ ಪ್ರಚಾರ ಮಾಡುವುದಕ್ಕೂ ಅವಕಾಶವಿತ್ತ ಹೃದಯವೈಶಾಲ್ಯತೆ ಹಿಂದೂ ಧರ್ಮದ್ದು. ಇಷ್ಟಕ್ಕೂ ನಮ್ಮದು ಮರುಭೂಮಿಯಲ್ಲಿ ಜನಿಸಿದ ಮತವಲ್ಲ. ಗಿಡ-ಮರ, ನೆಲ-ಜಲ, ಪ್ರಾಣಿಸಂಕುಲವನ್ನು ಆರಾಧಿಸುವ ಧರ್ಮ. ಹಾಗಿರುವುದರಿಂದಲೇ ಭರತಖಂಡ ಜಾತ್ಯತೀತ ರಾಷ್ಟ್ರವಾಗಿ ಉಳಿದಿದೆ. ಇಲ್ಲದೇ ಹೋಗಿದ್ದರೆ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಬಲವಂತವಾಗಿ ಎತ್ತೊಯ್ದು ಮತಾಂತರ ಮಾಡಿದ, ಅಲ್ಪಸಂಖ್ಯಾತ ಖಾತೆ ಸಚಿವರಾಗಿದ್ದ ಕ್ರೈಸ್ತ ವ್ಯಕ್ತಿಯನ್ನು ಕಗ್ಗೊಲೆಗೈದ ಪಾಕಿಸ್ತಾನದಂತಾಗುತ್ತಿತ್ತು ಅಥವಾ ದೇಶ ವಿಭಜನೆ ಸಂದರ್ಭದಲ್ಲಿ ಶೇ. 24ರಷ್ಟಿದ್ದ ಹಿಂದೂಗಳನ್ನು ಇಂದು ಶೇ. 5ಕ್ಕೂ ಕಡಿಮೆಗಿಳಿಸುವ ದುರುಳ ಬಾಂಗ್ಲಾದೇಶದಂತಾಗುತ್ತಿತ್ತು. ಈ ದೇಶದಲ್ಲಿ ರಕ್ತಸಿಕ್ತ ಇತಿಹಾಸವಿರುವುದು, ಆಕ್ರಮಣ, ಕೊಲೆ, ಅತ್ಯಾಚಾರದ ಹಿನ್ನೆಲೆಯಿರುವುದು ಹೊರಗಿನಿಂದ ಬಂದ ಮತಗಳಿಗೇ ಹೊರತು ಹಿಂದೂ ಧರ್ಮಕ್ಕಲ್ಲ.
ದುರದೃಷ್ಟವಶಾತ್ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ, ಪ್ರಧಾನಿಯಾಗಲು ಹವಣಿಸುತ್ತಿರುವ ನಿತೀಶ್ ಕುಮಾರ್ ಅವರಂಥ ಹುಟ್ಟಾ ಸ್ವಾರ್ಥಿಗಳಿಗೆ, ಅವಕಾಶವಾದಿಗಳಿಗೆ ಇದೆಲ್ಲ ಹೇಗೆ ತಾನೇ ಅರ್ಥವಾದೀತು? ಇವರ ಮನಸ್ಥಿತಿಯನ್ನು ನೋಡಿದರೆ “Say it with pride, we are Hindus” ಎಂದ ಸ್ವಾಮಿ ವಿವೇಕಾನಂದರು ಈಗ ಬದುಕಿರುತ್ತಿದ್ದರೆ ಅವರನ್ನೂ ಕೋಮುವಾದಿ ಎಂದು ಜರಿಯುತ್ತಿದ್ದರೇನೋ?!
ಛೆ!
- ಪ್ರತಾಪ ಸಿಂಹ

ಶನಿವಾರ, ಜೂನ್ 9, 2012

ನರೇಂದ್ರ ಮೋದಿ, ಏರಬೇಕು ಪ್ರಧಾನಿ ಗಾದಿ!

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಾಮಾನ್ಯವಾಗಿ ಮುಕ್ತಾಯವಾಗುವುದೇ ಸಾರ್ವಜನಿಕ ರ್ಯಾಲಿಯೊಂದಿಗೆ. ಅದರಲ್ಲಿ ಪಕ್ಷದ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಾಯಕರೂ ಭಾಗವಹಿಸುತ್ತಾರೆ. ಒಂದು ರೀತಿಯಲ್ಲಿ ಅದು ಶಕ್ತಿ ಹಾಗೂ ನಾಯಕರ ನಡುವಿನ ಸಾಮರಸ್ಯ ಪ್ರದರ್ಶನವೂ ಆಗಿರುತ್ತದೆ. ಆದರೆ ಕಳೆದ ವಾರ (ಮೇ-25) ಮುಂಬೈನಲ್ಲಿ ನಡೆದ ರ್ಯಾಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹೆಚ್ಚಿನ ಸದಸ್ಯರು ಹಾಗೂ ರಾಷ್ಟ್ರೀಯ ನಾಯಕರು ಕಾಣೆಯಾಗಿದ್ದರು. ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ನಾಯಕರೂ ಇರಲಿಲ್ಲ. ಹಾಗಾಗಿ ಇಡೀ ರ್ಯಾಲಿಯನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ ದಾಸ್ ಮೋದಿ ಹೆಗಲೇರಿತು. ಮೋದಿ ಮಾತಿಗೆ ನಿಂತರೆ ಕೇಳಬೇಕೆ? ಜನರ ಕರತಾಡನದೊಂದಿಗೆ ಮಾತಿಗಿಳಿದ ಮೋದಿ ನೇರವಾಗಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಗುರಿಯಾಗಿಸಿಕೊಂಡರು. ಹಾಗಂತ ಅದೊಂದು ಶಬ್ದಾಡಂಬರದ ಭಾಷಣವಾಗಿರಲಿಲ್ಲ, ಆವೇಶಭರಿತ ಆಲಾಪನೆಯೂ ಆಗಿರಲಿಲ್ಲ. ಪಟ್ಟಿಗೆ ಪಟ್ಟು ಹಾಕಿದರು, ಅಂಕಿ-ಅಂಶಗಳ ಸಮೇತ ಸೋನಿಯಾ-ಮನಮೋಹನರನ್ನು ಛೇಡಿಸಿದರು. ಬಹುಶಃ 2012ರಲ್ಲಿ ರಾಜಕಾರಣಿಯೊಬ್ಬರು ಮಾಡಿದ ಅತ್ಯದ್ಭುತ ಭಾಷಣ ಅದೆಂದರೆ ಅತಿಶಯೋಕ್ತಿಯಾಗದು!
Narendra Modi for PM!
ಒಂದು ವೇಳೆ ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯೇನಾದರೂ ಘೋಷಣೆ ಮಾಡಿದರೆ 2014ರ ಚುನಾವಣೆ ಹೇಗಿರಬಹುದು ಎಂಬುದರ ಮುನ್ನೋಟದಂತಿತ್ತು. ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು ಯಾವ ಸಮಸ್ಯೆ ಎದುರಾದರೂ, ಯಾವ ವೈಫಲ್ಯಗಳಾದರೂ ‘ಮೈತ್ರಿಕೂಟ ರಾಜಕಾರಣದ ಅನಿವಾರ್ಯತೆಗಳು’ ಎಂದು ನೆಪ ಹೇಳುತ್ತಾರೆ. ಹಾಗಾದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಪೋರ್ಚ್್ಗಲ್್ನ ಭಾಷಣ ಓದಿದ್ದಕ್ಕೂ “Coalition compulsions’ ಎನ್ನುತ್ತಾರಾ? ಎಂದು ಕಿಚಾಯಿಸುತ್ತಾ ಭಾಷಣ ಆರಂಭಿಸಿದರು ಮೋದಿ. ನೀವು ಮತ ಹಾಕಲು ನಿಂತಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಕೃಷಿ ಕ್ಷೇತ್ರದಲ್ಲಿ ಶೇ.11ರಷ್ಟು ಅಭಿವೃದ್ಧಿ ತೋರುತ್ತಿರುವ ಗುಜರಾತ್ ಮಾದರಿಯನ್ನೋ, 1 ಪರ್ಸೆಂಟ್ ಅಭಿವೃದ್ಧಿ ದರ ಹೊಂದಿರುವ ಹಾಲಿ ಕೇಂದ್ರ ಸರ್ಕಾರವನ್ನೋ? ಹೀಗೆ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸುತ್ತಿದ್ದರೆ ಜನ ಹುಚ್ಚೆದ್ದುಹೋಗಿದ್ದರು. ಅಂದು ಮೋದಿ ಏನೇನು ಹೇಳಿದರು ಗೊತ್ತೆ?

‘ಕಳೆದ 10 ವರ್ಷಗಳಲ್ಲಿ ನನ್ನ ಗುಜರಾತ್್ನಲ್ಲಿ ಬರದ ಛಾಯೆಯೇ ಇಲ್ಲ. ಏಕೆಂದರೆ ನೀರಿನ ನಿರ್ವಹಣೆ ಹಾಗಿದೆ. ಒಂದು ವೇಳೆ ಇಂದು ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಸರ್ಕಾರವೇನಾದರೂ ದಿಲ್ಲಿಯ ಗದ್ದುಗೆಯಲ್ಲಿದ್ದರೆ, ಅಟಲ್ ಕನಸಿನ ನದಿ ಜೋಡಣೆ ಯೋಜನೆ ಜಾರಿಗೆ ಬಂದಿದ್ದರೆ ಮಹಾರಾಷ್ಟ್ರವನ್ನು ಬರದಿಂದ, ರೈತರನ್ನು ಆತ್ಮಹತ್ಯೆಯಿಂದ ರಕ್ಷಿಸಬಹುದಿತ್ತು. ಅಟಲ್್ಜಿ ನದಿ ಜೋಡಣೆಯ ಕನಸು ಕಂಡರು, ಆದರೆ ಅಧಿಕಾರಕ್ಕೇರಿದ ಯುಪಿಎ ಆ ಕನಸನ್ನೇ ಕತ್ತು ಹಿಸುಕಿ ಸಾಯಿಸಿತು.
ಪ್ರಸ್ತುತ ಕೇಂದ್ರದಲ್ಲೊಂದು ಸರ್ಕಾರವಿದೆ. ಅದಕ್ಕೆ ನೇತಾ, ನೀತಿ, ನಿಯತ್ತು ಮೂರೂ ಇಲ್ಲ!
ನೇತಾ, ನೀತಿ, ನಿಯತ್ತು ಇಲ್ಲದಿದ್ದರೆ ಏನಾಗಬಹುದು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಹುದು. ಪ್ರಸ್ತುತ ನಮ್ಮ ದೇಶದಲ್ಲಿ ಇರುವುದೂ ಅದೇ. ಇತ್ತೀಚಿನ ದಿನಗಳಲ್ಲಿ ನಮ್ಮ ಟಿವಿಗಳಲ್ಲಿ ‘ನಿರ್ಮಲ್ ಬಾಬಾ’ (ಸ್ವಘೋಷಿತ ದೇವಮಾನವ) ದರ್ಬಾರ್ ಬಗ್ಗೆ ಚರ್ಚೆ ನಡೆಯುತ್ತಿರುವುದನ್ನು ನೀವು ನೋಡಿರಬಹುದು. ‘ರಸಗುಲ್ಲಾ ತಿನ್ನಿ, ದೇವರ ಕೃಪೆಗೆ ಪಾತ್ರರಾಗುತ್ತೀರಿ’ ಎನ್ನುತ್ತಾರೆ ನಿರ್ಮಲ್ ಬಾಬಾ. ಹಾಲಿ ಕೇಂದ್ರ ಸರ್ಕಾರ ಕೂಡ ನಿರ್ಮಲ್ ಬಾಬಾ ದರ್ಬಾರ್್ನಂತೆಯೇ ಇದೆ. ‘ನಮ್ಮನ್ನು (ಕಾಂಗ್ರೆಸ್ ಅನ್ನು) ಅಧಿಕಾರಕ್ಕೆ ತನ್ನಿ, 100 ದಿನಗಳಲ್ಲಿ ಬೆಲೆಯೇರಿಕೆಯನ್ನು ದೂರ ಮಾಡುತ್ತೇವೆ’ ಎಂದರು. ಆದರೆ ಅದಾಯಿತೇ? ಆ ನಿರ್ಮಲ್ ಬಾಬಾ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದು, ನಾನು ಇಲ್ಲಿಗೆ ಬಂದಿರುವುದು ಈ ನಿರ್ಮಲ್ ಬಾಬಾ (ಕೇಂದ್ರ ಸರ್ಕಾರ) ವಿರುದ್ಧ ಪ್ರಕರಣ ದಾಖಲಿಸಲು. ಆ ನಿರ್ಮಲ್ ಬಾಬಾ ಒಬ್ಬ ವ್ಯಕ್ತಿ, ಆದರೆ ಈ ಕೇಂದ್ರ ಸರ್ಕಾರದಲ್ಲಿ ಅಡಿಯಿಂದ ಮುಡಿಯವರೆಗೂ ನಿರ್ಮಲ್ ಬಾಬಾ(ಠಕ್ಕರು)ಗಳಿದ್ದಾರೆ. ಇತ್ತೀಚೆಗೆ ಯುಪಿಎ-2 ಸರ್ಕಾರಕ್ಕೆ ಮೂರು ವರ್ಷ ತುಂಬಿದ ಸಂದರ್ಭದಲ್ಲಿ (ಮೇ 22ರಂದು) ಸಾಧನೆಯ ವರದಿಯೊಂದನ್ನು ಪ್ರಧಾನಿ ಹಾಗೂ ಸೋನಿಯಾ ಗಾಂಧಿ ಬಿಡುಗಡೆಗೊಳಿಸಿದರು. ನಕ್ಸಲಿಸಂ ಎಂಬುದು ನಮ್ಮ ದೇಶದ ಭದ್ರತೆಗೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದು ಪ್ರಧಾನಿಯವರೇ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ ಸಾಧನೆಯ ವರದಿಯಲ್ಲಿ ನಕ್ಸಲಿಸಂನ ಸಣ್ಣ ಉಲ್ಲೇಖವೂ ಇಲ್ಲ, ನಕ್ಸಲಿಸಂ ಎಂಬ ಪಿಡುಗನ್ನು ಹೋಗಲಾಡಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆಯೂ ಪ್ರಸ್ತಾಪವಿಲ್ಲ. ಹಾಗಾದರೆ ಮೂರು ವರ್ಷ ಮಾಡಿದ್ದೇನು? ಸರ್ಕಾರ ಮೂರು ವರ್ಷ ಅಧಿಕಾರ ಪೂರೈಸಿತು ಅನ್ನುವುದನ್ನು ಬಿಟ್ಟರೆ ಸಂಭ್ರಮಪಡಲು ಏನಿದೆ? ಇನ್ನು ಪೌಷ್ಟಿಕ ಆಹಾರ ಕೊರತೆಯ ಬಗ್ಗೆ ಮಾತನಾಡುತ್ತಾ ‘ಅದೊಂದು ರಾಷ್ಟ್ರೀಯ ಅವಮಾನ’ (National Shame) ಎಂದಿದ್ದಾರೆ ಮನಮೋಹನ್ ಸಿಂಗ್. ಪೌಷ್ಟಿಕ ಆಹಾರ ಕೊರತೆಯಿಂದ ಜನ ನರಳುತ್ತಿದ್ದಾರೆ ಎಂದರೆ ಅದು ಭಾರತೀಯರೆಲ್ಲರಿಗೂ ಅವಮಾನ ಎಂದಲ್ಲವೆ? ಹೀಗೆ ಮಾತನಾಡುವ ಮನಮೋಹನ್ ಸಿಂಗ್ ಸರ್ಕಾರದ ಮೂರು ವರ್ಷದ ವರದಿಯಲ್ಲಿ ಅಪೌಷ್ಟಿಕಾಂಶ ಸಮಸ್ಯೆಯನ್ನು ನೀಗಿಸಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ, ಯಾವ ಪರಿಹಾರ ಹುಡುಕಿದೆ ಎಂಬ ಬಗ್ಗೆ ಯಾವ ಉಲ್ಲೇಖವೂ ಇಲ್ಲವೇಕೆ? ಈ ದೇಶವಾಸಿಗಳು ಉತ್ತರ ಕೇಳುತ್ತಿದ್ದಾರೆ ಹೇಳಿ ಮನಮೋಹನ್ ಸಿಂಗ್?
ಮೇಡಂ ಸೋನಿಯಾ ಗಾಂಧಿಯವರು ಹೇಳುತ್ತಾರೆ-’ಬರೀ ಭರವಸೆ ಕೊಟ್ಟರೆ ಸಾಲದು, ಮಾಡಿ ತೋರಿಸಬೇಕು’ ಇದರರ್ಥವೇನು? ಇವರುಗಳು ಬರೀ ಭರವಸೆ ಕೊಟ್ಟಿದ್ದಾರೆಯೇ ಹೊರತು ಅವುಗಳನ್ನು ಈಡೇರಿಸಿಲ್ಲ ಎಂದು ಸ್ವತಃ ಒಪ್ಪಿಕೊಂಡಂತಾಗಲಿಲ್ಲವೆ? ಇಂದಿರಾ ಗಾಂಧಿಯವರ ‘ಗರೀಬಿ ಹಠಾವೋ’ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಬರೀ ಭರವಸೆ ಕೊಟ್ಟಿತೇ ಹೊರತು ಮತ್ತೇನನ್ನೂ ಮಾಡಲಿಲ್ಲ! ಇನ್ನೂ ಒಂದು ಮಜಬೂತಾದ ವಿಚಾರ ಗೊತ್ತಾ? ಬಡತನ ನಿರ್ಮೂಲನೆ ಸಂಬಂಧ ಇರುವ 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಹಾಗೂ ಹೋರಾಟದ ವಿಷಯದಲ್ಲೂ ಮೊದಲ 5 ಸ್ಥಾನಗಳನ್ನು ಎನ್್ಡಿಎ ಆಡಳಿತವಿರುವ ರಾಜ್ಯಗಳೇ ಆಕ್ರಮಿಸಿವೆ. ಈ ಬಗ್ಗೆ ನಾನು ಗಮನ ಸೆಳೆದಾಗ ರೇಟಿಂಗ್ ಕೊಡುವುದನ್ನೇ ನಿಲ್ಲಿಸಿಬಿಟ್ಟಿತು ಕಾಂಗ್ರೆಸ್! ನಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೇಳುತ್ತಾ ಶೇ. 2.25ರಿಂದ 3.25ಕ್ಕೇರಿದೆ ಎಂದು ವರದಿಯಲ್ಲಿ ಹೇಳಿದೆ. ಅಂದರೆ ಒಟ್ಟಾರೆ 1 ಪರ್ಸೆಂಟ್ ಏರಿಕೆಯಾಗಿದೆ ಎಂದಾಯಿತಲ್ಲವೆ? ಪ್ರಧಾನಿಯವರೇ ನೀವು ಕೊಡುತ್ತಿರುವ ಚಿತ್ರಣವಾದರೂ ಎಂಥದ್ದು? ಕಳೆದ 10 ವರ್ಷಗಳಲ್ಲಿ ನನ್ನ ಗುಜರಾತ್್ನಲ್ಲಿ ಸತತವಾಗಿ 11 ಪರ್ಸೆಂಟ್ ಅಭಿವೃದ್ಧಿ ದರ ಸಾಧಿಸುತ್ತಿದ್ದರೆ, ನೀವು ಕೊಡುತ್ತಿರುವುದು 2.25ರಿಂದ 3.25 ಪರ್ಸೆಂಟ್. ಒಂದು ವೇಳೆ, ಇದೇ ರೀತಿ ಕೇವಲ ಶೇ.1 ಅಭಿವೃದ್ಧಿ ತೋರಿದರೆ ಇಡೀ ದೇಶ ಹಸಿವಿನ ಬಾಯಿಗೆ ಬೀಳಬೇಕಾಗುತ್ತದೆ ಸ್ವಾಮಿ. ನಮ್ಮ ಪ್ರಧಾನಿ ಮಾತೆತ್ತಿದರೆ Coalition compulsionsನತ್ತ ಬೊಟ್ಟು ಮಾಡುತ್ತಾರೆ. ಕೇಂದ್ರದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ, ರಕ್ಷಣಾ ಸಚಿವರೂ ಕಾಂಗ್ರೆಸ್್ನವರೇ. ಹಾಗಿದ್ದರೂ ಸೇನಾ ಮುಖ್ಯಸ್ಥರ ಜತೆ ಕಾದಾಟ ಮಾಡುತ್ತಿರುವುದೇಕೆ? ನಮ್ಮ ದೇಶದ ಇತಿಹಾಸದಲ್ಲಿ ಎಂದಾದರೂ ಸರ್ಕಾರ ಮತ್ತು ಸೇನಾ ಮುಖ್ಯಸ್ಥರ ನಡುವೆ ಈ ರೀತಿಯ ಸತತ ಸಂಘರ್ಷ ಏರ್ಪಟ್ಟಿತ್ತಾ? ಮೈತ್ರಿಕೂಟದ ಯಾವ ಅನಿವಾರ್ಯತೆಗಳು ಹಾಗೆ ಕಾದಾಡುವಂಥ ಅನಿವಾರ್ಯತೆ ಸೃಷ್ಟಿಸಿದ್ದವು ಹೇಳಿ? ನಿಮ್ಮ ಸರ್ಕಾರ 50 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತೇವೆಂದು ವಾಗ್ದಾನ ಮಾಡಿತ್ತು. ವರದಿ ಹೇಳುತ್ತದೆ 30 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಿದೆ ಎಂದು. ಅಷ್ಟೊಂದು ವಿದ್ಯುತ್ ಹೇಗೆ ಉತ್ಪಾದನೆಯಾಯಿತು? ಅದಕ್ಕೆ ಯಾವ ಯಾವ ರಾಜ್ಯಗಳು ಎಷ್ಟೆಷ್ಟು ಕೊಡುಗೆ ನೀಡಿವೆ? ಅದನ್ನೇಕೆ ಹೇಳುತ್ತಿಲ್ಲ? ರಾಜ್ಯ ಸರ್ಕಾರಗಳ ಶ್ರಮದಿಂದಾದ ಉತ್ಪಾದನಾ ಹೆಚ್ಚಳದ ಹೆಗ್ಗಳಿಕೆಯನ್ನು ನಿಮ್ಮದೆಂದು ಪ್ರತಿಪಾದಿಸುವುದು ಎಷ್ಟು ಸರಿ? ಒಂದೆಡೆ ಈ ದೇಶಕ್ಕೆ ಅಪಾರ ವಿದ್ಯುತ್ ಅಗತ್ಯವಿದ್ದರೂ ಇನ್ನೊಂದೆಡೆ ಹಗರಣಗಳಿಂದಾಗಿ, ಕಲಿದ್ದಲು ಪೂರೈಕೆ ಕೊರತೆಯಿಂದಾಗಿ ಒಟ್ಟು ಸಾಮರ್ಥ್ಯದಲ್ಲಿ ಶೇ. 60ರಷ್ಟು ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. 40 ಪರ್ಸೆಂಟ್ ಸ್ಥಗಿತವಾಗಿದೆ. ಇದಕ್ಕೆ ಯಾರು ಹೊಣೆ?
ನಮ್ಮ ದೇಶದಲ್ಲಿ ಶೇ. 50ರಷ್ಟು ಮಹಿಳೆಯರಿದ್ದಾರೆ. ಆದರೂ ಕೇಂದ್ರದ ರಿಪೋರ್ಟ್ ಕಾರ್ಡ್್ನಲ್ಲಿ ಮಹಿಳೆಯರ ಬಗ್ಗೆ ಪ್ರಸ್ತಾಪವಿಲ್ಲವೇಕೆ? ನಾನು ಪ್ರಧಾನಿಯನ್ನು ಕೇಳಬಯಸುತ್ತೇನೆ-ವೃತ್ತಿ ಕೌಶಲ ಅಭಿವೃದ್ಧಿ ವಿಷಯದಲ್ಲಿ ನಿಮ್ಮ ಸರ್ಕಾರ ಮಾಡಿದ್ದೇನು? ಒಮ್ಮೆ ನಾನು ಚೀನಾದಲ್ಲಿ 50 ಸಾವಿರ ಕೌಶಲಗಳ ಬಗ್ಗೆ ತರಬೇತಿ ಕೇಂದ್ರಗಳಿವೆ ಎಂದಾಗ ನಾವೂ 500 ಖ್ಞ್ಝಟಟ ಜಜಢಜಟ್ಟಠಟಜಟಿಡಿ ಕೋರ್ಸ್್ಗಳನ್ನು ಆರಂಭಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದರು, ಮಾಡಿದ್ದು ಮಾತ್ರ ಶೂನ್ಯ! ಮೊದಲೆಲ್ಲ ಅಮರನಾಥ ಯಾತ್ರೆ ವರ್ಷಕ್ಕೆ 3-4 ತಿಂಗಳು ನಡೆಯುತ್ತಿತ್ತು. ಇಂದು ಕೇಂದ್ರ ಹಾಗೂ ಜಮ್ಮು-ಕಾಶ್ಮೀರ ಎರಡರಲ್ಲೂ ಕಾಂಗ್ರೆಸ್ ಪಾಲುದಾರನಾಗಿರುವ ಸರ್ಕಾರಗಳೇ ಇದ್ದರೂ ಯಾತ್ರೆಯನ್ನು 40-45 ದಿನಕ್ಕೆ ಇಳಿಸಿರುವುದೇಕೆ? ಇವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೇನೆಂದರೆ, ನಮ್ಮ ಕರೆನ್ಸಿ ಕಳೆದ ನವೆಂಬರ್್ನಿಂದ ತೀವ್ರವಾಗಿ ಕುಸಿಯುತ್ತಿರುವುದೇಕೆ? ಇಲ್ಲೇನೋ ಮರ್ಮವಿದ್ದು, ಅದನ್ನು ತಿಳಿಯಲು ರಾಷ್ಟ್ರದ ಜನತೆ ಬಯಸುತ್ತಿದೆ ಹೇಳಿ? ನಮ್ಮ ನೆರೆಯ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದ ಕರೆನ್ಸಿಗಳೇ ಸ್ಥಿರವಾಗಿರುವಾಗ ರುಪಾಯಿಯೇಕೆ ಈ ಪರಿ ಕುಸಿಯುತ್ತಿದೆ? ಅದರ ಹಿಂದಿರುವ ಕಾರಣವೇನು?
ರಾಷ್ಟ್ರೀಯ ಉಗ್ರನಿಗ್ರಹ ಕೇಂದ್ರ (NCTC) ಸ್ಥಾಪನೆ ಸಂಬಂಧಿ ಸಭೆಯಲ್ಲಿ ನಾನು ಪ್ರಧಾನಿಯವರನ್ನು ಕೇಳಿದೆ-ನಮ್ಮ ದೇಶದ ಗಡಿಗಳನ್ನು ಕೇಂದ್ರ ಸರ್ಕಾರ ಕಾಯುತ್ತಿರುವಾಗ ಈ ನಕ್ಸಲರು ಹಾಗೂ ಉಗ್ರರಿಗೆ ಶಸ್ತ್ರಾಸ್ತ್ರಗಳು ಎಲ್ಲಿಂದ ಪೂರೈಕೆಯಾಗುತ್ತಿವೆ? ಅವರಿಗೆ ಮತ್ತೊಂದು ಪ್ರಶ್ನೆ ಕೇಳಿದೆ-ಭಯೋತ್ಪಾದಕರಿಗೆ ಹವಾಲಾ ಮೂಲಕ ಹಣ ಪೂರೈಕೆಯಾಗುತ್ತಿದೆ ಎನ್ನುವುದಾದರೆ ಅದನ್ನು ನೀವೇಕೆ ನಿಲ್ಲಿಸಿಲ್ಲ? ಮೂರನೆಯದಾಗಿ ಕೇಳಿದೆ-ನೌಕಾದಳ, ಗಡಿ ಭದ್ರತಾ ಪಡೆಗಳು ನಿಮ್ಮ ನಿಯಂತ್ರಣದಲ್ಲಿರುವಾಗ ಈ ಭಯೋತ್ಪಾದಕರು ಹೇಗೆ ನಮ್ಮ ದೇಶದೊಳಕ್ಕೆ ನುಸುಳುತ್ತಿದ್ದಾರೆ? ಮುಂದುವರಿದು ಕೇಳಿದೆ-ಇಲ್ಲಿಯವರೆಗೂ ಒಬ್ಬನೇ ಒಬ್ಬ ಭಯೋತ್ಪಾದಕನನ್ನೂ ವಿದೇಶದಿಂದ ಹಿಡಿದು ತರಲಾಗಿಲ್ಲ, ಏಕೆ?
ನಮ್ಮ ದಿಲ್ಲಿ ಸುಲ್ತಾನರ ಬಳಿ ಇದ್ಯಾವುದಕ್ಕೂ ಉತ್ತರವಿಲ್ಲ!
ಭಯೋತ್ಪಾದಕರ ಮೇಲೆ ಶೂನ್ಯ ಸಹನೆ ಇರಬೇಕು, ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳಬೇಕು. ಅದು ಈ ಕಾಂಗ್ರೆಸ್ಸಿಗರಿಂದ ಸಾಧ್ಯವಿಲ್ಲ. ಹೌದು, ಜನ ತಮ್ಮ ತಾಕತ್ತನ್ನು ಸರ್ಕಾರದ ವಿರುದ್ಧ ತೋರಿಸಬೇಕಾದ ಕಾಲ ಈಗ ಬಂದಿದೆ. ಈ ಸರ್ಕಾರ ಒಂದು ನಿಮಿಷ ಕೂಡ ಮುಂದುವರಿಯಬಾರದು. ಅದು ಎಷ್ಟು ಕಾಲ ಮುಂದುವರಿಯುತ್ತೋ ದೇಶದ ಸಮಸ್ಯೆ ಅಷ್ಟೇ ಹೆಚ್ಚಾಗುತ್ತದೆ’
ನರೇಂದ್ರ ಮೋದಿಯವರು ಎತ್ತಿರುವ ಒಂದೊಂದು ಪ್ರಶ್ನೆಗಳನ್ನೂ ಗಮನಿಸಿ. ಈ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿಲ್ಲವೆ? ಈ ಸರ್ಕಾರ ಮಾಡುತ್ತಿರುವ ಲೂಟಿಗೆ ನಮ್ಮ ಉದಾಸೀನವೂ ಕಾರಣವಲ್ಲವೆ? ಇಂತಹ ಉದಾಸೀನಕ್ಕೆ ಕನ್ನಡಿ ಹಿಡಿದಂಥ ಸಂದೇಶವೊಂದು ಟ್ವಿಟ್ಟರ್್ನಲ್ಲಿ ಹೀಗೆ ಕಾಣಿಸಿಕೊಂಡಿತ್ತು-“History will say: When Govt was Busy robbing the Nation, Indians were busy watching the IPL’. ಅದಿರಲಿ, ಕಳೆದ ಮೇ 22ರಂದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ 3 ವರ್ಷಗಳ ಸಾಧನೆಯ ವರದಿಯನ್ನು ಬಿಡುಗಡೆ ಮಾಡಿದಾಗ ನಮ್ಮ ಯಾವ ಮಾಧ್ಯಮಗಳು ಈ ಪ್ರಶ್ನೆಗಳನ್ನು ಕೇಳಿದ್ದವು ಹೇಳಿ? ಜಾಕಿಯಾ ಜಾಫ್ರಿಗೆ ಸಿಗಲಿದ್ದ ಎಸ್್ಐಟಿ ರಿಪೋರ್ಟ್್ಗಾಗಿ ಬಕಪಕ್ಷಿಗಳಂತೆ ಕಾದು ಕುಳಿತುಕೊಂಡಿದ್ದ, ಸಿಕ್ಕ ಕೂಡಲೇ ಪ್ರತಿ ಪುಟಗಳನ್ನೂ ತಿರುವಿ ಹಾಕಿ ಮೋದಿಯವರನ್ನು ಹಣಿಯಲು ತೋರಿದ ಆಸಕ್ತಿಯನ್ನು ಭ್ರಷ್ಟ ಸರ್ಕಾರದ ವರದಿಯನ್ನು ಓದಿ ಜನರ ಮುಂದಿಡುವ ವಿಚಾರದಲ್ಲಿ ನಮ್ಮ ಮಾಧ್ಯಮಗಳು ತೋರಿದ್ದವೆ? ಇಂಥದೊಂದು ಭ್ರಷ್ಟಾತಿಭ್ರಷ್ಟ ಸರ್ಕಾರ ನಮ್ಮನ್ನು ಆಳುತ್ತಿದ್ದರೂ ಮಾಧ್ಯಮಗಳಿಗೆ ಬಿಜೆಪಿಯ ಒಳ ಜಗಳ, ಕಾಲ್ಪನಿಕ ಭಿನ್ನಾಭಿಪ್ರಾಯಗಳೇ ಏಕೆ ದೊಡ್ಡದಾಗಿ ಕಾಣುತ್ತವೆ? ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ಪ್ರಾಮಾಣಿಕ ವ್ಯಕ್ತಿಯೇ ಆಗಿದ್ದರೂ ಸಂಪುಟದ ತುಂಬ ಠಕ್ಕರು, ಲೂಟಿಕೋರರು ತುಂಬಿರುವಾಗ ಅವರ ಪ್ರಾಮಾಣಿಕತೆಯಿಂದ ದೇಶಕ್ಕಾದ ಲಾಭವೇನು? ಸಂಪುಟ ಸಹೋದ್ಯೋಗಿಗಳು ಎಸಗುವ ತಪ್ಪಿಗೆ ಪ್ರಧಾನಿ ನೈತಿಕವಾಗಿ ಹೊಣೆಗಾರರಾಗುವುದಿಲ್ಲವೆ? ಒಂದು ವೇಳೆ, ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು Holy Cow ನಂತೆ ಪೋಸು ಕೊಡುತ್ತಿರುವ ಪ್ರಧಾನಿ, ಆರೋಪಗಳನ್ನು ಏಕೆ ತನಿಖೆಗೆ ಒಪ್ಪಿಸುತ್ತಿಲ್ಲ? ಇನ್ನೂ ಒಂದು ಕುತೂಹಲದ ಸಂಗತಿಯೆಂದರೆ, ಪ್ರಧಾನಿಯವರೇ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಲ್ಲ, ತಿಹಾರ್ ಜೈಲು ಸೇರಬೇಕಾಗುತ್ತದೆ, ಜೋಕೆ! ಈ ನಮ್ಮ ಪ್ರಧಾನಿಯ ಸ್ಥಾನ ಎಲ್ಲಿಗೆ ಇಳಿದಿದೆ ಎಂದರೆ, ಇತ್ತೀಚೆಗೆ ನೆರೆಯ ಮ್ಯಾನ್ಮಾರ್್ಗೆ ಭೇಟಿ ಕೊಟ್ಟಾಗ ‘ನೆಹರು ಮೆಮೋರಿಯಲ್ ಸ್ಪೀಚ್್’ ಕೊಡುವಂತೆ ಸೋನಿಯಾ ಗಾಂಧಿಯವರು ಕೊಟ್ಟಿದ್ದ ಆಹ್ವಾನವನ್ನು ಅಲ್ಲಿನ ಪ್ರಜಾತಂತ್ರ ನಾಯಕಿ ಆಂಗ್ ಸಾನ್ ಸೂಕಿಗೆ ನೀಡುವ ಪೋಸ್ಟ್್ಮನ್ ಮಟ್ಟಕ್ಕೆ! ಇವುಗಳನ್ನು ನಮ್ಮ ಯಾವ ಮಾಧ್ಯಮ ಪ್ರಶ್ನಿಸುತ್ತಿದೆ?
ಇಂತಹ ಸ್ಥಿತಿಯಲ್ಲಿ ನಮ್ಮನ್ನು ಮುನ್ನಡೆಸುವ ತಾಕತ್ತು, ದೂರದೃಷ್ಟಿ ಯಾರಲ್ಲಾದರೂ ಇದ್ದರೆ ಅದು ಮೋದಿಯವರಲ್ಲಿ. ಹಾಗಾಗಿಯೇ ಟ್ವಿಟ್ಟರ್, ಫೇಸ್್ಬುಕ್ ಮುಂತಾದ ಸಾಮಾಜಿಕ ತಾಣ, ಮಿನಿ ಬ್ಲಾಗ್್ಗಳಲ್ಲಿ ಲಾಲ್್ಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯವರನ್ನು ಟೀಕಿಸುವವರನ್ನು ಕಾಣಬಹುದು. ಆದರೆ ನರೇಂದ್ರ ಮೋದಿಯವರ ಟೀಕಾಕಾರರನ್ನು ಹುಡುಕುವುದು ಕಷ್ಟ. ಅಷ್ಟು ಮಾತ್ರವಲ್ಲ, ಈ ಸಾಮಾಜಿಕ ತಾಣಗಳಲ್ಲಿ ಟೀಕೆ ಎದುರಾದರೆ ಮೋದಿಯವರು ತಮ್ಮ ಪರ ವಕಾಲತ್ತು ವಹಿಸುವವರನ್ನು ನೇಮಿಸಿಕೊಳ್ಳಬೇಕಿಲ್ಲ, ಜನರೇ ಮೋದಿ ಪರ ಟೊಂಕಕಟ್ಟಿ ನಿಲ್ಲುತ್ತಾರೆ. ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಧ್ಯೆ ಆಗಿಂದಾಗ್ಗೆ ಹೋಲಿಕೆ ಮಾಡುತ್ತಿರುವುದನ್ನು ಕಂಡು ಕುಪಿತರಾದ ಓದುಗರೊಬ್ಬರು ಹೀಗೆ ಬರೆದಿದ್ದಾರೆ-Modi vs rahul = success vs failure = intelligent vs fool = patriot vs traitor = Vibrant India Vs Corrupt India = a Visionary Vs Useless person = LION vs Amul Baby = Man vs mama’s baby = Indian vs Italian!
ಇಡೀ ದೇಶದಲ್ಲಿ ಇಂದು ಯಾರಲ್ಲಾದರೂ ಕ್ಷಾತ್ರಗುಣ ಕಾಣುತ್ತಿದ್ದರೆ ಅದು ಸ್ವಾಮಿ ವಿವೇಕಾನಂದರ ಅನುಯಾಯಿಯಾದ ನರೇಂದ್ರ ಮೋದಿಯವರಲ್ಲಿ ಮಾತ್ರ. ಆದಕಾರಣ, ಮೋದಿ, ಬೇಗ ಏರಬೇಕು ಪ್ರಧಾನಿ ಗಾದಿ, ಅಲ್ಲವೆ?

-ಪ್ರತಾಪ ಸಿಂಹ


ಶನಿವಾರ, ಜೂನ್ 2, 2012

ಮನದ ಬಾಗಿಲೇ ಮುಚ್ಚಿರುವಾಗ ಗುಡಿಗಳ ಕದ ತೆರೆಯುವರೆ? - ಪ್ರತಾಪ ಸಿಂಹ

ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ.
ಗುರುಗಳು: ನಾರಾಯಣ
ನಂಬೂದರಿ: ನಿಮ್ಮ ಜಾತಿ?
ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ?
ನಂಬೂದರಿ: ಉಹೂಂ
ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.

ವಿಶ್ವಧರ್ಮ ಸಮ್ಮೇಳನಕ್ಕೆ ತೆರಳುವ ಮೊದಲು, ಅಂದರೆ 1892ರಲ್ಲಿ ಕೇರಳಕ್ಕೆ ಭೇಟಿ ಕೊಟ್ಟ ಸ್ವಾಮಿ ವಿವೇಕಾನಂದರು ಅಲ್ಲಿನ ಜಾತಿಯತೆಯನ್ನು ಕಂಡು”I have wandered into a lunatic asylum!’ ಎಂದು ಕೋಪದಿಂದ ನುಡಿಯುತ್ತಾರೆ. ಅಂತಹ ಕೇರಳದಲ್ಲಿ ತೀರಾ ಕೆಳಜಾತಿಯಾದ ಇಳವ ಸಮುದಾಯದಲ್ಲಿ ಹುಟ್ಟಿದವರು ನಾರಾಯಣ ಗುರುಗಳು. ಆದರೂ ಸಂಸ್ಕೃತದಲ್ಲಿ ಆಳವಾದ ಅಧ್ಯಯನ ಮಾಡಿಕೊಂಡಿದ್ದರು. ವೇದ, ಶಾಸ್ತ್ರ, ಉಪನಿಷತ್ತುಗಳನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದರು, ಶಂಕರಾಚಾರ್ಯರಿಂದ ಪ್ರಭಾವಿತರಾಗಿದ್ದರು. ಆ ಕಾಲದಲ್ಲಿ ಕೇರಳದಲ್ಲಿ ಕೆಳಜಾತಿಯ ಹಿಂದೂಗಳಿಗೆ ದೇವಾಲಯಗಳಿಗೆ ಪ್ರವೇಶವಿರಲಿಲ್ಲ. ಹಾಗಾಗಿ ಒಂದು ದೇವಾಲಯವನ್ನು ಕಟ್ಟಿಸಬೇಕೆಂದು ಯೋಚಿಸಿದರು. ತಮ್ಮದೇ ಎಂಬ ಅಭಿಮಾನದಿಂದ, ಯಾರ ಭಯವೂ ಇಲ್ಲದೆ ಪ್ರಾರ್ಥನೆ ಮಾಡಬಲ್ಲ, ಸ್ನಾನಾದಿಗಳಿಂದ ಶುಚಿರ್ಭೂತರಾಗಿ, ಫಲಪುಷ್ಪಾದಿಗಳಿಂದ ಪೂಜಿಸುವ ಸಾತ್ವಿಕ ಮೂರ್ತಿಯನ್ನೊಳಗೊಂಡ ದೇವಸ್ಥಾನದ ನಿರ್ಮಾಣದಿಂದ ಹಿಂದೂ ಕೆಳವರ್ಗದವರಲ್ಲೂ ಸ್ವಾಭಿಮಾನ ಜಾಗೃತಗೊಳಿಸಲು ಮುಂದಾದರು. ಅರುವಿಪುರಂನಲ್ಲಿ ದೇವಾಲಯವೂ ಸಿದ್ಧವಾಯಿತು. 1888, ಶಿವರಾತ್ರಿಯಂದು ಮೂರ್ತಿ ಪ್ರತಿಷ್ಠಾಪನೆ ನಿಗದಿಯಾಯಿತು. ಅಂದು ಶ್ರೀನಾರಾಯಣ ಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು. ಯಾರ ಹಂಗೂ ಇಲ್ಲದೆ ತೀರ್ಥ, ಪ್ರಸಾದಗಳ ವಿತರಣೆಯಾಯಿತು, ಗುರುಗಳ ಹೃದಯ ಭಾರವಾಯಿತು, ಗಂಟಲ ನರಗಳು ಉಬ್ಬಿದವು, ಕಣ್ಣುಗಳು ಮಂಜಾದವು, ಆಗಸದತ್ತ ಮುಖ ಮಾಡಿದ ಅವರು”ಶಿವನೇ ಮಂಗಳವನ್ನು ದಯಪಾಲಿಸು, ದೀನರೂ ದಲಿತರೂ ಸಹ ಸುಖವನ್ನು ಕಾಣಲಿ, ಅವರಿಗೂ ಅಭಿವೃದ್ಧಿಯನ್ನು ಕರುಣಿಸು, ಜನರು ಸತ್ಯವಂತರಾಗಲಿ, ಧರ್ಮನಿಷ್ಠರಾಗಲಿ, ಅವರಲ್ಲಿ ಪರಸ್ಪರ ದ್ವೇಷಾಸೂಯೆಯ ಭಾವನೆಗಳು ಬಾರದಿರಲಿ, ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲದೃಷ್ಟಿ ಬೆಳೆಯಲಿ’ ಎಂದು ಕೈಮುಗಿದು ಕೇಳಿದರು.
ಈ ಘಟನೆ ನಡೆದು 124 ವರ್ಷಗಳಾದವು. ಆದರೆ, ಪರಿಸ್ಥಿತಿ ಬದಲಾಗಿದೆಯೇ?
ಮೊನ್ನೆ ಮೇ 2ರಂದು ಆಂಧ್ರಪ್ರದೇಶದ ವೈ.ಎಸ್. ಜಗನ್ಮೋಹನ್್ರೆಡ್ಡಿಯವರು ಪ್ರಸಿದ್ಧ ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಹಿಂದೂಯೇತರರು ದೇವಾಲಯ ಪ್ರವೇಶಿಸುವ ಮೊದಲು,”ನನಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿದೆ’ ಎಂದು ಬರೆಯಬೇಕು. ಕ್ಯಾಥೋಲಿಕ್ ಕ್ರೈಸ್ತರಾದ ಜಗನ್ಮೋಹನ್್ರೆಡ್ಡಿ ಬರೆದಿಲ್ಲ ಎಂಬ ಕಾರಣಕ್ಕೆ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. 2009ರಲ್ಲಿ ಭೇಟಿ ಕೊಟ್ಟಾಗಲೇ ಬರೆದಾಗಿದೆ, ಪ್ರತಿ ಬಾರಿಯೂ ಬರೆಯಬೇಕಿಲ್ಲ ಎಂದು ಅವರ ಅನುಯಾಯಿಗಳು ಹೇಳುತ್ತಿದ್ದರೂ ದೇವಾಲಯದ ಆಡಳಿತ ಮಂಡಳಿ ತನಿಖೆಗೆ ಆದೇಶ ನೀಡಿದೆ! ಇತ್ತ 2012, ಜನವರಿ 16ರಂದು ನಡೆದ ಶ್ರೀ ನಾರಾಯಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್,”ಖ್ಯಾತ ಗಾಯಕ ಕೆ.ಜೆ. ಯೇಸುದಾಸ್ ಅವರಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಾಲಯ ಪ್ರವೇಶಿಸಲು ಮುಕ್ತ ಅವಕಾಶ ಮಾಡಿಕೊಡಬೇಕು. ಆ ಮೂಲಕ ಖ್ಯಾತ ಗಾಯಕನ ಇಚ್ಛೆಯನ್ನು ಪೂರೈಸಬೇಕು’ ಎಂದು ಕರೆ ನೀಡಿದ್ದಾರೆ. 2006ರಲ್ಲಿ ಮಲೆಯಾಳಂ ಚಿತ್ರನಟಿ ಹಾಗೂ ಕನ್ನಡದಲ್ಲೂ ನಟಿಸಿರುವ ಕ್ರೈಸ್ತಳಾದ ಮೀರಾ ಜಾಸ್ಮಿನ್ ಗುರುವಾಯೂರು ದೇವಾಲಯಕ್ಕೆ ಭೇಟಿ ಕೊಟ್ಟು ತೆರಳಿದ ಮರುಕ್ಷಣದಲ್ಲೇ ಶುದ್ಧೀಕರಣ ಮಾಡಿದ್ದರು. ಪ್ರಸ್ತುತ ಕೇಂದ್ರ ಸಚಿವರಾಗಿರುವ ವಯಲಾರ್ ರವಿ ಅವರು 2006ರಲ್ಲಿ ತಮ್ಮ ಮೊಮ್ಮಗನಿಗೆ ಮೊದಲ ಗುಟುಕು (First feeding) ಕೊಡುವ ಕಾರ್ಯಕ್ರಮವನ್ನು ಗುರುವಾಯೂರು ದೇವಾಲಯದಲ್ಲಿ ಹಮ್ಮಿಕೊಂಡಿದ್ದರು. ಅದು ಮುಗಿದ ಬೆನ್ನಲ್ಲೇ ಮುಖ್ಯ ತಂತ್ರಿ (ಅರ್ಚಕ) ರಾಮನ್ ನಂಬೂದಿರಿ ಇಡೀ ದೇವಾಲಯವನ್ನು ಶುದ್ಧೀಕರಣ ಮಾಡಿದ್ದರು. ಏಕೆಂದರೆ ಮಗುವಿನ ಅಜ್ಜಿ, ಅಂದರೆ ವಯಲಾರ್ ರವಿ ಹೆಂಡತಿ ಮರ್ಸಿ ಕ್ರೈಸ್ತರು ಎಂಬ ಕಾರಣಕ್ಕೆ. ರವಿ ಪುತ್ರ ಕೃಷ್ಣ ಅವರ ಮದುವೆ ಇಲ್ಲೇ ನಡೆದಾಗಲೂ ಅದೇ ಕೆಲಸ ಮಾಡಲಾಗಿತ್ತು. ಇದರಿಂದ ನೊಂದ ವಯಲಾರ್ ರವಿ, “ನನ್ನ ಮಗ ಮದುವೆಯಾಗಿದ್ದು ಹಿಂದೂ ಯುವತಿಯನ್ನೇ. ಆದರೂ ಶುದ್ಧೀಕರಣ ಮಾಡಿದ್ದರು. ನನ್ನ ಮುಂದಿನ ತಲೆಮಾರು, ಅಂದರೆ ನನ್ನ ಮೊಮ್ಮಗ ಹಿಂದೂ ಅಪ್ಪ-ಅಮ್ಮನಿಗೆ ಜನಿಸಿದ್ದರೂ ಶುದ್ಧೀಕರಣ ಮಾಡಿದ್ದಾರೆ. ಇಳವರಾದ ನಮಗೆ ಜಾತಿ-ಧರ್ಮ ಬರುವುದು ತಂದೆ ಕಡೆಯಿಂದ. ನನ್ನ ಮಗ ಕೃಷ್ಣ ಹಿಂದೂವೇ ಆಗಿದ್ದಾನೆ. ಇಷ್ಟಕ್ಕೂ ನಾವೇಕೆ ಗುರುವಾಯೂರಿಗೆ ಬಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರೆ ನನ್ನ ಮೊದಲ ಮೊಮ್ಮಗು ತೀರಿಕೊಂಡಿತ್ತು. ಗುರುವಾಯೂರಪ್ಪನಿಗೆ ಹರಕೆ ಮಾಡಿಕೊಂಡ ನಂತರ ಜನಿಸಿದ ಮಗು ಇದು. ಆ ಮಗುವನ್ನೂ ಈ ರೀತಿ ಕಾಣಬೇಕೆ?’ ಎಂದು ಕಣ್ಣೀರಿಡುತ್ತಾ ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಎಂಬತ್ತು ವರ್ಷಗಳ ಹಿಂದೆ ಇದೇ ದೇವಾಲಯದ ಎದುರು ಪ್ರವೇಶ ನಿರಾಕರಿಸಿದ ಕಾರಣ ದಲಿತರು ಸತ್ಯಾಗ್ರಹ ಮಾಡಿದ್ದರು. ಅಷ್ಟೇಕೆ, ಪ್ರಧಾನಿ ಇಂದಿರಾ ಗಾಂಧಿಯವರು ಪುರಿಯ ಜಗನ್ನಾಥ ಮಂದಿರದ ಭೇಟಿಗೆ ಹೋದಾಗ ಆಕೆ ಪಾರ್ಸಿಯನ್ನು ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ ಹಿಂದಕ್ಕಟ್ಟಿದ್ದರು.
ಇಂತಹ ಧೋರಣೆ ವಿರುದ್ಧ ನಮ್ಮ ಯಾವ ಸೋಕಾಲ್ಡ್ ಹಿಂದೂ ಸಂತರೂ ಧ್ವನಿಯೆತ್ತುವುದಿಲ್ಲ, ಏಕೆ?
ಮೊನ್ನೆ ಜಗನ್ಮೋಹನ ರೆಡ್ಡಿಯ ತಿರುಪತಿ ಭೇಟಿಯ ಸಂಬಂಧ ವಿವಾದವೆದ್ದಾಗ ನಮ್ಮ ಯಾವ ಸನ್ಯಾಸಿ ಆ ಸಂಕುಚಿತ ಮನಸ್ಥಿತಿಯನ್ನು ಖಂಡಿಸಿದರು ಹೇಳಿ? ನಂಬಿಕೆ ಇಟ್ಟೇ ದೇವಾಲಯಕ್ಕೆ ಬರಬೇಕೆ? ಕುತೂಹಲದಿಂದ ಬಂದು ನಂತರ ಪ್ರಭಾವಿತರಾಗುವುದಕ್ಕೆ ಅವಕಾಶವನ್ನೇ ನೀಡಬಾರದೆ? ಈ Rituals, ವಿಧಿವಿಧಾನ ಎಂದರೇನು? ಇವುಗಳನ್ನು ಮಾಡಿದ್ದು ಯಾರು? ಪೂಜ್ಯ ಸ್ಥಳಗಳಿಗೆ ಬರುವವರು ಸ್ನಾನ ಮಾಡಿರಬೇಕು, ಶುಚಿತ್ವ ಕಾಪಾಡಬೇಕು ಎಂದು ನಿರೀಕ್ಷಿಸುವುದು ಸಹಜ. ವಿಧಿ-ವಿಧಾನ, ನಿಯಮಗಳ ಹೆಸರಿನಲ್ಲಿ ಧರ್ಮ, ದೇವಾಲಯಗಳನ್ನು”Exclusive‘ ಮಾಡುತ್ತಾ ಹೋದರೆ ಅದು ಹೇಗೆ ಧರ್ಮವಾಗಿ ಉಳಿದೀತು? ಇವತ್ತು ನಮ್ಮ ಧರ್ಮದ ಪರಿಸ್ಥಿತಿ ಹೇಗಿದೆಯೆಂದರೆ ಯಾರಾದರೂ ಹಿಂದೂವಾಗಬೇಕೆಂದು ಬಂದರೂ ಸಾಧ್ಯವಿಲ್ಲ. ಏಕೆಂದರೆ ಆತ ಹಿಂದೂಗಳಲ್ಲಿ ಯಾವ ಜಾತಿ ಸೇರಬೇಕು?! ಅಯ್ಯಪ್ಪ ಸ್ವಾಮಿಯ ದೇವಾಲಯ ಜಾತಿ-ಮತ ತಾರತಮ್ಯವಿಲ್ಲದೆ ಎಲ್ಲರಿಗೂ ತೆರೆದಿರುವುದರಿಂದ ಅಯಪ್ಪನನ್ನು ಆರಾಧಿಸುವ ಕ್ರೈಸ್ತರು, ಮುಸ್ಲಿಮರನ್ನೂ ಇಂದು ಕಾಣಬಹುದಾಗಿದೆ. ಇದರಿಂದ ಹಿಂದೂ ಧರ್ಮಕ್ಕೇ ಹೆಗ್ಗಳಿಕೆಯಲ್ಲವೇ? ಒಂದು ಧರ್ಮವೆನ್ನುವುದೂ”Exclusive‘ ಆಗಬೇಕಾ?
ಒಮ್ಮೆ ತಮ್ಮ ಧರ್ಮದ ಹಿರಿಮೆಯ ಬಗೆಗೆ ತಿಳಿಸಿಕೊಡಬೇಕೆಂದು ಬಯಸಿ ಕ್ರೈಸ್ತ ಪಾದ್ರಿಗಳು ನಾರಾಯಣ ಗುರುಗಳ ಬಳಿಗೆ ಹೋದರು. ನಿಮ್ಮ ಮತದ ಬಗ್ಗೆ ತಿಳಿದುಕೊಳ್ಳಬೇಕೆಂದು ನನಗೂ ಆಸೆಯಿದೆ ಎಂದ ಗುರುಗಳು, ನಿಮ್ಮ ಧರ್ಮದ ಮುಖ್ಯ ಸಂದೇಶವೇನು ಎಂದು ಕೇಳಿದರು. ಅದಕ್ಕೆ”ಯೇಸುಕ್ರಿಸ್ತನ ಸಂದೇಶವನ್ನು ಸಾರುವುದೇ ನಮ್ಮ ಕಾರ್ಯ. ಯೇಸುಕ್ರಿಸ್ತನು ಮನುಷ್ಯನ ಪಾಪಮುಕ್ತಿಗಾಗಿ ಆವತರಿಸಿದನು ಎಂಬುದೇ ನಮ್ಮ ಮತದ ತತ್ವ’ ಎಂದರು.
ಗುರುಗಳು: ಅಂದರೆ ಯೇಸುವಿನ ಜನನದಿಂದ ಪ್ರಪಂಚದ ಪಾಪ ನಾಶವಾಯಿತು ಎಂದಲ್ಲವೆ?
ಪಾದ್ರಿಗಳು: ಹೌದು
ಗುರುಗಳು: ಹಾಗಿದ್ದರೆ ಈಗ ನಾವೆಲ್ಲರು ಪಾಪರಹಿತರು ತಾನೇ?
ಪಾದ್ರಿಗಳು: ಹೌದು
ಗುರುಗಳು: ಅಂದ ಮೇಲೆ ನಾವು ನಿಮ್ಮ ತತ್ವವನ್ನು ನಂಬಲಿ ಬಿಡಲಿ ನಮಗೆ ಮೋಕ್ಷ ದೊರಕಬೇಕಲ್ಲವೆ?
ಪಾದ್ರಿಗಳು: ಹಾಗಲ್ಲ, ಯೇಸುವಿನ ತತ್ವವನ್ನು ನಂಬಿದರೆ ಮಾತ್ರ ಮೋಕ್ಷ ದೊರಕುತ್ತದೆ, ಇಲ್ಲವಾದರೆ ಸಿಗದು.
ಗುರುಗಳು: ಹಾಗಾದರೆ ಯೇಸುಕ್ರಿಸ್ತನ ಜನನದಿಂದ ಮನುಷ್ಯನ ಪಾಪ ಪರಿಹಾರವಾಗಲಿಲ್ಲ ಎಂದು ನೀವೇ ಒಪ್ಪಿಕೊಂಡಂತಾಯಿತಲ್ಲವೆ?
ಹಾಗೆಂದು ಗುರುಗಳು ಪ್ರಶ್ನಿಸಿದಾಗ ಪಾದ್ರಿಗಳು ನಿರುತ್ತರರಾದರು. ಯೇಸುಕ್ರಿಸ್ತನ ತತ್ವವನ್ನು ನಂಬಿದರಷ್ಟೇ ಮೋಕ್ಷ ಎಂದು ಪ್ರತಿಪಾದಿಸುವ ಪಾದ್ರಿಗಳಂತೆಯೇ ಜಾತಿಯಿಂದಲೇ ಶ್ರೇಷ್ಠರೆಂಬಂತೆ ಬೀಗುತ್ತಿರುವ ಮನಸ್ಸುಗಳು ಹಿಂದೂ ಧರ್ಮದ ಒಡಕಿಗೆ ಕಾರಣವಾಗಿವೆ. ಇಂತಹ ಮನಸ್ಸುಗಳೇ ಮಾಂಸಾಹಾರ, ಸಸ್ಯಾಹಾರ, ಸಹಪಂಕ್ತಿ ಭೋಜನ ಸಲ್ಲ ಎಂದು ಹಿಂದೂ ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿರುವುದು. ಇಷ್ಟಕ್ಕೂ Knowledge Based Economy ಬಂದಿರುವಾಗ ಜಾತಿ ಅನ್ನುವುದು ಇಂದಿಗೂ ಪ್ರಸ್ತುತವೇ? ಜಾತಿಯ ಆಧಾರದ ಮೇಲೆ ಒಬ್ಬ ವ್ಯಕ್ತಿ ಮೇಲು-ಕೀಳು, ಉಚ್ಚ-ನೀಚ ಎಂದು ಅಳೆಯಲಾದೀತೆ? ಜಾತಿಯೇ ಶ್ರೇಷ್ಠತೆಯ ಮಾನದಂಡವೇ? ಮುಸ್ಲಿಮರು, ಕ್ರೈಸ್ತರ ದೌರ್ಜನ್ಯದ ಬಗ್ಗೆ ಬರೆದಾಗ ಬಾಯಿಚಪ್ಪರಿಸಿ ಓದುವ ಮಂದಿ ಜಾತಿವಾದದ ವಿರುದ್ಧ ಮಾತನಾಡಿದರೆ ಸಿಡಿದೇಳುವುದೇಕೆ?
ಇಷ್ಟಕ್ಕೂ Knowledge Based Economy, ಆಂತರಿಕ ಶುದ್ಧಿ, ಸರಿಪಡಿಸುವಿಕೆ ಅನ್ನುವುದೇ ಆಗಬಾರದಾ?
ಹನ್ನೆರಡನೇ ಶತಮಾನದ ಬಸವಣ್ಣ, ಅದಕ್ಕೂ ಮೊದಲು ಬಂದ ಬುದ್ಧ, ಮಹಾವೀರರು ಇಂತಹ ಇಂಟರ್್ನಲ್ ಕರೆಕ್ಷನ್್ಗಳೇ ಎನ್ನುತ್ತಾರೆ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್. ಪೃಥ್ವಿಮಾತಾ ದ್ಯೌಃ ಪಿತಾ ಎಂದು ಹೇಳುವ ವೇದಗಳು ಜಾತಿಯನ್ನು ಸೃಷ್ಟಿಸಿದ್ದವೆ? ಇನ್ನು ಕೆಲವರು ಆಹಾರ ಪದ್ಧತಿಯ ಹೆಸರಿನಲ್ಲಿ ಮಾಡುತ್ತಿರುವ ತಾರತಮ್ಯಕ್ಕೆ ವೈದ್ಯಕೀಯ ಕಾರಣಗಳನ್ನು ತಳುಕು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಸಸ್ಯಾಹಾರಿಗಳೇನು ಮಾಂಸಾಹಾರಿಗಳಿಂತ ಹೆಚ್ಚು ಕಾಲ ಹಾಗೂ ಆರೋಗ್ಯಯುತವಾಗಿ ಬದುಕುತ್ತಾರೆಯೇ? ಜಗತ್ತಿನಲ್ಲಿಯೇ ಅತಿ ಹೆಚ್ಚು ದೀರ್ಘಾಯುಷಿಗಳಿರುವ ಜಪಾನ್ ಮಾಂಸಾಹಾರಿಗಳ ದೇಶವಲ್ಲವೆ? ಸಹಪಂಕ್ತಿ ಭೋಜನ ವಿಚಾರದಲ್ಲಿ ಎದ್ದಿರುವ ವಿವಾದದ ಬಗ್ಗೆ ಮೈಸೂರಿನ ವಕೀಲರಾದ ಪಿ.ಜೆ. ರಾಘವೇಂದ್ರ ಅವರು ಒಂದು ಮಾರ್ಮಿಕ ಕಥೆಯನ್ನು ಕಳುಹಿಸಿದ್ದರು.
“ಅದೊಂದು ಮನೆ. ಆ ಮನೆಯೊಳಗೊಂದು ಗುಬ್ಬಿಗೂಡು. ಆ ಗೂಡಿನಲ್ಲಿ ಗುಬ್ಬಿಯ ಸಂಸಾರ. ಮೊಟ್ಟೆಯಿಂದ ಹೊರಬಂದ ಗುಬ್ಬಿಮರಿಗೆ ಪ್ರಪಂಚ ನೋಡುವ ಕಾತುರ. ಆದರೆ ತಾಯಿಗುಬ್ಬಿ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ತಾಯಿ ಗುಬ್ಬಿ ಆಹಾರವನ್ನರಸಿ ಹೊರಗೆ ಹೋಗಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡ ಮರಿಗುಬ್ಬಿ ಗೂಡಿನಿಂದ ಹೊರಬಿದ್ದು ಅಂಗಳಕ್ಕೆ ಬಂತು. ಅಂಗಳದಿಂದ ಮನೆಯ ಹೊರಗೆ ಕಾಲಿಟ್ಟಿತು. ಈ ಗುಬ್ಬಿಯ ಮರಿಯಂತೆಯೇ ಕಾಗೆಯ ಮರಿಯೊಂದು ತನ್ನ ಗೂಡಿನ ಹೊರ ಬಂದು ಗುಬ್ಬಿಮರಿಯನ್ನು ನೋಡಿತು. ಸಂತಸದಿಂದ ಗುಬ್ಬಿ ಮತ್ತು ಕಾಗೆಯ ಮರಿಗಳು ಆಟವಾಡಿದವು. ಆಟದಲ್ಲಿ ತಲ್ಲೀನವಾಗಿ ತಮ್ಮನ್ನು ತಾವು ಮರೆತವು. ಸ್ನೇಹದ ಸುಖ ಉಂಡವು. ಆಟವಾಡುತ್ತಾ ಸಮಯ ಕಳೆದದ್ದೇ ಗೊತ್ತಾಗಿಲ್ಲ ಪಾಪ ಆ ಮರಿಗಳಿಗೆ!
ತಕ್ಷಣ ಎಚ್ಚೆತ್ತ ಆ ಪುಟ್ಟ ಪುಟ್ಟ ಮರಿಗಳು ತಮ್ಮ ತಮ್ಮ ಗೂಡು ಸೇರಿದವು. ಗೂಡು ಸೇರಿದ ಗುಬ್ಬಿಗೆ ಸಂತಸದ ಅನುಭವ. ಕಾಗೆಮರಿಯೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಾ ಖುಷಿಯಿಂದ ಬೀಗುತ್ತಿದ್ದ ಆ ಗುಬ್ಬಿ ಮರಿ ಎಂದಿನಂತಿರಲಿಲ್ಲ. ತಾಯಿಯ ಆಗಮನವನ್ನೇ ಎದುರು ನೋಡುತ್ತಾ ಪ್ರತಿನಿತ್ಯ ತನ್ನ ಬಾಯಿ ತೆರೆದು ಕೂರುತ್ತಿದ್ದ ತನ್ನ ಮರಿಯ ವರ್ತನೆ ಎಂದಿನಂತಿಲ್ಲವಲ್ಲಾ ಎಂಬುದು ಗುಬ್ಬಿ ಮರಿಯ ತಾಯಿಗೆ ಗೊತ್ತಾಯಿತು. ಎಲ್ಲಾದರೂ ಹೊರಗೆ ಹೋಗಿದ್ದೆಯಾ? ಗದರಿಸಿತು ತಾಯಿಗುಬ್ಬಿ. ಮರಿಗುಬ್ಬಿ ನಡೆದುದೆಲ್ಲವನ್ನೂ ಹೇಳಿತು. ಕೇಳಿಸಿಕೊಂಡ ತಾಯಿಗುಬ್ಬಿ ಕೋಪದಿಂದ ಗದರಿತು. ಹೋಗಿ ಹೋಗಿ ನೀನು ಆ ಕಾಗೆಯ ಮರಿಯೊಂದಿಗೆ ಸೇರಿ ಆಟವಾಡಿದೆಯಾ? ಥೂ.. ನಿನ್ನ. ನಮ್ಮ ಘನತೆಯೇನು, ಆ ಕಾಗೆಯ ಮರಿಯ ಜೀವನವೇನು? ನೀನು ಆ ನಿಕೃಷ್ಟ ಕಾಗೆ ಮರಿಯೊಂದಿಗೆ ಆಡಿದೆಯಾ? ಮರಿಗುಬ್ಬಿ ಕೇಳಿತು- ಏಕಮ್ಮಾ, ನಾನೇಕೆ ಆ ಕಾಗೆಯ ಮರಿಯೊಂದಿಗೆ ಆಡಬಾರದು? ಆಡಿದರೇನಾಗುತ್ತಮ್ಮಾ?
ತಾಯಿಗುಬ್ಬಿ ಹೇಳಿತು-”ಆ ಕಾಗೆಯ ಬಣ್ಣ ನೋಡು ಕರೀ ಬಣ್ಣ. ಎಷ್ಟೊಂದು ಅಸಹ್ಯ. ನೀನು ನೋಡು ಬಂಗಾರದ ಮೈಬಣ್ಣ. ನೀನು ಕಾಗೆಯ ಮರಿಯೊಂದಿಗೆ ಆಡಿದರೆ ನಿನ್ನ ಬಣ್ಣವೂ ಅದರಂತೆ ಕಪ್ಪಗಾಗುತ್ತದೆ. ಅದಕ್ಕಾಗಿ ನೀನು ಎಂದಿಗೂ ಕಾಗೆಯ ಮರಿಯೊಂದಿಗೆ ಆಡಬಾರದು. ಅರ್ಥವಾಯಿತೇ?’ ಅರ್ಥವಾಯ್ತಮ್ಮಾ ಎಂದಿತು ಮರಿಗುಬ್ಬಿ.”ಏನು ಅರ್ಥವಾಯ್ತು ನಿನಗೆ?’ ತಾಯಿಗುಬ್ಬಿ ಪ್ರಶ್ನಿಸಿತು. ಮರಿಗುಬ್ಬಿಯ ಉತ್ತರ ಮಾರ್ಮಿಕವಾಗಿತ್ತು.”ಅಮ್ಮಾ… ನನ್ನದೋ ಬಂಗಾರದ ಬಣ್ಣ. ಆ ಕಾಗೆಯ ಮರಿಯದ್ದು ಕಪ್ಪು ಬಣ್ಣ. ನಾವಿಬ್ಬರೂ ಒಟ್ಟಿಗೆ ಆಡಿದರೆ ಆ ಪುಟ್ಟ ಕಾಗೆಯ ಮರಿಗೆ ನನ್ನಂತೆಯೇ ಬಂಗಾರದ ಮೈ ಬಣ್ಣ ಬರಬಹುದಲ್ಲವೇ? ಹೇಳಮ್ಮಾ!’ ಗುಬ್ಬಿಮರಿಯ ಮಾತು ಕೇಳಿದ ತಾಯಿಗುಬ್ಬಿಗೆ ಜ್ಞಾನೋದಯವಾಯ್ತು. ತನ್ನ ತಪ್ಪಿನ ಅರಿವಾಯ್ತು. ಗುಬ್ಬಿಮರಿಯನ್ನು ತಬ್ಬಿ ಮುದ್ದಾಡಿ ಕ್ಷಮೆ ಕೇಳಿತು.”
ಆದರೆ ಮನದ ಬಾಗಿಲನ್ನೇ ಮುಚ್ಚಿಕೊಂಡಿರುವವರಿಗೆ ಈ ನೀತಿಕಥೆ ಹೇಗೆ ತಾನೇ ಅರ್ಥವಾದೀತು?
ಇನ್ನು ಈ ಮೇಲ್ಜಾತಿ-ಕೆಳಜಾತಿ ಎಂದು ತಾರತಮ್ಯ ಮಾಡುವ ಮನಸ್ಸುಗಳಿಗೆ ಓದುಗರಾದ ನೇತ್ರಾವತಿ ಎಂಬವರು ಮಿಂಚಂಚೆ ಮೂಲಕ ಒಂದು ಪ್ರಶ್ನೆ ಕೇಳಿದ್ದಾರೆ. ಸಾಮಾನ್ಯವಾಗಿ ನಮ್ಮ ಎಲ್ಲ ದೇವಸ್ಥಾನಗಳ ಅರ್ಚಕರೂ ಮೇಲ್ಜಾತಿಯವರೇ. ಆದರೂ ನಮ್ಮ ದೇವಸ್ಥಾನಗಳ ಗರ್ಭಗುಡಿಗಳೇಕೆ ಅಷ್ಟೊಂದು ಕೊಳಕಾಗಿರುತ್ತವೆ? ನೇತ್ರಾವತಿಯವರ ಪ್ರಶ್ನೆಯನ್ನು ನಮ್ಮ ನಡುವೆ ಮೇಲೆಂಬ ಭಾವನೆಯಿಂದ ನರಳುತ್ತಿರುವ ಮನಸ್ಸುಗಳು ಕೇಳಿಕೊಳ್ಳಬೇಕು.
ಆಚಾರ್ಯ ಕೃಪಲಾನಿಯವರಿಗೂ ಒಮ್ಮೆ ನಾರಾಯಣ ಗುರುಗಳಂಥದ್ದೇ ಅನುಭವವಾಗುತ್ತದೆ. ಅವರು ರೈಲಿನಲ್ಲಿ ತೆರಳುತ್ತಿರುವಾಗ ಮಾತಿಗೆಳೆದ ಸಹ ಪ್ರಯಾಣಿಕ,”ನಿಮ್ಮ ಜಾತಿ ಯಾವುದು?’ ಎಂದು ಕೇಳಿದನು. ಅವನ ಪ್ರಶ್ನೆಗೆ ಕೃಪಲಾನಿಯವರು ಉತ್ತರಿಸುವುದಿಲ್ಲ, ಯಾವುದೋ ಯೋಚನೆಗೆ ಬಿದ್ದಂತೆ ಕಾಣುತ್ತಾರೆ. ಆ ಪ್ರಯಾಣಿಕ ಮತ್ತೆ ನಿಮ್ಮ ಜಾತಿ ಯಾವುದು ಎಂದು ಕೇಳುತ್ತಾನೆ.
ಕೃಪಲಾನಿ: ನೀವು ಮೊದಲ ಸಲ ಕೇಳಿದಾಗಲೇ ನನಗೆ ಅರ್ಥವಾಯಿತು, ಆದರೆ ಏನೆಂದು ಹೇಳಲಿ ಎಂದು ಯೋಚಿಸುತ್ತಿದ್ದೆ!
ಪ್ರಯಾಣಿಕ: ಅದರಲ್ಲಿ ಯೋಚಿಸುವುದೇನಿದೆ?
ಕೃಪಲಾನಿ: ಬೆಳಗ್ಗೆ ಎದ್ದು ಕಕ್ಕಸಿಗೆ ಹೋದಾಗ ಜಲಧಾರನಾಗುತ್ತೇನೆ, ಗಡ್ಡ ಕೆರೆದುಕೊಳ್ಳುವಾಗ ಕ್ಷೌರಿಕನಾಗುತ್ತೇನೆ, ಸ್ನಾನ ಮಾಡಿ ಬಟ್ಟೆ ಒಗೆದುಕೊಂಡಾಗ ಅಗಸನಾಗುತ್ತೇನೆ, ಊಟ ತಯಾರಿಸುವಾಗ ಬಾಣಸಿಗನಾಗುತ್ತೇನೆ, ಕಾಲೇಜಿಗೆ ಹೋಗಿ ಪಾಠ ಮಾಡುವಾಗ ಬ್ರಾಹ್ಮಣನಾಗುತ್ತೇನೆ, ಸಂಬಳ ಎಣಿಸುವಾಗ ವೈಶ್ಯನಾಗುತ್ತೇನೆ, ರಾತ್ರಿ ಮನೆಗೆ ಕಳ್ಳರು ನುಗ್ಗಿದಾಗ ಕ್ಷತ್ರಿಯನಾಗುತ್ತೇನೆ. ಹೀಗಾಗಿ ನನ್ನ ಜಾತಿ ಯಾವುದು ಎಂದು ಕೇಳಿದರೆ ಉತ್ತರಿಸಲು ಕಷ್ಟವಾಗುತ್ತದೆ ಎಂದರು, ಪ್ರಶ್ನೆ ಕೇಳಿದವನು ಸುಸ್ತಾದ.
ನಮಗೆ ಬೇಕಿರುವುದು ಸ್ವಚ್ಛತೆ, ಸಭ್ಯತೆ ಮುಂತಾದ ಪೌರಪ್ರಜ್ಞೆಗಳೇ ಹೊರತು ಜಾತಿಗಳಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಂತೆ ಜಾತಿರಹಿತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಮುಂದಾದಾಗ ಹಿಂದೂ ಸಮಾಜ ಉಳಿಯಲು ಸಾಧ್ಯ. ಆಗ ಮಾತ್ರ, ಖಛಣ Say it with pride, We are Hindus, ಹಿಂದೂ ಎಂದು ಹೆಮ್ಮೆಯಿಂದ ಹೇಳಿ ಎಂಬ ವಿವೇಕಾನಂದರ ಮಾತುಗಳಿಗೆ ನಾವು ಬೆಲೆ ಕೊಟ್ಟಂತಾಗುತ್ತದೆ, ಅಲ್ಲವೇ?

 -  ಪ್ರತಾಪ ಸಿಂಹ